ವಿಳಾಸವಿಲ್ಲದವರು!

ತುಂಬಿದ ಜಾತ್ರೆಯಲ್ಲಿ ಒಬ್ಬರ ಮುಖ ಮತ್ತೊಬ್ಬರು
ನೋಡಲಾಗದಷ್ಟು ನೂಕು ನುಗ್ಗಲು
ತೇರು ಸಾಗಿದತ್ತ ಜನರ ಹಿಂಡು
ಯಾರದೋ ಹೆಗಲೇರಿ ಹೊರಟ ಹೂ ಹಣ್ಣಿನ ಬುಟ್ಟಿ
ನಮ್ಮಲ್ಲಿ ಬನ್ನಿ ನಮ್ಮಲ್ಲೇ ಕೊಳ್ಳಿ ಎಂದು ಗಂಟಲು ಹರಿಯುವಷ್ಟು
ಕೂಗಿ ಕರೆಯುವ ನೂರಾರು ದನಿಗಳು

ಖಾಲಿಯಾದ ಹರಿವಾಣಕ್ಕೆ ಇರುಳು ಜಾರುವ ಮುನ್ನ
ಹಸಿವು ನೀಗಿಸುವಷ್ಟು ಬೆಳಕ ತುಂಬಿಸಿಕೊಳ್ಳುವ ಕಾತರ
ಪುಟ್ಟ ಪೋರನಿಂದ ಇಳಿ ವಯಸ್ಸಿನವರೆಗೂ
ಹಸಿವಿನ ಅಳುವ ಮರೆಸಿ ನಗುವ
ಮೆರೆಸುವ ಪ್ರತಿ ಕ್ಷಣದ ಹೋರಾಟ

ಬಯಲಲ್ಲಿ ಬಿದ್ದ ಸಣ್ಣ ಸಣ್ಣ ತಿಂಡಿ
ತುಣುಕುಗಳನ್ನು ಹಾಯ್ದು ತನ್ನದೇ ಕರುಳ ಬಳ್ಳಿಯ
ಹಸುಕಂದನ ಬಾಯಿಗಿಟ್ಟು ಕಣ್ಣಿನ ಹನಿ ಇಂಗಿಸಿಕೊಂಡ
ದಿನಗಳ ಲೆಕ್ಕ ಮಾಡಲಾದೀತೆ!
ಇಲ್ಲದವರ ತುಳಿದು ಇರುವವರ ತೇರು ಹೊರಟಿದೆ

ಜಾರುವ ಪ್ರತಿ ಹನಿಯ ಲೆಕ್ಕವಿದೆ ಕಣ್ಣುಗಳಿಗೆ
ತನ್ನ ಆಣತಿಯಿಲ್ಲದೆ ಸೋತು ಬೀರಿದ ಹುಸಿನಗೆಯ
ಲೆಕ್ಕವಿದೆ ತುಟಿಗಳಗೆ
ಹಸಿವಿಂದ ಒದ್ದಾಡಿ ಕತ್ತಲು ಉಂಡ ಇರುಳುಗಳ
ಲೆಕ್ಕವಿದೆ ಮೈ ಮನಸಿಗೆ

ಜಾತ್ರೆ ಮುಗಿದ ಬಯಲಲ್ಲಿ ಗೌಜು ಗದ್ದಲ ಕರಗಿ
ಎಲ್ಲೆಡೆ ನೀರವ ಮೌನ
ಹಗಲು ಕಳೆದು ಕಡು ಕತ್ತಲ ಆಗಮನ
ಓಡಾಡಿದ ಗುರುತಷ್ಟೇ ಉಳಿಸಿ
ಅವರವರ ಮನೆ ದಾರಿ ಹಿಡಿದ ಹೆಜ್ಜೆಗಳು
ವಿಳಾಸವಿಲ್ಲದವರಷ್ಟೇ ಇಲ್ಲಿ ಉಳಿದವರು

ಸೌಮ್ಯಶ್ರೀ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ ಗ್ರಾಮದವರು.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.