ಅಣ್ಣ ಒಂದು ಮಾತನ್ನೂ ಬೈಯ್ಯದೆ ಅದನ್ನು ನನಗಾಗಿ ಬಿಟ್ಟು ಹೋಗಿದ್ದು ಅಂತ ನನಗೆ ಗೊತ್ತಾಗಿಹೋಗಿತ್ತು. ಆದರೂ ಅದನ್ನು ಕತ್ತರಿಸಿ ನನ್ನ ಅಳತೆಗೆ ಹೊಲಿಸಿಕೊಳ್ಳಲು ನನಗೆ ಸುತರಾಂ ಇಷ್ಟವಿರಲಿಲ್ಲ. ಹಂಗಾಗಿ ಮೊದಲ ದಿನ ಅದನ್ನು ಹೆಂಗೆ ಹಾಕಿಕಂಡಿದ್ದೆನೋ ಹಂಗೆಯೇ ಹಾಕಿಕೊಳ್ಳುತ್ತಿದ್ದೆ. ಅಷ್ಟೊತ್ತಿಗೆ ನಾನು ಅಣ್ಣನ ಪ್ಯಾಂಟನ್ನು ಕೆಲವು ಸಾರ್ತಿ ಸ್ಕೂಲಿಗೆ ಹಾಕಿಕಂಡು ಹೋಗಿದ್ದೆ. ಅದಕ್ಕೂ ಮುಂಚೆ ತೊಡರು ಮುಳ್ಳಿಗೆ ಸಿಕ್ಕಿ ಹರಿದಿದ್ದನ್ನು ಅಜ್ಜಿ ಸೂಜಿಯಲ್ಲಿ ಹೊಲಿದು ಕೊಟ್ಟಿತ್ತು. ಹಂಗಾಗಿ ಅಜ್ಜಿ ಕೈ ಹೊಲಿಗೆ ಹಾಕಿದ್ದ ಆ ಭಾಗ ಸಣ್ಣ ಜರಿಯೊಂದು ನುಡುಕಂಡು ಅಲ್ಲಿ ಮಲಗಿರುವಂತೆ ಎದ್ದು ಕಾಣುತ್ತಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ನಾಲ್ಕನೆಯ ಕಂತು
ನಾನೂ ಸೇರಿದಂತೆ ನನ್ನ ಜತೆ ಓದುತ್ತಿದ್ದ ವಾರಿಗೆಯ ಹುಡುಗರು ಹೆಚ್ಚೂ ಕಡಿಮೆ ಹೈಸ್ಕೂಲ್ ಮುಗಿಯುವವರೆಗೂ ಪ್ಯಾಂಟು ಅಂತ ಹಾಕಿದವರಲ್ಲ. ಎಲ್ಲೋ ತೆಳ್ಳಗೆ ಬಳ್ಳಗೆ ಹಂಗೊಬ್ಬರು ಹಿಂಗೊಬ್ಬರು ಹಾಕ್ಕಂಡು ಬರ್ತಾ ಇದ್ದರು. ಅದೂ ತುಂಬಾ ವಿಶೇಷ ಸಂದರ್ಭಗಳಲ್ಲಿ ಮಾತ್ರ. ಇನ್ನುಳಿದಂತೆ ಅಂಗಿ ಚೆಡ್ಡಿಗಳೇ ಖಾಯಂ. ನಾನು ಓದುತ್ತಿದ್ದ ಶೆಟ್ಟೀಕೆರೆಯ ಜನತಾ ಹೈಸ್ಕೂಲಿನಲ್ಲಿ ಕಪ್ಪು ಚೆಡ್ಡಿ ಬಿಳಿ ಅಂಗಿಗಳ ಯೂನಿಫಾರ್ಮ್ ಇತ್ತು. ಜತೆಗೆ ತಲೆಯಲ್ಲಿ ಬಿಳಿಯ ಟೋಪಿ ಕಡ್ಡಾಯವಾಗಿ ಇರಬೇಕಿತ್ತು. ಅಪರೂಪಕ್ಕೆ ಪ್ಯಾಂಟ್ಗಳನ್ನು ಹಾಕಿಕಂಡು ಬರುತ್ತಿದ್ದವರನ್ನು ಕಂಡರೆ ನಮಗೆ ಜೀವ ಮಿಳ್ಳೆನ್ನುತ್ತಿತ್ತು. ಈ ಪ್ರಯುಕ್ತ ಮನೆಗಳಲ್ಲಿ ಎಷ್ಟು ಗೋಗರೆದರೂ ಗೋಳಾಡಿದರೂ ನಮ್ಮ ಗೋಳಿಗೆ ಪ್ರತಿಫಲ ಸಿಕ್ಕುತ್ತಿರಲಿಲ್ಲ. ಯಾಕೆಂದರೆ ಮನೆಗಳಲ್ಲಿನ ಆಗಿನ ಪರಿಸ್ಥಿತಿಯೂ ಹಂಗಿರುತ್ತಿತ್ತು. ಸಾಲದ್ದಕ್ಕೆ ಆಗಿನ್ನೂ ನಮ್ಮಂಥ ಹಳ್ಳಿಯ ಸ್ಕೂಲುಗಳಲ್ಲಿ ಅದು ಅಷ್ಟಾಗಿ ಚಾಲ್ತಿಯಲ್ಲಿಯೂ ಇರಲಿಲ್ಲ. ಹಂಗಾಗಿ ಚಿಕ್ಕನಾಯಕನಹಳ್ಳಿಗೆ ಎಸ್.ಎಸ್.ಎಲ್ಸಿ ಪರೀಕ್ಷೆಗಳನ್ನು ಬರೆಯಲು ಬಹುತೇಕರು ತಮ್ಮ ನಿತ್ಯದ ಯೂನಿಫಾರ್ಮ್ಗಳಾದ ಅಂಗಿ ಚೆಡ್ಡಿಗಳಲ್ಲೇ ಹೋಗುತ್ತಿದ್ದರು. ಕೆಲವರು ಹತ್ತನೇ ಕ್ಲಾಸಿನ ಪರೀಕ್ಷೆಯ ನೆಪದಲ್ಲಿ ಅತ್ತೂ ಕರೆದು ಪ್ಯಾಂಟುಗಳಿಗೆ ದುಂಬಾಲು ಬಿದ್ದು ಹೊಲಿಸಿಕೊಳ್ಳುತ್ತಿದ್ದರು. ಈ ಪ್ಯಾಂಟುಗಳಂತೆ ಹೈಸ್ಕೂಲ್ ಮುಗಿಯುವವರೆಗೂ ನನ್ನಂಥ ಬಹಳಷ್ಟು ಮಕ್ಕಳು ಕಾಲಿಗೆ ಚಪ್ಪಲಿಗಳನ್ನೂ ಕಾಣದಿದ್ದ ದಿನಗಳು ಅವು. ನಾನೂ ಈ ಪ್ಯಾಂಟು ಮತ್ತು ಚಪ್ಪಲಿಗಳನ್ನು ಕಂಡದ್ದು ಹತ್ತನೆ ಕ್ಲಾಸಿನ ಪರೀಕ್ಷೆಯನ್ನು ಬರೆಯಲು ಹೋಗುವ ಸಂದರ್ಭದಲ್ಲೇ. ಹಂಗಂತ ಆವರೆವಿಗೂ ಪ್ಯಾಂಟನ್ನೇ ಹಾಕಿಕೊಂಡಿರಲಿಲ್ಲವ ಅಂದರೆ ಹಾಕಿಕಂಡಿದ್ದೆ. ಆದರೆ ಅದು ನಂದಲ್ಲ. ನನ್ನ ಅಣ್ಣನದ್ದು. ಅಣ್ಣನಿಗೆ ನಾನು ಹೈಸ್ಕೂಲಿನಲ್ಲಿ ಓದುವ ಕಾಲಕ್ಕೇ ಕೆಲಸ ಸಿಕ್ಕಿದ್ದರಿಂದ ಅಣ್ಣ ಊರಿಗೆ ಬರುವಾಗ ಹಾಕಿಕಂಡು ಬರುತ್ತಿದ್ದ ಪ್ಯಾಂಟಿನ ಜತೆಗೆ ಬ್ಯಾಗಿನಲ್ಲಿ ಮತ್ತೊಂದು ಪ್ಯಾಂಟು ಇರುತ್ತಿತ್ತು.
ಅಣ್ಣ ಆ ಸಾರ್ತಿ ಊರಿಗೆ ಬಂದಿದ್ದಾಗ ಪ್ಯಾಂಟನ್ನು ಬಿಚ್ಚಿ ನಡುಮನೆಯ ಗೂಟಕ್ಕೆ ನೇತಾಕಿ ಲುಂಗಿ ಉಟ್ಟುಕಂಡು ಬೆಳಬೆಳಗ್ಗೆಯೇ ಹೊಲದ ಕಡೆ ಹೋಗಿದ್ದರು. ಇನ್ನೂ ತಿಂಡಿಯ ಹೊತ್ತಾಗಲು ಬಾಳಾ ಹೊತ್ತಿತ್ತು. ಆದರೆ ಸ್ಕೂಲಿಗೆ ಹೋಗುವ ಹೊತ್ತಾಗತೊಡಗಿತ್ತು. ಯಾಕೆಂದರೆ ಆ ದಿನ ಶನಿವಾರವಾಗಿತ್ತು. ಆದ್ದರಿಂದ ಮಾರ್ನಿಂಗ್ ಕ್ಲಾಸಿತ್ತು. ಹೊಲದತ್ತ ಹೋಗಿದ್ದ ಅಣ್ಣ ಇನ್ನೂ ಬಂದಿರಲಿಲ್ಲ. ನಡುಮನೆಯ ಗೂಟದಲ್ಲಿದ್ದ ಪ್ಯಾಂಟು ಕಣ್ಣು ನನ್ನ ಕಣ್ಣು ಕುಕ್ಕತೊಡಗಿತ್ತು. ಶನಿವಾರ ಕಡ್ಡಾಯವಾಗಿ ಯೂನಿಫಾರ್ಮ್ ಹಾಕಿಕಂಡು ಹೋಗಬೇಕಿತ್ತು. ಇಲ್ಲದಿದ್ದರೆ ಪಿ.ಟಿ. ಮೇಷ್ಟ್ರು ನಾರಾಯಣ್ ಕೈಯ್ಯಿಂದ ಗೂಸಾ ತಿನ್ನಬೇಕಿತ್ತು. ಪ್ಯಾಂಟಿನ ಮೋಹ ಆ ಗೂಸಾ ತಿನ್ನುವುದಕ್ಕೂ ನನ್ನ ಮನಸನ್ನು ಅಣಿಗೊಳಿಸಿಬಿಟ್ಟಿತ್ತು. ಅವತ್ತು ಬೆಳಗಿನಿಂದಲೂ ಕ್ವಾರೆ ಕವಿದಿತ್ತು. ನಮ್ಮದು ತೋಟದ ಮನೆಯಾಗಿದ್ದರಿಂದ ಸೂರ್ಯ ಮಾರುದ್ದ ಬೆಳೆದಿದ್ದರೂ ತೋಟದೊಳಗಿನ ಗಿಡಮರಗಳಿಂದ ಇನ್ನೂ ಆ ಕ್ವಾರೆ ತೊಟ್ಟಿಕ್ಕುತ್ತಿತ್ತು. ಆ ದಿನದ ನನ್ನ ಕೊಟ್ಟಿಗೆ ಗುಡಿಸುವ ಕೆಲಸ ಅಜ್ಜಿಗೆ ಬಿದ್ದಿತ್ತು. ಅಯ್ಯ ಕೊಟ್ಟಿಗೆಯ ಜಗಲಿಯಲ್ಲಿ ಹೋರಿಕರುಗಳಿಗೆ ಸಪ್ಪೆ ಕಡ್ಡಿ ತಿನ್ನಿಸುತ್ತಿತ್ತು. ಅವ್ವ ಅಡಿಗೆ ಮನೆಯಲ್ಲಿ ತಿಂಡಿ ಮಾಡುತ್ತಿತ್ತು. ಸರಿಯಾದ ಚಿಮಣಿ ಇಲ್ಲದ್ದರಿಂದ ಅಡಿಗೆ ಮನೆಯ ಹೊಗೆ ನಡುಮನೆ ಮತ್ತು ಪಡಸಾಲೆಗಳಲ್ಲಿ ಅಟಕಾಯಿಸಿಕಂಡಿತ್ತು. ಹಂಗೆ ಅಟಕಾಯಿಸಿಕಂಡಿದ್ದ ಹೊಗೆಯಲ್ಲೇ ಗಬಗಬನೆ ರೊಟ್ಟಿಯನ್ನು ತಿಂದವನೇ ಗೂಟದಲ್ಲಿದ್ದ ಅಣ್ಣನ ಪ್ಯಾಂಟನ್ನೆತ್ತಿಕಂಡು ಕಳ್ಳ ಬೆಕ್ಕಿನಂಗೆ ಆಚೆಯ ರೂಮಿಗೆ ಹೋಗಿ ಬಾಗಿಲಾಕಿಕಂಡೆ. ಚಡ್ಡಿಯನ್ನು ಬಿಚ್ಚಿದವನೇ ಆ ಪ್ಯಾಂಟನ್ನು ಕಾಲಿಗೇರಿಸಿಕೊಂಡೆ. ಅಣ್ಣ ಸ್ವಲ್ಪ ಉಂಟಾಗಿ ಉದ್ದಕ್ಕಿದ್ದದ್ದರಿಂದ ಪ್ಯಾಂಟು ದೊಗಳೆ ದೊಗಳೆಯಾಗಿದ್ದಲ್ಲದೆ ಪೂರಾ ನೆಲದಲ್ಲಿ ಈಜಾಡತೊಡಗಿತು. ಹಂಗೆ ಈಜಾಡತೊಡಗಿದ ಅದನ್ನು ಒಂದೆರಡು ಮಡಿಕೆ ಮಡಿಚಿಕಂಡು ನನ್ನ ಅಳತೆಗೆ ಸರಿಮಾಡಿಕಂಡೆ. ಆದರೆ ಸೊಂಟದಲ್ಲಿ ಅದನ್ನು ಕೂರಿಸುವ ಅಂತ ನೋಡಿದರೆ ಸುಮಾರು ಅರ್ಧ ಅಡಿಯಷ್ಟು ಸಡಿಲವಾಗಿತ್ತು. ಈಗೇನು ಮಾಡುವುದು? ತಕ್ಷಣಕ್ಕೇನೂ ತೋಚಲಿಲ್ಲ. ಕೈಯ್ಯಲ್ಲಿ ಹಿಡಿದಾಗ ಮಾತ್ರ ಸೊಂಟದಲ್ಲಿ ನಿಲ್ಲುತ್ತಿದ್ದ ಪ್ಯಾಂಟು ಕೈ ಬಿಡುತ್ತಲೇ ಸೀದಾ ಕೆಳಗುದುರಿಬಿಡುತ್ತಿತ್ತು. ಒಂದೆರಡು ಸಾರ್ತಿ ಹಂಗೆ ಬಿತ್ತು. ಅಷ್ಟೊತ್ತಿಗೆ ಪ್ಯಾಂಟನ್ನು ಸೊಂಟದಲ್ಲಿ ನಿಲ್ಲಿಸುವುದಕ್ಕೆ ಒಂದು ಉಪಾಯ ಹೊಳೆದಿತ್ತು. ಅದೆಂದರೆ ಅದನ್ನು ಸೊಂಟದಲ್ಲಿದ್ದ ಉಡುದಾರಕ್ಕೆ ಸುತ್ತಲೂ ಬಿಗಿಯಾಗಿ ಸಿಕ್ಕಿಸುವುದು. ಅದು ಹೊಳೆಯುತ್ತಲೇ ದೊಗಳೆಯಾಗಿದ್ದ ಪ್ಯಾಂಟಿನ ಭಾಗವನ್ನು ಹಿಡಿದು ಸೊಂಟದಲ್ಲಿದ್ದ ಕಪ್ಪು ಉಡುದಾರಕ್ಕೆ ಸಿಕ್ಕಿಸಿ ಆ ಉಡುದಾರವನ್ನು ಮತ್ತಷ್ಟು ಬಿಗಿ ಹಚ್ಚಿದೆ. ಆಗ ಪ್ಯಾಂಟಿನ ದೊಗಳೆಯೆಲ್ಲ ನನ್ನ ಸೊಂಟದ ಸುತ್ತಲೂ ಸುಕ್ಕುಗಳಾಗಿ ಆ ಸುಕ್ಕುಗಳನ್ನು ಉಡುದಾರ ಹದ್ದುಬಸ್ತಿನಲ್ಲಿಟ್ಟಿತ್ತು. ಹಂಗೇನೇ ಆ ಸುಕ್ಕುಗಳು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಹಂಗಂಗೆ ಸುರುಟಿಕೊಳ್ಳುತ್ತಿದ್ದವು. ಆದೇನೇ ಆಗಲಿ ಆಗ ಆ ಪ್ಯಾಂಟು ಸೊಂಟದಲ್ಲಿ ನಿಂತ ಪರಿಗೆ ಖುಷಿಯೋ ಖುಷಿಯಾಗಿತ್ತು. ತಕ್ಷಣವೇ ರೂಮಿನ ಬಾಗಿಲನ್ನು ಅರೆ ಮಾಡಿ ನೋಡಿದೆ. ನಡುಮನೆಯಲ್ಲಿ ಯಾರ ಸುಳಿವೂ ಇರಲಿಲ್ಲ. ಚಕ್ಕನೆ ರೂಮಿನ ಮೂಲೆಯಲ್ಲಿದ್ದ ಸ್ಕೂಲಿನ ಬ್ಯಾಗನ್ನು ಹೆಗಲಿಗಾಕಿಕಂಡು ಓಡುತ್ತಾ ನಡುಮನೆಯನ್ನೂ ಹಂಗೇನೇ ತೋಟದ ಹೊಳೆಬಾಕ್ಲನ್ನೂ ದಾಟಿ ರಸ್ತೆ ತಲುಪಿದೆ. ಮತ್ತೆ ನಮ್ಮ ತೋಟದ ಮೂಲೆಯವರೆಗೂ ಓಡುವುದ ನಿಲ್ಲಿಸಲಿಲ್ಲ. ಸೂರ್ಯ ಮೇಲೆ ಬಂದಿದ್ದ. ನನ್ನ ಮುಂದೆ ನಿನ್ನ ಆಟ ನಡೆಯಲ್ಲ ತಿಳುಕೋ ಅಂತ ಆವರೆವಿಗೂ ಅಟಕಾಯಿಸಿಕಂಡಿದ್ದ ಕ್ವಾರೆಗೆ ಗುದ್ದು ಕೊಟ್ಟು ಕಾಲ್ಕೀಳಿಸಿದ್ದ. ಆದರೆ ಆ ಚುಮುಚುಮು ಬೆಳಕಲ್ಲಿ ಚಳಿ ಮಾತ್ರ ಗತ್ತು ಬಿಟ್ಟುಕೊಟ್ಟಿರಲಿಲ್ಲ. ಸ್ಕೂಲು ಹತ್ತಿರವಾಗತೊಡಗಿದಂತೆ ಎದೆ ಸಣ್ಣಗೆ ಡವಗುಡತೊಡಗಿತು. ಯೂನಿಫಾರ್ಮ್ ಇಲ್ಲದ್ದರಿಂದ ಲಾತು ಬೀಳೋದು ಗ್ಯಾರಂಟಿಯಾಗಿತ್ತು. ಬೇಗನೆ ಸ್ಕೂಲು ತಲುಪಿದೆ. ಬೆಲ್ಲು ಹೊಡೆಯಲು ಇನ್ನೂ ಹೊತ್ತಿತ್ತು. ಆದರೂ ಅಷ್ಟೊತ್ತಿಗಾಗಲೇ ಮುಕ್ಕಾಲು ಮಂದಿ ಮಕ್ಕಳು ಬಂದಿದ್ದರು. ಒಳಗೆ ಭಯ ಆಡುತ್ತಿದ್ದರೂ ಮೊಟ್ಟ ಮೊದಲ ಬಾರಿ ಹಾಕಿದ್ದ ಪ್ಯಾಂಟಿನ ಖುಷಿಯಲ್ಲಿ ಅದು ಕೊಚ್ಚಿ ಹೋಗುತ್ತಿತ್ತು. ಆದರೂ ಕೂತಲ್ಲಿ ಕೂರಲಾಗದೆ ಸ್ಕೂಲಿನ ಕಾರಿಡಾರಿನಲ್ಲಿ ಅಡ್ಡಾಡಿದೆ. ಬೆಲ್ಲು ಹೊಡೆಯಿತು. ಜನಗಣಮನ ಹೇಳಲು ಸರದಿಯಂತೆ ನಂನಮ್ಮ ತಾವಿನಲ್ಲಿ ನಿಂತುಕಂಡೆವು. ನಾನೂ ಸೇರಿ ಒಂದೈದಾರೂ ಜನರಿಗೆ ಮಾತ್ರ ಯೂನಿಫಾರ್ಮ್ ಇರಲಿಲ್ಲ. ಹೆಡ್ ಮೇಷ್ಟ್ರು ಶಂಕರಲಿಂಗಪ್ಪನವರು ಸೇರಿದಂತೆ ಎಲ್ಲಾ ಮೇಷ್ಟ್ರುಗಳೂ ನಮ್ಮೆದುರು ಬಂದು ನಿಂತರು. ಆದರೆ ನಾರಾಯಣ ಮೇಷ್ಟ್ರು ಮಾತ್ರ ಕಾಣಲಿಲ್ಲ. ಶಂಕರಲಿಂಗಪ್ಪನವರೇ ಪ್ರಾರ್ಥನೆಯನ್ನು ಶುರು ಮಾಡಿಸಿದ್ದರಿಂದ ನನ್ನ ಮನ ನಿರಾಳವಾಯ್ತು. ಅವತ್ತು ಪಿ.ಟಿ.ಮೇಷ್ಟ್ರು ರಜೆ ಹಾಕಿದ್ದರು. ಹಂಗಂತ ಅವತ್ತು ಬೀಳಬೇಕಾಗಿದ್ದ ಒದೆಗಳು ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದವು. ಯಾಕೆಂದರೆ ಅವತ್ತು ಯಾರ್ಯಾರು ಯೂನಿಫಾರ್ಮ್ ಹಾಕಿಕಂಡು ಬಂದಿರುವುದಿಲ್ಲವೋ ಅಂಥವರ ಹೆಸರನ್ನು ಬರೆದಿಟ್ಟುಕೊಳ್ಳಲು ನಮ್ಮ ಕ್ಲಾಸಿನ ಕ್ಲಾಸ್ ಲೀಡರ್ ಆಗಿದ್ದ ರಾಜೇಅರಸ್ಗೆ ಗುಟ್ಟಾಗಿ ವಹಿಸಿದ್ದರು. ಅವನು ನನ್ನ ಪರಮಾಪ್ತ ಗೆಳೆಯನಾಗಿದ್ದರೂ ದಿನವೂ ಇಬ್ಬರೂ ಅಕ್ಕಪಕ್ಕದಲ್ಲೇ ಕೂರುತ್ತಿದ್ದರೂ ಇತರರ ಜತೆ ನನ್ನ ಹೆಸರನ್ನೂ ಬರೆದು ಸೋಮವಾರ ಪಿ.ಟಿ ಮೇಷ್ಟ್ರಿಗೆ ಕೊಟ್ಟಿದ್ದ. ಆಗ ನಾನು ಹತ್ತನೇ ಕ್ಲಾಸಿನಲ್ಲಿದ್ದೆ. ಮುಂದಿನ ಮೂರು ತಿಂಗಳಿಗೆ ಪರೀಕ್ಷೆಗಳಿದ್ದವು.
ಅವತ್ತು ಮಾರ್ನಿಂಗ್ ಕ್ಲಾಸನ್ನು ಮುಗಿಸಕಂಡು ಮನೆಗೆ ಬರುವ ಹೊತ್ತಿಗೆ ಅಣ್ಣ ಮತ್ತು ಅಯ್ಯ ನಡುಮನೆಯಲ್ಲಿ ಯಾವುದೋ ಮಾತುಕತೆಯಲ್ಲಿ ಮುಳುಗಿದ್ದರು. ಅವರ ಮಾತುಗಳು ಅಸ್ಪಷ್ಟವಾಗಿ ಹೊಳೆಬಾಕ್ಲಿಗೇ ಕೇಳುತ್ತಿದ್ದವು. ಆವರೆಗೂ ಪ್ಯಾಂಟನ್ನು ಹಾಕಿಕಂಡು ಹೋಗಿ ಅನುಭವಿಸುತ್ತಿದ್ದ ಖುಷಿಯೆಲ್ಲಾ ಜರ್ರನೇ ಕರಗಿ ಅದು ಸಣ್ಣದೊಂದು ಆತಂಕಕ್ಕೆ ತಿರುಗಿತು. ಹಂಗಾಗಿ ತಕ್ಷಣ ಮನೆಯೊಳಕ್ಕೆ ಹೋಗದೆ ಹೋಳೆಬಾಕ್ಲಲ್ಲೇ ನಿಂತಿದ್ದೆ. ಮಾಗಿ ಕಾಲದ ಮಧ್ಯಾಹ್ನದ ಬಿಸಿಲು ತದುಕುತ್ತಿತ್ತು. ಅಣ್ಣ ಅಯ್ಯ ಇಬ್ಬರೂ ಮನೆಯಲ್ಲಿರದಿದ್ದಲ್ಲಿ ಒಂಚೂರೂ ಅಳುಕಿಲ್ಲದೆ ಹೋಗಿಬಿಡುತ್ತಿದ್ದೆ. ಸ್ವಲ್ಪ ಹೊತ್ತು ನಿಂತು ಯೋಚಿಸಿದೆ. ಧೈರ್ಯ ಸಾಲದಾಯ್ತು. ಹಂಗಾಗಿ ಹೊಳೆಬಾಕ್ಲನ್ನು ಕೊಂಚ ವಾರೆ ಮಾಡಿಕಂಡು ಒಳಕ್ಕೆ ಹೋಗಿ ಮನೆಯ ಪಕ್ಕದಲ್ಲಿ ತಿಪ್ಪೆಯ ಮೇಲಿದ್ದ ದಪ್ಪದೊಂದು ಅಳ್ಳು ಗಿಡದ ಕವಲಿನಲ್ಲಿ ಬ್ಯಾಗನ್ನಿಟ್ಟು ಮತ್ತೆ ಹೊಳೆಬಾಕ್ಲಿಂದ ಆಚೆ ಹೋಗುವುದೂ ಗೆಳೆಯ ಕೊಚ್ಚ ಊರೊಳಗಡೆಯಿಂದ ಅತ್ತ ಬರುವುದೂ ಒಂದೇ ಆಯ್ತು. `ಎಲಾ ಇದ್ಯಾವಾಗ ಹೊಲಿಸ್ಕಂಡ್ಲ ಪ್ಯಾಂಟ್ನ’ಅಂತ ಕೊಚ್ಚ ದಡಿ ದನಿಯಲ್ಲಿ ಕೇಳಿದ. ಅವನ ದಡಿ ಬಾಯಿ ಅಯ್ಯನೋ ಅಣ್ಣನೋ ಕೇಳಿಸಿಕಂಡು ಆಚೆ ಬಂದುಬಿಟ್ಟರೆ ಅಂತ ಭಯವಾಗಿ ಅವನಿಗೆ ಕಣ್ಣು ಮಿಟುಕಿಸಿದೆ. ನಂತರ ಇಬ್ಬರೂ ತೋಟದ ಸಾಲಿನ ಬೇಲಿ ಜಾಡು ಹಿಡಿದು ಜೇನುಗಳಿಗಾಗಿ ತಡಕಾಡತೊಡಗಿದೆವು. ಕೊಚ್ಚ ಅವತ್ತು ಕ್ಲಾಸಿಗೆ ಚಕ್ಕರ್ ಹೊಡೆದಿದ್ದ. ಜೇನು ಹುಡುಕುವ ಸಲುವಾಗಿ ನನ್ನನ್ನು ಹುಡುಕಿಕಂಡು ನಮ್ಮ ಮನೆಯತ್ತಲೇ ಬರುತ್ತಿದ್ದ. ಬರುವಾಗ ಕಾಯೊಂದನ್ನು ತುರುಕಂಡು ಜೇಬಿನಲ್ಲಿಟ್ಟುಕಂಡು ಬಂದಿದ್ದ. ಅವತ್ತು ಎಂದಿನಂತೆ ಸುಲಭಕ್ಕೆ ಯಾವ ಜೇನೂ ನಮ್ಮ ಕಣ್ಣಿಗೆ ಬೀಳಲಿಲ್ಲ. ಬಿದ್ದವುಗಳಲ್ಲಿ ಕೆಲವರಲ್ಲಿ ಹುಳುಗಳಾಗಲೇ ತುಪ್ಪವನ್ನು ಕುಡುಕಂಡಿದ್ದವು. ಆ ಹೊತ್ತಿಗಾಗಗಲೇ ನಂಗೆ ಹೊಟ್ಟೆ ತುಂಬಾ ಹಸಿದಿತ್ತು. ಹಿಂಗೆ ಹುಡುಕುವಾಗ ಶೆಟ್ಟರ ತೋಟದ ಬೇಲಿಯಲ್ಲಿ ಕೊಂಚ ಉಂಟಾಗಿದ್ದ ಕಡ್ಡಿ ಜೇನು ಕಣ್ಣಿಗೆ ಬಿದ್ದಿತ್ತು. ಆದರದನ್ನು ಬೇಲಿಯ ಮತ್ತೊಂದು ಮಗ್ಗುಲಿಗೇ ಹೋಗಿ ಬಿಚ್ಚಬೇಕಿತ್ತು. ಕೊಚ್ಚ ಸಣ್ಣದೊಂದು ಕಂಡಿಯನ್ನು ಕೈಲಿದ್ದ ಕುಡ್ಲಿನಿಂದ ಒಂಚೂರು ಹಿಗ್ಗಿಸಿ ಅತ್ತ ನುಸಿದ. ನಾನು ಅವನನ್ನು ಹಿಂಭಾಲಿಸುವ ಭರದಲ್ಲಿ ನನ್ನ ಪ್ಯಾಂಟು ಆ ಕಂಡಿಯೊಳಗಿದ್ದ ತೊಡರು ಮುಳ್ಳಿಗೆ ಸಿಕ್ಕಾಕಿಕಂಡಿತು. ಬಿಡಿಸೋಣವೆಂದು ಕೈ ಇಟ್ಟರೆ ಅದು ಲಪುಕ್ಕಂಥ ಕೈಗಳನ್ನೂ ಹಿಡುಕಂಡಿತು. ಉಪಾಯವಾಗಿ ಕೈಗಳನ್ನು ಬಿಡಿಸಿಕಂಡು ಮೆಲ್ಲಗೆ ಕಂಡಿಯೊಳಗಿಂದ ಮುಂದಕ್ಕೆ ತೆವಳಿದೆ. ಹಂಗೆ ತೆವಳುವಾಗ ನನ್ನ ಬಲಗಾಲಿನ ಪ್ಯಾಂಟು ತೊಡರು ಮುಳ್ಳಿಗೆ ಸಿಕ್ಕಾಕಿಕಂಡಿತು. ಮುಂದಕ್ಕೆ ಹೋಗಲಿ ಇಲ್ಲಾ ತಿರುಗಿ ಹಿಂದಕ್ಕೇ ಹೋಗಲಿ ಪ್ಯಾಂಟು ಹರಿದು ಹೋಗುವಂತೆ ತೊಡರು ಮುಳ್ಳು ಪಟ್ಟು ಹಾಕಿಕಂಡಿತ್ತು. ಒಂದರೆ ಚಣ ಅದರೊಂದಿಗೆ ಸೆಣಸಾಡಿ ಕಡೆಗದಕ್ಕೆ ಶರಣಾಗಿಹೋಗಿದ್ದೆ. ಅದರ ಪರಿಣಾಮ ಬಲಗಾಲಿನ ಮಂಡಿಯ ಕೆಳಗಿಂದ ಮಣಕಾಲಿನವರೆಗೂ ತೊಡರು ಮುಳ್ಳು ಪ್ಯಾಂಟನ್ನು ಗಿಬರಿ ಹಾಕಿತ್ತು. ಹೆಂಗೋ ಬಿಡಿಸಿಕಂಡು ಕಂಡಿಯಿಂದ ಆಚೆ ಹೋದೆ. ಪ್ಯಾಂಟು ಹರಿದಿರುವುದನ್ನು ನೋಡುತ್ತಲೇ ಎದೆ ಧಸಕ್ಕೆಂತು. ಆ ಹೊತ್ತಿಗೆ ಕೊಚ್ಚ ಜೇನು ಕಟ್ಟಿದ್ದ ಕಡ್ಡಿಯನ್ನು ಕುಡ್ಲಿನಿಂದ ಕಡುಕಂಡು ಹುಟ್ಟಿಯನ್ನು ಕೈಯ್ಯಲ್ಲಿ ಹಿಡುಕಂಡು ಓಡಿ ಹೋಗುತ್ತಿದ್ದ. ಒಂದಷ್ಟು ಹುಳುಗಳು ಆ ಹುಟ್ಟಿಯನ್ನು ಬೆನ್ನಟ್ಟಿ ಹೋಗುತ್ತಿದ್ದವು. ಮತ್ತೊಂದಷ್ಟು ತಾವು ಹುಟ್ಟಿಯನ್ನು ಕಟ್ಟಿದ್ದ ಕಡ್ಡಿಯ ಸುತ್ತಲ ಬೇಲಿಯಲ್ಲಿ ರೊಯ್ಗುಡುತ್ತಿದ್ದವು. ಕೊಚ್ಚ ಓಡುತ್ತಲೇ ನನ್ನನ್ನು ಬಾ ಅಂತ ಕೂಗಿ ಕರೆದ. ಆದರೆ ನಾನು ಕೂತು ಹರಿದು ಹೋಗಿದ್ದ ಪ್ಯಾಂಟನ್ನು ತಡವಿಕೊಳ್ಳುತ್ತಿದ್ದೆ. ಇಳಿಯುತ್ತಿದ್ದ ಕಣ್ಣೀರನ್ನು ವರೆಸಿಕೊಳ್ಳುತ್ತಿದ್ದೆ. ಹಿಂಗೆ ನಾನು ಮಾಮೇರಿ ಸಂಕಟದಲ್ಲಿ ಇರುವಂಥಾ ಹೊತ್ತಲ್ಲಿ ಅದು ಬಿಡು ನೀವು ನಮ್ಮ ಹುಟ್ಟಿಗೆ ಕೈ ಹಾಕಿದ್ದು ಯಾಕೆ ಎಂಬಂತೆ ಇದ್ದಕ್ಕಿದ್ದಂತೆ ಒಂದೆರಡು ಹುಳುಗಳು ಬಂದದ್ದೇ ಒಂದು ಮೂಗಿನ ಮೇಲೂ ಮತ್ತೊಂದು ಕೆನ್ನೆಯ ಮೇಲೂ ಮುತ್ತಿಕ್ಕಿದವು. ಚಕ್ಕನೆ ಮೇಲೆದ್ದ ನಾನು ಆ ಹುಳುಗಳನ್ನು ಓಡಿಸಿ ಅವುಗಳು ಕಚ್ಚಿದಲ್ಲಿ ಬಿಟ್ಟಿದ್ದ ಮುಳ್ಳುಗಳನ್ನು ಕಿತ್ತಾಕಿ ಅಲ್ಲಿಂದ ಓಡತೊಡಗಿದೆ.

ಅಷ್ಟರಲ್ಲಿ ಕೊಚ್ಚ ತೆಂಗಿನ ಚೊಟ್ಟೆಯೊಂದನ್ನು ಹುಡುಕಿ ಅದರೊಳಕ್ಕೆ ಕೈಯ್ಯಲ್ಲಿದ್ದ ಹುಟ್ಟಿಯಿಂದ ಜೇನು ತುಪ್ಪವನ್ನು ಹಿಂಡಿ ಅದಕ್ಕೆ ಜೇಬಲ್ಲಿದ್ದ ಕಾಯಿ ತುರಿಯನ್ನು ಬೆರಸಿ ರುಚಿ ನೋಡುತ್ತಾ ನನ್ನತ್ತ ಬಂದ. ಪ್ಯಾಂಟಿಗೆ ಬಂದೊದಗಿದ್ದ ಸ್ಥಿತಿಯಿಂದಾಗಿ ನನಗೆ ಯಾವ ತುಪ್ಪವೂ ಬೇಡವಾಗಿತ್ತು. ಆದರೂ ಅವನ ಒತ್ತಾಯಕ್ಕೆ ಒಂದೆರಡು ಸಾರ್ತಿ ಬಾಯಿಗಾಕಿಕಂಡು ಚಪ್ಪರಿಸಿದೆ. ಆ ವೇಳೆಗೆ ಜೇನು ಹುಳುಗಳು ಕಚ್ಚಿದ್ದೆಡೆಯಲ್ಲಿ ಕಪ್ಪೆ ಹೊಟ್ಟೆಯಂಗೆ ಊದಿಕಂಡಿತ್ತು. ಅದನ್ನು ಕಂಡ ಕೊಚ್ಚ ನಗಾಡತೊಡಗಿದ. ಅವನು ನಗುವುದ ಕಂಡು ನನಗೆ ಅಳು ಬರತೊಡಗಿತು. ಆದರೆ ಆ ಅಳುವಿಗೆ ಕಾರಣ ಪ್ಯಾಂಟು ಅಂತ ಕೊಚ್ಚನಿಗೆ ತಿಳಿದಿರಲಿಲ್ಲ. ನಾನೂ ಅದನ್ನು ಹೇಳಲಿಲ್ಲ. ನನ್ನ ಅಳುವನ್ನು ಕಾಣುತ್ತಲೇ ಕೊಚ್ಚ ಮುಖವನ್ನು ಸಪ್ಪಗೆ ಮಾಡಿಕಂಡು ಅಲ್ಲೇ ಹತ್ತಿರದಲ್ಲಿ ಅಡಿಕೆ ಸೊಪ್ಪಿನ ಗಿಡವನ್ನು ಹುಡುಕಿ ಅದರ ಎಲೆಗಳ ರಸವನ್ನು ಊದಿಕಂಡಿದ್ದ ಜಾಗಕ್ಕೆ ಹಚ್ಚಿದ. ಹಿಂಗೆ ಊದಿಸಿಕಂಡ ಮುಖ ಇಟ್ಕಂಡು ಮನೆಗೆ ಹೋದರೆ ಬೈತಾರೆ ಬಾ ಅಂತ ಕೊಚ್ಚ ನನ್ನನ್ನು ಹೊಲಮಾಳಗಳ ಕಡೆಯಿಂದ ಊರಾಚೆಯ ಬಳಸಾಕಟ್ಟೆಯ ದಡದಲ್ಲಿದ್ದ ನಮ್ಮ ಕುರಿಗೂಡಿಗೆ ಕರಕಂಡು ಹೋದ. ಆಯಾಸಕ್ಕೋ, ಹಸಿವಿಗೋ ಇಲ್ಲಾ ಭಯಕ್ಕೋ ಕುರಿಗೂಡಿನೊಳಗಿನ ಮಂಚಿಗೆಗೆ ತಲೆ ಹಾಕಿದ್ದೇ ತಡ ನಿದ್ದ ಹತ್ತಿಬಿಟ್ಟಿತ್ತು. ಎಚ್ಚರವಾದಾಗ ಸಂಜೆಯಾಗಿತ್ತು. ಭಯ ಮತ್ತಷ್ಟು ಮುತ್ತಿಕಂಡಿತ್ತು. ದೂರದಲ್ಲಿ ಕುರಿಗಳು ಗೂಡಿನತ್ತ ಬರುತ್ತಿರುವ ಸದ್ದು ಕೇಳಿಸುತ್ತಿತ್ತು. ಗೂಡೊಳಗೆ ಗುಬ್ಬದಲ್ಲಿದ್ದ ಮರಿಗಳು ಆ ಸದ್ದಿಗೆ ಮರು ಸದ್ದು ಮಾಡುತ್ತಿದ್ದವು. ಊತ ಕೊಂಚ ಕಡಿಮೆಯಾಗಿತ್ತು. ಬೇಕಂತಲೇ ಬ್ಯಾಗನ್ನು ಅಳ್ಳು ಗಿಡಕ್ಕೆ ನೇತಾಕಿ ಊರೊಳಕ್ಕೆ ಕುಣಿಯಾಕೆ ಹೋಗವ್ನೆ ಬರಲಿ ಮನೆಗೆ ಅಂತ ಅಯ್ಯ ಕಾಯುತ್ತಿತ್ತು. ಸಂಜೆಯನ್ನು ಮೈಗಾಕಿಕಂಡು ಮನೆಯತ್ತ ಹೋದರೆ ಅಳ್ಳು ಗಿಡದಲ್ಲಿ ಇಟ್ಟಿದ್ದ ಬ್ಯಾಗು ಅಲ್ಲಿರಲಿಲ್ಲ. ಹತ್ತಿರ ಹೋಗಿ ನೋಡಿದರೆ ಅಯ್ಯ ಮತ್ತು ಅಣ್ಣ ಪಡಸಾಲೆಯಲ್ಲಿ ಆನೆ ಆಟ ಆಡುತ್ತಿದ್ದರು. ಒಂದು ಚಣ ಹೊರಗಿನ ಜಗಲಿಯಲ್ಲಿ ಕೂತು ನನ್ನೊಳಗಿನ ಆತಂಕವನ್ನು ಕೊಂಚ ತಮಣೆಗೆ ತಂದುಕಂಡು ಏನಾದರಾಗಲಿ ಅಂತ ನಡುಮನೆಗೆ ಕಾಲಿಟ್ಟೆ. ಅಯ್ಯ ಮತ್ತೆ ಅಣ್ಣ ನನ್ನನ್ನು ಒಟ್ಟಿಗೇ ನೋಡಿದರು. ಅವರು ನೋಡುತ್ತಲೇ ನಾನು ಅಪರಾಧಿ ಭಾವ ಹೊತ್ತು ಅಲ್ಲೇ ನಿಂತುಬಿಟ್ಟೆ. ಇನ್ನೇನು ಅಗಾಇಗಾ ಅನ್ನುವುದರೊಳಗೆ ಬೀಳಲಿರುವ ಲಾತಾಗಳಿಗೆ ಮೈ ಮನಸ್ಸುಗಳನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅವರಿಬ್ಬರೂ ಒಮ್ಮೆಗೇ ಗೊಳ್ಳೆಂದು ನಕ್ಕರು. ನನಗೆ ಹೋದ ಜೀವ ಬಂದಂಗಾಯ್ತು. ಆದರೆ ಅವರು ನಕ್ಕಿದ್ದು ಯಾಕೆಂದು ಅರ್ಥವಾಗದೆ ಕಕ್ಕಕ್ಕಾಬಿಕ್ಕಿಯಾದೆ. `ಇದೇನೋ ನಿನ್ನ ಅವ್ತಾರ ಈ ದೊಗ್ಳೆ ಪ್ಯಾಂಟ್ನ ಹಿಂಗೆಲ್ಲಾ ಸುತ್ಕೆಂಡು ಹೋಗಿದೀಯಾ?’ ಅಂತು ಅಯ್ಯ. ಪ್ಯಾಂಟನ್ನೇ ದಿಟ್ಟಿಸುತ್ತಿದ್ದ ಅಣ್ಣನಿಗೆ ಅದು ಮಂಡಿಯ ಕೆಳ ಭಾಗದಲ್ಲಿ ಅರ್ಧ ಅಡಿಯಷ್ಟು ಹರಿದು ಹೋಗಿದ್ದು ಕಂಡಿರಬೇಕು `ಹೋಗು ಹೋಗು ಅದುನ್ನ ಬಿಚ್ಚಾಕು ಮೊದ್ಲು’ ಅಂದರು. ಮಾರನೆಯ ದಿನ ಅಣ್ಣ ನಾನು ಏಳುವುದಕ್ಕೂ ಮುನ್ನ ಬೆಳಗಿನ ಜಾವದ ಬಸ್ಸಿಗೇ ಹೋಗಿದ್ದರು. ನಾನು ಹಾಕಿಕಂಡಿದ್ದ ಪ್ಯಾಂಟು ರೂಮಿನಲ್ಲಿ ಅಯ್ಯನ ಪುಟ್ಟ ಅಲಮಾರಿಗೆ ಹೊಡೆದಿದ್ದ ಮೊಳೆಯಲ್ಲಿ ನೇತಾಡುತ್ತಿತ್ತು.
ಅಣ್ಣ ಒಂದು ಮಾತನ್ನೂ ಬೈಯ್ಯದೆ ಅದನ್ನು ನನಗಾಗಿ ಬಿಟ್ಟು ಹೋಗಿದ್ದು ಅಂತ ನನಗೆ ಗೊತ್ತಾಗಿಹೋಗಿತ್ತು. ಆದರೂ ಅದನ್ನು ಕತ್ತರಿಸಿ ನನ್ನ ಅಳತೆಗೆ ಹೊಲಿಸಿಕೊಳ್ಳಲು ನನಗೆ ಸುತರಾಂ ಇಷ್ಟವಿರಲಿಲ್ಲ. ಹಂಗಾಗಿ ಮೊದಲ ದಿನ ಅದನ್ನು ಹೆಂಗೆ ಹಾಕಿಕಂಡಿದ್ದೆನೋ ಹಂಗೆಯೇ ಹಾಕಿಕೊಳ್ಳುತ್ತಿದ್ದೆ. ಅಷ್ಟೊತ್ತಿಗೆ ನಾನು ಅಣ್ಣನ ಪ್ಯಾಂಟನ್ನು ಕೆಲವು ಸಾರ್ತಿ ಸ್ಕೂಲಿಗೆ ಹಾಕಿಕಂಡು ಹೋಗಿದ್ದೆ. ಅದಕ್ಕೂ ಮುಂಚೆ ತೊಡರು ಮುಳ್ಳಿಗೆ ಸಿಕ್ಕಿ ಹರಿದಿದ್ದನ್ನು ಅಜ್ಜಿ ಸೂಜಿಯಲ್ಲಿ ಹೊಲಿದು ಕೊಟ್ಟಿತ್ತು. ಹಂಗಾಗಿ ಅಜ್ಜಿ ಕೈ ಹೊಲಿಗೆ ಹಾಕಿದ್ದ ಆ ಭಾಗ ಸಣ್ಣ ಜರಿಯೊಂದು ನುಡುಕಂಡು ಅಲ್ಲಿ ಮಲಗಿರುವಂತೆ ಎದ್ದು ಕಾಣುತ್ತಿತ್ತು. ಮಣ್ಣಿನ ಬಣ್ಣದ, ಉದ್ದದ ಗೀರುಗಳ, ಇಸ್ತ್ರಿಯ ಗೀರು ಎದ್ದು ಕಾಣುತ್ತಿದ್ದ ಈ ಪ್ಯಾಂಟಿನ ಬಗ್ಗೆ ನಂಗೆ ಇನ್ನಿಲ್ಲದ ಮೋಹವಿತ್ತು. ಹಂಗಾಗಿ ಮುಂದೆ ಹಲವು ಪ್ಯಾಂಟುಗಳನ್ನು ಹೊಲಿಸಿಕೊಂಡರೂ ಈ ಪ್ಯಾಂಟನ್ನು ಮಾತ್ರ ಜತನ ಮಾಡಿ ಇಟ್ಟುಕಂಡಿದ್ದೆ. ಒಮ್ಮೆ ಇದೇ ಪ್ಯಾಂಟು ನನ್ನನ್ನು ಇನ್ನಿಲ್ಲದ ಅಪಹಾಸ್ಯಕ್ಕೆ ಗುರಿ ಮಾಡಿತ್ತು.
ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ಹತ್ತನೆಯ ಕ್ಲಾಸಿನ ಮಕ್ಕಳಿಗೆ ಅವತ್ತು ರಿವಿಷನ್ ಮಾಡುವ ಸಲುವಾಗಿ ಮರಿಯಪ್ಪ ಮೇಷ್ಟ್ರು ಸ್ಪೆಷಲ್ ಕ್ಲಾಸ್ ತಗಂಡಿದ್ದರು. ಉಳಿದ ಕ್ಲಾಸಿನವರಿಗೆ ರಜೆ ಇತ್ತು. ಅವತ್ತು ಯೂನಿಫಾರ್ಮ್ನ ಹಂಗಿರಲಿಲ್ಲ. ಹಂಗಾಗಿ ಅವತ್ತು ಕೂಡಾ ಅದೇ ಪ್ಯಾಂಟ್ ಹಾಕಿಕಂಡು ಹೋಗಿದ್ದೆ. ಮಧ್ಯಾಹ್ನಕ್ಕೆಲ್ಲಾ ಕ್ಲಾಸು ಮುಗಿದಿತ್ತು. ಊರಿಗೆ ಹೋಗುವವರು ಹೋಗಿದ್ದರು ಮಿಕ್ಕವರು ಸ್ಕೂಲ್ ಮೈದಾನದಲ್ಲಿ ಅದೂ ಇದೂ ಆಟ ಆಡಿಕೊಳ್ಳುತ್ತಿದ್ದರು. ನಾವು ಕೆಲವರು ಪಿ.ಟಿ. ಮೇಷ್ಟ್ರು ಹೊಸದಾಗಿ ಮಾಡಿಸಿದ್ದ ಕಬಡ್ಡಿ ಕೋರ್ಟ್ನಲ್ಲಿ ಕಬಡ್ಡಿ ಆಟ ಆಡಲು ನಿರ್ಧರಿಸಿದ್ದೆವು. ನಾನು ಈಗಾಗಲೇ ಮಡಿಚಿಕಂಡಿದ್ದ ಪ್ಯಾಂಟನ್ನು ಮಣ್ಣಾಗದಿರಲಿ ಅಂತ ಮತ್ತೊಂದೆರಡು ಸುತ್ತು ಹೆಚ್ಚೂ ಕಡಿಮೆ ಮಂಡಿಯವರೆಗೂ ಮಡಿಚಿಕಂಡು ಆಟ ಆಡುತ್ತಿದ್ದೆ. ಆದರೂ ನಮ್ಮಗಳ ಕುಣಿತಕ್ಕೆ ಧೂಳು ಬಗ್ಗನೇ ಏಳುತ್ತಾ ನಮ್ಮ ಮೈಮೇಲೆಲ್ಲಾ ಕೂರುತ್ತಾ ನಾವೆಲ್ಲಾ ಧೂಳುಮಯವಾಗಿದ್ದೆವು. ನಾನು ಆ ಧೂಳನ್ನು ಆಗಾಗ ಕೊಡವಿಕೊಳ್ಳುತ್ತಾ ಉಡುದಾರಕ್ಕೆ ಸಿಕ್ಕಿಸಿಕಂಡಿದ್ದ ಪ್ಯಾಂಟನ್ನು ಸರಿಪಡಿಸಿಕೊಳ್ಳುತ್ತಾ ಆಡುತ್ತಿದ್ದೆ. ಹಿಂಗೆ ಆಡುವಾಗ ಒಮ್ಮೆ ನನ್ನ ಪಕ್ಕದಲ್ಲಿದ್ದವನು ರೈಡರೊಬ್ಬನನ್ನು ಕ್ಯಾಚ್ ಹಿಡಿಯಲು ಹೋಗಿ ಆಗ ಆ ರೈಡರ್ ಚಂಗನೆ ಮೇಲಾರಿ ತಪ್ಪಿಸಿಕೊಳ್ಳುವ ಸಲುವಾಗಿ ನನ್ನತ್ತ ನುಗ್ಗಿದ. ಆಗ ನಾನು ಅನಿವಾರ್ಯವಾಗಿ ಅವನನ್ನು ಹಿಡಿಯಲು ಒಂದೇಟಿಗೇ ಬಗ್ಗಿ ಅವನೆರಡು ಕಾಲುಗಳನ್ನು ಹಿಡಿಯಲೆತ್ನಿಸಿದೆ. ಆದರವನು ನನ್ನನ್ನು ತಮಾಮ್ ಕೆಳಕ್ಕೆ ಅದುಮಿ ತಲೆಯ ಮೇಲಾಸಿ ನುಸುಕಂಡು ಹೋದ. ನಾನು ನೆಲಕ್ಕೆ ಬಿದ್ದುಬಿಟ್ಟಿದ್ದೆ. ಮೈಗಂಟಿದ್ದ ಧೂಳನ್ನು ಕೊಡವಿಕೊಳ್ಳುತ್ತಾ ನಾನೇನೋ ಮೇಲೆದ್ದೆ. ಆದರೆ ಪ್ಯಾಂಟ್ ಮಾತ್ರ ಸೊಂಟದಿಂದ ಪೂರಾ ಕೆಳಕ್ಕಿಳಿದು ಕಾಲುಗಳಡಿಗೆ ಬಂದು ನಿಂತುಬಿಟ್ಟಿತ್ತು. ಒಳಚಡ್ಡಿಯನ್ನೂ ಹಾಕಿಕಂಡಿರಲಿಲ್ಲ. ನಾನವನನ್ನು ಹಿಡಿಯುವ ಭರದಲ್ಲಿ ಹುಮ್ಮಸ್ಸಿನಿಂದ ಬಗ್ಗಿದಾಗ ನನ್ನ ಸೊಂಟದಲ್ಲಿದ್ದ ಉಡುದಾರ ಹರುಕಂಡಿದ್ದು ನನಗೆ ಅರಿವಿಗೆ ಬಂದಿರಲಿಲ್ಲ. ನನ್ನ ಇಂಥ ಸ್ಥಿತಿಯನ್ನು ಕಂಡು ಆಟವನ್ನು ನೋಡುತ್ತಾ ನಿಂತಿದ್ದ ಹುಡುಗರೆಲ್ಲಾ ಗೊಳ್ಳೆಂದು ನಕ್ಕರು. ನನಗೆ ಸಾಯುವಷ್ಟು ನಾಚಿಕೆಯಾಗಿ ಅಳುವೇ ಬಂದುಬಿಟ್ಟಿತ್ತು. ಕೆಳಕ್ಕುದುರಿದ್ದ ಪ್ಯಾಂಟನ್ನು ಮೇಲೆತ್ತಿ ಮತ್ತೆ ಸೊಂಟದತ್ತ ಸರುಕಿಸಿಕಂಡು ಕಬಡ್ಡಿ ಕೋರ್ಟ್ನಿಂದ ಆಚೆ ಬಂದು ಆ ಧೂಳಿನಲ್ಲಿ ಉಡುದಾರಕ್ಕೆ ಕಣ್ಣಾಡಿಸಿದೆ. ಅದನ್ನು ಆ ಧೂಳು ಸ್ವಾಹಾ ಮಾಡಿಕಂಡುಬಿಟ್ಟಿತ್ತು. ಹಂಗಾಗಿ ಎಷ್ಟು ನೋಡಿದರೂ ಕಾಣಲಿಲ್ಲ. ನಂತರ ಒಂದು ಕೈಯ್ಯಲ್ಲಿ ಸೊಂಟದಲ್ಲಿದ್ದ ಪ್ಯಾಂಟನ್ನು ಆತಿಡುಕಂಡು ಮತ್ತೊಂದು ಕೈಯ್ಯಿಂದ ಬಗಲಿಗೆ ಬ್ಯಾಗನ್ನು ಎಸುಕಂಡು ಮನೆ ಸೇರಿದೆ. ಒಂದೆರಡು ದಿನ ಉಡುದಾರನಿಲ್ಲದೇ ಇದ್ದೆ. ವಾರದ ದಿನ ಉಡುದಾರವಿಲ್ಲದ ಬೋಳು ಸೊಂಟವನ್ನು ನೋಡಿದ ಅಜ್ಜಿ ಸ್ನಾನ ಮುಗಿಯುತ್ತಲೇ ಮತ್ತೊಂದು ಉಡುದಾರವನ್ನು ಅಲ್ಲಿಗೆ ಪ್ರತಿಷ್ಠಾಪಿಸಿಬಿಟ್ಟಿತು. ಆದರೂ ಮತ್ತಿನ್ನೆಂದೂ ಆ ಪ್ಯಾಂಟನ್ನು ಹಾಕಿಕೊಳ್ಳುವ ಗೋಜಿಗೆ ಮಾತ್ರ ಹೋಗಲಿಲ್ಲ. ಆದರದರ ಮೇಲಿನ ಮೋಹ ಮಾತ್ರ ಒಂದಿನಿತೂ ಕಡಿಮೆಯಾಗಿರಲಿಲ್ಲ
ಈ ನಡುವೆ ಅದೊಂದು ದಿನ ಚಿಕ್ಕನಾಯಕನಹಳ್ಳಿಯ ಸೋಮವಾರದ ಸಂತೆಗೆ ಹೋಗಿ ಸಂಜೆಗೆ ಬಂದ ಅಯ್ಯನ ಬ್ಯಾಗಿನಲ್ಲಿ ಇತರೆ ಸಾಮಾನುಗಳ ಜತೆಯಲ್ಲಿ ಬೂದು ಬಣ್ಣದ ಒಂದು ಪ್ಯಾಂಟ್ ಪೀಸೂ ಇತ್ತು. ಬಹುಶಃ ನಾನು ಅಣ್ಣನ ಪ್ಯಾಂಟನ್ನು ಹಾಕಿಕೊಳ್ಳುತ್ತಿದ್ದ ಅವತಾರಕ್ಕೋ ಇಲ್ಲಾ ಪರೀಕ್ಷೆಗಳನ್ನು ಬರೆಯಲು ಚಿಕ್ಕನಾಯಕನಹಳ್ಳಿಗೆ ಹೋಗಬೇಕಾಗಿದ್ದರಿಂದಲೋ ಅಂತೂ ಯಾವ ಕಾರಣಕ್ಕೋ ಕಾಣೆ ಅಯ್ಯ ನನಗಾಗಿ ಪ್ಯಾಂಟೊಂದನ್ನು ಹೊಲಿಸಲು ನಿರ್ಧರಿಸಿತ್ತು. ಆಗ ನನ್ನ ಊರಿನಲ್ಲಿ ಟೈಲರ್ ಇದ್ದರೂ ಪ್ಯಾಂಟುಗಳನ್ನು ಹೊಲಿಯುತ್ತಿರಲಿಲ್ಲ. ಹಂಗಾಗಿ ಮಾರನೆಯ ದಿನ ಸ್ಕೂಲ್ ಬಿಡುವ ಹೊತ್ತಿಗೆ ಸರಿಯಾಗಿ ಸ್ಕೂಲಿನ ಹತ್ತಿರಕ್ಕೆ ಬಂದ ಅಯ್ಯ ನನ್ನನ್ನು ಸೈಕಲ್ಲಿನಲ್ಲಿ ಕೂರಿಸಿಕಂಡು ಶೆಟ್ಟೀಕೆರೆಯಲ್ಲಿದ್ದ ಅಯ್ಯನಿಗೆ ಚೆನ್ನಾಗಿ ಪರಿಚಯವಿದ್ದ ಟೈಲರ್ ಚಂದ್ರಾಚಾರ್ ಹತ್ತಿರ ಕರಕಂಡು ಹೋಗಿ ಪ್ಯಾಂಟನ್ನು ಹೊಲಾಕಿಸಿತು. ಅಂತೆಯೇ ಆದಷ್ಟು ಬೇಗ ಕೊಡುವಂತೆಯೂ ಹೇಳಿತು. ಚಂದ್ರಾಚಾರ್ ಟೇಪೊಂದರಿಂದ ಸೊಂಟ ಮತ್ತು ಕಾಲುಗಳ ಅಳತೆಗಳನ್ನು ತಗಂಡು ಕಿವಿಯಲ್ಲಿ ಸಿಗಿಸಿಕಂಡಿದ್ದ ಪೆನ್ಸಿಲ್ನಿಂದ ಮಾಸಿ ಕಿಮುಟಾಗಿದ್ದ ನೋಟ್ ಬುಕ್ನ ಹಾಳೆಯೊಂದರಲ್ಲಿ ಗೀಚಾಕಿಕೊಂಡರು. ಮುಂದಿನ ವಾರಕ್ಕೆ ಕೊಡುವುದಾಗಿಯೂ ಹೇಳಿ ಕಳಿಸಿದರು.
ಆ ಒಂದು ವಾರ ನನಗೆ ಬರೋಬ್ಬರಿ ಒಂದು ವರ್ಷದಂತೆ ಕಂಡಿತ್ತು. ಮುಂದಿನ ವಾರ ಅಂತ ಹೇಳಿದ್ದರೂ ನಾನು ಕ್ಲಾಸ್ ಬಿಡುತ್ತಲೇ ದಿನವೂ ಒಮ್ಮೆ ಚಂದ್ರಾಚಾರ್ರನ್ನು ಕಾಣುತ್ತಿದ್ದೆ. ಹಂಗೇನೇ ನನ್ನ ಪ್ಯಾಂಟ್ಪೀಸಿನ ಮೇಲೂ ಕಣ್ಣಾಡಿಸುತ್ತಿದ್ದೆ. `ಅಯ್ಯೋ ಇದ್ಯಾಕೆ ಹಿಂಗೆ ಬಂದು ರ್ವಾತೆ ಕೊಡ್ತೀಯ’ ಅಂತ ನಗುತ್ತಲೇ ಅವರು ಅನ್ನುತ್ತಿದ್ದರು. ಚಂದ್ರಚಾರ್ ಕೊಟ್ಟಿದ್ದ ಒಂದು ವಾರದ ಗಡುವು ಮುಗಿದಿತ್ತು. ಆಗಲೂ ನನ್ನ ಪ್ಯಾಂಟ್ಪೀಸ್ ಮೊದಲ ದಿನದಿಂದ ಎಲ್ಲಿತ್ತೋ ಅಲ್ಲಿಯೇ ಇತ್ತು. ಅವತ್ತು ಊರಿಗೆ ಹೋದವನೇ `ಇನ್ನೂ ಹೊಲ್ದುಲ್ಲ ಹಂಗೇ ಇಟಕಂಡವ್ರೇ’ ಅಂತ ಅಯ್ಯನಿಗೆ ಹೇಳಿದೆ. `ಒಂದೆರ್ಡು ದಿನ ಹಿಂದೆ ಮುಂದೆ ಕೊಡ್ತಾನೆ ತಗ’ ಅಂತ ಅಯ್ಯ ನನ್ನ ಮಾತುಗಳಿಗೆ ಅಂತ ಕಿಮ್ಮತ್ತು ಕೊಡಲಿಲ್ಲ. ಎರಡು ದಿನಕ್ಕೆ ಶೆಟ್ಟೀಕೆರೆಯ ಸಂತೆ ಇತ್ತು. ಅವತ್ತು ಅಯ್ಯನ ಜತೆಯಲ್ಲಿ ಸಂತೆಗೆ ಹೋಗಿದ್ದ ನಾನು ಅಯ್ಯನನ್ನು ಸೀದಾ ಚಂದ್ರಾಚಾರ್ ಅವರ ಹತ್ತಿರ ಕರಕಂಡು ಹೋಗಿದ್ದೆ. ಅಯ್ಯನನ್ನು ಕಾಣುತ್ತಲೇ ತುಂಬು ನಗೆ ನಗುತ್ತಾ `ನೀವ್ಯಾಕೆ ಬರಾಕೆ ಹೋದ್ರಿ?’ ಅಂತ ಅಯ್ಯನಿಗೆ ಅನ್ನುತ್ತಾ ನನ್ನತ್ತ ತಿರುಗಿ `ನಾಳಿಕಿಲ್ಲ ನಾಡ್ದು ಬಂದು ನೋಡು ನಿನ್ ಪ್ಯಾಂಟ್ ಹೆಂಗೆ ರೆಡಿಯಾಗಿರುತ್ತೆ’ ಅಂದು ಅವತ್ತು ನಮ್ಮನ್ನು ಸಾಗಾಕಿದರು ಚಂದ್ರಾಚಾರ್. ಅಂತ `ನಾಳಿಕಿಲ್ಲ ನಾಡ್ದುಗಳು’ ಒಂದಲ್ಲ ನಾಕೈದು ಕಳೆದು ಹೋದವು. ಆದರೆ ಚಂದ್ರಾಚಾರ್ ಹೊಲಿದ ಪ್ಯಾಂಟ್ ಮಾತ್ರ ಸಿಕ್ಕಲೇ ಇಲ್ಲ. ಇದು ಆಡಿದ ಆಟ ಅಲ್ಲ ಅಂತ ನಾನು ಒಂದು ದಿನ ಸ್ಕೂಲಿಗೆ ಚಕ್ಕರ್ ಹಾಕಿ ಸೀದಾ ಚಂದ್ರಾಚಾರ್ ಹತ್ತಿರ ಹೋಗಿ `ಇವತ್ತು ಕೊಟ್ರೇಯ ನಾನು ಹೋಗಾದು’ ಅಂತ ಅಳು ಮಾರೆ ಹಾಕ್ಕಂಡು ಕೂತುಬಿಟ್ಟೆ. ನನ್ನ ಪ್ಯಾಂಟ್ಪೀಸ್ಗಾಗಿ ಅಲ್ಲಿದ್ದ ಬಟ್ಟೆಗಳೊಳಗೆಲ್ಲಾ ಕಣ್ಣಾಡಿಸಿದೆ. ಎಲ್ಲೂ ಕಾಣಿಸಲಿಲ್ಲ. ಯಾವಾಗ ಅದು ಕಾಣಿಸಲಿಲ್ಲವೋ ನನಗೆ ನಿಜವಾಗಿಯೂ ಅಳುವೇ ಬಂದು ಬಿಕ್ಕಳಿಸತೊಡಗಿದೆ. ಬೆಳಗ್ಗೆ ಹೋಗಿ ಮಧ್ಯಾಹ್ನ ಆತು. ಆ ಮಧ್ಯಾಹ್ನ ಇಳಿ ಹೊತ್ತಾಗಿ ಸ್ಕೂಲ್ ಬಿಡುವ ಸಮಯವಾಯ್ತು. ಚಂದ್ರಾಚಾರ್ ಒಮ್ಮೆ ಮನೆಗೆ ಹೋಗಿ ಬಂದರು. ನಾನು ಕೂತೇ ಇದ್ದೆ. ಸಂಜೆಯಾಯ್ತು. ಈ ನಡುವೆ ತಿನ್ನಲು ಪುರಿ ಖಾರ ತರಿಸಿ ಮುಂದಿಟ್ಟರು. ನಾನತ್ತ ತಿರುಗಿಯೂ ನೋಡಲಿಲ್ಲ. ನಾನು ಕೂತಲ್ಲಿಂದ ಏಳಲಿಲ್ಲ. ಚಂದ್ರಾಚಾರ್ಗೆ ಪೀಕಲಾಟಕ್ಕಿಟ್ಟುಕಂಡಿತು. ಯಾವಾಗ ಕತ್ತಲಾಗತೊಡಗಿತೋ ಚಂದ್ರಾಚಾರ್ ಒತ್ತಾಯ ಮಾಡಿ ನನ್ನನ್ನು ಕೂರಿಸಿಕಂಡು ನನ್ನ ಊರಿನತ್ತ ಹೊರಟರು. ಅಯ್ಯನ ಹತ್ತಿರ ಅದು ಏನು ಹೇಳಿದರೋ ಗೊತ್ತಿಲ್ಲ. ಒಂದಷ್ಟು ಹೊತ್ತು ಇದ್ದ ಚಂದ್ರಾಚಾರ್ ತಿರುಗಿ ಹೋದರು. ಅವರು ಅತ್ತ ಹೋಗುತ್ತಲೇ` `ಒಂಚೂರಾರ ಗ್ಯಾನ ಬ್ಯಾಡ್ವ’ ಅಂತ ಅಯ್ಯ ಗೊಣಗಿಕೊಳ್ಳುತ್ತಿತ್ತು. ಮಾರನೆಯ ದಿನ ಗೊತ್ತಾದ ಸಂಗತಿ ಅಂದರೆ ಚಂದ್ರಾಚಾರ್ಗೆ ಹೊಲಿಯಲು ಕೊಟ್ಟಿದ್ದ ನನ್ನ ಪ್ಯಾಂಟ್ಪೀಸ್ ಕಳೆದುಹೋಗಿತ್ತು. ಅದೇ ಕಳೆದೋಗಿತ್ತೋ, ಅವರೇ ಕಳೆದಾಕಿದ್ರೋ ಇಲ್ಲಾ ಬೇರೆ ಯಾರಿಗಾದರೂ ಹೊಲಿದು ಕೊಟ್ಟು ಬಿಟ್ಟಿದ್ರೋ ಅನ್ನೋದು ಮಾತ್ರ ನಿಗೂಢವಾಗೇ ಉಳುದೋಗಿತ್ತು. ಆದರೆ ಇದು ನನ್ನೊಳಗೆ ಅಪರಿಮಿತ ಸಂಕಟವನ್ನು ಹುಟ್ಟಾಕಿತ್ತು.
ಹಿಂಗೆ ನಾನು ಮೊಟ್ಟ ಮೊದಲು ಹಾಕ್ಕಂಡಿದ್ದ ಪ್ಯಾಂಟಿನ ಮೇಲಿದ್ದ ವ್ಯಾಮೋಹದಂತೆ ಕೆಲವು ವರ್ಷಗಳ ಹಿಂದೆ ಒಂದು ಶರ್ಟ್ ಮೇಲೆ ಆಗಿತ್ತು. ಹಂಗಾಗಿ ಅದನ್ನು ಮತ್ಮತ್ತೆ ಹಾಕಿಕೊಳ್ಳುವ ಮನಸ್ಸಾಗುತ್ತಿತ್ತು. ಕೆಂಪು, ಬಿಳಿ ಚೌಕಗಳ ಪಟಾಪಟಿ ಶರ್ಟ್ ಅದು. ಈ ಶರ್ಟ್ ಈಗಲೂ ಆಗಾಗ ನನ್ನ ಕಣ್ಮುಂದೆ ಬರುತ್ತೆ. ತುಂಬಾ ಇಷ್ಟದ ಶರ್ಟ್ ಆಗಿದ್ದರಿಂದ ಅದನ್ನು ಮತ್ಮತ್ತೆ ಹಾಕಿಕಂಡು ಆ ಹೊಡೆತಕ್ಕೆ ಅದರ ಕಾಲರ್ ಹರಿಯತೊಡಗಿತ್ತು. ಈ ಕಾರಣಕ್ಕೆ ಅವತ್ತೊಂದು ದಿನ ಈ ಹಳೆಯ ಅಂಗಿಯನ್ನು ಹಿಡುಕಂಡು ಟೈಲರ್ ಒಬ್ಬನನ್ನು ಎಡತಾಕಿದ್ದೆ.

`ಏನ್ಸಾರ್ ಇದು? ಅಂಗಿ ಕಾಲರ್ನ ತಿರುಗಾ ಮುರುಗಾ ಮಾಡಿ ಹೊಲ್ಸಾಕೆ ಬಂದಿದೀರಲ್ಲಾ. ಅದೂ ಕಣ್ಣಿಗ್ ಬೇಕಾದ್ ಬಟ್ಟೆಗಳು ಸಿಗೋ ಈ ಕಾಲ್ದಾಗೆ! ಇದ್ಯಾಕ್ ಸಾರ್ ಇಂಥ ಜಿಪುಣ ಬುದ್ದಿ ಬಂತು ನಿಮ್ಗೆ’ ಅಂತ ಹಳೆಯ ಬಟ್ಟೆಗಳನ್ನು ಹೊಲಿದು ಕೊಡುತ್ತಿದ್ದ ತೀರಾ ಪರಿಚಿತ ಟೈಲರ್ ಒಬ್ಬರು ವ್ಯಂಗ್ಯ ಮಾಡಿದರು. ಅವರಿಗೆ ನಾನು ಏನು ಸಮಜಾಯಿಸಿ ಕೊಟ್ಟರೂ ಅದನ್ನು ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. ಹಂಗಾಗಿ ಆ ಪ್ರಯತ್ನವನ್ನು ನಾನು ಮಾಡಲಿಲ್ಲ. ಹಂಗಂತ ಅಲ್ಲಿಂದ ಹೊರಡಲೂ ತಯಾರಿರಲಿಲ್ಲ. ಆದರೂ ಸುಮ್ಮನೆ ಹೊಲಿದು ಕೊಡಾಕೆ ನಿಂಗೇನು ಕಷ್ಟ? ಅಷ್ಟಕ್ಕೂ ಪುಕ್ಕಟ್ಟೆ ಕೆಲಸ ಮಾಡಿಕೊಡು ಅಂತ ಕೇಳ್ತಿದೀನಾ? ಅನ್ನುವ ಮಾತುಗಳು ನಾಲಿಗೆ ತುದಿಯಲ್ಲಿ ಆಡಿದರೂ ಆಚೆ ಬರಲಿಲ್ಲ. ಹಿಂಗಂದರೂ ಬಂಡ ಬಿದ್ದು ಕುಂತಿದ್ದ ನನ್ನನ್ನು ಒಮ್ಮೆ ಕಿರುಗಣ್ಣಿನಲ್ಲಿ ಎಟಕಿಸಿಕೊಂಡ ಆ ಟೈಲರ್ ತಾನು ಹೊಲಿಯುತ್ತಿದ್ದ ಬಟ್ಟೆಯ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ `ಕೊಡ್ರಿ ಸಾ’ ಅಂತ ನನ್ನ ಕೈಯ್ಯಲ್ಲಿದ್ದ ಅಂಗಿಯನ್ನು ಇಸುಕಂಡು ಸೂಜಿಯೊಂದರಿಂದ ಕಾಲರಿನ ಹೊಲಿಗೆಯನ್ನು ಬಿಚ್ಚುತ್ತಾ ` ಸಂಬ್ಳ ಬರಾರೇ ಹಿಂಗೆ ಮಾಡಿದ್ರೆ…’ ಅಂತ ತನ್ನ ಪಾಡಿಗೆ ತಾನು ಗೊಣಗಿಕೊಳ್ಳತೊಡಗಿದ. ಆಗಲೂ ನಾನು ತುಟಿ ಬಿಚ್ಚಲಿಲ್ಲ. ಏನೊಂದೂ ಕೇಳಿಸದವನಂತೆ ಅವನೆದುರಿಗಿದ್ದ ಸ್ಟೂಲೊಂದರ ಮೇಲೆ ಕೂತಿದ್ದೆ. ಕಾಲರಿನ ಹೊಲಿಗೆಯನ್ನು ಬಿಚ್ಚಿ ಕುತ್ತಿಗೆಯ ಭಾಗದಲ್ಲಿ ಹರಿದಿದ್ದ ಭಾಗವನ್ನು ಹಿಂಬದಿಗೆ ಮಗುಚಿ ಸೇರಿಸಿ ಅದರ ಮೇಲೆ ಎರಡು ದಾಟು ಹೊಲಿಗೆಗಳನ್ನು ಹಾಕಿ, ಎರಡೂ ತುದಿಗಳಲ್ಲೂ ಆಚೆ ಹೊರಟಿದ್ದ ದಾರದ ತುದಿಗಳನ್ನು ಕತ್ತರಿಯಿಂದ ಕತ್ತರಿಸಿದವನೇ ಇಡೀ ಅಂಗಿಯನ್ನು ಒಮ್ಮೆ ಜೋರಾಗಿ ಕೊಡವಿ ನನ್ನ ಕೈಗಿತ್ತರು. ಎಷ್ಟು ಕೊಡಬೇಕು ಅಂತ ಕೇಳಿದ್ದಕ್ಕೆ ಎಷ್ಟೋ ಕೊಡಿ ಕೊಡಿ ಅಂತ ಅಂದವರೇ ಮುಂಚೆ ಹೊಲಿಯುತ್ತಿದ್ದ ಬಟ್ಟೆಯನ್ನು ಮತ್ತೆ ಹರವಿಕೊಂಡು ಕೆಲಸ ಶುರುಮಾಡಿದರು. ಅವರ ಕೈಗೆ ದುಡ್ಡಿತ್ತು ಆಚೆ ಬರುವಾಗಲೂ ಅವರು ನನ್ನತ್ತ ನೋಡಲಿಲ್ಲ. ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಹಂಗೆ ಹೊಲಿಸಿಕೊಂಡು ಬಂದ ಶರ್ಟ್ನ ತಿರುಗಾ ಮುರುಗಾ ಮಾಡಿದ್ದ ಕಾಲರನ್ನು ಸರಿಯಾಗಿ ಕೂರಿಸುವ ಸಲುವಾಗಿ ಹಾಗೂ ಹಿಂಬದಿಗೆ ಸೇರಿಸಿದ್ದ ಹರಿದ ಭಾಗ ಕಾಣದಂತೆ ಚೆನ್ನಾಗಿ ಉಜ್ಜೀ ಉಜ್ಜಿ ಇಸ್ತ್ರಿ ಮಾಡಿದೆ. ಹೆಂಡತಿ ಕೋಮಲಳಿಗೆ ಇದು ವಿಚಿತ್ರದಂತೆ ಕಂಡಿತ್ತು. ಹಿಂಗೆ ತಿರುಗಾ ಮುರುಗಾ ಮಾಡಿಸಿದ್ದ ಕಾಲರಿನ ಶರ್ಟನ್ನು ಹಾಕಿಕೊಂಡದ್ದು ಕಾಣುತ್ತಲೇ `ಇಷ್ಟೊಂದು ಶರ್ಟ್ಸ್ ಇದ್ರೂ ಇದೇನ್ ಹುಚ್ಚಾಟಾನೋ ಕಾಣೆ’ ಅನ್ನುವ ಮಾಮೂಲಿ ಡೈಲಾಗ್ ಕೇಳಿ ರೂಢಿಯಾಗಿತ್ತು. ಆದರೆ ಅದು ನನಗೇನೂ ನಾಟುತ್ತಿರಲಿಲ್ಲ. ಹಂಗಾಗಿ ಈ ಶರ್ಟ್ನ ಹಾಕಿಕೊಳ್ಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆದರೆ ಈ ಶರ್ಟ್ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಹೋಯ್ತು. ಇದರ ನಾಪತ್ತೆಯ ಹಿಂದಿನ ಕೈಗಳು ಮಾತ್ರ ನಿಗೂಢವಾಗಿರಲಿಲ್ಲ.
*****
ಕ್ವಾರೆ: ಕಾವಳ, ಇಬ್ಬನಿ.
ಅಳ್ಳು ಗಿಡ: ಔಡಲ ಗಿಡ.
ಉಂಟಾಗಿ: ದಿಪ್ಪಾಗಿ.
ಜರಿ: ಬಹು ಕಾಲುಗಳುಳ್ಳ ಒಂದು ಬಗೆಯ ಹುಳು.
ಲಪುಕ್ಕಂಥ: ಪುಸುಕ್ಕಂತ.
ಅಡಿಕೆ ಸೊಪ್ಪು: ಔಷಧೀಯ ಗುಣಗಳುಳ್ಳ ಒಂದು ಬಗೆಯ ಗಿಡ.
(ಹಿಂದಿನ ಕಂತು: ಶರ್ಮಾ ಡಾಕ್ಟರ್, ಯೆಝ್ಡಿ ಬೈಕ್ ಮತ್ತು ಕೊಂಬಿನ ರಾಮಣ್ಣ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

