ಭರತನ ನಾಟ್ಯಶಾಸ್ತ್ರದಲ್ಲಿ ತನ್ನ ಅತಿಕಾಮೀ ಹಾವಭಾವದಿಂದ ಪುರುಷನನ್ನು ಓಲೈಸುವ ಸ್ತ್ರೀಯ ಚಿತ್ರ ಪ್ರಧಾನವಾಗಿದೆ. ದೇವದಾಸಿ ಪದ್ಧತಿಗೂ ತಮಿಳುನಾಡು ಮತ್ತು ಕರ್ನಾಟಕಗಳ ಶಾಸ್ತ್ರೀಯ ನೃತ್ಯಕಲೆಯಾದ ಭರತನಾಟ್ಯಕ್ಕೂ ಇರುವ ಸಂಬಂಧವನ್ನು ನೋಡುವಾಗ ಈ ಮಾತು ಸ್ಪಷ್ಟವಾಗುತ್ತದೆ. ರಂಗಭೋಗ, ಅಂಗಭೋಗಗಳಿಗಾಗಿ ದೇವದಾಸಿಯರನ್ನು ಬಳಸಿಕೊಳ್ಳುವುದು, ಹಾಡು ಕುಣಿತಗಳನ್ನು ದೇವದಾಸಿಯರಿಗೆ, ಕಲಾವಂತೆಯರಿಗೆ, ಪಾತರವದವರಿಗೆ ಸೀಮಿತವಾದ ವಿಷಯವೆಂಬಂತೆ ನೋಡುವುದು 19ನೇ ಶತಮಾನಕ್ಕಿಂತ ಮುಂಚೆ ನಮ್ಮ ಸಮಾಜದಲ್ಲಿ ಒಪ್ಪಿತವಾದ ವಿಷಯವೇ ಆಗಿತ್ತು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಆರನೆಯ ಬರಹ
“ಎಲ್ಲ ಕಲೆಯೂ ಅಭಿವ್ಯಕ್ತಿ. ಆದರೆ ಅಭಿವ್ಯಕ್ತಿಯೆಲ್ಲವೂ ಕಲೆಯಲ್ಲ” ಎಂಬುದು ತಿಳಿದವರು ಹೇಳುವ ಮಾತು. ಸೌಂದರ್ಯಾತ್ಮಕ ಅಭಿವ್ಯಕ್ತಿಯು ಕಲೆ ಅನ್ನಿಸಿಕೊಳ್ಳುತ್ತದೆ. ಅಂದರೆ ಸೃಷ್ಟಿಸಿದವರ ಮತ್ತು ಸ್ವೀಕರಿಸುತ್ತಿರುವವರ ಹೃದಯದಲ್ಲಿ ಒಂದು ರೀತಿಯ ಸಂತೋಷವನ್ನು ಹುಟ್ಟಿಸಬಲ್ಲ ಅಭಿವ್ಯಕ್ತಿಯು ಸೌಂದರ್ಯಾತ್ಮಕ ಅಭಿವ್ಯಕ್ತಿ. ಕಲೆಯಲ್ಲಿ ಮಹಿಳಾ ಅಭಿವ್ಯಕ್ತಿ ಹೇಗಿದೆ ಮತ್ತು ಹೆಣ್ಣ ಕಣ್ಣ ನೋಟದಲ್ಲಿ ಕಲೆ ಎಂದರೇನು ಎಂದು ಯೋಚಿಸಿದಾಗ ಹೊಳೆದ ವಿಚಾರಗಳಿವು.
ಮಹಿಳೆಗೂ ಸುಂದರ ಅಭಿವ್ಯಕ್ತಿಗೂ ಬಿಡಿಸಲಾಗದ ನಂಟು. ಆದಿ ಕಾಲದಿಂದ ಅಂದರೆ ಅಕ್ಷರ ಕಲಿಯುವ ಮೊದಲೂ ಅವಳು ಚಿತ್ತಾರ, ರಂಗೋಲಿ, ಕಸೂತಿ, ಜೋಗುಳದ ಹಾಡು ಹಾಗೆಯೇ ರಾಗಿ ಬೀಸುವ ಪದ, ಸೋಬಾನೆ ಪದ, ಸಂಪ್ರದಾಯದ ಹಾಡು ಮುಂತಾದುವುಗಳ ಮೂಲಕ ತನ್ನ ಭಾವನೆಗಳನ್ನು, ಕಲಾಭಿರುಚಿಯನ್ನು ಪ್ರಕಟಪಡಿಸುತ್ತಿದ್ದಳು. ಕೆಲವು ಕಡೆ ಈ ಎಲ್ಲ ಅಭಿವ್ಯಕ್ತಿಯನ್ನು `ಹಾಡು-ಹಸೆ’ ಎಂಬ ಪದಪ್ರಯೋಗದಿಂದ ಗುರುತಿಸಲಾಗುತ್ತದೆ. “ಮದುವೆಗೆ ಮುಂಚೆ ಹುಡುಗಿ ಹಾಡು-ಹಸೆ ಕಲೀಬೇಕು” ಎಂಬ ಜನಪ್ರಿಯ ನಂಬಿಕೆಯನ್ನು ನೆನಪಿಸಿಕೊಳ್ಳಬಹುದು. ಕಸೂತಿಯೂ ಸೇರಿದಂತೆ `ಹಾಡು-ಹಸೆ’ ಪರಿಕಲ್ಪನೆಯು ಮಹಿಳೆಯ `ಮನೆಯೊಳಗಿನ ಕಲೆ’ಯನ್ನು ನಿರ್ದೇಶಿಸುತ್ತದೆ. “…….ಇಂತಹ ಕಸೂತಿ, ಹೊಲಿಗೆ, ಹೆಣಿಗೆಗಳಿಗೆ ತರಬೇತಿ ಕೇಂದ್ರಗಳೇ ಇರಲಿಲ್ಲ. ನೆರೆಮನೆಯ `ಹರಟೆಯ ಕೇಂದ್ರಗಳೇ’ ತರಬೇತಿ ಕೇಂದ್ರಗಳಾಗಿದ್ದವು…” ಎಂದು ಹಂಪಿ ವಿಶ್ವವಿದ್ಯಾಲಯವು ಪ್ರಕಟಿಸಿದ `ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ’ಯು ಗುರುತಿಸುತ್ತದೆ.
ನಮ್ಮ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಮನೆಯೊಳಗಿನ ಕಲೆಗೆ ಅಂತಹ ವಿರೋಧಗಳೇನೂ ಹೆಚ್ಚಾಗಿ ಕಾಣುವುದಿಲ್ಲ. ವಿಷಯ ಕೊಂಚ ತೊಡಕಾಗುವುದು ಯಾವಾಗ ಅಂದರೆ ಮನೆಯ ಹೊರಗೆ ಸ್ತ್ರೀಯ ಕಲಾಭಿವ್ಯಕ್ತಿಯ ಪ್ರಶ್ನೆ ಬಂದಾಗ. ಉದಾಹರಣೆಗೆ ಸಂಗೀತ, ನೃತ್ಯ, ನಾಟಕದಂತಹ ಪ್ರದರ್ಶನ ಕಲೆಗಳು. ಇಂತಹ ಕಲೆಗಳ ವಿಚಾರದಲ್ಲಿ ಇರುವ ಒಂದು ವೈರುಧ್ಯವನ್ನು `ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ’ ಹೀಗೆ ಗುರುತಿಸಿದೆ-
…….“ಬಹು ಪ್ರಾಚೀನ ಕಾಲದಿಂದಲೂ ಮಹಿಳೆಗೆಂದೇ ಮೀಸಲಾದ ವಿದ್ಯೆಗಳಲ್ಲಿ ಸಂಗೀತವೂ ಒಂದು. ವೀಣಾಪಾಣಿ ಸರಸ್ವತಿಯಿಂದ ತೊಡಗಿ, ಪ್ರಾಚೀನ ಇತಿಹಾಸ ಮತ್ತು ಕಾವ್ಯಗಳಲ್ಲಿ ಮಹಿಳೆಗೆ ದೊರೆಯುತ್ತಿದ್ದ ವಿದ್ಯಾಭ್ಯಾಸಗಳಲ್ಲಿ ಸಂಗೀತ ಶಿಕ್ಷಣ ಪ್ರಧಾನವಾಗಿತ್ತು. ತೀರಾ ಇತ್ತೀಚಿನವರೆಗೂ ಹೆಣ್ಣು ವಧುಪರೀಕ್ಷೆಯಲ್ಲಿ ಗೆಲುವು ಪಡೆಯುವುದಕ್ಕೆ ಸಂಗೀತ ಜ್ಞಾನ ಅಗತ್ಯ ಎಂಬ ಅಭಿಪ್ರಾಯವನ್ನು ಸಾಹಿತ್ಯಕೃತಿಗಳು ಮತ್ತು ಚಲನಚಿತ್ರಗಳು ಕಟ್ಟಿಕೊಟ್ಟಿವೆ. ಇಂತಹ ನಂಬಿಕೆಯ ಸಂದರ್ಭಗಳಲ್ಲೇ ಸಂಗೀತ ಮತ್ತು ನೃತ್ಯವು ಕುಲೀನ ಮನೆತನದ ಸ್ತ್ರೀಯರಿಗೆ ತಕ್ಕುದಲ್ಲ ಎಂಬ ನಿಲುವೂ ಕೆಲವೆಡೆ ಪ್ರಚಲಿತವಾಗಿತ್ತು………….’’
ಇದೇ ಅಭಿಪ್ರಾಯಕ್ಕೆ ಪುಷ್ಟಿ ನೀಡುವಂತೆ ವಾತ್ಸಾಯನ ತನ್ನ ಕೃತಿಯಲ್ಲಿ “ಸಂಗೀತ ಮತ್ತು ನೃತ್ಯಕಲೆಗಳನ್ನು ಕುಲೀನ ಮನೆತನದವರಿಗೆ ನೀಡಬಾರದು, ಕ್ಷತ್ರಿಯರಿಗೆ, ರಾಜಪರಿವಾರಕ್ಕೆ ಮತ್ತು ಸೈನಿಕರಿಗೆ ಮನರಂಜನೆ ನೀಡಲು ಇವುಗಳನ್ನು ವೇಶ್ಯೆಯರಿಗೆ ಮಾತ್ರ ಕಲಿಸಬೇಕು” ಎಂದಿದ್ದಾನೆ. ಈಗ ಕಾಲ ಬದಲಾಗಿದೆ, ಅನೇಕ ಮಹನೀಯರು ಮತ್ತು ಮಹಿಳೆಯರ ಬದ್ಧತೆ ಮತ್ತು ಪರಿಶ್ರಮಗಳಿಂದ ಮಹಿಳೆಯರ ಪ್ರದರ್ಶನ ಕಲೆಗಳಿಗೆ ಗೌರವ, ಸಾಮಾಜಿಕ ಮಾನ್ಯತೆ ದೊರಕಿದೆ ಎನ್ನುವ ಮಾತು ಬೇರೆ. ಆದರೆ ಮಹಿಳೆಯ ಮನೆಯ ಹೊರಗಿನ ಕಲಾಭಿವ್ಯಕ್ತಿಯ ಬಗ್ಗೆ ಎಷ್ಟು ಪೂರ್ವಾಗ್ರಹಗಳಿದ್ದವು, ಇದನ್ನು ಮೀರಲು ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾಕಷ್ಟು ಹೋರಾಡಬೇಕಾಯಿತು, ನೋಯಬೇಕಾಯಿತು ಎಂಬುದು ಗಮನೀಯ ಸಂಗತಿ.
ಪ್ರದರ್ಶನ ಕಲೆ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ತಳಕು ಹಾಕಿದ್ದು ಪುರುಷಪ್ರಧಾನ ವ್ಯವಸ್ಥೆಯ ಒಂದು ಮುಖ್ಯ ಲಕ್ಷಣವಾಗಿದೆ. ಸ್ತ್ರೀಯ ಕಲಾವಂತಿಕೆಯನ್ನು ಪುರುಷಾನುಕೂಲೀ ದೃಷ್ಟಿಯಿಂದಲೇ ನೋಡಲಾಗುತ್ತಿತ್ತು. ಭರತನ ನಾಟ್ಯಶಾಸ್ತ್ರದಲ್ಲಿ ತನ್ನ ಅತಿಕಾಮೀ ಹಾವಭಾವದಿಂದ ಪುರುಷನನ್ನು ಓಲೈಸುವ ಸ್ತ್ರೀಯ ಚಿತ್ರ ಪ್ರಧಾನವಾಗಿದೆ. ದೇವದಾಸಿ ಪದ್ಧತಿಗೂ ತಮಿಳುನಾಡು ಮತ್ತು ಕರ್ನಾಟಕಗಳ ಶಾಸ್ತ್ರೀಯ ನೃತ್ಯಕಲೆಯಾದ ಭರತನಾಟ್ಯಕ್ಕೂ ಇರುವ ಸಂಬಂಧವನ್ನು ನೋಡುವಾಗ ಈ ಮಾತು ಸ್ಪಷ್ಟವಾಗುತ್ತದೆ. ರಂಗಭೋಗ, ಅಂಗಭೋಗಗಳಿಗಾಗಿ ದೇವದಾಸಿಯರನ್ನು ಬಳಸಿಕೊಳ್ಳುವುದು, ಹಾಡು ಕುಣಿತಗಳನ್ನು ದೇವದಾಸಿಯರಿಗೆ, ಕಲಾವಂತೆಯರಿಗೆ, ಪಾತರವದವರಿಗೆ ಸೀಮಿತವಾದ ವಿಷಯವೆಂಬಂತೆ ನೋಡುವುದು 19ನೇ ಶತಮಾನಕ್ಕಿಂತ ಮುಂಚೆ ನಮ್ಮ ಸಮಾಜದಲ್ಲಿ ಒಪ್ಪಿತವಾದ ವಿಷಯವೇ ಆಗಿತ್ತು.
ಬ್ರಿಟಿಷರು ದೇವದಾಸಿ ಪದ್ಧತಿಯನ್ನು ರದ್ದು ಮಾಡುವ ಹುಮ್ಮಸ್ಸಿನಲ್ಲಿ `ನಾಚ್’(ನಾಟ್ಯ)ಅನ್ನೂ ರದ್ದು ಮಾಡಲು ಅಜ್ಞೆ ಹೊರಡಿಸಿದ್ದರು. 18ನೇ ಶತಮಾನದ ರಾಜನರ್ತಕಿ ಮುದ್ದುಪಳನಿಯು `ರಾಧಿಕಾ ಸಾಂತ್ವನಂ’ ಎಂಬ ಕೃತಿಯನ್ನು ರಚಿಸಿ, ಅದರಲ್ಲಿ ರಾಧೆಯ ಶೃಂಗಾರ ಮತ್ತು ಲೈಂಗಿಕತೆಯ ಭಾವವನ್ನು ಪ್ರಕಟಪಡಿಸಿದಳು ಎಂಬ ಕಾರಣಕ್ಕಾಗಿ ಆ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಸ್ತ್ರೀಯೊಬ್ಬಳು ತನ್ನ ಮೈಮನಗಳ ಸಂಪೂರ್ಣ ತೃಪ್ತಿಯನ್ನು ಅನ್ವೇಷಿಸುವ ಕಥಾವಸ್ತುವನ್ನು ಸಾಹಿತ್ಯದಲ್ಲಿ ಆಯ್ಕೆ ಮಾಡಿಕೊಂಡಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರರಾದ ಶ್ರೀ ಶಿವರಾಮ ಕಾರಂತರು ಉತ್ತಮ ಕಲಾವಿದೆಯಾಗಿದ್ದ ಮಂಜುಳೆ ಎಂಬ ವೇಶ್ಯೆಯನ್ನು ಪ್ರಧಾನಪಾತ್ರವಾಗಿಸಿದ್ದರು. ಈ ಕಾದಂಬರಿಯ ಹೆಸರು `ಮೈಮನಗಳ ಸುಳಿಯಲ್ಲಿ’. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮಲ್ಲಿ ಹಲವು ವೃತ್ತಿ ನಾಟಕ ಕಂಪೆನಿಗಳಿದ್ದವು; ಅವುಗಳಲ್ಲಿ ನಟಿಸುತ್ತಿದ್ದ ಸ್ತ್ರೀಯರು ಅನುಭವಿಸುತ್ತಿದ್ದ ಸಾಮಾಜಿಕ ಶೋಷಣೆ, ಅಭದ್ರತೆ, ಅವಮಾನಗಳನ್ನು ನೆನಪಿಸಿಕೊಳ್ಳಬೇಕು. ಒಟ್ಟಿನಲ್ಲಿ ಪ್ರದರ್ಶನ ಕಲೆಗಳ ವಿಷಯದಲ್ಲಿ, ಪ್ರಾಚೀನ ಮತ್ತು ಆಧುನಿಕ ಯುಗಗಳ ಸಂಧಿಕಾಲದಲ್ಲಿ ಮಹಿಳೆಯು ತುಂಬ ಕಷ್ಟ ಮತ್ತು ಸವಾಲುಗಳನ್ನು ಎದುರಿಸಿದ್ದಾಳೆ ಎಂಬುದು ವೇದ್ಯವಾಗುತ್ತದೆ.
ಪ್ರಾಚೀನ ಮತ್ತು ಆಧುನಿಕ ಪ್ರದರ್ಶಕ ಕಲಾಜಗತ್ತನ್ನು ನಾವು ಎಚ್ಚರಗಣ್ಣುಗಳಿಂದ ಗಮನಿಸಿದರೆ, ಹೆಣ್ಣು `ಹೀಗೆ ಮಾಡಿ’ ಎಂದು ನಿರ್ದೇಶಿಸುವ ಸ್ಥಾನದಲ್ಲಿ ಇದ್ದುದಕ್ಕಿಂತ, ಅಧಿಕಾರಸ್ಥಾನದಲ್ಲಿದ್ದವರು ಹೇಳಿದ್ದನ್ನು ಮಾಡುವ ಸ್ಥಿತಿಯಲ್ಲೇ ಇದ್ದಿದ್ದು ಹೆಚ್ಚು ಎಂಬುದು ಅರ್ಥವಾಗುತ್ತದೆ. ನಾಟ್ಯಶಾಸ್ತ್ರ, ಅಭಿನಯದರ್ಪಣಗಳೇ ಮೊದಲುಗೊಂಡು ಪ್ರದರ್ಶನ ಕಲೆಗಳನ್ನು ಕುರಿತು ಶಾಸ್ತ್ರಗ್ರಂಥಗಳನ್ನು ರಚಿಸುವವರು, ಕಾರ್ಯಕ್ರಮಗಳ ರೂಪುರೇಷೆಯನ್ನು ಸಿದ್ಧಪಡಿಸುವವರು, ಪಾತ್ರಗಳನ್ನು ಹಂಚುವವರು ಗಂಡಸರೇ ಆಗಿರುತ್ತಿದ್ದರು. ಹೆಣ್ಣು ದೇವದಾಸಿಯಾಗಿಯೋ, ರಾಜನರ್ತಕಿಯಾಗಿಯೋ, ಪಾತರದವಳಾಗಿಯೋ, ರಂಗನಟಿಯಾಗಿಯೋ, ಶಿಷ್ಯೆಯಾಗಿಯೋ ಅವರು ಹೇಳಿದ್ದನ್ನು ರಂಗದ ಮೇಲೆ ಒಪ್ಪಿಸಬೇಕು. ಭರತನಾಟ್ಯದಲ್ಲಿ ಪ್ರಸಿದ್ಧವಾಗಿರುವ ಅಷ್ಟನಾಯಿಕೆಯರ ಪರಿಕಲ್ಪನೆಯಲ್ಲಿ ಆ ಎಂಟೂ ನಾಯಕಿಯರ ಕಲಾಭಿವ್ಯಕ್ತಿಯ ಕೇಂದ್ರ ಪುರುಷನೇ. ಪ್ರಿಯನೋ, ವಿಟನೋ, ಆಗಿರುವ ಅವನನ್ನು ಓಲೈಸುವ, ರಮಿಸುವ, ಅವನ ಮೇಲೆ ಪ್ರಣಯಕೋಪ ತೋರಿಸುವ, ಅವನಿಗಾಗಿ ಸಿಂಗರಿಸಿಕೊಳ್ಳುವ, ಮೊದಲು ತಡವಾಗಿ ಬಂದದ್ದಕ್ಕೆ ಬೈದು, ಅತ್ತು, ನಂತರ, ಅವನನ್ನು ದೇವರು ಎಂದು ಭಾವಿಸಿ ಶರಣಾಗುವುದೇ ಅವರ ಪರಮ ಕರ್ತವ್ಯವಾಗಿರುತ್ತದೆ. ಚಿಂತನೆ ಮಾಡುವ, ತನ್ನ ನಿಜ ಅಭಿವ್ಯಕ್ತಿಯ ಬಗ್ಗೆ ಯೋಚಿಸುವ ನರ್ತಕಿಗಾಗಲಿ, ನಟಿಗಾಗಲಿ ಒಂದು ಅವಕಾಶ(ಸ್ಪೇಸ್ ಅನ್ನುವ ಅರ್ಥದಲ್ಲಿ) ನಿರ್ಮಿತವಾಗಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಡಾ. ಬಿ.ಎನ್. ಸುಮಿತ್ರಾಬಾಯಿಯವರ “ಸ್ತ್ರೀದರ್ಪಣದಲ್ಲಿ ನಾಟ್ಯಶಾಸ್ತ್ರ” ಕೃತಿಯಲ್ಲಿ ನಾಟ್ಯಶಾಸ್ತ್ರವು ಹೇಗೆ ಸ್ತ್ರೀಯನ್ನು ಪುರುಷಭೋಗದ ಅನುಕೂಲಕ್ಕೆ ಬಳಕೆಯಾಗುವ ಪಾತ್ರವಾಗಿ ತೋರಿಸಿದೆ ಎಂಬುದರ ವಿವರಣೆ ಇದೆ. ಹೀಗಾಗಿಯೇ ಪ್ರಾಚೀನ ಕಾಲದಲ್ಲಿ ನಾಟಕ, ನೃತ್ಯಗಳಿಗಾಗಿ ಶಾಸ್ತ್ರಗ್ರಂಥಗಳನ್ನು ರಚಿಸಿದ ಸ್ತ್ರೀಯರು ನಮಗೆ ಸಿಕ್ಕುವುದಿಲ್ಲ. ಸ್ತ್ರೀಯರಿಗೆ ವಿದ್ಯಾಭ್ಯಾಸ ಸಿಕ್ಕಿದ್ದೂ ತುಂಬ ತಡವಾಗಿ ಎಂಬುದು ಮರೆಯಬಾರದ ವಿಷಯ. ಸನ್ನಿವೇಶಗಳು ಬದಲಾಗಿರುವ ಇಂದಿನ ಕಾಲದಲ್ಲೂ ಸಹ ನಾಟಕ-ಸಿನಿಮಾ ಕ್ಷೇತ್ರಗಳಲ್ಲಿ ನಿರ್ದೇಶಕಿ, ನಿರ್ಮಾಪಕಿ, ಗೀತರಚನಕಾರ್ತಿಯರ ಸಂಖ್ಯೆ ಪುರುಷರಿಗೆ ಹೋಲಿಸಿದರೆ ತುಂಬ ಕಡಿಮೆ. ಇದು ಯಾಕೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕೆ ಸಿಗುವ ಉತ್ತರ ನಮಗೆ ಸ್ತ್ರೀಯನ್ನು ಕಲಾನಿರ್ಮಾತೃವಾಗಿ ನೋಡಿ ಅಭ್ಯಾಸವಿಲ್ಲ ಎಂಬುದೇ.
*****
ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದ ಸಂಗೀತ ಮತ್ತು ನೃತ್ಯಕ್ಷೇತ್ರಗಳಲ್ಲಿ ಒಬ್ಬ ಅಭ್ಯಾಸಿಯಾಗಿ ಹಾಗೂ ಕಳೆದ ಮೂವತ್ಮೂರು ವರ್ಷಗಳಿಂದ ಒಂದು ಭರತನಾಟ್ಯ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ನನಗೆ ಕಲಾನಿರ್ಮಿತಿಯ ವಿಷಯದಲ್ಲಿ ಅನೇಕ ಸವಾಲುಗಳು ಎದುರಾಗಿವೆ.
ಮಹಿಳೆಯ ಭಾವನೆಗಳನ್ನು ನೃತ್ಯದ ಮೂಲಕ ಅಭಿವ್ಯಕ್ತಿಸಲು ಹೊರಟಾಗ ನಮಗೆ ಸಿಕ್ಕುವ ಶಾಸ್ತ್ರೀಯ ಹಾಡುಗಳು ತೀರಾ ಸೀಮಿತ ನೆಲೆಯವು. ಭಕ್ತಿ, ಶೃಂಗಾರ ಅಥವಾ ಶೋಕ ಅದೂ ವಿರಹಪ್ರಧಾನವಾದ ಶೋಕವೇ ನಮಗೆ ಸಿಕ್ಕುವ ಹಾಡುಗಳ ಸ್ಥಾಯೀಭಾವ. ಉದಾಹರಣೆಗೆ “ಎತ್ತನೇ ಸೊಲ್ಲಾನು ತೆರಿಯಾದವರೊಡನ್ ಏನ್ ಪೆಣಂಗಿಕೊಂಡಾ ಮಗಳೇ…….’’ (ಎಷ್ಟು ಹೇಳಿದರೂ ತಿಳಿಯದವರೊಡನೆ ಏನೆಂದು ಹೆಣಗುವೆನೋ ಮಗಳೇ) ಎಂಬ ಪದಂ. ದೇವರಾದ ಕುಮಾರಸ್ವಾಮಿಯೊಡನೆ ಜಗಳವಾಡಿಕೊಂಡು ಬಂದ ತನ್ನ ಮಗಳಿಗೆ ತಾಯಿಯು ಬುದ್ಧಿಮಾತು ಹೇಳುವುದು ಈ ಪದಂನ ವಸ್ತು. “ನಿನಗೆ ಎಷ್ಟು ಹೇಳಿದರೂ ತಿಳಿಯುವುದಿಲ್ಲ. ಎಷ್ಟು ಅಹಂಕಾರ ನಿನಗೆ? ಗಂಡನ ಬಳಿ ಏಕೆ ಜಗಳ ಆಡುತ್ತೀಯ? ನಿನ್ನದು ಆತುರ ಪಡುವ ಹೆಣ್ಣುಬುದ್ಧಿ. ನಿನ್ನ ಕುಲುಕುವ ಬಾಯಿಯನ್ನು ಮುಚ್ಚಿಕೊಂಡು ಸುಮ್ಮನಿರಬಾರದೇ? ಕಿರುಬೆರಳಿನಷ್ಟು ಇರುವ ನಿನಗೆ ಎಷ್ಟು ಪೊಗರು?…” ಹೀಗೆ ಸಾಗುತ್ತದೆ ಈ ಗೀತೆ. ಇಂತಹ ಹಾಡುಗಳನ್ನು ಬಿಟ್ಟು ಬೇರೆ ರೀತಿಯ ಹಾಡುಗಳನ್ನು ಹುಡುಕಲು ನಮ್ಮ ಸಾಹಿತ್ಯರಾಶಿಯನ್ನು ಮತ್ತೆ ಮತ್ತೆ ಓದುವಂತಾಗುತ್ತದೆ.
ನಮ್ಮ ಕನ್ನಡ ಸಾಹಿತ್ಯದಲ್ಲೂ ಪುರುಷಪರತೆ ಏನೂ ಕಡಿಮೆಯದ್ದಲ್ಲ. ಪಂಪನ ನೀಲಾಂಜನೆ, ಹರಿಹರನ ಗಿರಿಜೆ, ನಾಗವರ್ಮನ ಕಾದಂಬರಿಯರು “ಸ್ತ್ರೀರೂಪಮೆ ರೂಪಂ, ಶೃಂಗಾರಮೆ ರಸಂ” ವಿಭಾಗಕ್ಕೆ ಸೇರುವವರೇ. ಶೃಂಗಾರ ಸನ್ನಿವೇಶಗಳನ್ನು ಹೊರತು ಪಡಿಸಿ ಮಹಿಳೆಗೆ ಉಂಟಾಗುವ ಸಂತೋಷ ದುಃಖ ದುಮ್ಮಾನಗಳನ್ನು ವ್ಯಕ್ತಪಡಿಸುವ ಗೀತೆಗಳನ್ನು ಸಾಕಷ್ಟು ಶ್ರಮ ಪಟ್ಟು ಹುಡುಕಿಕೊಳ್ಳಬೇಕು. ಇಲ್ಲವೇ ಬರೆಯಬೇಕು. ಬೇಂದ್ರೆಯವರ `ಚಿಗರಿಗಂಗಳ ಚೆಲುವಿ’, ಜಿ.ಎಸ್.ಶಿವರುದ್ರಪ್ಪನವರ `ಆಕಾಶದ ನೀಲಿಯಲ್ಲಿ’, ನಿಸಾರ್ ಅಹಮದ್ ಅವರ `ರಕ್ಷಿಸುವೆನು ಸುಜ್ಞಾನಮತಿ ಕನ್ನಡಿಗರ ಅಭಿಮಾನವತಿ’, ಎಚ್.ಎಸ್. ವೆಂಕಟೇಶಮೂರ್ತಿ ಅವರ `ಸಹ್ಯಾದ್ರಿಯ ಕಾಡು’, ಅಕ್ಕಮಹಾದೇವಿಯ `ಚಿಲಿಪಿಲಿಯೆಂದೋದುವ ಗಿಳಿಗಳಿರಾ’, ಸಂಚಿ ಹೊನ್ನಮ್ಮನ `ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಈ ಮುಂತಾದ ಗೀತೆಗಳು ಸ್ತ್ರೀಸಂವೇದನೆಯನ್ನು ವ್ಯಕ್ತಪಡಿಸಬಲ್ಲವು. ಆದರೆ ಇವು ಭಾವನೃತ್ಯ ಪ್ರಕಾರವೆಂಬ ಹೆಸರಿನಿಂದ ಗುರುತಿಸಲ್ಪಟ್ಟು ಶಾಸ್ತ್ರೀಯವಲ್ಲದ್ದು ಅನ್ನಿಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಆದರೂ ಸ್ತ್ರೀಸಂವೇದನೆಯನ್ನು ಅಭಿವ್ಯಕ್ತಿಸುವ ಒಂದು ಉತ್ತಮ ಪ್ರಯತ್ನ ಇದು. ಇನ್ನು ಕೇವಲ ಆಂಗಿಕಾಭಿನಯವನ್ನು ಬಳಸಿ ಅಂದರೆ ಸಾಹಿತ್ಯವಿಲ್ಲದೆ, ಕೇವಲ ಅಂಗಾಂಗ ಚಲನೆಗಳುಳ್ಳ ನೃತ್ಯದ ಮೂಲಕ, ಪರಿಸರ ರಕ್ಷಣೆಯಿಂದ ಹಿಡಿದು ಯುದ್ಧವಿರೋಧಿ ಮೌಲ್ಯಗಳ ತನಕ ಅನೇಕ ಭಾವಗಳನ್ನು ಸ್ತ್ರೀಯು ಇಂದು ರಂಗದ ಮೇಲೆ ತೋರಿಸುವಷ್ಟು ಬೆಳೆದಿರುವುದು ಸಂತೋಷದ ವಿಷಯ.
ಒಬ್ಬ ನೃತ್ಯಕಲಿಸುವ ವ್ಯಕ್ತಿಯಾಗಿ ನನಗೆ ನೃತ್ಯದ ಹಲವು ಇತ್ಯಾತ್ಮಕ ವಿಷಯಗಳು ಮನದಟ್ಟಾಗಿವೆ.
1. ಉತ್ತಮ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಕ್ಕಳ ಭಾಷಿಕ ಮತ್ತು ಸಾಹಿತ್ಯಕ ಪ್ರಜ್ಞೆಯನ್ನು ಉತ್ತಮ ಪಡಿಸಬಹುದು.
2. ನೃತ್ಯ, ಸಂಗೀತಗಳನ್ನು ಸಾಮಾಜಿಕ ಬದಲಾವಣೆಯ ನಿಯೋಗಿಗಳನ್ನಾಗಿ ನೋಡಲು ಸಾಧ್ಯವಿದೆ. ಪರಿಸರ ಪ್ರಜ್ಞೆ, ಲಿಂಗಸಮಾನತೆ, ಕೊಳ್ಳುಬಾಕ ಸಂಸ್ಕೃತಿಯ ದುಷ್ಪರಿಣಾಮಗಳು, ಮಾನವಸಂಬಂಧಗಳ ಪ್ರಾಮುಖ್ಯ…… ಇಂತಹ ಉನ್ನತ ಮೌಲ್ಯಗಳ ಬಗ್ಗೆ ಕಲೆಯ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಬಹುದೆನ್ನುವುದು ನಾನು ಪ್ರಾಯೋಗಿಕವಾಗಿ ಕಂಡುಕೊಂಡ ಸತ್ಯ.
3. ಆರ್ಥಿಕವಾಗಿ ಬಡವರಾಗಿರುವವರು ಪ್ರತಿಭಾವಂತರಾಗಿರುವ ಸಾಧ್ಯತೆ ತುಂಬ ಇದೆ. ಸ್ವಲ್ಪ ಪ್ರೋತ್ಸಾಹ ಕೊಟ್ಟರೆ ಅವರು ಉತ್ತಮ ನರ್ತಕರಾಗುತ್ತಾರೆನ್ನುವುದನ್ನು ಸ್ವಾನುಭವದಿಂದ ಕಂಡುಕೊಂಡಿದ್ದೇನೆ. ಇದು ಮನಸ್ಸಿಗೆ ತುಂಬ ತೃಪ್ತಿಕೊಡುವ ವಿಷಯವಾಗಿದೆ.
***
ಕೊನೆಗೂ ಮಹಿಳೆಯ ಮಟ್ಟಿಗೆ ಕಲಾಭಿವ್ಯಕ್ತಿ ಅಂದರೆ ಏನು?
* ಅದು ನೋವನ್ನು ಅಭಿವ್ಯಕ್ತಿ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವ ಸಾಧನ. `ಹಾಸ್ಯುಂಡು ಬೀಸಿ ಒಗೆವ ಬಾಳೆಯ ಎಲೆಯಂಥ ಹೆಣ್ಣಿನ ಜನುಮವ ಕೊಡಬ್ಯಾಡ ಶಿವನೆ’ ಎಂದು ನೊಂದು ಹಾಡಿದ ಗ್ರಾಮೀಣ ಹೆಣ್ಣಿನಿಂದ ಹಿಡಿದು, ಅಪಘಾತದ ನೋವನ್ನು ಚಿತ್ರ ಬರೆಯುವ ಮೂಲಕ ಮರೆತ ಶ್ರೀಮತಿ ಉಷಾ ರೈ ಅವರ ತನಕ ಈ ಮಾತು ನಿಜ.
* ಅದು ಹೊಟ್ಟೆಪಾಡು. ಸೀರೆಗೆ ಕುಚ್ಚುಕಟ್ಟುವ ಬಡ ಹೊಲಿಗೆ ಉದ್ಯೋಗಿನಿಯಿಂದ ಹಿಡಿದು ಬೀದಿ ಬದಿಯಲ್ಲಿ ಸುಂದರ ಹೂಜಿ ಮಾಡಿ ಮಾರುವ ಲಂಬಾಣಿ ಮಹಿಳೆ ಇದಕ್ಕೆ ಸಾಕ್ಷಿಗಳು.
* ಅದು ಸ್ವಾಭಿವ್ಯಕ್ತಿ. ಊರ್ಮಿಳೆ, ಶಕುಂತಲೆ ಮುಂತಾದ ಪಾತ್ರಗಳ ಒಳಗುದಿಯನ್ನು ನಾಟಕದ ಮೂಲಕ ಪ್ರದರ್ಶಿಸುವ ಎನ್.ಮಂಗಳ, ಭಾಗೀರಥಿಬಾಯಿ ಕದಂ ಅವರ ಮಟ್ಟಿಗೆ ಈ ಮಾತು ನಿಜ.
* ಅದು ಬದುಕಿನ ಚೆಲುವನ್ನು ಪ್ರಕಟಿಸುವ ಸಾಧನ. ಪರಿಮಳಾರಾವ್ ಮುಂತಾದ ಚಿತ್ರಕಲಾವಿದರ ಮಟ್ಟಿಗೆ ಈ ಮಾತು ಒಪ್ಪುತ್ತದೆ.
* ಅದು ಬಿಡುವಿನ ವೇಳೆಯನ್ನು ಸದುಪಯೋಗಗೊಳಿಸುವ ಹವ್ಯಾಸ. ನಮ್ಮ ನಡುವೆ ಗಮಕ ಹಾಡುವ ಶ್ರೀಮತಿಯವರಂತಹ ಅನೇಕ ಕಲಾವಿದರು ಇದಕ್ಕೆ ಉದಾಹರಣೆ.
* ಅದು ಸಂಪ್ರದಾಯದ ಮುಂದುವರಿಕೆ. ರಂಗೋಲಿ, ಸಂಪ್ರದಾಯದ ಹಾಡು ಮುಂತಾದ ಕಲೆಗಳಲ್ಲಿ ತೊಡಗಿರುವ ಮಹಿಳೆಯರು ಇದಕ್ಕೆ ಉದಾಹರಣೆ.
* ಅದು ಆಸಕ್ತಿಯಿಂದ ಮಾಡುವ ಅಭಿರುಚಿಪೂರ್ಣ ಸೇವೆ. ಕಮಲಾದೇವಿ ಚಟ್ಟೋಪಾಧ್ಯಾಯ, ವಿಮಲಾ ರಂಗಾಚಾರ್ ಮುಂತಾದವರು ಮಾಡಿದ ಕಲಾಪ್ರೋತ್ಸಾಹಕ ಕಾರ್ಯ ಇದಕ್ಕೆ ಉದಾಹರಣೆ.
* ಅದು ಒಂದು ಉದ್ಯಮ. ಬಾಟಿಕ್, ಬ್ಯೂಟಿ ಪಾರ್ಲರ್ ಇಟ್ಟ ಮಹಿಳೆಯರು ಇದಕ್ಕೆ ಉದಾಹರಣೆ.
* ಅದೊಂದು ಹೋರಾಟ. ರುಕ್ಮಿಣಿದೇವಿ ಅರುಂಡೇಲ್ ಭರತನಾಟ್ಯವನ್ನು ಕುಲೀನರೂ ಅಭ್ಯಸಿಸುವವಂತೆ ಮಾಡಲು ಶ್ರಮಿಸಿದ್ದು ಇದಕ್ಕೆ ಉದಾಹರಣೆ.
* ಅದು ಸಾರ್ವಜನಿಕವಾದ ರಾಜಕೀಯ ಕ್ಷೇತ್ರಕ್ಕೆ ಬರಲು ಒಂದು ಮೆಟ್ಟಿಲು. ಕಲಾವಿದೆಯರಾಗಿದ್ದು ರಾಜಕೀಯ ಕ್ಷೇತ್ರಕ್ಕೆ ಬಿ.ಜಯಶ್ರೀ, ಉಮಾಶ್ರೀ, ಜಯಮಾಲಾ, ತಾರಾ ಇದಕ್ಕೆ ಉದಾಹರಣೆ.
***
ಒಟ್ಟಿನಲ್ಲಿ ಹೀಗೆ ಹೇಳಬಹುದು.
19ನೇ ಶತಮಾನದ ತನಕ ಮಹಿಳೆಯು ಪುರುಷ ಸಮಾಜ ನಿರ್ದೇಶಿಸಿದ್ದನ್ನು ಮಾಡಿದ ಸುಂದರ, ಆಜ್ಞಾಪಾಲಕಿ.
20ನೆಯ ಶತಮಾನದಲ್ಲಿ ಅವಳು ನಿಧಾನವಾಗಿ ಸ್ವಾಭಿವ್ಯಕ್ತಿಯ ಪ್ರಯತ್ನ ಮಾಡಿದ ಹೋರಾಟಗಾರ್ತಿ.
21ನೇ ಶತಮಾನದಲ್ಲಿ ಅವಳು ತನ್ನ ಅಭಿವ್ಯಕ್ತಿಗೆ ಹೆಚ್ಚು ಮುಕ್ತ ಅವಕಾಶಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿರುವ ಸ್ವತಂತ್ರ ಕಲೋಪಾಸಕಿ.
ಹೆಣ್ಣ ಕಣ್ಣಿನ ನೋಟದಿಂದ ನಡೆದ ಕಲೆಯನ್ನು ಕುರಿತ ಚಿಂತನೆಯಲ್ಲಿ ಕಂಡದ್ದು ಹೆಣ್ಣಿಗೆ ಹೆಣ್ಣೇ ಕಟ್ಟಿಕೊಟ್ಟ ನೆಲೆಯ ಬೆಲೆ.
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.