ಕಾಲಡಿಯಲಿ ಹೂತುಗೊಂಡ ಬೇರು

ಮಂಪುರು ಗಣ್ಣಲಿ ಕತ್ತಲ ತಿಕ್ಕುವ ಕಣ್ಣುಗಳಿಗೆ
ನಸುಕಿನಲಿ ಬೆಳ್ಳಿ ಚುಕ್ಕಿ ಅಗೋಚರವಾಗಿತ್ತು
ಒಂದು ಕಳಚಿ ಮತ್ತೊಂದರ ಸ್ಥಾನ ಗೋಚರಿಸುವ
ಚುಕ್ಕಿಗಳ ಮದ್ಯೆ
ಕೆಂಪು ಮುಖವ್ಹೊತ್ತ  ನೆತ್ತಿಯ ಮೇಲಿನ ಸೂರ್ಯ ಮಾತ್ರ
ಬಾಚಿ ತಬ್ಬಿಕೊಂಡು ಹೋಗುವ ನಡಿಗೆ

ಈ ಅನಾದಿ ಮುಖದ ನೆಲದ ನೆರಳಲಿ
ಚುಕ್ಕಿಗಳು ತಲೆಮಾರಿನ ನೆರಿಗೆ ಹಿಡಿದು
ಕಂದರ ತುಟಿಗಳಲಿ ಜೋಗುಳವ ಹಾಡುತ್ತಿವೆ

ನಿಶ್ಯಬ್ದ ರೂಪದಲಿ ನೆಲಕ್ಕುರುಳುವ ಎಲೆಗಳು
ಬರ್ತಿ ಖಾಲಿಯಾದ ಕಣ್ಣ ತೇವದ ವ್ರಕ್ಷದೊಳಗೆ
ತನ್ನೆಲ್ಲ ಅಸಮಾನತೆಗಳ ಬೆವರನು ಹೊರಚಲ್ಲಿದೆ
ಕಾಲಡಿಯಲಿ ಹೂತುಗೊಂಡ ಬೇರಿನ ಹೊಸ ಚಿಗುರಾಗಿ

 

 ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)