ಮಾಂಸ ಮತ್ತು ಸಸ್ಯ

ಸಾಬ್ರ ಪೊಗದಸ್ತಾದ ಮೇಕೆ;
ತೋಟದ ಬೇಲಿ
ಹಾಯ್ದು
ಭಟ್ರು ಬೆಳೆದ
ಸೊಂಪಾದ ತರಕಾರಿ ಬೆಳೆ
ಅದರ ಬಾಯಿಗೆ ಗುಳುಂ

ಹೀಗೇ
ನಾನು
ಬೋಟಿ ತಿಂದದ್ದು
ಇನ್ನೂ ಕರಗಿಲ್ಲ
ಅದು ಯದ್ವಾತದ್ವಾ
ಸಿಕ್ಕುಗಟ್ಟಿತ್ತು

ಹಾಗೇ
ನಾನು
ನಯವಾಗಿ
ಎಳೆಎಳೆ ಬಿಡಿಸುತ್ತಾ
ಕರುಳನ್ನು
ನೆಲದಲ್ಲಿ ನೆಡುತ್ತಿದ್ದೇನೆ
ಎಲೆ ಚಿಗುರಬಹುದು

ಮಗ ಮತ್ತೆ ಬರುತ್ತಿದ್ದಾನೆ
ಕಡಲಿನ ಜಲರಾಶಿಗಿಂತ
ಒಂದು ಹನಿ ಹೆಚ್ಚಾಗಿಯೆ
ನಿನ್ನ ಮಡಿಲಲಿ ತಲೆಯಿಟ್ಟು
ಭೋರ್ಗರೆಯುವ ದನಿಯಿಂದ
ಹೊಕ್ಕುಳಿನ ಆಳದಿಂದ
ಅತ್ತುಬಿಡಲು ಓಡಿ
ಬರುತ್ತಿರುವೆ….

ಪೇಟೆಗೆ ಹೋಗುವ, ಊರಿಗೆ
ಬರುವ ಗಡಿಬಿಡಿ ಜನರೇ
ನನಗೆ ತುಂಬಾ ಅರ್ಜೆಂಟಿದೆ
ಅವಳ ನೋಡಲು ದಯವಿಟ್ಟು
ದಾರಿಬಿಡಿ…

ತಪ್ಪಾಯಿತು ಅಮ್ಮ
ಊಟ ಸಪ್ಪೆಯೆಂದು
ತಟ್ಟೇಲಿ ತಂಗಳು ಬಿಟ್ಟು
ಓಡಿ ಹೋದವನ
ಬೆನ್ನೂ ಹೊಟ್ಟೆ ಈಗ
ಒಂದೇ ಆಗಿದೆ!
ತುತ್ತಿಗು ಮುತ್ತಿಗೂ
ಬಹಳ ಸೆಳೆತಗೊಂಡು
ಬರುತ್ತಿರುವೆ…

ನೇರವಾಗಿ ಈ ಸಣಕಲು
ಮೈಗೆ ಸ್ಪರ್ಶ ಅಮುಕಲು
ನಿನ್ನ ಅಸ್ತಿತ್ವದಲ್ಲಿ ಬಟ್ಟೆಗೂ
ಬೆಲೆಯಿಲ್ಲದೆ ಪಾದ ಒತ್ತುವ
ತುಂಡರಿವೆ ಆಶೆ ಹೊಂದಿರುವೆ
ತೋಳ ತೆಕ್ಕೆಯಲಿ
ಮತ್ತು ನಿನ್ನ ಮುದ್ದಿನಲಿ
ಹೊರಳಲು ಸಿದ್ಧನಾಗಿಯೆ
ಬರುತ್ತಿರುವೆ…

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.