ಈ ನಮ್ಮ ಶೋಕತಪ್ತತೆಯು ಸಹಜವಾಗಿಯೇ ಕಡಿಮೆಯಾಗುತ್ತಿತ್ತೇನೋ. ಆದರೆ, ಹಾಗಾಗಲು ಬಿಡದಂತ ತೀರ್ಮಾನವನ್ನು ನಮ್ಮ ಪ್ರಾಂಶುಪಾಲರೇ ತೆಗೆದುಕೊಂಡಿದ್ದರು. ನಮಗೆ ಅನುಮತಿಯನ್ನು ನಿರಾಕರಿಸಿದವರು ಹನ್ನೊಂದು ಹನ್ನೆರಡನೇ ತರಗತಿಯ ಹುಡುಗರಿಗಾದರೋ ತಮ್ಮ ನಿರಾಕರಣೆಯನ್ನು ಪ್ರದರ್ಶಿಸಿರಲಿಲ್ಲ. ಅದರ ಫಲವಾಗಿ ಅವರು ರಾತ್ರಿ ಊಟದ ನಂತರ ಗುರು ವೃಂದದವರೊಡನೆ ಮತ್ತದೇ ಗ್ರೀನ್ ರೂಮ್ ಸೇರಿ, ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿ, ಸಂದುಗೊಂದುಗಳಿಗೆಲ್ಲಾ ಮುಚ್ಚಿಕೆ ಹಾಕಿಕೊಂಡು ವಿಶ್ವ ಸುಂದರಿಯರ ದರ್ಶನ ಪಡೆಯತೊಡಗಿದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ನಾಲ್ಕನೆಯ ಬರಹ

ಈ ಹದಿಹರೆಯದವೇ ಅಂತಹದ್ದೆನಿಸುತ್ತೆ; ಎಲ್ಲದರಲ್ಲೂ ಅದೇನೋ ಅದಮ್ಯ ಕುತೂಹಲ! ಅದರಲ್ಲೂ ವಿಶೇಷವಾಗಿ ಹಿರಿಯರು ನೋಡಬೇಡಿರೆಂದೋ ಮಾಡಬೇಡಿರೆಂದೋ ಒತ್ತಿ ಒತ್ತಿ ಹೇಳಿದ ವಿಷಯಗಳೆಡೆಗೆ!

ಅವು ಜವಾಹರ್ ನವೋದಯ ವಿದ್ಯಾಲಯ ಎಂಬ ವಸತಿ ಶಾಲೆಯಲ್ಲಿ ನಾವು ಓದುತ್ತಿದ್ದ ದಿನಗಳು.. ನಾವು ಆಗಷ್ಟೇ ‘ಸೀನಿಯರ್’ ಗಳಾಗಿದ್ದೆವು. ‘ಸೀನಿಯರ್’ಗಳಾಗುವುದೆಂದರೆ ಅದೇನೇನೆಂದೋ ಯೋಚಿಸ ಹೋಗಬೇಡಿ. ಎಂಟನೇ ತರಗತಿಯಿಂದ ಒಂಭತ್ತನೇ ತರಗತಿಗೆ ಪಾಸಾಗಿದ್ದ ನಾವು ಶಾಲಾ ಚಟುವಟಿಕೆಗಳ ಹಿತ ದೃಷ್ಟಿಯಿಂದ ಮಾಡಲಾಗಿದ್ದ ಆರರಿಂದ ಎಂಟನೇ ತರಗತಿವರೆಗಿನ ‘ಜೂನಿಯರ್’ ಗುಂಪಿನಿಂದ ಒಂಭತ್ತರಿಂದ ಹನ್ನೆರಡನೇ ತರಗತಿವರೆಗಿನ ‘ಸೀನಿಯರ್’ ಗುಂಪಿಗೆ ಪ್ರಮೋಟ್ ಆಗಿದ್ದೆವಷ್ಟೇ!

ಇದರಿಂದಾಗಿ ಇನ್ನು ಮುಂದೆ ನಾವು ಶಾಲಾ ಸ್ಪರ್ಧೆಗಳನ್ನು ಜೂನಿಯರ್ ಗುಂಪಿನ ಬದಲಾಗಿ ಸೀನಿಯರ್ ಗುಂಪಿನಲ್ಲಿ ಎದುರಿಸಬೇಕಿತ್ತು. ಊಟದ ಸಮಯವೂ ಸೀನಿಯರ್‌ಗಳೊಂದಿಗೆ ಬದಲಾಗಿ ತತ್‌ಕ್ಷಣದ ಅನುಕೂಲ ಎಂಬಂತೆ ನೀಡುತ್ತಿದ್ದ ಚಪಾತಿ, ದೋಸೆ, ಇಡ್ಲಿ ಇತ್ಯಾದಿಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಿರುತಿತ್ತು. ಇನ್ನೂ ವರ್ಷದಾರಂಭದಲ್ಲಿ ನೀಡುತ್ತಿದ್ದ ಯುನಿಫಾರ್ಮ್ ಚಡ್ಡಿಯ ಬದಲಿಗೆ ಪ್ಯಾಂಟ್ ನೀಡಲಾಗುತಿತ್ತು. ಇವಿಷ್ಟನ್ನು ಬಿಟ್ಟರೆ ಮೇಲ್ನೋಟಕ್ಕೆ ಹೇಳಿಕೊಳ್ಳಬಹುದು ಎನ್ನಬಹುದಾದ ಅಥವಾ ಕ್ರಾಂತಿಕಾರಕ ಎನ್ನಬಹುದಾದ ಬದಲಾವಣೆಗಳೇನಿರಲಿಲ್ಲ.

ಆದರೆ, ನಮ್ಮ ಆಂತರ್ಯದ ಆಲೋಚನಾ ಬದಲಾವಣೆಗಳೋ, ಅದರೊಂದಿಗೆ ನಮ್ಮ ಬಾಹ್ಯ ವರ್ತನಾ ಬದಲಾವಣೆಗಳೋ ಬಗೆ ಬಗೆಯವಾಗಿದ್ದು ಕ್ರಾಂತಿಕಾರಕ ಎನ್ನುವಂತೆಯೇ ಇದ್ದವು!

ಹಿಂದೆಲ್ಲಾ ನಮ್ಮ ಸೀನಿಯರ್ ಗಳನ್ನು “ಅಣ್ಣ, ಅಣ್ಣ” ಎಂದು ಕರೆಯುವುದರಲ್ಲಿ ಇರುತ್ತಿದ್ದ ಅತಿ ವಿನಯ, ಗೌರವ ನೀಡುವಿಕೆಯ ಭಾವ ಮರೆಯಾಗಿ “ನಾವೂ ಸೀನಿಯರ್‌ಗಳೇ ಹೋಗ್ರಲೋ..” ಎನ್ನುವ ಧಾಟಿಯಲ್ಲಿ ಮಾತುಗಳು ಬದಲಾಗಿದ್ದವು. ಅಲ್ಲದೇ ನಮ್ಮ ಜೂನಿಯರ್‌ಗಳೆಡೆಗೆ ಮೊದಲಿದ್ದ ಸಹಾನುಭೂತಿ, ಸಾಹಚರ್ಯ ಮರೆಯಾಗಿ “ಮಕ್ಕಳಾ, ಸೀನಿಯರ್‌ಗಳಿಗೆ ಮರ್ಯಾದೆ ಕೊಡೋದು ಕಲೀರ್ರೋ..” ಎಂಬ ಗೌರವ ನಿರೀಕ್ಷೆಯ, ದಬ್ಬಾಳಿಕೆಯ ಆವಾಝ್‌ಗಳು ಹೊರ ಹೊಮ್ಮಲಾರಂಭಿಸಿದ್ದವು.

ಅಷ್ಟೇ ಆಗಿದ್ದರೂ ಪರ್ವಾಗಿರಲಿಲ್ಲವೇನೋ. ಅದು ಇನ್ನೂ ಮುಂದುವರೆದು ಶಿಕ್ಷಕರೆಡೆಗಿನ ನಮ್ಮ ನಡವಳಿಕೆಗಳಲ್ಲೂ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು.

ಹಿಂದೆಲ್ಲಾ “ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..” ಎಂದು ದಾಸರ ಪದ ಹಾಡುತ್ತಿದ್ದವರ ಮನದಲ್ಲೀಗ “ಗುರುವಿಗೆ ಗುಲಾಮನಾಗಲೇ ಬೇಕಿದ್ದರೆ ಅಂತಹ ಮುಕುತಿಯೇ ಬೇಡ..” ಎಂಬ ಬಂಡಾಯದ ಭಾವಗಳು ಮೊಳಕೆಯೊಡಯಲಾರಂಭಿಸಿದ್ದವು. ಮುಂದುವರೆದು, ಶಿಕ್ಷಕರು ನಮ್ಮ ಪ್ರತಿಯೊಂದು ಮಾತುಗಳನ್ನು ಪ್ರಬುದ್ಧವೆಂಬಂತೆ ಪರಿಗಣಿಸಬೇಕು, ನಮ್ಮನ್ನು ಬೆಳೆದ ಹುಡುಗರಂತೆ ನಡೆಸಿಕೊಳ್ಳಬೇಕು ಎಂಬ ಆಶಯಗಳು ನಮ್ಮ ಪ್ರತಿ ನಡೆಯಲ್ಲೂ ಬಿಂಬಿತವಾಗುತ್ತಿದ್ದವು.

ಒಟ್ಟಿನಲ್ಲಿ “ಎಷ್ಟಾದರೂ ನಾವು ಸೀನಿಯರ್‌ಗಳು..” ಎಂಬ ಸೀನಿಯಾರಿಟಿಯ ಅಹಂ ದಿನೇ ದಿನೇ ಹೆಪ್ಪುಗಟ್ಟುತ್ತಾ ಹಿಮಾಲಯದೆತ್ತರಕ್ಕೆ ಬೆಳೆಯಲಾರಂಭಿಸಿತ್ತು!

ಇಂತಹ ಹಿನ್ನೆಲೆಯಲ್ಲಿಯೇ ಮುಂದಿನ ಕೆಲ ಘಟನೆಗಳು ಘಟಿಸಿ ನಾವು ‘ಹಿಮಾಲಯ’ದೆದುರು ಮುಖಾಮುಖಿಯಾಗುವಂತಹ ಸಂದರ್ಭವನ್ನು ಸೃಷ್ಟಿಸಿದ್ದವು!

ಇದೆಲ್ಲಾ ಆರಂಭವಾಗಿದ್ದು ಊರ್ಮಿಳಾ ಮಾತೋಂಡ್ಕರ್ ಳ “ತನ್ ಹ ತನ್ ಹ …” ಗೀತೆಯಿಂದಲೇ ಎನ್ನಬೇಕು.

ಅದೊಂದು ಭಾನುವಾರ ಎಂದಿನಂತೆ, ಪಕ್ಕದ ಬಾಳೆಹೊನ್ನೂರಿನಿಂದ ವೀಡಿಯೋ ಕ್ಯಾಸೆಟ್ ತಂದು ‘ರಂಗೀಲಾ’ ಸಿನಿಮಾ ತೋರಿಸುತ್ತಿದ್ದರು. ಹೇಳಿ ಕೇಳಿ ಭಾನುವಾರಗಳೆಂದರೆ ನಮ್ಮ ಪಾಲಿಗೆ ಕ್ರಿಕೆಟ್ ಮತ್ತು ಸಿನಿಮಾಗಳಿಗಾಗಿಯೇ ಮೀಸಲಾಗಿದ್ದ ದಿನಗಳಾಗಿದ್ದವು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕ್ರಿಕೆಟ್, ಮಧ್ಯಾಹ್ನದಿಂದ ಸಂಜೆಯವರೆಗೆ ಕ್ಯಾಸೆಟ್ ಸಿನಿಮಾ, ಸಂಜೆಯಿಂದ ರಾತ್ರಿಯವರೆಗೆ ಡಿಡಿ ಚಂದನದ ಕನ್ನಡ ಸಿನಿಮಾ., ಹೀಗೆ… ಹಲವೊಮ್ಮೆ ಮಳೆಯ ಕಾರಣ ಕರೆಂಟ್ ಮಧ್ಯೆ ಮಧ್ಯೆ ಕೈ ಕೊಟ್ಟು ಮಧ್ಯ ರಾತ್ರಿಯವರೆಗೂ ಸಿನಿಮಾ ಕ್ಯಾಸೆಟ್ ವೀಕ್ಷಣೆ ಮುಂದುವರೆಯುವುದೂ ಇತ್ತು. ಹೀಗಿರಲಾಗಿ ನಾವು ರಂಗೀಲಾ ಸಿನಿಮಾವನ್ನು ಹಿಂದೆ ಹಳ್ಳಿಗಾಡಿನಲ್ಲಿ ಹರಿಕಥೆ ನೋಡುತ್ತಲಿದ್ದ ಭಕ್ತರಷ್ಟೇ ವಿಧೇಯರಾಗಿ, ತದೇಕಚಿತ್ತರಾಗಿ ನೋಡುತ್ತಲಿದ್ದೆವು.

ಸರಿ, ಅಷ್ಟರಲ್ಲೇ ಊರ್ಮಿಳಾಳ “ತನ್ ಹ ತನ್ ಹ..” ಗೀತೆ ಆರಂಭವಾಯ್ತು. ಒಡನೆಯೇ ನಮ್ಮ ಸೀನಿಯರ್‌ಗಳು ಅದನ್ನು ಫಾಸ್ಟ್ ಫಾರ್ವರ್ಡ್ ಮಾಡಿಬಿಡಬೇಕೆ! ಕೇಳಿದರೆ, “ಅದನ್ನು ಮಕ್ಕಳು ನೋಡುವಂತಿಲ್ಲ” ಎಂಬ ಕಾರಣವನ್ನು ನೀಡಿದರು. ನಾವೋ ಸಿನಿಮಾ ನೋಡುವ ಭರದಲ್ಲಿ ಅದಕ್ಕೇನು ವಿಶೇಷ ಗಮನ ಕೊಡ ಹೋಗಲಿಲ್ಲ. ಗಮನ ಕೊಡಲು ಅದೇನು ನಮ್ಮ ನೆಚ್ಚಿನ ‘ಫೈಟ್ ಸೀನ್’ ಆಗಿರಲಿಲ್ಲವಲ್ಲ!

ಆದರೆ, ಗಮನ ಕೊಡುವಂತಾಗಿದ್ದು ಅಂದು ರಾತ್ರಿ ಊಟದ ನಂತರ ನಮ್ಮ ಗುರು ವೃಂದದವರು ಮತ್ತು ನಮ್ಮ ಸೀನಿಯರ್ ಗಳು ನಮ್ಮ ಪಾಲಿಗೆ ಡಾರ್ಮಿಟರಿಯಾಗಿ ಪರಿವರ್ತನೆಯಾಗಿದ್ದ ಶಾಲಾ ಮಲ್ಟಿಪರ್ಪಸ್ ಹಾಲ್‌ನ ಗ್ರೀನ್ ರೂಮ್ ಸೇರಿ, ಬಾಗಿಲು ಕಿಟಕಿಗಳನ್ನೆಲ್ಲಾ ಹಾಕಿಕೊಂಡು, ಯಾರಾದರೂ ಇಣುಕಿ ನೋಡಿದರೆಂದು ಸಂದುಗೊಂದುಗಳನ್ನೆಲ್ಲಾ ಮುಚ್ಚಿಕೊಂಡು ಮತ್ತೊಮ್ಮೆ ರಂಗೀಲಾ ಸಿನಿಮಾವನ್ನು ನೋಡಲಾರಂಭಿಸಿದಾಗಲೇ!

ಆದರೇನು ಮಾಡುವುದು!? ಮತ್ತೊಮ್ಮೆ ಸಿನಿಮಾ ನೋಡುವ ಅವಕಾಶ ನಮಗಿರಲಿಲ್ಲವಾಗಿ “ನಮಗೆ ಮಾತ್ರ ನೋಡುವ ಅವಕಾಶ ಇಲ್ಲವಲ್ಲ..” ಎಂದು ಸಣ್ಣದಾಗಿ ನೊಂದು ಸುಮ್ಮನಾದೆವು.

ನಾವೇನೋ ಸುಮ್ಮನಾದೆವು. ಆದರೆ ನಮ್ಮ ಸೀನಿಯರ್‌ಗಳು ಸುಮ್ಮನೆ ಬಿಡಬೇಕಲ್ಲ. ತಾವು ರಾತ್ರಿ ಇಡೀ ನೋಡಿದ ಊರ್ಮಿಳಾಳ “ತನ್ ಹ ತನ್ ಹ..” ಗೀತೆಯನ್ನೂ ಅವಳ ಕುಣಿತದ ಪರಿಯನ್ನೂ ಬಗೆ ಬಗೆಯಾಗಿ ವರ್ಣಿಸಲು ಬೆಳಗಿನಿಂದಲೇ ಶುರು ಹಚ್ಚಿಕೊಂಡಿದ್ದರು. ಆ ಮೂಲಕ ನಮ್ಮ ಮನದ ಮೂಲೆಯಲ್ಲೆಲ್ಲೋ “ಛೇ, ನಾವು ನೋಡಲಾಗಲಿಲ್ಲವಲ್ಲ..” ಎಂಬ ಅತೃಪ್ತಿ, ಅಸಂತುಷ್ಟತೆಯ ಕಿಡಿ ಹೊತ್ತಿಸಿದ್ದರು.

ಅದೂ ಸಾಲದೆಂಬಂತೆ ಬೆಳಗಿನ ತಿಂಡಿಯ ವೇಳೆಯಲ್ಲಿ ನಮ್ಮ ಬಾಬು ಸರ್ “ಈ ರಾಮ್ ಗೋಪಾಲ್ ವರ್ಮಾ ಬೀಚ್ ಸೀನ್‌ಗಳನ್ನ ಮಾತ್ರ ತುಂಬಾ ಚೆನ್ನಾಗಿ ಶೂಟ್ ಮಾಡ್ತಾನೆ.. ” ಎಂದು ನಮ್ಮೆದುರೆ ಇತರೆ ಗುರುವೃಂದದವರೊಡನೆ ಹರಟುತ್ತಾ “ತನ್ ಹ ತನ್ ಹ..”ದೆಡೆಗಿನ ನಮ್ಮ ಸೆಳೆತವನ್ನು ಮತ್ತಷ್ಟು ಹೆಚ್ಚಿಸಿ, ನಮ್ಮಲ್ಲಿ‌ ಈಗಾಗಲೇ ಹೊತ್ತಿದ್ದ ಅತೃಪ್ತಿ, ಅಸಂತುಷ್ಟತೆಯ ಕಿಡಿಗೆ ಗಾಳಿ ಬೀಸಿದ್ದರು.

ಅಷ್ಟರಲ್ಲೇ ಅಮಿತಾಬ್ ಬಚ್ಚನ್‌ನ ಎಬಿಸಿಎಲ್ ಕಂಪನಿಯಿಂದ ನಮ್ಮದೇ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸಲಾಗುತ್ತಿದೆಯೆಂದು ಪತ್ರಿಕೆಗಳಲ್ಲಿ ಓದಿದ್ದೆವು. ಅದೇನು ನಮಗೆ ಅಂತಹ ಆಸಕ್ತಿಕರ ವಿಷಯವಾಗಿರಲಿಲ್ಲ.

ನಮ್ಮ ಆಸಕ್ತಿ ಹೆಚ್ಚೆಂದರೆ; ”ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆ ಎಲ್ಲಿ ನಡೆಯಿತು?”

“ಈ ಬಾರಿಯ ವಿಶ್ವ ಸುಂದರಿ ಯಾರು? ಯಾವ ದೇಶದವಳು?” ಅದನ್ನು ಮೀರಿ, “ಆಯೋಜಿಸಿದ ಕಂಪನಿ ಯಾವುದು?” “ತೀರ್ಪುಗಾರನಾಗಿದ್ದ ಕ್ರಿಕೆಟಿಗ ಯಾರು?” ಎಂಬಂತಹ ಜ್ಞಾನಮಟ್ಟದ ಪ್ರಶ್ನೆಗಳಿಗಷ್ಟೇ ಸೀಮಿತವಾಗಿದುದಾಗಿತ್ತು. ಆದರೆ, ಈ ನಮ್ಮ ಜ್ಞಾನ ಮಟ್ಟದ ಆಸಕ್ತಿಯನ್ನು ತಿಳುವಳಿಕೆಯ ಮಟ್ಟಕ್ಕೆ, ಅದನ್ನು ಮೀರಿ ಅಭಿರುಚಿಯ ಮಟ್ಟಕ್ಕೆ ಕೊಂಡೊಯ್ದದ್ದು ಮತ್ತದೇ ಬಾಬು ಸರ್!

ಪಾಪ, ಅವರದೇನೂ ತಪ್ಪಿರಲಿಲ್ಲ. ಆಗಾಗ ತರಗತಿಯ ವಿದ್ಯಾರ್ಥಿಗಳನ್ನು ತಂಡಗಳಾಗಿ ಮಾಡಿ, ಕ್ವಿಝ್ ಸ್ಪರ್ಧೆ ನಡೆಸಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾವು ಅಪ್ ಡೇಟ್ ಆಗಲು ಪ್ರೋತ್ಸಾಹ ನೀಡುತ್ತಿದ್ದ ಬಾಬು ಸರ್ ಅಂದಿನ ಕ್ವಿಝ್ ನಲ್ಲಿ “ವಿಶ್ವ ಸುಂದರಿ ಸ್ಪರ್ಧೆ ಎಲ್ಲಿ ನಡೆಯುತ್ತದೆ?”, “ನಡೆಸುತ್ತಿರುವ ಕಂಪನಿ ಯಾವುದು?” ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರು. ನಮ್ಮಿಂದ ಬಂದ ಉತ್ತರಗಳಿಂದ ಸಂತುಷ್ಟರಾಗಿ, ಮೆಚ್ಚುಗೆ ಸೂಚಿಸುತ್ತಾ ನಮ್ಮ ಅಡಿಷನಲ್ ನಾಲೆಡ್ಜ್‌ಗಿರಲಿ ಎಂದು ‘ವಿಶ್ವ ಸುಂದರಿ ಸ್ಪರ್ಧೆಯ ಆಯೋಜನೆಯ ಬಗೆ, ಹಿನ್ನೆಲೆ, ಉದ್ದೇಶಗಳು, ಬಾಹ್ಯ ಸೌಂದರ್ಯಕ್ಕಿಂತ ಬುದ್ಧಿಮತ್ತೆ ಮತ್ತು ಮನೋಭಾವಗಳಿಗೆ ಕೊಡುವ ಆದ್ಯತೆ..’ ಹೀಗೆ ಜ್ಞಾನದ ದೃಷ್ಟಿಯಿಂದ ಸಾಕಷ್ಟು ವಿವರಗಳನ್ನು ನೀಡಿದ್ದರು.
ಅವರು ಜ್ಞಾನ ದೃಷ್ಟಿಯಿಂದ ನೀಡಿದ್ದ ವಿವರಗಳನ್ನು ನಾವೂ ಹಾಗೆಯೇ ಸ್ವೀಕರಿಸಿದ್ದೆವು.

ಹಾಗೆ ಸ್ವೀಕರಿಸಿ ಸುಮ್ಮನಿದ್ದರೆ ಆಗುತ್ತಿತ್ತೇನೋ., ಆದರೆ ನಾವು ಸುಮ್ಮನಿರುವವರಲ್ಲವಲ್ಲ!

ಬಾಬು ಸರ್‌ರ ಮಾತುಗಳಿಂದ ಪ್ರೇರಿತವಾಗಿದ್ದ ಈ ನಮ್ಮ ಸಹಜ ಜ್ಞಾನದಾಹದಿಂದಲೇ ವಿಶ್ವ ಸುಂದರಿ ಸ್ಪರ್ಧೆ ಟೀವಿಯಲ್ಲಿ ಲೈವ್ ಆಗುವ ದಿನದ ಸಂಜೆ ಪ್ರಾಂಶುಪಾಲರನ್ನು ಭೇಟಿ ಮಾಡಿ ಅಂದು ರಾತ್ರಿ ವಿಶ್ವ ಸುಂದರಿ ಸ್ಪರ್ಧೆಯನ್ನು ನೋಡಲು ಅವಕಾಶ ಮಾಡಿಕೊಡಿರೆಂದು ಸ್ವಾಭಾವಿಕವಾಗಿ ಕೇಳಿದೆವು!

ಅವರೋ ಅದನ್ನು ಕೇಳಿ ದಂಗಾದವರಂತಾಗಿ, ಸಖೇದಾಶ್ಚರ್ಯಗಳನ್ನು ಮುಖಭಾವದಲ್ಲಿ ಹೊರಸೂಸುತ್ತಾ, ನಾವೇನೋ ಮಹಾ ಅಚಾತುರ್ಯಕ್ಕೆ ಸಂಚು ಹೂಡಿ ಬಂದಿರುವೆವೇನೋ ಎಂಬಂತೆ ಕೋಪತಾಪ ಹೊರ ಹಾಕುತ್ತಾ ಬಿಲ್ಕುಲ್ ಅನುಮತಿ ನೀಡಲಾಗುವುದಿಲ್ಲವೆಂದರು.

ಪಾಪ ಮನದಲ್ಲಿ ”ಇಂತಹ ಕಿರಾತಕರೆಲ್ಲ ಶಾಲೆಗೆ ಸೇರಿ ಶಿಕ್ಷಣದ ಅವಸ್ಥೆ ಎಲ್ಲಿಗೆ ಬಂತು!” ಎಂದು ಮರುಗಿರಲೂಬಹುದು!

ಹಾಗೆಂದು ನಾವು ಸುಮ್ಮನಿರಲಾದೀತೆ!

ನಾವುಗಳೋ ಬಾಬು ಸರ್‌ರಿಂದ ಕೇಳಲ್ಪಟ್ಟಂತೆ ನಮ್ಮ ಜಿ.ಕೆ ಇಂಪ್ರೂವ್ ಮಾಡಿಕೊಳ್ಳಲು ಇರುವ ಅವಕಾಶದ ಸದುಪಯೋಗಪಡಿಸಿಕೊಳ್ಳುವುದು ಅದೆಷ್ಟು ಮಹತ್ವದೆಂದೂ ಮುಂದೆ ನಾವು ಬರೆಯಲಿರುವ ಐಎಎಸ್‌ ಐಪಿಎಸ್ ನಂತಹ ಪರೀಕ್ಷೆಗಳಲ್ಲೆಲ್ಲಾ ಈ ಬಗ್ಗೆ ಪ್ರಶ್ನೆಗಳು ಬರಬಹುದೆಂದೂ ತಿಳಿಹೇಳ ಹೊರಟೆವು.

ಈ ನಮ್ಮ ತಿಳಿಹೇಳುವಿಕೆ ಅವರಿಗೆ ಅಧಿಕ ಪ್ರಸಂಗದಂತೆ ಕಂಡು ಅವರ ಕೋಪ‌ ಏರುವಿಕೆಗೆ ಕಾರಣವಾಯಿತೆ ವಿನಾ ಕಿಂಚಿತ್ತೂ ಕನಿಕರ ಹುಟ್ಟುವಿಕೆಗೆ ಕಾರಣವಾಗಲಿಲ್ಲ.

ಇನ್ನೇನು ಮಾಡುವುದು, ನ್ಯಾಯಬದ್ಧ ಬೇಡಿಕೆಯ ಸಾಕಾರಕ್ಕೆ ಗಾಂಧಿ ಮಾರ್ಗ ಅನುಸರಿಸ ಹೊರಟೆವು. ಉಪವಾಸ ಸತ್ಯಾಗ್ರಹದ ಬೆದರಿಕೆಯ ಬಾಂಬ್ ಹಾಕಿದೆವು.

ಇದರಿಂದಾಗಿ ‘ಗಾಂಧಿತನ’ವನ್ನು ತೊರೆಯುವುದವಕ್ಕಾಗಿ ‘ಗಾಂಧಿ ಮಾರ್ಗ!’ ಅನುಸರಿಸ ಹೊರಟ ಮಹನೀಯರಾಗಿ ನಾವು ಗೋಚರಿಸಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಇದರಿಂದ ಪ್ರಾಂಶುಪಾಲರ ಕೋಪದ ಕಟ್ಟೆ ಹೊಡೆದು, ಉಕ್ಕಿ ಬಂದ ಮಾತುಗಳ ಪ್ರವಾಹ ನಮ್ಮ ಬೆದರಿಕೆಯ ಬಾಂಬನ್ನು ಟುಸ್ ಪಟಾಕಿಯನ್ನಾಗಿಸಿತ್ತು!

ಇನ್ನೇನು ತಾನೇ ಮಾಡಲು ಸಾಧ್ಯ!

ಸಹಜವಾಗಿಯೇ ಇಳಿ ಮೋರೆ ಹಾಕಿಕೊಂಡು ಊಟದ ಹಾಲ್ ನೆಡೆಗೆ ಹೊರಟೆವು. ಇದರಿಂದ ನಾವು ಬೇಸರಿಸಿಕೊಂಡಿದ್ದೆವು ಎನ್ನುವುದಕ್ಕಿಂತ ಅಕ್ಷರಶಃ ಶೋಕತಪ್ತರಾಗಿದ್ದೆವು ಎನ್ನುವುದೇ ಸೂಕ್ತವೇನೋ!

ಈ ನಮ್ಮ ಶೋಕತಪ್ತತೆಯು ಸಹಜವಾಗಿಯೇ ಕಡಿಮೆಯಾಗುತ್ತಿತ್ತೇನೋ. ಆದರೆ, ಹಾಗಾಗಲು ಬಿಡದಂತ ತೀರ್ಮಾನವನ್ನು ನಮ್ಮ ಪ್ರಾಂಶುಪಾಲರೇ ತೆಗೆದುಕೊಂಡಿದ್ದರು. ನಮಗೆ ಅನುಮತಿಯನ್ನು ನಿರಾಕರಿಸಿದವರು ಹನ್ನೊಂದು ಹನ್ನೆರಡನೇ ತರಗತಿಯ ಹುಡುಗರಿಗಾದರೋ ತಮ್ಮ ನಿರಾಕರಣೆಯನ್ನು ಪ್ರದರ್ಶಿಸಿರಲಿಲ್ಲ. ಅದರ ಫಲವಾಗಿ ಅವರು ರಾತ್ರಿ ಊಟದ ನಂತರ ಗುರು ವೃಂದದವರೊಡನೆ ಮತ್ತದೇ ಗ್ರೀನ್ ರೂಮ್ ಸೇರಿ, ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿ, ಸಂದುಗೊಂದುಗಳಿಗೆಲ್ಲಾ ಮುಚ್ಚಿಕೆ ಹಾಕಿಕೊಂಡು ವಿಶ್ವ ಸುಂದರಿಯರ ದರ್ಶನ ಪಡೆಯತೊಡಗಿದ್ದರು.

ಸಾಲದೆಂಬಂತೆ ಬೆಳ ಬೆಳಿಗ್ಗೆಯೇ ಆ ದರ್ಶನದ ವಿವರಗಳನ್ನೆಲ್ಲಾ ನಮ್ಮ ಮುಂದೆ ವರ್ಣಿಸಲು ಬರಬೇಕೆ! ಚುನಾವಣೆಯಲ್ಲಿ ಹೀನಾಯವಾಗಿ ಸೋತವನೆದುರೆ ಗೆದ್ದವನು ಬಂದು ತಾನು ಹೇಗೆಲ್ಲಾ ಗೆದ್ದೆ ಎಂದು ವಿವರಿಸತೊಡಗಿದರೆ ಹೇಗಾಗಬೇಡ. ಅಂತಹ ಸ್ಥಿತಿಯೇ ನಮ್ಮದೂ ಆಗಿತ್ತು!

ಆದರೂ ಅದನ್ನು ತೋರುಗೊಡದೆ “ಅದೇನು ಅಂತಹ ಆಸಕ್ತಿಕರ ವಿಷಯವೇ ಅಲ್ಲ” ಎಂಬಂತೆ ಮಾತನಾಡುತ್ತಾ, ಹೇಳ ಬಂದವರ ಉತ್ಸಾಹ ಭಂಗಗೊಳಿಸಿ ಸಮಾಧಾನ ಪಟ್ಟುಕೊಂಡೆವು. ಆದರೂ ನಮ್ಮಲ್ಲಿನ ಅತೃಪ್ತಿ, ಅಸಂತುಷ್ಟತೆಯ ಕಿಡಿ ಬೆಂಕಿಯಾಗಿ ಉರಿಯಲಾರಂಭಿಸಿದ್ದು ಮಾತ್ರ ಸುಳ್ಳಲ್ಲ.

ಇನ್ನೂ ಈ ನಮ್ಮ ಪರಿತಾಪ, ಯಾತನೆಗಳಿಗೆ ಕೊನೆ ಎಂಬುದೇ ಇರಲಿಲ್ಲವೇನೋ!

ಅದೂ ಸಾಲದೆಂಬಂತೆ ಬೆಳಗಿನ ತಿಂಡಿಯ ವೇಳೆಯಲ್ಲಿ ನಮ್ಮ ಬಾಬು ಸರ್ “ಈ ರಾಮ್ ಗೋಪಾಲ್ ವರ್ಮಾ ಬೀಚ್ ಸೀನ್‌ಗಳನ್ನ ಮಾತ್ರ ತುಂಬಾ ಚೆನ್ನಾಗಿ ಶೂಟ್ ಮಾಡ್ತಾನೆ.. ” ಎಂದು ನಮ್ಮೆದುರೆ ಇತರೆ ಗುರುವೃಂದದವರೊಡನೆ ಹರಟುತ್ತಾ “ತನ್ ಹ ತನ್ ಹ..”ದೆಡೆಗಿನ ನಮ್ಮ ಸೆಳೆತವನ್ನು ಮತ್ತಷ್ಟು ಹೆಚ್ಚಿಸಿ, ನಮ್ಮಲ್ಲಿ‌ ಈಗಾಗಲೇ ಹೊತ್ತಿದ್ದ ಅತೃಪ್ತಿ, ಅಸಂತುಷ್ಟತೆಯ ಕಿಡಿಗೆ ಗಾಳಿ ಬೀಸಿದ್ದರು.

ಹೀಗೆಯೇ ಒಂದು ಭಾನುವಾರ ತಂದ ವೀಡಿಯೋ ಕ್ಯಾಸೆಟ್ಟನ್ನು ನೋಡಿ ಮುಗಿಸಿ, ಸಂಜೆಯ ವೇಳೆಗೆ ಡಿಡಿ ಚಂದನದಲ್ಲಿ ಪ್ರಸಾರವಾಗುತ್ತಿದ್ದ ರವಿಚಂದ್ರನ್‌ ಅಭಿನಯದ “ಅಣ್ಣಯ್ಯ” ಸಿನಿಮಾವನ್ನು ಪಾಪ ಪುಣ್ಯ ಏನೂ ಅರಿಯದವರಂತೆ ನೋಡುತ್ತಾ ಕುಳಿತಿದ್ದೆವು. ಎಂದಿನಂತೆ ಹುಡುಗಿಯರೂ ಇದ್ದರಲ್ಲದೆ ಆ ಹುಡುಗಿಯರನ್ನು ಕಾಯುವ ಜವಾಬ್ದಾರಿಯ ಸಲುವಾಗಿಯೇ ಒಂದಿಬ್ಬರು ಸಿನಿಮಾ ಆಸಕ್ತಿ ಇರದ, ಕನ್ನಡ ಬಾರದ ಶಿಕ್ಷಕಿಯರೂ ಇದ್ದರು.

ನಾವು ಎಷ್ಟಾದರೂ ಅಮ್ಮಂದಿರಿಂದ ದೂರವಿದ್ದ ಹುಡುಗರಲ್ಲವೇ “ಅಣ್ಣಯ್ಯ ಅಣ್ಣಯ್ಯ ಬಾರೋ..” ಹಾಡ ಕೇಳಿ “ಅಮ್ಮಯ್ಯ ಅಮ್ಮಯ್ಯ ಬಾರೇ..” ಎಂದು ಮನದಲ್ಲೆಣಿಸುತ್ತಾ ಭಾವುಕರಾಗಿದ್ದೆವು. ಈ ಭಾವುಕತೆ ಹೆಚ್ಚಾಗಿ ಕಣ್ಣೀರಾದವರೂ ಇದ್ದರು. ಆ ನಡುವೆಯೇ ಧುತ್ತೆಂದು “ರಾಗಿ ಹೊಲದಾಗೆ ಭಾರಿ ಗುಡಿಸಲು..” ಹಾಡು ಬಂದು ಬಿಡಬೇಕೆ!

ಅಲ್ಲಿಯವರೆಗೂ ಬಿಟ್ಟ ಕಣ್ಣು ಬಿಟ್ಟ ಹಾಗೆ, ಟೀವಿಯ ಒಳಗೆ ಹೊಕ್ಕವರಂತೆ, ತಮ್ಮನ್ನೇ ಮರೆತವರಂತೆ ಸಿನಿಮಾ ನೋಡುತ್ತಿದ್ದ ಹುಡುಗಿಯರೋ ತಲೆ ತಗ್ಗಿಸುತ್ತಾ, ಕಣ್ಣು ಮುಚ್ಚುತ್ತಾ, ಆ ರವಿಚಂದ್ರ ಮಧುಬಾಲಾಳನ್ನಲ್ಲದೇ ಇವರನ್ನೇ ರಮಿಸ ಬಂದನೋ ಎಂಬಷ್ಟು ಇರುಸುಮುರುಸಾದವರಂತೆ ಆಡಿಬಿಡಬೇಕೆ!

ಇನ್ನು ನಾವೋ ಹುಡುಗಿಯರ ಈ ಇರುಸುಮುರುಸುವಿಕೆಯನ್ನು ಗಮನಿಸಿಯೂ ಗಮನಿಸದವರಂತೆ ಗಮನಿಸುತ್ತಲೇ ಗುಡಿಸಲ ಗೀತೆಯನ್ನಾಗಲಿ, ಶಿಕ್ಷಕಿಯರ ಕಣ್ಣು ಕೆಂಪಾದುದನ್ನಾಗಲಿ ಗಮನಿಸುವ ಗೋಜಿಗೇ ಹೋಗಿರಲಿಲ್ಲ.

ಸರಿ, ಕನ್ನಡ ಬಾರದ ಪುಣ್ಯಾತಗಿತ್ತಿ ಶಿಕ್ಷಕಿಯರು ಕನ್ನಡ ಬಾರದ ಪ್ರಾಂಶುಪಾಲರಿಗೆ ರವಿಚಂದ್ರನ ರಮಿಸುವಿಕೆಯನ್ನು ಅದ್ಯಾವ ರೇಂಜಿಗೆ ವರ್ಣಿಸಿ ದೂರಿತ್ತರೋ ಗೊತ್ತಿಲ್ಲ; ಕನ್ನಡ ಸಿನಿಮಾಗಳು ನಮ್ಮ ಪಾಲಿಗೆ ಶಾಶ್ವತವಾಗಿ ಬ್ಯಾನ್ ಆಗಿ ಬಿಟ್ಟಿದ್ದವು!

ಅದಷ್ಟೇ ಆಗಿದ್ದರೆ ಸಹಿಸಿ ಸಮಾಧಾನಿತರಾಗಿ ಬಿಡುತ್ತಿದ್ದೆವೇನೋ. ಆದರೆ, ಅದರ ಜೊತೆಗೆ ಹುಡುಗಿಯರಿಗಾಗಿಯೇ ಹೊಸದೊಂದು ಟೀವಿ ಶಾಲೆ ಪ್ರವೇಶಿಸಿ, ಮೆಸ್ ಹಾಲ್‌ನಲ್ಲಿ ಸ್ಥಾನ ಅಲಂಕರಿಸಿ, ಹುಡುಗ ಹುಡುಗಿಯರು ಒಂದೇ ಹಾಲ್‌ನಲ್ಲಿ ಕುಳಿತು ಸಿನಿಮಾ ನೋಡುವುದನ್ನೂ ಬ್ಯಾನ್ ಆಗಿಸಿತ್ತು! ಇದರಿಂದಾಗಿ ಕೆಲ ತಿಂಗಳುಗಳ ಹಿಂದಷ್ಟೇ ಸೀನಿಯರ್‌ಗಳಾಗಿ ಊಟದ ಸಮಯದಲ್ಲಿ ತಮ್ಮ ಜೂನಿಯರ್ ಮನದನ್ನೆಯರನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದ ಕೆಲವರಿಗೆ ಇದ್ದ ಸೀಮಿತ ಅವಕಾಶ ಒಂದನ್ನೂ ಕಿತ್ತುಕೊಂಡಿತ್ತು.

ಅಷ್ಟೇ ಅಲ್ಲದೇ ಕಟ್ಟು ನಿಟ್ಟಿನ ಸೆನ್ಸಾರ್ ಜಾರಿಗೆ ತರುವ ಸಲುವಾಗಿ ಹುಡುಗರು ಬಾಳೆಹೊನ್ನೂರಿಗೆ ಹೋಗಿ ವೀಡಿಯೋ ಕ್ಯಾಸೆಟ್ ತರುವ ಪದ್ಧತಿಗೆ ಬ್ರೇಕ್ ಹಾಕಿ, ಶಿಕ್ಷಕರುಗಳೇ ಖುದ್ದು ಹೋಗಿ ಮಕ್ಕಳು ನೋಡಬಹುದಾದ ಇಂಗ್ಲಿಷ್ ಭಾಷೆಯ ಸಿನಿಮಾ ಕ್ಯಾಸೆಟ್‌ಗಳನ್ನು ಮಾತ್ರವೇ ತಂದು ತೋರಿಸಬೇಕೆಂದು ಪ್ರಾಂಶುಪಾಲರ ಕಟ್ಟಾಜ್ಞೆಯಾಗಿತ್ತು!

ಈ ಕಟ್ಟಾಜ್ಞೆಯನ್ನು ಸುಲಭವಾಗಿ ಒಪ್ಪಲೊಲ್ಲದ ನಾವುಗಳು ನಮ್ಮ ಪ್ರತಿಭಟನೆಯನ್ನು ದಾಖಲಿಸಿ ಕನ್ನಡದ ಪರವಾಗಿ ವಾಟಾಳರ ಧಾಟಿಯಲ್ಲಿ ಹೋರಾಡಬೇಕೆಂದುಕೊಂಡೆವು. ಆದರೆ, ಅದು ನಮ್ಮ ಪ್ರಾಂಶುಪಾಲರ ಮುಂದೆ ಕಾರ್ಯಸಾಧುವಲ್ಲವೆಂದು ಅಂದಾಜಿಸಿ ಅವರ ಕಟ್ಟಾಜ್ಞೆಗೆ ಒಪ್ಪಿಗೆ ಸೂಚಿಸುತ್ತಲೇ ಇಂಗ್ಲಿಷ್ ಸಿನಿಮಾಗಳ ಜೊತೆಗೆ ಅಕ್ಷಯ್ ಕುಮಾರ್, ಅಜಯ್ ದೇವಗನ್‌ರ ಆ್ಯಕ್ಷನ್ ಸಿನಿಮಾಗಳನ್ನಾದರೂ ತೋರಿಸಬೇಕೆಂದು ಉಚಿತ ಸಲಹೆ ನೀಡಹೋದೆವು.

ಅವರೋ “ಪ್ರತಿವಾರ ಸಿನಿಮಾ ನೋಡಲೇಬೇಕೆಂದಿರುವುದಾದರೂ ಏನು?” ಎಂಬ ತಮ್ಮ ಏಕೈಕ ಪ್ರಶ್ನೆಯಿಂದಲೇ ನಮ್ಮೆಲ್ಲಾ ಅಭೂತಪೂರ್ವ ಸಲಹೆಗಳ ಓಘಕ್ಕೆ ಬ್ರೇಕ್ ಹಾಕಿ ಬಿಟ್ಟಿದ್ದರು!

*****

ಸರಿ, ಮುಂದಿನ ಕೆಲ ತಿಂಗಳುಗಳ ಕಾಲ ಶಿಕ್ಷಕರುಗಳೇ ಬಾಳೆಹೊನ್ನೂರಿಗೆ ಹೋಗಿ ಕ್ಯಾಸೆಟ್ ತಂದು ಸಿನಿಮಾ ತೋರಿಸಲಾರಂಭಿಸಿದ್ದರು. ಅವರು ತಂದು ತೋರಿಸುತ್ತಿದ್ದ ಜುರಾಸಿಕ್‌ ಪಾರ್ಕ್‌, ಇಂಡಿಪೆಂಡೆನ್ಸ್ ಡೇ, ಬೇಬಿಸ್ ಡೇ ಔಟ್, ಹೂ ಆ್ಯಮ್ ಐ, ರಷ್ ಅವರ್, ಸ್ಪೀಡ್‌ಗಳಂತಹ ಸಿನಿಮಾಗಳನ್ನು ಖುಷಿಯಿಂದಲೇ ನೋಡಿ ಆನಂದಿಸುವುದನ್ನು ನಾವು ರೂಢಿಸಿಕೊಂಡಿದ್ದೆವು.

ಆದರೆ ಕಾಲಾಂತರದಲ್ಲಿ ಈ ಕ್ಯಾಸೆಟ್ ತರುವ ಕೆಲಸ ಶಿಕ್ಷಕರಿಗೆ ಸಾಕು ಸಾಕೆನಿಸಿತ್ತು. ಹಾಗಾಗಿಯೇ ಈ ಕ್ಯಾಸೆಟ್ ತರುವ ಜವಾಬ್ದಾರಿಯನ್ನು ಆ ವೇಳೆಗೆ ಹನ್ನೊಂದನೇ ತರಗತಿಯಲ್ಲಿದ್ದ ನಮ್ಮ ಬ್ಯಾಚ್‌ನವರ ಹೆಗಲಿಗೇರಿಸಿ, ತಂದ ಕ್ಯಾಸೆಟ್ ಅನ್ನು ನೋಡಬಹುದೋ ಬೇಡವೋ ಎಂದು ಹೇಳುವ ಸೆನ್ಸಾರ್ ಶಿಪ್‌ನ ಜವಾಬ್ದಾರಿಯನ್ನಷ್ಟೇ ಅವರು ಇಟ್ಟುಕೊಂಡಿದ್ದರು.

ಇನ್ನೂ ನಾವುಗಳು ಕ್ಯಾಸೆಟ್ ತರಲು ಬಾಳೆಹೊನ್ನೂರಿಗೆ ಹೋಗುವವರ ಮುಂದೆ ಈಗಾಗಲೇ ನೋಡಿ ಅಥವಾ ಕೇಳಿ ತಿಳಿದಿರುವ, ಇಲ್ಲವೇ ಪತ್ರಿಕೆಗಳಲ್ಲಿ ಓದಿರುವ ಸಿನಿಮಾಗಳ ಹೆಸರುಗಳನ್ನೆಲ್ಲಾ ಚರ್ಚಿಸಿ “ಅದು ಸಿಗದಿದ್ದರೆ ಇದು., ಇದು ಸಿಗದಿದ್ದರೆ ಅದು” ಎಂದು ಆದ್ಯತಾ ಪಟ್ಟಿ ತಯಾರಿಸಿ, ಲಭ್ಯತೆಯ ಆಧಾರದ ಮೇಲೆ ಕ್ಯಾಸೆಟ್ ತರಿಸುತ್ತಿದ್ದೆವು.

ಹೀಗಿರಲಾಗಿ ಅದೊಂದು ಭಾನುವಾರ ಗೆಳೆಯ ಸುಧೀರ ಬಹುಜನರ ಅಪೇಕ್ಷೆಯ ಮೇರೆಗೆ ಎಂಬಂತೆ, ನಮ್ಮ ಆದ್ಯತಾ ಪಟ್ಟಿಯಲ್ಲಿ ಮೊದಲ ಹೆಸರಿದ್ದ “ಟೈಟಾನಿಕ್” ಸಿನಿಮಾದ ಕ್ಯಾಸೆಟ್ ಹೊತ್ತು ತಂದಿದ್ದ! ಬಹುಜನರ ಈ ಏಕಮುಖ ಅಪೇಕ್ಷೆಗೆ ಈ ಸಿನಿಮಾದ ಬಗ್ಗೆ ನಾವು ಓದಿದ್ದ ಬಹುಮೆಚ್ಚುಗೆಯ ವಿಮರ್ಶೆಗಳು, ಆಸ್ಕರ್ ಮೇಲೆ ಆಸ್ಕರ್ ಪಡೆದ ಸುದ್ದಿಗಳು ಒಂದಷ್ಟು ಕಾರಣವಾದರೆ ಟೈಟಾನಿಕ್ ಹಡಗು ಮುಳುಗಡೆಯ ಬಗ್ಗೆ “ಸಿಂಕಿಂಗ್ ಆಫ್ ದ ಟೈಟಾನಿಕ್” ಹೆಸರಿನಲ್ಲಿ ನಾವು ಬಹುವಿವರವಾಗಿ ಓದಿದ್ದ ಪಾಠವು ಮುಖ್ಯ ಕಾರಣವಾಗಿತ್ತು. ಆದ್ದರಿಂದಲೇ “ಟೈಟಾನಿಕ್” ಕ್ಯಾಸೆಟ್ ತಂದಾಗ ಜನ ಮೊದಲ ಬಾರಿಗೆ ಟೈಟಾನಿಕ್ ಹಡಗಿನ ಒಳಹೊಕ್ಕು, ಅದರ ವೈಭವಗಳನ್ನು ಕಂಡು ಹರ್ಷೋದ್ಘಾರ ಹೊರಹಾಕಿದಂತೆ ಕ್ಯಾಸೆಟ್ ಹಿಡಿದವನ ಸುತ್ತ ನಾವುಗಳು ಕುಣಿಯುತ್ತಾ, ಮುಗಿಲು ಮುಟ್ಟುವಂತೆ ಕೇಕೆ ಹಾಕುತ್ತಾ ಸಂಭ್ರಮಿಸಿದ್ದೆವು.

ಈ ಸಂಭ್ರಮದಲ್ಲಿಯೇ ಓಡೋಡುತ್ತಾ ಮಲ್ಟಿ ಪರ್ಪಸ್ ಹಾಲ್ ತಲುಪಿ ವೀಡಿಯೋ ಕ್ಯಾಸೆಟ್ ಪ್ಲೇಯರ್ ಪಡೆಯುವ ಸಲುವಾಗಿ ಸೆನ್ಸಾರ್ ಮಂಡಳಿಯ ಮುಂದೆ ಕ್ಯಾಸೆಟ್ ಹಿಡಿದು ನಿಂತಿದ್ದೆವು. ಸೆನ್ಸಾರ್ ಮಂಡಳಿಯವರೋ “ಟೈಟಾನಿಕ್” ಹೆಸರು ಕೇಳುತ್ತಿದ್ದಂತೆ ಕ್ಯಾಸೆಟ್‌ನತ್ತ ತಿರುಗಿಯೂ ನೋಡದೆ ರಿಜೆಕ್ಟ್ ಮಾಡಿಬಿಡಬೇಕೆ!

“ಸಿಂಕಿಂಗ್ ಆಫ್ ದ ಟೈಟಾನಿಕ್” ಪಾಠದಲ್ಲಿ ಓದಿದ್ದ ಹಡಗು ಮುಳುಗಿದ ಚರಿತ್ರೆಯ ವಿಚಾರಗಳನ್ನೊರತು ಪಡಿಸಿ ಸಿನಿಮಾದ ಮತ್ತ್ಯಾವ ಆಳ ಅಗಲಗಳನ್ನು ಅರಿಯದ ನಾವು ಈ ಪ್ರತಿಕ್ರಿಯೆಯಿಂದ ‘ಶಾಕ್’ ಆದವರಂತಾದೆವು.

ಸಾವರಿಸಿಕೊಂಡು, ಮುಳುಗುವ ಹಡಗಿನ ಬಗೆಗಿನ ಇಂಗ್ಲಿಷ್ ಪಾಠವನ್ನೇ ಮೂಲ ಆಸರೆಯನ್ನಾಗಿಟ್ಟುಕೊಂಡು ಮುಳುಗಲಿದ್ದ ನಮ್ಮ ‘ಟೈಟಾನಿಕ್ ನೋಡುವ ಒತ್ತಾಸೆಯ ಹಡಗಿ’ನ ಪರವಾಗಿ ವಾದ ಮಂಡಿಸ ಹೊರಟೆವು. ಸಾಲದೆಂಬಂತೆ, ಅಲ್ಲಿಯೇ ಇದ್ದ ಇಂಗ್ಲಿಷ್ ಸರ್ ರತ್ತ ನಮ್ಮ ಪರವಾಗಿ ವಕಾಲತ್ತು ವಹಿಸಿ ಮುಳುಗಲಿರುವ ನಮ್ಮ ‘ಒತ್ತಾಸೆಯ ಹಡಗ’ನ್ನು ರಕ್ಷಿಸಿ, ದಡ ಸೇರಿಸಬಲ್ಲರೆಂಬ ನಿರೀಕ್ಷೆಯ ಕಂಗಳಿಂದ ನೋಡಿದೆವು.

ಆದರೆ ಅವರೋ ಅದಕ್ಕೆ ವ್ಯತಿರಿಕ್ತವಾಗಿ, ನಮ್ಮೆಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡುವಂತೆ, ನಮ್ಮ ಪರ ವಕಾಲತ್ತು ವಹಿಸುವಿಕೆಯ ಆಫರ್ ಅನ್ನು ತಿರಸ್ಕರಿಸಿದ್ದಲ್ಲದೇ ತಾವೇ ಜಡ್ಜ್ ಸ್ಥಾನವನ್ನು ಅಲಂಕರಿಸಿ ‘ಅದು ತಾನು ಕಲಿಸಿದ ಪಾಠದ ಚರಿತ್ರೆಯ ಅಂಶಗಳನ್ನು ಕೇವಲ ಬ್ಯಾಕ್ ಗ್ರೌಂಡ್ ಆಗಿ ಬಳಸಿಕೊಂಡಿರುವ ಕಾಲ್ಪನಿಕ ಪ್ರೇಮ ಕಥೆಯ ಸಿನಿಮಾವೆಂದೂ ಅಲ್ಲದೇ ಅದು ನಮ್ಮಂತಹ ಮಕ್ಕಳು ನೋಡಬಾರದ ಕಂಟೆಂಟ್‌ಗಳನ್ನೊಳಗೊಂಡ ‘ಎ’ ಸರ್ಟಿಫಿಕೇಟ್ ಸಿನಿಮಾವೆಂದೂ’ ಒಂದೇ ಉಸಿರಿನಲ್ಲಿ ಜಡ್ಜ್ ಮೆಂಟ್ ನೀಡಿ ಮುಳುಗುವ ಮುನ್ನ ಒಂದಷ್ಟು ಹೊತ್ತಾದರೂ ತೇಲಾಡಬಹುದಾಗಿದ್ದ ನಮ್ಮ ಟೈಟಾನಿಕ್ ನೋಡುವ ‘ಒತ್ತಾಸೆಯ ಹಡಗ’ನ್ನು ಕ್ಷಣಮಾತ್ರದಲ್ಲಿ ಎಂಬಂತೆ ಸಂಪೂರ್ಣ ಮುಳುಗಿಸಿಬಿಟ್ಟಿದ್ದರು.

ಮುಂದುವರೆದು, ತಂದಿರುವ ಕ್ಯಾಸೆಟ್‌ಅನ್ನು ಅಲ್ಲಿಯೇ ಬಿಟ್ಟು ಹೋಗಿರೆಂದೂ ಬೇಕೆನಿಸಿದರೆ ಬೇರೊಂದು ಕ್ಯಾಸೆಟ್ ತಂದು ನೋಡಿರೆಂದೂ ತಿಳಿಸಿ ಸೆನ್ಸಾರ್ ಮಂಡಳಿಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ವಿಷಯಕ್ಕೆ ಇತಿಶ್ರೀ ಹಾಡಿದ್ದರು.

ನಾವುಗಳೋ ಅವರು ಹೇಳಿದಂತೆ ಕ್ಯಾಸೆಟ್ಟನ್ನು ಅಲ್ಲಿಯೇ ಬಿಟ್ಟು ಬಂದೆವಾದರೂ ನಮಗಾದ ಉತ್ಸಾಹ ಭಂಗ, ವ್ಯಾಕುಲತೆ, ವಿಷಣ್ಣತೆಗಳಿಂದಾಗಿ ಬೇರೊಂದು ಕ್ಯಾಸೆಟ್ಟನ್ನು ತಂದು ನೋಡುವುದಿರಲಿ ಜೀವನದಲ್ಲೇ ಮತ್ತೆಂದೂ ಮತ್ತ್ಯಾವ ಕ್ಯಾಸೆಟ್‌ಗಳನ್ನು ತಂದು ನೋಡಬಾರದು ಎಂಬಷ್ಟರ ಮಟ್ಟಿಗೆ ನಿರುತ್ಸಾಹಿಗಳಾಗಿ ಬಿಟ್ಟಿದ್ದೆವು.

ಈ ನಮ್ಮ ನಿರುತ್ಸಾಹವೂ ಕಡಿಮೆಯಾಗುತ್ತಿತ್ತೇನೋ. ಆದರೆ, ನಮ್ಮ ನಿರುತ್ಸಾಹದ ಆಳ ಅಗಲಗಳನ್ನು ಮತ್ತಷ್ಟು ವಿಸ್ತರಿಸಲು ಪಣ ತೊಟ್ಟಂತಿದ್ದ ನಮ್ಮ ಗುರು ವೃಂದದವರು ಊಟದ ನಂತರ ಮತ್ತದೇ ಗ್ರೀನ್ ರೂಮ್ ಸೇರಿ, ಬಾಗಿಲು ಕಿಟಕಿಗಳನ್ನು ಹಾಕಿ, ಸಂದುಗೊಂದುಗಳನ್ನೆಲ್ಲಾ ಮುಚ್ಚಿ “ಟೈಟಾನಿಕ್ ಯಾತ್ರೆ” ಆರಂಭಿಸಿಬಿಟ್ಟಿದ್ದರು. ಇದರಿಂದ ನಮಗಾದ ಆಘಾತ ಆ ಟೈಟಾನಿಕ್ ಹಡಗು ಮುಳುಗಲಿದೆಯೆಂಬುದನ್ನು ಕೇಳಿ ಅದರೊಳಗಿದ್ದ ಪ್ರಯಾಣಿಕರಿಗಾದ ಆಘಾತವನ್ನೂ ಮೀರಿಸುವಂತಿತ್ತು.

ಇನ್ನೂ ಆಂತರ್ಯದಲ್ಲಿ ಅಡಗಿ ಕುಳಿತಿದ್ದ ಅತೃಪ್ತಿ, ಅಸಂತುಷ್ಟತೆಗಳ ಕಾವು ದಾವಾಗ್ನಿಯಾಗಿ ಭುಗಿಲೆದ್ದಿತ್ತು. ಅಲ್ಲದೇ, “ಈ ‘ಎ’ ಸರ್ಟಿಫಿಕೇಟ್ ಸಿನಿಮಾ ಎಂದರೆ ಹೇಗಿರುತ್ತೆ? ನೋಡಿಯೇ ಬಿಡಬೇಕು!” ಎಂಬ ಬಯಕೆಯ ಬೀಜ ಆ ಕ್ಷಣದಲ್ಲಿಯೇ ಹಲವರ ಎದೆಯ ಭೂಮಿಯೊಳಗೆ ಬಿತ್ತನೆಯಾಗಿ ಬಿಟ್ಟಿತ್ತು!

*****

ಹೀಗಿರಲಾಗಿ, ಸ್ಕೌಟ್ ಕ್ಯಾಂಪ್ ಒಂದರಲ್ಲಿ ಭಾಗವಹಿಸಲೆಂದು ದೊಡ್ಡಬಳ್ಳಾಪುರದ ಬೇಸಂಟ್ ಪಾರ್ಕ್‌ಗೆ ಹೋಗಿದ್ದೆವು. ಹಿಂದಿರುಗಿ ಬರುವಾಗ ಬೆಂಗಳೂರಿನಲ್ಲೊಂದು ಬಿಡುವು ಪಡೆದುಕೊಂಡೆವು.

ಹೀಗೆ ಸ್ಕೌಟ್ ಕ್ಯಾಂಪ್‌ಗಳಿಗೆಂದೋ ಸ್ಪೋರ್ಟ್ಸ್ ಮೀಟ್‌ಗಳಿಗೆಂದೋ ಬೆಂಗಳೂರಿಗೆ ಬಂದರೆ ಬಿಡುವು ಪಡೆದು ಕೊಳ್ಳುವುದು ನಮಗೆ ಸಾಮಾನ್ಯವಾಗಿತ್ತು. ನಮ್ಮನ್ನು ಕರೆದುಕೊಂಡು ಬಂದ ಶಿಕ್ಷಕರು ಕೆಂಪೇಗೌಡ ಬಸ್ ಸ್ಟ್ಯಾಂಡ್‌ನ ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಇಷ್ಟು ಗಂಟೆಗೆ ಸರಿಯಾಗಿ ಇಲ್ಲಿಯೇ ಮರಳಿರಬೇಕೆಂಬ ಸೂಚನೆ ನೀಡಿ, ಕೊಯ್ಲು ಮುಗಿದ ನಂತರ ದನಗಳನ್ನು ಹಡದಿ ಬಿಡುವಂತೆ ಸ್ವತಂತ್ರರನ್ನಾಗಿಸುತ್ತಿದ್ದರು. ನಾವುಗಳೋ ಅವರಿವರಿಂದ ವಿಳಾಸ ಕೇಳತ್ತಾ ಬೇಕಾದ ಕಡೆಗಳಲ್ಲೆಲ್ಲಾ ತಿರುಗಾಡುತ್ತಿದ್ದೆವು. ದಾರಿ ತಪ್ಪುತ್ತಿದ್ದೇವೆ ಎನಿಸಿದರೆ ಹೇಗೂ “ಕೆಂಪೇಗೌಡ ಬಸ್ ನಿಲ್ದಾಣ” ಬೋರ್ಡಿನ ಬಸ್ಸಿಗೆ ಕೈ ಹೊಡೆದು ಎರಡೋ ಮೂರೋ ರೂಪಾಯಿ ಟಿಕೆಟ್ ಪಡೆದು ಬಸ್ ಸ್ಟ್ಯಾಂಡ್ ತಲುಪಿ ಮತ್ತೆ ತಿರುಗಾಟ ಮುಂದುವರೆಸುತ್ತಿದ್ದೆವು.

ಹಿಂದೊಮ್ಮೆ ಬಂದಿದ್ದಾಗ ಒಳ್ಳೆಯ ಬೇಕರಿ ಹುಡುಕಿ ಇಷ್ಟದ ತಿಂಡಿಗಳನ್ನು ತಿಂದು, ಸಚಿನ್ ಅಡ್ವರ್ಟೈಸ್ ನೀಡುತ್ತಿದ್ದ ಪೆಪ್ಸಿ ಕುಡಿದಿದ್ದೆವು. ಮತ್ತೊಮ್ಮೆ, ಆಗತಾನೆ ಖ್ಯಾತಿ ಪಡೆಯುತ್ತಿದ್ದ ಸ್ವಪ್ನ ಬುಕ್ ಹೌಸ್ ಹುಡುಕಿ ಇಷ್ಟದ ಪುಸ್ತಕಗಳನ್ನು ಕೊಂಡಿದ್ದೆವು. ಮಗದೊಮ್ಮೆ, ಸುರಿವ ಮಳೆಯನ್ನೂ ಲೆಕ್ಕಿಸದೇ ಅದರಲ್ಲೇ ನೆನೆಯುತ್ತಾ ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಲುಪಿ ಒಳಗೆ ಬಿಡೆನೆಂಬ ಗೇಟ್ ಕೀಪರನಿಗೆ ಹಣದ ಆಮಿಷ ಒಡ್ಡಿ ಒಳ ಹೋಗಿ, ಹುಲ್ಲು ಹಾಸಿನ ಮೃದುತನಕ್ಕೆ ಮರುಳಾಗುತ್ತಲೇ ಪಿಚ್‌ನವರೆಗೂ ನಡೆದು ಬಂದಿದ್ದೆವು.

ಆದರೆ, ಈ ಬಾರಿ ಬಸ್ ಸ್ಟ್ಯಾಂಡ್ ನಿಂದ ಹೊರ ಬಂದು ಎಲ್ಲಿಗೆ ಹೋಗುವುದೆಂದು ಯೋಚಿಸುವ ಮುನ್ನವೇ ‘ಎ’ ಅಕ್ಷರ ಹೊತ್ತಿದ್ದ ಸಿನಿಮಾ ಪೋಸ್ಟರ್ ಒಂದು ಏಕಾಏಕಿ ನಮ್ಮೆಲ್ಲರ ಕಣ್ಮನ ಸೆಳೆದಿತ್ತು. ‘ಎ’ ಎಂಬುದನ್ನು ಬಹಳ ಚಿಕ್ಕದಾಗಿ ಬರೆದಿದ್ದರಾದರೂ ನಮ್ಮ ಕಣ್ಣಿಗೆ ಮಾತ್ರ ‘ಎ’ ಎಂಬುದು ಸಂಪೂರ್ಣ ಪೋಸ್ಟರನ್ನೇ ಆವರಿಸಿಕೊಂಡಂತೆ ಎದ್ದು ಎದ್ದು ಕುಣಿಯುತಲಿತ್ತು. ಒಡನೆಯೇ ನಮ್ಮೆಲ್ಲರ ಎದೆಯ ಭೂಮಿಯೊಳಗೆ ಬಿತ್ತನೆಯಾಗಿದ್ದ ‘ಎ ಸರ್ಟಿಫಿಕೇಟ್’ ಸಿನಿಮಾ ನೋಡುವ ಬಯಕೆಯ ಬೀಜ ಮೊಳೆತು ಅಂಕುರಿಸಿತ್ತು. ಅಂಕುರಿಸುವುದೇನು ಕ್ಷಣಮಾತ್ರದಲ್ಲಿ ಎಂಬಂತೆ ಗಿಡವಾಗಿ, ಮರವಾಗಿ, ಹೆಮ್ಮರವಾಗಿ ಬಿಟ್ಟಿತ್ತು!

ಸರಿ, ಪೋಸ್ಟರ್ ಮೇಲಿನ ಹೆಸರನ್ನೊಮ್ಮೆ ಓದಿದೆವು. “ಹಿಮಾಲಯ” ಎಂದಿತ್ತು. ಕೂಡಲೇ ಹಿಮಾಲಯ ಯಾತ್ರೆಗೆ ಮಾರ್ಗವನ್ನು ಅವರಿವರಿಂದ ವಿಚಾರಿಸುತ್ತಲೇ, ಎ ಸರ್ಟಿಫಿಕೇಟ್‌ನ ಅನಂತ ಸಾಧ್ಯತೆಗಳನ್ನೆಲ್ಲಾ ಕಲ್ಪಿಸಿಕೊಳ್ಳುತ್ತಲೇ, ಅವರ್ಣೀಯವಾದ ರೋಮಾಂಚನದಲ್ಲಿ ಮಿಂದೇಳುತ್ತಲೇ ಕ್ಷಣಮಾತ್ರದಲ್ಲಿ ಎಂಬಂತೆ “ಹಿಮಾಲಯ”ದ ಮುಂದಿದ್ದೆವು!

“ಹಿಮಾಲಯ” ಎಂದೊಡನೆ ಹಿಮಾಲಯ ಪರ್ವತದ ರೇಂಜಿಗೆ ಯೋಚಿಸಿದ್ದ ನಮಗೆ ಎದುರಿದ್ದ “ಹಿಮಾಲಯ ಥಿಯೇಟರ್”ನ ರೂಪ ನೋಡಿ ಕೊಂಚ ನಿರಾಶೆಯೇ ಆಗುವಂತಿತ್ತು. ಹೆಸರಿಗೂ ಆಕಾರಕ್ಕೂ ಯಾವುದೇ ಹೋಲಿಕೆ ಇರದೆ, ಮಾಸಲು ಬಿಳಿ ಬಣ್ಣ ಹೊದ್ದು ಗೂಡು ಗೂಡಿನಂತಿದ್ದ ಹಿಮಾಲಯವನ್ನು ನೋಡುತ್ತಿದ್ದರೆ “ಇಂತಹ ಥಿಯೇಟರ್‌ನಲ್ಲಿ ನಾವು ಸಿನಿಮಾ ನೋಡುವುದಾ..” ಎಂದು ಒಂದು ಕ್ಷಣ ಯೋಚಿಸುವಂತಿತ್ತು. ಆದರೆ ಕಣ್ಮನ, ಮೈಮನಗಳಲೆಲ್ಲಾ “ಎ ಸರ್ಟಿಫಿಕೇಟ್” ತುಂಬಿ ಕೊಂಡಿರುವಾಗ ಥಿಯೇಟರ್ ನ ಕ್ಷುದ್ರತೆಯ ಬಗ್ಗೆ ಆಲೋಚಿಸಲು ಸಮಯವೆಲ್ಲಿ!

ಅದಾಗಲೇ ಟಿಕೆಟ್ ಪಡೆದು ಒಳ ಹೋಗುತಲಿದ್ದ ಪ್ರೇಕ್ಷಕ ವರ್ಗವನ್ನು ನೋಡ ನೋಡುತ್ತಲೇ ಪುಳಕಗೊಳ್ಳುತ್ತಾ, ಇನ್ನೂ ಅರೆ ಕ್ಷಣದಲ್ಲಿ ಕಾರ್ಮೋಡ ಕಳಚಿದ ಬಿರು ಮಳೆಯೊಂದು ಸುರಿದು ಇಲ್ಲಿಯವರೆಗೂ ನಮ್ಮನ್ನು ಕಾಡಿದ್ದ ಅತೃಪ್ತಿ, ಅಸಂತುಷ್ಟತೆಗಳ ದಾವಾಗ್ನಿಯನ್ನು ತಣಿಸಿ ತಂಪೆರೆಯಲಿದೆಯೆಂದು ಆಶಿಸುತ್ತಾ, ತನ್ನ ಜೀವಮಾನವನ್ನೇ ಸ್ವಾತಂತ್ರ್ಯಕ್ಕಾಗಿ ಮುಡುಪಿರಿಸಿದ್ದ ಸ್ವಾತಂತ್ರ್ಯ ಸೇನಾನಿಯೊಬ್ಬ ಬ್ರಿಟೀಷರ ದಾಸ್ಯದ ಬಾವುಟ ಕಳಚಿ ಭಾರತಾಂಬೆಯ ಬಾವುಟ ಮೊದಲ ಬಾರಿಗೆ ಗಗನಕ್ಕೇರುವುದನ್ನು ಕಣ್ತುಂಬಿಕೊಂಡು ಸಂಭ್ರಮಿಸುವಾಗಿನ ಕಾತರತೆಯನ್ನು ಹೊತ್ತು ಟಿಕೆಟ್‌ಗಾಗಿ ಸರದಿಯಲ್ಲಿ ನಿಂತೆವು.

ಸರದಿ ಬಂದಾಗ ಟಿಕೆಟ್ ಕೇಳಿದೆವು. ಟಿಕೆಟ್ ಕೊಡುವವನೋ ನಮ್ಮನ್ನು ಪರಗ್ರಹದ ಜೀವಿಗಳೇನೋ ಎಂಬಂತೆ ಅಪಾದ ಮಸ್ತಕ ದಿಟ್ಟಿಸಿ “ಟಿಕೆಟ್ ಖಾಲಿ” ಎಂದು ಬಿಡಬೇಕೆ!

ಎಷ್ಟಾದರೂ ನಾವು ಈ ದಿನ ಸಿನಿಮಾ ನೋಡಿ “ಎ ಸರ್ಟಿಫಿಕೇಟ್”ನ ರಹಸ್ಯಗಳನ್ನೆಲ್ಲಾ ಭೇದಿಸ ಬೇಕೆಂದಿದ್ದವರು, ನಮ್ಮಲ್ಲಿನ ಅತೃಪ್ತಿ, ಅಸಂತುಷ್ಟತೆಗಳಿಗೆಲ್ಲಾ ಅಂತ್ಯ ಹಾಡ ಬಕೆಂದಿದ್ದವರಲ್ಲವೇ! ಮೇಲಾಗಿ, “ಗುರಿ ಮುಟ್ಟುವವರೆಗೆ ನಿಲ್ಲದಿರಿ” ಎಂಬ ವಿವೇಕವಾಣಿಯಲ್ಲಿ ನಂಬಿಕೆ ಇಟ್ಟವರಲ್ಲವೇ!

ಸರಿ, ಮತ್ತೆ ಕೇಳಿದೆವು. ಮತ್ತೂ “ಟಿಕೆಟ್ ಖಾಲಿ” ಎಂದು ಬಿಡಬೇಕೆ.

ಹಾಗೆಂದು ಸುಮ್ಮನಿರಲಾದೀತೆ. ಎಷ್ಟಾದರೂ ನಾವು”ಎವೆರಿ ಪ್ರಾಬ್ಲಂ ಹ್ಯಾಸ್ ಅ ಸೊಲ್ಯುಷನ್” ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದವರಲ್ಲವೇ!

ಸರಿ, “ಪರ್ವಾಗಿಲ್ಲ ಅಂಕಲ್ ಚೇರ್ ಹಾಕಿ ಕೊಡಿ, ನೋಡ್ತೀವಿ” ಎಂಬ ಸರಳ ಪರಿಹಾರ ನೀಡಿದೆವು. ಅವನೋ ಒಪ್ಪಲಿಲ್ಲ. ನಾವೋ ಬಿಡಲೊಪ್ಪಲಿಲ್ಲ. ಪರಿಹಾರವನ್ನು ಇನ್ನಷ್ಟು ಸರಳಗೊಳಿಸಿ “ಅಂಕಲ್, ಎಲ್ಲರಿಂದ ಸೇರಿ‌ ಒಂದು ಬೆಂಚು ಹಾಕಿ ಕೊಡಿ ಸಾಕು. ಒಟ್ಟಿಗೆ ಸಿನಿಮಾ ನೋಡ್ತೀವಿ” ಎಂದೆವು. ಅವನು ಅದಕ್ಕೂ ಒಪ್ಪಲಿಲ್ಲ! ನಾವೋ ಇದರಿಂದ ರೋಸಿ ಹೋಗಿ “ರೀ ಅಂಕಲ್, ಚೇರು ಬೇಡ ಬೆಂಚು ಬೇಡ, ನಿಂತ್ಕೊಂಡೆ ಸಿನಿಮಾ ನೋಡ್ತೀವಿ. ಟಿಕೆಟ್ ಕೊಡ್ರಿರೀ.. ” ಎಂದು ಕೊಂಚ ಆವಾಝಿನ ಧಾಟಿಯಲ್ಲೇ ಕೇಳಿದೆವು. ಅವನ್ಯಾರೋ ನಮ್ಮ ಪ್ರಾಂಶುಪಾಲರ ಕ್ಲೋನಿಂಗ್ ಬೇಬಿ ಎನಿಸುತ್ತೆ; ನಮ್ಮ ಯಾವುದೇ ಸಲಹೆ, ಸೂಚನೆ, ಆಗ್ರಹಗಳಿಗೂ ಜಗ್ಗದೇ “ಬಿಲ್ಕುಲ್ ಇಲ್ಲ” ಎಂದು ಟಿಕೆಟ್ ನಿರಾಕರಿಸಿ ಬಿಟ್ಟಿದ್ದ. ಅಷ್ಟೇ ಅಲ್ಲ, ಮೊದಲ ಬಾರಿಗೆ ‘ಎ ಸರ್ಟಿಫಿಕೇಟ್’ ಸಿನಿಮಾ ನೋಡುವ ನಮ್ಮ ಬಯಕೆಯ ಹೆಮ್ಮರಕ್ಕೆ ಸಿಡಿಲಪ್ಪಳಿಕೆಯ ಆಘಾತ ನೀಡಿ ಸುಟ್ಟು ಕರಕಲಾಗಿಸಿ ಬಿಟ್ಟಿದ್ದ.

ಸಾಲದೆಂಬಂತೆ, ನಮ್ಮ ಹಿಂದಿದ್ದವರಿಗೆಲ್ಲಾ ಟಿಕೆಟ್ ನೀಡುವುದನ್ನು ಮುಂದುವರೆಸಿದ್ದ!

ನಮ್ಮ ಸ್ಥಿತಿ “ಮೇರಾ ಪೆಹಲಾ ಪ್ಯಾರ್ ಅಧೂರ ರಹ ಗಯಾ ರಿಫತ್ ಬಿ …” ಎಂದು ಎದೆ ಚೂರಾದಂತೆ ಕಣ್ಣೀರು ಹಾಕಿ ರೋಧಿಸುವ ‘ಕುಚ್ ಕುಚ್ ಹೋತಾ ಹೈ’ ನ ಅಂಜಲಿಗಿಂತ ಭಿನ್ನವೇನಾಗೇನೂ ಇರಲಿಲ್ಲ. ಅದಕ್ಕೆಂದೆ, ಸಪ್ಪೆ ಮೋರೆ ಹಾಕಿಕೊಂಡು ಥಿಯೇಟರ್ ಮುಂದೆಯೇ ಕೆಲ ಕಾಲ ನಿಂತು ಸಾವರಿಸಿಕೊಳ್ಳುವ ಯತ್ನ ಮುಂದುವರೆಸಿದ್ದೆವು.

ಬಹುಶಃ, ನಮ್ಮ ದೇಹಾಕೃತಿಗಳನ್ನು ನೋಡಿಯೇ ನಾವು ಸೀನಿಯರ್ ಗಳಾಗಿರುವುದು ಟಿಕೆಟ್ ನೀಡುವವನ ಅರಿವಿಗೆ ಬಾರದೆ ನಮನ್ನು ‘ಬಚ್ಚಾ’ಗಳೆಂದೇ ಅವನು ಪರಿಗಣಿಸಿದನೆಂದು ಅರಿವಾಗತೊಡಗಿತ್ತು.

ಆ ಅರಿವಿನೊಂದಿಗೆ ನಮ್ಮ ‘ಸೀನಿಯಾರಿಟಿಯ ಅಹಂ’ ಕೂಡ ಕರಗಿ ಹಿಮಾಲಯದೆದುರು ಅಕ್ಷರಶಃ ಕುಬ್ಜರಾಗಿಬಿಟ್ಟಿದ್ದೆವು!

‘ಎ’ ಸರ್ಟಿಫಿಕೇಟ್ ನೆಡೆಗಿನ ಕೌತುಕ ಮಾತ್ರ ಮುಂದುವರೆದೇ ಇತ್ತು!

(ಮುಂದುವರೆಯುವುದು…)
(ಹಿಂದಿನ ಕಂತು: ದ ಗ್ರೇಟ್ ನೋಟ್ ಬುಕ್ ರಾಬರಿ!)