Advertisement
ಸೌದಿಯ ಹೊಸ ಮೆಗಾ ಪ್ರಾಜೆಕ್ಟ್‌!: ದರ್ಶನ್‌ ಜಯಣ್ಣ ಸರಣಿ

ಸೌದಿಯ ಹೊಸ ಮೆಗಾ ಪ್ರಾಜೆಕ್ಟ್‌!: ದರ್ಶನ್‌ ಜಯಣ್ಣ ಸರಣಿ

ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್‌ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಐದನೆಯ ಬರಹ

ಇತ್ತೀಚಿನ ವರ್ಷಗಳಲ್ಲಿ ಸೌದಿ ಹಲವಾರು ಮೆಗಾ ಪ್ರಾಜೆಕ್ಟ್‌ಗಳನ್ನ ಕೈಗೆತ್ತುಕೊಂಡಿದೆ. ಅವೆಲ್ಲಾ ತೈಲ ಆರ್ಥಿಕತೆಯ ಭಾಗವಾಗದೆ ಅದರ ಹೊರತಾಗಿ ಮುಂದೆ ದೇಶಕ್ಕೆ ಆದಾಯ ತರುವ ಅಲ್ಲಿಯ ತರುಣರಿಗೆ ಉದ್ಯೋಗ ಒದಗಿಸುವ ಹಾದಿಯಲ್ಲಿವೆ. ಸೌದಿ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳು ತೈಲ ಆರ್ಥಿಕತೆಯ ಸೀಮಿತತೆಯನ್ನು ಮತ್ತು ಜಾಗತಿಕ ಮಟ್ಟದಲ್ಲಿ ಇವತ್ತು ಚರ್ಚೆಯಾಗುತ್ತಿರುವ ಭೂ ತಾಪಮಾನ ಏರಿಕೆ, ಹಸಿರು ಆರ್ಥಿಕತೆ, ನವೀಕರಿಸಬಹುದಾದ ಇಂಧನಗಳು, ಪುನರ್ಬಳಕೆ, ಪರಿಸರ ಮಾಲಿನ್ಯ ಮೊದಲಾದ ಹಲವು ಟ್ರೆಂಡ್‌ಗಳನ್ನ ಮತ್ತು ಅನಿವಾರ್ಯತೆಯನ್ನ ಮನಗಂಡಿವೆ. ಅದರಿಂದ ಹೊರಬರಲು ಅದೇ ತೈಲ ಆರ್ಥಿಕತೆಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಸೌದಿ ಅರೆಬಿಯಾ ಈ ನಿಟ್ಟಿನಲ್ಲಿ ಹಲವು ಪ್ರಾಜೆಕ್ಟ್‌ಗಳನ್ನ ಕೈಗೆತ್ತಿಕೊಂಡಿದೆ. ಅವುಗಳಲ್ಲಿ ಮುಖ್ಯವಾದವು ರೆಡ್ ಸೀ ಬಳಿಯ NEOM ಎಂಬ ಹೊಸ ಮಾದರಿಯ ನಗರ ( 500 ಬಿಲಿಯನ್ ಡಾಲರ್ ವೆಚ್ಚದಲ್ಲಿ), ರಿಯಾದ್ ಬಳಿಯ CUBE ಎಂಬ ಬೃಹತ್ ವಾಣಿಜ್ಯ ಕಟ್ಟಡ (50 ಬಿಲಿಯನ್ ಡಾಲರ್), The LINE ಎಂಬ ಅಕ್ಷರಶಃ 170 ಕಿಲೋಮೀಟರ್ ಉದ್ದದ, 500 ಮೀಟರ್ ಎತ್ತರದ 200 ಮೀಟರ್ ಅಗಲದ ಸರಳ ರೇಖೆಯ ಮಾದರಿಯ ಊರು (ಹಲವು ಟ್ರಿಲಿಯನ್ ಡಾಲರ್‌ಗಳ ವೆಚ್ಚ), Qiddiya ಎಂಬ ಮನೋರಂಜನಾ ತಾಣ (70 ಬಿಲಿಯನ್ ಡಾಲರ್ ವೆಚ್ಚ), Red sea ಬಳಿಯ ಪ್ರವಾಸಿ ತಾಣಗಳು, ನೂರಾರು ಕೋಟಿ ಗಿಡನೆಟ್ಟು ಮರುಭೂಮಿಯನ್ನು ಹಸಿರಾಗಿಸುವ Green Riyadh ಪ್ರಾಜೆಕ್ಟ್ ಇನ್ನೂ ಮುಂತಾದ ಕ್ರೀಡೆ, ಪ್ರವಾಸ, ಸೇವಾ ವಲಯದ ಬೃಹತ್ ಕಾಮಗಾರಿಗಳು ಚಾಲನೆಯಲ್ಲಿವೆ.

ಇವೆಲ್ಲಕ್ಕೂ ಹಣವನ್ನ ಸೌದಿ ಅರೇಬಿಯಾದ ಸರ್ಕಾರಿ ಒಡೆತನದ PIF – ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ ಸಂಸ್ಥೆ ಹೂಡುತ್ತಿದೆ. ಈ ಸಂಸ್ಥೆ ನಾರ್ವೆ, ಕತಾರ್, UAE ಮುಂತಾದ ದೇಶಗಳ ಹೂಡಿಕೆ ಫಂಡ್‌ಗಳಿಗೆ ಸಮಾನವೆಂದು ಹೇಳಲಾಗುತ್ತದೆ. ಇವು ಮೂಲತಃ ತೈಲದಿಂದ ಬಂದ ಹಣವನ್ನ ಇತರೆ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ತೈಲೋತ್ತರ ಆರ್ಥಿಕತೆಗೆ ನಾಂದಿ ಹಾಡುತ್ತಾರೆ. ಸೌದಿ ಕೂಡಾ ತನ್ನ vision 2030 ಯ ಯೋಜನೆಯ ಭಾಗವಾಗಿ ತನ್ನ ಖಜಾನೆಯಲ್ಲಿದ್ದ ಟ್ರಿಲಿಯನ್ ಗಟ್ಟಲೆ ಡಾಲರ್ ಹಣವನ್ನ ಮೇಲೆ ಹೇಳಿದ ಕಾಮಗಾರಿಗಳಿಗೆ ತೊಡಗಿಸುತ್ತಿದೆ. ಇವೆಲ್ಲಾ ಫ್ಯೂಚರಿಸ್ಟಿಕ್ ಆಗಿದ್ದು, ಹೂಡಿಕೆಯ ಹಣ ಮರಳಿ ಬಾರದ ಸಂದೇಹಗಳು ಡಾಳಾಗಿವೆ! ಇಲ್ಲಿನ ಸರ್ಕಾರ ರಾಜಸತ್ತೆ (ಮೊನಾರ್ಕಿ) ಯಾಗಿರುವುದರಿಂದ ಇಂತಹ ರಿಸ್ಕ್‌ಗಳನ್ನ ಕೈಗೊಳ್ಳಬಹುದು. ಇದನ್ನು ಪ್ರಜಾಪ್ರಭುತ್ವಗಳಲ್ಲಿ ಊಹಿಸಲೂ ಸಾಧ್ಯವಿಲ್ಲ.

ಒಮ್ಮೆ ಸೌದಿಯ ನವನಗರ NEOM ನ ಬಗ್ಗೆ ಮಾಧ್ಯಮದವರು ಅದರ CEO ಗೆ ಪ್ರಶ್ನೆಯಿತ್ತರು.

ಅದು ನೀವು ದುಬೈ ಮಾದರಿಯಲ್ಲಿ ನಿಯೋಮ್ ನಗರ ನಿರ್ಮಿಸ ಹೊರಟಿದ್ದೀರಾ? ಎಂಬುದು. ಅದಕ್ಕೆ ಗರ್ವದಿಂದ ಉತ್ತರಿಸಿದ ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್‌ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು. ಹಾಗೆಯೇ ಸೌದಿಯ ಮೇಲೆ ಮತ್ತೊಂದು ಅಪವಾದವಿದೆ. ಅದೆಂದರೆ ರಾಜಸತ್ತೆಯಾಗಿದ್ದರೂ ಇಲ್ಲಿನ ವ್ಯಾಪಾರ, ವಹಿವಾಟು ಮತ್ತು ಕಾರ್ಯ ಕಲಾಪಗಳಲ್ಲಿ ಹಲವು ದೊಡ್ಡ ಕನ್ಸಲ್ಟಿಂಗ್ ಕಂಪನಿಗಳ ಪಾಲಿದೆ ಎಂಬುದು. ಅವುಗಳಲ್ಲಿ ಕೆಲವು Mc Kinsey, Morgan Stanley, JP Morgan, Bain consultancy, BCG ಮುಂತಾದವು. ಭವಿಷ್ಯ ಹೇಳುವ (ಮಾರುವ!) ಈ ಫರ್ಮ್‌ಗಳು ಕೊಲ್ಲಿ ರಾಷ್ಟ್ರಗಳಲ್ಲಿ ಮಾಡುವಷ್ಟು ಹಣವನ್ನು ಬೇರೆಲ್ಲೂ ಮಾಡರು. ದುರಂತ ಎಂದರೆ ಭಾರತವೂ ಸಹ ತನ್ನ ಮೇಕ್ ಇನ್ ಇಂಡಿಯಾ ಕ್ಯಾಂಪೆಯಿನ್‌ಗೆ ಇಂತಹದ್ದೇ ಒಂದು ಜರ್ಮನ್ ಕಂಪನಿಯ ಮೊರೆ ಹೋದದ್ದು, ಅದೂ ಅಷ್ಟು ಬುದ್ಧಿವಂತರ ನಾಡೆಂದು ಕರೆಸಿಕೊಂಡು… ಇರಲಿ !

ಒಟ್ಟಿನಲ್ಲಿ ಸೌದಿಯ ಧೈರ್ಯ, ಮುಂದಾಲೋಚನೆ, ನಿರ್ಧಾರಗಳನ್ನ ಮತ್ತು ಅದನ್ನು ಅನುಷ್ಠಾನಗೊಳಿಸಲು ಅನುಸರಿಸುವ ಮಾರ್ಗಗಳನ್ನ (?) ಬೆರಗಿನಿಂದ ನೋಡುವುದಷ್ಟೇ ನನ್ನಂಥವರು ಮಾಡಬಹುದಾದ ಕೆಲಸ. ಇತರೆ ದೇಶಗಳು (ಮುಂದುವರಿದಿದ್ದರೂ) ಈ ರೀತಿಯ easy ಹಣವನ್ನು ಹೊಂದಿಲ್ಲ ಹಾಗೆಯೇ ಅಲ್ಲಿ ರಾಜಸತ್ತೆಯೂ ಇಲ್ಲ – ಇದು ಒಳ್ಳೆಯದೋ ಕೆಟ್ಟದೋ ಎಲ್ಲವೂ ಈ ಬೃಹತ್ ಪ್ರಾಜೆಕ್ಟ್‌ಗಳ ಯಶಸ್ಸಿನ ಮೇಲೆ ನಿಂತಿದೆ!

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್‌ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ