ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.
ಸುಬ್ರಹ್ಮಣ್ಯ ಹೆಗಡೆ ಬರೆದ ಕತೆ “ಪರಾಜಿತ ವಿಠ್ಠಲ ವಿಜಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಅಂಗಡಿಯ ಬಾಗಿಲು ಮುಚ್ಚಿ ನರಸಿಂಹ ಬರುವದನ್ನೇ ಕಾಯುತ್ತಿದ್ದೆ. ದೂರದಲ್ಲಿ ಬೈಕಿನ ಲೈಟು ಕಾಣಿಸಿತು. ಬೆಳಕಿನವೇಗ ಜಾಸ್ತಿ. ಸದ್ದು ಸ್ಲೋ. ಬೈಕು ಹತ್ತಿರ ಬರುತ್ತಿದ್ದಂತೆ ಪಲ್ಸರ್ ಬೈಕಿನ ಸೌಂಡ್. ಅರೆ ನರಸಿಂಹನದು ಯುನಿಕಾರ್ನ್. ಪಲ್ಸರ್ ಅಂದರೆ ದಾನಪ್ಪನೋರ ಮಗ. ಇವನೇಕೆ ಬಂದ ಈ ಟೈಮಿನಲ್ಲಿ.

ಚಿಕ್ಕ ಊರುಗಳ ಮಜವೇ ಅದು. ಯಾರು ಎಲ್ಲಿ ಹೇಗೆ ಎಂದು ಪತ್ತೆಹಚ್ಚಲು ದೊಡ್ಡ ಊರುಗಳಲ್ಲಿ ಸಿಸಿಟಿವಿ ಇರುತ್ತದೆ. ನಮ್ಮಲ್ಲೆಲ್ಲ ಕಿವಿ ಕಣ್ಣುಗಳೇ ಕ್ಯಾಮರಾ. ಮತ್ತೆ ಮೂಗು ಕೂಡ. ಎಲ್ಲಾದರೂ ಸಿಗರೇಟಿನ ಘಮಲು ಬಂದಿತೆಂದರೆ ಸಿದ್ದಪ್ಪಾಜಿ ಮೂರುಮಠ ಎನ್ನುವ ಮನುಷ್ಯ ಬಂದು ಹೋಗಿದ್ದಾನೆ ಎಂದರ್ಥ. ಇಲ್ಲಿ ಮನುಷ್ಯನ ಗುರುತಿನ ಜೊತೆ ಅವನಿಗೊಂದು ಕಥೆ ಕೂಡ ಇರುತ್ತದೆ. ಸಣ್ಣ ಊರಿನ ಮನುಷ್ಯರಲ್ಲಿ ಬದುಕು ಕೊಂಚ ತೆರೆದ ಹಾಳೆಯಂತೆ.

ನಾನು ಮತ್ತು ನರಸಿಂಹ ಇವತ್ತು ಒಂದಿಷ್ಟು ಸರಕು ಸುರಿದುಕೊಂಡು ಮೊನ್ನೆ ಮೊನ್ನೆ ಬೇರೆಯವನನ್ನು ಮದುವೆಯಾದ ಅವನ ಗರ್ಲ್ ಫ್ರೆಂಡಿನ ಸುದ್ದಿ ಹೇಳಿಕೊಂಡು ಜೊತೆಯಲ್ಲೇ ಅಳುವ ಸ್ಕ್ರಿಪ್ಟಿಗೆ ತಯಾರಾಗಿದ್ದೆ. ಇವನು ಔಟ್ ಆಫ್ ಸಿಲೆಬಸ್ ಬಂದ.

ದಾನಪ್ಪನೋರ ಮಗನ ಹೆಸರು ವಿಠ್ಠಲ. ಅವನ ಬಳಿ ಯಾವಾಗಲೂ ಅಂಥ ಕಥೆ ಏನೂ ಇರುವದಿಲ್ಲ. ಅವನ ಜೀವನದ ಏಕೈಕ ಸಮಸ್ಯೆಯೆಂದರೆ ದಾನಪ್ಪ. ದಾನಪ್ಪನೋರು ಸಾಹುಕಾರ್ರು. ಮೂರು ಮಳಿಗೆಯ ಮನೆ, ಎರಡು ಅಂಗಡಿ, ಒಂದು ಛತ್ರ, ಅರವತ್ತೆಕರೆ ಜಮೀನು, ದೊಡ್ಡ ಕೊಟ್ಟಿಗೆ, ಬೈಪಾಸಿನಲ್ಲೊಂದು ಹೋಟ್ಲು ಕಂ ರೆಸಾರ್ಟಿನ ಲೀಸು. ಲಕ್ಷ್ಮಿ ಪುತ್ರರು. ದಾನಪ್ಪನೋರ ಪೂರ್ಣ ಕಥೆಯನ್ನು ಕಥೆಯಲ್ಲಿ ಬರೆಯಲಾಗುವದಿಲ್ಲ. ಕಾದಂಬರಿಯೇ ಬರೆಯಬೇಕು. ದಾನಪ್ಪನೋರ ಧರ್ತಿಯಲ್ಲಿ ಒಂದು ಝಲಕ್ ಇದೆ. ವಿಠ್ಠಲ ಕೂಡ ಬಡಕನೇನಲ್ಲ. ಒಳ್ಳೆಯ ಆಳು. ಓದು ಕೈ ಹತ್ತಲಿಲ್ಲ. ಆದರೆ ಭಯಂಕರ ವಾಲಿಬಾಲ್ ಪ್ಲೇಯರು. ವಿಠ್ಠಲ ಹೈಸ್ಕೂಲು ಮುಗಿಸಿ ವಾಲಿಬಾಲ್ ಕೋಚಿಂಗಿಗೆ ಹೋಗ್ತೀನಿ ಎಂದು ಹಠ ಹಿಡಿದ. ಆದರೆ ದಾನಪ್ನೋರು ಕೇಳಬೇಕಲ್ಲ. “ಮನಿಯಾಗ ರೊಕ್ಕ ಕಾಲು ಮುರ್ಕಂಡು ಬಿದ್ದದ. ಬಾಲ್ ಆಡಾಕ ಹೊಕ್ಕಾನಂತ. ನನ್ ಬಾಲ್ ಹಿಡ್ಕೊಂಡ್ ಆಡು ಬಾ.. ಸಾಲೀಗ್ ಹೋಗಲ್ಲಾ ಅಂದ್ರ ಛತ್ರದಾಗ ಎಲೆ ಲೆಕ್ಕ ಬರ್ಕೊಂತ ಕುಂದ್ರು..” ಎಂದರು. ಅನಿವಾರ್ಯವಾಗಿ ವಿಠ್ಠಲ ಊರಿನ ಕಾಲೇಜು ಸೇರಿದ. ಅಲ್ಲಿ ನನಗೆ ಸಿಕ್ಕವ ವಿಠ್ಠಲ.

ನಾನು ಮತ್ತು ನರಸಿಂಹ ಶಾಲೆಯ ಫ್ರೆಂಡ್ಸು. ಇವನು ನಮ್ಮ ಜೊತೆ ಊಟಕ್ಕೆ ಬರುತ್ತೇನೆ ಎಂದು ಜೊತೆಯಾದವನು ಸ್ನೇಹಿತನಾದ. ಅಸಲಿಗೆ ನಾವು ಕೂಡ ಅವನನ್ನು ಸ್ನೇಹಿತ ಎಂದು ಒಪ್ಪಿಕೊಂಡಿದ್ದು ಅವನ ಹತ್ರ ಇದ್ದಿದ್ದ ರೊಕ್ಕಕ್ಕೆ. ಆದರೆ ಬರು ಬರುತ್ತಾ ವಿಠ್ಠಲ ನಮ್ಮವನೇ ಆಗಿ ಹೋದ. ಅವನು ತುಂಬಾ ಸಭ್ಯ ಮನುಷ್ಯ. ಅವರ ಅಮ್ಮನಂತವನು. ದಾನಪ್ಪನೋರ ಥರ ಬೆಳೆಯಲಿಲ್ಲ. ಸಂಜೆಯಾದರೆ ವಿದೇಶಿ ಮಧ್ಯದ ಗ್ಲಾಸಿನಲ್ಲಿ ದೇಸಿ ವಿಸ್ಕಿ ಮತ್ತು ಪಿಸ್ತಾ ತಿನ್ನುವ ದಾನಪ್ಪನೋರ ಮಗ ಎಣ್ಣೆಯ ರುಚಿ ಸಹ ನೋಡಿರಲಿಲ್ಲ. ನಮ್ಮ ಜೊತೆ ಕೂಡುತ್ತಿದ್ದ. ಅವನ ಬೇಸರವನ್ನೆಲ್ಲ ಹೇಳಿಕೊಳ್ಳುತ್ತಿದ್ದ. ಬಿಲ್ಲು ಕಟ್ಟುತ್ತಿದ್ದ. ನಾವೊಂಥರಾ ಥೆರಪಿಸ್ಟುಗಳು.

ಒಂದಿಷ್ಟು ಹೊತ್ತಿಗೆ ನರಸಿಂಹ ಬಂದ. ನಮ್ಮ ರೆಗ್ಯುಲರ್ ಐಟಂ ಹಿಡಿಕೊಂಡು ಕುಳಿತೆವು. ಅಂಗಡಿಯ ಒಳಗೆ ಲೈಟು ಉರಿಯುತ್ತಿದೆ ಎಂದರೆ ನಮ್ಮ ಊರಿನ ಜನಕ್ಕೆ ಚಟ. ಸುಮ್ಮನೆ ಬಂದು ಬಾಗಿಲು ತಟ್ಟುತ್ತಾರೆ. ಆಮೇಲೆ ಒಂದ್ರುಪಾಯಿ ಬೆಂಕಿ ಪಟ್ನ ತಗಂಡು ಹೋಗ್ತಾರೆ. ಅವರಿಗೆ ಬೆಂಕಿ ಪಟ್ನ ಬೇಕಿಲ್ಲ. ಇಲ್ಲಿ ಒಳಗೆ ಲೈಟು ಯಾಕೆ ಉರಿಯುತ್ತಿದೆ ಎಂಬ ಕುತೂಹಲ. ಅದಕ್ಕೆ ನಾವು ದೇವರ ದೀಪದ ಬೆಳಕಿನಲ್ಲಿ ಕುಡಿಯುತ್ತೇವೆ.

ವಿಠ್ಠಲ ಕೂಡ ನಮ್ಮೊಂದಿಗೆ ಬಂದು ಕುಳಿತ. ನರಸಿಂಹ ಎಂದಿನಂತೆ ಎರಡು ಪ್ಲಾಸ್ಟಿಕ್ ಗ್ಲಾಸಿಗೆ ಎಣ್ಣೆ ಬಗ್ಗಿಸಿ ತಯಾರಿ ಮಾಡುತ್ತಿದ್ದಂತೆ ವಿಠ್ಠಲ ಕೈ ಹಾಕಿ ನಾನು ದೊಡ್ಡೋನ್ ಆಗೇನಿ. ನಂಗು ಬೇಕು ಕುಡಿಯೋಕೆ..” ಎಂದು ಹಠ ಮಾಡುವ ಚಿಕ್ಕ ಹುಡುಗನಂತೆ ತೋರಿದ. ನಾನು ನರಸಿಂಹನ ಮುಖ ನೋಡಿದೆ. ಕುಡಿಲಿ ಬುಡು ಎಂದು ಕಣ್ಣಿನಲ್ಲೇ ಹೇಳಿದ. ಗಟ ಗಟನೆ ಒಂದರ್ಧ ಪೆಗ್ಗನ್ನು ಸುರಿದುಕೊಂಡು ಮುಖ ಸುಟ್ಟ ಸುಡುಗಾಡು ಮಾಡಿಕೊಂಡ. “ಇದ್ ಹೆಂಗೆ ಕುಡಿತೀರೋ..” ಎನ್ನುವ ಜಾಗತಿಕ ಮಾತನ್ನು ಹೇಳಿದ.

ಒಂದೆರಡು ಪೆಗ್ಗಿನವರೆಗೆ ಸುಮ್ಮನೆ ಇದ್ದ ವಿಠ್ಠಲ ಹಲುಬ ತೊಡಗಿದ. “ಸಿದ್ದಪ್ಪಾಜಿ ನಮಕ್ ಹರಾಂ ನನ್ನ ಮಗ..”

ನಾವು ಸುಮ್ಮನಿದ್ದೆವು. ಕಥೆ ಹೊರಬರುವ ವೇಳೆಯಲ್ಲಿ ಮತ್ತು ಸರಸವಾಡುವಾಗ ಫ್ಲೋ ತಡೆಯಬಾರದು. ಕಥೆ ಮತ್ತು ಸರಸಗಳ ಸ್ವಾರಸ್ಯ ಹಾಳಾಗುತ್ತದೆ.

“ಸಿದ್ದಪ್ಪಾಜಿ ನಮಕ್ ಹರಾಂ ಇದಾನ. ಎಷ್ಟು ದುಡ್ಡು ಹೊಡದಾನೋ ಬೋಸುಡಿ ಮಗ. ನಮ್ಮ ಅಪ್ಪಗ ನಾ ಲೆಕ್ಕ ಕೇಳತೀನಿ ನಾನು…”

ಈಗ ಅವನು ಹಿಂಟ್ ಕೊಡುತ್ತಿದ್ದಾನೆ. ಪ್ರಶ್ನೆ ಕೇಳಿರೆಂದು. ಕಥೆ ಹೊರಬರುವಾಗ ಮತ್ತು ಸರಸವಾಡುವಾಗ ಎದುರಿನವರ ಹಿಂಟ್‌ಗಳನ್ನು ಅರಿವುದೊಂದು ಕಲೆ. ಸರಸವೂ ಮತ್ತು ಕಥೆಯೂ ಸ್ವಾರಸ್ಯವಾಗುವುದೇ ಆಗ.

ನರಸಿಂಹ ಕೇಳಿದ, “ಯಾವ ಲೆಕ್ಕ ಕೇಳ್ತೀಯಾ ನಿಮ್ಮ ಅಪ್ಪಾರ ಬಳಿ?”

ಕಥೆ ಮತ್ತು ಸರಸಗಳ ಮತ್ತೊಂದು ಅಂಶವೆಂದರೆ, ಮಗ್ಗುಲುಗಳನ್ನು ಬದಲಿಸುತ್ತಿರಬೇಕು. ಈಗ ನಾನು ನಿಮಗೆ ನೇರವಾಗಿ ವಿಠ್ಠಲ ಕಥೆಯನ್ನು ಹೇಳಿ ಮುಗಿಸಿದರೆ ನಿಮಗೆ ಸಂಪೂರ್ಣವಾಗಿ ಅರ್ಥವಾದ ಸಂತೃಪ್ತಿಯಿಲ್ಲದೇ, ಕಥೆ ಮುಗಿಸಬೇಕಲ್ಲ ಎಂಬ ಕರ್ಮಕ್ಕೆ ಕಥೆ ಹೇಳಿದಂತೆ ಭಾಸವಾಗುತ್ತದೆ. ಹಾಗಾಗಿ ಎರಡರಲ್ಲೂ ಸ್ವಾರಸ್ಯವನ್ನು ಕೆಣಕಲು ಮುಂದೊಮ್ಮೆ, ಹಿಂದೊಮ್ಮೆ, ನಡುವೊಮ್ಮೆ ಅರ್ಥಾತ್ ವರ್ತಮಾನ ಭವಿಷ್ಯಗಳ ಜೊತೆ ಫ್ಲ್ಯಾಷ್‌ಬ್ಯಾಕ್ ಕೂಡ ಹೇಳಬೇಕಾಗುತ್ತದೆ. ಹದವನರಿತರೆ ಸ್ವಾರಸ್ಯ ಸುಲಭ.

ವಿಠ್ಠಲನ ಕಥೆಯಲ್ಲಿ ಬರುವ ಸಿದ್ದಪ್ಪಾಜಿ ಮೂರುಮಠ ಎನ್ನುವ ಉದ್ದ ಹೆಸರಿನ ಸಿದ್ದಪ್ಪಣ್ಣ ನಮ್ಮ ಊರಿನಲ್ಲಿ ಹೆಚ್ಚು ಕಡಿಮೆ ಸೆಟಲ್ ಆಗಿರುವವನು. ಅವನು ಎಲ್ಲರಿಗೂ ಗೊತ್ತು. ಬರ್ಕ್ಲಿ ಸಿಗರೇಟು, ತಲೆಗೊಂದು ಮುಂಡಾಸು, ಉದ್ದವಾದ ಮತ್ತು ತಂದಿದ್ದ ದಿನ ಬಿಳಿಯಾಗಿದ್ದ ಕಚ್ಚೆ ಪಂಚೆ, ಚರ್ ಪರ್ ಎನ್ನುವ ಮೆಟ್ಟು, ಅವರ ಕೈಲೊಂದು ಕಪ್ಪು ಚರ್ಮದ ಬ್ಯಾಗು. ಮೈಸೂರು ಮಹಾರಾಜರು ನನ್ನ ಅಪ್ಪನ ಅಭಿನಯವನ್ನು ನೋಡಿ ಕೊಟ್ಟಿದ್ದ ಕೈ ಚೀಲ ಎಂದು ಅದನ್ನು ಭದ್ರವಾಗಿ ಭುಜದೊಳಗೆ ಸಿಕ್ಕಿಸಿ ಓಡಾಡುತ್ತಿದ್ದ ಸಿದ್ದಪ್ಪಣ್ಣ ಮೂಲತಃ ಅಲೆಮಾರಿ ಕಲಾವಿದ. ಅವನ ಅಪ್ಪನದೊಂದು ಭರ್ಜರಿ ನಾಟಕ ಕಂಪನಿ ಇತ್ತು. ಊರೂರು ಅಲೆದು ಟೆಂಟು ಹಾಕಿ ನಾಟಕವಾಡಿಸುವ ಕಂಪನಿಯ ಮಾಲೀಕನ ಮಗ ಅವನು. ಆಸ್ತಿವಂತನಲ್ಲದಿದ್ದರೂ ದುಡ್ಡು ಓಡಾಡಿಸುತ್ತಿದ್ದ ಜನ ಅವರು. ಅವನ ಅಪ್ಪನ ಕೊನೆಯಾಗುವ ಹೊತ್ತಿನಲ್ಲಿ ನಮ್ಮ ಊರಿನ ಬಳಿ ಟೆಂಟು ಹಾಕಿದ್ದರಂತೆ. ಅವರು ತೀರಿದ ನಂತರ ನಾಟಕವಾಡಿಸುವುದು ಸ್ವಲ್ಪ ಕಷ್ಟವಾಗಿ ಅವರು ಕೆಲವು ವರ್ಷಗಳ ಕಾಲ ನಮ್ಮ ಊರಿನಲ್ಲೇ ನೆಲೆ ಬಿಟ್ಟಿದ್ದರಿಂದ ಸಿದ್ದಪ್ಪಣ್ಣ ನಮ್ಮೂರಲ್ಲಿ ಸ್ವಲ್ಪ ಜಾಸ್ತಿ ಕನೆಕ್ಷನ್ ಮಾಡಿಕೊಂಡ. ಅದರಲ್ಲೊಂದು ದಾನಪ್ಪನೋರು.

ಇವರ ಕಂಪನಿಯ ಕಲಾವಿದರೆಲ್ಲ ಹೊತ್ತಿನ ತುತ್ತಿಗೆ ಕಷ್ಟ ಪಡುವ ವೇಳೆ ಬಂದಿತ್ತು. ಕೆಲವರೆಲ್ಲ ಬೇರೆ ಕಂಪನಿಗಳಿಗೆ ಹೋದರು. ಆಗ ಕೈ ಹಿಡಿದೋರು ದಾನಪ್ಪನೋರು. ಕಂಪನಿಯ ಮತ್ತು ಕಲಾವಿದರ ಕೈ ಹಿಡಿದು ಒಂದಷ್ಟು ಪ್ರದರ್ಶನಗಳನ್ನು ಮಾಡಿಸಿ, ಜನರನ್ನು ಸೇರಿಸಿ, ಅವರ ಕೈಗೊಂದಿಷ್ಟು ಕಾಸು ಬರುವಂತೆ ಮಾಡಿ ಬಚಾವು ಮಾಡಿದರು. ಆ ಪ್ರಕ್ರಿಯೆಯಲ್ಲಿ ಸಿದ್ದಪ್ಪಣ್ಣನು ದಾನಪ್ಪನೋರ ಮನೆಯ ಚಾವಡಿಯ ಒಳಗೆ ಕೂರತೊಡಗಿದ. ಜಾತಿಯಲ್ಲಿ ಕೆಳಗಿನವನಾದರೂ ಬಂದಾಗಲೆಲ್ಲ ನೇರವಾಗಿ ಹೋಗಿ ಕೈ ಕಾಲು ತೊಳೆದು ಚಾವಡಿಯ ಕುರ್ಚಿಯ ಮೇಲೆ ಕೂರತೊಡಗಿದ. ಅವನ ಜಾತಿಯವರು ಪಾಗಾರದಲ್ಲಿಯೇ ಕೂರಬೇಕಿತ್ತು.

ಊರಿನವರಿಗೆ ಸ್ವಲ್ಪ ಆಶ್ಚರ್ಯವಾದರೂ, ಸುಮ್ಮನಾದರು. ದೊಡ್ಡೋರ ಮನೆಯ ಮಾತು ನಮಗ್ಯಾಕೆ? ಸಿದ್ದಪ್ಪಣ್ಣ ನಾಟಕ ಕಂಪನಿ ಬೇರೆ ಊರುಗಳಿಗೆ ಸಾಗಿಸಿದರೂ ಅವನ ಅಂಬಾಸಿಡರ್ ಕಾರಿನಲ್ಲಿ ನಮ್ಮೂರಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ದಾನಪ್ಪನೋರ ಕಾರಿನ ಹಿಂದೆ ಮುಂದೆ ಓಡಾಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಇಷ್ಟೆಲ್ಲ ವರ್ಷಗಳಿಂದ ಆತ್ಮೀಯನಾಗಿದ್ದ ಸಿದ್ದಪ್ಪಣ್ಣ ದೇವರಂಥ ಮನುಷ್ಯ ಎಂದು ಈಗ ಒಂದೆರಡು ವಾರದ ಹಿಂದೆ ಹೇಳುತ್ತಿದ್ದ ವಿಠ್ಠಲ ಈಗ ಅಚಾನಕ್ಕಾಗಿ ನಮಕ್ ಹರಾಮ್ ಹೇಗೆ ಆದ ಎನ್ನುವ ವಿಷಯ ನಮಗೆ ಅರ್ಥವಾಗಲಿಲ್ಲ.

ಒಂದಷ್ಟು ಹೊತ್ತು ಏನೂ ಮಾತನಾಡದೆ ಸುಮ್ಮನೆ ಉಳಿದ ವಿಠ್ಠಲನನ್ನು ಮತ್ತೆ ಕೇಳಿದ ನರಸಿಂಹ. “ಏನ್ ಆಯ್ತೋ ವಿಟ್ಟು?”

ಅಷ್ಟು ಹೊತ್ತಿಗೆ ವಿಠ್ಠಲ ಒಂದು ಪೆಗ್ಗಿನ ಮೇಲೆ ಮುಗಿಸಿದ್ದ.

“ಯಾಕೆ ಏನು ಆಯ್ತು ಅಂತ ಕೇಳ್ತೀಯಾ? ಏನ್ ಮಾಡಿದೆ ಅಂತ ಕೇಳು? ನಾನೇನ್ ಚಿಕ್ಕ ಮಗೂನ? ನಾನು ಕೂಡ ದೊಡ್ಡೋನಾಗಿದೀನಿ..”

ವಿಠ್ಠಲನ ಒಳಗೆ ಪರಮಾತ್ಮ ಆಡುತ್ತಿದ್ದ.

ನನಗೆ ಅವನು ಇನ್ನೂ ರಚ್ಚೆ ಹಿಡಿದ ಮಗುವಿನಂತೆ ಕಾಣುತ್ತಿದ್ದ. ನರಸಿಂಹನೇ ಮುಂದುವರೆಸಿದ. “ಸರಿ ಏನ್ ಮಾಡಿದೆ ಅದನ್ನೇ ಹೇಳು?”. ನನ್ನೊಳಗೆ ಕುತೂಹಲವಿತ್ತು ಇವನು ಎಣ್ಣೆ ಕುಡಿದದ್ದಕ್ಕೆ ದೊಡ್ಡವನಾಗಿ ಫೀಲ್ ಮಾಡುತ್ತಿದ್ದಾನಾ ಆದರೆ ಅಸಲಿಗೆ ಬೇರೆ ಕಥೆಯ?

“ಮಾಡೋಕೋಗಿದ್ದೆ, ಅದೃಷ್ಟ ಕೆಟ್ಟೋಯಿತು. ನಾನು ಒಬ್ಬಳು ಹುಡುಗಿನ ಬುಕ್ ಮಾಡಿದ್ದೆ..” ಆ ಕ್ಷಣದಲ್ಲಿ ನನ್ನ ಅಂಗಡಿಯೊಳಗೆ ಇದ್ದ ದೇವರ ಎದುರಿನ ದೀಪ ಕೂಡ ಆಶ್ಚರ್ಯದಿಂದ ವಿಠ್ಠಲನನ್ನು ನೋಡಿತು.

ಹುಡುಗಿಯನ್ನು ಬುಕ್ ಮಾಡಿದ್ದೆ ಎನ್ನುವಂಥ ಮಾತು ಇವನ ಬಾಯಲ್ಲಿ ಬರಬಹುದೆಂದು ನಮಗೆ ನಿರೀಕ್ಷೆಯಿರಲಿಲ್ಲ. ಏನು ಹೇಳುತ್ತಿದ್ದಾನೆ ಎಂದು ಬಗೆ ಹರಿಯಲಿಲ್ಲ.

ಅವನೇ ಮುಂದುವರೆಸಿದ.

“ನಂಗೆ ಇಪ್ಪತ್ತಾರು ವಯಸ್ಸು. ನಂಗೆ ಕೂಡ ಹುಡುಗಿ ಬೇಕು ಅನಿಸ್ತದ. ಬೇಡವಾ? ನಾನು ಉಪ್ಪು ಹುಳಿ ಖಾರ ತಿನ್ನೋನು. ನನಗ ಹುಡುಗೀರ ಜೋಡಿ ಮಾತಾಡಿಯೇ ಅಭ್ಯಾಸ ಇಲ್ಲ. ಮತ್ತೇನ್ ಮಾಡ್ಲಿ? ನಿಮಗೆ ಏನು ಅನಿಸ್ತದೆ? ನಾನು ಯಾರ ಬಳಿ ಹೋಗಿರಬಹುದು?”

ಇವನು ನಮ್ಮ ಬಳಿಯೇ ಪ್ರಶ್ನಿಸಿದನೋ, ಹೇಳುತ್ತಿದ್ದನೋ ಪರಮಾತ್ಮನಿಗೆ ಗೊತ್ತು. ಎಲ್ಲ ಅವನ ಆಟ.

ಹುಡುಗ ಎಂತದೋ ದೊಡ್ಡ ಡೀಲ್ ಅನ್ನೇ ಮಾಡಿದ್ದಾನೆ ಎನ್ನುವುದು ನಮಗೆ ಅರ್ಥವಾಯಿತು. ನರಸಿಂಹ ಹೇಳಿದ, “ನೋಡು ವಿಟ್ಟು, ನಿನ್ನ ವಯಸ್ಸಿಗೆ ಇವೆಲ್ಲ ಮಾಮೂಲು. ನಿನ್ನ ಸೇಫ್ಟಿ ಕೂಡ ಅಷ್ಟೇ ಮುಖ್ಯ.” ಎಂದೇನೋ ಕೊರೆಯ ತೊಡಗಿದ.

ವಿಠ್ಠಲನಿಗೆ ಕಥೆ ಹೇಳಬೇಕಿತ್ತು. ನಿಮಗೆ ಏನು ಅನಿಸ್ತದೆ? ನಾನು ಯಾರ ಬಳಿ ಹೋಗಿರಬಹುದು? ಮತ್ತೆ ಕೇಳಿದ.

ನಮ್ಮಿಬ್ಬರ ಬಾಯಿಂದ ಒಂದೇ ಉತ್ತರ ಬಂತು.

“ಸಿದ್ದಪ್ಪಣ್ಣ..”

ನಮ್ಮಿಬ್ಬರ ಬಾಯಲ್ಲಿ ಈ ಉತ್ತರ ಬರಲು ಒಂದು ದೊಡ್ಡ ಉಪ ಕಥೆಯೇ ಇದೆ. ಸಿದ್ದಪ್ಪಣ್ಣ ನಾಟಕ ಕಂಪನಿ ನಡೆಸುತ್ತಿದ್ದನಾದರೂ ಅದು ನಡೆವ ಸ್ಪೀಡು ಕಡಿಮೆಯಾಗಿತ್ತು. ಹಾಗಾಗಿ ಕಲಾವಿದರನ್ನು ಸಿನಿಮಾ ಶೂಟಿಂಗಿಗೆ ಕಳಿಸುವ ಐಡಿಯಾ ಮಾಡಿದ. ಹಾಗೆ ಬೆಂಗಳೂರಿನತ್ತ ತಿರುಗಿದ ಸಿದ್ದಪ್ಪಣ್ಣ, ಸಿನಿಮಾ ಇಂಡಸ್ಟ್ರಿಯ ಕನೆಕ್ಷನ್ನುಗಳನ್ನು ಮಾಡಿಕೊಂಡ. ತುಂಬಾ ದೊಡ್ಡ ದೊಡ್ಡ ಮಂದಿಯೇನಲ್ಲ. ಒಂದಿಷ್ಟು ಡಿಸ್ಟ್ರಿಬ್ಯುಟರುಗಳು, ಪ್ರೊಡಕ್ಷನ್ ಮ್ಯಾನೇಜರ್‌ಗಳು, ಒಂದಿಷ್ಟು ಟೀವಿ ಜಗತ್ತಿನ ಜನ, ಇವರನ್ನೆಲ್ಲ ಪರಿಚಯಿಸಿಕೊಂಡ.

ಈ ಸಮಯದಲ್ಲಿ ಎಲ್ಲ ಕಡೆ ಸಣ್ಣ ಸಣ್ಣ ಸಿನಿಮಾ ಮಂದಿರಗಳು ಶುರುವಾದವು. ಇವುಗಳನ್ನು ವಿಡಿಯೋ ಟಾಕೀಸ್ ಎಂದು ಕೂಡ ಕರೆಯುತ್ತಿದ್ದರು. ಊರಿನ ಜನರಿಗೆ ಎಲ್ಲ ಸೇವೆಯನ್ನು ನೀಡುತ್ತಿದ್ದ ದಾನಪ್ಪನೋರು ತನ್ನ ಬಳಿ ಸಿನಿಮಾ ತೋರಿಸುವ ವ್ಯವಸ್ಥೆಯಿಲ್ಲವೆಂದು ಮನಗಂಡರು. ಸಿನಿಮಾ ನೋಡಲು ಊರ ಜನ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು. ಜನ ಗಾಡಿ ಕಟ್ಟಿಕೊಂಡು ಹೋಗುತ್ತಿದ್ದುದು ಕಾಣುತ್ತಿತ್ತು. ಅವರೊಳಗಿನ ವ್ಯಾಪಾರಿಗೆ ಐಡಿಯಾ ಬಂದೆ ಹೋಯಿತು. ಒಂದು ಶುಭ ಮುಹೂರ್ತದಲ್ಲಿ ಸಿದ್ದಪ್ಪಣ್ಣನ ಬಳಿ ಪ್ರಸ್ತಾಪವಿಟ್ಟರು. ಸಿದ್ದಪ್ಪಣ್ಣ ಅಕ್ಷರಶಃ ಕುಣಿದು ಬಿಟ್ಟ.

“ಅಪ್ಪಣೆ ಮಹಾಪ್ರಭು..” ಎಂದು ರಣವೀಳ್ಯವನ್ನು ಪಡೆದು ಬೆಂಗಳೂರಿನ ಕಡೆಗೆ ನಡೆದ. ಅಲ್ಲೊಂದು ಮಾರಾಟಕ್ಕಿದ್ದ ವಿಡಿಯೋ ಟಾಕೀಸ್ ಯಂತ್ರವನ್ನು ವ್ಯಾಪಾರಕ್ಕೆ ಪಡೆದು, ಡೀಲ್ ಕುದುರಿಸಿಯೇ ಬಿಟ್ಟ. ಅದೆಷ್ಟು ಸಾವಿರ ಹೇಳಿದನೋ, ಕೊಟ್ಟನೋ ಒಟ್ಟಲ್ಲಿ ದಾನಪ್ಪನೋರ ಕನಸು ನನಸಾಯಿತು. ಊರಲ್ಲಿ ಒಂದು ಟೆಂಟು ರೆಡಿಯಾಯಿತು. ಊರ ತುಂಬಾ ಸಿನಿಮಾದ್ದೇ ಮಾತು. ಟಾಕೀಸು ಕಟ್ಟಿದ ಪ್ರತಿ ಹೊತ್ತಿನ ಅಪ್ಡೇಟ್ ಅನ್ನು ಪ್ರತಿ ಮನೆಯಲ್ಲೂ ಮಾತನಾಡಿದರು. ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಟೆಂಟಿನ ಸುತ್ತೆಲ್ಲ ಯಾರೋ ಬಂದು ಲೈಟಿನ ಸರ ಹಾಕಿದರು. ಇನ್ಯಾರೋ ಮಾವಿನ ತೋರಣ ಕಟ್ಟಿದರು. ಮಧ್ಯದಲ್ಲಿ ಬೆಂಗಳೂರಿನಿಂದ ಒಂದು ಸಣ್ಣ ಗೂಡ್ಸು ರಿಕ್ಷಾದಲ್ಲಿ ಸಿನೆಮಾ ಪ್ರೊಜೆಕ್ಟರು ಬಂದಿತು. ಅದಕ್ಕೊಂದು ಆಪರೇಟಿಂಗ್ ಮಷಿನ್ನು. ಎದುರಿಗೊಂದು ಪರದೆ ಸಣ್ಣದು. ಅದರ ಜೊತೆಯಲ್ಲಿ ಅದನ್ನು ಆಪರೇಟ್ ಮಾಡಲು ಮಂಡ್ಯದ ಕಡೆಯ ಹುಡುಗ ಕುಮಾರ.

ಒಂದು ಶುಭ ದಿನವನ್ನು ನೋಡಿ ದಾನಪ್ಪನೋರೇ ಸ್ವತಃ ಹೋಗಿ ಬೆಂಗಳೂರಿನಿಂದ ಮೊದಲ ಸಿನಿಮಾ ರೀಲು ತರುವದೆಂದು ಪ್ಲಾನ್ ಆಯಿತು. ಟೆಂಟಿನ ಸುತ್ತೆಲ್ಲ ಗೋವಿನ ಸಗಣಿಯಿಂದ ನೆಲ ಮಾಡಲಾಯಿತು. ಸೈಕ್ಲ್ ಸ್ಟ್ಯಾಂಡು ಮಾಡಿದರು. ಆಗೆಲ್ಲ ಜನರು ನೆಲದ ಬಗ್ಗೆ ಇಷ್ಟೊಂದು ವ್ಯಾಮೋಹ ಹೊಂದಿರಲಿಲ್ಲ. ಪಕ್ಕದ ಜಾಗದವರು ಒಂದು ತಳ್ಳುವ ಗಾಡಿಯ ಅಂಗಡಿ ಹಾಕಲು ಬಿಟ್ಟು ಕೊಟ್ಟರು. ಅಲ್ಲಿ ಯಾರೋ ಬಂದು ರಂಗೋಲಿ ಇಟ್ಟರು.

ಕಾರಿನಲ್ಲಿ ಬಂದ ಸಿನಿಮಾ ರೀಲನ್ನು ಸ್ವಾಗತಿಸಲು ಊರೆಲ್ಲ ನೆರೆದಿತ್ತು. ನಮ್ಮೂರ ಸಂಭ್ರಮ ಹೇಳ ತೀರದು. ದಾನಪ್ಪನೋರಿಗಂತೂ ತಾನು ದೈವೀ ಸಮಾನ ಎನ್ನುವ ಭಾವ ಉಕ್ಕುತ್ತಿತ್ತು. ಪಕ್ಕದಲ್ಲಿ ಸಿದ್ದಪ್ಪಣ್ಣ ಸುಮ್ಮ ಸುಮ್ಮನೆ ಉದ್ವೇಗಗೊಳ್ಳುತ್ತಿದ್ದ. ಆ ದಿನಕ್ಕೆಂದು ಊರಿವರೆಲ್ಲ ಸುಮಾರು ಮೂರು ದಿನಗಳಿಂದ ಮನೆಯ ಕೆಲಸವನ್ನೆಲ್ಲ ಬಿಟ್ಟು ತಯಾರಿ ನಡೆಸಿದ್ದರು. ಮೊದಲ ದಿನ ಸಂಜೆ ಒಂದು ಷೋ. ಕೆಲವಷ್ಟೇ ಕುಟುಂಬಗಳಿಗೆ ಆಮಂತ್ರಣ. ಮಾರನೇ ದಿನದಿಂದ ಎರಡೆರಡು ಶೋ, ಸಂಜೆ ಏಳು ಮತ್ತು ಹತ್ತಕ್ಕೆಂದು ನಿರ್ಧಾರವಾಯಿತು.

ಮೊದಲ ದಿನದ ಮೊದಲ ಶೋ ಶುರುವಾಗುವುದು ಎಂಟಕ್ಕೆ ಎಂದು ನಿರ್ಧಾರವಾಗಿತ್ತು. ಅಕ್ಕ ಪಕ್ಕದ ಊರುಗಳಿಂದ ಸಿನಿಮಾ ನೋಡುವದಕ್ಕಿಂತ ಟೆಂಟು ನೋಡಿ ಖುಷಿ ಪಡಲೆಂದು ಜನ ಬಂದು ನೂಕು ನುಗ್ಗಲಾಯಿತು. ಎಲ್ಲರ ನಡುವೆ ಕಾರಿನಲ್ಲಿ ಬಂದಿಳಿದ ದಾನಪ್ಪನೋರು ಮತ್ತು ಅವರ ಧರ್ಮ ಪತ್ನಿ ಮತ್ತು ಸಿದ್ದಪ್ಪಣ್ಣ.

ಕುಮಾರನು ಸಿನಿಮಾದ ಪೋಸ್ಟರಿನಲ್ಲಿ ಇದ್ದ ಥರದ್ದೇ ಬೆಲ್ ಬಾಟಮ್ ಪ್ಯಾಂಟು ಧರಿಸಿ, ತರಿಸಿದ್ದು ದಾನಪ್ನೊರೆ, ತೋರಸೋದು ನಾನೇ ಎನ್ನುವ ಅಟಿಟ್ಯೂಡ್ ತೋರುತ್ತ ಕುಳಿತಿದ್ದ. ಜಾತ್ರೆ ಹೊರಗೆ, ಸಿನಿಮಾ ಒಳಗೆ. ಟೆಂಟಿನಲ್ಲಿ ಮೊದಲ ಸಿನಿಮಾ ಯಶಸ್ವಿಯಾಗಿ ಸ್ಕ್ರೀನಿನ ಮೇಲೆ ಹರಿಯಿತು. ಸಿನಿಮಾ ಆರಂಭವಾಗಿ ಹತ್ತು ಹದಿನೈದು ನಿಮಿಷಕ್ಕೆ ಅಲ್ಲಿನ ಜನರ ಖುಷಿಯನ್ನು ನೋಡಿ ದಾನಪ್ಪನೋರು ಸಾರ್ಥಕತೆಯ ತುದಿಯಂಚಿನಲ್ಲಿದ್ದರು. ಸಿನಿಮಾ ಆರಂಭಿಸಿ ಒಂದಷ್ಟು ಹೊತ್ತು ನೋಡಿದ ಕುಮಾರ ತಾನೇಕೆ ತೆರೆಯ ಮರೆಯಲ್ಲಿರಬೇಕೆಂದು, ಹೊರಗೆ ಬಂದು ನಿಂತು ಒಂದು ಸಿಗರೇಟು ಸೇದುತ್ತ ನಿಂತ. ಊರ ಕಡೆಯ ಒಂದಷ್ಟು ವಯಸ್ಸಿನ ಹುಡುಗಿಯರು ಇವನತ್ತ ದೃಷ್ಟಿ ಬೀರಿದ್ದು ಗೊತ್ತಾಗಿ ಅವನು ಅಲ್ಲಿಂದ ಕದಲಲಿಲ್ಲ.

ಒಳಗೆ ಹರಿದು ಬರುತ್ತಿದ್ದ ಸಿನಿಮಾ ಒಮ್ಮೆ ನಿಂತು ಹೋಗಿ, ಕಪ್ಪು ಪರದೆಯಾಗಿ, ಒಂದು ನಿಮಿಷಕ್ಕೆ ಮತ್ಯಾವುದೋ ಪಾತ್ರಗಳು ಬಂದು, ಭಾಷೆ ಬದಲಾಗಿ ಹೋಯಿತು. ಒಂದೈದು ನಿಮಿಷಗಳ ನಂತರ ಜನರಿಗೆ ಅರ್ಥವಾದರೂ ನೋಡಲಾಗದ ದೃಶ್ಯಗಳು ಶುರುವಾದವು. ಓಡಿ ಹೊರಗೆ ಹೋದ ಸಿದ್ದಪ್ಪಣ್ಣ ಕುಮಾರನ ಜುಟ್ ಹಿಡಿದು ಒಳಗೆಳೆದು ತಂದ. “ಬೋಸುಡಿ ಮಗನೆ ಕೆಲಸ ಮಾಡೋ ಅಂದ್ರೆ ಹೀರೋಗಿರಿ ಹೊಡಿತೀಯಾ” ಎಂದು ಒಂದು ಬಾರಿಸಿದ..

ಕುಮಾರ ಪಟಕ್ಕನೆ ಸಿನಿಮಾವನ್ನು ಆಫ್ ಮಾಡಿದ. ದಾನಪ್ಪನೋರಿಗೆ ಭುವಿಯೇ ಬಾಯ್ತೆರೆಯ ಬಾರದೇ ಎನಿಸಿತು. ಜನರೆಲ್ಲಾ ನಿಧಾನವಾಗಿ ಹೊರ ನಡೆದರು. ಹೊರಗಿದ್ದವರೆಲ್ಲ ಏನೋ ನಡೆಯಿತೆಂದು ಗುಸು ಗುಸು ಮಾತನಾಡುತ್ತ ವಾಪಸು ಹೊರಡ ತೊಡಗಿದರು.

ದಾನಪ್ನೋರು ಕೊನೆಯಲ್ಲಿ ಹೋದರು.

ಮಾರನೇ ದಿನ ಸಿದ್ದಪ್ಪಣ್ಣನ ರುಂಡವನ್ನು ದಾನಪ್ನೋರು ಚೆಂಡಾಡಿದರಂತೆ ಎನ್ನುವ ಹೆಡ್ಲೈನ್ಸ್ ನಿರೀಕ್ಷಿಸಿದ್ದ ಊರಿಗೆ ಆಶ್ಚರ್ಯ. ಏನೂ ನಡೆಯಲೇ ಇಲ್ಲ. ಒಂದು ನಾಕೈದು ದಿನಗಳ ನಂತರ ಸಿದ್ದಪ್ಪಣ್ಣ ಬಂದು ಮತ್ತೆ ದಾನಪ್ಪನೋರ ಮನೆಯ ಚಾವಡಿಯಲ್ಲಿ ಕಾಣಿಸಿಕೊಂಡ. ಈಗ ಊರಿನವರಿಗೆ ಕೆಟ್ಟ ಕುತೂಹಲ. ಎಲ್ಲರ ಪ್ರಕಾರ ಸಿದ್ದಪ್ಪಣ್ಣನನ್ನು ದೂರವಿಡಬೇಕಲ್ಲವೇ. ಉಹುಂ. ಹಾಗಾಗಲಿಲ್ಲ. ದಾನಪ್ಪನೋರ ಮನೆಯ ಚಾವಡಿಯ ಜಾಗದಿಂದ ಸಿದ್ದಪ್ಪಣ್ಣ ಮರೆಯಾಗಲಿಲ್ಲ. ಊರು ಬೆರಗಾಯಿತು. ಟೆಂಟು ಜನರ ಮೆಮರಿಯಿಂದ ಸರಿಯುತ್ತಿತ್ತು.

ಸಿನಿಮಾ ರೀಲು ತರುವಾಗ ಒಂದು ತಿಂಗಳ ಬಾಡಿಗೆ ಅಡ್ವಾನ್ಸು ಕೊಟ್ಟಿದ್ದರಿಂದ ರೀಲು ಟೆಂಟಿನಲ್ಲೇ ಬಿದ್ದಿತ್ತು. ಕುಮಾರನು ವಾಪಸು ಬೆಂಗಳೂರಿಗೆ ನಡೆದಿದ್ದ.

ಅದೊಂದು ದಿನ ತೋಟದಲ್ಲಿ ಅಡ್ಡಾಡುತ್ತಿದ್ದ ದಾನಪ್ಪನೋರು ಸಿದ್ದಪ್ಪಣ್ಣನ ಬಳಿ ಕೇಳಿದರು. “ಆ ಸಿನಿಮಾ ರೀಲ್ ಅದಲ್ಲ, ಆ ಸಿನಿಮಾ ನೋಡಿದರೆ ಪೊಲೀಸರು ಬರ್ತಾರೇನ್ರೀ..?”

“ರೊಕ್ಕ ಕೊಟ್ರು ಬರಾಂಗಿಲ್ರೀ ಪೊಲೀಸ್ರು ಇಲ್ಲಿ ಮಟ.. ” ಸಿದ್ದಪ್ಪಣ್ಣ ಪಂಚೆಯನ್ನು ಎತ್ತಿ ಕಟ್ಟಲು ಸಿದ್ದರಾದರು.

“ಹಂಗಂತೀರಿ..?”

“ಹೌದರೀ..”

“ಮತ್ತ ಕರ್ಕೊಂಡ್ ಬರ್ರೀ ಆ ಹಾದರಗಿತ್ತಿ ಮಗ ಕುಮಾರನ.. ಒಂದ್ ಸಿನಿಮಾ ನೋಡೋಣ..” ಸಿದ್ದಪ್ಪಣ್ಣ ರಣವೀಳ್ಯ ಪಡೆದವರೇ ಸನ್ನದ್ಧರಾಗಿ ಓಡಿದರು. ಅವರು ಮಾರನೇ ದಿನ ಕುಮಾರನನ್ನು ಕರೆ ತರುವದೆಂದೂ, ಮತ್ತು ಅದರ ಮರುದಿನ ಟೆಂಟಿನಲ್ಲಿ ದಾನಪ್ಪನೋರು ಸಿನಿಮಾ ನೋಡುವದೆಂದೂ ಪ್ಲಾನ್ ಮಾಡಿಕೊಂಡರು.

ಕಾಸಿನ ಆಸೆಗೆ ಊರಿಗೆ ಬಂದಿಳಿದ ಕುಮಾರ ದುರ್ದಾನ ತೆಗೆದುಕೊಂಡವನಂತೆ ಕಂಡ. ನೇರವಾಗಿ ತೋಟದ ಮನೆಗೆ ಹೋದ ಕುಮಾರ ಬಂದಿದ್ದು ಊರಿನವರಿಗೆ ಗೊತ್ತಿರಲಿಲ್ಲ.

ಊರಿನವರಿಗೆ ಸ್ವಲ್ಪ ಆಶ್ಚರ್ಯವಾದರೂ, ಸುಮ್ಮನಾದರು. ದೊಡ್ಡೋರ ಮನೆಯ ಮಾತು ನಮಗ್ಯಾಕೆ? ಸಿದ್ದಪ್ಪಣ್ಣ ನಾಟಕ ಕಂಪನಿ ಬೇರೆ ಊರುಗಳಿಗೆ ಸಾಗಿಸಿದರೂ ಅವನ ಅಂಬಾಸಿಡರ್ ಕಾರಿನಲ್ಲಿ ನಮ್ಮೂರಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ದಾನಪ್ಪನೋರ ಕಾರಿನ ಹಿಂದೆ ಮುಂದೆ ಓಡಾಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಸಿನಿಮಾ ನೋಡುವ ಪ್ಲಾನ್ ಆಗಿದ್ದು ರಾತ್ರಿ ಒಂಭತ್ತಕ್ಕೆ, ಊಟ ಮುಗಿದ ನಂತರ. ದಾನಪ್ಪನೋರು ಕುಡಿಯುತ್ತಿದ್ದುದು ಹೌದಾದರೂ, ಅವರು ತಮ್ಮ ಮಹಡಿಯ ಮೇಲಿನ ಕೋಣೆಯಲ್ಲಿ ಕುಳಿತು ಕುಡಿಯುತ್ತಿದ್ದರು.

ಪ್ಲಾನ್ ಇದ್ದುದು ರಾತ್ರಿ ಒಂಭತ್ತಕ್ಕಾದರೂ ದಾನಪ್ಪನೋರು ಸಂಜೆ ಆರೂವರೆಗೆಲ್ಲ ರೂಮಿಗೆ ಹೋಗಿ ಬಾಗಿಲು ಜಡಿದು ಕುಳಿತು ಬಿಟ್ಟರು. ಇಂತಹ ಒಂದು ಕಲಾತ್ಮಕ ಸಂಜೆಗೆ ರೆಡಿಯಾಗುತ್ತಿದ್ದ ಸಿದ್ದಪ್ಪಣ್ಣನಿಗೆ ಎಣ್ಣೆ ಬೇಕು ಎಂಬ ತಲುಬು ಹತ್ತಿ ಬಿಟ್ಟಿತು. ದಾನಪ್ಪನೋರು ಕುಡಿದು ರಂಗಾಗಿ ಸಿನಿಮಾ ನೋಡುವಾಗ ತಾನು ಪಕ್ಕದಲ್ಲಿ ನಶೆಯಿಲ್ಲದೆ ಕೂತರೆ ಸೆಟ್ ಆಗುವದಿಲ್ಲ. ಮತ್ತು ಅದಾಗಲೇ ಅವರು ‘ಆ’ ಸಿನಿಮಾಗಳನ್ನು ನೋಡುವ ಹವ್ಯಾಸವಿದ್ದರಿಂದ ಎಣ್ಣೆ ಮತ್ತು ಆ ಸಿನಿಮಾದ ಸೇರಿ ಕೊಡುವ ಕಿಕ್ಕು ಅವರನ್ನು ಕಾಡಹತ್ತಿತು. ನಮ್ಮ ಊರಿನಲ್ಲಿ ಇದ್ದ ಕೆಲವೇ ಕೆಲವು ಅಫೀಶಿಯಲ್ ಕುಡುಕರಲ್ಲಿ ಮುಂಚೂಣಿಯಲ್ಲಿದ್ದವನು ಅಂತೋನಿ. ಅಂತೋನಿ ಸೆಕ್ಯೂರಿಟಿ ಗಾರ್ಡು ಕೆಲ್ಸದಲ್ಲಿದ್ದವನು. ಆದರೆ ಅವನು ‘ಹಗಲು ಟೈಟ್’ ಎಂದೇ ಫೇಮಸ್ ಆದವನು. ಸಿದ್ದಪ್ಪಣ್ಣ ನೇರವಾಗಿ ಹೋಗಿದ್ದು ಅಂತೋನಿಯ ಮನೆ ಬಾಗಿಲಿಗೆ. ಊರ ಸಾಹುಕಾರ ದಾನಪ್ಪನೋರ ಪರಮಾಪ್ತ ತನ್ನ ಮನೆ ಬಾಗಿಲಲ್ಲಿ ಒಂದು ಕ್ವಾರ್ಟರ್ ಎಣ್ಣೆಗಾಗಿ ಕೈ ಚಾಚಿದ್ದು ಅಂತೋನಿಯ ಜೀವನದ ಬಹುದೊಡ್ಡ ಸುದಿನವಾಗಿತ್ತು. ಯಾವತ್ತೂ ಕೇಳದಿದ್ದ ಸಿದ್ದಪ್ಪಣ್ಣ ತನ್ನ ಬಳಿ ಎಣ್ಣೆ ಕೇಳಿದ್ದು ನೋಡಿ ಇದರ ಹಿಂದೆ ಏನೋ ರಹಸ್ಯವಿದೆ ಎಂದು ಅರಿತ ಅಂತೋನಿ, ಸಿದ್ದಪ್ಪಣ್ಣನ ಬಾಯಿಂದ ಸತ್ಯವನ್ನು ಹೊರತೆಗೆಸಿದ. “ನಂಗು ಕೂಡ ನೋಡ್ಲಿಕ್ಕೆ ಬಿಟ್ಟರೆ ನಾನು ನಿಂಗೆ ಎಣ್ಣೆ ಕೊಡ್ತೇನೆ..” ಎನ್ನುವ ಶರತ್ತಿನೊಂದಿಗೆ ಒಂದು ಕ್ವಾರ್ಟರ್ ಎಣ್ಣೆ ಸಿದ್ದಪ್ಪಣ್ಣನ ಕೈಗೆ ಬಂತು. ಬರುವಾಗ ಮತ್ತೆ ತರ್ತೇನೆ, ಅಲ್ಲಿಯೇ ಸ್ವಲ್ಪ ಸ್ವಲ್ಪ ಕುಡಿಯುವ ಎನ್ನುವ ಐಡಿಯಾ ಕೂಡ ಅಂತೋನಿ ಕೊಟ್ಟ. ಊರಿಂದ ಹೊರಗಿದ್ದ ಅಂತೋನಿಯ ಮನೆಯಿಂದ ಟೆಂಟು ಸ್ವಲ್ಪ ದೂರವೇ ಇತ್ತು. ‘ಆ’ ಸಿನಿಮಾದ ಆಕರ್ಷಣೆ ಎಷ್ಟೇ ಇದ್ದರೂ ಅಂತೋನಿಗೆ ಕತ್ತಲೆಂದರೆ ಭಯ. ಹಾಗಾಗಿ ಅವನು ತನ್ನ ಜೊತೆಯಿರಲೆಂದು ಗ್ಯಾರೇಜು ಶಂಕ್ರಪ್ಪನನ್ನು ಕರೆದ. ಶಂಕ್ರಪ್ಪನ ಬಳಿ ಮಾತನಾಡುವಾಗ ಕೇಳಿಸಿಕೊಂಡ ಅವನ ಅಷ್ಟಂಟು ಆನಂದ ತನ್ನ ಸ್ನೇಹಿತರಾದ ಗಾಂಪನಿಗೂ ಮಾಚನಿಗೂ ಹೇಳಿದ.

ಅಂದು ಸಂಜೆ ದಾನಪ್ಪನೋರ ಟೆಂಟಿನಲ್ಲಿ ಒಟ್ಟು ಹದಿನೆಂಟು ಜನ ಗಂಡಸರು ‘ಆ’ ಸಿನಿಮಾವನ್ನು ನೋಡುವ ಮೂಲಕ ನಮ್ಮ ಊರಿನ ಮೊತ್ತ ಮೊದಲ ವಯಸ್ಕರ ಸಿನಿಮಾದ ಸಾರ್ವಜನಿಕ ಸಮರ್ಪಣೆಯನ್ನು ನೆರವೇರಿಸಿದರು.

ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.

ಸಿದ್ದಪ್ಪಣ್ಣನೋರು ಮಾತ್ರ ನಮ್ಮ ಊರಿನ ನಂಟು ಬಿಡಲಿಲ್ಲ. ಅವರು ಮತ್ತು ದಾನಪ್ಪನೋರ ದೋಸ್ತಿ ಹಾಗೆ ಉಳಿದಿತ್ತು.

ಸಿದ್ದಪ್ಪಣ್ಣನ ನಾಟಕ ಕಂಪನಿ ಅತ್ತ ಸಂಪೂರ್ಣವಾಗಿ ಮುಚ್ಚದೆ, ಇತ್ತ ನಡೆಯದೆ ತೆವಳುತ್ತಿತ್ತು. ಕಲಾವಿದರೆಲ್ಲ ಸಿದ್ದಪ್ಪಣ್ಣನ ಹಿಂದೆ ಮುಂದೆ ಒಂದಿಷ್ಟು ಸೈಡ್ ಆಕ್ಟಿಂಗ್ ಕೆಲಸಗಳನ್ನು ಮಾಡುತ್ತಾ ಸಣ್ಣ ಸಣ್ಣ ಊರುಗಳಲ್ಲಿ ಆಗಾಗ ನಾಟಕದ ಪ್ರದರ್ಶನ ಮಾಡುತ್ತಾ ನಡೆಯುತ್ತಿದ್ದರು.

ವಿಠ್ಠಲನಿಗೆ ತಾನೊಂದು ಹುಡುಗಿಯನ್ನು ಸೇರಬೇಕೆಂದು ಬಯಕೆ ಕಿಬ್ಬೊಟ್ಟೆಯಾಳದಿಂದ ದಿನಕ್ಕೆ ಮೂರು ಬಾರಿ ಕಾಡಲು ಆರಂಭಿಸಿದಾಗ ಅವನಿಗೆ ಸಿಕ್ಕ ದಾರಿ ಸಿದ್ದಪ್ಪಣ್ಣ.

ವಿಠ್ಠಲ ಮುಂದುವರೆಸಿದ.

“ನಾನು ಆ ಬೋಳಿಮಗನ ಹತ್ತಿರ ಹೋಗಲೇಬಾರದಿತ್ತು. ನಾನು ಹೋಗಿ ಕೇಳಿದ್ದೆ ತಪ್ಪಾಯ್ತು..”

“ಏನು ಕೇಳಿದೆ?” ನಾನು ಪ್ರಶ್ನಿಸಿದೆ.

“ನನಗೊಂದು ಹುಡುಗಿ ಬೇಕು ಸಿದ್ದಪ್ಪಣ್ಣ ಎಂದೆ. ಮದ್ವೆ ಆಗಾಕ ಎಂದು ಕೇಳದ. ಇಲ್ಲ ಸಿದ್ದಪ್ಪಣ್ಣ ನಂಗೆ ಅಕಿ ಜೊತೆ ಮಕ್ಕೋಬೇಕು ಅಂತ ಹೇಳಿದಾಗ ಬೈದ. ಆಮೇಲೆ ಎರಡು ಮೂರು ಬಾರಿ ಕೇಳಿದಾಗ ಒಪ್ಪಕೊಂಡ. ಒಬ್ಬಳು ಧಾರಾವಾಹಿ ಹೀರೋಯಿನ್. ಹೀರೋಯಿನ್ ಅಂದ್ರ ಹೀರೋಯಿನ್ ಅಲ್ಲ. ಅಕಿ ತಂಗಿ.”

“ಫೋಟೋ ಇದ್ರೆ ತೋರಸು..” ನಾನು ಮತ್ತೆ ನರಸಿಂಹ ಏಕ ಕಾಲಕ್ಕೆ ಕೇಳಿದೆವು.

“ಡಿಲೀಟ್ ಮಾಡಬಿಟ್ಟೆ..” ಮುಂದುವರೆಸಿದ, “ಅವ್ನು ನಂಗೆ ಮೊದಲು ಫೋಟೋ ತೋರಸಿದ. ಅವಳದು ಆಕ್ಟಿಂಗ್ ವಿಡಿಯೋ ತೋರಸಿದ. ಫೇಸ್ಬುಕ್ ಪ್ರೊಫೈಲ್ ತೋರಸಿದ.”

ಅವನೊಂದು ಉಸಿರು ಎಳೆದುಕೊಳ್ಳುವ ಬ್ರೇಕಿನಲ್ಲಿ ನಾನು ನರಸಿಂಹ ಮತ್ತೆ ಏಕಕಾಲದಲ್ಲಿ ಕೇಳಿದೆವು, “ಎಷ್ಟು ಕೊಟ್ಟೆ?”.
ಈಗ ಈ ಕಥೆಯಲ್ಲಿ ನೀವು ಎಷ್ಟೆಲ್ಲಾ ಡೀಟೇಲ್ಸುಗಳನ್ನು ನಿರ್ಲಕ್ಷಿಸಿದಂತೆ, ನಮಗೆ ಕೂಡ ಆ ಹುಡುಗಿಯ ಡೀಟೇಲ್ಸುಗಳಿಗಿಂತ ಮುಖ್ಯವಾದ ಪ್ರಶ್ನೆ ಇದೆ ಆಗಿತ್ತು.

“ಎರಡು ಘಂಟೆಗೆ ಹನ್ನೆರಡು ಸಾವ್ರ ಪೇಮೆಂಟು. ಎರಡು ಸಾವಿರ ಕಾರಿನ ಬಾಡಿಗೆ. ಒಂದ್ ಸಾವ್ರ ಊಟ ಕಾಫಿಗೆ. ಎರಡು ಸಾವಿರ ಖುಷಿಗೆ. ಎರಡು ಘಂಟೆ ಮೇಲೂ ಇದ್ರೆ ಐದ್ ಸಾವ್ರ ಎಕ್ಸ್ಟ್ರಾ.”

ಇವನು ಪಕ್ಕಾ ಲೆಕ್ಕ ಬರೆವ ವಿಠ್ಠಲ.

“ಅಷ್ಟೆಲ್ಲ ಆಯ್ತೆನೋ? ಒಟ್ಟು ಹದಿನೇಳು ಸಾವ್ರ.” ನರಸಿಂಹನಿಗೆ ಅಚ್ಚರಿ.

“ಇಲ್ಲಪ್ಪ ಮೂವತ್ತೆರಡು ಸಾವಿರ ಐದು ನೂರಾಯ್ತು?”

“ಯಾಕೆ?” ನನಮಗೆ ಕುತೂಹಲ.

“ಹತ್ಸಾವ್ರದ್ದು ಫೋನ್ ಸೆಟ್ ಕೊಡಿಸಿದ್ದೆ, ಒಂದೂವರೆ ಸಾವ್ರದ್ದು ಡ್ರೆಸ್ಸು ಅವಳಿಗೆ. ನಂಗೆ ಎರಡು ಸಾವ್ರದ್ದು ಬಟ್ಟೆ, ಐನೂರು ಪರ್ಫ್ಯೂಮ್. ನಾನೇ ಕೊಡಿಸಿದ್ದು. ನಾನೇ ಪೇಟೆಗೆ ಹೋಗಿ ತಂದಿದ್ದೆ….”

ನಂಗೆ ಗೊಂದಲವಾಗಿ ಕೇಳಿದೆ. “ಅವ್ಳಿಗೆ ಯಾಕೆ ಗಿಫ್ಟ್ ಕೊಟ್ಟೆ? ನೀನು ಎಂತದೇ ಬಟ್ಟೆ ಹಾಕ್ಕೊಂಡ್ರು ಸುಖ ಸಿಗೋದು ಬಟ್ಟೆ ತೆಗೆದ ಮೇಲೆ ಅಲ್ವಾ. ಮತ್ತೆ ಹೊಸ ಬಟ್ಟೆ ಯಾಕೆ ತಗೊಂಡೆ ?”

“ಅವ್ಳಿಗೆ ನಾನು ಫೇಸ್ಬುಕ್ಕಲ್ಲಿ ಮೆಸೇಜು ಮಾಡಿದ್ದೆ. ಅಕಿ ರಿಪ್ಲೈ ಮಾಡಿರಲಿಲ್ಲ. ಅವಳ ಫೇಸ್ಬುಕ್ ನೋಡಿ ನಂಗೆ ಅಕಿ ಇಷ್ಟ ಆಗೋದ್ಳು. ಆಕಿ ಬುಕ್ಕಾಗೋಳೇ ಇರ್ಬೋದು, ಆದರೆ ನಂಗೆ ಅಕಿ ನಾನು ಮುಟ್ಟಿದ ಮೊದಲ್ನೇ ಹೆಣ್ಣು. ನನ್ನ ಹುಡುಗಿ ಬಗ್ಗೆ ನಾನ್ ತುಂಬಾ ಕನಸು ಕಂಡೋನು. ಅದಕ್ಕೆ ನಾನು ಇಷ್ಟೆಲ್ಲಾ ರೆಡಿ ಆಗಿದ್ದೆ. ”

ಬಹುಪಾಲು ಗಂಡು ಜೀವಗಳ ಪ್ರೀತಿಯೇ ಹೀಗೆ. ಅಲ್ಲಿ ಕಲ್ಮಶವಿರುವದಿಲ್ಲ. ಅದು ಪರಿಶುದ್ಧ. ವಿಠ್ಠಲನಿಗೆ ಇಲ್ಲಿ ಪ್ರೀತಿಯಾಗಿದ್ದು ಅವಳ ಮೇಲಲ್ಲ, ಅವನ ಕನಸುಗಳ ಮೇಲೆ. ಆಕೆ ಕನಸಿಗೆ ಜೊತೆಯಾದವಳಷ್ಟೆ. ಆಕೆ ಏನಾದರೇನು, ಎಂಥವಳಾದರೇನು? ವಿಠ್ಠಲನ ಪ್ರೀತಿ ಮತ್ತು ಮನಸ್ಸು ಸ್ಪಟಿಕದಷ್ಟು ಸ್ಪಷ್ಟ.

“ತೋಟದ ಮನೆಗೆ ಬರೋಕೆ ಹೇಳಿದ್ದೆ. ಕರ್ಕೊಂಡು ಬಂದ. ಚೆನ್ನಾಗೆ ಇದ್ಲು. ಸ್ನಾನ ಮಾಡ್ಕೊಂಡ್ ಬಾ ಅಂದೆ. ಮಾಡ್ಕೊಂಡ್ ಬಂದ್ಲು. ನಾನು ಅವಳಿಗೆ ಮೆಸೇಜು ಮಾಡಿದ್ದ ವಿಷಯ ಹೇಳಿದೆ. ಅವಳು ರಿಪ್ಲೈ ಏನೂ ಮಾಡಿರ್ಲಿಲ್ಲ. ನಾನು ಅವಳಿಗೆ ಗಿಫ್ಟ್ ಎಲ್ಲ ಕೊಟ್ಟೆ. ಅವ್ಳು ಹೊಸ ಡ್ರೆಸ್ ಹಾಕೊಂಡ್ ಬಂದ್ಲು. ನೀವ್ ತುಂಬಾ ಚೆನ್ನಾಗಿ ಕಾಣ್ತಿದೀರಾ ಎಂದೇ. ಡ್ರೆಸ್ ಇಷ್ಟ ಆಯ್ತಾ ಕೇಳದೆ. ಹೌದು ಅಂದ್ಲು. ಮೊಬೈಲ್ ಫೋನ್ ಗಿಫ್ಟ್ ಕೊಟ್ಟೆ. ಖುಷಿ ಆಗಿ ಅದಕ್ಕೊಂದ್ ಮುತ್ತು ಕೊಟ್ಲು. ಬ್ಯಾಗಿಗೆ ಹಾಕೊಂಡ್ಲು..”

ನರಸಿಂಹನ ಕಣ್ಣುಗಳು ಅಕಾರಣವಾಗಿ ಮಿನುಗ ಹತ್ತಿದವು.

“ಅವಳಿಗೆ ನೀರು ಕೊಟ್ಟೆ.. ಅವಳ ಹತ್ರ ಕೂತ್ಕೋಳಿ ಅಂದೇ. ಅವ್ಳು ಪರ್ಫ್ಯುಮ್ ಹಾಕೊಂಡ್ಲು. ನಾನು ಹೇಳ್ದೆ ನೀವ್ ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ ಅಂತ. ಸುಮ್ನೆ ಹೇಳ್ದೆ. ನಾನೇನ್ ನೋಡಿಲ್ಲ. ಅವಳು ನಗ್ತಾ ಇದ್ಲು.”

“ನಾನು ಮುಂದೆ ಹೆಜ್ಜೆ ಇತ್ತು ಹೋದೆ. ಅವಳ ಆ ಕೆಂಪು ಡ್ರೆಸ್ಸಲ್ಲಿ ತಬ್ಬಕೋಬೇಕು ಅಂತ ಅವಳ ಫೇಸ್ಬುಕ್ ನೋಡಿದಾಗಿಂದ ಕನಸು ಕಾಣತಾ ಇದ್ದೆ. ನಂಗೆ ತಡ್ಕೊಳೋಕೆ ಆಗ್ತಾ ಇರಲಿಲ್ಲ. ಹತ್ರ ಹೋದರೆ ಅವಳ ಸೆಂಟು ಬೇರೆ ಘಮ್ ಅಂತ ಇತ್ತು. ಮೆದು ಮೆದು ಬಟ್ಟೆ ಡ್ರೆಸ್ ಅವಳದ್ದು. ಅವಳನ್ನ ಗಟ್ಟಿಯಾಗಿ ತಬ್ಕೊಂಡೆ..”

ನರಸಿಂಹನ ಕಣ್ಣಿನ ಮಿನುಗು ಯಾಕೋ ಕೆಂಪಾಗುತ್ತಿರುವಂತೆ ಕಂಡಿತು. ಕಥೆಯ ಇಂಟೆರೆಸ್ಟಿಂಗ್ ಭಾಗಕ್ಕಾಗಿ ನರಸಿಂಹ ಕಾಯುತ್ತಿದ್ದ. ಇವನು ಪರಿವಿಡಿಯಲ್ಲೇ ಸಮಯ ದೂಡುತ್ತಿದ್ದ. “ಮುಂದೆ ಏನಾಯ್ತು ಹೇಳೋ..” ನರಸಿಂಹ ಸ್ವಲ್ಪ ಜೋರಾಗಿಯೇ ಕೇಳಿದ.

“ಗಟ್ಟಿ ಆಗಿ ತಬ್ಕೊಂಡೆ. ಅವಳ ಡ್ರೆಸ್ ಫೀಲ್ ಆಗ್ತಿತ್ತು. ಅವಳು ಕೈನ ನನ್ನ ಬೆನ್ನ ಮೇಲೆ ಒತ್ತಿದ್ಲು.”

“ಆಮೇಲೆ?” ನರಸಿಂಹ ಉದ್ವಿಗ್ನಗೊಂಡ. ಇವನು ಮ್ಯಾಟ್ರಿಗೆ ಬರ್ತಿದ್ದಾನೆ ಅಂತ ಖುಷಿಯಾದ. ‘ಅನುಭವ’ಗಳನ್ನು ಆಸಕ್ತಿದಾಯಕವಾಗಿ ಹೇಳುವುದು ಮತ್ತು ಕೇಳುವುದು ಗಂಡಸರ ಲೋಕದ ಡಾರ್ಕ್ ಸೀಕ್ರೆಟ್.

“ಆಮೇಲೆ ಏನು ಆಗಲೇ ಇಲ್ಲ. ಅಷ್ಟೇ. ಮುಗದೋಯ್ತು. ನಾನು ಟಾಯ್ಲೆಟ್‌ಗೆ ಹೋದೆ…”
ನರಸಿಂಹನ ಎದೆಯೊಡೆದ ಸೌಂಡು ಆ ನಿಶ್ಯಬ್ದ ರಾತ್ರಿಯಲ್ಲಿ ನಮಗಿಬ್ಬರಿಗೂ ಕೇಳಿತು. ನನಗೆ ನಗು ಬಂತು.

“ಸ್ವಿಚ್ ಹಾಕ್ತಾ ಇದ್ದಂತೆ ಬಲ್ಬ್ ಹೋಗಿ ಬಿಡ್ತೇನೋ?” ನರಸಿಂಹ ಉಗ್ರನಾಗಲಿಲ್ಲ.

“ಗಿಫ್ಟ್ ವಾಪಸ್ ತಗೊಂಡ್ಯಾ?” ನಾನು ವಿಠ್ಠಲನಿಗೆ ಕೇಳಿದೆ.

“ಅವಳು ಬ್ಯಾಗಿಗೆ ಹಾಕೊಂಡಿರೋದನ್ನ ಹೆಂಗೆ ವಾಪಸ್ ಕೇಳೋದು. ನಾನ್ ಅರ್ಧ ಘಂಟೆ ವೇಟ್ ಮಾಡ್ಕೊಂಡ್ ಬಂದೆ. ಅವ್ಳು ಬಿದ್ಕೊಂಡ್ ರೀಲ್ಸ್ ನೋಡ್ತಾ ಇದ್ಳು. ಲಾಸ್ಟ್‌ಲಿ ಒಂದ್ ಮುತ್ತು ಕೊಟ್ಟು ಹೋದ್ಲು.”

“ನಿನ ಕೈಲಿ ಆಗಿಲ್ಲ ಅಂದ್ರೆ ಸಿದ್ದಪ್ಪಣ್ಣನ ಲೆಕ್ಕ ಕೇಳೋದ್ ಯಾಕೆ?” ನರಸಿಂಹ ಸಿದ್ದಪ್ಪಣ್ಣನ ಪಾರ್ಟಿ ಸೇರಿದ.

“ಇಷ್ಟೇ ಅಲ್ಲ..” ಒಹ್ ಅಸಲಿ ಕಥೆ ಈಗ ಶುರು.

“ನಾನು ಅವಳು ತೋಟದ ದಾರೀಲಿ ಕಾರ್ ಹತ್ರ ಬರ್ತಾ ಇದ್ವಿ. ಸಿದ್ದಪ್ಪಣ್ಣ ಅಲ್ಲೇ ಇದ್ದ. ಅಷ್ಟೊತ್ತಿಗೆ ಅಪ್ಪಾ ಬಂದ್ರು. ನಾನು ಅಲ್ಲೇ ಇದ್ದ ಸಣ್ಣ ಪಂಪ್ಸೆಟ್ ಮನೆಯೊಳಗೇ ಅವಿತುಕೊಂಡೆ. ಅಪ್ಪ ಬಂದವರೇ, ‘ಏನೋ ಕೇಳದೆ ಕರ್ಕೊಂಡ್ ಬಂದ್ಯಲ್ಲೋ ಸಿದ್ದಪ್ಪಣ್ಣ’ ಎಂದು ಭಯಂಕರ ಖುಷಿಯಲ್ಲಿ ಕೇಳಿದರು. ಕಂಗಾಲಾಗಿದ್ದ ಸಿದ್ದಪ್ಪಣ್ಣ ‘ಒಡೆಯ ಇವಳು ಮಧುವಂತಿ..’ ಎಂದು ಏನೋ ಹೇಳಲೋದ. ‘ಹೆಸರು ಮಖ ನೋಡಿ ಬಾವಿ ತಗಿತಾರೇನೋ ಸಿದ್ದಪ್ಪಣ್ಣ. ಒರತೆ ನೋಡಿ ಬಾವಿ ತೆಗಿತಾರೆ. ಹೆಸರಿಗೆ ಮಕಕ್ಕೆ ಕೊಡ್ತಾರಾ ಕಾಸನ?’ ಎಂದು ಕೇಳಿದರು. ತೊದಲುತ್ತಿದ್ದ ಸಿದ್ದಪ್ಪಣ್ಣನಿಗೆ ಅಪ್ಪಾರು ‘ಕರ್ಕೊಂಡ್ ಬಾ ತೋಟದ ಮನೆತಾವ.. ಅಲ್ಲೋಗಿ ನೀರು ತಿರುಗಿಸಿ ಬರ್ತೀನಿ..’ ಎಂದು ಆಜ್ಞೆ ಮಾಡಿ ಹೊರಟು ಹೋದರು. ತೋಟದಿಂದ ಹೊರಗೆ ಅವಳು ನನ್ನ ಜೊತೆ ಬರಲೇ ಇಲ್ಲ. ತೋಟದ ಮನೆ ಕಡೆ. ವಾಪಸು ಹೋದಳು.

ನರಸಿಂಹನ ಕಣ್ಣುಗಳಲ್ಲಿ ನಿರ್ಭಾವುಕತೆಯಿತ್ತು. “ನಮ್ಮ ಊರಿನ ಇತಿಹಾಸದಲ್ಲಿ, ಹುಡುಗೀನ ಬುಕ್ ಮಾಡಿ ಅವಳಿಗೆ ಟಿಎ ಡಿಎ ಕೊಟ್ಟು, ಗಿಫ್ಟ್ ಕೊಟ್ಟು, ಮನೆ ತುಂಬಿಸಿಕೊಂಡು, ತಬ್ಬಿ ಹಂಗೆ ಬೀಳ್ಕೊಟ್ಟ ಮೊತ್ತ ಮೊದಲ ಗಂಡಸು ಅಂತ ಹಿಸ್ಟ್ರಿ ಆಗೋಗ್ತೀಯ ನೀನು ವಿಠ್ಠಲ.” ಅವನ ಧ್ವನಿ ಕೂಡ ನಿರ್ಭಾವುಕವಾಗಿತ್ತು.

ಅವನು ನಿಲ್ಲಿಸಲಿಲ್ಲ.

“ಇಷ್ಟೇ ಅಲ್ಲ ವಿಟ್ಟು, ಅಪ್ಪನ ಬಳಿ ಹುಡುಗಿಗೆ ಎಷ್ಟು ದುಡ್ಡು ಕೊಟ್ಟೆ, ನಾನು ಅಲ್ರೇಡಿ ಪೇಮೆಂಟು ಮತ್ತೆ ಗಿಫ್ಟ್ ಕೊಟ್ಟಿದ್ದೆ. ನಿಮ್ ಎಜೇಂಟ್ ನಿಮಗೆ ಮೋಸ ಮಾಡ್ತಿದಾನೆ ಎಂದು ಲೆಕ್ಕ ಕೇಳಲಿರುವ ಮಗ ನೀನೆ ಮೊದಲನೆಯವನು. ಹೋಗಿ ಕೇಳು..” ಎಂದು ಹುರಿದುಂಬಿಸಿದ ನರಸಿಂಹ.

ಎಣ್ಣೆ ತುಂಬಾ ಮೊದಲೇ ಖಾಲಿಯಾಗಿತ್ತು. ಕಥೆ ಕೂಡ ಖಾಲಿಯಾಯಿತು. ನಾವೆಲ್ಲಾ ಮನೆಯ ಕಡೆ ನಡೆದೆವು.

ಕೆಲ ದಿನಗಳಾಯ್ತು. ಈಗ ವಿಠ್ಠಲ ಛತ್ರದ ಸುಪ್ರೀಂ ಬಾಸ್. ಫಾರ್ಚುನರ್ ಕಾರು ಬಂದಿದೆ. ಸಿದ್ದಪ್ಪಣ್ಣನ ಅಂಬಾಸಿಡರ್ ಊರ ಕಡೆ ಬರುವುದು ತೀರಾ ವಿರಳವಾಗಿದೆ.