ಶ್ರೀದೇವಿಯ ಸರದಿ ಬಂದಾಗ, ಜ್ಯೋತಿಷಿ ಸ್ವಲ್ಪ ಗಂಭೀರವಾಗಿ, `ಮದುವೆ ನಿನಗೆ ಒಳ್ಳೆಯದು ಮಾಡಲ್ಲ. ನಿನ್ನ ಗಂಡನಾಗುವನಿಗೆ ಆಯಸ್ಸು ಕಡಿಮೆ ಆಗುತ್ತೆ’ ಎಂದ. ಹುಡುಗಿಯರೆಲ್ಲಾ ಶ್ರೀದೇವಿಗೆ ಸಮಾಧಾನ ಮಾಡಿ ಯಾವ ಜ್ಯೋತಿಷಿಯನ್ನೂ ನಂಬಲಾಗುವುದಿಲ್ಲ ಎಂದು ಸಮಾಧಾನ ಮಾಡಿದರು. ಅಷ್ಟಕ್ಕೂ ಅಲ್ಲಿ ಯಾರಿಗೂ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲ; ಒಂದಿಬ್ಬರು ಹುಡುಗಿಯರು ತಮಾಶೆ ನೋಡೋಣ ಎಂದು ಬಾಯಿಗೆ ಬಂದ ವಿವರವನ್ನು ಕೊಟ್ಟಿದ್ದರು. ಸ್ವಲ್ಪ ದಿನದಲ್ಲಿ ಅವನು ಹೇಳಿದ್ದನ್ನೆಲ್ಲಾ ಮರೆತರು.
ಇ.ಆರ್.ರಾಮಚಂದ್ರನ್ ಆಪ್ತ ಬರಹ.

ಸಾವಿರದೊಂಬೈನೂರ ಎಪ್ಪತ್ತೈದರ ಆಜುಬಾಜು ನಾವು ದೆಹಲಿಯಲ್ಲಿದ್ದಾಗ, ಶಂಕರ್ ಮತ್ತು ಪದ್ಮ ಸರ್ವೋದಯ ಎನ್ ಕ್ಲೇವಿನ ಬಡಾವಣೆಗೆ ನಮ್ಮ ಹಿಂದಿನ ರಸ್ತೆಯಲ್ಲಿ ಬಾಡಿಗೆಗೆ ಇರಲು ಬಂದರು. ನಮಗೆ ಸ್ನೇಹಿತರಾಗಿದ್ದ ಆರ್ಥಿಕಶಾಸ್ತ್ರ ತಜ್ಞ ಡಾ. ಪಾಲ್ವಿಯಾ ಅವರ ಮನೆಯಲ್ಲಿ ನಾವೇ ಹೇಳಿ ಅವರನ್ನು ಗುರ್ತು ಮಾಡಿಸಿ ಎರಡನೇ ಮಹಡಿಯಲ್ಲಿ (ಬರ್ಸಾತಿ) ಇರಲು ಬಂದರು. ಶಂಕರ್ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಡಿಪಾರ್ಟ್ ಮೆಂಟಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರಾಗಿದ್ದನು. ಪದ್ಮ ಮೈಸೂರಿನ ಹುಡುಗಿ. ಅವರ ತಂದೆ ಮೈಸೂರಿನ ಕೆ ಆರ್ ಎಸ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪದ್ಮಳಿಗೆ ರೂಪದ ಜೊತೆಗೆ ದೇವರು ಒಳ್ಳೆ ಕಂಠ ಕೊಟ್ಟಿದ್ದ. ಪದ್ಮ ಹಾಡಿದ ‘ಪೂಜಿಸಲೆಂದೇ ಹೂಗಳ ತಂದೆ…’ ಹಾಡನ್ನು ಕೇಳಿ ಶಂಕರ್ ಅಲ್ಲೇ ಅವಳ ಬಲೆಗೆ ಬಿದ್ದಿದ್ದ. ಮದುವೆ ಮಾಡಿಕೊಂಡು ದೂರದ ದೆಹಲಿಗೆ ಬಂದಿದ್ದಳು ಪದ್ಮ.

ಪಂಜಾಬಿ, ಹಿಂದಿ ಮಧ್ಯೆ ಕನ್ನಡ ಮಾತನಾಡುವರು ಪಕ್ಕದಲ್ಲೇ ಇರುವುದು ಅವರಿಗೆ ಬಹಳ ಇಷ್ಟವಾಯಿತು. ನಾವು ದೆಹಲಿಗೆ ಒಂದೆರೆಡು ವರ್ಷ ಮುಂಚೆ ಬಂದಿದ್ದರಿಂದ ಸುಮಾರು ವಿಷಯದಲ್ಲಿ ಅವರಿಗೆ ತಿಳುವಳಿಕೆ ಕೊಟ್ಟೆವು. ದೆಹಲಿ ಬಹಳ ಸುಂದರವಾದ ನಗರ. ಅಲ್ಲಿಯ ಪಾರ್ಕುಗಳು, ನೋಡಲು ಇರುವ ಜಾಗಗಳು ಬಹುಷಃ ಭಾರತದಲ್ಲಿ ಬೇರೆ ಎಲ್ಲಾದರೂ ಇರುವುದು ಸಂದೇಹವೇ. ಅದರ ಜೊತೆಗೆ ಅಲ್ಲಿಯ ಹವಾಮಾನ ಎರಡು ಪಕ್ಕದಲ್ಲೂ ವಿಪರೀತಕ್ಕೆ ಹೋಗುತ್ತೆ. ಚಳಿಗಾಲದಲ್ಲಿ ಮೈ ಕೊರೆಯುವ ಚಳಿ. ಮನೆಯಿಂದ ಹೊರಕ್ಕೆ ಬರುವುದು ದೊಡ್ಡ ಸಾಹಸವೇ ಸರಿ. ಬಿಸಿಲುಗಾಲದಲ್ಲಿ ಕೆಂಡದಂತ ಬಿಸಿಲಿನ ಜೊತೆ ‘ಲೂ’ ಎಂದು ಕರೆಯುವ ಬಿಸಿ ಗಾಳಿ. ಈ ತರಹ ಹವಾಮಾನ ನಮ್ಮ ಕಡೆ ನೋಡುವುದು ಇರಲಿ ಕೇಳಿರಲಿಕ್ಕೂ ಸಾಧ್ಯವಿಲ್ಲ. ಈ ವಿಪರೀತ ಹವೆಗೆ ಸರಿಯಾಗಿ ತಯಾರಾಗದಿದ್ದರೆ ಜ್ವರ ಬೀಳುವುದರ ಜೊತೆಗೆ ಹೆಚ್ಚು ಕಡಿಮೆ ಏನಾಗುವುದಕ್ಕೂ ಸಾಧ್ಯ. ಚಳಿಗಾಲಕ್ಕೆ ಬೇಕಾಗುವ ರಜಾಯಿ ಎಲ್ಲಿ ಸಿಗುತ್ತೆ, ಅದರ ಜೊತೆಗೆ ಮೈ ಕೈ ಗೆ ಬಿಸಿಬರುವುದಕ್ಕೆ ಸಾಸುವೆ ಎಣ್ಣೆ ಹಚ್ಚಿಕೊಳ್ಳುವುದು, ಬೇಸಿಗೆಯಲ್ಲಿ ಮಶಿನ್ ಕಾ ಪಾನಿ – ತಣ್ಣಗಿರುವ ನೀರು, ಲಸ್ಸಿ ಸಿಗುವ ಅಂಗಡಿಗಳು ತೋರಿಸಿಕೊಟ್ಟೆವು. ಇದರ ಜೊತೆ ಒಟ್ಟಿಗೆ ಪದಬಂದದ ಆಟ ‘ಸ್ಕ್ರಾಬಲ್’, ಕೇರಮ್ ಕೂಡ ಜೊತೆಯಲ್ಲಿ ಆಡುತ್ತಿದ್ದೆವು.

ಅವರ ಜೊತೆ ಸೇರಿ ಐಐಟಿಯ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುತ್ತಿದ್ದವು. ಒಂದು ಸರ್ತಿ ಕನ್ನಡದ ಜಾನಪದ ಗೀತೆಗಳನ್ನು ಒಟ್ಟಾಗಿ ಸಮೂಹದಲ್ಲಿ ಹಾಡಿದ್ದೆವು. ‘ಮುಂಜಾನೆದ್ದು ಕುಂಬಾರಣ್ಣ….’ ‘ಹಾಲು ಹಾಲೆಂದು..’ ಮುಂತಾದ ಹಾಡುಗಳನ್ನು ಕನ್ನಡದ ಕೂಟದಲ್ಲಿ ಹಾಡಿದೆವು. ಕಾರ್ಯಕ್ರಮದಲ್ಲಿ ನಾಟಕವೂ ಇತ್ತು.
***
ಶಂಕರ್ ನ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ತಂದೆ ಎ.ಜಿ.ಸ್ ಆಫೀಸಿನ ಕೆಲಸದಿಂದ ನಿವೃತ್ತಿಯಾಗಿ ಜಯನಗರದಲ್ಲಿ ಮನೆಮಾಡಿಕೊಂಡಿದ್ದರು. ಅವರಿಗೆ ಇದ್ದ ವ್ಯಥೆ ಎಂದರೆ ಇದ್ದ ಎರಡು ಮಕ್ಕಳಲ್ಲಿ, ಅವರ ಮಗಳು ಶಂಕರನ ಅಕ್ಕ ಶ್ರೀದೇವಿಗೆ, ಮದುವೆ ಆಗದೆ ಇನ್ನೂ ಮನೆಯಲ್ಲೇ ಉಳಿದುಕೊಂಡಿದ್ದಳು. ಬಿ.ಎಡ್. ಮಾಡಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಶ್ರೀದೇವಿಗೆ ಯಾವುದರಲ್ಲೂ ಕಡಿಮೆ ಇರಲಿಲ್ಲ. ಶಂಕರ್ ತೋರಿಸಿದ ಫೋಟೊದಲ್ಲಿ ಬಹಳ ರೂಪವತಿಯಾಗಿಲ್ಲದಿದ್ದರೂ, ತೆಗೆದು ಹಾಕುವ ಹಾಗಿರಲಿಲ್ಲ. ಲಕ್ಷಣವಾದ ಮೈಕಟ್ಟು, ಕಾಂತಿಯುತ ಮುಖ, ಚೆನ್ನಾಗಿ ಓದಿದವಳು, ಓದಿನ ಜೊತೆ ಹಾಡು, ಕಸೂತಿಯಲ್ಲಿ ಎತ್ತಿದ ಕೈ. ಇಷ್ಟಾಗಿಯೂ ಯಾಕೆ ಮದುವೆಯಾಗಿಲ್ಲ? ಎಂದು ಕೇಳಿದ್ದಕ್ಕೆ ಶಂಕರ್ ತಮ್ಮ ಮನಸ್ಸಿನ ದುಗುಡವನ್ನು ಹಂಚಿಕೊಂಡಿದ್ದ.

ಸ್ವಲ್ಪ ವರ್ಷಗಳ ಹಿಂದೆ ಶ್ರೀದೇವಿ ಅವಳ ಸ್ನೇಹಿತೆಯ ಮನೆಗೆ ಹೋದಾಗ, ಅಲ್ಲಿ ಒಬ್ಬ ಜ್ಯೋತಿಷಿ ಬಂದಿದ್ದನಂತೆ. ಹೆಸರು, ಹುಟ್ಟಿದ ಘಳಿಗೆ, ದಿವಸ ಹೇಳಿದರೆ ಅವನು ಜಾತಕ ಅಲ್ಲೇ ಮಾಡಿ, ನೋಡಿ ಮುಂದಾಗುವುದನ್ನು ತಿಳಿಸುತ್ತಾನಂತೆ ಎಂದು ಗೊತ್ತಾಗಿ ಅಲ್ಲಿದ್ದ ಹುಡುಗಿಯರೆಲ್ಲಾ ತಾಮುಂದು ನಾಮುಂದು ಎಂದು ಭವಿಷ್ಯವನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದರು. ಶ್ರೀದೇವಿ ವಿವರಗಳನ್ನು ಕೊಟ್ಟು ಅವಳ ಸರದಿ ಬಂದಾಗ, ಜ್ಯೋತಿಷಿ ಸ್ವಲ್ಪ ಗಂಭೀರವಾಗಿ ಮದುವೆ ನಿನಗೆ ಒಳ್ಳೆಯದು ಮಾಡಲ್ಲ. ನಿನ್ನ ಗಂಡನಾಗುವನಿಗೆ ಆಯಸ್ಸು ಕಡಿಮೆ ಆಗುತ್ತೆ ಎಂದ. ಹುಡುಗಿಯರೆಲ್ಲಾ ಶ್ರೀದೇವಿಗೆ ಸಮಾಧಾನ ಮಾಡಿ ಯಾವ ಜ್ಯೋತಿಷಿಯನ್ನೂ ನಂಬಲಾಗುವುದಿಲ್ಲ ಎಂದು ಸಮಾಧಾನ ಮಾಡಿದರು. ಅಷ್ಟಕ್ಕೂ ಅಲ್ಲಿ ಯಾರಿಗೂ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲ; ಒಂದಿಬ್ಬರು ಹುಡುಗಿಯರು ತಮಾಶೆ ನೋಡೋಣ ಎಂದು ಬಾಯಿಗೆ ಬಂದ ವಿವರವನ್ನು ಕೊಟ್ಟಿದ್ದರು. ಸ್ವಲ್ಪ ದಿನದಲ್ಲಿ ಅವನು ಹೇಳಿದ್ದನ್ನೆಲ್ಲಾ ಮರೆತರು.

ಆದರೆ ಶ್ರೀದೇವಿ ಮರೆಯಲಿಲ್ಲ. ಅದು ಮನಸ್ಸಿನಲ್ಲೇ ಇದ್ದು ಅದು ಬೇರು ಬಿಟ್ಟು ಹೊರಗೆ ಬರಲಾರಂಬಿಸಿತು. ಅವಳ ತಂದೆ ತಾಯಿಗೆ ಸ್ವಲ್ಪ ಗಾಬರಿಯಾದರೂ ಅದನ್ನು ತೋರಿಸಿಕೊಳ್ಳದೆ ಇದೆಲ್ಲ ನಂಬುವುದು ಕಷ್ಟ. ಒಬ್ಬೊಬ್ಬ ಜ್ಯೋತಿಷಿಯೂ ತನಗೆ ತೋಚಿದ್ದು ಹೇಳುತ್ತಾನೆ, ಬೇರೆಯವರಿಗೆ ತೋರಿಸುವಾ ಅಂದರು. ಮಗಳು ಅದಕ್ಕೆ ಒಪ್ಪಲಿಲ್ಲ. ಇದನ್ನು ಅವಳೂ ಮರೆತುಬಿಡುತ್ತಾಳೆ ಎಂದುಕೊಂಡರು. ಆದರೆ ಹಾಗಾಗಲಿಲ್ಲ. ಅವಳನ್ನು ನೋಡಲು ಬಂದ ಹುಡುಗರಿಗೆ, ಎಲ್ಲರಿಗೂ ಅವರ ಜೋಡಿ ಇಷ್ಟವಾಗಿ ಕೊನೆಗೆ ಜೊತೆಗೆ ಮಾತನಾಡಲಿ ಎಂದು ಇಬ್ಬರನ್ನೇ ಜೊತೆಗೆ ಬಿಟ್ಟಾಗ, ಶ್ರೀದೇವಿ ಜ್ಯೋತಿಷಿ ತನಗೆ ಹೇಳಿದ ಭವಿಷ್ಯವನ್ನು ಹುಡುಗನಿಗೆ ಹೇಳುತ್ತಿದ್ದಳು. ಇದನ್ನು ಕೇಳಿ ಯಾವ ವರ ಅವಳನ್ನು ಮದುವೆ ಮಾಡಿಕೊಳ್ಳಲು ಮುಂದೆ ಬರುತ್ತಾನೆ, ನೀವೇ ಹೇಳಿ? ತಂದೆ ತಾಯಿಗೆ ಶ್ರೀದೇವಿಯೇ ಹೇಳಿದಳು; ಇದನ್ನು ನಾನು ಮುಚ್ಚಿಡುವುದಿಲ್ಲ.. ನನಗೆ ಗೊತ್ತಿದ್ದನ್ನು ಅವರಿಗೆ ಮುಚ್ಚುಮರೆಯಿಲ್ಲದೆ ಹೇಳೇ ಹೇಳುತ್ತೀನಿ, ಅಷ್ಟಕ್ಕೂ ಅವರ ಜೀವನದ ಪ್ರಶ್ನೆ.. ಜೀವನ ಮರಣದ ಪ್ರಶ್ನೆ ಎಂದು ಅವರ ಬಾಯಿ ಮುಚ್ಚಿಸುತ್ತಿದ್ದಳು. ಕೊನೆಗೆ ಬಂದ ಹುಡುಗರು ಹೆದರಿ ದುರ್ಧಾನ ತೊಗೊಂಡವರಂತೆ ತಕ್ಷಣ ಹೊರಟುಬಿಡುತ್ತಿದ್ದರು.. ಇದರಿಂದ ಅವರೆಲ್ಲರ ಜೀವನದಲ್ಲಿ ಕರೀಛಾಯೆಯ ಮಬ್ಬು ಕವಿದು ಬಿಟ್ಟಿತ್ತು.

ಹೀಗೆ ಹತಾಶರಾಗಿದ್ದಾಗ ಒಂದು ಒಳ್ಳೆ ಸಂಬಂಧ ಬಂತು; ಹುಡುಗ ಅಮೆರಿಕಾದಲ್ಲಿ ಭಾರತದ ಫಾರಿನ್ ಅಫೇರ್ಸ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ. ಕೈತುಂಬ ಡಾಲರ್ ನಲ್ಲಿ ಸಂಬಳ. ರಮೇಶ ಇಷ್ಟು ವರ್ಷ ಮದುವೆಯಾಗದಿದ್ದಕ್ಕೆ ಬಹಳ ಕಾರಣಗಳಿದ್ದವು. ಮೊದಲನೆಯದು ಅವನ ಕೆಲಸ. ಫಾರಿನ್ ಸರ್ವಿಸ್ನಲ್ಲಿದ್ದ ರಮೇಶನಿಗೆ ಯಾವಾಗಲೂ ದೇಶದ ಹೊರಗೆ ಪೋಸ್ಟಿಂಗ್ ಇರುತ್ತಿತ್ತು. ರಮೇಶನ ತಂದೆ ಸುಬ್ಬರಾಯರು ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ರಿಟೈರಾದ ಸ್ವಲ್ಪ ದಿವಸದಲ್ಲೇ ಹಾರ್ಟ್ ಅಟ್ಯಾಕ್ ನಲ್ಲಿ ಹೋಗಿ ಬಿಟ್ಟರು. ತಾಯಿ, ಸರಸ್ವತಮ್ಮ ಒಬ್ಬರೇ ಬೆಂಗಳೂರಿನಲ್ಲಿ ಮಲ್ಲೇಶ್ವರದಲ್ಲಿ ಇದ್ದರು. ವರ್ಷಕ್ಕೆ ಎರಡು ಸರ್ತಿ ಹೇಗೋ ಎರಡು ವಾರ ರಜೆ ಮಾಡಿ ರಮೇಶ ತಾಯಿಯ ಜೊತೆ ಇರುತ್ತಿದ್ದ.

ತಾಯಿಗೂ ಉಬ್ಬಸದಿಂದ ಓಡಾಡಲು ತೊಂದರೆಯಾಗಿತ್ತು. ಒಬ್ಬ ನಂಬಿಕಸ್ತಳನ್ನು ನೋಡಿಕೊಳ್ಳುವುದಕ್ಕೆ ಮನೆಯಲ್ಲಿ ನೇಮಿಸಿದ್ದ. ಮಗನಿಗೆ ಮದುವೆ ಮಾಡಿಕೊಳ್ಳಲು ಎಷ್ಟು ಒತ್ತಾಯಿಸಿದರೂ ಮುಂದೂಡತ್ತಲೇ ಬರುತ್ತಿದ್ದ. ಕೊನೆಗೆ ಅಮ್ಮ ಅನ್ನ ಸತ್ಯಾಗ್ರಹದ ಬೆದರಿಕೆ ಹಾಕಿದಾಗ, ಅವರ ಒತ್ತಾಯಕ್ಕೆ ಮದುವೆಗೆ ಒಪ್ಪಿದ. ಅವನಿಗೆ ಹೆಣ್ಣು ನೋಡುವುದೂ ಇಷ್ಟವಿರಲಿಲ್ಲ. ತಾಯಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ರಮೇಶ ಒಬ್ಬನೇ ಅವರ ಮನೆಗೆ ಹೋಗಿ ಶ್ರೀದೇವಿಯನ್ನು ನೋಡಿದ. ಅಪ್ಪ, ಅಮ್ಮ ಎಷ್ಟು ಹೇಳಿದರೂ ಕೇಳದೆ ಅವರಿಬ್ಬರೇ ಇದ್ದಾಗ ಶ್ರೀದೇವಿ ಹುಡುಗನ ಆಯಸ್ಸಿನ ಬಗ್ಗೆ ಹೇಳಿದಳು. ರಮೇಶ ಜೋರಾಗಿ ನಕ್ಕುಬಿಟ್ಟು ಹೊರಗೆ ಬಂದು ತನಗೆ ಇದರಲ್ಲಿ ಏನೂ ನಂಬಿಕೆ ಇಲ್ಲವೆಂದು ಹೇಳಿ ಮದುವೆ ಯಾವಾಗ ಮಾಡ್ತೀರಿ ಎಂದು ಅವಳ ತಂದೆ ತಾಯಿಯನ್ನು ಕೇಳಿದ. ಶ್ರೀದೇವಿಯ ಮದುವೆ ವಿಷಯ ಯೋಚಿಸಿ ಸೋತು ಸುಣ್ಣವಾಗಿದ್ದ ಅವಳ ತಂದೆ ತಾಯಿಗೆ ಇದನ್ನು ನಂಬಲಿಕ್ಕೆ ಸಾಧ್ಯವೇ ಆಗಲಿಲ್ಲ. ದೇವರ ಹಾಗೆ ಬಂದು ಮಗಳ ಜೊತೆ ಮದುವೆಗೆ ಸಿದ್ಧನಾದ ರಮೇಶನ ಮೇಲೆ ಅವರಿಗೆ ಅಭಿಮಾನದಿಂದ ಕಣ್ಣಾಲಿಗಳು ತುಂಬಿ ಬಂದವು. ಅವರ ಕೈ ಹಿಡಿದು ಅವನೇ ಅವರಿಗೆ ಸಮಾಧಾನ ಮಾಡಿದ. ಇದೆಲ್ಲಾ ತಿಳಿದೂ ತನ್ನನ್ನು ಮದುವೆ ಆಗುವುದಕ್ಕೆ ನಿಂತಿರುವುದನ್ನು ನೋಡಿ, ಶ್ರೀದೇವಿಗೆ ಅತ್ಯಂತ ಸಂತೋಷವಾಯಿತು. ರಮೇಶನ ಮೇಲೆ ಪ್ರೀತಿಯ ಜೊತೆಗೆ ಗೌರವವೂ ಉಂಟಾಯಿತು. ಹೆದರಿ ಓಡಿ ಹೋಗುತ್ತಿದ್ದ ಹುಡುಗರ ಮಧ್ಯೆ ರಮೇಶ ನಿಜವಾದ ಹೀರೊ ಹಾಗೆ ಅವಳಿಗೆ ಕಾಣಿಸಿದ.

ತಾಯಿಗೆ ಬಂದು ಆದದ್ದನ್ನು ತಿಳಿಸಿದ. ಮನಸ್ಸಿಗೆ ಸ್ವಲ್ಪ ದುಗುಡವಾದರೂ ಸರಸ್ವತಮ್ಮನಿಗೆ ಮಗ ಮದುವೆಗೆ ಒಪ್ಪಿದ್ದು ಇಷ್ಟವಾಯಿತು. ರಮೇಶನಿಗೆ ಯಾವ ಕಾಹಿಲೆಯ ಸೋಂಕೂ ಇರಲಿಲ್ಲ. ಫಾರಿನ್ ಆಫೀಸಿನಲ್ಲಿ ಕೆಲಸವಾದುದ್ದರಿಂದ ಅವನಿಗೆ ಪ್ರತಿ ವರ್ಷವೂ ದೆಹಲಿಯಲ್ಲಿ ಸುದೀರ್ಘವಾದ ಮೆಡಿಕಲ್ ಬೋರ್ಡ್ ಮುಂದೆ ಅವನ ಚೆಕಪ್ ನಡೆಯುತ್ತಿತ್ತು. ಅವನಿಗೆ ಯಾವ ಅನಾರೋಗ್ಯದ ಛಾಯೆಯೂ ಇರಲಿಲ್ಲ. ಸ್ವತಃ ಕ್ರೀಡಾಪಟುವಾದ ರಮೇಶ ಆಟದ ಜೊತೆ ಜಿಮ್ ಗೆ ಹೋಗಿ ಅಂಗಸೌಷ್ಟವವನ್ನು ಕಾಪಾಡಿಕೊಂಡು ಬಂದಿದ್ದ. ಒಟ್ಟಿನಲ್ಲಿ ಮಗ ಸಂಸಾರಿಯಾಗುವುದಕ್ಕೆ ಒಪ್ಪಿದನಲ್ಲಾ, ಅದೇ ದೊಡ್ಡ ವಿಷಯ ಎಂದು ಬಸವನಗುಡಿಯ ದೊಡ್ಡ ಗಣಪತಿಯ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿ ಕಾಯಿ ಒಡೆದು ಬಂದರು ಅಮ್ಮ, ಮಗ.

ಶ್ರೀದೇವಿಯನ್ನು ಕರೆದುಕೊಂಡು ಅವಳ ತಂದೆ ತಾಯಿ ರಮೇಶನ ಮನೆಗೆ ಹೋಗಿ ಸರಸ್ವತಮ್ಮನಿಗೆ ತೋರಿಸಿ ಬಂದರು. ಮಗ ಒಪ್ಪಿದ ಕನ್ಯೆಗೆ ಅವರೂ ಮೆಚ್ಚಿದರು. ಮಧ್ಯಮ ಮರ್ಗದ ಸುಸಂಸ್ಕೃತ ಕುಲದವರನ್ನು ಕಂಡು ಅವರಿಗೂ ಸಂತೋಷವಾಯಿತು.

ಶ್ರೀದೇವಿಯ ಮದುವೆ ವಿಷಯ ಯೋಚಿಸಿ ಸೋತು ಸುಣ್ಣವಾಗಿದ್ದ ಅವಳ ತಂದೆ ತಾಯಿಗೆ ಇದನ್ನು ನಂಬಲಿಕ್ಕೆ ಸಾಧ್ಯವೇ ಆಗಲಿಲ್ಲ. ದೇವರ ಹಾಗೆ ಬಂದು ಮಗಳ ಜೊತೆ ಮದುವೆಗೆ ಸಿದ್ಧನಾದ ರಮೇಶನ ಮೇಲೆ ಅವರಿಗೆ ಅಭಿಮಾನದಿಂದ ಕಣ್ಣಾಲಿಗಳು ತುಂಬಿ ಬಂದವು. ಅವರ ಕೈ ಹಿಡಿದು ಅವನೇ ಅವರಿಗೆ ಸಮಾಧಾನ ಮಾಡಿದ. ಇದೆಲ್ಲಾ ತಿಳಿದೂ ತನ್ನನ್ನು ಮದುವೆ ಆಗುವುದಕ್ಕೆ ನಿಂತಿರುವುದನ್ನು ನೋಡಿ, ಶ್ರೀದೇವಿಗೆ ಅತ್ಯಂತ ಸಂತೋಷವಾಯಿತು.

ರಜೆಯಿಲ್ಲದ ಕಾರಣ ಬರುವ ಭಾನುವಾರ ವಧುವಿನ ಮನೆಯಲ್ಲೇ ಮದುವೆಯನ್ನು ಇಟ್ಟುಕೊಂಡರು. ಆಪ್ತ ಸ್ನೇಹಿತರು ಹತ್ತಿರದ ಸಂಬಂಧದವರ ಸಮ್ಮುಖದಲ್ಲಿ ರಮೇಶ, ಶ್ರೀದೇವಿಯನ್ನು ಮದುವೆಯಾದ. ಮಾರನೆಯ ದಿನ ಹೋಟೆಲ್ ನಲ್ಲಿ ರಿಸೆಪ್ಷನ್ ಇಟ್ಟುಕೊಂಡರು. ರಮೇಶ ಫೋನಿನಲ್ಲಿಯೇ ಎಲ್ಲಾ ಕಡೆ ಮಾತನಾಡಿ, ಶ್ರೀದೇವಿಯ ಪಾಸ್ಪೋರ್ಟ್, ವೀಸಾ ಎಲ್ಲವೂ ಮನೆಗೆ ತಲುಪಿಸಲು ಹೇಳಿದ. ಅಳಿಯನ ಒಂದು ಫೋನ್ ಕಾಲಿನಲ್ಲಿ ಎಷ್ಟು ಪ್ರಭಾವ ಇದೆ ಎಂದು ಸರಸ್ವತಮ್ಮನಿಗೆ ಗೊತ್ತಾಯಿತು..

ಮದುವೆಯಾದ 15 ದಿನದಲ್ಲಿಯೇ ದಂಪತಿಗಳು ಅಮೆರಿಕಕ್ಕೆ ಹೊರಟರು. ದಾರಿಯಾದ ದೆಹಲಿಗೆ ಬಂದು ನಾಲ್ಕು ದಿನವಿದ್ದರು. ಅವರು ಒಂದು ದಿನ ಅವರ ಸಹೋದ್ಯೋಗಿಗಳು ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹೊರತು ಮಿಕ್ಕ ದಿನಗಳು ನಮ್ಮಿಬ್ಬರ ಮನೆಯಲ್ಲಿ ಪಾರ್ಟಿ, ಊಟಗಳಲ್ಲಿ ಕಳೆಯತು. ಅದರಲ್ಲಿ ಮುಖ್ಯವಾಗಿ ನಾವು ಕಂಡಿದ್ದು ರಮೇಶ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದ ಎಂದು. ಗಂಭೀರ ಸ್ವಭಾವದ ಅವನ ಹೆಂಡತಿಯನ್ನು ಮಾತು ಮಾತಿಗೆ ತಮಾಷೆ ಮಾಡಿ ನಗುಸುತ್ತಿದ್ದ. ದೆಹಲಿಯಲ್ಲಿ ಎಲ್ಲಾಕಡೆ ಸುತ್ತಾಡಿಸಿದೆವು, ಅವರಿಬ್ಬರೂ ಆಗ್ರಾಗೆ ಹೋಗಿ ತಾಜ್ ಮಹಲ್ ಮುಂದೆ ಫೋಟೋ ತೆಗೆಸಿಕೊಂಡರು. ಅದನ್ನು ಜಂಭದಿಂದ ರಮೇಶ ನಮಗೆಲ್ಲಾ ತೋರಿಸಿದ. ಅಕ್ಕ ಕೊನೆಗೂ ಸಂತೋಷದಿಂದ ಇರುವುದು ಕಂಡು ಶಂಕರ್ ದೇವರನ್ನು ಸ್ಮರಿಸಿದ. ಪದ್ಮಾಗೂ ಅವರ ಜೋಡಿ ಇಷ್ಟವಾಯಿತು.

ವಾಶಿಂಗ್ಟನ್ ಡಲೆಸ್ ಏರ್ ಪೋರ್ಟಿನಲ್ಲಿ ಅವನ ಸಹೋದ್ಯೋಗಿಗಳು ಇಬ್ಬರನ್ನೂ ಬರಮಾಡಿಕೊಂಡರು. ತನ್ನ ಮನೆಯನ್ನೇ ಗುರ್ತು ಹಿಡಿಯಲಾಗದ ಹಾಗೆ ಸ್ನೇಹಿತರು ಸುಸಜ್ಜಿತ ಮಾಡಿದ್ದನ್ನು ಕಂಡು ರಮೇಶ ಬೆರಗಾದ. ವಾರಾದ್ಯಂತದಲ್ಲಿ ರಮೇಶ ಶ್ರೀದೇವಿಗೆ ವಾಶಿಂಗ್ಟನ್, ನ್ಯೂಯಾರ್ಕ್, ನ್ಯೂಇಂಗ್ಲೆಂಡ್ ಜಾಗಗಳನ್ನು ಸುತ್ತಾಡಿಸಿದ. ಶ್ರೀದೇವಿ ಹಳ್ಳಿಯವಳಲ್ಲವಾದರೂ, ಬೇರೆ ಬೇರೆ ದೇಶದವರು ಸೇರುವ ಸಂದರ್ಭದಲ್ಲಿ ಅಲ್ಲಿಯ ರೀತಿ ರಿವಾಜಿಗೆ ಹೊಸಬಳು. ದೊಡ್ಡ ಭೋಜನ ಕೂಟದಲ್ಲಿ ಹೇಗೆ ಹೋಗಬೇಕು, ಏನು ಮಾತನಾಡಬೇಕು, ಹೇಗೆ ಊಟ ಮಾಡಬೇಕು ಎಂದು ಹೆಂಡತಿಗೆ ತೋರಿಸಿಕೊಟ್ಟ. ವಯಸ್ಸಿನಲ್ಲಿ ಅವರಿಗೆ ತಡವಾಗಿ ಮದುವೆಯಾಗಿತ್ತು ನಿಜ, ಆದರೆ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು.

ಸ್ವಲ್ಪ ತಿಂಗಳಲ್ಲಿ ಶ್ರೀದೇವಿ ಬಸುರಿಯಾಗಿದ್ದಾಳೆಂದು ಗೊತ್ತಾಯಿತು. ವಯಸ್ಸಾದ ಶ್ರೀದೇವಿ ಬೇಗ ಬಸುರಿಯಾಗಿದ್ದು ಒಳ್ಳೆಯದೆಂದು ಎಲ್ಲರಿಗೂ ಅನ್ನಿಸಿತು. ಬೆಂಗಳೂರಿನಲ್ಲಿ ಇಬ್ಬರ ಮನೆಯಲ್ಲೂ ಸಂತಸದ ಹೊಳೆ ಹರಿಯಿತು. ರಮೇಶ, ಶ್ರೀದೇವಿಯನ್ನು ಬೆಂಗಳೂರಲ್ಲಿ ಬಿಟ್ಟು ವಾಪಸ್ಸು ವಾಷಿಂಗ್ಟನ್ನಿಗೆ ಹೋದ.

***
ಈ ಮದ್ಯೆ ದೆಹಲಿಯ ಐಐಟಿ ಕನ್ನಡ ಸಂಘಕ್ಕೆ ನಾವೆಲ್ಲಾ ಸೇರಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಕನ್ನಡದ ಜಾನಪದ ಹಾಡುಗಳು, ನಾಟಕ, ನೃತ್ಯ ಇತ್ಯಾದಿ… ನಾವೆಲ್ಲರೂ ಒಟ್ಟಿಗೆ ಸೇರಿ ನಮ್ಮ ಮನೆಗಳ ಹತ್ತಿರವಿದ್ದ ಐಐಟಿಗೆ ಹೋಗಿ ನಿತ್ಯ ಅಭ್ಯಾಸ ಮಾಡುತ್ತಿದ್ದೆವು. ನಾಟಕದ ಖಯಾಲಿಯಿದ್ದ ಶಂಕರ್, ನಾಯಕನ ಪಾತ್ರ ವಹಿಸಿದ. ಶಂಕರ್ ಗೆ ಆವಾಗಲೇ ಮರೆವಿನ ಜಾಡ್ಯ. ನಾಟಕದ ಸಾಲುಗಳನ್ನು ಆಗಾಗ್ಗೆ ಮರೆತು ಬಿಡುವ ಸ್ವಭಾವ. ಅವರೆಲ್ಲಾ ಅಭ್ಯಾಸ ಮಾಡುವಾಗ, ನಾನು ಶಂಕರ್ ಗೆ ‘ಪ್ರಾಮ್ಪ್ಟ್’ ಮಾಡುತ್ತಿದ್ದೆ. ಮರೆತಾಗ ಅಗಾಗ್ಗೆ ನನ್ನ ಕಡೆ ದೈನ್ಯ ದೃಷ್ಟಿಯಿಂದ ನೋಡುತ್ತಿದ್ದ. ನಾಟಕದ ಹೆಸರು ನನಗೆ ಮರೆತು ಹೋಗಿದೆ. ಅದರಲ್ಲಿ ಒಂದು ವಾಕ್ಯವಿತ್ತು. ಯಾರೋ ಮನೆ ಬಿಟ್ಟು ದೂರ ದೇಶಕ್ಕೆ ಹೋಗುವಾಗ, ಹಿರೊ ಅವರ ಜೊತೆ ಮಾತನಾಡುತ್ತಾ.. ‘ನೀವು ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೀರಿ…. ನಾವೆಲ್ಲಾ ನಿಮಗೆ ಬೇಡವಾದೆವೇ..?’ ಇದನ್ನು ಹೇಳುವಾಗಲೂ ಸ್ವಭಾವತಃ ನಗುವ ಸ್ವಭಾವನಾದ ಶಂಕರ್ ಇದನ್ನು ಹೇಳುವ ರೀತಿ ನನಗೆ ಸರಿಬೀಳಲಿಲ್ಲ. ನಾನು ಇದನ್ನು ಸಂದರ್ಭಕ್ಕೆ ಸರಿಯಾಗಿ ಭಾವನೆ ತೋರಿಸಬೇಕೆಂದು ಅವನಿಗೆ ಹೇಳುತ್ತಿದ್ದೆ.. ಅದರೂ ಅದು ಸರಿಯಾಗಿ ಮೂಡಿ ಬರುತ್ತಿರಲಿಲ್ಲ..

ಕಾರ್ಯಕ್ರಮದ ದಿವಸ ನಾವು ಅವರ ಮನೆಗೆ ಹೋದಾಗ, ಶಂಕರ್ ಪದ್ಮ ಮುಂಚೆಯೇ ಹೊರಟು ಬಿಟ್ಟಿದ್ದರು. ನಾವು ಐಐಟಿಗೆ ಸೇರುವಷ್ಟರಲ್ಲಿ ಕಾರ್ಯಕ್ರಮ ಶುರುವಾಯಿತು. ಯಾರೋ ಪ್ರಾರಂಭದ ಗೀತೆಯನ್ನು ಹಾಡುತ್ತಿದ್ದರು. ಮುಂದಿನದು ನಮ್ಮ ಜಾನಪದ ಹಾಡುಗಳು. ಎಲ್ಲರೂ ಒಬ್ಬರಿಗೊಬ್ಬರು ಶುಭ ಕೋರಿ ತಯಾರಾದೆವು. ಎಷ್ಟು ಅಭ್ಯಾಸ ಮಾಡಿದ್ದರೂ ಎದೆ ಢವಢವ ಎಂದು ಹೊಡೆದುಕೊಳ್ಳುತ್ತಿತ್ತು. ಶಂಕರ್ ಮತ್ತು ಪದ್ಮಾ ನಮ್ಮ ಪಕ್ಕದಲ್ಲೇ ಕೂರುವರಾಗಿದ್ದರಿಂದ ಕಣ್ಣಲ್ಲೇ ನಗುಸೂಸಿ ಕೂತೆವು. ನಾವು ಅಂದುಕೊಂಡಿದ್ದಕ್ಕಿಂತ ಹಾಡುಗಳು ಚೆನ್ನಾಗೇ ಬಂದವು.

ನಾಟಕ ಶುರುವಾದಾಗ, ಸ್ಟೇಜಿನ ಹಿಂದೆ ನಾನು ಪುಸ್ತಕವನ್ನಿಟ್ಟುಕೊಂಡು ಶಂಕರ್ ಗೆ ‘ಪ್ರಾಮ್ಪ್ಟ್’ ಮಾಡಲು ನಿಂತೆ. ಶಂಕರ್ ಎಂದಿಗಿಂತ ಜಾಗರೂಕತೆಯಿಂದ ಎಲ್ಲಾ ಲೈನುಗಳನ್ನು ಹೇಳುತ್ತ ಸೊಗಸಾಗಿ ಅಭಿನಯ ಮಾಡುತ್ತಿದ್ದ… ಅವನು, ‘ನೀವು ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೀರಿ…. ನಾವೆಲ್ಲಾ ನಿಮಗೆ ಬೇಡವಾದೆವೇ..?’ ಎಂದು ಹೇಳಿದಾಗ ಅವನ ಕಣ್ಣಂಚಿನಲ್ಲಿ ಹನಿಯಿತ್ತು.. ಗಂಟಲಿನಲ್ಲಿ ಮಾರ್ದವತೆ ಬಂದಿತ್ತು.. ನಾನು ಅವಕ್ಕಾದೆ..

ನಾಟಕ ಮುಗಿದು ನಾವು ಗ್ರೀನ್ ರೂಮಿಗೆ ಹೊರಟಾಗ ದೂರದಲ್ಲಿ ಅಲ್ಲಿ ಶಂಕರ್ ಮತ್ತು ಪದ್ಮ ನಿಂತಿದ್ದರು.. ಇಬ್ಬರ ಕೈಯಲ್ಲೂ ಸಣ್ಣ ಸೂಟ್ ಕೇಸುಗಳು.. ನಾಟಕದ ಡೈರೆಕ್ಟರ್ ಹೇಳಿದರು… ‘ಅವರ ಮನೆಯಲ್ಲಿ ಯಾರೋ ಹೋಗಿಬಿಟ್ಟರು ಅಂತ ಸುದ್ದಿ ಬಂತಂತೆ.. ಅದಕ್ಕೇ ಅವರ ಸೀನ್ ಮುಗಿಯುತ್ತಲೇ ಇಬ್ಬರೂ ಸ್ಟೇಷನ್ ಗೆ ಹೊರಟಿದಾರೆ…..’ ನಾವಿಬ್ಬರೇ ಅವರ ಜೊತೆ ಹೊರಗಡೆ ಟ್ಯಾಕ್ಸಿ ಹತ್ತಿರ ಬಂದಾಗ, ಶಂಕರ್ ಹೇಳಿದ..’ ರಮೇಶ್ ಹಾರ್ಟ್ ಅಟ್ಯಾಕಿನಲ್ಲಿ ಅಮೆರಿಕದಲ್ಲಿ ಹೋಗಿಬಿಟ್ಟರು. ನಿನ್ನೆ ರಾತ್ರಿ ನಮಗೆ ಟೆಲಿಗ್ರಾಂ ಬಂತು… ನಮಗೂ ಇನ್ನೂ ಪೂರ್ತಿಯಾಗಿ ಗೊತ್ತಿಲ್ಲ.. ಬಂದ ಮೇಲೆ ಮಾತನಾಡೋಣ’ ಎಂದು ಇಬ್ಬರೂ ಹೊರಟರು.
***
ಅಮೇರಿಕದಲ್ಲಿದ್ದ ರಮೇಶನಿಗೆ ಧಿಡೀರನೆ ಹಾರ್ಟ ಅಟ್ಯಾಕ್ ಆಗಿ ಹೋಗಿಬಿಟ್ಟರೆಂದು ಹೇಳಿದರೆ ಎಲ್ಲಿ ಕಾರ್ಯಕ್ರಮಕ್ಕೆ ತೊಂದರೆಯಾಗುತ್ತೋ ಎಂದು ಶಂಕರ್ ಮತ್ತು ಪದ್ಮ ನಮ್ಮನ್ನೂ ಭೇಟಿಯಾಗಲಿಲ್ಲ. ನಿತ್ಯವೂ ಪ್ರಾಕ್ಟೀಸಿಗೆ ಒಟ್ಟಿಗೆ ಹೋಗುತ್ತಿದ್ದವರು, ಕಾರ್ಯಕ್ರಮದ ದಿನ ಊರಿಗೆ ಹೋಗುವುದಕ್ಕೆ ಬಟ್ಟೆ ಬರೆ ಅಣಿಮಾಡಿಕೊಂಡು ಅವರು ಮುಂಚೆಯೇ ಹೊರಟುಹೋದರು. ಕಾರ್ಯಕ್ರಮದಲ್ಲಿ ಪೂರ್ತಿ ಭಾಗವಹಿಸಿ, ಅವರಿಂದ ಯಾವ ತೊಂದರೆಯೂ ಆಗದಂತೆ ಎಲ್ಲವನ್ನೂ ಯಶಸ್ವಿಯಾಗಿ ಮುಗಿಸಿದ್ದರು. ದಿನವಿಡೀ ಒಳಗೆ ಬೆಂಕಿಯ ಬೇಗುದಿ ಅವರ ಒಡಲನ್ನು ಸುಟ್ಟರೆ ಹೊರಗಡೆ ಒಪ್ಪಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ವಲ್ಪವೂ ಕುಂದು ಬರದಂತೆ ನಡೆದುಕೊಂಡು ಅತ್ಯಂತ ದುಖಃದಲ್ಲೂ ಆದರ್ಶಪ್ರಾಯದ ಸಹಜತೆ, ನಡತೆ ತೋರಿಸಿದ ಶಂಕರ್ ಮತ್ತು ಪದ್ಮ ದಂಪತಿಗಳನ್ನು ನಾವು ಎಂದಿಗೂ ಮರೆಯಲಾರೆವು…

ಶಂಕರ್ ಭಾವನಿಗೆ ಕೊಟ್ಟ ಕೊನೆಯ ಕಾಣಿಕೆಯೆಂದರೆ -ಕಣ್ಣಂಚಿಗಿದ್ದ ಎರಡು ಹನಿಗಳು. “ನೀವು ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೀರಿ…. ನಾವೆಲ್ಲಾ ನಿಮಗೆ ಬೇಡವಾದೆವೇ..?”