ಅವನು ನನ್ನನ್ನು ಒಂದು ಸುಂದರ ಸ್ಮಶಾನದಲ್ಲಿ ಭೇಟಿಯಾದ. ಇಂಗ್ಲೆಂಡಿನ ಸ್ಮಶಾನಗಳು ಭಾರತದ ಪಾರ್ಕ್ ಗಳಿಗಿಂತ ಸುಂದರವಾಗಿರುತ್ತದೆ. ಕೂತು ನಾವಿಬ್ಬರೆ ಏನೇನೊ ಮಾತನಾಡಿದೆವು, ನಾನು ಅವನ ಹಳ್ಳಿಯ ಬಗ್ಗೆ ಕೇಳತೊಡಗಿದೆ. ಅವನ ಹಳ್ಳಿಯನ್ನು ನೋಡುವ ಆಸೆ ತಿಳಿಸಿದೆ. ನನ್ನ ಜೊತೆಗೆ ಒಳ್ಳೆಯ ಸ್ನೇಹ ಬೆಳೆದ ಕಾರಣ ಅವನು ಸಲುಗೆಯಿಂದ ಮಾತನಾಡುತ್ತಾ ಹೋದ. ತನ್ನ ಕಥೆಯನ್ನು ಹೇಳತೊಡಗಿದ. ಸುರಳೀತ ದುಡಿಮೆಯಿಲ್ಲದ, ಸಂಗಾತಿಯಿಲ್ಲದ ಅವನ ಬದುಕೇ ಕಷ್ಟಗಳ ಸುಳಿಯಲ್ಲಿ ಸಿಲುಕಿತ್ತು.
ಪ್ರಶಾಂತ್ ಬೀಚಿ ಅಂಕಣ
“ದೇವರೇ… ಈ ಕಷ್ಟದಿಂದ ನನ್ನನ್ನು ಕಾಪಾಡು”
ಈ ಮಾತನ್ನು ಹೇಳಿಕೊಳ್ಳದ ಮನುಷ್ಯ ಸಿಗಲಾರ. ಕಷ್ಟಪಟ್ಟು ಹುಡುಕಿದರೆ ದೇವರು ಬೇಕಾದರೆ ಸಿಕ್ಕಾನು ಆದರೆ ಈ ಮಾತನ್ನು ಹೇಳಿಕೊಳ್ಳದ ವ್ಯಕ್ತಿ ಭೂಮಿ ಮೇಲೆ ಸಿಗಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ದೇವರು ಈ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಮೂಡಿಸಿದ್ದಾನೆ. ಆದರೆ ದೇವರೆ ಸ್ವತಃ ತನ್ನ ಅಸ್ತಿತ್ವವನ್ನು ಬಿಟ್ಟಿದ್ದಾನ? ಗೊತ್ತಿಲ್ಲ. ಮನುಷ್ಯನ ಪ್ರತೀ ತೊಂದರೆಯಲ್ಲೂ ಅವನ ನೆನಪು, ನಿವಾರಣೆಯ ಶಕ್ತಿ ಎಂದು ನಂಬಿರುವ ಜಗತ್ತು ಇದು.
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದ ಎನ್ನುವುದು ಒಂದು ನಂಬಿಕೆಯಾದರೆ, ಮನುಷ್ಯ ದೇವರನ್ನು ಸೃಷ್ಟಿಮಾಡಿಕೊಂಡ ಎನ್ನುವುದು ನಿಜ. ಸೃಷ್ಟಿಕರ್ತನನ್ನು ನೆನೆಯುವುದು, ಪೂಜಿಸುವುದು ಧರ್ಮವಾದರೆ, ಮನುಷ್ಯ ದೇವರನ್ನು ಪೂಜಿಸುವಂತೆ ದೇವರು ಮನುಷ್ಯನನ್ನು ಪೂಜಿಸಬೇಕಲ್ಲವೆ? ದೇವರ ಬಗ್ಗೆ ಈ ರೀತಿಯ ಅನೇಕ ದ್ವಂದ್ವಗಳು, ಜಂಜಾಟಗಳು ಮುಗಿಯುವುದೇ ಇಲ್ಲ. ಆಸ್ತಿಕರು ಮತ್ತು ನಾಸ್ತಿಕರ ಮಧ್ಯೆಯ ವಾಗ್ವಾದಕ್ಕೂ ಕೊನೆ ಇಲ್ಲ. ಆದರೆ ದೇವರ ಹೆಸರಿನಲ್ಲಿ ಮುಗ್ಧರು ಹಾಗು ತಿಳಿವಳಿಕೆ ಇಲ್ಲದವರನ್ನು ಮೋಸಗೊಳಿಸುವ ಘಟನೆಗಳಿಗೆ ಪರಿಧಿಯೇ ಇಲ್ಲ.. ಪ್ರಪಂಚದ ಎಲ್ಲಾ ದೇಶಗಳಲ್ಲಿ ಅವರವರ ಭಕುತಿಗೆ ಮತ್ತು ಅವರವರ ನಿಲುಕಿಗೆ ಮೋಸಗಳು ವ್ಯವಸ್ಥಿತವಾಗಿ ನಡೆಯುತ್ತಲೆ ಇದೆ.
ಆಫ್ರಿಕಾದಲ್ಲಿ ಕ್ರೈಸ್ತರ ಹೆಸರಿನಲ್ಲಿ ಅನೇಕ ಪಾದ್ರಿಗಳು ಅಮಾಯಕರನ್ನು ಮೊಸದಿಂದ ದೋಚುವ ಅನೇಕ ವೀಡಿಯೋಗಳನ್ನು ನೋಡಿರುತ್ತೇವೆ. ಆದರೆ ಇಂಗ್ಲೆಂಡಿನಂತಹ ಬುದ್ಧಿವಂತರ ನಾಡಿನಲ್ಲಿ ಮತ್ತು ಪ್ರಪಂಚವನ್ನೆ ಆಳಿದ ತಿಳಿವಳಿಕೆಯ ನಾಗರೀಕರಿಗೆ ಕೂಡ ದೇವರ ಹೆಸರಿನಲ್ಲಿ ಮೋಸಮಾಡುವ ಜನರಿದ್ದಾರೆ. ದೇವರೆಂದರೆ ಜನ ಬರುವುದಿಲ್ಲ ಎಂದು ಅದಕ್ಕೆ ಆಧ್ಯಾತ್ಮಿಕ ಎನ್ನುವ ಲೇಪ ಹಚ್ಚಿ ದೋಚುತ್ತಾರೆ. ನಾನು ಇಂಗ್ಲೆಂಡಿನಲ್ಲಿ ಇದ್ದಾಗ ಒಂದು ಕರಪತ್ರ ಕೈಗೆ ಸಿಕ್ಕಿತ್ತು. ಅದರಲ್ಲಿ ‘ಸ್ಪಿರಿಚುಯಲ್ ಹೀಲಿಂಗ್ ಅಂಡ್ ಸ್ಪಿರಿಚುಯಲ್ ಪವರ್’ ಉಚಿತ ಪ್ರವಚನ ಮತ್ತು ತರಬೇತಿ. ಎಂದು ಬರೆದಿತ್ತು. ಅದೂ ಭಾನುವಾರ ಒಂದು ಒಳ್ಳೆಯ ಹೋಟೆಲ್‌ನಲ್ಲಿ. ಸ್ಪಿರಿಚುಯಲ್ ಎನ್ನುವುದು ದೇವರಿಗೆ ಪರ್ಯಾಯವಾಗಿ ಹುಟ್ಟಿದ ಒಂದು ಶಕ್ತಿ. ದೇವರನ್ನು ನಂಬದವರು ಅಧ್ಯಾತ್ಮವನ್ನು ಒಂದು ಪರ್ಯಾಯ ಅಸ್ತ್ರವಾಗಿ ಉಪಯೋಗಿಸುತ್ತಾರೆ, ಅದು ಬುದ್ಧಿವಂತರಿಗೆ ಮಾತ್ರ ಎನ್ನುವ ಅಡಿಬರಹದಂತೆ. ನಾನು ಕೂಡ ಬುದ್ಧಿವಂತರಂತೆ ಆ ಸ್ಪಿರಿಚುಯಲ್ ಹೀಲಿಂಗ್ ಅಂಡ್ ಸ್ಪಿರಿಚುಯಲ್ ಪವರ್ ಪ್ರವಚನಕ್ಕೆ ಹೋದೆ. ಒಳ್ಳೆಯ ಹೋಟೆಲ್ ಆಗಿದ್ದರಿಂದ ಅಲ್ಲಿ ಕಾಫೀ, ಟೀ, ಬಿಸ್ಕಟ್ (ಕುಕ್ಕೀಸ್), ಚಾಕ್‌ಲೇಟ್ ಹೀಗೆ ಅನೇಕ ಪದಾರ್ಥಗಳನ್ನು ನಮಗೆ ನಾವೆ ಉಪಚರಿಸಿಕೊಳ್ಳುವಂತೆ ಇಟ್ಟಿದ್ದರು. ನಾನು ಯಾವುದನ್ನು ಮೊದಲು ತೆಗೆದುಕೊಳ್ಳಲಿ ಎನ್ನುವುದರೊಳಗೆ ಒಂದು ಹೆಣ್ಣುಮಗಳು ಬಂದು ಪರಿಚಯಿಸಿಕೊಂಡು ಇನ್ನೊಬ್ಬ ಪುರುಷನನ್ನು ಕರೆದು ಪರಿಚಯ ಮಾಡಿಕೊಟ್ಟಳು. ಅವರು ಏನೇನೊ ಕೇಳುತ್ತಿದ್ದರು. ನನಗೆ ಕಾಫಿ ಮತ್ತು ಕುಕ್ಕೀಸ್ ತೆಗೆದುಕೊಳ್ಳುವುದರ ಕಡೆ ಗಮನ. ನನ್ನ ಇಂಗಿತ ಅರಿತವರು ಕಾಫೀ ತೆಗೆದುಕೊಳ್ಳಿ, ಕುಡಿಯುತ್ತ ಮಾತನಾಡೋಣ ಎಂದರು. ಸರಿ ಎಂದು ಕಾಫೀ ತೆಗೆದುಕೊಂಡು ಮಾತು ಶುರು ಮಾಡಿದೆವು.
“ನೀವು ಭಾರತೀಯರು, ಇಲ್ಲಿಗೆ ಬಂದು ಮತ್ತೊಬ್ಬ ಭಾರತೀಯನನ್ನು ಭೇಟಿ ಆಗಬೇಕು ಎನ್ನುವುದು ಪೂರ್ವ ನಿರ್ಧರಿತ. ನಿಮ್ಮನ್ನು ಇಲ್ಲಿಗೆ ಬರುವ ಹಾಗೆ ಮಾಡಿದ್ದನ್ನೆ ಸ್ಪಿರಿಚುಯಲ್ ಪವರ್ ಎನ್ನುತ್ತೇವೆ.” ಹೀಗೆ ಅವನ ಮಾತು ನಿರರ್ಗಳವಾಗಿ ಸಾಗಿತ್ತು. ಆತನೂ ಕೂಡ ಭಾರತೀಯನಾದರೂ ಅವನ ಮಾತಿನ ಧಾಟಿ ಆಂಗ್ಲರದಾಗಿತ್ತು. ಜೀಸಸ್ ಬಗ್ಗೆ, ಕೃಷ್ಣನ ಬಗ್ಗೆ, ಬುದ್ಧನ ಬಗ್ಗೆ, ರೋಮನ್ ಕ್ಯಾಥೋಲಿಕ್ ಮತ್ತು ಆಂಗಲಿಕನ್ ಬಗ್ಗೆ ಹೇಳತೊಡಗಿದ. ಅಷ್ಟರೊಳಗ ಎಲ್ಲರನ್ನು ಒಳಗೆ ಕರೆದರು. ಅಲ್ಲಿ ಹೋಗಿ ಕೂತರೆ ಸುಮಾರು ಹತ್ತು ಜನಕ್ಕೂ ಜಾಸ್ತಿ ಇರಲಿಲ್ಲ, ಅದರಲ್ಲಿ ಭಾರತೀಯ ಎನ್ನುವಂತೆ ಕಾಣುವವನು ನಾನೊಬ್ಬನೆ. ಸುಮಾರು ಎರಡು ಘಂಟೆಗಳ ಕಾಲ ಏನೇನೊ ಹೇಳಿದರು, ನನಗೆ ಅರ್ಥವಾಗಿದ್ದು ಇಷ್ಟೆ. “ಮನುಷ್ಯರೆಲ್ಲಾ ಒಂದೆ, ಅವರೆಲ್ಲಾ ಜೀಸಸ್ ನ ಅನುಯಾಯಿಗಳು. ಜೀಸಸ್ ಬಯಸಿದರೆ ಯಾರನ್ನು ಏನು ಬೇಕಾದರೂ ಮಾಡುತ್ತಾನೆ. ಅವನನ್ನು ನಂಬಿದರೆ ಸಿಗುವ ಸ್ಪಿರಿಚುಯಲ್ ಪವರ್ ನಿಂದ ನಾವು ಪ್ರಪಂಚವನ್ನೆ ಅದಲು ಬದಲು ಮಾಡಬಹುದು.” ಆ ಶಕ್ತಿ ಪಡೆಯಲು ಸ್ಪಿರಿಚುಯಲ್ ಯೂನಿವರ್ಸಿಟಿಯ ಆರು ತಿಂಗಳ ಕೋರ್ಸ್ ತೆಗೆದುಕೊಳ್ಳಬೇಕು, ಅದಕ್ಕೆ ಸಾವಿರ ಪೌಂಡ್!
ಆಸ್ತಿಕರು ಮತ್ತು ನಾಸ್ತಿಕರ ಮಧ್ಯೆಯ ವಾಗ್ವಾದಕ್ಕೂ ಕೊನೆ ಇಲ್ಲ. ಆದರೆ ದೇವರ ಹೆಸರಿನಲ್ಲಿ ಮುಗ್ಧರನ್ನು, ತಿಳಿವಳಿಕೆ ಇಲ್ಲದವರನ್ನು ಮೋಸಗೊಳಿಸುವ ಘಟನೆಗಳಿಗೆ ಪರಿಧಿಯೇ ಇಲ್ಲ..
ನನಗೂ ಇದನ್ನೆಲ್ಲಾ ಕೇಳಿ ತಲೆ ಕೆಟ್ಟು ಹೋಗಿತ್ತು. ಹೊರಗೆ ಬಂದು ಮತ್ತೊಂದು ಕಾಫಿ ಕುಡಿದೆ. ಪಕ್ಕದಲ್ಲೆ ಮತ್ತೊಬ್ಬ ಮಧ್ಯ ವಯಸ್ಸಿನ ಮನುಷ್ಯ ಬಂದು ಮಾತನಾಡಿಸಿದ. ಅವನ ಹೆಸರು ಹರ್ಕ್ಯುಲಸ್, ಅವನು ಸ್ಪಿರಿಚುಯಲ್ ಹೀಲರ್. ಪರಿಚಯ ಮಾಡಿಕೊಂಡು ಮುಂದುವರೆಸಿದ, “ನಾನು ಮನುಷ್ಯರ ಕಷ್ಟವನ್ನು ಮತ್ತು ನೋವನ್ನು ನಿವಾರಿಸಲು ಶಕ್ತನಾಗಿದ್ದೇನೆ. ನನಗೆ ಈ ಶಕ್ತಿ ಇದೆ ಎಂದು ತಿಳಿದಿರಲಿಲ್ಲ, ಒಮ್ಮೆ ದಾರಿಯಲ್ಲಿ ಹೋಗಬೇಕಾದರೆ ರಸ್ತೆ ದಾಟುತ್ತಿದ್ದ ಹುಡುಗ ಓಡಿ ಬಂದು ನನ್ನ ಕಷ್ಟವನ್ನು ಪರಿಹರಿಸಿ ಎಂದು ಕೇಳಿದ. ನಾನು ಅವನ ತಲೆಯನ್ನು ಮುಟ್ಟಿದ ತಕ್ಷಣ ಅವನ ತೊಂದರೆ ತಿಳಿಯಿತು. ಅವನಿಗೆ ಪರಿಹಾರವನ್ನು ತಿಳಿಸಿದೆ. ಅದಾದ ಮೂರನೆ ವಾರಕ್ಕೆ ಮತ್ತೆ ಅದೇ ಜಾಗದಲ್ಲಿ ಸಿಕ್ಕಿ, ತನ್ನ ಕಷ್ಟವೆಲ್ಲಾ ಪರಿಹಾರವಾಗಿದೆ ಎಂದು ಸಂತೋಷದಿಂದ ಹೇಳಿ ಕೈಗೆ ಮುತ್ತಿಕ್ಕಿ ಹೋದ. ಆಗಿನಿಂದ ನನಗೆ ದಾರಿಯಲ್ಲಿ ಸಿಗುವವರ ಕಷ್ಟ ತಿಳಿಯುತ್ತದೆ.” ಎಂದು ತನ್ನಲ್ಲಿರುವ ಶಕ್ತಿಯನ್ನು ವಿವರವಾಗಿ ಹೇಳಿದ. ನನಗೂ ಅಲ್ಲಿಂದ ಹೊರಡಬೇಕಿತ್ತು, ಹೊರಟಾಗ ನನ್ನ ನಂಬರ್ ತೆಗೆದುಕೊಂಡು ಅವನ ವಿಸಿಟಿಂಗ್ ಕಾರ್ಡ್ ಕೊಟ್ಟ.
ಹರ್ಕ್ಯುಲಸ್ ನ ಅಡ್ರಸ್ ನೋಡಿದೆ. ಅದು ನಾನಿರುವ ಜಾಗದಿಂದ ಸುಮಾರು ಮುವತ್ತು ಮೈಲಿ ದೂರದಲ್ಲಿದ್ದ ಹಳ್ಳಿ. ನನಗೆ ಇಂಗ್ಲೆಂಡಿನ ಹಳ್ಳಿಗಳನ್ನು ನೋಡುವ ಕುತೂಹಲ. ಹೇಗಾದರೂ ಮಾಡಿ ಅವನ ಸ್ನೇಹ ಸಂಪಾದಿಸಿ ಅವನಿರುವ ಜಾಗಕ್ಕೆ ಹೋಗಿ ಬರಬೇಕು ಎಂದು ಆಸೆಯಾಯಿತು. ಅಲ್ಲಿಂದ ನಾಲ್ಕು ದಿನವಾದ ಮೇಲೆ ಅವನ ಫೋನ್ ಬಂತು, ನಾನಿರುವ ಜಾಗಕ್ಕೆ ಹತ್ತಿರವಿರುವ ಚರ್ಚ್ ನಲ್ಲಿ ಬರುವ ಶನಿವಾರ ಸಂಜೆ ಒಂದು ಕಾರ್ಯಕ್ರಮವಿದೆ ಎಂದು ಆಹ್ವಾನಿಸಿದ.
ಆ ದಿನ ಕಾರ್ಯಕ್ರಮ ಮುಗಿದ ಮೇಲೆ ನಾನು ತಡವಾಗಿ ಹೋದೆ. ನನ್ನನ್ನು ಚರ್ಚಿನ ಹಿಂಭಾಗದಲ್ಲಿದ್ದ ಒಂದು ಸುಂದರ ಸ್ಮಶಾನದಲ್ಲಿ ಭೇಟಿಯಾದ. ಇಂಗ್ಲೆಂಡಿನ ಸ್ಮಶಾನಗಳು ಭಾರತದ ಪಾರ್ಕ್ ಗಳಿಗಿಂತ ಸುಂದರವಾಗಿರುತ್ತದೆ. ಕೂತು ನಾವಿಬ್ಬರೆ ಏನೇನೊ ಮಾತನಾಡಿದೆವು, ನಾನು ಅವನ ಹಳ್ಳಿಯ ಬಗ್ಗೆ ಕೇಳತೊಡಗಿದೆ. ಅವನ ಹಳ್ಳಿಯನ್ನು ನೋಡುವ ಆಸೆ ತಿಳಿಸಿದೆ. ನನ್ನ ಜೊತೆಗೆ ಒಳ್ಳೆಯ ಸ್ನೇಹ ಬೆಳೆದ ಕಾರಣ ಅವನು ಸಲುಗೆಯಿಂದ ಮಾತನಾಡುತ್ತಾ ಹೋದ. ತನ್ನ ಕಥೆಯನ್ನು ಹೇಳತೊಡಗಿದ. “ನಾನು ಪ್ರಾಚೀನ ವಸ್ತುಗಳನ್ನು ಮಾರುತ್ತೇನೆ, ಸದ್ಯಕ್ಕೆ ನನ್ನ ಎಕ್ಸ್ ಗರ್ಲ್ ಫ಼್ರೆಂಡ್ ಜೊತೆಗೆ ಇದ್ದೇನೆ. ಅವಳು ನಾನು ನಾಲ್ಕು ವರ್ಷದಿಂದ ಜೊತೆಗೆ ಇದ್ದೆವು. ಆದರೆ ಕಳೆದ ಆರು ತಿಂಗಳಿಂದ ನಾವು ಗೆಳೆತನದಲ್ಲಿಲ್ಲ. ಅವಳ ಹೊಸ ಬಾಯ್ ಫ಼್ರೆಂಡ್ ಬೇರೆ ಊರಿನಲ್ಲಿ ಇದ್ದಾನೆ. ಅವಳಿಗೆ ಅವನ ಜೊತೆಗೆ ಹೋಗಲು ಇನ್ನು ಒಂದು ವರ್ಷ ಆಗುತ್ತದೆ. ನನ್ನ ಬಳಿ ಬೇರೆ ಮನೆಗೆ ಹೋಗುವಷ್ಟು ಹಣವಿಲ್ಲ, ಹಾಗೆ ಅವಳಿಗೂ ಕೂಡ. ಆದ ಕಾರಣ ನಾವು ಒಂದೇ ಮನೆಯಲ್ಲಿ ಇದ್ದೇವೆ. ನನಗೆ ದುಡಿಮೆಯಿಲ್ಲ ಆದರೆ ಪ್ರಾಚೀನ ವಸ್ತುಗಳನ್ನು ಬೇರೆ ಕಡೆಯಿಂದ ತಂದು ಮನೆಯಲ್ಲೆ ಮಾರುತ್ತೇನೆ. ಸ್ವಲ್ಪ ಹಣವಾದ ಮೇಲೆ ಅಲ್ಲಿಂದ ಬೇರೆ ಊರಿಗೆ ಹೋಗುವ ಯೋಜನೆ ಇದೆ. ಸದ್ಯಕ್ಕೆ ಬೇರೆಯವರ ಕಷ್ಟ ಪರಿಹಾರ ಮಾಡುವುದು ನನ್ನ ಗುರಿ. ದೇವರು ನನಗೆ ಆ ಶಕ್ತಿಯನ್ನು ಕೊಟ್ಟಿದ್ದಾನೆ.” ಎಂದು ಹೇಳುತ್ತಾ ಒಮ್ಮೆ ಸ್ಮಶಾನದ ಇನ್ನೊಂದು ತುದಿಯನ್ನು ದಿಟ್ಟಿಸಿ ನೋಡಿದ. ಮತ್ತೆ ನನ್ನ ಕಡೆ ತಿರುಗಿ “ನೀನು ನನ್ನ ಹಳ್ಳಿ ನೋಡಬೇಕೆನಿಸಿದರೆ, ಯಾವುದಾದರೂ ಒಂದು ದಿನ ಬೆಳಿಗ್ಗೆ ಬಾ. ನಿನಗೆ ಹಳ್ಳಿ ಸುತ್ತುವ ಮ್ಯಾಪ್ ಹಾಕಿಕೊಡುತ್ತೇನೆ. ನೋಡಿಕೊಂಡು ಹಿಂತಿರುಗುವೆಯಂತೆ.” ಎಂದು ಹೇಳಿದ. ಅದರ ಹಿಂದೆಯೆ, “ನಾಳೆ ನಾನು ಇನ್ನೊಂದು ಚರ್ಚ್ ಗೆ ಹೋಗುತ್ತಿದ್ದೇನೆ. ನೀನು ಬಾ. ನಿನಗೆ ಸ್ಪಿರಿಚುಯಲ್ ಪವರ್ ಬಗ್ಗೆ ತಿಳಿಸುತ್ತೇನೆ. ನನಗಿರುವ ಶಕ್ತಿಗೆ ನಾನು ಪ್ರಪಂಚದ ಯಾವುದೇ ಮನುಷ್ಯನ ಸಮಸ್ಯೆಯನ್ನು ಪರಿಹರಿಸಬಲ್ಲೆ. ನೀನು ಖಂಡಿತಾ ಬರುತ್ತೀಯ?” ಎಂದು ಕೇಳಿದ. ಯಾವುದಕ್ಕೂ ನಾನು ಫೋನ್ ಮಾಡುತ್ತೇನೆ ಎಂದು ಅಲ್ಲಿಂದ ಹೊರಟೆ.
ಹರ್ಕ್ಯುಲಸ್ ಗೆಅವನದ್ದೇಕಿತ್ತು ತಿನ್ನುವಷ್ಟು ಸಮಸ್ಯೆ ಇದೆ. ಹೆಂಡತಿ ಮಕ್ಕಳಿಲ್ಲ, ಇರಲು ಮನೆ ಇಲ್ಲ. ಗರ್ಲ್ ಫ಼್ರೆಂಡ್ ಇದ್ದರೂ ಅವಳು ಎಕ್ಸ್. ತನ್ನನ್ನೆ ತಾನು ಪರಿಹರಿಸಿಕೊಳ್ಳಲಾಗದವನು ಪ್ರಪಂಚದ ಎಲ್ಲ ಮನುಷ್ಯರ ಸಮಸ್ಯೆಯನ್ನು ಪರಿಹರಿಸಲು ನಿಂತಿದ್ದಾನೆ. ಅದಕ್ಕೆ ಅವನು ಕೊಟ್ಟಿರುವ ಹೆಸರು ಸ್ಪಿರಿಚುಯಲ್ ಹೀಲರ್. ಅವನ ವಿಸಿಟಿಂಗ್ ಕಾರ್ಡ್ ನ ಒಂದು ಮೂಲೆಯಲ್ಲಿ ಅವನ ಹೆಸರು, ಇನ್ನೆಲ್ಲಾ ಕಡೆ ಅವನಲ್ಲಿರುವ ಶಕ್ತಿಯ ಹೆಸರುಗಳು “ಸ್ಪಿರಿಚುಯಲ್ ಹೀಲರ್”, “ಸ್ಪಿರಿಚುಯಲ್ ಪವರ್”, “ಸ್ಪಿರಿಚುಯಲ್ ಲೀಡರ್”, “ಸ್ಪಿರಿಚುಯಲ್ ಕನ್ನೆಕ್ಟ್”, “ಸ್ಪಿರಿಚುಯಲ್ ಮೆಂಟರ್”, “ಸ್ಪಿರಿಚುಯಲ್ ಮಾಸ್ಟರ್’, ಹೀಗೆ ಹತ್ತು ಹಲವು.
ಅವನ ಸಂಪರ್ಕದಲ್ಲಿದ್ದಿದ್ದರೆ ಇನ್ನು ಏನೇನು ತಿಳಿಯುತ್ತಿದ್ದೆನೊ ಗೊತ್ತಿಲ್ಲ, ನಾನು ಇಂಗ್ಲೆಂಡ್ ಬಿಡಬೇಕಾಯಿತು, ಹಾಗೆ ಅವನ ಸಂಪರ್ಕ ಕೂಡ ಕಡಿದುಹೋಯಿತು. ದೇವರ ಹೆಸರಿನಲ್ಲಿ ಏನೇನು ನಡೆಯುತ್ತದೆ ಎನ್ನುವುದೇ ಸೋಜಿಗ. ಇನ್ನು ದೇವರು!?
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.