ಇದಾಗಿ ವಾರದೊಳಗೆ ನಡುರಾತ್ರಿಯಲ್ಲಿ ಪಕ್ಕದ ಮನೆಯಿಂದ ಅರಚಿದ ಶಬ್ದಕ್ಕೆ ನೀಲಿಯ ಮನೆಯವರೆಲ್ಲರೂ ಎಚ್ಚೆತ್ತರು. ಅಕ್ರಮವಾಗಿ ಎಳೆದ ಕರೆಂಟು ವೈಯರಿನ ಹೊರಗಿನ ಕವಚವನ್ನು ಇಲಿಯೊಂದು ಕತ್ತರಿಸಿಬಿಟ್ಟಿದ್ದರಿಂದ ನಡುರಾತ್ರಿಯಲ್ಲಿ ಸ್ವಿಚ್ ಹಾಕಲು ಕೈಹಾಕಿದ ನಾಗಿ ಶಾಕ್ ಹೊಡೆದು ಮಾರುದೂರ ಹೋಗಿ ಬಿದ್ದಿದ್ದಳು. ಅದರ ಶಾಕಿಗೆ ಊರಿಡೀ ಕೇಳುವಂತೆ ಕಿರುಚಿದ್ದಳಲ್ಲದೇ ಕರೆಂಟು ವೈಯರನ್ನು ಬಿಚ್ಚದೇ ಮನೆಯೊಳಗೆ ಕಾಲಿಡುವುದಿಲ್ಲವೆಂದು ಅಂಗಳದಲ್ಲೇ ಕುಳಿತುಬಿಟ್ಟಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿಮೂರನೆಯ ಕಂತು ನಿಮ್ಮ ಓದಿಗೆ

“ಏನಾದ್ರೂ ಮಾಡ್ಕೊಳ್ಳಿ, ಆದ್ರೆ ನಮ್ಮ ಮನೆಗೆ ಮಾತ್ರ ಕರೆಂಟ್ ಬೇಡ” ಅಂತ ನೀಲಿಯ ಅಮ್ಮ ಹಠ ಹಿಡಿದಾಗ ಹೊಳೆಸಾಲಿಗೆ ಕರೆಂಟು ತರಲೇಬೇಕೆಂದು ಹೋರಾಡುತ್ತಿದ್ದ ಹುಡುಗರಿಗೆ ಶಾಕ್ ಹೊಡೆದಂತಾಯಿತು. “ಬ್ಯಾಡದಿದ್ರೆ ಬಿಡಿ. ನಮ್ಮ ನಮ್ಮ ಮನೆಗಳಿಗೆ ತಂದುಕೊಳ್ತೀವಿ.” ಎಂದು ಮೊದಲು ರೋಪ್ ಹಾಕಿದರಾದರೂ ಎಂದಿಗೂ, ಯಾವುದಕ್ಕೂ ಹಠ ಮಾಡದ ಹೆಣ್ಣು ಮಗಳೊಬ್ಬಳು ಹೀಗ್ಯಾಕೆ ಹೇಳುತ್ತಿದ್ದಾಳೆ ಎಂಬ ಯೋಚನೆಯಾಗಿ ಅವಳನ್ನು ಮೆತ್ತಗೆ ವಿಚಾರಿಸಿದರು. “ನೋಡ್ರೋ, ನಮ್ಮ ಈ ಮನೇನಾ? ನಮ್ ಹಿಂದಿನ ನಾಲ್ಕನೇ ತಲೆಮಾರಿನವರು ಕಟ್ಟಿದ್ದಿರಬೇಕು. ಗೋಡೆ ತುಂಬಾ ಎಲ್ಲಿ ನೋಡಿದ್ರೂ ಮಣ್ಣು ಕಿತ್ತು ಹೋದ ಕಲೆಗಳ ಗುರುತು. ಮನೆಯೊಳಗೆ ನೋಡಿದ್ರಾ? ಹೊಗೆಯೊಲೆ ಉರಿಸುತ್ತಾ ನೂರಿನ್ನೂರು ವರ್ಷಗಳಾಗಿರಬೇಕು. ಮನೆತುಂಬಾ ಕಪ್ಪು ಮಸಿ ಮೆತ್ತಿದೆ. ಈಗ ಏನೋ ದೀಪ ಇಡ್ತೀವಿ. ಅವೆಲ್ಲಾ ಅಷ್ಟಾಗಿ ಕಾಣಲ್ಲ. ನೀವು ಝಗ್ ಅನ್ನೋ ಬೆಳಕು ಹರಿಸಿದ್ರೆ ಅದರ ಹೊಳಪಿನಲ್ಲಿ ಇವೆಲ್ಲ ಹೇಗೆ ಕಾಣತ್ತೆ ಅನ್ನೋ ಕಲ್ಪನೆಯಾದ್ರೂ ನಿಮಗಿದೆಯಾ? ಮೊದಲಿಗೆ ನಮ್ಮನೆಯ ಗೋಡೆ, ನೆಲ ಎಲ್ಲಾ ಚಂದ ಮಾಡಿ. ನಾಗಂದಿಗೆ, ಮಾಡಿಗೆ ಮುಚ್ಚಿಕೊಂಡಿರೋ ಮಸಿನಾ ಒರೆಸಿ ತೆಗೀರಿ. ಮತ್ತೆ ಆ ನಿಮ್ಮ ಝಗ್ ಅನ್ನೋ ದೀಪ ಹಚ್ಚಿ. ಇಲ್ಲಾಂದ್ರೆ ನಮಗೆ ಲಾಂದ್ರದ ಬೆಳಕೇ ಸಾಕು, ತಿಳ್ಕಳಿ” ನೀಲಿಯ ಅಮ್ಮನ ಮಾತು ಕೇಳಿದ ಯುವಕರು ಯಲಾ, ಯಲಾ… ಶಿವನೇ, ಹೀಂಗೂ ಯೋಚ್ನೆ ಮಾಡೋರು ಇದ್ದಾರೆಯೆ? ಎಂದು ಅಚ್ಚರಿಗೊಂಡರು. “ಮನೆ ಒಳಗೆ ತೂತಿದೆ ಅಂತಾ ಸುಧಾರಣೆ ಬೇಡ ಅನ್ನೋಕಾಗ್ತದೆಯೆ? ಕರೆಂಟ್ ತಗೋಳ್ಳೋಕೆ ಅಂತ ಹೊಸಾ ಮನೆ ಕಟ್ಟೂಕಾಗ್ತದೆಯಾ? ನಿಮಗೆಲ್ಲೋ ಮಳ್ಳು ಹೇಳೂರು. ಸುಮ್ನೆ ಕರೆಂಟ್ ತರೂಕೆ ಹಣ ಕೊಡಿ” ಎಂದು ಒತ್ತಾಯಿಸತೊಡಗಿದರು. ಹೆಂಗಸರ ಮಾತೆಂದರೆ ಹೂವಿನ ನಡುವಿರುವ ಚಿಗುರೆಲೆಯೆಂಬಂತೆ ಅಸಡ್ಡೆ ಮಾಡುವ ಊರಿನ ಹುಡುಗರ ಸ್ವಭಾವದ ಪರಿಚಯವಿದ್ದ ನೀಲಿಯ ಅಮ್ಮ ಇನ್ನೊಮ್ಮೆ ಕಾಲು ಗಟ್ಟಿಸಿ ಹೇಳಿದರು, “ತಮ್ಮಂದ್ರಾ, ಇದು ಬರಿಯ ದುಡ್ಡಿನ ಪ್ರಶ್ನೆಯಲ್ಲ ತಿಳ್ಕಳಿ. ನೀವು ದುಡ್ಡು ತಗೊಂಡು ಹೋಗಿ ಲಂಚಾ ಕೊಟ್ಟು ಕರೆಂಟ್ ತಂದು ಊರೊಳಗೆ ಹೊಕ್ಕಿಸಿ. ಬೇಕಾದ್ರೆ ತೋಟದ ಬಾವಿಗೆ ಮಿಶೀನ್ ಹಾಕಲಿಕ್ಕೂ ಉಪಯೋಗಿಸಿ. ಆದ್ರೆ ಮನೆವಳಗೆ ತರೋವಾಗ ಜಾಗ್ರತೆ ಮಾಡಿ. ಊರಿನ ಮನೆತುಂಬಾ ಇಲಿ, ಹೆಗ್ಗಣಗಳ ರಾಶೀನೆ ಅವೆ. ಸೋಗೆ, ಹುಲ್ಲಿನ ಮಾಡಿನಿಂದ ನೀರು ಸೋರದೇ ಇರೋ ಮನೆ ಇಡೀ ಊರು ಹುಡುಕಿದ್ರೂ ಇಲ್ಲ. ಆ ಕರೆಂಟೇನೂ ಸುಲಭದ್ದೂ ಅಂದ್ಕಂಡ್ರಾ? ಒದ್ದೆ ಇದ್ದ ಜಾಗದಲ್ಲೆಲ್ಲ ಸರ್ ಅಂತ ಹರೀತದೆ. ಇಲಿ, ಹೆಗ್ಣ ವೈಯರ್ ಕಡಿದ್ರೆ ನಮ್ಮ ಮೇಲೇ ಹರೀತದೆ. ಅದ್ಕೆ ಹೇಳಿದ್ದು. ಮಕ್ಳೂ, ಮರಿ ಇರೋ ಊರಿದು. ಯಾರ ಏನಾರ ಮಾಡ್ಕಳಿ. ನಮ್ಮನೆ ಒಳ್ಗೆ ನಿಮ್ ಕರೆಂಟಿಗೆ ಪ್ರವೇಶ ಇಲ್ಲ.” ಎಂದು ಅಂಗಳ ಗುಡಿಸುತ್ತಿದ್ದ ಪೊರಕೆಯನ್ನು ಮೇಲೆತ್ತಿ ಸತ್ಯಾಗ್ರಹ ಸಾರಿಯೇಬಿಟ್ಟಳು.

ಆಗತಾನೇ ತನ್ನ ನಾಲ್ಕನೇ ತರಗತಿಯ ಪುಸ್ತಕದಲ್ಲಿ ಗಾಂಧೀಜಿಯವರ ಬಗ್ಗೆ ಓದಿದ್ದ ನೀಲಿಗೆ ಅಮ್ಮನ ಪೊರಕೆ ಗಾಂಧಿತಾತನ ಕೈಯ್ಯಲ್ಲಿರುವ ಕೋಲಿನಂತೆ ಭಾಸವಾಗಿ, ಬಹುಶಃ ಸತ್ಯಾಗ್ರಹವೆಂದರೆ ಹೀಗೆಯೇ ಇರಬೇಕೇನೋ ಎನಿಸತೊಡಗಿತು. ಹೆಂಚಿನ ಮಣ್ಣಿನ ದುಡ್ಡು ಊರಿನೊಳಗೆಲ್ಲ ಓಡಾಡುವ ಹೊತ್ತಿಗೆ ಸಂಜೆಯಾಗುತ್ತಿದ್ದಂತೆ ತಮ್ಮ ಊರು ಯಾಕೋ ಮಂಕು ಎರಚಿಕೊಂಡಂತೆ ಎಲ್ಲ ಹೈಕಳಿಗೆ ಎನಿಸತೊಡಗಿತು. ಚಿಮಣಿ ಎಣ್ಣೆಯಲ್ಲಿ ಕೆಲಸ ಮಾಡುವ ಲೈಟ್ ಎಂಬ ದೀಪವನ್ನು ಬೆಳಗಿದರಾದರೂ ಪದೇ, ಪದೇ ಹೋಗುವ ಅದರ ಮ್ಯಾಂಟಲ್ಲನ್ನು ಸಂಭಾಳಿಸುವಷ್ಟು ತಾಳ್ಮೆ ಅವರಲ್ಲಿರಲಿಲ್ಲ. ಜತೆಯಲ್ಲಿ ಗದ್ದೆ ಬೇಸಾಯ ನಿಂತಿದ್ದರಿಂದ ಹೊಳೆಗೆ ಕಟ್ಟು ಹಾಕುವುದನ್ನು ಮರೆತೇಬಿಟ್ಟಿದ್ದರು. ಇದ್ದಬಿದ್ದ ಗದ್ದೆಯಂಚಿನಲ್ಲೆಲ್ಲ ಅಡಿಕೆ ಸಸಿಯನ್ನು ಊರತೊಡಗಿದರು. ಬೇಸಿಗೆ ಕಾಲಿಟ್ಟೊಡನೆ ಬಾವಿಯ ನೀರು ತಳಹಿಡಿದು ನೆಟ್ಟ ಗಿಡಗಳೆಲ್ಲ ಒಣಗತೊಡಗಿದವು. ಹೊಳೆಗೆ ಕಟ್ಟು ಕಟ್ಟಿದರೆ ಬಾವಿಯಲ್ಲಿ ನೀರು ತುಂಬುವುದು ಎಂಬ ಹಿರಿಯರ ಮಾತುಗಳು ಅವರಿಗೆ ಜೋಕುಗಳಂತೆ ಕಾಣತೊಡಗಿದವು. ಅದರ ಬದಲು ಹೊಳೆಯಂಚಿನಲ್ಲಿ ಡಿಸೇಲ್ ಮಶೀನ್ ಇಟ್ಟು ನೀರನ್ನು ಎತ್ತುವ ಕ್ರಿಯೆಯೇ ಆಕರ್ಷಕವಾಗಿ ಕಂಡಿತು. ಸಾಧ್ಯವಿರುವವರೆಲ್ಲ ಮಶೀನ್ ಖರೀದಿಸಿ, ಹೊಳೆಯ ದಡದಲ್ಲಿಟ್ಟು, ಮಶೀನಿನ ಸ್ಟಾರ್ಟರಿಗೆ ಕಟ್ಟಿದ ಹಗ್ಗವನ್ನು ಜಗ್ ಎಂದು ಎಳೆದು ಚಾಲೂ ಮಾಡಿ ನೀರಿನ ಹೊಳೆಯನ್ನು ತಮ್ಮ ಜಮೀನಿಗೆ ಹರಿಸಲು ಪ್ರಾರಂಭಿಸಿದರು. ಆದರೆ ಡಿಸೇಲ್ ಎಂಬುದು ಮೀಟರ್ ಸಾರಾಯಿಗಿಂತಲೂ ಭಾರವೆಂಬುದು ಒಂದು ಬೇಸಿಗೆ ಕಳೆಯುವಷ್ಟರಲ್ಲಿ ಅವರ ಅನುಭವಕ್ಕೆ ಬರತೊಡಗಿತು. ಈಗಿನ್ನೂ ಫಲವನ್ನೇ ಕೊಡದಿರುವ ಸಸಿಗಳಿಗೆ ಇಷ್ಟೆಲ್ಲ ಹಣ ಖರ್ಚುಮಾಡಿ ನೀರು ಹಾಯಿಸುವುದರಲ್ಲಿ ಅವರಿಗೆ ಯಾವ ಅರ್ಥವೂ ಕಾಣಿಸಲಿಲ್ಲ. ಜತೆಯಲ್ಲಿ ವಾರದ ಆರು ದಿನಗಳೂ ಬೆಳಗಿನಿಂದ ಸಂಜೆಯವರೆಗೆ ಹೆಂಚಿನ ಮಣ್ಣಿನ ಸಾಗಾಟದಲ್ಲಿ ವ್ಯಸ್ತರಾಗಿರುವ ಅವರಿಗೆ ಭಾನುವಾರದ ರಜೆಯಲ್ಲಿ ಈ ಮಶೀನು ಹೊತ್ತು ತಿರುಗುವ ಕೆಲಸ ತೀರ ದುಬಾರಿಯದಾಗಿ ಕಾಣಿಸತೊಡಗಿತು.

ಹೀಗೆ ಮಾತನಾಡುತ್ತ ಇವೆಲ್ಲವನ್ನೂ ಹೆಂಚಿನ ಮಣ್ಣಿನ ಕಂತ್ರಾಟುದಾರರಲ್ಲಿ ಹೇಳಿದಾಗ ಅವರು ಊರಿಗೆ ಕರೆಂಟು ತರುವ ವಿಷಯವನ್ನು ಪ್ರಸ್ತಾಪಿಸಿದರು. ಇನ್ನೇನು ಎರಡು ವರ್ಷಗಳಲ್ಲಿ ಮಣ್ಣಿನ ಕಂತ್ರಾಟು ಮುಗಿದು, ಗದ್ದೆಗಳನ್ನೆಲ್ಲ ಕೊಳಗಳನ್ನಾಗಿಸಿ, ಕಳ್ಳರಂತೆ ಕಾಲ್ತೆಗೆಯುವ ತಾವು ಊರಿನವರ ಉರಿಶಾಪದಿಂದ ತಪ್ಪಿಸಕೊಳ್ಳಬೇಕೆಂದರೆ ಕರೆಂಟು ಕೊಡಿಸುವ ಘನಂದಾರಿ ಕೆಲಸವನ್ನಾದರೂ ಮಾಡಬೇಕೆಂದು ಅವರಿಗೆ ಅನಿಸತೊಡಗಿತು. ಹಾಗಾಗಿ ತಾಲೂಕು ಕೇಂದ್ರದಲ್ಲಿರುವ ಕರೆಂಟು ಪಂಡಿತರಲ್ಲಿ ಮಾತಾಡಿ, ಒಂದಿಷ್ಟು ಕೈಬಿಸಿ ಮಾಡುವುದರ ಮೂಲಕ ಹೊಳೆಸಾಲಿಗೆ ಕರೆಂಟು ತರುವ ಪ್ರಯತ್ನದಲ್ಲಿ ತೊಡಗಿದರು. ಕರೆಂಟು ಎಂಬುದೊಂದು ಬಂದರೆ ಪ್ರತಿಮನೆಯಲ್ಲಿ ಕೃಷಿ ಜಮೀನಿಗೆ ನೀರು ಹಾಯಿಸುವ ಸ್ಕೀಮಿನಲ್ಲಿ ಅರ್ಜಿ ಹಾಕಿ ರಿಯಾಯಿತಿಯಲ್ಲಿ ಮಶೀನನ್ನು ಅಳವಡಿಸಬಹುದು ಮತ್ತು ಸರಕಾರದ ನೀತಿಯಂತೆ ಕೃಷಿ ಪಂಪ್ ಸೆಟ್ಟಿಗೆ ಕರೆಂಟು ಬಿಲ್ಲು ಮಾಫಿಯಿದೆಯೆಂದು ಊರಿನ ಹುಡುಗರ ತಲೆಯಲ್ಲಿ ಕನಸು ಬಿತ್ತಿದರು. ಏನಾದರಾಗಲಿ, ಈ ನೀರು ಮಶೀನಿಗೆ ಡೀಸೆಲ್ ತರುವ ತೊಂದರೆಯೊಂದು ತಪ್ಪಿದರೆ ಸಾಕೆಂದು ಹುಡುಗರೆಲ್ಲ ಸೇರಿ ಭಾನುವಾರದಂದು ಹಣವಸೂಲಿಗೆ ಮನೆಮನೆಗೆ ಹೊರಟಿದ್ದರು. ಅದರ ನಡುವೆ ಈ ನೀಲಿಯ ಅಮ್ಮ ಕರೆಂಟು ಎಷ್ಟು ಡೇಂಜರ‍್ರು ಎಂಬುದನ್ನು ತಿಳಿಸಿ ಅವರ ಉತ್ಸಾಹಕ್ಕೆ ಕೊಂಚ ಭಂಗ ತಂದಿದ್ದರು.

ಮೊದಲಿಗೆ ಸ್ವಲ್ಪ ಮಂಕಾದ ಹುಡುಗರು ಮತ್ತೆ ಏನಾದರಾಗಲಿ, ಮೊದಲು ಕರೆಂಟೊಂದು ಊರಿಗೆ ಬರಲಿ ಎಂದು ತಮ್ಮ ದೇಣಿಗೆ ವಸೂಲಿಯನ್ನು ಮುಂದುವರೆಸಿದರು. ಊರಿನ ಹಿರಿಯರು ನೀಡಿದ ಹಳೆಯ ಕಮಟು ನೋಟುಗಳನ್ನು ಹೇಗೆ ಲೆಕ್ಕ ಹಾಕಿದರೂ ಸಾವಿರದ ಗಡಿ ತಲುಪದಾದಾಗ ತಮ್ಮ ವಾರದ ಸಂಬಳದ ಗರಿಗರಿ ನೋಟುಗಳನ್ನೇ ಸಾಲಲ್ಲಿ ಜೋಡಿಸಿ ಕಂತ್ರಾಟುದಾರರಿಗೆ ನೀಡಿ ಪಂಡಿತರ ಮೂಲಕ ವಿದ್ಯುತ್ ನಿಗಮದ ಅಧಿಕಾರಿಗಳ ಕೈಬಿಸಿ ಮಾಡಿದರು. ಅಂತೂ ಊರಿಗೆ ಕರೆಂಟು ನೀಡಬಹುದೆಂಬ ಆದೇಶ ಜಾರಿಯಾದ ಖುಶಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳು ಜಾಗ ತಪಾಸಣೆಗೆ ಬಂದಾಗ ಹೆಜ್ಜೆಹೆಜ್ಜೆಗೂ ಎಳನೀರಿನ ಕಾಣಿಕೆ ನೀಡಿ ಅವರೆದುರು ಹಲ್ಲುಗಿಂಜಿದರು. ಆದರೆ ಅಧಿಕಾರಿಗಳು ಮಾತ್ರ ಹೊಳೆಸಾಲಿನ ಸಾಲು, ಸಾಲು ಮರಗಳನ್ನು ನೋಡುತ್ತಾ, ಕರೆಂಟ್ ಲೈನ್ ಹಾಕಿಸಬೇಕೆಂದರೆ ಕನಿಷ್ಠ ಐನೂರು ಮರಗಳನ್ನಾದರೂ ಉರುಳಿಸಬೇಕೆಂದು ಅಂದಾಜು ಮಾಡಿ, ಇವೆಲ್ಲಾ ತಮ್ಮ ವ್ಯಾಪ್ತಿಗೆ ಬರುವ ಕೆಲಸವಲ್ಲವೆಂದು ಕೈಚೆಲ್ಲಿಬಿಟ್ಟರು. ತಮ್ಮೂರಿನಲ್ಲಿ ಬೆಳೆದ ಮರಗಳನ್ನು ಕಡಿಯಲು ಇವರೇಕೆ ಇಷ್ಟೊಂದು ಯೋಚಿಸುತ್ತಿದ್ದಾರೆಂದು ಅರ್ಥವಾಗದ ಯುವಕರು ತಮ್ಮ, ತಮ್ಮ ಮನೆಗಳಲ್ಲಿರುವ ಕೊಡಲಿ, ಕತ್ತಿ, ಗರಗಸಗಳನ್ನು ಅವರೆದುರು ಪ್ರದರ್ಶಿಸಿ ತಮ್ಮ ಪರಾಕ್ರಮವನ್ನು ಪಣಕ್ಕಿಟ್ಟರು. ಇವರ ಉತ್ಸಾಹಕ್ಕೆ ನಕ್ಕ ಅಧಿಕಾರಿಗಳು ಒಂದು ಮರವನ್ನು ಕಡಿಯುವುದಾದರೂ ಅರಣ್ಯ ಇಲಾಖೆಯವರ ಅನುಮತಿ ಬೇಕೆಂದೂ, ಅದನ್ನು ಪಡೆದುಕೊಳ್ಳುವುದು ಊರಿನವರ ಜವಾಬ್ದಾರಿಯೆಂದೂ ಹೇಳಿ ಜಾಗ ಖಾಲಿ ಮಾಡಿದರು. “ಅಲ್ಲಾ, ನಾಕು ತಂತಿ ಎಳೆಯೋದಿಕ್ಕೆ ಮರಗಳನ್ಯಾಕೆ ಕಡೀಬೇಕು? ಅವುಗಳ ನಡುವೆ ವಯಿಸಿ ಎಳೆದರಾಯಿತಪ್ಪಾ” ಎಂದು ಮಾತಾಡುತ್ತಿದ್ದ ಹಿರಿಯರಿಗೆ ನೀಲಿಯ ಅಮ್ಮ ಕರೆಂಟೆಂಬುದು ಹಸಿಯಿರುವೆಡೆಯಲ್ಲೆಲ್ಲಾ ಹರಿಯುವ ಸತ್ಯವನ್ನು ಹೇಳಿ ಬೆಚ್ಚಿ ಬೀಳಿಸಿದಳು.

ಮೊಟ್ಟಮೊದಲು ಊರಿನ ಹಿರಿಯರನ್ನೆಲ್ಲ ಹಿಂದಿಟ್ಟು ತಾವೇ ಮುಂದಾಗಿ ಹೊರಟ ಕೆಲಸವೊಂದು ಹೀಗೆ ಹಿನ್ನೆಲೆಗೆ ಸರಿಯುವುದು ಯುವಮುಖಂಡರಿಗೆ ಇಷ್ಟವಾಗಲಿಲ್ಲ. ಮತ್ತೆ ಕಂತ್ರಾಟುದಾರರ ಕಾಲು ಹಿಡಿದು ಪರಿಹಾರ ಕೋರಿದರು. ತಿಂಗಳಾನುಗಟ್ಟಲೆ ಕೆಲಸಕ್ಕೆ ಸರದಿಯ ಮೇಲೆ ರಜೆಹಾಕಿ ಫಾರೆಸ್ಟ್ ಅಧಿಕಾರಿಗಳ ಬಾಗಿಲಿಗೆ ಅಲೆದರು. ಅಂತೂ ಒಂದಿಷ್ಟು ನೋಟಿಗೆ ಕೆಲಸ ಕುದುರಿಸಿ ಕರೆಂಟ್ ಇಲಾಖೆಯವರಿಗೆ ಅವರ ಒಪ್ಪಿಗೆಯ ಪತ್ರ ತಲುಪಿಸಿದರು. ಕಡಿದ ಪ್ರತಿಮರವನ್ನೂ ತುಂಡರಿಸಿ, ತಾಲೂಕು ಕೇಂದ್ರಕ್ಕೆ ಮುಟ್ಟಿಸುವ ಹೆಚ್ಚುವರಿ ಕೆಲಸವನ್ನೂ ತಾವೇ ಅನಿವಾರ್ಯವಾಗಿ ಹೊತ್ತುಕೊಂಡರು. ಇತ್ತ ಕರೆಂಟು ಇಲಾಖೆಯವರಾದರೂ ಈ ಹುಡುಗರನ್ನು ಇನ್ನಷ್ಟು ಆಟವಾಡಿಸಲು ಕಾಯುತ್ತಲೇ ಇದ್ದರು. ಕರೆಂಟು ಕೊಡಬೇಕೆಂದರೆ ಮೊದಲು ಕಂಬಗಳ ಜೋಡಣೆಯಾಗಬೇಕು. ಸಧ್ಯಕ್ಕೆ ನಮ್ಮಲ್ಲಿ ಕಂಬಗಳಷ್ಟೇ ಇವೆ, ಸಾರಿಗೆ ಸಂಪರ್ಕವಿಲ್ಲದ ನಿಮ್ಮೂರಿಗೆ ಎಳೆದುಕೊಂಡು ಹೋಗಲು ಸಿಬ್ಬಂದಿಗಳ ಕೊರತೆಯಿದೆ ಎಂದು ರಾಗವೆಳೆದರು. ಕಣ್ಣೆದುರು ಕಾಣುತ್ತಿದ್ದ ಇಷ್ಟಗಲದ ಕಂಬಗಳನ್ನು ಎಳೆಯುವುದು ಎಷ್ಟು ಸಲೀಸು ಎಂದು ಭಾವಿಸಿ ಹುಡುಗರು ಅದನ್ನೆಲ್ಲ ತಾವೇ ನಿರ್ವಹಿಸುವುದಾಗಿ ಒಪ್ಪಿಗೆ ಸೂಚಿಸಿ ಮರಳಿದರು.

ನಿಗದಿತ ದಿನದಂದು ಅವಶ್ಯವಿರುವ ಕಂಬಗಳೆಲ್ಲವನ್ನೂ ಲಾರಿಯಲ್ಲಿ ಊರ ಹೊರಗೆ ತಂದಿಳಿಸಿದ ಅಧಿಕಾರಿಗಳು ಅವುಗಳನ್ನೆಲ್ಲ ಜೋಪಾನ ಮಾಡಿ, ನಿಗದಿತ ಜಾಗಕ್ಕೆ ಕೊಂಡೊಯ್ಯುವುದು ಯುವಕರ ಜವಾಬ್ದಾರಿಯೆಂದು ತಿಳಿಸಿ ಅಲ್ಲಿಂದ ಕಣ್ಮರೆಯಾದರು. ಹೋಗುವ ಮೊದಲು ಒಂದೇ ಒಂದು ಕಂಬ ಕಾಣೆಯಾದರೂ ಅದರ ತನಿಖೆಯ ಕಾರ್ಯ ಮುಗಿಯುವವರೆಗೂ ಊರಿಗೆ ಕರೆಂಟಿಲ್ಲ ಎಂದು ಎಚ್ಚರಿಸಲು ಮರೆಯಲಿಲ್ಲ. ಇದೊಳ್ಳೆಯ ಪೇಚಾಟವಾಯಿತಲ್ಲ ಎಂದು ಭಾವಿಸಿದ ಹುಡುಗರು ದಿನವೂ ಕಂಬವನ್ನು ಕಾಯಲು ಸರದಿಯಲ್ಲಿ ಪಾಳಿ ಹಾಕಿಕೊಂಡರಲ್ಲದೇ ಸರಕಾರದ ಕಂಬವನ್ನು ಕದ್ದರೆ ಜೈಲೂಟ ಗ್ಯಾರಂಟಿಯೆಂದು ಊರಿನಲ್ಲಿಡೀ ಸುದ್ದಿ ಹಬ್ಬಿಸಿದರು. ಮೊದಲ ಸಲ ಕಂಬಕ್ಕೆ ಹಗ್ಗ ಕಟ್ಟಿ ಎಳೆಯುವಾಗಲೇ ಅವರಿಗೆ ಅದರ ಭಾರವೆಷ್ಟೆಂಬುದು ಅರಿವಿಗೆ ಬಂತು. ನಾಲ್ಕು ಜನ ಒಟ್ಟಿಗೆ ಕೈಹಾಕಿದರೂ ಜಪ್ಪಯ್ಯ ಅನ್ನದೇ ನಿಂತ ಕಂಬಗಳನ್ನು ಅಧಿಕಾರಿಗಳು ಹೇಳಿದಲ್ಲಿಗೆಲ್ಲ ಮುಟ್ಟಿಸುವವರೆಗೆ ತಮ್ಮ ತೋಳ ಬಲವೆಲ್ಲವೂ ಸೊರಗಿಹೋಗುವುದೆಂಬುದು ಅರಿವಾಗಿ ಒಮ್ಮೆ ಅವಾಕ್ಕಾದರು. ಆದರೂ ಕ್ರಾಂತಿಯ ಕನಸಿನಲ್ಲಿದ್ದ ಅವರೆಲ್ಲರೂ ಹಿಂದೆಗೆಯುವ ಮಾತೇ ಇಲ್ಲವೆಂದು ಮನೆಮನೆಯಿಂದ ಜನರು ಬರಲೇಬೇಕೆಂಬ ನಿಬಂಧನೆಗಳನ್ನು ಹಾಕಿಕೊಂಡು ಕಂಬಗಳನ್ನು ಎಳೆಯತೊಡಗಿದರು. ಆ ಇಡಿಯ ವಾರ ಹೊಳೆಸಾಲಿನ ತುಂಬೆಲ್ಲ
ಲೇಲೇ ಪಲ್ಟಿ…. ಐಸಾ….
ಗಟ್ಟಿ ಎಳೆ… ಐಸಾ…
ನುಗ್ಗಿ ಎಳೆ… ಐಸಾ….
ಹಾಕು ಕೈಯ್ಯಿ … ಐಸಾ…
ಬಿಡದೇ ಎಳೆ… ಐಸಾ..
ಎತ್ಲಾಗೆ ನೋಡ್ತೆ…. ಐಸಾ..
ಇತ್ಲಾಗೆ ಎಳೆ…. ಐಸಾ…
ಎನ್ನುವ ಸಾಲುಗಳು ಮಾರ್ದನಿಸುತ್ತಾ ಇಡಿಯ ಹೊಳೆಸಾಲು ಯೌವ್ವನದ ಹುರುಪು ಪಡೆದು ಹೊಳೆಯತೊಡಗಿತು.

ಕಂಬಗಳೇನೋ ಜಾಗ ತಲುಪಿಯಾಗಿತ್ತು, ಇನ್ನೂ ಮರಕಡಿಯುವವರು ಮೀನಾಮೇಷ ಎಣಿಸುತ್ತಲೇ ಇದ್ದರು. ಇತ್ತಕಡೆ ಯುವಕರೆಲ್ಲರ ಕಿಸೆಗಳೂ ಖಾಲಿಯಾಗಿ ಎಲ್ಲರ ಮೇಲೂ ಸಿಟ್ಟು ಬರತೊಡಗಿತ್ತು. ಇನ್ನು ಬಿಸಿಮಾಡುವುದರಲ್ಲಿ ಅರ್ಥವಿಲ್ಲವೆಂದು ಅವರವರಲ್ಲಿ ಮಾತಾಡಿಕೊಂಡು ‘ಹೊಳೆಸಾಲು ಯುವಕರ ತಂಡ’ ಎಂಬ ವೇದಿಕೆಯ ಬ್ಯಾನರನ್ನು ಬರೆಸಿಕೊಂಡು ಅರಣ್ಯ ಇಲಾಖೆಯವರ ಆಫೀಸಿನೆದುರಲ್ಲಿ ಒಂದು ದಿನದ ಮುಷ್ಕರವನ್ನೂ ಮಾಡಿಬಿಟ್ಟರು. ಊರಿಗೆ ಆಪತ್ತು ಬಂದಾಗಲೆಲ್ಲ ಸಹಾಯಕ್ಕೆ ಬರುವ ಗೌಡಮಾಸ್ರ‍್ರು ಮರೆಯಲ್ಲಿಯೇ ನಿಂತು ಈ ಎಪಿಸೋಡನ್ನು ನಿರ್ವಹಿಸಿದ್ದರು. ಬಿಸಿಗೆ ಬೆಣ್ಣೆ ಕರಗುವಂತೆ ಹೊಳೆಸಾಲಿನ ಹುಡುಗರ ಭರಾಟೆಗೆ ಅರಣ್ಯಾಧಿಕಾರಿಗಳು ಕೊಂಚ ಮಿಸುಕಿ ಕರೆಂಟು ಎಳೆಯುವ ದಾರಿಯಲ್ಲಿರುವ ಮರಗಳನ್ನು ಕಡಿಯುವ ಕೆಲಸಕ್ಕೆ ಮುಂದಾದರು. ಆ ಮರದ ದಿಮ್ಮಿಗಳೆಲ್ಲವನ್ನು ತಾವೇ ಮುಂದೆ ನಿಂತು, ಊರಿನಾಚೆಯ ಲಾರಿಗೆ ತುಂಬಿದ ಯುವಕರು ಒಂದು ತುಂಡು ನಾಟನ್ನೂ ಸ್ವಂತಕ್ಕೆ ಬಳಸದೇ ತಮ್ಮ ಪ್ರಾಮಾಣಿಕತೆಯನ್ನು ಮೆರೆದರು.

ಅಂತೂ ಇನ್ನೇನು ಆಗಸದಲ್ಲಿ ದಟ್ಟಮೋಡಗಳೂ ಹೆಪ್ಪುಗಟ್ಟಿ ಮಳೆಸುರಿಯುವುದೆನ್ನುವಾಗ ಎಲ್ಲ ಕರೆಂಟು ಕಂಬಗಳೂ ಸ್ವಸ್ಥಾನದಲ್ಲಿ ಸ್ಥಾಪನೆಗೊಂಡು ತಮ್ಮ ತಲೆಯ ಮೇಲೆ ನಾಲ್ಕು ತಂತಿಗಳನ್ನು ಹೊತ್ತು ಶೋಭಿಸತೊಡಗಿದವು. ಮನೆಮನೆಗಳಲ್ಲಿ ಕರೆಂಟು ಪಡೆಯಲು ಅರ್ಜಿ ಗುಜರಾಯಿಸಿ ಮಶೀನು ಪಡೆಯುವ ಕೆಲಸವೂ ನಡೆಯಿತು. ಇಡಿಯ ಊರಿನಲ್ಲಿರುವ ಹಿರಿಯರು, ಕಿರಿಯರು ಮಾತ್ರವಲ್ಲ, ಹೆಂಗಸರು ಸೆರಗಿನಂಚಿನಲ್ಲಿ ಕಟ್ಟಿಕೊಂಡಿದ್ದ ಬಿಡಿಗಾಸುಗಳೆಲ್ಲವೂ ಸರಕಾರದ ಟೇಬಲ್ಲಿಗೆ ವರ್ಗಾವಣೆಗೊಂಡವು. ಮೀಟರಿನಂಗಡಿಯಲ್ಲಿ ಏನೇನು ವ್ಯವಹಾರವಿಲ್ಲದೇ ಬಾಗಿಲು ಮುಚ್ಚುವ ಸಂಗತಿಯೂ ನಡೆದುಹೋಯಿತು. ಕೊನೆಯಲ್ಲೊಮ್ಮೆ ಊರ ಗೌಡರ ಮನೆಯಲ್ಲಿನ ಬಾವಿಗೆ ಜೋಡಿಸಿದ ಮಶೀನು ಗುರ್ ಎಂದು ಶಬ್ದ ಮಾಡುತ್ತ ನೀರನ್ನು ಹೊರಚೆಲ್ಲುವಲ್ಲಿಗೆ ಕರೆಂಟು ತರುವ ಕತೆಯ ಒಂದು ಅಧ್ಯಾಯ ಮುಗಿಯಿತು. ನಿಧಾನವಾಗಿ ಎಲ್ಲರ ಮನೆಯ ಮಶೀನುಗಳಿಗೂ ಕರೆಂಟಿನ ಬಲ ಬಂದು ಗುರುಗುಡತೊಡಗಿದವು. ಬಾವಿಯಿಲ್ಲದ ಮನೆಯವರು ಹೊಳೆಯಂಚಿನಲ್ಲಿಯೇ ಶೆಡ್ಡಿನ ಮನೆ ಕಟ್ಟಿಕೊಂಡು ಅಲ್ಲಿಂದಲೇ ಪೈಪಿನಿಂದ ನೀರನ್ನು ತಮ್ಮ ಜಮೀನಿಗೆ ಹರಿಸತೊಡಗಿದರು.

ಇಷ್ಟಾಗಿಯೂ ಮನೆಗಳಿಗೆ ಬೆಳಕು ತರಲು ಕರೆಂಟು ಇಲಾಖೆಗೆ ಬೇರೆಯೇ ಅರ್ಜಿಯನ್ನು ಶ್ಯಾನುಭೋಗರ ಮೂಲಕ ನೀಡಬೇಕೆಂದು ತಿಳಿಸಿದ ಕರೆಂಟು ಅಧಿಕಾರಿಗಳು ಹೊಳೆಸಾಲಿನಿಂದ ಕಣ್ಮರೆಯಾದರು. ಅರ್ಜಿಯ ಅರ್ಜಿ ನೀಡಿ ಹೈರಾಣಾಗಿದ್ದ ಹುಡುಗರು ಅರ್ಜಿಯೊಂದಿಗೆ ನೀಡಬೇಕಾಗಿದ್ದ ಇನಾಮಿಗೆ ಹೆದರಿ ಮನೆಯನ್ನು ಬೆಳಗಲು ಬೇರೆಯೇ ದಾರಿಗಳನ್ನು ಹುಡುಕತೊಡಗಿದರು. ತಮ್ಮ ತೋಟದಲ್ಲಿದ್ದ ಮಿಶೀನ್ ಶೆಡ್ಡಿಗೆ ವೈಯರನ್ನು ಸಿಕ್ಕಿಸಿ, ಅದನ್ನು ಮನೆಯವರೆಗೂ ಎಳೆದುತಂದು, ಅದಕ್ಕೊಂದು ಹೋಲ್ಡರ್ ಹಾಕಿ, ಬಲ್ಬು ಸಿಕ್ಕಿಸಿ ಇಡಿಯ ಮನೆತುಂಬಾ ಬೆಳಕನ್ನು ಬರಮಾಡಿಕೊಂಡರು.

ಸಂಜೆಯಾಗುತ್ತಲೇ ಪ್ರತ್ಯಕ್ಷವಾಗುತ್ತಿದ್ದ ಈ ವೈಯರುಗಳು ಬೆಳಗಾಗುತ್ತಲೇ ಕಣ್ಮರೆಯಾಗುತ್ತಿದ್ದವು. ಹೊಳೆಸಾಲಿನ ದುರ್ಗಮ ದಾರಿಯಲ್ಲಿ ಇವನ್ನೆಲ್ಲ ಪರೀಕ್ಷಿಸಲು ಅಧಿಕಾರಿಗಳು ಬರುವ ಸಾಧ್ಯತೆಯಂತೂ ಇರಲೇ ಇಲ್ಲ. ಹೀಗೆ ಇಡಿಯ ಊರೇ ರಾತ್ರಿ ಬೆಳಗುತ್ತಿರುವಾಗ ನೀಲಿಯ ಮನೆಯಲ್ಲಿ ಮಾತ್ರ ಕುರುಡು ಲಾಂದ್ರ ಬೆಳಗುತ್ತಿತ್ತು. ನೀಲಿಯ ಅಣ್ಣನಿಗೆ ಇದರಿಂದ ತೀರ ಕಿರಿಯೆನ್ನಿಸಿ ಮನೆಯ ಗೋಡೆಯ ತೂತುಗಳನ್ನೆಲ್ಲ ಮುಚ್ಚಲು ಉಪಾಯವನ್ನು ಅರಸತೊಡಗಿದ. ಪರವೂರಿನ ಹಾಸ್ಟೆಲ್ಲಿನಲ್ಲಿದ್ದು ಓದುತ್ತಿದ್ದ ಅವನಿಗೆ ಅಲ್ಲಿಯ ಪೇಟೆಯಲ್ಲಿ ಮಾರಾಟವಾಗುತ್ತಿದ್ದ ಬಣ್ಣಬಣ್ಣದ ಕ್ಯಾಲೆಂಡರುಗಳು ನೆನಪಾಗಿ ಮುಂದಿನ ವಾರ ಬರುವಾಗ ದೇವರ ಚಿತ್ರಗಳಿದ್ದ ಹತ್ತಾರು ಕ್ಯಾಲೆಂಡರುಗಳನ್ನು ಖರೀದಿಸಿ ತಂದು ಗೋಡೆಯ ತುಂಬಾ ಅಲಂಕರಿಸಿದ. ಒಳಗಿನ ಕೋಣೆಗಳಲ್ಲಿ ಅಮ್ಮನ ಕಾಲದ ಹೀರೋ, ಹೀರೋಯಿನ್ನುಗಳ ಚಿತ್ರಗಳನ್ನು ತಂದು ಜೋಡಿಸಿದ. ಹಳೆಯ ಕಾಲದ ಗೋಡೆಯೊಂದು ಹೀಗೆ ಹೊಸರೂಪ ಪಡೆದುಕೊಂಡ ಬಗೆಗೆ ನೀಲಿಯ ಅಮ್ಮನ ಕಣ್ಣುಗಳಲ್ಲಿ ನಗೆಯ ಬುಗ್ಗೆ ಮೂಡಿತಾದರೂ ರಾತ್ರಿಯೆಳೆದು ಹಗಲು ಬಿಚ್ಚುವ ವೈಯರಿನ ಮೂಲಕ ಕರೆಂಟು ತರುವುದನ್ನು ಅವಳು ಒಪ್ಪಲೇ ಇಲ್ಲ. ಇಷ್ಟೆಲ್ಲ ಮಾಡಿಯೂ ಬಲ್ಬಿನಡಿಯಲ್ಲಿ ಓದುವ ತನ್ನ ಕನಸು ನನಸಾಗದ ಕೋಪದಲ್ಲಿ ನೀಲಿಯ ಅಣ್ಣ ಇನ್ನು ತಾನು ಊರಿಗೆ ಬರುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟುಬಿಟ್ಟ.

ಇವೆಲ್ಲವನ್ನೂ ನೋಡುತ್ತಿದ್ದ ಪುಟ್ಟ ನೀಲಿಗೆ ತನ್ನಮ್ಮ ಇಷ್ಟೇಕೆ ಹಠ ಮಾಡುತ್ತಾಳೆಂಬುದು ಅರಿವಾಗದೇ ಪ್ರಶ್ನೆಯಾಗಿ ಕಾಡತೊಡಗಿತು. ಇಂಥದ್ದಕ್ಕೆಲ್ಲ ಗೌಡ ಮಾಸ್ರ‍್ರೇ ಸರಿಯೆಂದು ಊಟದ ಬಿಡುವಿನಲ್ಲಿ ಮಾಸ್ರ‍್ರಿಗೆ ಮನೆಯ ಉಸಾಬರಿಗಳನ್ನೆಲ್ಲ ಹೇಳಿದಳು. ನೀಲಿಯ ಮಾತನ್ನು ಕೇಳಿದ ಗೌಡಮಾಸ್ರ‍್ರು ಕರೆಂಟು ಎಂಬುದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು ಎಂಬುದನ್ನು ವಿವರಣೆಗಳ ಮೂಲಕ ಅವಳಿಗೆ ಮನದಟ್ಟು ಮಾಡಿದರಲ್ಲದೇ ಅವಳ ಅಮ್ಮನ ಹಠ ಎಷ್ಟು ಒಳ್ಳೆಯ ಹಟವೆಂಬುದನ್ನೂ ತಿಳಿಸಿ ಹೇಳಿದರು. ಅಯ್ಯಪಾ, ಕರೆಂಟು ದೀಪವಿಲ್ಲದಿದ್ದರೂ ಅಡ್ಡಿಲ್ಲ, ಇವೆಲ್ಲ ಅಪಾಯಗಳ ಗೊಡವೆ ಬೇಡ. ಇಲಾಖೆಯವರೇ ಸುರಕ್ಷಿತವಾಗಿ ಕರೆಂಟು ಕೊಡುವವರೆಗೂ ಲಾಂದ್ರವೇ ಇರಲಿ ಎಂದು ಮನೆಗೆ ಬಂದ ನೀಲಿ ಅಮ್ಮನಿಗೆ ಎಲ್ಲವನ್ನೂ ಹೇಳಿದಳು. ತನ್ನಂತೆ ಮಗಳೂ ಕರೆಂಟಿನ ಅಪಾಯಗಳ ಬಗ್ಗೆ ತಿಳಿದುಕೊಂಡಿದ್ದು ನೋಡಿ ನೀಲಿಯ ಅಮ್ಮನಿಗೆ ಸಂತೋಷವಾಯಿತು.

ಗುಡುಗು ಸಿಡಿಲಿನೊಂದಿಗೆ ಮುಂಗಾರು ಹೊಳೆಸಾಲಿಗೆ ಅಪ್ಪಳಿಸಿದಾಗ ಮೊದಲ ಅನಾಹುತವೊಂದು ನಡೆದುಹೋಯಿತು. ಹೊಳೆಸಾಲಿನ ಹೊಳೆಗೆ ನೀರು ಕುಡಿಯಲು ಹೋದ ದನಕರುಗಳೆಲ್ಲ ಅಲ್ಲಲ್ಲೇ ಮರಗಟ್ಟಿ ಶವವಾದುದನ್ನು ಕಂಡ ಊರಿನವರ ಎದೆಯೊಡೆದುಹೋಯಿತು. ಮಳೆಗಾಳಿಗೆ ಕರೆಂಟು ಲೈನು ಹರಿದುಬಿದ್ದು ಹೊಳೆಯಿಡೀ ಕರೆಂಟು ಹರಿದು ಈ ಅನಾಹುತ ಸೃಷ್ಟಿಯಾಗಿತ್ತು. ಸಧ್ಯ, ಮನುಷ್ರ‍್ಯಾರೂ ಸತ್ತಿಲ್ಲವೆಂದು ನಿಟ್ಟುಸಿರು ಬಿಟ್ಟ ಲೈನ್‌ಮೆನ್ ಈ ವಿಷಯವನ್ನು ದೊಡ್ಡದು ಮಾಡದಂತೆ ಊರಿನವರೆಲ್ಲರಿಗೆ ಹೇಳಿ, ಇನ್ನು ಮುಂದೆ ಗಾಳಿಮಳೆ ಬಂದರೆ ಟ್ರಾನ್ಸಫರ್‌ರ್ಮರ್ ಪೆಟ್ಟಿಗೆಯಲ್ಲಿ ಸ್ವಿಚ್ ಬಂದ್ ಮಾಡಿ ಕರೆಂಟು ಸಂಪರ್ಕ ತುಂಡರಿಸುವ ಕ್ರಿಯೆಯನ್ನು ಅಲ್ಲಿನ ಒಂದೆರಡು ಹುಡುಗರಿಗೆ ಹೇಳಿಕೊಟ್ಟರು. ಇದಾಗಿ ವಾರದೊಳಗೆ ನಡುರಾತ್ರಿಯಲ್ಲಿ ಪಕ್ಕದ ಮನೆಯಿಂದ ಅರಚಿದ ಶಬ್ದಕ್ಕೆ ನೀಲಿಯ ಮನೆಯವರೆಲ್ಲರೂ ಎಚ್ಚೆತ್ತರು. ಅಕ್ರಮವಾಗಿ ಎಳೆದ ಕರೆಂಟು ವೈಯರಿನ ಹೊರಗಿನ ಕವಚವನ್ನು ಇಲಿಯೊಂದು ಕತ್ತರಿಸಿಬಿಟ್ಟಿದ್ದರಿಂದ ನಡುರಾತ್ರಿಯಲ್ಲಿ ಸ್ವಿಚ್ ಹಾಕಲು ಕೈಹಾಕಿದ ನಾಗಿ ಶಾಕ್ ಹೊಡೆದು ಮಾರುದೂರ ಹೋಗಿ ಬಿದ್ದಿದ್ದಳು. ಅದರ ಶಾಕಿಗೆ ಊರಿಡೀ ಕೇಳುವಂತೆ ಕಿರುಚಿದ್ದಳಲ್ಲದೇ ಕರೆಂಟು ವೈಯರನ್ನು ಬಿಚ್ಚದೇ ಮನೆಯೊಳಗೆ ಕಾಲಿಡುವುದಿಲ್ಲವೆಂದು ಅಂಗಳದಲ್ಲೇ ಕುಳಿತುಬಿಟ್ಟಳು.

ಅಲ್ಲಿ, ಇಲ್ಲಿ ಹೀಗೆ ಕರೆಂಟು ಶಾಕ್ ಹೊಡೆಸಿಕೊಳ್ಳುತ್ತಲೇ ಪಾಠ ಕಲಿತ ಹೊಳೆಸಾಲಿನ ಜನರಿಗೀಗ ಕರೆಂಟು ಮೆಶೀನಿನ ಸ್ವಿಚ್ಚು ಒತ್ತಲೂ ಭಯವಾಗತೊಡಗಿತು. ಕರೆಂಟೆಂಬುದು ಭೂತದಂತ ತಮ್ಮೂರನ್ನು ಕಬಂಧ ಬಾಹುಗಳಲ್ಲಿ ಬಂಧಿಸಿದೆಯೆಂದು ಅನಿಸಿ, ಕರೆಂಟು ತಂತಿಯನ್ನು ಕಂಡಾಗಲೆಲ್ಲ ಶಾಕ್ ಹೊಡೆದವರಂತೆ ಹೆದರತೊಡಗಿದರು. ಇವೆಲ್ಲ ವಿದ್ಯಮಾನಗಳು ಮಕ್ಕಳ ಮೂಲಕ ಗೌಡ ಮಾಸ್ರ‍್ರನ್ನೂ ತಲುಪಿ, ಇನ್ನಿದು ಆಗುವ ಕೆಲಸವಲ್ಲವೆಂದು ಅವರು ಕರೆಂಟ್ ಅಧಿಕಾರಿಗಳ ಸಭೆಯೊಂದನ್ನು ಶಾಲೆಯಲ್ಲಿ ಏರ್ಪಡಿಸಿ, ಕರೆಂಟನ್ನು ಸುರಕ್ಷಿತವಾಗಿ ಬಳಸುವುದು ಹೇಗೆ? ಎಂಬ ಬಗ್ಗೆ ಊರಿನ ಮಹಿಳೆಯರು ಮತ್ತು ಯುವಕರಿಗೆ ಮಾಹಿತಿಯನ್ನು ಕೊಡಿಸಿದರು. ಕಾರ್ಯಕ್ರಮದಲ್ಲಿ ನೀಲಿಯ ಅಮ್ಮನನ್ನು ಅವರ ಒಳ್ಳೆಯ ನಿರ್ಧಾರಕ್ಕಾಗಿ ಗೌರವಿಸುವ ಕೆಲಸವೂ ನಡೆದು ನೀಲಿಯ ತಲೆಗೆರಡು ಕೋಡು ಮೂಡಿದವು. ಊರ ಹೆಣ್ಣುಗಳನ್ನು ಪಳಗಿಸಿದಂತೆ ಈ ಕರೆಂಟು ಎಂಬ ಬೆಳಕನ್ನು ಪಳಗಿಸಲಾರದೆಂಬುದನ್ನು ಅರಿತ ಯುವಕರ ಪಡೆ ಮನೆಯ ಎಲ್ಲ ವೈರುಗಳನ್ನು ಬದಿಗೆಸೆದು ಅಧಿಕಾರಿಗಳ ಮಾತಿನಂತೆ ಎಚ್ಚರವಹಿಸತೊಡಗಿದರು. ಮಳೆಗಾಲ ಕಳೆದು ಬೇಸಿಗೆ ಕಾಲಿಡುವ ಹೊತ್ತಿಗೆ ಕರೆಂಟು ಅಧಿಕಾರಿಗಳು ಎಲ್ಲರ ಮನೆಗೂ ಮೀಟರನ್ನು ಜೋಡಿಸಿ, ಹೆಚ್ಚುವರಿ ಕರೆಂಟು ಹರಿದುಹೋಗುವಂತೆ ಅರ್ಥಿಂಗ್ ವ್ಯವಸ್ಥೆಯನ್ನು ಮಾಡಿ, ಕೊಳವೆಗಳ ಮೂಲಕ ತಂತಿಯನ್ನು ಹರಿಬಿಟ್ಟು ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಟ್ಟರು. ನೀಲಿಯ ಮನೆಯ ಗೋಡೆಯ ದೇವರ ಚಿತ್ರಗಳೆಲ್ಲ ಕರೆಂಟಿನ ಬೆಳಕಲ್ಲಿ ರಾರಾಜಿಸತೊಡಗಿದವು. ಎಲ್ಲವನ್ನೂ ನೋಡುತ್ತಿದ್ದ ಹೊಳೆಸಾಲಿನ ಹೊಳೆ ಮಾತ್ರ ನೀರೆತ್ತುವ ಮೆಶೀನುಗಳ ಪೈಪುಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಕೊಂಡು ತುರ್ತುನಿಗಾ ಘಟಕದಲ್ಲಿ ಮಲಗಿದ ರೋಗಿಯಂತೆ ನಿಸ್ತೇಜವಾಗಿ ಕಾಣತೊಡಗಿತು.