ಅಣಿ ಮುತ್ತು

ಬಿಡದೆ ಬೆನ್ನಲ್ಲಿ ಹೊತ್ತೆ
ಕೂಸುಮರಿ
ನೀನೊಂದು ಮಗು

ತಿರುಳುಗಣ್ಣಿನ ಬೆಳಕು
ಜೋತು ಹಿಡಿದು
ಜೊಂಪೆಗೂದಲ

ಕಿತ್ತುಕೊಳ್ಳದಂತೆ
ಎದೆಯಲ್ಲಿ
ನೆಟ್ಟುಗಣ್ಣಿನ ನೋಟ.

ತೀರದ ಬಯಕೆ
ಹೆಪ್ಪಿಟ್ಟ ಒಂದೇ ಒಂದು
ಮುತ್ತಿನ ಹನಿ,

ಬೆಣ್ಣೆಯಂತರಳಿತು ತನು.
ಎಷ್ಟೊಂದು ಪತ್ರಗಳ ಹುಟ್ಟು
ಬಂದಿಳಿ ರೆಕ್ಕೆಯಲಿ

ಗರಿಗರಿಗನಸು
ಬಾನಾಡಿ
ಬಾನತುಂಬಿ

ಶುರುವಾದ ಮೆರವಣಿಗೆ,
ಕಾಣುತ್ತಿರಲಿ
ಕಣ್ ಸೋಲುವನಕ.

 

 

 

 

 

 

 

ಆಡಲಾರದ ಭಾವ
ಹಾಡತೊಡಗಿ
ದಾರಿಸಾಗಲಿ ರಾಗದಲಿ.

ನೀಲಿ ಕಡಲ ಬಾನಲ್ಲಿ
ಬೆಣ್ಣೆಮುದ್ದು ತೇಲಿ
ಕಣ್ಣಕನ್ನಡಿಯಲಿ ಈಜಿ ಮುತ್ತಿಟ್ಟ

ಚಂದ್ರ ಬಿಂಬ ಸೊಕ್ಕಿ
ಮಜ್ಜಿಗೆಯು ತುಳುಕಿ
ಬೆಳದಿಂಗಳೋ ನೆಲತುಂಬ

ಉಸಿರುಸುರಿಗೂ ಬಿರುಸು
ತಣಿಸುವ ಮತ್ತು
ಎಂಥ ಚಂದ!

ಅಣಿಮುತ್ತುದುರಿ ದಾರಿಯಲಿ
ಮಾಲೆಯಗರಳಿ
ಬೆಟ್ಟತುದಿಯಲ್ಲಿ

ಬಚ್ಚಿಟ್ಟ ಸೆರಗಗಂಟು
ತೂಗುಬಿದ್ದಿದೆ ಹೂವಾಗಿ
ಗಾಳಿ ಹಾಡುವಲ್ಲಿ

 

ಹೆಚ್.ಆರ್.ಸುಜಾತಾ. ಕವಯಿತ್ರಿ, ಪತ್ರಕರ್ತೆ ಹಾಗೂ ಅಂಕಣಗಾರ್ತಿ.
‘ನೀಲಿ ಮೂಗಿನ ನತ್ತು ‘ ಇವರ ಪ್ರಬಂಧಗಳ ಸಂಕಲನ.
ಮಕ್ಕಳ ರಂಗಭೂಮಿಯಲ್ಲಿ ಕೂಡ ಕೆಲಸ ಮಾಡಿದ ಅನುಭವ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)