ಯಶೋಧರೆ
ಹೆಗಲ ಮೇಲೆ ಹೊತ್ತು
ಸುತ್ತಿಸಿ ಸಂತೆ ಜಾತ್ರೆ
ತನ್ನ ತಟ್ಟೆಯಿಂದೆತ್ತಿ ತುತ್ತು ಬಾಯಿಗೆ ಇಟ್ಟು
ಅವ್ವನೆದೆಯೊಳಗದೆಷ್ಟು ಚಿತ್ತ ಚಿತ್ತಾರದ ಬೀಜ ನೆಟ್ಟು
ಫಸಲು ತೆಗೆದು
ಕಣಜ ಸೇರಿಸುವ ಮೊದಲು
ಮಲಗಿದ ಅಪ್ಪ ನೆಲ ಬಿಟ್ಟೇಳಲಿಲ್ಲ.
ಧುತ್ತನೆರಗುವ ಸಾವು
ಬದುಕಿದವರೊಳಗದೆಂಥ ಬೆಳಕು ನೀಡಲು ಸಾಧ್ಯ?
ಹರಿದ ಚಾಪೆಯ ಮೇಲೆ ಹೊದ್ದ ರಗ್ಗಿನ
ರಂಧ್ರದೊಳಗಿಂದ ತೂರಿಕೊಂಡು ಮೈಸವರಲು
ಜಿದ್ದಿಗೆ ಬಿದ್ದ ನಕ್ಷತ್ರಗಳ ಸೋಲಿಸಿ
ಉಸಿರಾಡಲೂ ಎಡೆಯಿಲ್ಲದಂತೆ ಆವರಿಸಿ
ಕತ್ತಲೆಯೂ ನಾಚುವಂತೆ ಮುದ್ದಿಸುತ್ತಿದ್ದ ಸಖ
ದಿನಗಳೆದಂತೆ ತನ್ನದೇ ಹಳವಂಡಗಳಲಿ ಕಳೆದೇಹೋದನು
ಸುಖ ಸಂಪತ್ತಿನ ನಶ್ವರತೆಯ ಬೋಧಿಸಿ.
ಎದೆಗಪ್ಪಿ, ಸೊಂಟಕ್ಕೆ ಸುತ್ತಿ
ಬಾಯೊಳಗಿಂದ ತುತ್ತು ಕಸಿದು ತಿಂದು
ತೊಡೆಯ ಮೇಲಾಡಿ
ನಲಿದಾಡಿ ಹೊಕ್ಕುಳೊಳಗೆ ಕಚಗುಳಿ ಬರೆದು
ಮೊಲೆ ತುಂಬಿ
ಜಿನುಗಿ ಗುಟುಕು ಹೀರಿ
ಅಂಗಳದಲ್ಲಿ ಮಲ್ಲಿಗೆ ತೂಕದ ಹೆಜ್ಜೆ ಚಿತ್ರವ ಬರೆದು
ಅಂಗೈಯ ಗಿಣಿಗಳಾಗಿದ್ದವರು
ಎದೆಯೆತ್ತರ ಬೆಳೆದು
ಜೊತೆ ಹಕ್ಕಿಗಳ ಹುಡುಕಿ
ಕನಸ ಕಡಲಿನಲಿ ಮುಳುಗಿ ಹೋದರು.
ನಾನೂ ಯಶೋಧರೆ
ಎಷ್ಟು ಬುದ್ಧರು ನನ್ನ ಬದುಕಿನೊಳಗೆ!
ಕಳೆದು ಹೋದ ಬೆಳದಿಂಗಳುಗಳೆಷ್ಟು ನನ್ನ ಬಾಳಿನಲ್ಲಿ!!
ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.