ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು. ಮೊದ ಮೊದಲು ಹೀಗೆ ಆಗ್ತಾ ಇದೆ, ನಂತರ ಅವರು ಬದಲಾಗುತ್ತಾರೇನೋ ಅಂತಾ ಕಾದೆ. ಆದರೆ ಅವರು ದಿನದಿಂದ ದಿನಕ್ಕೆ ತಡವಾಗಿಯೇ ಬರಲು ಶುರು ಮಾಡಿದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಹಿಂದಿನ ಸಂಚಿಕೆಯಲ್ಲಿ ತಿಳಿಸಿದಂತೆ ನನಗೆ ವೇತನ ವ್ಯತ್ಯಾಸದ ಬಗ್ಗೆ ತಿಳಿದಾಗಿನಿಂದ ನನಗೆ ಆ ಶಾಲೆಯಲ್ಲಿ ಕೆಲಸ ಮಾಡಲು ಬೇಸರವೆನಿಸುತ್ತಿತ್ತು. ನನ್ನ ಸಹೋದ್ಯೋಗಿಗಳ ಮಾತು ನಂಬಿ ಅವರೂ ಸಹ ನನ್ನ ಜೊತೆಗೂಡುತ್ತಾರೆ ಎಂದು ಭಾವಿಸಿ ನಮ್ಮ ಶಾಲಾ ಕಾರ್ಯದರ್ಶಿಗಳ ಬಳಿ ಹೆಚ್ಚು ವೇತನ ಕೇಳಲು ಹೋದೆ. ಆದರೆ ಅವರು ಒಪ್ಪಲಿಲ್ಲ. ಆದರೆ ಇದಕ್ಕಿಂತ ಬೇಸರವೆನಿಸಿದ್ದು ನನ್ನ ಜೊತೆಗೆ ಬರುತ್ತೇವೆ ಎಂದು ಹೇಳಿದ್ದ ನನ್ನ ಸಹೋದ್ಯೋಗಿಗಳು ಕೈ ಕೊಟ್ಟಿದ್ದರು. ಅಷ್ಟಕ್ಕೂ ನಾನು ಹೋಗಿದ್ದು ಬರೀ ನನ್ನೊಬ್ಬನ ವೇತನ ಜಾಸ್ತಿ ಕೇಳಲಿಕ್ಕಲ್ಲ. ಎಲ್ಲರಿಗೂ ಹೆಚ್ಚು ಆಗಬೇಕೆಂದು ಬಯಸಿ!? ಆದರೆ ಆದದ್ದೇ ಬೇರೆ. ಕಾರ್ಯದರ್ಶಿಗಳ ಕೆಂಗಣ್ಣಿಗೆ ಗುರಿಯಾದದ್ದು ಮಾತ್ರ ನಾನೊಬ್ಬನೇ!! ಅವರು “ನಮ್ಮ ಶಾಲೆಯ ಹೆಸರು ನೋಡಿ ಮಕ್ಕಳನ್ನು ದಾಖಲು ಮಾಡುತ್ತಾರೆಯೇ ಹೊರತು ನಿಮ್ಮನ್ನು ನೋಡಿ ಅಲ್ಲ” ಎಂಬ ಮಾತು ನನ್ನನ್ನು ಪದೇ ಪದೇ ಬಾಧಿಸುತ್ತಿತ್ತು. ಈ ಕಾರಣ ನಾನು ಆ ಶಾಲೆ ಬಿಡಲು ನಿರ್ಧರಿಸಿದೆ. ಹಾಗಂತ ಶಾಲೆಯವರ ಕಡೆಯಿಂದ ಬಿಡಿಸಬೇಕೆಂಬ ಒತ್ತಡ ಇರಲಿಲ್ಲ.
ನಾನು ಈ ಶಾಲೆ ಬಿಟ್ಟು ಟ್ಯೂಷನ್ ಮಾಡಬೇಕೆಂದು ತೀರ್ಮಾನ ಮಾಡಿದ್ದೆ. ಇದಕ್ಕಾಗಿ ಶಾಲೆಯಲ್ಲಿದ್ದಾಗಲೇ ಮಕ್ಕಳಿಗೆ ‘ನಾನು ಟ್ಯೂಷನ್ ಮಾಡಿದರೆ ಯಾರ್ಯಾರು ಬರುತ್ತೀರಿ?’ ಎಂದು ಕೇಳಿದ್ದೆ. ಅದಕ್ಕೆ ಬಹಳ ಜನ ವಿದ್ಯಾರ್ಥಿಗಳು ‘ನಾನು ಬರುತ್ತೇನೆ ನಾನು ಬರುತ್ತೇನೆ’ ಎಂದು ಕೈ ಎತ್ತಿದ್ದರು. ಆಗ ನಾನು ಅವರ ಮಾತು ನಂಬಿ ಟ್ಯೂಷನ್ ಮಾಡಿದರೆ ಒಬ್ಬರಿಗೆ ತಿಂಗಳಿಗೆ 250 ರೂಪಾಯಿಯಂತೆ ಶುಲ್ಕ ಸಂಗ್ರಹಿಸಿದರೆ ಕಡೇ ಪಕ್ಷ 20 ವಿದ್ಯಾರ್ಥಿಗಳಿಗೆ 5 ಸಾವಿರ ರೂಪಾಯಿ ಆಗುತ್ತದೆ ಎಂಬ ಆಸೆಯಿಂದ ಹಿಂದೆ ಮುಂದೆ ಯೋಚಿಸದೇ ಶಾಲೆ ಬಿಟ್ಟೆ. ಆದರೆ ತಮಾಷೆ ಅಂದ್ರೆ ಶಾಲೆ ಬಿಟ್ಟ ನಂತರ ನನ್ನ ಬಳಿ ಟ್ಯೂಷನ್ಗೆ 2 ವಿದ್ಯಾರ್ಥಿಗಳು ಮಾತ್ರ ಬಂದರು. ಇವರ ಜೊತೆ ನನ್ನ ದೂರದ ಸಂಬಂಧಿಕರ ಮನೆಯಿಂದ ಒಬ್ಬರು ಬಂದರು. ಅವರು ಸಂಜೆ 5 ಘಂಟೆಗೆ ಬಂದರೆ 7 ಘಂಟೆವರೆಗೂ ಇರುತ್ತಿದ್ದರು. 7 ಘಂಟೆಯ ನಂತರ ನಾನು ಅಡುಗೆ ಮಾಡಿಕೊಂಡು ಊಟ ಮಾಡಬೇಕಾಗಿತ್ತು. ಆದರೆ ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು. ಮೊದ ಮೊದಲು ಹೀಗೆ ಆಗ್ತಾ ಇದೆ, ನಂತರ ಅವರು ಬದಲಾಗುತ್ತಾರೇನೋ ಅಂತಾ ಕಾದೆ. ಆದರೆ ಅವರು ದಿನದಿಂದ ದಿನಕ್ಕೆ ತಡವಾಗಿಯೇ ಬರಲು ಶುರು ಮಾಡಿದರು. ಇದೊಂಥರಾ ಬಿಸಿ ತುಪ್ಪದ ರೀತಿ ಇತ್ಲಾಗೆ ನುಂಗುವ ಹಾಗೂ ಇಲ್ಲ ಉಗುಳುವ ಹಾಗೂ ಇಲ್ಲ ಎಂದು ಅನಿಸತೊಡಗಿತು.
ಒಂದು ಗಾದೆ ಮಾತು ಈ ರೀತಿ ಇದೆ. “ದಾಕ್ಷಿಣ್ಯಕ್ಕೆ ಬಸಿರಾದರೆ ಹೆರೋ ಕಷ್ಟ ತಪ್ಪಿದ್ದಲ್ಲ” ಅಂತಾ. ನಮ್ಮ ಜೀವನದಲ್ಲಿ ಹಲವು ಸಲ ನಾವು ಕೆಲವರ ವಿಷಯದಲ್ಲಿ ನಮ್ಮ ಬಗ್ಗೆ ಬೇರೆಯವರು ಏನೆಂದುಕೊಂಡುಬಿಡುತ್ತಾರೋ ಎಂಬ ದಾಕ್ಷಿಣ್ಯಕ್ಕೆ ಒಳಗಾಗಿ ನಮ್ಮ ಮನದಲ್ಲಿ ಇಷ್ಟವಿಲ್ಲದಿದ್ದರೂ ಹ್ಞೂಂಗುಟ್ಟುತ್ತೇವೆ. ಇದರಿಂದ ನಾವೇ ತೊಂದರೆಗೊಳಗಾಗುತ್ತೇವೆ. ‘ಇಲ್ಲ’ ಎಂದು ಹೇಳುವುದನ್ನು ನಾವು ಕಲಿಯಬೇಕು. ಇಲ್ಲ ಎಂದು ಹೇಳುವುದೂ ಒಂದು ಕಲೆ. ಇದರಿಂದ ನಮ್ಮ ಎದುರಿನವರ ವ್ಯಕ್ತಿಯ ದೃಷ್ಟಿಯಲ್ಲಿ ಕೆಲ ಕಾಲ ನಾವು ಕೆಟ್ಟವರಾದರೂ ಸಹ ನಮಗೆ ಮುಂದೆ ಆಗುವ ತೊಂದರೆ ತಪ್ಪುತ್ತದೆ.

“ಸುಂಕದವನ ಮುಂದೆ ಸಂಕಟ ಹೇಳಿಕೊಂಡಂತೆ” ಎನ್ನುವಂತಾಗಿತ್ತು ನನ್ನ ಆಗಿನ ಸ್ಥಿತಿ. ಅವರ ಮುಂದೆ ಕಷ್ಡ ಹೇಳಿಕೊಂಡರೆ ಉಪಯೋಗ ಇಲ್ಲ ಎಂದು ಸುಮ್ಮನಾದೆ. ಇನ್ನು ಟ್ಯೂಷನ್ ಶುಲ್ಕದಲ್ಲಿ ಸಿಗುತ್ತಿದ್ದ 750 ರೂ ನಲ್ಲಿ ಇಡೀ ತಿಂಗಳ ಖರ್ಚನ್ನು ಭರಿಸಬೇಕಾಗಿತ್ತು. ತುಂಬಾ ಕಷ್ಟದ ಪರಿಸ್ಥಿತಿ ನನ್ನದಾಗಿತ್ತು. ಹಾಗೋ ಹೀಗೋ ಹೇಗೋ ಮ್ಯಾನೇಜ್ ಮಾಡುತ್ತಿದ್ದೆ. ಹೋಟೆಲ್ಲಿನಲ್ಲಿ 5 ರೂಪಾಯಿ ಸಾಂಬಾರು ತಂದು ಅದರಲ್ಲಿ ನಾನು ನನ್ನ ರೂಮ್ ಮೇಟ್ ವೆಂಕಟೇಶ ಇಬ್ಬರೂ ಊಟ ಮಾಡುತ್ತಿದ್ದೆವು. ರಾತ್ರಿ ಮತ್ತೆ 5 ರೂಪಾಯಿ ಸಾಂಬಾರ್. ಒಂದು ದಿನಕ್ಕೆ ಬೆಳಗಿನ ತಿಂಡಿಗೆ ತಳ್ಳುವ ಗಾಡಿಯವನ ಬಳಿ 5 ರೂಪಾಯಿ ಕೊಟ್ಟು ತಿನ್ನುತ್ತಿದ್ದೆನು. ಒಂದು ದಿನಕ್ಕೆ ಸಾಂಬಾರಿಗೆ 10 ರೂಪಾಯಿ ಖರ್ಚಾಗುತ್ತಿತ್ತು. ತಿಂಗಳಿಗೆ 450 ರೂಪಾಯಿ ಊಟಕ್ಕೆಂದು ವ್ಯಯಿಸಿದರೆ 250 ರೂಪಾಯಿ ಬಾಡಿಗೆಗೆಂದು ಕಟ್ಟುತ್ತಿದ್ದೆವು. ಒಟ್ಟಾರೆಯಾಗಿ ಇಡೀ ತಿಂಗಳಿಗೆ 700 ರೂಪಾಯಿಯಲ್ಲಿಯೇ ಜೀವನ ಮಾಡಬೇಕಾಗಿತ್ತು. ಅನಿವಾರ್ಯ ನಾನೇ ತಂದುಕೊಂಡ ಪರಿಸ್ಥಿತಿ. ಈಗ ನೆನಪಿಸಿಕೊಂಡರೆ ನನ್ನ ಶತ್ರುವಿಗೂ ಬೇಡವೆನಿಸುತ್ತದೆ ಈ ಪಾಡು!! ಊರಿಗೆ ವಾಪಾಸ್ಸು ಹೋದರೆ ನನ್ನ ಸ್ವಾಭಿಮಾನದ ಪ್ರಶ್ನೆ. ಇಲ್ಲೇ ಉಳಿದುಕೊಂಡು ಏನಾದ್ರೂ ಸಾಧನೆ ಮಾಡಬೇಕೆಂದು ನಿರ್ಧಾರ ಮಾಡಿದೆ. ಆದರೆ ಅದೃಷ್ಟವೆಂಬಂತೆ ಮತ್ತೆ ಅದೇ ಶಾಲೆಯವರು ನನಗೆ ಶಾಲೆಗೆ ಬರಲು ಹೇಳಿಕಳಿಸಿದರು. ಮತ್ತೆ ಅದೇ ಶಾಲೆಗೆ ಹೋಗಲು ತೀರ್ಮಾನಿಸಿದೆ. ಆದರೂ ಮನಸ್ಸು ಮಾತ್ರ ಸರ್ಕಾರಿ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತಿತ್ತು.
ಒಮ್ಮೆ “ಸರ್ಕಾರಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ” ಎಂಬ ಸುದ್ದಿಯು ದಿನಪತ್ರಿಕೆಯಲ್ಲಿ ಬಂದಾಗ ಮನದಲ್ಲಿ “ಸಿಇಟಿಗೆ ಓದಬೇಕಾಗಿತ್ತು ಇಲ್ಲಿ ಕೆಲಸ ಮಾಡಿದರೆ ಸಮಯ ವೇಸ್ಟ್” ಎಂಬ ಭಾವನೆ ಬರುತ್ತಿತ್ತು. ಈ ದ್ವಂದ್ವ ಮನಸ್ಥಿತಿಯಲ್ಲಿಯೇ ನಾನು ಶಾಲೆಗೆ ಹೋಗುತ್ತಿದ್ದೆ. ಆದರೆ ಒಮ್ಮೆ ನಮ್ಮ ಶಾಲೆಯ ಮೇಡಂ ಒಬ್ಬರು “ಸರ್ ನೀವು ಟ್ಯಾಲೆಂಟೆಡ್ ಇದೀರ, ನಮಗಂತೂ ಈ ಶಾಲೆ ಅನಿವಾರ್ಯ, ನೀವಾದ್ರೂ ಸಿಇಟಿʼಗೆ ಓದಿಕೊಂಡು ಸರ್ಕಾರಿ ನೌಕರಿ ಪಡೆಯಿರಿ” ಎಂದರು. ಅವರ ಮಾತು ಮನದಲ್ಲಿ ಅಚ್ಚೊತ್ತಿದಂತೆ ಆಗಿ ಮತ್ತೆ ಶಾಲೆ ಬಿಟ್ಟೆ. ಈಗಂತೂ ಮತ್ತೆ ಈ ಹಿಂದಿನ ಸ್ಥಿತಿ!!
“ಹರ್ಷದ ಕೂಳು ನೆಚ್ಚಿಕೊಂಡು ವರ್ಷದ ಕೂಳು ಕಳ್ಕೊಂಡ್ರು” ಎನ್ನುವಂತೆ ನಾನು ಸರ್ಕಾರಿ ನೌಕರಿಯ ಆಸೆಯಿಂದ ಹೋಗುತ್ತಿದ್ದ ಖಾಸಗಿ ಶಾಲೆಯನ್ನು ಬಿಟ್ಟು ಪ್ರತಿದಿನವೂ ಓದಲು ಶುರು ಮಾಡಿದೆ. ಆದರೆ ನಾನೆಣೆಸಿದಂತೆ ಆಗಲಿಲ್ಲ. ನಾನು ಎಷ್ಟೋ ಬಾರಿ ನನ್ನ ಕ್ಲಾಸ್ ಮೇಟ್ಸ್ ಓದುತ್ತಿದ್ದ ಹಾಸ್ಟೆಲ್ಗಳಿಗೆ ಹೋಗಿ ಊಟ ಮಾಡಿದ ದಿನಗಳಿವೆ. ಎಷ್ಟೋ ದಿನ ದುಡ್ಡಿಲ್ಲದೇ ಉಪವಾಸ ಮಾಡಿದ ದಿನಗಳಿವೆ. ಆಗ ನನಗೆ ಸಹಾಯ ಮಾಡುತ್ತಿದ್ದುದು ಸುಧಾಕರ ಹಾಗೂ ಲಿಂಗರಾಜ ಎಂಬ ಪಿಯುಸಿ ಗೆಳೆಯರು. ಅವರು ಈ ಸಮಯದಲ್ಲಿ ಸುಧಾಕರ ಬೆಂಗಳೂರಿನಲ್ಲಿ ಹಾಗೂ ಲಿಂಗರಾಜ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದನು. ಸುಧಾಕರ ನನ್ನನ್ನು ಅವನ ಊರಿಗೆ ಕರೆದುಕೊಂಡು ಹೋಗುತ್ತಿದ್ದನು. ಅವನ ಊರಿನಲ್ಲಿ ನಾನು ವಾರಗಟ್ಟಲೇ ಉಳಿಯುತ್ತಿದ್ದೆನು. ಅವನು ನನ್ನ ಬಗ್ಗೆ ಕಾಳಜಿ ತೋರಿಸುತ್ತಿದ್ದನು. ಅವನ ಅಪ್ಪ ಅಮ್ಮನೂ ಸಹ ತುಂಬಾ ಪ್ರೀತಿ ತೋರಿಸುತ್ತಿದ್ದರು. ಅವರ ಊರಲ್ಲಿ ಹಬ್ಬವಿದ್ದಾಗ ನಾನು ಹೋಗುತ್ತಿದ್ದೆ. ದಾವಣಗೆರೆಗೆ ಬಂದಾಗ ಅವನು ನಮ್ಮ ರೂಮಿನಲ್ಲಿ ಉಳಿಯುತ್ತಿದ್ದನು. ಹೀಗೆ ಕೆಲಸವಿಲ್ಲದೇ ಅಲೆದಾಡುವ ಪರಿಸ್ಥಿತಿ ನಮ್ಮದಾಗಿತ್ತು.
ನಾನು ಬಾಡಿಗೆಗಿದ್ದ ನಮ್ಮ ಮನೆಯ ಓನರ್ ಮಾತ್ರ ತುಂಬಾ ಒಳ್ಳೆಯವರಾಗಿದ್ದರು. ಅವರು ಮನೆಮಗನ ರೀತಿಯಲ್ಲಿ ನನ್ನನ್ನು ನೋಡಿಕೊಳ್ಳುತ್ತಿದ್ದರು. ಒಮ್ಮೆ ನಾನು ಓದಲೆಂದು ಬೇಗನೇ ಎದ್ದು ಟೀ ಕುಡಿಯಲು ಹೋಟೆಲ್ ಹೋದದ್ದನ್ನು ಕೇಳಿ ನನ್ನ ಮನೆಯ ಅಮ್ಮನವರು ಕುಡಿಯಲು ಟೀ ಜೊತೆಗೆ ಬ್ರೆಡ್ಡನ್ನು ತಂದುಕೊಟ್ಟಿದ್ದರು. ಇಂತಹ ಹೃದಯವಂತ ಮನುಷ್ಯರಾಗಿದ್ದರವರು. ಇಂಥವರು ನನಗೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ.
ಅಂತೂ ಇಂತೂ ನನ್ನ ಮನದ ಆಸೆಯು ಫಲಿಸಿ ಸರ್ಕಾರದವರು ಶಿಕ್ಷಕರ ಹುದ್ದೆಗೆ ಅರ್ಜಿ ಕರೆದರು. ಈ ಹಿಂದೆ ಜಿಲ್ಲೆಯ ಆಯ್ಕೆಯು ತಪ್ಪಾಗಿ ಈ ಬಾರಿ ನಾನು ಈ ರೀತಿ ತಪ್ಪು ಮಾಡಬಾರದೆಂದು ದೇವರ ಬಳಿ ಪ್ರಸಾದ ಕೇಳಿ ಹಾಕೋಣವೆಂದು ನಮ್ಮ ಅಜ್ಜಿ ಊರಲ್ಲಿದ್ದ ನನ್ನ ಗೆಳೆಯನ ಅಮ್ಮನ ಮೇಲೆ ದೇವರು ಬರುತ್ತದೆ ಎಂಬುದನ್ನು ತಿಳಿದು ಅವರ ಬಳಿ ಕೇಳಿದೆ. ಅವರು ಈ ಬಾರಿ ನಿನಗೆ ಮನೆ ಬಾಗಿಲಲ್ಲಾಕಿದರೂ ಕೆಲಸ ಸಿಗುತ್ತದೆ ಎಂದು ಹೇಳಿದರು. ಆದರೆ ನಾನು ಅನುಮಾನದಿಂದ ವೀರಭದ್ರ ಗುಡಿಯ ದೇವರ ಅರ್ಚಕರ ಬಳಿ ಹೋಗಿ ಕೇಳಿದೆ. ಅವರು ದಕ್ಷಿಣ ದಿಕ್ಕಿಗೆ ಹೋಗಬೇಕು ಎಂದರು. ನಾನು ಅವರ ಮಾತಿನಂತೆ ಚಿಕ್ಕಬಳ್ಳಾಪುರಕ್ಕೆ ಅರ್ಜಿ ಹಾಕಿದೆ. ಆದರೆ ಬಹಳ ದಿನ ಕಳೆದರೂ ನೇಮಕಾತಿಯ ಸಿಇಟಿ ಮಾಡಲಿಲ್ಲ. ಆದರೆ ನಾನು ಓದುವುದನ್ನು ಬಿಡಲೇ ಇಲ್ಲ. ಬೆಳಗ್ಗೆ 7 ರಿಂದ 10 ನಂತರ 11 ರಿಂದ ಸಂಜೆ 5 ಹಾಗೂ ಸಂಜೆ 5 ರಿಂದ ರಾತ್ರಿ 11 ರವರೆಗೂ ಓದುತ್ತಿದ್ದೆ. ಆಗ ನನಗೆ ಬೇರೆ ಬೇರೆ ಮಾರ್ಗದರ್ಶಿ ಪುಸ್ತಕಗಳನ್ನು ಕೊಳ್ಳಲೂ ಆಗದೇ ಇದ್ದುದಕ್ಕಾಗಿ ಊರಿನ ಗ್ರಂಥಾಲಯದ ದಿನಪತ್ರಿಕೆಯಲ್ಲಿ ಬರುತ್ತಿದ್ದ ಸಿಇಟಿ ಪ್ರಶ್ನೋತ್ತರಗಳ ಹಾಳೆಯನ್ನು ರದ್ದಿಗೆಂದು ಎಸೆದ ಪೇಪರ್ ನಲ್ಲಿ ಕತ್ತರಿಸಿಕೊಂಡು ಅವನ್ನು ಸಂಗ್ರಹಿಸಿಕೊಂಡು ಓದುತ್ತಿದ್ದೆ. ಮುಂದೇನಾಯ್ತು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ನಾನು ಮಾತ್ರವೇ ಅಲ್ಲ, ಬಹುತೇಕರು ಇದೇ ರೀತಿಯ ಕಷ್ಟಪಟ್ಟು ತಮ್ಮ ಜೀವನದಲ್ಲಿ ಮುಂದೆ ಬಂದಿರಬಹುದು. ಆದರೆ ಇಂದಿನವರಿಗೆ ಈ ರೀತಿಯ ಕಷ್ಟಗಳು ಬೇಡವೆನಿಸಿವೆ. ತಕ್ಷಣಕ್ಕೆ ಫಲಿತಾಂಶ ಸಿಗಬೇಕು. ತಪ್ಪಿದರೆ ಅದನ್ನು ಸೈರಿಸಿಕೊಳ್ಳುವ ತಾಳ್ಮೆ, ಧೈರ್ಯ ಇಲ್ಲ. ಈ ರೀತಿಯ ಮಕ್ಕಳ ಮನೋಭಾವಕ್ಕೆ ಪೋಷಕರ ಮನೋಭಾವವೂ ಕಾರಣವಿರಬಹುದು. ನಮ್ಮ ಮಗ ಅಥವಾ ಮಗಳು ನಮ್ಮಂತೆ ಕಷ್ಟ ಅನುಭವಿಸಬಾರದು ಎಂದು ಅವರನ್ನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸುತ್ತಾರೆ. ಇದರ ಪರಿಣಾಮ ಮಕ್ಕಳ ಮೇಲಾಗುತ್ತದೆ. ಮಕ್ಕಳು ಕಷ್ಟ ಅನುಭವಿಸುವುದನ್ನು ಕಲಿಯಲು ಬಿಡಿ. “ಕಷ್ಟಪಟ್ಟರೆ ಸುಖವುಂಟು” ಎಂಬುದನ್ನು ತಾವೇ ಕಲಿಯಲು ಬಿಡಿ. ಹೌದಲ್ವೇ??!!

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
