ಕೊನೆಯ ರನ್ – ಗೆಲುವಿನ ರನ್ ಇಯನ್ ಮೆಕಿಫ್ ಓಡುತ್ತಿದ್ದಾಗ ಜೊ ಸೊಲೊಮನ್ ಬಾಲನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅದನ್ನು ವಿಕೆಟ್‌ಗೆ ಎಸೆದು ಮೆಕಿಫ್‌ಅನ್ನು ರನ್ ಔಟ್ ಮಾಡಿದರು. ಸೋಲೊಮನ್ ಬಾಲ್ ಎಸೆದಾಗ ಮೂರು ವಿಕೆಟ್‌ಗಳಿದ್ದರೂ ಅವರು ಸ್ಕೊಯರ್ ಲೆಗ್‌ನಲ್ಲಿ ಇದ್ದುದ್ದರಿಂದ ಆ ಜಾಗದಿಂದ ಅವರಿಗೆ ಕಾಣಿಸುತ್ತಿದ್ದ ವಿಕೆಟ್ ಒಂದೇ! ಅವರು ಗುರಿ ಇಟ್ಟು ಹೊಡೆದು ವಿಕೆಟ್‌ಗೆ ಬಿದ್ದು ಮೆಕಿಫ್ ರನ್ ಔಟಾದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟೆಸ್ಟ್‌ಮ್ಯಾಚ್‌ಗಳಲ್ಲಿ ಇದುವರೆಗೂ ಆದ ಎರಡು ಟೈ ಮ್ಯಾಚುಗಳ ಕುರಿತ ಬರಹ ನಿಮ್ಮ ಓದಿಗೆ

ಕ್ರಿ.ಶ. 1611 ರಲ್ಲಿ ಕೆಂಟ್ ಕೌಂಟಿಯಲ್ಲಿ, ಚೆವೆನಿಂಗ್ ಅನ್ನುವ ಜಾಗದಲ್ಲಿ ಡೌನ್ಸ್ ಮತ್ತು ವೀಲ್ಡ್ ಅವರ ಮಧ್ಯ ಮೊಟ್ಟ ಮೊದಲನೆಯ ಕ್ರಿಕೆಟ್ ಪಂದ್ಯ ನಡೆಯಿತು. ಅದಕ್ಕೂ ಮುಂಚೆ 1597 ನಡೆದ ಒಂದು ಪಂದ್ಯದಲ್ಲಿ ಕ್ರಿಕೆಟ್ ಅನ್ನುವ ಪದವನ್ನು ಮೊದಲ ಬಾರಿಗೆ ಉಪಯೋಗಿಸಲಾಯಿತು.

1877ರಲ್ಲಿ ಇಂಗ್ಲೆಂಡ್‌ನ ತಂಡವೊಂದು ಆಸ್ಟ್ರೇಲಿಯಕ್ಕೆ ಹೋಗಿ ಅಲ್ಲಿ ಎರಡು ಮ್ಯಾಚುಗಳನ್ನು ಮೆಲ್ಬೋರ್ನ್‌ ನಗರದಲ್ಲಿ ಆಡಿದರು. ಅವುಗಳೇ ಪ್ರಪಂಚದ ಮೊದಲು ಆಡಿದ ಟೆಸ್ಟ್ ಮ್ಯಾಚುಗಳೆಂದು ಪರಿಗಣಿಸಲಾಗಿದೆ.

ಸುಮಾರು 150 ವರ್ಷಗಳಲ್ಲಿ 13 ತಂಡಗಳು ಇಲ್ಲಿಯವರೆಗೆ 2000 ಟೆಸ್ಟ್‌ಗಳನ್ನು ಆಡಿದೆ. ಇದರಲ್ಲಿ ಟೈ ಮ್ಯಾಚ್‌ಗಳು ಆಗಿರುವುದು ಕೇವಲ ಎರಡೇ ಸರ್ತಿ! ಐದು ದಿವಸ ಪೂರ್ತಿ ಆಡಿ ಎರಡು ಟೀಮುಗಳು ಒಟ್ಟಿನಲ್ಲಿ ಒಂದೇ ಸ್ಕೋರನ್ನು ಮಾಡಿ ಆಟ ಮುಗಿದಾಗ ಇಬ್ಬರಿಗೂ ಸೋಲು ಗೆಲುವಿಲ್ಲದೆ ಇತ್ಯರ್ಥವಾಯಿತು!

ಅಂತಹ ರೋಚಕವಾದ ಆಟವನ್ನು ಲಕ್ಷಾಂತರ ಜನರು ಪ್ರತ್ಯಕ್ಷವಾಗಿ ಮತ್ತು ಟಿವಿಯಲ್ಲಿ ನೋಡಿ, ಅದಕ್ಕಿಂತಲೂ ಹೆಚ್ಚು ಜನ ರೇಡಿಯೋದಲ್ಲಿ ಕೇಳಿ ರೋಮಾಂಚನಗೊಂಡಿದ್ದರು. ಆಟದ ಸ್ಥಿತಿ ಮೇಲೆ ಕೆಳಗೆ ಹೋಗಿ ಕೊನೆಗೆ ಏನಾಗುತ್ತಪ್ಪಾ ಎಂದು ಅಂದುಕೊಳ್ಳುವ ಹೊತ್ತಿನಲ್ಲಿ ಅದು ‘ಟೈ’ ಲಿ ಕೊನೆಗೊಂಡಾಗ ಅಭಿಮಾನಿಗಳು ಆಶ್ಚರ್ಯಚಕಿತರಾದರು.

ಆ ಮ್ಯಾಚ್‌ಗಳನ್ನು ಇಂದು ನೋಡೋಣ. ಟೈ ಆದ ಎರಡು ಸರಣಿಯಲ್ಲೂ ಆಸ್ಟ್ರೇಲಿಯ ಒಂದು ತಂಡವಾಗಿತ್ತು! 1960 ರಲ್ಲಿ ವೆಸ್ಟ್ ಇಂಡೀಸ್ ಜೊತೆ ಆಸ್ಟ್ರೇಲಿಯದ ಬ್ರಿಸ್ಬೇನ್ ನಗರದಲ್ಲಿ ಮತ್ತು 26 ವರ್ಷಗಳಾದ ಮೇಲೆ 1986ರಲ್ಲಿ ಎರಡನೇ ‘ಟೈ’ ಭಾರತದ ಚೆನ್ನೈ ನಗರದಲ್ಲಿ ನಡೆಯಿತು.

*****

1960ರ ಡಿಸೆಂಬರ್ 9-14ನಲ್ಲಿ ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಶುರುವಾದಾಗ ಯಾರಿಗೂ ಈ ಪಂದ್ಯದಲ್ಲಿ ಆಗಿ ಹೋಗುವ ತಿರುವನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಡಲು ಶುರುಮಾಡಿತು. ಮುಂಚೆ ಹಂಟ್ ಮತ್ತು ಹೋಲ್ಟ್ ಅನ್ನುವ ಜನಪ್ರಿಯ ಜೋಡಿ ಅವರ ಇನ್ನಿಂಗ್ಸ್‌ಅನ್ನು ಶುರುಮಾಡುತ್ತಿದ್ದರು. ಹೋಲ್ಟ್ ರಿಟೈರ್ ಆದ ಮೇಲೆ ಹಂಟ್ ಮತ್ತು ಕ್ಯಾಮಿ ಸ್ಮಿತ್ ಶುರು ಮಾಡಿದರು. ಸ್ಮಿತ್ ಮತ್ತು ಕನ್ಹಾಯ್ ಔಟಾದ ಮೇಲೆ ಬಂದ ಸೋಬರ್ಸ್ ಒಳ್ಳೆಯ ಆಲ್-ರೌಂಡರ್ ಎಂದು ಹೆಸರುವಾಸಿಯಾಗಿದ್ದರು. ಸೋಬರ್ಸ್ ಬಂದವರೇ ವೇಗವಾಗಿ ಸ್ಕೋರ್ ಮಾಡಿ ಕೇವಲ 174 ಬಾಲ್‌ಗಳಲ್ಲಿ 132 ರನ್ ಗಳಿಸಿದರು. ಅವರ ಜೊತೆ ನಾಯಕ ವೊರೆಲ್ ಮತ್ತು ಜೊ ಸಾಲೊಮನ್ ಚೆನ್ನಾಗಿ ಆಡಿ ಪಾಲುದಾರಿಕೆ ಮಾಡಿದರು.

ಗಾರ್ಫೀಲ್ಡ್ ಸೋಬರ್ಸ್ ಪ್ರಪಂಚದ ಅತ್ಯುತ್ತಮ ಆಲ್ -ರೌಂಡರ್ ಎಂದು ಹೆಸರುವಾಸಿಯಾಗಿದ್ದರು. ಕ್ರಿಕೆಟ್‌ನ ಬ್ರಹ್ಮ ಸ್ವಯಂ ಡಾನ್ ಬ್ರಾಡ್ಮನ್‌ರೇ ಇದನ್ನು ಕೆಲವು ಬಾರಿ ಘೋಷಿಸಿದ್ದರು. ಎಡಗೈ ಆಟಗಾರ ಸೋಬರ್ಸ್, ಬ್ಯಾಟಿಂಗ್‌ನಲ್ಲಿ ಎಷ್ಟು ನಿಪುಣರಾಗಿದ್ದರೆಂದರೆ, ಇನ್ನೂ 21 ವರ್ಷವಾಗಿದ್ದಾಗಲೇ ಆಗ ಕ್ರಿಕೆಟ್‌ನ ಅತ್ಯಧಿಕ ಸ್ಕೋರ್ ಪಾಕಿಸ್ಥಾನದ ವಿರುದ್ಧ ಅಜೇಯರಾಗಿ 365 ರನ್ ಮಾಡಿದರು. ಅದು ಅವರ ಮೊದಲನೇ ಶತಕವಾಗಿತ್ತು! ವಿಶೇಷವೆಂದರೆ ಅವರು ಎಡ್ಗೈಲಿ ಮೂರು ನಾಲ್ಕು ತರಹ ಬೋಲಿಂಗ್ ಮಾಡಬಲ್ಲವರಾಗಿದ್ದರು! ಫಾಸ್ಟ್ ಬೋಲಿಂಗ್, ಕಟರ್ಸ್, ಸ್ಪಿನ್ನಲ್ಲೇ ಎರಡು ತರಹ ಮಾಡುತ್ತಿದ್ದರು. ಇದೆಲ್ಲರ ಜೊತೆಗೆ ಇವರು ಒಳ್ಳೆ ಫೀಲ್ಡರ್ರೂ ಆಗಿದ್ದರು. ‘ಇಂಗ್ಲಿಷ್‌ನಲ್ಲಿ ಹೇಳುವ ಹಾಗೆ ಅವರು ಒಬ್ಬ ‘ಕಂಪ್ಲೀಟ್ ಪ್ಯಾಕೇಜ್’ ಆಗಿದ್ದರು. (ಅವರು ಭಾರತಕ್ಕೆ ಬಂದಾಗ ಒಬ್ಬ ಸಿನಿಮಾ ತಾರೆ – ಅಂಜು ಮಹೇಂದ್ರ ಅನ್ನುವ ಹುಡುಗಿಯನ್ನು ಮೆಚ್ಚಿ ಮದುವೆಯಾಗಲೂ ಇಬ್ಬರೂ ನಿಷ್ಕರ್ಶೆ ಮಾಡಿದ್ದರು. ಕಾರಣಾಂತರದಿಂದ ಅದು ಮುಂದೆ ರದ್ದಾಗಿ ಹೋಯಿತು.)

ನಾಯಕ ಗೆರ್ರಿ ಅಲೆಕ್ಸಾಂಡರ್ ಮತ್ತು ವೆಸ್ ಹಾಲ್ ಚೆನ್ನಾಗಿ ಆಡಿ ವೆಸ್ಟ್ ಇಂಡೀಸ್ 453 ರನ್ ಗಳಿಸಿತು. ಅಲನ್ ಡೇವಿಡ್ಸನ್ ಮತ್ತು ಕ್ಲೈನ್ ತಲಾ 5 ಮತ್ತು 3 ವಿಕೆಟ್‌ ಗಳಿಸಿದರು. ಆಸ್ಟ್ರೇಲಿಯ ತನ್ನ ಇನ್ನಿಂಗ್ಸ್‌ಅನ್ನೂ ಚೆನ್ನಾಗಿ ಶುರು ಮಾಡಿ ಒಟ್ಟು 505 ಗಳಿಸಿತು.

ನಾರ್ಮನ್ ಒನೀಲ್ 181 ರನ್ ಹೊಡೆದರು. ಬಾಬಿ ಸಿಂಸನ್ 92, ಕೋಲಿನ್ ಮಕ್ಡೊನಾಲ್ಡ್ 57 ಮಾಡಿ ವೆಸ್ಟ್ ಇಂಡೀಸ್‌ಗಿಂತ 52 ರನ್ ಮುನ್ನಡೆಯನ್ನು ಸಾಧಿಸಿದರು. ಫಾಸ್ಟ್ ಬೋಲರ್ ಆದ ವೆಸ್ ಹಾಲ್ 4 ವಿಕೆಟ್, ಸೋಬರ್ಸ್‌ 2 ವಿಕೆಟ್, ಸ್ಪಿನ್ನರ್‌ಗಳಾದ ರಾಮಾಧಿನ್ ಮತ್ತು ವಾಲೆಂಟಿನ್ ತಲಾ ಒಂದು ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ ನಾಯಕ ವೊರೆಲ್ 65, ರೋಹನ್ ಕನ್ಹಾಯ್ 54, ಜೊ ಸೊಲೊಮನ್ 47. ಇವರೆಲ್ಲರ ರನ್‌ಗಳಿಂದ 284 ರನ್ ಮಾಡಿತು. ಆಸ್ಟ್ರೇಲಿಯದ ಫಾಸ್ಟ್ ಬೋಲರ್ ಅಲನ್ ಡೇವಿಡ್ಸನ್ 6 ವಿಕೆಟ್ ತೆಗೆದರು.

ಗೆಲ್ಲಲು 233ರನ್ ಬೇಕಾದ ಆಸ್ಟ್ರೇಲಿಯದ ಶುರು ಚೆನ್ನಾಗಿರಲಿಲ್ಲ. 1 ರನ್ ಸ್ಕೋರ್ ಇದ್ದಾಗಲೇ ಸಿಂಸನ್ ಔಟಾದರು. 7 ರನ್‌ಗೆ ಹಾರ್ವೆ ಪೆವಿಲಿಯನ್‌ಗೆ ಮರಳಿದರು. 6 ವಿಕೆಟ್ ಕೇವಲ 92ಕ್ಕೆ ಬಿತ್ತು. ಎಲ್ಲರೂ ಆಸ್ಟ್ರೇಲಿಯಾಗೆ ಸೋಲು ಖಚಿತ ಎಂದುಕೊಂಡಾಗ ಅಲನ್ ಡೇವಿಡ್ಸನ್ 80 ಮತ್ತು ಟೀಮಿನ ನಾಯ ರಿಚಿ ಬೆನೊ 52 ಪಾಲುದಾರಿಕೆಯಲ್ಲಿ 134 ರನ್ ಮಾಡಿ, ಗೆಲ್ಲುವುದಕ್ಕೆ ಕೇವಲ 7 ರನ್ ಇದ್ದಾಗ ಡೇವಿಡ್ಸನ್ ರನ್ ಔಟಾದರು. ಬೆನೊ ವೆಸ್ ಹಾಲ್ ಬೋಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸಾಂಡರ್‌ಗೆ ಕ್ಯಾಚ್ ಕೊಟ್ಟು ಔಟಾದರು. ವಾಲಿ ಗ್ರೌಟ್ ಮತ್ತು ಇಯಾನ್ ಮೆಕಿಫ್ ಕೂಡಾ ರನ್ ಔಟಾದರು.

ಕೊನೆಯ ರನ್ – ಗೆಲುವಿನ ರನ್ ಇಯನ್ ಮೆಕಿಫ್ ಓಡುತ್ತಿದ್ದಾಗ ಜೊ ಸೊಲೊಮನ್ ಬಾಲನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅದನ್ನು ವಿಕೆಟ್‌ಗೆ ಎಸೆದು ಮೆಕಿಫ್‌ಅನ್ನು ರನ್ ಔಟ್ ಮಾಡಿದರು. ಸೋಲೊಮನ್ ಬಾಲ್ ಎಸೆದಾಗ ಮೂರು ವಿಕೆಟ್‌ಗಳಿದ್ದರೂ ಅವರು ಸ್ಕೊಯರ್ ಲೆಗ್‌ನಲ್ಲಿ ಇದ್ದುದ್ದರಿಂದ ಆ ಜಾಗದಿಂದ ಅವರಿಗೆ ಕಾಣಿಸುತ್ತಿದ್ದ ವಿಕೆಟ್ ಒಂದೇ! ಅವರು ಗುರಿ ಇಟ್ಟು ಹೊಡೆದು ವಿಕೆಟ್‌ಗೆ ಬಿದ್ದು ಮೆಕಿಫ್ ರನ್ ಔಟಾದರು. ಗೆಲುವಿಗೆ ಓಡುತ್ತಿದ್ದ ಅವರಿಗೆ ರನ್ ಸಿಗಲಿಲ್ಲ, ರನ್ ಔಟಾದರು. ಪಂದ್ಯ ಸೋಲು-ಗೆಲುವು ಇಲ್ಲದೆ ಟೈಯಲ್ಲಿ ಮುಕ್ತಾಯಗೊಂಡಿತು. ಆಟ ಮುಗಿಯಲು ಇನ್ನೂ ಒಂದು ಬಾಲ್ ಇತ್ತು. ಇಬ್ಬರಿಗೂ ಗೆಲ್ಲಲು ಅವಕಾಶವಿತ್ತು. ಡ್ರಾ ಆಗಲೂ ಅವಕಾಶವಿತ್ತು. ಆದರೆ ತಲಾ 737 ರನ್‌ ಹೊಡೆದ ಮೇಲೆ ಎಲ್ಲರ ವಿಕೆಟ್ ಬಿದ್ದು ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿತು.

ಜೊ ಸೋಲೊಮನ್ ಹೇಳಿದ್ದು ಮ್ಯಾಚ್ ಮುಗಿದ ಮೇಲೆ: ಚಿಕ್ಕ ಹುಡುಗನಾಗಿದ್ದಾಗ ಮರದಿಂದ ಮಾವಿನ ಕಾಯಿ ಬೀಳಿಸಲು ಗುರಿಯಿಟ್ಟು ಕಲ್ಲುಹೊಡೆಯುತ್ತಿದ್ದೆ. ಆ ಅಭ್ಯಾಸ ನನಗೆ ಇಂದು ಸಹಾಯ ಮಾಡಿತು!

ಎದುರಾಳಿ ವೆಸ್ ಹಾಲ್ ಬೋಲಿಂಗ್‌ನ ಪ್ರಶಂಸೆ ಮಾಡುತ್ತಾ ಡೇವಿಡ್ಸನ್ ಹೇಳಿದರು. ‘ಹೊಸ ಷೂ ಹಾಕಿದ್ದರಿಂದ ಅವರ ಕಾಲಿನ ಬೆರಳುಗಳಲ್ಲಿ ಬೊಬ್ಬೆಯೆದ್ದಿದ್ದ ಕಾರಣ -ಬೋಲಿಂಗ್ ಇರಲಿ, ಅವರಿಗೆ ನಡೆಯಲೂ ಕಷ್ಟವಾಗಿತ್ತು, ಕೊನೆಯ ದಿವಸ, ಬೊಬ್ಬೆಯನ್ನು ಕತ್ತರಿಸಿ ಅದರ ಮೇಲೇ ಪ್ಲಾಸ್ಟರ್ ಹಾಕಿ ಬೋಲಿಂಗ್ ಮಾಡಿದರು. ಅವರ ಬೆಟ್ಟಿನ ಮಾಂಸ ಎದ್ದು ಕಾಣಿಸುತ್ತಿತ್ತು. ಅಂತಹ ನೋವಿನಲ್ಲೂ 17.7 ಓವರ್ ಬೋಲಿಂಗ್ ಮಾಡಿದ್ದಾರೆ!’ ಎಂದು ಹೊಗಳಿದರು.

ಸ್ಕೋರ್ಗಳ ವಿವರ: 1 2 ಮೊತ್ತ:

ವೆಸ್ಟ್ ಇಂಡೀಸ್ : 453 ಮತ್ತು 284 737

ಆಸ್ಟ್ರೇಲಿಯ : 505 ಮತ್ತು 232 ( ಗೆಲುವಿಗೆ ಬಾಕಾಗಿದ್ದು 233) 737

ಕೊನೆಯ ಓವರ್ ಹೇಗಾಯಿತು?

ಮ್ಯಾಚಿನ ಕೊನೆಯ ಓವರ್ ಫಾಸ್ಟ್ ಬೋಲರ್ ವೆಸ್ ಹಾಲ್ ಮಾಡಿದರು. ಆಗ ಆಸ್ಟ್ರೇಲಿಯಾದಲ್ಲಿ ಓವರ್‌ಗೆ 8 ಬಾಲ್ ಇತ್ತು. ಗಡಿಯಾರ ಸಂಜೆ 5.57 ತೋರಿಸುತ್ತಿತ್ತು. 6 ಘಂಟೆಗೆ ಆಟ ಮುಗಿಯುವ ವೇಳೆ ಆಸ್ಟ್ರೇಲಿಯಾಗೆ ಗೆಲ್ಲಲು 6 ರನ್ ಬೇಕಾಗಿತ್ತು. ಆಸ್ಟ್ರೇಲಿಯ 227/7.

ಮೊದಲನೇ ಬಾಲ್: ವಾಲಿ ಗ್ರೌಟ್ ಕಾಲಿಗೆ ಬಾಲು ತಾಕಿ, ಅಲ್ಲೇ ಹತ್ತಿರ ಬಿದ್ದಾಗ ಬೆನೊ ಮತ್ತು ಗ್ರೌಟ್ ಒಂದು ರನ್ ಓಡಿದರು. 7 ಬಾಲ್‌ನಲ್ಲಿ ಗೆಲ್ಲಲು ಬೇಕಾಗಿತ್ತು 5 ರನ್.

ಎರಡನೇ ಬಾಲ್: ಬೆನೊ ತಮ್ಮ ಬಲಗಡೆ ಹುಕ್ ಶಾಟ್ ಅನ್ನು ಆಡಲು ಹೋಗಿ ವಿಕೆಟ್ ಕೀಪರ್ ಅಲೆಕ್ಸಾಂಡರ್‌ಗೆ ಕ್ಯಾಚ್ ಕೊಟ್ಟು ಔಟಾದರು. 228/8

ಮೂರನೆ ಬಾಲ್: ಹೊಸ ಬ್ಯಾಟ್ಸ್‌ಮನ್ ಇಯಾನ್ ಮೆಕಿಫ್ ಬಾಲನ್ನು ಅಲ್ಲೇ ಹತ್ತಿರ ಆಡಿದರು. ರನ್ ಇಲ್ಲ. ಇನ್ನೂ 5 ರನ್ ಬೇಕು 5 ಬಾಲ್‌ಗಳಲ್ಲಿ.

ನಾಲ್ಕನೇ ಬಾಲ್: ಬ್ಯಾಟಿಗೆ ತಗುಲದೆ ವಿಕೆಟ್ ಕೀಪರ್ಗೆ ಹೋಯಿತು. ಅಷ್ಟಾದರೂ ಇಬ್ಬರೂ ರನ್ ಓಡಿಬಿಟ್ಟರು. ನಾಲ್ಕು ರನ್ ಬೇಕು. ನಾಲಕ್ಕು ಬಾಲ್‌ನಲ್ಲಿ.

ಐದನೇ ಬಾಲ್: ಗ್ರೌಟ್‌ನ ಬ್ಯಾಟಿಗೆ ತಾಕಿ ಕ್ಯಾಚ್ ಹೋಯಿತು. ಕನ್ಹಾಯ್ ಕ್ಯಾಚ್ ಹಿಡಿಯುವಾಗ ಹಾಲ್ ಕೂಡ ಅಲ್ಲಿಗೆ ಹಿಡಿಯಲು ಹೋಗಿ, ಕ್ಯಾಚ್ ನೆಲಕ್ಕೆ ಬಿತ್ತು. 3 /3

ಆರನೇ ಬಾಲ್: ಮೆಕಿಫ್ ಬ್ಯಾಟ್ ಬೀಸಿ ಬಾಲು ಬೌಂಡರಿಗೆ ಹೋಗುವಾಗ, ಹಂಟ್ ಅದನ್ನು ತಡೆದು ಎಸೆದರು. ಗೆಲ್ಲುವ ರನ್ ಮೂರನೇದು ಓಡುವಾಗ ರನ್-ಔಟ್ 1/2

ಏಳನೇ ಬಾಲ್: ಒಂದು ರನ್ ಬೇಕು. ಕ್ಲೈನ್‌ನ ಬ್ಯಾಟಿಗೆ ತಾಕಿ ಓಡುವಾಗ, ಸೊಲೊಮನ್ ಧಾವಿಸಿ ವಿಕೆಟ್ ಅನ್ನು ಉರುಳಿಸಿದರು. ಮೆಕಿಫ್ ರನ್ ಔಟ್; ಸ್ಕೋರ್ ಸಮ.

ಟೆಸ್ಟ್ ಮ್ಯಾಚ್ ಮುಗಿಯಲು ಒಂದು ಬಾಲ್ ಬಾಕಿ ಇತ್ತು. ಎರಡು ಟೀಮಿನ ಸ್ಕೋರ್ ಮೊತ್ತ 737 ಆಗಿದ್ದಾಗ ಆಸ್ಟ್ರೇಲಿಯ ಟೀಮಿನಲ್ಲಿ ಎಲ್ಲರೂ ಔಟಾದರು.

ಆ ಮ್ಯಾಚಿನ ರೋಚಕ ಸ್ಥಿತಿ ಎಷ್ಟಾಗಿತ್ತೆಂದರೆ, ಬಹಳ ಕಡೆ ನ್ಯೂಸ್‌ನಲ್ಲಿ ಗೊತ್ತಾಗದೆ ಆಸ್ಟ್ರೇಲಿಯ ಗೆದ್ದರೆಂದರು, ವೆಸ್ಟ್ ಇಂಡೀಸ್ ಗೆದ್ದರೆಂದು ಮಿಕ್ಕವರು. ಆದು ಟೈ ಆಗಿದೆಯೆಂದು ತಿಳಿಯಲು ಸ್ವಲ್ಪ ಹೊತ್ತಾಯಿತು. ಅದರ ಮಹತ್ವ ಅರಿವಾಗಲು ಬಹಳ ಹೊತ್ತಾಯಿತು.

ಆ ಮ್ಯಾಚಿನ 40 ವರ್ಷಗಳ ಪುನರ್ಮಿಲನ 2000 ರಲ್ಲಿ ನಡೆಯಿತು. ನಾಲ್ಕು ಆಟಗಾರರು ಸೇರಿದರು. ಲಿಂಡ್ಸೇ ಕ್ಲೈನ್, ಇಯಾನ್ ಮಿಕಿಫ್, ಝೋ ಸೋಲೊಮನ್ ಮತ್ತು ವೆಸ್ ಹಾಲ್. ಕ್ಲೈನ್ 81 ವಯಸ್ಸಿಗೆ ಕಾಲವಾದರು. 5 ಮ್ಯಾಚುಗಳ ಸರಣಿಯಲ್ಲಿ ಆಸ್ಟ್ರೇಲಿಯ 3-2 ಅಂತರದಲ್ಲಿ ಗೆದ್ದರು.

ಮೊದಲೇ ಟೆಸ್ಟಿನಲ್ಲಿ ಉಪಯೋಗಿಸಿದ ‘ಟೈ’ನಿಂದ ಮುಗಿದ ಬಾಲನ್ನು ಫ್ರೇಮ್ ಹಾಕಿಸಿ ಅದನ್ನು ‘ಫ್ರಾಂಕ್ ವೊರೆಲ್- ರಿಚಿ ಬೆನೊ ಟ್ರೋಫಿ’ ಎಂದು ನಾಮಕರಣ ಮಾಡಿದರು. ಮೊದಲನೇ ಸರಣಿಯಲ್ಲಿ ಗೆದ್ದ ಟ್ರೋಫಿಯನ್ನು ವೊರೆಲ್ ಬೆನೊಗೆ ಕೊಟ್ಟರು. ಆಸ್ಟ್ರೇಲಿಯ ಜನತೆಗೆ ಬಹಳ ಪ್ರಿಯರಾಗಿದ್ದ ವೊರೆಲೆ ಆ ಫ್ರೋಫಿಯನ್ನು ತಾನು ಹಾಕಿಕೊಂಡಿದ್ದ ಕೋಟಿನ ಕೈಯಿಂದ ಒರೆಸಿ ಬೆನೊಗೆ ಕೊಡುತ್ತಿರುವ ದೃಶ್ಯ ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾಯಿತು. ಈಗಲೂ ಆ ದೇಶಗಳ ಸರಣಿ ಆಡಿದಾಗ, ‘ವೊರೆಲ್-ಬೆನೊ’ ಟ್ರೋಫಿಗಾಗಿಯೇ ಆಡುತ್ತಾರೆ.

1962 ರಲ್ಲಿ ಭಾರತ ಮತ್ತು ಬಾರ್ಬೊಡಾಸ್, ವೆಸ್ಟ್ ಇಂಡೀಸ್ ನಡುವೆ ಒಂದು ಮ್ಯಾಚಿನಲ್ಲಿ ಭಾರತದ ಟೀಮಿನ ನಾಯಕ ನಾರಿ ಕಂಟ್ರಾಕ್ಟರ್‌ಗೆ ತಲೆಗೆ ಚಾರ್ಲಿ ಗ್ರಿಫಿತ್ ಅವರ ‘ಬಂಪರ್’ ಬೋಲಿಂಗ್‌ನಿಂದ ತಲೆಗೆ ಏಟುಬಿದ್ದು ಪ್ರಾಣಕ್ಕೆ ಧಕ್ಕೆಯಾಗುವ ಸ್ಥಿತಿಯಲ್ಲಿದ್ದಾಗ, ಮಿಕ್ಕವರ ಜೊತೆ ವೊರೆಲ್ ತಮ್ಮ ರಕ್ತವನ್ನು ಕಂಟ್ರಾಕ್ಟರ್‌ಗೆ ಕೊಟ್ಟು ಅವರ ಪ್ರಾಣವನ್ನು ಕಾಪಾಡಿದರು. ಅದಾದ ಸ್ವಲ್ಪ ವರ್ಷಗಳಲ್ಲಿ ವೊರೆಲ್ ರಕ್ತದ ಕ್ಯಾನ್ಸರ್ ರೋಗದಿಂದ ಮೃತಪಟ್ಟರು.

1 ರನ್ ಸ್ಕೋರ್ ಇದ್ದಾಗಲೇ ಸಿಂಸನ್ ಔಟಾದರು. 7 ರನ್‌ಗೆ ಹಾರ್ವೆ ಪೆವಿಲಿಯನ್‌ಗೆ ಮರಳಿದರು. 6 ವಿಕೆಟ್ ಕೇವಲ 92ಕ್ಕೆ ಬಿತ್ತು. ಎಲ್ಲರೂ ಆಸ್ಟ್ರೇಲಿಯಾಗೆ ಸೋಲು ಖಚಿತ ಎಂದುಕೊಂಡಾಗ ಅಲನ್ ಡೇವಿಡ್ಸನ್ 80 ಮತ್ತು ಟೀಮಿನ ನಾಯ ರಿಚಿ ಬೆನೊ 52 ಪಾಲುದಾರಿಕೆಯಲ್ಲಿ 134 ರನ್ ಮಾಡಿ, ಗೆಲ್ಲುವುದಕ್ಕೆ ಕೇವಲ 7 ರನ್ ಇದ್ದಾಗ ಡೇವಿಡ್ಸನ್ ರನ್ ಔಟಾದರು.

1986ರಲ್ಲಿ ಆಸ್ಟ್ರೇಲಿಯ ಭಾರತಕ್ಕೆ ಬಂದಾಗ ಮೊದಲನೇ ಟೆಸ್ಟ್ ಚೆನ್ನೈ ನಲ್ಲಿ ಸೆಪ್ಟೆಂಬರ್ 18-22 ವರೆಗೆ ಆಡಲಾಯಿತು. ಸೆಪ್ಟೆಂಬರ್ ತಿಂಗಳಾದರೂ ಚೆನ್ನೈನಲ್ಲಿ ಮಳೆ ಬರುವುದಿಲ್ಲ. ಅಲ್ಲಿ ಸಾಧಾರಣವಾಗಿ ಅಕ್ಟೋಬರ್ /ನವೆಂಬರ್ ತಿಂಗಳಲ್ಲೇ ಮಳೆ ಕಾಣಿಸಿಕೊಳ್ಳುವುದು. ಅಲ್ಲಿಯ ತನಕ ಬಹಳ ಬಿಸಿಲು ಇರುತ್ತೆ.

ಟಾಸ್ ಗೆದ್ದ ಆಸ್ಟ್ರೇಲಿಯ ಬ್ಯಾಟಿಂಗನ್ನು ಆಯ್ಕೆಮಾಡಿಕೊಂಡಿತು. ಅವರಿಗೆ ಅಲ್ಲಿನ ಪಿಚ್ ಎಷ್ಟು ಇಷ್ಟವಾಯಿತೆಂದರೆ 574/7 ವಿಕೆಟ್‌ಗೆ ಜಮಾಯಿಸಿದರು. ಅದರಲ್ಲಿ ಎರಡು ಶತಕ, ಮತ್ತೊಂದು ದ್ವಿಶತಕ ಕೂಡಿತ್ತು! ಡೀನ್ ಜೋನ್ಸ್ 210 ರನ್ ಹೊಡೆದರು. ಸುಮಾರು 8 ಘಂಟೆ ಮತ್ತು 330 ಬಾಲ್‌ಗಳನ್ನಾಡಿದ ಜೋನ್ಸ್‌ಗೆ ಬಿಸಿಲಿನ ಝಳ ತಾಕಿ ಅವರಿಗೆ ನಿರ್ಜಲೀಕರಣದಿಂದ ವಾಂತಿ ಮತ್ತು ಕಾಲಿನಲ್ಲಿ ಸೆಳೆತ (ಕ್ರಾಮ್ಸ್) ಬಂತು. ಮೈದಾನದಲ್ಲೇ ಅವರಿಗೆ ವಾಂತಿಯಾಗಿ ಅಲ್ಲೇ ಅವರಿಗೆ ಚಿಕಿತ್ಸೆ ಕೊಡಲಾಯಿತು. ಆವರು ಔಟಾದ ಮೇಲೆ ಅವರನ್ನು ಆಸ್ಪತ್ರೆಗೆ ಸೇರಿಸಿ ಇಂಟ್ರವೆನಸ್ ಮೂಲಕ ಗ್ಲೂಕೋಸ್‌ನ ಹನಿಯನ್ನು ಕೊಡಲಾಯಿತು. ಬದುಕಿದ್ದೇ ಹೆಚ್ಚು ಅನ್ನುವ ಪ್ರಸಂಗವಾಯಿತು ಅದು.

(ಈಗ ಎರಡು ವರ್ಷದ ಹಿಂದೆ 2021ರಲ್ಲಿ ಕಾಮೆಂಟರಿಯಲ್ಲಿ ಪ್ರಸಿದ್ಧರಾಗಿದ್ದ ಡೀನ್ ಜೋನ್ಸ್ ಮುಂಬೈಗೆ ಐಪಿಎಲ್ ಕಾಮೆಂಟರಿ ಮಾಡುವುದಕ್ಕೆ ಬಂದಿದ್ದರು. ಬೆಳಿಗ್ಗೆ ಉಪಹಾರವಾದಮೇಲೆ ಸಹದ್ಯೋಗಿಗಳ ಜೊತೆ ಮಾತನಾಡುತ್ತಿದ್ದಾಗ ಜೋನ್ಸ್ ಹಟಾತ್ತನೆ ಕುಸಿದು ಬಿದ್ದರು. ಅವರಿಗೆ ಹಾರ್ಟ್‌ -ಅಟ್ಯಾಕ್ ಆಗಿತ್ತು. ಅದರಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ.)

ಅಂದು ಡೇವಿಡ್ ಬೂನ್ ಮತ್ತು ನಾಯಕ ಅಲನ್ ಬಾರ್ಡರ್ ಶತಕಗಳನ್ನು ಹೊಡೆದರು. ಇಂತಹ ಸ್ಕೋರಿನ ಎದುರಿಗೆ ಭಾರತ ಅಷ್ಟು ಚೆನ್ನಾಗಿ ಶುರು ಮಾಡಲಿಲ್ಲ. ಸುನಿಲ್ ಗವಾಸ್ಕರ್ 8 ಮತ್ತು ಮೊಹಿಂದರ್ ಅಮರ್‌ನಾಥ್‌ 1 ಹೊಡೆದು ಔಟಾದ ಮೇಲೆ ಶ್ರೀಕಾಂತ್ 53, ಅಝರುದ್ದೀನ್ 50, ರವಿ ಶಾಸ್ತ್ರಿ 53 ಹೊಡೆದರೂ ಭಾರತ 7 ವಿಕೆಟ್‌ಗೆ 245 ಮಾಡಿತ್ತು. ಆಗ ಕಪಿಲ್ ದೇವ್ ಕೇವಲ 138 ಬಾಲ್‌ಗಳಲ್ಲಿ 119 ಬಾರಿಸಿ ಚೇತನ್ ಶರ್ಮ ಅವರ ಜೊತೆ ಪಾಲುದಾರಿಕೆ ಮಾಡಿ ಸ್ಕೋರ್ 330ಕ್ಕೆ ತಂದರು. ಕೊನೆಗೆ ಎಲ್ಲರೂ 397 ಸ್ಕೋರಿಗೆ ಔಟಾದರು. ಚೆನ್ನೈನ ಉರಿಬಿಸಿಲನಲ್ಲೂ ಸ್ವೆಟರ್‌ಧರಿಸಿ ಬೋಲ್ ಮಾಡಿದ ಆಸ್ಟ್ರೇಲಿಯಾದ ಆಫ್ ಸ್ಪಿನರ್ ಗ್ರೆಗ್ ಮ್ಯಾಥ್ಯೂಸ್ 5 ವಿಕೆಟ್‌ಗಳನ್ನು ಪಡೆದರು!

ತನ್ನ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಬೇಗನೆ ಸ್ಕೋರ್ ಮಾಡಿ 170/5 ವಿಕೆಟ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಡೇವಿಡ್ ಬೂನ್ 49 ಹೊಡೆದರೆ ಮಿಕ್ಕವರು 20-30ರ ಮಧ್ಯ ಸ್ಕೋರ್ ಹೊಡೆದರು. ಗೆಲ್ಲುವುದಕ್ಕೆ ಭಾರತಕ್ಕೆ ಆಸ್ಟ್ರೇಲಿಯ 348 ರನ್ ಲಕ್ಷ್ಯವಿಟ್ಟಿತು.

ಮೊದಲಿಂದಲೂ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನಾಗಿ ಆಡುತ್ತದೆ ಎಂದು ಒಂದು ನಂಬಿಕೆಯಿದೆ! ಕೊನೆಗಾದರೂ ಆಟ ಮುಗಿಯುವವರೆಗೆ ಆಡಿ, ಆಟವನ್ನು ಸೋಲು ಗೆಲುವಿಲ್ಲದೆ ಇರುವ ಸ್ಥಿತಿಯನ್ನು ಭಾರತ ಬಹಳ ಸರ್ತಿ ಮಾಡಿದೆ. ಅದನ್ನು ಟೈಮ್ -ಡ್ರಾ ಎಂದು ಕರೆಯುತ್ತಾರೆ. ಆದರೆ ಮೊದಲನೇ ಇನ್ನಿಂಗ್ಸ್‌ಅನ್ನು ಆಡಿದ ರೀತಿ ನೋಡಿದರೆ ಭಾರತ ಗೆಲ್ಲುವುದಿರಲಿ, ಟೈಮ್ -ಡ್ರಾ ಮಾಡುವುದು ಕಷ್ಟವೆಂದು ಎಲ್ಲರಿಗೂ ಅನ್ನಿಸಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಶುರು ಚೆನ್ನಾಗಿ ಆಯಿತು. ವೇಗವಾಗಿ ರನ್ ಹೊಡೆಯಲು ಶುರುಮಾಡಿದ ಶ್ರೀಕಾಂತ್ 39 ರನ್ ಹೊಡೆದು ಸ್ಕೋರ್ 55 ಇದ್ದಾಗ ಔಟಾದರು. ಅಮರ್‌ನಾಥ್‌ 51, ಅಝರುದ್ದೀನ್ 42, ಚಂದ್ರಕಾಂತ್ ಪಂಡಿತ್ 39 ಚೇತನ್ ಶರ್ಮ 23 ಹೊಡೆದು

ಭಾರತದ ಸ್ಕೋರನ್ನು ಬಹಳ ಹತ್ತಿರಕ್ಕೆ ತಂದರು. ರವಿ ಶಾಸ್ತ್ರಿ 46 ರನ್‌ ಹೊಡೆದಿದ್ದರು. ಕಿರನ್ ಮೊರೆ 0, ಶಿವ್ಲಾಲ್ ಯಾಧವ್ 8 ರನ್ ಹೊಡೆದರು. 46ರಲ್ಲಿ ಇದ್ದ ರವಿ ಶಾಸ್ತ್ರಿ ಒಂದು ರನ್ ಹೊಡೆದು ಎರಡೂ ಕಡೆ ಸ್ಕೋರ್ ಸಮನಾಗಿ ಮಾಡಿದರು. ಆಟ ಮುಗಿಯಲು ಇನ್ನೂ ಎರಡು ಬಾಲ್ ಇತ್ತು. ಆದರೆ ಕೊನೆಯ ಬ್ಯಾಟ್ಸ್ಮನ್‌ರಾಗಿ ಬಂದ ಮಣಿಂದರ್ ಸಿಂಘ್ ಮ್ಯಾಥ್ಯೂಸ್‌ರ ಐದನೇ ಬಾಲಿಗೆ ಎಲ್ ಬಿ ಡಬಲ್ಯು ಆಗಿ ಔಟಾದರು! ಮ್ಯಾಚ್ ‘ಟೈ’ ಯಲ್ಲಿ ಮುಕ್ತಾಯಗೊಂಡಿತು! ಎರಡು ತಂಡಗಳು ತಲಾ 744 ರನ್‌ಗಳನ್ನು ಮಾಡಿ ಮ್ಯಾಚ್ ‘ಟೈ’ನಲ್ಲಿ ಕೊನೆಗೊಂಡಿತು.

ಮ್ಯಾಚ್ ಮುಗಿದ ಮೇಲೆ ರವಿ ಶಾಸ್ತ್ರಿಗೆ ನೀವೇ ಎರಡು ರನ್ ಹೊಡೆಯಬಹುದಿತ್ತಲ್ಲವೇ ಎಂದು ಕೇಳಿದ್ದಕ್ಕೆ ಅವರು, ಎರಡು ರನ್ ಹೊಡೆಯುವುದಕ್ಕೆ ಹೋಗಿ ಔಟಾಗಬಹುದು, ಅದಕ್ಕೆ ಒಂದು ರನ್ ಹೊಡೆದು ಪಂದ್ಯವನ್ನು ಸೋಲುವುದಿಲ್ಲ ಎಂದು ಖಚಿತ ಪಡಿಸಿಕೊಂಡೆ ಎಂದರು. ಆದರೆ ದುರದೃಷ್ಟವಶಾತ್ ಮಣಿಂದರ್ ಸಿಂಘ್ ಗೆಲುವಿಗೆ ಬೇಕಾಗಿದ್ದ ಒಂದು ರನ್ ಹೊಡೆಯಲು ಆಗಲಿಲ್ಲ. ಹೀಗಾಗಿ ಮ್ಯಾಚ್ ‘ಟೈ’ನಲ್ಲಿ ಕೊನೆಗೊಂಡಿತು.

ಸ್ಕೋರ್ಗಳ ವಿವರ: 1 2 ಒಟ್ಟು ಸ್ಕೋರ್

ಆಸ್ಟ್ರೇಲಿಯ: 574 /7 170/5 ಡಿ 744

ಭಾರತ: 397 347 744

ಕೊನೆಯ ಓವರ್ ಹೇಗಾಯಿತು?

ಗ್ರೆಗ್ ಮಾಥ್ಯೂಸ್ ಕೊನೆಯ ಓವರ್ ಬೋಲಿಂಗ್ ಮಾಡಿದರು. ಇಂಡಿಯಾಗೆ ಗೆಲ್ಲಲು 4 ರನ್ 6 ಬಾಲುಗಳಲ್ಲಿ ಬೇಕಾಗಿತ್ತು. 345/9

ಮೊದಲನೇ ಬಾಲ್: ಶಾಸ್ತ್ರಿ ರನ್ ಹೊಡೆಯಲಿಲ್ಲ. ಇನ್ನೂ 4 ರನ್ ಬೇಕು 5 ಬಾಲ್ ಇದೆ.
ಎರಡನೇಬಾಲ್: ಶಾಸ್ತ್ರಿ 2 ರನ್ ತೆಗೆದುಕೊಂಡರು. 2 ರನ್ ಬೇಕು, 4 ಬಾಲ್ ಇದೆ.
ಮೂರನೇ ಬಾಲ್: ಶಾಸ್ತ್ರಿ ಒಂದು ರನ್ ತೆಗೆದುಕೊಂಡರು. ಸ್ಕೋರ್ ಸಮನಾಯಿತು. ಒಂದು ರನ್ ಬೇಕು, ಮೂರು ಬಾಲ್ ಇದೆ. ಮಣಿಂದರ್ ಸಿಂಘ್ ಆಡಬೇಕು.
ನಾಲ್ಕನೇ ಬಾಲ್: ರನ್ ಬರಲಿಲ್ಲ. ಗೆಲ್ಲಲು ಒಂದು ರನ್ ಬೇಕು, 2 ಬಾಲ್ ಇದೆ.

ಐದನೇ ಬಾಲ್: ಬಾಲ್ ಮಣಿಂದರ್ ಕಾಲಿಗೆ ತಗುಲಿ, ಎಲ್. ಬಿ. ಡಬಲ್ಯೂ ಗೆ ಔಟಾದರು ಇಂಡಿಯ ಆಲ್ -ಔಟ್. ಸ್ಕೋರ್ ಸಮ. ಟೈ ಆಯಿತು.

ಹೀಗೆ 150 ವರ್ಷಗಳಾಗಿ, 2000 ಟೆಸ್ಟ್ ಮ್ಯಾಚುಗಳಾಗಿ ಕೇವಲ ಎರಡು ಬಾರಿ, ಆಟ ‘ಟೈ’ನಲ್ಲಿ ಮುಕ್ತಾಯಗೊಂಡಿತು. ಆದರೆ ಆ ಐದು ದಿನಗಳ ಪಂದ್ಯ ಅತ್ಯಂತ ರೋಚಕವಾಗಿದ್ದು ಸಾವಿರಾರು ಪ್ರೇಕ್ಷಕರನ್ನು ಪ್ರತ್ಯಕ್ಷವಾಗಿ ಮತ್ತು ಲಕ್ಷಾಂತರ ಜನರನ್ನು ಟಿವಿ ರೇಡಿಯೊ ಮೂಲಕ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತು.

ಇಂತಹ ಪಂದ್ಯವಾಡಿದ ತಂಡಗಳಿಗೆ ಮತ್ತು ತಂಡಗಳ ಸದಸ್ಯರಿಗೆ ಕ್ರಿಕೆಟಾಯ ನಮಃದ ನಮನ.