”ಅಶ್ಲೀಲವಾದ, ವಿಚಿತ್ರವಾದ, ಘನಘೋರ ಹೆಸರುಗಳನ್ನು ಓದುತ್ತಿದ್ದರೆ ಸೋಜಿಗವಾಗುತ್ತದೆ. ಏನಾದರಾಗಲಿ, ಯು.ಕೆ.ಯ ಉದ್ದಗಲಕ್ಕೆ ಪ್ರಯಾಣ ಮಾಡಿ, ವಾಸ ಮಾಡಿರುವ ನಮಗೆ ಈ ಹೆಸರುಗಳನ್ನು ಓದಿದಾಗೆಲ್ಲ ನಗು ಬರುವುದು ನಿಂತಿಲ್ಲ. ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗಿ ಅಲ್ಲಿನ ಬುಡಕಟ್ಟು ಜನರನ್ನು ಪ್ರಾಣಿಗಳೆಂದೂ, ಸಂಸ್ಕೃತಿಯಿಲ್ಲದವರೆಂದೂ ಜರಿದು ಅವರನ್ನು ಕೀಳಾಗಿ ನಡೆಸಿಕೊಂಡ ಬ್ರಿಟಿಷರಿಗೆ ಅವರದೇ ಸಂಪ್ರದಾಯಗಳ, ಅಭಿರುಚಿಗಳ ಬಗ್ಗೆ ಹೇಳುವವರು ತಾನೇ ಯಾರು? ಎನ್ನುವ ಪ್ರಶ್ನೆ ಮೂಡಿರದೆ ಇಲ್ಲ”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

ನಾವು ಇಂಗ್ಲೆಂಡಿಗೆ ಬಂದ ಮೊದಲ ಜಾಗದ ಹೆಸರು ‘ಡಾರ್ಲಿಂಗ್ಟನ್’. ಈ ಊರಿನ ‘ಡಾರ್ಲಿಂಗ್’ ಗಳಾಗಿ ನಾವು ಎರಡು ವರ್ಷ ಕಳೆದೆವು. ಇದು ನಾನು ಆಕ್ಸಿಡೆಂಟ್ ನಿಂದ ಚೇತರಿಸಿಕೊಂಡ ಕಾಲ. ಈ ಕಾಲದಲ್ಲಿ ಒಣಗದ ಗಾಯದ ಕಲೆಗಳಿಗೆ ಜನರಲ್ ಅನಸ್ತೀಸಿಯಾ ಕೊಟ್ಟು, ಗಾಯದ ಕಲೆಗಳಿಂದಾಗುತ್ತಿದ್ದ ಕೆರೆತವನ್ನು ಕಡಿಮೆಮಾಡಲು ಮತ್ತು ಕಲೆಗಳು ಉಬ್ಬದಂತೆ ಸ್ಟೀರಾಯ್ಡ್ ಚುಚ್ಚು ಮದ್ದುಗಳನ್ನು ನೀಡಿದ್ದರು. ಕಂಪ್ರೆಷನ್ ಬ್ಯಾಂಡೇಜನ್ನು ಹಾಕಿಕೊಳ್ಳಲೂ ಸಹ ಸೂಚಿಸಿದ್ದರು. ನನ್ನ ಕಾಲಿನಲ್ಲಿ ನಿಧಾನಕ್ಕೆ ಶಕ್ತಿ ಮೂಡುತಿತ್ತು. ಆಗಲೇ ನಾನು ಅಪಘಾತದ ಬಗ್ಗೆ ನನ್ನೊಳಗಿದ್ದ ಭಯಗಳನ್ನು ಹತ್ತಿಕ್ಕಿ ಕಾರನ್ನು ನಡೆಸಲು ಕಲಿತು ಬ್ರಿಟಿಷ್ ಲೈಸನ್ಸ್ ಪಡೆದು ರಸ್ತೆಗಿಳಿದಿದ್ದೆ. ಮೂರು ಭಾಗಗಳಲ್ಲಿದ್ದ ವೃತ್ತಿಪರ ಪರೀಕ್ಷೆಗಳನ್ನು ತೆಗೆದುಕೊಳ್ಳತೊಡಗಿದೆ.

ಇಲ್ಲಿಂದ ಮುಂದೆ ನಾವು ಲಂಡನ್ನಿನ ಸಮೀಪದ ‘ಕೆಂಟ್’ ಪ್ರಾಂತ್ಯದ ‘ಮೇಯ್ಡ್ ಸ್ಟೋನ್’ (Maidstone) ಎಂಬ ಜಾಗಕ್ಕೆ ಬಂದೆವು. ಇಲ್ಲಿ ಆರು ತಿಂಗಳ ಕಾಲ ಕಳೆದು ಇಂಗ್ಲೆಂಡಿನ ದಕ್ಷಿಣ-ಪಶ್ಚಿಮ ಭಾಗದಲ್ಲಿದ್ದ ‘ಪ್ಲಿಮತ್ ‘ ಎನ್ನುವ ಜಾಗಕ್ಕೆ ಬಂದೆವು. ಇಲ್ಲಿಯೂ ಮತ್ತೆ ಆರು ತಿಂಗಳ ಕಾಲವಷ್ಟೆ ಇದ್ದದ್ದು. ಇದನ್ನು ಇಂಗ್ಲಿಷಿನಲ್ಲಿ ‘ಪ್ಲೈಮೌತ್ ‘ ( PLYMOUTH) ಅಂತ ಬರೆದರೂ ಬಾಯಲ್ಲಿ ಹೇಳುವಾಗ ‘ಪ್ಲಿಮತ್’ ಎಂದು ಉಚ್ಚರಿಸಬೇಕಿತ್ತು. ಇದರಂತೆಯೇ ಬೋರ್ನ್ ಮತ್ (Bournemouth), ಯಾರ್ಮತ್ (Yarmouth), ಫಾಲ್ಮತ್ (Falmouth), ಟೈನ್ಮತ್ (Tynemouth), ಡಾರ್ಟಮತ್ (Dartmouth) ಎನ್ನುವ ಇನ್ನಿತರ ಜಾಗಗಳಿವೆ. ಇದೇನಿದು ಬ್ರಿಟನ್ನಿನಲ್ಲಿ ‘ಮೌತ್’ (ಬಾಯಿ) ಅಂತೆಲ್ಲ ಜಾಗಗಳಿಗೆ ಹೆಸರಿಡುತ್ತಾರಲ್ಲ ಎಂದು ನನಗೆ ಸಹಜವಾಗಿಯೇ ಆಶ್ಚರ್ಯವಾಗುತ್ತಿತ್ತು. ನಂತರ ತಿಳಿದದ್ದು ಆ ಜಾಗಗಳಿಗೆ ಹೊಂದಿಕೊಂಡಂತೆ ಇದ್ದ ನದಿಗಳ ‘ಬಾಯ’ಲ್ಲೇ ಈ ನಗರಗಳು ಇರುವ ಕಾರಣ ಈ ಹೆಸರುಗಳು ಬಂದವು ಅಂತ. ಉದಾಹರಣೆಗೆ ಬೋರ್ನ್ ನದಿಯ ಬಾಯಲ್ಲೇ ಇರುವ ನಗರವನ್ನು ‘ಬೋರ್ನ್ ಮತ್’ ಅಂತ ಕರೆದಿದ್ದರು. ಅಂತೆಯೇ ಚೆಸ್ಟರ್, ಮ್ಯಾಂಚೆಸ್ಟರ್, ವಿಂಚೆಸ್ಟರ್, ಕೋಲ್ಚೆಸ್ಟರ್, ಡಾರ್ ಚೆಸ್ಟರ್, ಚಿಚೆಸ್ಟೆರ್, ಬಿನ್ ಚೆಸ್ಟೆರ್ , ಲೆಸ್ಟರ್ , ಗ್ಲೌಸೆಸ್ಟರ್ ಎಂದೆಲ್ಲ ಒಂದೇ ರೀತಿಯಲ್ಲಿ ಕೊನೆಗೊಳ್ಳುವ ಹತ್ತು ಹಲವು ಹೆಸರುಗಳಿವೆ. ಈ ಹೆಸರುಗಳು ರೋಮನ್ನರು ನಡೆಸಿದ ಬ್ರಿಟನ್ನಿನ ಆಳ್ವಿಕೆಯ ಕಾಲದ ಲ್ಯಾಟಿನ್ ಹೆಸರುಗಳ ಮೂಲದಿಂದ ಬಂದವಂತೆ. ನಮ್ಮ ರಾಜ್ಯಕ್ಕೆ ಬಂದು ತುಮಕೂರು, ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು, ಹಿರೇ ಮಗಳೂರು, ನಿಟ್ಟೂರು , ತಿಪಟೂರು ಇತ್ಯಾದಿ ಹೆಸರುಗಳನ್ನು ಕೇಳಿದರೆ ಏನೆನ್ನಿಸುತ್ತದೋ ಹಾಗೆ!

ಇನ್ಯಾರೋ “ನಮ್ಮಲ್ಲಿ ತಿಮ್ಮಸಂದ್ರ, ಬೊಮ್ಮಸಂದ್ರ, ಕ್ಯಾತಸಂದ್ರ, ಮಲ್ಲಸಂದ್ರ ಅಂತೆಲ್ಲ ಹೆಸರಿಡುವುದಿಲ್ಲವೇ ಹಾಗೇ”.. ಎಂದು ವಿವರಣೆ ಕೊಟ್ಟಾಗ ಹೌದಲ್ಲವೇ ಅನ್ನಿಸಿತು. ಆದರೆ, ನಮ್ಮ ದೇಶದ ಜಾಗಗಳನ್ನು ಬರೆದಂತೇ ಓದಬಹುದು ಆದರೆ ಇಲ್ಲಿ ಹೆಸರಿನ ಅಕ್ಷರಗಳೇ ಬೇರೆ, ಉಚ್ಛಾರಣೆಯೇ ಬೇರೆ! ಉದಾಹರಣೆಗೆ ‘ಎಡಿನ್ಬರೋ’ ಎನ್ನುವ ಸ್ಕಾಟ್ಲ್ಯಾಂಡಿನ ರಾಜಧಾನಿಯು ಲಿಪಿಯಲ್ಲಿ ‘ಎಡಿನ್ಬರ್ಗ್’ ಎಂದು ಓದಿಸಿಕೊಳ್ಳುತ್ತದೆ. ‘ಡರ್ಬಿ’ ಎನ್ನುವ ನಗರವನ್ನು ‘ಡಾರ್ಬಿ’ ಎನ್ನಬೇಕು! ಪ್ರಾಂತೀಯ ಭಾಗಗಳಾದ ‘..ಶೈರ್’ ಗಳನ್ನು ‘ಶಿಯರ್’ ಎನ್ನುತ್ತಾರೆ. ಈ ರೀತಿಯ ಬಹಳಷ್ಟು ಉದಾಹರಣೆಗಳನ್ನು ನೋಡುತ್ತಲೇ, ಕೇಳುತ್ತಲೇ, ಕಲಿಯುತ್ತಿದ್ದೇನೆ!

ಇಂಗ್ಲೆಂಡಿನ ಸಮಾಜದ ಅತಿಮುಖ್ಯ ಪದ್ಧತಿಯೆಂದರೆ ವಾರದ ಐದು ದಿನಗಳ ಕೆಲಸವನ್ನು ಮುಗಿಸಿ ಶುಕ್ರವಾರ ರಾತ್ರಿ ಪಬ್ಬುಗಳಿಗೆ ತೆರಳಿ ಖುಷಿಪಡುವುದು. ಇಂಗ್ಲೆಂಡಿನಲ್ಲಿ ಪಬ್ಬುಗಳ ಸಂಸ್ಕೃತಿ ಸಹಸ್ರಾರು ವರ್ಷಗಳಿಂದ ಬಂದದ್ದು. ಪಬ್ಬುಗಳು ಪ್ರತಿ ಶುಕ್ರವಾರ ರಾತ್ರಿ ಮತ್ತು ಶನಿವಾರಗಳಂದು ಸಂಸಾರಗಳು, ಒಂಟಿ ಜೀವಿಗಳು, ವಯಸ್ಕರರೂ ಎಡತಾಕುವ ಜಾಗ. ಇಂಗ್ಲೆಂಡಿನ ಈ ದೇಶೀ ಪಬ್ಬುಗಳ ಹೆಸರುಗಳಂತೂ ದೇವರಿಗೇ ಪ್ರೀತಿ. ಈ ಪಬ್/ಇನ್ ಗಳ ಹೆಸರನ್ನು ಓದುವ ಮಜಾವೇ ಬೇರೆ. ಇಲ್ಲಿನ ಪಬ್ಬುಗಳ ಹೆಸರುಗಳು ಬಹಳೇ ವಿಚಿತ್ರವಾಗಿರುತ್ತವೆ. ಕನ್ನಡದ ಕುವರಿಯಾದ ನನ್ನ ಮನಸ್ಸಿನ ಕಿಡಿಗೇಡಿತನದ ಬುದ್ದಿ ಈ ಇಂಗ್ಲೀಷಿನ ಹೆಸರುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದಿಕೊಂಡು ಆನಂದಿಸಿದ್ದು ಬಹಳ ಇದೆ. ‘ದಿ ಸಿಮೆಟರಿ ಇನ್’ (ಸ್ಮಶಾನದ ಇನ್), ‘ಡ್ರಂಕನ್ ಡಕ್’ ( ಮದವೇರಿದ ಬಾತುಕೋಳಿ), ‘ಸ್ವಾನ್ ವಿತ್ ಟು ಹೆಡ್ಸ್’ (ಎರಡು ತಲೆಯ ಹಂಸ) ‘ಮೂಡಿ ಕೌ’ (ಮನಬಂಬಂತೆ ನಡೆವ ಹಸು) ‘ಅನ್ ರೂಲಿ ಪಿಗ್’ (ನಿಯಂತ್ರಿಸಲಾಗದ ಹಂದಿ) ‘ಕಿಂಗ್ಸ್ ಹೆಡ್’ (ರಾಜನ ತಲೆ) ‘ಕ್ವೀನ್ಸ್ ಹೆಡ್’ (ರಾಣಿಯ ತಲೆ) ‘ಡಾಂಕಿ ಆನ್ ಫೈರ್’ (ಬೆಂಕಿ ಹತ್ತಿಕೊಂಡ ಕತ್ತೆ) ‘ಬಕೆಟ್ ಆಫ್ ಬ್ಲಡ್’ (ರಕ್ತ ತುಂಬಿದ ಬಕೆಟ್) ‘ಹೇರಿ ಲೆಮನ್’ (ಕೂದಲಿನ ನಿಂಬೆ) ಎಂಬೆಲ್ಲ ಹೆಸರುಗಳನ್ನು ಇಟ್ಟಿದ್ದಾರೆ. ಇಂತಹ ಇನ್ನೂ ಹಲವು ಉದಾಹರಣೆಗಳನ್ನು ಓದಿ.

‘The quiet Women’ (ಇದರ ಚಿತ್ರದಲ್ಲಿ ಹೆಂಗಸೊಬ್ಬಳು ಕತ್ತರಿಸಿದ ತನ್ನದೇ ತಲೆಯನ್ನು ಕೈಲಿ ಹಿಡಿದು ನಿಂತಿರುವ ಚಿತ್ರವಿದೆ) ‘The Dirty Dicks’ ( ರಿಚರ್ಡ್ ಎಂಬಾತ ತನ್ನ ಹೆಂಡತಿ ಸತ್ತ ನಂತರ ಮತ್ತೆ ಸ್ನಾನ ಮಾಡಲೇ ಇಲ್ಲವಂತೆ, ಇನ್ನು ಮುಂದಿನದನ್ನು ನೀವೇ ಊಹಿಸಿಕೊಳ್ಳಿ) ಅಂತೆಯೇ ‘ದಿ ಫೇಮಸ್ ಕಾಕ್’ ( The Famous Cock), ದಿ ಜಾಬ್ ಸೆಂಟರ್ (The Job centre) , ದಿ ಹೋಲ್ ಇನ್ ದಿ ವಾಲ್ (Hole in the wall), ದಿ ಫಿಲ್ತಿ ಫ್ಯಾನ್ನಿಯದು (‘Filthy Fanny’s) ಇತ್ಯಾದಿ ಕೆಟ್ಟ ಅರ್ಥದ ಹೆಸರುಗಳನ್ನು ಈ ಕುಡಿಯುವ , ತಿನ್ನಲು ಇರುವ ಜಾಗಗಳಿಗೆ ಯಾಕೆ ಇಟ್ಟಿದ್ದಾರೆ ಅಥವಾ ಇಡುತ್ತಾರೆ ಎಂಬುದಕ್ಕೆ ಇನ್ಯಾವ ವಿವರಣೆಯೂ ದೊರಕುವುದಿಲ್ಲ.

ಇಂಗ್ಲೆಂಡಿನ ಸಮಾಜದ ಅತಿಮುಖ್ಯ ಪದ್ಧತಿಯೆಂದರೆ ವಾರದ ಐದು ದಿನಗಳ ಕೆಲಸವನ್ನು ಮುಗಿಸಿ ಶುಕ್ರವಾರ ರಾತ್ರಿ ಪಬ್ಬುಗಳಿಗೆ ತೆರಳಿ ಖುಷಿಪಡುವುದು. ಇಂಗ್ಲೆಂಡಿನಲ್ಲಿ ಪಬ್ಬುಗಳ ಸಂಸ್ಕೃತಿ ಸಹಸ್ರಾರು ವರ್ಷಗಳಿಂದ ಬಂದದ್ದು. ಪಬ್ಬುಗಳು ಪ್ರತಿ ಶುಕ್ರವಾರ ರಾತ್ರಿ ಮತ್ತು ಶನಿವಾರಗಳಂದು ಸಂಸಾರಗಳು, ಒಂಟಿ ಜೀವಿಗಳು, ವಯಸ್ಕರರೂ ಎಡತಾಕುವ ಜಾಗ. ಇಂಗ್ಲೆಂಡಿನ ಈ ದೇಶೀ ಪಬ್ಬುಗಳ ಹೆಸರುಗಳಂತೂ ದೇವರಿಗೇ ಪ್ರೀತಿ.

ಇಂತಹ ಹೆಸರುಗಳು ಇಡೀ ದೇಶದ ಸಣ್ಣ ಮತ್ತು ದೊಡ್ಡ ನಗರಗಳ ತುಂಬೆಲ್ಲ ತುಂಬಿವೆ. ಡೆವಿಲ್ಸ್ ಪಂಚ್ ಬೌಲ್ (Devil’s punch Bowl), ದಿ ಎಲ್ಯುಸೀವ್ ಕ್ಯಾಮಲ್ (The elusive Camel), ದಿ ಫ್ಯಾಟ್ ಕ್ಯಾಟ್ (The fat Cat), ದಿ ಗೋಟ್ ಅಂಡ್ ಟ್ರೈಸೈಕಲ್ (The Goat and Tricycle), ಥ್ರೀ ಲೆಗ್ಡ್ ಮೇರ್ (The three legged Mare) ….. ಅಬ್ಬಬ್ಬಾ ಎಷ್ಟೆಲ್ಲಾ ಚಿತ್ರ-ವಿಚಿತ್ರ ಹೆಸರುಗಳಲ್ಲವೆ ಇವು? ಯುನೈಟೆಡ್ ಕಿಂಗ್ಡಮ್ ನ ಒಟ್ಟು ಒಂಭತ್ತು ಜಾಗಗಳಲ್ಲಿ ನಾವು ಇದುವರೆಗೆ ಬದುಕಿದ್ದೇನೆ. ಆ ಜಾಗಗಳ ಸುತ್ತ ಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಇಂತಹ ಹೆಸರುಗಳಿರುವ ಜಾಗಗಳು ಕಣ್ಣಿಗೆ ಬಿದ್ದಾಗಲೆಲ್ಲ ಅಚ್ಚರಿಗೊಂಡು ನಕ್ಕಿದ್ದೇನೆ.

ಪ್ರಾಣಿ ಅಥವಾ ಪಕ್ಷಿಯ ಹೆಸರಿದ್ದರೆ ಆ ಜಾಗಗಳು ಅದೇ ಮಾಂಸವನ್ನು ಮಾರುವ ರೆಷ್ಟುರಾಂಟ್ ಗಳು ಅಂತೇನೂ ಅಲ್ಲ. ಉದಾಹರಣೆಗೆ ‘ಹಾರ್ಸ್ ಹೆಡ್’ ಅಂತ ಹೆಸರಿದ್ದರೆ ಬ್ರಿಟಿಷರು ಅಲ್ಲಿ ಕುದುರೆಯ ಮಾಂಸವನ್ನು ತಿನ್ನುತ್ತಾರೆ ಅಂತೇನೂ ಅಲ್ಲ. ‘ಸ್ವಾನ್ ಹೆಡ್’ ಅಂದರೆ ಅಲ್ಲಿ ಬಾತು ಕೋಳಿಗಳ ಸರಬರಾಜಾಗುವುದಿಲ್ಲ. ಸ್ಮಶಾನದ ಹೆಸರು ಹೊತ್ತಿದ್ದರೆ ಆ ಹೋಟೆಲಿನ ಸುತ್ತ ಮುತ್ತ ಸ್ಮಶಾನ ಇರಬೇಕೆಂತಲೂ ಇಲ್ಲ! ಈ ವಿಚಿತ್ರ ಸಾಂಪ್ರದಾಯಿಕ ಪಬ್ಬುಗಳ ಹೆಸರುಗಳಿಗೆ ವಿವರಣೆ ಇರುವುದೂ ಕಡಿಮೆಯೇ. 14 ನೇ ಶತಮಾನದಲ್ಲಿ ರಾಜರುಗಳು ಪಬ್ಬುಗಳಿಗೆ ಹೆಸರಿಡಿ ಎಂಬ ಆದೇಶ ಹೊರಡಿಸಿದ ಮೇಲೆ ಈ ಹೆಸರುಗಳು ಹುಟ್ಟಿರುವುದು. ಹಾಗಾಗಿ ಮೊದಲಿಗೆ ರಾಜ, ರಾಣಿಯರ ಹೆಸರುಗಳು ಬಂದವಂತೆ. ‘ದಿ ಕಿಂಗ್ಸ್ ಇನ್’, ‘ದಿ ಕ್ವೀನ್ಸ್ ಇನ್’, ‘ದಿ ಕ್ಯಾಸಲ್ ಗೇಟ್’ ಇತ್ಯಾದಿ ಹೆಸರುಗಳಿಗೆ ಒಂದಿಷ್ಟು ವಿವರಣೆ ನೀಡಬಹುದು. ಹಾಗೆಯೇ ಆಗಿನ ಕಾಲದಲ್ಲಿನ ಬ್ರಿಟಿಷರಿಗೆ ಬೇಟೆಯ ಹುಚ್ಚಿತ್ತು. ಬೇಟೆಯ ಶೋಕಿಯಿಂದ ನಾಯಿಗಳ, ಪ್ರಾಣಿಗಳ ಹೆಸರುಗಳು ಹುಟ್ಟಿದವಂತೆ.

ಆದರೆ ಎಲ್ಲ ಹೆಸರುಗಳಿಗೂ ವಿವರಣೆ ಸಿಗುವುದಿಲ್ಲ. ಅಶ್ಲೀಲವಾದ, ವಿಚಿತ್ರವಾದ, ಘನಘೋರ ಹೆಸರುಗಳನ್ನು ಓದುತ್ತಿದ್ದರೆ ‘ಇದೇನಪ್ಪಾ ಇಂಗ್ಲಿಷರು ಹೀಗೆಲ್ಲ ಹೆಸರಿಡುತ್ತಾರೆ’ ಅಂತ ಸೋಜಿಗವಾಗುತ್ತದೆ. ಏನಾದರಾಗಲಿ, ಯು.ಕೆ.ಯ ಉದ್ದಗಲಕ್ಕೆ ಪ್ರಯಾಣ ಮಾಡಿ, ವಾಸ ಮಾಡಿರುವ ನಮಗೆ ಈ ಹೆಸರುಗಳನ್ನು ಓದಿದಾಗೆಲ್ಲ ನಗು ಬರುವುದು ನಿಂತಿಲ್ಲ. ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗಿ ಅಲ್ಲಿನ ಬುಡಕಟ್ಟು ಜನರನ್ನು ಪ್ರಾಣಿಗಳೆಂದೂ, ಸಂಸ್ಕೃತಿಯಿಲ್ಲದವರೆಂದೂ ಜರಿದು ಅವರನ್ನು ಕೀಳಾಗಿ ನಡೆಸಿಕೊಂಡ ಬ್ರಿಟಿಷರಿಗೆ ಅವರದೇ ಸಂಪ್ರದಾಯಗಳ, ಅಭಿರುಚಿಗಳ ಬಗ್ಗೆ ಹೇಳುವವರು ತಾನೇ ಯಾರು? ಎನ್ನುವ ಪ್ರಶ್ನೆ ಮೂಡಿರದೆ ಇಲ್ಲ.

ಯುನೈಟೆಡ್ ಕಿಂಗ್ಡಮ್ ನ ಬಹಳ ಊರುಗಳಲ್ಲಿ ಒಂದೇ ಹೆಸರಿನ ರಸ್ತೆಗಳನ್ನು ಕಾಣುತ್ತೇವೆ. ಲಂಡನ್ ರಸ್ತೆ ಪ್ರತಿ ಊರಿನಲ್ಲಿಯೂ ಇರುತ್ತದೆ.(ನಮ್ಮ ಹಲವು ನಗರಗಳಲ್ಲಿ ಮಹಾತ್ಮ ಗಾಂಧಿ ರಸ್ತೆಯಿರುವಂತೆ ) ಆ ರಸ್ತೆ ಲಂಡನ್ನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುತ್ತದೆ. ಏರು ರಸ್ತೆಯನ್ನು ‘ಹೈ ರೋಡ್’ ಎಂತಲೂ ಇಳಿಜಾರಿನ ರಸ್ತೆಗಳನ್ನು ‘ಲೋ ರೋಡ್’ ಎಂತಲೂ ಕರೆಯುವುದು ಸೂಕ್ತವೇನೋ ಸರಿ. ಆದರೆ ಒಂದೇ ಊರಲ್ಲಿ ಏರು-ಇಳಿಜಾರಿನ ಹಲವು ರಸ್ತೆಗಳಿದ್ದರೂ ಕೆಲವಕ್ಕೆ ಮಾತ್ರ ಇಂತಹ ಹೆಸರಿಡುವ ಮಾನದಂಡ ಏನು ಅಂತ ಗೊತ್ತಿಲ್ಲ. ‘ಮ್ಯಾಗ್ನೋಲಿಯ’ ಎನ್ನುವ ರಸ್ತೆಯ ಹೆಸರನ್ನು ರಸ್ತೆ ನಕಾಶೆಯ ಮೇಲೆ ಒತ್ತಿದರೆ ಹಲವು ಊರುಗಳಲ್ಲಿ ಅದೇ ಹೆಸರಿನ ರಸ್ತೆ ಕಾಣಸಿಗುತ್ತದೆ. ಆಯಾ ಊರಿನ ಹೆಸರನ್ನು ಜೊತೆಗೆ ಜೋಡಿಸಿದ ನಂತರವೇ ಬೇಕಾದ ವಿಳಾಸ ದೊರಕುವುದು. ಜೊತೆಗೆ ‘ಮ್ಯಾಗ್ನೋಲಿಯ’ ( ಲ್ಯಾಟಿನ್ ಮೂಲದ ಹೂವಿನ ಹೆಸರು/ಫ್ರಾನ್ಸ್ ನಲ್ಲಿ ಇದು ಹೆಣ್ಣು ಮಕ್ಕಳ ಜನಪ್ರಿಯ ಹೆಸರು) ಯ ಪದಕ್ಕೆ ಸಂಭಂದಿಸಿದಂತೆ ಮ್ಯಾಗ್ನೋಲಿಯ ಅವೆನ್ಯೂ, ಮ್ಯಾಗ್ನೋಲಿಯ ರೋಡ್, ಮ್ಯಾಗ್ನೋಲಿಯ ಲೇನ್, ಮ್ಯಾಗ್ನೋಲಿಯ ಕಲ್ ಡಿ ಸ್ಯಾಕ್, ಮ್ಯಾಗ್ನೋಲಿಯ ತಿರುವು ಅಂತ ಅದೇ ಹೆಸರಿನ ಹಲವು ವಿವರಗಳು ಕಾಣಿಸುವಾಗೆಲ್ಲ ಇವರಿಗೆ ಬೇರೆ ಹೆಸರುಗಳು ಸಿಗಲಿಲ್ಲವೇ ಎಂಬ ಕುಚೋದ್ಯ ಅಣಕವಾಡುತ್ತದೆ.

ಅದಿರಲಿ, ಇಂಗ್ಲೆಂಡಿನ ನಗರಗಳೆಂದು ಬೋಸ್ಟನ್, ಬೋರ್ನ್, ಲಿಂಕನ್, ಪ್ಲಿಮತ್ ಹೆಸರುಗಳನ್ನು ಗೂಗಲ್ ನಕಾಶೆಯ ಮೇಲೆ ಒತ್ತಿದರೆ ಅದೇ ಹೆಸರಿನ ಊರುಗಳು ಅಮೆರಿಕಾದಲ್ಲಿಯೋ, ಆಷ್ಟ್ರೇಲಿಯಾದಲ್ಲೋ ತೆರೆದುಕೊಳ್ಳುತ್ತವೆ. ಯಾಕಪ್ಪಾ ಎಂದು ಯೋಚಿಸಿದ ನಂತರ ಇದರ ಮರ್ಮ ಗೊತ್ತಾಯಿತು. ಇಂಗ್ಲೆಂಡೆಂಬ ಈ ಪುಟ್ಟ ದ್ವೀಪದಿಂದ ನಾವೆಗಳನ್ನು ಕಟ್ಟಿ ಪ್ರಪಂಚವನ್ನೆಲ್ಲ ಅನ್ವೇಷಿಸಿದ ಈ ಸಾಹಸಿಗ ಬ್ರಿಟಿಷರು ತಾವು ಕಂಡುಹಿಡಿದ ಜಾಗಗಳಿಗೆಲ್ಲ ತಮ್ಮ ದೇಶದ, ಊರಿನ ಜಾಗಗಳ ಹೆಸರನ್ನೇ ಇಟ್ಟು ಕರೆದು ನಾಮಕರಣ ಮಾಡಿರುವುದೇ ಇದರ ಹಿಂದಿನ ಗುಟ್ಟು. ಇವರಲ್ಲಿ ದೇಶ ಪ್ರೇಮ ಅಪಾರವಾಗಿತ್ತು ಎನ್ನುವುದು ನಿಜ. ಹಾಗಂತ ನಿಸರ್ಗದ ಸುಂದರ ಸೃಷ್ಟಿಗಳಿಗೆ ಅಲ್ಲಿನ ಬುಡಕಟ್ಟು ಜನರು ಇಟ್ಟ ಹೆಸರನ್ನೇ ಅಳಿಸಿ ತಮ್ಮ ರಾಜ-ರಾಣಿಯರನ್ನು ಮೆರೆಸಲು ಸಂಪ್ರೀತಗೊಳಿಸಲು ಹೊಸ ನಾಮಕರಣಗಳನ್ನು ಮಾಡಿ ಅದನ್ನೇ ಪ್ರಚಲಿತ ಹೆಸರನ್ನಾಗಿ ಮಾಡಿದ ಪ್ರಚಂಡರು ಇವರು. ಹಾಗೆಯೇ, ತಾವೇ ಆ ಜಾಗಗಳನ್ನು ಕಂಡುಹಿಡಿದ ಜನರೆಂದು ದಾಖಲಾತಿಗಳಲ್ಲಿ ನಮೂದಿಸಿಕೊಂಡು ಮೆರೆದಂತವರು! ಆ ಜಾಗಗಳಲ್ಲಿ ಈಗಾಗಲೇ ಜನರು ವಾಸವಿದ್ದರೂ ಅವರನ್ನೆಲ್ಲ ನಿರ್ನಾಮ ಮಾಡಿ ತಾವೇ ಮುಂಚೂಣಿಯಲ್ಲಿರಬೇಕೆಂಬ ದುರಾಶೆ ಪಟ್ಟ ಜನರು ಕೂಡ.

ಉದಾಹರಣೆಗೆ ಆಫ್ರಿಕಾದ ಹೆಸರಾಂತ ಜಲಪಾತಕ್ಕೆ ಆಗಾಗಲೇ ‘ಮೋಸಿ-ಓ-ತುನ್ಯಾ’ /Mosi-oa-tunya.( “smokethat Thunders”) ಎಂಬ ಹೆಸರಿದ್ದರೂ ಅದಕ್ಕೆ ತಮ್ಮ ರಾಣಿ ವಿಕ್ಟೋರಿಯಾಳ ಹೆಸರನ್ನು ಇಟ್ಟು ಕರೆದು ಕೊನೆಗೆ ಜಗತ್ತಿಗೆಲ್ಲ ಅದೇ ಹೆಸರನ್ನು ರೂಢಿ ಮಾಡಿದ ಇವರ ಪ್ರಭಾವ ಎಷ್ಟಿರಬೇಕೆಂದು ಊಹಿಸಿ. ಅದೇ ರೀತಿ ಟಿಬೆಟನ್ನರು ‘ಚೋಮೋಲುಂಗ್ಮಾ’ ಎಂತಲೂ, ನೇಪಾಳಿಗಳು ‘ಸಾಗರ ಮಾತಾ ‘ ಎಂತಲೂ ಕರೆಯುತ್ತಿದ್ದ ಪ್ರಪಂಚದ ಅತಿ ಎತ್ತರದ ಪರ್ವತಕ್ಕೆ ಸರ್ವೇಯರ ಜನರಲ್ ಆಗಿದ್ದ ಕರ್ನಲ್ ಜಾರ್ಜ್ ಎವೆರೆಸ್ಟಿನ ಹೆಸರನ್ನು ಇಟ್ಟು ಸರ್ವಾಧಿಕಾರವನ್ನು ಮೆರೆದ ಜನರಿವರು. ಟಿಬೆಟಿನ್ನರು, ನೇಪಾಳಿಗಳು, ಚೀನೀಯರು ಎಷ್ಟೇ ಪ್ರತಿಭಟಿಸಿದರೂ 1857ರಲ್ಲಿ ರಾಯಲ್ ಜಿಯಾಗ್ರಫಿಕಲ್ ಸೊಸೈಟಿ ‘ ಮೌಂಟ್ಎವೆರೆಷ್ಟ್’ ಹೆಸರನ್ನೇ ಅಂಗೀಕರಿಸಿದ್ದು!

ಇವರನ್ನು ಒಂದು ಸಣ್ಣ ದ್ವೀಪದ ಜನರೆಂದು ಕರೆಯದೆ ಪ್ರಪಂಚದ ಒಂದು ಅತಿದೊಡ್ಡ ಶಕ್ತಿಯೆಂದು ಜಗತ್ತಿಗೆ ಇನ್ನಿಲ್ಲದಂತೆ ಕಲಿಸಿದ ಇಂಗ್ಲಿಷರ ಬಗ್ಗೆ ನನಗೆ ಅಚ್ಚರಿಯಾಗದ ದಿನಗಳೇ ಇಲ್ಲ. ಬರೀ ಇಂಗ್ಲೆಂಡ್ ಮತ್ತು ವೇಲ್ಸ್ ಗಳನ್ನು ಮಾತ್ರ ತಗೊಂಡರೆ ಇದರ ವಿಸ್ತಾರ ಬರೀ ಕರ್ನಾಟಕದಷ್ಟು. ಆದರೆ ಭಾರತದಂತ ಮೂವತ್ತು ಪಟ್ಟು ದೊಡ್ಡ ದೇಶಗಳನ್ನೂ ಮಣಿಸಿ ಆಳಿದ ಇವರು ಜಗತ್ತಿನಲ್ಲೆಲ್ಲ ನೆಲಸಿ ದಾಂಧಲೆ ನಡೆಸಿದರು. ‘ಬ್ರಿಟಾನಿಯ’, ‘ಬ್ರಿಟನ್’, ‘ಗ್ರೇಟ್ ಬ್ರಿಟನ್’, ‘ಯು ಕೆ. ‘ಇಂಗ್ಲೆಂಡ್’ ಎನ್ನುವ ನಾನಾ ಹೆಸರುಗಳ ಹಿಂದೆಯೂ ಹಲವು ರಾಜಕೀಯ ಕಾರಣಗಳಿವೆ.

ಈ ವಿಚಿತ್ರ ಸಾಂಪ್ರದಾಯಿಕ ಪಬ್ಬುಗಳ ಹೆಸರುಗಳಿಗೆ ವಿವರಣೆ ಇರುವುದೂ ಕಡಿಮೆಯೇ. 14 ನೇ ಶತಮಾನದಲ್ಲಿ ರಾಜರುಗಳು ಪಬ್ಬುಗಳಿಗೆ ಹೆಸರಿಡಿ ಎಂಬ ಆದೇಶ ಹೊರಡಿಸಿದ ಮೇಲೆ ಈ ಹೆಸರುಗಳು ಹುಟ್ಟಿರುವುದು. ಹಾಗಾಗಿ ಮೊದಲಿಗೆ ರಾಜ, ರಾಣಿಯರ ಹೆಸರುಗಳು ಬಂದವಂತೆ.

ಇನ್ನು ಪರದೇಶದ ಜನರ ಹೆಸರನ್ನು ಆಂಗ್ಲ ಭಾಷೆಯಲ್ಲೇ ಬರೆದು ತೋರಿಸಿದರೂ ಉಚ್ಚರಿಸಲು ಹೆಣಗುವ ಇವರು ಪ್ರಪಂಚದ ನಾನಾ ಕಡೆಯಿಂದ ಯು.ಕೆ.ಗೆ ಬರುವ ಜನರ ಹೆಸರುಗಳನ್ನು ತಮಗೆ ಬರುವ ಉಚ್ಛಾರಣೆಗೆ ಒಗ್ಗಿಸಿಕೊಂಡು ಬಿಡುತ್ತಾರೆ. ಸಿದ್ದಾರ್ಥನೆಂಬ ಹೆಸರು ‘ಸಿಡ್’ ಆಗುತ್ತದೆ. ಆಶ್ರಾಫ್ ಅಂತಿದ್ದರೆ ‘ಆಷ್’ ಆಗುತ್ತದೆ. ‘ಸೂರ್ಯ’ ಎನ್ನುವ ಹೆಸರು ‘ಸಿರಿಯಾ’ ಅಂತ ಕೆಲವರ ಬಾಯಲ್ಲಾದರೆ ‘ಸುರಯ್ಯಾ’ ಎಂದು ಇತರರು ನಾಮಕರಣ ಮಾಡಿಬಿಡುತ್ತಾರೆ. ‘ರಜನಿ’ ಅಂತಿದ್ದರೆ ಆಕೆ ‘ಜೀನೀ’ ಆಗಿಬಿಡುತ್ತಾಳೆ. ನನಗೆ ಪರಿಚಿತರಾದ ‘ದೇಸಾಯಿ’ ಎನ್ನುವ ವೈದ್ಯರು ‘ದಿಸ್ ಐ’ ಆದ ಉದಾಹರಣೆಗಳೂ ಇವೆ! ಪುಣ್ಯಕ್ಕೆ ಅವರು ಕಣ್ಣಿನ ವೈದ್ಯರೇ ಆದದ್ದರಿಂದ ಪರವಾಗಿಲ್ಲ ಇಲ್ಲದಿದ್ದಲ್ಲಿ ಅವರು ಒಂದೇ ಕಣ್ಣಿನಲ್ಲಿ ಅತ್ತಿದ್ದರೂ ಬ್ರಿಟಿಷರ ನಾಲಿಗೆಗಳು ತಿರುಗುತ್ತಿರಲಿಲ್ಲ!

ಹಾಗಂತ ಬ್ರಿಟಿಷರ ಹೆಸರುಗಳೇನು ಸುಂದರವಾದವೇನಲ್ಲ. ಮಿಸ್ಟರ್ ಶಾರ್ಟ್, ಮಿಸ್ಟರ್ ಲಾಂಗ್, ಮಿಸ್ ಡ್ರಿಂಕ್ ವಾಟರ್, ಮಿಸೆಸ್ ಪಿಕಲ್ಸ್, ಮಿಸ್ಟರ್ ಬಾಲ್ಸ್, ಮಿಸ್ಟರ್ ಡಿಕ್ಸ್,ಮಿಸೆಸ್ ಬಟನ್, ಮಿಸೆಸ್ ಲೇನ್, ಮಿಸ್ಟರ್ ಬ್ರೌನ್, ಮಿಸ್ ವೈಟ್, ಮಿಸ್ ಬ್ಲಾಕ್, ಮಿಸ್ಟರ್ ಶಫಲ್ ಬಾಟಮ್, ಮಿಸ್ಟರಿ ಪಿಗ್ಸ್, ಮಿಸ್ ಹಿಸ್ ಕಾಕ್, ಮಿಸ್ ಜೆಲ್ಲಿ, ಮಿಸ್ಟರ್ ಬಾಟಮ್ಸ್, ಮಿಸ್ಟರ್ ಫಿಯರ್… ಅಂತೆಲ್ಲ ಇವರ ಹೆಸರುಗಳನ್ನು ಕರೆವಾಗ ಹೀಗೆಲ್ಲ ಹೆಸರಿರುವುದು ಉಂಟೇ ಅನ್ನುವ ಕೌತುಕದೊಂದಿಗೆ ನಮ್ಮ ಉತ್ತರ ಕರ್ನಾಟಕದಲ್ಲಿ ‘ಉಳ್ಳಾಗಡ್ಡಿ’ಯವರೂ, ‘ಬೆಲ್ಲದ’ವರೂ, ‘ಮಿರ್ಚಿ’ಯವರೂ, ‘ಬದನೀ’ಗಳು , ‘ವಸ್ತ್ರ’ದವರೂ, ಇಲ್ಲವೇ ಅನ್ನುವ ನೆನಪುಗಳು ಮೂಡಿವೆ. ಚಿನಿವಾರದ ಕೆಲವರ ಕೌಟುಂಬಿಕ ಹೆಸರುಗಳು ಅವರ ವೃತ್ತಿಯ ಆಧಾರದ ಮೇಲೆ ಹೇಗೆ ದೊರಕುತ್ತವೋ ಹಾಗೆಯೇ ಇಲ್ಲಿನ ‘ಸ್ಮಿತ್’ ಗಳ ಹೆಸರುಗಳು ಅವರ ಪೂರ್ವಜರ ವೃತ್ತಿಯನ್ನು ಆಧರಿಸಿ ಬಂದದ್ದು. ವೈಕಿಂಗ್ ಗಳ ಕಾಲದ, ರೋಮನ್ನರ, ಗ್ರೀಕರ, ಫ್ರೆಂಚರ ಮೂಲದ ಹೆಸರುಗಳು ಈ ಸಮುದಾಯಗಳು ಯೂರೋಪಿನ ತುಂಬೆಲ್ಲ ವಲಸೆ ಮಾಡಿ, ಅಲ್ಲಲ್ಲಿ ನೆಲೆ ನಿಂತ ಸಂಸಾರಗಳ ಸಾಮಾಜಿಕ ಚಿತ್ರಣವನ್ನು ನೀಡುತ್ತವೆ.
ಬ್ರಿಟನ್ನಿನಲ್ಲಿ ಜನರ ಹೆಸರನ್ನು ಕರೆವಾಗ ಅವರ ಎರಡನೇ ಹೆಸರನ್ನು ಹಿಡಿದೇ ಮಾತನಾಡಿಸುವುದು. ಹಾಗಾಗಿ ‘ಲಾಂಗ್’, ‘ಶಾರ್ಪ್’, ‘ಶಾರ್ಟ್’, ‘ಮೋರ್’,’ ಬಾಟಮ್ಸ್’… ಅಂತೆಲ್ಲ ಸ್ಪಷ್ಟವಾಗಿ ನಾಲಿಗೆಗಳು ಕೂಗುವಾಗ ದ್ವನಿಯಲ್ಲಿ ಸಂಕೋಚ ತಾಳದಿದ್ದರೂ ನಮ್ಮ ಮಿದುಳುಗಳು ನಗುಮುಖ ಧರಿಸುವುದು ಸುಳ್ಳಲ್ಲ.

ನಮ್ಮ ಭಾರತೀಯ ಸಮಾಜದ ಬಗೆಗಿನ ಅರಿವಿದ್ದರೆ ಅದರ ಹೋಲಿಕೆಗಳಿಂದ ಬ್ರಿಟಿಷ್ ಸಮಾಜ ಕೂಡ ಅಷ್ಟೇನು ಭಿನ್ನವಲ್ಲ ಅಂತ ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಆದರೆ ಸಂಸ್ಕೃತಿಗಳು, ಸಾಮಾಜಿಕ ನೀತಿಗಳು, ಸರಕಾರ ಬಹಳ ಭಿನ್ನವೆಂಬುದೂ ಸುಳ್ಳಲ್ಲ.

ವಿದೇಶಗಳಲ್ಲಿ ದಶಕಗಳ ಕಾಲ ನೆಲೆಸಿ ಆ ದೇಶಗಳ ಬಗ್ಗೆ ಎಷ್ಟೇ ಅರಿತುಕೊಂಡರೂ ಆ ದೇಶದಲ್ಲಿ ಸಂಚರಿಸುವಾಗೆಲ್ಲ ನಮ್ಮ ಪ್ರವಾಸೀ ದೃಷ್ಟಿಕೋನ ಬೇರೆಯಾಗುವುದಿಲ್ಲ. ಇದು ನಮ್ಮ ನಾಡೆಂದು ಅನ್ನಿಸುವುದೂ ಇಲ್ಲ. “ನಮಗೆ ವ್ಯತ್ಯಾಸ ಅನ್ನಿಸುವುದೇ ಇಲ್ಲ” ಎನ್ನುವ, ಇಲ್ಲಿಯೇ ಹುಟ್ಟಿ ಬೆಳೆದಂತೆ ಆಡುವ ಬಹುತೇಕ ಭಾರತೀಯರ ಮನಸ್ಥಿತಿಯ ಬಗ್ಗೆ ನನಗೆ ತಿಳಿಯದಿದ್ದರೂ ವೈಯಕ್ತಿಕವಾಗಿ ನನಗೆ ಹೀಗೆ ಅನ್ನಿಸಿರುವುದು ನಿಜ. ನನ್ನಂತವರು ಇನ್ನೂ ಕೆಲವರು ಇರಬಹುದು. ಆದ ಕಾರಣ ನಾವು ನೋಡುವ ನೋಟದಲ್ಲಿ ಪರದೇಶಿಗಳಾದ ನಮಗೆ ಏನು ಕಾಣುತ್ತದೋ ಅದು ಇಲ್ಲೇ ಹುಟ್ಟಿ ಬೆಳೆದ ಜನರ ಕಣ್ಣಿಗೆ ಗೋಚರಿಸುವುದೂ ಇಲ್ಲ. ಯು.ಕೆ. ಎನ್ನುವುದು ಭಾರತಕ್ಕೆ ಹೋಲಿಸಿದರೆ ‘ಸಣ್ಣ ದ್ವೀಪ’ ಎಂದೇನಾದರೂ ಅಂದರೆ ಜನರು ನಮ್ಮನ್ನೇ ಮಿಕಿ ಮಿಕಿ ನೋಡುತ್ತಾರೆ. ಅವರಿಗೆ ತಮ್ಮ ದೇಶ ಹಾಗೆ ಕಾಣದೆ ಭಾರೀ ದೊಡ್ಡ ಭೌಗೋಳಿಕ ತುಣುಕಂತೆ ಕಾಣುವುದು ತುಂಬಾ ಸಹಜ!

ಅಂತೆಯೇ ನಮ್ಮ ನೆಲಕ್ಕೆ ನಾವು ಕಾಲಿಟ್ಟ ಕೂಡಲೆ ನಮ್ಮ ರಸ್ತೆಗಳ ಮೇಲಿನ ಭಾರೀ ಟ್ರಾಫಿಕ್, ಹಾರನ್ನುಗಳು, ಧೂಳು, ರಸ್ತೆಯ ಪಕ್ಕಪಕ್ಕದ ಕಸದ ರಾಶಿ, ರಸ್ತೆಯಲ್ಲಿ ತಿರುಗುವ ಹಸು-ಕರು-ನಾಯಿಗಳು ನಮ್ಮಲ್ಲಿ ಯಾವ ವಿಚಿತ್ರ ಸಂವೇದನೆಗಳನ್ನೂ ಹುಟ್ಟಿಸುವುದಿಲ್ಲ. ಆದರೆ ಒಬ್ಬ ವಿದೇಶೀಯ ಭಾರತಕ್ಕೆ ಬಂದನೆಂದರೆ ಅವರಿಗೆ ಇದೇ ದೃಶ್ಯಗಳು ಅದ್ಭುತ, ಅಚ್ಚರಿಗಳಂತೆ ಕಂಡು , ತೆರೆದುಕೊಂಡ ಅವರ ಕಣ್ಣು ಬಾಯಿಗಳು ಮುಚ್ಚುವುದೇ ಇಲ್ಲ. ಕ್ಯಾಮರಾಗಳಿಗಂತೂ ಭಾರೀ ಕೆಲಸ ಸಿಕ್ಕುಬಿಡುತ್ತದೆ. ಅಷ್ಟೇ ಏಕೆ, ವಿದೇಶಗಳಲ್ಲಿ ಹುಟ್ಟಿ, ಬೆಳೆಯುತ್ತಿರುವ ನಮ್ಮ ಮಕ್ಕಳಿಗೇ ಭಾರತದ ಈ ದೃಶ್ಯಗಳು ಭಾರೀ ಅಚ್ಚರಿಯನ್ನು ತರುತ್ತವೆ. ಕಳೆದ ಭಾರಿ ಭಾರತಕ್ಕೆ ಬಂದಾಗ ನನ್ನ ಆರು ವರ್ಷದ ಮಗಳು ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಉಗುಳಿದ್ದನ್ನು ನೋಡಿ, ತತ್ ಕ್ಷಣ “ಅಮ್ಮ ಆ ಮನುಷ್ಯ ರಸ್ತೆ ಮೇಲೆ ಉಗಿದ” ಎಂದು ನನ್ನ ಕೈಯನ್ನು ಎಳೆದೆಳೆದು ಅತ್ತ ಕಡೆ ತೋರಿಸಿದಳು. “ಹೌದು ಕಂದ, ಇಲ್ಲಿ ಧೂಳು ಜಾಸ್ತಿ ಎಲ್ಲೋ ಗಂಟಲಿಗೆ ಹೋಗಿರಬೇಕೆಂದು” ಹೇಳಿ ಸಮಾಧಾನ ಮಾಡಬೇಕಾಯಿತು! ದೇಶ ಯಾವುದೇ ಆಗಿರಲಿ ವಿದೇಶಗಳು ತರುವ ಮೋಜು ಮಸ್ತಿಗಳಿಗೆ ಲೆಕ್ಕವೇ ಇರುವುದಿಲ್ಲ!

ಅಂತೂ, ಇಂತೂ ಇಂಗ್ಲೆಂಡಿನ ಪಶ್ಚಿಮ ದಕ್ಷಿಣ ತುಟ್ಟ ತುದಿಯಲ್ಲಿರುವ ‘ಪ್ಲಿಮತ್’ ನ್ನು ಬಿಟ್ಟು ನಾವು ಯು.ಕೆ ಯ ಉತ್ತರ ತುದಿಯಲ್ಲಿರುವ ‘ಸ್ಕಾಟ್ಲ್ಯಾಂಡಿ’ನಲ್ಲಿ ನಮ್ಮ ಮುಂದಿನ ಅಲೆಮಾರಿ ಜೀವನಕ್ಕೆ ತಯಾರಾಗಿ ಹೊರಟಿದ್ದೆವು.

(ಮುಂದುವರೆಯುವುದು)