”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.ಬಿಸಿಲುಗಾಲ, ಮಳೆಗಾಲ, ಮಂಜಿನಗಾಲ ಎಲ್ಲವೂ ಜೊತೆಯಾಗಿ ಒಂದೇ ಸೀಟಿನಲ್ಲಿ ಕೂತು ಜಗತ್ತು ನೋಡುತ್ತಿರುವ ಆ ಕ್ಷಣವೇ ದಿವ್ಯ ಅನ್ನಿಸುತ್ತದೆ ನಂಗೆ.ಆ ದಿವ್ಯ ಕ್ಷಣವನ್ನು ನೋಡಲು ಮಾಳದಂತಹ ಕಾಡದಾರಿಯನ್ನು ಶ್ರಾವಣದ ಮಧ್ಯಾಹ್ನದ ವೇಳೆಗೆ ಹೊಕ್ಕಿಬಿಡಬೇಕು”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಒಂಬತ್ತನೆಯ ಕಂತು.
ಮಾಳ ಕಾಡಿನ ಹಿರಿಯ ಜೀವ ಶಂಕರ ಜೋಶಿಯವರು ತೀರಿಕೊಂಡ ಬಳಿಕ ಮಾಳ ಕಾಡಿನತ್ತ ನಾವು ಹೋಗಿರಲಿಲ್ಲ. ಆಗಸ್ಟ್ ತಿಂಗಳ ಭಯಂಕರ ಮಳೆಗೆ ಅಲ್ಲಿಗೆ ಹೋದರೆ, ಊರಿಗೆ ಊರೇ ಆ ಮಳೆಯಲ್ಲಿಯೇ ಕರಗಿಹೋದಂತೆ ತೆಪ್ಪಗಿರುತ್ತಿತ್ತು, ಮಳೆಯ ದೊಡ್ಡ ದೊಡ್ಡ ಹನಿಗಳ ಸದ್ದು ಮಾತ್ರ ಕೇಳಿಸುತ್ತಿತ್ತು. ಹಾಗೇ ಮಳೆ ಯಾವ ರೀತಿಯಾದರೂ ಬೀಳುತ್ತಿರಲಿ, ಮರದ ಬುಡದಲ್ಲೋ, ಮುದಿ ಬಸ್ಸು ಸ್ಟಾಪಿನ ನೆರಳಲ್ಲೋ ನಿಂತು ಸುಮ್ಮನೇ ಮಾಳದ ಕಾಡಿನ ತುಂಬೆಲ್ಲಾ ಹುಯ್ಯುತ್ತಿರುವ ಮಳೆಯನ್ನೇ ಧ್ಯಾನಿಸುತ್ತ ನಿಂತುಬಿಟ್ಟರೆ, ಆ ಕುಂಬದ್ರೋಣ ಮಳೆಗೆ ಚಂಡಿಯಾಗಿ ಪಿಳಿ ಪಿಳಿ ಕಣ್ಣು ಬಿಡಲೂ ಆಗದೇ, ಅಮ್ಮ ದೀಪಾವಳಿಗೆ ಮೈಗೆಲ್ಲಾ ಎಣ್ಣೆ ಹಚ್ಚಿದಾಗ ಎಣ್ಣೆಯ ಪಸೆಗೆ ಕಣ್ಣು ಒಂಥರಾ ಮಬ್ಬು ಮಬ್ಬು ಆಗುತ್ತದಲ್ಲಾ ಹಾಗಾಗಿಬಿಡುತ್ತಿತ್ತು ಕುದುರೆಮುಖದ ಗಿರಿಶ್ರೇಣಿ. ಅದಕ್ಕೆಂದೇ ಒಮ್ಮೆ ಚೂರು ಮಳೆ ಬಿಡಲಿ ಆ ಬಳಿಕ ಹೋದರಾಯಿತು ಅಂತ ಕಾಯುತ್ತಿದ್ದೆ.
ಮೊನ್ನೆ ಮಾಳ ಕಾಡಿನ ದಾರಿ ಹಿಡಿದಾಗ, ಆಕಾಶದ ನೀಲಿ ಮೋಡದ ತುಂಡುಗಳು ಹಾರುತ್ತ, ಹಾರುತ್ತ ಸಹ್ಯಾದ್ರಿಯ ತುದಿಗೇರಿ ಅಲ್ಲೊಂದು ಹಣೆಬೊಟ್ಟಿನಂತೆ ಕೂತುಬಿಟ್ಟು, ಇಡೀ ಕಾಡಿನ ಅಂದ ನೋಡುತ್ತಿತ್ತು, ಇಷ್ಟು ದಿನ ಮಳೆಯಿಂದಲೇ ತೊಯ್ದು ತೊಪ್ಪೆಯಾಗಿದ್ದ ಮಾಳ ಕಾಡಿನ ಒಂದಷ್ಟು ಮರಗಳು ಮೈ ಮುರಿದುಕೊಂಡು, ಇನ್ನೊಂದಿಷ್ಟು ಮರಗಳು ಗಾಳಿ ಬೀಸಿಕೊಂಡು, ನೀಲ ಮೋಡಗಳ ಜೊತೆ ಮಾತಿಗಿಳಿಯಲು ತಯಾರಿ ಮಾಡಿತ್ತು. ಬೊಳ್ ಬೊಳ್ ಎಂದು ಸುರಿವ ಮಳೆಗಾಲಕ್ಕೆ ಯಾರು ಏನೇ ಬೈಯಬಹುದು, ಆದರೆ ಆ ಮಳೆ ಮಾತ್ರ ಚೆಂದವೇ ಬಿಡಿ. ಶ್ರಾವಣ ಎಲ್ಲಾ ಕಳೆದು, ಬಾನೆಲ್ಲಾ ತಿಳಿ ನೀಲಿ ಮೋಡಗಳಿಂದಲೇ ಹಿತವಾಗಿ ಕಾಣುತ್ತದಲ್ಲ, ಅದು ಎಷ್ಟು ಮುದ್ದು. ಆ ವರೆಗೆ “ಮಳೆರಾಯನ ಮುಂದೆ ನನ್ನದೆಂತ ಚೆಂದ ಕರ್ಮದ್ದು” ಅಂತ? ಕಕ್ಕುಲಾತಿಯಿಂದ ಎಷ್ಟು ಬೇಕೋ ಅಷ್ಟೇ ಅರಳಿಕೊಂಡಿರುತ್ತಿದ್ದ ದಾಸವಾಳ, ಶಂಖ ಪುಷ್ಪ, ಸುಗಂಧಿ ಹೂವುಗಳ ಮೇಲೆ ಈ ಶ್ರಾವಣ ಕಳೆದ ಹಗಲಿನಲ್ಲಿ ಮಳೆಗಾಲದ ಸೂರ್ಯ ನಯವಾಗಿ ಸೋಕಿದರೂ ಸಾಕು, ದಾಸವಾಳ ಪಾರಿವಾಳದಂತೆ ರೆಕ್ಕೆಬಡಿದುಕೊಳ್ಳುತ್ತದೆ, ಸುಗಂಧಿ ಹೂವು ಮತ್ತಷ್ಟು ಕಂಪು ಸೂಸಿ ಕಾಡದಾರಿಯಲ್ಲೆಲ್ಲಾ ಕಾಡುತ್ತದೆ, ಶಂಖ ಪುಷ್ಪ ಒಲವಿನ ಶಂಖ ಊದುತ್ತದೆ, ಏನೇ ಹೇಳಿ ಈ ಮಳೆಗಾಲದಲ್ಲಿಯೂ ಮೂಡುವ ಎಳೆ ಬಿಸಿಲಿಗೂ ಎಷ್ಟೊಂದು ಚೆಂದವಿದೆ.
ಮಳೆ ಪೂರ್ತಿ ಬಿಟ್ಟಿಲ್ಲ, ಚಳಿ, ಬಿಸಿಲು ಇನ್ನೂ ಪೂರ್ತಿ ಹಿಡಿದಿಲ್ಲ, ಎನ್ನುವ ಸ್ಥಿತಿಯಲ್ಲಿಯೇ ಪ್ರಕೃತಿ ಮೋಹಕವಾಗಿ ಕಾಣಿಸುತ್ತದೆ. ಅದೂ ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ. ಬಿಸಿಲುಗಾಲ, ಮಳೆಗಾಲ, ಮಂಜಿನಗಾಲ ಎಲ್ಲವೂ ಜೊತೆಯಾಗಿ ಒಂದೇ ಸೀಟಿನಲ್ಲಿ ಕೂತು ಜಗತ್ತು ನೋಡುತ್ತಿರುವ ಆ ಕ್ಷಣವೇ ದಿವ್ಯ ಅನ್ನಿಸುತ್ತದೆ ನಂಗೆ. ಆ ದಿವ್ಯ ಕ್ಷಣವನ್ನು ನೋಡಲು ಮಾಳದಂತಹ ಕಾಡದಾರಿಯನ್ನು ಶ್ರಾವಣದ ಮಧ್ಯಾಹ್ನದ ವೇಳೆಗೆ ಹೊಕ್ಕಿಬಿಡಬೇಕು.
ಶ್ರಾವಣ ಎಲ್ಲಾ ಕಳೆದು, ಬಾನೆಲ್ಲಾ ತಿಳಿ ನೀಲಿ ಮೋಡಗಳಿಂದಲೇ ಹಿತವಾಗಿ ಕಾಣುತ್ತದಲ್ಲ, ಅದು ಎಷ್ಟು ಮುದ್ದು. ಆವರೆಗೆ “ಮಳೆರಾಯನ ಮುಂದೆ ನನ್ನದೆಂತ ಚೆಂದ ಕರ್ಮದ್ದು” ಅಂತ? ಕಕ್ಕುಲಾತಿಯಿಂದ ಎಷ್ಟು ಬೇಕೋ ಅಷ್ಟೇ ಅರಳಿಕೊಂಡಿರುತ್ತಿದ್ದ ದಾಸವಾಳ, ಶಂಖ ಪುಷ್ಪ, ಸುಗಂಧಿ ಹೂವುಗಳ ಮೇಲೆ ಈ ಶ್ರಾವಣ ಕಳೆದ ಹಗಲಿನಲ್ಲಿ ಮಳೆಗಾಲದ ಸೂರ್ಯ ನಯವಾಗಿ ಸೋಕಿದರೂ ಸಾಕು, ದಾಸವಾಳ ಪಾರಿವಾಳದಂತೆ ರೆಕ್ಕೆಬಡಿದುಕೊಳ್ಳುತ್ತದೆ, ಸುಗಂಧಿ ಹೂವು ಮತ್ತಷ್ಟು ಕಂಪು ಸೂಸಿ ಕಾಡದಾರಿಯಲ್ಲೆಲ್ಲಾ ಕಾಡುತ್ತದೆ.
ಕುದುರೆಮುಖದ ಕೋಟೆಯಂತೆ ನಿಂತಿದ್ದ ಗಿರಿಶ್ರೇಣಿಗಳು ಕಣ್ಣಿಗೆ ಬಿದ್ದಾಗ, ಪೂರ್ತಿ ಮಧ್ಯಾಹ್ನವೂ ಅಲ್ಲದ, ಸಂಜೆಯೂ ಅಲ್ಲದ ಹೊತ್ತು. ಎಳೆ ಬಿಸಿಲು ಹಸಿರಿನ ಯಾವುದೋ ಬಂಡೆಯೊಂದಕ್ಕೆ ಬಡಿದು, ನೀರವ ಕಾಡಿನಲ್ಲಿ ಸಾವಿರ ಬೆಳಕಿನ ಪುಂಜ ಅದಾಗಲೇ ಹುಟ್ಟಿತ್ತು. ನಿಶ್ಕಲ್ಮಶ ಆಗಸದಲ್ಲಿ ಉದ್ದ ಕತ್ತಿನ ಬೆಳಕ್ಕಿಗಳ “ಕೀಂವ್ ಚೀಂವ್ ಹಾಡೊಂದು ಮೂಡಿ ಅವುಗಳ ಕುಟುಂಬದ ಸದಸ್ಯರೆಲ್ಲಾ ಕೈಕೈ ಹಿಡಿದುಕೊಂಡು ಮೋಡಗಳ ವರ್ಷಾವಧಿ ಜಾತ್ರೆಗೆ ಹೊರಟಂತಿತ್ತು, ಸ್ವರ್ಣ ನದಿ ಅವುಗಳ ಪ್ರತಿಬಿಂಬಗಳನ್ನು ಹಿಡಿದು, ಒಳಗೊಳಗೇ ಸುಖಿಸಿ ಹಾಗೇ ತಣ್ಣಗೇ ಹರಿದು ಸಹ್ಯಾದ್ರಿಯತ್ತ ಜಾರಲು ಅರಳುಗಣ್ಣುಬಿಡುತ್ತ ನೋಡುತ್ತಿದ್ದಳು. ಬದುಕಿನ ಆಗಸಕ್ಕೆ ಅನಂತದತ್ತ ಹಾರಿಸುವ ಎಷ್ಟೊಂದು ರೆಕ್ಕೆಗಳಿವೆಯಲ್ಲವಾ? ಎಷ್ಟೊಂದು ಬಣ್ಣಗಳಿವೆ ಅಲ್ಲವಾ ಅಂತ ಈ ಕಾಡಿಗೆ ಬಂದಾಗೆಲ್ಲ ಅನ್ನಿಸದೇ ಇರುತ್ತಿರಲಿಲ್ಲ. ಬದುಕು ಎಷ್ಟೊಂದು ಜೀವಂತ, ಇಲ್ಲಿ ಎಷ್ಟೊಂದು ನೋಟಗಳಿವೆ, ಎಷ್ಟೊಂದು ಸ್ವಚ್ಛಂದತೆ ಇದೆ, ಅಂತ ಅರೆಕ್ಷಣದಲ್ಲಿಯೇ ಹೇಳುವ ಶಕ್ತಿ, ಪುಟ್ಟ ಊರಿನ ಕಾಡಿಗೆ, ಮೌನಕ್ಕೆ, ಎಲ್ಲವನ್ನೂ ತಗೊಂಡು ಹರಿಯುತ್ತಿರುವ ಅಲ್ಲಿಯ ನದಿಗೆ, ಸಕಲ ಜೀವ ಬಳ್ಳಿಗೆ, ಅಲ್ಲೆಲ್ಲೋ ತೃಪ್ತಿಯ ನಿಟ್ಟುಸಿರಿಡುತ್ತ ಬದುಕುವ ಒಂದಷ್ಟು ಜೀವಗಳ ಕಣ್ಣಿನಲ್ಲಿಯೇ ಇದೆ ಅಂತನ್ನಿಸುವ ಕ್ಷಣಗಳಲ್ಲಿ ನಾನು ಕಾಡಿನಂತೆಯೇ ಹಸಿರಾಗಿ ಹೋಗುತ್ತೇನೆ.
ಮಾಳ ಪರಶುರಾಮ ದೇವಸ್ಥಾನಕ್ಕೂ ಮೊದಲು ಸಿಗುವ ಹಂಚಿನ ಹಳೆ ಮನೆ, ನಮ್ಮನ್ನು ಯಾವತ್ತೂ ಸೆಳೆಯುತ್ತಿತ್ತು. ಭೂಮಿಯಿಂದ ಎಷ್ಟೋ ಅಡಿಯಲ್ಲಿ ಇದೆ ಅಂತನ್ನಿಸುವ ಆ ಮನೆ ನಿಬಿಡವಾಗಿ ನಿಂತಿರುವ ಪಶ್ಚಿಮಘಟ್ಟದ ಕೆಳಗೆ ಆಗತಾನೇ ಪಚ್ಚೆ ಬಣ್ಣದ ರಗ್ಗು ಹೊದ್ದುಕೊಂಡಿರುವಂತಿದೆ. ಸುತ್ತಲೂ ಅಡಿಕೆ ತೋಟಗಳು ಗಾಳಿಗೂ ಮೈಯೊಡ್ಡಿಕೊಂಡು, ಬೆಟ್ಟದಿಂದ ಉದುರುವ ಮಳೆಯನ್ನು, ಜಿಗ್ ಅಂತ ಹೊಡೆಯುತ್ತಿರುವ ಬಿಸಿಲನ್ನು ತಿಂದುಕೊಂಡು, ಸುಖವಾಗಿ ಬದುಕುತ್ತಿರುವಂತೆ ಕಾಣಿಸುತ್ತಿತ್ತು. ಆ ದಾರಿಯಲ್ಲಿ ನಿಂತುಕೊಂಡು ಮೊಬೈಲು ತೆಗೆಯೋದಕ್ಕೆ, ಮಾತನಾಡುವುದಕ್ಕೆ, ಕಿರುಚುವುದಕ್ಕೆ ಯಾವುದಕ್ಕೂ ಮನಸ್ಸು ಬರುವುದಿಲ್ಲ. ಸುಮ್ಮನೇ ಅಲ್ಲಿ ನಿಂತುಕೊಂಡು ಕಣ್ಣಿಗೆ ಕಾಣುವ ಬೆಟ್ಟ, ಆ ಮನೆ, ಆ ತೋಟ ನೋಡುತ್ತಾ ನಿಂತರೆ, ಕಣ್ಣಿಗೆ, ಮನಸ್ಸಿಗೆ ಬರೀ ಅಷ್ಟೇ ಕಾಣಿಸುವುದಿಲ್ಲ. ನಾವಿನ್ನೂ ಕಂಡಿರದ ಅಗಾಧ ಮೌನ, ಶಾಂತಿ, ಈವರೆಗೂ ಕೇಳದ ಪ್ರಕೃತಿಯ ಪುಟ್ಟ ಪುಟ್ಟ ಸಲ್ಲಾಪಗಳು, ಗಾಳಿಯ ಆಲಾಪಗಳು, ಕಾಡು ತಮ್ಮಷ್ಟಕ್ಕೇ ಮಾಡುತ್ತಿರುವ ಕಲಾಪಗಳು ಕಾಣಿಸುತ್ತವೆ ಮತ್ತು ಕೇಳಿಸುತ್ತವೆ.
ಎಂದಿಗಿಂತಲೂ ಇವತ್ತೂ ಚೆಂದವಾಗಿ ಕಾಣುತ್ತಿದ್ದ ಆ ಮನೆಯನ್ನೂ, ಬೆಟ್ಟವನ್ನೂ ನಾವು ನೋಡುತ್ತ ನಿಂತಿರುವಾಗ ಕೆಳಗಿನ ಆ ಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಆಟವಾಡುತ್ತಿದ್ದದ್ದು ಕಂಡಿತು. ಮೇಲೆ ನಿಂತಿದ್ದ ನಮ್ಮನ್ನು ನೋಡಿದ್ದೇ, ಆಟ ನಿಲ್ಲಿಸಿ ಸುಮ್ಮನೇ ನಕ್ಕಳು, ನನ್ನ ಕೈಯಲ್ಲಿದ್ದ ಕ್ಯಾಮರಾ ನೋಡಿ ಆ ಪುಟ್ಟಿಗೆ ಅವಳ ಫೋಟೋ ತೆಗೆಯುತ್ತಿದ್ದೇನೆ ಅನ್ನಿಸಿತೋ ಏನೋ? ಆಕೆ ಇನ್ನಷ್ಟು ಅಂದವಾದಳು, ನಕ್ಕಳು, ಎಲ್ಲವನ್ನೂ ನೋಡಿ ಸಹಜದಿಂದ ನಗುವ, ಸ್ಪಂದಿಸುವ ಮಕ್ಕಳ ಗುಣಕ್ಕೂ, ತನ್ನ ಪಾಡಿಗೇ ತಾನೇ ಹರಿಯುವ, ಮಿಂಚುವ ಸ್ವರ್ಣ ನದಿಗೂ ಎಷ್ಟೊಂದು ಹೋಲಿಕೆ. ಆ ಪುಟ್ಟಿಯ ಮನೆಯಲ್ಲಿಯೂ ಬದುಕಿನ ಸಹಜತೆ ಸಿಕ್ಕಬಹುದು, ಸಿಗದಿದ್ದರೂ ತೊಂದರೆಯಿಲ್ಲ, ಮನೆಗೆ ಯಾರಾದರೂ ಬಂದರೆ ಮಕ್ಕಳಷ್ಟು ಸಂಭ್ರಮಪಡುವವರು ಬೇರ್ಯಾರೂ ಇಲ್ಲ. ಅಷ್ಟು ಸಂಭ್ರಮವಾದರೂ ಆ ಪುಟ್ಟಿಯದ್ದಾಗಲಿ ಎಂದು ಯೋಚಿಸುತ್ತ ಆ ಮನೆಯತ್ತ ಇಳಿದೆವು. ಮನೆಯ ಗೇಟು ತೆರೆದರೆ ಇಳಿಜಾರಾಗಿದ್ದ ದಾರಿಯಲ್ಲಿ ಉದ್ದಕ್ಕೆ ಚೆಲ್ಲಿದ್ದ ಬಿಸಿಲ ತುಣುಕುಗಳ ನಡುವೆ ಹುಲ್ಲಿನ ಹಾಸು, ಅಷ್ಟೊತ್ತು ದೂರದಿಂದ ಒಂಥರಾ ಕಾಣುತ್ತಿದ್ದ ಆ ಮನೆ ಈಗ ಒಮ್ಮೆಲೇ ಮೈಗೆ ಒರಗಿ ಕೂತ ಹುಡುಗಿಯಂತೆ ಅನ್ನಿಸುತ್ತಿತ್ತು. ನಾವು ಅಂಗಳದತ್ತ ಬರುತ್ತಿರುವುದನ್ನೇ ಕುತೂಹಲದಿಂಧ ನೋಡುತ್ತಿದ್ದ ಆ ಪುಟ್ಟಿ, ಅವಳಮ್ಮನಿಗೆ ಸುದ್ದಿ ಮುಟ್ಟಿಸಿದಳು.
ಒಳಗಿನಿಂದ ಅರೆಕ್ಷಣದಲ್ಲೇ ವಯಸ್ಸಾದ ಅಜ್ಜಿ ಮತ್ತು ಈ ಕಾಲದವರಂತೆ ಕಾಣುತ್ತಿದ್ದ ಹೆಂಗಸು ಹೊರಕ್ಕೆ ಬಂದು, “ನಾವ್ಯಾರು” ಅಂತ ಕಣ್ಣಲ್ಲೇ ಪ್ರಶ್ನಿಸುತ್ತ ನಿಂತಿದ್ದರು. ನಮ್ಮ ಪರಿಚಯ ಹೇಳಿ, ನಾವು ಸುಮ್ಮನೇ ಸುತ್ತಲು ಬಂದದ್ದೆಂದೂ, ಈ ಮನೆ ತುಂಬಾ ದಿನದಿಂದ ನೋಡುತ್ತಿರುವೆವೆಂದೂ, ಇನ್ನಷ್ಟು ನೋಡುವ ಮನಸ್ಸಾಗಿ ಇತ್ತ ಬಂದೆವೆಂದೂ ಹೇಳಿದೆವು. ಅಷ್ಟೊತ್ತಿಗೆ ತುಸು ದೂರದಲ್ಲಿದ್ದ ಅಡಿಕೆ ಸಾಲುಗಳ ನಡುವಿನಿಂದ ಪರ ಪರ ಯಾರೋ ನಡೆದುಕೊಂಡು ಬರುವಂತೆ ಸದ್ದಾಗಿತು. ಕಾಡು ಕೋಣ ಏನಾದರೂ ಬಂತಾ? ಅಂತ ನಾನು ಅತ್ತ ದುರುದುರು ನೋಡುತ್ತಿದ್ದಾಗ, “ಅದು ನನ್ನ ಮಗ, ಈ ತೋಟ ನಮ್ಮದೇ, ಒಂದಷ್ಟು ಎಕ್ರೆ ತೋಟ ಉಂಟು ನಮ್ಗೆ, ಆದ್ರೆ ನೋಡಿ ಈ ಸಲ ಮಳೆ ಜಾಸ್ತಿಯಾಗಿ ಕೊಳೆ ರೋಗ ಬಂದು ಅಡಿಕೆ ಎಲ್ಲಾ ಕೊಚ್ಚಿ ಹೋಗಿದೆ” ಎಂದರು ಆ ಅಜ್ಜಿ. ಅಲ್ಲೇ ನಿಂತಿದ್ದ ಅವರ ಸೊಸೆ, ನಮ್ಮನ್ನು ಈ ಹಿಂದೆ ಮಾಳದಲ್ಲಿ ಸುತ್ತುತ್ತಿದ್ದಾಗ ನೋಡಿರುವುದಾಗಿಯೂ ಗುರುತು ಹಿಡಿದರು. ಅಷ್ಟೊತ್ತಿಗೆ ಅಡಿಕೆ ಮರದ ನಡುವಿನಿಂದ ಬರುತ್ತಿದ್ದ ಮನೆಯ ಯಜಮಾನ, ತಲೆಯಲ್ಲಿ ಹುಲ್ಲಿನ ದೊಡ್ಡ ಬುಟ್ಟಿ ಹೊತ್ತುಕೊಂಡು ಚೂರು ಕತ್ತು ವಾರೆ ಮಾಡಿ, ನಮ್ಮನ್ನು ನೋಡಿದಂತೆ ಮಾಡಿ, ಸೀದಾ ಹುಲ್ಲಿನ ಬುಟ್ಟಿಯನ್ನು ಒಲೆಯತ್ತ ರಾಶಿ ಹಾಕಿದರು.
ಮೇಲೆ ನಿಂತಿದ್ದ ನಮ್ಮನ್ನು ನೋಡಿದ್ದೇ, ಆಟ ನಿಲ್ಲಿಸಿ ಸುಮ್ಮನೇ ನಕ್ಕಳು, ನನ್ನ ಕೈಯಲ್ಲಿದ್ದ ಕ್ಯಾಮರಾ ನೋಡಿ ಆ ಪುಟ್ಟಿಗೆ ಅವಳ ಫೋಟೋ ತೆಗೆಯುತ್ತಿದ್ದೇನೆ ಅನ್ನಿಸಿತೋ ಏನೋ? ಆಕೆ ಇನ್ನಷ್ಟು ಅಂದವಾದಳು, ನಕ್ಕಳು, ಎಲ್ಲವನ್ನೂ ನೋಡಿ ಸಹಜದಿಂದ ನಗುವ, ಸ್ಪಂದಿಸುವ ಮಕ್ಕಳ ಗುಣಕ್ಕೂ, ತನ್ನ ಪಾಡಿಗೇ ತಾನೇ ಹರಿಯುವ, ಮಿಂಚುವ ಸ್ವರ್ಣ ನದಿಗೂ ಎಷ್ಟೊಂದು ಹೋಲಿಕೆ.
ಮನೆಯವರಿಂದ ನಮ್ಮ ಪರಿಚಯ ತಿಳಿದು, ಚೂರು ಚೂರೇ ನಕ್ಕು, ಅಡಿಕೆ ತೋಟದ ಪ್ರವರ ಹೇಳಿಕೊಂಡರು, “ಎಂತ ಮಾಡುದು ಹೇಳಿ? ಅಡಿಕೆ ನಂಬಿ ಕೂರೋದೇ ಕಷ್ಟ ಈ ಹಳ್ಳಿಯಲ್ಲಿ, ಆದ್ರೂ ಮಾಡಲೇಬೇಕು, ನನ್ನ ಪಾಡಿಗೇ ನಾನು ಮಾಡ್ಕೊಂಡು ಹೋಗೋದು ಅಷ್ಟೆ. ಕಾಳುಮೆಣಸು, ಬಾಳೆ, ತೆಂಗು ಒಂದಷ್ಟಿದೆ. ಹೇಗೋ ನಡಿಯುತ್ತದೆ” ಎಂದು ಗಂಭೀರವಾಗಿಯೇ ಹೇಳಿದರು. ತೋಟದಲ್ಲಿ ಸಹ್ಯಾದ್ರಿಯ ಗಾಳಿಗೆ ಅಡಿಕೆ ಮಡಲೊಂದು ಮಗು ಅಂಗಳದಲ್ಲಿ ಬಿದ್ದಾಗ ಸಣ್ಣದ್ದೊಂದು ಶಬ್ದವಾಗುವ ಹಾಗೆ ಬಿತ್ತು. ಮನೆ ಯಜಮಾನ ಕೆಲಸ ಮಾಡಿ ಸುಸ್ತಾಗಿದ್ದರೋ ಏನೋ? ಅವರ ಮುಖದಲ್ಲಿ ಶ್ರಮದ ಗುರುತಾಗಿ ಬೆವರ ಹನಿಗಳು ಮೀಯುತ್ತಿದ್ದವು. ಒಂದಷ್ಟು ಒಣಹುಲ್ಲುಗಳು ಮೈ ತುಂಬಾ ಚೆಲ್ಲಿದ್ದವು. ತೋಟ, ಕಾಡು, ಈ ಹಳೆ ಮನೆ ಇವೆಲ್ಲ ಅವರಿಗೆ ಸಹಜವಾಗಿದ್ದರಿಂದಲೋ ಏನೋ,ಅದರ ಬಗ್ಗೆ ಜಾಸ್ತಿ ಮಾತಾಡಲಿಲ್ಲ. “ಆದರೆ ತೋಟ ನಿಮಗೆಲ್ಲ ನೋಡಿಕೊಂಡು ಹೋಗಲು ಚೆಂದ, ಕಾಡಿಗೆ ಬಂದು ದೊಡ್ಡದಾಗಿ ಫೋಟೋ ತಕ್ಕೊಂಡು ಹೋಗಿಬಿಡ್ತೀರಾ ಅಷ್ಟೆ. ಆದರೆ ಇಲ್ಲಿ ತ್ರಾಸದಿಂದ ಬದುಕುವವರು ನಾವು, ಫೋಟೋದಲ್ಲಿರುವ ಚಂದ, ನಿಜವಾಗಿ ಇಲ್ಲಿ ಬದುಕುವಾಗ ಕ್ರೂರ ಅನ್ನಿಸುತ್ತೆ, ಭಾರ ಅನ್ನಿಸುತ್ತೆ, ಅಂತದ್ದೇನಿದೆ ಇಲ್ಲಿ?” ಅನ್ನೋ ಭಾವ ಅವರ ಆಡದ ಮಾತುಗಳಲ್ಲಿತ್ತೋ ಅಂತೆನಿಸಿ ತಣ್ಣಗಾದೆ. ಆದರೂ ಅವರು ನಮ್ಮ ಭಾವಗಳಿಗೆ ಸ್ಪಂದಿಸಿದರು. “ಮನೆಗೆ ಬನ್ನಿ” ಎಂದು ಮನೆ ತೋರಿಸಿದರು. ಅಲ್ಲೇ ನಿಂತಿದ್ದ ಅವರ ಹೆಂಡತಿಯ ಮುಖದಲ್ಲಿ ಒಂಥರಾ ಸ್ನೇಹಮಯ ಹೊಳಪಿತ್ತು. ಯಾರೋ ಮನೆಗೆ ಬಂದಿದ್ದಾರೆ ಅನ್ನುವ ಖುಷಿಯಿಂದಲೇ ಅವರು ಸ್ವಾಗತಿಸಿದರು.
ಸುತ್ತಮುತ್ತಲೂ ಜಗಲಿ ಇರುವ ದೊಡ್ಡ ಮನೆ, ಅಂಗಳದಲ್ಲೆಲ್ಲಾ ಹುಲ್ಲು ಹಾಸಿಗೆ, ಪುಟ್ಟ ಬಾಗಿಲು ನೂಕಿ, ಕತ್ತು ಗೋಡೆಗೆ ತಾಗದಂತೆ ಕತ್ತು ಬಗ್ಗಿಸಿ ಒಳಹೊಕ್ಕು, ಮತ್ತೆ ಕತ್ತೆತ್ತಿದರೆ ಮನೆ ಯಾವುದೋ ಪ್ರಾಚೀನ ಕಾಲದ ಅರಮನೆಯಂತೆ ಕಾಣುತ್ತಿತ್ತು. ಮನೆ ಮಧ್ಯದಲ್ಲಿದ್ದ ತುಳಸಿಕಟ್ಟೆಯ ಮೇಲೆ ಸಂಜೆ ಸೂರ್ಯನ ಕಟ್ಟೆಪೂಜೆ, ನಿಬಿಢ ಕಂಬಗಳ ಸಂದಿನಲ್ಲಿ ಯಾವುದೋ ಪುಟ್ಟ ಮಗು ಬಿಡಿಸಿದ ಚಂದದ್ದೊಂದು ಚಿತ್ರ, ಗೋಡೆಯ ಮೇಲೆ ಸಾಲು ಸಾಲಾಗಿ ಕೂತ ಹಿರಿಯರ ಚಿತ್ರಪಟಗಳು, ಮತ್ತೊಂದಿಷ್ಟು ಹಳೆ ಸರಕು, ಅರ್ಧದಲ್ಲೇ ಸುಲಿದಿಟ್ಟ ಅಡಿಕೆ ರಾಶಿ, ಗಂಟೆಗೊಮ್ಮೆ ದೊಡ್ಡದಾಗಿ ಮನೆ ಮಕ್ಕಳಂತೆ ಕೂಗುವ ಗೋಡೆಗಡಿಯಾರ, ಮೌನದಲ್ಲೇ ಸಹನೀಯವಾಗುವ ಆ ಹಳೆಯ ಮಹಡಿ, ಕಿಟಕಿಯ ಜಂತಿ, ಹೊಸ್ತಿಲು, ಒಳಬಾವಿ ಎಲ್ಲವೂ ಆ ಸಂಜೆ ನಮ್ಮ ಜೊತೆ ಆವರೆಗೂ ಯಾರೂ ಮಾತಾಡದೇ ಇದ್ದುದನ್ನು ಮೌನದಲ್ಲಿಯೇ ಹೇಳುತ್ತಿತ್ತು. ಆ ಮನೆ ಸೊಸೆ ನಗುಮೊಗದಿಂದಲೇ ಮಾತಾಡುತ್ತಿದ್ದರು. ಆದರೂ ಅವರ ಪಟಪಟ ಕನ್ನಡ ಕೇಳಿ “ಎಲ್ಲಿ ನಿಮ್ಮ ತವರೂರು”ಎಂದೆ. ಅವರು ನಗುತ್ತ ಮೈಸೂರೆಂದರು.
ಹಾಗೇ ಮಾತಾಗುತ್ತ ಮೈಸೂರಿನ ಮಳೆ, ಮಾಳದ ಮಳೆ, ದೊಡ್ಡ ಪಟ್ಟಣದ ಬದುಕು, ಮಾಳದ ಕಾಡಿನ ಬದುಕು ಅಂತೆಲ್ಲಾ ಮಾತಾಡಿದೆವು.”ನಂಗೆ ಮಾಳವೇ ಒಂಥರಾ ಇಷ್ಟವಾಗಿದೆ ಈಗೀಗ, ಮದುವೆಯಾದ ಹೊಸತರಲ್ಲಿ ಇಲ್ಲಿ ಬಂದಾಗ ಇಲ್ಲಿನ ದೊಡ್ಡ ಮಳೆ, ಕಾಡಿನ ಗವ್ವೆನ್ನುವ ಮೌನ, ಇವೆಲ್ಲ ವಿಚಿತ್ರ ಅನ್ನಿಸುತ್ತಿತ್ತು, ಆದರೆ ಕೆಲವೇ ದಿನ ಅಷ್ಟೆ, ಮತ್ತೆ ಇವೆಲ್ಲ ಆಪ್ತವಾಯ್ತು, ಮಾಳದ ಮೇಲೆ ಪ್ರೀತಿಯಾಯ್ತು” ಎಂದವರು ನಕ್ಕರು. ಮಾಳದ ಕಾಡೂ ನಕ್ಕಂತಾಯ್ತು. ಗಿಜಿಗಿಜಿ ಪೇಟೆಯಿಂದ ಬಂದು, ಅಷ್ಟೊಂದು ಮಾತೇ ಹುಟ್ಟದ ಮಾಳ ಅನ್ನೋ ಮೌನದ ಕೋಟೆಗೆ ಬಂದ ಆ ಹೆಣ್ಣುಮಗಳ ಮನಃಸ್ಥಿತಿ ಹೇಗಿದ್ದಿರಬಹುದು? ಅಂತ ಯೋಚಿಸಿದೆ. “ಕೆ.ಎಸ್.ನ” ಪದ್ಯದಂತೆ “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತಾಗಿ…ನಾಲ್ಕನೆಯ ಹಗಲು ಹೆರಳಿನ ತುಂಬಾ ದಂಡೆ ಹೂವು ಮುಡಿದು ಆ ಬಳಿಕ ಈಗ ಸಹಜ ಖುಷಿಯಿಂದ ತುಂಬಿಕೊಂಡಿರಬಹುದು ಈ ಹೆಣ್ಣು ಮಗಳು ಅಂತ ಸುಮ್ಮನೇ ಯೋಚಿಸಿದೆ. ಈಗಿನ ಹುಡುಗಿಯರಿಗೆ ಪೇಟೆ ಮೋಹ ಜಾಸ್ತಿ ಹಳ್ಳಿಯೆಂದರೆ ಗೊತ್ತಿಲ್ಲ, ಹಳ್ಳಿಯಲ್ಲಿ ಅವರಿಗೆ ಏನೂ ಕಾಣಲ್ಲ” ಎಂದು ಅಂತಹ ಹುಡುಗಿಯರ ಬಗ್ಗೆ ಬೇಸರ ಪಡುತ್ತಿದ್ದ ನಂಗೀಗ ಈ ಕಾಲದ ಹೆಣ್ಣುಮಗಳು, ಇಂತಹ ಪುಟ್ಟ ಹಸಿರ ಊರಿನಲ್ಲಿ ಬದುಕುತ್ತಿರುವುದು ಖುಷಿ ಕೊಟ್ಟಿತು.
ಹೀಗೊಂದು ಕಾಡು, ಅಲ್ಲೊಬ್ಬಳು ಮಡದಿ, ಸಂತೃಪ್ತಿಯಿಂದ ಬದುಕುವ ಗಂಡ, ಪುಟ್ಟದ್ದೊಂದು ಮನೆ, ನದಿ ನಗುವಂತೆ ಮನೆಯಲ್ಲೊಂದು ಮಗುವಿನ ಕಿಲಕಿಲ ಅರಳುನಗು, ಒಟ್ಟಾಗಿ ಒಂದು ಇಡೀಯಾದ ಖುಷಿ ಬದುಕು, ಇಷ್ಟಿದ್ದರೆ ಎಷ್ಟು ಹಿತವಾಗಿರುತ್ತದಲ್ವಾ ಬದುಕು? ಹೀಗೊಂದು ಬದುಕು ಬದುಕಬೇಕು ಅಂತ ಯಾವತ್ತಿನಿಂದಲೋ ಅನ್ನಿಸುತ್ತಿದ್ದರೂ, ಈಗ ಈ ಹಳೆಮನೆಯಲ್ಲಿ ಕೂತ ಕ್ಷಣಕ್ಕೆ, ಅದು ಇನ್ನಷ್ಟು ಗಾಢವಾಗಿ ಅನ್ನಿಸಲು ಶುರುವಾಯಿತು. ಹೊರಗೆ ಬಾನು ಕಪ್ಪಾಗುತ್ತಿತ್ತು, ಬಿಸಿಲೆಲ್ಲಾ ಕಳೆದು ಸಹ್ಯಾದ್ರಿಯ ನೆತ್ತಿಯಲ್ಲಿ ಮೋಡಗಳು ಒಟ್ಟಾಗಿ, ಇನ್ನೇನು ಮಳೆ ಸುರಿಸಿಯೇ ಬಿಡುವೆವು ಎಂದು ನಿಂತಿದ್ದರಿಂದ, ನಾವೂ ಹಗುರನೇ ಆ ನಿಗೂಢ ಲೋಕದಂತಿದ್ದ ಮನೆಯಿಂದ ಹೊರಡಲು ಅನುವಾದೆವು. “ಇನ್ನೊಮ್ಮೆ ಬನ್ನಿ ಮನೆ ಎಲ್ಲಾ ನೋಡಿಯಾಗಿಲ್ಲ ಇವತ್ತು, ಹಗಲಲ್ಲೇ ಬಂದುಬಿಡಿ” ಎಂದು ನಿಶ್ಕಲ್ಮಶವಾಗಿ ನುಡಿದ ಆ ಮನೆಯ ಸೊಸೆಯ ಕಣ್ಣಲ್ಲಿ ಅಕ್ಕನಂತಹ ಅಕ್ಕರೆ ಉಕ್ಕುತ್ತಿತ್ತು. ಅವರ ಪುಟ್ಟ ಮಗಳಿಗೆ ಟಾಟಾ ಮಾಡುತ್ತ, ಅವರ ಗಂಡನನ್ನೂ ಅತ್ತೆಯನ್ನೂ ಬೀಳ್ಕೊಡುತ್ತ ಹೊರಟಾಗ, ಹರಡಿದ ನೀಲಾಗಸದ ನಡುವೆ ಒಂಟಿ ಹಕ್ಕಿಯೊಂದು ಅರ್ಧ ಚಂದ್ರನನ್ನು ಭೇಟಿಯಾಗಲು ಹೊರಟಂತೆ ಆಕಾಶದಲ್ಲಿ ಕರಗಿಯೇ ಹೋಗಿತ್ತು. ಕಾಡಿನ ವಿಸ್ತಾರದ ಹಸಿರಲ್ಲಿ ಇರುಳಾದರೂ, ಬೆಟ್ಟದ ಅಚಲ ಆಕಾರ ಮಾತ್ರ ಕತ್ತಲಲ್ಲಿಯೂ ಕಾಣುತ್ತಿತ್ತು.
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) “ಒಂದು ಕಾಡಿನ ಪುಷ್ಟಕ ವಿಮಾನ”(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.
ನಮಸ್ತೆ
ನಿಮ್ಮ ಪರಿಚಯ ನನಗೆ ಈವರೆಗೂ ಇರಲಿಲ್ಲ. ಲೇಖಕನ ಪರಿಚಯ ಅವರ ಬರಹದ ಮೂಲಕ ಆಗುತ್ತಾ ಹೋದರೆ ಅದಕ್ಕಿಂದ ದೊಡ್ಡ ಭಾಗ್ಯವಿಲ್ಲ ಎಂದು ನಂಬಿರುವವಳು ನಾನು. ಅಂಥ ಒಂದು ಸದವಕಾಶ ನನಗಿಂದು ‘ಕೆಂಡ ಸಂಪಿಗೆ’ಗಾಗಿ ನೀವು ಬರೆಯುತ್ತಿರುವ ಅಂಕಣದಿಂದಾಯಿತು. ಇದರ ಕೊಂಡಿಯೊಂದು ಗೆಳತಿಯ ಸಿಂಧು ಅವರ ಮುಖಗೋಡೆಯಲ್ಲಿ ಸಿಗಲು, ಅದು ನನ್ನಾಸಕ್ತಿಯ, ಒಲವಿನ ವಿಷಯವೇ ಆಗಿದ್ದರಿಂದ ಪ್ರವೇಶಿಸಿದೆ. ಅದರ ಓದು ಎಂಥಾ ಆನಂದಾನುಭೂತಿಯನ್ನು ನನ್ನಲ್ಲಿ ತುಂಬಿತೆಂದರೆ… ಮೊದಲ ಕಂತನ್ನು ಓದಲು ಆರಂಭಿಸಿದವಳು ತಡೆಯಲಾರದೇ ಅಷ್ಟೂ ಕಂತನ್ನು ಅಂದರೆ ಇಂದಿನ ಒಂಭತ್ತನೇ ಕಂತನ್ನೂ ಪೂರ್ತಿ ಓದಿ ಮುಗಿಸಿಯೇ ಎದ್ದಿದ್ದು! ನಿಮ್ಮ ಮಾಳದ ಕಾಡಿಗೆ ಬಂದಿದ್ದೊಂದೇ.. ಈಗ ಹೊರ ಬೀಳುವ ಮಾರ್ಗ ಗೊತ್ತಾಗುತ್ತಲೇ ಇಲ್ಲವಲ್ಲ! ಮೊದಲ ಕಂತನ್ನು ಓದುತ್ತಿದ್ದವಳು ಕತ್ತುದ್ದುದ್ದ ಮಾಡಿ ಅಷ್ಟನ್ನೂ ಒಂದೇ ಗುಟುಕಿಗೆ.. ಅಲ್ಲಲ್ಲಾ, ಅಲ್ಲಲ್ಲಿ ನಿಲುಗಡೆ ಪಡೆಯುತ್ತಾ, ಓದಿದ್ದನ್ನು ಅರಗಿಸಿಕೊಂಡು, ನಾ ಬಾಲ್ಯದಲ್ಲಿ ಕಂಡ ನನ್ನ ಮಲೆನಾಡಿನಂದವನ್ನು ಸ್ಮರಿಸಿಕೊಳ್ಳುತ್ತಾ ಪಯಣ ಸಾಗಿಸಿದೆ, ‘ರಾಧಾಕೃಷ್ಣ ಜೋಶಿಯವರ ಕಾಡಿನ ದಾರಿಯೆಲ್ಲ ನನಗೆ ಗೊತ್ತು ಅನ್ನುವಂತೆ ನಿಂತಿದ್ದ ಹಳೆ ಬೈಕ’ನ್ನೇರಿ! ಈಗ ನಾನೋದಿದ ಒಂಭತ್ತೂ ಭಾಗದಲ್ಲಿ ನಾನೆಳೆದುಕೊಂಡು ಸಾಗಿದ ಭಾವ ಸ್ಫುರಣವನ್ನು ನನ್ನ ಖುಶಿಗಾಗಿ, ಈ ಆನಂದಾನುಭೂತಿಯನ್ನು ಕಟ್ಟಿಕೊಟ್ಟ ನಿಮ್ಮ ಅದ್ಭುತ ಸಾಮರ್ಥ್ಯಕ್ಕಾಗಿ ನೀಡುತ್ತಿದ್ದೇನೆ. ಕಷ್ಟವಾದರೂ ಓದಿಬಿಡಿ ಎನ್ನುವುದಷ್ಟೇ ವಿನಂತಿ. ?
೧. “ಸುರಿಯುತ್ತ ಇರುವ ಮಳೆಯ ಹಾಗೇ ಹೇಳುತ್ತ ಕೂರೋಣ” ಅನ್ನಿಸಿದಂತೇ, ಹೇಳುತ್ತಾ ಸಾಗಿದ ಪಯಣದಾರಂಭವನ್ನು ಬಿಡಲು ಕೊಡದೇ, ಓದುತ್ತಾ ಹೋಗೋಣ ಎಂದೆನಿಸುವಂತಿದೆ ಆರಂಭದ ಆಕರ್ಷಣೆ! “ಮೌನವೊಂದು ಜಗತ್ತಿನ ಅತ್ಯಂತ ದೊಡ್ಡ ಮಾತು ಅನ್ನಿಸೋದು ಈ ಮಾಳದ ತಪ್ಪಲಲ್ಲಿ ಬಂದು ನಿಂತಾಗ” – ಅಕ್ಷರಶಃ ನಿಜ ಎಂದೆನ್ನಿಸಿತು.
“ಕಾಟಿ ಬಂದು ದಾಸವಾಳದ ಹೂವನ್ನೆಲ್ಲಾ ತಿನ್ನುತ್ತದೆ. ಅದಕ್ಕೆ ದಾಸವಾಳ ಎಂದರೆ ಇಷ್ಟವೇನೋ? ಬೆಳಗ್ಗೆ ನೋಡುವಾಗ ದಾಸವಾಳವಾಗಲೀ, ಮೊಗ್ಗಾಗಲೀ ಕಾಣಿಸುವುದಿಲ್ಲ. ತಿನ್ನಲಿ ಪಾಪ, ಅವಕ್ಕೂ ಆಹಾರ ಬೇಕಲ್ಲ.” – ನನ್ನಜ್ಜಿಯೂ ಹೇಳುತ್ತಿದ್ದಳು, “ಕೂಸೆ ಗಿಡದಿಂದ ಹೂವನ್ನಷ್ಟು ಕೊಯ್ಯಡ… ಒಂದಿಷ್ಟ ಹಕ್ಕಿಪಕ್ಕಿಗೆ, ಚಿಟ್ಟೆಗೆ, ಜೇನು ಹುಳಕ್ಕೆಲ್ಲಾ ಬೇಕು. ಅಲ್ಲಿ ದೇವ್ರಿಗೊಂಗಿಷ್ಟು, ಮನೆ ದೇವ್ರಿಗೊಂದಿಷ್ಟು” ಎಂದು. ಅದು ನೆನಪಾಯಿತು.
೨. ನನ್ನ ಅಜ್ಜ ಸದಾ ಹೇಳುತ್ತಿದ್ದರು ‘ಪುಗ್ಸಟ್ಟೆ ಸಿಕ್ಕುವುದನ್ನೆಂದೂ ನಂಬಬೇಡ… ನಾಲ್ಕು ಪಟ್ಟು ತೆರಬೇಕಾದೀತು’ ಎಂದು. ಮೊದಲು ಫ್ರೀಯಾಗಿ ಕರೆದುಕೊಂಡು ಹೋಗಿ ಆಮಿಷ ತೋರಿಸಿ ಆಮೇಲೆ ಚಾರ್ಜ್ ಮಾಡಿದ ಬಸ್ಸಿನ ಪ್ರಕರಣ ನೆನಪಿಸಿತು.
೩. ತುಂಗೆ ಭದ್ರೆಯರ ಹುಟ್ಟು, ಬೆಳವಣಿಗೆ ಸಾಗರದೊಂದಿಗೆ ವಿಲೀನಗೊಳ್ಳುಅ ಸುಂದರ ವಿವರಣೆಯನ್ನೋದಿ ‘ಹೆಣ್ಣನ್ನು ಯಾಕೆ ನದಿಗೆ ಹೋಲಿಸುತ್ತಾರೆ’ ಎನ್ನುವುದಕ್ಕೆ ಸ್ಪಷ್ಟಚಿತ್ರಣ ಸಿಕ್ಕಿತು.
೪. ಇದು ನನ್ನನ್ನು ಬಹಳ ಸೆಳೆದ ಭಾಗ! ಬೆಟ್ಟಗಳು ಸೀನುವುದನ್ನು ನೋಡಲು, ನಾವೂ ಥಂಡಿಯನ್ನು ಹೊತ್ತುಕೊಂಡು, ಒಲೆಯ ಮುಂದೆ ಚಾದ ಮುಚ್ಚಿ ಕುಳಿತು ಹಬೆಯಾಡುವ ಕಷಾಯ ಹೀರಲು, ಪುನ್ನೇರಲ ಹಣ್ಣು ತಿನ್ನಲು, ಒಮ್ಮೆಯಾದರೂ ಅಲ್ಲಿಗೆ ಹೋಗಬೇಕು ಎಂಬ ಬಯಕೆ ಬೆಂಬಿಡದೇ ಕಾಡುವಂಥ ವಿವರಣೆ…
*”ಕರಿಬಂಡೆ ಮಳೆ, ಮಂಜನ್ನು ತಿನ್ನುವುದು”>>> ಆಹಾ… ಅಕ್ಷರಶಃ ಕಲ್ಪಿಸಿಕೊಳ್ಳುತ್ತಿರುವೆ…
*”ನಿಮಗೆ ಏನು ಇಷ್ಟವಾಗುತ್ತದೋ ಹಾಗೇ ಬದುಕಿ, ಅದರಲ್ಲಿ ಕಷ್ಟವಿದ್ದರೂ ಅದೇ ನಮಗೆ ಇಷ್ಟಕೊಡುತ್ತದೆ. ಹಾಗೆ ಬದುಕಿದಾಗ ಮಾತ್ರ ಜೀವನಕ್ಕೆ ಅರ್ಥ”. >> ಡೋಂಗ್ರೆಯವರ ಈ ಮಾತು ಮನದೊಳಗೆ ಅಚ್ಚುಹಾಕಿಬಿಟ್ಟಿತು. ಪುಟ್ಟ ಮಕ್ಕಳು ತಮಗಿಷ್ಟವಾದದ್ದನ್ನು ಖಾರ ಜಾಸ್ತಿ ಇದ್ದರೂ ಉಫ್ ಉಫ್ ಎನ್ನುತ್ತಲೇ ಸವಿಯುವುದು ನೆನಪಾಯಿತು.
5. “ಮಳೆ ಮತ್ತು ಕಾಡು, ತುಟಿ ಮತ್ತು ಮುತ್ತು ಇದ್ದ ಹಾಗೇ”>> ಇದನ್ನೋದುತ್ತಿದ್ದಂತೇ ತುಟಿಯಲ್ಲಿ ಅಪ್ರಯತ್ನವಾಗಿ ಸಣ್ಣ ನಗು ಮಿನುಗದೇ ಇರದು. ತುಟಿಯಿದ್ದರೆ ತಾನೇ ನಗು ಕಾಣಿಸುವುದು… ಇಲ್ಲದಿದ್ದರೆ ನಗುವಿಗೆಲ್ಲಿಯ ಸ್ಥಾನ? ಮಯ್ಯನ್ನೆಲ್ಲಾ ಚಂಡಿಮಾಡುವ ಮಳೆಯಂತೇ ಮನಸ್ಸನ್ನು ಒದ್ದೆಯಾಗಿಸಿಬಿಡುವ ವಿವರಣೆ!
೬. ”ಹಣಕ್ಕೋಸ್ಕರ ಕಾಡು ಕಡಿದು, ಆ ಹಣದಲ್ಲೇ ದೇವರಿಗೆ ಆಭರಣ ಕೊಡುವ ಮೂಡ ಭಕ್ತರಿಗೆ ದೇವರು ಒಲಿಯಲು ಸಾಧ್ಯವೇ ಇಲ್ಲ, ಪರಿಸರವೇ ದೇವರು, ಅದನ್ನು ಉಳಿಸಿಕೊಂಡರೆ ಈ ದೇವರು”>>> ಎಂಥಾ ಜೀವನ ದರ್ಶನವಿದೆ, ದಿವ್ಯ ಭಾವವಿದೆ ಗೀತಕ್ಕನ ಮಾತಿನಲ್ಲಿ!
೭. “ದಾರಿ ತಪ್ಪಿ ಬಂದ್ರಾ, ದಾರಿ ಹುಡುಕಿ ಬಂದ್ರಾ” ಈ ಮಾತು ಸಹಜವಾಗಿ ಮೇಲ್ನೋಟಕ್ಕೆ ಕಂಡರೂ ಹಲವು ಗೂಡಾರ್ಥವನ್ನು ಧ್ವನಿಸುವಂತಿದೆ! ದಾರಿ ತಪ್ಪಿ ಬಂದ ದಾರಿಯೇ ಹುಡುಕಿ ಬಂದ ದಾರಿಯೂ ಆಗಿಬಿಟ್ಟಾಗ ಬಹುಶಃ ಅದೇ ಸ್ವರ್ಗವೆನಿಸಿಕೊಳ್ಳುವುದೇನೋ?!
೮) ಶಂಕರ ಜೋಶಿಯವರು ಇಂದಿಲ್ಲದಿದ್ದರೂ ಅವರ ಜೀವನ ಪ್ರೀತಿ, ಪ್ರಕೃತಿ ಸ್ನೇಹ, ಸ್ವಾರಸ್ಯಕರ ಕಾಡಿನ ಕಥೆಗಳು ಮಾಳದಲ್ಲೆಲ್ಲಾ ಮಾರ್ದನಿಸುತ್ತಿರಬಹುದು!
೯) “ಬಿಸಿಲುಗಾಲ, ಮಳೆಗಾಲ, ಮಂಜಿನಗಾಲ ಎಲ್ಲವೂ ಜೊತೆಯಾಗಿ ಒಂದೇ ಸೀಟಿನಲ್ಲಿ ಕೂತು ಜಗತ್ತು ನೋಡುತ್ತಿರುವ ಆ ಕ್ಷಣವೇ ದಿವ್ಯ ಅನ್ನಿಸುತ್ತದೆ ನಂಗೆ.>> ಆಹಾ.. ಥೇಟ್ ಇದೇ ಅನುಭವ ಅಗಸ್ಟ್ ತಿಂಗಳಲ್ಲಿ ಜೋಗಕ್ಕೆ ಹೋದಾಗ ನಮಗಾಗಿತ್ತು. ಹೀಗಾಗಿ ಅಕ್ಷರಶಃ ಅರ್ಥೈಸಿಕೊಂಡೆ.. ಆ ಅನುಭವವನ್ನು ಮತ್ತೊಮ್ಮೆ ಜೀವಿಸಿದೆ.
ಕೊನೆಯಿಲ್ಲದೇ ಸಾಗುತ್ತಾ ಹೋಗಲಿ ಈ ಚೆಲುವಾದ ಪಯಣ ಎನ್ನುತ್ತಲೇ… ಕೊನೆಯದಾಗಿ..
ನೀವು ಹಲವು ಬಾರಿ ಮಹಾನಗರದಲ್ಲಿ ಕೊಳಚೆ ನೀರು ಎಂದಿದ್ದೀರಿ. ಅದು ನಿಜವೂ ಹೌದು. ಆದರೆ ಈ ನಗರವೂ ಒಂದಾನೊಂದು ಕಾಲದಲ್ಲಿ ಚೆಲುವಾದ ಹಳ್ಳಿಯೋ, ಬೆಡಗಿನ ಪಟ್ಟಣವೋ ಆಗಿದ್ದಿರಬಹುದು. ಅದನ್ನು ಕೊಳಚೆಯಾಗಿಸಿದ್ದು, ಇನ್ನೂ ಆಗಿಸುತ್ತಿರುವುದು ನಮ್ಮಂಥ ವಿದ್ಯಾವಂತರೇ ಎನ್ನುವುದೇ ಈ ಕಾಲದ ಮಹಾದುರಂತಗಳಲ್ಲೊಂದು. ಇಲ್ಲಿ ಕೊಳಕು ಹರಿದು ಸುಂದರ, ದಿವ್ಯ ಮಾಳದಂಥ ಪರಿಸರವನ್ನು ಸೇರುವ ದುರದ್ರಷ್ಟಕರ ದಿನವೆಂದೂ ಬರದಿರಲಿ ಎಂದೇ ಹಾರೈಕೆ. ಹೀಗಾಗಿ ನನಗೆ ಎಷ್ಟೋ ಸಲ ಎನ್ನಿಸುತ್ತಿರುತ್ತದೆ. ಇಲ್ಲಿಯ ಕೊಳಕನ್ನು ರಿಪೇರಿ ಮಾಡದೇ ನಾವು ಹೊರಟು ಹೋದರೆ ನಾಳೆ ಅದರ ಕೊಳಕು ವಾಸನೆ ಅಲ್ಲಿರುವ ನಮಗೂ ತಾಗಬಹುದೇನೋ ಎಂದು.
“ಹತ್ತಿರದಿಂದ ನೋಡುವ ನೋಟಕ್ಕಿಂತಲೂ ದೂರದಿಂದ ನೋಡುವ ನೋಟವೇ ಮೋಹಕವಾದದ್ದು, ನಿಜವಾದ ಖುಷಿ ಇರೋದು ಕಳೆದು ಹೋಗುವುದರಲ್ಲೇ.” ಎಂದಿದ್ದೀರಿ ಖಂಡಿತ ಸತ್ಯಕ್ಕೂ ಸತ್ಯ. ಈ ರೀತಿ ಕಾಡು, ಮೇಡು, ಹಳ್ಳ, ನದಿ ಎಲ್ಲವನ್ನೂ ಅನುಭವಿಸಲಾಗದ ನಾವುಗಳು, ನಿಮ್ಮಂಥ ಸಹೃದಯರು ಅಕ್ಷರಗಳಲ್ಲಿ ಬಿಡಿಸುವ ಸೌಂದರ್ಯದಲ್ಲಿ,
ಸೆರೆಹಿಡಿದು ತೋರುವ ಚಿತ್ರಗಳಲ್ಲಷ್ಟೇ ಕಣ್ತುಂಬಿಕೊಳ್ಳುತ್ತಾ, ದೂರದ ನೋಟವೇ ಅಂದ ಎಂದು ನಂಬಿಬಿಡುವುದರಲ್ಲಿ, ಅದರ ಚೆಲುವಿನ ಕಲ್ಪನೆಯಲ್ಲೇ ಕಳೆದುಹೋಗುವುದರಲ್ಲಿ ನಿಜವಾದ ಆನಂದವಿದೆ ಎಂದೆನ್ನಿಸಿಬಿಟ್ಟಿತು.
ನಿಮಗೆ ತುಂಬು ಮನದ ಧನ್ಯವಾದಗಳು… ಮತ್ತೇನು ಹೇಳಲಿ?
ಆದರಗಳೊಂದಿಗೆ,
ತೇಜಸ್ವಿನಿ ಹೆಗಡೆ.