ಮಹಿಳೆ ಮಹಿಳೆಯರ ಕತೆಗಳನ್ನೇ ಬರೆದು ಅಚ್ಚು ಹಾಕುವ ಅನಿವಾರ್ಯತೆ ಇರುವುದಾದರೂ ಮಹಿಳಾ ವಸ್ತುವನ್ನು ಎತ್ತಿಕೊಂಡು ಬರೆಯುವುದರಿಂದಲೇ ಅನನ್ಯತೆ ಒದಗಿ ಬರುವುದು ಎಂಬ ಊಹೆ ಯಾವಾಗಲೂ ನಿಜವಲ್ಲ. ಹಾಗೆ ನೋಡಿದರೆ ಮಹಿಳಾ ಲೋಕವೂ ಒಟ್ಟಂದದಲ್ಲಿ ನಿರ್ವಹಿಸುವಂತದ್ದಲ್ಲ ಎಂದು ಸ್ವತ: ಸುಶೀಲಾ ಅವರ ಕತೆಗಳೇ ನಿರೂಪಿಸುತ್ತಲಿವೆ. ಮಹಿಳಾ ಅನುಭವಗಳ ಅನನ್ಯತೆಯನ್ನು ದಾಖಲಿಸುತ್ತಲೇ ಮಾನವತಾ ಜಗತ್ತನ್ನು ಮುಖಾಮುಖಿಯಾಗಬೇಕಾದ ಅಗತ್ಯ ಇಂದು ಎಲ್ಲಾ ಸ್ತ್ರೀಬರಹಗಳಿಗಿದೆ. ಅನನ್ಯತೆಯು ಸ್ತ್ರೀ ಬರಹಗಳಿಗೆ ಒದಗಿದ ವರವೂ ಹೌದು ಶಾಪವೂ ಹೌದು.
ಯುವ ಕತೆಗಾರ್ತಿ ಸುಶೀಲಾ ಡೋಣೂರ ಅವರ ಕಥಾಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮುನ್ನುಡಿಯ ಮಾತುಗಳು.
ಸುಶೀಲಾ ಡೋಣೂರ ಅವರ ಕತೆಗಳು ಹೆಣ್ಣಿನ ಕತೆಗಳು. ಮತ್ತು ಹೆಣ್ಣೊಬ್ಬಳೇ ಬರೆಯಬಹುದಾದ ಕತೆಗಳು. ಅವರ ಇಲ್ಲಿನ ಕತೆಗಳಿಗೆ ಹಾಗೆಂದೇ ಒಂದು ವಿಶೇಷವಾದ ಸ್ತ್ರೀಕೇಂದ್ರಿತ ಚೌಕಟ್ಟು ಸಿಗುತ್ತದೆ. ಹೆಣ್ಣಾಗಿ ಅನುಭವಿಸಬಹುದಾದ ಬವಣೆಗಳು ಕಣ್ಣಿಗೆ ಕಟ್ಟುವಂತೆಯೇ ಇದ್ದರೂ ಬರೆಯ ಹೋದಾಗ ಕ್ಲೀಷೆಯೆನಿಸುವ ವಸ್ತುವಾಗಿ ಬಿಡುವ ಸ್ತ್ರೀಕೇಂದ್ರಿತ ಕತೆಗಳನ್ನು ಕ್ಲೀಷೆಯಾಗದಂತೆ ಬರೆಯುವುದೆಂದರೆ ದೊಡ್ಡ ರಿಸ್ಕ್. ಹೆಣ್ಣಿನ ಸಮಸ್ಯೆಗಳನ್ನೆಲ್ಲಾ ಒಮ್ಮುಖದ ಬಿಡುಗಡೆಯ ಗವಾಕ್ಷಿಯೆಡೆಗೆ ತರುವಂತಹ ಜನಪ್ರಿಯ ಮಾದರಿಗಳು ಸಹ ಕಥನಕಾರ್ತಿಯರಿಗೆ ಅಡ್ಡಿ ಉಂಟು ಮಾಡುವಂತವೇ. ಹೀಗೆಂದೇ ಕತೆಗಾರ್ತಿಯಾಗಿ ಹುಷಾರಾಗಿ ಹೆಜ್ಜೆ ಇಡಬೇಕಾದ ಅಗತ್ಯ ಸುಶೀಲಾ ಅವರಂತಹ ಬರಹಗಾರ್ತಿಯರಿಗಿದೆ ಎನ್ನಿಸುತ್ತಿದೆ.
ಸುಶೀಲಾ ಅವರ ಕತೆಗಳು ಆಧುನಿಕ ಕಾಲಘಟ್ಟದಲ್ಲಿ ಬಿಚ್ಚಿಕೊಳ್ಳುವ ಕತೆಗಳು. ಅಲ್ಲಿ ಬರುವ ಹೆಣ್ಣು ಪಾತ್ರಗಳು ಕಾಲದ ಸಂಕ್ರಮಣವನ್ನು ಅನುಭವಿಸುತ್ತಿರುವವರು. ಅವರ ಬದುಕಲ್ಲಿ ಉಂಟಾಗುವ ಬದಲಾವಣೆ ಅವರ ಪಾಲಿಗೆ ಸಕಾರಾತ್ಮಕವಾಗಿದ್ದರೂ ಸಮಾಜದ ಪಾಲಿಗೆ ಅವು ನಕಾರಾತ್ಮಕವಾಗಿ ಕಾಣುತ್ತಿರುವ ಪರಿಸ್ಥಿತಿ. ಏಕೆಂದರೆ ಹೆಣ್ಣಿನ ಬೆಳವಣಿಗೆ, ಪ್ರಗತಿಗಳನ್ನು ಸಮಾಜ ಆತಂಕದಿಂದಲೇ ನೋಡುತ್ತಿರುತ್ತದೆ. ಮೂಲಭೂತವಾಗಿ ಹೆಣ್ಣು ಬದಲಾಗದೇ ಶುದ್ಧ ಸ್ವರೂಪಳಾಗಿ ಉಳಿಯಬೇಕೆಂಬುದು ರಾಷ್ಟ್ರೀಯವಾದಿಗಳ ಕಾಲದಿಂದಲೂ ಒಪ್ಪಿತವಾದ ಸಂಗತಿಯಾಗಿದೆ. ಇಲ್ಲಿನ ‘ಬದುಕ ಮನ್ನಿಸೊ ಪ್ರಭುವೇ’ ಎನ್ನುವ ಕತೆಯಲ್ಲಿ ಬರುವ ಹೆಣ್ಣು ಗಂಡನಿಂದ ಸರಿಯಾಗಿ ಬಾಳಿಸಲ್ಪಡದೆ ಮುಸ್ಲಿಂ ಯುವಕನೊಟ್ಟಿಗೆ ಹೋಗಿ ಜೀವನ ಕಟ್ಟಿಕೊಳ್ಳುವ ಹಂದರ ಇದೆ. ಅಲ್ಲಿ ಸಂಕಟ ಅನುಭವಿಸುವ ಹೆಣ್ಣಿನ ಬಗ್ಗೆ ಪುಟ್ಟ ನಿರೂಪಕಿ ಸಹಾನುಭೂತಿಯಿಂದ ವರ್ತಿಸುತ್ತಾಳಲ್ಲದೆ ಅವಳ ಬಗ್ಗೆ ಯಾವ ಕೆಟ್ಟ ಭಾವನೆಯನ್ನೂ ಇಟ್ಟುಕೊಂಡಿರುವುದಿಲ್ಲ. ಆದರೆ ಅವಳ ತಂದೆ ಹೇಳುವ ಮಾತುಗಳು ಹೀಗಿವೆ: ‘ಹೆಣ್ಮಕ್ಕಳಿಗೆ ಸಾಧು-ಸಂತರಿಗಿಂತ ಗಟ್ಟಿತನ ಇರಬೇಕವಾ, ಯಾಕೇಂದ್ರ ಹೆಣ್ಮಕ್ಳ ಬದುಕೇ ಒಂದು ತಪಸ್ಸು’ ಎಂದು. ಈ ಧೋರಣೆ ಈ ಉಪದೇಶಗಳು ನೊಂದ ಹೆಣ್ಣಿಗೆ ಬದುಕನ್ನು ನೀಡಲಾರವು. ಆದುದರಿಂದಲೇ ಆ ಹೆಣ್ಣು ಹೇಳುತ್ತಾಳೆ; ಆ ತಪಸ್ಸಿನ್ಯಾಗ ನಾ ಸೋತಿನಿ ಕಾಕಾ, ಈಗ ನನ್ನ ಕನಸು ಮಾತ್ರ ಮುಖ್ಯ ಎಂದು. ‘ತಲ್ಲಣಿಸದಿರು ಮನವೆ..’ ಕತೆಯು(ಸುಶೀಲಾ ಅವರ ಟೈಟಲ್ಗಳು ತುಂಬಾ ರೊಮ್ಯಾಂಟಿಕ್ ಅನ್ನಿಸುತ್ತವೆ ಎಂಬ ಮಾತನ್ನು ಇಲ್ಲಿಯೇ ಹೇಳಿಬಿಡಬೇಕೆನ್ನಿಸಿದೆ) ಡೈವೋರ್ಸಿಗೆ ಅರ್ಜಿ ಹಾಕಿ ಪರಸ್ಪರರ ಒಪ್ಪಿಗೆಯಲ್ಲಿಯೇ ವಿಚ್ಛೇದನ ಏರ್ಪಡುತ್ತಿರುವ ಹೊತ್ತಿನಲ್ಲಿ ಹೆಣ್ಣಿನ ಶೋಷಣೆ ಎಷ್ಟು ಕ್ರೂರವಾಗಬಲ್ಲದು ಎನ್ನುವುದನ್ನು ಹೇಳುತ್ತದೆ.
ಈ ತೆರನಾದ ಸಾಂಪ್ರದಾಯಿಕ ಕಥನಗಳನ್ನು ಮುಂದಿಡುತ್ತಲೇ ಕತೆಗಾರ್ತಿ ಹೆಣ್ಣಿನ ಮುಂದುವರೆದ ಹಂತದಲ್ಲಿ ನಡೆಯುವ ಶೋಷಣೆಗಳನ್ನು ಗುರುತಿಸಬಲ್ಲ ಕತೆಗಳನ್ನು ಕಟ್ಟಿಕೊಡಬಲ್ಲರು. ಹೆಣ್ಣಿಗೆ ವಿದ್ಯಾಭ್ಯಾಸ ಹಾಗೂ ಆರ್ಥಿಕ ಸ್ವಾವಲಂಬನೆ ಸಿಕ್ಕರೆ ಅವಳ ಉದ್ಧಾರವಾದಂತೆಯೇ ಎನ್ನುವ ಮೊದಲ ಗ್ರಹಿಕೆಗಳೇನಿದ್ದವು ಅವು ನಿಜಕ್ಕೂ ಹೆಣ್ಣಿಗೆ ವಿದ್ಯಾಭ್ಯಾಸ ಹಾಗೂ ದುಡ್ಡುಗಳು ದಕ್ಕಿದ ನಂತರ ಬದಲಾಗಿವೆ ಎನ್ನುವುದನ್ನು ಸುಶೀಲಾ ಅವರ ಕತೆ- ‘ಭೃಂಗದ ಬೆನ್ನೇರಿ’ ಮನೋಜ್ಞವಾಗಿ ಮುಂದಿಡುತ್ತದೆ. ಅದರಲ್ಲಿ ಬರುವ ನಾಯಕಿ ಹಳ್ಳಿಯಲ್ಲಿರುವವಳಾಗಿದ್ದು ತನ್ನ ಮಗಳಿಗೆ ವಿದ್ಯಾಭ್ಯಾಸ ಆ ಮೂಲಕ ಗಳಿಸಬಹುದಾದ ಹಣದ ಬಗೆಗೆ ಕನಸನ್ನು ತುಂಬುವವಳು.
‘ನಿನ್ನ ಬಾಳು ನನ್ನಂಗೆ ಆಗಬಾರದು ಮಗಾ. ಚೆನ್ನಾಗಿ ಓದಬೇಕು. ಒಂದೊಳ್ಳೆ ಕೆಲಸ ಹಿಡೀಬೇಕು. ಆಫೀಸರ್ ಆಗಬೇಕು. ನಾಲ್ಕು ಕಾಸು ಸಂಪಾದಿಸಬೇಕು. ಕಾರು ಓಡಿಸೋ ಹಾಗಾಗಬೇಕು ನೀನು. ನಿನ್ನದೇ ಬಂಗಲೆ ಮಾಡಿಕೊಳ್ಳಬೇಕು. ನಿನ್ನ ತಿಜೋರಿಯಲ್ಲಿ ಕನಿಷ್ಠ ಐವತ್ತು ತೊಲೆ ಬಂಗಾರದ ಒಡವೆ, ಕೇಜಿಗಟ್ಟಳೆ ಬೆಳ್ಳಿ ಆಭರಣ ಇರಬೇಕು. ರೇಷ್ಮೆ ಸೀರೆ, ಮಿಣ ಮಿಣ ಡ್ರೆಸ್ಸು, ಘಂ ಅನ್ನೋ ಸಾಬೂನು, ಪೌಡರ್ರು….. ನನ್ನ ಕಲ್ಪನೆಗೆ ನಿಲುಕದ್ದೆಲ್ಲಾ ನಿನ್ನ ಹತ್ತಿರ ಇರಬೇಕು.’
ಮೂಲಭೂತವಾಗಿ ಹೆಣ್ಣು ಬದಲಾಗದೇ ಶುದ್ಧ ಸ್ವರೂಪಳಾಗಿ ಉಳಿಯಬೇಕೆಂಬುದು ರಾಷ್ಟ್ರೀಯವಾದಿಗಳ ಕಾಲದಿಂದಲೂ ಒಪ್ಪಿತವಾದ ಸಂಗತಿಯಾಗಿದೆ. ಇಲ್ಲಿನ ‘ಬದುಕ ಮನ್ನಿಸೊ ಪ್ರಭುವೇ’ ಎನ್ನುವ ಕತೆಯಲ್ಲಿ ಬರುವ ಹೆಣ್ಣು ಗಂಡನಿಂದ ಸರಿಯಾಗಿ ಬಾಳಿಸಲ್ಪಡದೆ ಮುಸ್ಲಿಂ ಯುವಕನೊಟ್ಟಿಗೆ ಹೋಗಿ ಜೀವನ ಕಟ್ಟಿಕೊಳ್ಳುವ ಹಂದರ ಇದೆ.
ಆನಂತರ ಮಗಳು ದೊಡ್ಡದಾದ ಸಂಬಳ ಬರುವ ಕೆಲಸ ಹಿಡಿಯುವಳಾದರೂ ಪ್ರಾಜೆಕ್ಟ್ಗಳ ಒತ್ತಡ ಹಾಗೂ ಹಣದ ಹಿಂದಿನ ಶುಷ್ಕ ಓಡಾಟ ಅವಳನ್ನು ಹೈರಾಣಾಗಿಸುತ್ತವೆ. ಆದರೆ ಅಮ್ಮ ಅಪ್ಪ ಎಲ್ಲರೂ ಇವಳ ಸಕ್ಸಸ್ ಅನ್ನು ಹಣದ ಅಳತೆಗೋಲುಗಳಿಂದಲೇ ಅಳೆಯುತ್ತಾರಾದ್ದರಿಂದ ಅನಿವಾರ್ಯವಾಗಿ ಒತ್ತಡದ ಹೊರೆ ಹೊರಬೇಕಾದ ಶೋಷಣೆಗೆ ಸಿಲುಕಬೇಕಾಗುತ್ತಾಳೆ. ಈ ರೀತಿಯ ಬೆಳವಣಿಗೆ ಕಥಾವಸ್ತುವಿನ ದೃಷ್ಟಿಯಿಂದ ಗಮನಾರ್ಹ ಎನ್ನಿಸುವಂತದ್ದು.
ಹಾಗೆಯೇ ಈ ಸಂಕಲನದಲ್ಲಿ ಇರುವ ‘ತೂಫಾನ್’ ಕತೆ ಉತ್ತಮ ಕತೆ. ವಸ್ತು ಮತ್ತು ನಿರ್ವಹಣೆಯ ದೃಷ್ಟಿಗಳಿಂದಲೂ ಈ ಕತೆ ಮುಖ್ಯವೆನ್ನಿಸುತ್ತದೆ. ಇದು ಹೆಣ್ಣಿನ ವೇಷದಲ್ಲಿರುವ ಹಿಜಡಾನ/ಳ ಕತೆ. ತನ್ನ ಸೌಂದರ್ಯ ಒಳಗಿಂದ ಖೊಟ್ಟಿ ಎನ್ನುವುದನ್ನು ಬಲ್ಲ ಅವನಿಗೆ/ಆಕೆಗೆ ಗಂಡಸರು ತನ್ನ ಬಾಹ್ಯ ಸೌಂದರ್ಯಕ್ಕಾಗಿ ಜೊಲ್ಲು ಸುರಿಸುವುದನ್ನು ನೋಡುವಾಗ ಖೇದವೆನಿಸುತ್ತಿರುತ್ತದೆ. ಅಪ್ರತಿಮ ಸೌಂದರ್ಯವನ್ನು ಮೇಲಿನ ಅಲಂಕಾರದಿಂದ ಪಡೆದುಕೊಳ್ಳಬಹುದಾದರೂ ತನಗೆ ಇಬ್ಬಂದಿತನ ತಂದಿಟ್ಟ ಲೈಂಗಿಕತೆಯ ಕುರಿತು ಕತೆ ಹೊಮ್ಮಿಸುವ ವಿಷಾದ ಗಮನಾರ್ಹವಾದುದು. ಎಂತಹ ತೂಫಾನುಗಳನ್ನು ಮನಸ್ಸಿನಲ್ಲಿಟ್ಟು ಬದುಕಬೇಕಾದ ಸ್ಥಿತಿ ಇದೆ ಎನ್ನುವುದನ್ನು ಇಂತಹ ಕತೆಗಳು ನಿರೂಪಿಸುತ್ತವೆ. ಈ ಮೂಲಕ ತೀರಾ ಅಂಚಿನಲ್ಲಿರುವ ಸಮುದಾಯಗಳ ವಸ್ತುವನ್ನು ಎತ್ತಿಕೊಳ್ಳುವ ಅವಕಾಶವೂ ಕತೆಗಾರ್ತಿಗೆ ಒದಗಿ ಬಂದಿದೆ.
ಸುಶೀಲಾ ಅವರ ಕತೆಗಳಲ್ಲಿ ಅಂಚಿನಲ್ಲಿ ಅಂಚಾಗಿರುವ ಹೆಣ್ಣುಮಕ್ಕಳೇ ಕತೆಯ ವಸ್ತುವಾಗುವುದು ವಿಶೇಷ. ಇದನ್ನು ಕತೆಗಾರ್ತಿ ಯಾವುದೇ ತಾತ್ವಿಕ ಭಾರದಿಂದ ಆಯ್ಕೆ ಮಾಡಿಕೊಂಡಂತೆ ಕಾಣುವುದಿಲ್ಲ. ಆದರೆ ವಸ್ತುವಿನ ಆಯ್ಕೆಯಿಂದಲೇ ಅವಕ್ಕೆ ಒಂದು ವಿಷಾದ ಗುಣ ಒದಗಿ ಬರುವಂತಿದೆ. ಉದಾಹರಣೆಗೆ ‘ದೇವರ ತಪ್ಪು’ ಕತೆ ಮಾಲಿ ಎನ್ನುವ ಬುದ್ಧಿಮಾಂದ್ಯ ಪರಿತ್ಯಕ್ತ ಹುಡುಗಿಯ ಕತೆಯನ್ನು ಹೇಳುವ ರೀತಿ. ಸಮಾಜದ ದೃಷ್ಟಿ ಧೋರಣೆಗಳು ಇಂತಹ ಪಾತ್ರಗಳಲ್ಲಿ ಹೇಗೆ ವ್ಯಕ್ತವಾಗುತ್ತದೆ ಎನ್ನುವುದನ್ನು ಗಮನಿಸಿದರೆ ತೀವ್ರ ಹೇಸಿಗೆ ಎನ್ನಿಸುತ್ತದೆ. ಏಕೆಂದರೆ ಮೇಲ್ಪದರದಲ್ಲಿ ನಾವು ಮಾತನಾಡುವ, ಕೇಳುವ ಮಾನವೀಯತೆ, ಅನುಕಂಪ ಎಲ್ಲವೂ ಹುಸಿ ಎನ್ನಿಸುವ ಮಟ್ಟಕ್ಕೆ ಕೆಳಗಿಳಿದಿರುತ್ತದೆ. ಆ ಹುಡುಗಿಯನ್ನು ಗುಡಿಯ ಪೂಜಾರಿಯಿಂದ ಹಿಡಿದು ಸಭ್ಯ ಗೃಹಸ್ಥನ ತನಕ ಎಲ್ಲರೂ ಬಳಸಿಕೊಳ್ಳುವವರೇ. ಈ ಕ್ರೌರ್ಯವನ್ನು ಸಮಕಾಲೀನ ಸಂದರ್ಭಗಳೂ ದೃಢಪಡಿಸುತ್ತಲೇ ಇವೆ. ಇವನ್ನು ಹೇಗೆ ಎದುರಾಗಬೇಕು ಎನ್ನುವುದೇ ನಮ್ಮ ಮುಂದಿರುವ ಸಮಸ್ಯೆ. ಸುಶೀಲಾ ಅವರ ಕತೆಗಳು ಇಂತಹ ಕಡೆ ಪ್ರಸ್ತುತವೆನಿಸುತ್ತವೆ; ಸಾಮಾಜಿಕ ಎನ್ನಿಸುತ್ತವೆ.
ಸುಶೀಲಾ ಅವರ ಕತೆಗಳಲ್ಲಿ ಹೆಚ್ಚಿನವು ರೊಮ್ಯಾಂಟಿಕ್ ಆದ ಕತೆಗಳು. ರಮ್ಯವಾದ ಲಹರಿಯಲ್ಲಿ ಚಲಿಸುತ್ತಾ ಹೋಗಿ ವಿಷಾದದಲ್ಲಿ ಉಳಿಯುವಂತವು. ಕತೆಯನ್ನು ವಸ್ತುವಿನ ಮೂಲಕ ನಿರೂಪಣೆಯ ಮೂಲಕ ನಿರ್ವಹಿಸುವುದಷ್ಟೇ ಅಲ್ಲದೆ ಅದರಾಚೆ ಒಂದು ಸ್ಪೇಸ್ ಅನ್ನು ನಿರ್ಮಾಣ ಮಾಡಬೇಕಾಗುತ್ತದೆ. ಅಂದರೆ ಕತೆಗಳು ಹೇಳುವುದರಾಚೆ ಓದುಗರಿಗೆಂದು ಇನ್ನೇನನ್ನೋ ಉಳಿಸಿದರೆ ಬೆಳೆದಂತೆ. ಸುಶೀಲಾ ಅವರ ಕತೆಗಳು ಈ ಎಲ್ಲೆಯನ್ನು ಮುಟ್ಟುತ್ತವೆ ಇಲ್ಲವೆಂದಲ್ಲ; ಆದರೆ ಅವರ ಕತೆಗಳು ಜನಪ್ರಿಯ ಕತೆಗಳ ಧಾಟಿಯನ್ನು ಬಳಸಿಕೊಳ್ಳುತ್ತಾ ಒಂದು ಮಟ್ಟಕ್ಕೆ ತಮಗೆ ತಾವೇ ಸೀಮಿತ ಚೌಕಟ್ಟನ್ನು ಹಾಕಿಕೊಳ್ಳುತ್ತವೆ. ಇದನ್ನು ಅವರು ವಿಶಿಷ್ಟ ತಂತ್ರ ಹಾಗೂ ಇನ್ನೂ ಗಾಢವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಮೀರಬೇಕೆ? ಅಥವಾ ತಮ್ಮ ನಿರೂಪಣಾ ಶೈಲಿಯಲ್ಲಿ ತರಬೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕೇಳಿಕೊಳ್ಳಬೇಕಿದೆ.
ನಿಜ ಹೇಳಬೇಕೆಂದರೆ ಓದಿಸಿಕೊಂಡು ಹೋಗುವ ಗುಣವುಳ್ಳ ಕತೆಗಳನ್ನು ಬರೆಯುವುದು ತಪ್ಪೇನೂ ಅಲ್ಲ. ತೇಜಸ್ವಿ ಕೂಡ ತಮ್ಮ ಎರಡನೆಯ ಹಂತದ ಬರವಣಿಗೆಯಲ್ಲಿ ಜನರನ್ನು ತಲುಪಬಲ್ಲ ಕಥನದ ನಿರೂಪಣೆಯನ್ನು ತಂದುಕೊಂಡರು. ಸುಶೀಲಾ ಅವರ ಕತೆಗಳು ಸರಾಗವಾಗಿ ಓದಿಸಿಕೊಳ್ಳುತ್ತವೆ ಎನ್ನುವುದು ಒಂದು ಗುಣವೇ, ದೋಷವಲ್ಲ. ಇದರಾಚೆಗೂ ಅವರು ಹೊಸ ಹೊಸ ನಿರೂಪಣೆ ಹಾಗೂ ತಂತ್ರಗಳನ್ನು ರೂಢಿಸಿಕೊಳ್ಳಬೇಕು ಎಂಬುದು ಅಪೇಕ್ಷೆ ಮಾತ್ರ. ಕನ್ನಡದಲ್ಲಿ ಕತೆಗಾರ್ತಿಯರು ಸಶಕ್ತವಾಗಿ ಹೊಮ್ಮುವುದಕ್ಕೆ ಬೇಕಾದ ಸಂದರ್ಭದಲ್ಲಿ ಬರೆಯುತ್ತಿರುವ ಸುಶೀಲಾ ಅವರು ತಮ್ಮ ವಸ್ತುವಿನ ಆಯ್ಕೆಯಿಂದಲೇ ಒಂದರ್ಧ ತಮ್ಮ ಶಕ್ತಿಯನ್ನು ನಿರೂಪಿಸಿಬಿಟ್ಟಿದ್ದಾರೆ. ಇನ್ನುಳಿದಂತೆ ಕತೆಯನ್ನು ತಮ್ಮದೇ ಆದ ಧಾಟಿಯಲ್ಲಿ ಹೇಳುವ ಕತೆಗಾರ್ತಿಯ ಕಸುಬುದಾರಿಕೆ ಅವರಲ್ಲಿ ನಿಚ್ಚಳವಾಗಿ ಕಾಣಬೇಕಿದೆ. ಇವು ಅವರ ಬಗೆಗಿನ ನಿರೀಕ್ಷೆಯಿಂದಲೇ ಹೇಳುವ ಮಾತುಗಳು ವಿನಾ ಅನ್ಯ ಉದ್ದೇಶಗಳಿಂದಲ್ಲ.
ತನ್ನ ಸೌಂದರ್ಯ ಒಳಗಿಂದ ಖೊಟ್ಟಿ ಎನ್ನುವುದನ್ನು ಬಲ್ಲ ಅವನಿಗೆ/ಆಕೆಗೆ ಗಂಡಸರು ತನ್ನ ಬಾಹ್ಯ ಸೌಂದರ್ಯಕ್ಕಾಗಿ ಜೊಲ್ಲು ಸುರಿಸುವುದನ್ನು ನೋಡುವಾಗ ಖೇದವೆನಿಸುತ್ತಿರುತ್ತದೆ. ಅಪ್ರತಿಮ ಸೌಂದರ್ಯವನ್ನು ಮೇಲಿನ ಅಲಂಕಾರದಿಂದ ಪಡೆದುಕೊಳ್ಳಬಹುದಾದರೂ ತನಗೆ ಇಬ್ಬಂದಿತನ ತಂದಿಟ್ಟ ಲೈಂಗಿಕತೆಯ ಕುರಿತು ಕತೆ ಹೊಮ್ಮಿಸುವ ವಿಷಾದ ಗಮನಾರ್ಹವಾದುದು.
ಸುಶೀಲಾ ಅವರ ಕತೆಗಳು ಹೆಣ್ಣಿನ ಕತೆಗಳು ಎಂದು ಈ ಮೊದಲೇ ಹೇಳಿದೆ. ಅದರಂತೆ ಈ ವಸ್ತುವಿನ ಆಯ್ಕೆಯು ಒಂದೊಮ್ಮೆ ಅವರ ಆಯ್ಕೆಯ ಮಿತಿಯಾಗಕೂಡದು. ಮಹಿಳೆ ಮಹಿಳೆಯರ ಕತೆಗಳನ್ನೇ ಬರೆದು ಅಚ್ಚು ಹಾಕುವ ಅನಿವಾರ್ಯತೆ ಇರುವುದಾದರೂ ಮಹಿಳಾ ವಸ್ತುವನ್ನು ಎತ್ತಿಕೊಂಡು ಬರೆಯುವುದರಿಂದಲೇ ಅನನ್ಯತೆ ಒದಗಿ ಬರುವುದು ಎಂಬ ಊಹೆ ಯಾವಾಗಲೂ ನಿಜವಲ್ಲ. ಹಾಗೆ ನೋಡಿದರೆ ಮಹಿಳಾ ಲೋಕವೂ ಒಟ್ಟಂದದಲ್ಲಿ ನಿರ್ವಹಿಸುವಂತದ್ದಲ್ಲ ಎಂದು ಸ್ವತ: ಸುಶೀಲಾ ಅವರ ಕತೆಗಳೇ ನಿರೂಪಿಸುತ್ತಲಿವೆ. ಮಹಿಳಾ ಅನುಭವಗಳ ಅನನ್ಯತೆಯನ್ನು ದಾಖಲಿಸುತ್ತಲೇ ಮಾನವತಾ ಜಗತ್ತನ್ನು ಮುಖಾಮುಖಿಯಾಗಬೇಕಾದ ಅಗತ್ಯ ಇಂದು ಎಲ್ಲಾ ಸ್ತ್ರೀಬರಹಗಳಿಗಿದೆ. ಅನನ್ಯತೆಯು ಸ್ತ್ರೀ ಬರಹಗಳಿಗೆ ಒದಗಿದ ವರವೂ ಹೌದು ಶಾಪವೂ ಹೌದು. ಏಕೆಂದರೆ ಅನನ್ಯತೆಯಿಲ್ಲದೆ ಸ್ತ್ರೀ ಬರಹಗಳ ವಿಶಿಷ್ಟತೆಯನ್ನು ಅರಿಯುವುದು ಕಷ್ಟ. ಸಾರ್ವತ್ರಿಕವಾಗಿ ಬರೆದಾಗ ಲಿಂಗ ಸೂಕ್ಷ್ಮತೆಗಳು ಮಸಕಾಗುತ್ತವೆ. ಹೀಗೆಂದೇ ಮಹಿಳಾ ಬರಹಗಾರ್ತಿಯರಿಗೆ ಇಂದು ಎಂದಿಗಿಂತ ಹೆಚ್ಚಿನ ಒತ್ತಡವಿದೆ. ಮಹಿಳಾ ವಸ್ತು, ಮಹಿಳಾ ನಿರೂಪಣೆ, ಮಹಿಳಾ ಜಗತ್ತುಗಳನ್ನು ತಮ್ಮ ಅನನ್ಯತೆಗಳೆಂದು ಭಾವಿಸುವ ಲೇಖಕಿಯರಿಗೆ ಮುಖ್ಯವಾಹಿನಿ ರಾಜಕಾರಣದಲ್ಲಿ ತಮ್ಮದೇ ಆದ ಸ್ಪೇಸ್ ಸಿಗುವುದಾದರೂ ಅದು ಮಹಿಳಾ ಪ್ರತಿನಿಧೀಕರಣದ ಕುರುಹಾಗಿ ನಿಂತಿರುತ್ತದೆ. ಆದುದರಿಂದ ತಾವೇ ತಾವಾಗಿ ಬರೆಯುತ್ತಲೇ ಸಾರ್ವತ್ರಿಕಗೊಳ್ಳುವ ಲೇಖಕಿಯರ ಹುಟ್ಟಿಗೆ ಎಲ್ಲರ ನಿರೀಕ್ಷೆಯಿದೆ.
ಸುಶೀಲಾ ಅವರ ಈ ಸಂಕಲನದ ಕತೆಗಳನ್ನು ನಾನು ಓದಿ ಮುಗಿಸಿದಾಗ ಏನೋ ವಿಷಾದ ಉಳಿದುಕೊಂಡಂತೆ ಭಾಸವಾಯಿತು. ಎಷ್ಟೆಲ್ಲಾ ಹೆಣ್ಣುಗಳ ಬದುಕುಗಳು; ಯಾವ್ಯಾವ ತಿರುವುಗಳು?! ಇವನ್ನೆಲ್ಲಾ ಸಮಾಧಾನದಿಂದ ಕೇಳಿ ಕಿವಿಯಾಗುವವರಾಗಲೀ ಅಥವಾ ಆಸರೆ ನೀಡುವವರಾಗಲೀ ಅಪರೂಪ. ನೋವಿನ ಕತೆಗಳಿಗೆ ಭಾಷೆಯೇ ಇಲ್ಲದೆ, ಅಭಿವ್ಯಕ್ತಿ ಸೋತಂತಾಗುವ ಸಂದರ್ಭಗಳು ಹೆಣ್ಣುಗಳ ಬದುಕುಗಳಲ್ಲಿ. ಈ ಅಂಚಿನಲ್ಲಿ ಸವೆದು ಸವೆದು ನವೆದ ಹೆಣ್ಣುಗಳ ಮನಸ್ಸಿನ ಕೆಲವು ಪಿಸುಮಾತುಗಳನ್ನು ಇಲ್ಲಿ ಸುಶೀಲಾ ಅವರು ಕೇಳಿಸಿದ್ದಾರೆ. ಅವು ಹೃದಯ ಬಿಚ್ಚಿ ಕೇಳಿಕೊಳ್ಳಬೇಕಾದ ಮಾತುಗಳು. ಅವನ್ನು ಕೇಳುವುದೆಂದರೆ ಮನ: ಪರಿವರ್ತನೆಗೆ ದಾರಿ ಮಾಡಿಕೊಟ್ಟಂತೆ. ಸುಶೀಲಾ ಅವರ ಕತೆಗಳು ಹೀಗೆ ಕೇಳಿಸಲು ಸಫಲವಾಗಿವೆ. ಆದರೆ ಇಲ್ಲಿ ಒಂದು ಮಾತು, ಪತ್ರಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಕತೆಗಳು ಇನ್ನೂ ವಿಸ್ತಾರವಾಗಬೇಕು ಎನ್ನಿಸುತ್ತವೆ. ಸಾವಿರ ಪದಗಳ ಮಿತಿಗೆ ಒಳಪಟ್ಟ ಸಣ್ಣಕತೆ ಇನ್ನೂ ಇನ್ನೂ ಸಣ್ಣದಾಗುತ್ತಿರುವ ಸಂದರ್ಭ ನಮ್ಮ ಕಣ್ಣ ಮುಂದಿದೆ. ಸುಶೀಲಾ ಅವರಂತಹ ಕತೆಗಾರ್ತಿಯರು ಇದನ್ನು ಮೀರಿ ಬೆಳೆಯಬೇಕಿದೆ. ಸುಶೀಲಾ ಅವರಿಂದ ಇದನ್ನು ನಿರೀಕ್ಷಿಸುವುದಕ್ಕೆ ಯಾವ ಸಂಕೋಚವೂ ಇಲ್ಲ. ಅವರು ಬರೆಯಬಲ್ಲರು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ