ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ವಿವಿಧ ಅಂಗಗಳ ವಿಕಾಸದ ಕುರಿತ ಬರಹ
ಹಕ್ಕಿಗಳ ವಿವಿಧ ಅಂಗಾಂಗಗಳು ಅವುಗಳ ಜೀವನ ಶೈಲಿಗೆ ಯಾವ ಯಾವ ರೀತಿ ಹೊಂದಿಕೊಂಡು ಮಾರ್ಪಾಡಾಗಿವೆ ಅಂತ ಗೊತ್ತೇ…?
ಹಕ್ಕಿಗಳ ಇಡೀ ದೇಹ ಆಕಾಶದಲ್ಲಿ ಹಾರಾಡಲು Streamlined body ಅಂದರೆ, ಸುಚಲನಾಕೃತಿಯನ್ನೊಳಗೊಂಡಿವೆ. ಅದರ ಕೊಕ್ಕಿನಿಂದ ಹಿಡಿದು ಬಾಲದ ತುದಿಯವರೆಗೆ ಗಾಳಿಯ ಯಾವುದೇ ಅಡೆತಡೆಗಳಿಲ್ಲದೆ ಹಾರಾಡಲು ಹೇಳಿ ಮಾಡಿಸಿದಂತಿದೆ.
ಪಕ್ಷಿಗಳಿಗೆ ಎಲ್ಲಕ್ಕಿಂತ ಮಿಗಿಲಾದ ಅಂಗ ಅವುಗಳ ರೆಕ್ಕೆ. ಇದು ಹಕ್ಕಿಗಳ ದೇಹದಲ್ಲಿಯೇ ಅತ್ಯಂತ ಗಟ್ಟಿಮುಟ್ಟಾದ ಅಂಗ. ಗರಿಗಳಿಂದಾವೃತವಾದ ಜಲಾಭೇದ್ಯ ರೆಕ್ಕೆಗಳು, ಪಕ್ಷಿಗಳು ಲೀಲಾಜಾಲವಾಗಿ ಹಾರುವಾಗ ಎಲ್ಲೂ ತಾಗದಂತೆ, ಹಾರಲು-ಇಳಿಯಲು ತಯಾರಾದ, ಅಷ್ಟೇ ಹಗುರವಾದ ಪ್ರಕೃತಿಯ ಅತಿಶಯ ಕೌಶಲ್ಯದ ಕಲಾಕೃತಿಗಳು! ಈ ರೆಕ್ಕೆಗಳೂ ಕೂಡ ಆ ಹಕ್ಕಿಯ ಗಾತ್ರ, ಹಾರಾಡುವ ರೀತಿ, ರೆಕ್ಕೆಯ ಮೂಲ ಉದ್ದೇಶಗಳಿಗೆ ಅನುಗುಣವಾಗಿ ವಿಕಾಸ ಹೊಂದಿರುವುದನ್ನು ಕಾಣುತ್ತೇವೆ. ಅತ್ಯಂತ ಸಧೃಢವಾದ ಗಿಡುಗ, ಹದ್ದುಗಳ ರೆಕ್ಕೆಗಳು; ವೇಗವಾಗಿ ಹಾರಲು ತಕ್ಕುದಾದ ದೇಹಕ್ಕಿಂತ ಉದ್ದವಾದ ಚೂಪಾದ ಬಾನಾಡಿಗಳ ರೆಕ್ಕೆಗಳು; ರಾತ್ರಿ ವೇಳೆ ನಿಶ್ಶಬ್ದವಾಗಿ ತನ್ನ ಬೇಟೆಯ ಮೇಲೆ ಎರಗುವ ವಿಶೇಷ ತುಪ್ಪಳವಿರುವ ಗೂಬೆಗಳ ರೆಕ್ಕೆ ಇವೆಲ್ಲ ಉದಾಹರಣೆಗಳು.
ಹಕ್ಕಿಗಳ ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಾಟಾಗಿರುವುದರಿಂದ, ಕೈಗಳ ಕೆಲಸವನ್ನು ಕಾಲು ಮತ್ತು ಬಾಯಿ ಮಾಡಬೇಕಾಗಿದೆ.
ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ.

ಈ ಕಾರ್ಯಕ್ಕಾಗಿ, ಹಕ್ಕಿಗಳ ಕೊಕ್ಕುಗಳು ವಿವಿಧ ರೀತಿಯಲ್ಲಿ ಮಾರ್ಪಾಡಾಗಿವೆ. ಮಾಂಸವನ್ನು ಕಿತ್ತು, ಹರಿದು ತಿನ್ನಲು ಯೋಗ್ಯವಾದ ಚೂಪಾದ, ಹರಿತವಾದ, ಬಲಿಷ್ಠವಾದ, ಕೊಕ್ಕೆಯಂತೆ ಬಾಗಿರುವ ಗಿಡುಗ-ಹದ್ದು ಮುಂತಾದ ಹಿಂಸ್ರಪಕ್ಷಿಗಳ ಕೊಕ್ಕು; ಮರವನ್ನು ಕೊರೆಯಲು ಗಟ್ಟಿಮುಟ್ಟಾದ ಮರಕುಟ್ಟಿಗದ ಕೊಕ್ಕು; ಹೂಗಳ ಮಕರಂದವನ್ನು ಹೀರಲು ಉದ್ದವಾದ, ಕೆಳಕ್ಕೆ ಬಾಗಿರುವ ಸೂರಕ್ಕಿಗಳ ಕೊಕ್ಕು; ಕಾಳು-ಬೀಜಗಳನ್ನು ಒಡೆದು ತಿನ್ನಲು ರಾಟವಾಳ, ಗುಬ್ಬಚ್ಚಿಗಳ ಚೂಪಾದ, ಚಿಕ್ಕ ಕೊಕ್ಕು; ಅಗಲವಾಗಿ ‘ಆ’ ಎಂದು ಬಾಯ್ತೆರೆದು ಹಾರುತ್ತಿದ್ದರೆ, ಕೀಟಗಳು ತನ್ನಂತಾನೇ ಬಾಯೊಳಗೆ ಬೀಳುವ ಬಾನಾಡಿಯ ಕೊಕ್ಕು; ನೀರಿನಿಂದ ಬಸಿದು ತೆಗೆಯಲು ಜಾಲರಿಯಂತಹ ಚಮಚದ ಕೊಕ್ಕು, ಬಾತುಕೋಳಿಗಳ ಕೊಕ್ಕು; ಇನ್ನು ಎಲ್ಲಾ ರೀತಿಯ ಆಹಾರ ಬಯಸುವ ಕಾಗೆಯ ಬಹೂಪಯೋಗಿ ಕೊಕ್ಕು; ಇವೆಲ್ಲ ಉದಾಹರಣೆಗಳು.
ಹಾಗೆಯೇ ಕಾಲುಗಳು ಕೂಡ ಹಕ್ಕಿಗಳ ಓಡಾಟ, ಬೇಟೆ, ಮುಂತಾದ ಕೆಲಸಗಳಿಗೆ ತಕ್ಕಂತೆ ಮಾರ್ಪಾಡಾಗಿವೆ. ಜೌಗು ಪ್ರದೇಶಗಳಲ್ಲಿ ಆಹಾರ ಹುಡುಕುವ ಕೊಕ್ಕರೆ, ಬಕ ಮುಂತಾದ ಹಕ್ಕಿಗಳಿಗೆ ಹೂತು ಹೋಗದಂತೆ ಬಲಿಷ್ಠವಾದ ಕಾಲುಗಳು ಮತ್ತು ತೆಳುವಾದ, ಉದ್ದವಾದ, ಪಾದಗಳು; ನೀರಿನಲ್ಲಿ ಈಜಲು ಜಾಲಪಾದವಿರುವ ಹೆಜ್ಜಾರ್ಲೆ, ಬಾತುಗಳ ಕಾಲು; ಜಲಸಸ್ಯಗಳ ಮೇಲೆ ಅನಾಯಾಸವಾಗಿ ನಡೆದಾಡಲು ನೀಳ ಬೆರಳಿನ ದೇವನಕ್ಕಿಯ ಕಾಲು; ಬೇಟೆಯನ್ನು ಹಿಡಿಯಲು, ಮಾಂಸವನ್ನು ಬಗೆಯಲು ಚೂಪಾದ, ಹರಿತವಾದ ಉಗುರುಗಳಿರುವ ಹದ್ದು-ಗಿಡುಗಗಳ ಬಲಿಷ್ಠ ಕಾಲು; ನೆಲವನ್ನು ಕೆದಕಲು ತಕ್ಕ ಗೌಜುಗ, ಕೋಳಿಯ ಕಾಲು; ಓಡಲು ಗಟ್ಟಿಮುಟ್ಟಾದ ಪಾದವುಳ್ಳ ನೀಳಗಾಲು ಹಕ್ಕಿಯ ಕಾಲು; ಹತ್ತಲು-ಇಳಿಯಲು ತಕ್ಕುದಾದ ಮರಕುಟ್ಟಿಗ, ಗಿಳಿಯ ಕಾಲು; ಸಿಂಪಿಗ, ಗುಬ್ಬಚ್ಚಿ ಉಲಿಯಕ್ಕಿ ಮುಂತಾದ ಹಕ್ಕಿಗಳು ರೆಂಬೆಯ ಮೇಲೆ ಕುಳಿತುಕೊಳ್ಳಲು ತಕ್ಕುದಾದ ಸಣಕಲು ಕಾಲು ಮತ್ತು ಬೆರಳುಗಳು; ಇವೆಲ್ಲ ಉದಾಹರಣೆಗಳು.
ನೋಡಲು ಎಷ್ಟೋ ಜಾತಿಯ ಹಕ್ಕಿಗಳ ಗಂಡು-ಹೆಣ್ಣುಗಳು ವಿಭಿನ್ನವಾಗಿರುತ್ತವೆ. ಧ್ವನಿಯಲ್ಲಿ ಕೂಡ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಗಂಡು ಹಕ್ಕಿ ಆಕರ್ಷಕವಾಗಿರುತ್ತದೆ. ಸಂತಾನಋತುವಿನಲ್ಲಿ ಹೆಣ್ಣುಹಕ್ಕಿಯನ್ನು ಆಕರ್ಷಿಸಲು ಗಂಡುಹಕ್ಕಿಯು ಮಾಡುವ ನರ್ತನ, ಹಾಡುವಿಕೆ ಮತ್ತು ಇತರ ಅಂಗಚೇಷ್ಟೆಗಳನ್ನು ಕಾಣುತ್ತೇವೆ. ಒಂದು ಹಕ್ಕಿಗೆ ಒಂದಕ್ಕಿಂತ ಹೆಚ್ಚು ಸಂಗಾತಿಗಳು ಸಾಮಾನ್ಯ. ಹಾಗಾಗಿ ಪಕ್ಷಿಗಳ ಧ್ವನಿ ಪೆಟ್ಟಿಗೆಯೂ ಕೂಡ ಹಕ್ಕಿಗಳ ಜೀವನ ಶೈಲಿಗೆ ಅನುಗುಣವಾಗಿ ಮಾರ್ಪಾಡಾಗಿವೆ.
ಆದ್ದರಿಂದ ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ತನ್ನ ಜೀವನಶೈಲಿ ಮಾತ್ರವಲ್ಲದೆ ಮತ್ತೊಂದು ಜೀವಿಯ ಜೀವನಕ್ಕೂ ಪೂರಕವಾಗಿ ದೇಹರಚನೆಯನ್ನು ಹೊಂದಿದೆ.

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

