ನಮ್ಮ ಪಿತೃಪ್ರಧಾನ ವ್ಯವಸ್ಥೆಯು `ಗಂಡನನ್ನು ಹಂಚಿಕೊಳ್ಳಬೇಕಾದ’ ಪರಿಸ್ಥಿತಿಯಲ್ಲಿರುವ ಹೆಣ್ಣಿನ ದುಃಖ ದುಮ್ಮಾನಗಳ ಬಗ್ಗೆ, ಅವಳ `ಅವಮಾನದ’ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ರಾಜಕುಮಾರಿಯರಿಗೆ ಮದುವೆಯಾದಾಗ `ಸವತಿಯರೊಂದಿಗೆ ಜಗಳ ಮಾಡಬೇಡ, ಅವರನ್ನು ಅಕ್ಕ ತಂಗಿಯರಂತೆ ನೋಡಿಕೊ’ ಎಂಬ ಉಪದೇಶವನ್ನು ತವರುಮನೆಯವರು, ಹಿರಿಯರು ಆಕೆಗೆ ನೀಡುತ್ತಿದ್ದರು. `ಸವತಿಗಂಧವಾರಣೆ’ ಎಂಬ ಬಿರುದುಳ್ಳ ರಾಣಿಯರಿದ್ದರು ನಮ್ಮ ಪರಂಪರೆಯಲ್ಲಿ, ಹಾಗೆಂದರೆ ಸವತಿಯರ ನಡುವಿನ ಜಗಳವನ್ನು ಪರಿಹರಿಸುವ ಸಮರ್ಥೆ ಎಂದು ಅರ್ಥ. ಈ ಸಂಗತಿ ಏನನ್ನು ತೋರಿಸುತ್ತದೆಂದರೆ ಬಹುಪತ್ನಿತ್ವವು ನಮ್ಮ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿತ್ತು ಮತ್ತು ಮಾನ್ಯವೂ ಆಗಿತ್ತು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತೊಂಭತ್ತನೆಯ ಬರಹ
ನನ್ನ ಪರಿಚಯದ ಒಂದು ಕುಟುಂಬ ಇದೆ. ತುಮಕೂರು ಕಡೆಯ ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಬಡ ಕುಟುಂಬ ಅದು. ಸುಮಾರು ನಲವತ್ತು – ನಲವತ್ತೈದು ವರ್ಷಗಳ ಹಿಂದೆ ತಮ್ಮ ಊರಿನಲ್ಲಿ ಜಮೀನು ವ್ಯಾಜ್ಯದಿಂದಾಗಿ ತೋಟ ಹೊಲ ಕಳೆದುಕೊಂಡು ಉಂಟಾದ ಕಡುಬಡತನದಿಂದಾಗಿ, ಊಟಕ್ಕೆ ದಿಕ್ಕಿಲ್ಲದೆ ಈ ಮಹಾನಗರಕ್ಕೆ ಬಂದು ಇದರ ಒಂದು ಕೊಳೆಗೇರಿಯಲ್ಲಿ ವಾಸ್ತವ್ಯ ಹೂಡಿತು ಆ ಕುಟುಂಬ. ಗಂಡನು ಹುಲ್ಲು ಮಾರಿ, ಹಸು ಕಟ್ಟಿ ಹಾಲು ಮಾರಿ, ಹೆಂಡತಿ ಅಕ್ಕ ಪಕ್ಕದ ಬಡಾವಣೆಗಳ ಇದ್ದುಳ್ಳವರ ಮನೆಗಳ ಮುಸುರೆ ಬಳಿದು, ಹಿರಿಯ ಮಗ ಗಾರೆ ಕೆಲಸಕ್ಕೆ ಸೇರಿ ದುಡಿದು, ಪಡಬಾರದ ಕಷ್ಟ ಪಟ್ಟು ನಂತರ ಒಂದಿಷ್ಟು ನೆಲೆ ಕಂಡವರು ಅವರು.
ಪ್ರಸ್ತುತ ಈ ಕುಟುಂಬದ ಎರಡನೆಯ ಪೀಳಿಗೆ-ಮೂರನೆಯ ಪೀಳಿಗೆಗಳು ಬೆಂಗಳೂರಿನ ಒಂದು ಬಡಾವಣೆಯಲ್ಲಿ ಒಂದು ಸ್ವಂತ ಮನೆ ಕಟ್ಟಿಕೊಂಡು ಜೀವಿಸುತ್ತಿವೆ. ಗಾರೆ ಕೆಲಸ ಮಾಡುತ್ತಿದ್ದ ಮಗ ಈಗ ಮೇಸ್ತ್ರಿಯಾಗಿ ನೆಲೆನಿಂತು ಮನೆಯ ಯಜಮಾನನಾಗಿದ್ದಾನೆ. ಈಗಲೂ ಅವರ ಮನೆಯಲ್ಲಿ ಹಣದ ಕಷ್ಟ ಇದೆ, ಆದರೆ ಊಟಕ್ಕಿಲ್ಲದ ಕರಾಳಸ್ಥಿತಿ ಇಲ್ಲ. ಬಡತನದ ಮಟ್ಟದಿಂದ ಕೆಳ ಮಧ್ಯಮ ವರ್ಗಕ್ಕೆ ಮೇಲ್ಮುಖ ಚಲನೆ ಸಾಧಿಸಿ ಸ್ವಲ್ಪ ಮಟ್ಟಿಗೆ ನೆಲೆನಿಂತಿದೆ ಆ ಕುಟುಂಬ. ಇದೇನೋ ಒಳ್ಳೆಯ ವಿಚಾರವೇ.
ಆದರೆ ನನ್ನನ್ನು ಯೋಚನೆಗೆ ಹಚ್ಚಿದ್ದು ಈ ಮೇಸ್ತ್ರಿಗಿರುವ ಎರಡು ಹೆಂಡತಿಯರ ಸನ್ನಿವೇಶ. ಹೌದು, ಇವನಿಗೆ ಇಬ್ಬರು ಹೆಂಡತಿಯರು! ಕೆಲಸದಲ್ಲಿ, ಮನೆವಾಳ್ತೆಯಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿದ್ದ, ಆದರೆ ಅನಕ್ಷರಸ್ಥೆಯಾಗಿದ್ದು ಶುದ್ಧಾಂಗ ಗಂಡಾಳಿಕೆಯ ಮನಃಸ್ಥಿತಿಯವರಾಗಿದ್ದ ಇವನ ಅಮ್ಮ, ಇವನಿಗೆ ಸುಮಾರು ಇಪ್ಪತ್ತು ವರ್ಷವಾದಾಗ, ಹದಿಮೂರು ವರ್ಷದ ಒಬ್ಬಳು ಅನಕ್ಷರಸ್ಥ ಮುಗ್ಧೆಯನ್ನು ತಂದು ಮದುವೆ ಮಾಡಿದ್ದರು. ಅವಳು ಮೈನೆರೆದ ತಕ್ಷಣ ಈ ವಂಶೋದ್ಧಾರಕ ಅವಳಿಗೆ ಒಂದರ ಹಿಂದೆ ಒಂದರಂತೆ ಮೂರು ಮಕ್ಕಳನ್ನು ಕರುಣಿಸಿಬಿಟ್ಟ! ಮೂರು ಮಕ್ಕಳ ದೇಖರೇಖಿ, ಮೈಮುರಿವ ಮನೆಕೆಲಸದ ಒತ್ತಡ, ಜೋರಿನ ಅತ್ತೆಯ ದರ್ಬಾರು, ಬಡತನ … ಎಲ್ಲ ಸೇರಿ ಆ ಹುಡುಗಿಗೆ ಏನಾಯಿತೋ ಏನೋ, ಎಳೆಯ ಮಕ್ಕಳು-ಮನೆ ಬಿಟ್ಟು ತವರಿಗೆ ಓಡಿಹೋದಳು. `ಅವಳು ಮಹಾ ಬೇಜವಾಬ್ದಾರಿ ಗುಣದವಳು’ ಎಂಬ ಹಣೆಪಟ್ಟಿ ಅಂಟಿಸಿದ ಅತ್ತೆ ಒಂದೆರಡು ಬಾರಿ ಸೊಸೆಯನ್ನು ವಾಪಸ್ ಕರೆದಂತೆ ಮಾಡಿದವಳೇ, ಸೊಸೆ ಮರಳಿ ಬರಲಿಲ್ಲ ಎಂದು ದೂರುತ್ತ ಹೊಸ ಹೆಣ್ಣೊಂದನ್ನು ತಂದು ಮಗನಿಗೆ ಎರಡನೆಯ ಮದುವೆ ಮಾಡಿಯೇಬಿಟ್ಟಳು! ಮತ್ತೆ ಏನೇನು ಕೌಟುಂಬಿಕ ರಾಜಕಾರಣಗಳು ನಡೆದವೋ ತಿಳಿಯದು, ಮೊದಲನೆಯ ಸೊಸೆ ಮನೆಗೆ ಮರಳಿ ಬಂದಳು! ಈಗ ಈ ಗಂಡುದಿಕ್ಕಿಗೆ ಎರಡು ಹೆಂಡತಿಯರು, ಅದೂ ಒಂದೇ ಮನೆಯಲ್ಲಿ! ಹೇಗಿರಬಹುದು ಊಹಿಸಿ ಆ ಮನೆಯ ಸೊಸೆಯಂದಿರ ಮನಃಸ್ಥಿತಿ.
ಒಂದೇ ಗಂಡಸು ಇಬ್ಬರು ಹೆಂಡತಿಯರ ಜೊತೆ ಒಂದೇ ಮನೆಯಲ್ಲಿ ಬಾಳುವುದನ್ನು ನೆನಪಿಸಿಕೊಂಡರೆ ಒಬ್ಬ ಹೆಣ್ಣಾಗಿ ನನಗೆ ಮೈಯಲ್ಲಿ ಮುಳ್ಳೆದ್ದಂತಾಗುತ್ತದೆ. ಹೇಗಿರಬಹುದು ಆ ಕುಟುಂಬದ ಸಮೀಕರಣ!? ಮಲಗುಮನೆಯಲ್ಲಿ ಒಬ್ಬ ಗಂಡನು ದಿನ ಬಿಟ್ಟು ದಿನ ಇಬ್ಬರು ಹೆಂಗಸರ ಜೊತೆ ಪಾಳಿಯ ಪ್ರಕಾರ……… !! ಎಂತಹ ನೋವು, ಮುಜುಗರದ ಸ್ಥಿತಿ ಅಲ್ಲವೆ ಇದು? ಹಿಂದಿನ ಕಾಲದ ಅರಮನೆಯ ಅಂತಃಪುರಗಳು ನೆನಪಾದವು ನನಗೆ. ಅಲ್ಲಾದರೆ ರಾಣಿಯರಿಗೆ ಅವರವರದೇ ಆದ ಕೋಣೆಗಳು, ಕೈಗೆ ಕಾಲಿಗೆ ಸೇವೆ ಮಾಡುವ ದಾಸಿಯರು, ಬೇಕಾದಂತಹ ಒಡವೆ ವಸ್ತ್ರಗಳಾದರೂ ಇರುತ್ತಿದ್ದವು. ತನ್ನ ಗಂಡನಿಗೆ ಬೇರೆ ಪತ್ನಿಯರು (ಅಂದರೆ ತನಗೆ ಸವತಿಯರು) ಇರುವ ವಾಸ್ತವಾಂಶದಿಂದ ಮನಸ್ಸಿಗೆ ಬಹಳ ಬೇಸರ, ಕಸಿವಿಸಿ ಆದರೂ ಅವರಿಗಿದ್ದ ಲೌಕಿಕ ಅನುಕೂಲಗಳ ದೆಸೆಯಿಂದಾಗಿ, ಕಣ್ಣಾರೆ ತನ್ನ ಗಂಡನು ಬೇರೆಯವಳ ಜೊತೆ ಶಯ್ಯಾಗೃಹಕ್ಕೆ ತೆರಳುವುದನ್ನು ನೋಡುವ ಮುಜುಗರವಾದರೂ ತಪ್ಪುತ್ತಿತ್ತು. ಆದರೆ ಮಹಾನಗರದ ಚಿಕ್ಕ ಚಿಕ್ಕ ಮನೆಗಳಲ್ಲಿ ಹೀಗೆ ತನ್ನ ಗಂಡನನ್ನು ಇನ್ನೊಂದು ಹೆಂಗಸಿನೊಂದಿಗೆ ಹಂಚಿಕೊಂಡು ಬದುಕುವುದೆಂದರೆ ಯಾವುದೇ ಹೆಣ್ಣುಜೀವವಾಗಲಿ ವಿಲವಿಲನೆ ಒದ್ದಾಡುತ್ತದಲ್ಲವೆ? ಅ.ನ.ಕೃಷ್ಣರಾಯರ ಕಾದಂಬರಿಗಳಲ್ಲಿ ತನಗೆ ಮಕ್ಕಳಾಗದ ಕಾರಣಕ್ಕೆ ತನ್ನ ಗಂಡನಿಗೆ ತಾನೇ ಮುಂದೆ ನಿಂತು ಮದುವೆ ಮಾಡಿಸಿ, ಆ ಮದುವೆಯ ನಂತರವೂ ಅದೇ ಮನೆಯಲ್ಲಿ ಬಾಳುವ, ತನ್ನ ಸವತಿಗೆ ಹೂ ಮುಡಿಸಿ ಗಂಡನ ಬಳಿ ಕಳಿಸಿಕೊಡುವ `ಗೃಹಲಕ್ಷ್ಮಿಯರ’ ಚಿತ್ರ ಬರುತ್ತದೆ. ಆತ್ಮಗೌರವುವುಳ್ಳ ಒಬ್ಬ ಹೆಣ್ಣೊಬ್ಬಳು ಹೀಗೆ ಬದುಕಲಾಗಲಿ ಅಥವಾ ಸ್ವತಂತ್ರ ಮನಸ್ಸುಳ್ಳ ಲೇಖಕಿಯೊಬ್ಬಳು ಇಂತಹ ಪಾತ್ರಗಳನ್ನು ಚಿತ್ರಿಸಲಾಗಲಿ ಸಾಧ್ಯವೆ ಎಂದು ನಾನು ಅನೇಕ ಬಾರಿ ಯೋಚಿಸಿದ್ದೇನೆ.
ಸಾಮಾನ್ಯ ಜ್ಞಾನದ ಮಟ್ಟದಲ್ಲಿ ನೋಡುವುದಾದರೆ ಇನ್ನೊಬ್ಬ ಹೆಣ್ಣನ್ನು ತನ್ನ ಪ್ರೇಮಿ/ಗಂಡನು ತನ್ನ ಹೃದಯದ ಒಳಗೆ ಬಿಟ್ಟುಕೊಂಡ ಅಂದರೆ ಆ ಹೆಣ್ಣು ಅಂತಹ ಗಂಡಸಿನ ಜೊತೆ ಬದುಕಲು, ಆಪ್ತ ಸಂಬಂಧ ಮುಂದುವರಿಸಲು ಇಷ್ಟ ಪಡುವುದಿಲ್ಲ. ಸಂಬಂಧ ಮುರಿತ(ಈಗಿನ ಪರಿಭಾಷೆಯಲ್ಲಿ ಬ್ರೇಕ್ ಅಪ್) ಅಥವಾ ವಿಚ್ಛೇದನದ ಮೂಲಕ ಆ ಸಂಬಂಧಕ್ಕೆ ಅವಳು ತಿಲಾಂಜಲಿ ಹಾಡುತ್ತಾಳೆ. ಹೆಣ್ಣು ಆರ್ಥಿಕವಾಗಿ ಸಬಲಳಾಗಿದ್ದು ತನ್ನ ಕಾಲ ಮೇಲೆ ತಾನು ನಿಂತಿದ್ದಾಗ ಈ ನೋವಿನ ಆದರೆ ಆತ್ಮಗೌರವದ ಹೆಜ್ಜೆ ಇಡುವುದು ಸಾಧ್ಯ. ಆದರೆ ಗಂಡಸಿನ ಮೇಲೆ ದಯನೀಯವಾಗಿ ಅವಲಂಬಿತಳಾದ ಹೆಣ್ಣಿನ ಪಾಡು ಇಂತಹ ಸಂದರ್ಭಗಳಲ್ಲಿ ಬಹಳ ಕಷ್ಟಮಯವಾಗುತ್ತದೆ.
ಮೇಲೆ ಹೇಳಿದ ಸಂಗತಿಗಳ ಹಿನ್ನೆಲೆಯಲ್ಲಿ ನೋಡುವುದಾದರೆ ನಮ್ಮ ಪಿತೃಪ್ರಧಾನ ವ್ಯವಸ್ಥೆಯು `ಗಂಡನನ್ನು ಹಂಚಿಕೊಳ್ಳಬೇಕಾದ’ ಪರಿಸ್ಥಿತಿಯಲ್ಲಿರುವ ಹೆಣ್ಣಿನ ದುಃಖ ದುಮ್ಮಾನಗಳ ಬಗ್ಗೆ, ಅವಳ `ಅವಮಾನದ’ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ರಾಜಕುಮಾರಿಯರಿಗೆ ಮದುವೆಯಾದಾಗ `ಸವತಿಯರೊಂದಿಗೆ ಜಗಳ ಮಾಡಬೇಡ, ಅವರನ್ನು ಅಕ್ಕ ತಂಗಿಯರಂತೆ ನೋಡಿಕೊ’ ಎಂಬ ಉಪದೇಶವನ್ನು ತವರುಮನೆಯವರು, ಹಿರಿಯರು ಆಕೆಗೆ ನೀಡುತ್ತಿದ್ದರು. `ಸವತಿಗಂಧವಾರಣೆ’ ಎಂಬ ಬಿರುದುಳ್ಳ ರಾಣಿಯರಿದ್ದರು ನಮ್ಮ ಪರಂಪರೆಯಲ್ಲಿ, ಹಾಗೆಂದರೆ ಸವತಿಯರ ನಡುವಿನ ಜಗಳವನ್ನು ಪರಿಹರಿಸುವ ಸಮರ್ಥೆ ಎಂದು ಅರ್ಥ. ಈ ಸಂಗತಿ ಏನನ್ನು ತೋರಿಸುತ್ತದೆಂದರೆ ಬಹುಪತ್ನಿತ್ವವು ನಮ್ಮ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿತ್ತು ಮತ್ತು ಮಾನ್ಯವೂ ಆಗಿತ್ತು. ಸಂಸ್ಕೃತ ಭಾಷೆಯಲ್ಲಿ `ರಾಜಾ ಬಹುವಲ್ಲಭಾ’ ಎಂಬ ನಾಣ್ಣುಡಿಯೇ ಇದೆಯಲ್ಲ!
ಇನ್ನು ಕೆಲವು ಧರ್ಮಗಳಲ್ಲಿ ಗಂಡಸಿನ ಬಹುಪತ್ನಿತ್ವಕ್ಕೆ ಧಾರ್ಮಿಕ ಒಪ್ಪಿಗೆ ಇದೆ. ಆ ವ್ಯವಸ್ಥೆಗಳಲ್ಲಿ ಹೆಂಗಸರ ಪಾಡು ಹೇಳತೀರದು. ಮುಸಲ್ಮಾನ ಧರ್ಮಕ್ಕೆ ಸೇರಿದ್ದು ಉನ್ನತ ವಿದ್ಯಾಭ್ಯಾಸ ಹೊಂದಿ ಒಳ್ಳೆಯ ಸಂಬಳ ಬರುವ ಕೆಲಸದಲ್ಲಿದ್ದು, ತನ್ನ ಗಂಡ ಮತ್ತು ಒಂಬತ್ತು ವರ್ಷದ ಮಗುವಿನೊಂದಿಗೆ ಸಂಸಾರ ಮಾಡುತ್ತಿದ್ದ ಮಹಿಳೆಯೊಬ್ಬರು, ತನ್ನ ಗಂಡನು ತಾನು ಇನ್ನೊಬ್ಬ ಪ್ರೇಯಸಿಯನ್ನು ಹೊಂದಿರುವ ವಿಷಯವನ್ನು ತನಗೆ ತಿಳಿಸಿ `ನೀನೂ ಇರು, ಅವಳೂ ಇರಲಿ, ಅವಳನ್ನು ಬಿಟ್ಟು ಬದುಕಲಾರೆ’ ಅಂದಾಗ, ಅದಕ್ಕೆ ಒಪ್ಪದೆ ಮನೆಯಿಂದ ಹೊರಗೆ ಬಂದು ಸ್ವತಂತ್ರವಾಗಿ ಆಕೆ ಬದುಕಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ದುರದೃಷ್ಟದ ಸಂಗತಿ ಅಂದರೆ ಈಕೆಯ ಮಗ ತನ್ನ ತಾಯಿಯೊಂದಿಗೆ ಹೋಗಲು ಒಪ್ಪದೆ ಅವನ ತಂದೆಯ ಜೊತೆಗೇ ಇದ್ದುಬಿಟ್ಟದ್ದು. ಆದರೆ ಈ ನೋವನ್ನು ಸಹ ಹಲ್ಲು ಕಚ್ಚಿ ಸಹಿಸಿ ಆಕೆ ತಮ್ಮಷ್ಟಕ್ಕೆ ಬದುಕುತ್ತಾ ತಮ್ಮ ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಯಾವುದೇ ಧರ್ಮದವಳಾಗಿದ್ದರೂ ಆತ್ಮಗೌರವವುಳ್ಳ ಹಾಗೂ ತನ್ನ ಕಾಲ ಮೇಲೆ ತಾನು ನಿಂತ ಹೆಣ್ಣುಮಗಳು ಇದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಳು ಎಂದು ನನಗನ್ನಿಸುತ್ತದೆ.
ಸರಿ, ನಾನು ಶುರುವಿನಲ್ಲಿ ಹೇಳಲು ಪ್ರಾರಂಭಿಸಿದ್ದ ಇಬ್ಬರು ಹೆಂಡತಿಯರಿರುವ ಮೇಸ್ತ್ರಿಯ ಕಥೆಯನ್ನು ಮುಂದುವರಿಸುತ್ತೇನೆ. ಕಡುಬಡತನದ ಬವಣೆಗಳ ನಡುವೆಯೇ ಆ ಸಂಸಾರವು ನಡೆಯುತ್ತಾ ಸಾಗಿದಂತೆ ಮೇಸ್ತ್ರಿಯ ಎರಡನೆಯ ಹೆಂಡತಿಗೂ ಒಂದು ಮಗು ಆಯಿತು. ಅಂತೂ ಇಬ್ಬರು ಹೆಂಡತಿಯರು, ನಾಲ್ಕು ಮಕ್ಕಳು, ತನ್ನ ತಂದೆ-ತಾಯಿ, ಮತ್ತು ಗಂಡ ಬಿಟ್ಟು ಹೋಗಿದ್ದ ತಂಗಿ ಮತ್ತು ಅವಳ ಎರಡು ಮಕ್ಕಳು, ತಾನು ಸಾಕಲೆಂದು ಇರಿಸಿಕೊಂಡಿದ್ದ ಇನ್ನೊಬ್ಬ ತಂಗಿಯ ಮಗಳು, ಸಾಲದೆಂಬಂತೆ ಇವರು ಬೆಂಗಳೂರಿನಲ್ಲಿ ಇದ್ದಾರೆಂಬ ಕಾರಣಕ್ಕೆ ನಾನಾ ಕಾರಣಕ್ಕೆಂದು ಈ ಮಹಾನಗರಕ್ಕೆ ಬಂದು, ಇವರ ಮನೆಯಲ್ಲಿ ಇಳಿದುಕೊಳ್ಳುತ್ತಿದ್ದ ನೆಂಟರಿಷ್ಟರ ನಿರಂತರ ಸಾಲು ಇಷ್ಟು ದೊಡ್ಡ ಕುಟುಂಬವಾಯಿತು. ಮನೆಯ ದುಡಿಯುತ್ತಿದ್ದ ಕೈಗಳಿಗೆ ಇಷ್ಟೊಂದು ಬಾಯಿಗಳಿಗೆ ಮೂರು ಹೊತ್ತು ಅನ್ನ ಹಾಕುವುದೇ ದೊಡ್ಡ ಸವಾಲಾಗಿತ್ತು. ಗಮನಿಸಬೇಕಾದ ವಿಷಯಗಳೆಂದರೆ ಮೇಸ್ತ್ರಿಯ ಅಮ್ಮನಿಂದ ಹಿಡಿದು ಮನೆಯ ಎಲ್ಲ ಹೆಂಗಸರೂ ಶ್ರೀಮಂತರ ಮನೆಗಳಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇಂತಹ ಗುಲಾಮಚಾಕರಿಯ ಕೆಲಸಗಳನ್ನೇ ಮಾಡುತ್ತಿದ್ದರು ಮತ್ತು ಯಾರೂ ಅಕ್ಷರಸ್ಥರಾಗಿರಲಿಲ್ಲ. ಜೀವನ ನಿರ್ವಹಣೆಗೇ ಕಷ್ಟವಾಗಿ ರೆಟ್ಟೆಮುರಿಯುವಂತೆ ದುಡಿಯುವುದೇ ದಿನಚರಿ ಆದಾಗ ಚಿಂತೆ ಮಾಡಲೂ ಪುರುಸೊತ್ತು ಇರುವುದಿಲ್ಲವೆಂದು ತೋರುತ್ತದೆ. ಅಥವಾ ನಾವು ಹಾಗಂದುಕೊಳ್ಳುತ್ತೇವೇನೋ.
ಸರಿ. ಹೇಗೋ ಕಷ್ಟ ಪಟ್ಟು ಆ ಕುಟುಂಬ ಕಡುಬಡತನದ ರೇಖೆ ದಾಟಿ ಕೆಳ ಮಧ್ಯಮ ವರ್ಗದ ಬದುಕನ್ನು ತನ್ನದಾಗಿಸಿತು ಅಂದೆನಲ್ಲ. ಸೂಕ್ಷ್ಮವಾಗಿ ಗಮನಿಸುವವರಿಗೆ ಆ ಮನೆಯ ಭಾವನಾತ್ಮಕ ಅಡಿಪಾಯದಲ್ಲೇ ರಂಧ್ರಗಳು, ಸುರಂಗಗಳು ಇರುವುದು ಅರಿವಿಗೆ ಬರುತ್ತಿತ್ತು. ಮೇಸ್ತ್ರಿಯ ಮೊದಲ ಹೆಂಡತಿ ಮನೆಯಲ್ಲೇ ವಸ್ತುಗಳನ್ನು ಕದಿಯಲು ಆರಂಭಿಸಿ ತನ್ನ ತವರಿಗೆ ಸಾಗಿಸಲಾರಂಭಿಸಿದ್ದಳು! (ಬೇಲಿಯೇ ಎದ್ದು ಹೊಲ ಮೆಯ್ದೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ .. ಎಂಬ ಬಸವಣ್ಣನವರ ಸಾಲುಗಳು ನೆನಪಾಗುತ್ತಿವೆ). ಇನ್ನು ಮೇಸ್ತ್ರಿಯ ಎರಡನೆಯ ಹೆಂಡತಿ ಒಬ್ಬರ ಬಗ್ಗೆ ಇನ್ನೊಬ್ಬರ ಹತ್ತಿರ ಚಾಡಿ ಮಾತಾಡಿ ಮಾತಾಡಿ ಮನೆಯ ಮನಸ್ಸುಗಳ ಸೇತುವೆಯನ್ನು ಮುರಿಯುವ ಗರಗಸವಾಗಿಬಿಟ್ಟಳು! ಒಟ್ಟಿನಲ್ಲಿ ಆ ಮನೆಯು ಮೇಲ್ನೋಟಕ್ಕೆ ಸಾಮಾನ್ಯವಾಗಿರುವಂತೆ ಕಂಡರೂ ಒಳಗೊಳಗೆ ಅಶಾಂತಿಯ ನರಕವಾಯಿತು.
ಶೋಷಣೆ, ಅದುಮುವಿಕೆಗಳನ್ನು ಸಹಿಸಿ ಸಹಿಸಿ ಸಾಕಾದ ಹೆಣ್ಣುಜೀವಗಳು ತಮ್ಮ ಸಿಟ್ಟನ್ನು, ಅಸಮಾಧಾನವನ್ನು ನೇರವಾಗಿ ತೋರಿಸಲಾರದಾದಾಗ ಏನೇನಾಗಬಹುದು ಎಂಬುದಕ್ಕೆ ಈ ಕುಟುಂಬದ ಶೋಚನೀಯ ಸನ್ನಿವೇಶ ಒಂದು ಉದಾಹರಣೆ.
ಹೆಣ್ಣಿಗೆ ಸಂತೋಷವಾಗಿರಲು ಬೇಕಾದ ಮೂಲ ಸಂಗತಿ ಅಂದರೆ ತಾನು ಆರಾಧಿಸುವ ಗಂಡಿನ ಪೂರ್ಣ ಮನಸ್ಸಿನ ಪ್ರೀತಿ. “ನನ್ನನ್ನು ಇವನು ಗೌರವಿಸುತ್ತಾನೆ, ತನ್ನ ಬೆನ್ನ ಹಿಂದೆ ಇನ್ನೊಬ್ಬಳ ಜೊತೆ ಸಂಬಂಧ ಇರಿಸಿಕೊಳ್ಳುವುದಿಲ್ಲ, ಅವನ ಪ್ರೀತಿ ನನಗೆ ಮಾತ್ರ ಮೀಸಲು” ಎಂಬ ಭರವಸೆ ಬೇಕು ಹೆಣ್ಣಿಗೆ. ಇದು ಸಿಕ್ಕಿದರೆ ಅವಳ ಮುಖದಲ್ಲಿ ಮಿನುಗುವ ಕಾಂತಿಯೇ ಬೇರೆ, ಅವಳ ಜೀವನದಲ್ಲಿ ಇರುವ ನೆಮ್ಮದಿಯೇ ಬೇರೆ. ಅವಳ ನಗುವಿನಲ್ಲಿರುವ ನಿರಾಳತೆಯೇ ಬೇರೆ. ಇಂತಹ ಅಚಲ, ಅಚಂಚಲ ಪ್ರೀತಿ ಪಡೆದ ಹೆಣ್ಣಿನ ಜೀವನವೇ ಧನ್ಯ. ಆದರೆ ಇಂತಹ ಪ್ರೀತಿ ಎಲ್ಲರಿಗೂ ಲಭ್ಯ ಇರುವುದಿಲ್ಲ ಅನ್ನಿಸುತ್ತೆ.
ದ್ರೌಪದಿ, ಊರ್ಮಿಳಾ, ಅಹಲ್ಯೆ, ಸೀತೆ, ಗೌರಿಯರಂತಹ ಹಿಂದೂ ಪುರಾಣಗಳಲ್ಲಿನ ಸಂಸಾರ ಜೀವನದಲ್ಲಿ ಕಷ್ಟ ಪಟ್ಟ ಸ್ತ್ರೀಪಾತ್ರಗಳು, ಮಾರಮ್ಮನಂತಹ ಕುಪಿತಪತ್ನಿಯ-ಜಾನಪದ ಪಾತ್ರಗಳು, ಮೀಡಿಯಾ, ಕ್ಲೈಟಮ್ನೆಸ್ಟ್ರಾರಂತಹ ಪಾಶ್ಚಾತ್ಯ ಪುರಾಣಗಳಲ್ಲಿನ, ಮೋಸ ಅನುಭವಿಸಿದ ಸ್ತ್ರೀಪಾತ್ರಗಳು, ವೈದೇಹಿಯವರ ಕಥೆಗಳಲ್ಲಿ ಬರುವ ವಿದ್ರೋಹಿ ಹೆಂಗಸರು (ಗಂಡನು ನಾಚಿಕೆಯಿಲ್ಲದೆ ತನ್ನ ಉಪಪತ್ನಿಯನ್ನು ಮನೆಗೇ ಕರೆದುಕೊಂಡು ಬಂದಾಗ ಅವರು ಮಲಗುವ ಹಾಸಿಗೆಯಲ್ಲಿ ಇರುವೆ ಬಿಡುವಂಥವರು)….. ಇವರೆಲ್ಲ ನೆನಪಾಗುತ್ತಾರೆ. ಇವರ ಕಥೆಗಳೇ ಬಹುಶಃ ನಮ್ಮಂತಹ ಸಾಮಾನ್ಯ ಮನುಷ್ಯರ ಜೀವನದಲ್ಲಿ ಪುನರಭಿನೀತಗೊಳ್ಳುತ್ತವೆ ಅನ್ನಿಸುತ್ತದೆ.
****
ಒಟ್ಟಿನಲ್ಲಿ ಈ ಪ್ರಬಂಧ ಮುಗಿಸುತ್ತಿರುವಾಗ ನನಗೆ ಅನ್ನಿಸುತ್ತಿರುವುದಿಷ್ಟು. ಹೌದು, ಕುಟುಂಬಗಳ ಬಗ್ಗೆಯಾಗಲಿ, ಹೆಂಗಸರ ಬಗ್ಗೆಯಾಗಲಿ ಸಾಮಾನ್ಯೀಕರಿಸಲು ಆಗುವುದಿಲ್ಲ. ಈ ವಿಷಯದಲ್ಲಿ `ಒಂದೇ ಅಳತೆ – ಎಲ್ಲರಿಗೂ ಆಗುತ್ತೆ (ವನ್ ಸೈಝ್ ಫಿಟ್ಸ್ ಆಲ್)’ ಎಂಬ ನಿಯಮ ಸಲ್ಲುವುದಿಲ್ಲ. ತುಂಬ ಸೂಕ್ಷ್ಮ ಮನಸ್ಸು ಹೊಂದಿಲ್ಲದ ಕೆಲವು ಹೆಂಗಳೆಯರು ತಮ್ಮ ಗಂಡನ ಉಳಿದ ಪ್ರಿಯೆ/ಪ್ರಿಯೆಯರ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವುದಿಲ್ಲವೇನೊ. ಮಕ್ಕಳು, ಆಸ್ತಿಪಾಸ್ತಿ, ಕೆಲಸ ಬೊಗಸೆ, ರೇಷ್ಮೆ ಸೀರೆ – ಚಿನ್ನ ಬೆಳ್ಳಿ ಎಂದು ಹೇಗೋ ಜೀವನ ಮಾಡಿಬಿಡುತ್ತಾರೆ. ಅಥವಾ ಅವರು ತಮ್ಮ ಭಾವನೆಗಳನ್ನು ಮುಚ್ಚಿಡುವುದರಲ್ಲಿ ತುಂಬ ಸಮರ್ಥರಾಗಿರುವರೊ?
ಕೆಲವು ಗಾಯಗಳು ಮಾಯುವುದಿಲ್ಲ. ಕೆಲವು ಜೀವನಗಳು ಹೆಸರಿಗೆ ನಡೆಯುತ್ತಿದ್ದರೂ ಇದ್ದರೂ ಅವುಗಳಲ್ಲಿ ಬದುಕುವ ಖುಷಿ ಇರುವುದಿಲ್ಲ. ತಾವು ಅಪಾರವಾಗಿ ಪ್ರೀತಿಸುವ, ತಮ್ಮ ಹೃದಯಕ್ಕೆ ಆಳವಾಗಿ ಹಚ್ಚಿಕೊಂಡ ಗೆಳೆಯ/ಪ್ರಿಯಕರ/ಗಂಡ ಇನ್ನೊಂದು ಹೆಣ್ಣನ್ನು ಇಷ್ಟ ಪಡಲು ಪ್ರಾರಂಭಿಸಿದರೆ ಹೆಣ್ಣಿನ ಬದುಕು ಹೀಗಾಗುತ್ತದೆ ಅನ್ನಿಸುತ್ತೆ. ಅದು ಸಾವೂ ಅಲ್ಲ, ಬದುಕೂ ಅಲ್ಲ ಎಂಬ ಸ್ಥಿತಿ, ನೋವಿನ ಕುಲುಮೆ, ಸಂಕಟದ ಕಮ್ಮಟ.
ಗಂಡಾಳಿಕೆಯಲ್ಲಿ ಹೆಣ್ಣಿಗಾಗುವ ಮಾಗದ ಗಾಯಗಳಿವು.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
Well written!