Advertisement
ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

ಹಗಲು ವೇಷ!

ಕಣ್ಣು ಮುಚ್ಚಿ ನಿದಿರೆಯಲ್ಲಿರುವ
ಹಾಲ್ಗೆನ್ನೆಯ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು
ನಗರದ ಬೀದಿ ಬೀದಿಗಳಲ್ಲಿ ಕೈಚಾಚಿ
ಹತ್ತು, ಇಪ್ಪತ್ತು, ನೂರು ಹೀಗೆ ಅರೆಕ್ಷಣದಲ್ಲಿ
ಬೊಗಸೆ ತುಂಬಿ ಸುರಿಯುತ್ತಿದೆ!

ಸುರಿಸುವ ಕಣ್ಣೀರು, ಕೊಳಕು ಬಟ್ಟೆ
ಮುಖವಾಡ ತೊಟ್ಟ ಬಣ್ಣ ಬಳಿದ ಮುಖ
ಎಲ್ಲವೂ ನಾಟಕ
ಪರದೆ ಸರಿದರೆ ಹಿಂದಿನದ್ದು
ಬಣ್ಣ ಕಳಚಿದ ನೈಜ ಅದ್ಭುತ ನಟನೆ
ಕಣ್ತುಂಬಿಸಿಕೊಂಡವರಿಗೆ ಹಿಂದೆಂದೂ ಕಾಣದ ದಿಗಿಲು!

ಇದು ನಿತ್ಯದ ನರಕ ಮೈ ಬಾಗಿಸಿ
ದುಡಿಯಲಾಗದೆ ಉಕ್ಕುವ ಕರುಣೆಯ
ಬಾಚಿ ಬೊಗಸೆ ತುಂಬಾ ತುಂಬಿಕೊಂಡು
ಅದ್ಯಾರದೋ ಕರುಳ ಬಳ್ಳಿಯ
ಕತ್ತರಿಸಿ ತಂದು ಬದುಕಿರುವ ಮಗುವಿನ ಬಾಯಿ
ತೆರೆದು ಮದ್ದು ಸುರಿದು ಮತ್ತೇರಿಸಿ ಸತ್ತ ಶವದಂತಾಗಿಸಿ
ನಗರದ ಬೀದಿ ಬೀದಿಗಳಲ್ಲಿ
ಜಾತ್ರೆಯಲ್ಲಿ ಎಳೆಯುವ ತೇರಿನಂತೆ ಹೊತ್ತು ಸಾಗುವುದು!

ಕತ್ತರಿಸಿ ಹೋದ ಕರುಳಬಳ್ಳಿ
ಅದ್ಯಾರದೋ ತಾಯಿಯ ರಕ್ತ ಕುಡಿದ
ಇಳೆಯು ರುಚಿಯೇರಿ ಮತ್ತದೇ ಬಳ್ಳಿಗಾಗಿ
ಕಾಯ್ದು ಕುಳಿತಂತಿದೆ!
ಒಂದು ಎರಡು ಹೀಗೆ ಅಗಣಿತ
ಆಗಷ್ಟೇ ಚಿಗುರಿದ ನಳನಳಿಸುವ ಚಿಗುರನ್ನು ಚಿವುಟಿ
ಮರದ ಬುಡವೇ ಬಾಡಿ ನೆಲವನ್ನಪ್ಪಿದೆ

ಕೈ ಮೈ ಕೆರೆದುಕೊಂಡು ಹಗಲು ವೇಶ ತೊಟ್ಟು
ಬಿಡದೆ ಬೆನ್ನಿಗೆ ಅಂಟಿಸಿಕೊಂಡು
ಮಗುವಿನ ತುತ್ತು ಅನ್ನ, ಬಟ್ಟೆಗಾಗಿ ಅಲೆದಾಡಿದ ತಾಯಿಯಂತೆ ಇದ್ದವಳು ವೇಶ ಕಳಚಿ, ಭಾರ ಇಳಿಸಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ಅಮಲೇರಿಸಿಕೊಂಡು ಇದೀಗ ಇಲ್ಲೇ ಕಣ್ಣೆದುರಲ್ಲೇ ಕುಣಿಯುತ್ತಿದ್ದಾಳೆ!

ಮಗುವಿನ ಅಳು ಅವಳ
ನಗುವಿನಲ್ಲಿ ಕರಗಿ ಹೋಗಿದೆ
ಚೀರಿ ಚೀರಿ ನಿತ್ರಾಣವಾಗಿ ಅದರ ಉಸಿರು
ಗಾಳಿಯಲ್ಲಿ ತೇಲಿ ತನ್ನಮ್ಮನ ಸೇರಿದೆ.
ತಾಯಿಯಂತೆ ನಟಿಸಿದ್ದವಳು
ಇತ್ತ ಸತ್ತ ಮಗುವನ್ನು ಹೂಳುವ ಮುನ್ನ
ಜಾತ್ರೆಯಂತಹ ಬಯಲಿನಲ್ಲಿ
ಬಿಗಿದು ಬೆನ್ನಿಗೇರಿಸಿಕೊಂಡು ಅಂಗೈ ಚಾಚಿ ನಿಂತಿದ್ದಾಳೆ!

ಸೌಮ್ಯಶ್ರೀ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ ಗ್ರಾಮದವರು.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ