ಕೋಣೆಯೊಳಗೆ ಅತ್ತಿಂದಿತ್ತ ಓಡಾಡಲು ಒಂದಿಷ್ಟು ಜಾಗ ಮತ್ತು ಹೊರಗಿನಿಂದ ಊಟ ಕೊಡಲು ಉಕ್ಕಿನ ಬಾಗಿಲಿನಲ್ಲಿ ಅಂಗೈ ಅಗಲದ ಕಿಂಡಿ. ಇಷ್ಟಲ್ಲದೆ ಉರುಳುವ ಗಂಟೆಗಳು ಸುಮ್ಮನೆ ಅವನನ್ನು ಸುತ್ತಿ ಚಿಂದಿ ಮಾಡುವುದನ್ನು ತಪ್ಪಿಸಿ, ಬೇರೆ ಕಡೆ ದೃಷ್ಟಿ ಹರಿಸುವಂತೆ ಮಾಡಲು ಸದಾ ಕಾಲ ಆನ್ ಆಗಿಯೇ ಇರುವ ಟೀವಿ. ಅದೇ ಅವನ ಸಂಗಾತಿ. ಉಳಿದಂತೆ ಆಗಾಗ ಹೊರಗೆಲ್ಲೋ ದೂರದಿಂದ ಅವನಿಗೆ ಆಗಾಗ ವಾಹನಗಳ ಓಡಾಟ ಇತ್ಯಾದಿಗಳ ಶಬ್ದ. ಬಂಧಿತನಾದ ದೇಸುಗೆ ತನಗೆ ಒದಗಿದ ಈ ಸ್ಥಿತಿಗೆ ಕಾರಣವೇನು ಎನ್ನುವುದು ಸುತರಾಂ ಗೊತ್ತಿರುವುದಿಲ್ಲ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼ ಸರಣಿಯಲ್ಲಿ ಸೌತ್ ಕೊರಿಯಾದ ʻಓಲ್ಡ್‌ಬಾಯ್ʼ ಚಲನಚಿತ್ರದ ವಿಶ್ಲೇಷಣೆ
ಆ ದಿನ ದೇಸು ಮಗಳ ಹುಟ್ಟುಹಬ್ಬ. ಅವಳ ಮನಸ್ಸು ಗರಿಗೆದರಿ ಹಾರಲಿ ಎಂಬ ಭಾವನೆಯಿಂದ ಗರಿಗಳಿರುವ ಉಡುಗೊರೆಯನ್ನು ಅವಳಿಗೋಸ್ಕರ ದೇಸು ಕೊಂಡಿರುತ್ತಾನೆ. ಅದನ್ನು ಅವಳಿಗೆ ಕೊಡುವುದಕ್ಕಿಂತ ಮುಂಚೆ ಮಾಡುವ ಕೆಲಸ ಗೆಳೆಯರೊಂದಿಗೆ ಕುಡಿತ. ಕುಡಿದದ್ದು ಅಲ್ಪಸ್ವಲ್ಪವಲ್ಲ ಮೈ ಮರೆಯುವಷ್ಟು. ಅದರಿಂದಾಗಿ ಅಲ್ಲಿ ಗಲಭೆ. ರೆಪ್ಪೆ ಮಿಟುಕಿಸುವಷ್ಟರಲ್ಲಿ ಅಲ್ಲಿಗೆ ಪೊಲೀಸರು ಹಾಜರು. ಅವನಿಗೆ ಕೋಳ ಹಾಕಿ ನಿಶೆ ಸ್ವಲ್ಪ ಕಡಿಮೆ ಮಾಡುತ್ತಾರಷ್ಟೆ. ಅವನ ಬಿಡುಗಡೆಗೆ ಸ್ನೇಹಿತರು ಪ್ರಯತ್ನ ಪಡುತ್ತಿರುವಂತೆಯೇ ಪೋಲೀಸರು ಅವನನ್ನು ಕೊಂಡೊಯ್ಯುತ್ತಾರೆ. ಅವನಿಗೆ ಎಚ್ಚರಿಕೆಯಾದಾಗ ಕೋಣೆಯೊಂದರಲ್ಲಿ ಬಿದ್ದಿರುತ್ತಾನೆ. ಕ್ರಮೇಣ ಅವನಿಗೆ ಬಂಧಿ ಆಗಿರುವುದು ಅರ್ಥವಾಗುತ್ತದೆ. ಯಾರು ತನ್ನನ್ನು ತಂದು ಇಲ್ಲಿಗೆ ಹಾಕಿರೋದು ಎಂದು ಅಬ್ಬರಿಸುತ್ತಾನೆ. ಅವನ ಬೊಬ್ಬೆಗೆ ಉತ್ತರ ಸೊನ್ನೆ.
ಪಾರ್ಕ್ ಚನ್ ವೂಕ್ ನಿರ್ದೇಶನದ ʻಓಲ್ಡ್ ಬಾಯ್ʼ(2003) ಚಿತ್ರದ ಪ್ರಾರಂಭದ ನಿರೂಪಣೆಯ ಈ ಭಾಗ ನಾವು ಚಿತ್ರ ಈಗಷ್ಟೇ ಶುರುವಾಯಿತಲ್ಲ ಎಂದುಕೊಳ್ಳುತ್ತಿರುವಂತೆಯೇ ಈ ಭಾಗದ ಕಥನ ಮುಗಿದಿರುತ್ತದೆ. ಕೆಲವು ನಿಮಿಷಗಳು ಪಟಪಟನೆ ಪುಟ ತಿರುಗಿಸಿದ ಹಾಗೆ. ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಮನಸ್ಸು ಕಣ್ಣುಗಳ ಗಮನ ಹೊರಳಿಸುತ್ತಾ ನಮ್ಮನ್ನು ಆಕ್ರಮಿಸಿಕೊಳ್ಳುತ್ತದೆ. ಇಷ್ಟು ವೇಗದಲ್ಲಿ ಕಥನದ ನಿರೂಪಣೆ ಇರುವಂತಾದರೆ ಮುಂದಿನದರ ಬಗ್ಗೆ ಸೋಜಿಗದ ಪದರು ಮನಸ್ಸಿಗೆ ಅಂಟಿಕೊಳ್ಳುತ್ತದೆ. ಮುಷ್ಟಿಯಲ್ಲಿ ಹಿಡಿದಿದ್ದನ್ನು ದಿಢೀರನೆ ತೆರೆದು, ಇಗೋ ನೋಡಿ ಎಂದು ತೋರಿಸುವ ಪಾರ್ಕ್ ಚನ್ ವೂಕನ ನಿರೂಪಣಾ ವಿಧಾನದ ಗತಿಯೇ ಇಂಥದ್ದು. ಈ ಬಗೆಯ ನಿರೂಪಣೆಯನ್ನು ಅವನು ಈ ಮೊದಲಿನ ʻಸಿಂಪತಿ ಫಾರ್ ವೆಂಜನ್ಸ್ʼ ಎನ್ನುವ ಚಿತ್ರದಲ್ಲಿ ಪರಿಚಯ ಮಾಡಿಸಿದ್ದಾನೆ.
ಕೋಣೆಯೊಳಗೆ ಅತ್ತಿಂದಿತ್ತ ಓಡಾಡಲು ಒಂದಿಷ್ಟು ಜಾಗ ಮತ್ತು ಹೊರಗಿನಿಂದ ಊಟ ಕೊಡಲು ಉಕ್ಕಿನ ಬಾಗಿಲಿನಲ್ಲಿ ಅಂಗೈ ಅಗಲದ ಕಿಂಡಿ. ಇಷ್ಟಲ್ಲದೆ ಉರುಳುವ ಗಂಟೆಗಳು ಸುಮ್ಮನೆ ಅವನನ್ನು ಸುತ್ತಿ ಚಿಂದಿ ಮಾಡುವುದನ್ನು ತಪ್ಪಿಸಿ, ಬೇರೆ ಕಡೆ ದೃಷ್ಟಿ ಹರಿಸುವಂತೆ ಮಾಡಲು ಸದಾ ಕಾಲ ಆನ್ ಆಗಿಯೇ ಇರುವ ಟೀವಿ. ಅದೇ ಅವನ ಸಂಗಾತಿ. ಉಳಿದಂತೆ ಆಗಾಗ ಹೊರಗೆಲ್ಲೋ ದೂರದಿಂದ ಅವನಿಗೆ ಆಗಾಗ ವಾಹನಗಳ ಓಡಾಟ ಇತ್ಯಾದಿಗಳ ಶಬ್ದ. ಬಂಧಿತನಾದ ದೇಸುಗೆ ತನಗೆ ಒದಗಿದ ಈ ಸ್ಥಿತಿಗೆ ಕಾರಣವೇನು ಎನ್ನುವುದು ಸುತರಾಂ ಗೊತ್ತಿರುವುದಿಲ್ಲ. ಇದರ ಜೊತೆಗೆ ಎಷ್ಟು ದಿನ ಹೀಗೆ ಬಿದ್ದಿರಬೇಕಾಗುತ್ತದೆ ಎನ್ನುವುದೂ ಕೂಡ. ಎಲ್ಲವೂ ಅವನಿಗೆ ಕಗ್ಗಂಟು. ಪ್ರಾರಂಭದಲ್ಲಿ ಅವನು ದಿನಗಳನ್ನು ಎಣಿಸುವುದು ಬಿಡುಗಡೆಯ ನಿರೀಕ್ಷೆಯಿಂದ, ಕಾತರದಿಂದ. ಹೊರಗಿನ ಬೆಳಕಿಗೆ, ಗಾಳಿಗೆ, ಮನುಷ್ಯರ ಮುಖ ದರ್ಶನದ ಹಂಬಲ. ಇದರೊಂದಿಗೆ ಬದಲಾವಣೆಯನ್ನು ನೋಡುವ ಕಾತರದಿಂದ ಅವನ ಮೈ ಬಿಗಿಯಾಗುತ್ತದೆ. ಅವನು ಪರಿಹಾರದ, ಉತ್ತರದ ನಿರೀಕ್ಷೆಯಲ್ಲಿ ಇರುವಂತೆಯೇ ದಿನಗಳು ಉರುಳುತ್ತವೆ. ಅವನು ಅಬ್ಬರಿಸುವ ಗ್ರಾಫ್ ಏರುತ್ತಲೇ ಇರುತ್ತದೆ. ಪ್ರತಿಫಲವೆಲ್ಲ ಬರಿದು. ಏನೂ ದೊರಕುವುದಿಲ್ಲ. ಎಲ್ಲ ವ್ಯರ್ಥ. ಅವನ ಮನಸ್ಸಿನಲ್ಲಿ ಕಪ್ಪನೆಯ ಪದರುಗಳು ಹಬ್ಬಲು ಪ್ರಾರಂಭವಾಗುತ್ತದೆ. ಒದಗಿದ ಪರಿಸ್ಥಿತಿಯಿಂದ ಬಿಡುಗಡೆಯ ಸೂಚನೆ ಸಿಕ್ಕುವುದಿಲ್ಲ. ದಿನಗಳಾಯಿತು, ತಿಂಗಳುಗಳಾಯಿತು. ಅವನು ಸುಮ್ಮನೇ ಅವನೆಲ್ಲವನ್ನು ಕೂಡುತ್ತ ಒದ್ದಾಡುವುದಷ್ಟೆ. ಇದೇ ಮುಂದುವರಿಯುತ್ತಿರುವಾಗ ಕೆಂಡದ ಕುಂಡದಲ್ಲಿ ಬಿದ್ದವನ ಹಾಗೆ ಬಿದ್ದೆದ್ದು ಒದರುತ್ತಾನೆ, ಉಕ್ಕಿನ ಬಾಗಿಲು ಗುರುಗುಟ್ಟಿ ಅದರುವ ಹಾಗೆ ಮುಷ್ಟಿಯಿಂದ ಇನ್ನಷ್ಟು ಮತ್ತಷ್ಟು ಚಚ್ಚುತ್ತಾನೆ. ಕಾಲಿನಿಂದ ಜಾಡಿಸುತ್ತಾನೆ. ಜೊತೆಗೆ ಅಲ್ಲಿದ್ದ ಗ್ಲಾಸಿನ ಪದಾರ್ಥಗಳೆಲ್ಲ ಚೂರುಚೂರಾಗಿ ಹಾರಾಡುವಂತೆ ಮಾಡುತ್ತಾನೆ. ಇಲ್ಲ, ಅವನ ಗೋಳಾಟ, ಒದ್ದಾಟ, ಪರಿಶ್ರಮಕ್ಕೆಲ್ಲ ಸೋಲು. ಯಾವ ರೀತಿಯ ಪರಿಹಾರ ದೊರಕುವುದಿಲ್ಲ. ವರ್ಷಗಳು ಉರುಳುತ್ತವೆ. ಬೆರಳು ಮಡಿಸುತ್ತ ಎಣಿಸುವುದಕ್ಕೆ ಹೋದರೆ, ಹತ್ತೂ ಬೆರಳುಗಳು ಸಾಕಾಗುವುದಿಲ್ಲ. ಮತ್ತೆ ಅಂಗೈ ಅಗಲಿಸಿ ಮುಂದುವರಿಸಿದರೆ ಈಗ ಐದಕ್ಕೆ ಮುಕ್ತಾಯ. ಅಂದರೆ ಎಲ್ಲ ಕೂಡಿ ಹದಿನೈದು ವರ್ಷಗಳು! ಈ ಅವಧಿಯ ಮುಕ್ತಾಯದ ಮೊದಲು ಟೀವಿಯಲ್ಲಿ ಅವನಿಗೆ ಸುದ್ದಿಗಳು ಕೇಳುತ್ತವೆ. ತಾನು ಹೆಂಡತಿಯನ್ನು ಕೊಲೆ ಮಾಡಿ ಯಾರಿಗೂ ಸಿಗದೇ ಹೋಗಿರುವುದಾಗಿ. ಇಷ್ಟಲ್ಲದೆ ಜೊತೆಗೆ ಮಗಳು ಕಾಣೆಯಾಗಿದ್ದಾಳೆ ಎನ್ನುವ ಸಂಗತಿಯೂ ಸಹ. ಜೊತೆಗೆ ಇತರ ಸುದ್ದಿಗಳು. ದಕ್ಷಿಣ ಕೊರಿಯಾಗೆ ಸಂಬಂಧಿಸಿದಂತೆ ಜರಗುವ ರಾಜಕೀಯ ಬದಲಾವಣೆಗಳು ಮುಂತಾದವು. ಅವನಿಗೆ ಬೇಡದಿದ್ದರೂ ಬಿತ್ತರಗೊಳ್ಳುತ್ತಲೇ ಇರುತ್ತವೆ.
ಹದಿನೈದು ವರ್ಷ ಪೂರ್ಣಗೊಂಡಂತೆ ಅವನಿದ್ದ ರೂಪ ಸಂಪೂರ್ಣ ಬದಲು. ಮುಖದ ಚರ್ಮವೆಲ್ಲ ಕಾವಲಿಯ ಮೇಲೆ ಹಾಕಿ ರೋಸ್ಟ್ ಮಾಡಿದಂತೆ, ಕಣ್ಣುಗಳು ಬೆಂಕಿಯ ಕೊಳ್ಳಿಗಳಂತೆ. ಇನ್ನು ತಲೆಗೂದಲೋ, ಕರಡಿಯದೆನ್ನುವ ಹಾಗೆ. ಬಂಧಿಯಾಗಿದ್ದ ಅವಧಿಯಲ್ಲಿ ಕೈ ಮೇಲೆಲ್ಲ ಟ್ಯಾಟೂ ಹಾಕಿಕೊಂಡವನಂತೆ ಗೀರಿಕೊಂಡಿರುತ್ತಾನೆ. ಇತರರಿಂದ ಉಂಟಾದ ಹಿಂಸೆಯನ್ನು ತಾನೇ ಮಾಡಿಕೊಳ್ಳುವ ಹಿಂಸೆಯಿಂದ ಎದುರಿಸುವ ವಿಪರ್ಯಾಸದ ಹಾಗೆ.
ಹದಿನೈದು ವರ್ಷದ ನಂತರ, ಹೇಗೆ ಅವನು ತಿಳಿಯದೆ ಬಂಧಿಯಾಗಿದ್ದನೋ ಅದೇ ಬಗೆಯಲ್ಲಿ ಮತ್ತೊಂದು ಕಡೆ ದೊಡ್ಡ ಪೆಟ್ಟಿಗೆಯಲ್ಲಿ ಬಿದ್ದಿರುತ್ತಾನೆ. ಅದರಿಂದ ಹೊರಗೆ ಬಂದಾಗಷ್ಟೇ ಅವನಿಗೆ ಅರಿವಾಗುವುದು ತನ್ನ ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರ. ದಿಢೀರನೆ ಎದುರಿಗೆ ಕಂಡ ಮನುಷ್ಯನೊಬ್ಬನ ಮೈ ಮುಖವನ್ನೆಲ್ಲ ಸ್ಪರ್ಶಿಸಿ ಇನ್ನೊಬ್ಬನನ್ನು ಕಾಣುತ್ತಿದ್ದೇನೆ. ಇದು ನಿಜವಷ್ಟೇ ಎಂದು ಉದ್ವಿಗ್ನಗೊಳ್ಳುತ್ತಾನೆ. ತನ್ನ ಮೈಯನ್ನೇ ಮುಟ್ಟಿ ಪರೀಕ್ಷಿಸಿಕೊಳ್ಳುತ್ತಾನೆ. ಸಂತೋಷ, ಗಾಬರಿ ಆವರಿಸಿದ ಅವನು ತನ್ನ ಮುಖ ಅವನ ಮುಖವನ್ನು ಸ್ಪರ್ಶಿಸಿ ಮರೆತುಹೋದ ಸ್ಪರ್ಶದ ಅನುಭವವನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಾನೆ. ಇವನ ಈ ಉದ್ವೇಗಭರಿತ ವರ್ತನೆಗೆ ಸಿಕ್ಕಿಹಾಕಿಕೊಂಡವನಿಗೆ ಹೇಳತೀರದಷ್ಟು ಭಯ. ಸಹಜವಾಗಿಯೇ ಅವನು ತೊಡಗಿಕೊಳ್ಳುವ ವರ್ತನೆಗೆ ಯಾರೂ ಸಿಕ್ಕಿಹಾಕಿಕೊಳ್ಳುವುದು ಬೇಡ ಎನಿಸುವ ಹಾಗಿರುತ್ತದೆ. ನಿರ್ದೇಶಕ ಇವುಗಳನ್ನು ಅಗತ್ಯ ಕಂಡ ಕಡೆ, ಮುಖ್ಯವಾಗಿ ಸ್ಪರ್ಶದ ಸಂಗತಿ ಬಂದಾಗ, ಅತಿ ಸಮೀಪ ಚಿತ್ರಿಕೆಗಳಲ್ಲಿ ಚಿತ್ರಿಸಿದ್ದಾನೆ.
ಇಷ್ಟು ವೇಗದಲ್ಲಿ ಕಥನದ ನಿರೂಪಣೆ ಇರುವಂತಾದರೆ ಮುಂದಿನದರ ಬಗ್ಗೆ ಸೋಜಿಗದ ಪದರು ಮನಸ್ಸಿಗೆ ಅಂಟಿಕೊಳ್ಳುತ್ತದೆ. ಮುಷ್ಟಿಯಲ್ಲಿ ಹಿಡಿದಿದ್ದನ್ನು ದಿಢೀರನೆ ತೆರೆದು, ಇಗೋ ನೋಡಿ ಎಂದು ತೋರಿಸುವ ಪಾರ್ಕ್ ಚನ್ ವೂಕನ ನಿರೂಪಣಾ ವಿಧಾನದ ಗತಿಯೇ ಇಂಥದ್ದು.
ಬಿಡುಗಡೆ ಹೊಂದಿದ ಮೊದಲ ಕ್ಷಣಗಳ ನಂತರ ಅವನಿಗೆ ಹಸಿವಿನ ಸಂಕಟ ಅರಿವಾಗುತ್ತದೆ. ದಾಪುಗಾಲು ಹಾಕುತ್ತ ಕಂಡ ಹೋಟೆಲಿಗೆ ನುಗ್ಗುತ್ತಾನೆ ಅಲ್ಲಿ ಕೌಂಟರಿನಲ್ಲಿ ಸೌಮ್ಯ ಮುಖದ ಮಿಡೊ ಗ್ರಾಹಕರಿಗೆ ಕೇಳುವ ಪರಿಪಾಠದಲ್ಲಿ ಅವನನ್ನು ಮಾತನಾಡಿಸುತ್ತಾಳೆ. ಅವಳು ಹೇಳುವ ಯಾವುದನ್ನೂ ಅವನು ಬಯಸುವುದಿಲ್ಲ. ನಾನು ಜೀವವಿರುವುದನ್ನು ತಿನ್ನಬೇಕು ಎನ್ನುತ್ತಾನೆ. ಅವಳು ಅದನ್ನು ಕೇಳಿ ಸೋಜಿಗಗೊಳ್ಳುವಂತೆಯೇ ನಾವೂ ಸೋಜಿಗಗೊಳ್ಳುತ್ತೇವೆ. ಕಿವಿ, ಕಣ್ಣುಗಳ ಜೊತೆಗೆ ನಮ್ಮ ನರಗಳು ಇನ್ನಷ್ಟು ಸೂಕ್ಷ್ಮವಾಗುತ್ತವೆ, ಮುಂದೇನು ಎಂದು ಕಾಯುತ್ತ. ಆದರೆ ಹೋಟೆಲಿನಲ್ಲಿ ಅವನೊಬ್ಬ ಗ್ರಾಹಕ. ಅವಳು ಜೀವವಿರುವ ಅಕ್ಟೋಪಸ್ ತಂದು ಕೊಡುತ್ತಾಳೆ. ಇದಕ್ಕೆ ಜೀವವಿದೆ ಎಂದು ಅವಳು ಹೇಳಿ ಮುಗಿಸುವ ಮೊದಲೇ ಅವನು ಅದನ್ನು ಬಾಚಿಕೊಂಡು ಬಾಯಿ ತೆರೆದು ಒಳಗೆ ಸೇರುವ ಭಾಗವಷ್ಟನ್ನೂ ತುಂಬಿಕೊಂಡು ಅಗೆದಗೆದು ಮುಕ್ಕಲು ಪ್ರಯತ್ನಪಡುತ್ತಾನೆ. ಇದರ ಚಿತ್ರೀಕರಣ ಅತಿಸಮೀಪ ಚಿತ್ರಿಕೆಯಲ್ಲಿದ್ದು, ನರದೌರ್ಬಲ್ಯ ಇದ್ದವರು ನೋಡಲಾಗದ ದೃಶ್ಯ ಎನಿಸುವಂತಿದೆ. ಇದರ ಅವಧಿ ಕೆಲವು ಸೆಕೆಂಡುಗಳಷ್ಟೆ. ಆದರೆ ಬಿಟ್ಟಕಣ್ಣು ಬಿಟ್ಟ ಹಾಗೆ ನೋಡಿದಾಗ, ಆ ಮನುಷ್ಯನೊಬ್ಬ ಬೇರೆ ಲೋಕದಿಂದ ಬಂದವನ ಹಾಗೆ ಕಾಣಿಸುತ್ತಾನೆ. ಇಂಥದೇ ನಮ್ಮನ್ನು ಕೊಂಚ ಅಲ್ಲಾಡಿಸುವ ಇನ್ನೆರಡು ದೃಶ್ಯಗಳಿವೆ. ಒಂದು, ಹೆಡೆಮುರಿಗೆ ಕಟ್ಟಿದಂತೆ ಕಟ್ಟಿ ಹಾಕಿ, ಕಟಿಂಗ್ ಪ್ಲೈಯರ್‌ನಿಂದ ಹಲ್ಲುಗಳನ್ನು ಕೀಳುವುದು ಮತ್ತು ಇನ್ನೊಂದು ನಾಲಿಗೆಯನ್ನು ಹಿಡಿದೆಳೆದು ಕತ್ತರಿಯಿಂದ ತುಂಡರಿಸುವುದು.
ಅವನ ವರ್ತನೆ, ವೇದನೆ ತುಂಬಿದ ಅವನ ಮುಖ ಅವಳಲ್ಲಿ ಸಹಾನುಭೂತಿ ಹುಟ್ಟುವಂತೆ ಮಾಡುತ್ತದೆ. ಅವನ ಅಸಹಾಯಕತೆ, ಹಿಂದುಮುಂದು ಗೊತ್ತಿಲ್ಲದ ಸ್ಥಿತಿಗಳ ಸೂಚನೆ ಸಿಗುತ್ತದೆ. ಈ ಅಂಶಗಳು ಅವನ ಬಗ್ಗೆ ಮೃದು ಧೋರಣೆ ಹೊಂದಲು ಕಾರಣವಾಗುತ್ತದೆ. ಆದರೆ ಅವನಲ್ಲಿ ಇವನ್ನೆಲ್ಲ ತಿಳಿಯುವ ಅರಿವಿರುವುದಿಲ್ಲ. ಅವನಿಗೆ ತನ್ನನ್ನು ಈ ಸಂಕಷ್ಟಕ್ಕೆ ತಳ್ಳಿದ ವ್ಯಕ್ತಿಯ ವಿರುದ್ಧ ಪ್ರತೀಕಾರಕ್ಕೆ ತುಡಿಯುವುದನ್ನು ಬಿಟ್ಟರೆ ಬೇರಾವ ಯೋಚನೆಗಳು ಇರುವುದಿಲ್ಲ.
ಇಂಥ ವಿಲಕ್ಷಣ ಸ್ಥಿತಿಯಲ್ಲಿರುವನನ್ನು ಮಿಡು ಬಲವಂತದಿಂದ ತನ್ನ ಮನೆಗೆ ಕರೆದೊಯ್ಯುತ್ತಾಳೆ. ಅಲ್ಲಿ ಮನೆಯಲ್ಲಿ ಅತ್ತಿತ್ತ ಬಿಗಿತವಿಲ್ಲದ ಗಾಳಿಯ ವಾತಾವರಣದಲ್ಲಿ ಅವನನ್ನು ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಸಾಂತ್ವನಗೊಳಿಸಲು ಅವಳು ಸ್ಪರ್ಶಿಸುವುದನ್ನು ಅನುಮಾನಿಸುತ್ತಾನೆ. ಇಂಥವನ್ನು ಇಲ್ಲಿಯವರೆಗೆ ಕಂಡಿಲ್ಲದ ಮತ್ತು ಈಗಷ್ಟೇ ಬೇರೊಂದು ಬಗೆಯ ಹಿನ್ನೆಲೆಯಿಂದ ಬಂದವನಿಗೆ ಅವಳ ವರ್ತನೆ ಸರಿ ತೋರುವುದಿಲ್ಲ. ಇಲ್ಲಿಯೂ ಕಪಟ ಇರಬಹುದೇ ಎಂಬ ಗುಮಾನಿ ಅವನ ಬಿರಿದ ಕಣ್ಣುಗಳಲ್ಲಿ. ಅವನಲ್ಲಿ ಹುದುಗಿದ್ದ ಮುಗ್ಧತೆಯ ಪದರುಗಳನ್ನು, ನವಿರಾದ ಭಾವಗಳನ್ನು ಹೇಗೋ ಅವಳು ಗ್ರಹಿಸಿ ಅವನನ್ನು ದೂಷಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಅವನ ಬಗ್ಗೆ ಮೃದುಭಾವ ಉಂಟಾಗುತ್ತದೆ. ಸಂತೈಸುವ ನೋಟಗಳು ಅವಳಲ್ಲಿ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಅವನಲ್ಲಿ ಸ್ವಲ್ಪ ಬದಲಾವಣೆ ಉಂಟಾಗುತ್ತದೆ. ಈಗ ಅವನು ಹಸಿದಾಗ ಈ ಮೊದಲು ಮಾಡಿದಂತೆ ಜೀವವಿರುವ ವಸ್ತುವನ್ನು ಅಪೇಕ್ಷಿಸುವುದಿಲ್ಲ. ಅಂದರೆ ಆ ವೇಳೆಗಾಗಲೇ ಅವನಲ್ಲಿ ಕೊಂಚವಾದರೂ ಮೃದುತ್ವ ಮತ್ತು ಅವಳು ನಂಬಬಹದಾದ ವ್ಯಕ್ತಿ ಎಂಬ ಭಾವ ಹುಟ್ಟುತ್ತದೆ. ಈ ಮೊದಲು ತ್ವರಿತ ಲಯದಲ್ಲಿ ನಿರೂಪಣೆಯಲ್ಲಿದ್ದ ಕಥನದ ಗತಿ ಅವರಿಬ್ಬರ ಪರಸ್ಪರ ಭಾವ ವಿನಿಮಯದ ನಂತರ ಸಾಮಾನ್ಯ ಬಗೆಯಲ್ಲಿರುವುದನ್ನು ಕಾಣುತ್ತೇವೆ.
ಇದೊಂದು ಮುಖ್ಯ ಘಟ್ಟದ ನಂತರ ದೇಸುಗೆ ತನ್ನನ್ನು ಅಷ್ಟು ವರ್ಷ ಬಂಧಿಸಿದವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವ ಹಂಬಲ ಪುಟಿದೇಳುತ್ತದೆ. ಹಾಗೆಂದೇ ಅವನು ತನಗುಂಟಾದ ಅವಸ್ಥೆಗೆ ಯಾರು ಕಾರಣ ಎನ್ನುವುದನ್ನು ಹುಡುಕುತ್ತಾ ಅಲೆಯುತ್ತಾನೆ. ಉದ್ದುದ್ದು ರಸ್ತೆಯಲ್ಲಿ ತ್ವರಿತ ಗತಿಯಲ್ಲಿ ದಾಪುಗಾಲು ಹಾಕುವ, ದೂರ ಮತ್ತು ಮಧ್ಯಮ ಚಿತ್ರಿಕೆಗಳು ಒಂದರಮೇಲೊಂದು ಕಾಣಿಸುತ್ತವೆ. ಹೋಟೆಲುಗಳಿಗೆ ನುಗ್ಗುತ್ತಾನೆ. ಅಲ್ಲೊಂದು ಕಡೆ ಅವನಿಗೆ ಸುಳಿವು ಸಿಗುತ್ತದೆ. ಆ ಹೋಟೆಲ್‌ನಲ್ಲಿ ತನಗೆ ಕೊಡುತ್ತಿದ್ದ ಆಹಾರವನ್ನು ಹೋಲುವ ವಸ್ತುವನ್ನು ಕಂಡಾಗ ತಟ್ಟನೆ ಅವನಿಗೆ ತನ್ನೆಲ್ಲ ಅವಸ್ಥೆಗೆ ಕಾರಣನಾದ ವ್ಯಕ್ತಿ ಯಾರು ಎನ್ನುವುದು ಗೊತ್ತಾಗುತ್ತದೆ. ಅವನೇ ಲೀ ವೂಜಿನ್. ಇದೊಂದು ತಿರುವಾದರೆ ಉಳಿದಿರುವುದು ಪ್ರತೀಕಾರ ನೆರವೇರುವ ಬಗೆ ಹೇಗೆ ಎನ್ನುವುದು.
ದೇಸುಗೆ ಪ್ರತೀಕಾರ ತೆಗೆದುಕೊಳ್ಳಬೇಕಾದ ಲೀ ವೂಜಿನ್ ನಮಗೆ ಪರಿಚಯವಾಗುವುದು ದೇಸುಗಿಂತ ಸಂಪೂರ್ಣ ವಿರುದ್ಧವಾದ ಶಾಂತ ಮುಖಭಾವದಲ್ಲಿ. ದೇಸುವಿನಲ್ಲಿ ಉದ್ವೇಗ, ಚಡಪಡಿಕೆ ಮುಖದಿಂದಲೇ ಹೊಮ್ಮುತ್ತಿರುತ್ತದೆ. ಲೀ ವೂಜಿನ್ ದೇಸುವನ್ನು ಹದಿನೈದು ವರ್ಷ ಬಂಧಿಸಿದ್ದರ ಕಾರಣ ತಿಳಿದಾಗ ನಮಗೂ ಬಿಚ್ಚಿ ಬೀಳುವಂತಾಗುತ್ತದೆ. ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ದೇಸುಗೆ ಲೀ ವೂಜಿನ್ ಐದು ದಿನದ ಕಾಲಾವಕಾಶ ಕೊಡುತ್ತಾನೆ. ಬಂಧಿಸಿದವನೇ ಬಂಧನಕ್ಕೆ ಒಳಗಾದವನಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಲ ನಿಗದಿ ಪಡಿಸುತ್ತಾನೆ! ದೇಸು ಪ್ರತೀಕಾರದಲ್ಲಿ ವಿಫಲನಾದರೆ ಮುಂದಿನದು ತನಗೆ ಬಿಟ್ಟಿದ್ದೆಂದು ಸೂಚಿಸುತ್ತಾನೆ. ಇದರಿಂ
ಚಿತ್ರದ ಅಂತ್ಯದ ಮೊದಲು ಅವರಿಬ್ಬರು ಪರಸ್ಪರ ಜಿದ್ದನ್ನು ಬಗೆಹರಿಸಿಕೊಳ್ಳುತ್ತಾರೆ. ಅವರು ಬಗೆಹರಿಸಿಕೊಳ್ಳುವ ವಿಧಾನ ಚಿತ್ರದ ಕೊನೆಯ ತನಕ ಉಸಿರುಗಟ್ಟಿಸುವ ಕ್ರಮದಲ್ಲಿದೆ.
ಇವುಗಳೆಲ್ಲ ಜರುಗಿದರೂ ದೇಸು ಮತ್ತು ಮಿಡೂರ ಸಮಾಗಮದಲ್ಲಿ ಅಂತಿಮವಾಗುವ ರೂಪ ಅತಿವಾಸ್ತವ ಎನಿಸುವ ಮಟ್ಟದಲ್ಲಿದೆ. ಚಿತ್ರದ ವೈಶಿಷ್ಟ್ಯವೆಂದರೆ ಮಾಮೂಲಿ ಬಾಲಿವುಡ್ ಚಿತ್ರಗಳಿಗಿಂತ ಭಿನ್ನವಾದ ಚಿತ್ರಕಥೆ ಮತ್ತು ನಿರೂಪಣಾ ವಿಧಾನ ಇರುವ ಈ ಚಿತ್ರದಿಂದ ಪ್ರೇರಣೆಯಾಗಿ ಚಿತ್ರಗಳು ನಿರ್ಮಾಣವಾಗಿದ್ದರೆ ಆಶ್ಚರ್ಯವಿಲ್ಲ. ಮನುಷ್ಯ ಸಂಬಂಧಗಳ ಬೆಳವಣಿಗೆಯಲ್ಲಿ ಉಂಟಾಗುವ ತಿರುವುಗಳನ್ನು ನಿರ್ದೇಶಕ ಸೂಕ್ಷ್ಮವಾಗಿ ಪ್ರಸ್ತುತಪಡಿಸುತ್ತಾನೆ. ಅದರಲ್ಲಿ ತನ್ನದೇ ಆದ ಹಿರಿಯ ಮಟ್ಟದ ಸಂವೇದನೆಯನ್ನು ಹೊಂದಿರುವುದನ್ನು ತೋರಿಸುತ್ತದೆ. ಇಷ್ಟಾದರೂ ದೇಸು ಹತ್ತಾರು ಜನಗಳ ವಿರುದ್ಧ ಏಕಾಂಗಿಯಾಗಿ ಹೋರಾಡುವುದು ನಮ್ಮಲ್ಲಿನ ಕಮರ್ಷಿಲ್ ಚಿತ್ರಗಳಲ್ಲಿನ ಹೋರಾಟಗಳನ್ನು ನೆನಪಿಸುತ್ತದೆ. ಆದರೆ ಅವನ ಬೆನ್ನಿಗೆ ಚೂರಿ ಬಿದ್ದಾಗಲೂ ಅವನು ಹತಾಶನಾಗದೆ ಮುಂದುವರೆದು ಎದುರಾಳಿಗಳನ್ನು ಸದೆಬಡಿಯುವುದು ಹೊಸದು. ಇಷ್ಟಲ್ಲದೆ ದೃಶ್ಯಗಳಲ್ಲಿ ಅದರ ಭಾವವನ್ನು ಉದ್ದೀಪಿಸಲು ಹಿನ್ನೆಲೆಯ ವಾತಾವರಣದಲ್ಲಿ ಸೂಕ್ತ ಬಗೆಯ ಬಣ್ಣಗಳನ್ನು ಉಪಯೋಗಿಸಿದ್ದಾನೆ. ಇವೆಲ್ಲವುಗಳನ್ನು ಒಳಗೊಂಡ ವಿಭಿನ್ನ ಸ್ವರೂಪದ ಚಿತ್ರಕಥೆ, ನಿರೂಪಣಾ ಶೈಲಿ ಇರುವ ʻಓಲ್ಡ್ ಬಾಯ್ ಚಿತ್ರವನ್ನು ಮೆಚ್ಚದಿದ್ದರೆ ಹೇಗೆ?
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
Very interesting narrative