ಕುಕ್ಕರು ಈಗ ಮೊದಲಿನಂತಿಲ್ಲ.
ಶ್‍ಶ್..ಶ್‍ಶ್..ಕುಕ್ಕರು
ಇನ್ನೇನು ಸಿಳ್ಳೆ ಹೊಡೆಯುವ ಹೊತ್ತು
ಚಕ ಚಕನೆ ಮುಂದಿನ ತಯಾರಿಗೆ
ಅಣಿಗೊಳ್ಳಬೇಕು.
ಇಂತಿಷ್ಟೇ ಸಮಯ
ನೀರಿಟ್ಟು ಬೇಕಿರುವುದನ್ನೆಲ್ಲಾ
ಗಮನವಿಟ್ಟು ಹಾಕಿ
ಒಲೆಯ ಮೇಲಿಟ್ಟು ಉರಿ ತಾಕಿಸಿದರಷ್ಟೇ
ಸಾಕು.
ಎದೆಯ ಕಾವು ಹೆಚ್ಚಾಗಿ
ತಕತಕನೆ ಕುಣಿದು
ಕೊತ ಕೊತನೆ ಕುದಿದು
ಪ್ರತಿಭಟನೆಯ ಕೂಗು ಓಣಿ ತಿರುವಿನವರೆಗೂ
ಹಿಂದು ಮುಂದು ಒಂದರ ನಂತರ ಒಂದು
ಕಿಟಕಿ ಕಂಡಿಯ ದಾಟಿ ಹೋಗುತ್ತಿದೆ
ಹಬೆಯ ಘಾಟು.
ಮುಚ್ಚಳ ತೆರೆದರೆ ಎಲ್ಲಾ
ಹದಬೆಂದು ನಿಂತಿದೆ
ಎದೆಯುರಿ ತಣಿದು ತಹಬದಿಗೆ
ಬಂದಂತಿದೆ.
ಅವಗಣನೆಯ ಆವೇಶಕ್ಕೆ
ಕರೆ ಕರೆದು ಕೂಗಿದ್ದು
ಉಪಸ್ಥಿತಿಯ ಅವಾಗಾಹನೆಗೆ ತಂದು
ಆರಿ ತಣ್ಣಗಾದದ್ದು.
ಇತ್ತೀಚೆಗೆ ಕುಕ್ಕರಿಗೆ ಯಾಕೋ
ಮೊದಲಿನ ಹುರುಪಿಲ್ಲ.
ಸಿಳ್ಳೆ ಹೊಡೆಯುವುದೂ ಇಲ್ಲ
ಹಬೆ ಕಾರುವುದೂ ಇಲ್ಲ
ಕರ್ತವ್ಯದಲ್ಲೇನು ಎಳ್ಳಷ್ಟು ಲೋಪವಿಲ್ಲ.
ಶ್‍ಶ್..ಅಷ್ಟೆ ಮೆಲುದನಿಯ ನಿಟ್ಟುಸಿರು
ವೃಥಾ ಕೂಗು ವ್ಯರ್ಥ
ಹೊಳೆದಂತಿದೆ ಹೊಸ ಅರ್ಥ.
ಯೋಚಿಸುತ್ತಿದ್ದೇನೆ..
ಒಂದು ಬಾರಿ ರಿಪೇರಿ ಮಾಡಿಸಿ
ನೋಡಲೇ?
ಇಲ್ಲವೇ ಬದಲಾಯಿಸಿ ಬಿಡಲೇ?
ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆಯ ಬಳಿಯವರು.
ಅಡುಗೆ, ಕೃಷಿ ಮತ್ತು ಕವಿತೆ ಇವರ ಆಸಕ್ತಿಯ ವಿಷಯಗಳು.
‘ತುಟಿಯಂಚಲಿ ಉಲಿದ ಕವಿತೆಗಳು’ ಹಾಗೂ ‘ಕಾಲ ಕಾಯುವುದಿಲ್ಲ’ ಇವರ ಕವನ ಸಂಕಲನಗಳು.
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ