ಕೆಂಪುಟೇಪು

ಅದು ಕೆಂ…ಪು ಟೇಪು!
ಬಸಿದಿಟ್ಟ
ಶುದ್ಧ ಪ್ರೀತಿಯಲ್ಲಿ ಅದ್ದಿದ್ದಳೇನೋ!
ಪೊರೆದಿತ್ತು
ಆ ಎರಡು ಜಡೆಗಳನ್ನು
ಕೂದಲೊಳಗೆ
ನರದಂತೆ ಬೆ‌ಸೆದು
ಹೂವಾಗಿ ಅರಳಿತ್ತು ಕೆಂ…ಪಗೆ!
ಮೊಂಡುಗಾಲಲಿ
ಕುಣಿದಾಡಿ ನಲಿದಿದ್ದು
ಮೊಳದಂತೆ ಮಡಿಸಿದ್ದ ಜಡೆ!

ಅವಳ
ಕೆಂಪುಗಟ್ಟಿದ್ದ ಹಲ್ಲುಗಳನ್ನಷ್ಟೇ
ಕಂಡಿದ್ದವು ಆ ಕೂದಲುಗಳು
ಮುದ್ದುಗರೆಯುತ್ತಾ
ತಮ್ಮನ್ನು ಮೃದುವಾಗಿ ಬಾಚುವಾಗ

ದುಡಿದು ಉಳಿಸಿದ ಹಣವಿಂದು
ಕೆಂಪು ಟೇಪುಗಳಾಗಿ
ಅತ್ತಿತ್ತ ಅರಳಿ
ನಗುತ್ತ ತೊನೆಯುವಾಗ
ಇಂದು ಅವಳ ಹೂನಗೆಯನ್ನು
ಕಂಡಿದ್ದವು
ಗುಲಾಬಿಯಂತೆ ಹೆಣೆದು ಕಟ್ಟಿ
ಮೃದುವಾಗಿದ್ದಳು ತಾನೇ

ಕಟ್ಟಿದ ಕಂಗಳಿಗೆ
ಸಾರ್ಥಕ ಭಾವ
ದಣಿವಿನ ಕಾರ್ಮೋಡದ ನಡುವೆ
ನಗೆಯ ಮಿಂಚು
ಸಾಕಿನ್ನು
ಮತ್ತೇನು ಬೇಡ
ಝುಮುಕಿ ಲೋಲಾಕು
ಜಡೆಬಿಲ್ಲೆಯ ಆಸೆಯಿಲ್ಲ
ಎಣ್ಣೆಗಾಣದ ಕೂದಲಿಗಿಂದು
ಕೆಂಪು ಟೇಪೇ
ವೈಭೋಗ

ಕೂಲಿ ಮಾಡಿ
ಅಂದು
ಕೊಡಿಸಿದ ಟೇಪುಗಳನ್ನು
ಇಂದು
ಪೆಟ್ಟಿಗೆ ತೆರೆದು
ಕೈಗೆತ್ತಿಕೊಂಡಾಕ್ಷಣ
ಹಿಂಬಾಲಿಸಿ ಬರುತ್ತದೆ ಹೂನಗೆ
ಅಜ್ಜಿಯ ಪ್ರೀತಿ ಮೆತ್ತಿಕೊಳ್ಳುತ್ತದೆ
ಕೆಂ…ಪಗೆ!

ಸೌಮ್ಯ ದಯಾನಂದ ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನ ಹೊಳೆ ಗ್ರಾಮದವರಾಗಿದ್ದು ಸಧ್ಯ ದಾವಣಗೆರೆ ನಗರದಲ್ಲಿ ವಾಸವಾಗಿದ್ದಾರೆ.
ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ.
ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ಇವರ ಹಲವು ಕಥೆಗಳು, ಮಕ್ಕಳ ಕವಿತೆಗಳು, ಮಕ್ಕಳ ಕಥೆಗಳು ಪ್ರಕಟವಾಗಿದ್ದು ‘ಸಂಜೆ ಐದರ ಸಂತೆ’ ಇವರ ಪ್ರಕಟಿತ ಕವನ ಸಂಕಲನ.