ನೋಡಿದ ಕೂಡಲೇ ನೋವಿನ ಕವಿಯಂತೆ ಕಾಣಿಸುವ ಕಾಶ್ಮೀರದ ಬರಹಗಾರ ಮೊಹಮದ್ ಜಮಾನ್ ಅಜರುದಾ ಮೈಸೂರು ಬಿಟ್ಟು ಹೋಗುವ ದಿನ ಬೆಳಿಗ್ಗೆ ಮನೆಗೆ ಕರೆದಿದ್ದರು. ಅವರು ಕಳೆದ ಎರಡು ವರ್ಷಗಳಿಂದ ಕಾಶ್ಮೀರಿ ಸಾಹಿತ್ಯದ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಭಾರತೀಯ ಭಾಷೆಗಳ ಸಂಸ್ಥಾನದಲ್ಲಿದ್ದರು. ನಿಮ್ಮ ಮೈಸೂರು ಬಿಟ್ಟು ಹೋಗುವುದೆಂದರೆ ಅಳುವೇ ಬರುವ ಹಾಗಾಗುತ್ತಿದೆ. ನೀವೆಲ್ಲಾ ಎಷ್ಟು ಒಳ್ಳೆಯ ಜನರು ಎಂದು ಭಾವುಕರಾದರು.
ನಿಮಗೆ ಈಗ ಎಷ್ಟು ವಯಸ್ಸಾಗಿರಬಹುದು ಎಂದು ಕೇಳಿದರೆ, ವಯಸ್ಸೇ ಆಗಿಲ್ಲ. ನಾನು ೬೨ರ ಹುಡುಗ ಅಂದರು. ಫೋಟೋ ತೆಗೆಯಲು ಹೋದರೆ ಸಿಗರೇಟು ಹಚ್ಚಿಕೊಂಡು, ಸಿಗರೇಟು ಸೇದುವಾಗಲೇ ನಾನು ಚೆಂದ ಕಾಣಿಸುವುದು ಅಂದರು. ಇಲ್ಲಾ ಸಾರ್, ನೀವು ಸಿಗರೇಟು ಸೇದುವ ಹಾಗಿಲ್ಲ. ಫೋಟೋದಲ್ಲಿ ಸಿಗರೇಟು ಸೇದುವುದರ ಮೇಲೆ ಕೇಂದ್ರ ಸರಕಾರದ ನಿಷೇಧವಿದೆ. ಹಾಗಾಗಿ ಕಾಶ್ಮೀರದ ಕುರಿತು ಮಾತನಾಡುತ್ತಾ ಫೋಟೋ ತೆಗೆಯುತ್ತಾ ಕಾಲ ಕಳೆಯೋಣ ಎಂದು ತಮಾಷೆ ಮಾಡಿದೆ.
ಅಜುರುದಾ ತಮ್ಮನ್ನು ಮೂಲತಃ ಕವಿಯಲ್ಲ ಎನ್ನುತ್ತಾರೆ. ಕಲ್ಹಣನಿಂದ ಹಿಡಿದು ಕಾಳಿದಾಸನವರೆಗೆ ಕವಿಗಳಿರುವಾಗ ನಾನೂ ಯಾಕೆ ಕವಿಯಾಗಿ ಹೆಸರು ಕೆಡಿಸಿಕೊಳ್ಳಲಿ ಎಂದು ನಗುತ್ತಾರೆ. ಕಾಶ್ಮೀರಿ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿರಲಿಲ್ಲ. ಹಾಗಾಗಿ ಪ್ರಬಂಧಗಳನ್ನು ಬರೆಯಲು ಶುರುಮಾಡಿದೆ. ಆದರೆ ಕಾಶ್ಮೀರದಲ್ಲಿದ್ದುಕೊಂಡು ಲಘು ಧಾಟಿಯಲ್ಲಿ ಬರೆಯುವುದು ಬಹಳ ಗಹನವಾದ ಕೆಲಸ, ನಮ್ಮ ಶಾಲೆಗಳಲ್ಲಿ ಕಾಶ್ಮೀರಿ ಕಲಿಸುತ್ತಿರಲಿಲ್ಲ. ಹಾಗಾಗಿ ಉರ್ದುವಿನಲ್ಲೇ ಕಲಿತು ಅದರಲ್ಲೂ ಬರೆದೆ. ಹಾಗಾಗಿ ಎರಡು ಭಾಷೆಗಳಲ್ಲೂ ಬರೆಯುವ ಅದೃಷ್ಠ ಕೂಡಿಬಂತು ಎಂದು ಇನ್ನೊಮ್ಮೆ ನಗುತ್ತಾರೆ. ಈ ನಗುವಿನ ಹಿಂದೆ ಇರುವ ತೀಕ್ಷ್ಣವಾದ ವ್ಯಂಗ್ಯ ಗೊತ್ತಾಗಬೇಕಾದರೆ ಅವರ ಬಳಿ ಇನ್ನೂ ಕೊಂಚ ಹೆಚ್ಚು ಹೊತ್ತು ಕುಳಿತು ಮಾತನಾಡಬೇಕಾಗುತ್ತದೆ.
ಪ್ರೊಪೆಸರ್ ಮೊಹಮದ್ ಜಮಾನ್ ಅಜರುದಾ ಕಾಶ್ಮೀರದ ರಾಜಧಾನಿ ಶ್ರೀನಗರದ ಬಳಿಯ ಹಸನಾಬಾದಿನವರು. ಹಾಗೆ ನೋಡಿದರೆ ಕಾಶ್ಮೀರ ತುಂಬಾ ಚೆನ್ನಾಗಿದೆ. ಚೆನ್ನಾಗಿರಬಾರದಿತ್ತು. ಚೆನ್ನಾಗಿರುವುದರಿಂದ ಎಲ್ಲರೂ ಇದು ತಮಗೆ ಬೇಕು ಎಂದು ಹಠ ಹಿಡಿದು ಹೋರಾಡಿ ನಮಗೆ ಈ ಗತಿ ತಂದರು ಎನ್ನುತ್ತಾರೆ ಅವರು. ಉರ್ದು ಕವಿಯೊಬ್ಬ ಹೇಳಿದ ಸಾಲು ‘ಕಾಶ್ಮೀರ ಎಂಬುದು ಜಹನ್ನಮದಲ್ಲಿರುವ ಸ್ವರ್ಗ’ ಎಂಬುದನ್ನು ಉದ್ಗರಿಸಿದರು.
ಅರಬರಿಂದ ಹಿಡಿದು, ಪಠಾಣರಿಂದ ಹಿಡಿದು ಎಲ್ಲರೂ ಕುದುರೆ ಏರಿಕೊಂಡೇ ನಮ್ಮ ಮನೆಯ ಒಳಗೂ ಬರುತ್ತಿದ್ದರು. ಇವರಿಗೆಲ್ಲ ಹೆದರಿಯೇ ನಾವು ನಮ್ಮ ಮನೆಯ ಬಾಗಿಲುಗಳನ್ನು ಕಿರಿದುಗೊಳಿಸಿದಿವಿ ಎಂದರು.
ನೀವು ಕವಿ ಅಲ್ಲದಿದ್ದರೂ ಪರವಾಗಿಲ್ಲ. ನೋಡಿದರೆ ಹೇಗೂ ನೀವು ಕವಿಯ ಹಾಗೆ ಕಾಣಿಸುತ್ತೀರಿ. ನಮಗಾಗಿ ನಿಮ್ಮ ಕವಿತೆಗಳನ್ನು ಓದಿ ಎಂದಾಗ ಕವಿತೆಗಳನ್ನು ಓದಿದರು. ಆ ಕವಿತೆಗಳ ಅನುವಾದ ಇಲ್ಲಿದೆ. ಓ.ಎಲ್.ಎನ್ ಅನುವಾದಿಸಿದ್ದಾರೆ.
೧
ಹದ್ದುಗಳ ಕಾಗೆಗಳ ಸಂಘಾತ ನೆರೆದಿದೆ ಇಲ್ಲಿ
ಕೋಗಿಲೆಯೊಂದು ನ್ಯಾಯವ ಬೇಡಬೇಕು ಯಾರಲ್ಲಿ?
೨
ನೀವೆಲ್ಲ ಆಡುತ್ತಿದ್ದಿರಿ ಮಾತು ಮಾತು ಇಷ್ಟು ಹೊತ್ತೂ ಸುಮ್ಮನೆ
ಮೌನವಾದಿರಿ ಏಕೆ? ನಿಮ್ಮ ಮಾತಿಗಾಹಾರವಾದವನು ಬಂದಿದ್ದಾನೆ.
೩
ಅಜರುದಾ ಹೇಳಿದ ಕನ್ನಡಿಗೆ-
ಮಾಡು ಪುಣ್ಯವ, ಎಸೆದು ಬಿಡು ಹೊಳೆಗೆ
ಪುಣ್ಯದ ಕಾರ್ಯಕೆ ಪುಣ್ಯವೇ ಪ್ರತಿಫಲವಲ್ಲವೇನು?
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.