“ಮನುಷ್ಯ ಯಾರೇ ಇರಲಿ,ಎಲ್ಲಿಯೇ ಹುಟ್ಟಿರಲಿ ಮತ್ತೊಂದು ದೇಶಕ್ಕೆ ಹೋದಾಗ ಆತನಿಗೆ ತಾಯ್ನೆಲದ ಹಂಬಲ ಕಾಡದೇ ಇರುವುದಿಲ್ಲ.ಬೇರೊಂದು ದೇಶಕ್ಕೆ ಅವಕಾಶವನ್ನು ಹುಡುಕಿ ಬರಬೇಕಾದ ಅನಿವಾರ್ಯತೆಯನ್ನು ನೆನೆದು ತಮ್ಮ ಸ್ವಂತ ದೇಶಗಳ ಭ್ರಷ್ಟಾಚಾರದ ಬಗ್ಗೆ ಇವರೆಲ್ಲರೂ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಒಬ್ಬಳಂತು ತನ್ನ ದೇಶದ ಸೆಖೆ,ಆ ಬೆವರಿನ ದಿನಗಳಲ್ಲಿ ಯಾವಾಗಲೋ ಬೀಸುತ್ತಿದ್ದ ಒಂದು ತಂಗಾಳಿಯಲ್ಲಿ ಅನುಭವಿಸಿದ್ದ ಮಧುರ ಹಿತವನ್ನು ನೆನೆದು,ಎಂತದ್ದನ್ನೆಲ್ಲ ತಾನು ಕಳೆದುಕೊಂಡಿದ್ದೇನೆಂದು ಅತ್ತದ್ದನ್ನು ಕಂಡು ಬೆರಗಾಗಿದ್ದೇನೆ”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.
“ವಿದೇಶ ಪ್ರಯಾಣ, ಕೈ ತುಂಬ ಕಾಂಚಾಣ, ಆಕಾಶ ಭೇದಿಸಿ ಹೊರಟೈತೆ, ಆಸೆ ವಿಮಾನ!” – ಅಂತ ಲೆಕ್ಕಾಚಾರಗಳ ಬಿಸಿಲುಗುದುರೆಗಳನ್ನೇರಿ ಬಾರತೀಯರಾದ ನಾವು ವಿದೇಶಗಳಿಗೆ ಬರುತ್ತೇವೆ. ಇಲ್ಲಿ ನೆಲೆನಿಂತು ಮನಸ್ಸುಗಳಲ್ಲಿ ಕನಸುಗಳನ್ನು ಹೊತ್ತು, “ಮಲಗಿದ್ರೆ ಕನ್ಸಲ್ಲಿ ಒಂತರಾ ಕಚಗುಳಿ ವಿದೇಶದಲ್ಲಿ ಬಿಟ್ಟೋಯ್ತು, ಸ್ವದೇಶದ ಮೈಚಳಿ!” ಎಂದು ಕೆಲಸಕ್ಕೆ ಬೇಕಾದ ಎಲ್ಲ ಕಸುಬುದಾರಿಕೆಯನ್ನು ಕಲೆಗಳನ್ನು ಮೈಗೂಡಿಸಿಕೊಂಡು ದುಡಿಯುತ್ತೇವೆ. ಹಲವರು ಮರಳಿಹೋಗುವ ಕನಸು ಹೊತ್ತು ಬ್ರಿಟಿಷ್ ಪೌಂಡು ಮತ್ತು ಭಾರತೀಯ ರೂಪಾಯಿಗಳ ವಿನಿಮಯದ ಲೆಕ್ಕಾಚಾರದಲ್ಲಿ ಮನೆ ಕಟ್ಟಲು ಜಾಗ, ಮನೆ ಕಟ್ಟಲು ಬೇಕಾದ ಹಣ ಇವುಗಳನ್ನು ಕೂಡಿಡುವ ಸಾಮಾನ್ಯ ಭಾರತೀಯನ ಲೆಕ್ಕಕ್ಕೆ ದುಡಿಮೆ, ಗಳಿಕೆ, ಉಳಿಕೆ, ಸಾಧನೆಗಳ ಲೆಕ್ಕಾಚಾರದಲ್ಲಿ ಕಳೆಯುತ್ತಾರೆ. ಈ ನಡುವೆ ವರ್ಷಗಳು ಉರುಳಿಹೋಗುತ್ತವೆ. ಇನ್ನು ಕೆಲವರು ಇಲ್ಲಿಯ ಬದುಕಿಗೆ ಒಗ್ಗಿಕೊಂಡು ತಾಯ್ನಾಡಿಗೆ ಹಿಂತಿರುಗುವ ಹಂಬಲವನ್ನು ಕೈ ಬಿಡುತ್ತಾರೆ. ವಿದೇಶೀ ಬದುಕೆನ್ನುವುದು ಒಂದು ಬಗೆಯ ನಶೆ. ವಿದೇಶೀ ವಾಸದಿಂದ ನಾವು ಏನನ್ನು ಗಳಿಸುತ್ತೇವೆ ಎನ್ನುವುದು ದುಡಿದ ಹಣದಿಂದ ಮಾತ್ರ ಲೆಕ್ಕಕ್ಕೆ ಸಿಗುವುದಿಲ್ಲ. ಏನೆಲ್ಲ ಕಳೆದುಕೊಂಡೆವು ಎನ್ನುವುದನ್ನೂ ತುಲನೆಯ ಮತ್ತೊಂದು ತಟ್ಟೆಯಲ್ಲಿಟ್ಟು ನೋಡಿದಾಗ ಮಾತ್ರ ನಿಜವಾದ ಗಳಿಕೆಯ ಪ್ರಮಾಣದ ಅರಿವಾಗುವುದು. ಯಾಕೆಂದರೆ ಗಳಿಕೆಯ ಹಿಂದಿನ ಈ ಅವಿರತ ನಾಗಾಲೋಟದಲ್ಲಿನ ನಮ್ಮ ಲೆಕ್ಕಕ್ಕೂ ಕಾಲ ಒಂದು ಪರಿಮಿತಿಯ ಚೌಕಟ್ಟನ್ನು ನಿರ್ಮಿಸಿರುತ್ತದೆ. ಆ ನಂತರ “ಇಳ್ದಂಗೆ ನಶೆ, ಕಳೆದಂಗೆ ಕಾಲ, ಅರಿವಾಯ್ತು ಇದು, ತ್ರಿಶಂಕು ಸ್ವರ್ಗ” ಎನ್ನುವಂತೆ ನಿಜವನ್ನು ಎದುರುಗೊಳ್ಳಬೇಕಾದ ಪರಿಸ್ಥಿತಿಯೂ ಬರುತ್ತದೆ. ಕಾಲಾನುಕ್ರಮದಲ್ಲಿ ಇತರೆ ದೇಶಗಳ ಎಲ್ಲ ವಲಸಿಗರಿಗೂ ಅರಿವಾಗುವಂತೆ ಸಾಮಾನ್ಯ ಭಾರತೀಯರಿಗೂ ಈ ಅರಿವು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ತಟ್ಟುತ್ತದೆ.
ಫಾರಿನ್ ಎಂದ ಕೂಡಲೇ ಅದು ಮುಖ್ಯವಾಗಿ ಹಣದ ಲೆಕ್ಕವಾಗುತ್ತದೆ. ಜೊತೆಗೆ ವಿದ್ಯೆ, ಅವಕಾಶ, ಫ್ಯಾಷನ್, ಆದರ್ಶಗಳು, ಬಿಡುಗಡೆ, ಸ್ವತಂತ್ರ್ಯ, ಸ್ವೇಚ್ಚೆ ಏನೆಲ್ಲ ಅರ್ಥಗಳನ್ನು ಜನರು ಕಲ್ಪಿಸುತ್ತಾರೆ. ಜೀವನದ ಮೊದಲಲ್ಲಿ ಮಧ್ಯಮವರ್ಗದ ಜನರಿಗೆ ಬದುಕಿನಲ್ಲಿ ಬೇಕಿರುವ ಮೂಲಭೂತ ಅವಶ್ಯಕತೆಗಳು ಇವುಗಳೇ ಆದ ಕಾರಣ ಹಾಗೆನ್ನಿಸುವುದು ನಿಜವೇ. ಆದರೂ ಇಲ್ಲಿ ಬಂದ ನಂತರ ಅವರಲ್ಲಿ ಸ್ವದೇಶದ ಬಗೆಗಿನ ಹಂಬಲ ಉಳಿದುಬಿಡುವುದು ನಿಜ.
ವಿದೇಶಕ್ಕೆ ಸ್ವ-ಇಚ್ಚೆಯಿಂದ ಬಂದು ನೆಲೆನಿಂತ ಮೇಲೆ ಅನಿವಾಸಿಗಳಿಗೆ ಸ್ವದೇಶದ ಬಗ್ಗೆ ಹಂಬಲ ಇರಬೇಕೆ? ಅಥವಾ ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ನಮ್ಮ ದೇಶಕ್ಕೆ ಭೇಟಿ ನೀಡಿದರೆ ನಮ್ಮ ತಾಯ್ನಾಡಿನ ಸಂವೇದನೆಗಳು ತಣಿಯುತ್ತವೆಯೇ? ಆಗಿಂದಾಗ ವಿದೇಶದ ಈ ಬದುಕಿನ ಬಗ್ಗೆ ಮನಸ್ಸಿನಲ್ಲಿ ಅತೃಪ್ತಿ ಏಕೆ? ಈ ಪ್ರಶ್ನೆಗಳು ಸಹಜವಾದರೂ ಗೊಂದಲಕ್ಕೀಡು ಮಾಡುವಂಥವು. ಹಲವು ತಲೆಮಾರು ಕನ್ನಡಿಗರನ್ನು ಕಾಡಿರುವಂತವು.
ವಿದೇಶಗಳೆಂದರೆ ಹೂವಿನ ಸುಪ್ಪತ್ತಿಗೆಯಲ್ಲ. ನಾವು ವಿದೇಶಗಳಿಗೆ ಪ್ರವಾಸಕ್ಕೆ ಹೋದರೆ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ. ಆಗಿನ ನಮ್ಮ ಮನಸ್ಥಿತಿಯೇ ಬೇರೆ ಇರುತ್ತದೆ. ಆದರೆ ವಿದೇಶಗಳಿಗೆ ಬಂದು ನೆಲೆ ನಿಲ್ಲುವುದಾದರೆ ನಾವು ಬದುಕಿನ ಎಲ್ಲ ಸವಾಲುಗಳನ್ನು ವಿದೇಶೀ ನೆಲದಲ್ಲಿ ಎದುರಿಸುವುದರ ಜೊತೆ, ಅಲ್ಪಸಂಖ್ಯಾತ ಅನಿವಾಸೀ ಭಾರತೀಯರಾಗಿ ಹಲವಾರು ದ್ವಂದ್ವಗಳನ್ನು, ನಿರಾಶೆಗಳನ್ನು ಎದುರಿಸುತ್ತೇವೆ. ಹಲವು ಕನಸುಗಳನ್ನು ಕಳೆದುಕೊಳ್ಳುತ್ತೇವೆ. ಬಲವಂತದ ಹಲವು ಮುಖವಾಡಗಳನ್ನು ಪ್ರತಿದಿನವೂ ತೊಡುತ್ತೇವೆ. ಎರಡೊಂದು ಬದುಕನ್ನು ಎದುರಿಸುತ್ತೇವೆ. ಬದಲಾದ ಸಂಸ್ಕೃತಿ, ಭಾಷೆ ಮತ್ತು ಭೂಬಾಗಗಳ ನಿಯಮಗಳ ಕಾರಣ ಎಲ್ಲವೂ ಎರಡು ಪಟ್ಟು ಹೆಚ್ಚಿನ ಕಷ್ಟದಂತೆ ಕಾಣುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಕ್ಕಳನ್ನು ವಿದೇಶಿಗರನ್ನಾಗಿ ಮಾಡುತ್ತೇವೆ. ಆದರೆ ವಿದೇಶಿಗರು ಇವರನ್ನು ಭಾರತೀಯರಂತೆಯೇ ನೋಡುತ್ತ, ಭಾರತ ಮೂಲವನ್ನು ಪದೇ ಪದೇ ನೆನಪಿಸುತ್ತಾರೆ. ಬದುಕಿನಲ್ಲಿ ಒಂದನ್ನು ಗಳಿಸಲು ಒಂದನ್ನು ಕಳೆದುಕೊಳ್ಳಬೇಕು ಎನ್ನುವ ಅಲಿಖಿತ ನಿಯಮ ವಿದೇಶಿಗರ ಬದುಕನ್ನು ಆಳವಾಗಿ ಆವರಿಸುತ್ತದೆ.
ಫಾರಿನ್ ಎಂದ ಕೂಡಲೇ ಅದು ಮುಖ್ಯವಾಗಿ ಹಣದ ಲೆಕ್ಕವಾಗುತ್ತದೆ. ಜೊತೆಗೆ ವಿದ್ಯೆ, ಅವಕಾಶ, ಫ್ಯಾಷನ್, ಆದರ್ಶಗಳು, ಬಿಡುಗಡೆ, ಸ್ವತಂತ್ರ್ಯ, ಸ್ವೇಚ್ಚೆ ಏನೆಲ್ಲ ಅರ್ಥಗಳನ್ನು ಜನರು ಕಲ್ಪಿಸುತ್ತಾರೆ. ಜೀವನದ ಮೊದಲಲ್ಲಿ ಮಧ್ಯಮವರ್ಗದ ಜನರಿಗೆ ಬದುಕಿನಲ್ಲಿ ಬೇಕಿರುವ ಮೂಲಭೂತ ಅವಶ್ಯಕತೆಗಳು ಇವುಗಳೇ ಆದ ಕಾರಣ ಹಾಗೆನ್ನಿಸುವುದು ನಿಜವೇ.
ವಿದೇಶಗಳಿಗೆ ಬರುವ ಮೊದಲ ತಲೆಮಾರುಗಳು ಅನುಭವಿಸುವ ಕಷ್ಟಗಳು ನಾನಾ ಬಗೆಯವು. ಮನುಷ್ಯ ಯಾರೇ ಇರಲಿ, ಎಲ್ಲಿಯೇ ಹುಟ್ಟಿರಲಿ ಮತ್ತೊಂದು ದೇಶಕ್ಕೆ ಹೋದಾಗ ಆತನಿಗೆ ತಾಯ್ನೆಲದ ಹಂಬಲ ಕಾಡದೇ ಇರುವುದಿಲ್ಲ. ಭಾರತ ಮುಂದುವರೆಯುತ್ತಿರುವ ದೇಶ. ಆದರೆ ಅತಿ ಕಡು ಬಡತನದ ದೇಶಗಳಿಂದ ಬರುವ ಜನರು ಕೂಡ ತಮ್ಮ ದೇಶವನ್ನು ನೆನೆದು ಮರುಗುವುದನ್ನು ಕಂಡಿದ್ದೇನೆ. ನನ್ನೊಡನೆ ಆಫ್ರಿಕಾದ ಕಡು ಬಡತನದ ದೇಶಗಳಿಂದ ಬಂದ ಹಲವು ಸಹೋದ್ಯೋಗಿಗಳು ಕೆಲಸ ಮಾಡಿದ್ದಾರೆ. ಇಲ್ಲಿ ದೊರೆವ ಹೆಚ್ಚಿನ ಹಣವೊಂದರಿಂದಲೇ ಅವರೆಂದಿಗೂ ಪೂರ್ಣ ಸಮಾಧಾನ ತಾಳಿದ್ದನ್ನು ನಾನು ನೋಡಿಲ್ಲ. ಬೇರೊಂದು ದೇಶಕ್ಕೆ ಅವಕಾಶವನ್ನು ಹುಡುಕಿ ಬರಬೇಕಾದ ಅನಿವಾರ್ಯತೆಯನ್ನು ನೆನೆದು ತಮ್ಮ ಸ್ವಂತ ದೇಶಗಳ ಭ್ರಷ್ಟಾಚಾರದ ಬಗ್ಗೆ ಇವರೆಲ್ಲರೂ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬಳಂತು ತನ್ನ ದೇಶದ ಸೆಖೆ, ಆ ಬೆವರಿನ ದಿನಗಳಲ್ಲಿ ಯಾವಾಗಲೋ ಬೀಸುತ್ತಿದ್ದ ಒಂದು ತಂಗಾಳಿಯಲ್ಲಿ ಅನುಭವಿಸಿದ್ದ ಮಧುರ ಹಿತವನ್ನು ನೆನೆದು, ಎಂತದ್ದನ್ನೆಲ್ಲ ತಾನು ಕಳೆದುಕೊಂಡಿದ್ದೇನೆಂದು ಅತ್ತದ್ದನ್ನು ಕಂಡು ಬೆರಗಾಗಿದ್ದೇನೆ.
ಸ್ವ -ಇಚ್ಚೆಯಿಂದಲೇ ಆರ್ಥಿಕ ಅನುಕೂಲಕ್ಕಾಗಿ ವಿದೇಶಕ್ಕೆ ಬಂದಿರುವ ಜನರೇ ಹೆಚ್ಚು. ಆದರೆ, ಅದಕ್ಕೆ ಭಿನ್ನವಾಗಿ ಅನುಕೂಲವಂತರ ಮನೆಯಲ್ಲಿ ಹುಟ್ಟಿ, ತುಂಬು ಬದುಕು ಬದುಕುವ ಎಲ್ಲ ಅವಕಾಶಗಳನ್ನು ಬಿಟ್ಟು, ಅಪಾರ ಆಸ್ತಿ-ಪಾಸ್ತಿಯನ್ನು ಹಿಂದಿಟ್ಟು ಇಲ್ಲಿಗೆ ಬಂದವರೂ ಇದ್ದಾರೆ. ಸಮಾಜದಲ್ಲಿ ಸ್ಥಾನ-ಮಾನ ಗಳಿಕೆಗಾಗಿ ವಿದೇಶಕ್ಕೆ ಬಂದವರೂ ಇದ್ದಾರೆ. ಇನ್ನು ಕೆಲವರು ಸಮಾಜದಲ್ಲಿ ತಮಗೆ ಅಂಟಿಕೊಂಡ ತಮಗೆ ಬೇಡವಾದ ಬಿರುದು-ಬಾವಲಿಗಳಿಂದ ದೂರವಾಗಲು ಪಲಾಯನಗೈದಿದ್ದಾರೆ. ಇನ್ನು ಕೆಲವರು ತಮ್ಮ ಪ್ರತಿಭೆಗೆ ಮುಂದುವರಿದ ಈ ದೇಶಗಳಲ್ಲಿ ಹೆಚ್ಚು ಅವಕಾಶವಿರುವುದನ್ನು ಅರಿತು ಮುಂದಿನ ತರಬೇತಿ ಗಳಿಸಲು-ಇಲ್ಲಿ ಸಲ್ಲಲು ಪಣತೊಟ್ಟು ಬಂದಿದ್ದಾರೆ. ಇನ್ನು ಕೆಲವರು ಇಲ್ಲಿನ ಜೀವನ ಕ್ರಮಗಳಿಗೆ ಮಾರು ಹೋಗಿ, ‘ಬದುಕಿದರೆ ಪಾಶ್ಚಿಮಾತ್ಯ ದೇಶಗಳಲ್ಲಿ’ ಎಂಬ ಶ್ರದ್ಧೆಯಿರುವವರು! ಅನ್ವೇಷಣೆ ಮನುಷ್ಯನ ಪ್ರೇರಣೆ.
‘ನಾವೇಕೆ ಇಲ್ಲಿಗೆ ಬಂದಿದ್ದೇವೆ’ ಎನ್ನುವ ಪ್ರಶ್ನೆಗೆ ಉತ್ತರಗಳು ತುಂಬಾ ಇವೆ. ಅವೇನೇ ಇದ್ದರೂ ಕೊರಗು ಹುಟ್ಟುವುದು ಅವರು ವಿದೇಶಕ್ಕೆ ಬಂದ ಕಾರಣವನ್ನು/ಗುರಿಯನ್ನು ಮುಟ್ಟಿದ ಮೇಲೆ! ಅಥವ ಅವರ ಗುರಿ ತೀರದ ದಾಹವಾಗಿ ಕೊನೆ ಕಾಣದಾದಾಗ. ಅಥವಾ ಅವರ ಲೆಕ್ಕಾಚಾರ ತಪ್ಪಿ ಅದು ಇನ್ನೇನೋ ವಿಧಿಯಾಗಿ ಕಾಡಿದಾಗ. ವಿದೇಶದ ಅನುಭವ ಜನಗಳಿಗೆ ನಾನಾ ವಿಧದಲ್ಲಿ ಆಗಬಹುದು. ಅದರಲ್ಲಿ ಹಲವರಿಗೆ ನಿರಾಸೆಯಾದರೆ ಇನ್ನು ಕೆಲವರಿಗೆ ಭ್ರಮನಿರಸನವನ್ನು ತರಬಹುದು. ಆದರೆ ವಿಜಯ ದುಂದುಭಿಗಳನ್ನು ಊದುವವರನ್ನೇ ನಾವು ಹೆಚ್ಚು ನೋಡುವುದು ವಿಶೇಷ. ಈ ದೇಶಕ್ಕೆ ಬಂದ ಹೊಸತರಲ್ಲಿ ನಮಗಿಂತ 30-40 ವರ್ಷಗಳ ಹಿಂದೆಯೇ ಬಂದ ಹಲವರ ಜೊತೆ ಒಡನಾಟ ಬೆಳೆಯಿತು.
ಇವರು ಬಹಳ ಸಿರಿವಂತ ಕುಟುಂಬಗಳಿಂದ ಬಂದವರು. ವಿದ್ಯೆ ಹಲವು ತಲಮಾರುಗಳಿಂದ ಇವರಿಗೆ ದೊರೆತಿತ್ತು. ಇವರ ಕಾಲದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುವುದು ನಮ್ಮ ದೇಶದಲ್ಲಿ ಕಷ್ಟವಿರಲಿಲ್ಲ. ವಿದೇಶಗಳಿಗೆ ಬರಲು, ಪ್ರಯಾಣ ದುಬಾರಿಯಾಗಿತ್ತು. ಕೆಲಸ ಸುಲಭವಾಗಿ ದೊರೆತರೂ ಬದುಕು ಮಾತ್ರ ಒಂಟಿಯಾಗುತಿತ್ತು. ಇವರನ್ನು ನಮ್ಮ ದೇಶದ ಜನರು ದೇವತೆಗಳಂತೆ ಕಂಡಿದ್ದರೆ ಅಚ್ಚರಿಯಿರಲಿಲ್ಲ. ಪರದೇಶದ ಚಳಿಯ ವಾತಾವರಣದಲ್ಲಿ, ಒಂಟಿಯಾಗಿ, ಅಲ್ಪ ಸಂಬಳದಲ್ಲಿ ಬದುಕಿ, 3-4 ವರ್ಷಗಳಿಗೊಮ್ಮೆ ಭಾರತಕ್ಕೆ ಹಿಂತಿರುಗುತ್ತಿದ್ದ ಇವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ!
ಆಚಾರವಂತ ಮನೆಗಳಿಂದ ಬಂದ ಈ ಕೆಲವರು, ರಾತ್ರಿಗಳಲ್ಲಿ ನಿದ್ದೆ ಕಳಕೊಂಡಿದ್ದುಂಟು. ಕನಸಿನಲ್ಲಿ ಬೆವರಿ, ಬೆಳಿಗ್ಗೆ ಭಾರತಕ್ಕೆ ಹಿಂತಿರುಗುವ ಮನಸ್ಸು ಮಾಡಿದ್ದುಂಟು! ಊಟ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಪೂರಕ ವಾತಾವರಣವಿಲ್ಲದೆ, ಮಕ್ಕಳಿಗೆ ಏನನ್ನು ಕಲಿಸುವುದು ಎಂದು ದ್ವಂದ್ವಗಳನ್ನು ಅನುಭಸಿದ್ದುಂಟು. ಈ ವರ್ಗಕ್ಕೆ, ಪರದೇಶದಲ್ಲಿ ಬದುಕುವ ತಾಪತ್ರಯ ಯಾಕೆ ಬೇಕಿತ್ತು? ನೇರವಾಗಿ ಕೇಳಿಯೂ ಇದ್ದೇನೆ. ಉತ್ತರಕ್ಕಾಗಿ ಕೆಲವರು ತಡಕಾಡುವುದನ್ನು ಕಂಡಿದ್ದೇನೆ. ಇನ್ನು ಕೆಲವರು ಹಳೆಯ ದಿನಗಳಿಗೆ ಜಾರಿ, ಅನುಭವಿಸಿದ ಒಂಟಿತನ, ಹೆದರಿ ನಡುಗಿದ ಘಟನೆಗಳನ್ನು ನನಗೆ ಹೇಳಿದ್ದಾರೆ. ಒಂದು ಘಟನೆಯಂತೂ ವಿಷಾದ ಮೂಡಿಸಿದೆ.
‘ನಾವೇಕೆ ಇಲ್ಲಿಗೆ ಬಂದಿದ್ದೇವೆ’ ಎನ್ನುವ ಪ್ರಶ್ನೆಗೆ ಉತ್ತರಗಳು ತುಂಬಾ ಇವೆ. ಅವೇನೇ ಇದ್ದರೂ ಕೊರಗು ಹುಟ್ಟುವುದು ಅವರು ವಿದೇಶಕ್ಕೆ ಬಂದ ಕಾರಣವನ್ನು/ಗುರಿಯನ್ನು ಮುಟ್ಟಿದ ಮೇಲೆ! ಅಥವ ಅವರ ಗುರಿ ತೀರದ ದಾಹವಾಗಿ ಕೊನೆ ಕಾಣದಾದಾಗ. ಅಥವಾ ಅವರ ಲೆಕ್ಕಾಚಾರ ತಪ್ಪಿ ಅದು ಇನ್ನೇನೋ ವಿಧಿಯಾಗಿ ಕಾಡಿದಾಗ.
ಈ ಕುಟುಂಬ ಹಲವರಂತೆ ಆರ್ಥಿಕ ಉತ್ತಮತೆಯನ್ನು ಅರಸಿ ಬಹಳ ಹಿಂದೆಯೇ ಇಲ್ಲಿಗೆ ಬಂದು ನೆಲೆ ನಿಂತಿತ್ತು. ಇವರ ದಿನಗಳಲ್ಲಿ ಮತ್ತೊಬ್ಬ ಭಾರತೀಯನನ್ನು ರಸ್ತೆಯಲ್ಲಿ ಕಾಣುವುದು ದುರ್ಲಭವಾಗಿತ್ತು. ಈ ಮಾನಸಿಕ ಒತ್ತಡ ಸ್ವಂತ ಜೈಲುವಾಸದ ಶಿಕ್ಷೆಯಾಗಿ ಬದುಕನ್ನು ಬವಳಿಸಿತ್ತು. ಇವರಿದ್ದ ಜಾಗದಲ್ಲಿ ಇನ್ನೊಬ್ಬ ಭಾರತೀಯನನ್ನು ಭೇಟಿಯಾಗುವುದು ಬಹಳ ಕಷ್ಟಕರವಾಗಿತ್ತು. ಯಾರನ್ನಾದರು ನೋಡಿದರೆ ನಿಜವಾಗಿ ಸಿಹಿ ಸವಿದಂತೆಯೇ ಆಗುತ್ತಿದ್ದ ದಿನಗಳವು.
ಇವರಿಗೆ ಒಂದು ದಿನ ರಸ್ತೆಯಲ್ಲಿ ಇನ್ನೊಬ್ಬ ಅಪರಿಚಿತ ಭಾರತೀಯನ ದರ್ಶನವಾಯ್ತು. ನಗೆಯ ವಿನಿಮಯವಾಯ್ತು. ಮರುಕ್ಷಣ ಒಬ್ಬರ ಕೈಯನ್ನೊಬ್ಬರು ಹಿಡಿದು ಧಾರಾಕಾರ ಕಣ್ಣೀರು ಸುರಿಸಬೇಕೆ? ಮಾತು ಹೊರಟಿದ್ದು ಆಮೇಲೆ! ಮೇಲಿನ ಘಟನೆ ಬಹಳ ಹಿಂದೆ ಬಂದ ತಲೆಮಾರು ಅನುಭವಿಸಿದ ಒಂಟಿತನದ ಒತ್ತಡಗಳ ಪರಮಾವಧಿಯಾಗಿರಬಹುದು. ಇದನ್ನೆಲ್ಲ ಅನುಭವಿಸುವುದನ್ನು ಬಿಟ್ಟು ವಾಪಸ್ಸು ಯಾಕೆ ಹೋಗಲಿಲ್ಲ? ಅಂತ ನಾನು ಕೇಳದೆ ಬಿಟ್ಟಿಲ್ಲ. ಕೆಲವರು ವಾಪಸ್ಸು ಹೋದದ್ದುಂಟು. ಮತ್ತೆ ಕೆಲವರು ಬೇರೆ ದೇಶಗಳಿಗೆ ಹೋದದ್ದುಂಟು. ಇನ್ನು ಕೆಲವರು ಹೋಗಿ ಹಿಂತಿರುಗಿ ಬಂದದ್ದುಂಟು.
ಮತ್ತೆ ಕೆಲವರು, ‘ಇಷ್ಟೆಲ್ಲ ಕಷ್ಟ ಪಟ್ಟು, ಸಾಧಿಸಿ ನೆಲೆನಿಂತಮೇಲೆ ಅದನ್ನೆಲ್ಲ ನೀರಲ್ಲಿ ಹೋಮಮಾಡಿ ಹೊರಟು ಹೋಗಲಾಗದೆ ಇಲ್ಲೇ ಉಳಿದು ಕಾಲ ತಂದ ಎಲ್ಲ ಬದಲಾವಣೆಗಳನ್ನು ನೋಡಿ ನಿಟ್ಟುಸಿರಿಟ್ಟಿದ್ದುಂಟು! ಹಲವು ದಶಕಗಳನ್ನು ಕಳೆದರೂ ಇಲ್ಲಿ ಪರಿಪೂರ್ಣ ಸಲ್ಲದೆ, ಮರಳಿ ಹೋದರೆ ಅಲ್ಲಿಯೂ ಸಲ್ಲದೆ ಹೋದವರಾಗಿ ಉಳಿದವರು ಕಾಲಮಿಂಚುವ ಮುನ್ನ ಹಿಂತಿರುಗಿ ಹೋಗುವಂತೆ ನಮಗೆ ಸಲಹೆ ನೀಡಿದ್ದೂ ಉಂಟು!
ಕಳೆದ ದಶಕದಲ್ಲಿ ಆದ ಬದಲಾವಣೆಗಳು ಬಹಳ. ಇವತ್ತು ಬ್ರಿಟನ್ನಿನಲ್ಲಿ ಮಿಲಿಯನ್ನುಗಳ ಲೆಕ್ಕಕ್ಕೆ ಏಶಿಯಾದಿಂದ ಬಂದ ಜನರಿದ್ದಾರೆ. ಸರಿ ಸುಮಾರು ಹದಿನೈದು ಸಾವಿರ ಕನ್ನಡಿಗರು ಇರಬಹುದೆಂಬ ಅಂದಾಜಿದೆ. ಈ ಸಂಖ್ಯೆ ಸದಾ ಬದಲಾಗುತ್ತಿರುತ್ತದೆ. ಒಂದೇ ಕಾಲೇಜಿಗೆ ಸೇರಿದ, ಒಂದೇ ತರಗತಿಯಲ್ಲಿ ಓದುತಿದ್ದ 25-30 ಜನ ಒಟ್ಟಿಗೆ ಇಲ್ಲಿಗೆ ಬಂದಿದ್ದಾರೆ. ಕೆಲಸಗಳಲ್ಲಿ ಹಲವು ಭಾರತೀಯ ಸಹೋದ್ಯೋಗಿಗಳಿದ್ದು ಮುಖ ಕಂಡರೂ ಕಾಣದಂತೆ ನಡೆವ ಅನುಕೂಲಗಳೂ ಈಗ ನಮಗಿವೆ!
ನಮ್ಮ ದೇಶದಲ್ಲಿ ವಿದೇಶಕ್ಕೆ ಹೋಗುವುದು ಈಗ ಅತಿ ವಿಶೇಷವಾದ ವಾರ್ತೆಯೇನಾಗಿ ಉಳಿದಿಲ್ಲ. ಇನ್ನು ಆರ್ಥಿಕತೆಯ ವಿಚಾರಗಳು ಕೂಡ ಬದಲಾಗಿವೆ. ಇದೀಗ ನಮ್ಮ ದೇಶದಲ್ಲಿ ಜನರ ಬಳಿ ಹಣವಾಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಹಣದ ಬಗೆಗಿನ ಧೋರಣೆಗಳು ಬದಲಾಗುತ್ತಿವೆ. ಇನ್ನೂ ಹೆಚ್ಚಾಗಿ, ಸಣ್ಣ ವಯಸ್ಸಿನವರಿಗೆ ಬೇಗ ದುಡಿಯುವ ಅವಕಾಶ ಸಿಕ್ಕು, ದೇಶದ ಪರಿಸ್ಥಿತಿ ಬದಲಾಗುತ್ತಿರುವ ಭಾವವಿದೆ. ಕಡಿಮೆ ಮಕ್ಕಳು ಮತ್ತು ದುಡಿವ ಇಬ್ಬರು ಪೋಷಕರಿಂದ ಮಕ್ಕಳಿಗೆ ಹೆಚ್ಚು ಸೌಕರ್ಯಗಳು ದೊರೆತು ಅವರ ಮನೋಭಾವಗಳು ಹೆಚ್ಚು ವಿದೇಶಿಯರನ್ನು ಹೋಲುತ್ತಿದೆ!
ಭಾರತದ ಜನಕೋಟಿಯ ಬಳಿ ದುಡ್ಡಿನ ಗಂಟು ಹೆಚ್ಚುತ್ತಿದ್ದಂತೆ ಯಾವ ಸಂದೇಹಗಳಿಗೂ ಕೊರತೆಯಿಲ್ಲದೆ ಎಲ್ಲ ದೇಶದ ವ್ಯಾಪಾರಿಯೂ ಸ್ಪರ್ಧೆಗಿಳಿದು ಭಾರತಕ್ಕೆ ಲಗ್ಗೆಯಿಟ್ಟಿದ್ದಾರೆ. ಜೋರು ವ್ಯಾಪಾರ ನಡೆಸಿದ್ದಾರೆ. ಇದರಿಂದಾಗಿ ಇಲ್ಲಿ ದೊರೆಯುವುದೆಲ್ಲ ಈಗ ಅಲ್ಲಿಯೂ ದೊರೆಯಹತ್ತಿದೆ.
ಅಷ್ಟಿರಲಿ, ಅಲ್ಲಿನ ಸಿರಿವಂತ ಮಕ್ಕಳು ಬೇರೆ ದೇಶಗಳಿಗೆ ವ್ಯಾಪಾರ ಕೊಡಬಲ್ಲವರಾಗಿದ್ದಾರೆ! ಆದರೆ, ಮೂಲಭೂತ ಸೌಕರ್ಯಗಳಿಗೆ ಮಾತ್ರ ಭರ್ಜರಿ ಕೊರತೆ ಹಾಗೇ ಉಳಿದಿದೆ. ರಾಜಕಾರಣಿಗಳಿಂದ, ಅಡಳಿತದಿಂದ ಆಗಬೇಕಾದ ಕಡೆ ಯಾವ ಸುಧಾರಣೆಗಳೂ ಆಗುತ್ತಿಲ್ಲ. ಪರಮ ಸ್ವಾರ್ಥದ ರಾಜಕಾರಣ ನಮ್ಮಲ್ಲಿ ಸುಧಾರಿಸೀತೆ? ಅಲ್ಲಿನ ಆ ಕಟು ವಾತಾವರಣ ಬದಲಾಗದಿರುವುದು ಮಿಕ್ಕಂತೆ ದೇಶ ಸುಧಾರಣೆಯಾಗಲು ಅಡ್ಡಿಯಾಗಿ ಹಾಗೇ ಉಳಿದಿದೆ. ನಾವು ವಿದೇಶ ವಾಸಿಗಳೇ ಆಗಿ ಉಳಿಯಲು ಇದೊಂದು ದೊಡ್ಡ ಕಾರಣ.
ಇದೀಗ ನಮ್ಮ ದೇಶದಲ್ಲಿ ಜನರ ಬಳಿ ಹಣವಾಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಹಣದ ಬಗೆಗಿನ ಧೋರಣೆಗಳು ಬದಲಾಗುತ್ತಿವೆ. ಇನ್ನೂ ಹೆಚ್ಚಾಗಿ, ಸಣ್ಣ ವಯಸ್ಸಿನವರಿಗೆ ಬೇಗ ದುಡಿಯುವ ಅವಕಾಶ ಸಿಕ್ಕು, ದೇಶದ ಪರಿಸ್ಥಿತಿ ಬದಲಾಗುತ್ತಿರುವ ಭಾವವಿದೆ. ಕಡಿಮೆ ಮಕ್ಕಳು ಮತ್ತು ದುಡಿವ ಇಬ್ಬರು ಪೋಷಕರಿಂದ ಮಕ್ಕಳಿಗೆ ಹೆಚ್ಚು ಸೌಕರ್ಯಗಳು ದೊರೆತು ಅವರ ಮನೋಭಾವಗಳು ಹೆಚ್ಚು ವಿದೇಶಿಯರನ್ನು ಹೋಲುತ್ತಿದೆ!
ಕಾಲ ತರುವ ಬದಲಾವಣೆಗಳಲ್ಲಿ ಕಳೆದು ಹೋಗುವ ಸಂಬಂಧಗಳು, ಕೊಂಡಿಗಳನ್ನು ಮತ್ತೆ ಕೂಡಿಸಲಾಗದೆ, ಇಲ್ಲಿಯೇ ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿಕೊಂಡು ಬದುಕುವ ಅನಿವಾರ್ಯತೆಯನ್ನು ಎದುರಿಸುವುದು ಇನ್ನೊಂದು ಮುಖ್ಯ ಕಾರಣ.
“ಬರಾಕ್ ಓಬಾಮನ ಪೋಷಕರು ಅಮೆರಿಕೆಗೆ ಹೋಗಿ ಕಷ್ಟ ಅನುಭವಿಸದಿದ್ದಲ್ಲಿ ಒಬಾಮನಿಗೆ ಅವಕಾಶವೆಲ್ಲಿರುತಿತ್ತು?” ನಾವಿಲ್ಲಿರುವುದು ನಮ್ಮ ಮಕ್ಕಳಿಗಾಗಿ ಎನ್ನುವ ಬಹುಮಂದಿ ಇಲ್ಲಿಯೇ ಭದ್ರವಾಗಿ ನೆಲಕಚ್ಚಿದ್ದಾರೆ. “ನಮ್ಮನ್ನೇನು ಆರತಿಯೆತ್ತಿ-ಕುಂಕುಮವನ್ನಿಟ್ಟು ಕರೆದಿದ್ದರಾ, ನಾವಾಗಿ, ಹಾಗಾಗಿ ಇಲ್ಲಿದ್ದು ಕಳೆದದ್ದೇನು, ಉಳಿದದ್ದೇನು ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ!” ಎನ್ನುವ ಕಟು ಧೋರಣೆಯನ್ನುಳ್ಳವರಿದ್ದಾರೆ. ಮತ್ತೆ ಕೆಲವರು ಕುಟುಂಬ ರಾಜಕಾರಣಗಳಿಂದ ದೂರ ಉಳಿಯಲು, ಅತ್ತೆ ಮಾವಂದಿರ ಕಾಟದಿಂದ ಪಾರಾಗಲು ಇಲ್ಲಿಯೇ ಇರುವವರಿದ್ದಾರೆ. ಕೆಲವರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಕಾರಣ ಈ ದೇಶವೇ ಉತ್ತಮ ಎಂದು ಉಳಿದಿದ್ದಾರೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಜನಿಸಿ ಇಲ್ಲಿಗೆ ಬಂದು, ಅಪಾರವಾಗಿ ಕಲಿತ ತಮ್ಮ ವಿಚಾರಧಾರೆಯನ್ನು ಪ್ರೀತಿಯ ಮಕ್ಕಳಿಗೆ ವರ್ಗಾಯಿಸಲು ಅಭೂತಪೂರ್ವ ಪ್ರಯತ್ನಗಳನ್ನು ಮಾಡಿ ಸಾಧಿಸಿದವರಿದ್ದಾರೆ, ನಿರಾಶರಾದವರಿದ್ದಾರೆ, ಹತಾಶರಾದವರಿದ್ದಾರೆ. ಸಾಕಷ್ಟು ದುಡಿವ ನೊಗಕ್ಕೆ ಕತ್ತು ಕೊಟ್ಟು, ಜೀವವನ್ನೆಲ್ಲ ಅರೆದು, ಈ ಅವಧಿಯಲ್ಲಿ ಕಳೆದುಕೊಂಡ ತಂದೆ, ತಾಯಿ ಬಂಧು ಬಳಗವನ್ನು ನೆನೆದು, ನಾವು ಇಲ್ಲಿದ್ದು ನಿಜಕ್ಕೂ ಸಾಧಿಸಿದ್ದೇನು? ನಮ್ಮ ಮಕ್ಕಳನ್ನು ಓದಿಸಿದ್ದು ಮಾತ್ರವೆ? ಭಾರತದಲ್ಲೇ ಉಳಿದ, ನನ್ನ ಸಹಪಾಠಿಗಳು ಅದನ್ನೂ ಮಾಡಿ, ಸಂಬಂಧಗಳನ್ನು ಉಳಿಸಿಕೊಂಡು, ಕಾಣುವ ಸಂತೃಪ್ತಿಯ ಮುಂದೆ, ಇಲ್ಲಿ ಸೇರಲಾಗದ ನಮ್ಮ ದ್ವಂದ್ವಮಯ ಬದುಕು ನಿಜವೇ ಎಂದು ಮರುಗಿದವರಿದ್ದಾರೆ. ನಮ್ಮ ಸಂಸ್ಕೃತಿಯನ್ನು, ಭಾಷೆಯನ್ನು ತಿಳಿಯದ ಮಕ್ಕಳ ಜೊತೆ ಬದುಕುತ್ತಾ, ನಮ್ಮ ಬೇರನ್ನೇ ಕೀಳಿರಿಮೆಯಿಂದ ಕಾಣುವ ಮಕ್ಕಳಿಗಾಗಿ ಇದೆಲ್ಲ ಮಾಡುತ್ತಾ ಇಲ್ಲಿ ಉಳಿದೆನೇ? ಅಥವ ನನ್ನ ಸ್ವ- ಸ್ವಪ್ರತಿಷ್ಠೆಗೆ ತೆತ್ತ ಬೇಲೆಯೇ? ಅಂತ ವಿಚಾರಕ್ಕೆ ಬಿದ್ದವರೂ ಇದ್ದಾರೆ.
ತಮ್ಮ ಪ್ರೀತಿಯ ಮಕ್ಕಳು ಬದುಕನ್ನರಸುತ್ತಾ ಹಾರಿ ಹೋದಮೇಲೆ ಪರದೇಶದಲ್ಲಿ ಬೆದರು ಬೊಂಬೆಗಳಂತೆ ನಿಂತು ವಿಧಿಯಿಲ್ಲದೆ ಅಲ್ಲಿಲ್ಲಿ ಓಡಾಡಿಕೊಂಡು ‘ವಿಧಿಯ’ ಕೈಗೆ ತಮ್ಮನ್ನೊಪ್ಪಿಸಿಕೊಂಡವರಿದ್ದಾರೆ. ಮುಂದುವರೆದ ವಿದೇಶ ಅನ್ನುವ ಹುರುಪಿಂದ ಇಲ್ಲಿಗೆ ಬಂದು, ನಿಂದನೆ, ತಿರಸ್ಕಾರಗಳಿಗೆ ತುತ್ತಾಗಿ ಅರೆ-ಬರೆ ಕೀಳರಿಮೆ ಬೆಳೆಸಿಕೊಂಡು , ಹೊಸತಾದ ಕಷ್ಟ-ಒತ್ತಡಗಳಿಗೆ ತುತ್ತಾಗಿ, ‘ನಾನೆಷ್ಟೊಂದು ಸಾಧಿಸಿದೆ’ ಎಂಬ ಸಂತಸ ಅನುಭವಿಸಿದ ಮಂದಿ ”ಬೆಸ್ಟ್ ಆಫ್ ಬೋತ್ ಸಿಗಲ್ಲ” ಎನ್ನುವ ಸಮಾಧಾನಕ್ಕೆ ಬಂದಿದ್ದಾರೆ.
ಇದನ್ನು ಒಪ್ಪದ ಮಂದಿ, ಭಾರತದ ಆರ್ಥಿಕಹವಾ ಬದಲಾದ ಕೂಡಲೇ, ಈ ದೇಶದಲ್ಲಿ ಗಳಿಸಿದ ಹಣ, ಪದವಿ ಅನುಭವ ಎಲ್ಲವನ್ನು ಹೊತ್ತು ನಮ್ಮ ದೇಶಕ್ಕೆ ಮರಳಿ ಮತ್ತೆ ಹೊಂದಾಣಿಕೆಗೆ ಪ್ರಯತ್ನಿಸಿದ್ದಾರೆ. ಮುಂದುವರೆದ ದೇಶಗಳಿಗೆ ಗುಳೆ ಬರುವುದು ಸಹಜವಾದರೂ, ನಮ್ಮ ದೇಶದ, ನಮ್ಮ ಬಾಲ್ಯದ,ನಮ್ಮ ಮನೆಯ, ನಮ್ಮ ಜನರ ನೆನಪಿನಲ್ಲಿ ಕೊರಗನ್ನು ಅನುಭವಿಸುವುದು ವಿದೇಶಿಗರ ಪಾಲಿಗೆ ಸತ್ಯ. ನನ್ನ ಅಭಿಪ್ರಾಯದಲ್ಲಿ ಅದರ ವ್ಯತ್ಯಾಸವೇ ಗೊತ್ತಿಲ್ಲದವರು ಭಾವರಹಿತರು. ಅದನ್ನು ತಿರಸ್ಕರಿಸುವವರು ಪಲಾಯನವಾದಿಗಳು. ಈ ದ್ವಂದ್ವ ಇರಬಾರದೆನ್ನುವವರು ಮೈಮರೆತವರು. ವಿದೇಶ-ಸ್ವದೇಶ ಮತ್ತು ಅದರ ವ್ಯತ್ಯಾಸಗಳನ್ನು ಎಲ್ಲರಿಂದ ಅಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದರ ಇರುವನ್ನೇ ಒಪ್ಪಿಕೊಳ್ಳಲಾರದಾದರೆ, ಅವರು ನಿಶ್ಚಿಂತರು!
ಇಲ್ಲಿ ಎಷ್ಟೇ ದಶಕಗಳನ್ನು ಕಳೆದರು ಬ್ರಿಟನ್ನಿಗರು ನಮ್ಮನ್ನು ಪರದೇಶಿಗಳಂತೆಯೇ ಕಾಣುತ್ತಾರೆ. ದಶಕಗಳನ್ನು ಬ್ರಿಟನ್ನಿನಲ್ಲಿ ಒಗ್ಗಿಕೊಳ್ಳಲು ಕಳೆದಿರುವ ಜನ ಇಲ್ಲಿಯೂ ಸಂಪೂರ್ಣ ಸಲ್ಲದೆ ತಮ್ಮ ದೇಶ ಅಂತ ಬಂದರೆ ವಿದೇಶಿಯನೆಂಬ ಕಾರಣಕ್ಕೆ ತಾಯ್ನಾಡಿನ ಜನರಿಂದ ಶೋಷಿತರಾಗುತ್ತಾರೆ. ಈ ಎರಡು ಬಗೆಯ ಇಬ್ಬಂದಿಗೆಯಲ್ಲಿ ತನ್ನದೇ ಸ್ವಂತ ಸ್ವರ್ಗವನ್ನು ನಿರ್ಮಿಸಿಕೊಂಡು ಬದುಕದೆ ನಮಗೆ ವಿಧಿಯಿಲ್ಲ ಎಂದರೆ ತಪ್ಪಾಗಲಾರದು.
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
Very nice write up! Love reading your coloumn!
INFORMATIVE, YOU HAVE WRITTEN ALL THE EMOTIONS GOING THROUGH NRIs IN BEAUTIFUL WORDS. EXCELLENT THOROUGHLY ENJOYED YOUR WRITING
ಧನ್ಯವಾದಗಳು !
ಧನ್ಯವಾದಗಳು .
ನಿಮ್ಮ ಮನಸ್ಸಿನ ಭಾವನೆಗಳನ್ನ ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ನಿಮ್ಮ ಬರವಣಿಗೆಗೆ ನಮ್ಮ ಧನ್ಯವಾದಗಳು