ವಿಮಾನ ಕಿಟಕಿಯಿಂದ ಒಂದಿರುಳು ಬಗ್ಗಿ ನೋಡಿದಾಗ ಎಂದಿನಂತೆ ರಸ್ತೆಗಳು ತಾಯ ಮೈ ಮೇಲೆ ಆಡುವ ಮಕ್ಕಳು ಎಲ್ಲಿ ಬೇಕೆಂಬಲ್ಲಿ ರಂಗೋಲಿ ಚಿತ್ರಗಳನ್ನು ಬರೆದಿಟ್ಟು ದೀಪದ ಹುಳುವನ್ನು ಸಿಗಿಸಿಟ್ಟು ಬಿಟ್ಟು ಹೋದಂತೆ ಕಾಣುತಿತ್ತು.ಆದರೆ ಅದೇನದು?….. ಯಾವುದೋ ಒಂದು ಪಟ್ಟಣದ ಮೇಲಿನ ರಸ್ತೆಗಳು.ತಪ್ಪು ತಪ್ಪು ರಂಗೋಲಿಯೆಳೆದಂತೆ ಆಕ್ಟೋಪಸ್ಸ್ ಹಿಡಿತಕ್ಕೆ ಸಿಕ್ಕಿದಂತೆ, ಕಾಡು ಜೇಡನ ಬಲೆಯೊಂದು ಅಡ್ಡಾದಿಡ್ಡಿ ಪಾಳು ಜಾಗದಲ್ಲಿ ಹಬ್ಬಿಕೊಂಡಂತೆ ಕಾಣುತಿತ್ತು.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ನಾಲ್ಕನೆಯ ಕಂತು.
ಅತ್ತಿಗೆ ಬಸುರಿ, ಮನೆ ಮುಂದೆ ಚಪ್ಪರ,
ಅಣ್ಣ ಇಡಿಸ್ಯಾನೆ ಅರವಂಡಿಗೆ
ಭಾಗ್ಯದಾ ಬಳೆಗಾರ ಹೋಗಿ ಬಾ
ನನ್ ತವರೀಗೆ…..
ಇದು ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಕಾಲುದಾರಿಯ ಕಾಲದಲ್ಲಿ ಹಾಡಿದ ನುಡಿಕಟ್ಟು. ಯಾವುದೇ ಅರಸೊತ್ತಿಗೆಯಾಗಲೀ ರಾಜ್ಯಭಾರವಾಗಲೀ ಇಲ್ಲದೆ ಊರಿನ ಅನುಕೂಲಸ್ಥನೊಬ್ಬ ತನ್ನೂರಿನಲ್ಲಿ ಬರುವ ಹಾದಿಹೋಕನಿಗೆ ಕಲ್ಪಿಸಿಕೊಟ್ಟ ಆ ಹೊತ್ತಿನ ಅನುಕೂಲವಿದು. ಅಷ್ಟೇ… ಈಗಲೂ ಕಾಡಿನ ದಟ್ಟ ಭಾಗಗಳಿಗೆ ನೀವು ಹೋದರೆ ಅಲ್ಲಿರುವ ಒಂಟಿ ಮನೆಯವರು ಉಣ್ಣಿಸಿ, ತಿನ್ನಿಸಿ, ಇರುಳು ಉಳಿಯಲು ನಿಮಗೆ ತಾವು ಕೊಟ್ಟು ನಿಮ್ಮನ್ನು ದೊಡ್ಡ ದಾರಿಗೆ ತಂದು ಕಳುಹುತ್ತಾರೆ. ಆತಿಥ್ಯಕ್ಕೆ ಬಡವ ಶ್ರೀಮಂತರೆಂಬ ಬೇಧವಿರುವುದಿಲ್ಲ. ರಾಜರು ತಮ್ಮ ಕಾಲದಲ್ಲಿ ರಸ್ತೆಗಳನ್ನು ಮಾಡಿದಾಗ ಎರಡು ಬದಿಗೆ ಮರಗಳನ್ನು ಹಚ್ಚುತ್ತಿದ್ದರು. ಅದರ ನೆರಳು ಕಾಲ್ನಡಿಗೆಯವನಿಗೆ ಕೂರಲು ಮಲಗಲು ಆಶ್ರಯವನ್ನೂ ನೀಡುತ್ತಿದ್ದವು. ಇಂತೆಯೇ ಹಿಂದೆ ಪ್ರತಿ ಊರ ಬಾಗಿಲಲ್ಲಿ, ದಾರಿಯಲ್ಲಿ, ಆಳುದ್ದದ ಹೊರೆ ಕಲ್ಲುಗಳನ್ನು ನೆಟ್ಟಿರುತ್ತಿದ್ದರು. ದಾರಿಯಲ್ಲಿ ಬರುವವರು ತಲೆ ಮೇಲೆ ಹೊರೆ ಹೊತ್ತು ಸಾಗುವಾಗ ಕತ್ತು ನೋವಾಗದಂತೆ ಹೊರೆ ಇಳುಕಿ ಕೂರಲು ಮತ್ತೆ ಹೊರೆ ಹೊರುವಾಗ, ಯಾರೂ ಇಲ್ಲದಿದ್ದಾಗಲೂ ಇವು ದಾರಿಹೋಕರ ಸಹಾಯಕ್ಕೆ ಬರುತ್ತಿದ್ದವು. ನಮ್ಮ ಹುಟ್ಟಿನೊಡನೆ ಅನುಕೂಲಕ್ಕೆ ತಕ್ಕ ಹಾಗೆ ಬಂದ ಗುಣವಿದು. ನಮ್ಮ ನೆರಳಲ್ಲಿ ಮತ್ತೊಬ್ಬರನ್ನು ತಬ್ಬಿ ಸಾಗುವುದು.
ಕಾಲು ದಾರಿಯ ಕಾಲ ಮುಗಿದು ಚಕ್ರದ ಆವಿಷ್ಕಾರವಾದಾಗ ಹುಟ್ಟಿದ ವೇಗದ ಚಲನೆಗಾಗಿ ರಸ್ತೆಗಳು ಉಬ್ಬುತಗ್ಗುಗಳನ್ನು ಬಿಟ್ಟು ನಯವಾಗತೊಡಗಿದವು. ಪ್ರತಿ ಊರಲ್ಲಿ ಆಗಾಗ ಊರವರೇ ಮನೆಗೊಂದಾಳಂತೆ ನಿಂತು ಗಟ್ಟಿ ಮಣ್ಣಲ್ಲಿ ಕುಟ್ಟಿ ಮಾಡುತಿದ್ದ ರಸ್ತೆ ಕೆಲಸಗಳು ಹಳ್ಳಿಗಳಲ್ಲಿ ನಿಂತು ಈಗ ವರುಷಗಳೇ ಕಳೆದಿದೆ. ಅಂತೆಯೇ ನೆಂಟರಿಷ್ಟರನ್ನು ಉಪಚರಿಸುವುದನ್ನು ಬಿಟ್ಟರೆ ದಾರಿಹೋಕರನ್ನು ಉಪಚರಿಸುತ್ತಿದ್ದ ದಾರಿಬದಿಯಲ್ಲಿರುತ್ತಿದ್ದ ಛತ್ರಗಳ ಕಾಲವೂ ಮುಗಿದು ಈಗ ದಾರಿ ಬದಿಯ ಒಂದಿಂಚು ಜಾಗಕ್ಕೂ ಚಿನ್ನದ ಗಣಿಯ ಬೆಲೆ ಬಂದುಬಿಟ್ಟಿದೆ.
ದೊಡ್ಡ ದೊಡ್ಡ ಗಾಜಿನರಮನೆಯ ಹೊಸ ಹೊಸ ಕಟ್ಟಡಗಳು ಬಿಸಿಲನ್ನು ನಮ್ಮ ಕಣ್ಣಿಗೆ ಚುಚ್ಚುವಂತೆ ತೊಟ್ಟು ನಿಂತ ವಾಣಿಜ್ಯ ಸಂಕೀರ್ಣದಲ್ಲಿ ಹೋಟೆಲುಗಳು ಪ್ರವಾಸಿಗರ ಕಣ್ಸೆಳೆಯುವಂತೆ ನಿಂತು ತನ್ನ ವಹಿವಾಟಿನ ಕಡೆಗೆ ನಿಗಾ ವಹಿಸುತ್ತಿವೆ. ಇಂದಿನ ರಸ್ತೆಗಳಲ್ಲಿ ಹೊಟ್ಟೆಗಾಗಿಯೇ ದುಡಿಯುವ ಮಂದಿಗೆ, ದೂರದಿಂದ ಬರುವ ಟ್ರಕ್ ಡ್ರೈವರ್ರುಗಳಿಗೆ ಸಣ್ಣ ಗೂಡಂಗಡಿಯ ಮುಂದೆ ಚಾಚಿದ ಪ್ಲಾಸ್ಟಿಕ್ ಶೀಟಿನ ಬೇಯುವ ಚಾವಣಿಯೇ ಗತಿ. ಉಚ್ಚೆ ಹೊಯ್ಯಲೂ ಸಹಾ ಅದರ ಹಿಂದಿನ ಜಾಗ!
ದೂರದಿಂದ ಬಂದ ಡ್ರೈವರುಗಳಿಗೆ ನಿದ್ದೆ ಬಂದರೆ ರಸ್ತೆ ಪಕ್ಕಕ್ಕೆ ಗಾಡಿ ಹಾಕಿ ಅದರಡಿಗೇ ಮಲಗಿದವರಿದ್ದಾರೆ. ಇಲ್ಲ! ಯಾವುದೋ ಮುಂದಿನೂರಿನಲ್ಲಿ ಅನುಕೂಲ ಎಂದು ತೂಕಡಿಸುತ್ತ ಹೊರಟವರಿಗೆ ಕಣ್ಣು ಝೂಗರಿಸಿದ್ದೇ, ಆಕ್ಸಿಡೆಂಟ್ ಆಗುತ್ತದೆ. ಇನ್ನು ಮುಂದಿನದು ಬಿಡಿ… ಒಂದು ಕರಾಳ ಜಗತ್ತಿನ ಸಂಕೋಲೆ ಅದು. ಇಷ್ಟೆಲ್ಲ ಯಾಕೆ ಹೇಳಬೇಕಾಯ್ತೆಂದರೆ ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ನಾವು ಜಾರುವಾಗ ಅದರ ಸುತ್ತ ಹೊಂದಿಕೊಂಡ ಬದುಕಿಗೆ ಪರ್ಯಾಯ ವ್ಯವಸ್ಥೆಯೊಂದನ್ನು ಮಾಡಲೇಬೇಕಲ್ಲ!
ಈಗಂತೂ ಜಗತ್ತಿನ ತುಂಬ ಸುರುಳಿ ಬಿಚ್ಚಿಕೊಂಡ ಹಾಗೂ ಸುರುಳಿ ಸುತ್ತಿಕೊಂಡ ಹೆಬ್ಬಾವ ರಸ್ತೆಗಳು ಜನರನ್ನು ಕೈ ಹಿಡಿದೆಳೆದು ಪ್ರವಾಸಕ್ಕೆ ಸಜ್ಜು ಮಾಡುತ್ತವೆ. ಹಿಂದೆ ಪ್ರವಾಸವೆಂದರೆ ಸಾಹಸದ ಕಾರ್ಯವಾಗಿದ್ದ ಹಾಗೂ ಹೋದವರು ತಿರುಗಿ ಬರುತ್ತಾರೆ ಅನ್ನುವ ಯಾವುದೇ ಗ್ಯಾರಂಟಿಯಿಲ್ಲದ ಕಾಲ ಇಂದು ಮುಗಿದು, ಈಗ ಪ್ರವಾಸವೆನ್ನುವುದೇ ಒಂದು ಉದ್ಯಮವಾಗಿ ಬೆಳೆದು ನಿಂತಿದೆ.
ನಾವು ಸಂಪರ್ಕ ರಸ್ತೆಗಳು ಹಾಗೂ ಸಂಪರ್ಕ ಸಾಧನಗಳು ಕೈಯಳತೆಯಲ್ಲೇ ಇರುವ ಕಾಲದಲ್ಲಿ ಇದ್ದೇವೆ. ಮರಗಳನ್ನು ತರಿದು ನಾವು ರಸ್ತೆಗಳನ್ನು ಎಷ್ಟರಮಟ್ಟಿಗೆ ಹೊಂದಿದ್ದೇವೆಂದರೆ ಹಾರುಹಕ್ಕಿಯ ಕಣ್ಣಿಂದ ನೋಡಿದರೆ ಕೆಳಗೆ ನಿರಂತರವಾಗಿ ಚಲಿಸುವ ವಾಹನಗಳು ಮಿಣುಕುಹುಳುಗಳು ಸಾಲಾಗಿ ಹೊರಟಂತೆ ಮಿಣಮಿಣನೆ ನಾಗಮಣಿಯ ಬೆಳಕಲ್ಲಿ ಹೆಬ್ಬಾವಿನ ಮೇಲೆ ಚಲಿಸಿದಂತೆ ಕಾಣುತ್ತಿರುತ್ತವೆ. ರಸ್ತೆಗಳಂತೂ ಚಕ್ರವ್ಯೂಹದಂತೆ ಕಾಣಿಸುತ್ತವೆ. ನೀರೊಳಗೆ ಅಡ್ಡ ಹಾಕಿದ ಬೃಹತ್ ಸೇತುವೆಗಳು ಹಾಗೂ ಬೆಟ್ಟಕ್ಕೆ ಸುತ್ತಿಕೊಂಡ ಹಾವು ಸೇತುವೆಗಳಂತೂ ಭೂಮಿತಾಯ ಮೈ ಸೀಳಿಟ್ಟಂತೆ ಕಾಣಿಸುತ್ತವೆ.
ಇನ್ನೊಂದು ನೋಟವನ್ನು ಮರೆಯದೆ ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ಏಕೆಂದರೆ ಒಮ್ಮೆ ವಿಮಾನ ಕಿಟಕಿಯಿಂದ ಒಂದಿರುಳು ಬಗ್ಗಿ ನೋಡಿದಾಗ ಎಂದಿನಂತೆ ರಸ್ತೆಗಳು ತಾಯ ಮೈ ಮೇಲೆ ಆಡುವ ಮಕ್ಕಳು ಎಲ್ಲಿ ಬೇಕೆಂಬಲ್ಲಿ ರಂಗೋಲಿ ಚಿತ್ರಗಳನ್ನು ಬರೆದಿಟ್ಟು ದೀಪದ ಹುಳುವನ್ನು ಸಿಗಿಸಿಟ್ಟು ಬಿಟ್ಟು ಹೋದಂತೆ ಕಾಣುತಿತ್ತು. ಆದರೆ ಅದೇನದು? ಯಾವುದೋ ಒಂದು ಪಟ್ಟಣದ ಮೇಲಿನ ರಸ್ತೆಗಳು… ತಪ್ಪು ತಪ್ಪು ರಂಗೋಲಿಯೆಳೆದಂತೆ ಆಕ್ಟೋಪಸ್ಸ್ ಹಿಡಿತಕ್ಕೆ ಸಿಕ್ಕಿದಂತೆ, ಕಾಡು ಜೇಡನ ಬಲೆಯೊಂದು ಅಡ್ಡಾದಿಡ್ಡಿ ಪಾಳು ಜಾಗದಲ್ಲಿ ಹಬ್ಬಿಕೊಂಡಂತೆ ಕಾಣುತಿತ್ತು. ಒಳಗೆ ಜೀವ ಚುಳ್ ಎಂದಿತು.
ಯಾವುದೇ ಮುಂಜಾಗರೂಕತೆಯಿಲ್ಲದೇ ನಾವು ರಸ್ತೆ ಕಾಮಗಾರಿಗಳನ್ನು ಮುಂದುವರೆದ ದೇಶಗಳಿಂದ ಎರವಲು ಪಡೆದು ತಂದು ನಮಗೆ ಬೇಕಾದ್ದನ್ನು ಕಲ್ಪಿಸಿಕೊಳ್ಳಲಾರದೆ ಪರದಾಡುತ್ತಿದ್ದೇವೆ. ನನ್ನ ಮನಸೆಳೆದ ಸಣ್ಣ ಅನುಕೂಲಕರವಾದ ಒಂದು ಸರಳ ವ್ಯವಸ್ಥೆಯನ್ನು ನಾವು ಅಮೇರಿಕಾದಂಥ ಮುಂದುವರೆದ ದೇಶದಲ್ಲಿ ಸಂಚಾರದ ದಾರಿಯುದ್ದ ಕಂಡುಕೊಂಡೆವು. ಅವು ರೆಸ್ಟ್ ಹೌಸ್ ಎಂಬ ನಿಲ್ದಾಣಗಳು.
ಪ್ರತಿ ಐವತ್ತರಿಂದ ಎಂಬತ್ತು ಕಿಲೋಮೀಟರಿನ ರಸ್ತೆ ಪ್ರಯಾಣದಲ್ಲಿ ನಿಮಗಿವು ಕಾಣ ಸಿಗುತ್ತವೆ. ಪ್ರತಿ ದೇಶದ, ಪ್ರತಿ ರಾಜ್ಯದ ಬಾಗಿಲು ತೆರೆಯುವಲ್ಲಿ, ಹಾಗೂ ನಡು ನಡುವೆ ಇಂಥ ಅರವಟ್ಟಿಗೆಗಳು ಕಾಣಿಸುತ್ತವೆ. ಹೆದ್ದಾರಿಯಲ್ಲಿ ನಮಗೆ ಸುಸ್ತಾದಾಗ ಎಕ್ಸಿಟ್ ರಸ್ತೆಗಿಳಿದರೆ ಆಯಿತು. ಅಲ್ಲಿ ಇವು ತಣ್ಣಗೆ ಕಣ್ಣಿಗೆ ಬೀಳುತ್ತವೆ. ನಿಂತ ಟ್ರಕ್ಗಳು, ಕಾರುಗಳು ಕಾಣುತ್ತವೆ. ಝೋಮುಗಟ್ಟಿದ ಕಾಲಾಡಲು ಹೊರಗಡೆ ಹಸಿರಿನ ನಡುವೆ ವಾಕಿಂಗ್ ಪಾಥ್ ಇವೆ. ಹೊರಗೆ ಒಳಗೆ ರೆಸ್ಟ್ ರೂಮುಗಳಿವೆ. ನಿದ್ದೆಗೆ ಜಾರಲು ಡಾರ್ಮೆಂಟರಿಗಳಿವೆ. ಸ್ವಚ್ಚವಾಗಿವೆ.
ಅಲ್ಲಿನ ದೊಡ್ಡ ದೊಡ್ಡ ಟ್ರಕ್ಗಳಲ್ಲೂ ಸಹಾ ಸುಸಜ್ಜಿತವಾದ ಒಳಮನೆಯೊಂದಿರುತ್ತದೆ. ಸ್ನಾನ ಪಾನ ನಿದ್ದೆಗೆ ಅದನ್ನು ಸಜ್ಜುಗೊಳಿಸಲಾಗಿರುತ್ತದೆ. ಕೆಳಗಿಳಿದರೆ ಗಾಳಿ ಸಂಚಾರಕ್ಕೆ ಇಂಥ ಕೇಂದ್ರಗಳ ಸಹಕಾರವಿರುತ್ತದೆ. ಕಡಿಮೆ ಬೆಲೆಯ ಸಣ್ಣ ಸಣ್ಣ ಸ್ನ್ಯಾಕ್ಸ್‌ಗಳನ್ನು ಇಲ್ಲಿ ಒದಗಿಸಲಾಗಿರುತ್ತದೆ. ಜ್ಯೂಸು, ಕಾಪೀನೀರಂತೂ (ಬ್ಲಾಕ್ ಕಾಫಿ) ಎಷ್ಟು ಬೇಕಾದರೂ ನೀವು ಹಿಡಿದು ಕುಡಿಯುವ ವ್ಯವಸ್ಥೆಯಿರುತ್ತದೆ.
ನಮ್ಮೂರಲ್ಲಿ ಹಿಂದೆ ಹೀಗೆ ಓಗಾಲೆ ಮೇಲೆ ಕುದಿಯಲು ಇಟ್ಟಿರುತ್ತಿದ್ದ ಕಾಪಿನೀರಿನ ನೆನಪಾಯ್ತು. ಕಂಚಿನ ಪಾವು ಲೋಟದಲ್ಲಿ ರೊಟ್ಟಿ ಜೊತೆಜೊತೆಗೆ ಕಾಪೀನೀರಿನ ಸೇವನೆ ಬಡವ ಬಲ್ಲಿದನೆಂಬ ಬೇಧವಿಲ್ಲದೆ ನಡೆಯುತ್ತಿತ್ತು. ಪೆಟ್ ಗಳಿಗೆ ಎರಡು ಸುತ್ತಿನ ಪೆಟ್ ಝೋನ್ ಇವೆ. ಹೊರ ಸುತ್ತು ಅವುಗಳ ತಿನಿಸು ಉಣಿಸು ಕಕ್ಕ ಉಚ್ಚೆಗಾಗಿ. ಒಳ ಸುತ್ತಲ್ಲಿ ಇರುವ ಕಲ್ಲು ಬೆಂಚಲ್ಲಿ ಹಸಿರು ಹಾಸಿನಲ್ಲಿ ಕುಳಿತು ಅವುಗಳನ್ನು ಲಲ್ಲೆಗರೆಯುವುದಕ್ಕಾಗಿ.
ಸರಳ, ಹಳ್ಳಿಯ ದೊಡ್ಡ ಮನೆಗಳಂತೆ ಕಾಣುವ ಇವು ಒಳ ಹೋದರೆ ವಿಶಾಲವಾದ ಸರಳಾಲಂಕಾರದ ಸಜ್ಜಾಗಿರುವ ಹಾಲ್ ಒಂದನ್ನು ಹೊಂದಿರುತ್ತವೆ. ಅಲ್ಲಿ ನಿಮಗೆ ನಗೆಮೊಗದ ಮಾಹಿತಿ ಕೇಂದ್ರದವರು ಸುತ್ತಮುತ್ತಲಿನ ಸ್ಥಳಗಳನ್ನು ರಸ್ತೆಗಳನ್ನು ತಿಳಿಸಿ ಮಾಹಿತಿ ಕರಪತ್ರಗಳನ್ನು ಕೊಡುತ್ತಾರೆ. ಅಲ್ಲಿ ಸಣ್ಣ ಪ್ರಮಾಣದ ಪುಸ್ತಕಗಳು ಇರುತ್ತವೆ.
ಈ ನಿಲ್ದಾಣಗಳನ್ನು ದಾರಿಹೋಕರ ಕೈಕಂಬವೆಂದೇ ಅನ್ನಬಹುದು. ಏಕೆಂದರೆ ಅಲ್ಲಿ ಇಟ್ಟ ಅನೇಕ ಮಾಹಿತಿ ಉದ್ದೇಶ ವಸ್ತುಗಳು, ಫೋಟೋಗಳು ಅಲ್ಲಿನ ಸ್ಥಳದ ಪುಟ್ಟ ಇತಿಹಾಸವನ್ನು, ಬೆಳವಣಿಗೆಯನ್ನು ವರ್ತಮಾನದೊಡನೆ ಹೊಂದಿಸುವ ಕೆಲಸವನ್ನೂ ಮಾಡುತ್ತವೆ. ನಾವು ನೋಡಿದ ಇಂಥ ಒಂದೆರಡು ಜಾಗಗಳಲ್ಲಿ ಒಂದನ್ನು ನಾವು ನೋಡಿದ್ದು, ಟೆಕ್ಸಾಸ್ ರಾಜ್ಯದ HUSTON ಸಿಟಿಯ ಹೆದ್ದಾರಿ ಪಕ್ಕದಲ್ಲಿದೆ.
ಆ ಪ್ರದೇಶದ ಮಾಹಿತಿ
ಅಲ್ಲಿ ಕೆಲವು ಫೋಟೋಗಳು ಹಾಗೂ ವಸ್ತುಗಳು ಹರವಿದ ಕಥೆ ಏನಪ್ಪ ಎಂದರೆ ಇಂದು ಅಮೇರಿಕಾದ ನಾಲ್ಕನೇ ಜನಿನಿಬಿಡ ಸಿಟಿ. ಇಲ್ಲಿ ಹಿಂದೆ ದೊಡ್ಡ ದೊಡ್ಡ ವುಡ್ ಇಂಡಸ್ಟ್ರಿ ಹಾಗೂ ಹತ್ತಿಬೆಳೆಯ ಕೇಂದ್ರಗಳಿದ್ದವು.
ಇಲ್ಲಿಯ ಸ್ಥಳದ ವಿವರಣೆ, ವಿವೇಚನೆಯಿಲ್ಲದ ಆಂಗ್ಲೋ ಅಮೇರಿಕನ್ನರ ದುರಾಸೆಯಿಂದ ಇಲ್ಲಿ ನೆಲೆಯಾಗಿದ್ದ ದೊಡ್ಡ ಪ್ರಕೃತಿದತ್ತ ಕಾಡು ನಾಶವಾಗಿ ಅದು ಹಡಗಿನಲ್ಲಿ ಅವರೂರಿಗೆ ಸಾಗಣೆಯಾಗಿ ಹೋಯಿತು. ಕಾಡನ್ನೇ ನಂಬಿದ್ದ ಮರಕುಟುಕದಂಥ ಹಕ್ಕಿಗಳು ೯೯ ಭಾಗ ನಾಶವಾಗಿ ಇಂದು ಅಲ್ಲಿ ಇಲ್ಲಿ ಉಳಿದಿರುವ ಹಕ್ಕಿಗಳಿಗೆ ಇಂದಿನ ವಿಜ್ಞಾನಿಗಳು ಕೃತಕ ಗೂಡಿನ ಮರೆಯಲ್ಲಿ ಮರಿ ಮಾಡಿಸಿ ಉಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಕಾಡು ಮರಗಳನ್ನು ಲಾಭದಾಯಕವಾಗಿ ಬೆಳೆಯಲು ರೈತರಿಗೆ ಇಂದು ಇಲ್ಲಿಯ ಸರ್ಕಾರ ಸಂಪೂರ್ಣವಾಗಿ ಕೈ ಜೋಡಿಸಿದೆ. ಹಾಗಾಗಿ ಪರಿಸರ ಜಾಗೃತಿಯೂ ಈಗ ಮುನ್ನಡೆಯಲ್ಲಿದೆ.
ಅಂದು ಕಾಡು ಕಡಿದ ಆಂಗ್ಲೋ ಅಮೇರಿಕನ್ ಜನ ಪುಕ್ಕಟೆ ಆಳಾದ ಕಪ್ಪು ಜನರನ್ನು ಇಲ್ಲಿಗೆ ತಂದು ಹತ್ತಿ ಬೆಳೆದು ನದಿಗಳುದ್ದಕ್ಕೂ ಬಂದರುಗಳನ್ನು ನಿರ್ಮಿಸಿ ಇಂಗ್ಲೇಂಡಿಗೆ ಕಳುಹಲು ಶುರು ಹಚ್ಚಿದರು. ನಂತರ ರೈಲು ಮಾರ್ಗದಲ್ಲಿ ಕಳುಹಿಸುವ ವ್ಯವಸ್ಥೆಯಾಯಿತು. ನಂತರ ಇದು ದೊಡ್ಡ ಹತ್ತಿ ಬೆಳೆಯ ಕಣಜವಾಯಿತು. ಇಲ್ಲಿ ಕಾಟನ್ ಇಂಡಸ್ಟ್ರಿಗಳಿದ್ದವು. ದುಡಿಯಲು ಕಪ್ಪು ಆಳುಗಳಿದ್ದರು. ಆದರೆ ನೋಡುನೋಡುತ್ತಿದ್ದಂತೆಯೇ ಕೇವಲ ನೂರು ವರುಷಗಳ ಇತಿಹಾಸದಲ್ಲಿ ಭೂಮಿ ಬಂಜರು ಬಿದ್ದುಹೋಗಿತ್ತು.
ಇದೇ ಕಾಲದಲ್ಲಿ ಉಂಟಾದ ಘರ್ಷಣೆಯನ್ನು ತಡೆಯಲು ಶ್ರಮಿಸಿದ ಸ್ಯಾಮ್ ಹೂಸ್ಟೆನ್ ಎಂಬುವರು ಟೆಕ್ಸಾಸ್ ರಾಜ್ಯವನ್ನು ಸಂಘರ್ಷದಿಂದ ಕಾಪಾಡಿಕೊಂಡರು. ಮಿಲಿಟರಿ ಆಡಳಿತದಲ್ಲಿದ್ದೂ ಕೂಡ ಚೆರೋಕಿ ಇಂಡಿಯನ್ಸ್ ಜೊತೆ ನಂಬಿಕೆ ಗಳಿಸಿಕೊಂಡ ಯೂಸ್ಟನ್ ಮೂಲ ಜನರ ಹಾಗೂ ಸರಕಾರದ ನಡುವೆ ಒಡಂಬಡಿಕೆಯಿಂದ ದುಡಿದು, ಯುದ್ದ ಮಾಡದೆ ಸೌಹಾರ್ದತೆಯಿಂದ ರಕ್ತ ಹರಿಯದಂತೆ ಟೇಕ್ಸಾಸ್ ಜನತೆಯನ್ನು ನೋಡಿಕೊಂಡರು.
ಇಂದಿಗೂ ಸ್ಯಾಮ್ ಸಾಮಾಜಿಕ ಕಳಕಳಿಯ ಒಳ್ಳೆಯ ಆಡಳಿತಗಾರನಾಗಿ, ಮುಂದಿನ ಮಾದರಿಯಾಗಿಯೇ ಎಲ್ಲರ ಕಣ್ಣಲ್ಲಿ ಉಳಿದಿದ್ದಾರೆ. ಆಕಾಶಕ್ಕೆ ತಾಗುವಂತೆ ಅವರ ಪ್ರತಿಮೆಯೊಂದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಧೈರ್ಯ ಸಾಹಸಗಳಿಗೆ ಮಾದರಿಯಾಗಿದ್ದ ಅವರ ಮ್ಯೂಸಿಯಂ Huntsville ಹಾಗೂ Huston ನಗರದಲ್ಲಿ ಇವೆ. ಅವರು ತನ್ನ ಕೆಲಸಗಳನ್ನು ಇಲ್ಲಿ ಪೂರೈಸಿದ ಬಳಿಕ ತನ್ನ ಮಡದಿಗಾಗಿ ಟೆಕ್ಸಾಸ್ ಜನರನ್ನು ತೊರೆದು ತನ್ನೂರಾದ ಹಂಟ್ಸ್ ವಿಲ್ಲೇಗೆ ಹೋಗಿ ಎರಡು ವರುಷದ ನಂತರ ಕೊನೆಯುಸಿರೆಳೆಯುತ್ತಾರೆ. ಆಗ ಅವರು ನುಡಿದ ಕೊನೆಯ ಮಾತುಗಳು “ my country, oh my country… Texas, texas, margaret” ಮಾರ್ಗರೇಟ್ ಅವರ ಹೆಂಡತಿಯ ಹೆಸರು.
ಇವರೊಂದಿಗೆ ಈ ಪ್ರದೇಶದ ಮಕ್ಕಳ ವಿದ್ಯೆಯ ಅಭಿವೃದ್ಧಿಗೆ ಕೈ ಜೋಡಿಸಿದ ಜೋಶುಹಾ ಹೂಸ್ಟನ್ ಎಂಬುವರು ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ತಾವೇ ಮುಖ್ಯಸ್ಥರಾಗಿ ಆಂಗ್ಲೋ ಆಫ್ರಿಕನ್ ಮಕ್ಕಳ ಶ್ರೇಯಸ್ಸಿಗಾಗಿ ದುಡಿದರು. ವಿದ್ಯೆಯೆಂಬುದು ಸ್ವಾತಂತ್ರ್ಯದ ಪರಿಕಲ್ಪನೆಯ ಬೀಜವೆಂದೇ ಜೋಶುಹಾ ನಂಬಿದ್ದರು.
ಟೆಕ್ಸಾಸ್ನ ನೆನಪಲ್ಲುಳಿದ ಇನ್ನೊಂದು ಹೆಸರು “ಮಿನ್ನಿ ಫಿಶ್” ಆಕೆ ಹೆಣ್ಣಿನ ವಿಮೋಚನೆಗಾಗಿ ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ, ಹಾಗೂ ವರ್ಗವಿರೋಧದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದವಳು. ಟೆಕ್ಸಾಸ್ನ U.S. Congress ನಲ್ಲಿ ನಡೆಸಿದ ಅವಳ ಹೋರಾಟದಿಂದಲೇ ಹೆಣ್ಣುಮಕ್ಕಳಿಗೆ ಮತನೀಡುವ ಹಕ್ಕು ದೊರೆಯಿತು. ಇದಕ್ಕಾಗಿ ಅವಳು ಮಾಡಿದ ಹೋರಾಟಗಳು, ನುರಿತ ಪತ್ರಿಕಾರಂಗದ ಕಾರ್ಯಗಳು, ಸಾಮಾಜಿಕ ಕಾಳಜಿಗೆ ಉತ್ತೇಜನ ನೀಡುವಂತೆ ಅವಳು ಸ್ಥಾಪಿಸಿದ ಸಂಘ ಸಂಸ್ಥೆಗಳು ಅನೇಕ. “ಎಲ್ಲಾ ತೊಂದರೆಗಳನ್ನು ಮೀರಿದ್ದು ಸ್ವಾತಂತ್ರ” ಅನ್ನುವ ಅವಳ ಮಾತು ನಿಜವಾದ್ದು. ಇದಿಷ್ಟೂ ಯೂಸ್ಟೆನ್ ನಗರದ ರೆಸ್ಟ್ ಹೌಸಿನಲ್ಲಿಟ್ಟಿದ್ದ ಮಾಹಿತಿ.
ಎಲ್ಲಾ ಊರುಗಳು ಕೇರಿಗಳೂ ಇರುವುದು ಮನುಷ್ಯನ ಉಳಿವಿಗಾಗಿ ಎಂಬುದನ್ನು ಮರೆಯುವಂತಿಲ್ಲ. ಹಾಗೇ ಮನುಷ್ಯನ ಚಲನೆಯ ಆಸೆಯೂ ಇದಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಮರೆಯುವಂತಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಸಹ ಘರ್ಷಣೆಗಳಾಗಿದ್ದು ಆಸೆಯಿಂದಲೇ ….. ಅದು ಸಾಗುವುದೂ ರಸ್ತೆಗಳ ಮೂಲಕವೇ… ಭೂಮಿ, ನೀರು ವಾಯು ಎಲ್ಲ ಮಾರ್ಗಗಳು ನಿರ್ವಹಿಸಿದ್ದು ಚಲನೆಯನ್ನೇ.ಆತಿಥ್ಯದ ಜೊತೆಜೊತೆಗೆ ಅಸಹನೆಯೂ ಮನುಷ್ಯರಲ್ಲಿ ಹುಟ್ಟುವುದು ಸತ್ಯ. ಇದೊಂದು ನಿರಂತರ ತಿರುಗುವ ಚಕ್ರ. ಇಂದು ಭಾರತೀಯರು ಅಮೇರಿಕನ್ನಿಗರಿಗೆ ತಲೆನೋವಾಗುತ್ತಿದ್ದಾರೆ ಎಂಬುದು ಬೂದಿ ಮುಚ್ಚಿದ ಕೆಂಡದಷ್ಟೇ ಸತ್ಯ ಎಂಬುದು ಅಮೇರಿಕಾ ವಾಸಿಗಳಾಗಿರುವ ನಮ್ಮವರಿಗೂ ಗೊತ್ತಿದೆ.
(ಮುಂದುವರಿಯುವುದು)
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.