“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ. ಹೆಣದ ಸುತ್ತಲೂ ಕಟ್ಟಿಗೆ ಇಟ್ಟು ಸೌದೆ ಇಟ್ಟು ಅವುಗಳ ಮೇಲೆ ಸೀಮೆಎಣ್ಣೆ ಸುರುವಿದ. ಜ್ವಾಲೆಗಳು ಭುಗಿಲೆದ್ದವು ಉರಿ ಮೇಲೆದ್ದಿತು. ಖಾಲಿಯಾದ ಸರಾಯಿ ಬಾಟಲಿಯನ್ನು ಬೆಂಕಿಗೆಸೆದ. ಫಟ್ ಎಂದು ಅದು ಒಡೆದ ಸದ್ದು ಕೇಳಿಸಿತು>
ತೆಲುಗು ಲೇಖಕಿ ಚೈತನ್ಯ ಪಿಂಗಳಿ ಬರೆದ ಕತೆಯನ್ನು ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ.

 

“ಅಮ್ಮಾ ನಮ್ಮನೆಗೆ ಯಾರೂ ಬರಲ್ವಲ್ಲ ಯಾಕೆ?” ಎಂದು ಕೇಳಿದ ಹತ್ತು ವರ್ಷದ ಸಾಯಿ.

ಅವನ ತಾಯಿ ತಟ್ಟೆಯಲ್ಲಿ ಅನ್ನ ಬಡಿಸುತ್ತಿದ್ದಳು. ಆಕೆ ಅವನ ಮಾತುಗಳನ್ನು ಕೇಳಿಸಿಕೊಂಡಂತಿಲ್ಲ. ಮತ್ತೊಮ್ಮೆ ಜೋರು ದನಿಯಲ್ಲಿ ಕೇಳಿದ ಸಾಯಿ. “ಸುಮ್ನೆ ಮಾತಾಡ್ಡೆ ತಿನ್ನು” ಎನ್ನುತ್ತಾ ಅವನ ಹಣೆಯ ಮೇಲೆ ಕೈಹಾಕಿ ನೋಡಿದಳು. ಜಾಸ್ತಿ ಜ್ವರ ಇದ್ದಂತೆ ಕಾಣಲಿಲ್ಲ. ಉಪ್ಪು ಬೆರೆಸಿ ಅನ್ನವನ್ನು ಮೆತ್ತಗೆ ಹಿಸುಕಿ ಒಂದಿಷ್ಟು ನೀರುಹಾಕಿ ಕಲೆಸಿದಳು. ಸಾಯಿ ತಟ್ಟೆಯನ್ನು ಬೇಡವೆಂದು ತಳ್ಳುತ್ತಾ ‘ನಮ್ಮ ಕ್ಲಾಸಿನಲ್ಲಿ…’ ಎಂದು ಏನನ್ನೋ ಹೇಳಲು ಶುರುಮಾಡಿದ.
ಅವನ ಮಾತುಗಳನ್ನು ತುಂಡರಿಸುತ್ತಾ “ಜ್ವರ ಎಳಿತಿದೆ.. ತಿನ್ನೋ” ಎಂದಳು ತುತ್ತನ್ನು ಬಾಯಿಗಿಡುತ್ತಾ.

ಅದನ್ನು ಒಂದೇ ಗುಕ್ಕಿನಲ್ಲಿ ನುಂಗಿ “ನಿನ್ನೆ ನರೇಶನನ್ನೂ ಕೇಳ್ದೆ ಅಮ್ಮ. ನಮ್ಮನೆಗೆ ಹೋಗೋಣ ಎಂದು. ಅವರಮ್ಮ ಬೇಡ ಅಂದ್ಲಂತೆ. ಸ್ಕೂಲಲ್ಲೋ ಅವರ ಮನೆಯಲ್ಲೋ ಆಡಿಕೊಳ್ರಿ ಅಂದ್ಲು. ಯಾವಾಗಲೂ ನಾನೇ ಹೋಗಬೇಕು. ಅವ್ರು ನಮ್ಮನೆಗೆ ಬರಲ್ಲ” ಎಂದ.

“ಬರ್ತಾರೆ ಬಿಡೋ.. ತಿನ್ನು ನನಗೆ ತುಂಬಾ ಕೆಲಸ ಇದೆ” ಎಂದು ತುತ್ತನ್ನು ಬಾಯಿಯೊಳಕ್ಕೆ ತುರುಕ ತೊಡಗಿದಳು. ತಿಂದನಂತರ ತಟ್ಟೆಯನ್ನು ಎತ್ತಿ ಕುಡಿಯುತ್ತಿದ್ದವನು ಸ್ವಲ್ಪ ಹೊತ್ತು ನಿಲ್ಲಿಸಿದ. ಅವರಮ್ಮ ಸಿಡುಕಿನಿಂದ “ಮತ್ತೇ ಏನೋ ನಿಂದು” ಎಂದಳು.

“ಸೈಕಲ್ ಕೊಡಿಸ್ತೀನಿ ಅಂದಿದ್ರು ಅಪ್ಪ” ಎಂದ.

‘ಸ್ವಲ್ಪ ಮೈ ಬಿಸಿ ಆಗಿಬಿಟ್ರೆ ಎಷ್ಟು ಬಸುರಿ ಬಯಕೆಗಳು ಕಣೋ ನಿನ್ನವು!” ಎಂದಳು ಆಕೆ ನಗುತ್ತಾ.
“ನಿಜವಾಗ್ಲೂನೇ ರೊಕ್ಕ ಬಂದತಕ್ಷಣ ಕೊಡಿಸ್ತಾನಂತೆ. ಹೊಸ ಸೈಕಲ್.. ಸೆಕೆಂಡ್ಹ್ಯಾಂಡ್ ಅಲ್ಲ” ಎಂದ ಖುಷಿಯಿಂದ.

“ನಿಮ್ಮ ಮುತ್ತಾತ ಮೇಲಿಂದ ಮೂಟೆ ಉರುಳ್ತಿಸಿದಾನೆ. ಕೊಡಿಸ್ತಾನೆ ಬಿಡು” ಎಂದು ಅವನ ಕೈಯಲ್ಲಿಂದ ತಟ್ಟೆಯನ್ನು ತೆಗೆದುಕೊಂಡು ಮುಸುರೆ ತೆಗೆದಳು.
“ದೇವರಿಗೆ ಕೈಮುಗಿದೆ. ಬೆಳಿಗ್ಗೆ ಕನಸು ಕೂಡಾ ಬಂದಿತ್ತು” ಎಂದು ಕಣ್ಣು ಹಾರಿಸುತ್ತಾ, ಆಕೆ “ಏನ್ ತಂದೆ ಮಕ್ಕಳ್ರಪ್ಪ ನೀವು. ನಿನ್ನ ಸೈಕಲ್ ಗೆ, ಆತನ ಕುಡಿತಕ್ಕೆ.. ಮಂದಿ ಹೆಣಗಳೇ ಬೇಕಾ? ದೇವರು ಕೇಳ್ತಾನಾ ಇಂಥ ಬಯಕೆಗಳನ್ನು!” ಎಂದು ತಟ್ಟೆಯನ್ನು ಎತ್ತಿಕೊಂಡು ಬಾಗಿಲ ಹೊರಗೆ ಹೆಜ್ಜೆ ಹಾಕಿದಳು.

ಆ ಹುಡುಗನಿಗೆ ಏನು ಮಾತನಾಡಬೇಕೋ ತೋಚಲಿಲ್ಲ. ಬಾಗಿಲ ಕಡೆ ನೋಡುತ್ತಾ ನೀರು ಕುಡಿದ. ಪಕ್ಕದಲ್ಲಿದ್ದ ದಿಂಬನ್ನು, ಕೌದಿಯನ್ನು ತೆಗೆದು ನೆಲದ ಮೇಲೆ ಹಾಸಿದ. ಅವನು ಹಾಗೆ ಅಡ್ಡ ಆಗುತ್ತಿದ್ದಂತೆ ಅವನ ತಾಯಿ ತಟ್ಟೆ ತೊಳೆದು ಒಳಗೆ ಬಂದಳು.

ಔಷಧದ ಬಾಟಲಿ ತೆಗೆದು ನೋಡಿದಳು. ಬಾಟಲಿಯಲ್ಲಿ ತಳ ಕಾಣುತ್ತಿತ್ತು. ಲೋಟದೊಳಗಿನ ನೀರನ್ನು ಸ್ವಲ್ಪ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಕಲೆಸಿ, ಮಗನನ್ನು ಎಬ್ಬಿಸಿ ಔಷಧಿ ಕುಡಿಸಿದಳು. “ಮಲಕ್ಕೋ ಬ್ಯಾಡ ಮಗಾ. ಜ್ವರ ಜಾಸ್ತಿ ಆಗುತ್ತದೆ’ ಎಂದಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಾಯಿ ದಿಂಬನ್ನೂ ಅವಚಿಕೊಂಡ.

ಎಷ್ಟು ಎಬ್ಬಿಸಿದರೂ ಅವನಲ್ಲಿ ಪ್ರತಿಕ್ರಿಯೆ ಕಾಣದೇ, ಫ್ಯಾನಿನ ವೇಗವನ್ನು ಕಡಿಮೆ ಮಾಡಿ ಆಕೆ ಹೊರನಡೆದಳು.

ಅವನು ಹಾಗೆ ಎಷ್ಟು ಹೊತ್ತು ಮಲಗಿದ್ದನೋ ನೆನಪಿಲ್ಲ. ಹೊರಗೆ ಅಳುವ ಸದ್ದಿಗೆ, ಕೂಗಾಟಗಳಿಗೆ ಎಚ್ಚರವಾಯಿತು. ಬಾಗಿಲಬಳಿ ಕೂತ ಅವನ ತಾಯಿ ಶೆಡ್ ಕಡೆ ನೋಡುತ್ತಿರುವುದು ಕಣ್ಣಿಗೆ ಬಿತ್ತು.

“ಏನಾಯ್ತಮ್ಮ” ಎಂದು ಕೇಳಿದ

“ಎದ್ದೆಯಾ.. ಏಳು.. ದೇವರು ಕೇಳಿಸಿಕೊಂಡಿದಾನೆ ಮಗಾ ನಿನ್ನ ಮಾತನ್ನ. ಯಾರೋ ದುಡ್ಡಿದ್ದೋರೇ ಉಸಿರುಬಿಟ್ಟಿದ್ದಾರೆ. ಏಳು ನಿನಗೆ ಹೊಸ ಸೈಕಲ್.. ನಿಮ್ಮಪ್ಪನಿಗೊಂದು ಬಾಟಲಿ..” ಎಂದಳು ವ್ಯಂಗ್ಯವಾಗಿ.
ಈ ಮಾತಿಗೆ ಅವನ ಅಮಲೆಲ್ಲಾ ಇಳಿದುಯೋಯ್ತು. ತಲೆಸುತ್ತಿ ಬಂದು ಜೋಲಿ ಹೊಡೆದಂಗಾಯಿತು.

ನೀರು ಕುಡಿದು ನಿಧಾನವಾಗಿ ಹೊರಗೆ ಬಂದು ಅಮ್ಮನ ಪಕ್ಕದಲ್ಲಿ ಕೂತು ಅಪ್ಪನಿಗಾಗಿ ಹುಡುಕಿದ. ಶೆಡ್ಡಿನೊಳಗೆ ಕಟ್ಟಿಗೆಗಳನ್ನು ಚಿತೆಯ ಮೇಲೆ ಒಡ್ಡುತ್ತಿದ್ದ ಅವನ ತಂದೆ ಪಕ್ಕದಲ್ಲಿ ಸತ್ತವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗಳು, ಶಾಸ್ತ್ರಿಗಳು ನಿಂತಿದ್ದರು. ಕೆಂಪಗೆ ಉರಿ ಚಾಚುತ್ತಿತ್ತು. ಉರಿಯನ್ನು ನೋಡಿ ನಗುತ್ತಾ ಅಮ್ಮನ ಮಡಿಲಲ್ಲಿ ವಾಲಿದ ಅವನ ತಲೆಯಲ್ಲಿ ಬೆರಳಾಡಿಸತೊಡಗಿದಳು. ಅವರಿಬ್ಬರ ಪಕ್ಕದಲ್ಲಿ ಗರ್ಭಿಣಿ ಹೆಂಗಸೊಬ್ಬಳು ಬಂದು ಕುಳಿತುಕೊಂಡಳು. ಪಕ್ಕದ ಮನೆಯಲ್ಲಿ ವಾಸವಾಗಿರುವ ಸುಡುಗಾಡು ಕಾಯುವವನ ಹೆಂಡತಿ ಆಕೆ.

ಕಟ್ಟೆಯ ಪಕ್ಕದಲ್ಲಿರುವ ಕೈಪಂಪಿನ ಹತ್ತಿರ ಹೆಂಗಸರು ಗಂಡಸರು ತಲೆಸ್ನಾನ ಮಾಡುತ್ತಿದ್ದರು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಅವರೆಲ್ಲರನ್ನೂ ನೋಡುತ್ತಿದ್ದ ಸಾಯಿ. ಅವನಿಗೊಂದು ಅನುಮಾನ ಬಂತು. ‘ಅಮ್ಮಾ ಇವರಿಗೆ ಮಕ್ಕಳು ಇರಲ್ವ? ಮಕ್ಕಳು ಯಾಕೆ ಬರಲ್ಲ? ಎಂದು ಕೇಳಿದ.

ಆಕೆ ಏನೂ ಮಾತನಾಡಲಿಲ್ಲ. ಅವನ ತಲೆ ನೇವರಿಸುತ್ತಿದ್ದಳು. ಅವನು ಆಕೆಯ ಕೈಯನ್ನು ತಳ್ಳಿದ, ಅವನಿಗೆ ಏನು ಹೇಳಬೇಕೆಂದು ತೋಚದೆ. ‘ಮಲಗಬೇಡ ಏಳು. ಗಂಜಿ ಕಾಯಿಸಿಕೊಂಡು ಬರ್ತೀನಿ’ ಎಂದು ಆಕೆ ಅವನನ್ನು ಎಬ್ಬಿಸಿ ಕೋಣೆಯೊಳಕ್ಕೆ ಹೋದಳು.

ತಾಯಿ ಅತ್ತ ಹೋಗುತ್ತಿದ್ದಂತೆ ಅವನಿಗೆ ಏನೋ ಹೊಳೆದಂತಾಯಿತು. ಓಡುತ್ತಾ ಗೇಟಿನ ಹೊರಗೆ ಹೋದ. ಗೋಡೆಗೆ ಒರಗಿಕೊಂಡು ಕಾರುಗಳೂ, ಬೈಕು ಪಾರ್ಕ್ ಮಾಡಿದ್ದರು. ಕಾರುಗಳನ್ನು ಲೆಕ್ಕಹಾಕಿದ. ಒಟ್ಟು ಹನ್ನೊಂದು ಇದ್ದವು. ಅವನ ಮನಸ್ಸು ಗಾಳಿಪಟವಾಯಿತು. ಓಡುತ್ತಾ ಒಳಗೆ ಬಂದು ಬಾಗಿಲ ಬಳಿ ನಿಂತು ‘ಅಮ್ಮಾ ಹನ್ನೊಂದು ಕಾರುಗಳಿವೆ’ ಎಂದು ಕೂಗಿದ.

“ಅಬ್ಬಾ ತಂದೆ ಮಕ್ಕಳಿಬ್ಬರೂ ಒಂದೇ.. ಥೂ” ಎಂದು ಅಂದುಕೊಂಡಳು.
“ಸಾವಿರ ರೂಪಾಯಿಗಳಾದರೂ ಕೊಡ್ತಾರೇನಮ್ಮ” ಎಂದ.

“ಬಾಯಿ ಮುಚ್ಚು.. ಅವರಿಗೆ ಕೇಳಿಸುತ್ತದೆ” ಎಂಬಂತೆ ಬಾಯಿಗೆ ಕೈ ಅಡ್ಡ ಇಟ್ಟು ಹೊರಗೆ ಜನರ ಕಡೆ ನೋಡುತ್ತಾ ಸನ್ನೆ ಮಾಡಿದಳು ಆಕೆ. ಅವನು ‘ಸರಿ’ ಎಂಬಂತೆ ತಲೆಯಾಡಿಸಿ, ಹೆಣಸುಡುತ್ತಿರುವ ಶೆಡ್ಡಿನ ಎದುರಿಗೆ ಇರುವ ಸಿಮೇಂಟಿನ ಕಟ್ಟೆಯ ಮೇಲೆ ಕುಳಿತುಕೊಂಡ. ಹತ್ತು ನಿಮಿಷಕ್ಕೆ ಮರಣಿಸಿದ ವ್ಯಕ್ತಿಗೆ ಸಂಬಂಧಿಸಿದ ಇಬ್ಬರು ಹೆಂಗಸರು ಏದುಸಿರು ಬಿಡುತ್ತಾ, ಸುದ್ದಿ ಮಾತಾನಾಡುತ್ತಾ ಬಂದು ಅವನಿಂದ ಸ್ವಲ್ಪ ದೂರದಲ್ಲಿ ಕುಳಿತರು.

“ದೇವರಿಗೆ ಕೈಮುಗಿದೆ. ಬೆಳಿಗ್ಗೆ ಕನಸು ಕೂಡಾ ಬಂದಿತ್ತು” ಎಂದು ಕಣ್ಣು ಹಾರಿಸುತ್ತಾ, ಆಕೆ “ಏನ್ ತಂದೆ ಮಕ್ಕಳ್ರಪ್ಪ ನೀವು. ನಿನ್ನ ಸೈಕಲ್ ಗೆ, ಆತನ ಕುಡಿತಕ್ಕೆ.. ಮಂದಿ ಹೆಣಗಳೇ ಬೇಕಾ? ದೇವರು ಕೇಳ್ತಾನಾ ಇಂಥ ಬಯಕೆಗಳನ್ನು!” ಎಂದು ತಟ್ಟೆಯನ್ನು ಎತ್ತಿಕೊಂಡು ಬಾಗಿಲ ಹೊರಗೆ ಹೆಜ್ಜೆ ಹಾಕಿದಳು.

ಚಿತೆಯ ಮೇಲೆ ಹೆಣ ಸ್ವಲ್ಪ ಮೇಲೆದ್ದಿತು. ದೊಡ್ಡ ದೊಣ್ಣೆಯಿಂದ ಅದನ್ನು ಹಿಂದಕ್ಕೆ ತಿವಿಯುತ್ತಿದ್ದ ಸಾಯಿಯ ತಂದೆ. ಆ ದೃಶ್ಯ ನೋಡುತ್ತಿದ್ದಂತೆ ಗಾಬರಿಯಿಂದ ಅಮ್ಮನ ಬಳಿ ಓಡಿದ ಸಾಯಿ. ಎದ್ದು ಓಡುತ್ತಿದ್ದವನನ್ನು ಹಿಡಿದು ಮಡಿಲಲ್ಲಿ ಕೂಡಿಸಿಕೊಂಡು ಬೆನ್ನು ತಟ್ಟತೊಡಗಿದಳು.

ಸಿಮೆಂಟು ಬೆಂಚಿನ ಮೇಲೆ ಕೂತಿದ್ದ ಇಬ್ಬರು ಹೆಂಗಸರಲ್ಲಿ ಸ್ವಲ್ಪ ಸ್ಫುರದ್ರೂಪಿಯಾಗಿ ಇದ್ದವಳು ಸಾಯಿಯನ್ನು ಕರೆದಳು. ಆಕೆಯ ಕಣ್ಣುಗಳು ಕೆಂಪಗೆ ಉಬ್ಬಿಕೊಂಡಿದ್ದವು. ‘ಪಾಪ ತುಂಬಾ ಅತ್ತಿರಬೇಕೆಂದುಕೊಂಡು ಆಕೆಯ ಬಳಿ ಹೋದ ಸಾಯಿ.

“ಮಗಾ.. ಆ ಬೋರ್ ಪಂಪಿನ ಹತ್ರ ನನ್ನ ಚಪ್ಪಲಿಗಳನ್ನು ಬಿಟ್ಟಿದ್ದೀನಿ ಚೂರು ತಂದು ಕೊಡು ಪ್ಲೀಸ್” ಎಂದು ಕೇಳಿದಳು. ಅವನು ಓಡಿ ಹೋಗಿ ಅಲ್ಲಿದ್ದ ಚಪ್ಪಲಿಗಳನ್ನು ಕೈಯಿಂದ ಹಿಡಿದು ಆಕೆಗೆ ತೋರಿಸಿದ ‘ಅವೇ ಚಪ್ಪಲಿ’ ಎಂದು ಆಕೆ ತಲೆಯಾಡಿಸಿದಳು. ಅವುಗಳನ್ನು ತೆಗೆದುಕೊಂಡು ಓಡಿಬಂದು ಆಕೆಗೆ ಕೊಟ್ಟ.

ಅವುಗಳನ್ನು ನೋಡುತ್ತಾ ‘ಥ್ಯಾಂಕ್ಸ್ ಕಣಪ್ಪಾ.. ನಿನ್ ಹೆಸ್ರು ಏನು?’ ಎಂದು ಕೇಳಿದಳು ಆ ಹೆಂಗಸು. ಅವನು ‘ಸಾಯಿ’ ಎಂದು ಉತ್ತರಿಸಿ, ಅವರಿಂದ ಸ್ವಲ್ಪ ದೂರದಲ್ಲಿ ಕೂತು ಅಪ್ಪನನ್ನೇ ನೋಡತೊಡಗಿದ.

ಚಪ್ಪಲಿಗಳನ್ನು ತರಿಸಿಕೊಂಡ ಹೆಂಗಸು, ಪಕ್ಕದವಳನ್ನು ನೋಡುತ್ತಾ “ನೋಡಿದ್ರಾ ಜಿಂಕೆಯಂತೆ ಓಡಿ ತಂದುಕೊಟ್ಟ. ನಮ್ಮ ಹುಡುಗ್ರು ಇದ್ದಾರೆ ಯಾವಾಗ ನೋಡಿದರೂ ಸುಸ್ತು ಅಂತ ಜೋತು ಬೀಳ್ತಿರ್ತಾರೆ” ಎಂದಳು.

“ನಾವೇನು ತಿನಿಸ್ತೀವಿ ಕಣ್ರಿ. ನಾಜೂಕು ತಿಂಡಿ. ಇವರೆಲ್ಲಾ ಜವಾರಿ ಊಟಮಾಡ್ತಾರೆ. ಮಧ್ಯಮ ವರ್ಗ ಅಂತ ಹೇಳೀವಿ ಆಗಲೀ ನಾವು ಅತ್ತಕಡೆ ಇತ್ತಕಡೆ ಇಲ್ಲದಂಗೆ ಆಗ್ತಾ ಇದ್ದೀವಿ.. ನಿಜಹೇಳಬೇಕೆಂದರೆ ನಮ್ಮ ಮಕ್ಕಳಿಗೆ ರಾತ್ರಿ ಹೊತ್ನಲ್ಲಿ ಬಾತ್ ರೂಮಿಗೆ ಹೋಗಬೇಕೆಂದರೂ ಹೆದರಿಕೊಳ್ತಾರೆ. ಇವನನ್ನು ನೋಡಿ ಸ್ಮಶಾಣದಲ್ಲಿ ಒಬ್ನೇ ಎಷ್ಟು ಆರಾಮಾಗಿ ಆಟ ಆಡಿಕೊಳ್ತಿದಾನೆ? ಹೆಣ ಸುಡೋದನ್ನು ಕಣ್ಣು ಮಿಟುಕಿಸದಂತೆ ಹೆಂಗೆ ನೋಡ್ತಿದಾನೋ ನೋಡ್ರಿ” ಎಂದಳು ಸಣ್ಣದೊಂದು ಭಾಷಣ ಬಿಗಿಯುತ್ತಿರುವವಳಂತೆ.
ಆ ಮಾತುಗಳಿಗೆ ಸಾಯಿ ತಲೆ ತಿರುಗಿಸಿ ನೋಡಿದ.

ಆ ಹೆಂಗಸು ಅವನನ್ನು ಉದ್ದೇಶಿಸಿ “ಏನು ಮಗಾ.. ಭಯ ಆಗಲ್ವಾ?” ಎಂದು ಕೇಳಿದಳು.
ಅವನು ಮಾತನಾಡಲಿಲ್ಲ.

ಕಾರ್ಯಕ್ರಮ ಪೂರ್ತಿಯಾದಂತಿದೆ. ಚಿತೆಬಳಿ ನಿಂತವರೆಲ್ಲರೂ ಸ್ನಾನ ಮುಗಿಸಿ ಹೊರಡತೊಡಗಿದರು. ಸಾಯಿಯ ತಂದೆ ಏದುಸಿರು ಬಿಡುತ್ತಾ ಅವರ ಬಳಿ ಬಂದ.

ಹಳ್ಳಿಗಳಲ್ಲಾದರೆ ಸ್ಮಶಾನ ಕಾಯುವವರಿಗೆ ಅಕ್ಕಿ, ತರಕಾರಿ ಹೊಸಬಟ್ಟೆ ಕೊಡುತ್ತಾರೆ. ಸಿಟಿಯಲ್ಲಾದರೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ‘ನೀವೇ ಕೊಂಡುಕೊಳ್ಳಿ’ ಎಂದು ಕೈಯಲ್ಲಿ ಒಂದಿಷ್ಟು ಹಣ ಇಡುತ್ತಾರೆ. ಆ ಹಣಕ್ಕಾಗಿಯೇ ಸಾಯಿ ತಂದೆ ಅವರ ಬಳಿ ಬಂದಿದ್ದು.

ಸತ್ತವರ ಪೈಕಿಯ ದೊಡ್ಡ ಮನುಷ್ಯರೊಬ್ಬರು ಸಾಯಿಯ ತಂದೆ ಕೈಯಲ್ಲಿ ಹಣ ಕೊಟ್ಟರು. ಅವನು ಹಣಪಡೆಯಲು ನಿರಾಕರಿಸುತ್ತಿದ್ದಾನೆ ಅವರು ಏನೋ ಹೇಳುತ್ತಿದ್ದರು.

ಆ ದೃಶ್ಯವನ್ನು ನೋಡುತ್ತಿದ್ದಂತೆಯೇ ಸಾಯಿಗೆ ಅರ್ಥವಾಯಿತು. ಇನ್ನೂ ತನ್ನ ಸೈಕಲ್ ಕೇವಲ ಕನಸೆಂದು. ಅವನು ನಿರಾಶೆಯಿಂದ ಒಂದು ಮೂಲೆಗೆ ಹೋಗಿ ಕುಳಿತುಕೊಂಡ.

ಅವನನ್ನು ಉದ್ದೆಶಿಸಿ ಆ ಹೆಂಗಸರಲ್ಲಿ ಒಬ್ಬ ಹೆಣ್ಣುಮಗಳು ಹೊರಡುತ್ತಾ “ಯಾವತ್ತಾದರೂ ದೆವ್ವಗಳನ್ನು ನೋಡಿದ್ದೇನೋ?” ಎಂದು ಕೇಳಿದಳು.
ಅಪ್ಪನನ್ನೇ ನೋಡುತ್ತಿದ್ದ ಆತ ‘ಹಾಂ’ ಎಂದ ಪರಧ್ಯಾನದಿಂದ

ಅವರು ನಗುತ್ತಾ ಉಳಿದವರೊಂದಿಗೆ ಹೊರಟುಹೋದರು.
* * *
ಕತ್ತಲಾಯಿತು ಹೆಣ ಇನ್ನೂ ಪೂರ್ತಿಯಾಗಿ ಸುಟ್ಟಿರಲಿಲ್ಲ. ಅಪ್ಪ ಸರಾಯಿ ಕುಡಿಯುತ್ತಾ ಹೆಣದ ಮೇಲೆ ಮತ್ತಷ್ಟು ಸೀಮೆ ಎಣ್ಣೆಯನ್ನು ಸುರಿದ. ಒಂದಿಷ್ಟು ಸೌದೆ ತುರುಕಿ ಇನ್ನೊಂದು ಕಟ್ಟಿಗೆಯಿಂದ ಒಳನೂಕತೊಡಗಿದ.

ಬಾಗಿಲ ಬಳಿ ಕುಳಿತು ಅಪ್ಪನನ್ನೇ ನೋಡುತ್ತಿದ್ದ ಸಾಯಿ. ಅವನ ತಾಯಿಗೆ ಮಗನನ್ನು ನೋಡುತ್ತಲೇ ದಿಗಿಲಾಯಿತು. “ಏಳು ಕಣೋ ನಿಮ್ಮಪ್ಪನಿಗೆ ನೂರು ಕೊಟ್ಟರೂ ಕುಡಿತಕ್ಕೇ.. ಸಾವಿರ ಕೊಟ್ಟರೂ ಕುಡಿತಕ್ಕೆ.. ಆಯ್ತು ಎದ್ದು ಮಲಗೋಗು..” ಎಂದಳು.

ಅವನೇನು ಮಾತನಾಡಲಿಲ್ಲ. ತಾಯಿಗೆ ಅನುಮಾನ ಬಂದು ಅವನ ಹಣ್ಣೆಯ ಮೇಲೆ ಕೈಹಾಕಿ ನೋಡಿದಳು ಮೈ ಸುಡುತ್ತಿತ್ತು. “ಏಳು ಮಗಾ.. ಮಲಗು ಒಂಬತ್ತಾಗ್ತಾ ಇದೆ..” ಎಂದಳು.

ಅವನು ಮರು ಮಾತನಾಡದೇ ಎದ್ದು ಚಿತೆ ಕಡೆ ನಡೆದ. ಆಕೆ ಮಗನನ್ನು ನೋಡುತ್ತಾ ಅಲ್ಲಿಯೇ ಕುಸಿದಳು.
ಚಿತೆ ಪಕ್ಕದಲ್ಲಿ ದಂಡೆಯ ಮೇಲೆ ಕುಳಿತಿದ್ದ ಅಪ್ಪನ ಪಕ್ಕಕ್ಕೆ ಹೋಗಿ ಕುಳಿತುಕೊಂಡ ಸಾಯಿ.

“ಏನಲೇ ಜ್ವರ ಕಡಿಮೆ ಆಗ್ಲಿಲ್ವಾ? ಈ ಬಿಸಿ ಹತ್ರ ಯಾಕೆ ಬಂದೆ? ಹೋಗಿ ಮಲಕ್ಕೋ?” ಎಂದ

ಅವನು ಸ್ವಲ್ಪ ಸರಿದು ಅಪ್ಪನ ಮಡಿಲಲ್ಲಿ ತಲೆಯಿಟ್ಟು ಮಲಗಿದ. ಒಂದು ಕೈಯಿಂದ ಸರಾಯಿ ಕುಡಿಯುತ್ತಾ ಮತ್ತೊಂದು ಕೈಯಿಂದ ಮಗನನ್ನು ನೇವರಿಸಿದ.
“ಅಪ್ಪ ನೀನು ಯಾಕೆ ಕುಡಿತಿಯಾ?” ಎಂದ

ಅವನಿಗೆ ಸಿಟ್ಟುಬಂತು ಮದ್ಯದ ಬಾಟಲಿಯನ್ನು ಪಕ್ಕಕ್ಕಿಟ್ಟು, ಮಗನ ಭುಜವನ್ನು ಹಿಡಿದು ಎಬ್ಬಿಸಿ “ನಿಮ್ಮಮ್ಮ ಕಳಿಸಿದ್ಲಾ ಈ ರೀತಿ ಕೇಳೆಂದು. ಆಕೆಯನ್ನು ಈ ಹೆಣದ ಪಕ್ಕದಲ್ಲಿ ಜಾಗರಣೆ ಮಾಡಲು ಹೇಳು. ಎಣ್ಣೆ ಹೊಡಿದೇ” ಎಂದ ಸಿಟ್ಟಿನಿಂದ.

ಸಾಯಿಗೆ ಅಪ್ಪನನ್ನು ನೋಡಿ ಭಯವಾಯಿತು. ಮೊದಲೇ ಫುಲ್ ಕುಡಿದಿದ್ದ, ಪಕ್ಕದಲ್ಲಿನ ಉರಿವ ಚಿತೆಯ ಬೆಳಕಿನಲ್ಲಿ ಅವನ ಕಣ್ಣುಗಳು ಇನ್ನೂ ಕೆಂಪಗೆ ಹೊಳೆದಂತಾಯಿತು ಅವನಿಗೆ.

ಜ್ವರದಲ್ಲಿದ್ದ. ಇನ್ನೂ ಹೆದರಬಹುದೇನೋ ಎಂದು ಮಾತು ಬದಲಿಸಿದ ಅಪ್ಪ “ಎಷ್ಟು ಪಾಪಗಳನ್ನು ಮಾಡಿದಾನಪ್ಪ ಇವನು ಇಷ್ಟು ಚಿಮಣಿ ಎಣ್ಣೆ ಸುರಿದರೂ, ಕಟ್ಟಿಗೆ ಹಾಕಿದ್ರೂ ಸುಡ್ತಿಲ್ಲ..” ಎಂದು ಎದ್ದು ಮತ್ತಷ್ಟು ಕಟ್ಟಿಗೆ ಹಾಕಿದ.

“ಹತ್ತು ಕೆ.ಜಿ ತುಪ್ಪಸುರಿದಿರ್ತಾರೆ ಇದರಲ್ಲಿ. ಐನೂರು ಕೊಡೋದಕ್ಕೆ ಅಳ್ತಾರೆ. ಸಂಬಳ ಕೊಡಲ್ವಾ? ಅಂತ ಕೊಂಕು ಬೇರೆ.. ಹೋಗ್ ಹೋಗಿ ಒಳಗೆ ಮಲಕ್ಕೋ.. ಸುಡ್ತಿರೋ ಹೆಣದ ಕಮಟು ಡೇಂಜರ್ರು.. ನಾತ ಕುಡೀಬಾರ್ದು.. ಕಾಯಿಲೆಬರ್ತವೆ. ಜ್ವರಬೇರೆ ಬಂದಿದೆ ಹೋಗು..” ಎಂದು ಮತ್ತೇ ಸ್ವಲ್ಪ ಚಿಮಣಿಎಣ್ಣೆ ಸುರುವಿದ.

ಸತ್ತವರ ಪೈಕಿಯ ದೊಡ್ಡ ಮನುಷ್ಯರೊಬ್ಬರು ಸಾಯಿಯ ತಂದೆ ಕೈಯಲ್ಲಿ ಹಣ ಕೊಟ್ಟರು. ಅವನು ಹಣಪಡೆಯಲು ನಿರಾಕರಿಸುತ್ತಿದ್ದಾನೆ ಅವರು ಏನೋ ಹೇಳುತ್ತಿದ್ದರು. ಆ ದೃಶ್ಯವನ್ನು ನೋಡುತ್ತಿದ್ದಂತೆಯೇ ಸಾಯಿಗೆ ಅರ್ಥವಾಯಿತು. ಇನ್ನೂ ತನ್ನ ಸೈಕಲ್ ಕೇವಲ ಕನಸೆಂದು. ಅವನು ನಿರಾಶೆಯಿಂದ ಒಂದು ಮೂಲೆಗೆ ಹೋಗಿ ಕುಳಿತುಕೊಂಡ.

ಸಾಯಿ ಅಲ್ಲಾಡಲಿಲ್ಲ. ಅಪ್ಪ ಕುಳಿತುಕೊಳ್ಳುತ್ತಿದ್ದಂತೆಯೇ ಅಪ್ಪನ ಮಡಿಲಲ್ಲಿ ಮಲಗಿದ.
“ಹತ್ತು ಕೆ.ಜಿ ತುಪ್ಪ ಬೆಲೆ ಎಷ್ಟು ಅಪ್ಪ?” ಎಂದು ಕೇಳಿದ

“ಗೊತ್ತಿಲ್ಲ ಮಗಾ. ಆದರೂ ದುಬಾರಿ. ದಿವಸಕ್ಕೆ ಇವ್ರು ಮನೆಮುಂದೆ ಓಣಿಗೊಂದು ಫ್ಲೆಕ್ಸ್ ಕಟ್ತಾರೆ. ಕತ್ತಲಾಗುತ್ತಿದ್ದಂತೆ ಎರಡು ಫ್ಲೆಕ್ಸಿನ್ನಾದರೂ ಎಳ್ಕೊಂಬರ್ಬೇಕು. ಕೌದಿ ಹರಿದು ಹೋಗಿದೆ.. ಮನಿಕ್ಯಳಿಕೆ ಹಾಸ್ಕೋಬೋದು.. ಇಲ್ದಿದ್ರೆ ಯಾವನೋ ಒಬ್ಬ ತಗಂಡು ಹೋಗ್ತಾನೆ” ಎಂದ.
“ಒಂದೊಂದು ಫ್ಲಕ್ಸ್ ಎಷ್ಟಿರಬಹುದು ಅಪ್ಪಾ?” ಎಂದು ಕೇಳಿದ ಸಾಯಿ.

ಅಪ್ಪನಿಗೆ ಸಿಟ್ಟು ನೆತ್ತಿಗೇರಿತು “ನಿನಗೆ ಏನಾದರೊಂದು ಮಾಡಿ ಸೈಕಲ್ ಕೊಡಿಸ್ತೀನಿ ಮಗಾ. ಇಷ್ಟೋತ್ತಿನಿಂದ ಅದೆಷ್ಟು ಇದೆಷ್ಟು ಅಂತಾ ಕೇಳ್ತಾನೇ ಇದ್ದೀಯಾ. ಎಷ್ಟಾದರೆ ನಮಗೇನು? ಎಂಜಲು ಕೈಯಿಂದ ನಮ್ಮ ಕಡೆ ಕೈ ಬೀಸಲ್ಲ” ಎಂದ .

ಎಂಜಲ ಕೈ ಅನ್ನುತ್ತಿದ್ದಂತೆ ಅವನಿಗೆ ಚಪ್ಪಲಿ ತರಿಸಿಕೊಂಡ ಹೆಂಗಸಿನ ಮಾತುಗಳು ನೆನಪಿಗೆ ಬಂದವು.
“ಅವ್ರು ನಮ್ಮಷ್ಟು ಜವಾರಿ ಊಟಮಾಡಲ್ವಂತಲ್ಲ..?” ಎಂದ

ಅವನೇನೂ ಮಾತಾಡಲಿಲ್ಲ. “ಲೋ ಜ್ವರದಲ್ಲಿ ಇದೇನೋ ಜಾಗರಣೆ ನಿಂದು. ಹೆಣ ಸುಡ್ತಿರೋ ವಾಸನೆ ಒಳ್ಳೆದಲ್ಲ ಮಗಾ.. ಹೋಗು ಹೋಗು ಒಂದು ತಿಂಗಳದಾಗೆ ನಿನಗೆ ಸೈಕಲ್ ಕೊಡಿಸ್ತೇನೆ” ಎಂದ ಅಕ್ಕರೆಯಿಂದ.

ಅಪ್ಪನ ಮಡಿಲಿನಿಂದ ಚಾಚಿ ಎದೆ ಮೇಲೆ ತಲೆಇಟ್ಟು ಅವಚಿಕೊಂಡು ಮಡಿಲಲ್ಲಿ ಕುಳಿತುಕೊಂಡ ಸಾಯಿ.
“ಮಕ್ಕಳು ಯಾಕೆ ಬರಲ್ಲ ಅಪ್ಪ ಇಲ್ಲಿಗೆ.. ಹೊರಗಿನ ಮಕ್ಕಳು..” ಎಂದು ಕೇಳಿದ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮಗನ ಪ್ರಶ್ನೆಗೆ ಅವನ ಕಣ್ಣುಗಳೆಲ್ಲ ನೀರು ಉಬುಕಿ ಬಂದವು. ಕಣ್ಣೀರನ್ನು ಹತ್ತಿಕ್ಕಲು ಅವನಿಗೆ ಸಾಧ್ಯವಾಗಲಿಲ್ಲ. ಒಂದು ಕ್ಷಣ ತಡೆದು “ಈ ಬಿಸಿಗೆ ನನ್ನ ಕಣ್ಣುಗಳು ಉರಿಯಾತ್ತವೆ. ಗಾಳಿ ಆಡ್ತಿಲ್ಲ. ಜ್ವರದಲ್ಲಿದಿಯಾ ನೀನು ಹೋಗಯ್ಯ ನನ್ನ ಮಾತು ಕೇಳು. ಮನೆಯೊಳಕ್ಕೆ ಹೋಗಿ ಮಲಗು..” ಎಂದ ಕಣ್ಣೊರೆಸಿಕೊಳ್ಳುತ್ತಾ.

ಅಪ್ಪನ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೇ “ಇಲ್ಲಿ ದೆವ್ವಗಳಿರುತ್ತವೆಯಾ” ಎಂದು ಕೇಳಿದ ಸಾಯಿ.

“ನಾನು ನಿನ್ನ ವಯಸ್ಸು ಬಂದಾಗಿನಿಂದ ನೋಡ್ತಿದ್ದೇನೆ ಮಗಾ. ಅಂಥಾವೇನಿಲ್ಲ ಇಲ್ಲಿ. ಇದ್ದರೆ ಗಿದ್ದರೆ ಊರಲ್ಲಿರುತ್ತವೆ.. ಇಲ್ಲಿ ಶಿವ ಇರ್ತಾನೆ ಮಗಾ..” ಎಂದ ಜೋರಾಗಿ ನಗುತ್ತಾ.

ಅಪ್ಪನಿಗೆ ಅಷ್ಟೊಂದು ನಗು ಏಕೆ ಬಂದಿದೆಯೋ ಸಾಯಿಗೆ ಅರ್ಥವಾಗಲಿಲ್ಲ. “ಮತ್ತ್ಯಾಕೆ.. ನನ್ನ ಕ್ಲಾಸಿನ ಗೆಳೆಯರು ನಮ್ಮ ಮನೆಗೆ ಬರಲ್ಲ” ಎಂದು ಕೇಳಿದ. ಅವನು ಏನೂ ಮಾತಾಡಲಿಲ್ಲ. ಮೌನವಾಗಿ ಚಿತೆಯನ್ನು ನೋಡುತ್ತಾ ಕುಳಿತುಕೊಂಡ. ಸಾಯಿ ಅವನ ಗದ್ದವನ್ನು ಹಿಡಿಕೊಂಡು ‘ಏನೂ ಮಾತಾಡ್ತಿಲ್ಲ’ ಎಂಬಂತೆ ನೋಡಿದ.
“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ. ಹೆಣದ ಸುತ್ತಲೂ ಕಟ್ಟಿಗೆ ಇಟ್ಟು ಸೌದೆ ಇಟ್ಟು ಅವುಗಳ ಮೇಲೆ ಸೀಮೆಎಣ್ಣೆ ಸುರುವಿದ. ಜ್ವಾಲೆಗಳು ಭುಗಿಲೆದ್ದವು ಉರಿ ಮೇಲೆದ್ದಿತು. ಖಾಲಿಯಾದ ಸರಾಯಿ ಬಾಟಲಿಯನ್ನು ಬೆಂಕಿಗೆಸೆದ. ಫಟ್ ಎಂದು ಅದು ಒಡೆದ ಸದ್ದು ಕೇಳಿಸಿತು.

ನಂತರ ಸಾಯಿಯನ್ನು ಎತ್ತಿಕೊಂಡು “ಇನ್ನೂ ಮೇಲೆ ಈ ಕಮಟು ವಾಸನೆ.. ನಮಗೆಬೇಡ. ನಡಿ ಮಲಗೋಣ ಬಾ. ಬರ್ತಾರೆ ಮಗಾ ನಮ್ಮನೆಗೆ ಬರ್ತಾರೆ ನಿಂಜೊತೆ ಆಟ ಆಡ್ತಾರೆ” ಎಂದು ಹೊಸ್ತಿ ಮೇಲೆ ಕುಳಿತು ತಮ್ಮಿಬ್ಬರನ್ನು ನೋಡುತ್ತಿದ್ದ ಹೆಂಡತಿಯ ಬಳಿ ಹೆಜ್ಜೆ ಹಾಕಿದ.
ಆ ಹೆಣದೊಂದಿಗೆ ಕತ್ತಲು ಕೂಡಾ ಸುಡತೊಡಗಿತು.

****

ಚೈತನ್ಯ ಪಿಂಗಳಿ

ವಿಜಯವಾಡ ಮೂಲದ ಚೈತನ್ಯ ಪಿಂಗಳಿ 2016ರ ಕೇಂದ್ರ ಸಾಹಿತ್ಯ ಯುವ ಪುರಸ್ಕಾರ ಪಡೆದ ಯುವ ಬರಹಗಾರ್ತಿ. ರಾಷ್ಟ್ರಧ್ವಜ ರೂಪಿಸಿದ ಮತ್ತು ಸ್ವತಂತ್ರ ಸಮರಯೋಧ ಪಿಂಗಳಿ ವೆಂಕಯ್ಯನವರ ಮರಿ ಮೊಮ್ಮಗಳು. ತೆಲಂಗಾಣ ಸೊಗಡಿನಿಂದ ಯಶಸ್ವೀ ಸಿನೆಮಾ ‘ಫಿದಾ’ ಗೆ ಇವರು ಬರೆದಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ವಾಸ.