ಸುಜನಾ ಎಂದೇ ಖ್ಯಾತರಾದ ಎಸ್. ನಾರಾಯಣಶೆಟ್ಟಿಯವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ. ತಂದೆ ಸುಬ್ಬಯ್ಯಶೆಟ್ಟಿ, ತಾಯಿ ಗೌರಮ್ಮ.ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಉದ್ಯೋಗ ಪ್ರಾರಂಭಿಸಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ.

ವಿಮರ್ಶೆಯ ಕ್ಷೇತ್ರದಲ್ಲಿ ಅವರು ಸಾಕಷ್ಟು ಕೃಷಿ ಮಾಡಿದ್ದಾರೆ. ‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’ ಪ್ರಮುಖ ಕೃತಿಗಳು. ‘ಪು.ತಿ.ನ. ಕಾವ್ಯದ ಹೊಳಹುಗಳು’ ಇವರ ಮತ್ತೊಂದು ಮಹತ್ವದ ಕೃತಿ.
ಗ್ರೀಕ್ ನಾಟಕ ಏಜಾಕ್ಸ್‌, ‘ಭಾರತ ಕಥಾಮಂಜರಿ’, ‘ಬಾಲಕಾಂಡ ವಾಲ್ಮೀಕಿ ರಾಮಾಯಣ’ವನ್ನು ಸಿ.ಪಿ.ಕೆ.ಯೊಡನೆ ಅನುವಾದಿಸಿದರು. ಮುಕ್ತ ಛಂದಸ್ಸಿನ ಕೃತಿ ‘ಯುಗ ಸಂಧ್ಯಾ’ ಅವರ ಮಹಾಕಾವ್ಯ .

ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ವಿಳಾಸ ತಪ್ಪಿದ ಕಾಗದ’ ಎಂಬ ಕವನ ನಿಮ್ಮ ಓದಿಗಾಗಿ.

ವಿಳಾಸ ತಪ್ಪಿದ ಕಾಗದ

ತಪ್ಪು ವಿಳಾಸವನು ಹೊತ್ತ ಅಂಚೆಯ ಲಕೋಟೆ-
ಅದರ ಮೈತುಂಬ ಮುದ್ರೆಯೋ ಮುದ್ರೆ
ಈ ಊರು ಆ ಊರು, ಆ ಹೆಸರು ಈ ಹೆಸರು
ಎಲ್ಲವೂ ಧಿಕ್ಕರಿಸಿ ಗೊಟ್ಟಕೆಸೆಯುತಿರಲು
ಬೇಸರಿಲ್ಲದ ಅಂಚೆ ಅದನಿನ್ನು ಹೊತ್ತು ಸಾಗುತಿರಲು
ಸಾಗಿಹುದು ಪತ್ರ ಆ ಊರು ಏ ಊರ ಯಾತ್ರೆ!
ಪ್ಯಾರಿಸ್ಸು ಬೊಂಬಾಯಿ ಮದ್ಯ ಜಲಧಿಯಲಿ ಮಿಂದು
ಹಾಲಿವುಡ್‌ ತಾರಾಸಮೇತ ಜಲಕ್ರೀಡೆ ಮಾಡಿ
ತಿರುಪತಿಯ ಪುಣ್ಯಕ್ಷೇತ್ರದಲಿ ತಲೆ ಕ್ಷೌರಮಾಡಿ
ಕಾಶಿ ರಾಮೇಶ್ವರ ಸಾಂಚಿ ಬೃಂದಾವನಾ
ಸರ್ವತೀರ್ಥಗಳ ಸ್ನಾನ ಪಾನವನು ಮಾಡಿ
ಮೇಲುಕೋಟೆಯ ನಾಮ, ನಂಜುಂಡನ ವಿಭೂತಿ
ಎಲ್ಲವನು ಭಯಭಕ್ತಿಯಲಿ ಮೈತುಂಬ ಧರಿಸಿ
ಯಾತ್ರೆ ಹೊರಟಿದೆ ಮುಂದೆ, ಕಂಡುಕಾಣದ ವಿಶ್ವದೆಡೆಗೆ.

ವಿಳಾಸ ತಪ್ಪಿದ ಕಾಗದ
ಯಾರಿಗೂ ಬೇಡದ
ನಾಟ್‌ಪೇಯ್ಡು ಕಾಗದ!

ಕೆಳಗೆ ಉಕ್ಕುವ ಕಡಲು
ಮೇಲೆ ಸುರಿಯುವ ಮಳೆಯು
ಸುತ್ತಲೂ ಅಪ್ಪಳಿಸುತಿರಲು ಗಾಳಿ

ಸಂಜೆಯಾಗಿರಲಂದು
ಮುಂದೆ ಸಾಗಿರೆ ಹಿಂಡು
ಹಾರುತಿದೆ ತೂರಾಡಿ ಒಂಟಿ ಪರವೆ:
ಬಿರುಗಾಳಿ ಮಳೆಯೊಳಗೆ ತೊಯ್ದ ಒಂಟಿ ಪರವೆ!

ಕುರುಡು ಕರು ತಾಯ ಕೆಚ್ಚಲನರಸಿ
ತುರುಮಂದೆಯಲಿ ನುಗ್ಗುತಿರೆ,
ತೊಂಡೆದನಗಳ ಕಾಲ ಒದೆತಗಳ ಮಳೆ
ಒಂದೆ ಸಮ ಮುಖದಿ ಸುರಿಯುತ್ತಿರೆ
ರಕ್ತಕಣ್ಣೀರು ಕೊಚ್ಚೆರೊಚ್ಚೆಯಲಿ
ತೊಟ್ಟ ತೊಟ್ಟಿಟ್ಟು ಕರಗುತ್ತಿದೆ.

ಪಾತ್ರ ತಪ್ಪಿದ ತೊರೆಯು
ಸಹರ ಮರುಭೂಮಿಯೆಡೆ
ತನ್ನ ಕೂಡುನದಿಯನು ಅರಸುತ್ತಿದೆ.

ಹರಿದ ಮೈ ಲಕೋಟೆಯ ಹೊರಗೆ
ಇಣುಕುತಿರೆ ವಿಲಿಗುಡುತೆ ಒಳಗಿರುವ ಪತ್ರ,
ಹೊತ್ತು ಸಾಗುತಲಿಹನು ಅಂಚೆಯಾಳದನು
ಕರ್ಮಬದ್ಧ; ಪತ್ರಲೇಖನ ನಿರಾಸಕ್ತ.

ಬರೆದವಗೆ ಅದನು ಹಿಂದೆ ಕಳುಹಿಸಲೆ
ಮೇಲೆ ಅದ ಬರೆದವರ ಕುಲಗೋತ್ರ ಒಂದು ಇಲ್ಲ.
ಇನ್ನೇನು ಸತ್ತ ಕಾಗದಗಳ ಕಚೇರಿ ಗತಿಯದಕೆ ಎಲ್ಲ,
“ಯಾರು ಕೈ ಬಿಟ್ಟರೂ ನೀ ಕೈಯ ಬಿಡದಿರೋ ರಂಗಾ”