ಅವನು ಸಾಮಾನ್ಯವಾಗಿ ನನ್ನನ್ನು ನನ್ನ ಆಫೀಸ್‌ನಲ್ಲಿ ಕಾಣುತ್ತಿದ್ದನು. ಇಲ್ಲವಾದರೆ ಕಿರಿದಾದ ಹೂವಿನ ತೋಟದಲ್ಲಿ ಸ್ನ್ಯಾಪ್ ಡ್ರ್ಯಾಗನ್ ಮತ್ತು ಪೆಟೋನಿಯಾಗಳನ್ನು ಬೆಳೆಸಲೆತ್ನಿಸುವಾಗ ಕಾಣುವನು. ಬಿಸಿಲಿನ ದಿನಗಳಲ್ಲಿ ಬಾಯಾರಿಕೆ ಆರಿಸಲು ನೀರನ್ನು ಕುಡಿದು ಬಾಯಾರಿಕೆ ನಿವಾರಿಸಿಕೊಂಡ ಮೇಲೆ ಅವನು ತಗ್ಗಿದ ತೋಟದ ಗೋಡೆಯ ಮೇಲೆ ಐದರಿಂದ ಹತ್ತುನಿಮಿಷ ಕುಳಿತು ಪೇಟೆಯಲ್ಲಿನ ಹೊಸಹೊಸ ಸುದ್ದಿಗಳನ್ನೆಲ್ಲ ನನಗೆ ತಿಳಿಸುತ್ತಿದ್ದನು.
ರಸ್ಕಿನ್ ಬಾಂಡ್ ಬರೆದ “ಯೆಲ್ಲೋ ಅಂಬ್ರೆಲ್ಲಾ” ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ
ಹಿಂದಿನ ದಿನಗಳಲ್ಲಿ ನಾನು ಮಸ್ಸೂರಿಯ ಹೊರಭಾಗದಲ್ಲಿ ಕಾಡಿನ ಹತ್ತಿರ ಮೇಪಲ್‌ವುಡ್ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದಾಗ ಅಂಚೆಪೇದೆಯು / ಪೋಸ್ಟ್ ಮ್ಯಾನ್ ಬಾಗಿಲನ್ನು ತಟ್ಟುತಿದ್ದನು. ಈಗ ಕೊರಿಯರ್ ಸೌಕರ್ಯವು ಇದನ್ನು ಮಾಡುತ್ತದೆ ಮತ್ತು ಪೋಸ್ಟ್ ಮ್ಯಾನ್ ವಿರಳವಾಗಿದ್ದಾನೆ; ಆದರೆ ೧೯೬೦-೭೦ರ ದಶಕಗಳಲ್ಲಿ ನಾನು ಯಾವಾಗಲೂ ಅವನನ್ನು ಹುಡುಕುತ್ತಿದ್ದೆ. ಯಾಕೆಂದರೆ ಅವನು ನನಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಚೆಕ್ (ಬ್ಯಾಂಕಿನವರು ಹಣ ಕೊಡುವುದಕ್ಕೆ ಬರೆದ ಆಜ್ಞಾ ಪತ್ರ) ಗಳನ್ನು ತರುತ್ತಿದ್ದನು. ಆಗಿನ ದಿನಗಳಲ್ಲಿ ಇದು ಒಂದೇ ರೀತಿಯಲ್ಲಿ ಹಣ ಪಾವತಿ ಮಾಡುವುದಾಗಿತ್ತು. ಇಲ್ಲವಾದರೆ ಅಪರೂಪವಾಗಿ ಮನಿ ಆರ್ಡರ್ ಬರುತ್ತಿತ್ತು. ನನ್ನ ಜೀವನವು ನನ್ನ ಬರವಣಿಗೆಯಿಂದ ಮತ್ತು ಪೋಸ್ಟ್‌ನಲ್ಲಿ ಬರುವ ಚೆಕ್‌ಗಳನ್ನು ಅವಲಂಬಿಸಿತ್ತು.
ಪ್ರಕಾಶನು ಎರಡು -ಮೂರು ವರ್ಷಗಳು ನನ್ನ ಪೋಸ್ಟ್ ಮ್ಯಾನ್ ಆಗಿದ್ದನು. ಅವನ ಪ್ರತಿದಿನದ ಗಸ್ತು (ಬೀಟ್) ಮಾಲ್‌ನ ಪೋಸ್ಟ್ ಆಫೀಸ್‌ನಿಂದ ಶಾಲೆಯವರೆಗೆ, ಎರಡುವರೆ ಮೈಲು ನಡೆಯುವುದಾಗಿತ್ತು. ಅವನು ಸುಮಾರು ೬೦ರ ವಯಸ್ಸಿನವನಾಗಿದ್ದಿರಬಹುದು, ನಿವೃತ್ತಿಗೆ ಸಮೀಪಿಸಿದ್ದನು ಮತ್ತು ಈ ದೂರದ ನಡಿಗೆಯಿಂದ ಅವನಿಗೆ ಆಯಾಸವಾಗುತ್ತಿತ್ತು.
ನಾನು ೩-೪ ದಿನಗಳು ಕಾಟೇಜ್‌ನಲ್ಲಿ ಇರುವಾಗ ಅವನು ಪ್ರಯಾಸದಿಂದ ನಡೆದುಕೊಂಡು ಕಾಡುದಾರಿಯಲ್ಲಿ ನನಗೆ ಕೆಲವು ಪತ್ರಗಳನ್ನು ತಲಪಿಸಲು ಬರುತ್ತಿದ್ದನು. ನಾನು ನನ್ನ ಡೆಸ್ಕ್‌ನ ಬಳಿ ಮೊಗಸಾಲೆ (ಜಗಲಿ)ಯಲ್ಲಿ ಇರುತ್ತಿದ್ದೆನು; ನಾನು ಗಟ್ಟಿಯಾದ ಸ್ವರವುಳ್ಳ, ‘ಪೋಸ್ಟ್ ಮ್ಯಾನ್, ಪೋಸ್ಟ್ ಮ್ಯಾನ್’ ಎಂಬ ಕೂಗನ್ನು ಕೇಳಿ ನನ್ನ ಡೆಸ್ಕ್‌ನಿಂದ ಎದ್ದಾಗ ಅವನು ನನ್ನ ಟೈಪ್ ರೈಟರ್ ಕಡೆ ನೋಡಿ,
‘ಇದು ನಿನ್ನ ಕೆಲಸವ? ಇದು ನಿನ್ನ ಕಚೇರಿಯೆ?’ ಎಂದು ಕೇಳುತ್ತಿದ್ದನು..
‘ಅಹುದು, ನಾನು ಒಬ್ಬ ಬರಹಗಾರನಾಗಿದ್ದೇನೆ ‘
‘ಅಲ್ಲ, ನೀನು ಒಬ್ಬ ಟೈಪರ್’ ಎಂದು ಹೇಳಿದನು.
‘ನೀನು ಬೆರಳಚ್ಚುಗಾರನಾ?
ನಾನು ನನ್ನ ಬರಹವನ್ನು ಈ ಬೆರಳಚ್ಚಿನಿಂದ ಮಾಡುತ್ತಿರುವೆನು.( ಹಿಂದಿನ ದಿನಗಳಲ್ಲಿ ನಾನು ಕಥೆಗಳನ್ನು ಬೆರಳಚ್ಚಿನಿಂದ ಮಾಡುತ್ತಿದ್ದೆನು.)
‘ಹಾಗಾದರೆ ನೀನು ಒಬ್ಬ ಟೈಪರ್-ಬರಹಗಾರ ‘ ಎಂದು ವಾದಿಸಿದನು.
ಮತ್ತು ಆ ದಿನದಿಂದ ಯಾವಾಗಲು ಅವನು ನನ್ನನ್ನು ಮಿಸ್ಟರ್ ಟೈಪರ್-ರೈಟರ್ ಎಂದೇ ಸಂಭೋದಿಸುತ್ತಿದ್ದನು .
ಒಳ್ಳೆಯದು, ನನಗೆ ಟಪ್ಪಾಲು ಪತ್ರಗಳು ಕೈ ಸೇರುವ ತನಕ ಅದರ ಕುರಿತು ಚಿಂತಿಸುತ್ತಿದ್ದಿಲ್ಲ. ಹಾಗು ಅವನು ಬಹಳ ನಿಯಮಿತವಾಗಿ, ಪ್ರತಿದಿನ (ರಜಾ ದಿನ ಬಿಟ್ಟು ) ಸುಮಾರಾಗಿ ಮಧ್ಯಾಹ್ನ, ‘ಪೋಸ್ಟ್ ಮ್ಯಾನ್! ಮಿಸ್ಟರ್ ಟೈಪರ್-ರೈಟರ್ರ್‌ಗೆ ಪತ್ರಗಳು!’ ಎಂದು ಕೂಗುತ್ತಿದ್ದನು. ಅವನಿಗೆ ನನ್ನ ಹೆಸರನ್ನು ಉಚ್ಚರಿಸಲು ತುಸು ಕಷ್ಟವಾಗುತ್ತಿತ್ತು.
ಅವನು ಸಾಮಾನ್ಯವಾಗಿ ನನ್ನನ್ನು ನನ್ನ ಆಫೀಸ್‌ನಲ್ಲಿ ಕಾಣುತ್ತಿದ್ದನು. ಇಲ್ಲವಾದರೆ ಕಿರಿದಾದ ಹೂವಿನ ತೋಟದಲ್ಲಿ ಸ್ನ್ಯಾಪ್ ಡ್ರ್ಯಾಗನ್ ಮತ್ತು ಪೆಟೋನಿಯಾಗಳನ್ನು ಬೆಳೆಸಲೆತ್ನಿಸುವಾಗ ಕಾಣುವನು. ಬಿಸಿಲಿನ ದಿನಗಳಲ್ಲಿ ಬಾಯಾರಿಕೆ ಆರಿಸಲು ನೀರನ್ನು ಕುಡಿದು ಬಾಯಾರಿಕೆ ನಿವಾರಿಸಿಕೊಂಡ ಮೇಲೆ ಅವನು ತಗ್ಗಿದ ತೋಟದ ಗೋಡೆಯ ಮೇಲೆ ಐದರಿಂದ ಹತ್ತುನಿಮಿಷ ಕುಳಿತು ಪೇಟೆಯಲ್ಲಿನ ಹೊಸಹೊಸ ಸುದ್ದಿಗಳನ್ನೆಲ್ಲ ನನಗೆ ತಿಳಿಸುತ್ತಿದ್ದನು. ಒಂದು ಸಿನೆಮಾವನ್ನು ಮಾಲ್‌ನ ಮೇಲೆ ಮಾಡುತ್ತಿದ್ದಾರೆ ಮತ್ತು ಹೇಮಾ ಮಾಲಿನಿಯವರು ಪಟ್ಟಣದಲ್ಲಿ ಇರುವುದರಿಂದ ಜನರಲ್ಲಿ ಹೆಚ್ಚಿನ ಉತ್ಸಾಹ ಇರುವುದು. ಅಲ್ಲದೆ ಇತರ ದೈನಂದಿನ ಸುದ್ದಿಗಳು; ಉದಾಹರಣೆಗೆ ಕ್ಯಾಮೆಲ್ಸ್ ಬ್ಯಾಕ್ ರಸ್ತೆಯಲ್ಲಿ ಒಂದು ಚಿರತೆಯು ಕಾಣಿಸಿಕೊಂಡದ್ದು, ಸವಾಯ್ ಹೋಟೆಲ್‌ನಲ್ಲಿ ನಡೆಯಲಿರುವ ಸೌಂದರ್ಯ ಸ್ಪರ್ಧೆ ನಡೆಯುತ್ತಿರುವುದರ ಕುರಿತೆಲ್ಲ ಹೇಳುತ್ತಾನೆ. ಯಾಕೆಂದರೆ ನಾನು ಅಪರೂಪವಾಗಿ ಪೇಟೆಗೆ ಹೋಗುತ್ತಿದ್ದೆನು ; ಆದ್ದರಿಂದ ಪೋಸ್ಟ್ ಮ್ಯಾನ್ ಪ್ರಕಾಶ್‌ನೇ ನನ್ನ ಇಲ್ಲಿಯ ವಾರ್ತಾ ಪತ್ರಿಕೆ!
ತಿಂಗಳುಗಳು ನಿಧಾನವಾಗಿ ಸಾಗುತ್ತಿದ್ದವು, ಋತುಗಳು ಬದಲಾಗುತ್ತಿದ್ದವು, ನನ್ನ ಕೆಲಸಗಳೂ ಸುಗಮವಾಗಿ ನಡೆಯುತ್ತಿದ್ದವು. ಮುಖ್ಯವಾಗಿ ಬ್ಯಾಂಕ್‌ನವರು ಹಣ ಕೊಡುವುದಕ್ಕೆ ಬರೆದ ಆಜ್ಞಾಪತ್ರಗಳು ಸಮಯಕ್ಕೆ ಸರಿಯಾಗಿ ನನ್ನನ್ನು ತಲಪುತ್ತಿದ್ದವು. ಅದೇ ತರ ಚಳಿಗಾಲದ ಮಳೆ ಮತ್ತು ಹಿಮ ಬೀಳುತ್ತಿದ್ದವು.
ಪ್ರಕಾಶ್‌ಗೆ ಒರಟಾದ ಸ್ವರ ಇತ್ತು ಆದರೆ ಬಲಿಷ್ಠನಾಗಿರಲಿಲ್ಲ; ಅವನ ಹಳೆಯ ನಿಲುವಂಗಿಯಲ್ಲಿ ಅವನು ಅವನ ವಯಸ್ಸಿನಿಂದ ಅಧಿಕ ವೃದ್ಧನಾಗಿ ತೋರುತ್ತಿದ್ದನು. ಅವನಿಗೆ ಒಂದು ಲೋಟ ನೀರಿನ ಬದಲು, ನಾನು ಅವನಿಗೆ ಒಂದು ಗ್ಲಾಸ್ ಬಿಸಿ ಸಿಹಿಯಾದ ಚಹಾ ಕೊಡುತ್ತಿದ್ದೆನು. ಅದನ್ನು ಸೇವಿಸಿ ಅವನು ಚುರುಕಾಗುತ್ತಿದ್ದನು. ಹಾಗು ಕಷ್ಟದಲ್ಲಿ ನಡೆದುಕೊಂಡು ಅವನ ಮನೆಯ ಕಡೆಗೆ ಹೋಗುತ್ತಿದ್ದನು. ಅವನು ವಿವಾಹಿತನಾಗಿದ್ದರೂ, ಅವನ ಹೆಂಡತಿ ಅವನ ವಯಸ್ಸಾದ ತಾಯಿಯನ್ನು, ಒಂದು ಹಸು ಮತ್ತು ಕೆಲವು ಆಡುಗಳನ್ನು ನೋಡಿಕೊಳ್ಳಬೇಕಾದ ಕಾರಣ ಆಕೆ ಅವರ ಜೊತೆ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದಳು.
‘ನಾನು ಶೀಘ್ರದಲ್ಲಿ ನಿವೃತ್ತಿ ಯಾಗುವೆನು’ ಎಂದ ಅವನು, ‘ಆಮೇಲೆ ನಾನು ಇನ್ನೊಂದು ಹಸುವನ್ನು ಮತ್ತು ಬಹುಶಃ ಒಂದು ಹೇಸರ ಕತ್ತೆ ಯನ್ನು ತರುವೆನು. ನಮ್ಮ ಹಾಲು ಹಾಗು ತರಕಾರಿಗಳನ್ನು ಮಸ್ಸೂರಿಗೆ ಸಾಗಿಸುವುದಕ್ಕೆ. ದೊಡ್ಡ ವ್ಯಾಪಾರವಾಗುತ್ತದೆ!’ ಎಂದು ನಿವೃತ್ತಿಯ ನಂತರದ ತನ್ನ ಜೀವನದ ಯೋಜನೆಗಳನ್ನು ನನ್ನೊಂದಿಗೆ ಹಂಚಿಕೊಂಡನು.
ಬೇಸಿಗೆಯು ಪುನಃ ಬಂದಾಗ ಅವನು ತನ್ನ ನಿಲುವಂಗಿಯನ್ನು ತೊರೆದು ಬಿಸಿಲಿನಿಂದ ರಕ್ಷಿಸಲು ಟೋಪಿಯನ್ನು ತೊಡುವುದಕ್ಕೆ ಪ್ರಾರಂಭಿಸುತ್ತಿದ್ದನು. ಮಳೆಗಾಲ ಬಂದಾಗ ಕೊಡೆಯನ್ನು ತರಲು ಶುರುಮಾಡುತ್ತಿದ್ದನು. ಆತನ ಕೊಡೆಯು ಹರಿದುಹೋಗಿ ಚಿಂದಿಯಾಗಿತ್ತು ಹಾಗು ಅವನನ್ನು ಯಾವುದರಿಂದಲೂ ಕಾಪಾಡುತ್ತಿರಲಿಲ್ಲ. ಅಲ್ಲದೆ ಆ ವರ್ಷ ಮಳೆಯೂ ಅಧಿಕವಾಗಿತ್ತು.
‘ಪೋಸ್ಟ್ ಆಫೀಸ್‌ನವರು ನಿನಗೆ ಒಳ್ಳೆಯ ಕೊಡೆಯನ್ನು ಕೊಡಲಾರರೇ?’ ಎಂದು ಅವನಿಗೆ ನಾನು ಕೇಳಿದೆ.
‘ಈ ಕೊಡೆಯನ್ನು ಅವರು ನನಗೆ ೫ ವರ್ಷಗಳ ಹಿಂದೆ ಕೊಟ್ಟಿದ್ದರು, ಈಗ ಅವರಲ್ಲಿ ಕೊಡೆಗಳನ್ನು ಕೊಡಲು ಹಣವಿಲ್ಲ.’ ಎಂದು ಹೇಳಿದನು.
‘ಸರಿ, ನಾಳೆ ನನಗೆ ಪೇಟೆಗೆ ಹೋಗುವುದಿದೆ, ಹೋದಾಗ ನಿನಗೆ ಒಂದೊಳ್ಳೆಯ ಕೊಡೆಯನ್ನು ತಂದುಕೊಡುವೆ.’ ಎಂದು ನಾನವನಿಗೆ ಹೇಳಿದೆ.
‘ಅದು ನಿನ್ನ ಒಳ್ಳೆಯ ಗುಣ,ʼ ಎಂದ ಪ್ರಕಾಶ್, “ನಾನು ನೀಲಿ ಬಣ್ಣದ ಕೊಡೆಯನ್ನು ಬಯಸುವೆ” ಎಂದನು¬¬¬¬
“ನೀಲಿ ಕೊಡೆಯೇ ಯಾಕೆ?”
ಅವರ ಹಳ್ಳಿಯ ಬಿನ್ಯ ಎಂಬ ಸಣ್ಣ ಹುಡುಗಿಯು ಶಾಲೆಗೆ ಹೋಗುವಾಗ ಮತ್ತು ವಾಪಸ್ಸು ಬರುವಾಗ ನೀಲಿ ಕೊಡೆಯೊಂದನ್ನು ಹಿಡಿಕೊಂಡು ಓಡಾಡುತ್ತಿರುತ್ತಾಳೆ. ಆ ಸುಂದರವಾದ ಕೊಡೆಯನ್ನು ಸುಮಾರು ಸಲ ನೋಡಿದ್ದೇನೆ. ಹಾಗಾಗಿ ನನಗೂ ಅಂಥಹುದೇ ಕೊಡೆ ಬೇಕು ಅನ್ನಿಸಿತು ಎಂದನು.
‘ಸರಿ, ನನಗೆ ಏನು ಸಿಗುವುದೋ ನೋಡುತ್ತೇನೆ’ ಎಂದೆನಾದರೂ, ನಾನು ನೀಲ ಬಣ್ಣದ ಕೊಡೆಯನ್ನು ಹುಡುಕಿಕೊಂಡೇ ಪೇಟೆಯ ಕಡೆಗೆ ನಡೆದೆನು.
ಆದರೆ ಕೊಡೆಯ ಅಂಗಡಿಗಳಲ್ಲಿ ಹುಡುಕಿದಂತೆಲ್ಲ ನೀಲ ಬಣ್ಣದ ಕೊಡೆಗಳು ಕಡಿಮೆಯಿದ್ದವು, ಇದ್ದಕ್ಕಿದ್ದ ಹಾಗೆಯೆ ಹಳದಿ ಬಣ್ಣದ ಕೊಡೆಗಳು ಜನಪ್ರಿಯವಾಗತೊಡಗಿದವು.
ಪ್ರಕಾಶನು ಸಾಮಾನ್ಯವಾದ ಕಪ್ಪು ಬಣ್ಣದ ಕೊಡೆಯನ್ನು ಇಷ್ಟಪಡಲಿಕ್ಕಿಲ್ಲ ಎಂದು ನಾನು ಯೋಚಿಸಿದೆ. ಆದುದರಿಂದ ಆತನಿಗಾಗಿ ಖಡು ಅರಸಿನ ಬಣ್ಣದ ಕೊಡೆಯನ್ನು ಕೊಳ್ಳಲು ನಿರ್ಧರಿಸಿದೆ. ಮರುದಿನ ಅವನು ಬಂದಾಗ ಬಲವಾದ ಗಾಳಿಯಿಂದ ಹಳೆ ಕೊಡೆಯ ಒಳ ಭಾಗವು ಹೊರಗೆ ಬಂದಿತ್ತು. ನಾನು ಅವನಿಗೆ ಅರಸಿನ ಕೊಡೆಯನ್ನು ಉಡುಗೊರೆ ಮಾಡಿದೆನು.
‘ಹಳದಿಯು ಸೂರ್ಯನ ಬಣ್ಣವಾಗಿದೆ,’ ಎಂದೆನು. ‘ಅದು ನಿನ್ನನ್ನು ಪ್ರಕಾಶಮಾನವಾಗಿ ಹಾಗು ಆನಂದದಿಂದ ಇರಿಸುವುದು!’ ಎಂದೂ ಸೇರಿಸಿದೆನು.
ಅವನು ಅದನ್ನು ವಿನಯವಾಗಿ ಸ್ವೀಕರಿಸಿದ ಮತ್ತು ಹೋಗುವಲ್ಲೆಲ್ಲ ತೆಗೆದುಕೊಂಡು ಹೋಗಲಾರಂಭಿಸಿದ… ಮಳೆ ನಿಂತಿದ್ದರೂ ಅವನು ಆ ಕೊಡೆಯನ್ನು ಕೈಬಿಟ್ಟಿರಲಿಲ್ಲ. ಅವನು ಯಾವಾಗ ನಮ್ಮಲ್ಲಿಗೆ ಬರುವನೆಂದು ಖರಾರುವಕ್ಕಾಗಿ ಹೇಳಬಹುದಾಗಿತ್ತು; ಯಾಕೆಂದರೆ ಹಳದಿ ಬಣ್ಣದ ದುಂಡಗಿನ ವಸ್ತುವು ಬೆಟ್ಟದ ಬದಿಯಿಂದ ಹೋಗುವುದು ಕಾಣುತಿತ್ತು.
ಮತ್ತೊಂದು ದಿನ… ಅಕ್ಟೋಬರ್ ತಿಂಗಳಿನ ಮಧ್ಯದಲ್ಲಿ ಇರಬೇಕು; ಬೇರೆ ಯಾರೋ ಒಬ್ಬ ನನ್ನ ಅಂಚೆಯನ್ನು ತಂದುಕೊಟ್ಟನು.
ಅತನೊಬ್ಬಬ್ಬ ನೀಟಾಗಿ ಬಟ್ಟೆ ಹಾಕಿದ ಯುವಕನಾಗಿದ್ದನ. ‘ನಿಮ್ಮ ಪತ್ರಗಳು ಸರ್, ನಾನು ನಿಮ್ಮ ನೂತನ ಅಂಚೆಯವನಾಗಿದ್ದೇನೆ’ ಎಂದು ಬಹಳ ವಿನಯದಿಂದ ತನ್ನ ಪರಿಚಯ ಮಾಡಿಕೊಂಡ.
ಇದು ನನಗೆ ಅನಿರೀಕ್ಷಿತವಾಗಿತ್ತು.
“ಪ್ರಕಾಶನಿಗೆ ಏನಾಯಿತು? ನಾನು ಚಿಂತೆಯಿಂದ ‘ಅವನಿಗೇನು ಹುಷಾರಿಲ್ಲವೇ’ ಎಂದು ಕೇಳಿದೆ.
‘ಅವನು ಆರೋಗ್ಯದಿಂದಲೇ ಇದ್ದಾನೆ, ಸರ್. ಅವನು ತನ್ನ ನಿವೃತ್ತಿಯ ವಿಶ್ರಾಂತಿ ವೇತನವನ್ನು ಪಡೆದು, ಅವನ ಹಳ್ಳಿಗೆ ಹಿಂತಿರುಗಿದ್ದಾನಷ್ಟೇ.’ ಎಂದನು.
‘ಓಹೋ ಹಾಗೆಯೋ’. ಅವನು ಹೋಗುವ ವಿಷಯವನ್ನು ನನಗೆ ತಿಳಿಸಿರಲಿಲ್ಲ. ಆದರೆ ಅವನಿಗೆ ಹಸುವನ್ನು ಖರೀದಿಸಲು ಅವಸರ ವಿದ್ದಿರಬೇಕು. ನೂತನ ಅಂಚೆಯವನು ಒಳ್ಳೆಯವನು. ನಾನು ಪ್ರಕಾಶನನ್ನು ಮತ್ತೆ ಎಂದಾದರೂ ಕಾಣುವೆನು ಎಂದು ನಿರೀಕ್ಷಿಸಲಿಲ್ಲ.
ಇನ್ನೇನು ಅಕ್ಟೋಬರ್ ಕೊನೆಯಾಗಲಿದೆ. ನಾನು ಕೆಲಸದಲ್ಲಿ ತಲ್ಲೀನನಾಗಿದ್ದೆ. ನಾನು ಟೈಪ್ ರೈಟರ್‌ನಿಂದ ಸ್ವಲ್ಪ ಸಮಯ ದೂರವಿರಲು ಬಯಸಿದ್ದೆ; ಅದು ಕೆಲವು ದಿನಗಳಿಗಾದರು ಆಗಬಹುದು. ನಾನು ಚೆನ್ನಾಗಿ ನಡೆಯುತ್ತೇನೆ, ಅಲ್ಲದೆ ಚಾರಣ ಎಂಬ ಹವ್ಯಾಸ ಕಾಲ್ನಡಿಗೆಯ ಸಾಹಸವನ್ನು ಕೆಲವು ವರ್ಷಗಳಿಂದ ಮಾಡುತ್ತಿದ್ದೆ. ನಾನು ಧನೌಲ್ಟಿ ಎಂಬಲ್ಲಿಗೆ ದೀರ್ಘ ನಡಿಗೆ ಮಾಡಲು ನಿಶ್ಚಯಿಸಿದ್ದೆ. ಅಲ್ಲಿ ಒಂದು ಹಳೆಯ ಕಾಡಿನ ‘ರೆಸ್ಟ್ ಹೌಸ್’ ದೇವದಾರು ಮತ್ತು “ಹಾರ್ಸ್-ಚೆಸ್ಟ್ ನಟ್” ಮರಗಳ ನಡುವೆ ಇದೆ.
ಹಿಂದಿನ ದಿನಗಳಲ್ಲಿ ಮೋಟಾರ್ ಹೋಗುವ ಮಾರ್ಗವು ಧನೌಲ್ಟಿಗೆ ಇರಲಿಲ್ಲ. ತೀರ್ಥಯಾತ್ರಿಗಳು ಕಾಲ್ನಡಿಗೆಯಲ್ಲೇ ಕಠಿಣವಾದ ಗಂಗೋತ್ರಿಯ ದಾರಿಯನ್ನು ಹಾದು ಹೋಗಬೇಕಿತ್ತು. ಧನೌಲ್ಟಿಯು ನನ್ನ ಮನೆಯಿಂದ ಇಪ್ಪತ್ತು ಮೈಲು ದೂರದಲ್ಲಿ ಇದೆ. ನಾನು ಒಂದೇ ಗತಿಯಲ್ಲಿ ನಡೆದರೆ ಅಲ್ಲಿಗೆ ಸಂಜೆಯೊಳಗೆ ತಲುಪುವ ಸಾಧ್ಯತೆ ಇತ್ತು.
ನನ್ನ ಮಿತ್ರ ಹಾಗು ಸಹಾಯಕ, ಪ್ರಾಣ್ ಸಿಂಗ್ ನನಗೋಸ್ಕರ ಕೆಲವು ಸ್ಯಾಂಡ್‌ವಿಚ್ ಜೊತೆಗೆ ನೀರಿನ ಬಾಟಲಿಯೊಂದರಲ್ಲಿ ಲಿಂಬೆ ಷರಬತ್ತನ್ನು ತುಂಬಿಸಿಟ್ಟನು. ಇವುಗಳನ್ನೆಲ್ಲ ನನ್ನ ಬ್ಯಾಕ್ ಪ್ಯಾಕ್‌ನಲ್ಲಿ ಇಟ್ಟುಕೊಂಡು, ಖುಷಿಯಿಂದ ಅವರೊಟ್ಟಿಗೆ ಹೆಜ್ಜೆಹಾಕಲಾರಂಭಿಸಿದೆನು. ಶರತ್ ಕಾಲದ ತಂಪಾದ ಗಾಳಿಯನ್ನು ಹಾರೈಸಿಕೊಂಡು ಮತ್ತು ಆಶ್ಚರ್ಯಕರವಾದ ದೃಶ್ಯಗಳನ್ನು ಸುತ್ತಿ ಹೋಗುವ ಧನೌಲ್ಟಿ ದಾರಿಯಿಂದ ಆಸ್ವಾದಿಸಿದೆನು.
ನಾನು ಸಾಧಾರಣ ೫ ಮೈಲನ್ನು ಕ್ರಮಿಸಿ, ಸೌಖೊಲಿ ಎಂಬ ಹಳ್ಳಿಯನ್ನು ದಾಟಿದ್ದೆ. ಆಗ ಒಂದು ಆಡುಗಳ ಹಿಂಡೊಂದು ದಾರಿಯನ್ನು ತಡೆದು ನಿಂತಿತ್ತು. ಆಗ ನಾನು ಪ್ರಾಣಿಗಳನ್ನು ತಪ್ಪಿಸುವ ಸಲುವಾಗಿ ಇಕ್ಕಟ್ಟಾದ ದಾರಿಯನ್ನು ತೊರೆದು ತೆವಳಿಕೊಂಡು ಗುಡ್ಡದ ಇಳಿಜಾರಿನಲ್ಲಿ, ದೇವದಾರು ಮರಗಳ ಸೂಜಿಗಳಿಂದ ಜಾರುತ್ತ ಬಿದ್ದ ನನ್ನ ಪಾದದ ಕೀಲು ಟ್ವಿಸ್ಟ್ ಆಯಿತು. ನಾನು ಆಗ ಧನೌಲ್ಟಿಗೆ ಅರ್ಧ ದಾರಿಯನ್ನು ಕ್ರಮಿಸಿದ್ದಿರಬೇಕು. ಹೆಚ್ಚಿನ ತೊಂದರೆಯೇನೂ ಆಗಲಿಲ್ಲವಾದರೂ ಪಾದದ ಕೀಲು ತುಂಬಾ ನೋಯುತ್ತಿತ್ತು. ಹಾಗಾಗಿ ಕುಂಟಿಕೊಂಡೇ ಮುಂದುವರೆದೆ.. ಈ ಕುಂಟುನಡಿಗೆಗೆ ಒಂದು ಗಟ್ಟಿಯಾದ ಊರುಗೋಲು ಇದ್ದಿದರೆ ಅನುಕೂಲವಾಗುತ್ತಿತ್ತು ಎಂದನಿಸುತ್ತಿತ್ತು.
ಧನೌಲ್ಟಿಗೆ ಇನ್ನು ಹೆಚ್ಚು ದೂರವಿಲ್ಲದ ಕಾರಣ ನಾನು ಕಷ್ಟವಾದರೂ ಅದರ ದಾರಿಯನ್ನು ಕ್ರಮಿಸಿದೆ. ಸಾಧಾರಣ ಅರ್ಧ ಮೈಲಿನ ದೂರದಲ್ಲಿ ದಾರಿಯ ಬದಿಯ ಸಣ್ಣ ಮನೆಗಳನ್ನು ನೋಡಿದೆ; ನಾನು ಈ ಹಳ್ಳಿಯಲ್ಲಿ ವಿರಮಿಸಿ , ಮತ್ತೆ ಮುಂದೆ ಹೋಗುವುದೋ / ಇಲ್ಲವೋ ಎಂಬುದಾಗಿ ನಿಶ್ಚಯಿಸುವುದಾಗಿ ನಿರ್ಧರಿಸಲಾಯಿತು.
ಮುಂದೆ, ಆಶ್ರಯಕ್ಕಾಗಿ ಒಂದು ಚಿಕ್ಕದಾದ ಮನೆಯ ಬಳಿ ಹೋದಾಗ ಅಲ್ಲಿ ಹಳದಿ ಬಣ್ಣದ ದುಂಡಗಿನ ವಸ್ತುವನ್ನು ಕಂಡೆ. ದಿಟ್ಟಿಸಿ ನೋಡಿದರೆ ಅದು ಹಳದಿ ಬಣ್ಣದ ಕೊಡೆಯಾಗಿತ್ತು! ಅದರ ಕೆಳಗಡೆ ಸೂರ್ಯನಿಂದ ರಕ್ಷಣೆ ಪಡೆಯುತ್ತಿರುವವನು ಪ್ರಕಾಶ್, ನನ್ನ ಹಳೆಯ ಪೋಸ್ಟ್ ಮ್ಯಾನ್.
ನನ್ನನ್ನು ನೋಡಿದಾಕ್ಷಣ ಅವನು ವಿಸ್ಮಯದಿಂದ ‘ಟೈಪರ್- ರೈಟರ್ ಸರ್! ನೀವು ಇಲ್ಲಿ ಏನು ಮಾಡುತ್ತಿರುವಿರಿ?’ ಎನ್ನುತ್ತ ಎದ್ದುನಿಂತ.
‘ನಾನು ಹಾಗೇ ನಡೆದುಕೊಂಡು ಬರುತ್ತಿದ್ದೇನೆ. ಇದು ನಿನ್ನ ಊರೇ?’
‘ಹೌದು ಸರ್, ನಮ್ಮ ಜಮೀನು ಇಲ್ಲೇ ಕೆಳಗಿದೆ. ಆದರೆ ನೀವು ಕಾಲುನೋವುಮಾಡಿಕೊಂಡಹಾಗೆ ಕಾಣುತ್ತಿದೆ. ದಯವಿಟ್ಟು ಒಳಗೆ ಬಂದು ಕುಳಿತುಕೊಂಡು ವಿಶ್ರಾಂತಿ ಪಡೆಯಿರಿ..’ ಎಂದನು.
ಅವನ ಆ ಪುಟ್ಟ ಹಂಚಿನ ಮಾಡಿನ ಮನೆಯು ರಸ್ತೆಯ ಬದಿಯ ಮೊದಲನೆಯ ಮನೆಯಾಗಿತ್ತು. ಅದು ಎರಡು ಅಂತಸ್ತಿನ ಮನೆಯಾಗಿದ್ದು ತಳಮನೆಯು ಜಾನುವಾರುಗಳ ಜಾಗ. ಹೌದು ಈಗಲ್ಲಿ ಎರಡು ಹಸುಗಳಿವೆ.
ಅವನು ನನ್ನನ್ನು ಮಾಳಿಗೆಗೆ ಕರೆದುಕೊಂಡು ಹೋಗಿ ಹಳೆಯ ಒಂದು ಬೆತ್ತದ ಕುರ್ಚಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿ, ತನ್ನ ಪತ್ನಿಯನ್ನು ಕರೆದು ನಮಗಾಗಿ ಚಹಾ ಮಾಡಲು ವಿನಂತಿಸಿದನು. ಅವಳು ಉರುಟಾಗಿ, ದುಂಡುದುಂಡಾಗಿರುವ, ಕೊಬ್ಬಿದ, ಉಲ್ಲಾಸದ ವಿನೋದಿ ಹೆಂಗಸು. ಅನಿರೀಕ್ಷಿತ ಸಂದರ್ಶಕನನ್ನು ನೋಡಿ ಸಂತೋಷಪಟ್ಟಳು. ಚಹಾದ ನಂತರ ಬಿಸಿ ಪಕೋರಾ ಹಾಗೂ ಅವರದೇ ಮರದ ವಾಲ್ನಟ್ ಕೊಟ್ಟರು.
‘ನೀವು ನಿಮ್ಮ ಕಾಲಿನ ಪಾದದ ಗಂಟನ್ನು ಉಳುಕಿಸಿಕೊಂಡಿದ್ದೀರಿ. ಪಾದ ಊದಿಕೊಂಡಿದೆ” ಎಂದ ಪ್ರಕಾಶ್ “ನೀವು ಈ ಸ್ಥಿತಿಯಲ್ಲಿ ಮುಂದೆ ನಡೆಯಬಾರದು. ರಾತ್ರಿ ಇಲ್ಲೇ ಉಳಿದುಕೊಳ್ಳುವುದು ವಾಸಿ’.
ಆದರೆ ನನಗೆ ಪ್ರಕಾಶ್ ಅವರ ಮನೆಯಲ್ಲಿ ಹೆಚ್ಚಿನ ಮಂಚ ಹಾಗು ಹಾಸಿಗೆ ಇರಲಾರರದು ಎಂದೇ, ಅವರ ಅಪೇಕ್ಷೆಯನ್ನು ನಿರಾಕರಿಸಿ, ‘ನಾನು ನಿಭಾಯಿಸುತ್ತೇನೆ, ಅದು ಅಷ್ಟೊಂದು ಕಷ್ಟವಲ್ಲ’ ಎಂದೆ.
ಅದೇ ಸಮಯಕ್ಕೆ ಮಸ್ಸೂರಿಗೆ ಹೋಗುವ ಹೇಸರ ಕತ್ತೆಗಳ ಹಿಂಡು ಆಗಮಿಸಿತು. ಹೇಸರ ಕತ್ತೆಗಳು ಗೋಣಿ ಚೀಲಗಳಲ್ಲಿ ಬೀನ್ಸ್ ಮತ್ತು ಮೂಲಂಗಿ ತುಂಬಿಕೊಂಡು ಬಂದುವು. ಅವರ ಬಂಡಿ ಚಾಲಕನು ಹೊಸ ಹಿಂದಿ ಸಿನಿಮಾದ ಖ್ಯಾತ, ಜನಪ್ರಿಯ ಹಾಡನ್ನು ಹಾಡಿಕೊಳ್ಳುತ್ತಿದ್ದನು.
‘ಹೇ, ಮೇಲ್ಹಾರಾಂ!, ನಿನ್ನ ಹತ್ತಿರ ಒಬ್ಬನಿಗೆ ಜಾಗ ಇದೆಯೋ?ʼ ಎಂದು ಪ್ರಕಾಶನು ಕೂಗಿದ.
‘ನಿಮ್ಮ ಸ್ನೇಹಿತನಿಗೆ ಜಾಗವಿದೆ’ ಎಂದು ಹೇಸರಕತ್ತೆ ಬಂಡಿಯ ಚಾಲಕನು ಉತ್ತರಿಸಿದ.
‘ಹಾಗೆಂದಾದರೆ ನನ್ನ ಸ್ನೇಹಿತ ಟೈಪರ್-ರೈಟರ್ ಅನ್ನು ಮಸ್ಸೂರಿಯ ಮೊದಲನೆಯ ಡಾಕ್ಟರ್ ಬಳಿ ತಲಪಿಸು.’
‘ನಿಮ್ಮ ಆಜ್ಞೆಯಂತೆ’ ಎಂದನು ಮೇಲ್ಹಾರಾಂ. ಅವನು ಒಂದು ಹೇಸರಕತ್ತೆಯ ಭಾರವನ್ನು ಇನ್ನೊಂದು ಕತ್ತೆಯ ಮೇಲೆ ಹೇರಿದ. ಖಾಲಿ ಗೋಣಿಗಳಿಂದ ಜೀನು ( saddle) ಮಾಡಿ ಎರಡು ಜನರು ಒಟ್ಟಿಗೆ ನನ್ನನ್ನು ಕತ್ತೆಯ ಬೆನ್ನ ಮೇಲೆ ಕೂರಿಸಿದರು; ಪ್ರಕಾಶ್ ಅವರ ಪತ್ನಿಗೆ ಇದೊಂದು ತಮಾಷೆಯಾಗಿ ಕಂಡಿತು.
ಇದು ಮೊದಲನೇ ಬಾರಿ ನಾನು ಕತ್ತೆ ಮೇಲೆ ಸವಾರಿ ಮಾಡಿರುವುದು ಮತ್ತು ನಾನು ಇನ್ನೊಂದು ಸವಾರಿ ಇಲ್ಲದಿರಲಿ ಎಂದು ಆಶಿಸಿದ್ದೆ. ಎರಡು ಗಂಟೆ ಕತ್ತೆಯ ಮೇಲೆ ಸವಾರಿ ಮಾಡಿ ಅಡಿಭಾಗ ನೋಯುತ್ತಿತ್ತು.
‘ಪುನಃ ಬನ್ನಿ, ಟೈಪೆರ್-ರೈಟರ್ ಸರ್’ ಎಂದನು ಪ್ರಕಾಶ್. ಕತ್ತೆಯ ಬಂಡಿ ಚಾಲಕನು ಮುಂದೆಯಿದ್ದನು. ನಾವು ನಾಗಾಲೋಟದಿಂದ ಓಡಿ ಅವನನ್ನು ಹಿಂಬಾಲಿಸಿದೆವು. ನಾನು ಹಿಂದೆ ತಿರುಗಿ ನೋಡಿದಾಗ ಪ್ರಕಾಶನು ಅವನ ಮನೆಯ ಬಾಗಿಲಿಂದ ಹಳದಿ ಬಣ್ಣದ ಕೊಡೆಯನ್ನು ಹಿಡಿದು ಬೀಸುತ್ತಿದ್ದನು. ಆ ಕೊಡೆಯು ಸೂರ್ಯಾಸ್ತಮಾನದ ಸಮಯದಲ್ಲಿ ಮುಳುಗುವ ಸೂರ್ಯನ ಬೆಳಕಿನಲ್ಲಿ ಬಂಗಾರದಂತೆ ಹೊಳೆಯುತ್ತಿತ್ತು.
ಒಂದು ಹಳೆಯ ಹೇಳಿಕೆ ಇದೆ; ‘ಯಾರಾದರೂ ನಿಮಗೆ ಉಪಕಾರ ಮಾಡಿದರೆ ಅದನ್ನು ಹಿಂತಿರುಗಿಸಲು ನೀವು ಅವಕಾಶವನ್ನು ಪಡೆದುಕೊಳ್ಳ ಬೇಕು’. ದಯೆಯು ದಯೆಯನ್ನು ತೋರಿಸುತ್ತದೆ, ಅಡಿಭಾಗದ ನೋವನ್ನು ಮರೆತು ಬಿಡಿ.
FROM – DAYS AND NIGHTS TO REMEMBER.
RUPA PUBLICATIONS INDIA Pvt. Ltd 2023

ಡಾ. ಖಂಡಿಗೆ ಮಹಾಲಿಂಗಭಟ್ ಮೂಲತಃ ಕಾಸರಗೋಡಿನ ನೀರ್ಚಲ್ ನವರು. “ದಂತಾರೋಗ್ಯದ ರಹಸ್ಯ” ಇವರ ಪ್ರಕಟಿತ ಕೃತಿ. ಸಧ್ಯ ಮಣಿಪಾಲದಲ್ಲಿ ನೆಲೆಸಿದ್ದಾರೆ.