ಗಾಂಧಿ ಭವನ
ಗಾಂಧಿ ಭವನದ ಮುಂಬಾಗಿಲಲ್ಲೇ ಗಾಂಧಿ
ಕೋಲಿಡು ನಿಂತಿದ್ದರು.
ಚರಕ ತಿರುಗಿಸಿ,ಹೆಣ್ಣು ಮಕ್ಕಳ ಹೆಗಲನು
ಆಧಾರವಾಗಿ ಬಳಸಿ ನಡೆದಾಡುತ್ತಿದ್ದರು.
ಒಳಗೆ…
ಗೋಡೆ ಗೋಡೆಗೂ ಅವರ ನಗುವೆ
ಪಾಪುವಿನೊಡನೆ ಬಾಪು
ಮೂರು ಮಂಗಗಳೊಡನೆ ಬಾಪು.
ಏಕೋ..
ಕಸ್ತೂರಿ ಬಾ ಜೊತೆ ಬಾಪುವಿರಲಿಲ್ಲಾ
ಅವರ ಕೈಗೆ ನೂಲುವ ಚರಕವನ್ನಿತ್ತು
ಬಾಪು ಸಂಚಾರಕೆ ಹೊರಟವರು
ಹಿಂತಿರುಗಿದಂತೆ ಕಾಣಲಿಲ್ಲಾ.
ಬಹು ಅಂತಸ್ತಿನ ಕಟ್ಟಡ ಪ್ರಶಾಂತವಾಗಿತ್ತು
ಒಳಗಿದ್ದವರ, ಬಂದು ಹೋಗುವವರ ಮನ
ಯಾರು ಬಲ್ಲರು!?
ಗ್ರಂಥಾಲಯ ಸತ್ಯ, ಅಹಿಂಸೆಯ
ಮೌನದ ಮಹಾಮನೆಯಂತಿತ್ತು.
ಮಾರಾಟ ಮಳಿಗೆ ಏಕೋ ಬಿಕೋ
ಎನ್ನಿಸುವಂತೆ ಒಂದಷ್ಟು ಪುಸ್ತಕಗಳು ಕುಂತಿದ್ದವು
ಸುಮ್ಮನೆ ಮೈದಡವಿದೆ…
ಗಾಂಧಿ ವಿಚಾರಗಳನ್ನು ಕಂಡವರು
ಕಂಡ ಹಾಗೆ ಕಂಡಿರಿಸಿದ ಪದ ಸಾಲುಗಳು
ಕೈಬೆರಳನು ಮುತ್ತಿಕೊಂಡವು.
ಕಣ್ಣುಗಳು ಏನ್ನನ್ನೋ ಹುಡುಕುತ್ತಿದ್ದವು
ಕೋಲಿನ ಸದ್ದು, ಚರಕದ ಸದ್ದು.
ಕಿವಿಗಳು ಅಗಲಿಸಿ ಕಾತರಿಸಿದವು
ಸತ್ಯಮೇವ ಜಯತೆ ಎಂಬ ಘೋಷವಾಕ್ಯ
ಮೌನದಲಿ ಮಲಗಿತ್ತು.
ಶಾಂತ ಪ್ರಶಾಂತ ಭವನದ ಒಳಗೆ
ಅಲ್ಲಲ್ಲಿ ಹಸಿರು, ನೀರು
ಗಾಂಧಿ ವಿಚಾರಗಳಿನ್ನೂ ಉಳಿದು
ಉಸಿರಾಡುತ್ತಿರುವಂತೆ ತಂಪೆರೆದಿದ್ದವು.
ಭವನದಲ್ಲಿ ಗಾಂಧಿಯನು ಹುಡುಕುತ್ತಿರುವೆನಲ್ಲಾ
ಮರುಳು ಮಂಕು ನಾನು!
ಗಾಂಧಿ ಹಲವರೆದೆಯಲಿ ಪಿಸುಮಾತು
ಆಲೋಚನೆ ಕ್ರಿಯೆಯಲಿ ಜಗದುದ್ದಗಲಕ್ಕೂ
ಹಬ್ಬಿದ ಪ್ರೇಮದ ಬಳ್ಳಿ.
ನೆಲದಾಳದಿಂದ ಮೂಡಿ ಆಗಸ ತಬ್ಬಿದ
ಅಂತಃಕರಣದ ಗಾಳಿ ಬೆಳಕು.
ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.