ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ‍್ರ ಅಣತಿಯಂತೆ ಹೊಳೆಸಾಲಿನ ಲೈನ್‌ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ. ಸಂಜೆಯಿಳಿಯುತ್ತಿದ್ದಂತೆ ಹೊಳೆಸಾಲಿನ ಶಾಲೆಯಲ್ಲಿ ಗ್ಯಾದರಿಂಗಿನ ರಂಗು ಹರಡತೊಡಗಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೇಳನೆಯ ಕಂತು ನಿಮ್ಮ ಓದಿಗೆ

ಹೊಳೆಸಾಲಿಗೆ ಬಸ್ ತಂದ ಯುವಕ ಸಂಘ ಇದೀಗ ಮತ್ತೇನನ್ನಾದರೂ ಮಾಡುವ ಹುಮ್ಮಸ್ಸಿನಲ್ಲಿತ್ತು. ಬಸ್ಸನ್ನು ಸ್ವಾಗತಿಸಲು ಶಾಲೆ ಮತ್ತು ಅಂಗನವಾಡಿಯ ಮಕ್ಕಳು ತೋರಿಸುವ ಉತ್ಸಾಹ ಅವರಲ್ಲಿ ಶಾಲೆಯ ಬಗ್ಗೆ ವಿಶೇಷ ಆಸ್ಥೆಯನ್ನು ಮೂಡಿಸಿದ್ದವು. ದಿನವೂ ಬಸ್ ಹತ್ತಲೆಂದು ಶಾಲೆಯ ಅಂಗಳಕ್ಕೆ ಬರುವ ಊರಿನವರಿಗೂ ಶಾಲೆಯ ಮಕ್ಕಳ ಆಟ, ಪಾಟಗಳ ನೋಟ ಸಿಗತೊಡಗಿತು. ಅವರ ಹಾಡು, ಆಟ, ನೃತ್ಯ, ಗೌಜಿ, ಗಲಾಟೆಯೆಲ್ಲವೂ ಊರಿನವರ ಕಿವಿದುಂಬತೊಡಗಿತು. ಇಂತಿಪ್ಪ ಸಮಯದಲ್ಲಿಯೇ ಯುವಕ ಸಂಘದ ಹುಡುಗರು ಧೈರ್ಯ ಮಾಡಿ ಗೌಡಾ ಮಾಸ್ತರಲ್ಲಿಗೆ ಬಂದು, “ಈ ಸಲ ಶಾಲೆಯಲ್ಲಿ ಎಂಥಾರೂ ಮಾಡ್ವನಾ ಅಂತ?” ಎಂದು ಪೀಠಿಕೆ ಹಾಕಿದರು. ಹಾಜರಿ ಬರೆಯುತ್ತಿದ್ದ ಗೌಡಾ ಮಾಸ್ರ‍್ರು ತಲೆಯೆತ್ತಿ ನೋಡಿ, “ಏನಾದರೂ ಮಾಡಿ, ಆದ್ರೆ ಕಳೆದ ವರ್ಷ ಮಾಡಿದ್ರಲ್ಲ, ನಿಮ್ಮ ಗದ್ದೆ ಬಯಲಲ್ಲಿ. ಮಾರಾಮಾರಿ ಜಗಳ. ಅದನ್ನೊಂದು ಮಾಡಬೇಡಿ ಆಯ್ತಾ?” ಎಂದವರೆ ಆ ಕೇಸಿನ ಬಗ್ಗೆ ವಿಚಾರಿಸತೊಡಗಿದರು.

ಗದ್ದೆಯ ನೀರಿಗಾಗಿ ನಡೆದ ಜಗಳದಲ್ಲಿ ಒಂದು ಜೀವ ಹೋಗಿ ಕೊಂದ ಪಾಳಯದ ಹತ್ತಾರು ಜನರು ಜೈಲು ಪಾಲಾಗಿದ್ದರು. ತಿಂಗಳು ಕಳೆಯುವಾಗ ಒಂದಿಷ್ಟು ಜನರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ ಮುಖ್ಯ ಆರೋಪಿಗಳೆಂದು ಪರಿಗಣಿತರಾದ ಇಬ್ಬರು ಜೈಲಿನಲ್ಲಿಯೇ ಇದ್ದರು. ತಿಂಗಳು, ತಿಂಗಳು ಕೋರ್ಟಿಗೆ ಅಲೆದಾಟ, ವಕೀಲರು ಕೇಳುವ ಕಾಗದಪತ್ರಗಳ ತಡಕಾಟ, ಅವರ ಫೀಸಿಗೆಂದು ಹಣ ಹೊಂದಿಸುವ ತಾಕಲಾಟ ಎಲ್ಲದರ ನಡುವೆ ಎರಡೂ ಪಾರ್ಟಿಯವರಿಗೂ ಸಾಕಾಗಿಹೋಗಿತ್ತು. ಕೊನೆಗೊಮ್ಮೆ ಇವರ ಲಘುಬಿಗು ನೋಡೋಣವೆಂದು ಕೊಲೆಯಾದವನ ವಕೀಲರೇ ವಿಷಯವನ್ನು ಪ್ರಸ್ತಾಪಿಸಿದ್ದರು, “ಇದು ಸಧ್ಯಕ್ಕೆ ಮುಗಿಯುವ ಹಾಗೆ ಕಾಣೋದಿಲ್ಲ. ಇಬ್ಬರೂ ಕುಳಿತು ರಾಜೀ ಮಾಡಿಕೊಳ್ಳೋಣವೆ?” ಅದಕ್ಕೆ ಮುನಿಸಿಕೊಂಡ ಕೊಲೆಯಾದವನ ತಮ್ಮ, “ಮಾಡಿಕೊಳ್ಳಬಹುದು ವಕೀಲರೇ. ಮುಂದಿನ ತಿಂಗಳೇ ಸತ್ತುಹೋದ ನನ್ನ ಅಣ್ಣನ ಮಗಳ ಮದುವೆಯಿದೆ. ಅದಕ್ಕೆ ಧಾರೆನೀರು ಬಿಡುವುದು ಅಂತಿರಲಿ, ಮದುವೆ ನೋಡಲು ಮನೆಯೆದುರಿನ ತೆಂಗಿನ ಮರದ ಮೇಲೆ ತಂದು ಕೂರಿಸ್ತೀರಿ ಅಂತಾದರೆ ರಾಜಿ ಮಾಡಿಕೊಳ್ಳಬಹುದು.” ಎಂದು ವ್ಯಂಗ್ಯವಾಡಿದ್ದ. ಇವನ ಮಾತಿನಿಂದ ಬೇಸತ್ತ ವಕೀಲರು ಮುಂದಿನ ವಿಚಾರಣೆಗೆ ತಗಲುವ ವೆಚ್ಚವನ್ನು ಮುಂಚಿತವಾಗಿ ಮುಟ್ಟಿಸುವಂತೆ ತಾಕೀತು ಮಾಡಿದರು. ಇವೆಲ್ಲವನ್ನೂ ಬಂದು ಚಂದ್ರುವಿನ ಹೆಂಡತಿಗೆ ಹೇಳಿದಾಗ ಅವಳು ಅರೆಕ್ಷಣ ಮೌನವಾಗಿದ್ದಳು. ಮರುದಿನ ತನಗೆ ಅಳಿಯನಾಗುವವನನ್ನು ಕರೆದುಕೊಂಡು ಹೋಗಿ ವಕೀಲರಲ್ಲಿ ಅದೇನನ್ನೋ ಮಾತನಾಡಿ ಬಂದಿದ್ದಳು. ತಿಂಗಳಾಗುವುದರೊಳಗೆ ಆರೋಪಿಗಳೆಲ್ಲ ಬಿಡುಗಡೆಯಾಗಿ ಮನೆಗೆ ಬಂದಿದ್ದರು. ಚಂದ್ರುವಿನ ಮಗಳ ಮದುವೆಯೂ ಅದ್ಧೂರಿಯಾಗಿಯೇ ನಡೆದಿತ್ತು. ಗಂಡನ ಕೊಂದವರೊಂದಿಗೆ ರಾಜಿ ಮಾಡಿಕೊಂಡಳೆಂದು ಊರಿನ ಜನರೆಲ್ಲ ಒಳಗೊಳಗೇ ಅವಳನ್ನು ದೂರುತ್ತಿದ್ದ ವಿಷಯವನ್ನು ಯುವಕ ಸಂಘದವರು ಹೆದರುತ್ತಾ ಮಾಸ್ರ‍್ರಿಗೆ ವರದಿ ಒಪ್ಪಿಸಿದರು. ಮಾಸ್ರ‍್ರು ಅರೆಕ್ಷಣ ಯೋಚಿಸಿ, “ಭೂತದಲ್ಲಿ ಕಳೆದುಹೋಗಬಾರದು, ಕಹಿಯನ್ನು ತುಂಬಾ ಹೊತ್ತು ಬಾಯಲ್ಲಿಡಬಾರದು. ಆ ಹೆಣ್ಣು ಮಗಳು ಅವಳಿಗೆ ಏನು ಸರಿಯೋ ಅದನ್ನು ಮಾಡಿದ್ದಾಳೆ. ದ್ವೇಷದ ಫಲ ಯಾವಾಗಲೂ ಕಹಿಯೆ” ಎಂದು ಜೀವನಪಾಠವನ್ನು ಬೋಧಿಸಿದರು.

ಮಾಸ್ರ‍್ರು ವಿಚಾರಣೆ ಮುಗಿಸಿ ಏನಾದರೂ ಮಾತನಾಡುತ್ತಾರೆಂದು ಕಾದರೆ ಮತ್ತೊಂದು ರಿಜಿಸ್ಟರ್ ತೆಗೆದುಕೊಂಡು ಬರೆಯತೊಡಗಿದರು. ಮೌನ ಎಲ್ಲರ ಉಸಿರುಗಟ್ಟಿಸತೊಡಗಿದಾಗ ಹುಡುಗರೇ ಮಾತು ಮುಂದುವರೆಸಿದರು. “ಅದೇ, ಎಲ್ಲ ಊರಿನ ಶಾಲೆಯಲ್ಲೂ ಪ್ರತಿವರ್ಷ ಗ್ಯಾದರಿಂಗ್ ಮಾಡ್ತಾರೆ. ನಮ್ಮ ಮಕ್ಕಳೂ ಈ ಸಲ ಮಾಡಿದ್ರೆ…..” ಮಾಸ್ರ‍್ರು ರಿಜಿಸ್ಟರ್ ಬದಿಗೆ ಸರಿಸಿ ಹೇಳಿದರು, “ಎಷ್ಟು ಮಕ್ಕಳಿದ್ದಾರೆ ನಮ್ಮ ಶಾಲೆಯಲ್ಲಿ? ಒಟ್ಟು ಮೂವತ್ತೆಂಟು ಮಕ್ಕಳು. ಅದರಲ್ಲಿ ಸರಿಯಾಗಿ ಶಾಲೆಗೆ ಬರುವವರು ಇಪ್ಪತ್ತೆಂಟು ಮಾತ್ರ. ಅಂಗನವಾಡಿಯಲ್ಲೊಂದು ಹನ್ನೆರಡು ಮಕ್ಕಳಿದ್ದಾರೆ. ಎಷ್ಟೊತ್ತು ಡ್ಯಾನ್ಸ್ ಮಾಡಬಹುದು? ಹೆಚ್ಚೆಂದರೆ ಎರಡು ತಾಸು ಅಷ್ಟೆ. ಗ್ಯಾದರಿಂಗ್ ಅಂದರೆ ಸುಮ್ಮನೆ ಅಲ್ಲ, ಸಂಜೆ ಶುರುವಾಗುವ ಕಾರ್ಯಕ್ರಮ ಬೆಳಗಿನವರೆಗೂ ನಡೆಯಬೇಕು. ಅದಕ್ಕೆ ಏನು ಪ್ಲ್ಯಾನ್ ಮಾಡಿದ್ದೀರಿ?” ಮಾಸ್ರ‍್ರ ನೇರದೃಷ್ಟಿಯನ್ನು ಎದುರಿಸಲಾಗದ ಹುಡುಗರು ತಲೆ ತಗ್ಗಿಸಿದರು. ಅವರ ಉತ್ಸಾಹಕ್ಕೆ ಭಂಗ ತರಲು ಮನಸ್ಸಾಗದೇ ಮತ್ತೆ ಅವರೇ ಮುಂದುವರೆಸಿದರು, “ನಿಮ್ಮ ವಿಚಾರವೇನೋ ಒಳ್ಳೆಯದೆ. ಆದರೆ ಅದಕ್ಕೆ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಮೊದಲು ಶಾಲೆಯ ಮಕ್ಕಳ ಕಾರ್ಯಕ್ರಮ ಮಾಡಬೇಕು. ಅದಾದ ಮೇಲೆ ನಮ್ಮ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಅಲ್ಲೊಂದು ತಾಸು ಕಳೆಯುತ್ತದೆ. ನಂತರ ನೀವು ಯುವಕ ಸಂಘದವರು ಸೇರಿ ಒಂದೆರಡು ಒಳ್ಳೆಯ ಸಾಮಾಜಿಕ ನಾಟಕಗಳನ್ನು ಕಲಿತು ಪ್ರದರ್ಶಿಸಬೇಕು. ನಂತರ ಊರಿನಲ್ಲಿರುವ ಯಕ್ಷಗಾನ ಪ್ರೇಮಿಗಳೆಲ್ಲ ಸೇರಿ ಒಂದು ಆಟ ಮಾಡಿದರೆ ಸುಮಾರಿಗೆ ಬೆಳಗಾದೀತು. ಹೇಗೂ ಊರಿನ ಸದಾನಂದ ಹೆಗಡೆ ಮತ್ತು ಗಣಪಯ್ಯನವರು ಯಕ್ಷಗಾನದ ಗಟ್ಟಿ ಕುಳಗಳು. ಈಗ ಮೇಳ ಬಿಟ್ಟು ಮನೆಯಲ್ಲಿಯೇ ಇದ್ದಾರೆ. ಅವರಿಗೊಂದು ಮಾತು ಹೇಳಿದರೆ ಹುಡುಗರಿಗೊಂದು ಪ್ರಸಂಗವನ್ನು ಕಲಿಸುತ್ತಾರೆ. ಮತ್ತೆ ಇದಕ್ಕೆಲ್ಲ ಖರ್ಚೆಷ್ಟಾದೀತೆಂದು ಅಂದಾಜು ಇದೆಯಲ್ಲ. ಅದನ್ನು ಊರಿನವರಿಂದ ವರ್ಗಿಣಿ ಹಾಕಿ ಹೊಂದಿಸಬೇಕು. ಹೇಳಿ, ಇದೆಲ್ಲಾ ಸಾಧ್ಯವಾ ನಿಮ್ಮಿಂದ? ಸಾಧ್ಯ ಅಂತಾದ್ರೆ ಮತ್ತೆ ಮುಂದಿನದನ್ನು ನೋಡೋಣ.” ಗೌಡಾ ಮಾಸ್ರ‍್ರು ತಮ್ಮನ್ನು ಜವಾಬ್ದಾರಿಯುಳ್ಳ ಜನಗಳು ಎಂದು ಪರಿಗಣಿಸಿದ್ದೇ ಆ ಹುಡುಗರಿಗೆ ಹೆಮ್ಮೆಯೆನಿಸಿ ಹಿಂದೆ, ಮುಂದೆ ನೋಡದೇ ಒಪ್ಪಿಕೊಂಡುಬಿಟ್ಟರು.

ಮರುದಿನದಿಂದಲೇ ಎಲ್ಲಿ ನೋಡಿದರಲ್ಲಿ ಇಡಿಯ ಹೊಳೆಸಾಲಿನವರ ಬಾಯಲ್ಲಿ ಬರಿಯ ಗ್ಯಾದರಿಂಗಿನದೇ ಸುದ್ದಿ. “ಈ ಸಲ ನಮ್ಮ ಸಾಲೀಲಿ ಗ್ಯಾದರಿಂಗ್ ಅದೆಯಂತಲೆ, ಅದಕ್ಕೆ ಬಂದುಬಿಡಿ” ಎಂದು ಕಂಡಕಂಡವರನ್ನೆಲ್ಲ ಕರೆಯಲು ಶುರುಮಾಡಿಯೇಬಿಟ್ಟರು. ಇತ್ತ ಶಾಲೆಯಲ್ಲಿ ಮಕ್ಕಳನ್ನು ತಂಡಗಳಾಗಿ ಮಾಡಿ ನೃತ್ಯ ಕಲಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಪುಸ್ತಕ, ಪಟ್ಟಿಗಳೆಲ್ಲ ಬದಿಗೆ ಸರಿದು ಬರಿಯ ಹಾಡು, ಕುಣಿತಗಳೇ ತುಂಬಿಕೊಳ್ಳತೊಡಗಿದವು. ಶಾಲೆಯೆಂದರೆ ದೂರ ಓಡುತ್ತಿದ್ದ ಮಕ್ಕಳೂ ನಿಧಾನವಾಗಿ ಶಾಲೆಯೆಡೆಗೆ ಬರತೊಡಗಿದರು. ಪಕ್ಕದಲ್ಲಿರುವ ಅಂಗನವಾಡಿ ಅಕ್ಕೋರು ತಮ್ಮ ಮಕ್ಕಳಿಗಲ್ಲದೇ ಶಾಲೆಯ ಮಕ್ಕಳಿಗೂ ನೃತ್ಯ ಕಲಿಸುವ ಹೊಣೆಹೊತ್ತರು. ಕುಣಿಯಲು ಅನುಕೂಲವಾಗಲೆಂದು ಮರುದಿನದಿಂದಲೇ ಅದೆಂಥದ್ದೋ ಚೂಡಿದಾರವೆಂಬ ಹೊಸ ಉಡುಗೆಯನ್ನು ತೊಟ್ಟು ಬರತೊಡಗಿದರು. ಕಾರ್ಯಕ್ರಮದ ಮೊದಲಿಗೊಂದು ಪ್ರಾರ್ಥನಾ ನೃತ್ಯ, ಅದನ್ನು ದೀಪ ಹಿಡಿದು ಮಾಡಬೇಕೆಂದು ಗೌಡಾ ಮಾಸ್ರ‍್ರು ಸಲಹೆ ನೀಡಿದರು. ಮತ್ತೆ ಒಂದು ಕೋಲಾಟ, ಇನ್ನೊಂದು ಗುಂಪುನೃತ್ಯ, ಮತ್ತೊಂದು ಜಾನಪದ ನೃತ್ಯವನ್ನು ಶಾಲೆಯ ವತಿಯಿಂದ ಕಲಿಸುವುದೆಂದು ನಿರ್ಧಾರವಾಯಿತು. ಗೌಡಾ ಮಾಸ್ರ‍್ರು ತಾವೇ ಸ್ವತಃ ನಿಂತು ಒಂದು ಲೇಝಿಮ್ ಡ್ಯಾನ್ಸ್ ಮತ್ತು ಪಿರಾಮಿಡ್ ಡ್ಯಾನ್ಸನ್ನು ಹುಡುಗರಿಗೆ ಕಲಿಸತೊಡಗಿದರು. ಇದರೊಂದಿಗೆ ಯಾರು ಬೇಕಾದರೂ ಮನೆಯಿಂದ ಡ್ಯಾನ್ಸ್ ಕಲಿತುಕೊಂಡು ಬಂದು ಮಾಡಬಹುದೆಂದು ತಿಳಿಸಲಾಯಿತು.

ಶಾಲೆಯಲ್ಲಿ ಗ್ಯಾದರಿಂಗ್ ಇದೆಯಂತೆ ಎಂದು ತಿಳಿದಿದ್ದೇ ಅಲ್ಲೆಲ್ಲೋ ಮದುವೆಯಾಗಿ ದೂರದೂರಿನಲ್ಲಿ ನೆಲೆಸಿದವರೆಲ್ಲ ಅದೇ ಸಮಯಕ್ಕೆ ಹೊಳೆಸಾಲಿಗೆ ಬರುವ ತಯಾರಿಯನ್ನು ಮಾಡಿಕೊಂಡರು. ದೂರದ ಪೇಟೆಯ ಫಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳಿಗೆ ತಾವೂ ಒಂದು ಡ್ಯಾನ್ಸ್‌ ಮಾಡಿದರೆ ಆಗಬಹುದೇನೋ ಎಂದು ಅನಿಸತೊಡಗಿತು. ಕೆಲಸ ಮಾಡುತ್ತಿರುವಾಗಲೇ ತಾವು ಶಾಲೆಯಲ್ಲಿರುವಾಗ ಮಾಡಿದ ಡ್ಯಾನ್ಸಿನ ಹಾಡನ್ನು ಗುನುಗತೊಡಗಿದರು. ಇವೆಲ್ಲದರ ನಡುವೆ ಗೌಡಾ ಮಾಸ್ರ‍್ರು ಗ್ಯಾದರಿಂಗ್ ಎಂದರೆ ಬರಿಯ ಡ್ಯಾನ್ಸ್‌ ಆಗಬಾರದೆಂಬ ಕಾಳಜಿಯಿಂದ ಒಂದೆರಡು ನಾಟಕವನ್ನು ಕಲಿಸುವ ತಯಾರಿಯನ್ನು ಮಾಡತೊಡಗಿದರು. ಒಂದು, ಎರಡನೆಯ ತರಗತಿಯವರಿಗೆಂದು ಬೆಕ್ಕಿನ ಜಾಣತನ ನಾಟಕವನ್ನು ಮತ್ತು ದೊಡ್ಡ ತರಗತಿಯವರಿಗೆ ವೀರರಾಣಿ ಚೆನ್ನಮ್ಮ ನಾಟಕವನ್ನು ಕಲಿಸುವುದೆಂದು ತೀರ್ಮಾನಿಸಿದರು. ಮಕ್ಕಳಿಗೆ ನಾಟಕದ ಪಾತ್ರಗಳನ್ನು ಹಂಚಿ, ನಾಟಕದ ಪುಸ್ತಕದಿಂದ ಅವರವರ ಸಂಭಾಷಣೆಗಳನ್ನು ಬರೆದುಕೊಳ್ಳುವಂತೆ ತಿಳಿಸಿದರು. ಐತಿಹಾಸಿಕ ನಾಟಕವಾದ್ದರಿಂದ ಪಾತ್ರಗಳಿಗೆ ದೊಡ್ಡವರ ನಾಟಕದ ಪರಿಕರಗಳನ್ನೇ ಉಪಯೋಗಿಸಿಕೊಳ್ಳುವ ಯೋಜನೆ ಮಾಡಿದರು. ಪುಟ್ಟ ಮಕ್ಕಳಿಗೆ ಮಾತ್ರ ನಿಜವಾದ ಇಲಿ ಮತ್ತು ಬೆಕ್ಕಿನ ವೇಷಗಳನ್ನೇ ಸಿದ್ಧಪಡಿಸಬೇಕೆಂದು ಅದನ್ನು ಹೊಲಿಯುವವರ ತಪಾಸಣೆಯಲ್ಲಿ ತೊಡಗಿದರು. ಆರು ಇಲಿಗಳಿಗೆ ಇಲಿಯ ಮೈಬಣ್ಣ ಹೋಲುವ ಕಂದು ಬಣ್ಣದ ಬಟ್ಟೆಯನ್ನು ತಂದು ಇಲಿಯ ಹೊರಕವಚವನ್ನು ಹೊಲಿಯಲು ಕಾಗದದ ಮೇಲೆ ಸ್ಕೆಚ್ ಹಾಕಿ ಹೊಳೆಸಾಲಿನಲ್ಲೆಲ್ಲ ಪ್ರಸಿದ್ಧ ಟೇಲರ್ ಎಂದು ಹೆಸರಾದ ವಾಸುವಿಗೆ ನೀಡಿದರು. ಬೆಕ್ಕಿಗೆ ಫೋಮ್ ಬಟ್ಟೆಯನ್ನು ತಂದು ಥೇಟ್ ಬೆಕ್ಕಿನಂತೆಯೇ ಕಾಣುವ ದಿರಿಸನ್ನು ಹೊಲಿಸಿದರು. ಮುಖವೆಲ್ಲ ಮುಚ್ಚಿಹೋಗುವ ಈ ಡ್ರೆಸ್ ಹಾಕಿದ ನಂತರ ಮಾತನಾಡಲು ಸಾಧ್ಯವಿಲ್ಲದಿದ್ದರಿಂದ ಇಡಿಯ ನಾಟಕವನ್ನು ಹಾಡಿನ ರೂಪಕ್ಕೆ ಬದಲಾಯಿಸಿ ಅದನ್ನು ಪೇಟೆಯ ಸ್ಟುಡಿಯೋಗೆ ಹೋಗಿ ರೆಕಾರ್ಡ್‌ ಮಾಡಿಸಿ ತಂದರು. ಅದನ್ನು ಟೇಪರಿಕಾರ್ಡರಿನಲ್ಲಿ ಕೇಳಿಸಿದಾಗ ಮಕ್ಕಳೆಲ್ಲರೂ ಗ್ಯಾದರಿಂಗ್ ಬಂದೇಬಿಟ್ಟಿತೆಂಬಂತೆ ಸಂಭ್ರಮಿಸಿದರು. ರಾಣಿ ಚೆನ್ನಮ್ಮನ ಪಾತ್ರವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತ ನೀಲಿಯ ನಡಿಗೆಯಲ್ಲಿ ಅವಳಿಗರಿವಿಲ್ಲದಂತೆ ರಾಣಿಯ ಗಾಂಭೀರ್ಯ ತುಂಬಿತುಳುಕತೊಡಗಿತು.

ಮಾಸ್ತರರೆದುರು ದೊಡ್ಡ ಜನಗಳಂತೆ ಮಾತನಾಡಿದ ಹುಡುಗರಿಗೆ ಎಲ್ಲವನ್ನೂ ನಿಭಾಯಿಸುವ ಕಷ್ಟ ನಿಧಾನವಾಗಿ ಅರಿವಿಗೆ ಬರಲಾರಂಭಿಸಿತು. ಯುವಕ ಮಂಡಲದ ಎಲ್ಲ ಸದಸ್ಯರನ್ನು ಸೇರಿಸಿ ಒಂದೂವರೆ ಗಂಟೆಯ ಎರಡು ನಾಟಕಗಳನ್ನು ಮಾಡುವುದೆಂದು ತೀರ್ಮಾನವಾಯಿತಾದರೂ ಯಾವ ನಾಟಕ ಮಾಡುವುದೆಂದು ನಿರ್ಧಾರ ಮಾಡಲು ವಾರವುರುಳಿದರೂ ಸಾಧ್ಯವಾಗಲಿಲ್ಲ. ಅವರಿಗೆ ರುಚಿಸಿದ್ದು ಇವರಿಗೆ ರುಚಿಸದೇ ಅವರವರಲ್ಲಿಯೇ ತಕರಾರುಗಳೆದ್ದು ನಾಟಕವೇ ನಡೆಯುವುದಿಲ್ಲವೇನೋ ಎಂಬಲ್ಲಿಗೆ ಬಂದುಮುಟ್ಟಿತು. ಸಂಧಾನಕ್ಕೆಂದು ಮತ್ತೆ ಮಾಸ್ರ‍್ರಲ್ಲಿಗೆ ಹೋದಾಗ ಅವರು ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಈ ರೀತಿಯಾದರೆ ನಾಟಕವಾಗಲು ಸಾಧ್ಯವಿಲ್ಲವೆಂದು ಅರಿತು, ಅವರಿಗೆ ಪರಿಚಿತರಿರುವ ನಾಟಕದ ಮೇಸ್ಟ್ರ ವಿಳಾಸವನ್ನು ನೀಡಿ ಅವರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ನಾಟಕದ ಮೇಸ್ಟ್ರನ್ನು ಭೇಟಿಯಾದ ಹುಡುಗರು ಅವರ ಮಾತುಗಳಿಂದ ಉತ್ಸಾಹಿತರಾಗಿ ಮನೆಗೆ ಮರಳಿದರು. ಅವರ ಸಲಹೆಯಂತೆ ಒಂದು ಹಾಸ್ಯ ನಾಟಕ ಹಾಗೂ ಇನ್ನೊಂದು ಸಾಮಾಜಿಕ ನಾಟಕವನ್ನು ಮಾಡುವುದಾಗಿ ತೀರ್ಮಾನವಾಯಿತು. ನಾಟಕ ಯಾವುದೆಂಬ ಆಯ್ಕೆಯನ್ನು ಅವರಿಗೇ ಬಿಡಲಾಯಿತು. ಗ್ಯಾದರಿಂಗಿಗೆ ತಿಂಗಳಿರುವಾಗ ಬಂದು ಹೊಳೆಸಾಲಿನಲ್ಲಿಯೇ ಉಳಿದು ನಾಟಕವನ್ನು ನಿರ್ದೇಶಿಸಿ ಕೊಡುವುದಾಗಿ ಹೇಳಿದ ಮೇಸ್ಟ್ರು ಹುಡುಗರಿಂದ ವೀಳ್ಯವನ್ನು ಪಡೆದುಕೊಂಡರು. ಎಲ್ಲವೂ ಸುಸೂತ್ರವಾಗಿದೆ ಅಂದುಕೊಂಡಾಗಲೇ ನಾಟಕಕ್ಕೆ ಸ್ತ್ರೀ ಪಾತ್ರಗಳನ್ನು ಮಾಡುವರ‍್ಯಾರು ಎಂಬ ಪ್ರಶ್ನೆಯು ಧುತ್ತನೆ ಎದುರಾಯಿತು. ಹುಡುಗರು ನಾಟಕದಲ್ಲಿ ನಟಿಸುವ ಹುಡುಗಿಯರನ್ನು ಅರಸಿ ಇಡಿಯ ಹೊಳೆಸಾಲು ಸುತ್ತಿದರೂ ಒಂದು ಮೀನೂ ಬಲೆಗೆ ಬೀಳಲಿಲ್ಲ. ಮೊದಲೆಲ್ಲ ಚಂದ ಕತೆ ಕೇಳುವ ಹುಡುಗಿಯರು ಪಾತ್ರ ಮಾಡುವ ವಿಷಯ ಬಂದಾಗ ನಾಚಿ ನೀರಾಗಿ ಅಯ್ಯಾ, ನಾವೊಲ್ಲೆ ಎಂದು ಚಿಗರೆಯಂತೆ ಜಿಗಿದು ಮನೆಯೊಳಗೆ ಓಡುತ್ತಿದ್ದರು. ಕೊನೆಗೆ ಇನ್ನೇನು ಮಾಡುವುದೆಂದು ತಿಳಿಯದೇ ಹುಡುಗರಲ್ಲಿಯೇ ನಾಜೂಕಾಗಿರುವ ನಾಲ್ಕಾರು ಜನರು ತಾವೇ ಹುಡುಗಿಯರ ಪಾತ್ರ ಮಾಡಲು ನಿರ್ಧರಿಸಿದರು.

ಇತ್ತ ಹೊಳೆಸಾಲಿನ ಹಳೆಯ ತಲೆಗಳೆಲ್ಲ ಸೇರಿ ಸದಾನಂದ ಹೆಗಡೆ ಮತ್ತು ಗಣಪಯ್ಯನವರ ನಿರ್ದೇಶನದಲ್ಲಿ ಸುಧನ್ವಾರ್ಜುನ ಮತ್ತು ರಾಣಿ ಶಶಿಪ್ರಭೆ ಎಂಬ ಎರಡು ಯಕ್ಷಗಾನದ ಪ್ರಸಂಗಗಳನ್ನು ಆಡುವುದೆಂದು ತೀರ್ಮಾನಿಸಿದರು. ಹೆಗಡೆಯವರ ಮನೆಯ ಅಂಗಳದಲ್ಲಿ ದಿನವೂ ಸಂಜೆ ತಾಳ ಮದ್ದಲೆಗಳೊಂದಿಗೆ ಯಕ್ಷಗಾನದ ತಯಾರಿ ನಡೆಯತೊಡಗಿತು. ಒಂದು ಹಂತದಲ್ಲಿ ಹೊಳೆಸಾಲು ಹೇಗಾಗಿಹೋಯಿತೆಂದರೆ ಬೆಳಗಿನಿಂದ ಸಂಜೆಯವರೆಗೂ ಅದೆಲ್ಲಿಂದಲೋ ಸಂಗೀತ, ನೃತ್ಯ, ಹಾಡು, ಹರಟೆ, ನಾಟಕದ ಡೈಲಾಗು ಕೇಳಿಬರುತ್ತ ಇಡಿಯ ಊರೇ ಒಂದು ರಂಗಶಾಲೆಯಂತೆ ಭಾಸವಾಗತೊಡಗಿತು. ಗ್ಯಾದರಿಂಗಿನ ದಿನ ಹತ್ತಿರ ಬರುತ್ತಿದ್ದಂತೆ ಮಾಡಿ ಮುಗಿಸಲಾರದಷ್ಟು ಕೆಲಸಗಳು ಹುಡುಗರ ಸುತ್ತಲೂ ಸುತ್ತಿಕೊಂಡವು. ಒಂದು ಬದಿಯಲ್ಲಿ ಊರ ಗಣ್ಯರು, ರಾಜಕಾರಣಿಗಳು ಮತ್ತು ದಾನಿಗಳ ಹೆಸರುಗಳನ್ನು ಹೊತ್ತ ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಗಬೇಕು.

ಅದರಲ್ಲಿಯೇನಾದರೂ ಎಡವಟ್ಟಾದರೆ ಮತ್ತೆ ಕಾರ್ಯಕ್ರಮವೇ ನಿಂತುಹೋದೀತು! ಇನ್ನೊಂದು ಬದಿಯಲ್ಲಿ ಗ್ಯಾದರಿಂಗಿಗೆ ಬೇಕಾದ ಹಣವನ್ನು ಹೊಂದಿಸಬೇಕು. ಅದಕ್ಕೆಂದು ಒಂದು ಲಾಟರಿ ಟಿಕೇಟಿನ ಬುಕ್ಕನ್ನು ಪ್ರಿಂಟ್ ಮಾಡಿಸಿಯಾಗಿತ್ತು. ಮೊದಲ ಬಹುಮಾನ ಒಂದು ಗೋಡೆಗಡಿಯಾರ, ಎರಡನೆಯ ಬಹುಮಾನ ವಿದ್ಯುತ್ ಬ್ಯಾಟರಿ, ಮೂರನೆಯ ಬಹುಮಾನ ಫಿಲಿಪ್ಸ್ ರೇಡಿಯೋ ಎಂದು ಪ್ರಚಾರವನ್ನೂ ಮಾಡಲಾಯಿತು. ಶಾಲೆಯ ಮಕ್ಕಳು ಈ ಟಿಕೇಟ್ ಬುಕ್ಕನ್ನು ಹಿಡಿದುಕೊಂಡು ಕಂಡಕಂಡವರಿಗೆಲ್ಲಾ ಹರಿದು ಕೊಡುತ್ತಾ ಕಾಸು ಕೂಡಿಸತೊಡಗಿದರು. ಜತೆಯಲ್ಲಿ ಮನೆಮನೆಗೆ ಹೋಗಿ ಹಣ ಕೇಳುವ ಅಭಿಯಾನವೂ ನಡೆಯಿತು. ತಮ್ಮೂರಿನಿಂದ ವಲಸೆ ಹೋದವರು, ಊರಿನ ಸಂಬಂಧಿಕರು ಎಲ್ಲರೂ ಈಗ ನೆನಪಿಗೆ ಬಂದರು. ಅವರೆಲ್ಲರ ನೆರವನ್ನು ಯಾವ ಮುಜುಗರವೂ ಇಲ್ಲದೇ ಯಾಚಿಸಲಾಯಿತು. ಮನವಿ ಪತ್ರದಲ್ಲಿ ‘ಇದೇ ಮೊದಲ ಬಾರಿಗೆ ಹೊಳೆಸಾಲಿನ ಶಾಲೆಯಲ್ಲಿ ಅಹೋರಾತ್ರಿ ನಡೆಯುವ ಗ್ಯಾದರಿಂಗ್’ ಎಂದು ದಪ್ಪ ಅಕ್ಷರದಲ್ಲಿ ಅಚ್ಚು ಹಾಕಿಸಲಾಗಿತ್ತು. ಇಷ್ಟೆಲ್ಲ ಪರದಾಡಿದ ನಂತರ ಒಂದಿಷ್ಟು ಕಾಸು ಒಟ್ಟಾಗಿ ಹುಡುಗರೆಲ್ಲ ನಿರಾಳರಾದರು.

ಗ್ಯಾದರಿಂಗಿನ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲ ವಿಭಾಗದ ತರಬೇತಿಗಳೂ ಬಿರುಸುಗೊಂಡವು. ಯಕ್ಷಗಾನಕ್ಕೆ ಪೆಟ್ಟಿಗೆಯವರನ್ನು, ನಾಟಕಕ್ಕೆ ಮೇಕಪ್ ಮಾಡುವವರನ್ನು, ಸ್ಟೇಜ್ ಮೈಕ್ ಸೆಟ್ಟಿಂಗಿನವರನ್ನು ಮೊದಲೇ ಬುಕ್ ಮಾಡಲಾಯಿತು. ಶಾಲೆಯ ಅಂಗಳವನ್ನು ಸ್ವಚ್ಛಗೊಳಿಸಿ ನಡುವಲ್ಲೊಂದು ಸ್ಟೇಜನ್ನು ನಿರ್ಮಿಸಿದರು. ಅದನ್ನು ಹತ್ತಿ ನಿಂತ ಯುವಕ ಮಂಡಲದ ಹುಡುಗರ ಗಟ್ಟಿ ಗುಂಡಿಗೆಯೂ ಅದ್ಯಾಕೋ ಡವಡವನೆ ಬಡಿದುಕೊಳ್ಳುತ್ತಿತ್ತು. ಚೆನ್ನಮ್ಮನ ವೇಷ ಮಾಡುವ ನೀಲಿ ಮತ್ತು ಥ್ಯಾಕರೆಯ ಪಾತ್ರ ಮಾಡುವ ಸುಬ್ಬು ಇಬ್ಬರಿಗೂ ಯುದ್ಧದ ತರಬೇತಿ ದಿನವೂ ನಡೆಯುತ್ತಿತ್ತು. ಸಭಾ ಕಾರ್ಯಕ್ರಮಕ್ಕೆ ಪ್ರಾರ್ಥನೆ ಮತ್ತು ಸ್ವಾಗತಗೀತೆಯನ್ನು ಮಕ್ಕಳೇ ಹಾಡಬೇಕಿತ್ತು. ಎಷ್ಟು ಕಡಿಮೆಯೆಂದರೂ ಹತ್ತು ಜನರನ್ನಾದರೂ ವೇದಿಕೆಗೆ ಕರೆಯಬೇಕಿತ್ತು. ಅಪರೂಪಕ್ಕೆ ಸಿಕ್ಕ ವೇದಿಕೆಯಲ್ಲಿ ಬೇಗನೆ ಮಾತು ನಿಲ್ಲಿಸುವ ಜಾಯಮಾನವಂತೂ ಯಾರದೂ ಅಲ್ಲವಾದ್ದರಿಂದ ಎಷ್ಟು ಬೇಗ ಕಾರ್ಯಕ್ರಮ ಪ್ರಾರಂಭವಾದರೂ ಮುಗಿಯುವಾಗ ಕತ್ತಲಾಗುತ್ತಿತ್ತು. ಅಲ್ಲಿಯವರೆಗೆ ಅಂಗನವಾಡಿಯ ಪುಟ್ಟ ಮಕ್ಕಳು ಎಚ್ಚರವಿರುವುದು ಕಷ್ಟವಾದ್ದರಿಂದ ಅವರ ಕಾರ್ಯಕ್ರಮವನ್ನು ಸಭಾ ಕಾರ್ಯಕ್ರಮಕ್ಕೂ ಮೊದಲೇ ಇಡುವುದೆಂದು ತೀರ್ಮಾನವಾಯಿತು. ಊರಿನಲ್ಲೆಲ್ಲ ಹುಡುಗರ ಕಾರುಬಾರು ನಡೆಯುತ್ತಿದ್ದರೆ ಹುಡುಗಿಯರು ತಮ್ಮ ಅಲಂಕಾರದ ಬಗ್ಗೆ ಗಮನ ನೀಡಿದರು. ಎಲ್ಲರೂ ಒಂದೇ ಬಗೆಯ ಉದ್ದ ಲಂಗ ದಾವಣಿಗಳನ್ನು ಹೊಲಿಸಿಕೊಂಡರು. ಹೆಂಗಸರಂತೂ ತಮ್ಮ ಕಳ್ಳುಬಳ್ಳಿಗಳೆಲ್ಲರನ್ನೂ ತಮ್ಮೂರಿನ ಗ್ಯಾದರಿಂಗಿಗೆ ಬರಬೇಕೆಂದು ಆಹ್ವಾನಿಸಿದರು. ಆ ದಿನ ಕಡಿಯಲೆಂದು ಬಲಿತ ಹುಂಜವೊಂದನ್ನು ತಂದಿರಿಸಿಕೊಂಡರು. ಕನಕಾಂಬರ ಗಿಡದ ತುಂಬ ಹೂಬೆಳೆಸಿ ಗ್ಯಾದರಿಂಗಿಗೆ ಕಾಯತೊಡಗಿದರು.

ಗ್ಯಾದರಿಂಗಿನ ಮೊದಲನೆಯ ದಿನ ಎಲ್ಲ ತಂಡದವರೂ ಶಾಲೆಯ ಅಂಗಳದಲ್ಲಿ ಸೇರಿ ಬೆಳಗಿನಿಂದ ಸಂಜೆಯವರೆಗೆ ಗ್ರ್ಯಾಂಡ್ ಟ್ರಯಲ್ ಮಾಡಬೇಕೆಂದು ಮಾಸ್ರ‍್ರು ಫರ್ಮಾನು ಹೊರಡಿಸಿದರು. ಆ ದಿನ ಬಾರದೆ ಇರುವವರಿಗೆ ಮರುದಿನ ಖಂಡಿತ ಅವಕಾಶ ನೀಡಲಾಗುವುದಿಲ್ಲವೆಂದು ಪ್ರಕಟಿಸಿಬಿಟ್ಟರು. ಅವರ ಮಾತಿನಂತೆಯೇ ಮೊದಲದಿನ ಬೆಳಿಗ್ಗೆ ಶಾಲೆಯಂಗಳದಲ್ಲಿ ಸೇರಿದ ಎಲ್ಲ ತಂಡದವರು ಒಂದಾದಮೇಲೊಂದರಂತೆ ಪ್ರದರ್ಶನವನ್ನು ನೀಡಿ ತಾವು ನಿಲ್ಲಬೇಕಾದ ಜಾಗ, ಸ್ಟೇಜಿಗೆ ಎಂಟ್ರಿಯಾಗಬೇಕಾದ ಸಮಯ ಎಲ್ಲವನ್ನೂ ನಿಗದಿಪಡಿಸಿಕೊಂಡರು. ಮೊದಲ ಸಲ ರಂಗವೇರುತ್ತಿರುವ ಮಕ್ಕಳು ಮರುದಿನ ನರ್ವಸ್ ಆಗಬಾರದೆಂದು ಅವರಿಗೆ ಡ್ರೆಸ್ ಹಾಕಿಯೇ ಪ್ರಾಕ್ಟೀಸನ್ನು ಮಾಡಿಸಲಾಯಿತು. ನಡುವೆ ಕೆಲವರ ಸೀರೆ, ಕಸೆಗಳೆಲ್ಲ ಬಿಚ್ಚಿಹೋದಾಗ ಅವನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವುದು ಹೇಗೆಂಬ ತರಬೇತಿಯನ್ನೂ ಅಲ್ಲಿಯೇ ನೀಡಲಾಯಿತು. ಸ್ಟೇಜಿನ ಮೇಲೆ ‘ವಿ’ ಆಕಾರದಲ್ಲಿ ಸುಣ್ಣದಿಂದ ಗುರುತು ಮಾಡಿ ಡ್ಯಾನ್ಸ್ ಮಾಡುವವರು ಅದರ ಮೇಲೆಯೇ ನಿಲ್ಲುವಂತೆ ನಿರ್ದೇಶಿಸಲಾಯಿತು. ನಾಟಕದ ಡೈಲಾಗನ್ನು ಮರೆತವರು ನಾಟಕದ ಮೇಸ್ಟ್ರಿರಿಂದ ಸರಿಯಾಗಿ ಬೈಗುಳವನ್ನು ತಿಂದರು.

ಅಂತೂ ಗ್ಯಾದರಿಂಗಿನ ದಿನದ ಬೆಳಗು ಬಂದೇಬಿಟ್ಟಿತು. ಮೈಕ್ ಸೆಟ್ ಶಾಲೆಯ ಕಂಪೌಂಡಿನ ಹತ್ತಿರ ಬೆಳೆದಿದ್ದ ಹಲಸಿನ ಮರವೇರಿ ಕುಳಿತು ‘ಮೂಷಕ ವಾಹನ ಮೋದಕ ಹಸ್ತ…..’ ಎಂದು ಹಾಡತೊಡಗಿತು. ಇಡಿಯ ಊರಿಗೆ ಉತ್ಸವದ ಕಳೆ ತುಂಬಿಕೊಂಡಿತು. ಮೇಕಪ್ ಮಾಡುವವರು, ಆಟದ ಪೆಟ್ಟಿಗೆಯವರು, ಊರಿಗೆ ಬರುವ ನೆಂಟರು ಎಲ್ಲರೂ ಹೊಳೆಸಾಲಿನ ಮೊದಲ ಬಸ್ಸಿಗೇ ಬಂದಿಳಿದರು. ಬೆಳಿಗ್ಗೆ ಶಾಲೆಯಲ್ಲಿ ಊರ ಶಾಸಕರು ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಶಾಲೆಯ ಕೋಣೆಯೊಳಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ನಂತರ ಮಕ್ಕಳೆಲ್ಲರಿಗೂ ಸಿಹಿತಿಂಡಿ ವಿತರಿಸಿ ಮನೆಗೆ ಹೋಗಿ ಊಟಮಾಡಿ ಕೊಂಚ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಯಿತು. ಇವೆಲ್ಲದರ ನಡುವೆ ಅಹಿತಕರ ಘಟನೆಯೊಂದು ಶಾಲೆಯ ಆವಾರದಲ್ಲಿ ನಡೆದು ಎಲ್ಲರಿಗೂ ತುಸು ಕಸಿವಿಸಿಯಾಯಿತು. ಹೊಳೆಸಾಲಿನ ಹಬ್ಬಗಳಲ್ಲೆಲ್ಲಾ ಊರಿನ ಹೊರವಲಯದಲ್ಲಿ ಫಂಡು ಮಂಡವನ್ನು ಹಾಕಿ ಎಲ್ಲರನ್ನೂ ಜೂಜಿಗೆ ಸೆಳೆಯುವುದು ಒಂದು ತಂಡದ ಹವ್ಯಾಸವಾಗಿತ್ತು. ಇಂದೂ ಹಾಗೆಯೇ ಮಂಡ ಹೂಡಲು ಬಂದವರನ್ನು ಮಾಸ್ರ‍್ರು ಬೈದು ಹೊರಗಟ್ಟಿದರು. “ಇಲ್ಲಿ ನಡಿತಿರೋದು ಯಾವ ಹಬ್ಬ ಅಥವಾ ಉತ್ಸವವಲ್ಲ. ಇದೊಂದು ಶೈಕ್ಷಣಿಕ ಕಾರ್ಯಕ್ರಮ. ಶಾಲೆಯೆಂದರೆ ದೇವಮಂದಿರಕ್ಕೆ ಸಮ. ಇಲ್ಲೆಲ್ಲ ನಿಮ್ಮ ಜೂಜಾಟಕ್ಕೆ ಅವಕಾಶವಿಲ್ಲ.” ಎಂದು ಖಡಾಖಂಡಿತವಾಗಿ ಹೇಳಿದರು. ಕೋಪಗೊಂಡ ಗುಂಪು ಒಳಬಾಯಿಯಲ್ಲೇ ಮಾಸ್ರ‍್ರನ್ನು ಶಪಿಸುತ್ತ ಅಲ್ಲಿಂದ ಕಾಲುಕಿತ್ತಿತ್ತು.
ಸಂಜೆಯ ಸಭಾಕಾರ್ಯಕ್ರಮ ರಂಗುರಂಗಾಗಿ ಆರಂಭಗೊಂಡಿತು. ಸಭೆಯಲ್ಲಿ ಕುಳಿತ ಗಣ್ಯರೆಲ್ಲರೂ ಹೊಳೆಸಾಲಿನ ಶಾಲೆ ಮತ್ತು ಯುವಕರ ಕ್ರಿಯಾಶೀಲತೆಯನ್ನು ಹೊಗಳಿದ್ದೇ ಹೊಗಳಿದ್ದು. ಭಾಷಣ ಕೇಳಲು ಊರಿನವರೆಲ್ಲರಿಗೂ ಬೇಸರವಾದರೂ ತಡವಾಗಿ ಬಂದರೆ ಎಲ್ಲಿ ತಮ್ಮ ಮಕ್ಕಳ ಕಾರ್ಯಕ್ರಮ ತಪ್ಪಿಹೋದೀತು ಎಂದು ಎಲ್ಲರೂ ತಾಸೊತ್ತಿನ ಮೊದಲೇ ಬಂದು ಕುಳಿತಿದ್ದರು. ಇಡಿಯ ಶಾಲೆಯ ಬಯಲು ಜನರಿಂದ ತುಂಬಿಹೋಗಿತ್ತು. ಸಭೆಯೆಲ್ಲವೂ ಸಾಂಗವಾಗಿ ಮುಗಿದು ಇನ್ನೇನು ಮಕ್ಕಳ ಕಾರ್ಯಕ್ರಮ ಆರಂಭವಾಗಬೇಕೆನ್ನುವಾಗ ಝಗ್ ಎಂದು ವಿದ್ಯುದ್ದೀಪ ಆರಿಹೋಯಿತು. ಇಡಿಯ ಬಯಲು ಕತ್ತಲೆಯಲ್ಲಿ ತುಂಬಿ ಎಲ್ಲೆಲ್ಲೂ ಆತಂಕದ ದನಿಯು ತುಂಬಿಹೋಯಿತು. ವೇಷ ಧರಿಸಿ ಪರದೆಯ ಹಿಂದೆ ನಿಂತ ಮಕ್ಕಳನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡ ಅಂಗನವಾಡಿ ಅಕ್ಕೋರು ಎಲ್ಲಿಯೂ ಹೋಗದಂತೆ ತಾಕೀತು ಮಾಡಿದರು. ಮೇಕಪ್ಪು ಹಚ್ಚಿಕೊಳ್ಳುತ್ತಿದ್ದ ಯುವಕರು ಥಟ್ಟನೆ ಅಲ್ಲಿಂದ ಎದ್ದು ಬಂದು ಕೈಯ್ಯಲ್ಲಿದ್ದ ಬ್ಯಾಟರಿ ಹಿಡಿದು ಎಲ್ಲಿ ಕನೆಕ್ಷನ್ ಹೋಯಿತೆಂದು ಹುಡುಕತೊಡಗಿದರು. ಮೈಕ್ ಸೆಟ್ಟಿನ ನಾಣಿ ಇದು ಮೇನ್ ಸ್ವಿಚ್ಚಿನಲ್ಲಿಯೇ ಆದ ಆವಾಂತರವೆಂದು ಅವರೆಲ್ಲರಿಗೆ ಹೇಳಿದ. ಊರಿಡೀ ಕರೆಂಟು ಹೋಗಿ ಕತ್ತಲೆ ಕವಿದಿತ್ತು. ಯಾರೋ ಹತ್ತಿರದಲ್ಲಿರುವ ಮನೆಗಳಿಂದ ನಾಲ್ಕಾರು ಸೀಮೆ ಎಣ್ಣೆ ಲೈಟುಗಳನ್ನು ತಂದು ಸ್ಟೇಜ್ ಮತ್ತು ಸಭಿಕರಿರುವಲ್ಲಿ ಕಿರುಬೆಳಕನ್ನು ಹರಿಸಿದರು. ಯುವಕರು ಏನೂ ಮಾಡಲೂ ತೋಚದೇ ಮಾಸ್ರ‍್ರ ಮುಖ ನೋಡಿದರು. ಮಾಸ್ರ‍್ರು ತುಸು ಹೊತ್ತು ಯೋಚಿಸಿ, “ಇದಾಗುವ ಕತೆಯಲ್ಲ ಮಕ್ಕಳೇ, ಕಾರ್ಯಕ್ರಮವನ್ನು ನಾಳೆಗೆ ಮುಂದೂಡುವ. ನಾಳೆ ಕರೆಂಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಆ ಕೆಟ್ಟ ಮನುಷ್ಯರು ಏನು ಮಾಡ್ತಾರೆ ನಾನೂ ನೋಡೇಬಿಡುವೆ.” ಎನ್ನುವುದರ ಮೂಲಕ ಇವೆಲ್ಲವೂ ಫಂಡಿನವರದ್ದೇ ಕೆಲಸವೆಂದು ಸಾಬೀತುಪಡಿಸಿದರು. ಯುವಕ ಮಂಡಲದ ಮುಖ್ಯಸ್ಥರು ಮೈಕ್ ಸೆಟ್ಟಿನವರು ಮತ್ತು ಮೇಕಪ್ಪಿನವರ ಮುಖ ನೋಡಿದರು. ಅವರ ನೋಟದಲ್ಲಿ ಇನ್ನೊಂದು ದಿನ ಇಲ್ಲಿಯೇ ಉಳಿದು ತಮ್ಮ ಊರಿನ ಮರ್ಯಾದೆಯನ್ನು ಉಳಿಸಿ ಎಂಬ ದೀನತೆಯಿತ್ತು. “ಒಂದಲ್ಲ ಅಂದರೆ ಎರಡು ದಿನ. ಅಷ್ಟೇ ತಾನೆ? ನಾವೂ ನೋಡೇಬಿಡ್ತೇವೆ. ಹೇಗೆ ಗ್ಯಾದರಿಂಗ್ ನಡೆಯೋದಿಲ್ಲ ಅಂತ? ನೀವೇನೂ ಹೆದರಬೇಡಿ. ಗ್ಯಾದರಿಂಗ್ ಮುಗಿಯದ ಹೊರತು ನಾವು ಹೊಳೆಸಾಲಿನಿಂದ ಹೋಗೋದಿಲ್ಲ.” ಎಂದು ಎಲ್ಲರು ದೃಢವಾಗಿ ಹೇಳಿದರು. ಯುವಕರ ಕಣ್ಣಿನಲ್ಲಿ ನೀರಾಡಿತು. ಮಾಸ್ರ‍್ರು ಅವರೆಲ್ಲರ ಅನುಮತಿಯ ಮೇರೆಗೆ ಸ್ಟೇಜಿನ ಮೇಲೆ ಹೋಗಿ ಗಂಭೀರವಾದ ದನಿಯಲ್ಲಿ, “ಮನುಷ್ಯ ಮನವಿ ಮಾಡುತ್ತಾನೆ, ಆದರೆ ಕೆಲವೊಮ್ಮೆ ದೇವರು ನಿರಾಕರಿಸುತ್ತಾನೆ. ಇವತ್ತು ಗ್ಯಾದರಿಂಗ್ ನಡೆಯುವುದು ಅವನಿಗೆ ಇಷ್ಟವಿಲ್ಲ ಅನಿಸುತ್ತದೆ. ವಿದ್ಯುತ್ತಿನ ತೊಂದರೆಯಿಂದಾಗಿ ನಮ್ಮ ಕಾರ್ಯಕ್ರಮ ನಾಳೆ ನಡೆಯುತ್ತದೆ. ನಾಳೆ ಯಾವುದೇ ಸಭಾ ಕಾರ್ಯಕ್ರಮಗಳು ಇರುವುದಿಲ್ಲ. ದೂರದೂರಿನಿಂದ ಬಂದ ಬಂಧುಗಳೆಲ್ಲರೂ ದಯವಿಟ್ಟು ಹೊಳೆಸಾಲಿನಲ್ಲಿ ಇನ್ನೊಂದು ದಿನ ಉಳಿದು ನಮ್ಮ ಪುಟಾಣಿ ಮಕ್ಕಳ ಕಾರ್ಯಕ್ರಮವನ್ನು ನೋಡಿಯೇ ಹೋಗಬೇಕೆಂಬುದು ನಮ್ಮ ಮನವಿ. ಅದರ ನಂತರ ಎರಡು ನಾಟಕಗಳು ಮತ್ತು ಆಟವೂ ಇದೆ. ರಾತ್ರಿಯೂಟ ಮುಗಿಸಿ ಬಂದವರನ್ನು ಬೆಳಗಿನವರೆಗೆ ರಂಜಿಸುವ ಭರವಸೆ ನಮ್ಮದು. ಎಲ್ಲರೂ ಬರಬೇಕೆಂದು ನಮ್ಮೆಲ್ಲರ ಕಳಕಳಿಯ ಮನವಿ. ಕಾರ್ಯಕ್ರಮದಲ್ಲಾದ ವ್ಯತ್ಯಯಕ್ಕೆ ವಿಷಾದಿಸುತ್ತೇವೆ.” ಎಂದು ಹೇಳಿದರು. ಊರಿನವರೆಲ್ಲರೂ ಮಡಲಿನ ಸೂಡಿ ಹಚ್ಚಿಕೊಂಡು, ವೇಷ ಧರಿಸಿದ್ದ ತಮ್ಮ ಪುಟ್ಟ ಮಕ್ಕಳನ್ನು ಸೊಂಟದ ಮೇಲೆ ಚಚ್ಚಿಕೊಂಡು ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾದರು.

ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ‍್ರ ಅಣತಿಯಂತೆ ಹೊಳೆಸಾಲಿನ ಲೈನ್‌ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ. ಸಂಜೆಯಿಳಿಯುತ್ತಿದ್ದಂತೆ ಹೊಳೆಸಾಲಿನ ಶಾಲೆಯಲ್ಲಿ ಗ್ಯಾದರಿಂಗಿನ ರಂಗು ಹರಡತೊಡಗಿತು. ಬೆಳಗಿನವರೆಗೂ ರಂಗೇರುತ್ತಲೇ ಊರ ಪರವೂರ ಜನರನ್ನು ರಂಜಿಸಿತು. ಇವೆಲ್ಲವನ್ನೂ ನೋಡುತ್ತಿದ್ದ ಹೊಳೆಸಾಲಿನ ಹೊಳೆ ಬೆಳಗಿನ ಸೂರ್ಯನ ಕಿರಣ ಸೋಕಿದ್ದೇ ಫಳಫಳನೆ ಹೊಳೆಯುತ್ತಾ ಹರಿಯತೊಡಗಿತು.