ನಾನು ತಬಸ್ಸುಮ್ ತಿಂಗಳೊಳಗೇ ಎಷ್ಟು ಹತ್ತಿರಾಗಿದ್ದೆವೆಂದರೆ ಅವಳು ನನಗೆ ಪ್ರಹ್ಲಾದನನ್ನು ಹಿಡಿದಿಟ್ಟುಕೊಳ್ಳಲು ಹೆಣ್ತನವನ್ನೇ ಅಸ್ತ್ರ ಮಾಡಿಕೊಳ್ಳೋದು ಹೇಗೆಂದು ಪಾಠ ಮಾಡುತ್ತಿದ್ದಳು.ನಾನು ಬಿಟ್ಟ ಬಾಯಿ ಬಿಟ್ಟಂತೆ ಕೂತು ಅವಳ ಪಾಠ ಕೇಳುವುದು ಅವಳಿಗೆ ಹಲವೊಮ್ಮೆ ನಗು ತರಿಸುತ್ತಿತ್ತು.ನಾನು ಹೊಸತೊಂದು ಪ್ರಪಂಚಕ್ಕೆ ಕಾಲಿಡುತ್ತಿದ್ದೆ.ಏನೇನೋ ವಿಚಾರಗಳು ತಿಳಿಯುತ್ತಿದ್ದವು.ನನ್ನ ಪ್ರಹ್ಲಾದನ ಹೆಸರು ಸೇರಿಸಿ ಅವಳು ಬರೆದು ಕೊಡುತ್ತಿದ್ದ ಶಾಯರಿಗಳು ನನ್ನನ್ನು ಹುಚ್ಚೆಬ್ಬಿಸಿ ಕುಣಿಸುತ್ತಿದ್ದವು
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹತ್ತನೆಯ ಕಂತು.
ಅಮ್ಮ ಆಗಾಗ ‘ಗುಡ್ಡದ ಮೇಲಿನ ಬ್ರಾಹ್ಮಣ’ ಅಂತೊಂದು ಕತೆ ಹೇಳೋಳು. ಒಂದೂರಲ್ಲಿ ಒಬ್ಬ ಬ್ರಾಹ್ಮಣ ಇರ್ತಾನಂತೆ. ಅವನು ಗೋಧೂಳಿ ಹೊತ್ತಿಗೆ ಊರ ಹೊರಗಿನ ಗುಡ್ಡದಂತಹ ದಿಬ್ಬದ ಮೇಲೆ ಹೋಗಿ ನಿಂತು ಊರಿಗೇ ಒಳ್ಳೇದಾಗೋ ಸಮಸ್ತ ವಿಚಾರಗಳನ್ನೂ ಹೇಳ್ತಾನಂತೆ. ಹೊತ್ತಿಳಿದ ಮೇಲೆ ಗುಡ್ಡ ಇಳಿದು ಬರ್ತಾನಂತೆ. ಗುಡ್ಡ ಇಳಿದ ಮೇಲೆ ಅಲ್ಲಿ ಮೇಲೆ ನಿಂತು ಮಾತಾಡಿದ್ದು ಇವನೇನಾ ಎಂದು ಆಶ್ಚರ್ಯ ಪಡುವಷ್ಟು ತಲೆಹರಟೆ ಮಾತಾಡುತ್ತಿದ್ದನಂತೆ. ಅವಾಚ್ಯ ಶಬ್ದಗಳಿಗೋ ಕೊರತೆಯೇ ಇಲ್ಲ!! ಊರ ಜನಕ್ಕೆಲ್ಲಾ ಒಂದೇ ಸೋಜಿಗ! ಇವನ್ಯಾಕೆ ಗುಡ್ಡದ ಮೇಲೆ ಹೀಗೆ, ಕೆಳಗಿಳಿದರೆ ಹಾಗೇ..? ಅಮ್ಮ ನನ್ನ ಮನೆಯಿಂದ ಓಡಿಸುವ ವಿಷಯದಲ್ಲಿ ಈ ಗುಡ್ಡದ ಮೇಲಿನ ಬ್ರಾಹ್ಮಣನಂತಾಗಿಬಿಟ್ಟಿದ್ದಳು. ಎಲ್ಲರೆದುರೂ ಅಷ್ಟು ಸದ್ಗುಣಿ ಸುಸಂಪನ್ನೆ ನನ್ನೆದುರು ಮಾತ್ರ ಬ್ರಹ್ಮ ರಾಕ್ಷಸಿ!
ಮನೆಯ ಮುಂದಿನ ಕಾಡುಬಾದಾಮಿ ಮರಕ್ಕೆ ಹೊತ್ತಿಲ್ಲ ಗೊತ್ತಿಲ್ಲ. ಎಲೆ ಉದುರುತ್ತಲೇ ಇರುತ್ತೆ ಚಿಗುರುತ್ತಲೇ ಇರುತ್ತೆ. ಕಾಯಿಗಳಿಗಂತೂ ಯಾವಾಗಲೂ ತಂಪು ನೆರಳಿನ ಸಂಭ್ರಮ. ಈ ಮರ ನನ್ನ ಹಾಗೆ. ಬತ್ತದ ಜೀವನೋತ್ಸಾಹ. ನಾಳೆ ಏನೆಂದು ಅರಿಯದಿದ್ದರೂ ಇಂದು ಜಾಮ್ ಜಾಮ್ ಬದುಕು. ಮನೆಯೆಲ್ಲಾ ಸಂಭ್ರಮ. ಗಲಗಲ ನಗು ಓಡಾಟ ಮಾತು. ಬೆಳ್ಳಂಬೆಳಗ್ಗೆ ನನಗೊಂದು ರೇಷಿಮೆ ಸೀರೆ, ಒಂದಷ್ಟು ಒಡವೆ ಕೊಟ್ಟ ಗುಡ್ಡದ ಮೇಲಿನ ಬ್ರಾಹ್ಮಣನಂಥಾ ಅಮ್ಮ, “ಮುದ್ದು ಮಗಳೇ, ಹೇಗೂ ಸೀರೆ ಚೆನ್ನಾಗೇ ಉಡ್ತೀ. ಜೊತೆಗೆ ಈ ಒಡವೆ ಹಾಕ್ಯಂಬಿಡಮ್ಮಾ. ಜಡೆ ಬಾಚಕ್ಕೆ ಅತ್ತೆ ಬರ್ತಳೆ. ನಾನು ಹೊರಗೆ ಸೊಲ್ಪ ತಯಾರಿ ನೋಡ್ಬೇಕು. ಮಾವ ಒಬ್ನೇ ಮಾಡ್ತಾದನೆ ಬೆಳಗಿಂದ. ಇನ್ನೇನು ಪ್ರಹ್ಲಾದನ ಮನೆಯವ್ರು ಬಂದಾರು.” ಅಂದು ಹೋದಳು. ಎಲ್ಲ ತಿಳಿದೇ ಒಪ್ಪಿದ್ದರೂ ಯಾಕೋ ಆ ಕ್ಷಣ ಇನ್ನಿಲ್ಲದಷ್ಟು ಮೈ ಉರಿಯಿತು. ‘ನೀನು ಮುಂದಕ್ಕೆ ಓದ್ಬೇಕು ಹುಡುಗೀ.. ನನ್ನ ಹೆಂಡ್ತಿ ಆಗೋಳು ಅಟ್ ಲೀಸ್ಟ್ ಡಾಕ್ಟರೇಟಾದ್ರೂ ಮಾಡಿರಬೇಕು ಕಣೇ..’ ಅಂತ ಅವನು ಅಂದಿರದಿದ್ದರೆ ಮನ್ಮಥನ ತಮ್ಮನಾಗಿದ್ದರೂ ನಾನು ಒಪ್ಪುತ್ತಿರಲಿಲ್ಲ. ಇದು ಅಮ್ಮನ ಮೇಲೆ, ಅವಳ ಮನೆತನದ ದರ್ಪದ ಮೇಲೆ ನಾನು ಸೇಡು ತೀರಿಸಿಕೊಳ್ಳುವ ಪರೋಕ್ಷ ಇಂಗಿತವೂ ಆಗಿತ್ತೆಂದು ನನಗೆ ನಿಧಾನವಾಗಿ ಅರ್ಥವಾಯಿತು.
ಸಂಜೆ ಅವರ ಊರಿಗೆ ಹೊರಡುವ ಮೊದಲು ಪ್ರಹ್ಲಾದನ ಅಮ್ಮ ನನ್ನ ಬಳಿ ಬಂದು ‘ಅದೇನಂತ ನನ್ನ ಮಗ ನಿನ್ನ ಮೆಚ್ಚಿದನೋ ಗೊತ್ತಿಲ್ಲ ಕಣೇ. ನೋಡೋಕೇನೋ ಚೆನ್ನಾಗಿದೀಯ, ಮನೆ ಜನ ಎಲ್ಲ ಪರ್ವಾಗಿಲ್ಲ. ಆದ್ರೆ ಇಷ್ಟೊಂದು ಓದಿ ಲೆಕ್ಚರರ್ ಆಗಿರೋನಿಗೆ ಒಂದು ರುಪಾಯಿ ವರದಕ್ಷಿಣೆ ಬೇಡವಾ..!! ಅವನೇನೋ ಬೇಡಾಂದಾಂದ್ರೆ ನಿಮ್ಮನೆ ಹಿರಿಯೋರಿಗೆ ಬುದ್ಧಿ ಬೇಡ್ವಾ..!? ಹಮ್್್.. ಬಿಡು.. ಅವರಾದ್ರೂ ಎಲ್ಲಿಂದ ತರ್ತಾರೆ. ಮೊದಲು ನಿನ್ನ ಕಳಿಸಿದರೆ ಸಾಕಾಗಿದೆ ಅವ್ರಿಗೆ. ಹೇಳೋರು ಕೇಳೋರು ಇಲ್ಲದ ಹುಡುಗಿಯ ಜವಾಬ್ದಾರಿ ಯಾರಾದ್ರೂ ಎಷ್ಟು ದಿನ ಹೊತ್ಕೋತಾರೆ..? ಏನಾದ್ರಾಗ್ಲಿ ನಮ್ಮ ಮಗನ ಆಸೆ ನೀನು. ಅವನೊಂದಿಗೆ ಚಂದಾಗಿದ್ಬಿಡು ಸಾಕು ತಾಯೀ.. ಹೊರಡ್ತೀವಿ ನಾವಿನ್ನು.’ ಅಂದರು. ನಮ್ಮ ಜಾತೀಲಿ ಹೆಣ್ಣು ಕಡಿಮೆಯಾಗಿ ಸಿಕ್ಕದ್ದನ್ನ ಬಾಯ್ಮುಚ್ಚಿಕೊಂಡು ಮಾಡ್ಕೋಬೇಕಾದ ಸ್ಥಿತಿ ಒದಗಿದೆ ಅನ್ನುವುದನ್ನೂ ಸೇರಿಸಲು ಮರೆಯಲಿಲ್ಲ ಆಕೆ. ತಲೆ ಗಿಮ್ಮನೆ ಸಾವಿರ ಕಿಲೋಮೀಟರ್ ವೇಗದಲ್ಲಿ ತಿರುಗುತ್ತಿತ್ತು. ಅವರಪ್ಪ ದೂರದಿಂದಲೇ ಕೈ ಬೀಸಿ ‘ಬೇಗ ಮನೆಗೆ ಬಾರಮ್ಮಾ.. ಮನೆ ಭಣಗುಡ್ತಿದೇ..’ ಅಂದು ನಕ್ಕು ಹೆಜ್ಜೆ ಹಾಕಿದರು. ಬದುಕಿನ ಇನ್ನೊಂದು ಆಯಾಮದ ಮೊದಲು ಒಡಕು ಸ್ವರ ಅಂದು ಸ್ಪಷ್ಟವಾಗಿ ಕಿವಿಗೆ ಬಿದ್ದಿತ್ತು. ಇಡೀ ಮನೆ ನನ್ನಮ್ಮನ ನೆಂಟರಿಷ್ಟರಿಂದ ಕಿಕ್ಕಿರಿದು ತುಂಬಿತ್ತು. ಸಂಭ್ರಮವೋ ಸಂಭ್ರಮ.. ಅಷ್ಟೂ ಜನರ ಮಧ್ಯೆ ಇದ್ದೂ ಇಲ್ಲದಂತೆ ನಾನೆಂಬ ಡಿಂಭ! ನನ್ನ ಗಂಡನಾಗುವವನು ಅವರಮ್ಮನ ಸೆರಗ ಮರೆಯಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಾ ನನಗೊಂದು ಕಣ್ಣು ಮಿಟುಕಿಸಿ ಬಸ್ಸು ಹತ್ತಿದ. ನನಗೇಕೋ ಕಹಿ ನಾಳೆಗಳ ಮುನ್ಸೂಚನೆ ದೊರೆತಿತ್ತು. ಮತ್ತು ಮನಸಿಗೆ ವೈರುಧ್ಯಗಳ ಗೆಪ್ಪೆಗೆಪ್ಪೆಯೇ ಬಡಿದು ಅದೇಕೋ ಕೊರಡಾಗಿಹೋಗಿತ್ತು.
ಊರ ಜನಕ್ಕೆಲ್ಲಾ ಒಂದೇ ಸೋಜಿಗ! ಇವನ್ಯಾಕೆ ಗುಡ್ಡದ ಮೇಲೆ ಹೀಗೆ, ಕೆಳಗಿಳಿದರೆ ಹಾಗೇ..? ಅಮ್ಮ ನನ್ನ ಮನೆಯಿಂದ ಓಡಿಸುವ ವಿಷಯದಲ್ಲಿ ಈ ಗುಡ್ಡದ ಮೇಲಿನ ಬ್ರಾಹ್ಮಣನಂತಾಗಿಬಿಟ್ಟಿದ್ದಳು. ಎಲ್ಲರೆದುರೂ ಅಷ್ಟು ಸದ್ಗುಣಿ ಸುಸಂಪನ್ನೆ ನನ್ನೆದುರು ಮಾತ್ರ ಬ್ರಹ್ಮ ರಾಕ್ಷಸಿ!
ನಿಶ್ಚಿತಾರ್ಥ ಆದ ಮೇಲೆ ಹೆಚ್ಚೆಂದರೆ ಎರಡು ಮೂರು ಬಾರಿ ಹಿರಿಯರ ಸಮ್ಮುಖದಲ್ಲೇ ಮುಖಾಮುಖಿಯಾಗಿದ್ದ ನಮಗೆ ಕಾಲೇಜಿನಲ್ಲಿ ಕದ್ದು ಮುಚ್ಚಿ ಮಾತಾಡಬೇಕು, ಜತೆಯಾಗಿ ಓಡಾಡಬೇಕೆಂಬ ಹುಚ್ಚು ಹಂಬಲವೇನೂ ಇರಲಿಲ್ಲ. ಚಿಕ್ಕ ಊರಾದ್ದರಿಂದ ಹೊರಗೆ ತಿರುಗಿದರೆ ಮನೆಯವರಿಗೆ ವಿಷಯ ಮುಟ್ಟಲು ಹೊತ್ತು ಹಿಡಿಯುತ್ತಿರಲಿಲ್ಲ. ಅಮ್ಮ ಮದುವೆಯವರೆಗೂ ಅವನನ್ನು ಏಕಾಂತದಲ್ಲಿ ಭೇಟಿಯಾಗಲೇಕೂಡದೆಂದು ಖಡಾಖಂಡಿತ ಹೇಳಿ ಆಗಿತ್ತು. ಕಾಲೇಜು ಮ್ಯಾನೇಜ್ಮೆಂಟಿನವರು ಪ್ರಹ್ಲಾದನನ್ನೊಮ್ಮೆ ಕರೆಸಿ ಮಾತಾಡಿ ಶುಭ ಕೋರಿದ್ದರಂತೆ, ಮಾವನಿಗೆ ಹೇಳುವಾಗ ಕೇಳಿದ್ದೇ ವಿನಃ ನನ್ನವರೆಗೂ ಅದ್ಯಾವ ವಿಚಾರವೂ ಬರಲಿಲ್ಲ. ನನ್ನ ಸ್ನೇಹಿತೆಯರ ವಿನಃ ನನಗ್ಯಾರೂ ಶುಭವನ್ನೂ ಕೋರಿರಲಿಲ್ಲ.
ತಬಸ್ಸುಮ್ ಮೊದಲ ವರ್ಷಕ್ಕಿಂತ ಈಗ ಇನ್ನಷ್ಟು ಹತ್ತಿರವಾಗಿದ್ದಳು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದುದು, ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದುದು, ಊರು ಸುತ್ತಿ ಬಟ್ಟೆ ಆಭರಣ ಕೊಂಡು ನಲಿಯುತ್ತಿದ್ದದ್ದು ಮನೆಯಲ್ಲೂ ಗೊತ್ತಿತ್ತು. ಸಾಬರ ಹುಡುಗಿಯ ಮನೇಲಿ ಟೀ ಕುಡಿದು ಬಂದೆ ಅಂತ ಅಮ್ಮ ಒಂದೆರಡು ಸಾರಿ ಆರೋಪಿಸಿದ್ದಳು. ಆದರೆ ಗಟ್ಟಿಗೆ ಮಾತಾಡಿದರೆ ಮನೆಯವರ ಮುಂದೆ ಹೋಗೋದು ಅವಳ ಮಾನ ಎಂದರಿತು ಸುಮ್ಮನೆ ನುಂಗಿಕೊಂಡಿದ್ದಳು. ಮದುವೆಯೊಂದು ಆಗಿಹೋದರೆ ಅವಳು ಹಗುರಾಗಬಹುದೆಂದು ಆ ಕಡೆ ಗಮನ ಹರಿಸಿದಳು. ಆದರೂ ಮುಹೂರ್ತ ನಾಲ್ಕು ತಿಂಗಳ ನಂತರವೇ ಕೂಡಿತು. ಆದರೆ ನಾನು ತಬಸ್ಸುಮ್ ತಿಂಗಳೊಳಗೇ ಎಷ್ಟು ಹತ್ತಿರಾಗಿದ್ದೆವೆಂದರೆ ಅವಳು ನನಗೆ ಪ್ರಹ್ಲಾದನನ್ನು ಹಿಡಿದಿಟ್ಟುಕೊಳ್ಳಲು ಹೆಣ್ತನವನ್ನೇ ಅಸ್ತ್ರ ಮಾಡಿಕೊಳ್ಳೋದು ಹೇಗೆಂದು ಪಾಠ ಮಾಡುತ್ತಿದ್ದಳು.
ಈ ವಿಷಯದ ಸೆರಗಂಚೂ ಅರಿಯದ ನಾನು ಬಿಟ್ಟ ಬಾಯಿ ಬಿಟ್ಟಂತೆ ಕೂತು ಅವಳ ಪಾಠ ಕೇಳುವುದು ಅವಳಿಗೆ ಹಲವೊಮ್ಮೆ ನಗು ತರಿಸುತ್ತಿತ್ತು. ನಾನು ಆ ನಗುವಿಗೇ ಮಂತ್ರಮುಗ್ಧಳಾಗುತ್ತಿದ್ದೆ. ಹಾಲುಬಿಳಿಯ ತಬೂ ನಖಶಿಖಾಂತ ಮುದ್ದುಬೊಂಬೆ. ಹೆಣ್ಣಾಗಿ ನಾನೇ ಬೆರಗಾಗುವ ಆ ಅಂದಕ್ಕೆ ಗಂಡೊಬ್ಬನು ಸೋಲದೇ ಎದೆಯಗಲಿಸಿ ನಡೆಯಲು ಸಾಧ್ಯವೇ ಇರಲಿಲ್ಲ. ನಾನು ಹೊಸತೊಂದು ಪ್ರಪಂಚಕ್ಕೆ ಕಾಲಿಡುತ್ತಿದ್ದೆ. ಅವಳಿಂದ ಏನೇನೋ ವಿಚಾರಗಳು ತಿಳಿಯುತ್ತಿದ್ದವು. ನನ್ನ ಪ್ರಹ್ಲಾದನ ಹೆಸರು ಸೇರಿಸಿ ಅವಳು ಬರೆದು ಕೊಡುತ್ತಿದ್ದ ಶಾಯರಿಗಳು ನನ್ನನ್ನು ಹುಚ್ಚೆಬ್ಬಿಸಿ ಕುಣಿಸುತ್ತಿದ್ದವು. ಎದುರಿದ್ದರೂ ದೂರ ಕಾಯ್ದುಕೊಂಡು ಮನಸಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದ ಅವನ ಸಭ್ಯತೆ, ಕ್ಲಾಸಿನಲ್ಲಿ ಎಲ್ಲರಂತೆ ನನ್ನೊಂದಿಗೂ ಸಾಧಾರಣನಂತೆ ಇರುತ್ತಿದ್ದ ಮಿತಿಮೀರದ ನಡವಳಿಕೆ, ಹೊರಗೆ ಜನರಲ್ಲಿ ಅವನ ಬಗೆಗಿದ್ದ ಗೌರವ ಎಲ್ಲ ಸೇರಿ ನನಗೆ ಅವನ ನೆನಪು ರಾತ್ರಿಗಳ ನಿದ್ದೆ ಕದಿಯಹತ್ತಿತ್ತು. ತೀರಾ ಹೊರಗಿನವನೊಬ್ಬ ಮನಸಿನ ಅತೀ ಅಂತರಂಗದ ಪದರನ್ನು ಹೊಕ್ಕಾಗಿತ್ತು. ಮಾತಾಡದೇ ಅವನಿಂದ ದೂರವಿರುವುದು ಸಾಧ್ಯವೇ ಇಲ್ಲವೆನಿಸುವುದು ತಡವಾಗಲಿಲ್ಲ.
ನನ್ನ ಪ್ರಹ್ಲಾದನ ಹೆಸರು ಸೇರಿಸಿ ಅವಳು ಬರೆದು ಕೊಡುತ್ತಿದ್ದ ಶಾಯರಿಗಳು ನನ್ನನ್ನು ಹುಚ್ಚೆಬ್ಬಿಸಿ ಕುಣಿಸುತ್ತಿದ್ದವು. ಎದುರಿದ್ದರೂ ದೂರ ಕಾಯ್ದುಕೊಂಡು ಮನಸಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದ ಅವನ ಸಭ್ಯತೆ, ಕ್ಲಾಸಿನಲ್ಲಿ ಎಲ್ಲರಂತೆ ನನ್ನೊಂದಿಗೂ ಸಾಧಾರಣನಂತೆ ಇರುತ್ತಿದ್ದ ಮಿತಿಮೀರದ ನಡವಳಿಕೆ, ಹೊರಗೆ ಜನರಲ್ಲಿ ಅವನ ಬಗೆಗಿದ್ದ ಗೌರವ ಎಲ್ಲ ಸೇರಿ ನನಗೆ ಅವನ ನೆನಪು ರಾತ್ರಿಗಳ ನಿದ್ದೆ ಕದಿಯಹತ್ತಿತ್ತು.
ಕ್ಲಾಸುಗಳು ಮುಗಿದ ಮೇಲೆ ಸೆಲ್ಲರ್ ಬ್ಲಾಕ್ ನಲ್ಲಿದ್ದ ಆ ರೂಮಲ್ಲಿ ಪ್ರಹ್ಲಾದ ಯಾವಾಗಲೂ ಕೂತು ಓದುತ್ತಿದ್ದ. ಅಲ್ಲಿ ಗಲಾಟೆ ಕಡಿಮೆ. ಎಷ್ಟು ಹೊತ್ತು ಕೂತು ಓದಿದರೂ ಯಾರೂ ಕೇಳೋರಿರಲಿಲ್ಲ. ಅವನ ಪಿ.ಎಚ್ಡಿ. ತಯಾರಿಯ ಬಗ್ಗೆ ಇಡೀ ಕಾಲೇಜಿಗೇ ಗೊತ್ತಿತ್ತು. ಅದೊಂದು ಅತಿಕ್ರೂರ ಬಿಸಿಲಿನ ಮಧ್ಯಾಹ್ನ. ಅವನ ಬಳಿ ಏನಾದರೂ ಮಾತಾಡಲೇಬೇಕೆಂಬ ಹಂಬಲ ಅತಿಯಾಗಿತ್ತು. ತಬಸ್ಸುಮ್ ಕೂಡಾ ಅವಳ ಅಮ್ಮೀಗೆ ಮೈ ಹುಷಾರಿಲ್ಲವೆಂದು ಆಗಲೇ ಹೊರಟುಬಿಟ್ಟಳು. ಅವಳ ಜೊತೆಗಿರುವಾಗ ಮಾತಾಡಿದರೆ ಅದನ್ನೇ ಹಿಡಿದು ಕಿಚಾಯಿಸುವಳೆಂಬ ಭಯ! ಮೊದಲೇ ಮಹಾ ತುಂಟಿ ಅವಳು. ಆವತ್ತು ಸಮಯ ಕೂಡಿತೆಂದು ಭಾವಿಸಿ ಮೆಲ್ಲಗೆ ಹೆಜ್ಜೆಯಿಡುತ್ತಾ ಸೆಲ್ಲರ್ ಕ್ಲಾಸ್ ರೂಮ್ ಕಡೆ ನಡೆದೆ. ಸ್ಪೀಕರ್ ಇಟ್ಟರೆ ಕಾಲೇಜು ಕಟ್ಟಡ ಬೀಳುವಷ್ಟು ಜೋರಾಗಿ ಎದೆ ಹೊಡೆದುಕೊಳ್ಳುತ್ತಿತ್ತು. ಅವನನ್ನು ಮಾತಾಡಿಸಿ ಅವನೇನಾದರೂ ಬರಸೆಳೆದು ಮುತ್ತಿಟ್ಟರೇ..! ಎಂಬ ಸಂಪೂರ್ಣ ಕಾಲ್ಪನಿಕ ಚಿತ್ರಕ್ಕೆ ಸಿನೆಮಾಗಳೂ ತಬೂವೂ ಸಮಾನ ಹೊಣೆಗಾರರಾಗಿದ್ದರು. ಆದರೂ ಧೈರ್ಯ ಮಾಡಿ ನಡೆದೆ.
ರೂಮು ಹತ್ತಿರಾಗುತ್ತಾ ಕಾಲು ಸಪ್ಪಳಾಗದಂತೆ ಜಾಗ್ರತೆ ವಹಿಸಿದೆ. ಓದುವ ಏಕಾಗ್ರ ಪರಿಸರವಿಲ್ಲದ ರೂಮಿನಿಂದ ಹಿಂದಿ ಹಾಡೊಂದು ಮೆಲ್ಲಗೆ ಕೇಳುತ್ತಿತ್ತು. ಆಶ್ಚರ್ಯವಾಗಿ ಕಿಟಕಿಯ ಬಳಿ ನಡೆದು ಕಿವಿಯಾನಿಸಿ ನಿಂತೆ. ಹಾಡಿನ ನಡುನಡುವೆ ಕಿಲಕಿಲವಾಡುವ ಹೆಣ್ಣು ಸ್ವರವೊಂದು ಕ್ಷೀಣವಾಗಿ ಕೇಳಿಸಿತು. ಅನುಮಾನ ಪರಿಹಾರವಾಗಲು ಇನ್ನೂ ಹತ್ತಿರ ಹೋಗಿ ನಿಂತು ಆಲಿಸಿದೆ. ಸಾಕಾಗಿತ್ತು! ಇನ್ನು ಬಾಗಿಲ ಬಳಿ ಹೋಗುವುದೇ ಸರಿಯೆನಿಸಿ ಕ್ಷಣವೂ ತಡಮಾಡದೇ ಸರಸರನೆ ಬಾಗಿಲಿಗೆ ಬಂದು ನಿಂತು ಬಗ್ಗಿ ನೋಡಿದೆ. ನನ್ನ ಇಡೀ ದೇಹ ಗಡಗಡನೆ ನಡುಗುತ್ತಿತ್ತು. ಬೆವರು ಧಾರಾಕಾರವಾಗಿತ್ತು. ಇಡೀ ದೇಹದ ರಕ್ತವೆಲ್ಲಾ ಒಮ್ಮೆಲೇ ಝಗ್ಗನೆ ಹೃದಯಕ್ಕೆ ನುಗ್ಗಿದಂತಾಗಿ ಉಸಿರು ಗಕ್ಕನೆ ನಿಂತು ನೆತ್ತಿಗೇರಿತ್ತು. ನನ್ನ ನೋಡಿದ ಶಾಕ್ ನಿಂದ ಹೊರಬರಲು ಪ್ರಹ್ಲಾದನಿಗೂ ತಬಸ್ಸುಮ್ ಗೂ ಸಾಧ್ಯವಾಗಲೇ ಇಲ್ಲ.
ಅವನ ಕೈ ಇನ್ನೂ ಅವಳ ಎದೆಯ ಮೇಲೆಯೇ ಸ್ಥಿತವಾಗಿತ್ತು. ಅವಳು ಅವನ ಸೊಂಟವನ್ನು ಹಾಗೆಯೇ ಬಳಸಿ ಹಿಡಿದಿದ್ದ ದೃಶ್ಯ ನನ್ನ ಕಣ್ಣುಗಳ ಮೂಲಕ ಮನಸಿನ ಆಳಕ್ಕೆ ಕತ್ತಿಯಂತೆ ಇಳಿದುಹೋಯಿತು. ಕಣ್ಣಲ್ಲಿ ನೀರು ಅದಾಗೇ ಸುರಿದರೂ ಬಿಕ್ಕಳಿಸಿ ಅಳು ಬರಲಿಲ್ಲ. ಇನ್ನು ಮುಗಿಯಿತೆಂದು ಮನಸು ತೀರ್ಮಾನಿಸಿತ್ತು. ಆ ಕ್ಷಣ ಮನೆ, ಮಾವ-ಅತ್ತೆ, ಶಶಾಂಕ, ನನ್ನ ಬಯಾಲಜಿ ತರಗತಿಗಳು, ತಬಸ್ಸುಮ್ ಳ ಅಂಗೈ ಬಿಸುಪು, ನಮ್ಮಿಬ್ಬರ ಕಲರ್ ಫೋಟೋ, ಕಿವಿಗೆ ಕೊಂಡ ಒಂದೇ ತರದ ಝುಮ್ಕಿಗಳು, ನಮ್ಮನೆಯ ಕೃಷ್ಣಾಷ್ಟಮಿಯ ನೈವೇದ್ಯ, ಬೀದಿ ಕೊನೆಯ ತಿಪ್ಪೆ ಕೆದಕುವ ನಾಯಿ, ತಮ್ಮನ ಮುಗ್ಧ ನಗು, ಅಮ್ಮನ ಬಿರುಸು ಮುಖ, ದೇವರಮನೆಯ ಸಾಲಿಗ್ರಾಮ, ತೀರ್ಥದ ಬಟ್ಟಲು, ಪ್ರಹ್ಲಾದನ ಷರ್ಟಿನ ವಾಸನೆ, ಅವರಮ್ಮನ ತಿರಸ್ಕಾರದ ನಗು… ಎಲ್ಲ ಅಂದರೆ ಎಲ್ಲವೂ ಒಟ್ಟೊಟ್ಟಿಗೇ ನೆನಪಾಗಿ ನಾನು ಇಲ್ಲಿಂದ ಮೊದಲು ಹೊರಡುವುದೊಂದೇ ಮಾರ್ಗವೆನಿಸಿ ಇದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಓಡತೊಡಗಿದೆ… ಓಡುತ್ತಲೇ ಇದ್ದೆ… ಮನೆ ತಲುಪಿ ಕೋಣೆಗೆ ಬಂದು ಬಾಗಿಲು ಹಾಕಿದರೂ ಕಾಲುಗಳು ನಿಲ್ಲಲೇ ಇಲ್ಲ… ಅವು ಓಡುತ್ತಲೇ ಇದ್ದವು.. ಎಲ್ಲವನ್ನೂ ಎಲ್ಲರನ್ನೂ ಹಿಂದಿಕ್ಕಿ… ಓಡುತ್ತಲೇ ಇದ್ದವು.
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.
Excellent.
very nice madam. I look forward to your column!