Advertisement
ಹೆಣ್ಣಿನ ನಾಲ್ಕು ಕಷ್ಟಗಳು – ಅಂದು, ಇಂದು: ಡಾ. ಎಲ್. ಜಿ. ಮೀರಾ ಅಂಕಣ

ಹೆಣ್ಣಿನ ನಾಲ್ಕು ಕಷ್ಟಗಳು – ಅಂದು, ಇಂದು: ಡಾ. ಎಲ್. ಜಿ. ಮೀರಾ ಅಂಕಣ

ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ನಾವು ಅಂದುಕೊಂಡದ್ದಕ್ಕಿಂತ ಬಹಳ ಆಳವಾಗಿರುತ್ತವೆ. ಅವು ಗಂಡಸರ ಮನಸ್ಸಿನಲ್ಲಿ ಮಾತ್ರವಲ್ಲ ಹೆಂಗಸರ ಮನಸ್ಸಿನಲ್ಲೂ ಇರುತ್ತವೆ! ಏಕೆಂದರೆ ಸಾಮಾಜಿಕ ಮೌಲ್ಯಗಳ ಅಂತರಂಗೀಕರಣದ ಸ್ವರೂಪ ಹಾಗಿರುತ್ತದೆ. ಹೀಗಾಗಿ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಪದಪುಂಜಗಳು ಇಂದಿನ ಹೆಣ್ಣಿನ ಮಟ್ಟಿಗೆ ಅನ್ವಯಿಸುತ್ತವೆಯೆ? ಎಂದು ಕೇಳಿದರೆ ಆ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂಬ ಸರಳ ಉತ್ತರ ಸಿಗುವುದಿಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತನೆಯ ಬರಹ

`ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು,’ ಇವು ಹೆಣ್ಣಿನ ಪಾಲಿನ ನಾಲ್ಕು ಮಹಾಕಷ್ಟಗಳು ಎಂದು ನನ್ನ ತಾಯಿ ಹೇಳುತ್ತಿದ್ದುದು ಆಗಾಗ ನೆನಪಾಗುತ್ತದೆ. ಈ ಶತಮಾನ ಅಂದರೆ ಮಾಹಿತಿ ತಂತ್ರಜ್ಞಾನ ಯುಗ, ಹಾಗೂ ಇದರ ಹಿಂದಿನ ಶತಮಾನ – ಅಂದರೆ ಕೈಗಾರಿಕಾ ಯುಗ, ಮತ್ತು ಇವುಗಳಿಗೂ ಹಿಂದೆ ಇದ್ದ ಗ್ರಾಮೀಣ ಸಮಾಜದ ಕೃಷಿಯುಗದ ಪಿತೃಪ್ರಧಾನ ವ್ಯವಸ್ಥೆಗಳಲ್ಲಿನ ಹೆಣ್ಣಿನ ಸಂಕಷ್ಟಮಯ, ಅಧೀನ ಬದುಕನ್ನು ಈ ನಾಲ್ಕು ಪದಪುಂಜಗಳು ತುಂಬ ಅಡಕವಾಗಿ ಹೇಳುತ್ತವೆ ಅನ್ನಿಸುತ್ತೆ.

`ಮೊಟ್ಟ ಮೊದಲು ಮನುಷ್ಯ ಸಮಾಜ ರೂಪುಗೊಂಡಾಗ ವ್ಯವಸ್ಥೆಯು ಮಾತೃಪ್ರಧಾನವಾಗಿತ್ತು, ಕೃಷಿಯಲ್ಲಿ ಭೂಸ್ವಾಧೀನತೆ, ಆಸ್ತಿಯ ಪರಿಕಲ್ಪನೆ ಬಂದಾಗ ಮನುಷ್ಯ ಸಮಾಜಗಳು ಪಿತೃಪ್ರಧಾನ ವ್ಯವಸ್ಥೆಯಾಗಿ ಬದಲಾದವು’ ಎಂದು ಲಿಖಿತ ಇತಿಹಾಸ ಹೇಳುತ್ತದಾದರೂ ನಮಗೆ ಎದ್ದು ಕಾಣುವುದು ಮತ್ತು ಕಾರ್ಯತಃ ಇಂದಿಗೂ ಮನಸ್ಸುಗಳನ್ನು ಪ್ರಭಾವಿಸುತ್ತಿರುವುದು ಶತಶತಮಾನಗಳ ಹೆಣ್ಣಿನ ದಾಸ್ಯದ ನೋವು ನರಳಿಕೆಗಳೇ. ಇರಲಿ, ಮನುಕುಲದ ಇತಿಹಾಸದ ಬಗ್ಗೆ ಇನ್ಯಾವಾಗಲಾದರೂ ಮಾತಾಡೋಣ.

ಈಗ ಇಲ್ಲಿ ಈ ಲೇಖನದ ಮಟ್ಟಿಗೆ ನಾನು ಗಮನ ವಹಿಸುತ್ತಿರುವ ಸಂಗತಿಯೇನೆಂದರೆ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಎಂಬ ಸನ್ನಿವೇಶಗಳ ಶೋಚನೀಯ ಅವಸ್ಥೆಯು ಹೆಣ್ಣಿನ ಮಟ್ಟಿಗೆ ಈ ಕಾಲದಲ್ಲಿ ಬದಲಾಗಿದೆಯೇ, ಇಲ್ಲವೇ ಎಂಬುದು. ನಮ್ಮ ದೇಶದಲ್ಲಿ, ಇನ್ನೂ ವಿದ್ಯುತ್ ವ್ಯವಸ್ಥೆ ಇರದ, ವಿದ್ಯಾಭ್ಯಾಸದ ಅನುಕೂಲ ಇರದ ಕುಗ್ರಾಮಗಳಲ್ಲಿ ಈ ಗೋಳಿನ ಬಾಳು ಹೆಣ್ಣಿನ ಮಟ್ಟಿಗೆ ಹೀಗೇ ಮುಂದುವರಿದಿರಬಹುದು. ಆದರೆ ತಕ್ಕಮಟ್ಟಿಗೆ ಅಭಿವೃದ್ಧಿ ಸಾಧಿಸಿರುವ ಪಟ್ಟಣ, ನಗರ, ಮಹಾನಗರಗಳ ಮಟ್ಟಿಗೆ ಈ ಸ್ಥಿತಿಗತಿ ಹೇಗಿದೆ ಎಂದು ಗಮನಿಸಿದರೆ ಕೆಲವು ಸ್ವಾರಸ್ಯಕರ ಅಂಶಗಳು ನಮ್ಮ ಮನಸ್ಸನ್ನು ಮುಟ್ಟುತ್ತವೆ.

1. ಉರಿಯದ ಒಲೆ – ಇಂಡಕ್ಷನ್ ಕಾಯಿಲ್, ಅಡುಗೆ ಅನಿಲ, ಸೂರ್ಯಶಕ್ತಿ ಒಲೆ, ದಿಢೀರ್ ಪಾಕಪಾತ್ರೆ(ಇನ್ಸ್ಟೆಂಟ್ ಪಾಟ್), ಜಾಣ ಅಡುಗೆಪಾತ್ರೆ(ಸ್ಮಾರ್ಟ್ ಕುಕ್ಕರ್, ದೂರದಿಂದಲೇ ನಿಯಂತ್ರಿಸಬಹುದಾದ ಅಡುಗೆ ಉಪಕರಣ)ಗಳ ಈ ಅತ್ಯಾಧುನಿಕ ತಂತ್ರಜ್ಞಾನದ ಕಾಲದಲ್ಲಿ ತೀರಾ ಕುಗ್ರಾಮಗಳು ಮತ್ತು ಕಡುಬಡತನದ ಮನೆಗಳನ್ನು ಹೊರತು ಪಡಿಸಿದರೆ, ಉರಿಯದ ಒಲೆ ಹೆಣ್ಣಿಗೆ ಅಂತಹ ದೊಡ್ಡ ಸಮಸ್ಯೆ ಅಲ್ಲ ಅನ್ನಿಸುತ್ತದೆ. ಅದೂ ಅಲ್ಲದೆ ನಗರ, ಮಹಾನಗರಗಳಲ್ಲಂತೂ ಬೀದಿಗೆ ಹತ್ತು ಹೋಟಲುಗಳು, ಊಟವನ್ನು ಮನೆಬಾಗಿಲಿಗೇ ಸರಬರಾಜು ಮಾಡುವ ಸ್ವಿಗ್ಗಿ, ಝೊಮ್ಯಾಟೊಗಳು ಇರುವಾಗ ಮನೆಯಲ್ಲಿ ಒಲೆ `ಉರಿಯದಿದ್ದರೂ’ ಉಪವಾಸ ಇರುವ ಪ್ರಶ್ನೆ ಇಲ್ಲ! ಅಷ್ಟರ ಮಟ್ಟಿಗೆ ಜೀವನ ಸುಧಾರಿಸಿದೆ ಅನ್ನಬಹುದೇನೊ. ಸೌದೆ ಒಲೆಯ ಹೊಗೆ, ಊದುಕೊಳವೆಗಳ ಕಷ್ಟ ಹಾಗೂ ಸೀಮೆಣ್ಣೆ ಒಲೆ(ಸ್ಟೋವ್)ಗಳ ಸವಾಲು ನಮ್ಮ ಅಜ್ಜಿ, ಅಮ್ಮಂದಿರ ದಿನಮಾನ ಹಾಗೂ ನೆನಪುಗಳ ಭಾಗವಾದಷ್ಟು ನಮ್ಮ ದಿನಮಾನ ಮತ್ತು ನೆನಪುಗಳ ಭಾಗವಾಗಿಲ್ಲ.

2. ಏಳದ ದೋಸೆ – ಇಲ್ಲಿ `ಏಳದ ದೋಸೆ’ ಅನ್ನುವುದು ದೋಸೆಯ ಹಿಟ್ಟು ಒಲೆಗೆ ಅಂಟಿಕೊಳ್ಳುವ ಭೌತಿಕ ಕಷ್ಟವನ್ನು ಮಾತ್ರ ಹೇಳುತ್ತಿಲ್ಲ. ಮನೆಮಂದಿಗೆಲ್ಲ ಸರಿಯಾದ ಹೊತ್ತಿಗೆ ಬಿಸಿಬಿಸಿ ದೋಸೆ ಮಾಡಿಕೊಡುವ ಜವಾಬ್ದಾರಿಯನ್ನು ಹೊತ್ತ/ಹೊರಿಸಲಾದ ಹೆಣ್ಣಿನ ಸ್ಥಿತಿಯನ್ನು ಸಹ ಹೇಳುತ್ತಿದೆ. ವಿಶೇಷ ರೀತಿಯ ನಾನ್‌ಸ್ಟಿಕ್ ಕಾವಲಿಗಳು ಮತ್ತು ಸಿದ್ಧ ದೋಸೆಹಿಟ್ಟು ಸಿಗುವ ಈ ಕಾಲದಲ್ಲಿ ಈ ಸಮಸ್ಯೆಯೂ ಹೆಣ್ಣಿಗೆ ತೀರಾ ತೊಂದರೆ ಕೊಡಲಾರದು. ಆದರೆ ಎಷ್ಟೇ ಅನುಕೂಲಗಳಿದ್ದರೂ ದೋಸೆ ಹುಯ್ಯುತ್ತಿರುವಾಗ ಒಮ್ಮೊಮ್ಮೆ ದೋಸೆ ಏಳದೆ ಕಷ್ಟ ಆಗುವ ಸಂದರ್ಭ ಬಂದುಬಿಡುವುದನ್ನು ನಾವು ತಳ್ಳಿ ಹಾಕುವಂತಿಲ್ಲ. `ಅಡಿಗೆ ಮನೆ ಎಂಬುದು ಕೇವಲ ಹೆಣ್ಣಿನ ಜವಾಬ್ದಾರಿ’ ಎಂದು ಭಾವಿಸುವ ಮನೆಗಳು ಈ ಕಾಲದಲ್ಲೂ ತುಂಬ ಇವೆ. ಹೀಗಾಗಿ ದೋಸೆ ಮಾಡುವಾಗ ಕೆಲವು ಸಲ ಹೆಣ್ಣಿಗೆ ಕಷ್ಟ ಆಗಬಹುದು. ಹೊಟ್ಟೆ ಹಸಿದು ಕಾಯುತ್ತಿರುವ ಮನೆಮಂದಿ, ಅದರಲ್ಲೂ ದೋಸೆಗಾಗಿ ಕಿರಿಚುವ ಸಣ್ಣ ಮಕ್ಕಳು, ಹುಬ್ಬು ಗಂಟಿಕ್ಕುವ ಅತ್ತೆ ಮಾವ, ಏಳದ ದೋಸೆಯ ಮುಜುಗರಕ್ಕೆ ಮನೆಗೆ ಬಂದ ಅತಿಥಿಗಳು ಸಾಕ್ಷಿಯಾಗುವ ಪರಿಸ್ಥಿತಿ – ಇವುಗಳನ್ನು ಅನುಭವಿಸುವ ಹಿಂಸೆ ಯಾರಿಗೂ ಬೇಡ, ಏಳದ ದೋಸೆಯ ಜೊತೆ ಗುದ್ದಾಡಿದವರಿಗೇ ಗೊತ್ತು ಆ ಫಜೀತಿ ಎಂಥದೆಂದು. ಕಾವಲಿಗೇ ಅಂಟಿಕೊಂಡು ಮುದ್ದೆಯಾಗುವ ಹಾಗಾಗಿ ವ್ಯರ್ಥವಾಗುವ ದೋಸೆ ಹಿಟ್ಟು, ಅದಕ್ಕೆ ರವೆಯನ್ನೋ, ಅಕ್ಕಿಹಿಟ್ಟು-ಗೋಧಿ ಹಿಟ್ಟನ್ನೋ ಹಾಕಿ ಸರಿ ಮಾಡುವ ಪ್ರಯೋಗದ ಪಾಡು … ಅಯ್ಯೋ… ಸಾಲದ್ದಕ್ಕೆ, ಏಳದ ದೋಸೆಯ ಈ ಕಷ್ಟದ ಸಮಯದಲ್ಲಿ, ತಟ್ಟೆಗೆ ದೋಸೆ ಬಡಿಸಿ ಕ್ಷಣಾರ್ಧ ಕಳೆಯುವಷ್ಟರಲ್ಲಿ ಅದನ್ನು ಮಿಂಚಿವ ವೇಗದಲ್ಲಿ ಖಾಲಿ ಮಾಡಿ `ದೋಸೇ ……….’ ಎಂದು ಕೂಗಿಕೊಳ್ಳುವ `ವೇಗದೂತ’ ಮನೆಮಂದಿ ಇದ್ದರಂತೂ ಆ ಹೆಂಗಸಿನ ಪಾಡು ಯಾರಿಗೂ ಬೇಡ. ಹೇಗೆ ಮೂಗಿರುವ ತನಕ ಶೀತ ತಪ್ಪುವುದಿಲ್ಲವೋ ಹಾಗೆಯೇ ದೋಸೆ ಮಾಡುವ ಸಂದರ್ಭ ಇರುವ ತನಕ ಅದು ಏಳದಿರುವ ಸಾಧ್ಯತೆಯೂ, ಅದರ ಸಮಸ್ಯೆಯೂ ತಪ್ಪುವುದಿಲ್ಲ!

3. ಬಯ್ಯುವ ಗಂಡ – ಈ ಅಂಶದ ಬಗೆಗಿನ ಚರ್ಚೆಯು ತುಂಬ ಕುತೂಹಲಕರವಾದುದು. ಗಂಡ ಅನ್ನಿಸಿಕೊಂಡವನು ತನ್ನ ಹೆಂಡತಿಯನ್ನು ಬಯ್ಯುತ್ತಾನೊ ಇಲ್ಲವೊ ಎಂಬುದು (ಬಹಳ ಆಶ್ಚರ್ಯಕರ ರೀತಿಯಲ್ಲಿ ಅನ್ನಬಹುದು) ಸಂಪೂರ್ಣವಾಗಿ ಅವಳ ಗುಣಾವಗುಣಗಳನ್ನು ಅವಲಂಬಿಸಿರುವುದಿಲ್ಲ. ಅದು ಬಹುಮಟ್ಟಿಗೆ ಗಂಡನ ಮನಸ್ಥಿತಿ, ಗುಣಾವಗುಣಗಳನ್ನು ಅವಲಂಬಿಸಿರುತ್ತದೆ! ಹೆಂಡತಿಯು ಮುದ್ದುಗೊಂಬೆಯಂತಿರಬಹುದು ಅಥವಾ ಲೋಕದ ಕಣ್ಣಲ್ಲಿ ಕುರೂಪಿ ಇರಬಹುದು, ಅವಳು ಮೃದುಭಾಷಿಣಿಯಾಗಿರಬಹುದು ಇಲ್ಲ ಒರಟು ಮಾತಿನವಳಾಗಿರಬಹುದು, ಮೂರನೆ ತರಗತಿ ಓದಿರಬಹುದು ಅಥವಾ ಸ್ನಾತಕೋತ್ತರ ಪದವೀಧರೆಯಾಗಿರಬಹುದು, ಉದ್ಯೋಗಸ್ಥೆಯಾಗಿರಬಹುದು ಅಥವಾ ಗೃಹಿಣಿಯಾಗಿರಬಹುದು – ಗಂಡನು ಅವಳನ್ನು ಗೌರವಿಸುವ ಮನಸ್ಸಿದ್ದವನಾದರೆ ಗೌರವಿಸುತ್ತಾನೆ, ಇಲ್ಲದಿದ್ದರೆ ಇಲ್ಲ ಅಷ್ಟೆ! ಇದು ವಿಚಿತ್ರವಾದರೂ ಸತ್ಯ. ಗಮನವಿಟ್ಟು ನೋಡಿದರೆ, ನಮ್ಮ ಸುತ್ತಲಿನ ವಿವಾಹಿತ ಹೆಂಗಸರ ಅನುಭವಗಳನ್ನು ಕೇಳಿದರೆ ಇದು ನಮ್ಮ ಅರಿವಿಗೆ ಬರುವ ಒಂದು ಸಾಮಾಜಿಕ ವಾಸ್ತವವಾಗಿದೆ. ಇದೆಲ್ಲ ಎಷ್ಟು ಸಂಕೀರ್ಣವಾಗಿರುತ್ತದೆಂದರೆ ಯಾವ ಮದುವೆಯನ್ನೂ ಸಾಧಾರಣೀಕರಿಸಲಾಗದು. ಹೊರಗಿನ ಪ್ರಪಂಚದಲ್ಲಿ ತುಂಬ ಸೌಜನ್ಯದಿಂದ ನಡೆದುಕೊಳ್ಳುವ ಗಂಡಸರು ಮನೆಯಲ್ಲಿ ಹೆಂಡತಿಯನ್ನು ಸದಾ ಬಯ್ಯುವ/ಗದರುವ ಸ್ವಭಾವವನ್ನು ಹೊಂದಿರುವುದು ಸಾಧ್ಯವಿದೆ, ಮತ್ತು ಇದರ ವಿರುದ್ಧ ಸ್ಥಿತಿಯೂ ಸಾಧ್ಯವಿದೆ. ಇನ್ನೊಂದು ಮುಖ್ಯ ವಿಷಯ ಅಂದರೆ ಕೇವಲ ಕೈಯೆತ್ತಿ ಹೊಡೆಯವುದು ಮಾತ್ರ ಹಿಂಸೆ ಅಲ್ಲ, ಜಿಟಿಜಿಟಿ ಮಳೆಯಂತೆ, ಗುಂಯ್‌ಗುಡುವ ಸೊಳ್ಳೆಯಂತೆ, ಗಂಟುಮುಖ ಹಾಕಿಕೊಂಡು ಪ್ರತಿಯೊಂದಕ್ಕೂ ಬಯ್ಯುವ, ಗದರುವ ಗಂಡನ ವರ್ತನೆಯನ್ನು ಅನುಭವಿಸುವುದೂ ಒಂದು ದೊಡ್ಡ ಹಿಂಸೆಯೇ.

ಮನೆಯಲ್ಲಿನ ಹಿಂಸೆಯನ್ನು ವಿರೋಧಿಸುವ ಕಾನೂನು ನಮ್ಮ ದೇಶದಲ್ಲಿ 2005ರಿಂದ ಇದೆ. ಇದರಲ್ಲಿ ಗಂಡನು ಹೆಂಡತಿಗೆ ಸದಾ ಬಯ್ಯುತ್ತಾ ಅವಳಲ್ಲಿ ಒತ್ತಡ ಸೃಷ್ಟಿ ಮಾಡುವುದನ್ನು ಮಾನಸಿಕ-ಭಾವನಾತ್ಮಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ಈಗ ನನಗೆ ಮಾಸ್ತಿಯವರ ಕಾಲದ ಲೇಖಕಿಯಾದ ಎಚ್.ವಿ. ಸಾವಿತ್ರಮ್ಮನವರು ಬರೆದಂತಹ, ದಾಂಪತ್ಯದ ತಾಳಿಕೆಯ ಗುಣವನ್ನು ಹೇಳುವ `ಹಳೆಯ ಜೋಡು’ ಎಂಬ ಕಥೆ, `ಮೈಸೂರು ಮಲ್ಲಿಗೆ’ಯ `ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ಯ ಪ್ರಪಂಚ, ನವೋದಯ ಸಾಹಿತ್ಯದ `ಸಖೀಗೀತ’, `ದಾಂಪತ್ಯಗೀತ’ಗಳ ಪ್ರಪಂಚವು ನೆನಪಾಗುತ್ತಿವೆ, ಅದಕ್ಕೆ ಹೋಲಿಸಿದರೆ ಇಂದಿನ ಅತ್ಯಾಧುನಿಕ ಮದುವೆಯ ರೀತಿಗಳಾದ ಲಿವ್ ಇನ್ (ಮದುವೆಯ ಬಂಧನಕ್ಕೆ ಒಳಗಾಗದ ಸಹಜೀವನ), ಗುತ್ತಿಗೆ ಮದುವೆಗಳು, ಎಲ್‌ಟಿಎ ಮದುವೆಗಳು (ಲಿವಿಂಗ್ ಟುಗೆದರ್ ಅಪಾರ್ಟ್ = ಮದುವೆ ಆಗಿದ್ದರೂ ವೃತ್ತಿ-ಉದ್ಯೋಗಳ ಕಾರಣಕ್ಕಾಗಿ ಗಂಡನು ಒಂದು ಊರಲ್ಲಿ, ಹೆಂಡತಿ ಇನ್ನೊಂದು ಊರಲ್ಲಿ ಇರಲು, ದಂಪತಿಗಳಿಬ್ಬರೂ ಒಪ್ಪಿರುವ ಮದುವೆಯ ಸನ್ನಿವೇಶ) ಎಷ್ಟು ಭಿನ್ನ ಅನ್ನಿಸುತ್ತವಲ್ಲ!! ಇಂಥಲ್ಲಿ `ಬಯ್ಯುವ ಗಂಡ’ ಅಥವಾ `ಬಯ್ಯದಿರುವ ಗಂಡ’ ಎಂಬ ಪರಿಕಲ್ಪನೆಯ ಬಗ್ಗೆ ಚಿಂತನೆ ಮಾಡಲು ಇನ್ನೊಂದು ಹೊಸ ಲೇಖನವನ್ನೇ ಬರೆಯಬೇಕಾದೀತು.

4. ಅಳುವ ಮಗು – ಇದು ತುಸು ಗಂಭೀರ ಚಿಂತನೆ ಬೇಡುವ ವಿಷಯ. `ಮಕ್ಕಳಿರಲವ್ವ ಮನೆತುಂಬ’ ಅನ್ನುವ ಕಾಲದಿಂದ ಶೈತ್ಯೀಕರಿಸಿದ ಅಂಡಾಣು ಹಾಗೂ ಬಾಡಿಗೆ ಗರ್ಭದ ಕಾಲದ ತನಕ ಬಂದಿದ್ದೇವೆ. `ತಾಯಾಗದವಳನ್ನು ಹೆಣ್ಣೆಂಬರೇನು?’ ಎಂಬ ಆದರ್ಶದ ಕಾಲ ಬದಲಾಗಿ, ಶ್ರೀಮಂತ ವರ್ಗಕ್ಕಂತೂ ತಾಯ್ತನ ಎಂಬುದು ಇಂದು ಒಂದು ಆಯ್ಕೆ ಆಗಿದೆ! ಉದಾಹರಣೆಗೆ ಈ ಕಾಲದ ಸಿನಿಮಾ ನಟಿಯರು. ತಾವು ಹೆರದೆ ಇನ್ನೊಬ್ಬರಿಂದ ಹೆರಿಸುವುದು, ಅಥವಾ ತಾವೇ ಹೆರುವ ನಿರ್ಧಾರ ಮಾಡಿದರೆ ಕೈಗೊಬ್ಬರು ಕಾಲಿಗೊಬ್ಬರು ಆಳುಗಳನ್ನಿಟ್ಟುಕೊಂಡು `ಐ ಲವ್ ಮೈ ಬೇಬಿ ಬಂಪ್’ ಎಂದು ಉಲಿಯುತ್ತಾ, ಐಷಾರಾಮೀ ಜೀವನದಲ್ಲಿ `ಐ ಆಮ್ ಎಂಜಾಯಿಂಗ್ ಮೈ ಮದರ್‌ಹುಡ್’ ಅನ್ನುವುದು ಇವುಗಳ ಬಗ್ಗೆ ಓದುತ್ತೇವಲ್ಲ. ಇಂತಹ ಅತಿಶ್ರೀಮಂತ ವರ್ಗದ ಮಹಿಳೆಯರು ಒಂದೆಡೆಯಾದರೆ, ಈ ಕಾಲದಲ್ಲೂ ಬೀದಿ ಪಕ್ಕದ ಮರದಲ್ಲಿ ಜೋಕಾಲಿ ಕಟ್ಟಿ ಬಿಸಿಲಲ್ಲಿ ಕಲ್ಲು ಮಣ್ಣು ಹೊತ್ತು ಮಕ್ಕಳನ್ನು ಸಾಕುವ ಕಡುಬಡವ ಹೆಣ್ಣುಮಕ್ಕಳದು ಇನ್ನೊಂದು ಪಾಡು. ಇನ್ನು, ಗೊಣಗಾಡುವ ಮನೆ ಹಿರಿಯರ ಕೈಯಲ್ಲಿ ಅಥವಾ ವ್ಯಾಪಾರೀ ಮನೋಭಾವದ ಶಿಶುಪಾಲನಾ ಕೇಂದ್ರಗಳಲ್ಲಿ ಎಳೆಮಗುವನ್ನು ಬಿಟ್ಟು ದಿನವಿಡೀ ಮಿಡುಕುವ ಮಧ್ಯಮವರ್ಗದ ಉದ್ಯೋಗಸ್ಥ ಮಹಿಳೆಯರ ಕಷ್ಟ ಮತ್ತೊಂದೆಡೆ. ಇವೆಲ್ಲ ಸಾಲದು ಎಂಬಂತೆ, ಭಾರತದಲ್ಲಿ ಈಗೀಗ ಹೆಚ್ಚುತ್ತಿರುವ ಹದಿಹರೆಯದ ಬಸಿರಿನ ಸಮಸ್ಯೆಯಿಂದಾಗಿ ಅನಾಥಾಶ್ರಮಕ್ಕೆ ಸೇರುತ್ತಿರುವ ಮಕ್ಕಳ ದಯನೀಯ ಸ್ಥಿತಿಯು ಗಾಬರಿ ಹುಟ್ಟಿಸುತ್ತದೆ(ನಡುವೆ ಅಂತರವಿರಲಿ ಸಿನಿಮಾವನ್ನು ನೆನಪಿಸಿಕೊಳ್ಳಬೇಕು). ಹೀಗಾಗಿ ಹೆಣ್ಣನ್ನು ಕಾಡುವ `ಅಳುವ ಮಗು’ ಎಂಬ ಸಮಸ್ಯೆಯನ್ನು ಸಾಮಾನ್ಯೀಕರಿಸಲು ಸಾಧ್ಯ ಇಲ್ಲ ಎಂದಾಯಿತು.

ಒಂದು ಮುಖ್ಯ ವಿಷಯ ಅಂದರೆ, ಹೆಣ್ಣಿನ ಹಣಕಾಸಿನ ಸ್ಥಿತಿಗತಿಯು ಮಗುವನ್ನು ಸಾಕುವುದರಲ್ಲಿನ ಅವಳ ಅನುಕೂಲ/ಅನಾನುಕೂಲಗಳನ್ನು ನಿರ್ಧರಿಸುತ್ತದೆ. ಈ ದೃಷ್ಟಿಯಿಂದ ತಾಯ್ತನ ಮತ್ತು ಶಿಶುಪಾಲನೆಯ ವಿಷಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬದಲಾಗುತ್ತಿರುವ ಕೆಲವು ಸಂಗತಿಗಳನ್ನು ಸಹ ನಾವು ಗಮನಿಸಬೇಕು. ಸರ್ಕಾರಿ ವ್ಯವಸ್ಥೆಗಳಲ್ಲಿ ತಾಯ್ತನದ ರಜೆಯನ್ನು ಆರು ತಿಂಗಳಿಗೆ ಏರಿಸಿರುವುದು, ಗರ್ಭಪಾತ ರಜೆ, ಹೊಸದಾಗಿ ನೀಡಲಾಗುತ್ತಿರುವ ಶಿಶುಪಾಲನಾ ರಜೆ, ಕೆಲಸದ ಸ್ಥಳಗಳಲ್ಲಿ ಕೆಲವು ಕಡೆಗಳಲ್ಲಾದರೂ ಲಭ್ಯ ಇರುವ ಶಿಶುಪಾಲನಾ ಕೇಂದ್ರಗಳು — ಇವು ಹೆಂಗಸರ ಮಟ್ಟಿಗೆ ಸ್ವಲ್ಪ ಮಟ್ಟಿಗೆ ಆರಾಮ ನೀಡುವ ಸಂಗತಿಗಳಾಗಿವೆ. ಆದರೆ ಇದೇ ಹೊತ್ತಲ್ಲಿ ಆತಂಕ ನೀಡುವ ಸಂಗತಿಯೆಂದರೆ, ಯುವತಿ/ಯುವಕರಲ್ಲಿ ಇಂದು ಸಂತಾನೋತ್ಪತ್ತಿಯ ಸಾಮರ್ಥ್ಯ ಬಹಳವಾಗಿ ಪೆಟ್ಟು ತಿನ್ನುತ್ತಿರುವುದು. ಒತ್ತಡದ ಜೀವನಶೈಲಿಯೋ, ಮಾಲಿನ್ಯವೋ, ಅಪೌಷ್ಟಿಕತೆಯೋ, ಇವೆಲ್ಲ ಸೇರಿದ ಕಾರಣವೋ ಒಟ್ಟಿನಲ್ಲಿ ಗರ್ಭಕೋಶ ಹಾಗೂ ಪುಂಸಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಯುವತಿ-ಯುವಕರನ್ನು ಕಾಡುತ್ತಿದ್ದು ದಿನೇ ದಿನೇ ಫಲವಂತಿಕೆಯ ಚಿಕಿತ್ಸಾ ಕೇಂದ್ರಗಳು (ಫರ್ಟಿಲಿಟಿ ಕ್ಲಿನಿಕ್ಸ್) ಹೆಚ್ಚುತ್ತಿವೆ. ಮಗುವಿನ ಅಳುವನ್ನು ಸಂಭಾಳಿಸುವುದು, ಅದನ್ನು ಸಾಕುವುದು ಹಾಗಿರಲಿ, ಅದು ಹುಟ್ಟುವುದೇ ಕಷ್ಟವೆಂಬ ಪರಿಸ್ಥಿತಿ ಇಂದು ನಗರ, ಮಹಾನಗರಗಳಲ್ಲಿ ಬಂದೊದಗಿದೆ!

ಈ ದೃಷ್ಟಿಯಿಂದ ಇನ್ನೊಂದು ವಿಷಯ ಇದೆ. ಸ್ತ್ರೀ ಸಬಲೀಕರಣ, ಅವಳ ಸ್ವಾಯತ್ತತೆ, ವಿದ್ಯಾಭ್ಯಾಸ, ಉದ್ಯೋಗ, ಅವಳಿಗೆ ಸಿಗಬೇಕಾಗಿರುವ ಕರ್ತೃತ್ವದ ಅಧಿಕಾರ(ಏಜೆನ್ಸಿ ಅನ್ನುವ ಅರ್ಥದಲ್ಲಿ) ಇವು ಬಹಳ ಮುಖ್ಯ ಹಾಗೂ ಸ್ತ್ರೀವ್ಯಕ್ತಿತ್ವದ ನಿರ್ಧಾರಕ ಅಂಶಗಳು. ಸುಮಾರು 250 ವರ್ಷಗಳಿಂದ ನಡೆದಿರುವ ಸ್ತ್ರೀವಾದಿ ಹೋರಾಟಗಳ ಮೂಲ ಉದ್ದೇಶವೇ ಸ್ತ್ರೀಗೆ ಇವನ್ನು ದೊರಕಿಸಿಕೊಡುವುದು. ಇದೇ ಸ್ತ್ರೀವ್ಯಕ್ತಿತ್ವದ ಪ್ರಾಣಮೂಲ ಎನ್ನುವುದನ್ನು ವಿವರಿಸಬೇಕಿಲ್ಲ. ಆದರೆ ಆಧುನಿಕ ಔದ್ಯಮಿಕ ಸ್ತ್ರೀಯ ಜೀವಿತಾವಧಿಯ ಒಂದು ಸಂದರ್ಭವು ಮಾತ್ರ ಅವಳಿಗೆ ಬಹಳ ದೊಡ್ಡ ಸವಾಲುಗಳನ್ನು ಉಂಟುಮಾಡುತ್ತದೆ. ಅದು ಯಾವುದೆಂದರೆ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ತಾಯಿಯ ಪಾತ್ರದ ಜವಾಬ್ದಾರಿ. ಮಹಾನಗರಗಳ ಉಸಿರು ಕಟ್ಟಿಸುವ ವಾಹನ ದಟ್ಟಣೆ, ಔದ್ಯಮಿಕ ಸಂಸ್ಥೆಗಳ ನಿರ್ದಯಿ ಪೈಪೋಟಿಯ ಕೆಲಸಸಂಸ್ಕೃತಿ, ಚಿಕ್ಕ ಮಕ್ಕಳನ್ನು ದಿನದ ಬಹಳ ಕಾಲ ಬಿಟ್ಟಿರಬೇಕಾದ ಕಷ್ಟಕರ ಸಂದರ್ಭವನ್ನು ಅವಳಿಗೆ ಉಂಟುಮಾಡುತ್ತವೆ. ಇಂತಹ ಸನ್ನಿವೇಶದಲ್ಲಿ ತಾಯಿ ಮತ್ತು ಚಿಕ್ಕಮಕ್ಕಳು ಇಬ್ಬರೂ ತುಂಬ ಒತ್ತಡ, ಮನೋವೇದನೆಗಳಿಗೆ ಒಳಗಾಗುತ್ತಾರೆ. ಚಿಕ್ಕಮಕ್ಕಳನ್ನು ಮನೆಯೊಳಗೆ ಕೂಡಿ ಹಾಕಿ ಬರಬೇಕಾದ ಪರಿಸ್ಥಿತಿ, ಮಗುವನ್ನು ನೋಡಿಕೊಳ್ಳಲು ಇಟ್ಟ ದಾದಿ/ಆಯಾರನ್ನೇ ಮಗುವು ತನ್ನ ತಾಯಿಗಿಂತ ಹೆಚ್ಚಾಗಿ ಹಚ್ಚಿಕೊಂಡುಬಿಡುವುದು, `ನಾ ಆಂಟಿ ಊರಿಗೆ ಹೋಗ್ತೇನೆ, ನಿಂಗೆ ನಂಜೊತೆ ಇರಲು ಟೈಮಿಲ್ಲ ಅಲ್ವಾ ಅಮ್ಮ?’ ಅಂತ ಮಗು ಹೇಳುವುದು… ಇವೆಲ್ಲ ಆಧುನಿಕ ಜಗತ್ತಿನ ಅತಿಯಾತನೆಯ ನಿರ್ಮಾಣಗಳು. ನಮ್ಮ ಔದ್ಯಮಿಕ ಜಗತ್ತು ಈ ವಿಷಯದಲ್ಲಿ ಗಂಭೀರವಾಗಿ ಯೋಚಿಸದಿದ್ದರೆ ನಾವು ಸಂತೋಷವಿಲ್ಲದ ಕುಟುಂಬಗಳಿಗೆ ಸಾಕ್ಷಿಯಾಗುತ್ತೇವೆ.

ಒಟ್ಟಿನಲ್ಲಿ, ಈ ವಿಷಯದ ಬಗೆಗೆ ತೀರ್ಮಾನ ರೂಪದಲ್ಲಿ ಇಷ್ಟನ್ನು ಹೇಳಬಹುದು. ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ನಾವು ಅಂದುಕೊಂಡದ್ದಕ್ಕಿಂತ ಬಹಳ ಆಳವಾಗಿರುತ್ತವೆ. ಅವು ಗಂಡಸರ ಮನಸ್ಸಿನಲ್ಲಿ ಮಾತ್ರವಲ್ಲ ಹೆಂಗಸರ ಮನಸ್ಸಿನಲ್ಲೂ ಇರುತ್ತವೆ! ಏಕೆಂದರೆ ಸಾಮಾಜಿಕ ಮೌಲ್ಯಗಳ ಅಂತರಂಗೀಕರಣದ ಸ್ವರೂಪ ಹಾಗಿರುತ್ತದೆ. ಹೀಗಾಗಿ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಪದಪುಂಜಗಳು ಇಂದಿನ ಹೆಣ್ಣಿನ ಮಟ್ಟಿಗೆ ಅನ್ವಯಿಸುತ್ತವೆಯೆ? ಎಂದು ಕೇಳಿದರೆ ಆ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂಬ ಸರಳ ಉತ್ತರ ಸಿಗುವುದಿಲ್ಲ. ಹೆಣ್ಣಿನ ಬಾಳು ಹಸನಾಗಬೇಕಾದರೆ, ಕೇವಲ ಈ ನಾಲ್ಕು ಸಾಂಕೇತಿಕ ಸಮಸ್ಯೆಗಳಿಂದ ಅಲ್ಲ, ಇನ್ನೂ ಅವಳನ್ನು ಕಾಡುವ ನಲವತ್ತು – ನಾನೂರು ಸಮಸ್ಯೆಗಳಿಂದ ಅವಳು ಮುಕ್ತಳಾಗಬೇಕಿದೆ. ಹಾಗಾಗಬೇಕು ಅಂದರೆ ನಮ್ಮ ಗಂಡಾಳಿಕೆಯ ಸಮಾಜದ ಹಾಸುಹೊಕ್ಕಿನಲ್ಲಿ ಮತ್ತು ಸ್ತ್ರೀಯು ತನ್ನ ಅಸ್ಮಿತೆಯನ್ನು ನಿರ್ಮಿಸಿಕೊಳ್ಳುವುದರಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಅಲ್ಲವೆ?

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ