ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ
ಕಳೆದ ಸಂಚಿಕೆ ಹೀಗೆ ಮುಗಿದಿತ್ತು..
“……. ಕೇಂದ್ರ ಸ್ವಾಮ್ಯದ ಬೃಹತ್ ಉದ್ದಿಮೆಗಳು ಇಲ್ಲಿ ಸ್ಥಾಪಿತವಾದ ನಂತರ ಅದಕ್ಕೆ ಪೂರಕವಾದ ಅನೇಕ ಉದ್ದಿಮೆಗಳು ಇಲ್ಲಿ ಬೆಳೆದಿವೆ. ಬೆಂಗಳೂರು ನಗರದ ಆಹ್ಲಾದಕರ ತಂಪು ವಾತಾವರಣ, ಇಲ್ಲಿನ ಜನರ ಸೌಹಾರ್ದತೆ ಹಾಗೂ ಎಲ್ಲರನ್ನೂ ತಮ್ಮಂತೆ ಕಾಣುವ ಆದರಿಸುವ ಅಪರೂಪದ ಗುಣ ದಶ ದಿಕ್ಕುಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ ಮತ್ತು ಇದು ಇನ್ನೂ ಮುಂದುವರೆದಿದೆ. ಇದು ನಮ್ಮೂರಿನ ಒಂದು ದೊಡ್ಡ ಪ್ಲಸ್ ಪಾಯಿಂಟ್ ಮತ್ತು ಇದೇ ಬಹುದೊಡ್ಡ ಮೈನಸ್ ಪಾಯಿಂಟ್ ಸಹ. ಈ ನಮ್ಮ ಮನೋಭಾವ ನಮ್ಮ ಮುಂದಿನ ಪೀಳಿಗೆಯನ್ನು ಹೇಗೆ ದೇಶದಿಂದ ಹೊರಹೋಗುವ ಹಾಗೆ ಮಾಡಿತು ಎನ್ನುವುದನ್ನು ನಮ್ಮ ಸಮಾಜ ಶಾಸ್ತ್ರಿಗಳು ಮುಂದಿನ ದಿನಗಳಲ್ಲಿ ಸ್ಟಡಿ ಮಾಡಬೇಕಾಗುವ ಪರಿಸ್ಥಿತಿ ಉದ್ಭವ ಆಗುತ್ತದೆ.”
ಈಗ ಮುಂದಕ್ಕೆ..
BEL ಸರ್ಕಲ್‌ನಿಂದ ಕವಲು ಒಡೆಯುವ ರಸ್ತೆಯ ಬಲಭಾಗದಲ್ಲಿ BEL ಕಾರ್ಖಾನೆ ಮತ್ತು ಹಾಗೇ ಮುಂದುವರೆದರೆ ನಾಗಾಲ್ಯಾಂಡ್ ಸರ್ಕಲ್, ದೊಡ್ಡ ಬೊಮ್ಮಸಂದ್ರ, ಮತ್ತೆ ರಸ್ತೆ ಕವಲು ಮುಂದಕ್ಕೆ ಎಡಗಡೆಗೆ ವಿದ್ಯಾರಣ್ಯಪುರ, ಬಲಗಡೆಗೆ ತಿಂಡಲು… ಈ ಪ್ರದೇಶಗಳ ಬಗ್ಗೆ ವಿಸ್ತೃತ ಟಿಪ್ಪಣಿ ಮುಂದೆ ತಮಗೆ ನೀಡುತ್ತೇನೆ.
ಜಾಲಹಳ್ಳಿ ಬಗ್ಗೆ ಒಂದು ಹಗುರ ವಿಷಯವೊಂದು ನನ್ನ ಅನುಭವದಲ್ಲಿ ದಾಖಲಾಗುವ ಸೌಭಾಗ್ಯ ಕಂಡಿದೆ. ನನ್ನ ದೂರದ ನಂಟರು ಇದ್ದಕ್ಕಿದ್ದ ಹಾಗೆ ಅವರ ಮನೆಯಿಂದ ಕಾಣೆಯಾದರು. (ಅಂದರೆ ಓಡಿ ಹೋದರು). ಈ ವಿಷಯ ಒಂದು ಒಂದೂವರೆ ವಾರದ ನಂತರ ನಮ್ಮ ಅಣ್ಣನಿಗೆ ತಿಳಿಯಿತು. ಅವರ ಮನೆಯಲ್ಲಿ ಓಡಿಹೋದ ಮನುಷ್ಯ ಯಾವುದೋ ಫೈನಾನ್ಸ್ ಕಂಪನಿಯಿಂದ ಆಗಾಗ ಸಾಲ ತೆಗೆದುಕೊಳ್ಳುತ್ತಿದ್ದ ಒಂದು ಕಾಗದ ಸಿಕ್ಕಿತು. ಅದರಲ್ಲಿ ಫೈನಾನ್ಸ್ ಕಂಪನಿಯ ಹೆಸರು ಅದರ ಕೆಳಗೆ ಜಾಲಹಳ್ಳಿ ಅಂತ ಇದೆ. ಅಣ್ಣನ ತಲೆ ಪತ್ತೇದಾರಿಕೆ ಮಾಡಿತು. ಇಂತಹ ಪತ್ತೇದಾರಿಕೆಯಲ್ಲಿ ನಮ್ಮ ಅಣ್ಣ ಪುರುಷೋತ್ತಮನನ್ನೂ ಮೀರಿಸಿದಾತ. ಪುರುಷೋತ್ತಮ ಯಾರು ಅಂತ ತಲೆ ಕೆಡಿಸ್ಕೋಬೇಡಿ. ನಮ್ಮ ಕಾಲದಲ್ಲಿ ಎನ್.ನರಸಿಂಹಯ್ಯ ಅಂತ ಒಬ್ಬರು ದಿವಸಕ್ಕೆ ಎರಡೋ ಮೂರೋ ಪತ್ತೇದಾರಿ ಕಾದಂಬರಿ ಬರೀತಾ ಇದ್ದರು. ನಮ್ಮ ಪೀಳಿಗೆ ಅವರೆಲ್ಲಾ ಅವರ ಪುಸ್ತಕ ಓದಿ ಬೆಳೆದವರು. ಈ ನರಸಿಂಹಯ್ಯ ಅವರು ಸೃಷ್ಟಿಸಿದ ಒಂದು ಕ್ಯಾರೆಕ್ಟರ್ ಪತ್ತೇದಾರ ಪುರುಷೋತ್ತಮ. ಹೆಚ್ಚು ಕಮ್ಮಿ ನಮ್ಮ ವಯಸ್ಸಿನ ಎಲ್ಲರಲ್ಲೂ ಆಗ ಪುರುಷೋತ್ತಮ ಆವಾಹನ ಆಗಿದ್ದ!
ಸದರಿ ಫೈನಾನ್ಸ್ ಕಂಪನಿ ಹುಡುಕುವುದು ಮತ್ತು ಅಲ್ಲಿ ಶೂರಿಟಿ ಹಾಕಿರುವ ಮನುಷ್ಯನನ್ನು ಪತ್ತೆ ಹಚ್ಚಿ ಅವನಿಂದ ಇವರ ಆಗು ಹೋಗು ತಿಳಿಯುವುದು. ಇಂತಹ ಐಡಿಯಾ ಬಂದಾಗಲೆಲ್ಲಾ ಅವನಿಗೆ ನನ್ನ ನೆನಪು. ಹೇಳಿದ ಕೆಲಸ ಮಾಡುತ್ತಾನೆ, ಕೊಂಚ ಬುದ್ಧಿ ಕಮ್ಮಿ, ಎದುರು ಮಾತಾಡೋದಿಲ್ಲ…… ಈ ಮೊದಲಾದ ನಂಬಿಕೆಗಳು ಅವನ ಮನಸಿನಲ್ಲಿ ಗಾಢವಾಗಿ ಬೇರು ಬಿಟ್ಟಿದ್ದವು.(ಬಹುತೇಕ ನನ್ನ ಬಂಧುಗಳೂ ಸಹ ನನ್ನ ಬಗ್ಗೆ ಇದೇ ಫೀಲಿಂಗ್ ಹೊಂದಿರುವವರು)ನಾನೂ ಸಹ ಅವನ ನಂಬಿಕೆಗಳಿಗೆ ಚ್ಯುತಿ ಬರದ ಹಾಗೆ ಪೆಕರ ಪೆಕರಾಗಿ ಇದ್ದೆ ಮತ್ತು ಅವನ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದೆ.
ನೋಡು ಇಂತಹವನು ಓಡಿ ಹೋಗಿದ್ದಾನೆ. ಜಾಲಹಳ್ಳಿಯ ಫೈನಾನ್ಸ್ ಕಂಪನಿಯಿಂದ ಸಾಲ ತಗೊಂಡಿದ್ದಾನೆ. ಹೇಗಿದ್ದರೂ ನಿನ್ನ ಏರಿಯಾ ತಾನೇ. ಹುಡುಕಿ ಫೈಂಡ್ ಔಟ್ ಮಾಡು ಅಂದ. ಸರಿ ಅಂತ ಕೋಲೆಬಸವನ ಹಾಗೆ ತಲೆ ಆಡಿಸಿದೆ.
ಬೆಳಿಗ್ಗೆ ಸೈಕಲ್ ಏರಿ ಜಾಲಹಳ್ಳಿ ಫೈನಾನ್ಸ್ ಕಂಪನಿ ಹುಡುಕಿ ಹೊರಟೆ. ಇಡೀ ದಿವಸ ಹುಡುಕಿದರೂ ಆ ಹೆಸರಿನ ಅಂಗಡಿ ಸಿಗಲಿಲ್ಲ. ಇಡೀ ಜಾಲಹಳ್ಳಿ ಎಷ್ಟು ದೊಡ್ಡದು ಅಂತ ಅವತ್ತು ಗೊತ್ತಾಯಿತು. ಜಾಲಹಳ್ಳಿ ಯ ಒಂದು ರಸ್ತೆಯಲ್ಲಿ ಮೂವತ್ತಾರಕ್ಕೂ ಹೆಚ್ಚು ಫೈನಾನ್ಸ್ ಅಂಗಡಿ ಇರೋದು ತಿಳಿಯಿತು. ಈ ವಿಷಯ ನನಗೆ ಮೊದಲು ಅಷ್ಟು ನಿಖರವಾಗಿ ಗೊತ್ತಿರಲಿಲ್ಲ. ಆದರೆ ಇಂತಹ ಸುಮಾರು ಅಂಗಡಿಗಳಿಗೆ ಹೋಗಿದ್ದೆ. ನನಗೂ ಇಂತಹ ಅಂಗಡಿಗಳಿಗೂ ಹೇಗೆ ಪರಿಚಯ ಅಂದರೆ ಅದಕ್ಕೇ ಬಂದೆ. ನನ್ನ ಗೆಳೆಯರು ಕೆಲವರು ರೆಗ್ಯುಲರ್ ಆಗಿ ಇಲ್ಲಿ ಕಸ್ಟಮರ್ಸು. ಅಂತಹ ಕೆಲವರು ಸಂಜೆ ಆರಕ್ಕೋ ಎಂಟಕ್ಕೋ ಮನೆ ಮುಂದೆ ಕಾರೋ ಸ್ಕೂಟರೋ ಮೋಟಾರ್ ಸೈಕಲ್ಲೋ ತಂದು ನಿಲ್ಲಿಸಿ ಹತ್ತು ಅನ್ನೋರು. ಕಾರಲ್ಲಿ ಸ್ಕೂಟರಲ್ಲಿ ಮೋಟಾರ್ ಸೈಕಲ್ಲಿನಲ್ಲಿ ಫ್ರೀ ರೈಡ್ ಸಿಗುತ್ತೆ ಅದೂ ರಾತ್ರಿ ಹೊತ್ತು ಅಂದರೆ ಯಾವ ಮುಠ್ಠಾಳ ಬಿಡ್ತಾನೆ? ತೆಪ್ಪಗೆ ಅವರ ಜತೆ ಕಾರ್ ಆದರೆ ಮುಂದೆ ಕೂತು ಹೋಗ್ತಾ ಇದ್ದೆ. ಸ್ಕೂಟರು ಮೋಟಾರೂ ಸೈಕಲ್ಲು ಆದರೆ ಅವರ ಹಿಂದೆಕೂತು ಅವರ ಎರಡೂ ಭುಜ ಬಿಗಿಯಾಗಿ ಹಿಡಿದು ಕೂತ್ಕೋತಾ ಇದ್ದೆ. ಹೀಗೆ ಜತೆಲಿ ಕರೆದುಕೊಂಡು ಹೋದೋರು ಎಲ್ಲೋ ನಿಲ್ಲಿಸೋರು, ಇಳಿ ಅನ್ನೋರು. ಇಳಿದು ಅವರ ಜತೆ ಹೋದರೆ ಮೆಟ್ಟಲು ಹತ್ತಿಸಿ ಇಂತಹ ಸಾಲದ ಅಂಗಡಿಗೆ ಕರೆದುಕೊಂಡು ಹೋಗೋರು. ಅಷ್ಟು ಹೊತ್ತಿಗೆ ಅಲ್ಲಿ ಮೇಜಿನ ಆಕಡೆ ಕೂತಿದ್ದೋರು ಒಂದಿಷ್ಟು ಪೇಪರು ಎದುರು ಇಡೋರು. ಅವರು ತೋರಿಸಿದ ಕಡೆ ನಾನು ಸೈನ್ ಹಾಕೋದು. ಅದೆಲ್ಲಾ ಆದಮೇಲೆ ನನ್ನ ಕಾರಲ್ಲಿ, ಸ್ಕೂಟರೋ ಮೋಟಾರ್ ಸೈಕಲ್ಲೋ ಏರಿಸಿ ಕರೆದುಕೊಂಡು ಹೋಗಿರ್ತಾರಲ್ಲ ಅವರಿಗೆ ದುಡ್ಡು ಕೊಡೋರು. ಇವರು ನನ್ನ ಮನೆಗೆ ಬಂದು ಬಿಡೋರು! ಸಾಲ ತೀರಿಸಿಲ್ಲ, ನಿನ್ನ ಮನೆ ಜಪ್ತಿ ಮಾಡ್ತೀವಿ ಅಂತ ಕೆಲವು ಸಲ ನನಗೆ ನೋಟಿಸ್ ಬರೋದು. ಡೋಂಟ್ ವರಿ ಅಂತ ಅದನ್ನ ನನ್ನ ಗೆಳೆಯರು ಇಸಕೊಂಡು ಹೋಗೋರು…….
ಇದು ನಾನು ಈ ಫೈನಾನ್ಸ್ ಅಂಗಡಿ ಪರಿಚಯ ಮಾಡಿಕೊಂಡ ರೀತಿ.
ನನಗೆ ಗೊತ್ತಿರುವ ಸುಮಾರು ಜನ ಸ್ನೇಹಿತರು ಈ ಫೈನಾನ್ಸ್ ಕಂಪನಿಗಳ ಮುಂದೆ ನಿಂತಿರುವುದು ಕಂಡೆ. ಕೆಲವರು ಸಾಲ ತೆಗೆದುಕೊಳ್ಳಲು, ಕೆಲವರು ಅವರಿಗೆ ಶೂರಿಟಿ ಹಾಕಲು ಇದ್ದರು. ಮತ್ತೆ ಕೆಲವರು ತಮ್ಮಿಂದ ಸಾಲ ಪಡೆದವರಿಂದ ಬೇರೆ ಕಡೆ ಸಾಲ ತೆಗೆಸಿ ಅದನ್ನು ತಮ್ಮ ಸಾಲ ಮರುಪಾವತಿ ಮಾಡಿಕೊಳ್ಳಲು ಬಂದಿದ್ದರು.
ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ. ಏನೋ ಜಾಲಹಳ್ಳಿ ಅಷ್ಟು ಸಣ್ಣ ಏರಿಯಾ, ಅಡ್ರೆಸ್ ಹುಡುಕೋದಕ್ಕೆ ಆಗಲಿಲ್ಲವಾ ನಿನಗೆ.. ಅಂತ ಪ್ರಶ್ನೆ ಬರಬೇಕೆ?
ಅವತ್ತಿಂದ ಒಂದು ಪಾಠ ಕಲಿತೆ. ದೂರದಲ್ಲಿ ಕೂತು ಸಹಾಯ ಬೇಕು ಎನ್ನುವವರನ್ನು ಇನ್ವಾಲ್ವ್ ಮಾಡಬೇಕು ಅನ್ನುವ ಪಾಠ! ಇದೂ ಸಹ ಎಲ್ಲಾ ಮುಂಜಾಗರೂಕತಾ ಕ್ರಮಗಳ ಹಾಗೆ ಟುಸ್ ಎಂದಿದ್ದೇ ಹೆಚ್ಚು. ಅದು ಹೇಗೆ ನೀನೇ ಇಂತಹ ಪ್ರಾಬ್ಲಂಗಳಲ್ಲಿ ಸಿಕ್ಕಿ ಹಾಕಿಕೊಳ್ತಿಯಾ ಅಂತ ನನ್ನಾಕೆ ಅದೆಷ್ಟೋ ಕೋಟಿ ಸಲ ಕ್ವೈರಿ ಹಾಕಿದ್ದಾಳೆ. ಇದು ಹಾಗಿರಲಿ ಬಿಡಿ.
ನರಿ ಕತೆ ಈಗ ನೆನಪಿಗೆ ಬಂತು. ಅದನ್ನು ಹೇಳಿ ಮುಂದಕ್ಕೆ.. ನರಿ ಒಂದು ಸಲ ಕಾಡಿನಲ್ಲಿ ಹೋಗುತ್ತಾ ಇತ್ತು. ಅದರ ಕಣ್ಣಿಗೆ ನಸುಗುಣ್ಣಿ ಕಾಯಿ ಬಿತ್ತು. ಹಿಂದೆ ಎಷ್ಟೋ ಸಲ ಈ ಕಾಯಿ ತಿಂದು ಅನುಭವಿಸಿದ್ದ ಕಷ್ಟ ನರಿಗೆ ನೆನಪಾಯಿತು. ಆದರೂ ಕೇರ್ ಮಾಡದೆ ಮೊದಲು ಒಂದು ಕಾಯಿ ತಿಂದಿತು. ರುಚಿ ಹತ್ತಿ ಎರಡನೆಯದು ತಿಂದಿತು. ಅದೇ ರುಚಿಯಿಂದ ಮೂರು ನಾಲ್ಕು ಐದು… ಹೀಗೆ ಸಾಕು ಅನ್ನುವಷ್ಟು ತಿಂದು ಬಿಟ್ಟಿತು. ರಾತ್ರಿ ಆಗುತ್ತಿದ್ದ ಹಾಗೆ ಹೊಟ್ಟೆಯಲ್ಲಿ ಸಂಕಟ ಶುರು ಆಯಿತು. ಮೊದಲು ವಾಂತಿ ವಾಂತಿ ವಾಂತಿ ಆಗಿ ಸುಸ್ತಿನಿಂದ ಒಂದು ಮೂಲೆಯಲ್ಲಿ ಒರಗಿತು. ನಂತರ ಭೇದಿ, ಭೇದಿ ಭೇದಿ.. ಎಷ್ಟು ಸುಸ್ತು ಹೊಡಿತು ಅಂದರೆ ದೇವರೇ ಹೇಗಾದರೂ ಮಾಡಿ ಈ ಒಂದುಸಲ ನನ್ನ ಪ್ರಾಣ ಹೋಗದೇ ಇರೋ ಹಾಗೆ ಮಾಡು. ಇನ್ಮೇಲೆ ಯಾವತ್ತೂ ನಸಗುನ್ನಿ ಕಾಯಿ ಕಡೆ ತಲೆ ಹಾಕಿ ಮಲಗೋಲ್ಲ ಅಂತ ಬೇಡಿಕೊಳ್ತು. ಹಾಗೇ ಸುಸ್ತಾಗಿ ಒರಗಿತು. ಎರಡು ದಿವಸ ಆಯ್ತಾ? ಅದರ ಪ್ರಕೃತಿ ನಾರ್ಮಲ್ ಆಯ್ತಾ? ಕೆಲವು ದಿವಸ ಆದಮೇಲೆ ನಸುಗುನ್ನಿ ಕಾಯಿ ಮತ್ತೆ ಅದೇ ಕಾಡಿನಲ್ಲಿ ಕಾಣಿಸ್ತಾ….? ನರಿ ಮತ್ತೆ ಅದರ ಹತ್ತಿರ ಹೋಯಿತು. ಮೊದಲು ಒಂದು ಕಾಯಿ ತಿಂದಿತು. ರುಚಿ ಹತ್ತಿ ಎರಡನೆಯದು ತಿಂದಿತು. ಅದೇ ರುಚಿಯಿಂದ ಮೂರು ನಾಲ್ಕು ಐದು… ಹೀಗೆ ಸಾಕು ಅನ್ನುವಷ್ಟು ತಿಂದು ಬಿಟ್ಟಿತು. ರಾತ್ರಿ ಆಗುತ್ತಿದ್ದ ಹಾಗೆ ಹೊಟ್ಟೆಯಲ್ಲಿ ಸಂಕಟ ಶುರು ಆಯಿತು…… ನಂತರ ಎಲ್ಲಾ ಪುನರಾವರ್ತನೆ ಆಯಿತು. ಈ ನರಿ ಕತೆ ನನಗೆ ಆಗಾಗ ನೆನಪಿಗೆ ಬರ್ತಾ ಇರ್ತದೆ. ರಾಜಕೀಯದವರು ರಾಜಕೀಯ ಬಿಡ್ತೀನಿ, ಪ್ರತಿ ದಿವಸ ಕತೆ ಕಾದಂಬರಿ ಬರೆದು ರಾಶಿ ರಾಶಿ ಹಾಕಿರೋರು ಇನ್ಮೇಲೆ ಬರೆಯೋದು ಬಿಡ್ತೀನಿ, ನಾಟಕದವರು ಇನ್ಮೇಲೆ ಆಕ್ಟಿಂಗ್ ಬಿಡ್ತೀನಿ, ಭಾಷಣ ಬಿಡೋ ಭೂಪರು ಇನ್ಮೇಲೆ ಭಾಷಣ ಬಿಡ್ತೇನೆ… ಈ ರೀತಿ ಹೇಳಿಕೆ ಕೊಟ್ಟಾಗಲೆಲ್ಲಾ ನನಗೆ ನರಿ, ನಸುಗುನ್ನಿ ಕಾಯಿ ನೆನಪಿಗೆ, ಅದರ ಹಿಂದೆಯೇ ಅದರ ಬವಣೆ ತಲೆಗೆ ಬರ್ತದೆ. ಇದನ್ನು ನಾನೂ ಸಹ ಅನುಭವಿಸಿರುವವನೇ ಆದ್ದರಿಂದ ಕಟ್ಟಿಕೊಂಡದ್ದು ಬಿಡೋದು ಸಾಧ್ಯವಿಲ್ಲ ಅನ್ನುವ ತೀರ್ಮಾನ ನನ್ನದು!
BEL ಸರ್ಕಲ್‌ನಿಂದ ಕವಲು ಒಡೆಯುವ ರಸ್ತೆಯ ಎಡಕ್ಕೆ ಬಂದರೆ ನೇರ ಉದ್ದಕ್ಕೆ ಹೋದರೆ ಗಂಗಮ್ಮ ಸರ್ಕಲ್, ಜಾಲಹಳ್ಳಿ ವೆಸ್ಟ್, ಎಂ ಎಸ್ ಪಾಳ್ಯ, ಅ ಟ್ಟೂರು, ಡೈರಿ, ಯಲಹಂಕ ಹೀಗೆ ರಸ್ತೆ ಮುಂದುವರೆದು ಬೆಂಗಳೂರಿನ ಮತ್ತೊಂದು ತುದಿಗೆ ಎಳೆದೊಯ್ಯುತ್ತದೆ. ಎಂ ಎಸ್ ಪಾಳ್ಯದ ಎಡಕ್ಕೆ ತಿರುಗಿದರೆ ನೇರ ನೀವು ಸಿಂಗಾಪುರ ಸೇರುತ್ತಿರಿ! ಬೆಂಗಳೂರಿನಲ್ಲಿ ಸಿಂಗಾಪುರವೆ ಅಂತಾ ನಿಮ್ಮ ಮುಖ ಆಶ್ಚರ್ಯ ಚಕಿತವಾಗಿದೆ ತಾನೇ? ಬೆಂಗಳೂರಿನ ಈ ಭಾಗದಲ್ಲಿನ ಸಿಂಗಾಪುರಕ್ಕೆ ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಉಂಟು. ಈ ಸಿಂಗಾಪುರದ ಸ್ಟೋರಿ ಮುಂದೆ ಬರ್ತದೆ. BEL ಸರ್ಕಲ್ ಮತ್ತು ಗಂಗಮ್ಮ ಸರ್ಕಲ್ ಮಧ್ಯೆ ಒಂದು ತಿರುವು ಎಡಗಡೆ ಇದ್ದು ಅದು ನೇರ HMT ಕಾರ್ಖಾನೆಗೆ ಒಯ್ಯುತ್ತದೆ. HMT ಜಾಗ ಜಾಲಹಳ್ಳಿ ವ್ಯಾಪ್ತಿಯದು ಮತ್ತು ಅದರ ಸುತ್ತ ಜಾಲಹಳ್ಳಿ ಹರಡಿದೆ. ಜಾಲಹಳ್ಳಿ ಒಂದು ಕಡೆ ಹಳ್ಳಿ. ಮತ್ತೊಂದು ಕಡೆ ಅಲ್ಟ್ರಾ ಸಿಟಿ. ಈ ವಿಷಯದ ಬಗ್ಗೆ ಹೇಳಬೇಕೆಂದರೆ ಒಂದು ದೊಡ್ಡ ಮಿಲಿಟರಿ ಅದೂ ವೈಮಾನಿಕ ಕ್ಯಾಂಪ್ ನೆನೆಸಿಕೊಳ್ಳಿ, ಅದು ಆಗಲಿಲ್ಲವೇ ಜಾಲಹಳ್ಳಿಗೆ ಬನ್ನಿ, ಮುಖತಃ ನೋಡಬಹುದು. ಮೊದಲು ಮತ್ತು ಈಗಲೂ ಬೆಂಗಳೂರಿನಂತಹ ಕಲ್ಮಶ ತುಂಬಿ ತುಳುಕುತ್ತಿರುವ ನಗರದಲ್ಲಿ ಅತ್ಯಂತ ಪ್ರಶಾಂತವಾದ pollution ಅತಿ ಕಡಿಮೆ ಇರುವ ತಾಣ ಎಂದರೆ ಜಾಲಹಳ್ಳಿಯ ವಾಯುಪಡೆ ಏರಿಯಾಗಳು. ಇಲ್ಲಿ ವಾಯುಪಡೆಗೆ ಸೇರಿದ ಸುಮಾರು ಕಚೇರಿಗಳು ಇವೆ. ಪ್ರತಿಯೊಂದೂ ಅದರ ಅಗಾಧ ಪ್ರಮಾಣದ ಕಟ್ಟಡ, ಸುತ್ತಲಿನ ಹಸಿರು ಮತ್ತು ಶಿಸ್ತಿನಿಂದ ಓಡಾಡುತ್ತಿರುವ IAF ಸಮವಸ್ತ್ರದ ಸೈನಿಕರಿಂದ ಮನ ಸೆಳೆಯುತ್ತದೆ. ಅವರನ್ನು ನೋಡಿದರೆ ಮೊದ ಮೊದಲು ನನಗೆ ಒಂದು ರೀತಿಯ ಸಂಕಟ, ಹೊಟ್ಟೆಕಿಚ್ಚು ಈರ್ಷ್ಯೆ ಹುಟ್ಟುತ್ತಿತ್ತು. ಸಂಕಟ ಯಾಕೆ ಅಂದರೆ ಇಷ್ಟು ಆರಾಮವಾಗಿ ಇಂತಹ ಒಳ್ಳೇ ಜಾಗದಲ್ಲಿ ಇದ್ದಾರೆ ಅಂತ. ಹೊಟ್ಟೆಕಿಚ್ಚು ಕಾರಣ ನನಗೆ ಇಂತಹ ಜಾಗ ಸಿಗಲಿಲ್ಲವೇ ಅಂತ. ಈರ್ಷ್ಯೆಗೂ ಅದೇ ಕಾರಣ. ವಾರದ ಕೊನೆಯಲ್ಲಿ ಇಲ್ಲಿಂದ ಸುಮಾರು ತರುಣರು ಅವರ ಯೂನಿಫಾರ್ಮ್ ನಲ್ಲಿಯೇ bts (ಈಗ bmtc) ಹತ್ತಿ ನಗರಕ್ಕೆ ಬಂದು ರಾತ್ರಿ ಹತ್ತರ ಸುಮಾರಿಗೆ ವಾಪಸ್ ಗೂಡು ಸೇರಲು ಬೆಂಗಳೂರಿನ ಬಸ್ ಸ್ಟ್ಯಾಂಡ್ ಬಳಿ ಬಸ್ಸಿಗೆ ಕಾಯುತ್ತಾ ನಿಂತಿರುವುದು ಒಂದು ರೀತಿಯ ಖುಷಿ ಮತ್ತು ಹೆಮ್ಮೆ ಹುಟ್ಟುತ್ತಿತ್ತು. ಖುಷಿ ಯಾಕೆಂದರೆ ಚಿಕ್ಕ ವಯಸ್ಸಿನ ಈ ಯುವಕರ ಉತ್ಸಾಹಕ್ಕೆ. ಹೆಮ್ಮೆಗೆ ಕಾರಣ ನಮ್ಮ ಬೆಂಗಳೂರು ಈ ಹುಡುಗರಿಗೆ ತರಬೇತಿ ಕೊಡುತ್ತಿದೆ ಎಂದು! ಕೆಲವು ಸಲ ಅಲ್ಲಿನ ಈ ಯುವ ಸೈನಿಕರು bts ಬಸ್ಸಿನ ಸಿಬ್ಬಂದಿ ಹತ್ತಿರ ರಾತ್ರಿ ಹೊತ್ತು ಜಗಳ ಆಡುವುದು ಸಾಮಾನ್ಯ ಸಂಗತಿ. ಅವರು ಹೋಗಬೇಕಾದ ಜಾಗಕ್ಕೆ ಬಸ್ಸು ಇಲ್ಲದಿದ್ದಾಗ ಈ ಜಗಳ! ಬಸ್ಸು ಹಾಕಿದ ನಂತರ bts ಸಿಬ್ಬಂದಿ ಅವರಿಗೆ ದೇವರ ಹಾಗೆ ಕಾಣಿಸುತ್ತಿದ್ದರು. ಆವರೆಗಿನ ಜಗಳ ಮರೆತು ಕಂಡಕ್ಟರು ಡ್ರೈವರು ಅಣ್ಣ ತಮ್ಮ ಆಗಿಬಿಡೋರು ಇವರಿಗೆ.
BEL ಸರ್ಕಲ್ ದಾಟಿ ಎಡಕ್ಕೆ ಮುಂದೆ ಬಂದರೆ ಸುಮಾರು ಅರ್ಧ ಮುಕ್ಕಾಲು ಕಿಮೀ ನಂತರ ಎಡಭಾಗದಲ್ಲಿ ಒಂದು ಮಲಯಾಳಿ ಟೀ ಅಂಗಡಿ ಕಂ ಹೋಟಲ್ (ಅದರ ಹೆಸರು ಭಾರತ್ ಕೆಫೆ)ಇತ್ತು. ಇಲ್ಲಿನ ಒಂದು ಮರೆಯಲಾಗದ ನೆನಪು ಮತ್ತು ಅನುಭವ ನಿಮಗೆ ಹೇಳಲೇ ಬೇಕು.ಭಾರತ್ ಕೆಫೆಯಲ್ಲಿ ನಾನ್ ವೆಜ್/ವೆಜ್ ಊಟ ತಯಾರಿ ಆಗುತ್ತಿತ್ತು. ಸುತ್ತಲಿನ ನಿವಾಸಿಗಳಿಗೆ(bel ಕಾಲೋನಿ, ಎಚ್ಚೆಂ ಟಿ ಕ್ವಾರ್ಟರ್ಸ್,ಜಾಲಹಳ್ಳಿ ವಾಸಿಗಳಿಗೆ) ಅದೊಂದೇ ಹೊಟೆಲ್ ಮತ್ತು ಅಲ್ಲಿ ನಾನ್ ವೆಜ್ ಉಣ್ಣುವವರೇ ಹೆಚ್ಚು. ಅದರಲ್ಲೂ ಕೇರಳದಿಂದ ಬಂದವರಿಗೆ ಈ ಹೋಟಲ್ ಅಚ್ಚುಮೆಚ್ಚು. ಅದನ್ನು ಕೆರಳದವರೆ ನಡೆಸುತ್ತಾ ಇದ್ದರು.
ಕೆರಳದವರ ಒಂದು ವಿಶಿಷ್ಟ ಗುಣ ನಿಮಗೆ ಹೇಳಬೇಕು. ಅವರು ಕೇರಳದ ಅಂಗಡಿ ಬಿಟ್ಟು ಬೇರೆ ಕಡೆ ಯಾವ ವ್ಯಾಪಾರವನ್ನು ಮಾಡುವುದಿಲ್ಲ. ಬಹುಶಃ ಇದೇ ಕಾರಣಕ್ಕೆ ಯಾವುದೇ ಮಲಯಾಳದವರ ಅಂಗಡಿ ಪಾಪರ್ ಆಗಿದ್ದು ಕೇಳಿಲ್ಲ!
ಭಾರತ್ ಕೆಫೆ ಕತೆಗೆ ವಾಪಸ್…
ನನ್ನ ಗೆಳೆಯ ಶ್ರೀಕಂಠನ ಜತೆ ಒಮ್ಮೆ ಅಲ್ಲಿ ನಾನ್ ವೆಜ್ ತಿನ್ನಲು ಹೋಗಿದ್ದೆ. ಮೊಟ್ಟ ಮೊದಲ ಬಾರಿಗೆ ನಾನ್ ವೆಜ್ ಹೇಗಿರುತ್ತೆ ಅಂತ ಹೋಟಲ್ ಹೊಕ್ಕಿದ್ದು. ಶ್ರೀಕಂಠನಿಗೂ ಇದು ಹೊಸದು. ಅದೇನೋ ಆರ್ಡರು ಮಾಡಿದ. ಕೊಂಚ ಹೊತ್ತಾದ ನಂತರ ಮೇಜಿನ ಮೇಲೆ ಅದೇನೋ ಗದೆ ಆಕಾರದ ಒಂದು ವಸ್ತು ತಂದು ಇಟ್ಟರು. ಎಲ್ಲಿಂದ ಶುರು ಮಾಡಬೇಕು, ಹೇಗೆ ಮಾಡಬೇಕು ಅಂತ ತಿಳಿಯದು. ನನಗೆ ಬೇಡ ಅಂದೆ. ಶ್ರೀಕಂಠ ಅದನ್ನು ಕೊಯ್ದು ಮೂಳೆ ತೆಗೆದು ಅದನ್ನು ಸೋರ್ ಸೋರ್ ಅಂತ ಚೀಪಿ ಮೂಳೆಗಳ ರಾಶಿ ಹಾಕಿದ್ದು ಇನ್ನೂ ನಿನ್ನೆ ಮೊನ್ನೆ ನಡೆದ ಹಾಗಿದೆ. ಮತ್ತೆಂದೂ ನಾನ್ ವೆಜ್ ರುಚಿ ನೋಡಬೇಕು ಅಂತ ನನಗೆ ಅನಿಸಲೇ ಇಲ್ಲ. ಅದರಿಂದ ಜೀವಮಾನ ಪೂರ್ತಿ ಪೂರ್ತಿ ವೆಜ್ ಆಗೇ ಉಳಿದುಬಿಟ್ಟೆ! ಎಷ್ಟೋ ಜನ ನನ್ನ ಆಕಾರ ನೋಡುತ್ತಾರೆ ಮತ್ತು ನಾನು ವೆಜ್ ಅಂದರೆ ಬುರುಡೆ ಹೊಡಿಬೇಡ ಅನ್ನುತ್ತಾರೆ. ಈಗಲೂ ಶ್ರೀಕಂಠ ಸಿಕ್ಕಿದಾಗ ಈ ಗದೆ ಆಕಾರದ ನಾನ್ ವೆಜ್ ತಿಂದದ್ದು ನೆನೆಸಿಕೊಂಡು ಅಂದಿನ ದಿವಸಕ್ಕೆ ಹಾರುತ್ತೇವೆ. ಶ್ರೀಕಂಠ ಈಗ ಎಪ್ಪತ್ತೈದು ದಾಟಿರುವ ಯುವಕ! ಇದು ನಾನು ಹೇಳಿದ್ದು ಎಪ್ಪತ್ತು ಎಂಬತ್ತರ ದಶಕದ ನೋಟ. ಭಾರತ್ ಕೆಫೆ ಅದರ ಸುತ್ತ ಕೆಲವು ಅಂಗಡಿಗಳು. ಅವಶ್ಯಕ ಕಿರಾಣಿ ಮತ್ತು ದಿನಸಿ ಸಾಮಾನುಗಳಿಗೆ ಅಲ್ಲೇ ಒಂದು ಐವತ್ತು ನೂರು ಮೀಟರ್ ಹಿಂದೆ ಒಂದು ಸೊಸೈಟಿ ಇತ್ತು. ಬಿಇಎಲ್ ಉದ್ಯೋಗಿಗಳಿಗೆ ಸಾಲದಲ್ಲಿ ದಿನಸಿ ಸಿಗುತ್ತಿತ್ತು. ಇದು ಅಲ್ಲಿನ ಉದ್ಯೋಗಿಗಳ ಸಹಕಾರ ಸಂಘ ಮತ್ತು ಆಡಳಿತ ವರ್ಗ ಇದಕ್ಕಾಗಿ ಒಂದು ಕಟ್ಟಡ ಕೊಟ್ಟಿತ್ತು. ಸುಮಾರು ವರ್ಷ ಇದು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಅದರ ಒಂದು ಶಾಖೆ ಕೆಲವು ತಿಂಗಳು ವಿದ್ಯಾರಣ್ಯಪುರದಲ್ಲಿಯೂ ಇತ್ತು. ಈಗ ಅವು ಇತಿಹಾಸದ ಒಂದು ಭಾಗವಾಗಿವೆ.
ಈ ಭಾರತ್ ಕೆಫೆಯ ಎದುರು ಒಂದು ರಸ್ತೆ. ಇದು ನಾಗಾಲ್ಯಾಂಡ್ ಮೂಲಕ ದೊಡ್ಡ ಬೊಮ್ಮಸಂದ್ರಕ್ಕೆ ಹಾದಿ. ನಾಗಾಲ್ಯಾಂಡ್ ಕತೆ ಮುಂದೆ ಹೇಳುತ್ತೇನೆ. ಈ ರಸ್ತೆಯ ಎಡ ಭಾಗದಲ್ಲಿ ಒಂದು ಕಟ್ಟಡ ಇತ್ತು. ಯುದ್ಧದ ಸಮಯ ಮತ್ತು ಅದರ ನಂತರವೂ ಅಲ್ಲಿ ಒಂದು ಮಿಲಿಟರಿ ಆಸ್ಪತ್ರೆ ಇತ್ತು. ಬಿಇಎಲ್ ಕಾರ್ಖಾನೆಯ ಸುತ್ತ ಹಲವು ಶೆಡ್‌ಗಳು ಇದ್ದವು. ಅದರಲ್ಲಿ ಒಂದರಲ್ಲಿ ಕ್ಯಾಂಟಿನ್, ಮತ್ತೊಂದರಲ್ಲಿ ಲಲಿತ ಕಲಾ ಸಂಘ… ಹೀಗೆ ಇದ್ದವು. ಇವುಗಳು ಯುದ್ಧ ಮತ್ತು ನಂತರದ ದಿವಸಗಳಲ್ಲಿ ಯುದ್ಧ ಖೈದಿಗಳನ್ನು ಇರಿಸಲು ಉಪಯೋಗಿಸುತ್ತಿದ್ದ ಜೈಲು ಎಂದು ಅಲ್ಲಿನ ಹಿರಿಯರು ಹೇಳುತ್ತಿದ್ದರು. ಇಂತಹ ಒಂದು ಶೆಡ್‌ಗೆ ಲಾಹೋರ್ ಜೈಲ್ ಎಂದು ಹೆಸರಿಟ್ಟು ಕರೆಯುತ್ತಿದ್ದರು. ಇನ್ನೊಂದು ಎಲ್ಲೂ ದಾಖಲಾಗದ ಒಂದು ಸಂಗತಿ ಅಂದರೆ ಈ ಮಿಲಿಟರಿ ಆಸ್ಪತ್ರೆಗೆ ಒಂದು ರೈಲು ಸೇವೆ ಇದ್ದದ್ದು. ಗಾಯಗೊಂಡ ಸೈನಿಕರನ್ನು ಈ ರೈಲು ಹೊತ್ತು ತರುತ್ತಿತ್ತು ಮತ್ತು ಇದಕ್ಕೆ ಬರ್ಮಾ ಟ್ರೈನ್ ಎನ್ನುವ ಹೆಸರಿತ್ತು. ನ್ಯಾರೋ ಗೇಜಿನ ರೈಲು ನಿಧಾನಕ್ಕೆ ಬರುತ್ತಿತ್ತು, ನಮ್ಮ ಅಜ್ಜಿ ತಾತ ಅದರಲ್ಲಿನ ಸೈನಿಕರಿಗೆ ಹಾಲು ಮೊಸರು ತರಕಾರಿ ಮಾರುತ್ತಿದ್ದರು. ಸೈನಿಕರು ಪ್ರೀತಿಯಿಂದ ಅವರು ಉಪಯೋಗಿಸಲು ಇಟ್ಟು ಕೊಂಡಿರುತ್ತಿದ್ದ ಬ್ರಾಂದಿ ಬಾಟಲು ಕೊಡುತ್ತಿದ್ದರು ಎಂದು ಅಲ್ಲಿನ ಅಜ್ಜನ ವಯಸ್ಸಿನವರು ಕೆಲವರು ಹೇಳುತ್ತಿದ್ದರು. ಇವರ ಮಾತಿಗೆ ಪುರಾವೆಯ ಹಾಗೆ ಬೊಮ್ಮಸಂದ್ರ ಹಳ್ಳಿಯ ನಡುವೆ ರೈಲು ಹಳಿ ಕಾಣಿಸುತ್ತಿತ್ತು.
ವುಂಡೆಡ್ ಸೋಲ್ಜರ್‌ಗಳು ಈ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರ ಹೆಸರು ಇನ್ಪಿರಿಯಲ್ ಮಿಲಿಟರಿ ಕಮಾಂಡ್ ಹಾಸ್ಪಿಟಲ್ ಅಂತ ಇತ್ತಂತೆ. ಅದರ ಪಕ್ಕದಲ್ಲಿ ಬಲಕ್ಕೆ ತಿರುಗಿದರೆ ರಾಮಚಂದ್ರ ಪುರಕ್ಕೆ ರಸ್ತೆ. ಈ ರಾಮಚಂದ್ರಪುರ ಹೆಸರು ಕೇಳಿದಾಗಲೆಲ್ಲ ನನಗೆ ರಾಜಾಜಿನಗರದ ಪಕ್ಕದ ರಾಮಚಂದ್ರ ಪುರ ನೆನಪಿಗೆ ಬರುತ್ತಿತ್ತು. ಶಿವಮೊಗ್ಗ ಹತ್ತಿರದ ರಾಮಚಂದ್ರ ಪುರದ ಮಠ ನೋಡಿದ ನಂತರ ಅದೂ ಸೇರ್ಪಡೆ ಆಯಿತು.
ಇನ್ನೊಂದು ಕುತೂಹಲದ ಕತೆ ಅಂದರೆ ಐದನೇ ದಶಕದ ಮಧ್ಯಭಾಗದ್ದು. ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಕೇಳಿದ್ದು. BEL ಸರ್ಕಲ್ ದಾಟಿ ಎಡಕ್ಕೆ ಬಂದರೆ ಒಂದು ದೊಡ್ಡ ವಿಶಾಲವಾದ ನೆರಳು ಇದ್ದ ಮರ. ಅದರ ಎದುರಿನ ರಸ್ತೆ ನೇರ ಕಾರ್ಖಾನೆ ಪ್ರವೇಶದ್ವಾರ ಸೇರುತ್ತಿತ್ತು. ಇಲ್ಲಿ ಒಬ್ಬರು ಮೆಡಿಕಲ್ ಆಫೀಸರು ಕುರ್ಚಿ ಹಾಕಿ ಕೂತಿರುತ್ತಿದ್ದರು, ಎದುರಿಗೇ ಟೇಬಲ್. ರಸ್ತೆಯಲ್ಲಿ ಓಡಾಡುವ ಸುತ್ತಲಿನ ಹಳ್ಳಿಯ ಯುವಕರನ್ನು ಕೆಲಸಕ್ಕೆ ನೇಮಕ ಮಾಡುವ ಕೆಲಸದ ರುಚಿ ಹತ್ತಿಸುವ ಕೆಲಸ ಅದು. ಸರ್ಟಿಫಿಕೇಟು ಇಲ್ಲದೇ ಬರೀ ಆಕಾರ ಎತ್ತರ ದಪ್ಪ ನೋಡಿ ಕೆಲಸಕ್ಕೆ ತೆಗೆದುಕೊಳ್ಳುವ ವ್ಯವಸ್ಥೆ!
ಹಿಂದೆ ಈ ವ್ಯವಸ್ಥೆ ಇತ್ತು ಅಂತ ಕತೆ. ನಮಗಿಂತ ಸೀನಿಯರ್ ಕೆಲವರನ್ನು ನೋಡಿದಾಗ ಇದು ನಿಜ ಇರಬಹುದು ಅನಿಸಿತ್ತು! ಈಗ ಅದರ ಬಗ್ಗೆ..
ಒಬ್ಬರು ರಾಜು ಅಂತ ಹಿರಿಯರು ಇದ್ದರು. ಅವರ ಹೆಂಡತಿ ಮತ್ತು ಆಕೆಯ ತಂಗಿಯರು, ರಾಜು ಅವರ ಮೂರು ಜನ ತಮ್ಮಂದಿರು ಕೆಲಸದಲ್ಲಿದ್ದರು. ರಾಜುಗಿಂತ ಮೊದಲು ಅವರ ತಮ್ಮಂದಿರು ರಿಟೈರ್ ಆದರೆ ರಾಜು ಹೆಂಡತಿ ರಾಜುಗೆ ಮೊದಲು ರಿಟೈರ್, ಅವರ ತಂಗಿಯರು ಅವರಿಗಿಂತ ಮೊದಲು…! ವಿದ್ಯಾರಣ್ಯಪುರದ ಮನೆ ಆಗಿ ಅಲ್ಲಿ ವಾಸ ಶುರು ಆದ ಹೊಸದರಲ್ಲಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಮನೇಲಿ ಯಾರೋ ಹಿರಿಯರ ತಿಥಿ ಅವತ್ತು. ಮನೇಲಿ ನಾಲ್ಕು ಜನ ಅಣ್ಣತಮ್ಮಂದಿರು. ಹಿರಿಯ ಅಣ್ಣನ ಮನೆಗೆ ನಾನು ಹೋಗಿದ್ದು. ಅವರು ತಮಿಳರು, ತಮ್ಮಂದಿರು ತಮಿಳುನಾಡಿನಿಂದ ಬಂದಿದ್ದರು, ಈ ತಿಥಿಗೆ. ಹಿರಿಯ ಒಳಗಿದ್ದ. ಮೂರು ಜನ ಆಚೆ ಕೂತಿದ್ದರು. ಪರಿಚಯ ಆಯ್ತು ಅವರೆಲ್ಲಿ ಕೆಲಸ ಅದು ಇದು ವಿಚಾರಿಸಿದೆ. ನಮ್ಮ ಅಣ್ಣ ಇವನು ಇನ್ನೂ ರಿಟೈರ್ ಆಗಿಲ್ಲ, ನಾವೆಲ್ಲ ರಿಟೈರ್ ಆಗಿ ಆಗಲೇ ಮೂರು ನಾಲ್ಕು ವರ್ಷ ಆಯ್ತು. ಅವನ ಸರ್ಟಿಫಿಕೇಟ್ ತಿದ್ದಿದ್ದಾನೆ ಅಂತ ಅವರು ಪಿಸುಮಾತಿನಲ್ಲಿ ಅಣ್ಣನ ಬಗ್ಗೆ ಹೇಳಿದರು! ಸುಳ್ಳುವಯಸ್ಸು, ದಾಖಲೆ ತಿದ್ದೋದು.. ಇವೆಲ್ಲಾ ಅಂದಿನ ಕರಾಮತ್ತುಗಳು…!
ಈಗ ನಾಗಾಲ್ಯಾಂಡ್ ಸರ್ಕಲ್‌ಗೆ ಬರ್ತೇನೆ. BEL ಕಾರ್ಖಾನೆ ಶುರು ಆದಾಗ ಅದರ ಹೆಸರು ರೇಡಿಯೋ ಎಲೆಕ್ಟ್ರಿಕ್ ಕಂಪೆನಿ. ಇಲ್ಲಿನ ಕಾರ್ಖಾನೆಯ ಪೂರ್ವಭಾವಿ ಕಾರ್ಯಗಳಿಗೆ ಫ್ರೆಂಚ್ ಇಂಜಿನಿಯರುಗಳು ನಿಯೋಜಿತರಾಗಿದ್ದರು. ಇಂಡಿಯಾ ಹಾವುಗಳ ದೇಶ ಎನ್ನುವ ಕತೆ ಕೇಳಿದ್ದವರು ಅವರು. ತಲೆ ತುಂಬಾ ಆ ಭಯ ತುಂಬಾ ಹೋಗಿತ್ತು. ಕಾರ್ಖಾನೆಗೆ ಗುರುತಿಸಿದ್ದ ಸ್ಥಳ ಕಾಡು ಪ್ರದೇಶ. ಪ್ರತಿನಿಮಿಷ ಇವರಿಗೆ ಹಾವುಗಳು ದರ್ಶನ ಆಗುತ್ತಿತ್ತು. ಒಂದು ರೀತಿ ಜೀವಭಯ ಆವರಿಸಿತ್ತು. ಬೇರೆ ದೇಶದಿಂದ ಅದೆಷ್ಟೋ ಸಾವಿರ ಮೈಲಿ ದೂರದಿಂದ ಬಂದು ಹೆಂಡತಿ ಮಕ್ಕಳು ಅಲ್ಲೆಲ್ಲೋ ಇರಬೇಕಾದರೆ ಇಲ್ಲಿ ಹಾವಿನ ಕೈಲಿ ಕಚ್ಚಿಸಿಕೊಂಡು ಸಾಯುವುದು ಎಂದರೆ…!
ಅವರಲ್ಲೇ ಒಬ್ಬ ಒಂದು ಪ್ಲಾನ್ ಮಾಡಿದ. ಸುತ್ತಲಿನ ಹಳ್ಳಿಯವರಿಗೆ ಹಾವು ಸಾಯಿಸುವ ಸಲಹೆ ಕೊಟ್ಟ. ಹಳ್ಳಿಯವರು ಅದು ನಾಗಪ್ಪ, ದೇವರು. ಅದನ್ನು ಸಾಯಿಸಿದರೆ ಪಾಪ ಬರ್ತದೆ ಅಂದರು. ಇವನು ತಲೆಮೇಲೇ ಕೈ ಹೊತ್ತು ಕುಳಿತ. ಸರಿ ಇವನ ಪಾಡು ನೋಡದೇ ಮತ್ತೊಬ್ಬರು ಒಂದು ಐಡಿಯ ಕೊಟ್ಟರು.
ಹಾವು ಸಾಯಿಸಿ ತಂದರೆ ಒಂದು ಹಾವಿಗೆ ಇಷ್ಟು ಕಾಸು ಕೊಡಲಾಗುತ್ತೆ. ಹಾವಿನ ಸಂಸ್ಕಾರ ಮಾಡಲಾಗುತ್ತೆ.. ಅಂತ ಹಳ್ಳಿಯವರಿಗೆ ಹೇಳಿದ. ಪ್ರತಿ ದಿವಸ ಸಂಜೆ ಆಗುತ್ತಿದ್ದ ಹಾಗೇ ಹಳ್ಳಿಯವರು ಗೋಣಿ ಚೀಲದಲ್ಲಿ ಸತ್ತ ಹಾವು ತರೋದು. ಅದನ್ನು ಎಣಿಸಿ ಒಂದು ಗುಂಡಿಯಲ್ಲಿ ಹಾಕೋದು ನಡೆಯಿತು. ಒಂದು ಹಾವಿಗೆ ಎರಡು ರುಪಾಯಿ ಅಂತ ಪಾವತಿ ಸಹ ಆಯಿತು. ಆಗ ಇನ್ನೂ ಪರಿಸರವಾದಿಗಳು ಹುಟ್ಟಿರಲಿಲ್ಲ. ಹಾವು ಕಂಡರೆ ಸಾಕು ಸಾಯಿಸು ಎನ್ನುವ ಮೈಂಡ್ ಸೆಟ್ ಎಲ್ಲರದ್ದೂ. ಹಾವಿನ ಮಾರಣಹೋಮ ನಡೆಯಿತಂತೆ.
ಹಾವುಗಳು ಜೀವ ಉಳಿಸಿಕೊಳ್ಳಲು ಪಕ್ಕದ ನರಸೀಪುರ ಮತ್ತು ಅದರ ಸುತ್ತ ಮುತ್ತ ವಲಸೆ ಹೋದವು. ಎಪ್ಪತ್ತು ಎಂಬತ್ತರ ದಶಕದಲ್ಲಿ ಈ ನರಸೀಪುರದಲ್ಲಿ ಹೆಚ್ಚಿನ ಹಾವುಗಳು ಇದ್ದವು. ನರಸೀಪುರ ಎನ್ನುವ ಹೆಸರು ಚೆನ್ನಾಗಿಲ್ಲ ಎಂದು ಇಲ್ಲಿ ಬಡಾವಣೆ ಮಾಡಿದಾಗ ನಿವೇಶನ ಕೊಂಡ ಕೆಲವರಿಗೆ ಅನಿಸಿತು. ಆಗ ಹಳೇ ಹೆಸರು ಬದಲಾಯಿಸಬಾರದು ಎನ್ನುವ ತಿಂಕರ್ಸ್ ಇನ್ನೂ ಹುಟ್ಟಿರಲಿಲ್ಲ. ನರಸೀಪುರ ನಿಧಾನಕ್ಕೆ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ಕಾರಣ ಆಗಿದ್ದ ವಿದ್ಯಾರಣ್ಯರ ಹೆಸರಿನಲ್ಲಿ ವಿದ್ಯಾರಣ್ಯಪುರ ಆಯಿತು. ಹಾವುಗಳು ನಂತರವೂ ಈ ಕಾರ್ಖಾನೆಯ ಸುತ್ತ ಮುತ್ತ ಓಡಾಡುತ್ತಿದ್ದವು. ಇದೇ ವೇಳೆಗೆ ಕೇರಳದಿಂದ ಗುಂಪು ಗುಂಪಾಗಿ ಬಂದ ಕೆಲಸಗಾರರು ಕಾರ್ಖಾನೆ ಸೇರಿದ್ದರು. ಅವರಿಗೆ ವಸತಿ ಗೃಹಗಳನ್ನು ಕಾರ್ಖಾನೆಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿತ್ತು. ಎರಡೂ ಜಾಗಗಳನ್ನೂ ಬೇಗ ಗುರುತು ಹಿಡಿಯುವ ಸಲುವಾಗಿ ಹಾವುಗಳು ಇದ್ದ ಜಾಗ ನಾಗಾಲ್ಯಾಂಡ್ ಹೆಸರು ಪಡೆಯಿತು. ಅಲ್ಲಿನ BMTC ಬಸ್ ಸ್ಟಾಪ್ ಮುಂದೆ ಈಗಲೂ ನಾಗಾಲ್ಯಾಂಡ್ ಹೆಸರೇ ಇದೆ. ಈ ವೃತ್ತಕ್ಕೆ BEL ನ ಹಿರಿಯ ಅಧಿಕಾರಿಯಾಗಿದ್ದ ಶ್ರೀ ಬೀವಿ ಬಾಳಿಗಾ ಅವರ ಹೆಸರು ಈಗೊಂದು ಇಪ್ಪತ್ತು ವರ್ಷದ ಹಿಂದೆ ಇಟ್ಟಿದ್ದರೂ ಈಗಲೂ ಅದು ಸ್ಥಳೀಯರ ಬಾಯಲ್ಲಿ ನಾಗಾಲ್ಯಾಂಡ್ ಎಂದೇ ಕರೆಸಿಕೊಳ್ಳುತ್ತದೆ. ಅಪ್ಪಿ ತಪ್ಪಿ BMTC ಕಂಡಕ್ಟರ್ ಬಳಿ ನೀವು ಬಾಳಿಗಾ ಸರ್ಕಲ್‌ಗೆ ಟಿಕೆಟ್ ಕೊಡಿ ಎಂದರೆ ಕಕ್ಕಾಬಿಕ್ಕಿ ಆಗುತ್ತಾರೆ. ಅದೇ ರೀತಿ ರಿಕ್ಷಾ ಡ್ರೈವರ್‌ಗಳು ಸಹ.
ಹಾವುಗಳನ್ನು ಸಾಯಿಸಿದ ಕತೆಗೆ ಒಂದು ಹೊಸ ಲಾಜಿಕಲ್ ತಿರುವು ಬಂದಿದ್ದು ಅದು ಈಗಲೂ ನಮ್ಮ ವ್ಯವಸ್ಥೆ ಬಗ್ಗೆ ಅಭಿಮಾನ ಮೂಡಿಸುತ್ತದೆ! ಸತ್ತ ಹಾವುಗಳ ಲೆಕ್ಕ ಹಾಕಿ ಅದಕ್ಕೆ ದುಡ್ಡು ಕೊಟ್ಟರು ತಾನೇ. ಇದನ್ನು ಒಂದು ದಫ್ತರದಲ್ಲಿ ನಮೂದಿಸಿ ವಾರ್ಷಿಕ ಆಡಿಟ್‌ಗೆ ಒಪ್ಪಿಸಿದರು. ಮಿಕ್ಕ ಎಲ್ಲಾ ಲೆಕ್ಕಗಳಿಗೆ ನೋಟ್ ಬಂದ ಹಾಗೆ ಇದಕ್ಕೂ ಆಗಿನ ಪರಿಶೋಧಕ ತಜ್ಞ ಒಂದು ಕಾಮೆಂಟ್ ಹಾಕಿದ್ದ..
ಒಂದು ಸತ್ತ ಹಾವಿಗೆ ಎರಡು ರುಪಾಯಿ ಎಂದು ನಿಷ್ಕರ್ಷೆ ಮಾಡಿ ಪಾವತಿ ಮಾಡಿರುವುದು ಭಾರತದ ಆರ್ಥಿಕ ಮಾನಗಳಿಂದ ಗಮನಿಸಿದರೆ ತುಂಬಾ ಹೆಚ್ಚು. ಸಂಬಂಧ ಪಟ್ಟವರು ತಮ್ಮ diligence ಉಪಯೋಗಿಸಬೇಕಿತ್ತು… ಅಂತ!
ಮುಂದುವರೆಯುವುದು…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನವಿರಾದ ಹಾಸ್ಯ.
ಶ್ರೀ ಅನಂತ್ ಅವರೇ ಧನ್ಯವಾದಗಳು