ಅನಾರೋಗ್ಯ ವಿಧಿಸಿದ ಮಿತಿಗಳನ್ನು ಮೀರಿ ನಿಂತ ಅವರ ಕಾವ್ಯ-ಧ್ವನಿ ಆಧುನಿಕ ಪ್ರಪಂಚದ ಹಿಂಸಾಚಾರ ಮತ್ತು ಕತ್ತಲೆಯ ಬಗ್ಗೆ ಭಾವಗೀತಾತ್ಮಕ ಹೇಳಿಕೆಗಳನ್ನು ನೀಡುತ್ತದೆ. ಇವುಗಳಿಂದ ಹುಟ್ಟಿವೆ ಅವರ ಛಿದ್ರಿತ ವಾಕ್‌ಶೈಲಿಯ ಅತಿವಾಸ್ತವಿಕ ಸೌಂದರ್ಯದಿಂದ ತಲ್ಲಣಗೊಳಿಸುವ ಪ್ರತಿಮಾಕಾರ ಕವನಗಳು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಫಿನ್ಲೆಂಡ್ ದೇಶದ ಸ್ವೀಡಿಷ್ ಭಾಷಾ ಕವಿ ಈಡಿತ್ ಸೋಡರ್ಗ್ರಾನ್-ರ (Edith Södergran, 1892–1923) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ತನ್ನ 31-ನೇ ವಯಸ್ಸಿನಲ್ಲಿ ಬಡತನದಲ್ಲಿ ಈಡಿತ್ ಸೋಡರ್ಗ್ರಾನ್ ಕೊನೆಯುಸಿರೆಳೆದಾಗ, ಅವರ ಹೆಚ್ಚಿನ ಫಿನ್ನಿಷ್ ಸಮಕಾಲೀನರು ಇವರನ್ನು ಹುಚ್ಚಿ, ಆತ್ಮವೈಭವದ ಶ್ರೀಮಂತವರ್ಗದವಳು ಎಂದು ತಳ್ಳಿಹಾಕಿದರು. ಇಂದು ಸೋಡರ್ಗ್ರಾನ್-ರನ್ನು ಫಿನ್ಲೆಂಡ್ ಮಾತ್ರವಲ್ಲ, ಇಡೀ ಸ್ಕ್ಯಾಂಡಿನೇವಿಯಾ ಹಾಗು ನಾರ್ಡಿಕ್ ಪ್ರದೇಶಗಳ ಮೊದಲ ಮಾಡರ್ನಿಸ್ಟ್ ಕವಿಯೆಂದು ಪರಿಗಣಿಸುತ್ತಾರೆ. ಸ್ವೀಡಿಷ್ ಭಾಷೆಯಲ್ಲಿ ಬರೆಯಲಾದ ಅವರ ಕವನಗಳು ತೀವ್ರವಾದ ದಾರ್ಶನಿಕತೆಯಿಂದ ಕೂಡಿವೆ ಮತ್ತು ಫ್ರೆಂಚ್ ಕವಿ ರಂಬೋ-ನ (Rimbaud) ಕಾವ್ಯದ ಜತೆ ಹೋಲಿಸಲಾಗಿದೆ, ಹಾಗೇಯೇ ಅವರ ಕಾವ್ಯ ರಷ್ಯಾ ದೇಶದ ಕಾವ್ಯದೊಂದಿಗೆ ಕೂಡ ಆಳವಾದ ಸಂಬಂಧವನ್ನು ತೋರಿಸುತ್ತವೆ, ವಿಶೇಷವಾಗಿ ಬ್ಲಾಕ್ (Blok), ಮಾಯಾಕೋವ್ಸ್ಕಿ (Mayakovsky) ಮತ್ತು ಸೆವೆರಿಯಾನಿನ್ (Severyanin) ಅವರ ಕವನಗಳೊಂದಿಗೆ.

ಫಿನ್ನೊ-ಸ್ವೀಡಿಷ್ (Finno-Swedish) ಕುಟುಂಬದಲ್ಲಿ 1892-ರಲ್ಲಿ ಜನಿಸಿದ ಈಡಿತ್ ಸೋಡರ್ಗ್ರಾನ್ ರಷ್ಯಾದ ಗಡಿಯಲ್ಲಿರುವ ರೈವೊಲಾ (Raivola) ಎಂಬ ಹಳ್ಳಿಯಲ್ಲಿ ಬೆಳೆದರು, ಆದರೆ ಸೇಂಟ್ ಪೀಟರ್ಸ್‌ಬರ್ಗ್‌-ನಲ್ಲಿರುವ ಜರ್ಮನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ತನ್ನ ಮೊದಲ ಕವನಗಳನ್ನು ಜರ್ಮನ್ ಭಾಷೆಯಲ್ಲಿ ಬರೆದ ಸೋಡರ್ಗ್ರಾನ್-ರ ಆರಂಭಿಕ ಪ್ರಭಾವಗಳು ಜರ್ಮನ್ ಕವಿಗಳಾದ ಗೊಯ್ಟ (Goethe) ಮತ್ತು ಹಾಯ್ನ (Heine). ಸೋಡರ್ಗ್ರಾನ್‌-ರ ಪ್ರೌಢ ಸ್ವೀಡಿಷ್ ಕಾವ್ಯದ ಪ್ರೇರಕ ಶಕ್ತಿಯು ಕ್ಷಯರೊಗದ ವಿರುದ್ಧ ಆಕೆಯ ಹೋರಾಟವಾಗಿತ್ತು. ಅನಾರೋಗ್ಯದ ಸಮಯದಲ್ಲಿ ಎಲ್ಲರಿಂದ ದೂರವಿದ್ದು ಕಳೆದ ಒಂಟಿ ಜೀವನದ ದುಃಖ, ತಾನಿನ್ನು ಚೇತರಿಸಿಕೊಳ್ಳುವುದಿಲ್ಲ, ಇದೇ ಕೊನೆಯೆಂಬ ವಿವಶತೆ, ಆದರೂ ಎಲ್ಲವನ್ನೂ ಒಂದೇ ರೀತಿಯಾಗಿ ಕಾಣಬೇಕು, ಪ್ರೀತಿಸಬೇಕೆಂಬ ಸ್ವೀಕೃತಿಯ ಮನೋಭಾವ… ತಮ್ಮ ಕವನಗಳಲ್ಲಿ ಈ ಎಲ್ಲಾ ಭಾವನೆಗಳನ್ನು ಪ್ರಬಲ ಹಾಗೂ ಪ್ರಭಾವಿ ರೂಪಕಗಳೊಂದಿಗೆ ಚಿತ್ರಿಸಿದ್ದಾರೆ. ಅವಳ ಅಲ್ಪಾವಧಿಯ ಜೀವನದಲ್ಲಿ ಅವಳು ಫಿನ್ಲೆಂಡ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕ್ಷಯರೋಗದ ಆಸ್ಪತ್ರೆಗಳಲ್ಲಿ ರೋಗಿಯಾಗಿ ಕಳೆದಳು. ಅವರ ಕೊನೆಯ ವರ್ಷಗಳು ರಷ್ಯಾದ ಕ್ರಾಂತಿಯ ಪ್ರಕ್ಷುಬ್ಧತೆಯ ನಡುವೆ ಮತ್ತು ರೈವೊಲಾದಲ್ಲಿ ಹತಾಶ ಬಡತನದಲ್ಲಿ ಕಳೆದವು.

ಈಡಿತ್ ಸೊಡರ್ಗ್ರಾನ್ ತನ್ನನ್ನು ಹೊಸ ಶೈಲಿಯ ಮುಕ್ತ ಚೇತನವಾಗಿ ಕಂಡಳು; ತನ್ನನ್ನು ದಾರ್ಶನಿಕ ನೀಟ್ಷ-ಯ (Nietzsche), ನಂತರ ನಿಸರ್ಗಾನುಭಾವಿ ರುಡಾಲ್ಫ್ ಸ್ಟೈನರ್-ನ (Rudolf Steiner) ಮತ್ತು ಅಂತಿಮವಾಗಿ ಕ್ರಿಸ್ತನ ಶಿಷ್ಯೆಯಾಗಿ ಕಂಡುಕೊಂಡಳು. ಆದರೆ ಅವರ ಕಾವ್ಯ-ಧ್ವನಿ ಸೂಕ್ಷ್ಮವಾಗಿದ್ದು, ಸಂಪೂರ್ಣವಾಗಿ ಸ್ವತಂತ್ರ ಹಾಗೂ ಸ್ವಂತದ್ದಾಗಿದೆ. ಅನಾರೋಗ್ಯ ವಿಧಿಸಿದ ಮಿತಿಗಳನ್ನು ಮೀರಿ ನಿಂತ ಅವರ ಕಾವ್ಯ-ಧ್ವನಿ ಆಧುನಿಕ ಪ್ರಪಂಚದ ಹಿಂಸಾಚಾರ ಮತ್ತು ಕತ್ತಲೆಯ ಬಗ್ಗೆ ಭಾವಗೀತಾತ್ಮಕ ಹೇಳಿಕೆಗಳನ್ನು ನೀಡುತ್ತದೆ. ಇವುಗಳಿಂದ ಹುಟ್ಟಿವೆ ಅವರ ಛಿದ್ರಿತ ವಾಕ್‌ಶೈಲಿಯ ಅತಿವಾಸ್ತವಿಕ ಸೌಂದರ್ಯದಿಂದ ತಲ್ಲಣಗೊಳಿಸುವ ಪ್ರತಿಮಾಕಾರ ಕವನಗಳು. ತಮ್ಮ ಪ್ರೌಢಾವಸ್ಥೆಯಲ್ಲಿ ಅವರು ಸ್ವೀಡಿಷ್ ಭಾಷೆಯಲ್ಲಿ ಬರೆದ ಎಲ್ಲಾ ಕವನಗಳು ತೀವ್ರವಾದ ಭಾವನಾತ್ಮಕತೆಯಿಂದ ಹಾಗೂ ಅರ್ಥಪೂರ್ಣವಾದ, ಒಂದು ತರಹದ ಒರಟಾದ ಸೌಂದರ್ಯದಿಂದ ಕೂಡಿವೆ. ಸೋಡರ್ಗ್ರಾನ್-ರ ಕವಿತೆಗಳು ಹಿಂದಿನ ಭಾವಗೀತಾತ್ಮಕ ರೂಪಗಳನ್ನು ತಿರಸ್ಕರಿಸುತ್ತಾ, ಸ್ತ್ರೀತ್ವದ ಸಾಕಾರ ವಿಧಾನವನ್ನು ಚಿತ್ರಿಸುತ್ತವೆ. ಅವರ ಜೀವಿತಾವಧಿಯಲ್ಲಿ ಅವರ ಕಾವ್ಯಕ್ಕೆ ಹೆಚ್ಚಾಗಿ ಮನ್ನಣೆಯೇನೂ ದೊರಕಲಿಲ್ಲ, ಬದಲಾಗಿ ತುಂಬಾ ಅಪಹಾಸ್ಯಕ್ಕೊಳಗಾಯಿತು. ಆದಾಗ್ಯೂ, ಸ್ವೀಡಿಷ್ ಕಾವ್ಯದ ಮೇಲೆ ಸೋಡರ್ಗ್ರಾನ್-ರ ಪ್ರಭಾವವು ಅಪಾರವಾಗಿದೆ, ಹಾಗೂ ಇಂದು ಅವರನ್ನು ಸ್ಕ್ಯಾಂಡಿನೇವಿಯನ್ ಸಾಹಿತ್ಯದ ಶ್ರೇಷ್ಠ ಆಧುನಿಕ ಕವಿಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುತ್ತಾರೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಈಡಿತ್ ಸೋಡರ್ಗ್ರಾನ್-ರ ಏಳು ಕವನಗಳಲ್ಲಿ ಮೊದಲ ನಾಲ್ಕು ಕವನಗಳನ್ನು ಮಲೆನಾ ಮೋರ್ಲಿಂಗ್ (Malena Mörling) ಮತ್ತು ಜೊನಸ್ ಎಲೆರ್ಸ್ತರೋಮ್ (Jonas Ellerström), ಐದನೆಯ ಕವನವನ್ನು ಡೇವಿಡ್ ಮೆಕ್‌ಡಫ಼್ (David McDuff), ಆರನೆಯ ಕವನವನ್ನು ಯೊಹಾನೆಸ್ ಗೋರಾನ್ಸನ್ (Johannes Göransson), ಹಾಗೂ ಏಳನೆಯ ಕವನವನ್ನು ನಿಕೊಲಸ್ ಲಾರೆನ್ಸ್ (Nicholas Lawrence) ಅವರುಗಳು ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.


ನಿರ್ಧಾರ
ಮೂಲ: Decision

ನಾನೊಬ್ಬ ಅಪೂರ್ವ ಪ್ರೌಢ ವ್ಯಕ್ತಿ, ಆದರೆ
ನನ್ನ ಬಗ್ಗೆ ಯಾರಿಗೂ ಗೊತ್ತಿಲ್ಲ.
ನನ್ನ ಮಿತ್ರರು ನನ್ನ ಬಗ್ಗೆ ತಪ್ಪು ಕಲ್ಪನೆ ಹುಟ್ಟಿಸುತ್ತಾರೆ.
ನಾನು ಸಾಧುವಲ್ಲ.
ನಾನು ಸಾಧುತ್ವವನ್ನು
ನನ್ನ ಹದ್ದಿನ ಪಂಜಗಳಲ್ಲಿ ತೂಗಿನೋಡಿರುವೆ,
ಅದನ್ನು ಚೆನ್ನಾಗಿ ಅರಿತಿರುವೆ.
ಓ ಹದ್ದೇ, ಅದೆಂತಹ ಮಾಧುರ್ಯ
ನಿನ್ನ ರೆಕ್ಕೆಗಳ ಉಡ್ವಾಣದಲ್ಲಿ.
ಎಲ್ಲದರ ಹಾಗೆ ನೀನೂ ಮೌನವಾಗೇ ಇರುವೆಯಾ?
ನೀನೇನಾದರೂ ಬರೆಯಲು ಬಯಸುವೆಯಾ?
ನೀನು ಮತ್ತೆಂದೂ ಬರೆಯಲಾರೆ.
ಪ್ರತಿ ಕವಿತೆಯು ಕವಿತೆಯೊಂದನ್ನು
ಸಿಗಿದು ಹಾಕಿದಂತಿರುತ್ತೆ,
ಅದು ಕವಿತೆಯಲ್ಲ, ಪಂಜದ ಗುರುತುಗಳು.


ನಾನು ನಡೆ ನಡೆಯುತ್ತಾ ಸೌರಮಂಡಲಗಳನ್ನೆಲ್ಲ ತಿರುಗಾಡಿದೆ
ಮೂಲ: On foot I wandered through the solar systems

ಕಾಲ್ನಡಿಗೆಯಲ್ಲಿ
ನಾನು ಸೌರಮಂಡಲಗಳನ್ನೆಲ್ಲ ತಿರುಗಾಡಿದೆ,
ನನ್ನ ಕೆಂಪು ಅಂಗಿಯ ಮೊದಲ ನೂಲು ನನಗೆ ಕಾಣಿಸುವ ಮುನ್ನ.
ಈಗಾಗಲೇ ನನಗೆ ಅರಿವಿದೆ ನನ್ನ ಬಗ್ಗೆ.
ಅಂತರೀಕ್ಷದಲ್ಲೆಲ್ಲೋ ನನ್ನ ಹೃದಯ ನೇತಾಡುತ್ತಿದೆ,
ಇತರ ಅಮೇಯ ಹೃದಯಗಳನ್ನು ನೋಡಿ
ಕೆಂಡಗಳ ಕಾರುತ್ತಿದೆ, ಗಾಳಿಯ ಅದಿರುಸುತ್ತಿದೆ.


ಮತ್ತೇನೂ ಇಲ್ಲ
ಮೂಲ: Nothing

ಶಾಂತವಾಗಿರು, ಮಗುವೆ, ಮತ್ತೇನೂ ಇಲ್ಲ,
ಎಲ್ಲವೂ ಕಾಣುವ ಹಾಗೆಯೇ ಇದೆ:
ಆ ಕಾಡು, ಆ ಹೊಗೆ,
ಮತ್ತೆ, ಮಾಯವಾಗುತ್ತಿರುವ ಆ ಹಳಿಗಳು.
ಎಲ್ಲೋ ದೂರದಲ್ಲಿ ದೂರದ ದೇಶಗಳಲ್ಲಿ
ಈಗಲೂ ನೀಲಿಯಾಗಿರುವ ಆಕಾಶ ಹಾಗೂ
ಗುಲಾಬಿ ಹೂ ಕವಿದ ಗೋಡೆ ಆಥವಾ
ಒಂದು ತಾಳೆ ಮರ ಹಾಗೂ
ನೀರಸವಾದ ಗಾಳಿ –
ಮತ್ತೆ, ಅಷ್ಟೇ.
ದೇವದಾರು ಮರದ ಕೊಂಬೆಯ ಮೇಲಿರುವ
ಹಿಮವನ್ನು ಬಿಟ್ಟರೆ ಮತ್ತೇನೂ ಇಲ್ಲ.
ಬೆಚ್ಚಗಿನ ತುಟಿಗಳಿಂದ ಚುಂಬಿಸಲಿಕ್ಕೆ ಮತ್ತೇನೂ ಇಲ್ಲ,
ಮತ್ತೆ, ಎಲ್ಲಾ ತುಟಿಗಳೂ ತಣ್ಣಗಾಗುತ್ತವೆ ಕಾಲ ಕಳೆದಂತೆ.
ಆದರೆ, ನಿನ್ನ ಹೃದಯ ಗಟ್ಟಿಯಾಗಿದೆಯೆಂದು ನೀನು ಹೇಳುವೆ,
ಮತ್ತೆ, ಅರ್ಥರಹಿತ ಬದುಕು ಸಾವಿಗಿಂತ ಕಡೆ.
ಏನ ಅಪೇಕ್ಷಿಸುವೆ ನೀನು ಸಾವಿನಿಂದ?
ಅವನ ಬಟ್ಟೆಗಳು ಹರಡುವ ಜಿಗುಪ್ಸೆ ನಿನಗೆ ತಟ್ಟುತ್ತಿದೆಯೆ?
ನಿನ್ನ ಕೈಯಿಂದಲೇ ನಿನ್ನ ಸಾವಿಗಿಂತ
ಹೇವರಿಕೆ ಹುಟ್ಟಿಸುವಂತಹದ್ದು ಮತ್ತೊಂದಿಲ್ಲ.
ಜೀವನದಲ್ಲಿ ಬರುವ ಅನಾರೋಗ್ಯದ
ದೀರ್ಘ ಕಾಲಾವಧಿಗಳನ್ನು,
ವಿವಿಕ್ತತೆಯಲ್ಲಿ ಕಳೆದ ತವಕದ ವರುಷಗಳನ್ನು
ಪ್ರೀತಿಸಬೇಕು,
ಮರುಭೂಮಿಯಲ್ಲಿ ಅರಳುವ ಅಲ್ಪಕ್ಷಣಗಳ
ಹೂವುಗಳನ್ನು ಪ್ರೀತಿಸಿದಷ್ಟೇ.


ನಕ್ಷತ್ರಗಳು
ಮೂಲ: The Stars

ಕತ್ತಲು ಸಮೀಪಿಸುತ್ತಿದ್ದ ಹಾಗೆ
ನಾನು ಮೆಟ್ಟಲುಗಳ ಮೇಲೆ ನಿಂತು ಆಲಿಸುವೆ,
ಉದ್ಯಾನದಲ್ಲಿ ನಕ್ಷತ್ರಗಳು ಹಿಂಡುಹಿಂಡಾಗಿ ಮುಸುರುತ್ತಿವೆ,
ಆದರೆ ನಾನು ಕತ್ತಲಲ್ಲಿ ನಿಂತಿರುವೆ.
ಕೇಳಿದೆಯಾ, ನಕ್ಷತ್ರವೊಂದು ಠಣಾಳೆಂದು ಬಿದ್ದ ಸದ್ದು!
ಹುಲ್ಲಿನ ಮೇಲೆ ಬರಿಗಾಲಲ್ಲಿ ನಡೆಯಬೇಡ;
ನನ್ನ ಉದ್ಯಾನದ ತುಂಬ ನಕ್ಷತ್ರ-ಚೂರುಗಳು ಹರಡಿವೆ.


ನೋವು
ಮೂಲ: Pain

ಆನಂದಕ್ಕೆ ಹಾಡುಗಳಿಲ್ಲ, ಆನಂದಕ್ಕೆ ಆಲೋಚನೆಗಳಿಲ್ಲ, ಆನಂದಕ್ಕೆ ಏನೂ ಇಲ್ಲ.
ನಿನ್ನ ಆನಂದವನ್ನು ಒಡೆದು ಚೂರು ಚೂರು ಮಾಡು, ಏಕೆಂದರೆ ಆನಂದ ಬಲು ಕೆಟ್ಟದ್ದು.
ಮಲಗಿರುವ ಪೊದೆಗಳ ಮಧ್ಯೆ ಹಾದು ಬರುವ ಬೆಳಗ್ಗಿನ ಮರ್ಮರಗಳ ಜತೆಗೆ ಮೆತ್ತಗೆ ಬರುತ್ತೆ ಆನಂದ,
ಕಡು-ನೀಲಿ ಕಡಲುಗಳ ಮೇಲೆ ತೆಳುವಾದ ಮೊಡ-ಚಿತ್ರಗಳಲ್ಲಿ ತೇಲಿ ಹೋಗುತ್ತೆ ಆನಂದ,
ಆನಂದವೆಂದರೆ ಮಧ್ಯಾಹ್ನದ ಕಾವಿನಲ್ಲಿ ನಿದ್ರಿಸುವ ಬಯಲು
ಅಥವಾ ನೇರ ಕಿರಣಗಳ ಶಾಖದಲ್ಲಿ ಮೈಕಾಯಿಸಿಕೊಳ್ಳುತ್ತಿರುವ ಸಮುದ್ರದ ಅನಂತ ವಿಸ್ತಾರ,
ಆನಂದವು ಬಲಹೀನ, ಅವಳು ನಿದ್ರಿಸುತ್ತಾಳೆ, ಉಸಿರಾಡುತ್ತಾಳೆ,
ಮತ್ತೆ ಯಾವುದರ ಬಗ್ಗೆಯೂ ಏನೂ ಗೊತ್ತಿಲ್ಲ …
ನಿನಗೆ ನೋವಿನ ಪರಿಚಯವಿದೆಯಾ?
ಅವಳು ಬಲಶಾಲಿ, ಮಹಾನ್, ಬಿಗಿದಿರುವ ಅವಳ ಮುಷ್ಠಿಗಳು ಕಾಣಿಸುವುದಿಲ್ಲ.
ನಿನಗೆ ನೋವಿನ ಪರಿಚಯವಿದೆಯಾ?
ಅತ್ತೂ ಅತ್ತೂ ಕಣ್ಣುಗಳು ಬಾತಿದ್ದರೂ ಅವಳು ಆಶಾದಾಯಕವಾಗಿ ನಗುವಳು.
ನೋವು ನಮಗೆ ಬೇಕಾಗಿದ್ದನ್ನೆಲ್ಲಾ ಕೊಡುವಳು –
ನಮಗೆ ಮರ್ತ್ಯ-ರಾಜ್ಯದ ಬೀಗದಕೈ ಕೊಡುವಳು,
ನಾವು ಹಿಂಜರಿದಾಗ ನಮ್ಮನ್ನು ದ್ವಾರದೊಳಗೆ ನೂಕುವಳು.
ನೋವು ಮಗುವಿಗೆ ಪುಣ್ಯಸ್ನಾನ ಮಾಡಿಸುತ್ತಾಳೆ ಮತ್ತು
ತಾಯಿಯ ಜತೆ ನಿದ್ರೆಯಿಂದ ಏಳುತ್ತಾಳೆ,
ಹಾಗೂ ಎಲ್ಲಾ ಬಂಗಾರದ ಮದುವೆ-ಉಂಗುರಗಳನ್ನು ರಚಿಸುತ್ತಾಳೆ.
ನೋವು ಎಲ್ಲದರ ಮೇಲೆ ತನ್ನ ಆಧಿಪತ್ಯ ಸ್ಥಾಪಿಸುತ್ತಾಳೆ,
ಚಿಂತಕನ ಹಣೆಯನ್ನು ನೇವರಿಸುತ್ತಾಳೆ,
ಬಯಸಿದ ಹೆಣ್ಣಿನ ಕುತ್ತಿಗೆಯ ಸುತ್ತ ಹಾರವನ್ನು ಬಿಗಿಯುತ್ತಾಳೆ,
ಗಂಡು ತನ್ನ ಪ್ರಿಯತಮೆಯನ್ನು ಬೀಳ್ಕೊಡುವಾಗ ಬಾಗಿಲಲ್ಲಿ ನಿಂತಿರುತ್ತಾಳೆ …
ಇನ್ನು ಏನೇನು ಕೊಡುತ್ತಾಳೆ ನೋವು ತನ್ನ ಕಂದಮ್ಮಗಳಿಗೆ?
ಇದಕ್ಕಿಂತ ಮೇಲಾಗಿ ನನಗೆ ಗೊತ್ತಿಲ್ಲ.
ಅವಳು ರತ್ನಗಳನ್ನು, ಪುಷ್ಪಗಳನ್ನು ಕೊಡುತ್ತಾಳೆ,
ಅವಳು ಹಾಡುಗಳನ್ನು, ಕನಸುಗಳನ್ನು ಕೊಡುತ್ತಾಳೆ,
ಒಂದು ಸಾವಿರ ಚುಂಬನಗಳನ್ನು ಕೊಡುತ್ತಾಳೆ,
ಅವೆಲ್ಲವೂ ಪೊಳ್ಳಾಗಿರುತ್ತವೆ, ಮತ್ತೆ
ಒಂದೇ ಒಂದು ಅಸಲಾದ ಚುಂಬನವನ್ನೂ ಕೊಡುತ್ತಾಳೆ.
ನಮಗೆ ನಮ್ಮ ವಿಲಕ್ಷಣ ಆತ್ಮಗಳನ್ನು, ವಿಚಿತ್ರ ಅಭಿರುಚಿಗಳನ್ನು ಕೊಡುತ್ತಾಳೆ,
ಜೀವನದ ಎಲ್ಲಾ ಉಚ್ಛ ಸಿರಿಗಳನ್ನು ನಮಗೆ ಕೊಡುತ್ತಾಳೆ:
ಪ್ರೇಮ, ಏಕಾಂತ, ಮತ್ತು ಮರ್ತ್ಯದ ಮುಖ.


ನನ್ನ ಕೃತಕ ಹೂವುಗಳು
ಮೂಲ: My artificial flowers

ನನ್ನ ಕೃತಕ ಹೂವುಗಳನ್ನು
ನಾನು ನಿನಗೆ ಕಳುಹಿಸುವೆ.
ನನ್ನ ಸಣ್ಣ ಕಂಚಿನ ಸಿಂಹಗಳನ್ನು
ನಾನು ನಿನ್ನ ಬಾಗಿಲಲ್ಲಿ ಸ್ಥಾಪಿಸುವೆ.
ಸ್ವತಃ ನಾನೇ ಮೆಟ್ಟಲುಗಳ ಮೇಲೆ ಕೂರುವೆ –
ಈ ಮಹಾನಗರದ ಗದ್ದಲದ ಸಮುದ್ರದಲ್ಲಿ
ಕಳೆದುಹೋದ ಒಂದು ಮೂಡಲ ಮುತ್ತು.


ನನ್ನ ಆತ್ಮ
ಮೂಲ: My soul

ನನ್ನ ಆತ್ಮ ಯಾವುದೇ ಸತ್ಯ ಹೇಳುವುದಿಲ್ಲ,
ಸತ್ಯ ತಿಳಿಯುವುದೂ ಇಲ್ಲ.
ನನ್ನ ಆತ್ಮಕ್ಕೆ ಅಳಲಿಕ್ಕೆ, ನಗಲಿಕ್ಕೆ,
ಕೈ ಕೈ ಹೊಸೆಯುವುದಕ್ಕೆ ಮಾತ್ರ ಗೊತ್ತು.
ನನ್ನ ಆತ್ಮಕ್ಕೆ ನೆನಪಿಸಿಕೊಳ್ಳುವುದಕ್ಕೆ,
ರಕ್ಷಿಸಿಕೊಳ್ಳುವುದಕ್ಕೆ ಗೊತ್ತಿಲ್ಲ.
ನನ್ನ ಆತ್ಮಕ್ಕೆ ವಿವೇಚಿಸುವುದಕ್ಕೆ,
ನಿರ್ಧರಿಸುವುದಕ್ಕೆ ಗೊತ್ತಿಲ್ಲ.
ನಾನು ಸಣ್ಣವಳಾಗಿದ್ದಾಗ ಸಮುದ್ರವನ್ನು ಕಂಡೆ;
ಅದು ನೀಲಿಯಾಗಿತ್ತು.
ನನ್ನ ಯೌವನದಲ್ಲಿ ಒಂದು ಹೂವನ್ನು ಭೇಟಿಯಾದೆ;
ಅವಳು ಕೆಂಪಾಗಿದ್ದಳು.
ಈಗ ಅಪರಿಚಿತನೊಬ್ಬ ನನ್ನ ಬಳಿ ಕುಳಿತಿದ್ದಾನೆ;
ಅವನಿಗೆ ಬಣ್ಣವಿಲ್ಲ.
ಆದರೆ ಕನ್ಯೆಯೊಬ್ಬಳಿಗೆ ಡ್ರ್ಯಾಗನ್ ಬಗ್ಗೆ ಇರುವ ಹೆದರಿಕೆಗಿಂತ
ಹೆಚ್ಚಾಗೇನೂ ಇಲ್ಲ ನನಗೆ ಇವನ ಬಗ್ಗೆ ಹೆದರಿಕೆ.
ವೀರಯೋಧ ಬಂದಾಗ ಕನ್ಯೆ ಕೆಂಪಾಗಿದ್ದಳು. ಬಿಳಿಯಾಗಿದ್ದಳು.
ಆದರೆ ನನ್ನ ಕಣ್ಗಳ ಸುತ್ತ ಕಪ್ಪು ಕಲೆಗಳಿವೆ.