ನನ್ನ ಅಮ್ಮ

ಎಂಭತ್ತರ
ನನ್ನಮ್ಮನ ನಗು
ಮೃತ್ಯುವಿನ ನೆನಪುಗಳ ನಡುವೆ
ಉಕ್ಕುವ ಮುಗ್ಧ ಭಾವ

ಅವಳು ತನ್ನ ನೀಳ ಬೆರಳುಗಳನ್ನು ಚಾಚುತ್ತಾಳೆ
ಕಾಲದ ಕ್ರೂರತೆಗೆ ಬಲಿಯಾದ
ಎಲ್ಲ ಕನಸುಗಳು ಹುದುಗಿದ
ಹಾಳೆಯನು ಬಯಲುಗೊಳಿಸುವಂತೆ

ಮೌನವಾದ ಮೂಳೆಗಳ ಆಳದಿಂದ
ಅವಳ ಪಿಸುಮಾತುಗಳು ಕೇಳುತ್ತವೆ
ಅವಳು ಕುಸಿದು ಒರಗಿದ ಕೋಣೆಯಲ್ಲಿ
ನೆಲಗಪ್ಪೆಗಳು ವಟಗುಟ್ಟುತ್ತವೆ

ಜೀವನಪೂರ್ತಿ ಅವಳಿಗೆ
ಹೇಳುತ್ತಲೇ ಇದ್ದೇನೆ
ಕಣ್ಣೊಳಗೆ ಕಣ್ಣನಿಟ್ಟು
ಅವಳು ವಿಶ್ರಾಂತಿಯಲ್ಲಿರುವಾಗಲೆಲ್ಲ
ಅವಳು ನನ್ನನ್ನು ದಿಟ್ಟಿಸುತ್ತಾಳೆ
ಮತ್ತು ಕೇಳುತ್ತಾಳೆ,
“ಸಂಜೆಯ ಊಟಕ್ಕೆ ನಾವು ಏನಡುಗೆ ಮಾಡುತ್ತಿದ್ದೇವೆ?”

ಅವರು ಎಲ್ಲವನ್ನೂ ತೆಗೆದುಕೊಳ್ಳಲಿ

ಅವರು ಎಲ್ಲವನ್ನೂ ತೆಗೆದುಕೊಳ್ಳಲಿ
ಆದರೆ ನಿನ್ನನ್ನಲ್ಲ
ಅವರು ನಿನ್ನ ಕೈಗಳನ್ನು ತೆಗೆದುಕೊಳ್ಳದಿರಲಿ
ಅವು ನನ್ನದರಂತೆಯೇ ಇವೆ
ಅವರು ನಿನ್ನ ಕಣ್ಣುಗಳನ್ನು ತೆಗೆದುಕೊಳ್ಳದಿರಲಿ
ಅವು ನನಗೆ ಜೀವ ನೀಡಿವೆ
ಅವರು ನಿನ್ನ ದೇಹವನ್ನು ತೆಗೆದುಕೊಳ್ಳದಿರಲಿ
ಅದು ನಾನೇ ಆಗಿರುವೆ

ಅವರು ಎಲ್ಲವನ್ನೂ ತೆಗೆದುಕೊಳ್ಳಲಿ, ಆದರೆ ನಿನ್ನನ್ನಲ್ಲ

ಅವಶೇಷಗಳ ನಡುವೆ ನಾವು ಒಟ್ಟಿಗೆ ನಡೆಯೋಣ
ಧೂಳು ಮುಸುಕಿದ ಅಪರಾಹ್ನದಲಿ
ನಿನ್ನ ನಗ್ನತೆಯನ್ನು ನೋಡಲು ನನಗೆ ಅನುಮತಿಸು
ನಿನ್ನ ಸ್ವೀಕರಿಸುವ ಕಸುವು ನನಗೆ ಬರಲಿ
ನನ್ನ ಆವರಿಸುವ ಕಸುವು ನಿನಗೆ ಬರಲಿ
ಇವೆಲ್ಲಕೂ ಮಿಗಿಲಾಗಿ
ನಿನ್ನ ಪ್ರೀತಿಸುವ ತಾಕತ್ತು ನನಗೆ ಬರಲಿ

ನಿನ್ನ ಆಹಾರ ಮತ್ತು ನನ್ನ ಆಹಾರ
ನಿನ್ನ ಅಭದ್ರತೆ ಮತ್ತು ನನ್ನ ಅಭದ್ರತೆ
ನಿನ್ನ ಸ್ವಾರ್ಥ ಮತ್ತು ನನ್ನ ಸ್ವಾರ್ಥ
ನಿನ್ನ ಸುಳ್ಳುಗಳು ಮತ್ತು ನನ್ನ ಸುಳ್ಳುಗಳು

ನಿನ್ನ ಸಾಮ್ರಾಜ್ಯ ಮತ್ತು ನನ್ನ ಸಾಮ್ರಾಜ್ಯ
ನಿನ್ನ ಹಸಿವು ಮತ್ತು ನನ್ನ ದಾಹ
ಇವೆಲ್ಲವನ್ನೂ ತೆಗೆದುಕೊಳ್ಳಲಿ, ಆದರೆ ನಿನ್ನನ್ನಲ್ಲ

ಅವರು ನೆಲವನ್ನು ತೆಗೆದುಕೊಳ್ಳಲಿ
ಅವರು ಸಾಗರವನ್ನು ತೆಗೆದುಕೊಳ್ಳಲಿ
ನಮ್ಮೆಲ್ಲ ಮಾತು ಮತ್ತು ಭರವಸೆಗಳನ್ನೂ ತೆಗೆದುಕೊಳ್ಳಲಿ
ಆದರೆ,
ನಮಗೊಂದಿಷ್ಟು ಸಮಯವನ್ನು ಕೊಟ್ಟುಬಿಡಲಿ
ನಾವು ಎಲ್ಲಿ ಬದುಕಬಹುದೆಂಬುದನ್ನು ಕಂಡುಕೊಳ್ಳಲು

ಎಲಿ ರೋಸಾ ಝಮೋರಾ ವೆನಿಜುವೆಲಾ ಮೂಲದ ಕವಯತ್ರಿ. ನ್ಯೂಯಾರ್ಕ್‌ನ ರಾಷ್ಟ್ರೀಯ ಕಲಾಶಾಲೆಯಲ್ಲಿ ಪದವಿಯನ್ನು ಪಡೆದಿರುವ ಇವರು ಸ್ಪಾನಿಷ್ ಭಾಷೆಯಲ್ಲಿ ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಿಡ್ಲಸೆಕ್ಸ್ ಕೌಂಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ ಕವಿತೆಗಳನ್ನು ಅರ್ಜಂಟೈನಾ, ಇಕ್ವೆಡಾರ್, ಎಲ್ ಸಾಲ್ವೆಡಾರ್, ಪೆರು, ವೆನಿಜುವೆಲಾ, ಇಂಗ್ಲೆಂಡ್, ಇಟಾಲಿ, ಮೊರೆಕ್ಕೊ ಮತ್ತು ಯುನೈಟೆಡ್ ಸ್ಟೇಟ್‍ಗಳಲ್ಲಿ ವಾಚಿಸಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಸಂಗಂ ವಿಶ್ವಕವಿಸಮ್ಮೇಳನದಲ್ಲಿ ಕಾವ್ಯವಾಚನಕ್ಕಾಗಿ ಆಹ್ವಾನಿತರಾಗಿದ್ದು ಅನಿವಾರ್ಯ ಕಾರಣಗಳಿಂದ ಬರಲಾಗದ್ದರಿಂದ ಆನ್‍ಲೈನ್‍ನಲ್ಲಿ ತಮ್ಮ ಕವನಗಳನ್ನು ವಾಚಿಸುವುದರ ಮೂಲಕ ಭಾರತದ ಜನರಿಗೂ ಪರಿಚಿತರಾಗಿದ್ದಾರೆ. ಅವರ ಎರಡು ಕವನಗಳ ಅನುವಾದಗಳು ಇಲ್ಲಿವೆ.