ಹೂವು ಮತ್ತು ಸೂರ್ಯ
ಗೀತ ಗಾತಾ ಹೂ ಮೈ…
ಗುನ್ ಗುನಾತಾ ಹೂ ಮೈ…
ಪುರಾತನ ಕಾಲದ ಪಳೆಯುಳಿಕೆಯಂತ
ರೇಡಿಯೋ ಒಂದು
ಒಂದೇ ಸಮನೆ ಹಲುಬುತ್ತಾ ಇತ್ತು
ಗೋಡೆಗೆ ನೇತು ಹಾಕಿದ್ದ
ಒಂದು ವರ್ಣಚಿತ್ರವನ್ನು
ಸುಮಾರು ಹೊತ್ತು ಸುಮ್ಮನೆ
ಮುಂದೆ ನಿಂತು ದಿಟ್ಟಿಸಿದೆ
ನನ್ನ ಇಷ್ಟದ ಕವಿ ಆರೀಫ್ ರಾಜಾನ
ಒಂದು ಕವಿತೆ ಓದಿದಷ್ಟೇ ಖುಷಿಯಾಯಿತು
ನಮ್ಮ ಮೊದಲ ಭೇಟಿಯಲ್ಲೇ
ಉದಾರ ಮನಸ್ಸಿನ
ಹೃದಯ ಗೆದ್ದ
ಗ್ರಹಿಕೆಗೆ ಮೀರಿದ ಸಹೃದಯಿ
ಕಾಶ್ಮೀರದ ಗೆಳೆಯ ನನಗಾಗಿ ಕಾಯುತ್ತಿದ್ದ
ಈ ಬೆಟ್ಟದ ಊರು ಎಷ್ಟು ಪುಟ್ಟದೆಂದರೆ
ನಾವು ಎಷ್ಟೇ ದೂರವಿದ್ದರೂ
ಅವನು ನನಗೆ ನಾನು ಅವನಿಗೆ ಕಾಣುವಷ್ಟು
ಮೀನುಗಳ ಬೇಟೆಗೆ ನದಿಯ ತುಂಬಾ ದೋಣಿಗಳು
ಗಿಟಾರ್ ಹಿಡಿದುಕೊಂಡು
ಮೂರು ರಾತ್ರಿ ಮೂರು ಹಗಲು
ಹೇಗೆ ಕಳೆದವು ಹೇಗೆ ಹೇಳುವುದು
ಹೊಕ್ಕುಳದ ಹೂವಾದ
ಹರಿದಾಡುವ ಹಾವಾದ
ತುಂಬಾ ದೂರದಿಂದ ಓಡಿಬಂದ
ಕುದುರೆಯಂತೆ ಕುಪ್ಪಳಿಸಿದ
ಮಗ್ಗಲು ಬದಲಿಸಿದ
ಅಗ್ನಿಕುಂಡ ನಿರಂತರವಾಗಿ ಜ್ವಲಿಸುತ್ತಲೇ ಇತ್ತು
ಕಾಡಿನಲ್ಲಿ
ಗುಟ್ಟಾಗಿ ಅರಳಿದ ಹೂವಿನಂತೆ
ಇನ್ನೂ ಇಲ್ಲಿನ
ಮುಂಜಾವಿನ ಕುರಿತು ಕೇಳಬೇಡಿ
ಹೂವು ಅರಳುವುದನ್ನು
ಸೂರ್ಯ ಉದಯಿಸುವುದನ್ನು
ಹೇಗೆ ತೋರಿಸಲು ಸಾಧ್ಯ ಹೇಳಿ!
ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು.
ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ.
ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ.
ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ