ಈ ವಾರ ಅಣ್ಣ ಬಂದಾಗ ನೀಲಿ ಅಣ್ಣನಲ್ಲಿ ತನ್ನ ದುಗುಡವನ್ನು ಹೇಳಿಕೊಂಡಳು. ಅಣ್ಣ ಅವಳಿಗೆ ಸಮಾಧಾನ ಹೇಳಿದ. “ನೋಡು, ನೀನು ಮುಂದೆ ಓದುವ ಸ್ಕೂಲು ಇಲ್ಲಿಂದ ಅಷ್ಟೇನೂ ದೂರವಿಲ್ಲ. ದಿನವೂ ನಡೆದು ಹೋಗುವುದೊಂದು ಕಷ್ಟ. ಬೆಳಿಗ್ಗೆ, ಸಂಜೆ ಒಂದು ಬಸ್ ಆಯಿತೆಂದರೆ ಮನೆಯಿಂದಲೇ ಮುಂದಿನ ಶಾಲೆಗೆ ಹೋಗಬಹುದು.” ಅಣ್ಣನ ಮಾತು ಕೇಳಿ ನೀಲಿಗೆ ಅದೆಷ್ಟು ಸಂತೋಷವಾಯಿತೆಂದರೆ ಹೇಗಾದರೂ ಮಾಡಿ ಮುಂದಿನ ವರ್ಷದೊಳಗೆ ಹೊಳೆಸಾಲಿಗೊಂದು ಬಸ್ ಬರುವಂತೆ ಮಾಡಬೇಕು ಎಂದು ಕನಸು ಕಾಣತೊಡಗಿದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನಾರನೆಯ ಕಂತು ನಿಮ್ಮ ಓದಿಗೆ
ನೀಲಿಯ ಶಾಲೆಯಲ್ಲಿದ್ದುದು ಒಂದು ಕೋಣೆ ಮಾತ್ರ. ಮಾಸ್ರ‍್ರು ಕುಳಿತುಕೊಳ್ಳಲು ಒಂದು ಕುರ್ಚಿ, ಅದರ ಪಕ್ಕದಲ್ಲಿ ಬಂದವರಿಗೆ ಕುಳಿತುಕೊಳ್ಳಲೆಂದು ಒಂದು ಪುಟ್ಟ ತಗಡಿನ ಕುರ್ಚಿ, ಅದರ ಎದುರೊಂದು ದೊಡ್ಡ ಮರದ ಟೇಬಲ್. ಪಕ್ಕದಲ್ಲಿ ನಿಲ್ಲಿಸಿದ ದೊಡ್ಡ ಕಪ್ಪು ಹಲಗೆ. ಈ ಬದಿಯಲ್ಲಿ ತೂಗುಬಿಟ್ಟಿರುವ ಭಾರತದ ನಕಾಶೆ. ಕೋಣೆಯ ಹೊರಬದಿಯಲ್ಲಿ ಗೋಡೆಗೆ ಹೊಂದಿಕೊಂಡಿರುವ ಕರಿಹಲಗೆಯಲ್ಲಿ ಬಣ್ಣಬಣ್ಣದ ಸೀಮೆಸುಣ್ಣವನ್ನು ಉಪಯೋಗಿಸಿ ಗೌಡಾ ಮಾಸ್ರ‍್ರು ಬರೆದಿಟ್ಟ ಕನ್ನಡದ ವರ್ಣಮಾಲೆಯಿತ್ತು. ಅದು ಅಳಿಸಿಹೋಗದಂತೆ ಶಾಲೆಯ ನಾಯಕಿಯರು ಆಯಾ ಬಣ್ಣದಲ್ಲಿ ಅದನ್ನು ದಿನವೂ ತಿದ್ದುತ್ತಿದ್ದರು. ಹೃಸ್ವ ಸ್ವರಗಳೆಂದರೆ ಹಳದಿ ಬಣ್ಣ, ದೀರ್ಘಸ್ವರಗಳೆಂದರೆ ನೀಲಿಬಣ್ಣ, ವರ್ಗೀಯ ವ್ಯಂಜನಗಳು ಕೆಂಪು, ಅವರ್ಗೀಯ ವ್ಯಂಜನಗಳು ಗುಲಾಬಿ ಬಣ್ಣಗಳಾಗಿಯೇ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಭಾಷೆ, ಸಮಾಜವಿಜ್ಞಾನದ ವಿಷಯಗಳ ಪಾಠವನ್ನು ಮಾಡುವಾಗ ಮಾಸ್ರ‍್ರು “ಪುಸ್ತಕ ತನ್ನಿ ಮಕ್ಕಳೇ” ಎನ್ನುತ್ತಿದ್ದರು. ಆಯಾ ತರಗತಿಯ ಮಕ್ಕಳು ಪುಸ್ತಕ ಹಿಡಿದು ಮರದ ಟೇಬಲ್ಲಿನ ಸುತ್ತ ನಿಲ್ಲುತ್ತಿದ್ದರು. ಮಾಸ್ರ‍್ರು ಕುರ್ಚಿಯಲ್ಲಿ ಕುಳಿತು ಪಾಠವಿವರಣೆಯನ್ನು ಮಾಡುತ್ತಿದ್ದರು. ಗಣಿತ, ವಿಜ್ಞಾನದ ಪಾಠಗಳನ್ನು ಮಾಡುವಾಗ ಕರಿಹಲಗೆಯಲ್ಲಿ ಮಾಸ್ರ‍್ರು ಬರೆದುದನ್ನು ಮಕ್ಕಳು ತಮ್ಮ ಪಟ್ಟಿ(ನೋಟ್ಸ)ಯಲ್ಲಿ ಬರೆದುಕೊಳ್ಳುತ್ತಿದ್ದರು. ಟೇಬಲ್ಲಿನ ಮೇಲಿರುವ ಮರದ ಸ್ಕೇಲು ಮಕ್ಕಳನ್ನು ನಿಯಂತ್ರಿಸುವ ಏಕಮೇವ ಸಾಧನವಾಗಿತ್ತು. ಮಕ್ಕಳೆಲ್ಲ ವಿಪರೀತ ಗಲಾಟೆ ಮಾಡುವಾಗ ಮಾಸ್ರ‍್ರು ಸ್ಕೇಲನ್ನು ಟೇಬಲ್ಲಿನ ಮೇಲೆ ಬಡಿದು ಸದ್ದು ಮಾಡಿ ಎಲ್ಲರೂ ಸುಮ್ಮನಿರುವಂತೆ ಎಚ್ಚರಿಸುತ್ತಿದ್ದರು. ಕೆಲವೊಮ್ಮೆ ಬಡಿತ ಮಕ್ಕಳ ಬೆನ್ನಿಗೂ ವಿಸ್ತರಿಸುತ್ತಿತ್ತು.
ಗೌಡಾ ಮಾಸ್ರ‍್ರಿಗಿಂತ ಮೊದಲಿದ್ದ ಮಾಸ್ರ‍್ರು ತಪ್ಪು ಮಾಡಿದ ಮಕ್ಕಳ ಕೈಯ್ಯನ್ನು ಟೇಬಲ್ ಮೇಲಿಟ್ಟು ಸ್ಕೇಲಿನಿಂದ ಬಾರಿಸುತ್ತಿದ್ದ ಸಂಗತಿಯನ್ನು ಊರಿನ ಎಲ್ಲರೂ ದಂತಕತೆಯಂತೆ ಹೇಳುತ್ತಿದ್ದರು. ಲೆಕ್ಕ ಮಾಡಲು ಬಾರದ ಕಿಟ್ಟನ ಜುಟ್ಟು ಹಿಡಿದು ಕರಿಹಲಗೆಗೆ ಬಡಿದ ಅಬ್ಬರಕ್ಕೆ ತಲೆಯಿಂದ ರಕ್ತ ಚಿಮ್ಮಿ ಎಚ್ಚರ ತಪ್ಪಿದಾಗ ಊರಿನವರೆಲ್ಲರೂ ಎಚ್ಚರಗೊಂಡಿದ್ದರು. ಮಾಸ್ರ‍್ರ ಹೊಡೆತಕ್ಕೆ ಹೆದರಿ ಮಕ್ಕಳೆಲ್ಲರೂ ಶಾಲೆಯ ಕಡೆಗೆ ಸುಳಿಯುವುದನ್ನೇ ಬಿಟ್ಟುಬಿಟ್ಟಾಗ ಊರಹಿರಿಯರೆಲ್ಲರೂ ಸೇರಿ ಗೌಡಾ ಮಾಸ್ರ‍್ರು ತಮ್ಮ ಶಾಲೆಗೆ ಬರುವಂತೆ ಮಾಡಿದ್ದರು. ಕರುಣಾಳುವಾದ ಗೌಡಾಮಾಸ್ರ‍್ರು ಅಂಗೈ ಮೇಲೆ ಒಂದೆರಡು ಪೆಟ್ಟು ಬಾರಿಸುವುದನ್ನು ಬಿಟ್ಟರೆ ಘನಘೋರವಾದ ಶಿಕ್ಷೆಗಳಿಗೆಲ್ಲ ತಿಲಾಂಜಲಿಯನ್ನು ಹಾಡಿದ್ದರು.
ದಿನವೂ ಇಷ್ಟನ್ನೇ ನೋಡಿದ್ದ ಮಕ್ಕಳಿಗೆ ತಮ್ಮ ಶಾಲೆಯ ಹೊರಗೊಂದು ಕೋಣೆ ಮೇಲೇರುತ್ತಿದ್ದುದನ್ನು ಕಂಡಾಗ ಇನ್ನಿಲ್ಲದ ಅಚ್ಚರಿ. ಈ ಹೊಸಾ ಕೊಠಡಿ ನಮ್ಮ ಕ್ಲಾಸಿಗೆ ಇರಲಿ ಎಂದು ಎಲ್ಲರೂ ಆಶಿಸುತ್ತಿರುವಾಗಲೇ ಅದು ಅಂಗನವಾಡಿಯ ಕಟ್ಟಡವೆಂದು ಮಾಸ್ರ‍್ರು ಹೇಳಿದರು. ನೋಡನೋಡುತ್ತಿರುವಂತೆ ಕಟ್ಟಡ ಮುಗಿದು ಅಂಗನವಾಡಿಯ ಅಕ್ಕೋರು ಶಾಲೆಯ ಅಂಗಳದೊಳಗೆ ಬಂದಾಗಿತ್ತು. ಮೈತುಂಬಾ ಸೆರಗು ಹೊದೆದು ಬರುವ ಅಕ್ಕೋರನ್ನು ಶಾಲೆಯ ಮಕ್ಕಳೆಲ್ಲರೂ ಬೆರಗಿನಿಂದ ನೋಡುತ್ತಿರುವಂತೆ ಸೀದಾ ಶಾಲೆಯೊಳಗೆ ಬಂದ ಅವರು ಎಲ್ಲರ ಮನೆಯಲ್ಲಿರುವ ಪುಟ್ಟ ಮಕ್ಕಳನ್ನು ನಾಳೆಯಿಂದ ಕರೆದುಕೊಂಡು ಬರಬೇಕೆಂದು ತಿಳಿಸಿದರು. ಹೊಳೆಸಾಲಿನ ಚಿಳ್ಳೆಪಿಳ್ಳೆಗಳೆಲ್ಲ ಸುಂಬಳ ಸುರಿಸುತ್ತ ಅಮ್ಮನ ಸೊಂಟವೇರಿ ಅಂಗನವಾಡಿಗೆ ಬಂದಿಳಿದರು. ಒಂದೆರಡು ವಾರಗಳ ಕಾಲ ಅಂಗನವಾಡಿಯ ಒಳಗಿಂದ ಬರಿಯ ಮಕ್ಕಳ ಅಳುವಿನ ಶಬ್ದವೇ ಕೇಳಿಬರುತ್ತಿತ್ತು. ನಿಧಾನವಾಗಿ ಒಳಗಿನಿಂದ ಆಟವಾಡುವ, ನಗುವ, ಮೂರುಚಕ್ರದ ಸೈಕಲ್ ಓಡಿಸುವ ಸದ್ದುಗಳು ಕೇಳಿಸಲಾರಂಭಿಸಿದವು. ಆ ಅಂಗನವಾಡಿ ಅಕ್ಕೋರಂತೂ ಅದೆಷ್ಟು ಒಳ್ಳೆಯವರೆಂದರೆ ಬೆಳಿಗ್ಗೆ ಬಂದೊಡನೆ ಎಲ್ಲ ಮಕ್ಕಳ ಸಿಂಬಳ ತೊಳೆಸಿ, ಮುಖ ಒರೆಸಿ ಸ್ವಚ್ಛ ಮಾಡುತ್ತಿದ್ದರು. ವಾರಕ್ಕೊಮ್ಮೆ ಅವರ ಕೈಕಾಲುಗಳ ಉಗುರುಗಳನ್ನು ನೋವಾಗದಂತೆ ಕತ್ತರಿಸಿ ಕಳಿಸುತ್ತಿದ್ದರು. ತಿಂಡಿ ತಿನ್ನುವ ಮೊದಲು ಎಲ್ಲ ಮಕ್ಕಳನ್ನು ಸಾಲಲ್ಲಿ ನಿಲ್ಲಿಸಿ ಕೈಯ್ಯನ್ನು ಸೋಪಿನಿಂದ ತೊಳೆಸುತ್ತಿದ್ದರು. ಇವೆಲ್ಲವನ್ನು ದೂರದಿಂದಲೇ ನೋಡುತ್ತಿದ್ದ ಹೊಳೆಸಾಲಿನ ಮಕ್ಕಳಿಗೆ ಛೇ! ನಾವೂ ಸಣ್ಣವರಿರುವಾಗ ಅಂಗನವಾಡಿ ಇದ್ದಿದ್ದರೆ ಎನ್ನಿಸದೇ ಇರಲಿಲ್ಲ. ಇದಕ್ಕಿಂತಲೂ ಕಾಡುವ ಸಂಗತಿಯೆಂದರೆ ಅಂಗನವಾಡಿಯ ಮಕ್ಕಳಿಗೆ ಬರೆಯುವ ಉಪದ್ರವೇ ಇರಲಿಲ್ಲ. ಅಂಗನವಾಡಿಯಲ್ಲಿ ಅಕ್ಕೋರು ಹೇಳಿಕೊಡುವ ಚಂದಚಂದದ ಕತೆ ಮತ್ತು ಹಾಡುಗಳನ್ನು ಹೇಳುತ್ತಾ, ಆಟವಾಡುತ್ತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಳೆದು, ಮತ್ತೆ ಅವರು ಕೊಡುವ ಸಿಹಿಉಂಡೆಯನ್ನೋ, ಹೆಸರುಕಾಳಿನ ಉಸುಳಿಯನ್ನೋ, ಚಿತ್ರಾನ್ನವನ್ನೋ ತಿಂದು ಮನೆಗೆ ಹೋದರಾಯಿತು. ಮೊದಲು ಅಳುತ್ತಾ ಬಂದ ಮಕ್ಕಳು ಈಗ ಅಮ್ಮಂದಿರು ಬಂದು ಕರೆದರೂ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ.
ಹೊಳೆಸಾಲಿನ ಮಕ್ಕಳು ಬಿಡುವಿನ ವೇಳೆಯಲ್ಲೆಲ್ಲ ಅಂಗನವಾಡಿಯ ಹಾಡುಗಳಿಗೆ ಕಿವಿಗೊಡುತ್ತಿದ್ದರು.
ಜಾರು ಬಂಡಿ ಆಟ
ಜಾರಿ ಬೀಳುವ ಆಟ
ರಾಜಣ್ಣ ಗಾಡಿ ಹತ್ತಿದ
ಕಾಲು ಜಾರಿ ಬಿದ್ಬಿಟ್ಟ
ಎಂಬ ಹಾಡು ಮುಗಿಯುವಾಗ ಎಲ್ಲ ಮಕ್ಕಳು ಕಾಲುಜಾರಿ ಬಿದ್ದು ನಗುವ ಸದ್ದು ಕೇಳುತ್ತಿತ್ತು.
ಸೀತಮ್ಮನ ಮಗುವಿಗೆ ಶೀತವಾಗಿದೆ
ಬಿಸಿ ಬಿಸಿ ಕಷಾಯ ಮಾಡಿಕುಡಿಸುವ
ಸಾ….ಸ …ಸಾ….ಸ ಸಾ….ಸ…ಸಾ
ಮತ್ತೆ ಮಗು ಹುಷಾರಾಗಿ ಎದ್ದು ಕುಣಿಯಿತು
ಎನ್ನುವಾಗ ಅವರೆಲ್ಲರೂ ಜಿಗಿಯುವ ಸದ್ದು ಇವರ ಕಾಲುಗಳನ್ನೂ ಕುಣಿಸುವಂತೆ ಮಾಡುತ್ತಿತ್ತು.
ಇದಾದ ಮೇಲೆ ಬಸ್ಸಿನ ಹಾಡು ಪ್ರಾರಂಭವಾಗುತ್ತಿತ್ತು.
ಬಸ್ ಬಂತು ಬಸ್ಸು
ಗರ‍್ನಮೆಂಟ್ ಬಸ್ಸು
ಕೆಂಪು ಬಿಳಿಯ ಬಣ್ಣ
ನೋಡ ಬಾರಣ್ಣ…
ಅಂಗನವಾಡಿ ಅಕ್ಕೋರಂತೂ ಅದೆಷ್ಟು ಒಳ್ಳೆಯವರೆಂದರೆ ಬೆಳಿಗ್ಗೆ ಬಂದೊಡನೆ ಎಲ್ಲ ಮಕ್ಕಳ ಸಿಂಬಳ ತೊಳೆಸಿ, ಮುಖ ಒರೆಸಿ ಸ್ವಚ್ಛ ಮಾಡುತ್ತಿದ್ದರು. ವಾರಕ್ಕೊಮ್ಮೆ ಅವರ ಕೈಕಾಲುಗಳ ಉಗುರುಗಳನ್ನು ನೋವಾಗದಂತೆ ಕತ್ತರಿಸಿ ಕಳಿಸುತ್ತಿದ್ದರು. ತಿಂಡಿ ತಿನ್ನುವ ಮೊದಲು ಎಲ್ಲ ಮಕ್ಕಳನ್ನು ಸಾಲಲ್ಲಿ ನಿಲ್ಲಿಸಿ ಕೈಯ್ಯನ್ನು ಸೋಪಿನಿಂದ ತೊಳೆಸುತ್ತಿದ್ದರು. ಇವೆಲ್ಲವನ್ನು ದೂರದಿಂದಲೇ ನೋಡುತ್ತಿದ್ದ ಹೊಳೆಸಾಲಿನ ಮಕ್ಕಳಿಗೆ ಛೇ! ನಾವೂ ಸಣ್ಣವರಿರುವಾಗ ಅಂಗನವಾಡಿ ಇದ್ದಿದ್ದರೆ ಎನ್ನಿಸದೇ ಇರಲಿಲ್ಲ.
ಈ ಹಾಡನ್ನು ಕೇಳಿದಾಗಲೆಲ್ಲ ನೀಲಿಯ ಕಣ್ಮುಂದೆ ಅವಳ ಅಜ್ಜನ ಮನೆಯ ಎದುರಿಗೇ ಹಾದುಹೋಗುವ ಕೆಂಪುಬಸ್ಸಿನ ಚಿತ್ರ ತೇಲಿಹೋಗುತ್ತಿತ್ತು. ಇನ್ನೇನು ಮುಂದಿನ ವರ್ಷ ಅವಳ ಹೊಳೆಸಾಲಿನ ಶಾಲೆಯ ಓದು ಮುಗಿಯುತ್ತಿತ್ತು. ಅವಳಣ್ಣನಂತೆ ಅವಳನ್ನು ಹಾಸ್ಟೆಲ್ಲಿಗೆ ಸೇರಿಸಲು ಮನೆಯಲ್ಲಿ ಸಮ್ಮತಿಯಿರಲಿಲ್ಲ. ಹಾಗೆ ಉಳಿಯಲು ಅವಳಿಗೂ ಭಯವೆನಿಸುತ್ತಿತ್ತು. ಇನ್ನುಳಿದ ದಾರಿಯೆಂದರೆ ಪೇಟೆಯಲ್ಲಿರುವ ಅಜ್ಜನ ಮನೆಯಲ್ಲಿದ್ದು ಓದುವುದು. ಹೊಳೆಸಾಲನ್ನು ಬಿಟ್ಟುಹೋಗುವುದನ್ನು ನೆನಪಿಸಿಕೊಂಡರೆ ಸಾಕು, ನೀಲಿಯ ಕಂಗಳಿಂದ ನೀರು ಅವಳಿಗರಿಯದೇ ಸುರಿಯುತ್ತಿತ್ತು. ಈ ಬೆಟ್ಟ, ಕಾಡು, ಮರಗಳು, ಹಕ್ಕಿಗಳು, ಸಂಗಾತಿಗಳು ಎಲ್ಲವನ್ನೂ ಬಿಟ್ಟು ಬರಿಯ ವಾಹನಗಳೇ ತುಂಬಿದ ಆ ಊರಿನಲ್ಲಿ ಇರಲು ಅವಳ ಮನಸ್ಸು ಸುತಾರಾಂ ಒಪ್ಪುತ್ತಿರಲಿಲ್ಲ. ಅಮ್ಮನಿಗೆ ಹೇಳಿದರೆ, “ಹಾಗಾದರೆ ಶಾಲೆಯಿನ್ನು ಸಾಕು” ಎಂದು ನಕ್ಕಿದ್ದರು. ಅಪ್ಪ ಮಾತ್ರ, “ಶಾಲೆ ಕಲಿಯಬೇಕೆಂದರೆ ಅದನ್ನೆಲ್ಲ ಸಹಿಸಬೇಕು ಪುಟ್ಟೀ” ಎಂದು ಬುದ್ದಿವಾದ ಹೇಳಿದ್ದರು. ಹೀಗೆಲ್ಲ ದ್ವಂದ್ವದಲ್ಲಿರುವಾಗಲೇ ಅಂಗನವಾಡಿಯ ಅಕ್ಕೋರು ಕೆಂಪುಬಸ್ಸಿನ ಹಾಡು ಹೇಳಿ ಅವಳ ಆತಂಕವನ್ನು ಹೆಚ್ಚಿಸುತ್ತಿದ್ದರು.
“ನಡೆದು ಹೋದರೂ ಸರಿ, ನಾನಂತೂ ಮನೆಯಿಂದಲೇ ಶಾಲೆಗೆ ಹೋಗುವವಳು” ಎಂದು ನೀಲಿಯೊಮ್ಮೆ ಅಮ್ಮನಲ್ಲಿ ಹೇಳಿದಳು. ಅದಕ್ಕೆ ಅಮ್ಮ ಹಾಗೆ ಶಾಲೆಗೆ ಹೋಗಿ ಅಪಾಯಕ್ಕೊಳಗಾದ ನೀಲಿಯ ಓರಗೆಯ ಅಕ್ಕನ ಕತೆಯನ್ನು ಹೇಳಿದಳು. ಮನೆಯಿಂದ ನಾಲ್ಕು ಮೈಲಿ ದೂರದಲ್ಲಿ ದೊಡ್ಡ ಶಾಲೆ ಪ್ರಾರಂಭವಾದಾಗ ತಾನು ಅಲ್ಲಿ ಓದಿಯೇ ಸಿದ್ಧನೆಂದು ನೀಲಿಯ ಅಕ್ಕ ಹಠಮಾಡಿ ಅಲ್ಲಿಗೆ ಸೇರಿದ್ದಳು. ನಿರ್ಜನವಾದ ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗಿ ಶಾಲೆಯನ್ನು ತಲುಪುತ್ತಿದ್ದಳು. ಸಂಜೆ ಅವಳು ಮನೆಗೆ ಬರುವವರೆಗೆ ಅವಳಮ್ಮನಿಗೆ ಜೀವವಿರುತ್ತಿರಲಿಲ್ಲ. ಹೀಗಿರುವಾಗೊಮ್ಮೆ ಮಗಳು ಬರಬೇಕಾದ ಸಮಯಕ್ಕೆ ಮನೆಗೆ ಬರದಿರಲು ಮನೆಯವರೆಲ್ಲರೂ ಅವಳನ್ನು ಹುಡುಕಿಕೊಂಡು ಹೊರಟಿದ್ದರು. ಸಂಜೆಯವರೆಗೆ ಹುಡುಕಿದರೂ ಎಲ್ಲಿಯೂ ಕಾಣದೇ ದಿಕ್ಕುಗೆಟ್ಟು ಕುಳಿತಿದ್ದರು. ಇನ್ನೇನು ಕತ್ತಲು ಆವರಿಸುವ ಹೊತ್ತಿಗೆ ಮುಳ್ಳು ಕಂಟಿಗಳಿಂದ ಮೈಯ್ಯಿಡೀ ಗಾಯ ಮಾಡಿಕೊಂಡು ಮನೆಸೇರಿದ್ದಳು. ವಿಚಾರಿಸಿದಾಗ ಸತ್ಯ ಹೊರಗೆ ಬಂದಿತ್ತು. ದಿನವೂ ಇವಳೊಬ್ಬಳೇ ಓಡಾಡುವುದನ್ನು ನೋಡಿದ್ದ ಕಾಮುಕನೊಬ್ಬ ಆ ದಿನ ಅವಳು ಮನೆಗೆ ಹಿಂದಿರುಗುವಾಗ ಅವಳನ್ನು ಅಟ್ಟಿಸಿಕೊಂಡು ಬಂದಿದ್ದ. ಇವಳು ಹೆದರಿ ರಸ್ತೆಯಿಂದ ಅಡ್ಡದಾರಿ ಹಿಡಿದು ಓಡಿದ್ದಳು. ಹಳ್ಳಿಯ ದಾರಿಯ ಅರಿವಿಲ್ಲದ ಅವನು ಸುಮಾರು ದೂರದವರೆಗೆ ಅವಳನ್ನು ಬೆನ್ನಟ್ಟಿ ಮತ್ತೆ ಸುಸ್ತಾಗಿ ಹಿಂದಿರುಗಿ ಹೋಗಿದ್ದ. ದಾರಿ ತಪ್ಪಿದ ಇವಳು ಎಲ್ಲೆಲ್ಲೋ ಸುತ್ತಿ ಅಂತೂ ಮನೆಸೇರಿದ್ದಳು. ಅದೇ ಅವಳ ಶಾಲೆಯ ಕೊನೆಯ ದಿನವಾಗಿತ್ತು. ಇದನ್ನೆಲ್ಲ ಕೇಳಿದ ನೀಲಿಗೆ ನಡೆದುಹೋಗುವುದರ ಅಪಾಯದ ಅರಿವಾಗಿತ್ತು.
ಈ ವಾರ ಅಣ್ಣ ಬಂದಾಗ ನೀಲಿ ಅಣ್ಣನಲ್ಲಿ ತನ್ನ ದುಗುಡವನ್ನು ಹೇಳಿಕೊಂಡಳು. ಅಣ್ಣ ಅವಳಿಗೆ ಸಮಾಧಾನ ಹೇಳಿದ. “ನೋಡು, ನೀನು ಮುಂದೆ ಓದುವ ಸ್ಕೂಲು ಇಲ್ಲಿಂದ ಅಷ್ಟೇನೂ ದೂರವಿಲ್ಲ. ದಿನವೂ ನಡೆದು ಹೋಗುವುದೊಂದು ಕಷ್ಟ. ಬೆಳಿಗ್ಗೆ, ಸಂಜೆ ಒಂದು ಬಸ್ ಆಯಿತೆಂದರೆ ಮನೆಯಿಂದಲೇ ಮುಂದಿನ ಶಾಲೆಗೆ ಹೋಗಬಹುದು.” ಅಣ್ಣನ ಮಾತು ಕೇಳಿ ನೀಲಿಗೆ ಅದೆಷ್ಟು ಸಂತೋಷವಾಯಿತೆಂದರೆ ಹೇಗಾದರೂ ಮಾಡಿ ಮುಂದಿನ ವರ್ಷದೊಳಗೆ ಹೊಳೆಸಾಲಿಗೊಂದು ಬಸ್ ಬರುವಂತೆ ಮಾಡಬೇಕು ಎಂದು ಕನಸು ಕಾಣತೊಡಗಿದಳು. ತನ್ನ ಆಸೆಯನ್ನು ಮೆಲ್ಲನೆ ಗೌಡಮಾಸ್ರ‍್ರ ಕಿವಿಯಲ್ಲಿ ಉಸುರಿದಳು. ಅದಕ್ಕವರು ನಕ್ಕು, “ಆಯ್ತು ಕೂಸೆ. ನೀ ಹೇಳೂದೂ ಸರಿಯಿದೆ. ನಿಮ್ಮ ಕೇರಿಯಲ್ಲೇ ಅದೆಷ್ಟು ಒಳ್ಳೇ ಓದುವವರೆಲ್ಲ ಬಸ್ಸಿಲ್ಲದ ಕಾರಣಕ್ಕೆ ದನ ಮೇಯಿಸಿಕೊಂಡು, ಸೊಪ್ಪು ಹೊತ್ತುಕೊಂಡು ಇಲ್ಲೇ ಉಳಿದಿದ್ದಾರೆ. ಈಗಂತೂ ಇಲ್ಲೇ ನಾಲ್ಕು ಮೈಲಿನಾಚೆಗೆ ದೊಡ್ಡ ಶಾಲೆ ಆಗಿದೆ. ನೋಡ್ವ, ಮುಂದಿನ ಸಲ ಮೀಟಿಂಗ್ ಕರೆದಾಗ ನಿಮ್ಮ ಹೊಳೆಸಾಲಿನ ಯುವಕ ಸಂಘದವರಿಗೆ ಈ ವಿಷಯ ತಿಳಿಸ್ತೇನೆ. ಎಂಥಾದ್ರೂ ಮಾಡ್ತಾರೆ ಅವರು.” ಎಂದು ಆಸೆ ಹುಟ್ಟಿಸಿದರು. ನೀಲಿ ಮನೆಯಿಂದಲೇ ದೊಡ್ಡ ಶಾಲೆಗೆ ಹೋಗುವ ಕನಸನ್ನು ಕಾಣತೊಡಗಿದಳು.
ನೀಲಿಯ ಕನಸು ಈಡೇರಲು ಹೆಚ್ಚು ದಿನಗಳು ಬೇಕಾಗಲಿಲ್ಲ. ತಿಂಗಳೆರಡರಲ್ಲಿಯೇ ಹೊಳೆಸಾಲಿನ ಹುಡುಗರು ತಾಲೂಕು ಕೇಂದ್ರಕ್ಕೆ ಹೋಗಿ ಧರಣಿ ಕುಳಿತು ಊರಿಗೆರಡು ಬಸ್ಸನ್ನು ಮಂಜೂರು ಮಾಡಿಸಿಕೊಂಡೇ ಬಂದರು. ಬೆಳಿಗ್ಗೆ ಮತ್ತು ಸಂಜೆ ಮಕ್ಕಳ ಶಾಲೆಯ ವೇಳೆಗೆ ಊರಿಗೆ ಬಸ್ಸು ಬರುವುದೆಂದು ಖಾತ್ರಿಯಾಯಿತು. ಒಂದು ತೊಡಕೆಂದರೆ ಹೊಳೆಸಾಲಿನ ಈಚೆಗೆ ಬರಲು ನೇರ ಸೇತುವೆ ಇಲ್ಲದಿರುವುದರಿಂದ ಬಸ್ಸು ನೀಲಿಯ ಶಾಲೆಯಂಗಳದವರೆಗೆ ಮಾತ್ರವೇ ಬರುತ್ತಿತ್ತು. ಅಲ್ಲಿಯವರೆಗೆ ದಿನವೂ ನಡೆದು ರೂಢಿಯಿರುವುದರಿಂದ ಅದೊಂದು ಕಷ್ಟವೆಂದು ಅವರ‍್ಯಾರಿಗೂ ಅನಿಸಲೇ ಇಲ್ಲ. ಮೊದಲ ದಿನ ಬಸ್ ಬರುವುದು ನಿಗದಿಯಾದಾಗ ಗೌಡಾ ಮಾಸ್ರ‍್ರು ಬಸ್ಸನ್ನು ಸ್ವಾಗತಿಸಲು ಮಕ್ಕಳನ್ನೆಲ್ಲ ಅಣಿಗೊಳಿಸಿದರು. ಮಕ್ಕಳೆಲ್ಲರೂ ಅಂದು ಸಮವಸ್ತ್ರವನ್ನು ಧರಿಸಿ ಬರುವಂತೆ ಸೂಚಿಸಿದ್ದರು. ನೀಲಿ, ಬಿಳಿ ಅಂಗಿಯಲ್ಲಿ ಬೇಗನೆ ಶಾಲೆಗೆ ಬಂದ ಮಕ್ಕಳು ಶಾಲೆಯ ಕೈತೋಟದಿಂದ ಚೆಂಡು ಹೂಗಳನ್ನು ಕೊಯ್ದು, ಅದರೊಂದಿಗೆ ಮಾವಿನ ಎಲೆಗಳನ್ನು ಸೇರಿಸಿ ಇಡಿಯ ಬಸ್ಸಿಗೆ ಕಟ್ಟುವಷ್ಟು ಉದ್ದದ ಮಾಲೆಯನ್ನು ತಯಾರಿಸಿದರು. ಜತೆಯಲ್ಲಿ ಬಸ್ಸಿನಲ್ಲಿ ಬರುವ ಕಂಡಕ್ಟರ್ ಮತ್ತು ಡ್ರೈವರ್‌ಗಳಿಗೆ ಕೊಡಲು ಎರಡು ಹೂಗುಚ್ಛಗಳನ್ನು ಮಾಡಿಟ್ಟುಕೊಂಡರು. ಬಸ್ಸಿನ ಸುತ್ತಲೂ ಅಂಟಿಸಲು ‘ಹೊಳೆಸಾಲು ಬಸ್ಸಿಗೆ ಜೈ’ ಎಂಬ ಘೋಷಣೆಗಳನ್ನು ಬರೆದಿಟ್ಟುಕೊಂಡರು.
ಬಸ್ ಬಂದೊಡನೆ ನಡೆಯುವ ಸ್ವಾಗತ ಕಾರ್ಯಕ್ರಮದಲ್ಲಿ ಬಸ್ಸಿನ ಹಾಡನ್ನು ಹೇಳಲು ಅಂಗನವಾಡಿಯ ಪುಟಾಣಿಗಳು ತಯಾರಾದರು. ಸಮಾರಂಭದಲ್ಲಿ ಮಕ್ಕಳ ಪರವಾಗಿ ಮಾತನಾಡಲು ನೀಲಿ ಮತ್ತು ಕಿಟ್ಟು ಭಾಷಣ ಬಾಯಿಪಾಠ ಮಾಡಿಕೊಂಡರು. ಇವೆಲ್ಲವೂ ಮಧ್ಯಾಹ್ನದ ಊಟದ ಮೊದಲೇ ಮುಗಿದು, ಇನ್ನೇನು ಮಾಡಬೇಕೆಂದು ಪದೇ ಪದೇ ಗೌಡಮಾಸ್ರ‍್ರಲ್ಲಿಗೆ ಹೋಗಿ ಕೇಳತೊಡಗಿದರು. ಇವರ ಉತ್ಸಾಹವನ್ನು ನೋಡಿದ ಮಾಸ್ರ‍್ರು ಎಲ್ಲರನ್ನೂ ಆಟದ ಮೈದಾನದಲ್ಲಿ ಸೇರಿಸಿ ಬಸ್ಸಿನ ಆಟ ಆಡಿಸಿದರು. ಕಂಡಕ್ಟರ್ ಆದ ಮಂಜ ಟಿಕೇಟ್, ಟಿಕೇಟ್ ಎಂದು ಕೇಳುವ ಗತ್ತನ್ನು ನೋಡಿ ನಗು ತಡೆಯಲಾರದೇ ಗಹಗಹಿಸಿದರು. ನೀರು ತುಂಬುವ ಲೋಹದ ಬಕೆಟ್ಟನ್ನೇ ಸೀಟನ್ನಾಗಿ ಮಾಡಿಕೊಂಡು ಕುಳಿತ ಡ್ರೈವರ್ ಸುರೇಶ ಡುರ್ ಎಂದು ಕೆನ್ನೆಯುಬ್ಬಿಸಿ ಬಸ್ಸಿನ ಸದ್ದು ಮಾಡುತ್ತ ಬಸ್ಸನ್ನು ಮುನ್ನಡೆಸುತ್ತಿದ್ದ. ಅವನ ಹತ್ತಿರ ಬಂದವರಿಗೆಲ್ಲ ಎಂಜಲಿನ ಸ್ನಾನ ಮಾಡಿಸಿ ಪುನೀತನಾಗುತ್ತಿದ್ದ. ಉಳಿದ ಮಕ್ಕಳೆಲ್ಲರೂ ಬಸ್ ಹತ್ತಿಳಿಯುವ ಪ್ರಯಾಣಿಕರಂತೆ ಪಾತ್ರವಹಿಸಿ ಮೋಜು ಮಾಡತೊಡಗಿದರು. ದುಡ್ಡು, ಟಿಕೇಟು ಎಂದೆಲ್ಲ ಗಿಡಗಳ ಎಲೆಯನ್ನೇ ಕೊಯ್ದು ವ್ಯವಹಾರ ಶುರುವಿಟ್ಟುಕೊಂಡರು. ಇವರನ್ನು ಹೀಗೆಯೇ ಬಿಟ್ಟರೆ ತೋಟದ ಗಿಡಗಳಲ್ಲಿ ಒಂದೂ ಎಲೆ ಉಳಿಯದು ಎಂದು ಅರಿವಾದ ಮಾಸ್ರ‍್ರು ಎಲ್ಲರನ್ನು ಬಲವಂತವಾಗಿ ಕರೆದು ಶಾಲೆಯೊಳಗೆ ತುರುಕಿಬಿಟ್ಟರು.
ಒಳಗೆ ಕುಳಿತ ಮಕ್ಕಳ ಕಿವಿಗಳೆರಡೂ ಬಸ್ಸಿನ ಸದ್ದಿಗಾಗಿ ಕಾಯತೊಡಗಿದವು. ಅವರು ಬಸ್ಸನ್ನು ನೋಡಲು ಎಷ್ಟೊಂದು ಉತ್ಸುಕರಾಗಿದ್ದರೆಂದರೆ ಗಾಳಿಯಾಡಿದ ಸದ್ದು ಕೂಡ ಅವರಿಗೆ ಬಸ್ಸಿನ ಸದ್ದಿನಂತೆಯೇ ಕೇಳುತ್ತಿತ್ತು. ಅಗಾ, ಬಂತು ಎಂದು ಒಬ್ಬನೆಂದರೆ, ಹೌದು, ಹೌದು ಎಂದು ಇನ್ನೊಬ್ಬಳು ಅನುಮೋದಿಸುತ್ತಿದ್ದಳು. ಕೊನೆಗೂ ಅವರೆಲ್ಲರೂ ಕಾಯುತ್ತಿದ್ದ ಕೆಂಪು ಬಸ್ಸು ಶಾಲೆಯಂಗಳದೊಳಗೆ ಬಂದೇಬಿಟ್ಟಿತು. ಮಾಸ್ರ‍್ರ ಅನುಮತಿಗೂ ಕಾಯದೇ ಮಕ್ಕಳೆಲ್ಲರೂ ಹೊರಗೋಡಿಬಿಟ್ಟರು. ಬಸ್ಸಿನ ಸುತ್ತಲೂ ಕುಣಿಯುತ್ತಾ ಅಂಗನವಾಡಿಯ ಮಕ್ಕಳೊಂದಿಗೆ ಸೇರಿ ಬಸ್ಸಿನ ಹಾಡನ್ನು ಹಾಡತೊಡಗಿದರು. ಬಸ್ಸಿನ ಸುತ್ತಲೂ ತಾವು ಕಟ್ಟಿದ ಹಾರವನ್ನು ಕಟ್ಟಿ ಸಂಭ್ರಮಿಸಿದರು. ಹೂಗುಚ್ಛವನ್ನು ನೀಡಿ ಕಂಡಕ್ಟರ್ ಮತ್ತು ಡ್ರೈವರನ್ನು ಬರಮಾಡಿಕೊಂಡರು. ಮಕ್ಕಳ ಸಂಭ್ರಮವನ್ನು ಕಂಡ ದೊಡ್ಡವರ ಕಣ್ಣುಗಳು ಹನಿಗೂಡಿದವು. ಮುಂದೆ ನಡೆದ ಸಮಾರಂಭದಲ್ಲಿ ನೀಲಿ ಮತ್ತು ಮಂಜ ಬಸ್ಸು ಬಂದ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡರು. ಇದೇ ಬಸ್ಸಿನಲ್ಲಿಯೇ ಹೋಗಿ ಶಾಲೆ ಕಲಿತು ಊರಿಗೆ ಒಳ್ಳೆಯ ಹೆಸರು ತರುವುದಾಗಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಂಡಕ್ಟರ ಸೋಮಣ್ಣ ಶಾಲೆಯ ಮಕ್ಕಳು ಬಸ್ ಪಾಸ್ ಮಾಡಿಸಿಕೊಂಡು ವರ್ಷವಿಡೀ ಬಸ್ಸಿನಲ್ಲಿ ಓಡಾಡಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು. ಮಕ್ಕಳನ್ನು ಖುಶಿಪಡಿಸಲೆಂದು ಬಸ್ಸಿನಲ್ಲಿ ಅವರನ್ನೆಲ್ಲ ಕೂರಿಸಿ ಒಂದಷ್ಟು ದೂರ ಕರೆದೊಯ್ದು ವಾಪಸ್ ತಂದು ಬಿಡಲಾಯಿತು. ಅಂದು ಮಲಗಿದ ಮಕ್ಕಳೆಲ್ಲರೂ ಕನಸಿನಲ್ಲಿ ಕೆಂಪು ಬಸ್ಸನ್ನೇರಿದ್ದರು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಆ ಶಾಲೆ, ಅಂಗನವಾಡಿ, ಪುಟ್ಟ ಮಕ್ಕಳು, ಮೇಷ್ಟ್ರು, ಬಸ್ಸು, ಬಸ್ಸು ಬಂದ ದಿನದ ಸಂಭ್ರಮ … ಕಣ್ಣ ಮುಂದೆ ಇವೆಲ್ಲ ಒಂದು ಕಿರುಚಿತ್ರದಂತೆ ಬಿಡಿಸಿಕೊಂಡಿತು … ನೀಲಿಯ ಮುಂದೆ ಓದುವ ಆಸೆ ಕೊನೆಗೂ ಈಡೇರಿತು … ಖುಷಿಯಾಯಿತು ಓದಿ … 😀👏💖
ಧನ್ಯವಾದಗಳು ಸರ್
ಬಾಲ್ಯದ ನೆನಪುಗಳು ನುಗ್ಗಿ ಬಂದವು. 👌🏻