ನಾಗರೀಕತೆಗೂ ಮುನ್ನ ಇರುವ ಮುಗ್ಧತೆ ಹಾಗೂ ನಾಗರೀಕತೆಯ ಪರಮಾವಧಿಯಲ್ಲಿ ಬರುವ ನೈಜತೆ ಎರಡಕ್ಕೂ ತಾಳೆಯಾಗುವಂತೆ ಇವರು ಕಾಣುತಿದ್ದರು. ಸಂಕೋಲೆ ಬಿಚ್ಚಿ ಹೆಜ್ಜೆಯೆತ್ತಿಟ್ಟ ಲಿಬರ್ಟಿ ಸ್ಟಾಛ್ಯೂಗೂ ಇಲ್ಲಿಗೂ ಹೊಂದಾಣಿಕೆಯಿದ್ದರೂ ಭಿನ್ನತೆ ಎದ್ದು ಕಾಣುತಿತ್ತು. ಆದರೆ ಸಂಪೂರ್ಣ ಬಟ್ಟೆ ತೊಟ್ಟು ದೊಂಬರಾಟ ನಡೆಸುವ ಕರಿಯ ಗಂಡಸರ ಮೇಳ ನುಡಿಸುತ್ತಿದ್ದವರ ಹಾಗೂ ದಾರಿ ಬದಿಯ ಅಂಗಡಿಯವರ ನಡುವೆ ಈ ಹೆಣ್ಣುಗಳು ಓಡಾಡುತ್ತಿದ್ದರು ಥೇಟ್ ಅಬಲೆಯರಂತೆ, ನಿರ್ಭಾವುಕರಾಗಿ, ಬಟ್ಟೆ ತೊಟ್ಟ ಲೋಕಕ್ಕೆ ಒಂದಿನಿತೂ ಸಂಬಂಧವೇ ಇಲ್ಲದಂತೆ.
ಸುಜಾತಾ ತಿರುಗಾಟ ಕಥನ
ನ್ಯೂಯಾರ್ಕ್ ಜಗತ್ತಿನ ನಾಗರೀಕತೆಯ ತುತ್ತತುದಿಯ ವಾಣಿಜ್ಯ ಹಾಗೂ ಹಣಕಾಸು ವಹಿವಾಟಿನ ಕೇಂದ್ರ. ಮ್ಯಾನ್ ಹಟ್ಟನ್ (Man hattan), ವರ್ಲ್ಡ್ ಟ್ರೇಡ್ ಸೆಂಟರ್ (world trade centre), ಬ್ರಾಡ್ ವೇ ಥಿಯೇಟರ್ (broadway theater), ಎಂಪೈರ್ ಸ್ಟೇಟ್ ಬಿಲ್ಡಿಂಗ್ (empire state building), ಸ್ಟಾಕ್ ಎಕ್ಸ್ಚೇಂಜ್ (stock Exchange)… ಹೀಗೆ ಹತ್ತುಹಲವು ಪ್ರವಾಸಿ ಕೇಂದ್ರಗಳನ್ನು ಹೊಂದಿದೆ. ಜಗತ್ತಿನ ಅತ್ಯುನ್ನತ ಹಣಕಾಸು ವಹಿವಾಟಿನ ಕೇಂದ್ರದ ಜೊತೆಗೆ ಸಾಂಸ್ಕೃತಿಕ ಲೋಕವನ್ನೂ ಹೊಂದಿದ ನಗರವಿದು.
ಇಲ್ಲಿಯೇ ಹೂಡ್ಸನ್ ನದಿ ಅಟ್ಲಾಂಟಿಕ್ ಸಮುದ್ರವನ್ನು ಬಂದು ಸೇರುತ್ತದೆ. ಸುತ್ತಲೂ ಹರಿಯುವ ನೀರು, ನಡುವೆ ಇರುವ ನೆಲದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಕಟ್ಟಿರುವ ನೂಯಾರ್ಕ್ ವಿಸ್ತರಿಸಿಕೊಳ್ಳಲು ನೆಲವನ್ನು ಹೊಂದದ ಕಾರಣ ಇಲ್ಲಿನ ಕಟ್ಟಡಗಳು ಆಕಾಶಮುಖಿಯಾಗಿವೆ. ಇಲ್ಲಿನ ಮ್ಯಾನ್ ಹಟ್ಟನ್ ಸ್ಥಳ ಅತ್ಯಂತ ಜನಬಿಡಿನದ್ದು. ಹಾಗೆಯೇ ಇದರ ಸಾಂಸ್ಕೃತಿಕ ಲೋಕ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂಥದ್ದು.
ನೀವು ನಗರಕ್ಕೆ ಎಂಟ್ರಿ ತೆಗೆದುಕೊಳ್ಳುವುದೇ ಸೇತುವೆಗಳ ಮೂಲಕ. ನ್ಯೂಯಾರ್ಕ್ ಹಳೆಯ ಹಾಗೂ ಹೊಸದಾದ ವಾಸ್ತುವಿನ್ಯಾಸಗಳಲ್ಲಿ ಹೊಸಬರ ಕಣ್ಣಲ್ಲಿ ಕಂಗೊಳಿಸುತ್ತದೆ. ಏರ್ಪೋರ್ಟಿನ ಬಳಿಯಿರುವ ಹೋಟೆಲಿಂದ ನಮ್ಮನ್ನು ಲೋಕಲ್ ಸೈಟ್ ಸೀಯಿಂಗ್ ಗೆ ಕೊಂಡೊಯ್ದ ಅಲ್ಲಿಯ ಪ್ರಜೆ ಕರಿಯರಾಗಿದ್ದರು. ೭ ಅಡಿಯ ದೈತ್ಯ ದೇಹಿ. ಮಾತು… ನಗು…. ಮುದ್ದು ಉಕ್ಕುವಷ್ಟು. ಮಾತುಮಾತಿಗೆ ತಮಾಶೆ ಮಾಡುತ್ತ… ಹ್ಹಹ್ಹಹ್ಹ…. ಎಂದು ನಗುತ್ತ ರಸ್ತೆಯುದ್ದಕ್ಕೂ ಅತ್ತ ಇತ್ತ ಇರುವ ಎಲ್ಲ ಮುಖ್ಯ ಕಟ್ಟಡಗಳ ವಿವರಣೆ ಹೇಳುತ್ತ ಹೋದರು. ಅವರು ಮೂವತ್ತು ವರುಶದಿಂದ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ನೆಮ್ಮದಿಯಾಗಿದ್ದೇನೆ ಎಂದರು. ಅವರು ಅಲ್ಲಿಯೇ ಹುಟ್ಟಿ ಅಲ್ಲೇ ಬೆಳೆದವರಾಗಿದ್ದರು.
ಸ್ಟ್ಯಾಚೂ ಆಫ್ ಲಿಬರ್ಟಿ (Statue of liberty)
ಇದರ ವಿನ್ಯಾಸಕಾರ ಫ್ರಾನ್ಸಿನವ. ‘ಫ್ರೆಡರಿಕ್ ಅಗಸ್ಟೆ ಬಾರ್ತೋಲ್ಡಿ’ ಈ ಮೂರ್ತಿಯನ್ನು ತಾಮ್ರದ ಲೋಹದಿಂದ ತಯಾರಿಸಲಾಗಿದ್ದು, ಒಳಗೆ ಆಧಾರಕ್ಕಾಗಿ ಕಬ್ಬಿಣದ ಏಣಿಗಳನ್ನು ಉಪಯೋಗಿಸಲಾಗಿದೆ. ಇವಳು ರೋಮನ್ನರ ಸ್ವಾತಂತ್ರ್ಯ ದೇವತೆ. ಕೈಲಿ ಬೆಳಕನ್ನು ಹಿಡಿದು ಬಂದವರನ್ನು ಸ್ವಾಗತಿಸುತ್ತಲೇ ಒಂದು ಕಾಲನ್ನು ಮುಂದಿಟ್ಟು ಸದಾ ಚಲನಶೀಲಳಾಗಿರುವಂತೆಯೇ ಇರುವ ಇವಳು ಸ್ವಾತಂತ್ರ ನಿಂತ ನೀರಲ್ಲ, ಯಾರಿಗೂ ಒಳಪಟ್ಟಿದ್ದಲ್ಲ ಎನ್ನುವಂತಿದ್ದಾಳೆ.
ದೇಶ, ಭಾಷೆ ಕೋಶವನ್ನು ಮೀರಿದ ಬದುಕಿನ ಸಾಂಕೇತಿಕ ಪ್ರತಿಮೆಯಾಗಿ ಈ ರೋಮ್ ನ ಅಧಿದೇವತೆ ‘ಎಲ್ಲೀಸ್ ಐಲ್ಯಾಂಡ್ ಹಾರ್ಬರ್ಲ್ಲಿ’ ಹೆಣ್ಣಿನ ಪ್ರತಿನಿಧಿಯಾಗಿ ವಿಶ್ವದ ಸಾಂಕೇತಿಕವಾಗಿ ನಿಂತು ಗಾಳಿಮಳೆಯ ಸ್ಪರ್ಷಕ್ಕೆ ಹಸಿರನೊದ್ದ ತಾಮ್ರವರ್ಣೆ. ಯುನೆಸ್ಕೋದ ಒಂದು ಪಾರಂಪರಿಕ ತಾಣವಾಗಿದ್ದಾಳೆ. ಜಲನೆಲದ ನಡುವೆ ದೇಶದೇಶದ ಬೆಸುಗೆಯನ್ನು ಗಟ್ಟಿಗೊಳಿಸಲೆಂದೇ ಫ್ರಾನ್ಸ್ ದೇಶ ತನ್ನ ಅತಂತ್ರ ಸ್ಥಿತಿಯಿಂದ ಗಟ್ಟಿಗೊಳ್ಳಲು ಅಮೇರಿಕಾದ ಬೆಂಬಲ ಹಾಗೂ ಸ್ನೇಹವನ್ನು ಗಟ್ಟಿಗೊಳಿಸಲೆಂದೇ ಈ ಪ್ರತಿಮೆಯನ್ನು ಅಮೆರಿಕೆಗೆ ಕೊಡುಗೆಯಾಗಿ ನೀಡಿತ್ತು. ಅಮೇರಿಕಾದ ಸ್ವಾತಂತ್ರ್ಯ ಘೋಷಣೆಯ ಕುರುಹಾಗಿ ಹಾಗೂ ಫ್ರಾನ್ಸ್ ನ ಬೆಂಬಲದ ಹಂಬಲದಲ್ಲಿ ರೂಪುಗೊಂಡ ಶಿಲ್ಪವಿದು.
She holds a torch above her head with her right hand, and in her left hand carries a tabula ansata inscribed in Roman numerals with “JULY IV MDCCLXXVI” (July 4, 1776), the date of the U.S. Declaration of Independence. A broken chain lies at her feet as she walks forward. The statue became an icon of freedom and of the United States.
ಇದು ಅಮೆರಿಕನ್ನರು ಕೊಡುವ ಮಾಹಿತಿ. ಇದಕ್ಕಾಗಿ ೧,೨೦,೦೦೦ ಜನರ ದೇಣಿಗೆಯಿದೆ. ಶ್ರೀಮಂತರಲ್ಲದೆ ಜನಸಾಮಾನ್ಯರ ಕೊಡುಗೆಯೂ ಇದಕ್ಕೆ ಸಂದಿದೆ. ಇದೇ ಮಾದರಿಯನ್ನು ಅಮೇರಿಕಾ ತಿರುಗಿ ಫ್ರಾನ್ಸ್ ಗೆ ಕೊಡುಗೆಯಾಗಿ ನೀಡಿದಾಗ ಅಲ್ಲಿನ ಪ್ಯಾರಿಸಿನಲ್ಲಿ ಇದಕ್ಕಿಂತ ಕಡಿಮೆ ಎತ್ತರದ ಈ ಮಾಯಿ ತೇವಭರಿತ ಗಾಳಿಯ ಜೊತೆ ಅನುಸಂಧಾನ ಮಾಡುತ್ತ ಇದೇ ಬಣ್ಣದಲ್ಲಿ ಅಲ್ಲೂ ನಿಂತಳು. ಹೀಗೆ ನಾನಾ ದೇಶದಲ್ಲಿ ಇದರ ಪ್ರತಿರೂಪಿ ವಿಗ್ರಹಗಳಿವೆ. ದೇಶದೇಶದ ನಡುವಿನ ರಾಜಕಾರಣ ನೂರಿರಲಿ. ಸಾರ ಏನೇಇರಲಿ. ಹೆಣ್ಣುಗಳನ್ನು ಎಲ್ಲೂ ಕಟ್ಟಿ ಹಾಕಲಾಗದು ಎಂಬಂತೆ ಸ್ವಾತಂತ್ರ್ಯದ ಸಾರವನ್ನು ಸಾರುವಂತೆ ಇವಳ ನಡೆಯಿದೆ.
ನಗ್ನ ಹೆಣ್ಣುಗಳು ಹಾಗೂ ಜಾಹೀರಾತು ಲೋಕದ ಟೈಮ್ ಸ್ಕ್ವೇರ್
ಈ ಪಟ್ಟಣದ ಆ ಸಂಜೆಯಲ್ಲಿ…. ಎತ್ತರೆತ್ತರದ ಕಟ್ಟಡಗಳ ನಡುವೆ ಹಾದು ಝಗಮಗಿಸುವ ಲೈಟು ಹಾಗೂ ಜಾಹಿರಾತು ನೋಡುತ್ತ, ಜಾಹೀರಾತಿನ ಷೂಟಿಂಗ್ ನಡೆಯುವ ನಗರದ ನಡುವಿನ ಬಿಸಿಬಿಸಿ ಜಾಗಕ್ಕೆ ಬಂದು ನಿಂತೆವು. ನಮ್ಮ ಚೆನ್ನೈನ ಹೆಂಗಸರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಮತ್ಯಾರೋ ದಂಪತಿಗಳು ಪರಿಚಯದವರು ಎದುರು ಸಿಕ್ಕರು.
ವಯಸ್ಸಿನ ಮಕ್ಕಳು ಮೊಮ್ಮಕ್ಕಳೊಡನೆ ಆ ಚೌಕದಲ್ಲಿನ ಥಳಕು ಬಳುಕುಗಳನ್ನು ನೋಡುತ್ತ ಭಾರತದ ಹಿರಿಯ ಜೀವಗಳು ನಡೆಯುತ್ತಿದ್ದರು. ಇಂಡಿಯನ್ಸ್ ಎಂದು ಗೊತ್ತಾದೊಡನೆ ನಮ್ಮ ಪಕ್ಕದ ಮನೆಯವರೇನೋ ಎಂಬಂತೆ ಮಾತಿಗಿಳಿದು ಮತ್ತೆ ಆ ಜನರ ನಡುವೆಯೇ ಕಳೆದುಹೋಗುತ್ತಿದ್ದರು.
ಇವಳು ರೋಮನ್ನರ ಸ್ವಾತಂತ್ರ್ಯ ದೇವತೆ. ಕೈಲಿ ಬೆಳಕನ್ನು ಹಿಡಿದು ಬಂದವರನ್ನು ಸ್ವಾಗತಿಸುತ್ತಲೇ ಒಂದು ಕಾಲನ್ನು ಮುಂದಿಟ್ಟು ಸದಾ ಚಲನಶೀಲಳಾಗಿರುವಂತೆಯೇ ಇರುವ ಇವಳು ಸ್ವಾತಂತ್ರ ನಿಂತ ನೀರಲ್ಲ, ಯಾರಿಗೂ ಒಳಪಟ್ಟಿದ್ದಲ್ಲ ಎನ್ನುವಂತಿದ್ದಾಳೆ.
ಮಕ್ಕಳ ಬಾಣಂತನಕ್ಕೆ ಅಂತಲೇ ತಮ್ಮ ಮಕ್ಕಳ ಮನೆಗೆ ಬಂದ ಬೀಗಬೀಗರು ಒಟ್ಟಾಗಿ ಅಲ್ಲಿಯ ಜನರ ಐಚಿತ್ರ ನೋಡಿ ನಗುತ್ತಿದ್ದುದು ನಡೆಯುತಿತ್ತು. ಮತ್ಯಾರೋ ಹುಡುಗಿ ಪ್ರೇಮಿಗಾಗಿ ಕಾಯುತ್ತಿದ್ದಳು. ಬಂದೊಡನೆ ಅವಳು ತಬ್ಬಿ ಮುತ್ತಿಕ್ಕಿದರೆ, ಒಬ್ಬ ಚೈನಾ ಹುಡುಗಿ ಕೇವಲ ನಲವತ್ತು ಕೆ. ಜಿ. ತೂಕದವಳು ಕ್ಯಾಮೆರಗಾಗಿ ಕಾಲಿನ ಹೆಬ್ಬಟ್ಟಿನ ಮೇಲೆ ತಿರುಗಿತಿರುಗಿ ಬಿದ್ದೂ ಬಿದ್ದೂ ಫೋಸ್ ಕೊಡುತ್ತಿದ್ದಳು.
ಆ ಕ್ಯಾಮೆರಾ ಮೆನ್ ಅವಳನ್ನು ಮಾರ್ಕೆಟ್ಟಿಗೆ ಎಷ್ಟರಮಟ್ಟಿಗೆ ತೋರಿಸಬಹುದು ಎಂಬ ಕಲ್ಪನೆಯನ್ನು ನಿಜವಾಗಿಸಲು ಹೋರಾಡುತಿದ್ದ. ಆ ಹುಡುಗಿ ಇವನು ಹೇಳಿದ್ದನ್ನು ಚಾಚೂ ತಪ್ಪದೆ ಪ್ರಯತ್ನಿಸುತ್ತಿದ್ದಳು. ರಾತ್ರಿಯೆಂಬುದನ್ನೇ ಮರೆತ ಈ ಬಣ್ಣಬಣ್ಣದ ಬೆಳಕಿನ ಮಾರುಕಟ್ಟೆಯನ್ನು ನಮ್ಮ ಕಣ್ಣು ನೋಡಿ ನೋಡಿ ದಣಿಯಿತು. ಆದರೆ ಅಲ್ಲಿ ದಾರಿ ಬದಿಯ ಅಂಗಡಿಗಳನ್ನು ನಡೆಸುವವರಿಗೂ, ದಾರಿಯಲ್ಲಿ ದೊಂಬರಾಟ ಮಾಡುವ ಹೆಚ್ಚಿನವರು ಕರಿಯರೇ ಆಗಿರುವ ಜನಗಳಿಗೂ ಹೊಂದಾಣಿಕೆಯಿತ್ತು.
ಅಂತೆಯೇ ಅಲೆಮಾರಿ ಬಿಳಿಯ ಹೆಣ್ಣುಗಳಿಗೂ ಕೂಡ. ಆ ಬಿಳಿಯ ಹೆಣ್ಣುಗಳು ಕಲಾವಿದರೇ ಆಗಿದ್ದರು. ಅವರು ತಮ್ಮ ಬೆತ್ತಲೆ ಮೈಮೇಲೆ ಬಣ್ಣದಲ್ಲಿ ಚಿತ್ರ ಕೊರೆದು ತಲೆಗೊಂದು ಪುಕ್ಕಗಳ ಹೆಡ್ ಗೇರ್ ಹಾಕಿಕೊಂಡು, ಪೂರ್ಣ ನಗ್ನ ಮೈಗೆ ಒಗ್ಗದ ಒಂದು ಪರ್ಸ್ ನೇತುಹಾಕಿಕೊಂಡು ದಟ್ಟ ಮೇಕಪ್ಪಿನಲ್ಲಿ ಆಚೀಚೆ ಓಡಾಡುತ್ತಿದ್ದರು. ಸಣ್ಣ ಆಂಗಿಕ ಭಾವಗಳನ್ನು ತೋರಿ ಪ್ರವಾಸಿಗರನ್ನು ಆಕರ್ಷಿಸುತಿದ್ದ ಅವರು ಜನರಲ್ಲಿ ಹಣ ಕೇಳುತಿದ್ದರು. ಜೊತೆಗೆ ಅವರಾಗೆ ಫೋಟೋಗೆ ಫೋಸ್ ಕೊಡಲು ಹತ್ತಿರ ಬಂದರೂ… ಹಣ ಕೀಳುತ್ತಾರೆಂದು ಪ್ರವಾಸಿಗರು ಅವರಿಂದ ದೂರ ಓಡುತ್ತಿದ್ದರು.
ನಾಗರೀಕತೆಗೂ ಮುನ್ನ ಇರುವ ಮುಗ್ಧತೆ ಹಾಗೂ ನಾಗರೀಕತೆಯ ಪರಮಾವಧಿಯಲ್ಲಿ ಬರುವ ನೈಜತೆ ಎರಡಕ್ಕೂ ತಾಳೆಯಾಗುವಂತೆ ಇವರು ಕಾಣುತಿದ್ದರು. ಸಂಕೋಲೆ ಬಿಚ್ಚಿ ಹೆಜ್ಜೆಯೆತ್ತಿಟ್ಟ ಲಿಬರ್ಟಿ ಸ್ಟಾಛ್ಯೂಗೂ ಇಲ್ಲಿಗೂ ಹೊಂದಾಣಿಕೆಯಿದ್ದರೂ ಭಿನ್ನತೆ ಎದ್ದು ಕಾಣುತಿತ್ತು. ಆದರೆ ಸಂಪೂರ್ಣ ಬಟ್ಟೆ ತೊಟ್ಟು ದೊಂಬರಾಟ ನಡೆಸುವ ಕರಿಯ ಗಂಡಸರ ಮೇಳ ನುಡಿಸುತ್ತಿದ್ದವರ ಹಾಗೂ ದಾರಿ ಬದಿಯ ಅಂಗಡಿಯವರ ನಡುವೆ ಈ ಹೆಣ್ಣುಗಳು ಓಡಾಡುತ್ತಿದ್ದರು ಥೇಟ್ ಅಬಲೆಯರಂತೆ, ನಿರ್ಭಾವುಕರಾಗಿ, ಬಟ್ಟೆ ತೊಟ್ಟ ಲೋಕಕ್ಕೆ ಒಂದಿನಿತೂ ಸಂಬಂಧವೇ ಇಲ್ಲದಂತೆ.
ಹಣವಿರುವವನ ಕನಸಿಗೆ ತಕ್ಕಂತೆ ಒಂದು ಪಟ್ಟಣವನ್ನು ಕಟ್ಟಲು ಎಷ್ಟು ಜನ ದುಡಿದಿರುತ್ತಾರೆ. ಎಲ್ಲೆಲ್ಲಿಂದಲೋ ಬಂದ ಅಲೆಮಾರಿಗಳು ತಿರುಗಿ ತಮ್ಮೂರಿಗೆ ಹೋಗಲಾರದೆ ಇಲ್ಲೇ ಅಂಡೂರಿರುತ್ತಾರೆ. ಹೀಗೆ ಇಲ್ಲಿ ದುಡಿಮೆಗಾಗಿ ಬಂದ ಹೊರಗಿನವರ ಕಾಲೊನಿ ಕಾಲೊನಿಗಳೇ ಇವೆ. ಇಲ್ಲಿನ ಮೆಟ್ರೋ ಟ್ರೇನ್ ವ್ಯವಸ್ಥೆಯಿಂದಾಗಿ ಅವರವರ ಪ್ರತ್ಯೇಕ ಜಾಗಗಳಿಗೆ ತಲುಪಿ ನೆಮ್ಮದಿಯಾಗಿ ನಿದ್ರಿಸುವ ಗೂಡು ಇವರಿಗೆ ತೆರೆಯುತ್ತವೆ.
ನಮ್ಮ ಮಾರ್ವಾಡಿಗಳಂತೆ ಜ್ಯೂಸ್ (jews) ಜನಾಂಗ ಪಟ್ಟಣದ ನಡುವಾಸಿಗಳಾದರೆ ಮಿಕ್ಕ ಜನಾಂಗದವರೆಲ್ಲ ಅವರವರದ್ದೇ ಲೋಕವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರತ್ಯೇಕವಾಗಿದ್ದರೂ ಬಿಡದೆ ಕಾಡುವ ಮೋಹಕ್ಕೆ ಒಳಗಾಗಿ ಒಮ್ಮೊಮ್ಮೆ ಉತ್ತರ ದಕ್ಷಿಣ ಹಾಗೂ ಪೂರ್ವ ಪಶ್ಚಿಮ ಆಗಾಗ ಒಂದಾಗುತ್ತಿದೆ. ಯಾಕೆಂದರೆ ಅಮೇರಿಕಾದ ಮಕ್ಕಳು ದೇಶಪ್ರೇಮ ಹಾಗೂ ಕಾನೂನಿನ ಶಿಸ್ತು ಕಲಿಕೆಗೆ ಸ್ಕೂಲಿನಲ್ಲೇ ಒಳಗಾಗಿರುತ್ತರೆ. ಹಾಗಾಗಿ ಇಲ್ಲಿನ ನಾಗರೀಕತೆಯ ಕಾರ್ಡ್ ಸಿಕ್ಕವರು ಇಲ್ಲಿಯೇ ಉಳಿಯುತ್ತಾರೆ. ಹಾಗೆಯೇ ಅಲ್ಲಿನ ಜನರೊಡನೆ ಒಂದಾಗಲೇಬೇಕಾದ ಅನಿವಾರ್ಯತೆಯೂ ಇವರಿಗಿದೆ. ಇವರನ್ನು ನೆನೆದಾಗೆಲ್ಲ ಅನಾಯಾಸವಾಗಿ ಬೇಂದ್ರೆಯವರ ಹಾಡೇಕೋ ನೆನಪಿಗೆ ಬರುತ್ತಲೇ ಇರುತ್ತದೆ.
“ಬಂಗಾರನೀರ ಕಡಲಾಚೆಗಿದೆ ನೀಲ ನೀರ ತೀರ
ಮಿಂಚುಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರ
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರ ಧೀರಾ
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ “
ರಾತ್ರಿಯೆಂಬುದನ್ನೇ ಮರೆತ ಈ ಬಣ್ಣಬಣ್ಣದ ಬೆಳಕಿನ ಮಾರುಕಟ್ಟೆಯನ್ನು ನಮ್ಮ ಕಣ್ಣು ನೋಡಿ ನೋಡಿ ದಣಿಯಿತು. ಆದರೆ ಅಲ್ಲಿ ದಾರಿ ಬದಿಯ ಅಂಗಡಿಗಳನ್ನು ನಡೆಸುವವರಿಗೂ, ದಾರಿಯಲ್ಲಿ ದೊಂಬರಾಟ ಮಾಡುವ ಹೆಚ್ಚಿನವರು ಕರಿಯರೇ ಆಗಿರುವ ಜನಗಳಿಗೂ ಹೊಂದಾಣಿಕೆಯಿತ್ತು.
ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಶಿಕ್ಷಣ ಮುಗಿಸಿದರೂ… ಭಾರತದಂಥ ದೇಶಕ್ಕೆ ಹಿಂತಿರುಗಿ… ವರ್ಣಭೇದದಲ್ಲಿ ನೊಂದರೂ ಕೂಡ… ತನ್ನ ಜನರ ಸುಧಾರಣೆಯನ್ನು ಮಾಡುವಂಥ ಮಾನಸಿಕ ಸ್ಥಿರತೆ ಹಾಗೂ ಉನ್ನತ ಆಶಯಗಳು ಅಂಬೇಡ್ಕರ್ ಅಂಥವರಿಗೆ ಮಾತ್ರ ಸಾಧ್ಯವಾಗುತ್ತದೆ. ಲಂಡನ್ ಬಿಟ್ಟು ಬಂದ ಮಹಾತ್ಮಗಾಂಧಿ ಕೂಡ ಇದಕ್ಕೆ ಒಂದು ದೊಡ್ಡ ಉದಾಹರಣೆ.
ವರ್ಲ್ಡ್ ಟ್ರೇಡ್ ಸೆಂಟರ್ ನ ದುರಂತ ಕಥೆ
ದೇಶ ದೇಶಕ್ಕಿಂತ ದೊಡ್ಡದಂತೆ. ಹಾಗೇ ಈ ದೊಡ್ಡದಾಗುತ್ತಲೇ ಹೋಗುವ ಹುನ್ನಾರದಲ್ಲಿ ಜನಸಾಮಾನ್ಯರು ಪಟ್ಟ ಹಿಂಸೆಗೆ ಇತಿಹಾಸ ಹಾಗೂ ಪುರಾಣದ ಕತೆಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಪ್ರಪಂಚದಲ್ಲೇ ದೊಡ್ಡದೆಂದು ಬೀಗುವ ಅಮೇರಿಕಾ 1973ರಲ್ಲಿ ವಿಶ್ವ ವಾಣಿಜ್ಯ ಕೇಂದ್ರವೊಂದನ್ನು ಸ್ಥಾಪಿಸುತ್ತದೆ. ಅಲ್ಲಿಗೆ ಎಲ್ಲ ದೇಶದ ಯುವ ಸಮೂಹವೇ ಹರಿದು ಬರುತ್ತದೆ. ಟೊಂಕಕಟ್ಟಿ ಕೆಲಸಕ್ಕೆ ನಿಂತು ಅಮೇರಿಕಾದ ಕಿರೀಟಕ್ಕೆ ಗರಿ ಸಿಕ್ಕಿಸುತ್ತಾ ಹೋಗುತ್ತದೆ.
ಪೂರ್ವದ ಮುಸ್ಲಿಂ ದೇಶ ಇರಾಕಿನ ರಾಜೀ ಪಂಚಾಯ್ತಿಗೆ ಅಮೇರಿಕಾ ಮಧ್ಯಕ್ಕೆ ಹೋಗಿ ಬೆನ್ನೆಲುಬಾಗಿ ನಿಲ್ಲುತ್ತದೆ. ಆಗ ಯುದ್ಧವನ್ನು ಮುನ್ನಡೆಸುತಿದ್ದ ಒಸಾಮ ಬಿನ್ ಲಾಡೆನ್ ನ ಮೈಯುರಿದು, ಅವನ ಅಹಂಕಾರ ಪ್ರತೀಕಾರವಾಗಿ ಎದ್ದು ನಿಲ್ಲುತ್ತದೆ. ಅವನು ಅಮೇರಿಕಾದ ಎತ್ತರ ಹಾಗೂ ವಾಣಿಜ್ಯ ಕೇಂದ್ರವಾದ ಇದನ್ನು ಹೊಡೆದುರುಳಿಸುವ ಹುನ್ನಾರಕ್ಕಿಳಿಯುತ್ತಾನೆ.
ಎರಡು ಹಾರು ಹಕ್ಕಿಗಳು ಬಂದು ಅಮೇರಿಕಾದ ಕಣ್ಣಿಗೆ ಗುರಿಯಿಟ್ಟು ಕುಕ್ಕುತ್ತವೆ. ಅವಳಿ ಕಟ್ಟಡಗಳು ಕಣ್ಣೆದುರೇ ಉರುಳತೊಡಗುತ್ತವೆ. ಜನ ಹಾಹಾಕಾರವೆಬ್ಬಿಸುವುದರಲ್ಲೇ ವಿಮಾನ ಕಣ್ಮರೆಯಾಗುತ್ತದೆ. ಮೂರು ಸಾವಿರ ಜನರು ಸಾವನ್ನಪ್ಪುತ್ತಾರೆ. ಮಹಾಭಾರತದ ಇನ್ನೊಂದು ಕುರುಕ್ಷೇತ್ರ ಇಲ್ಲಿ ನೆಲೆಯಾಗುತ್ತದೆ. ಜಗತ್ತಿನ ವಾರ್ತಾ ಬಳಗವೇ ಈ ದುರಂತವನ್ನು ಟೊಂಕಕಟ್ಟಿ ನಿಂತು ವರದಿ ಒಪ್ಪಿಸುತ್ತದೆ. ಉದ್ಗಾರಗಳಿಗೆ ಕೊನೆ ಇಲ್ಲವಾಗುತ್ತದೆ.
ಆ ನಂತರ ಒಸಾಮ ಬಿನ್ ಲಾಡೆನ್ ನನ್ನು ಅಟ್ಟಾಡಿ ಬೆಟ್ಟ ಅಗೆದು, ಅಡಗಿದ ಗವಿ ತಡಕಿ ಅಟ್ಟಾಡಿಸಿ ಕೊಂದು, ತನ್ನ ಸೇಡನ್ನು ಅಮೇರಿಕ ಎಂಬ ಈ ದೊಡ್ದಣ್ಣ ತನ್ನ ಮೂಗಿನ ನೇರಕ್ಕೆ ತೀರಿಸಿಕೊಂಡರೂ ಇವರಿವರ ನೆತ್ತಿಗೇರಿದ ಸೊಕ್ಕಿಗೆ ಸತ್ತ ಸಾಮಾನ್ಯ ಜನತೆಯ ನಿಟ್ಟುಸಿರು ಮೊಂಬತ್ತಿಯನ್ನು ಹಚ್ಚಿ ಪ್ರಾಣ ಕಳೆದುಕೊಂಡ ಮನೆಯಲ್ಲಿ ನೋವನ್ನು ಕರಗಿಸಿಕೊಂಡರೂ…. ಮತ್ತೆ ಉರಿವ ಮೇಣದಂತೆ…. ನೋವಿಂದ ಇಂದಿಗೂ ಉರಿಯುವುದು ತಪ್ಪಿಲ್ಲ.
2001 ಸೆಪ್ಟೆಂಬರ್11 ರಲ್ಲಿ ನಡೆದ ಈ ದುರಂತ ಎಂದೆಂದಿಗೂ ಮರೆಯಾಗದಂತೆ ಕಪ್ಪು ಕಣ್ಣಡಿ ಶಿಲೆಯ ಮೇಲೆ ಸತ್ತವರ ಹೆಸರುಗಳು ಶಾಸನದಂತೆ ಉಳಿದಿವೆ. ದುರಂತ ನಡೆದ ಜಾಗದಲ್ಲಿ ಕಟ್ಟಿರುವ ಕಾಂಪೌಂಡಿನ ತುಂಡು ಗೋಡೆಯ ಮೇಲೆ ಎಲ್ಲ ದೇಶದ ಹೆಸರುಗಳ ಅಕ್ಷರಗಳನ್ನು ಕೆತ್ತಲಾಗಿದೆ. ನಡುವೆ ನೀರು ಸುರಿವ ಸಣ್ಣ ಜಲಪಾತವನ್ನು ಸೃಷ್ಟಿಸಲಾಗಿದೆ. ಆಳಕ್ಕೆ ಬೀಳುವ ಆ ಜಲಪಾತದಲ್ಲಿ ಕಣ್ಣೀರ ಕಲೆ ಆರದೆ ಇನ್ನೂ ಹಾಗೆ ಉಳಿದಿದೆ. ಅದನ್ನು ನೋಡಬಂದ ಅವರ ಕಡೆಯ ಜನರು ಸತ್ತು ಅಮರರಾದ ತಮ್ಮ ಬಂಧುಗಳನ್ನು ಇಲ್ಲಿ ನೆನೆಯುತ್ತಾರೆ. ಅವರು ಹೆಣ್ಣಾಗಿದ್ದರೆ ಗುಲಾಬಿಯನ್ನು, ಗಂಡಾದರೆ ಅಮೇರಿಕ ದೇಶದ ಪುಟ್ಟ ಬಾವುಟವನ್ನು ಆ ಕೆತ್ತಿದ ಅಕ್ಷರಗಳ ಮೇಲೆ ಇಟ್ಟು ಅವರನ್ನು ನೆನೆಸಿ ಹೋಗುತ್ತಾರೆ.
ಅದರಲ್ಲಿ ನಮ್ಮ ಭಾರತೀಯರ ಬೇಕಾದಷ್ಟು ಹೆಸರುಗಳಿದ್ದು ಕನ್ನಡದವರದ್ದೂ ಇವೆ. ಅದರಲ್ಲಿ ಪಕ್ಕದ ಪುತ್ತೂರಿನ ಜನರದ್ದು ಹಾಗೂ ಕೊಡಗಿನವರದ್ದು ಕೂಡ ಇದೆ. ಜಗತ್ತು ದುಂಡಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.
ಇದೇ ಜಾಗದಲ್ಲಿ ಕಟ್ಟಿರುವ ಹೊಸ ಕಟ್ಟಡ 1079 ಅಡಿ ಎತ್ತರವಿದ್ದು ಕೆಳಗಿಂದ ಮೇಲೆ ಹೋಗುವ ನಮ್ಮನ್ನು ಲಿಫ್ಟ್ ಮೂಲಕ, ಇಷ್ಟು ಅಡಿಗಳ ದೂರವನ್ನು ಮೂರು ನಿಮಿಶದಲ್ಲಿ ಸಾಗಿಸಿ ಮೇಲೇರಿಸುತ್ತದೆ. ಫಿಲ್ಮ್ ಶೋ ಮೂಲಕ ಅದರ ಮಾಹಿತಿಯನ್ನು ಗ್ರಹಿಸುತ್ತ ಕೊನೆಯ ತುತ್ತ ತುದಿಯ ಮಹಡಿಯ ಸಂಪೂರ್ಣ ಗಾಜಿನರಮನೆಗೆ ಬಂದರೆ, ನ್ಯೂಯಾರ್ಕ್ ನ ಕಟ್ಟಡಗಳು ಇಟ್ಟಿಗೆ ಗೂಡಿನ ಜೋಡಣೆಯಂತೆ ಒತ್ತೊತ್ತಿಗೆ ಕಾಣುತ್ತವೆ. ಕಾಲಕೆಳಗಿನ ಗಾಜಿನಲ್ಲಿ ಆಟಸಾಮಾನಿನ ಕಾರುಗಳು ವೃತ್ತಗಳನ್ನು, ಹೆದ್ದಾರಿಗಳನ್ನು ಹಾದುಹೋಗುವಂತೆ ಕಾಣಿಸುತ್ತವೆ.
ಎಲ್ಲ ಮುಗಿದು ಇಳಿದು ಬರುವಾಗ ಪಾರಿವಾಳದ ರೆಕ್ಕೆಯಾಕಾರದ ವಾಸ್ತು ಕಟ್ಟಡದಲ್ಲಿ ಅರಳಿದ ರೆಕ್ಕೆಯ ವಿನ್ಯಾಸವನ್ನು ಕಾಣುತ್ತ ಬೀದಿಗೆ ನಾವು ಬಂದಿರುತ್ತೇವೆ. ಆಕಾಶಕ್ಕೇರಿದರೂ ಭೂಮಿಗೆ ಇಳಿಯಲೇಬೇಕು ಎಂಬಂತೆ.
ಆಕಾಶದಲ್ಲಿ ಗಾರು ಹೊಡೆದು ನಿರಾಯಾಸವಾಗಿ ತಿರುಗುವ ಹಗುರ ಹದ್ದಿನ ರೆಕ್ಕೆಗೂ ಇನ್ನೊಂದು ಸಣ್ಣ ಹಕ್ಕಿಯ ರೆಕ್ಕೆ ಬಡಿದು ತಿಂದು ಬದುಕುವ ಆಸೆಯಿದೆಯೆಂಬುದನ್ನು ಮರೆಯುವಂತಿಲ್ಲ. ಇಂಥ ದುರಂತದ ಕಥೆಗಳಿಗೆ ಕೊನೆಯಿಲ್ಲವೇ? ಜಗತ್ತಿನ ಮೂಲೆಮೂಲೆಯಲ್ಲೂ ಇಂಥ ನೋವೇಕೆ ಒರಗಿ ಕೂತಿದೆ?
ಆ ಬಾನಲ್ಲಿ, ಈ ನೆಲದಲ್ಲಿ, ಹರಿವ ನೀರಲ್ಲಿ, ಉಸಿರುಸಿರಿನ ಗಾಳಿಯಲೆಯಲ್ಲೂ ಮಿಳಿತವಾಗಿರುವ ನೋವೇ ನಿನ್ನ ಕ್ರೂರ ಹಲ್ಲುಗಳು ಪ್ರೀತಿ ನೆಲೆಯನ್ನು ಹುಡುಕುತ್ತ ಮೊಂಡಾಗಲಿ.
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.