”ಜಲಪಾತದ ದಾರಿ ಹಿಡಿದರೆ ಬೇಸಿಗೆಯಲ್ಲಿ ನಿರಾಳವಾಗಿದ್ದ ಆ ದಾರಿ ಈಗ ಮುಚ್ಚಿ ಹೋಗಿತ್ತು. ಅಲ್ಲಿರುವ ಪೊದೆಯನ್ನೆಲ್ಲಾ ಸವರುತ್ತಾ ಇರುವಾಗ ಮಳೆ ಜೋರಾಯಿತು. ಎದುರಿಗೆ ತೀರಾ ಇಳಿಜಾರಿನ ಪ್ರಪಾತದಂತಹ ದಾರಿ. ಬೆನ್ನು ಬಗ್ಗಿಸಿ ತೆವಳುತ್ತಾ ಸಾಗುತ್ತಿರುವಾಗ ಸುತ್ತಲೂ ಇರುಳಂತೆ ಮೋಡದ ಕತ್ತಲು. ದೂರದಲ್ಲಿ ಗಿರಿ ಶ್ರೇಣಿಯೊಂದು ಆ ವೇಳೆಗೆ ಜಿಗ್ಗಂತ ಹಸುರಲ್ಲಿ ಮಿಂಚುತ್ತಿತ್ತು. ಅದರ ಮೈ ಮೇಲೆ ಬಿಳಿಯ ಸೆರಗಿನ ಹಾಗೆ ಜಲಪಾತವೊಂದು ನೊರೆ ಹಾಲಿನಂತೆ ಹಾಗೇ ಜಾರುತ್ತಿತ್ತು”
ಪ್ರಸಾದ್ ಶೆಣೈ ಬರೆಯುತ್ತಿರುವ ಮಾಳ ಕಾಡಿನ ಕಥೆಗಳು.
ಭೋರೆಂದು ಮಳೆ ಸುರಿಯುವಾಗ ಬೇರೇನೂ ಮಹಾ ಕೆಲಸ ಮಾಡಲಾಗದಿದ್ದರೂ ಸುಮ್ಮನೇ ಮಳೆಯಲ್ಲಿ ನೆನೆಯುತ್ತಾ ಕಾಡ ಹಸಿರಿನ ದಾರಿಯಲ್ಲಿ ಕರಗಿ ಹೋಗಬೇಕು. ಹಸಿರಿನ ಕಾಡೊಳಗೆ ಹೋಗುತ್ತಾ ಹೋಗುತ್ತ ನೀವೂ ಹಸಿರಾಗಿ ನಿಮ್ಮ ಕುಲ, ಗೋತ್ರ, ರಾಶಿ, ನಕ್ಷತ್ರ, ಹೆಸರೆಲ್ಲಾ ಒಮ್ಮೆ ಮರೆತು ಹೋಗಿ ಹಸಿರೇ ಆ ಕ್ಷಣಕ್ಕೆ ನಿಮ್ಮ ಹೆಸರಾಗಿಬಿಡಬೇಕು. ನಿಜವಾದ ಖುಷಿ ಇರೋದು ಕಳೆದು ಹೋಗುವುದರಲ್ಲೇ. ಅದೂ ಜಿಟಿ ಜಿಟಿ ಮಳೆಯ ಹಿತವಾದ ಸದ್ದಿನಲ್ಲಿರಬಹುದು, ಸದ್ದಿರದೇ ಪಿಸುನುಡಿವ ಮಲೆನಾಡ ಬನಗಳಲ್ಲಿರಬಹುದು, ದೂರದಲ್ಲಿ ನಿಡಿಯಾಗಿ ಕಾಣಿಸುವ ಕುದುರೆಮುಖದ ಕಾಡಿನ ನೆತ್ತಿಯಲ್ಲಿರಬಹುದು, ಮಾಳ ಕಾಡಿನಲ್ಲಿ ಆ ಮಳೆಗೆ ತೊಯ್ದು ತೊಪ್ಪೆಯಾಗಿ ಹಸಿರಿನ ಮುಂಡಾಸಿನಂತೆ ಕಾಣುವ ಆ ಪುಟ್ಟ ಮನೆಯ ಚಂದದಲ್ಲಿರಬಹುದು, ಒಟ್ಟಾರೆ ಮಳೆಗಾಲದಲ್ಲಿ ಹೀಗೇ ಎಲ್ಲಾದರೂ ಕಳೆದುಹೋಗುವ ಸುಖವಿದೆಯಲ್ವಾ ಅದನ್ನು ಮೀರಿದ್ದು ಯಾವುದೂ ಇಲ್ಲ ಅನ್ನಿಸುತ್ತದೆ ನಂಗೆ.
ಮಳೆಗಾಲದಲ್ಲೇ ಕಾಡಿನ ಚೆಲುವು, ಒಲವಲ್ಲಿ ಕಳೆದುಹೋದರೆ ಸಿಗುವ ಸುಖ ಬೇರ್ಯಾವ ಕಾಲದಲ್ಲಿ ಸಿಗಲಿಕ್ಕಿಲ್ಲ. ಮಳೆ ಮತ್ತು ಕಾಡು, ತುಟಿ ಮತ್ತು ಮುತ್ತು ಇದ್ದ ಹಾಗೇ. ತುಟಿ ಇರದೇ ಹಿತವಾದ ಮುತ್ತು ಕೊಡೋದು ಹೇಗೆ? ಮುತ್ತೇ ಕೊಡದಿದ್ದರೆ ತುಟಿ ಇರೋದು ಯಾತಕ್ಕೆ? ಅಂತೊಂದು ತುಂಟ ಹೋಲಿಕೆ ಬಂದು ಬಿಡುತ್ತಿದೆ ನನಗೆ. ಮಳೆ ಇರದ ಕಾಡನ್ನು ಕಲ್ಪಿಸೋಕೆ ಸಾಧ್ಯವಿಲ್ಲ. ಕಾಡಲ್ಲಿ ಹದವಾಗಿ ಬೀಳುವ ಮಳೆಯನ್ನು ಕಲ್ಪನೆಯಲ್ಲಷ್ಟೇ ಕಂಡು ಸವಿಯಲು ಸಾಧ್ಯವಿಲ್ಲ. ವಾಟ್ಯ್ಸಾಪಿನ ಗುಂಡಿಗಳಲ್ಲಿ ಚೆಂದದ್ದೊಂದು ಕಾಡಿನ ಚಿತ್ರದ ಜೊತೆಗೆ ಗುಡ್ ಮಾರ್ನಿಂಗ್ ಸಂದೇಶ ಕಳಿಸಿ ನಾವು ಕಾಡನ್ನು ರಸಿಕರಂತೆ ಇಷ್ಟಪಡುತ್ತಿದ್ದೇವೆ ಅಂತ ಫೋಸು ಕೊಟ್ಟರೂ ಆ ಮಳೆ ಬೀಳುವ ಕಾಡನ್ನು ಯಾವ ಚಿತ್ರಗಳೂ ಕಟ್ಟಿಕೊಡೋಕೆ ಸಾಧ್ಯವಿಲ್ಲ. ಚಿತ್ರಗಳನ್ನೂ ಮೀರಿಸಿದ ಆ ಕಾಡಿನ ಸೊಗಸನ್ನು ನಾವೇ ಹೋಗಿ ಸ್ವತಃ ಅನುಭವಿಸಿಬಿಡಬೇಕು ಅಷ್ಟೆ. ಸೀದಾ ಕಾಡಿನ ದಾರಿಗೆ ನಡೆದುಬಿಡಬೇಕು ಅಂತ ಆ ಸಂಜೆ ಧಾರೆಯಾಗಿ ಬೀಳುತ್ತಿರುವ ಮಳೆಯಲ್ಲೇ ನಾವು ಮಾಳ ಕಾಡಿನ ದಾರಿ ಹಿಡಿದೆವು.
ಅಬ್ಬಾ ಮಳೆಗೆ ಕಾಡನ್ನು ಧೇನಿಸಿದರೆ ಸ್ವರ್ಗದ ತುದಿಯಲ್ಲೇ ಜೀಕಿದಂತೆ, ಧೋ ಧೋ ಅಂತ ವೀಣೆ ಮೀಟುವ ಮಳೆಗೆ ಒದ್ದೆಯಾಗಿ ತಂತಿ ಬೇಲಿಯ ಮೇಲೆ ಕೂತ ಕಾಡ ಹಕ್ಕಿಗಳನ್ನು ನೋಡುತ್ತಾ, ರಸ್ತೆಯಂಚಿಗೆ ಕುಣಿಯುವುದೋ, ಬಿಡುವುದೋ. ಯಾವುದಾದರೂ ಹಾಳು ಮನುಷ್ಯನ ಕಣ್ಣು ತನ್ನನ್ನು ನೋಡುವುದೋ ಎಂದು ನಡುಗಿ ರೆಕ್ಕೆ ಬಿಚ್ಚಿ ಕುಣಿಯಲು ಪ್ರಯತ್ನಿಸುವ ಆ ನವಿಲಿನ ಚೆಲುವಿಗೆ ಮನಸೋತು ಇಡೀ ಮೈ ಚೆಂಡಿಯಾಗುತ್ತ ಸಾಗುತ್ತಿದ್ದೆವು. ಮಾಳದ ಕಾಡಲ್ಲಿ ಜೋಗಕ್ಕಳ ತಂಗಿಯಂತಿರುವ ಜಲಪಾತವನ್ನೊಮ್ಮೆ ಕಣ್ಣ ಕೆಮರಾದಲ್ಲಿ ಸೆರೆಯಾಗಿಸಬೇಕು ಎಂದು ಆಸೆ ಪಡುತ್ತಾ ಹಸಿರ ದಾರಿ ಹೊಕ್ಕಾಗ ಅಲ್ಲೆಲ್ಲೋ ಹೊಳೆಯುತ್ತಾ ನಿಂತಿರುವ ಬೆಟ್ಟಸಾಲುಗಳು ಅಷ್ಟೊತ್ತಿಗೆ ಗಾಢ ನೀಲಿಯಾಗಿ ಮಂಜನ್ನೆಲ್ಲಾ ತಿಂದು ಕೊಬ್ಬಿ ಕಣ್ಣ ಮುಂದೆ ಅಮಾಯಕ ಹುಡುಗನಂತೆ ನಿಂತಿತ್ತು. ಅದಕ್ಕೊಮ್ಮೆ ಅಲ್ಲಿಂದ ಹೂ ಮುತ್ತು ಕೊಟ್ಟು ಸೀದಾ ನಡೆದು ಹೋದದ್ದು ಹಸಿರೇ ಹೆಸರಾಗಿರುವ, ಕಾಡಹಕ್ಕಿಗಳ ಉಸಿರೇ ತುಂಬಿಕೊಂಡ ಆ ನಿಗೂಢ ದಾರಿಯಲಿ, ಅಲ್ಲಿ ಹೋಗುವ ಹೊತ್ತಿಗೆ ಮಳೆ ಹನಿಗಳು ಹಠ ಜಾಸ್ತಿಮಾಡಿ ಧೋ ಧೋ ಸುರಿದು, ಹಸಿರು ಅನ್ನೋ ಕಾಡಮ್ಮನ ಸೆರಗಿಡಿದು ರಚ್ಚೆ ಹಿಡಿಯಲು ಶುರು ಮಾಡಿತು. ಮಳೆಯ ಜಾಕೆಟ್ ಹಾಕಿದ್ದರೂ ಕಾಡಿನ ಮಳೆ ಅಂದರೆ ಸುಮ್ಮನೆಯಾ? ಅದು ಮೈಯಲ್ಲೆಲ್ಲಾ ಇಳಿದು ಚಂಡಿ ಮಾಡದಿದ್ದರೆ ಅದೊಂದು ಮಳೆಯಾ ಹೇಳಿ? ಚಂಡಿಯಾಗುತ್ತ ಸಾಗಿದಾಗ ಆ ಕಿರಿದಾದ ದಾರಿ, ಪಾಚಿಗಟ್ಟಿ ಆ ಕಾಡಿನ ಮೋಡದ ಕತ್ತಲಿನಲ್ಲಿಯೂ ಜಿಗ್ಗೆಂದು ಮಿಂಚುತ್ತಿತ್ತು. ಕೊಂಚ ಮುಂದಕ್ಕೋದರೆ ತೀರಾ ಇಳಿಜಾರು, ಮಳೆ ನೀರೆಲ್ಲಾ ಒಟ್ಟಾಗಿ ಕಿರು ಜಲಪಾತವಾಗಿ ಕಾಲನ್ನು ತೋಯಿಸುತ್ತಿತ್ತು. ಜಲಪಾತದ ಸನಿಹದಲ್ಲೇ ಇರುವ ಆ ಮನೆಯನ್ನು ಹುಡುಕುತ್ತಾ, ಹುಡುಕುತ್ತಾ ಕೊನೆಗೆ ಆ ಮನೆಯ ಅಂಗಳಕ್ಕೇ ಬಂದುಬಿಟ್ಟೆವು. ಅದು ಸಂಪ್ರದಾಯಸ್ಥ ಚಿತ್ಪಾವನ ಬ್ರಾಹ್ಮಣರೊಬ್ಬರ ಮನೆ. ಆ ಮನೆಯಲ್ಲಿ ಪ್ರಾಯವಾದ ದಂಪತಿಗಳು, ಮತ್ತು ಶೂನ್ಯವನ್ನೇ ನೋಡುತ್ತಾ ಬದುಕಿನ ಇಳಿಸಂಜೆಯಲ್ಲಿಯೂ ನಸುನಗುವ ಅಜ್ಜಿ ಇದ್ದರು. ನಾವು ಅಂಗಳಕ್ಕೆ ಕಾಲಿರಿಸಿದ್ದೇ ತೋಟದಲ್ಲಿದ್ದ ಆ ಮನೆಯ ಹೆಂಗಸು ನಮ್ಮನ್ನು ಪರಿಚಯದವರಂತೆ ಕಂಡು, “ಎಲ್ಲಿ ಫಾಲ್ಸಿಗೆ ಹೊರಟಿದ್ದಾ ಸವಾರಿ” ಎಂದರು.
ಕಾಡಲ್ಲಿ ಹದವಾಗಿ ಬೀಳುವ ಮಳೆಯನ್ನು ಕಲ್ಪನೆಯಲ್ಲಷ್ಟೇ ಕಂಡು ಸವಿಯಲು ಸಾಧ್ಯವಿಲ್ಲ. ವಾಟ್ಯ್ಸಾಪಿನ ಗುಂಡಿಗಳಲ್ಲಿ ಚೆಂದದ್ದೊಂದು ಕಾಡಿನ ಚಿತ್ರದ ಜೊತೆಗೆ ಗುಡ್ ಮಾರ್ನಿಂಗ್ ಸಂದೇಶ ಕಳಿಸಿ ನಾವು ಕಾಡನ್ನು ರಸಿಕರಂತೆ ಇಷ್ಟಪಡುತ್ತಿದ್ದೇವೆ ಅಂತ ಫೋಸು ಕೊಟ್ಟರೂ ಆ ಮಳೆ ಬೀಳುವ ಕಾಡನ್ನು ಯಾವ ಚಿತ್ರಗಳೂ ಕಟ್ಟಿಕೊಡೋಕೆ ಸಾಧ್ಯವಿಲ್ಲ.
ಮಳೆ ಹನಿಗಳ ನಡುವೆಯೇ “ಹೌದು” ಎಂದು ನಸುನಕ್ಕೆವು. ಮತ್ತೂ ಅವರ ಹತ್ತಿರಾಗುತ್ತಾ ಅವರನ್ನೊಮ್ಮೆ ನೋಡಿದಾಗ ಸಹಜವಾಗಿ ತೀರಾ ಪರಿಚಯವುಳ್ಳವರಂತೆ ಅವರೂ ನಸುನಕ್ಕರು. ಆದರೆ ಅವರ ಕೈಯಲ್ಲಿ ಮಂಗಗಳಿಗೆ ಹೊಡಿಯುವ ಸಣ್ಣ ಕೋವಿಯೊಂದು ಕಂಡಿದ್ದೇ “ನಮಗೆ ಹೊಡಿಬೇಡಿ ಮಾರಾರ್ರೆ ನಾವು ಪಾಪದ ಜನ” ಎಂದು ಸುಮ್ಮನೆ ಹೆದರಿದಂತೆ ನಟಿಸಿದೆವು.
“ಅಯ್ಯೋ ನಿಮ್ಮನ್ಯಾಕೆ ಹೊಡಿಯೋದು, ಮಂಗಗಳ ಉಪದ್ರವ ಜಾಸ್ತಿಯಾಗಿದೆ ನೋಡಿ, ತೋಟದಲ್ಲೆಲ್ಲಾ ಅದ್ರದ್ದೇ ಕಾರುಬಾರು. ಈ ರಾಶಿ ಮಂಗಗಳ ಎದುರು ನಮ್ಮ ಅರುಚಾಟ, ಕಿರುಚಾಟ, ಬೆವರ ಹನಿ, ಸಿಟ್ಟು, ಹತಾಶೆ, ಆಶೆ, ಎಲ್ಲವೂ ಕ್ಷುಲ್ಲಕ ನೋಡಿ” ಎ೦ದರು. “ಕೋವಿಯಿಂದ ಎಷ್ಟಂತ ಹೊಡಿತೀರಿ ಅಮ್ಮ? ಎಷ್ಟಂತ ಹೆದರಿಸ್ತೀರಿ ಮಂಗಗಳನ್ನು?” ಅಂದಿದ್ದಕ್ಕೆ,
“ಅದೂ ಹೌದು. ಆದ್ರೆ ಅದಕ್ಯಾರು ಹೊಡೀತಾರೆ, ಹೆದರಿಸೋದು ಅಷ್ಟೆ. ಆದ್ರೆ ಅವುಗಳ ಸಾಮ್ರಾಜ್ಯ ನೋಡಿ ನಾವೇ ಹೆದರ್ಕೊಂಡು ಹೋಗ್ಬೇಕು ಹಾಗಾಗಿದೆ ಸ್ಥಿತಿ” ಎಂದು ನಸು ನಕ್ಕರು. ಮತ್ತೂ ಚೂರು ಹತ್ತಿರಬಂದು “ಯಾರಿಗೂ ಹೇಳ್ಬೇಡಿ, ನಾನೊಂದು ದಿನ ಮಂಗನನ್ನು ಢಂ ಮಾಡಿದ್ದೆ. ಅದು ಸತ್ತೋಗಿತ್ತು” ಎಂದು ಮಹಾ ರಹಸ್ಯವನ್ನು ಹೇಳುತ್ತಿರುವಂತೆ ಹಗುರನೇ ಆ ಕಾಡಿನ ಮೌನದಲ್ಲೇ ಪಿಸುಗುಟ್ಟಿದರು.
“ಎಂಥ ಮಾಡುದು ಹೇಳಿ ಕೆಲವೊಮ್ಮೆ ಅವುಗಳ ಕಾಟ ತಡೆದುಕೊಳ್ಳೊಕೆ ಸಾಧ್ಯವಿಲ್ಲ. ಆಗ ಬೇರೆ ಉಪಾಯವಿಲ್ಲದೇ ಹೊಡಿಬೇಕಾಗುತ್ತೆ. ಆದ್ರೆ ಅವುಗಳನ್ನು ನೋಡಿದಾಗ ಬೇಸರವೂ ಬರುತ್ತೆ. ಪಾಪ ಕಾಡನ್ನು ನಾವೇ ಸಿಗಿದು ತೋರಣ ಕಟ್ಟುತ್ತಿರುವಾಗ ಅವುಗಳು ಏನು ತಿನ್ನೋದು ಮಣ್ಣು? ಆಹಾರ ಹುಡುಕಿಕೊಂಡು ತೋಟ ನುಗ್ಗುತ್ತೆ. ಅದಕ್ಕೇನು ಗೊತ್ತು ಅದು ನಮ್ಮ ತೋಟ ಅಂತ, ಅವುಗಳ ಕಾಡಿಗೆ ನಾವು ಬಂದು ಕೂತಿದ್ದು ಅಲ್ವಾ? ಇದು ಅವುಗಳದ್ದೇ ಜಾಗ. ಇದಕ್ಕೆ ನಿಜವಾದ ಹಕ್ಕುದಾರರು ಅವುಗಳೇ. ಆದ್ರೆ ನಾವೇ ಕೈಯಾರೆ ಮಾಡಿದ ತೋಟ ಹೀಗಾಗುತ್ತಿದ್ರೆ ಒಳಗೊಳಗೇ ಉರಿಯಲ್ಲವಾ ಹೇಳಿ? ಅದಕ್ಕೆ ಆದಷ್ಟು ಓಡಿಸೋದು. ಆವತ್ತೇ ಕೊನೆ ಮತ್ತೆ ಮಂಗಗಳನ್ನು ನಾನು ಸಾಯಿಸಿಲ್ಲ. ಈಗೇನಿದ್ರೂ ದಮ್ಕಿ ಹಾಕೋದು ಅಷ್ಟೇ” ಎಂದರು. ಅವರ ತೋಟವನ್ನೇ ದಿಟ್ಟಿಸುತ್ತಾ ಈ ಅಮ್ಮನಂತಹ ಹೆಂಗಸು ಎಷ್ಟೊಂದು ಸಹಜವಾಗಿ ಮಾತಾಡುತ್ತಿದ್ದಾರಲ್ವಾ? ಅಂತ ಅವರನ್ನೇ ನೋಡಿದೆ. ಆ ಕಂಗಳಲ್ಲಿ ಬದುಕಿನ ಎಷ್ಟೋ ಕಷ್ಟಗಳನ್ನು ನಗುತ್ತಾ ಎದುರಿಸಿದ ಅನುಭವದ ಬೆಳಕೊಂದು ಮಿಂಚುತ್ತಿರುವ ಹಾಗೆ ಕಂಡಿತು.
ಇಬ್ಬರು ಮಕ್ಕಳು ಬೆಂಗಳೂರಲ್ಲಿ ನೆಲೆಸಿದ್ದಾರೆ. ಏನೇ ಆಗಲಿ ಈ ತೋಟವನ್ನು ಮಾತ್ರ ಎಷ್ಟೇ ಕಷ್ಟವಾದರೂ ಬಿಡೋದು ಬೇಡ ಅಂತೆಲ್ಲಾ ಹೇಳ್ತಾರೆ. ನನಗೂ ಅಷ್ಟು ಸುಲಭಕ್ಕೆ ಬಿಡೋಕೆ ಆಗಲ್ಲ. ಪೇಟೆಯಲ್ಲಿ ಒಂದು ಕ್ಷಣ ನಿಲ್ಲೋಕೂ ಆಗುದಿಲ್ಲ. ಈ ಕಾಡಿನ ಜೀವನವೇ ಹಿತ, ರಟ್ಟೆ ಮುರಿದು ಕೆಲಸ ಮಾಡಬೇಕು ಅದೇ ಖುಷಿ” ಎಂದವರು ಹೇಳಿದಾಗ ಆ ಕಾಲದ ಹೆಂಗಸರು ಮಾಡುವ ಅಚ್ಚುಕಟ್ಟಾದ ಕೆಲಸಗಳು ಕಣ್ಣ ಮುಂದೆ ಬಂದಿತು. ಅವರ ಬಗ್ಗೆ ನನಗಿರುವ ಗೌರವವೂ ಆ ಕಾಡಿನ ಧ್ಯಾನದಲ್ಲಿ ಹೆಚ್ಚುತ್ತಲೇ ಹೋಯಿತು. ಕೋವಿ ಹಿಡಿದ ಅವರ ಫೋಟೋ ಕ್ಲಿಕ್ಕಿಸೋಣವೆಂದು ಕೆಮರಾ ತಿರುಗಿಸಿದೆ “ಅಯ್ಯೋ ಫೋಟೋ ಯಾಕೆ? ನೀವೆಲ್ಲಾ ಹುಡುಗರು ಅದೇನೋ ಇದೆಯಲ್ಲಾ ಫೇಸ್ಬುಕ್ ಅಂತ, ಅಲ್ಲೆಲ್ಲಾ ಹಾಕಿದ್ರೆ ಅಷ್ಟೇ ಕತೆ” ಎಂದರು. “ಕೊನೆಗೂ ನಿಮ್ಮ ಫೋಟೋವನ್ನು ನಮ್ಮ ನೆನಪಿಗಷ್ಟೇ ತೆಗೆದದ್ದು, ಅದನ್ನು ಎಲ್ಲಿಯೂ ಒಳಸಿಕೊಳ್ಳುವುದಿಲ್ಲ” ಎನ್ನುವ ಒಪ್ಪಂದವಾದ ಒಳಿಕ ಅವರದ್ದೊಂದು ಫೋಟೋ ಸಿಕ್ಕಿತು.
“ಅಯ್ಯೋ ನಂದೊಳ್ಳೆ ಕತೆಯಾಯ್ತು ನೀವು ಜಲಪಾತ ನೋಡಲು ಬಂದಿದ್ದಲ್ವಾ ನೋಡಿ ಹೋಗಿ, ನಾನು ೩೫ ವರ್ಷಗಳಿಂದ ಆ ಜಲಪಾತದ ಧ್ವನಿಯನ್ನು ಪ್ರತೀ ಕ್ಷಣವೂ ಕೇಳುತ್ತಲೇ ಇದ್ದೇನೆ. ಆದ್ರೆ ಒಂದಿನಾನೂ ಆ ಕಡೆ ಹೋಗಿಲ್ಲ. ಅದರ ಸ್ವರವೇ ಸಾಕು ಬಿಡಿ” ಎಂದು ನಗಾಡಿದರು.
ಪಾಪ ಕಾಡನ್ನು ನಾವೇ ಸಿಗಿದು ತೋರಣ ಕಟ್ಟುತ್ತಿರುವಾಗ ಅವುಗಳು ಏನು ತಿನ್ನೋದು ಮಣ್ಣು? ಆಹಾರ ಹುಡುಕಿಕೊಂಡು ತೋಟ ನುಗ್ಗುತ್ತೆ. ಅದಕ್ಕೇನು ಗೊತ್ತು ಅದು ನಮ್ಮ ತೋಟ ಅಂತ, ಅವುಗಳ ಕಾಡಿಗೆ ನಾವು ಬಂದು ಕೂತಿದ್ದು ಅಲ್ವಾ? ಇದು ಅವುಗಳದ್ದೇ ಜಾಗ. ಇದಕ್ಕೆ ನಿಜವಾದ ಹಕ್ಕುದಾರರು ಅವುಗಳೇ. ಆದ್ರೆ ನಾವೇ ಕೈಯಾರೆ ಮಾಡಿದ ತೋಟ ಹೀಗಾಗುತ್ತಿದ್ರೆ ಒಳಗೊಳಗೇ ಉರಿಯಲ್ಲವಾ ಹೇಳಿ? ಅದಕ್ಕೆ ಆದಷ್ಟು ಓಡಿಸೋದು.
ನಾವು ಜಲಪಾತ ನೋಡಿ ಬರುವೆವು ಎನ್ನುತ್ತಾ ಜಲಪಾತದ ದಾರಿ ಹಿಡಿದರೆ ಬೇಸಿಗೆಯಲ್ಲಿ ನಿರಾಳವಾಗಿದ್ದ ಆ ದಾರಿ ಈಗ ಮುಚ್ಚಿ ಹೋಗಿತ್ತು. ಅಲ್ಲಿರುವ ಪೊದೆಯನ್ನೆಲ್ಲಾ ಸವರುತ್ತಾ ಇರುವಾಗ ಮಳೆ ಜೋರಾಯಿತು. ಎದುರಿಗೆ ತೀರಾ ಇಳಿಜಾರಿನ ಪ್ರಪಾತದಂತಹ ದಾರಿ, ಆ ದಾರಿಗೆ ಚಪ್ಪರ ಹಾಕಿದಂತೆ ಬಿದಿರ ಮೆಳೆಗಳು, ಒಂದಿಷ್ಟು ಕಲ್ಲು ಆ ಮಳೆಗೂ ಕೂಡಿಕೊಂಡು ನಮ್ಮ ದಾರಿಗೆ ಮೆಟ್ಟಿಲಿನಂತಾಯ್ತು. ಇಳಿಯುತ್ತಾ ಹೋದೆವು. ಕೊನೆಗೆ ಬೆನ್ನು ಬಗ್ಗಿಸಿ ತೆವಳುತ್ತಾ ಸಾಗುತ್ತಿರುವಾಗ ಸುತ್ತಲೂ ಇರುಳಂತೆ ಮೋಡದ ಕತ್ತಲಾದರೂ ದೂರದಲ್ಲಿ ಕಾಣುವ ಕುದುರೆಮುಖದ ಉನ್ನತ ಗಿರಿ ಶ್ರೇಣಿಯೊಂದು ಆ ವೇಳೆಗೆ ಜಿಗ್ಗಂತ ಹಸುರಲ್ಲಿ ಮಿಂಚುತ್ತಿತ್ತು. ನಮ್ಮ ದಾರಿಯ ಮುಂದೆ ನೋಡಿದರೆ ಮೈ ಮೇಲೆ ಬಿಳಿಯ ಸೆರಗಿನ ಹಾಗೆ ಜಲಪಾತವೊಂದು, ಅವಳ ಕೆನ್ನೆಯಲ್ಲಿಳಿದ ನೊರೆ ಹಾಲಿನಂತೆ ಹಾಗೇ ಜಾರುತ್ತಿತ್ತು.
ಅಷ್ಟೊತ್ತಿಗೆ ಕಾಲಬುಡದಲ್ಲಿ ಹರಿಯುತ್ತಿದ್ದ ನೀರಲ್ಲಿ ಹಳ್ಳೇಡಿಯೊಂದು ಪುಳ್ಳಕ್ಕೆಂದು ತೇಲಿ ಬಂಡೆಗಳಡಿ ಮರೆಯಾಗಿ ಹೋಯ್ತು. ಮುಂದೆ ದಾರಿ ಕಾಣುತ್ತಿರಲಿಲ್ಲ. ಆದರೆ ನಡೆಯುತ್ತಾ ಹೋದಂತೆಲ್ಲಾ ಜಲಪಾತದ ಸದ್ದು, ಸಿಳ್ಳೆ ಹಕ್ಕಿಗಳ ಗೋಷ್ಠಿಗೆ ಆ ಮಹಾರಣ್ಯಕ್ಕೆ ನಿರಾಭರಣ ಚೆಲುವೊಂದು ಪ್ರಾಪ್ತಿಯಾಗುತ್ತಿತ್ತು. ಜಲಪಾತವೀಗ ಹತ್ತಿರಾಯಿತು. ಅಬ್ಬಾ ಸ್ವರ್ಗ, ಅದ್ಭುತ, ಬೆಟ್ಟ ಬಂಡೆಗಳ ಮೇಲಿಂದ ಬಿಮ್ಮೆಂದು ನಾಚುತ್ತಾ ಬೀಳುವ ಆ ಮಾಳದ ಜಲಪಾತ ನೋಡುತ್ತಾ ನೋಡುತ್ತ ಕಳೆದೇ ಹೋದೆವು. ಆಗ ಹೇಳಿದೆನಲ್ಲಾ ಕಾಡಲ್ಲಿ, ಮೌನದಲ್ಲಿ, ಮಹಾರಣ್ಯದ ನಡುವಲ್ಲಿ, ಮಳೆಯ ಧ್ಯಾನದಲ್ಲಿ, ಜಲಪಾತದ ಥಂಡಿಯಲ್ಲಿ ಕಳೆದು ಹೋದರೆ ಅದನ್ನು ಮೀರಿದ ಸುಖ ಬೇರೊಂದಿಲ್ಲ ಅಂತ. ಕಳೆದು ಹೋಗುವ ಸುಖವನ್ನು ಅನುಭವಿಸುತ್ತಲೇ ಹಾಲಿನಂತೆ ಇಳಿಯುತ್ತಿದ್ದ ಜಲಪಾತದ ಬಂಡೆ ಮೇಲೆ ಹೊಕ್ಕೆವು. ಅಲ್ಲಿ ನಿಂತರೆ ಹಸಿರು ಮುಕ್ಕಳಿಸುತ್ತ ನಿಂತಿರುವ ಕಾಡು ಕಾಣುತ್ತಿತ್ತು, ಚಿತ್ರ ವಿಚಿತ್ರ ಹುಳಗಳು ಇರುಳಾಗುತ್ತಿದೆ ಅನ್ನೋ ಸೂಚನೆ ನೀಡುವ ಸದ್ದು ಆರಂಭವಾಯ್ತು. ಅಲ್ಲೇ ಕೂತು ಜಲಪಾತದ ಸದ್ದನ್ನು ಕೇಳುತ್ತಾ ಕಣ್ಣು ಮುಚ್ಚಿದರೆ ನನ್ನೊಳಗೆ ಬಾಳನ್ನು ಪೊರೆಯುವ ಶಕ್ತಿಯಿರುವ ನಿಜವಾದ ವಾಣಿಯೊಂದು ಮೊಳಗಿದಂತೆ ಮೈ ಮನಸ್ಸೆಲ್ಲಾ ತಾಜಾ ಆಯ್ತು. ಕಣ್ಣು ಬಿಟ್ಟಾಗ ಸುತ್ತಲೂ ಸಣ್ಣಗೇ ಕವಿದಿರುವ ಇರುಳು, ಕನ್ನಡಕದ ಕಣ್ಣಿಗೆಲ್ಲಾ ಜಲಪಾತದಿಂದ ಉದುರುವ ನೀರ ಬೊಟ್ಟುಗಳು ತೋರಣಕಟ್ಟಿದ್ದವು. ಕಣ್ಣು ಮುಚ್ಚಿದರೂ ಸ್ವರ್ಗ, ಕಣ್ಣು ಬಿಟ್ಟರೂ ಸ್ವರ್ಗ ಅಂತ ಭಾಸವಾಗೋದು ಇಂತಹ ಪವಿತ್ರ ಸ್ಥಳದಲ್ಲಿ ಮಾತ್ರ ಸಾಧ್ಯ ಅಂತ ಮತ್ತೊಮ್ಮೆ ಅನ್ನಿಸಿದಾಗ ಬೆಟ್ಟದ ಮೌನದಲ್ಲೇ ಒಮ್ಮೆ ದೂರದಿಂದಲೇ ಸಣ್ಣ ಸಣ್ಣ ಹನಿಗಳು ಒಟ್ಟಾಗಿ ಒಗ್ಗಟ್ಟಾಗಿ ಕಾಡಿನ ನಿಭಿಡ ಕತ್ತಲಲ್ಲಿ ಕಿರುಚಿ, ಧೊಪ್ ದೊಪ್ ಎಂದು ಸುರಿದೇ ಸುರಿದವು. “ಎಲ್ಲೋ ದೂರದಿ ಜಿನುಗುವ ಹನಿಗಳೇ ಬನ್ನಿ ಬನ್ನಿ ಬಿರು ಮಳೆಯಾಗಿ” ಅನ್ನೋ ಹಾಡಿನ ಸಾಲು ನೆನಪಾಯಿತು ಮತ್ತೆ ಜಲಪಾತದ ಭಾರೀ ತಂಪಾದ ನೀರಲ್ಲಿ ಸಣ್ಣಗೇ ಆಟವಾಡುತ್ತ ಬಂದ ದಾರಿಯನ್ನೇ ಏರುತ್ತಾ, ಅವರ ಮನೆ ಕಡೆಗೆ ಹೋದಾಗ ಸುತ್ತಲೂ ಕತ್ತಲೂ ಕಂತಿತ್ತು. ಇನ್ನೊಮ್ಮೆ ಬರುವೆವು ಎನ್ನುತ್ತಾ ಮತ್ತೆ ಕಾಡಿನ ಹಾದಿ ಹಿಡಿದೆವು.
ಹಾಗೇ ಬರುವಾಗ ಅಲ್ಲೇ ಇರುವ ದೊಡ್ಡ ಮರವೊಂದರದಲ್ಲಿ ಮಿಣುಕು ಹುಳಗಳು ಮಿನುಗುತ್ತಿದ್ದವು. ಆ ಗವ್ವೆನ್ನುವ ಮೌನದಲ್ಲಿ ಜಿಗ್ಗೆನ್ನುವ ಚೈತನ್ಯದ ಬೆಳಕು ನೋಡೋದು ಎಷ್ಟು ಚೆಂದ. ಮೇಲೆ, ಹುಲ್ಲಿನಲ್ಲಿ, ದೂರದಲ್ಲಿ, ಹತ್ತಿರದಲ್ಲಿ, ನೀರಿನ ಸಂದಿನಲ್ಲಿ, ಮುಗಿಲೆತ್ತರದಲ್ಲಿ ಎಲ್ಲಿ ನೋಡಿದರೂ ಮಿಂಚು ಹುಳ, ಕಾಡೆಲ್ಲಾ ಫಳ ಫಳ. ಆ ಇರುಳ ಮೌನ, ಕತ್ತಲಲ್ಲೂ ಕಾಡುವ ಕಾಡಿನ ಹಿತವಾದ ನೆರಳು ಎಲ್ಲವೂ ಬದುಕಿನ ಹೊಸ ಬೆಳಕುಗಳಂತೆ, ಭರವಸೆಗಳಂತೆ ಕಾಣುತ್ತಿತ್ತು. ಮಿಂಚು ಹುಳಗಳಂತೂ ನಾಳಿನ ನೆಮ್ಮದಿಯ ಬಾಳಿನ ಹೊಳಪು ಕೋಲುಗಳಾಗಿ ಕಾಣಿಸುತ್ತಿರುವಾಗ ಸಣ್ಣಗೇ ಮಳೆ ಹನಿಯುತ್ತಿತ್ತು, ಕಾಡು ಮತ್ತಷ್ಟು ಮಳೆಯ ಸದ್ದಿನಲ್ಲೇ ಮಾತನಾಡಿತು.
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) “ಒಂದು ಕಾಡಿನ ಪುಷ್ಟಕ ವಿಮಾನ”(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.
ಪ್ರಿಯ ಪ್ರಸಾದ್,
ಈ ಕಂತಿನಲ್ಲಿ ಮಳೆಯಲ್ಲಿ ತೋಯ್ದ ಕಾಡು,ಬೆಟ್ಟ, ಹೊಳೆ, ಮತ್ತುಅವುಗಳ ಜತೆಜತೆಗೇ ಬದುಕಿರುವ ಜೀವಜಾಲದ ಒದ್ದೆ ಹಸಿರು-ನೀಲಿ ಚಿತ್ರಣ ಕೊಡುತ್ತಲೇ…ಜಾರುದಾರಿಗೊಂದು ಕಿರುಗನ್ನಡಿ ಹಿಡಿದಿದೀರಿ. ಪಾಚಿಗಟ್ಟಿದ ಹಳೆ ದಾರಿ, ಹಳು ತುಂಬಿದ ಮುಚ್ಚಿ ಹೋಗುತ್ತಿರುವ ದಾರಿ, ವಿಶಾಲ ಗೇಟಿನ ಒಳಹೊಕ್ಕರೆ ಹಾವಸೆ ಬೆಳೆದ ಕಾಲುಹಾದಿಯ ಅಂಚಿನ ಬೆಚ್ಚನೆ ಮನೆಯಂಗಳದಿ ಕುಳಿತು ಹಿರಿಯರು ಕಾಯುತಿರುವ ಕಿರಿಯರ ಹಾದಿ.. ಎಲ್ಲದರ ಸಮ್ಮಿಶ್ರಣ ಇಲ್ಲಿದೆ. ಸುತ್ತಲ ಪರಿಸರದ ಜೊತೆಗೆ, ಬದಲಾವಣೆಗಳ ಜೊತೆಗೆ ನುಗ್ಗುವ, ಎದುರು ನಿಲ್ಲುವ, ಸರಿದು ನಿಲ್ಲುವ, ಮತ್ತೆ ಜೊತೆಜೊತೆಗೆ ಬದುಕುವ ಹೊಂದಾಣಿಕೆಯ, ಕೈಚೆಲ್ಲುವ, ಪ್ರಯತ್ನಗಳನ್ನ ಬಿಡದಿರುವ ಬದುಕಿನ ಹಲ ಮಗ್ಗುಲುಗಳು ಮಳೆ ಬಂದ ಕೂಡಲೆ ಒಸರುವ ಜಲದ ಕಣ್ಣಿನ ಹಾಗೆ ಅಲ್ಲಲ್ಲಿ ಎದ್ದು ಓದುವ ಮನಸ್ಸನ್ನ ಆರ್ದ್ರಗೊಳಿಸುತ್ತಿದೆ.
ಮಾಳದ, ಕುದುರೆಮುಖದ ಕಾಡಿನ ಚೆಲುವಿನ ಬಗ್ಗೆ ಮರುಮಾತಿಲ್ಲ.. ಎಂದಿನ ಹಾಗೆ ಚೆಲುವಾದ ಚಿತ್ರಣ. ಓದಿ ಮುಗಿಸಿದ ಮೇಲೆ ಒಂದು ನಿಟ್ಟುಸಿರು ತರಿಸುತ್ತದೆ.
ಮುಂದಿನ ಕಂತಿಗೆ ಕಾಯುತ್ತಾ
ಹಗ್ಸ್ ಎನ್ ಲವ್,
ಸಿಂಧು