ಮೊನ್ನೆ ಮುಂಜಾನೆ ಎದ್ದು ಸೀದಾ ಎಲ್ಲಾದರೂ ಹೋಗೋಣ ಎನಿಸುತಿತ್ತು. ಹಾಗೆಯೇ ಇದ್ದಕ್ಕಿದ್ದಂತೆ ಹೊರಟು, ಮನೆಯಿಂದ ಮೆಜೆಸ್ಟಿಕ್ ಹೋಗುವ ತನಕವೂ ಎಲ್ಲಿ ಹೋಗುವುದೆಂದು ತಿಳಿಯದೆ, ಕೊನೆಗೆ ಕುಪ್ಪಳ್ಳಿಯ ನೆನಪಾಗಿ ಅಂದೇ ರಾತ್ರಿಗೆ ಟಿಕೆಟ್ ಬುಕ್ ಮಾಡಿಕೊಂಡು ಕುಪ್ಪಳ್ಳಿ ಸೇರಿದಾಗ ಒಂದು ಸುಖದಲ್ಲಿ ಮನಸ್ಸು ಮಂಕಾಗಿತ್ತು. ಕುಪ್ಪಳ್ಳಿಗೆ ನನ್ನ ಮೊದಲ ಭೇಟಿಯಲ್ಲಿ ಮಳೆ ಸಿಕ್ಕಿದ್ದೂ ಒಂದು ಯೋಗದಂತೆ ಅನ್ನಿಸಿತು. ಮಳೆ ಎಂದರೆ ಹಾಗೇ. ಯಾವ ಕೊಂಪೆಯಲ್ಲಿ ಮಳೆ ಸುರಿದರೂ, ಮಳೆ ಹಾಗೂ ನನ್ನಷ್ಟಕ್ಕೆ ನಾನಿರುವುದು ಎಷ್ಟು ಸುಖ ನೀಡುತ್ತದೆ ನನಗೆ. ಈ ಮಳೆಯ ತಂಪಿಗೂ ಸುಬ್ಬಣ್ಣ ಎಂಬ ಹೆಸರಿಗೂ ಏನಾದರೂ ನಂಟು ಇದ್ದರೂ ಇರಬಹುದೇನೋ ಎಂಬಂತೆ, ನನಗೆ ಅಲ್ಲಿ ಪರಿಚಯವಾದ ಬಹುತೇಕರ ಹೆಸರು ಸುಬ್ಬಣ್ಣ ಎಂದಾಗಿತ್ತು.
ಬೆಕ್ಕನೂರಿನ ಸುಬ್ಬಣ್ಣ, ತೀರ್ಥಹಳ್ಳಿಯ ಅನ್ನುವ ಹೆಸರು ಬಿಟ್ಟು ಇನ್ನೇನೂ ಹೇಳದ ಚುರುಮುರಿ ಸುಬ್ಬಣ್ಣ, ಅಲ್ಲೇ ಹತ್ತಿರದ ನೂರೈವತ್ತು ವರ್ಷಗಳ ಇತಿಹಾಸವಿರುವ ಕಾಸರವಳ್ಳಿ ಮನೆಯ ಕೆಲಸದಾಳು ಸುಬ್ಬಣ್ಣ, ಜೊತೆಗೆ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸುಬ್ಬಣ್ಣ ಹೆಗ್ಗಡೆಯವರೂ ನೆನಪಾದರು. ಅವರ ಹಂದಿದೊಡ್ಡಿಯು ಯಾಕೋ ನೆನಪಾಗಿ ಒಂದು ಅದೆಲ್ಲವನ್ನು ಹುಡುಕುವಂತೆ ಅನ್ನಿಸುತ್ತಿತ್ತು.
ಈ ಬೆಕ್ಕನೂರಿನ ಸುಬ್ಬಣ್ಣನವರ ಹೋಮ್ ಸ್ಟೇ ನಲ್ಲೇ ಉಳಿದುಕೊಂಡಿದ್ದೆ. ಕುಪ್ಪಳಿಗೆ ೨ ಕಿಲೋಮೀಟರ್ ದೂರವಿರುವ ಬೆಕ್ಕನೂರು ಎಂಬುದನ್ನು ಗಣಪತಿಯ ಮೇಲಿನ ಪ್ರೀತಿಯಿಂದಲೋ ಏನೋ ಇವರು ಬೆನಕನೂರು ಎಂದು ಹೇಳುತ್ತಿದ್ದರು. ಇವರೂ ಕುವೆಂಪು ಸಂಬಂಧಿಕರಂತೆ.ನಾನು ಅದೇನೋ ಮೈಮೇಲೆ ಬಂದವರಂತೆ ಕುವೆಂಪು, ಕಾದಂಬರಿಯ ಸೀತೂರು, ಕಾನೂರು, ಮೇಗರವಳ್ಳಿ,ಹುಲಿಕಲ್ಲುನೆತ್ತಿಯ ಬಗ್ಗೆ, ಎಮ್ಮೆ, ಹಂದಿ,ಬಾಡೂಟದ ಬಗ್ಗೆ ಏನೇನೋ ತೋಚಿದಂತೆ ಪ್ರಶ್ನೆಗಳನ್ನು ಕೇಳಿ, ಅವರನ್ನು ಸುಸ್ತಾಗಿಸಿದ್ದೆ.
ಹೀಗೆ ಸಿಕ್ಕಿದವರೊಡನೆ ಮಾತಾಡುತ್ತಾ, ಏನೋ ಸುಖದಲ್ಲಿ ಅಲ್ಲೆಲ್ಲಾ ನೋಡಿಕೊಂಡು ಕವಿಶೈಲಕ್ಕೆ ಹೋದಾಗ ಈ ಮಾನಪ್ಪ, ಕವಿಶೈಲಕ್ಕೆಂದೇ ಇರುವ ಕಾವಲುಗಾರನೋ ಅಥವಾ ಯಾವುದಕ್ಕೂ ಸಂಬಂಧಪಡದೆ ಸುಮ್ಮನೆ ತನ್ನ ಪಾಡಿಗಿರುವ ಜೀವವೋ ತಿಳಿಯಲಿಲ್ಲ. ಅಲ್ಲಿನ ಸರ್ವಸ್ವವೆಲ್ಲ ಗೊತ್ತಿರುವ ಹಾಗೆ, ಅಲ್ಲಿ ಏನೂ ವಿಶೇಷತೆಯಿಲ್ಲದಿರುವ ಹಾಗೆ ಓಡಾಡುತ್ತಿರುತ್ತಾನೆ. ಯಾರಾದರೂ ಬಂದ ತಕ್ಷಣ ಅವರಲ್ಲಿ ತುಂಬಾ ಆಪ್ತನಂತೆ ಅಲ್ಲೇ ಕಲ್ಲು ಬಂಡೆಯ ಮೇಲೆ ಕೆತ್ತಿರುವ ” ಮಿತ್ರರಿರಾ ಮಾತಿಲ್ಲಿ ಮೈಲಿಗೆ ಸುಮ್ಮನಿರಿ….” ಕವಿತೆಯನ್ನು ಒಂದೇ ಉಸಿರಿನಲ್ಲಿ ಕಂಠಪಾಠ ಒಪ್ಪಿಸುವಂತೆ ತನ್ನದೇ ಒಂದು ವಿಶೇಷ ಧಾಟಿಯಲ್ಲಿ ಕಾವ್ಯ ವಾಚನದಂತೆ ಹೇಳುತ್ತಾನೆ. ಅದೆನೋ ಅವನ ಸ್ಪಷ್ಟ ಉಚ್ಚಾರಣೆಗೋ, ಅಲ್ಲಿನ ಆ ವಾತಾವರಣಕ್ಕೋ, ಆ ಕವಿತೆಗೋ, , ಕೇಳಿದ ತಕ್ಷಣ ದೈವಿಕತೆಯಂತೆ ಅನಿಸುತ್ತದೆ.
ನಾನೊಂದು ಬಂಡೆಯಲ್ಲಿ, ಮಾನಪ್ಪ ಇನ್ನೊಂದು ಬಂಡೆಯಲ್ಲಿ ಅದೆಷ್ಟು ಹೊತ್ತೋ ಸುಮ್ಮನೆ ಕುಳಿತುಕೊಂಡಿದ್ದೆವು. ಅದೇನು ಯೋಚನೆಗಳೋ, ಆ ಬಂಡೆಯ ಮೇಲೆ ಯಾರೆಲ್ಲಾ ಕುಳಿತು ಏನೇನು ಯೋಚಿಸುತ್ತಿದ್ದರೋ, ಅಲ್ಲಿನ ಬೆಳಗು, ಬೈಗು ಬಂಡೆ, ಮರ ಗಿಡ, ಆಕಾಶ, ಸೂರ್ಯ ಅವರಿಗೆ ಹೇಗೆ ಕಾಣಿಸಿರಬಹುದೋ, ಯಾರಿಗೂ ಮಾತು ಬೇಡವಾಗಿತ್ತು. ಹಾಗೇ ಏನೇನೋ ಲಹರಿಗಳು, ಏನೋ ಸಿಕ್ಕ ಹಾಗೆ, ಜಾರಿಕೊಂಡ ಹಾಗೆ ಅಲ್ಲಿದ್ದ ಎಲ್ಲಾದಕ್ಕೂ ಏನೋ ಅರ್ಥವಿರುವ ಹಾಗೆ ಇಲ್ಲದ ಹಾಗೆ ಅನ್ನಿಸುತ್ತಿತ್ತು. ಸುಮ್ಮನೆ ಆಲಸಿಯಂತೆ ಕುಳಿತಿದ್ದ ಮಾನಪ್ಪ ಏನು ಯೋಚಿಸುತ್ತಿದ್ದನೋ ತಿಳಿಯದು. .
ಬಂದು ಸುಮ್ಮನೆ ನೋಡಿ ಹೋಗುವವರು, ಧ್ಯಾನಿಸುವವರು, ಮಕ್ಕಳು, ಮುದುಕರು, ಎಲ್ಲರೂ ಬರುತ್ತಿದ್ದರು. ಬೆಳಗಿನ ಎಳೆ ಬಿಸಿಲಿಗೂ, ಮಧ್ಯಾಹ್ನದ ಕಡು ಬಿಸಿಲಿಗೂ, ಸಂಜೆಯ ಮಳೆ ಹನಿಗೂ ಬಂಡೆಯ ಮೇಲೆ ಹಾಗೇ ಕುಳಿತಿದ್ದೆ. ಸ್ವಲ್ಪ ಹೊತ್ತು ಮೌನ, ಸ್ವಲ್ಪ ಹೊತ್ತು ಗದ್ದಲ. ಒಂದು ಅರಿವು; ಒಂದು ಶೂನ್ಯ ತಾಮುಂದೆ ನಾಮುಂದೆ ಎಂದು ಅಲೆಯಂತೆ ಹಾತೊರೆಯುತ್ತಿತ್ತು. ಈ ಕವಿ ಮನಸ್ಸು, ಒಳ ಮನಸ್ಸು, ಹೊರ ಮನಸ್ಸು, ಎಲ್ಲದನ್ನ ಬಿಟ್ಟು ಸುಮ್ಮನೆ ಉಸಿರಾಡುವಷ್ಟೇ ನಿಜದಂತೆ ಹಗುರವಾಗಿತ್ತು. ಸಂಜೆ ಕವಿಶೈಲದಿಂದ ಹಿಂದಿರುಗುವಾಗ ಮಾನಪ್ಪ ಯಾರಿಗೋ ಕವಿತೆ ಹೇಳುತ್ತಿದ್ದ. ನಾನು ಹೊರಟಾಗ ದೂರದಿಂದಲೇ ಕೈಬೀಸಿ ಒಂದು ಕ್ಷಣ ನಕ್ಕು ಕೆಲಸದಲ್ಲಿ ಮಗ್ನನಾಗಿದ್ದ. ಮತ್ತೆ ಇನ್ನೊಂದು ಸಲ ಹೀಗೇ ಅದೇ ಮಾನಪ್ಪ ಅದೇ ನಾನು ಮತ್ತು ಅದೇ ಕವಿಶೈಲದ ಅಂದಿನ ಸಂಜೆ ಮತ್ತೆ ಸಿಗುತ್ತದೋ ಇಲ್ಲವೋ ತಿಳಿದಿಲ್ಲ.
ತನ್ನ ಮೂವತ್ತಮೂರನೆಯ ಎಳವೆಯಲ್ಲೇ ಗತಿಸಿದ ಕನ್ನಡದ ಅನನ್ಯ ಕವಯಿತ್ರಿ. ಮೂಲತಃ ಉಡುಪಿಯವರು. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ‘ನಕ್ಷತ್ರ ಕವಿತೆಗಳು’ ಇವರ ಏಕೈಕ ಕವಿತಾ ಸಂಕಲನ.