ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿ
ಇತ್ತೀಚೆಗೆ ನೀವು ಗಮನಿಸಿದ್ದರೆ ಸೌದಿ ಸಾಕಷ್ಟು ಸುದ್ದಿಯಲ್ಲಿದೆ. ಕೆಲವು ವಾರಗಳ ಮುಂಚೆಯಷ್ಟೇ ರಷ್ಯಾ ಯುಕ್ರೇನ್‌ನ ರಾಯಭಾರಿಗಳು ಅಮೆರಿಕದ ಒಟ್ಟಿಗೆ ಇಲ್ಲಿನ ರಾಜಧಾನಿ ರಿಯಾದ್‌ನಲ್ಲಿ ಯುದ್ಧ ವಿರಾಮದ ಕುರಿತು ಮಾತು-ಕತೆ ನಡೆಸಿದ್ದಾರೆ. ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧದ ನಡುವೆ ಇಡೀ ಮುಸ್ಲಿಂ ಜಗತ್ತು ಸೌದಿಯ ಅಭಿಪ್ರಾಯಕ್ಕಾಗಿ ಅವರ ನಡೆಗಾಗಿ ಎದಿರು ನೋಡುತ್ತಿದೆ. 2030 ರಲ್ಲಿ ಇಲ್ಲಿ ವರ್ಲ್ಡ್ ಎಕ್ಸ್ಪೋ ನಡೆಯಲಿದೆ, 2034 ರಲ್ಲಿ FIFA ಫುಟ್ಬಾಲ್ ವಿಶ್ವ ಕಪ್ ನಡೆಯಲಿದೆ. ಇದರ ಮಧ್ಯೆ ಹಲವಾರು ರೀಜನಲ್ ಮಟ್ಟದ ಟೂರ್ನಮೆಂಟ್‌ಗಳು ನಡೆಯಲಿವೆ. ಭಾರತಕ್ಕೆ ಮೊದಲು ಸೌದಿ ಜಿ20 ಯ ಚೇರ್ ಆಗಿತ್ತು, ಮತ್ತದನ್ನದು ಚೆನ್ನಾಗಿ ನಿರ್ವಹಿಸಿತು ಕೂಡ.
ಇತ್ತೀಚೆಗೆ ಇಲ್ಲಿ ಟೂರಿಸಂ ಸರ್ಕಾರದ ಅತಿ ಮುಖ್ಯ ಗುರಿಯಾಗಿದೆ. ಇಲ್ಲಿಯವರೆಗೆ ಇದರಿಂದ ಬರುವ ವರಮಾನದ ಬಗ್ಗೆ ಅದಕ್ಕೆ ಮಾಡಬೇಕಾಗಿರುವ ಸಿದ್ಧತೆಗಳ ಬಗ್ಗೆ ಸೌದಿಗೆ ತಾತ್ಸಾರವಿತ್ತು. ನೂರಾರು ಬಿಲಿಯನ್ ಡಾಲರ್ ತೈಲದಿಂದ ಅನಾಯಾಸವಾಗಿ ಬರುವಾಗ ಕೆಲವೇ ಕೆಲವು ಬಿಲಿಯನ್‌ಗಳಿಗೆ ಸೌದಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಟೂರಿಸಂ ಒಂದು ದೇಶದ ಬಹುದೊಡ್ಡ soft power ಎಂಬುದನ್ನ ಸೌದಿ ಮನಗಂಡಿದೆ. ಅದು ಇಲ್ಲಿನ ಜನಗಳಿಗೆ ಅತ್ಯಂತ ಘನತೆಯ ಉದ್ಯೋಗಗಳನ್ನು ಕೂಡಾ ಕೊಡಬಲ್ಲದು ಎಂಬುದು ಮತ್ತೊಂದು ದೃಷ್ಟಿಕೋನ.
ನೆರೆಯ ಕತಾರ್, U A E (ದುಬೈ, ಅಬು ಧಾಬಿ), ಒಮಾನ್, ಬಹ್ರೇನ್ ಮುಂತಾದ ಅರಬ್ GCC ದೇಶಗಳ ಬಗ್ಗೆ ಪ್ರಪಂಚಕ್ಕಿರುವ ತಿಳುವಳಿಕೆ ದೈತ್ಯ ಸೌದಿಯ ಮೇಲೆ ಇಲ್ಲದಿರುವುದು ಮತ್ತದಕ್ಕೆ ತಾವು ಪ್ರಪಂಚಕ್ಕೆ ಮುಕ್ತವಾಗಿ ತೆರೆದುಕೊಳ್ಳದಿರುವುದು ಕಾರಣವೆಂದು ಇಲ್ಲಿನ ಆಡಳಿತ (ದೊರೆ!) ಮನಗಂಡಂತಿದೆ. ಇಲ್ಲಿಯವರೆಗೆ ಪ್ರಪಂಚದ ಎಲ್ಲ ದೇಶದ ಲಕ್ಷಗಟ್ಟಲೆ ಜನಗಳು ಇಲ್ಲಿ ನೆಲೆಸಿ ನೌಕರಿ ಮಾಡುತ್ತಿದ್ದರೂ, ಎಲ್ಲ ಮುಸ್ಲಿಮರು ಮಕ್ಕಾ ಮದೀನಾಗೆ ಬಂದು ಹೋಗುತ್ತಿದ್ದರೂ, ಸೌದಿ ಎಲ್ಲ ದೇಶಗಳಿಗೆ ಧಾರ್ಮಿಕ ದತ್ತಿ ಕೊಡುತ್ತಿದ್ದರೂ, ಎಲ್ಲ ಕಡೆಗೆ ಆಯಿಲ್ ಮತ್ತು ಗ್ಯಾಸ್ ಸರಬರಾಜು ಮಾಡುತ್ತಿದ್ದರೂ ಅದಕ್ಕೆ ಪೂರಕವಾದ soft power ನ ವಾತಾವರಣವನ್ನ ಸೃಷ್ಟಿಸಿಕೊಳ್ಳಲು ಪ್ರಯತ್ನವನ್ನೇ ಮಾಡಿರಲಿಲ್ಲ!
ನೆರೆಯ UAE ದೇಶ ತನ್ನ ದುಬೈ, ಶಾರ್ಜಾ, ಅಬು ಧಾಭೀ ನಗರಗಳನ್ನ (ರಾಜ್ಯ ಅಂತಲೂ ಹೇಳಬಹುದು) 50 ವರ್ಷಗಳ ಮುಂಚೆಯೇ ಅಭಿವೃದ್ಧಿ ಪಡಿಸಿದ ರೀತಿ, 25 ಲಕ್ಷ ಜನಸಂಖ್ಯೆ ಇರುವ ಪುಟ್ಟ ದೇಶ ಕತಾರ್ (ಅದರಲ್ಲಿ 20 ಲಕ್ಷ ಹೊರಗಿನವರು) ಫುಟ್ಬಾಲ್ ವಿಶ್ವಕಪ್ ನಡೆಸುತ್ತದೆ, ಅಮೆರಿಕ ಮತ್ತು ಅಫ್ಘಾನ್ ನಡುವೆ ಮಾತುಕತೆ ಏರ್ಪಡಿಸುತ್ತದೆ, ಬಹ್ರೇನ್ ಒಂದು ಕಾಲದಲ್ಲಿ ಇಲ್ಲಿನ ಆರ್ಥಿಕ ರಾಜಧಾನಿಯಾಗಿರುತ್ತದೆ (ದುಬೈ ಇದನ್ನು ಕಸಿಯುತ್ತದೆ), ಒಮಾನ್ ಯಾರ ಗೊಡವೆಯೂ ಇರದೆ ತನ್ನತ್ತ ಅತೀ ಹೆಚ್ಚು ಟೂರಿಸ್ಟ್‌ಗಳನ್ನ ಸೆಳೆಯುತ್ತದೆ, ಇಡೀ ದೇಶದಲ್ಲಿ ಬಹು ಮಹಡಿ ಕಟ್ಟಡಗಳೇ ಇಲ್ಲದೆ ತನ್ನ ತನವನ್ನ ಕಾಪಾಡಿಕೊಂಡು ಅಲ್ಲಿನ ಪ್ರಜೆ ಮತ್ತು expat ಗಳಿಗೆ ಇಡೀ ಅರೇಬಿಯಾದಲ್ಲಿಯೇ ಇರದ ಜೀವನ ಮಟ್ಟವನ್ನ ಒದಗಿಸುತ್ತದೆ ಎಂದರೆ ಸೌದಿಗೆ ಇದೆಲ್ಲ ಯಾಕೆ ಬೇಕಿರಲಿಲ್ಲ ಅಥವಾ ಇದನ್ನೆಲ್ಲಾ ಮನಗಾಣಲು ಇಷ್ಟು ದಿನ ಏಕೆ ಬೇಕಾಯಿತು ಎಂಬ ಪ್ರಶ್ನೆ ಉದ್ಭವಿಸಿದರೆ ಆಶ್ಚರ್ಯವೇನಲ್ಲ.

(ಫೋಟೋ ಕೃಪೆ: KSA expats : Facebook)
ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ (GCC) ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ. ಅವರಿಗೆ ಯಾರನ್ನೂ ಇಂಪ್ರೆಸ್ ಮಾಡುವ, ಮನ ಬದಲಾಯಿಸುವ ಆಸಕ್ತಿಯೇ ಇರಲಿಲ್ಲ ಇತ್ತೀಚಿನವರೇವಿಗೂ!
ತಮಗೆ ಬೇಕಾದ ಮೂಲಭೂತ ಸೌಕರ್ಯ ಅಂದರೆ ರಸ್ತೆ, ವಿಮಾನ ನಿಲ್ದಾಣ, ಮಾಲು, ಅರಮನೆಗಳು, ವಿಲ್ಲಾ ಸಾಲು, ಅರಮನೆಯಂತಾ ಹೋಟೆಲ್ಲುಗಳು, ಪಾರ್ಕ್, ನಗರಗಳು, ಮರುಭೂಮಿಯಲ್ಲೂ ನಮ್ಮನ್ನು ನಾಚಿಸುವ ರೆಸಾರ್ಟ್‌ಗಳು, ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ವ್ಯವಸ್ಥೆ ಎಲ್ಲವನ್ನ ತಮ್ಮವರಿಗಾಗಿ ಮಾಡಿಕೊಂಡು ಎಲ್ಲದರ ಬಾಗಿಲನ್ನು ಮುಚ್ಚಿಕೊಂಡು ಕುಳಿತು ಬಿಟ್ಟಿತ್ತು. ಇದರಿಂದ ಇಲ್ಲಿನ ನೂರಾರು ವರ್ಷದ ಕೋಟೆಗಳು, ಓಯಸಿಸ್ ಮತ್ತು ಲಕ್ಷಾಂತರ ಎಕರೆ ಕರ್ಜೂರದ ತೋಟಗಳು, ಅರಮನೆಗಳು, ದೈತ್ಯ ಕಂಪನಿಗಳು, ಗುಹೆಗಳು, ಕೊರೆವ ಚಳಿಯ ಪರ್ವತ ಶ್ರೇಣಿಗಳು, ಹೂ ಬೆಳೆವ ಕಾಫಿ ಬೆಳೆವ ಊರುಗಳ ಬಗ್ಗೆ ಹೊರ ಜಗತ್ತಿಗೆ ತಿಳಿಯದೇ, ಸಾಮಾನ್ಯ ವೀಕ್ಷಕರಿಗೆ ಸುಲಭವಾಗಿ ಸಿಗದ ಇಲ್ಲಿನ ವೀಸಾ ವ್ಯವಸ್ಥೆಯಿಂದ ಎಷ್ಟೋ ಒಳ್ಳೆಯ ವಿಷಯಗಳೂ ಪ್ರಪಂಚಕ್ಕೆ ತಿಳಿಯದಾಗಿದೆ ಅನ್ನಿಸುತ್ತದೆ.
ಸೌದಿಗೆ ಬರುವ ಮುನ್ನ ಹಲವಾರು ಗೆಳೆಯರು ಕೇಳಿದ ಪ್ರಶ್ನೆ “ಅಲ್ಲಿಗೆ ಏಕೆ? ಅದು ಅತ್ಯಂತ ಕಠೋರ ದೇಶಗಳಲ್ಲಿ ಒಂದಂತೆ? ಅಲ್ಲಿ ಅದು ಮಾಡಲಿಕ್ಕಿಲ್ಲ, ಇದು ನೋಡಲಿಕ್ಕಿಲ್ಲ, ಮನರಂಜನೆ ಇಲ್ಲ, ಕದ್ದರೆ ಕಡೀತಾರಂತೆ? ಬುರ್ಕಾ ಹಾಕಬೇಕಂತೆ? ಬೇರೆ ಕಡೆ ನೋಡೋದಲ್ವಾ!” ಇತ್ಯಾದಿ. ಹೀಗೆ ಕೇಳಲು ಅವರಿಗೆ ಅವರದೇ ಆದ ಕಾರಣಗಳಿವೆ ಮತ್ತು ನಾನೂ ಕೂಡ ಇಲ್ಲಿಗೆ ಬರುವ ಮುನ್ನ ಹಲವಾರು ದಂತ ಕಥೆಗಳನ್ನ ಇಲ್ಲಿಯ ಬಗ್ಗೆ ಕೇಳಿದ್ದೆ! ಅದರ ಕಾರಣದಿಂದಾಗಿಯೇ ಇಲ್ಲಿಯ ಬಗ್ಗೆ ಹಲವಾರು youtube ವಿಡಿಯೋಗಳನ್ನ ನೋಡಿಕೊಂಡಿದ್ದೆ. ಆದರೆ ಇಲ್ಲಿಯವರೆವಿಗೂ ನನಗೆ ಆಗಿನ ಅಂದರೆ ತೈಲ ದೊರೆತ ನಂತರದ, ಅಭಿವೃದ್ಧಿ ಪಥದಲ್ಲಿ ನಾಗಾಲೋಟ ನಡೆಸಿದ, ತನ್ನವರನ್ನು ಎದುರಿಸಿ ಸಾಮ್ರಾಜ್ಯ ಕಟ್ಟಿಕೊಂಡ, ಆಧುನಿಕತೆಯನ್ನು ಮತ್ತು ಪ್ರಗತಿಯನ್ನೂ ಇದರ ಜೊತೆಜೊತೆಗೆ ಜಾಗತೀಕರಣವನ್ನೂ ಎದುರಿಸಿ ಇಲ್ಲಿವರೆವಿಗೆ ಬಂದು ಅಮೆರಿಕ, ರಷ್ಯಾ, ಭಾರತ, ಚೀನಾ, ಯೂರೋಪ್ ಮುಂತಾದ ದೇಶಗಳಿಗೆ ಭುಜ ತಾಕಿಸಿ ನಿಂತ ಸೌದಿಯ ಪ್ರಗತಿಯನ್ನು ಅತ್ಯಂತ ರೋಚಕವಾಗಿ ವಸ್ತುನಿಷ್ಠವಾಗಿ ಪರಿಚಯ ಮಾಡಿಸಿದ್ದು ಅಮೆರಿಕಾದ ಸಾಂಡ್ರಾ ಮ್ಯಾಕಿ ಬರೆದ “ಸೌದೀಸ್: ಇನ್ಸೈಡ್ ದಿ ಡೆಸರ್ಟ್ ಕಿಂಗ್ಡಮ್” ಎನ್ನುವ ಪುಸ್ತಕ. ಇದನ್ನು ಆಕೆ ಬರೆದದ್ದು ಬೇರೆಯದೇ ಹೆಸರಿನಲ್ಲಿ ಮತ್ತದು ಬಿಡುಗಡೆಯ ನಂತರ ಇಡೀ ಸೌದಿಯಲ್ಲಿ ಬ್ಯಾನ್ ಆಗಿತ್ತು. ಈಗಲೂ ಆಗಿರಬಹುದು…. ನಾನು ನೋಡುತ್ತಿರುವ ಸೌದಿ ಆಧುನಿಕ, ಅವರು ನೋಡಿದ್ದು ಆಧುನಿಕಗೊಳ್ಳುತ್ತಿದ್ದ ದೇಶವನ್ನ 1970-80 ರಲ್ಲಿ… ಅದರ ವ್ಯತ್ಯಾಸಗಳ ಬಗ್ಗೆ ಮುಂದೆ ಬರೆಯುವೆ.

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
Well written