ಅಕ್ಕನ ಕದಳಿ

ಅವಳು ಏಕಾಂಗಿತನದೆದುರು ನಿಂತಾಗಲೆಲ್ಲ,
ಎಳೆ ಬಿಸಿಲಿನ ಅಂಗೈಯಲಿ ಗರಿಕೆ ಎದ್ದು ನಿಲ್ಲುತಿವೆ.
ಮಲ್ಲಿಗೆಯನು ಬಂಧಿಸಿದ ದಾರದ ಬೇಡಿಗಳು ತಾನಾಗೆ ಕಳಚಿಕೊಂಡು,
ಒಂಟಿತನದ ಒಡವೆ ಮುಡಿಯುತ್ತವೆ.
ಹೊಸ್ತಿಲಲಿ ನೆಟ್ಟ ಬೀಜದ ಒಡಲು ತೇವವಾಗುತಲೆ ಪಾಚಿಗಟ್ಟುತದೆ
ನೆರಳು ತೊಟ್ಟಿಕ್ಕುತದೆ.

ಕಾಲು ದಾರಿಗೆ ಕೈ ಕಾಲು ಮೂಡಿ,
ಬೆಳಕಿನ ಬಟ್ಟೆಗಳು ಕತ್ತಲೆಯ ನೀರಲ್ಲಿ ಕಳೆದು ಹೋಗಿವೆ.
ಹೆಜ್ಜೆಗಳು ಹೆದ್ದಾರಿಗಳ ಬಸಿರ ಹೊತ್ತು ತಿರುಗುವಾಗ,
ಕಾಮದ ಕಂಗಳಲಿ ಕೆಂಪು ನಿಶಾನೆ ಮೊಸಳೆ ಕಣ್ಣೀರಿಂದ ಸಾಲ ಕೇಳುತಿವೆ.
ಅವಳ ಅಂಗಾಂಗಗಳೆಲ್ಲ ರೋಮದ ಸೀರೆಯ ತೊಟ್ಟಿರಲು ಹೆಣ್ತನ ಹೆಪ್ಪುಗಟ್ಟುತ್ತದೆ.

ಕೌದಿ ಹೊಲಿಗೆಯ ಹಾದಿಯಲಿ ಹೆಜ್ಜೆಗಳು ಸವೆಸುತಿರಲು,
ಆಕಾಶದಲಿ ಅರಳಿ ನಿಂತ್ತ ಹೂಗಳ ಪಾದಗಳಿಗೂ ಬಾಯಾರಿಕೆ.
ಅವಳ ಕೊಳದಲಿ ನೀರು ಕುಡಿಯಲು ಬಂದ ಕೈ ಕಾಲುಗಳಿಗೆ “ಎಲೇ ಅಣ್ಣ ತಂದೆಯಂದಿರಾ” ಎಂದಾಗಲೆಲ್ಲ,
ಒದ್ದೆಗಣ್ಣುಗಳು ಒಲೆಯ ಮೇಲೆ ಒಣಗಿಸಲು ಹೋದವು,
ಬಿಸಿಲು ಮಾತ್ರ ಬಿಕ್ಕಗಳಿಸುತಲೆ ಇದೆ.

ಇಹ ಲೋಕದ ತೊಗಲು ಗೊಂಬೆಯ ಗಂಡಂದಿರನು,
ಗಾಳಿಯಲಿ ಗೋರಿಯ ಮಾಡಿ.
ಅನುಭಾವದ ಅನುರಾಗಿಯ ಅಂಗಿಯ ತೊಟ್ಟವನ, ತುಟಿಯ ತೊಟ್ಟಿಲಲಿ ತೂಗಿಹಳು.
ಕಾಮ ಪ್ರೇಮಗಳ ಕೈಗನ್ನಡಿಯು ಬರಿ “ಚೆನ್ನ” ನನೇ ಕಾಣಿಸಿರಲು,
“ಅಕ್ಕ” ನ ಕಣ್ಣೊಳಗೆ “ಕದಳಿ” ಅರಳುತದೆ ಮತ್ತೆ ಮರಳುತದೆ ಕದಳಿ….. !

ಮತ್ತೊಂದು ಸ್ವರ್ಗ

ಅವಳ ಕಣ್ಣಿನ ಮುಗಿಲಿಂದ ಬೆಳದಿಂಗಳು ತೊಟ್ಟಿಕ್ಕುತಿದೆ,
ನೆಲವೆಲ್ಲವೂ ಕ್ಷೀರ ಸಾಗರ.
ಪರ್ವತಗಳ ತಪ್ಪಲಲಿ ಹಾಲುಣಿಸುವ ಬಳ್ಳಿ.
ಕೀಟದ ತಾಯ್ತನಕೆ ಗೂಡು ಗೂಡಲ್ಲೂ ಹೋಳಿಗೆ ಊಟ, ಬೆಳಕಿನ ಕೀರು ಪಾಯಸ.
ನಟ್ಟಿರುಳಲಿ ನಶೆ ಏರಿಸಿಕೊಂಡ ತೋರು ಬೆರಳ ನಗ್ನ ನರ್ತನ.

ಆಕಾಶದ ಅಂಗೈಯಲಿ ಅರಳಿದ ಹೂಗಳು
ನೆಲದ ಒಡಲ ಸೇರಿ,
ಘಮದ ಗಂಧಿಗೆ ಅಂಗಡಿಯ ಉದ್ಘಾಟನೆ.
ಜೇಡದ ದಾರದಲಿ ಹೂ ಕಟ್ಟುವ ಕೋಮಲೆಯ ಕಣ್ಣಲ್ಲೂ ಮಾಲೆಯ ಮಹಲ್.
ಮುಡಿದ ಮಂಡೆಯಲಿ ನಕಲಿ ಕೇಶಗಳ ವಸಾಹತೀಕರಣ.

ಚಿನ್ನದ ಉಗುರಲಿ ಅಳಿದುಳಿದ ಬೆಂಕಿಯ ಕಾಳು, ಬೇಯದ ಬೆವರು ಬೆಳದಿಂಗಳೂ ಸಹ ಶಾಖದ ನೆಂಟನೆ ?
ಒಲೆಯ ಮೇಲೆ ಒಲೆ ಉರಿದು, ಗಡಿಗೆಯ ತಳವೆಲ್ಲ ಕಾರ್ಖಾನೆಯ ಕಣ್ಣು.
ಕಲುಷಿತ ಕನಸೆಲ್ಲ ಹೊಸ ಫಲಕದ ಪರವಾನಗಿ ಪಡೆದ ವ್ಯಾಪರಸ್ಥ.
ಲಾಭ ನಷ್ಟದ ಲೆಕ್ಕಾಚಾರದ ಗ್ರಂಥ ಸಂಪಾದನೆ.

ಗಾಳಿ ಕಟ್ಟಿದ ಕೋಟೆಯ ಕಿಟಕಿ ಕಿವಿಗಳಿಗೂ
ಇರುಳ ಬೇರಿನ ಜುಮುಕಿ.
ತೂಗಾಡುವ ತೊಟ್ಟಿಲಲಿ ಎಂದೂ ಆರದ ಹಣತೆ,
ಬೆಳಕು ಕಸ ಗುಡಿಸುತಿದೆ.
ಪೊರಕೆಯ ಕಣ್ಣಿನ ಪೊರೆ ಕಳಚಿರಲು
ಸಿಂಗಾರಗೊಂಡ ಇರುಳ ದಾರಿ.
ಮತ್ತೊಂದು ಸ್ವರ್ಗದ ಹುಟ್ಟು ಹಬ್ಬ.

 

ಚಾಂದ್ ಪಾಷ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು.
ಪ್ರಸ್ತುತ ಬೆಂಗಳೂರು ವಾಸಿ.
ಬೆಂಗಳೂರು ವಿ ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ ಎ ಮುಗಿಸಿದ್ದು,
ಪ್ರಸ್ತುತ ದಿ ಆಕ್ಸ್ಫರ್ಡ್ ಕಾಲೇಜ್ ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಮೌನದ ಮಳೆ” ಇವರ ಚೊಚ್ಚಲ ಕವನ ಸಂಕಲನ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)