ಇವನ್ನೆಲ್ಲಾ ಮರೆತು ಹೋಗಿದ್ದಾಗ ಹರಿಕತೆ ದಾಸರ ನೆನಪು ನನಗೆ ಮತ್ತೆ ಧುತ್ತೆಂದು ಬಂದದ್ದು ರಾಜಧಾನಿಯಲ್ಲಿ ಚಂದ್ರಶೇಖರ ಕಂಬಾರರು ಅಭಿನಯಿಸಿದ ಒಂದು ನಾಟಕ ನೋಡಿದಾಗ. ಕಂಬಾರರು ನಾಟಕ ಮಾಡಿದಾಗ ಕೆಂಪು ಜುಬ್ಬ ಧರಿಸಿ ತಲೆಗೆ ರುಮಾಲು ಕಟ್ಟಿ ಸೊಂಟಕ್ಕೆ ಬಟ್ಟೆ ಬಿಗಿದು, ಕಾಲಿನ ಗೆಜ್ಜೆ ಕುಣಿಸಿ ಡಾನ್ಸ್ ಮಾಡುತ್ತಾ ನಾಟಕ ಮಾಡಿದಾಗ ಯಾವುದೋ ಬೇರೆ ಲೋಕಕ್ಕೆ ಹೋದ ಹಾಗೆ ಭಾಸವಾಗಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

ಹಿಂದಿನ ಸಂಚಿಕೆಯಲ್ಲಿ ರಾಜಾಜಿನಗರದ ಮೊದಲ ಅಯ್ಯಪ್ಪ ದೇವಸ್ಥಾನದ ಬಗ್ಗೆ ವಿವರಿಸಿದ್ದೆ. ಇಲ್ಲಿನ ಕೇರಳ ಕಾಲೋನಿ ಬಗ್ಗೆ ಹೇಳಿದ್ದೆ. ಗುರುಸ್ವಾಮಿಗಳ ಬಗ್ಗೆ ಹೇಳಿದ್ದೆ. ಕೇರಳದಿಂದ ಇಲ್ಲಿಗೆ ಬಂದು ಹೆಸರು ಮಾಡಿದ ಹಲವಾರು ಖ್ಯಾತರು ಇಲ್ಲಿದ್ದಾರೆ. ಅವರಲ್ಲಿ ಕೆಲವರು ಇಲ್ಲಿನ ಕಾರ್ಮಿಕ ಸಂಘಟನೆಗಳ ನಾಯಕರಾಗಿದ್ದರು. ಅದೇ ರೀತಿ ಕೇರಳಕ್ಕೆ ಹೋಗಿ ಅಲ್ಲಿ ಹೆಸರು ಮಾಡಿದ ನಮ್ಮವರು ಕಡಿಮೆ. ಆದರೂ ಹೆಸರು ಮಾಡಿದವರು ಬಹುಕಾಲ ಅವರ ಹೆಸರು ಉಳಿಯುವ ಕೆಲಸ ಮಾಡಿದ್ದಾರೆ. ನಮ್ಮ ವಿಜ್ಞಾನಿ ಶ್ರೀ ಸಿ ಆರ್ ಸತ್ಯ ಅವರು ತಿರುವನಂತಪುರದ isro ದಲ್ಲಿ ಕರ್ನಾಟಕ ಸಂಘ ಶುರು ಮಾಡಿ ಬೆಳೆಸಿದ್ದು ಹೇಳಿದ್ದೆ. ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಕುರಿತು ಸತ್ಯ ಅವರು ಬರೆದಿರುವ ಪುಸ್ತಕ (ಅಳಿವಿಲ್ಲದ ಸ್ಥಾವರ) ಬಹುಕಾಲ ಉಳಿಯುವ, ಅಲ್ಲಿನ ಜನರೇ ಮಾಡಿರದ ಚಾರಿತ್ರಿಕ ದಾಖಲೆ. ಹಿಂದೆ ಈ ರೀತಿಯ ಪುಸ್ತಕ ಬಂದ ಹಾಗಿಲ್ಲ. ಹಾಗೇ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಮ್ಮ ಅಪ್ಪ ಪಟ್ಟ ಪಾಡು ಹೇಳಿದ್ದೆ. ಶ್ರೀ ನಾ. ಕಸ್ತೂರಿ, ಕನ್ನಡದ ಖ್ಯಾತ ಹಾಸ್ಯ ಸಾಹಿತಿ ಕೇರಳದವರು, ಇಲ್ಲಿ ಬಂದು ಕನ್ನಡ ಕಲಿತು ಕನ್ನಡ ಭಾಷೆಯಲ್ಲಿ ನೂರ್ಕಾಲ ಬಾಳುವ ಸಾಹಿತ್ಯ ರಚಿಸಿದರು. ಸಾಯಿಬಾಬಾ ಕುರಿತು ಅವರು ರಚಿಸಿರುವ ಕೃತಿ ಹಲವು ಭಾಷೆಗಳಿಗೆ ಭಾಷಾಂತರವಾಗಿದೆ. ಕಾರ್ಮಿಕ ನಾಯಕ ವಿ ಜೆ ಕೆ ನಾಯರ್, ಬಾಬು ಮಾಥ್ಯು, ಶ್ರೀಧರ ಅರಂಗಿಲ್, ನಂಬಿಯಾರ್ ಮುಂತಾದ ಸುಮಾರು ಕಾರ್ಮಿಕ ನಾಯಕರು ಕೇರಳದವರು.

ಮನೆಯವರಿಗೆ ಪ್ರಾಣ ದೇವರ ಗುಡಿಯಿಂದ ಲೋಟದಲ್ಲಿ ತೀರ್ಥ ತೆಗೆದುಕೊಂಡು ಹೋಗುತ್ತಿದ್ದ ಸಂಗತಿ ನನ್ನ ಸ್ನೇಹಿತೆ ನೆನೆಸಿಕೊಂಡರು. ಮನೆಯವರಿಗೆ ತೀರ್ಥ, ಪಂಚಾಮೃತ ಪ್ರಸಾದ ತೆಗೆದುಕೊಂಡು ಹೋಗುವುದು ಇವೆಲ್ಲ ಹೇಗೆ ನಮ್ಮ ಬಾಲ್ಯದೊಂದಿಗೆ ಹಾಸು ಹೊಕ್ಕಾಗಿತ್ತು ನೋಡಿ. ಈಗ ದೇವಸ್ಥಾನಗಳಲ್ಲಿ ದೊನ್ನೆಯಲ್ಲಿ ಪ್ರಸಾದ ಕೊಡುತ್ತಾರೆ. ಮನೆಯಲ್ಲಿರುವ ಹೆಂಡತಿಗೆ ಮತ್ತೊಂದು ಪ್ರಸಾದವನ್ನು ಎಂಬತ್ತರ ಹಿರಿಯರೊಬ್ಬರು ಕೇಳಿದರು. ದೇವಸ್ಥಾನದವರಿಗೂ ಹಿರಿಯರಿಗೂ ಭಾರೀ ಜಗಳವೇ ಆಗಿ ಹೋಯಿತು. ಇದರ ರಿಸಲ್ಟ್ ಅಂದರೆ ಹಿರಿಯರು ದೇವಸ್ಥಾನಕ್ಕೆ ಹೋಗೋದು ನಿಲ್ಲಿಸಿದರು. ಇದು ನನಗೆ ಗೊತ್ತಿರುವ ದೇವಸ್ಥಾನದಲ್ಲಿ ನಡೆದದ್ದು…!

ಮುಂದೆ..

ಅಂದ ಹಾಗೆ ಬೆಂಗಳೂರಿನ ಮಿಕ್ಕ ಭಾಗಗಳಲ್ಲಿ ರಾಜಾಜಿನಗರ ಹುಟ್ಟಿದ ಆಸುಪಾಸಿನಲ್ಲೇ ಹುಟ್ಟಿದ ಪ್ರದೇಶಗಳಲ್ಲಿ ಇರುವಷ್ಟು ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚುಗಳು ಇಲ್ಲಿ ಕಾಣದು. ಇದು ಯಾಕೆ ಹೀಗೆ ಎಂದು ಯೋಚಿಸಿದ್ದೇನೆ. ಒಂದು ತಮಾಷೆಯ ಆದರೆ ನಿಜವೂ ಇರಬಹುದಾದ ಸಂಗತಿ ಹೊಳೆದಿದೆ. ರಾಜಾಜಿನಗರದ ಹೆಚ್ಚಿನ ಮೂಲ ನಿವಾಸಿಗಳು ಕಾರ್ಮಿಕರು. ಅವರ ಕೆಲಸದ ತಾಣದಲ್ಲಿ ಇವರನ್ನು ಪ್ರತಿನಿಧಿಸುತ್ತಾ ಇದ್ದವರು ಹಾರ್ಡ್ ಕೋರ್ ಕಮ್ಯುನಿಸ್ಟ್ ನಾಯಕರು. ಇಲ್ಲಿನ ಮೂಲ ನಿವಾಸಿಗಳಲ್ಲಿ ಸುಮಾರು ಜನ ಕಟ್ಟಾ ಕಮ್ಯುನಿಸ್ಟರು ಮತ್ತು ಪಾರ್ಟಿ ಕಾರ್ಡ್ ಹೋಲ್ಡರ್‌ಗಳು. ಬೆಳವಣಿಗೆ ಸಮಯದಲ್ಲಿ ಕಮ್ಯುನಿಸ್ಟ್ ಕಾಂ. ಎಂ ಎಸ್ ಕೃಷ್ಣನ್ ಇಲ್ಲಿಯ ಲೀಡರ್. ಅಲ್ಲದೆ ಈ ನೌಕರರು ಮತ್ತು ಅವರ ಕುಟುಂಬ ಮೊದಮೊದಲು ಕಮ್ಯುನಿಸ್ಟ್ ಪಾರ್ಟಿಯ ಒಲವು ಮತ್ತು ಹಿಡಿತದಲ್ಲಿ ಇದ್ದವರು. ಆ ಕಾಲದಲ್ಲಿ ಸಹಜವಾಗಿ ದೇವರ ಕುರಿತು ಹೆಚ್ಚಿನ ಒಲವು ಇಲ್ಲದವರು. ದೇವರ ಬಗ್ಗೆ ಒಲವು ಇಲ್ಲದ್ದು ಒಂದು ಕಾರಣ ಮತ್ತೊಂದು ದೇವರು ಧರ್ಮ ಎನ್ನುವುದು ಅಫೀಮು ಇದ್ದ ಹಾಗೆ ಎನ್ನುವ ಕಾರ್ಲ್ ಮಾರ್ಕ್ಸ್ ನ ಮಾತನ್ನು ಅಕ್ಷರಶಃ ನಂಬಿದ್ದ ಕಾರ್ಮಿಕರು. ಬಹುಶಃ ಈ ಕಾರಣಕ್ಕೆ ಅಂದಿನ ಕಾರ್ಮಿಕರು ದೇವಸ್ಥಾನ, ಮಸೀದಿ, ಚರ್ಚುಗಳ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರಿರಲಾರರು ಎಂದು ನನ್ನ ವೈಲ್ಡ್ ಥಿಂಕಿಂಗ್..!

ಅದರ ಜತೆಗೆ ಹಣಕಾಸಿನ ಮುಗ್ಗಟ್ಟು ಇಂತಹ ಸಾಹಸಗಳಿಗೆ ಉತ್ತೇಜಿಸಿರಲಾರದು. ಅಂದ ಹಾಗೆ ಅಂದಿನ ಕಮ್ಯುನಿಸ್ಟ್ ನಾಯಕರಾಗಿದ್ದ ಸೂರ್ಯನಾರಾಯಣ ರಾವ್ ಸೂರಿ, ಕೃಷ್ಣನ್, ಗೋಪಿ, ಬಿನ್ನಿಮಿಲ್ ಸಂಘದ ಮುನಿರತ್ನ, ವಕೀಲ ಎಂ ಸಿ. ನರಸಿಂಹನ್, ಈಗಿನ ಅನಂತಸುಬ್ಬರಾವ್…. ಇವರು ಯಾರೂ ಕುಂಕುಮ, ವಿಭೂತಿ, ಮುದ್ರೆ, ನಾಮ ಇವುಗಳನ್ನು ಸಾರ್ವಜನಿಕವಾಗಿ ಧರಿಸುತ್ತಿರಲಿಲ್ಲ. ಕೃಷ್ಣನ್ ಭಾಷಣ ಮಾಡಬೇಕಾದರೆ “ನಮ್ಮ ಜುಟ್ಟು ಜನಿವಾರ ಅವರ ಕೈಲಿ ಕೊಟ್ಟು…..” ಎನ್ನುವ ವಾಕ್ಯವನ್ನು ಬಹಳ ಧಾರಾಳವಾಗಿ ಉಪಯೋಗಿಸುತ್ತಿದ್ದರು. ಇಲ್ಲಿ ಅವರ ಕೈಲಿ ಎಂದರೆ ಕಾರ್ಖಾನೆ ಆಡಳಿತ ವರ್ಗ…. ಎನ್ನುವ ಅರ್ಥ. ದೇವರು ಮತ್ತು ಮತೀಯ ಭಾವನೆಗಳು ಹಾಗೂ ಸಂಪ್ರದಾಯಗಳು ಹೊರ ಜಗತ್ತಿಗೆ ಪ್ರದರ್ಶನವಾಗದೇ ಮನೆಯ ನಾಲ್ಕು ಗೋಡೆಗಳ ಒಳಗೆ ಇರುತ್ತಿತ್ತು. ಈಗಿನ ಕಾಲಮಾನದಲ್ಲಿ ಬದಲು ಆದ ಕಮ್ಯುನಿಸ್ಟರು ಹಣೆ ತುಂಬ ಕುಂಕುಮ ಹಚ್ಚಿಕೊಂಡು ಓಡಾಡೋದು ನೋಡಿದೀನಿ, ದೇವಸ್ಥಾನದಲ್ಲಿ ತುಂಬಾ ಆಕ್ಟೀವ್ ಆಗಿರುವ ಕಮ್ಯುನಿಸ್ಟರು ಇದ್ದಾರೆ. ಹಣೆ ತುಂಬಾ ಡಾಳಾಗಿ ವಿಭೂತಿ ಪಟ್ಟೆ ಹಾಕುವ ನಾಯಕರು ನನಗೆ ಗೊತ್ತು. ಸಾರ್ವಜನಿಕವಾಗಿ ದೇವರ ಪೂಜೆ ಮಾಡುವ ಕಮ್ಯುನಿಸ್ಟರು ಇದ್ದಾರೆ. ಆಗಿನ ಕಾರ್ಲ್ ಮಾರ್ಕ್ಸ್, ಈಗ ತುಂಬಾ dilute ಆದನೇ ಎಂಬ ಸಂಶಯ ನನ್ನದು! ನನ್ನ ಈ ಅನಿಸಿಕೆಗೆ ಯಾವುದೇ ಆಧಾರ ಇಲ್ಲ ಎಂದು ನನ್ನ ಗೆಳೆಯರು ಝಾಡಿಸುತ್ತಾರೆ. ನಿಜ ಇರಬಹುದು!

ಈ ಕಾರಣದಿಂದ ದೇವಸ್ಥಾನಗಳ ಸಾಂದ್ರತೆ ರಾಜಾಜಿನಗರದಲ್ಲಿ ಆಗ ಕಡಿಮೆ ಇರಬಹುದು. ಇದು ನನ್ನ ವೈಯಕ್ತಿಕ ಅನಿಸಿಕೆ. ಬೇರೆ ಕಾರಣಗಳೂ ಇರಬಹುದೇನೋ, ತಿಳಿಯದು.

(ಗುರುರಾಜುಲು ನಾಯ್ಡು)

ಪ್ರತಿ ದಸರಾ ಸಮಯದಲ್ಲಿ ನಾಡಹಬ್ಬವನ್ನು ಈಗಿನ ಬಸವೇಶ್ವರ ಶಾಲೆ ಪಕ್ಕದ ಜಾಗದಲ್ಲಿ ಎಂಟು ಹತ್ತು ದಿವಸ ಆಚರಿಸುತ್ತಿದ್ದರು. ಇದರ ಹಿಂದೆ ಶ್ರೀ ಪೀ ಆರ್. ಮುಂಡೆವಾಡಿ ಎನ್ನುವವರು ಸಕ್ರಿಯವಾಗಿದ್ದ ರು. ಫುಲ್ ಸೂಟ್ ತೊಟ್ಟು ಕೆಂಪು ಬಣ್ಣದ ಅವರು ಚಟ ಪಟ ಓಡಾಡುವುದನ್ನು ನೋಡುವುದೇ ಒಂದು ಸಂತಸ. ಅವರ ಹೆಸರು ಆಗ ಒರಿಜಿನಲ್ ಬೆಂಗಳೂರಿಗನಾದ ನನಗೆ ವಿಚಿತ್ರ ಅನಿಸಿತ್ತು. ನಮ್ಮ ಕಡೆ ಯಾರಿಗೂ ಈ ರೀತಿ ಹೆಸರು ಇರಲಿಲ್ಲ.. ಮೊಟ್ಟ ಮೊದಲ ಬಾರಿಗೆ ಇಂತಹ ಹೆಸರು ಕೇಳಿದ್ದೆ. ಅವರ ತಾಯಿ ಅವರನ್ನು ಮುದ್ದಿಗೆ ಮುಂಡೆ ಎಂದು ಕರೆಯುತ್ತಿದ್ದರಾ ಎಂದೂ ಅನಿಸುತ್ತಿತ್ತು. ನಮ್ಮಲ್ಲಿ ಮುದ್ದಿಗೆ ಕೃಷ್ಣ ಕಿಟ್ಟಿ, ಶಾಮರಾವ್ ಶಾಮಿ, ಹನುಮಂತು ಅಪ್ಪಿ, ಹಣ್ಮಿ, ಲಕ್ಷ್ಮಿ ಲಚ್ಚಿ, ಅಚ್ಚಿ, ಪ್ರಹ್ಲಾದ ಪಲ್ಲಿ, ಪಾಲಿ.. ಆದಹಾಗೆ. ಅವರ ಹೆಸರು ವಿಚಿತ್ರ ಆದ್ದರಿಂದ ಈಗಲೂ ನೆನಪಿದೆ ಅಂತ ಕಾಣುತ್ತೆ.

ಅವರು ರಾಜ್ಯ ಸರ್ಕಾರದ ಹುದ್ದೆಯಲ್ಲಿದ್ದರು ಎಂದು ಕೇಳಿದ್ದೆ. ನಮ್ಮ ಸ್ಥಳೀಯ ತಾರೆಗಳು ನಾಟಕ ನೃತ್ಯ ಮೊದಲಾದ ಪ್ರದರ್ಶನ ಕೊಡುತ್ತಿದ್ದರು. ನಮ್ಮ ನಿವಾಸಿಯೆ ಆಗಿದ್ದ ಶ್ರೀ ರಾಜಾರಾಂ ಗಿರಿಯನ್ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರು ಮುಖ್ಯ ಪಾತ್ರದಲ್ಲಿದ್ದ ಪರ್ವತ ವಾಣಿ ಅವರ ಬಹದ್ದೂರ್ ಗಂಡು, ಎಚ್ಚಮ ನಾಯಕ ನಾಟಕದ ಒಂದೆರೆಡು ಪಾತ್ರ ಈಗಲೂ ತಲೆಯಲ್ಲಿ ಇದೆ. ಬಹದ್ದೂರ್ ಗಂಡು ನಾಟಕದಲ್ಲಿ ಒಂದೇ ರೀತಿ ಕಾಣುವ ಎರಡು ಪಾತ್ರಗಳನ್ನು ನಮಗೆ ಗೊತ್ತಿದ್ದ ರಾಮಣ್ಣ ಮತ್ತು ಅವರ ತಮ್ಮ ಸಂಜೀವ ಅನ್ನುವರು ಮಾಡಿದ್ದರು. ತಮ್ಮಾಜಿ ಎನ್ನುವವರು ಸಹ ನಾಟಕ ಮಾಡುತ್ತಿದ್ದರು. ಗಿರಿಯನ್ ನಂತರ ಚಲನಚಿತ್ರ ಪ್ರವೇಶಿಸಿದರು. ಕೆಲವು ಸಿನಿಮಾಗಳಲ್ಲೂ ಮಾಡಿದರು. ಅವರ ಫೋಟೋ ಪೇಪರ್‌ಗಳಲ್ಲಿ ಸಹ ಬಂದಿತ್ತು. ನಂತರ ಅವರ ಸುದ್ದಿ ಹೆಚ್ಚು ಕೇಳಲಿಲ್ಲ. ನರಸಿಂಹ ಜಯಂತಿ ಅಂಗವಾಗಿ ಹಳೇ ಪೋಲೀಸ್ ಸ್ಟೇಶನ್ ಬಳಿಯಲ್ಲಿ ಶ್ರೀ ಗುರುರಾಜಾಚಾರ್ ಅವರು, ಅವರ ಮನೆ ಮುಂದೆ ಚಪ್ಪರ, ಶಾಮಿಯಾನ ಹಾಕಿ ಹರಿಕತೆ ಮತ್ತು ಸಂಗೀತ ಏರ್ಪಾಟು ಮಾಡುತ್ತಿದ್ದರು. ಅಲ್ಲೇ ನಾವು ಆಗಿನ ಖ್ಯಾತರಾದ ಗುರುರಾಜುಲು ನಾಯ್ಡು, ಹಂಡೆ ಗುರು ವೇದವ್ಯಾಸ ದಾಸರು, ಕರಿಗಿರಿ ದಾಸರು, ಗೋಪಿನಾಥ ದಾಸರು, ಭದ್ರಗಿರಿ ಅಚ್ಯುತದಾಸರು, ಭದ್ರಗಿರಿ ಕೇಶವದಾಸರು ಇವರ ಹರಿಕಥೆ ಕೇಳಿ ಕೇಳಿ ಕೇಳಿದ್ದು. ಆಗ ಹರಿಕತೆ ಮಾಡುವ ಹೆಂಗಸರು ಗೊತ್ತೇ ಇರಲಿಲ್ಲ. ನಂತರ ಈ ಕ್ಷೇತ್ರಕ್ಕೆ ಹೆಂಗಸರ ಪ್ರವೇಶ ಆಯಿತು ಮತ್ತು ಅವರನ್ನು ನಾವು ಹರಿಕತೆ ದಾಸರು ಎಂದೇ ಕರೆದೆವು. ಹರಿಕತೆ ದಾಸಿಯರು ಎಂದು ಕರೆಯದೆ ನಮ್ಮ ಭಾಷಾ ಗಾಂಭೀರ್ಯ ಮತ್ತು ಭಾಷಾ ಮರ್ಯಾದೆ ಕಾಪಾಡಿಕೊಂಡೆವು!

ಇಲ್ಲೇ ನಾವು ಸುಮಾರು ಸಂಗೀತಗಾರರ ಕಚೇರಿ ಕೇಳಿದ್ದು. ಶ್ರೀ ಎ.ಸುಬ್ಬರಾಯರ ಸಂಗೀತ ಇಲ್ಲಿ ಕೇಳಿದ ನೆನಪು ಇನ್ನೂ ಹಸಿರು, ಹಸಿರು. ಅವರು ಹಾಡುತ್ತಿದ್ದ ದಾಸರ ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ, ನನ್ನಮ್ಮನಿಗೆ ತುಂಬಾ ಇಷ್ಟ. ಆಗಾಗ್ಗೆ ಅದನ್ನು ತುಂಬಾ ಸಂತೋಷದಿಂದ ಅನುಭವಿಸಿ ಹಾಡುತ್ತಿದ್ದಳು. ಯಾವುದೇ ಗುರುಗಳ ಬಳಿಯಲ್ಲಿಯೂ ಸಂಗೀತ ಕಲಿಯದ ಅಮ್ಮನ ಸಂಗೀತದ ಬಗ್ಗೆ ಮುಂದೆ ಹೇಳುತ್ತೇನೆ. ಹರಿಕತೆಗಳಲ್ಲಿ ಮಿಕ್ಕವರ ಹರಿಕಥೆಗಳಿಗಿಂತ ಕೇಶವದಾಸರ ಹರಿಕತೆ ವಿಭಿನ್ನ ಆಗಿರುತ್ತಿತ್ತು, ಉಪಕಥೆಗಳು ಹೆಚ್ಚು. ಹರಿಕತೆ ಕಳೆಗಟ್ಟಬೇಕಾದರೆ ಉಪಕಥೆಗಳು ಹೆಚ್ಚಿರಬೇಕು ಮತ್ತು ಸಮಾಜ ತಿದ್ದುವ ಹಾಗಿರಬೇಕು ಅನ್ನುವುದು ಕೇಳಿದ್ದೆ. ಹರಿಕತೆ ದಾಸರು ಎಂದರೆ ಅವರುಗಳು ಹಲವು ಕಲೆಗಳ ಆಗರ. ನೃತ್ಯ, ಸಂಗೀತ, ವಾದ್ಯ ವಾದನ, ನಾಟಕ ಹೀಗೆ ತಮ್ಮ ಕಥಾನಕದಲ್ಲಿ ಈ ಎಲ್ಲಾ ಅಂಶಗಳನ್ನೂ ಹೊರ ಹೊಮ್ಮಿಸುತ್ತಿದ್ದರು. ಕಾಲಿಗೆ ಗೆಜ್ಜೆ, ಹೆಗಲಿಗೆ ಆಸರೆಯಾಗಿ ಇರುತ್ತಿದ್ದ ತಂಬೂರಿ, ಕೊರಳಿಗೆ ಹೂವಿನ ಹಾರ, ಬಲಗೈಯಲ್ಲಿ ತಾಳ… ಈ ಕಾಸ್ಟ್ಯೂಮ್ ಒಂದಿಗೆ ದಾಸರು ಕುಣಿಯುತ್ತಾ ಹಾಡುತ್ತಾ ಅಭಿನಯಿಸುತ್ತಾ ಹರಿಕತೆ ಮಾಡುತ್ತಿದ್ದರು. ಕೆಲವರು ಎದುರು ಹಾರ್ಮೋನಿಯಂ ಇಟ್ಟುಕೊಳ್ಳುತ್ತಿದ್ದರು. ಪಟ ಪಟ ಹಾರ್ಮೋನಿಯಂ ಕುಟ್ಟುವುದೆಂದರೆ ಕೆಲವು ದಾಸರಿಗೆ ಅದೇನೋ ಖುಷಿ! ಹೆಣ್ಣು ಪಾತ್ರ ಅಂದರೆ ಹೆಣ್ಣೇ ಆಗುತ್ತಿದ್ದರು. ಹೆಣ್ಣು ಧ್ವನಿಯಲ್ಲಿ ಪ್ರೀತಿ ಪ್ರೇಮ ದುಃಖ ಹರಿಯುತ್ತಿತ್ತು. ಯಾವ ಪಾತ್ರ ಆದರೂ ಲೀಲಾಜಾಲವಾಗಿ ಅದೇ ಆಗುತ್ತಿದ್ದರು. ಈಗ ಹರಿಕತೆ ಮಾಡುವವರು ಕಣ್ಮರೆ ಆಗಿದ್ದಾರೆ ಮತ್ತು ಹೊಸಬರೂ ಅಷ್ಟಾಗಿ ಕಾಣಿಸುತ್ತಿಲ್ಲ. ಜನ ಮಾನಸವನ್ನು ರಂಜಿಸಿದ, ಪ್ರಾಮಾಣಿಕ ಜೀವನಕ್ಕೆ ಪುರಾಣ ಪುಣ್ಯಕತೆಗಳ ಮೂಲಕ ಪ್ರೇರೇಪಿಸಿದ ಪುರಾತನ ಕಲೆಯೊಂದು ಕಣ್ಣೆದುರಿಗೇ ನಶಿಸಿ ಹೋಗುವುದು ನನ್ನಂತಹವರಿಗೆ ದುಃಖದ, ನೋವು ಕೊಡುವ ಸಂಗತಿ. ಇದಕ್ಕೆ ಪರಿಹಾರ ಇಲ್ಲವೇನೋ. ಈಗ ಗುರುರಾಜಾಚಾರ್ ಅವರೂ ಇಲ್ಲ, ಆಗಿನ ಹಲವು ಮೌಲ್ಯಗಳೂ ಸಹ ಇಲ್ಲ. ಕಾಲಾಯ ತಸ್ಮೈ ನಮಃ!

ನಮಗೆ ಹರಿಕತೆಗಳು ತುಂಬಾ ಹತ್ತಿರ ಆಗಿದ್ದು ಹೀಗೆ. ಗುರುರಾಜುಲು ನಾಯ್ಡು ಮುಂದೆ ಸಿನಿಮಾ ತಾರೆಯಾಗಿ ಅರುಣ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡರು. ಹಲವಾರು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದರು. ಹಣ್ಣೆಲೆ ಚಿಗುರಿದಾಗ ಸಿನಿಮಾದಲ್ಲಿ ಇವರ ಪಾತ್ರ ಇನ್ನೂ ನನ್ನ ಮನಸ್ಸಿನಲ್ಲಿದೆ. ಈಗಲೂ ಅವರ ಹರಿಕತೆಗಳು ಯು ಟ್ಯೂಬ್ ನಲ್ಲಿ ಅತ್ಯಂತ ಜನಪ್ರಿಯ.

ಇವನ್ನೆಲ್ಲಾ ಮರೆತು ಹೋಗಿದ್ದಾಗ ಹರಿಕತೆ ದಾಸರ ನೆನಪು ನನಗೆ ಮತ್ತೆ ಧುತ್ತೆಂದು ಬಂದದ್ದು ರಾಜಧಾನಿಯಲ್ಲಿ ಚಂದ್ರಶೇಖರ ಕಂಬಾರರು ಅಭಿನಯಿಸಿದ ಒಂದು ನಾಟಕ ನೋಡಿದಾಗ. ಬೆಂಗಳೂರಿನ ನಮಗೆ ಕಾಲೇಜು ಮೇಷ್ಟರು ಅಂದರೆ ಸೂಟ್ ಬೂಟ್ ತೊಟ್ಟ ಶಿಸ್ತಿನ ಮನುಷ್ಯರು. ಈ ದಿರಿಸು ಬಿಟ್ಟು ಬೇರೆ ಡ್ರೆಸ್‌ನಲ್ಲಿ ಅವರನ್ನು ನೋಡೇ ಇರಲಿಲ್ಲ. ನಮ್ಮ ಕನ್ನಡ ಮೇಷ್ಟರು ಸಹ ಸೂಟು ಬೂಟಿನವರೇ, ಒಂದೆರೆಡು ಅಪವಾದ ಬಿಟ್ಟು. ಎಂ ಈ ಎಸ್ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದ ಶ್ರೀ ಶ್ರೀನಿವಾಸ ಶರ್ಮಾ ಅವರು ಸೂಟ್ ತೊಟ್ಟಿದ್ದು ನಾವು ನೋಡಿರಲಿಲ್ಲ. ಅದೇ ಎಂ ಈ ಎಸ್ ಕಾಲೇಜಿನ ಕ ವೆಂ. ರಾಜಗೋಪಾಲ್ ಅವರು ಒಮ್ಮೊಮ್ಮೆ ಸೂಟು. ಗವರ್ಮೆಂಟ್ ಕಾಲೇಜಿನಲ್ಲಿ ಎಂ ವಿ ಸೀತಾರಾಮಯ್ಯ, ಜಿ. ಬ್ರಹ್ಮಪ್ಪ ಇಬ್ಬರೇ ಪಂಚೆ ಕೋಟ್. ಮಿಕ್ಕ ಎಲ್ಲರೂ ಶಿವಪ್ಪ, ಹಂಪನಾ, ಪಟವಾರಿ,… ಎಲ್ಲರೂ ಸೂಟು! ಚಂದ್ರಶೇಖರ ಕಂಬಾರರು ಮೊದಲು ರಾಜಧಾನಿಯಲ್ಲಿ ನಾಟಕ ಮಾಡಿದಾಗ ಅವರು ಕೆಂಪು ಜುಬ್ಬ ಧರಿಸಿ ತಲೆಗೆ ರುಮಾಲು ಕಟ್ಟಿ ಸೊಂಟಕ್ಕೆ ಬಟ್ಟೆ ಬಿಗಿದು, ಕಾಲಿನ ಗೆಜ್ಜೆ ಕುಣಿಸಿ ಡಾನ್ಸ್ ಮಾಡುತ್ತಾ ನಾಟಕ ಮಾಡಿದಾಗ ಯಾವುದೋ ಬೇರೆ ಲೋಕಕ್ಕೆ ಹೋದ ಹಾಗೆ ಭಾಸವಾಗಿತ್ತು.

(ಚಂದ್ರಶೇಖರ ಕಂಬಾರ)

ಒಬ್ಬರು ಸಾಧ್ವಿ ಗುಂಡೂರಾವ್, ಕೊಂಚ ಕಾಲ ನಮಗೆ ಮೇಷ್ಟರು ಆಗಿದ್ದರು. ಅವರು ಹಾಸ್ಯ ಲೇಖನ ಬರೆಯುತ್ತಿದ್ದರು ಮತ್ತು ಒಮ್ಮೆ ತರಗತಿಯಲ್ಲಿ ಅವರು ಬರೆದ, ಪತ್ರಿಕೆಯಲ್ಲಿ ಬಂದಿದ್ದ ಲೇಖನ ಓದಿದ್ದರು. ಪತ್ರಿಕೆ ಬಹುಶಃ ನಗುವ ನಂದ ಇರಬೇಕು, ನೆನಪಿಲ್ಲ. ಸಾಧ್ವಿ ಗುಂಡೂರಾವ್ ಅವರ ಸಂಪರ್ಕ ಮುಂದಕ್ಕೆ ಬೆಳೆಯಲೇ ಇಲ್ಲ.

ಮೊದಲ ವಿದ್ಯಾರ್ಥಿ ಚಳವಳಿ ನಮ್ಮಲ್ಲಿ ಆಗಿದ್ದು, ಅದೆಲ್ಲೂ ದಾಖಲೆಯೇ ಆಗಲಿಲ್ಲ. ಅದರ ಬಗ್ಗೆ ತಮಗೆ ಹೇಳಲೇ ಬೇಕು. ನಮ್ಮ ಹೈಸ್ಕೂಲಿನಲ್ಲಿ ಗಂಡು ಹುಡುಗರಿಗೆ ಯೂನಿಫಾರ್ಮ್ ಅಂದರೆ ಸಮವಸ್ತ್ರ ಧರಿಸಿ ಶಾಲೆಗೆ ಬರಬೇಕು ಎಂದು ರೂಲ್ ಮಾಡಿದರು. ಬಹುತೇಕ ಬಡವರೇ ತುಂಬಿ ತುಳುಕುತ್ತಿದ್ದ ಶಾಲೆ ಅದು. ಬಡವರಿಗೆ ಯೂನಿಫಾರ್ಮ್ ಹಾಕಿಕೊಂಡು ಬರಬೇಕು ಎನ್ನುವ ರೂಲು ನಮ್ಮ ಮೇಲಿನ ಹೊರೆ, ದಬ್ಬಾಳಿಕೆ ಎಂದು ಗೋಪಾಲಸ್ವಾಮಿಗೆ ಅನಿಸಿತು. ಹುಡುಗರನ್ನು ಸೇರಿಸಿದ. ಮುಷ್ಕರ ಹೂಡಿ ರೂಲ್ ಬದಲಾಯಿಸಲು ಒತ್ತಡ ಹಾಕಬೇಕು ಎಂದು ತೀರ್ಮಾನ ಆಯಿತು. ಅದರಂತೆ ಹುಡುಗರು ತರಗತಿಗಳಿಗೆ ಚಕ್ಕರ್ ಹೊಡೆದೆವು. ಸೈಕಲ್‌ಗೆ ಶಿಲುಬೆ ಆಕಾರದಲ್ಲಿ ದಬ್ಬೆ ಕಟ್ಟಿ ಒಂದು ಬಿಳೀ ಅಂಗಿ ಅದರ ಕೆಳಗೆ ಬಿಳಿ ಚಡ್ಡಿ ಕಟ್ಟಿ ಯೂನಿಫಾರ್ಮ್‌ನ ಹಾಗೆ ಕಾಣುವಂತೆ ನೇತು ಹಾಕಿ ಮೆರವಣಿಗೆ ಮಾಡಿದೆವು. ಗೋಪಾಲಸ್ವಾಮಿ ಘೋಷಣೆ ಕೂಗಿಸುತ್ತಾ, ಎರಡೂ ಕೈ ಮೇಲೆತ್ತಿ ಆಡಿಸುತ್ತಾ ಲೀಡ್ ಮಾಡಿದ. ಒಂದು ಕಲ್ಲು ಎಸೀಲಿಲ್ಲ, ಒಂದು ಗಾಜು ಒಡೆಯಲಿಲ್ಲ….! ಒಬ್ಬ ಪೊಲೀಸು ಸಹ ಕಾಣಿಸಲಿಲ್ಲ. ಸ್ಕೂಲ್ ಮಾಲೀಕರು ಹಾಗೂ ಪ್ರಿನ್ಸಿಪಾಲ್ ಆಗಿದ್ದ ಶ್ರಿ ಯು ವಿ ರಾಮಚಂದ್ರ ರಾಯರು ನಿಂತು ಈ ದೃಶ್ಯ ನೋಡಿದರು.

ನಂತರ ರಸ್ತೆಗೆ ಅಡ್ಡ ನಿಂತರು. ಯೂನಿಫಾರ್ಮ್ ಅಂದರೆ ಎಷ್ಟು ಶಿಸ್ತು, ಬಡವ ಶ್ರೀಮಂತ ಎಲ್ಲರೂ ಯೂನಿಫಾರ್ಮ್ ಹಾಕಿದರೆ ಎಲ್ಲರೂ ಒಂದೇ ಆಗ್ತಾರೆ ಅಂತ ವಿವರಿಸಿದರು. ಹುಡುಗರು ಜಗ್ಗಲಿಲ್ಲ.

ಯೂನಿಫಾರ್ಮ್ ಬೇಡ ಅಂದರೆ ಸ್ಕೂಲು ಬಿಟ್ಟು ಹೋಗಿ, ಟಿ ಸಿ ಕೊಡ್ತೀನಿ, ನಿಮ್ಮ ಅಪ್ಪ ಅಮ್ಮನ್ನ ಕರಕೊಂಡು ಬನ್ನಿ… ಅಂದರು!

ಇದು ನನ್ನ ಮೊದಲನೆ ಮುಷ್ಕರ. ನಂತರ ಕಾಲೇಜು, ಕಾರ್ಖಾನೆಗಳಲ್ಲಿ ಅದೆಷ್ಟು ಮುಷ್ಕರ ಮಾಡಿದ್ದೀನೋ ಕಂಡಿದ್ದೀನೋ ಅದು ಇನ್ನೂ ಹಸಿರು ಹಸಿರು. ಕಾಲೇಜು, ಕಾರ್ಖಾನೆ ಮುಷ್ಕರದಲ್ಲಿ ಮುಂದೆ ನಿಂತು ಘೋಷಣೆ ಕೂಗಿದ್ದು ನೆನಪಿದೆ.

ಸ್ಕೂಲಿನ ಮುಷ್ಕರ ಮುರಿದು ಬಿತ್ತು. ಮುಂದೆ ಒಬ್ಬ ದೊಡ್ಡ ನಾಯಕ ಆಗೋನು ಹುಟ್ಟಿದ್ದ; ರಾಷ್ಟ್ರ ಮಟ್ಟದ ನಾಯಕ ಆಗಬೇಕಿದ್ದ ಗೋಪಾಲ ವಕೀಲಿ ವೃತ್ತಿ ಹಿಡಿದ. ಕಾರ್ಮಿಕ ಲೋಕಕ್ಕೆ ಆದ ನಷ್ಟ ಬಾರ್‌ಗೆ(ಅಂದರೆ ವಕೀಲಿ ವೃತ್ತಿಗೆ) ಲಾಭದಲ್ಲಿ ಸಂದಿತು!

*****

ನನ್ನ ಹಿರಿಯ ಆತ್ಮೀಯರು ಮತ್ತು ಗೆಳೆಯರಾದ ಶ್ರೀ ಆನಂದ ರಾಮರಾವ್ ಅವರು ಈ ಮಾಹಿತಿಯನ್ನು ಕಳಿಸಿದ್ದಾರೆ…..
“ತಾವು ಬರೆಯುತ್ತಿರುವ ಹಳೆ ಬೆಂಗಳೂರು ಕಥೆಗಳು ಸರಣಿಯ ಒಂಬತ್ತನೇ ಕಂತು ಓದುತ್ತಿದ್ದಾಗ ನನ್ನಲ್ಲಿ ಹಾಗೆಯೇ ಕೆಲವು ನೆನಪುಗಳು ಹಾದು ಹೋದವು. ಅದರಲ್ಲಿ ತಾವು ಹೆಸರಿಸಿರುವ ಡಿ. ಎನ್. ಮೂರ್ತಿ ರಾವ್ ರವರ ಬಗ್ಗೆ ಓದಿದಾಗ ನನ್ನ ಬಾಲ್ಯದ ಅಂದರೆ ಐವತ್ತರ ದಶಕದ ಕೆಲವು ನೆನಪುಗಳು ಮೂಡಿ ಬಂದುವು. ಆ ಸಮಯದಲ್ಲಿ ನಾವು ಸಿಟಿ ಮಾರುಕಟ್ಟೆ ಸಮೀಪದ ಸೀಗೇಬೇಲಿಯಲ್ಲಿ ವಠಾರದ ಮನೆಯೊಂದರಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ 12- 13ವರ್ಷ. ನಮ್ಮ ಎದುರು ಮನೆಯ ವಠಾರದಲ್ಲಿ ಒಬ್ಬರಿದ್ದರು. ಅವರು ಗುಬ್ಬಿ ನಾಟಕ ಕಂಪನಿಯಲ್ಲಿ ಮೇಕಪ್ ಮಾಡುತ್ತಿದ್ದರೆಂದು ಕೇಳಿದ್ದೆ. ಆತನ ಹೆಸರು ಡಿ. ಎನ್. ಮೂರ್ತಿ ರಾವ್ ಎಂದು ಹೇಳುತ್ತಿದ್ದ ನೆನಪು. ಅವರ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಗುಬ್ಬಿ ಕಂಪನಿಯ ನಾಟಕಗಳಲ್ಲಿ ಬಾಲಕಲಾವಿದೆಯಾಗಿದ್ದಳು. ಆಕೆ ಅಭಿನಯದ ಒಂದು ಪೌರಾಣಿಕ ನಾಟಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಿದ್ದ ನೆನಪು. ನಾವು ಸೀಗೇಬೇಲಿಯ ಮನೆಯನ್ನು ಬಿಟ್ಟು ಬೇರೆ ಬಡಾವಣೆಗೆ ಹೋದ ನಂತರ ನಮಗೆ ಅವರ ನೆನಪೇ ಇಲ್ಲವಾಗಿತ್ತು. ನೀವು ಲೇಖನದಲ್ಲಿ ತಿಳಿಸಿರುವ ಮೂರ್ತಿ ರಾಯರ ಮುಖಭಾವವು ನನ್ನ ಮನಸ್ಸಿನಲ್ಲಿ ಮೂಡಿಬರುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ಕನ್ನಡ ಸಿನಿಮಾ – ಇತಿಹಾಸದ ಪುಟಗಳಲ್ಲಿ(ಲೇ: ಗಂಗಾಧರ ಮೊದಲಿಯಾರ್ )ಪುಸ್ತಕದಲ್ಲಿ ಮೂರ್ತಿ ರಾಯರ ಚಿತ್ರ ಪ್ರಕಟವಾಗಿದೆ. ಸತಿ ಸುಲೋಚನಾ ಚಿತ್ರದಲ್ಲಿ ರಾಮನ ಪಾತ್ರ ವಹಿಸಿದ್ದ ಡಿ ಎನ್. ಮೂರ್ತಿ ರಾವ್ ಎಂದು ವಿವರಣೆ ನೀಡಿದ್ದಾರೆ ಬಹುಶಃ ಅವರೇ ಇರಬಹುದು ಎಂದು ನನ್ನ ಊಹೆ. ಹೇಗಾದರೂ ಇರಲಿ ಎಂದು ನನ್ನ ಅನಿಸಿಕೆಯನ್ನು ತಮಗೆ ತಿಳಿಸುತ್ತಿದ್ದೇನೆ.”

ಪೂರಕ ಮಾಹಿತಿ ನೀಡಿದ ಶ್ರೀ ಆನಂದ ರಾಮರಾಯರಿಗೆ ಕೃತಜ್ಞ. ನೆನಪುಗಳು ನೋಡಿ, ಪಟಾಕಿ ಸರ ಹಚ್ಚಿದ ಹಾಗೆ. ಒಂದು ನೆನಪಿನ ಹಿಂದೆ ಮತ್ತೊಂದು, ಅದರ ಹಿಂದೆ ಇನ್ನೂ ಒಂದು… ಹೀಗೆ ನಮ್ಮ ಬಿಎಂಟಿಸಿ ಬಸ್ಸುಗಳ ಹಾಗೆ ಪೈಪೋಟಿಯಲ್ಲಿ ನುಗ್ಗುತ್ತದೆ..!

(ಮುಂದುವರೆಯುವುದು…)