ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರೂ ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಕಾರಣ ಶಬ್ದಗಳ ಕೊರತೆ. ಮನಸ್ಸಿನಲ್ಲಿ ಭಾವನೆಗಳಿರುತ್ತವೆ….! ಇನ್ನೇನೋ ವಿಶೇಷವಾಗಿರುವುದನ್ನು ಹೇಳಬೇಕು…! ನಾನೂ ಮಾತನಾಡಬೇಕು….! ಎಂದಾಗ ಆ ಭಾವನೆಗಳಿಗೆ ಆತ ಶಬ್ದರೂಪವನ್ನು ಕೊಡಲು ಸಾಧ್ಯವಾಗುವುದಿಲ್ಲ. ಆ ಮಗುವಿನ ಅನಿಸಿಕೆಯನ್ನು ಬಾಯಲ್ಲೆ ತಡೆಹಿಡಿಯುವುದು ಶಬ್ದಗಳ ಕೊರತೆ, ಶಬ್ದ ಶೂನ್ಯತೆ, ಶಬ್ದಭಂಡಾರದ ಕೊರತೆ.
ಪದ ಪ್ರಯೋಗಗಳ ಕುರಿತು ಸುಮಾವೀಣಾ ಬರೆಯುವ ಹೊಸ ಸರಣಿ “ಮಾತು-ಕ್ಯಾತೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ಮಾತು-ಕ್ಯಾತೆಗೂ ಮೊದಲು:

“ಮಾತು-ಕಥೆ” ಅಲ್ಲ ಈ ಅಂಕಣದ ಶೀರ್ಷಿಕೆಯೇ “ಮಾತು-ಕ್ಯಾತೆ” ಎಂಬುದಾಗಿ. ಮಾತಿನ ನಡುವೆ ಕೆಲವು ಪದಗಳು ಕುತೂಹಲ ಹುಟ್ಟಿಸುತ್ತವೆ ಪದಚರಿತ್ರೆಯನ್ನು ನೆನಪಿಸುತ್ತವೆ. ಆ ನೆನಪುಗಳು ಸಮಾನಾರ್ಥ, ನಾನಾರ್ಥ, ಹಾಸ್ಯ ವಿಡಂಬನೆಗಳ ಕೂಟವಾಗುತ್ತದೆ. ಹಾಗೆ ಹೇಳುವುದಾದರೆ ಶೀರ್ಷಿಕೆಯನ್ನೆ ತೆಗೆದುಕೊಳ್ಳೋಣ; ಹೆಸರೆ ಹೇಳುವಂತೆ ‘ಮಾತುಕತೆ’ ಸರಿ! ‘ಮಾತುಕತೆ’ ಎಂದರೆ ಒಬ್ಬರಿಗೊಬ್ಬರು ಸಂವಹನಕ್ಕಾಗಿ ವಿನಿಮಯ ಮಾಡಿಕೊಳ್ಳುವ ಮಾತುಗಳು ಎಂದಾಗುತ್ತದೆ. ಅದೆ ಮಾತಿನಲ್ಲಿ ಕ್ಯಾತೆ ಎಂದಾಗ ಸ್ವಲ್ಪ ಪದಗಳನ್ನು ತಿರುಚಿ ಅದರ ಅರ್ಥ – ಅಪಾರ್ಥಗಳನ್ನು ನೋಡುವ ಪರಿ. ಇಲ್ಲಿಯೇ ನೋಡಿ! ‘ಅಪಾರ್ಥ’ ಎಂದರೆ ‘ತಪ್ಪುಕಲ್ಪನೆ’ ಅಥವಾ ‘ತಪ್ಪಾಗಿ ಅರ್ಥ’ ಮಾಡಿಕೊಳ್ಳುವುದು ಎಂದರ್ಥ ಅದಕ್ಕೂ ಮೀರಿ ‘ಅಪಾರ ಅರ್ಥ’ಗಳಿವೆ ಎಂದೂ ತಿಳಿಯಬಹುದಲ್ಲವೆ? ಇಂಥ ಪದಗಳ ಜೊತೆಗಿನ ಆಟವೇ ಮಾತು-ಕ್ಯಾತೆ. ‘ಪದಮೋಹಿ’ ಎಂದೇ ಕರೆದುಕೊಳ್ಳುತ್ತಿದ್ದ ಕವಿ, ಭಾಷಾವಿಜ್ಞಾನಿ, ಅನುವಾದಕ, ವಿಮರ್ಶಕ ಕೆ.ವಿ.ತಿರುಮಲೇಶರು ಇಂಥದ್ದೊಂದು ಸಾಹಸಕ್ಕೆ ಸ್ಫೂರ್ತಿ . ಸೆಪ್ಟೆಂಬರ್ 12 ಅವರ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಅವರಿಗೆ ವಂದಿಸುತ್ತಾ ಅವರು ನಮ್ಮೊಂದಿಗೆ ಇದ್ದಾರೆ ಎಂದೇ ಭಾವಿಸುತ್ತಾ ಈ ಅಂಕಣ ಬರಹವನ್ನು ಪ್ರಾರಂಭಿಸುತ್ತಿದ್ದೇನೆ.

****

ಜನಾಂಗದ ಅಸ್ಮಿತೆ ಮಾತೃಭಾಷೆ

ಮಾತೃಭಾಷೆಯ ಅಂತಃಸತ್ವ ಎಂದಿಗೂ ಅವಿನಾಶಿಯಾಗಿರುವಂಥದ್ದು. ಮಾತೃಭಾಷೆ ಎಂದಿಗೂ ಸೊಗಸಿನ ಭಾಷೆ, ಅರಿವಿನ ಭಾಷೆ, ಉಸಿರಿನ ಭಾಷೆಯಾಗಿರುತ್ತದೆ. ಹಲವು ಭಾಷೆಗಳಲ್ಲಿ ವ್ಯಕ್ತಿಯೊಬ್ಬ ಸಂವಹನ ನಡೆಸುತ್ತಾನೆ ಎಂದರದು ಆತನ ಮನೋಸಾಮರ್ಥ್ಯವೆಂದೇ ಪರಿಭಾವಿಸಬೇಕು. ಅಂಥ ವ್ಯಕ್ತಿಯೂ ಕೂಡ ಪ್ರಥಮವಾಗಿ ಚಿಂತನೆ ನಡೆಸುವುದು ಆತನ ಮಾತೃಭಾಷೆಯಲ್ಲಿಯೇ.. ಆತನ ಚಿಂತನೆಗಳು ವಿಚಾರವಂತಿಕೆಯಿಂದ ಕೂಡಿದ್ದು ತನ್ನದೇ ಮೌಲ್ಯವನ್ನು ಹೊಂದಿರುತ್ತದೆ. ಆನಂತರ ಆತ ಸಾಧ್ಯಾಸಾಧ್ಯತೆಗಳನ್ನು ನೋಡಿಕೊಂಡು ಆ ಸಂದರ್ಭಕ್ಕೆ ಸಂವಹಿಸಬೇಕಾದ ಭಾಷೆಗೆ ತರ್ಜುಮೆಗೊಳಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.

ಎದುರಿಗಿರುವ ವ್ಯಕ್ತಿಯೂ ಅಷ್ಟೇ ಎದುರಿಗಿರುವವರು ತನ್ನ ಮಾತೃಭಾಷೆಯಲ್ಲಿ ಸಂವಹನ ನಡೆಸಿದರೆ ಮೈಯೆಲ್ಲಾ ಕಿವಿಯಾಗಿಸಿಕೊಂಡು ಕೇಳಿಸಿಕೊಳ್ಳುತ್ತಾರೆ. ಅನ್ಯ ಭಾಷೆಯದ್ದಾದರೆ ಅದನ್ನು ಮನಃಪೂರ್ತಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಹಾಗಾಗಿ ಮನಃಸ್ಫೂರ್ತಿ ಒದಗಿಸುವುದು ಮಾತೃಭಾಷೆಯೇ.. ಯಾವುದೇ ವ್ಯಕ್ತಿಗೆ ವಿಚಾರಗಳನ್ನು ವ್ಯಕ್ತಪಡಿಸಲು ಅನ್ಯಭಾಷೆ ತಿಳಿಯದಿದ್ದರೂ ತೊಂದರೆಯಿಲ್ಲ. ಶುದ್ಧ ಮಾತೃಭಾಷೆಯ ಪರಿಚಯವಿರಬೇಕು. ಹಾಗಿದ್ದಲ್ಲಿ ಊಟದ ನಡುವೆ ವ್ಯಂಜನಗಳು ಇರುವಂತೆ ಗಾದೆಗಳನ್ನು, ನುಡಿಗಟ್ಟುಗಳನ್ನು, ಅಲಂಕಾರಗಳನ್ನು, ದೃಷ್ಟಾಂತಗಳನ್ನು ಹದವರಿತು ತನ್ನ ಮಾತಿನ ನಡುವೆ ಬಳಸಿ. ಸುಖ-ದುಃಖ,ವಿ ಶ್ವಾಸ, ಧೃಢತೆ, ನಿರ್ಲಿಪ್ತತೆಯನ್ನು ವ್ಯಕ್ತಡಿಸುತ್ತಾನೆ. ಈ ಸಂತೃಪ್ತತೆ ಮಾತೃಭಾಷೆ ಬಿಟ್ಟು ಇನ್ಯಾವ ಭಾಷೆಯಲ್ಲಿಯೂ ಸಿಗಲಾರದು.

ಮಾತೃಭಾಷೆ ಇಷ್ಟು ಸುಖವನ್ನು ಕೊಡುತ್ತದೆ ಎಂದಾದಮೇಲೆ ಅದು ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು! ಹಾಗಾಗಿ ಇತ್ತೀಚಿನ ಸಂಶೋಧನೆಗಳು ಮಾತೃಭಾಷೆಯೇ ಕಲಿಕಾಮಾಧ್ಯಮವಾಗಬೇಕೆಂದು ಶೃತ ಪಡಿಸಿರುವುದು. ತಾಯ್ಮಾತಿನ ಮಾಧುರ್ಯ ಮಗುವಿನ ಕಿವಿದೆರೆಯನ್ನು ಧಾಟಿದರೆ ಸಾಕು ಮಗು ಆತ್ಮಸಂತೋಷಿಯಾಗಿ ಎಂಥ ಕ್ಲಿಷ್ಟ ವಿಚಾರವನ್ನೂ ಸುಭಗವಾಗಿ ಗ್ರಹಿಸುತ್ತದೆ. ಬೌದ್ಧಿಕ ಸಾಮರ್ಥ್ಯಕ್ಕೆ, ಚಿಂತನಾ ಅಭಿವ್ಯಕ್ತಿಗೆ ಮಾತೃಭಾಷೆ ಸಮರ್ಥ ಮಾಧ್ಯಮ. ಈ ಅಭಿಪ್ರಾಯಕ್ಕೆ ಸಂವಾದಿಯಾಗಿ ರಾಜೇಶ್ವರಿ ತೇಜಸ್ವಿಯವರ ‘ನನ್ನ ಡ್ರೈವಿಂಗ್ ಡೈರಿ’ಯ ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು’ ಎಂಬ ಅಧ್ಯಾಯದ ಮಾತುಗಳನ್ನು ನೆನಪಿಸಿಕೊಳ್ಳಬಹುದು. ಅದೇನೆಂದರೆ ತೇಜಸ್ವಿಯವರ ಮಗಳು ಈಶಾನ್ಯೆ ‘ಫಿಸಿಕ್ಸ್ ವಿಷಯದ ಕುರಿತು ಇಡೀ ತರಗತಿಯಲ್ಲಿ ತಾನೊಬ್ಬಳೆ ಉತ್ತಮವಾಗಿ ಗ್ರಹಿಸಿದೆ’ ಎನ್ನುವಾಗ ಆಕೆ ‘ಕನ್ನಡ ಮಾಧ್ಯಮದಲ್ಲಿ ಕಲಿತದ್ದರಿಂದ ಇಷ್ಟು ಸಾಧ್ಯವಾಯಿತು’ ಎನ್ನುತ್ತಾರೆ. ಅರ್ಥಾತ್ ಆಕೆಯ ಮಾತುಗಳು ಇಲ್ಲಿ ಮಾತೃಭಾಷಾ ಕಲಿಕೆಯ ಮಹತ್ವವನ್ನೇ ಹೇಳುತ್ತವೆ. ಈ ಸಂದರ್ಭವನ್ನು ರಾಜೇಶ್ವರಿಯವರು ‘ನಮ್ಮ ಕನ್ನಡದ ಹೆಮ್ಮೆಯ ಕ್ಷಣಗಳು ಆಗಬಹುದಲ್ಲ ಭಾಷೆ ಮುಖ್ಯವಲ್ಲ’ ಎಂದು ಗುಣಮಟ್ಟದ ಶಿಕ್ಷಣವನ್ನು ಪ್ರತಿಪಾದಿಸುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಮಾತೃಭಾಷೆಯೇ ಉತ್ತಮ ಎನ್ನುವುದು ಇಲ್ಲಿ ಒಪ್ಪಬೇಕಾದ ಸಂಗತಿ.

ಸರಿ! ಮಾತೃಭಾಷೆಯೇ ಗುಣಮಟ್ಟದ ಶಿಕ್ಷಣ ಮಾಧ್ಯಮ ಎಂದಮೇಲೆ ಅದೇ ಭಾಷೆಯಲ್ಲಿಯೇ ಬೋಧನೆ ಮಾಡಬೇಕು. ಅದು ಸಾಧ್ಯವಾಗುತ್ತಿದೆಯೇ ಎಂದರೆ ಪರಿಪೂರ್ಣವಾಗಿ ಇಲ್ಲ! ಎಂದೇ ಹೇಳಬಹುದು. ಭಾಷಾ ಕಲಿಕೆಯಲ್ಲಿ ಫಲಿತ ಪಡೆಯಬೇಕು ಎಂದರೆ ಶಿಕ್ಷಕರು ಸಂಪೂರ್ಣ ಬಾಯ್ಬಿಡಬೇಕು ಆದರಿದು ಇಂದಿಗೆ ಸಾಧ್ಯವಾಗುತ್ತಿಲ್ಲ. ಕಾರಣ ಭಾಷಾತರಗತಿಗಳಿಗೆ ಶಾಲೆಗಳಲ್ಲಿ ಅಷ್ಟು ಪ್ರಾಧಾನ್ಯತೆ ಇರುವುದಿಲ್ಲ, ಪಠ್ಯಕ್ರಮ ಹೆಚ್ಚಿರುತ್ತದೆ, ಕೆಲವೊಮ್ಮೆ ಮಕ್ಕಳ ಗ್ರಹಿಕೆಗೆ ಹೊರೆಯಾಗುವಷ್ಟು ಪಠ್ಯವನ್ನು ಅಳವಡಿಸಿರುತ್ತಾರೆ. ತರಗತಿಯಲ್ಲಿ ಬರೆಸುವ ನೋಟ್ಸ್, ಮನೆಯಲ್ಲಿ ಬರೆಯುವ ನೋಟ್ಸ್, ಕಾಪಿ ಪುಸ್ತಕ, ಘಟಕ ಪರೀಕ್ಷಾ ಪುಸ್ತಕ, ಅಭ್ಯಾಸ ಪುಸ್ತಕ ಇವುಗಳ ಭಾರವೂ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಭಾಷಾ ಬೋಧಕರು ಮಕ್ಕಳಿಗೆ ಬೋಧಿಸುವುದಕ್ಕಿಂತ ಹೆಚ್ಚಾಗಿ ಅವರನ್ನು ಮೇಲ್ವಿಚಾರಣೆ ಮಾಡುವುದೇ ಹೆಚ್ಚಾಗುತ್ತದೆ. ಇಲ್ಲಿ ನಷ್ಟವಾಗುವುದು ಮಕ್ಕಳಿಗೆ ಅಲ್ಲವೇ!

ನನ್ನ ಅಭಿಪ್ರಾಯದ ಪ್ರಕಾರ ಭಾಷಾ ಶಿಕ್ಷಕರು ಬಾಯ್ತೆರೆದು, ಉತ್ಕಂಠಿತವಾಗಿ ವಿದ್ಯಾರ್ಥಿಗಳಲ್ಲಿ ಸಂವಹಿಸಬೇಕು; ಹಾಗಾದಾಗಲೆ ಭಾಷೆ ಸೊಗಯಿಸುವುದು. ಇಲ್ಲವಾದರೆ ಭಾಷೆಯ ಸೂಕ್ಷ್ಮಗಳು ಅಂದರೆ ಹೃಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ, ಒತ್ತಕ್ಷರಗಳು, ಶಿಥಿಲ ದ್ವಿತ್ವಗಳು ತಿಳಿಯುವುದಿಲ್ಲ. ಹಾಗಾಗಿ ಭಾಷಾ ಬೋಧನೆ ಕೂಡ ಭಾವಾಭಿನಯ ಎನ್ನಬಹುದು. ಹಾಗೆ ಉತ್ಕಂಠಿತವಾಗಿ ಅಕ್ಷರಗಳನ್ನು ಉಚ್ಛರಿಸುವಾಗ ನಾವು ಹೇಗೆ ಕಾಣುತ್ತೇವೆಯೋ? ಇತರರು ಕೇಳಿಸಿಕೊಳ್ಳುತ್ತಾರೆಯೋ? ಎಂಬ ಹಿಂಜರಿಕೆಗಳಿಗೆ ಒಳಗಾಗಬಾರದಷ್ಟೇ! ಮಕ್ಕಳಿಗೆ ಭಾಷೆಯನ್ನು ಕಲಿಸುವುದು ಕೇವಲ ಶಿಕ್ಷಕರ ಕರ್ತವ್ಯವಲ್ಲ ಪೋಷಕರ ಜವಾಬ್ದಾರಿಯೂ ಹೌದು!

ಮಕ್ಕಳನ್ನು ಓದಿಸುವಾಗ ಪದಗಳ ಮೇಲೆ ಬೆರಳಿಡಿಸಿ, ನಿಧಾನವಾಗಿ, ಸ್ಪಷ್ಟವಾಗಿ ಅವರೋದಿದ ಪದಗಳು ಮತ್ತೆ ಅವರ ಕಿವಿಗಳಲ್ಲಿ ರಿಂಗಣಿಸುವಂತೆ ಓದಿಸಬೇಕು, ಬರೆಸುವಾಗ ಪದಗಳನ್ನು ನಿಧಾನವಾಗಿ ಬಿಡಿಸಿ ಉಚ್ಛರಿಸಬೇಕು. ಅಂದರೆ ಉಚ್ಛಾರಣೆ ತಿಳಿ ನೀರಿನಂತೆ ಸ್ಫುಟವಾಗಿದ್ದು, ಸ್ಫಟಿಕ ಸದೃಶವಾಗಿರಬೇಕು. ಹೀಗಾದಾಗ ಅಕ್ಷರಗಳ ಜಾಡನ್ನು ಮಕ್ಕಳು ಗುರುತಿಸಬಲ್ಲರು, ಪದಗಳ ನಾಡಿಯನ್ನು ನಮ್ಮ ಮಕ್ಕಳು ಹಿಡಿಯಬಲ್ಲರು. ಉದಾಹರಣೆಗೆ ಪರಿತ್ಯಕ್ತ ಪದ ಬರೆಸುವಾಗ ಪರಿ….+ತ್+ಯ್….+ಕ್+ತ…. ಎಂದು ಹೇಳಬಹುದು. ಅಂದರೆ ಮಕ್ಕಳ ಕೈ, ಕಣ್ಣು, ಕಿವಿಗಳನ್ನು ಏಕ ಕಾಲಕ್ಕೆ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ರೀತಿ ಮಾಡಿದರೆ ಖಂಡಿತಾ ಮಕ್ಕಳು ಸ್ಪಷ್ಟವಾಗಿ ಭಾಷೆಯನ್ನು ಅನುಸಂಧಾನಿಸಿದ ಹಾಗಾಗುತ್ತದೆ. ಇದು ನನ್ನ ಸ್ವಂತ ಅನುಭವ. ಹಾಗಾಗಿ ಭಾಷಾಪರ ಹೋರಾಟಗಳು ಧರಣಿಗಳಲ್ಲಿ, ಮೆರವಣಿಗೆಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಶಾಲೆಗಳಲ್ಲಿ, ಮನೆಗಳಲ್ಲಿ ಭಾಷೆಯನ್ನು ಕಲಿಸುವುದರಲ್ಲಿದೆ. ನಮ್ಮ ಮುಂದಿನ ಜನಾಂಗವನ್ನು ಅನ್ಯಭಾಷೆಯ ಸಂಸರ್ಗವನ್ನೊಳಗೊಂಡಂತೆ ಮಾತೃಭಾಷೆಯ ಜ್ಞಾನದ ಮೂಲಕ ಹುರಿಗೊಳಿಸಬೇಕಿದೆ. ಪ್ರೊಫೆಸರ್ ನೀಷೆ ಭಾಷೆಯೊಂದರ ಗರ್ಭದಲ್ಲಿ ರಾಜ್ಯದ ಕನಸು ಇದ್ದೇ ಇರುತ್ತದೆಂದು ಹೇಳುತ್ತಾರೆ ಅಂದರೆ ಭಾಷೆಗೆ ಒಂದು ಜನಾಂಗದ ಅಸ್ಮಿತೆಯನ್ನು ಕಾಯುವ ಕಸುವಿದೆ ಅನ್ನಿಸುತ್ತದೆಯಲ್ಲವೆ?

ಪ್ರಾಚೀನ ಗ್ರೀಕ್ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಸಂದರ್ಭದಲ್ಲಿ ಉಮೇದುವಾರರು ತಮ್ಮ ವಾಕ್ಚಾತುರ್ಯದಿಂದಲೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದರಂತೆ. ಅನ್ಯಭಾಷೆಯಲ್ಲಿ ಸಂವಹನ ನಡೆಸಿ ಅಲ್ಲ ತಮ್ಮ ಮಾತೃಭಾಷೆಯ ಮೂಲಕ ಸಂವಹನ ನಡೆಸಿ ಇದಿಷ್ಟೇ ಸಾಕು ಮಾತೃಭಾಷೆಯ ಮಹತಿಯನ್ನು ಕಂಡುಕೊಳ್ಳಲು. ಹಾಗಿದ್ದರೆ ಮೊದಲ ಉಪಕ್ರಮ ಏನು ಎಂಬ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬರಲ್ಲೂ ಶಬ್ದಸಂಪತ್ತು ಹೆಚ್ಚಬೇಕು ಎಂಬುದು.

ಶ್ಯಾಮಲರ ಮಗ ಲಿಖಿತ್ ಉದ್ಯೋಗ ನಿಮಿತ್ತ ಪರ ಊರಿಗೆ ಹೋಗಿದ್ದ. ಅಲ್ಲಿ ಸ್ವತಃ ತಾನೇ ಅಡುಗೆ ತಯಾರು ಮಾಡಿಕೊಳ್ಳುತ್ತಿದ್ದ. ಅವನ ಅಮ್ಮ ಫೋನ್ ಮಾಡಿ ಏನು ಸಾಂಬಾರ್? ಎಂದರೆ ಕಾಯಿ ಸಾಂಬಾರು ಎಂದ. ಕಾಯಿ ಹೇಸರೇನು ಎಂದರೆ “ಗೊತ್ತಿಲ್ಲ ಅದೇ ಚಿಕ್ಕದಾಗಿರುತ್ತಲ್ಲ, ವೈಟ್ ಗೆರೆ ಗೆರೆ ಇರುತ್ತಲ್ಲ ಅದೇ ಚಿಕ್ಕದು ಅದೆ ಗ್ರೀನ್ ಕಾಯಿ” ಎಂದರೆ ಅವರಮ್ಮನಿಗೆ ಹೊಳೆಯಲೇ ಇಲ್ಲ “ನನಗೇನೂ ಅರ್ಥವಾಗುತ್ತಿಲ್ಲ ಸಾಂಬಾರಿನ ಫೊಟೊ ಕಳಿಸು ಇಲ್ಲ ವಿಡಿಯೋ ಕಾಲ್ ಮಾಡು” ಎಂದರೆ ನೋಡಿದರೆ ಅದು ತೊಂಡೆಕಾಯಾಗಿತ್ತು. “ಇಷ್ಟು ಗೊತ್ತಾಗಲ್ವ ದಡಿಯ… ಅದು ತೊಂಡೆಕಾಯಿ ಕಣೋ…. ಇನ್ನಾದರೂ ಕಲಿಯೋ…” ಎಂದು ಜೋರಾಗಿ ಶ್ಯಾಮಲಾ ನಕ್ಕರು. ಗೊತ್ತಾದಮೇಲೆ ಎಲ್ಲವೂ ಸರಳ ಶಬ್ದಗಳ ಕೊರತೆಗೆ ಇದೊಂದು ಉದಾಹರಣೆ ಅಷ್ಟೆ. ಶಬ್ದಗಳು ನಮ್ಮ ಕೈಚೀಲದಲ್ಲಿರುವ ನಾಣ್ಯಗಳಿದ್ದಂತೆ. ಮಾತಿನ ವ್ಯಾಪಾರಕ್ಕೆ ಈ ನಾಣ್ಯಗಳು ಬೇಕು. ಜ್ಞಾನ ಎನ್ನುವ ನೋಟುಗಳು ದೈನಂದಿನ ಸಾಮಾನ್ಯ ವ್ಯವಹಾರಕ್ಕೆ ಎಲ್ಲಾ ಸಮಯದಲ್ಲಿಯೂ ಬಾರದಿರಬಹುದು ಆದರೆ ನಾಣ್ಯಗಳು ಬಹುಬೇಗ ಅಂಥ ವ್ಯವಹಾರ ಮಾಡಿಸುತ್ತವೆ. ತರಕಾರಿ ಕೊಡಿ, ಬೇಳೆ ಕೊಡಿ ಅಂದರೆ ಆಗುವುದಿಲ್ಲ ಇಂಥದ್ದೇ ಬೇಳೆ ಇಂಥದ್ದೇ ತರಕಾರಿ ಎಂದು ನಮೂದು ಮಾಡಬೇಕಾಗುತ್ತದೆ.

ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರೂ ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಕಾರಣ ಶಬ್ದಗಳ ಕೊರತೆ. ಮನಸ್ಸಿನಲ್ಲಿ ಭಾವನೆಗಳಿರುತ್ತವೆ….! ಇನ್ನೇನೋ ವಿಶೇಷವಾಗಿರುವುದನ್ನು ಹೇಳಬೇಕು…! ನಾನೂ ಮಾತನಾಡಬೇಕು….! ಎಂದಾಗ ಆ ಭಾವನೆಗಳಿಗೆ ಆತ ಶಬ್ದರೂಪವನ್ನು ಕೊಡಲು ಸಾಧ್ಯವಾಗುವುದಿಲ್ಲ. ಆ ಮಗುವಿನ ಅನಿಸಿಕೆಯನ್ನು ಬಾಯಲ್ಲೆ ತಡೆಹಿಡಿಯುವುದು ಶಬ್ದಗಳ ಕೊರತೆ, ಶಬ್ದ ಶೂನ್ಯತೆ, ಶಬ್ದಭಂಡಾರದ ಕೊರತೆ. ಸೂಕ್ತ ಸಂದರ್ಭಗಳಲ್ಲಿ ಸೂಕ್ತ ಶಬ್ದಗಳು ತೋಚದಾದಾಗ “ಏನೋ ಅಂದ ಹಾಗೆ”, “ಏನೋ ಗಾದೆ ಹೇಳುತ್ತಾರಲ್ಲ ಹಾಗೆ”, “ಅದೂ”, “ಇದೂ” ಎನ್ನುವ ಹಾಗಾಗುತ್ತದೆ. ಅರ್ಥಾತ್ ಶಬ್ದಹೀನ, ಸಂವಾದ ಹೀನನಾಗುತ್ತಾನೆ. ಇದನ್ನೆ ಶಬ್ದಹೀನತೆ, ಶಬ್ದ ದಾರಿದ್ರ್ಯ ಎನ್ನುವುದು. ಶಬ್ದಗಳ ಅರಿವು-ಹರಿವು ಇದ್ದಾಗ ಮಾತಿನಲ್ಲಿ ಅನಗತ್ಯ ತಡೆಗಳು, ನಿಲುಗಡೆಗಳು ಬರುವುದಿಲ್ಲ. ಕೆಮ್ಮುವುದು, ತಲೆಗೆ ಕೈಹೋಗುವುದು, ಫೋನಿನಲ್ಲಿ ಏನೋ ಸಂದೇಶ ಓದುತ್ತಿರುವಂತೆ ಗೂಗಲ್ ಸರ್ಚ್ ಕೊಡುವುದು ಕಡಿಮೆಯಾಗುತ್ತದೆ. ಮಾತಿನಲ್ಲಿ ನಿರರ್ಗಳತೆ ಬೇಕು ಎಂದಾದಲ್ಲಿ ತಲೆಯಲ್ಲಿ ಶಬ್ದಭಂಡಾರವೇ ಇರಬೇಕು. ಆಗ ತಂತಾನೆ ಮಾತು ಓಘ ಪಡೆದುಕೊಳ್ಳುತ್ತದೆ, ನಿರಂತರತೆ ಇರುತ್ತದೆ ಇದನ್ನೆ ಸಂವಹನ ಕೌಶಲ್ಯ ಎನ್ನುವುದು. ಶಬ್ದಭಂಢಾರ ವೃದ್ಧಿಸಿದರೆ ಆತ್ಮಬಲವೂ ವೃದ್ಧಿಸುತ್ತದೆ.

ಮಕ್ಕಳನ್ನು ಓದಿಸುವಾಗ ಪದಗಳ ಮೇಲೆ ಬೆರಳಿಡಿಸಿ, ನಿಧಾನವಾಗಿ, ಸ್ಪಷ್ಟವಾಗಿ ಅವರೋದಿದ ಪದಗಳು ಮತ್ತೆ ಅವರ ಕಿವಿಗಳಲ್ಲಿ ರಿಂಗಣಿಸುವಂತೆ ಓದಿಸಬೇಕು, ಬರೆಸುವಾಗ ಪದಗಳನ್ನು ನಿಧಾನವಾಗಿ ಬಿಡಿಸಿ ಉಚ್ಛರಿಸಬೇಕು. ಅಂದರೆ ಉಚ್ಛಾರಣೆ ತಿಳಿ ನೀರಿನಂತೆ ಸ್ಫುಟವಾಗಿದ್ದು, ಸ್ಫಟಿಕ ಸದೃಶವಾಗಿರಬೇಕು. ಹೀಗಾದಾಗ ಅಕ್ಷರಗಳ ಜಾಡನ್ನು ಮಕ್ಕಳು ಗುರುತಿಸಬಲ್ಲರು, ಪದಗಳ ನಾಡಿಯನ್ನು ನಮ್ಮ ಮಕ್ಕಳು ಹಿಡಿಯಬಲ್ಲರು.

‘ಶಬ್ದಕೋಶ’ ಪದವನ್ನೇ ತೆಗೆದುಕೊಂಡರೆ ಇದನ್ನು ನಿಘಂಟು, ಪದನೆರಕೆ, ಶಬ್ದಭಂಡಾರ ಮುಂತಾದ ಪದಗಳಿಂದಲೇ ಕರೆಯಬಹುದು. ಶಬ್ದಗಳು ತಿಳಿದಿದ್ದರೆ ಉತ್ತಮ ಮಾತುಗಾರನಾಗಬಹುದು. ವಾಕ್ಚತುರ ಎನ್ನುತ್ತಾರಲ್ಲ ಹಾಗೆ. ಇದಕ್ಕೆ ಮುಂದಿನ ಹಂತ ಉತ್ತಮ ಮಾತುಗಾರ, ಉತ್ತಮ ನಾಯಕನೂ ಆಗಬಹುದು. ಶಬ್ದಗಳೆ ಮಾತಿಗೆ ಮುನ್ನುಡಿ. ‘ಶಬ್ದ’ಗಳು ಎಂಬ ‘ನಾಣ್ಯ’ಗಳಿದ್ದರೆ ನಾಣ್ಣುಡಿಗಳು, ಗಾದೆಗಳು, ಪ್ರಾಜ್ಞರ ಹೇಳಿಕೆಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು. ಇತರರೊಡನೆ ಮಾತನಾಡುವಾಗ ಸಂವಹನ, ಸಂವಾದ ಮಾಡುವಾಗ ಇವುಗಳನ್ನು ಹದವರಿತು ಬಳಸಿಕೊಳ್ಳಬಹುದು ಇದುವೇ ಮಾತಿನ ಕಲೆಗಾರಿಕೆ. ಮಾತುಗಾರರ ಮಾತಿಗೆ ಮೂಲ ದ್ರವ್ಯವೆ ಶಬ್ದ ಅಥವಾ ಪದಸಂಪತ್ತು.
ಬೇರೆಲ್ಲಾ ಲೇಖನ ಸಾಮಾಗ್ರಿಗಳನ್ನು ತುಸು ಹೆಚ್ಚೇ ಎಂಬಂತೆ ಮಕ್ಕಳಿಗೆ ಅವರಿಷ್ಟದಂತೆ ಪೋಷಕರು ಕೊಡಿಸುತ್ತೇವೆ. ಅದರಲ್ಲೂ ಪ್ರಥಮ ಆದ್ಯತೆ ಎಂಬಂತೆ ಶಬ್ದಕೋಶಗಳನ್ನು ನಮಗೆ ತಿಳಿದಿರುವ ಎಲ್ಲಾ ಭಾಷೆಗಳದ್ದೂ ಕೊಡಿಸುವುದೂ ಜವಾಬ್ದಾರಿ ಹಾಗು ಕರ್ತವ್ಯ. ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಪದಗಳನ್ನು ಗುರುತಿಸುವ ಆಟಗಳನ್ನು, ಪದಬಂಧಗಳನ್ನು ಮಾಡಿಸುವುದು. ಪದಗಳಲ್ಲಿ ಆಟ ವೈನೋದಿಕ ಆಟ, ಪದ ಗಡಿಯಾರ. ಚಿತ್ರಗಳ ಮೂಲಕ ಶಬ್ದ ಪರಿಚಯ, ಚಿಹ್ನೆಗಳ ಮೂಲಕವೂ ಪದ ಪರಿಚಯ ಮಾಡಿಸಬಹುದು. ಗೂಗಲ್ ಸಹಾಯದಿಂದ ಪದಗಳ ಅರ್ಥ ಉಚ್ಛಾರಣಕ್ರಮ ಕಲಿತರೂ ಅಕ್ಷರ ರೂಪಿ ಶಬ್ದಕೋಶಗಳ ಅವಶ್ಯಕತೆ ಇದ್ದೇ ಇದೆ.

ಶಬ್ದಗಳು ಒಂದೇ ತೆರನಾಗಿ ಕಂಡರೂ ಕಾಗುಣಿತ ವ್ಯತ್ಯಾಸದಿಂದ ಅರ್ಥ ವ್ಯತ್ಯಾಸವೂ ಉಂಟಾಗುತ್ತದೆ. ಹಾಗಾಗಿ ಶಬ್ದಗಳು ತಿಳಿದಿದ್ದರೆ ಸಾಲದು ಅದಕ್ಕೆ ಪೂರಕ ಅರ್ಥಗಳೂ ತಿಳಿದಿರಬೇಕು. ಇನ್ನು ಪ್ರಮುಖ ವಿಚಾರ ಬರೇ ಶಬ್ದಗಳನ್ನು ಕಂಠಸ್ಥ ಮಾದರಿಯಲ್ಲಿ ತಂದುಕೊಂಡರೆ ಸಾಲದು ಅದರ ಅರ್ಥವೂ ಪರಿಪೂರ್ಣವಾಗಿ ತಿಳಿದಿರಬೇಕು ಇಲ್ಲವಾದರೆ ಅಶಬ್ದಗಳಾಗುತ್ತವೆ, ಆಭಾಸಗಳಾಗುತ್ತವೆ. ‘ಶಬ್ದ’ ಇದನ್ನೆ ತೆಗೆದುಕೊಂಡರೆ ‘ಸದ್ದು’, ‘ಸಪ್ಪಳ’, ಎಂಬ ಅರ್ಥವು ಇದೆ ಪದ (word )ಎನ್ನುವ ಅರ್ಥವೂ ಇದೆ ಪದಕ್ಕೆ ಶಬ್ದ ಎನ್ನುವ ಅರ್ಥವೂ ಇದೆ ಹಾಡು (Song ) ಎಂಬ ಅರ್ಥವಿದೆ. ‘ಹಾಡು’ ಶಬ್ದಕ್ಕೆ ‘ಪ’ಕಾರ ಸೇರಿದರೆ ‘ಪಾಡು’ ಆಗುತ್ತದೆ ‘ಪಾಡು’ ಎಂದರೆ ‘ಕಷ್ಟ’ ಎನ್ನುವ ಅರ್ಥವೂ ಇದೆ. ‘ಕಷ್ಟ’ ಎಂದರೆ ‘ತೊಂದರೆ’ ಎನ್ನುವ ಅರ್ಥವಿದೆ. ‘‘ಕಷ್ಟ ಮಾಡಿಸಿಕೋ” ಎಂದರೆ ಆಯುಷ್ಕರ್ಮ ಮಾಡಿಸಿಕೋ ಎಂಬ ಅರ್ಥವಿದ್ದರೆ “ಕಷ್ಟ ಅನುಭವಿಸು” ಎಂದರೆ “ತೊಂದರೆ ಅನುಭವಿಸು” ಎಂಬ ಅರ್ಥವೂ ಇದೆ. ಇನ್ನು ‘ಹಂಚು’ ಎಂದರೆ ವಿತರಿಸು ‘ಹೆಂಚು’ ಪದವನ್ನು ಕಾವಲಿಗೆ ಹೇಳುವುದು, ಮನೆಯ ಮಾಡಿಗೆ ಹೊದಿಸುವುದು ಎಂಬ ಅರ್ಥವೂ ಇದೆ. ಪದಗಳನ್ನು ಬಳಸುವ ರೀತಿ ಅದಕ್ಕೆ ಫೂರಕವಾಗಿ ಬಳಸುವ ಕ್ರಿಯಾಪದಗಳು ಪದಗಳ ಬೇರೆ ಬೇರೆ ಅರ್ಥಗಳನ್ನು ಶೃತಪಡಿಸುತ್ತವೆ. ಅಂದರೆ ಪದಗಳ ನಾನಾರ್ಥಗಳು ತಿಳಿದಿರಬೇಕು. ನಾನಾರ್ಥಗಳು ನಾಮಪದಗಳ ರೂಪದಲ್ಲಿ ಹಾಗು ಕ್ರಿಯಾ ಪದಗಳ ರೂಪದಲ್ಲಿ ಇರುತ್ತವೆ. ಶಬ್ದಗಳ ಕಲಿಯುವಿಕೆಯ ಮುಂದಿನ ಹಂತ ವ್ಯಾಕರಣಾ ಶಾಖೆಗಳ ಅಧ್ಯಯನ. ವಿ+ಆ+ಕರಣ “ವ್ಯಾ…. ವ್ಯಾಕರಣ ನನಗೆ ಕಷ್ಟ…” ಎಂದರೆ ಆಗದಮಾತು. ಶಬ್ದಗಳಿಗೆ ಅರ್ಥ, ಸಮಾನಾರ್ಥ, ನಾನಾರ್ಥಗಳು, ವಿರುದ್ದಾರ್ಥಗಳು ಇರುತ್ತವೆ ಇತರರೊಂದಿಗೆ ಸಂವಹನ ಮಾಡುವಾಗ ಇವುಗಳ ಬಗ್ಗೆ ಗಮನವಿರಬೇಕಾಗುತ್ತದೆ.

ಮಕ್ಕಳ ಮೇಲೆ ಕೌಟುಂಬಿಕ ಮತ್ತು ಸಾಮಾಜಿಕ ವರ್ತನೆಗಳು ಪ್ರಭಾವ ಬೀರಿಯೇ ಬೀರುತ್ತವೆ. ಅಂದರೆ ಮಾತುಗಳು ಅಲ್ಲಿ ನಡೆಯುವ ಪದ ವಿನಿಮಯ. ಹೇಳಿಕೆಗಳು ಆ ಧ್ವನಿಗಳ ಏರಿಳಿತಗಳು ಮಗುವಿನ ಸುಪ್ತ ಪ್ರಜ್ಞೆಯಲ್ಲಿ ದಾಖಲಾಗುತ್ತಲೇ ಇರುತ್ತವೆ. ಅಂತಹುದರಲ್ಲಿ ಶಬ್ದ ಸಾಂಗತ್ಯವೂ ಧನಾತ್ಮಕತೆಯಿಂದಲೇ ಇರಬೇಕಾಗುತ್ತದೆ. ಸಮಾಜವೇ ಬಯಲು ವಿಶ್ವ ವಿದ್ಯಾನಿಲಯ ಇಲ್ಲಿ ಕಾಲಕಾಲಕ್ಕೆ ಭಾಷೆಯಲ್ಲಿನ ಬದಲಾವಣೆಗಳು ಅನ್ಯ ಭಾಷಾ ಸಂಸರ್ಗದಿಂದಲೆ ಆಗುತ್ತಿರುತ್ತವೆ. ಅಂಥಹುದರಲ್ಲಿ ನಾವು ಆಲಿಸಿದ ಅನ್ಯಭಾಷಿ ಪದಗಳಿಗೆ ನಮ್ಮ ಭಾಷೆಯಲ್ಲಿ ಪದಗಳನ್ನು ಸೃಜಿಸುವ ಶಕ್ತಿ ನಮ್ಮಲ್ಲಿರಬೇಕು. ಅದು ಶಬ್ದಭಂಢಾರದಿಂದ ಸೃಜಿಸುತ್ತದೆ.

PODCAST ಮೂಲತಃ ಇಂಗ್ಲಿಷ್ ಭಾಷೆಯ ಪದ ಅಂತರ್ಜಾಲ ಸಂಪರ್ಕದ ಮಾಧ್ಯಮದಿಂದ ಆಲಿಸಬಹುದಾದ ಮಾತುಗಳು, ಚಿಂತನೆಗಳು, ಚುಟುಕು ಭಾಷಣಗಳು ಇತ್ಯಾದಿ. ಈ ಪದವನ್ನು ಕನ್ನಡದಲ್ಲಿ ಬರೆದರೆ ‘ಪಾಡ್ಕಾಸ್ಟ್’ ಎಂದು ಬರೆದರೆ ಸಾಕೆ? ಕನ್ನಡದಲ್ಲಿ ಹೊಸ ಪದ ಕಂಡುಹಿಡಿಯಬೇಕು ಜಾಲದುಲಿ ಎನ್ನಬಹುದಲ್ಲವೆ. KEY WORDS ಅದನ್ನೇ ‘ಕೀವರ್ಡ್ಸ್’ ಎಂದು ಬರೆಯುವುದರ ಬದಲು ‘ದಿಕ್ಸೂಚಿ ಪದಗಳು’ ಎಂದು ಬರೆಯಬಹುದು.

ಶಬ್ದಗಳನ್ನು ಮಾತು ಎಂದು ಕರೆದರೂ “ಜಸ್ಟ್ ಮಾತ್ ಮಾತಲ್ಲಿ” ಎಂದು ಅಲ್ಲಿಗೆ ಪರ್ಯಾವಸಾನ ಹೊಂದಬಾರದು, ಜಸ್ಟ್ ಮಾತು ಕೇವಲ ಮಾತಾಗದೇ ಅದರಲ್ಲಿ (ಜಿಸ್ಟ್) ಸಾರಾಂಶ ಸೇರಿದರೆ, ಸಂಯಮವಿದ್ದರೆ, ಅನುಭಾವ್ಯವಾದರೆ ಅದಕ್ಕೊಂದು ಮೌಲ್ಯವಿರುತ್ತದೆ. ಶಬ್ದಗಳ ಅರ್ಥವನ್ನು ಸರಿಯಾಗಿ ತಿಳಿಯದೆ ಮಾತನಾಡಿದರೆ ಸಾಮಾಜಿಕ ಜಾಲತಾಣದ ಅಂಗಳ ಸೇರಿ ಭಾರೀ ಸದ್ದು ಮಾಡುತ್ತವೆ, ಕೋಲಾಹಲ ಸೃಷ್ಟಿಸುತ್ತವೆ.

ಮಾತುಗಾರಿಕೆಯೂ ಇಂದಿನ ದಿನಮಾನಗಳಲ್ಲಿ ಜೀವನಮಾರ್ಗದ ಉಪಕ್ರಮಗಳಲ್ಲಿ ಒಂದಾಗಿದೆ. “ಮಾತು ಬಲ್ಲವನಿಗೆ ಜಗಳವಿಲ್ಲ” ಎನ್ನುವುದು ಹಳೆಯಮಾತು. ಈಗ “ಮಾತು ಬಲ್ಲವನಿಗೆ ನಿರುದ್ಯೋಗವಿಲ್ಲ” ಎನ್ನಬಹುದು, ಶಿಕ್ಷಣ, ವ್ಯಾಪಾರ, ಸಮಾಲೋಚನೆ, ಮಾಧ್ಯಮ ಯಾವುದೇ ಕ್ಷೇತ್ರವಾಗಲಿ; ಅಲ್ಲಿ ಮಾತು ಬೇಕು. ಮಾತಿನಲ್ಲಿ ನವ್ಯತೆಯನ್ನು ಹೆಚ್ಚಿಸುವುದು ಶಬ್ದಭಂಡಾರ.


ಮಾತು ನಿರಂತರತೆಯಿಂದ, ಸ್ಪಷ್ಟತೆಯಿಂದ ಕೂಡಿದ್ದು ಇತರರನ್ನು ಆಕರ್ಷಿಸುವಂತಿರಬೇಕು. ಅಶಬ್ದವಾಗಿ ಮಾತನಾಡಿದವರನ್ನು ಸಿಟ್ಟಿನಿಂದ ಹುಡುಕುವಂತಿರಬಾರದು. ಎದುರಿಗಿದ್ದವರನ್ನು ಮನ್ನಿಸುವಂತಿರಬೇಕು, ಮಣಿಸುವಂತಿರಬೇಕು. ಇವೆಲ್ಲಕ್ಕೂ ನಮ್ಮಲ್ಲಿರಬೇಕು ಅಭ್ಯಾಸಪೂರ್ವಕವಾಗಿ ಬಂದ ಶಬ್ದಭಂಡಾರ. ಸಾಮಾಜಿಕ ಸಂಸರ್ಗಕ್ಕೆ ನಮ್ಮನ್ನು ನಾವು ಒಳಗು ಮಾಡಿಕೊಳ್ಳದೆ ಇರುವಾಗ ಮಾತಿನ ಮೂಲದ್ರವ್ಯ ಶಬ್ದಗಳೆಂಬ ಗುಳಿಗೆಗಳನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕು. ನಿಘಂಟಿನದ್ದಾಗಿರಲಿ, ಗೂಗಲ್‌ದಾಗಿರಲಿ ಚಿಂತೆ ಇಲ್ಲ ತೆಗೆದುಕೊಳ್ಳುವ ಪದಗುಳಿಗೆಗಳು ಹೊಸದಾಗಿರಲಿ, ಅನನ್ಯವಾಗಿರಲಿ.