“ಬದುಕಿನ ಎಲ್ಲ ಸಂವೇದನೆಯ ಕ್ಷಣಗಳ ಹೊಳೆಯುವಿಕೆಯನ್ನು ಕವಿತೆಯಲ್ಲಿ ಕಾಣಿಸಬೇಕಾದ ತಹತಹ, ಜರೂರತ್ತು ಕವಿಗೋ ಕವಯಿತ್ರಿಗೋ ಕಾಡುತ್ತಿರುವ ಹೊತ್ತು ಇದು. ತನ್ಮೂಲಕ ಸೋಗಿಲ್ಲದ ಸಹಜತೆ, ಸರಳತೆಯ ಮಾತಿನ ಗುಣದ ಕವಿತೆಯ ಆಗಿಸುವುದರ ಮೂಲಕ ಆತ್ಮಸಂತೋಷವನ್ನೂ ಹೊಂದಬೇಕಾದ ಆವಶ್ಯಕತೆಯ ಸಮಯ ಕೂಡ ಹೌದು ಅಂತ ಅಂದುಕೊಂಡಿರುವೆ ನಾನು ಎನ್ನುವ ರೇಣುಕಾ ಯಾವ ಪಂಥವನ್ನೂ ತುಳಿಯದೆ ಮನಸ್ಸಿನ ಮೌನದಲ್ಲಿ ಅರಳಿಕೊಂಡಿರುವುದನ್ನೇ ಕವಿತೆಯಾಗಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ.”
ಆರ್. ವಿಜಯರಾಘವನ್ ಬರೆದ ವಾರದ ಪುಸ್ತಕ ಪರಿಚಯ.

 

ಸುಮಾರು ಹದಿನಾಲ್ಕು ವರ್ಷಗಳಷ್ಟು ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಶಶಿಕಲಾ ವೀರಯ್ಯಸ್ವಾಮಿಯವರು ಕನ್ನಡದ ವಾಸ್ತವದಲ್ಲಿ ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,.. ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಚರ್ಚಿಸಿದ್ದಾರೆ. ಮರಾಠಿಯಲ್ಲಿ ಯಾವ ಮುಲಾಜೂ ಇಲ್ಲದೇ, ನಿಸ್ಸಂಕೋಚವಾಗಿ, ನಿರ್ಭೀತರಾಗಿ ಬರೆಯುತ್ತಿರುವ ಹೆಣ್ಣುಮಕ್ಕಳು ವಿಶೇಷವಾದ ಧಾಡಸೀತನದಿಂದಾಗಿ ಮಹಿಳಾ ಸಾಹಿತ್ಯದಲ್ಲಿ ಒಂದು ಹೊಸ ಸಂಚಲನೆಯನ್ನುಂಟು ಮಾಡಿದ್ದಾರೆ ಎನ್ನುವ ಅವರು ಕನ್ನಡದ ಸಂದರ್ಭದ ಬಗ್ಗೆ ಮಾತನಾಡುತ್ತಾ ಈವರೆಗೆ ಕನ್ನಡದಲ್ಲಿ ಬರೆದಿರುವ, ಬರೆಯುತ್ತಿರುವ ಹೆಣ್ಣುಮಕ್ಕಳೆಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತುಕೊಂಡೇ ಇದ್ದವರು. ಕೌಟುಂಬಿಕ ಬದ್ಧತೆ, ಹೆಣ್ಣಿಗೆ ಹೇರಿದ ಅನಿವಾರ್ಯ ಹೊಣೆ. ಅವಳಿಗೆ ಕುಟುಂಬವೇ ವಿಶ್ವ. ಆದರೆ ಗಂಡಿಗೆ, ಹೆಣ್ಣು ಕೇವಲ ಅವನ ವಿಶ್ವದ ಒಂದು ಘಟಕ ಮಾತ್ರ. ಅವಳಷ್ಟು ತೀವ್ರವಾಗಿ ಅವನು ತನ್ನನ್ನು ಕುಟುಂಬಕ್ಕೆ ಕಟ್ಟಿಕೊಳ್ಳಲಾರ. ಅದು ಅವನ ಜಾಯಮಾನವೇ ಅಲ್ಲ. ಗಂಡಸಿಗೆ, ತಾನು ಗಂಡಸಾಗಿರುವುದೇ ಒಂದು ಅಹಂಕಾರ (ಈಗೋ) ಇದು ಈಗೋ-ಆಗೋ ಹೋಗುವಂಥದ್ದಲ್ಲ. ಈ ಅಹಂನ ಜಗತ್ತಿನಲ್ಲಿ, ಅನಿಗೆ ಅವನ ಅಂತಸ್ತು, ಸಂಪತ್ತು, ಸ್ನೇಹಗಳಿಗೆ ಪ್ರಥಮ ಆದ್ಯತೆ, ಹೆಂಡತಿ-ಮಕ್ಕಳು, ಅವನ ವಿಶ್ವ ಸಂಚಾರದ ನದಿಯ ಎರಡು ದಡಗಳು ಮಾತ್ರ. ನದಿಯ ರಭಸಕ್ಕೆ ಬೆರಗಾಗುವ ಲೋಕ, ಅದನ್ನು ತೋಳಿನೊಳಗೆ ರಕ್ಷಿಸಿದ ದಡಗಳನ್ನು ಎಲ್ಲಿ ಗಮನಿಸುತ್ತದೆ? ದಡಗಳಿಗಾದರೂ, ‘ಲೋಕ ತನ್ನನ್ನು ಕಂಡು ಬೆರಗಾಗಲೀ’ ಎಂಬ ಭಾವನೆ ಎಲ್ಲಿರುತ್ತದೆ? ಅದರ ಲಕ್ಷ್ಯವೆಲ್ಲ ತನ್ನ ತಾಯ್ತನದ ಸಂಭ್ರಮದಲ್ಲಿ ತಲ್ಲೀನವಾಗಿರುತ್ತದೆ. ತನ್ನ ತೋಳದಂಡೆಗಳಲ್ಲಿ ಕುಟುಂಬವನ್ನು ಸಂರಕ್ಷಿಸುವಲ್ಲೇ ಇಡೀ ತನ್ನ ಶಕ್ತಿ-ಚೈತನ್ಯಗಳನ್ನು ಧಾರೆ ಎರೆಯುತ್ತದೆ ಎನ್ನುತ್ತಾರೆ. ಇದೊಂದು ಆಂಶಿಕವೂ ಸಾರ್ವತ್ರಿಕವೂ ಆದ ಸತ್ಯ ಎನ್ನುವುದನ್ನು ಭಾರತೀಯ ಸಮಾಜದ ಹಿನ್ನೆಲೆಯಲ್ಲಿ ನಾವು ನೆನಪಿನಲ್ಲಿ ಇರಿಸಿಕೊಂಡಿರಬೇಕು.

ಹೆಣ್ಣಿನ ಬದುಕಿನ ಜವಾಬ್ದಾರಿ ಕುರಿತು ಅವರು ಆಡುವ ಮಾತೂ ಗಮನಾರ್ಹವಾಗಿದೆ. ಆಧುನಿಕ ಜೀವನ ಶೈಲಿಗೆ ಉದ್ಯೋಗ ಅನಿವಾರ್ಯವಾದಾಗ ಅದು ಅವಳ ಬದುಕಿನ ಚೈತನ್ಯವನ್ನು ಒಳಗೊಳಗೇ ಖಾಲಿ ಮಾಡುತ್ತದೆ. ಹೈರಾಣು ಮಾಡುತ್ತದೆ. ಈಗ ಎರಡು ದೋಣಿಯ ಪ್ರಯಾಣದಲ್ಲಿ ಏಕಾಂತ, ಏಕಾಗ್ರತೆ, ಅನನ್ಯತೆಗಳು, ಅಲಭ್ಯವಾಗುವ ಕಾರಣ ಮತ್ತೆ ಮತ್ತೆ ಈ ಕೌಟುಂಬಿಕ- ಔದ್ಯೋಗಿಕ ಸುಳಿಗಳಲ್ಲಿ ಸುತ್ತತೊಡಗುವ ಸಾಹಿತ್ಯದ ಶಿಲ್ಪ ಅನೇಕಬಾರಿ ಶಿಥಿಲಗೊಳ್ಳುತ್ತದೆ. ಮಾನಸಿಕ-ದೈಹಿಕ ದಣಿವುಗಳು, ಸೃಜನಶೀಲ ಉಲ್ಲಾಸವನ್ನು ಕೊಂದು ಹಾಕುತ್ತವೆ. ಇವೆಲ್ಲವುಗಳ ಜೊತೆಗೆ, ಬಸಿರು-ಬಾಣಂತನ-ಶಿಶುಪಾಲನೆಗಳು, ಅವಳ ಶಕ್ತಿ-ಸಮಯಗಳ ಬಹುಪಾಲನ್ನು ಕಬಳಿಸುತ್ತವೆ. ಹೊರಜಗತ್ತಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವೇ ಆಗುವುದಿಲ್ಲ. ಇವೆಲ್ಲವನ್ನೂ ಒಳಗೊಂಡರೂ ಮಹಿಳಾ ಸಾಹಿತ್ಯದ ಸಾಧನೆ ಸಣ್ಣದೇನಲ್ಲ. ಇಂದು ಪುರುಷ ಸಾಹಿತಿಗಳಿಗಿಂತ, ಮಹಿಳಾ ಸಾಹಿತಿಗಳು ಬದುಕನ್ನು ಭಿನ್ನವಾಗಿ ನೋಡುವ ಮೂಲಕ ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಭಿನ್ನವಾಗಿ, ಭಾಷೆ-ಬದುಕನ್ನು ನೋಡುವುದರ ಮೂಲಕ ತಮ್ಮ ಸ್ವಂತಿಕೆಯನ್ನು ಹೆಚ್ಚು ಸ್ಪಷ್ಟಪಡಿಸುತ್ತಿದ್ದಾರೆ. ಕನ್ನಡ ಲೇಖಕಿಯರ, ಸ್ತ್ರೀ ಸಂವೇದನೆಯ ಸಾಹಿತ್ಯ ಪ್ರಕಾರಗಳು, ಹೆಚ್ಚು ಮೌಖಿಕವಾಗಿ ಮೂಡಿ ಬರುತ್ತಿವೆ. ಅವುಗಳನ್ನು ಯಾವ ವಿಮರ್ಶಕರೂ, ಲಘುವಾಗಿ ಪರಿಗಣಿಸುವಂತಿಲ್ಲ. (ಪ್ರಜಾವಾಣಿ.ದಿ.೧೩.೦೧.೨೦೦೪)

ಈ ಟಿಪ್ಪಣಿ ಪ್ರಕಟವಾಗಿ ೧೪ ವರ್ಷಗಳಾಗಿದೆ. ಈ ಹೊತ್ತಿನ ಅತಿವೇಗದ ಬದುಕಿನಲ್ಲಿ ೧೪ ವರ್ಷ ಅತಿ ಕಡಿಮೆ ಅವಧಿಯೇನಲ್ಲ. ಈ ಕಾಲ ಘಟ್ಟದ ಪಲ್ಲಟಗಳು ಹೆಣ್ಣಿನ ಮನೋಭೂಮಿಕೆಯಲ್ಲಿ ಗಮನಾರ್ಹ ಬದಲಾಣೆ ತಂದಿವೆ. ೧೯೯೦ರ ದಶಕದಿಂದ ಆಚೆ ಮಹಿಳಾ ಸಂವೇದನೆಗಳು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಭಿವ್ಯಕ್ತಿಗೊಂಡಿರುವ ವಿಧಾನಗಳನ್ನು ಕನ್ನಡ ವಿಮರ್ಶಾ ಪರಂಪರೆ ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಗ್ರಹಿಸಿಲ್ಲವೆಂದೇ ಹೇಳಬಹುದು. ಇದರಿಂದ ಹೊಸ ತಲೆಮಾರಿನ ಮಹಿಳಾ ಲೇಖಕರು ಹೆಚ್ಚು ಅನುಕೂಲ ವಂಚಿತರಾಗಿರುವುದು ಸತ್ಯ. ಇಂದಿಗೂ ಅಕ್ಕಮಹಾದೇವಿಯನ್ನೇ ಕತ್ತೆತ್ತಿ ನೋಡಿದರೆ ಕಾಣುವ ಪ್ರತೀಕವಾಗಿ ಮಹಿಳಾ ಕವಿಗಳು ಕಾಣುವುದನ್ನು ನಾವು ಗಮನಿಸಬಹುದು. ಪರಿತ್ಯಕ್ತಿಯಲ್ಲಿ ಎಲ್ಲವನ್ನೂ ಸಮಾಹಿತಗೊಳಿಸುವ ಅಕ್ಕನ ಪ್ರತಿರೋಧವನ್ನು ಪುರೋಗಾಮಿ ನಡೆಯಾಗಿ ಬಳಸಿಕೊಳ್ಳುವ ಈ ಕ್ರಿಯೆ ಇಂದಿನ ಮಟ್ಟಿಗೆ ಕೆಲಮಟ್ಟಿಗೆ ಪಾರ್ಶ್ವನೋಟವೂ ಪ್ರತಿಗಾಮಿಯಾಗಿಯೂ ಆಗಿ ತೋರುತ್ತದೆ. ಮತ್ತೊಂದು ದಿಕ್ಕಿನಿಂದ ಪ್ರವೇಶಿಸಿದರೆ ಅಂಬೇಡ್ಕರ್ ಮತ್ತು ಗೌತಮ ಬುದ್ಧರು ದಲಿತ ಸಾಹಿತ್ಯ ಪರಂಪರೆಯಲ್ಲಿ ಹೇಗೆ ಅನಿವಾರ್ಯತೆಯೊಂದನ್ನು ಹುಟ್ಟು ಹಾಕಿದ್ದಾರೆಯೋ, ನನ್ನನ್ನ ಎದುರಿಗಿಟ್ಟುಕೊಂಡು ಬರಿ ಬರಿ ಎಂದು ಹೊಸಬರು, ಹಳಬರನ್ನು ಅವರು ಒತ್ತಾಯಿಸುವಂತಿದೆಯೋ ಅಂತಹ ಒತ್ತಾಯವನ್ನು ಅಕ್ಕನಂಥವರ ಬದುಕು ಹುಟ್ಟು ಹಾಕಿರುವಂತಿದೆ. ಬಹಳ ಸಲ ಮುರಿದು ಕಟ್ಟುವ ಕ್ರಿಯೆ ಗೈರುಹಾಜರಾಗುವುದರಿಂದ ಇಂಥ ಕಾವ್ಯ ತನ್ನ ತಾನೇ ನಿರ್ಬಂಧಕ್ಕೆ ಒಳಗು ಮಾಡಿಕೊಳ್ಳುತ್ತಿರುತ್ತದೆ. ಇದರ ಜೊತೆಗೆ ಗಮನಿಸಬೇಕಾದ ಇನ್ನೊಂದು ಅಂಶವೂ ಇದೆ: ಹೊಸಗನ್ನಡ ಮಹಿಳಾ ಕಾವ್ಯ ಎಂಬ ಲೇಖನದಲ್ಲಿ ರಾಮಲಿಂಗಪ್ಪ ಟಿ ಬೇಗೂರು (ನುಡಿಯಾಟ-೨೦೧೭) ಹೀಗೆ ಹೇಳಿದ್ದಾರೆ: “ಮಹಿಳಾ ಕಾವ್ಯವನ್ನು ಇಡಿಯಾಗಿ ನೋಡಿದಾಗ ಹಲವರ ಕವಿತೆಗಳು ಹೇಗೆ ಒಕ್ಕೊರಲ ದನಿಯಾಗಿ ಕೇಳಿಸುತ್ತವೆಯೋ ಹಾಗೆಯೇ ಒಬ್ಬಳ ದನಿ ಒಂದಿಡೀ ಹೆಣ್ಣು ಸಮುದಾಯದ ದನಿಯಾಗಿಯೂ ಕೇಳಿಸುತ್ತದೆ. ಇದು ವೈಕ್ತಿಕ ಪ್ರತಿಭೆಯೂ ಹೌದು ಸಾಮುದಾಯಿಕ ಸಂವೇದನೆಯೂ ಹೌದು. ಈ ಮಾತುಗಳಲ್ಲಿ ಅನನ್ಯತೆಯು ವಿರಳವಾಗಿರುವ ಸೂಚನೆಯನ್ನು ಕಾಣಬಹುದು. ಅದನ್ನವರು ವಚನಕಾಲದ, ದಾಸಪರಂಪರೆಯ ಸಾಮುದಾಯಕತೆಗೆ ಹೋಲಿಸಿ ನಿರಾಳ ಒದಗಿಸುತ್ತಾರೆ. ಆದರೆ ಈ ಚೌಕಟ್ಟುಗಳ ಆಚೆ ಕನ್ನಡ ಮಹಿಳಾ ಕಾವ್ಯ ಹೇಗೆ ಬೆಳೆದಿದೆ ಮತ್ತು ದಲಿತ ಮಹಿಳೆಯರು ತಮ್ಮ ಕಾವ್ಯದಲ್ಲಿ ಏನನ್ನು ಅರಸಲು ಹೊರಟಿದ್ದಾರೆ ಎಂಬ ಎರಡೂ ಸಂಗತಿಗಳನ್ನು ಇಟ್ಟುಕೊಂಡು ಇವತ್ತಿನ ಕನ್ನಡ ಮಹಿಳಾ ಸಾಹಿತ್ಯವನ್ನು ಅದರಲ್ಲೂ ಮಹಿಳಾ ಕಾವ್ಯವನ್ನು ಪರಿಶೀಲಿಸುವ ಅಗತ್ಯ ಕಂಡುಬರುತ್ತದೆ. ಆದರೆ ಅದು ನನ್ನ ಮಿತಿಯನ್ನು ಮೀರಿದ್ದು.

(ರೇಣುಕಾ ರಮಾನಂದ)********

ತೀರಾ ಇತ್ತೀಚೆಗೆ ನಾನು ಓದಿದ ಮಹಿಳಾ ಕವಿಗಳಲ್ಲಿ ರೇಣುಕಾ ರಮಾನಂದ ಎಂಬ ಅಂಕೊಲೆಯ ಶಿಕ್ಷಕಿ ಒಬ್ಬರು. ಅವರ ಮೀನು ಪೇಟೆಯ ತಿರುವು ಪಲ್ಲವ ಪ್ರಕಾಶನದಿಂದ ೨೦೧೭ ರಲ್ಲಿ ಪ್ರಕಟವಾಗಿದೆ. ಇದು ಅವರ ಮೊದಲನೆಯ ಕವನ ಸಂಕಲನ. ಸುಮಾರು ದಿನಗಳಿಂದ ಕವಿತೆಯ ಬರವಣಿಗೆಯಲ್ಲಿ ಅವರು ತೊಡಗಿಕೊಂಡಿದ್ದು ಸಂಕಲನವನ್ನು ಮಾತ್ರ ೨೦೧೭ರಲ್ಲಿ ಪ್ರಕಟಿಸಿದ್ದಾರೆ ಎನ್ನುವುದು ಅವರ ಮಾತಿನಿಂದ ತಿಳಿದುಬರುತ್ತದೆ. ಆ ಮಾತು ಪರಿಚಯಕ್ಕೆ ಹೇಳಿದ್ದು. ಹೊರತು ಮೊದಲ ಸಂಕಲನವೆನ್ನುವ ಯಾವ ಮುಲಾಜೂ ಅವರ ಕವಿತೆಗಳಿಗೆ ಇಲ್ಲ.

ಪೇಟೆಯ ತಿರುವಿನಲ್ಲಿ ನಿಂತು ಎಂಬ ತಮ್ಮ ಮಾತುಗಳ ಮೊದಲಲ್ಲಿ ರೇಣುಕಾ ಹೀಗೆ ಬರೆಯುತ್ತಾರೆ: “ಸಣ್ಣಗಾಳಿಗೂ ಬೆಚ್ಚಗೆ ತೂಗುವ ಬೆಟ್ಟದ ನಾನಾ ಜಾತಿಯ ಮರಗಳ ಹೊಟ್ಟೆಗೆ ಕಪ್ಪಿಕೊಂಡ ಜೀರುಂಡೆಗಳ ಧ್ವನಿ ಕೇಳುತ್ತ ರಾತ್ರಿ ನಿದ್ದೆತೂಗಿದವಳು ನಾನು. ಧೋ ಎಂದು ಸುರಿವ ಮಳೆಗಾಲದಲ್ಲಿ ಕಡಲಬ್ಬರದ ಆಪ್ತ ಜೋಗುಳವನ್ನು ಮಗ್ಗುಲು ಬದಲಾಯಿಸದೆಯೇ ಆಲಿಸುತ್ತಿದ್ದವಳು ನಾನು. ಊರಿನ ಎಲ್ಲ ಹೆಂಗಳೆಯರು ಪಾಲಿನ ಬಾವಿಯಲ್ಲಿ ಚಕ್ರಾಕಾರವಾಗಿ ಬಗ್ಗಿ ನೀರು ಸೇದಿ ಬೊಸಬೊಸನೆ ತೆಂಗಿನ ಮರಗಳ ಬುಡಕ್ಕೆ ಸುರಿಯುವ ಶಬ್ದಕ್ಕೆ ನಸುಕಿಗೆ ಕಣ್ತೆರೆಯುತ್ತಿದ್ದವಳು ನಾನು. ಚುಮುಚುಮು ಬೆಳಗಿನಲ್ಲಿ ಎಲ್ಲರ ಮುಳಿಹುಲ್ಲ ಮನೆಯ ಮಾಡಿನ ಮೇಲೆ ಏಳುತ್ತಿದ್ದ ಹೊಗೆಯೊಳಗೆ ಬೆರೆತ ಚಹಾ ಅರಕದ, ದೋಸೆಯ ಪರಿಮಳಕ್ಕೆ ಹೊಂದಿಕೊಂಡವಳು ನಾನು. ಭತ್ತ ಕುದಿಸುವ ಒಲೆಯ ನಿಗಿನಿಗಿ ಕೆಂಡವನ್ನು ಅಹಹ..! ಎಷ್ಟು ಚೆಂದ ಎಂದು ತಾಸುಗಟ್ಟಲೆ ನಿಂತು ನೋಡಿದವಳೂ… ಅದೇ ಕೆಂಡದಲ್ಲಿ ಅವ್ವ ಸುಟ್ಟುಕೊಟ್ಟ ಸಿಹಿಗೆಣಸನ್ನು ತಿನ್ನುತ್ತ ಅರಳಿ ಹೂವಾದ ಭತ್ತವನ್ನು ಮೊರದಲ್ಲಿ ತೋಡಿ ತೋಡಿ ಹೊಯ್ಯುವ ಅವಳ ಅರ್ಧರಾತ್ರಿಯ ಮೌನಕ್ಕೆ ಬೆರಗುಗಣ್ಣುಗಳಿಂದ ಜೊತೆಯಾದವಳೂ ನಾನೇ.. ಈ ಮಧ್ಯೆ ಈ ಕವಿತೆಯೆಂಬುದು ಯಾವಾಗ ಎಲ್ಲಿ ಸೇರಿಕೊಂಡಿತೆಂದು ಗೊತ್ತೇ ಆಗದ ಹೊತ್ತಿಗೆ ಬಂದು ನಿಂತಿದ್ದೇನೆ.”

ಎರಡು ದೋಣಿಯ ಪ್ರಯಾಣದಲ್ಲಿ ಏಕಾಂತ, ಏಕಾಗ್ರತೆ, ಅನನ್ಯತೆಗಳು, ಅಲಭ್ಯವಾಗುವ ಕಾರಣ ಮತ್ತೆ ಮತ್ತೆ ಈ ಕೌಟುಂಬಿಕ- ಔದ್ಯೋಗಿಕ ಸುಳಿಗಳಲ್ಲಿ ಸುತ್ತತೊಡಗುವ ಸಾಹಿತ್ಯದ ಶಿಲ್ಪ ಅನೇಕಬಾರಿ ಶಿಥಿಲಗೊಳ್ಳುತ್ತದೆ. ಮಾನಸಿಕ-ದೈಹಿಕ ದಣಿವುಗಳು, ಸೃಜನಶೀಲ ಉಲ್ಲಾಸವನ್ನು ಕೊಂದು ಹಾಕುತ್ತವೆ. ಇವೆಲ್ಲವುಗಳ ಜೊತೆಗೆ, ಬಸಿರು-ಬಾಣಂತನ-ಶಿಶುಪಾಲನೆಗಳು, ಅವಳ ಶಕ್ತಿ-ಸಮಯಗಳ ಬಹುಪಾಲನ್ನು ಕಬಳಿಸುತ್ತವೆ.

ಬದುಕಿನೊಳಕ್ಕೆ ಕವಿತೆ ಬಂದು ಸೇರಿದ್ದು ಯಾವಾಗಲೆಂಬ ಬೆರಗು ಕವಿಯಲ್ಲಿದೆ. ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು ಎಂಬ ಕವಿ ರಾಮಚಂದ್ರ ಶರ್ಮರ ಕವಿತೆಯ ಸಾಲೊಂದು ಅಪ್ರಾಸಂಗಿಕವಾಗಿ ಇಲ್ಲಿ ನೆನಪಿಗೆ ಬರುತ್ತದೆ. ಎಸ್ ದಿವಾಕರ್ ಈ ಘಳಿಗೆಯ ಬಗ್ಗೆ ಹೀಗೆ ಬರೆಯುತ್ತಾರೆ: “ನನ್ನ ದಷ್ಟಿಯಲ್ಲಿ ಮೌನವೇ ಆ ಘಳಿಗೆ. ಮೌನವೆನ್ನುವುದು ನಮಗೆ…. ಸುಲಭವಾಗಿ ಸಿಕ್ಕುವ ವಸ್ತುವಲ್ಲ. ಅದನ್ನು ನಾವು ಸಂಪಾದಿಸಿಕೊಳ್ಳಬೇಕು; ಅದರ ಹಾಜರಿಗಾಗಿ ಶ್ರಮಿಸಬೇಕು; ಅದು ನಮ್ಮನ್ನು ತುಂಬಿಕೊಳ್ಳುವಂತೆ ನೋಡಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಮೌನವೆನ್ನುವುದು ಒಂದು ಅಲ್ಪವಿರಾಮಕ್ಕಿಂತ ಹೆಚ್ಚಿನದು.. ಮೌನದಲ್ಲಿ ಈ ಜಗತ್ತಿನ ಸದ್ದುಗದ್ದಲಗಳ ಹಿಂದಿರಬಹುದಾದದ್ದು ಕೂಡ ನಮಗೆ ಕೇಳಿಬರುವುದೆ.. ನನಗಿಲ್ಲಿ ತೋರುವುದು ಕಾವ್ಯ ಸಂಭವಿಸುವ ಹೊತ್ತಿನಲ್ಲಿ ಎಲ್ಲೆಡೆ ಮೌನವೇ ತುಂಬಿಕೊಂಡಿರುತ್ತದೆ. ಮನಸ್ಸಿನಲ್ಲಿ ಹುಟ್ಟುವ ಕಾವ್ಯ ಮನಸ್ಸಿನೊಂದಿಗೇ ಅನುಸಂಧಾನದಲ್ಲಿ ತೊಡಗಿರುತ್ತದೆ. ರೇಣುಕಾ ಅವರಲ್ಲಿ ಈ ಬಗೆಯ ಮೌನದಲ್ಲೇ ಅರಳುವ ಕವಿತೆ ಕಾಣುವುದರ, ಕೇಳುವುದರ, ಜೊತೆಗೆ ಸುತ್ತಲ ಬದುಕಿನ ಜೊತೆ ತಾದಾತ್ಮ್ಯವನ್ನು ಕೂಡಾ ಅದೇ ಸಂಯಮದಿಂದ ಸಾಧಿಸುತ್ತಿರುವ ಅವಸ್ಥೆಯಾಗಿದೆ. ಇದನ್ನೇ ಎಚ್ಚೆಸ್ವಿ ಅಹಿಂಸಾಯೋಗದ ಕ್ಷಣ ಎನ್ನುತ್ತಾರೆ. ಈ ಯೋಗದ ಇನ್ನೊಂದು ಮುಖವನ್ನು ರೇಣುಕಾ ಅವರ ಕಾವ್ಯದಲ್ಲಿ ನೋಡಬಹುದು.

ಬದುಕಿನ ಎಲ್ಲ ಸಂವೇದನೆಯ ಕ್ಷಣಗಳ ಹೊಳೆಯುವಿಕೆಯನ್ನು ಕವಿತೆಯಲ್ಲಿ ಕಾಣಿಸಬೇಕಾದ ತಹತಹ, ಜರೂರತ್ತು ಕವಿಗೋ ಕವಯಿತ್ರಿಗೋ ಕಾಡುತ್ತಿರುವ ಹೊತ್ತು ಇದು. ತನ್ಮೂಲಕ ಸೋಗಿಲ್ಲದ ಸಹಜತೆ, ಸರಳತೆಯ ಮಾತಿನ ಗುಣದ ಕವಿತೆಯ ಆಗಿಸುವುದರ ಮೂಲಕ ಆತ್ಮಸಂತೋಷವನ್ನೂ ಹೊಂದಬೇಕಾದ ಆವಶ್ಯಕತೆಯ ಸಮಯ ಕೂಡ ಹೌದು ಅಂತ ಅಂದುಕೊಂಡಿರುವೆ ನಾನು ಎನ್ನುವ ರೇಣುಕಾ ಯಾವ ಪಂಥವನ್ನೂ ತುಳಿಯದೆ ಮನಸ್ಸಿನ ಮೌನದಲ್ಲಿ ಅರಳಿಕೊಂಡಿರುವುದನ್ನೇ ಕವಿತೆಯಾಗಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ. ನಾನು ಮೊದಲು ಎತ್ತಿದ ಕಾವ್ಯ ಸಲಕರಣೆಗಳು ಮತ್ತು ಕಾವ್ಯ ವಸ್ತುಗಳ ಹಂಗಿನಾಚೆಗೆ ತನ್ನೊಡಲು ಕಂಡದ್ದನ್ನೇ ಕವಿತೆಯಾಗಿಸುವ ಶ್ರದ್ಧೆಯನ್ನು ಇಲ್ಲಿ ಕಾಣಬಹುದು. ಅವರನ್ನು ಬದುಕು ಕಡಲಂತೆ ಅಪ್ಪಿಕೊಳ್ಳುತ್ತದೆ. ಮೀನಿನೂಟದ, ಮೀನುಗಾರನ ಬೆಲ್ಲದಚ್ಚಿನಂಥ ಹೊಸಾ ಹೆಂಡತಿಯ ಕುರಿತು ಮಾತಿಗೆ ತೊಡಗುವ ಕವಿತೆ ವೈಯಕ್ತಿಕ ನೆಲೆಗೆ ಹೊರಳಿ ಸುಖಾಸುಮ್ಮನೆ
ಆಗಾಗ ಬೆವರುವ
ಶರಧಿಯ
ಬೊಗಸೆ ಉಪ್ಪುನೀರು ಕುಡಿವ ನನ್ನ ಚಟ
ವ್ಯಾಪಕವಾದದ್ದು ಮತ್ತು
ಅನಾದಿ ಕಾಲದ್ದು… ಎಂದು ಹೇಳುತ್ತ ನಿಸರ್ಗದ ಜೊತೆಗಿನ ತನ್ನ ಸಂಬಂಧವನ್ನು ವಿಸ್ತರಿಸಿಕೊಳ್ಳುವುದು ಹೀಗೆ:

ನಾಳೆ ಬರುವೆನೆಂದು
ಮೈದಡವಿ
ಸಮಾಧಾನಿಸುತ್ತಿದ್ದರೂ
ತಬ್ಬಿಕೊಂಡು ಗೋಗರೆಯುತ್ತಲೇ ಇದೆ
ಹಚ್ಚಿಕೊಂಡ ಸಮುದ್ರ

ರೇಣುಕಾ ಅವರ ಕವಿತೆ ಓದಲು ಮೊದಲಿಟ್ಟಾಗಲೇ ಇದು ಬೇರೊಂದು ಬಗೆಯ ಕಾವ್ಯ ಪಕ್ಷಿ ಎನ್ನಿಸಿಬಿಟ್ಟಿತು. ಮತ್ತೆ ಆ ಗುಂಗಿನಿಂದ ಹೊರಬಂದ ಮೇಲೇ ಉಳಿದ ಕವಿತೆಗಳ ಓದಿಗೆ ತೊಡಗಿದ್ದು.

ರೂಪಕದ ಮೂಲಕ ಸಂಬಂಧವೊಂದನ್ನು ಪುನರ್ ಸ್ಥಾಪಿಸಿಕೊಳ್ಳುವದನ್ನು ಚಿತ್ರಿಸುವ ಕೆಲಸವನ್ನು ಭತ್ತ ಬೆಳೆಯುವುದೆಂದರೆ ಕವಿತೆ ಮಾಡುತ್ತದೆ.

ಈಗ
ಮುಷ್ಟಿ ಭತ್ತಕ್ಕೆ
ಕೊಳಗ ಅಕ್ಕಿ, ಹೊರೆ ಹುಲ್ಲು
ದಾಸ್ತಾನಾಗಿದೆ
“ಅಮ್ಮಾ ಹೊರೆ ಹುಲ್ಲಿದೆ
ನಾವೂ ದನ
ಸಾಕೋಣವೇ” ಎನ್ನುತ್ತಿದ್ದಾಳೆ
ಕೊರಳಿಗೊಂದು ಗಂಟೆ
ಈಗಾಗಲೇ ತಂದಿಟ್ಟುಕೊಂಡಿದ್ದಾಳೆ
ಮುಂದಿನ ಬಾರಿ ಭತ್ತಕ್ಕೆ
ಗೊಬ್ಬರವೂ
ನಮ್ಮದೇ.

ನೆಲ ಜಲ ಸಸ್ಯ ಇತ್ಯಾದಿ ಕುರಿತು ಬೆಳೆಗಾರರು ಇಟ್ಟುಕೊಂಡಿರುವ ರೂಢಿಗತ ನಂಬಿಕೆಗಳು ಬದುಕಿನ ಪರಮಾಪ್ತ ಸಂಗತಿಗಳಾಗಿರುವುದನ್ನು ಬಹಳ ಸೂಕ್ಷ್ಮದಿಂಧ ನೋಡುವ ರೇಣುಕಾ ಅವರ ಭಾಷೆ ಆಪ್ತವಾಗುವಂತೆಯೇ ನಿರೂಪಣೆಯೂ ಸಾವಕಾಶವಾಗಿ ಹೆಜ್ಜೆ ಹಾಕುವ ಪರಿ ಸಂಕಲನದ ಹಲವು ಕವಿತೆಗಳಲ್ಲಿ ಕಾಣುತ್ತದೆ.

ರೇಣುಕಾ ಅವರ ಕೆಲವು ಕವಿತೆಗಳಲ್ಲಿ ಹೆಣ್ಣಿನದು ಇತ್ಯಾತ್ಮಕವೋ ನೇತ್ಯಾತ್ಮಕವೋ ನಿರ್ವಚಿಸಲಾಗದ ಹಾಜರಿ. ಉದಾಹರಣೆಗೆ ಅವಳ ಗಂಡ ಕವಿತೆಯನ್ನು ನೋಡಬಹುದು. ತನ್ನೊಡಲ ದುಃಖವನ್ನು ಒಳಗಿಟ್ಟು ಅವನ ನೆನಪಿಗೆ ತಾನೆಟ್ಟ ಮಾವಿನ ಮರದ ಬಳಿ ಅವನ ಪರಿವಾರವನ್ನೊಯ್ದ ಅವಳಿಗೆ ದೊರೆಯುವುದು ತನ್ನ ನೆನಪನ್ನು ಒಳಗಿಟ್ಟುಕೊಂಡ ಪ್ರಿಯತಮನಲ್ಲ. ಬದಲಿಗೆ ತಾ ನೆಟ್ಟ ಫಸಲ ಇನಿತೂ ಬಿಡದೆ ಕೊಯ್ದು ಒಯ್ಯುವವ.

ನಿಮಗೇ ತಿಳಿದಿರುವಂತೆ
ಅದು ಅವನದೇ ನೆನಪಿನ ಗಿಡ
ಹಕ್ಕುಂಟು ಅವನಿಗೆ
ಉಗುರು ಕಪ್ಪಿಸಲು
ಕಡ್ಡಿ ಗೀರಲು
ಪೆಡಸು ಪರಿಶೀಲಿಸಲು
ಕೊನೆಗೊಮ್ಮೆ
ಮಿಡಿಗಾಯಿ ಹರಿದು
ಚೀಲ ತುಂಬಲು. ಅದಷ್ಟೇ ಅವನು.

ಇಲ್ಲಿ ರೇಣುಕಾರ ಮಿತವ್ಯಯತೆಗೊಂದು ಅಧಿಕೃತತೆ ಲಭ್ಯವಾಗುತ್ತದೆ. ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ – ಕವಿತೆ ಈ ಸಂಗತಿಯ ಜೊತೆಗೆ ಒಂದು ಸಂಬಂಧವನ್ನು ಏರ್ಪಡಿಸಿಕೊಂಡಿದೆ.

ಮುಟ್ಟು ನಿಲ್ಲುವ ವಯಸ್ಸಿನಲ್ಲಿ
ಮತ್ತೆ ಮತ್ತೆ
ಅಂದುಕೊಳ್ಳುತ್ತಿದ್ದೇನೆ
ಅಪ್ಪಿ ತಪ್ಪಿ ನಾವಿಬ್ಬರೂ ಇಂದು
ಭೇಟಿಯಾದರೂ ಆಗಬಹುದು
ಇಪ್ಪತ್ತು ವರ್ಷಗಳ ನಂತರ ಕೆನ್ನೆಗಳಲ್ಲಿ
ಇನ್ನೊಮ್ಮೆ ಓಕುಳಿ ನೀರು
ಚೆಲ್ಲಾಡಬಹುದು.

ಈ ಬಗೆಯ ಹಾಗೂ ಸುತ್ತು, ನಿಲ್ಲು ಮುತ್ತಿಡಬೇಡ ಎಂಬಂಥ ಕವಿತೆಗಳನ್ನು ಬರೆಯಲು ಅವಶ್ಯಕವಾದ ನಿರ್ಬಿಢೆ ಮತ್ತು ಸ್ವಾತಂತ್ರ್ಯ ರೇಣುಕಾರ ವ್ಯಕ್ತಿತ್ವದ ಒಂದು ಭಾಗವಾಗಿರುವಂತೆ ಭಾಸವಾಗುತ್ತದೆ. ಈ ಶಕ್ತಿಯನ್ನು ಅವರು ಅದರೆಲ್ಲ ಪ್ರಾಪಂಚಿಕ ಮಿತಿಗಳಲ್ಲೇ ಬಳಸಿಕೊಳ್ಳುತ್ತಾರೆ. ಅಲ್ಲದೆ ಮನಸ್ಸಿನ ಆಶಯವು ಸುಂದರ ನಾಗರಿಕ ಸಮಾಜದ ನಿರ್ಮಾಣದ ಕಡೆಗೆ ತುಡಿಯುತ್ತದೆ. ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ ಕವಿತೆಯನ್ನು ಈ ನಿಟ್ಟಿನಲ್ಲಿ ಪರಿಶೀಲಿಸಬಹುದು.

ಎದೆಯ ತಿರುವುಗಳಲ್ಲಿ ಒಂದು ಕಿಂಕಿಣಿ ನಾದ
ದನಿ ಕೊಟ್ಟು ಮರುದನಿಗೆ
ಕಾದುಕುಳಿತಿತು
ಹಸಿವಿಲ್ಲದ
ಭಯವಿಲ್ಲದ
ಮೇಲಿಲ್ಲದ
ಕೀಳಿಲ್ಲದ
ಒಂದೇ ಒಂದು ಲೋಕಕ್ಕಾಗಿ
ಬೇಡಿಕೆಯಿಟ್ಟಿತು… ಎಂಬಲ್ಲಿ ಆ ಸೂಚನೆಗಳು ಸ್ಪಷ್ಟವಾಗಿವೆ.

ಏಕಮುಖ ಚಿಂತನೆಯ ಗೊಡವೆಯಿಲ್ಲದೆ, ಯಾವ ಸಿದ್ಧಾಂತಗಳಿಗೂ ಬದ್ಧರಾಗದವರಂತೆ ಇವರ ಕವಿತೆಗಳಿವೆ. ಇವರಲ್ಲಿರುವ ಚಂದ್ರತಂಪಿನ ಕೋಪಕ್ಕೆ ಮಾತುಕೊಡುವಾಗಲೂ ಅದೆಂಥ ಭಾಷಾ ಉಪಕ್ರಮವನ್ನು ಇವರು ಸಾಧಿಸುತ್ತಾರೆ ಎಂಬುದಕ್ಕೊಂದು ಸಣ್ಣ ಉದಾಹರಣೆ ನೋಡಬಹುದು:

ಎಚ್ಚರಿಸಬೇಕೆಂದುಕೊಂಡಿದ್ದೆ ನಿನ್ನ ಕುರಿತು
ಕೆಲವಷ್ಟು ಮುಗ್ಧ ನೆಮ್ಮದಿಗಳಿಗೆ
ಆದರೇನು ಮಾಡಲಿ
ನಯವಂಚನೆಗಳಿಗೆ
ಬಾಯಿ ಕೊಡುವ ಸಂಭ್ರಮದಲ್ಲಿ
ಸೃಷ್ಟಿಕರ್ತ ನನ್ನಂತಹ ಅದೆಷ್ಟೋ
ಪ್ರಾಮಾಣಿಕತೆಗಳ
ಧ್ವನಿಪೆಟ್ಟಿಗೆ ಕಿತ್ತುಬಿಟ್ಟನಲ್ಲ

ಇಲ್ಲಿ ಬಳಕೆಯಾಗಿರುವ ಪ್ರಾಮಾಣಿಕತೆಗಳ ನುಡಿಯ ಸೂಕ್ಷ್ಮತೆ ಗಮನಿಸಬೇಕು. ಹಾಗೆಯೇ ಬದುಕಿನ ಸಂಬಂಧಗಳ ಮಾಧುರ್ಯವನ್ನು ಕುರಿತು ಹೇಳುವಾಗ ಅಪ್ಪ ಮಗಳಿಗೆ ಒಳಪೆಡ್ಲು ಕಲಿಸಿಕೊಡುವ ಕತೆಯನ್ನೊರೆದು, ತಂದೆ ಮಗಳು, ಕುಟುಂಬದ ಸಂಬಂಧಗಳ ಕುರಿತು ಮಾತಾಡಿ ಹೇಳುವುದಿದು:

ಹಾಲುಗುಂಬಳದಂತಹ ಕರುಳಕುಡಿಗೆ
ಒಳಪೆಡ್ಲು ಕಲಿಸುವುದನ್ನು
ನೀವೊಮ್ಮೆ ಅನುಭವಿಸಿಯೇ ತೀರಬೇಕು
ಅದಕ್ಕೇ ಹೇಳುವುದು
ಎಲ್ಲ ಅಪ್ಪಂದಿರಿಗೆ
ಕುಡಿಬಾಳೆ ಎಲೆಯಂತಹ
ಮುದ್ದಾದ
ಮಗಳೊಬ್ಬಳಿರಬೇಕು….

ಇವರ ಕಾವ್ಯ ನವಿರು ಭಾವದ ಪರಿಚಯಕ್ಕೆ ‘ನನಗಾಗಿ ಕಾದಿರುವಂತೆ ಹೇಳಬೇಕು ನೀನು’ ಕವಿತೆಯನ್ನು ನೋಡಬೇಕು.

ಮಳೆ ಬಿದ್ದ ಅಂಗಳದಲ್ಲಿ ಪಚಾಪಚಾ
ಕುಣಿದು ಕುಪ್ಪಳಿಸುತ್ತಿದ್ದ
ಅವಳ ಅಂಗಾಲ ಸದ್ದು
ಮುಗ್ಗರಿಸುವ ಸಿಗ್ನಲ್ ಗಳಲ್ಲಿ
ನಿತ್ಯ ಪ್ರಯಾಣಿಸುವ ಈ ಬೋಗಿಗಳ
ಧಡಲ್-ಧಿಡೀಲ್‌ಗಳಲ್ಲಿ
ಇನ್ನೂ ಬದುಕಿರುವುದನ್ನೂ
ಮರೆಯದೇ ಪ್ರಸ್ತಾಪಿಸಬೇಕು
ಹಾಗೆಯೇ ಮುಂದೊಮ್ಮೆ ಅಲ್ಲಿಗೆ
ಬರಲಿರುವ ನನಗಾಗಿ ಕಾದಿರುವಂತೆಯೂ…

ನವ ನಾಗರಿಕತೆಯೂ, ಸಹಜ ಪ್ರಕೃತಿಯೂ ಇಲ್ಲಿ ಸಂಘರ್ಷದಲ್ಲಿವೆ, ಆದರೆ ಅದರಲ್ಲಿ ಯುದ್ಧೋನ್ಮಾದವಿಲ್ಲ. ಸಾಮಾಜಿಕ ಸ್ಥಿತ್ಯಂತರಗಳನ್ನು ಚಿತ್ರಗಳ ಮೂಲಕವೇ ನಿರೂಪಿಸುವ ರೇಣುಕಾ ನೇತ್ಯಾತ್ಮಕವಾದ ಬೆಳವಣಿಗೆಗಳಿಗೆ ಮನೋಭಾವ ಸಹಜವಾದ ಬಗೆಯಲ್ಲೇ ಎದುರುತ್ತರ ಕೊಡುತ್ತಾರೆ. ಹಾಗೆಯೇ, ಪ್ರತಿರೋಧವನ್ನೇ ಕ್ರಮವೆಂದು ಸ್ವೀಕರಿಸುವುದರಲ್ಲಿನ ತೊಂದರೆಗಳ ಬಗ್ಗೆಯೂ ಇರುವ ಅರಿವಿನಲ್ಲಿ ಈ ಬದುಕಿನ ಒಳಗಿರುವ ಸುಂದರ ಕ್ಷಣಗಳನ್ನೂ ಕಾವ್ಯವಾಗಿಸುತ್ತಾರೆ.

ಪಾಲಿಗೆ ಬಂದ ಎಲ್ಲವನ್ನೂ ನೋಡಲಾಗುತ್ತಿಲ್ಲ ಎಂದು ಒಂದು ಕವಿತೆಗೆ ಹೆಸರಿದೆ. ಇದೊಂದು ವಿಶಾಲಾರ್ಥದ ಕವಿತೆಯ ಶೀರ್ಷಿಕೆ. ಏಕೆಂದರೆ ರೇಣುಕಾ ಅವರ ಪ್ರಜ್ಞೆ ವಿಶ್ವವನ್ನು ದಕ್ಕಿಸಿಕೊಳ್ಳುವುದಕ್ಕೆ ಬದ್ಧವಾಗಿರುವಂಥದ್ದು. ಆ ದಕ್ಕಿಸಿಕೊಳ್ಳುವುದು ಭಾಷೆಯ ಮೂಲಕ. ಕವಿತೆಯ ಒಳಗೆ ಅವರು ಕನವರಿಸುವುದು ಮುದ್ದು ಪದಗಳನ್ನೆಲ್ಲ ಕದ್ದು ಮಾರಲಾಗಿದೆ ಸಂತೆ ಬೀದಿಯಲ್ಲಿ ಎಂದು. ಈ ಮಾತು ಇಂದು ಕವಿತೆಯ ಹೆಸರಿನಲ್ಲಿ ಪ್ರಕಟವಾಗುತ್ತಿರುವ ಅಸಂಖ್ಯಾತ ಸಂಕಲನಗಳ ಕುರಿತ ವ್ಯಾಖ್ಯಾನವಾಗಿದೆ.

ಈ ಇಂತಹ ಕವಿಯೂ ಒಮ್ಮೊಮ್ಮೆ ರೈಟರ್ಸ್ ಬ್ಲಾಕ್ ಗೆ ಒಳಗಾಗುವುದುಂಟು. ಅಂಥ ಸಂದರ್ಭದಲ್ಲಿ ‘ಬರೆಯಬೇಕು ಏನನ್ನಾದರೂ’ ಎಂಬಂಥ ಕವಿತೆಗಳು ಬರುತ್ತವೆ. ಅದೇ ಸಮಯದಲ್ಲಿ ಉಮೇದು ಹೆಚ್ಚಾದಾಗ ಅವರು ಬೆಟ್ಟಕ್ಕೆ ಹೋಗುವ ಕವಿತೆ ಬರೆದು ಇಂದಿನ ತಲ್ಲಣಗಳಿಗೂ ನಿಜಬದುಕು ಬಾಳುತ್ತಿದ್ದ ದಿನಗಳ ಸಾಮಾಜಿಕ ಸ್ವಾಸ್ಥ್ಯಕ್ಕೂ ನಡುವೆ ಏರ್ಪಟ್ಟಿರುವ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿರೂಪಿಸಬಲ್ಲರು, ರಿಕಲೆಕ್ಟೆಡ್ ಇನ್ ಟ್ರಾಂಕ್ವಿಲಿಟಿ ಎಂಬ ಭಾವದಲ್ಲಿ. ಆ ಭಾವ ನಮ್ಮನ್ನು ಆವರಿಸಿ, ಪ್ರತಿ ಯಶಸ್ವೀ ಕವಿತೆಯ ಓದಿನ ಬಳಿಕ ನಿಂತು ಯೋಚಿಸುವಂತೆ ಮಾಡುತ್ತದೆ. ನಿರಾಳದೊಳಗೇ ಅಡಗಿರುವ ಪ್ರಖರ ವೈಚಾರಿಕತೆ ಮತ್ತು ಅದರ ಸಾರ್ವಕಾಲಿಕತೆ ಕವಿತೆಗಳ ಅಂದವನ್ನು ಹೆಚ್ಚಿಸಿ ಆಪ್ತವಾಗಿಸುತ್ತವೆ. ಈ ದಿಕ್ಕಿನಲ್ಲಿ ಜಿ ಎನ್ ಮೋಹನ್ ಅವರ ಬೆನ್ನುಡಿಯ ಮಾತುಗಳು ಗಮನಿಸಲು ತಕ್ಕುದಾದವು: ರೇಣುಕಾಗೆ ಕವಿತೆ ಎನ್ನುವುದು ಭತ್ತವೆಂಬ ಬಸಿರಿಂದ ಹೊರಬರುವ ಹಾಲುಗಲ್ಲದ ಕೂಸು- ಅಕ್ಕಿಯಂತೆ.

ಮುನ್ನುಡಿ ಬರೆಯುತ್ತ ಜಯಂತ ಕಾಯ್ಕಿಣಿ ಹೀಗೆ ಹೇಳುತ್ತಾರೆ. ನಮ್ಮದೀಗ ಹಠಾತ್ ಪಲ್ಲಟದ ಕಾಲ. ಭತ್ತದ ಗದ್ದೆ, ಬ್ಯೂಟಿ ಪಾರ್ಲರು ಎರಡೂ ಒಂದೇ ಆವರಣವನ್ನು ರೂಪಿಸುತ್ತಿರುವ, ಮೀನುಪೇಟೆಯಲ್ಲಿ ಜೀನ್ಸ್ ಅಂಗಡಿ ತೆರೆದಿರುವ ಕಾಲ. ನೆಟ್ಟ ಬೀಜ ಮೊಳಕೆಯೊಡೆವ ಮೊದಲೇ ಬರೆದದ್ದೆಲ್ಲ ‘ಪ್ರಕಟ’ಗೊಳ್ಳುವ ಕಾಲ. ಇಂಥಲ್ಲಿ ಕವಿಯ ಸಂವೇದನೆಗೆ ಸಾಣೆ ಹಿಡಿಯುವ ಸಂಗತಿಗಳು ಎಂದಿಗಿಂತ ವಿಪುಲ. ಆದರೆ ಅವು ಬರೇ ಮಾಹಿತಿಯಾಗಿ ಬಿಟ್ಟರೆ ರದ್ದಿಯಾಗುವ ಸುದ್ದಿಯಾಗುತ್ತವೆ. ಬದಲಿಗೆ ಅಂತರಂಗವನ್ನು ಕೆಣಕಿ ಕಾಡುವ ಸಂಗತಿಯಾದರೆ, ಒಂದು ಜೀವನದೃಷ್ಟಿಯನ್ನು ರೂಪಿಸುವಲ್ಲಿ ಸುಪ್ತವಾಗಿ ನಿರತವಾಗಿರುತ್ತವೆ.

ರೇಣುಕಾ ಅವರ ಕವಿತೆಗಳು ಜಯಂತರ ಕಳವಳವನ್ನು ಗೆದ್ದುಬಿಡುವತ್ತ ದಾಪುಗಾಲು ಹಾಕಿವೆ. ನಿಜ. ಕವಿ ಬರೆದ ಎಲ್ಲವೂ ಎಲ್ಲರಿಗೂ ಸಂತೋಷ ತರುತ್ತವೆಂದಿಲ್ಲವಲ್ಲ. ನನಗೂ ತೃಪ್ತಿ ತರದ ನೇರ ಕವಿತೆಗಳು ಸಂಕಲನದಲ್ಲಿ ಕೆಲವಿವೆ. ಆದರೆ ಇತ್ಯಾತ್ಮಕವಾಗಿ ರೇಣುಕಾ ಕಂಡರಿಸಿದ, ವಿಶ್ವವನ್ನು, ಅವರ ಕಾವ್ಯದ ಅಂತಃಶಕ್ತಿಯನ್ನು ಪರಿಶೀಲಿಸಲು ಸಂಕಲನದಲ್ಲಿ ಬಹಳ ಕವಿತೆಗಳಿವೆ.

ಒಂದು ಅಂಕಣದ ಮಿತಿಯಲ್ಲಿ ಇಂಥ ಸೂಕ್ಷ್ಮ ಕೃತಿಯ ಪರಿಶೀಲನೆ ಸಾಧ್ಯವಿಲ್ಲ. ಆದರೂ ನಾನು ಮೊದಲು ಪ್ರಸ್ತಾಪಿಸಿದ ತಲ್ಲಣಗಳಿಗೆ ಕಿವಿಗೊಡುವ ಹಲವು ಮಹಿಳಾ ಕವಿಗಳು ನಿರ್ಮಾಣವಾಗುತ್ತಿದ್ದಾರೆ. ಅವರು ನಮ್ಮ ಮಿತಿಗಳನ್ನು ಬೇಲಿಗಳನ್ನು ಹರಿದು ಆಲೋಚಿಸಲು ಶಕ್ತರಾಗಿದ್ದಾರೆ ಎನ್ನುವುದಕ್ಕೆ ರೇಣುಕಾ ರಮಾನಂದರ ಕವಿತೆಗಳು ಸಾಕ್ಷಿ.