ಹೀಗೆಯೇ ಒಂದು ಸಂಜೆ ಅಷ್ಟೆಅಷ್ಟೇ ಆಗಿ ಮಳೆ ಹನಿ ಉದುರುತ್ತಿತ್ತು. ಮಲ್ಲಿಗೆ ಹೂವನ್ನು ಕೊಯ್ಯಲೆಂದು ಅಂಗಳಕ್ಕೆ ಬಂದ ಶಾರಿಗೆ ಕಿಟಕಿಯ ಪಕ್ಕ ಗಡ್ಡ ಕಾಣಿಸಲಿಲ್ಲ. ‘ಅರೆ ಎಲ್ಲಿ ಹೋದ್ವಪ ನಿಮ್ಮ ಸ್ವಾಮಿಗಳು’ ಎಂದು ವ್ಯಂಗ್ಯವಾಗಿ ಕೇಳಿದಳು ಶಾರಿ. ಅವರ ಪೂರ್ವಾಶ್ರಮಕ್ಕೆ ಹೋಗಿದ್ದಾರೆ ಎಂದು ತಣ್ಣಗೆ ಹೇಳಿದ ಶಿವರಾಮಣ್ಣನಿಗೆ, ‘ಓಹೋ…ಹಂಗಾರೆ ಇನ್ನು ಬರತ್ರಿಲ್ಲೆ…’ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾ ಕೇಳಿದಳು. ಆದರೆ ಮಾರನೇ ದಿನ ಸಂಜೆ ಎನ್ನುವಷ್ಟೊತ್ತಿಗೆ ಮತ್ತೆ ಹಾಜರ್ ಈ ಪುಣ್ಯಾತ್ಮ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹದಿನೈದನೆಯ ಕಂತು.

 

ದಟ್ಟ ಕಾನನದ ನಡುವೆ ಇರುವ ಏಕೈಕ ಆ ಮನೆ ಬಹಳ ದೊಡ್ಡದಾಗಿತ್ತು. ಏನಿಲ್ಲವೆಂದರೂ ಒಂದು ನೂರು ಜನರಾದರೂ ಏಕಕಾಲಕ್ಕೆ ಹಿಡಿಸುವಷ್ಟು ದೊಡ್ಡದಾದ ಮನೆಯದು. ಸಂಪೂರ್ಣವಾಗಿ ಕಟ್ಟಿಗೆಯಲ್ಲೇ ಕಟ್ಟಿದ ಆ ಮನೆಯ ಗೋಡೆಗಳೆಲ್ಲ ಕಪ್ಪಗೆ ಮಿರಿಮಿರಿ ಮಿಂಚುವಂತೆ ಇದ್ದವು. ಮೈಲುಗಟ್ಟಲೆ ದೂರವಿದೆಯೇನೋ ಎಂದು ಭಾಸವಾಗುವ ಪಾಗಾರ, ಅದರೊಳಕ್ಕೆ ಕಾಲಿಟ್ಟೊಡನೆಯೇ ದೊಡ್ಡ ಅಂಗಳ, ನಂತರ ವಿಶಾಲವಾದ ಜಗುಲಿ, ಅದರ ನಂತರದ ಒಳಾಂಗಣ, ಅದರ ಸುತ್ತೆಲ್ಲ ನಾಲ್ಕಾರು ಕೋಣೆಗಳು, ಒಂದು ಸಣ್ಣ ದೇವಸ್ಥಾನವನ್ನೇ ಹೋಲುವ ದೇವರ ಮನೆ, ಪಕ್ಕವೇ ಇರುವ ಅದಕ್ಕಿಂತಲೂ ದೊಡ್ಡದಾದ ಅಡುಗೆ ಮನೆ, ಹಿಂದಗಡೆ ಬಚ್ಚಲು ಮನೆ, ಮತ್ತೊಂದು ಹಜಾರ, ಅದರ ಆಚೆಕಡೆ ಇರುವ ಭತ್ತದ ರಾಶಿಗಳು, ಸುಲಿದ ಅಡಕೆ, ಕಾಳುಮೆಣಸು, ಏಲಕ್ಕಿ ಮತ್ತಿತರ ಧವಸಧಾನ್ಯಗಳನ್ನು ತುಂಬಿಡುವ ಮರದ ಭಣತ, ಅದರ ಮೇಲೊಂದು ಮೆತ್ತು (ಮಹಡಿ). ಹೀಗೆ ಎರಡಂತಸ್ತಿನ ಆ ಮನೆ ರಾಜಮಹಾರಾಜರು ವಾಸಿಸಬಹುದೆನ್ನುವಷ್ಟು ವೈಭವವೂ, ವಿಶಾಲವಾಗಿಯೂ ಇತ್ತು.

ಒಂದು ಕಾಲಕ್ಕೆ ಆ ಮನೆಯಲ್ಲಿ ನೂರೋ ಇನ್ನೂರೋ ಜನ ಇದ್ದಿರಬಹುದು. ಆದರೆ ಈಗ ಅಲ್ಲಿರುವವರು ನಾಲ್ಕೈದು ಜನ ಮಾತ್ರ. ಮನೆಯ ಯಜಮಾನ ಶಿವರಾಮಣ್ಣ ಅವನ ಹೆಂಡತಿ ಶಾರದೆ, ಇಬ್ಬರು ಮಕ್ಕಳು ಸುರೇಶ, ಗಿರೀಶ ಇಬ್ಬರೂ ಶಾಲೆ, ಹೈಸ್ಕೂಲಿಗೆ ಹೋಗುವವರು, ಮತ್ತು ಶಿವರಾಮಣ್ಣನ ತಮ್ಮ ಮಂಜಣ್ಣ ಮತ್ತವನ ಹೆಂಡತಿ ಜಯಲಕ್ಷ್ಮಿ ಹಾಗೂ ಶಿವರಾಮಣ್ಣನ ವೃದ್ಧ ತಂದೆತಾಯಿಗಳು.

ಮನೆಯ ಜಗುಲಿಯ ಕಂಬದ ಪಕ್ಕದಲ್ಲೊಂದು ಕಿಟಕಿ ಇತ್ತು. ಅದಕ್ಕೆ ಕಲಕೈ ಗಡ್ಡನ ಕಿಟಕಿ ಎಂದೇ ಕರೆಯುತ್ತಿದ್ದರು. ಕಲಕೈ ಗಡ್ಡ ಎಂಬುವ ಈ ಮನುಷ್ಯ ಪ್ರತಿದಿನ ಬೆಳಗ್ಗೆ ಸ್ನಾನಮಾಡಿ ಬಂದವನು ತನ್ನ ಉದ್ದವಾದ ಬಿಳಿಯದಾದ ಗಡ್ಡವನ್ನು ಈ ಕಿಟಕಿಯ ಪಕ್ಕ ನಿಂತು, ಕೊಬ್ಬರಿ ಎಣ್ಣೆ ಹಾಕಿ ಬಾಚಿ ತಿದ್ದಿತೀಡಿಕೊಳ್ಳುತ್ತಿದ್ದ. ಬಿಳಿಯದಾದ ಅವನ ಗಡ್ಡ, ಕೊಬ್ಬರಿ ಎಣ್ಣೆಯೂ ಬಿದ್ದಮೇಲೆ ಬೆಳ್ಳಗೆ ಹತ್ತಿಯಂತೆ ಕಾಣುತ್ತಿತ್ತು. ಈ ಕಲಕೈ ಎಂಬ ಊರು ಎಲ್ಲಿಯದು, ಅವ ಎಲ್ಲಿಯವನು, ಅವನ್ಯಾಕೆ ಇಲ್ಲಿಗೆ ಬಂದ, ಅವನಿಗೂ ಈ ಮನೆಗೂ ಏನು ಸಂಬಂಧ ಎಂಬುದು ಅಲ್ಲಿನ ಬಹುತೇಕರಿಗೆ ಗೊತ್ತಿರಲಿಲ್ಲ. ಒಂದು ದಿವಸ ಮೂರು ಸಂಜೆಯ ಹೊತ್ತು ಕಾವಿಧರಿಸಿ, ತಲೆಯ ಮೇಲೊಂದು ಪುಟ್ಟ ಗಂಟು ಕಟ್ಟಿಕೊಂಡು ಉದ್ದವಾದ ಬಿಳಿಯ ಗಡ್ಡವನ್ನು ಬಿಟ್ಟ ಮನುಷ್ಯನೊಬ್ಬ ಶಿವರಾಮಣ್ಣನ ಹಿಂದೆಯೇ ಆ ಮನೆಗೆ ಬಂದವನು ಮತ್ತೆ ಹೋಗಿರಲಿಲ್ಲ.

ಶಾರತ್ತೆಯ ಗಂಡ ಶಿವರಾಮಣ್ಣನಿಗೆ ಮೊದಲಿನಿಂದಲೂ ದೇವರು, ಗುರುಗಳೆಂದರೆ ಅಪಾರ ಭಕ್ತಿ. ಒಂದು ಕಾಲಕ್ಕೆ ಆಳುಕಾಳು, ಬಂಗಾರ ಬೆಳ್ಳಿ, ಕೊಟ್ಟಿಗೆ ತುಂಬ ದನಕರುಗಳು, ಮನೆತುಂಬ ಜನ ಇದ್ದ ಆ ಮನೆಯ ವೈಭವ ಕಣ್ಣೆದುರಿಗೇ ನಾಶವಾಗುತ್ತಿದ್ದಂತೆ, ಶಿವರಾಮಣ್ಣನಿಗೆ ಇದೆಲ್ಲ ಯಾವುದೋ ಪೂರ್ವನಿಯೋಜಿತ ನಿಮಿತ್ತದಿಂದಲೇ ಆಗಿದ್ದು, ಇಲ್ಲದಿದ್ದರೆ ಇದ್ದಕ್ಕಿದ್ದ ಹಾಗೆ ಹೀಗೆಲ್ಲ ಸರ್ವನಾಶವಾಗೋಕೆ ಕಾರಣವಾದರೂ ಏನು ಎಂದು ಅವನಿಗೆ ಪದೇಪದೆ ಅನಿಸುತ್ತಿತ್ತು. ಅದಕ್ಕೆ ಕಂಡಕಂಡ ದೇವರು, ಮಠ, ಜೋತಿಷಿಗಳನ್ನೆಲ್ಲ ಕಾಣುತ್ತಿದ್ದ. ಯಾರೇ ಒಬ್ಬರು ಖಾವಿ ಧರಿಸಿದ್ದಾರೆಂದರೂ ಸಾಕು, ಅವರನ್ನು ಮನೆಗೆ ಕರೆದುಕೊಂಡು ಬಂದು ಪೀಠಕೊಟ್ಟು ಪೂಜೆಮಾಡುವಷ್ಟು ಭಕ್ತಿ ಅವನಿಗೆ. ಹೀಗೆ ಅವನ ಭಕ್ತಿಯ ಪರಾಕಾಷ್ಠೆಯಿಂದ ಒಲಿದು ಬಂದವನು ಈ ಕಲಕೈ ಗಡ್ಡ.

ಅಂದು ಸಿದ್ದಾಪುರದ ರಾಘವೇಂದ್ರ ಸ್ವಾಮಿ ಮಠದಲ್ಲಿ ದಾಸರೊಬ್ಬರ ಹರಿಕತೆಗೆ ಹೋದವ, ಹರಿಕತೆ ಮುಗಿಸಿ ಮನೆಗೆ ಬರುವಾಗ, ಸಿಕ್ಕವ ಈ ಗಡ್ಡಧಾರಿ ಮನುಷ್ಯ. ಈ ಜಗತ್ತೆಷ್ಟು ಕ್ಷಣಿಕ, ನಾವೆಲ್ಲ ಎಷ್ಟು ಸುಳ್ಳು, ಇಂದು ಕಣ್ಣೆದುರಿಗೆ ನಡೆಯುವ ಘಟನೆಗಳೆಲ್ಲವೂ ಪೂರ್ವನಿಯೋಜಿತವಾದದ್ದು, ಆದರೆ ಇವ್ಯಾವವೂ ನಮಗೆ ಗೊತ್ತಿರುವುದಿಲ್ಲ, ನಾವೇ ಎಲ್ಲ ನಿರ್ಧರಿಸುವವರಂತೆ ಆಡುತ್ತೇವೆಂದು ಹೇಳಿದ ಅವನ ಮಾತಿಗೆ ಏಕದಂ ಮರುಳಾಗಿ ಮನೆಗೆ ಕರೆದುಕೊಂಡು ಬಂದುಬಿಟ್ಟಿದ್ದ. ಅವ ತಮ್ಮಲ್ಲಿರುವುದೇ ತಮ್ಮ ಪೂರ್ವಜನ್ಮದ ಸುಕೃತ ಫಲ ಎಂಬಂತೆ ಶಿವರಾಮಣ್ಣ ನೋಡುತ್ತಿದ್ದರೆ, ಅವನ ಹೆಂಡತಿ ಶಾರಿ ಮಾತ್ರ ಸಿಡಿಸಿಡಿ ಎನ್ನುತ್ತಿದ್ದಳು. ಅವಳ ಸಿಟ್ಟಿಗೆ ಕಾರಣ ತಮ್ಮ ಮನೆಯಲ್ಲಿ ತಿಂಗಳಾನುಗಟ್ಟಲೆ ಅವ ಠಿಕಾಣಿ ಹೂಡಿದ್ದಾನೆಂಬುದಾಗಿರಲಿಲ್ಲ. ಶಿವರಾಮಣ್ಣನ ಹುಚ್ಚಾಟದಿಂದ ಈ ರೀತಿ ಅವರ ಮನೆಯಲ್ಲಿ ಯಾರ್ಯಾರೋ ಜನ ಉಳಿಯುವುದು ಹೊಸದೇನಾಗಿರಲಿಲ್ಲ. ಆದರೆ ಈ ಗಡ್ಡ ಸಿಕ್ಕಾಪಟ್ಟೆ ಊಟ ಮಾಡುತ್ತಿದ್ದ. ‘ನಾಲ್ಕು ಜನ ಊಟಮಾಡುವುದನ್ನು ಒಬ್ಬನೇ ಊಟಮಾಡ್ತ. ಸನ್ಯಾಸಿ ಆಗಿರೋವ್ರೆಲ್ಲ ಇಷ್ಟೆಲ್ಲ ಊಟಮಾಡತ್ವಾ…’ ಎಂದು ಗಂಡನಲ್ಲಿ ಕೇಳಿದ್ದಳು ಕೂಡ. ಬಂದ ಶುರುವಿನಲ್ಲೇ ಅವನ ಊರು ಯಾವುದು, ಎಲ್ಲಿಂದ ಬಂದವನು ಎಂದು ಪತ್ತೆಹಚ್ಚಿದ್ದಳು ಶಾರಿ. ಅವನ ಬೆಳ್ಳನೆಯ ಉದ್ದದ ಗಡ್ಡ ನೋಡಿ ಮಕ್ಕಳಿಗೆಲ್ಲ ಕಲಕೈ ಗಡ್ಡ ಎಂದು ಪರಿಚಯಿಸಿ ಅದೇ ಹೆಸರು ಕಾಯಂ ಆಗಿ ಉಳಿಯುವಂತೆ ಆಯಿತು.

ಶಿವರಾಮಣ್ಣ ಮತ್ತು ತಂಗಿ ಜಯಲಕ್ಷ್ಮಿ ಇಬ್ಬರೂ ಸ್ವಾಮೀಜಿ ಎಂದೇ ಗೌರವಪೂರ್ವಕವಾಗಿ ಕರೆಯುತ್ತಿದ್ದರು. ಜಯಲಕ್ಷ್ಮೀಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಅಷ್ಟೊತ್ತಿಗಾಗಲೇ ಅಕ್ಕ ಶಾರಕ್ಕನಿಗೆ ಕೈಗೊಂದು, ಕಾಲಿಗೊಂದು ಎಂಬಂತೆ ಇಬ್ಬರು ಮಕ್ಕಳಾಗಿಬಿಟ್ಟಿದ್ದವು, ಕಡೆಗಾಲದಲ್ಲಿ ಬಾಯಿಗೆ ನೀರು ಬಿಡುವುದಕ್ಕೂ ಒಂದೇ ಒಂದು ಮಗುವೂ ಅವಳ ಹೊಟ್ಟೆಯಲ್ಲಿ ಹುಟ್ಟದಿದ್ದದ್ದು ಅವಳಿಗೊಂದೇ ಅಲ್ಲ, ಆ ಮನೆಯ ಎಲ್ಲರಿಗೂ ಕೊರಗು ಹೆಚ್ಚಾಗಿ, ಇನ್ನು ಮಕ್ಕಳಾಗುವುದು ಅನುಮಾನ ಎಂದು ಕೈಚೆಲ್ಲಿ ಕೂತಾಗಿತ್ತು. ಅಷ್ಟರಲ್ಲಾಗಲೇ ಯಾವ್ಯಾವುದೋ ನಾಟಿ ಔಷಧಿಯಿಂದ ಹಿಡಿದು, ಡಾಕ್ಟ್ರ ಔಷಧಿ, ದೇವರು ದಿಂಡರು, ಎಲ್ಲ ರೀತಿಯ ಜಪತಪ ಪೂಜೆಗಳನ್ನೆಲ್ಲ ಮಾಡಿ ಹತಾಶಳಾಗಿದ್ದಳು. ಹಾಗಾಗಿ ಯಾವುದಾದರೊಂದು ಭರವಸೆಯ ತುಣುಕು ಅವಳೆದುರಿಗೆ ಸಿಕ್ಕರೂ ಸಾಕು ಅದನ್ನು ನೆಚ್ಚಿಕೊಂಡು ಬದುಕನ್ನು ನೂಕುತ್ತಿದ್ದವಳಿಗೆ ಹೊಸ ಭರವಸೆಯ ತುಂಡೆಂಬಂತೆ ಸಿಕ್ಕಿದ್ದು ಈ ಕಲಕೈ ಗಡ್ಡ.

ಪ್ರತಿದಿವಸ ಅವ ಕಿಟಕಿ ಬಳಿ ನಿಂತು ಹೊರಗಿನ ಬೆಳಕನ್ನು ನೋಡುತ್ತ ತನ್ನ ಬಿಳಿಯ ಗಡ್ಡವನ್ನು ಬಾಚಿಕೊಳ್ಳುತ್ತಿದ್ದರೆ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ತಂದುಕೊಡುವ ಕೆಲಸ ಜಯಲಕ್ಷ್ಮೀಯದ್ದಾಗಿತ್ತು. ಅವ ಬಂದ ಮೊದಲ ದಿನವೇ ದೇವರ ಮುಂದೆ ಕುಳಿತು ಪೂಜೆ ಮಾಡುತ್ತಿದ್ದಾಗ, ಕಾಲಿಗೆ ಬಿದ್ದ ಜಯಲಕ್ಷ್ಮಿಯ ಮುಖವನ್ನು ಆ ಸಂಜೆಯ ಬೆಳಕಲ್ಲಿ ನೋಡಿ ಅವಳ ನಿರಾಸೆ ತುಂಬಿದ ಕಣ್ಣುಗಳನ್ನು ಗಮನಿಸಿ, ಸಂತಾನ ಪ್ರಾಪ್ತಿರಸ್ತು ಎಂದು ಆಶೀರ್ವಾದ ಮಾಡಿದ್ದ.
ಹೀಗೆ ಸದಾಕಾಲ ಜಪತಪ, ಪೂಜೆ ಪುನಸ್ಕಾರ ಎಂದು ಇರುವ ಬಾಯಲ್ಲಿ ವೇದಪುರಾಣ ಕತೆಗಳನ್ನೇ ಹೇಳುತ್ತ, ಈ ಜಗವೇ ಒಂದು ಚದುರಂಗದ ಪಟ. ನಾವೆಲ್ಲ ಪಗಡೆಕಾಯಿಗಳಿದ್ದಂತೆ, ಅವ ನಡೆಸಿದಂತೆ ಈ ಕಾಯಿಗಳು ನಡೆಯುತ್ತವೆ ಎಂದೆಲ್ಲ ಹೇಳುತ್ತಿದ್ದ ಕಲಕೈ ಗಡ್ಡ, ಸಖತ್ತಾಗಿ ದೆವ್ವದ ಕತೆಗಳನ್ನೂ, ಚೌಡಿ, ಮಾರಮ್ಮನ ಕತೆಗಳನ್ನೂ ಹೇಳುತ್ತಿದ್ದುದು ಶಾರಕ್ಕನ ಮಕ್ಕಳಿಗೆ ರೋಚಕ ಎನಿಸುತ್ತಿತ್ತು.

ಅದೆಲ್ಲಕ್ಕಿಂತಲೂ ಮಜಾ ಎನಿಸುತ್ತಿದ್ದದು ಅವನೂರಿನಲ್ಲಿ ಪ್ರತಿ ಹುಣ್ಣಿಮೆಗೆ ಚೌಡಿ ಬಂದು ಅವನನ್ನು ಕರೆಯುತ್ತಿತ್ತು ಅಂತ ಅವನು ಕತೆ ಹೇಳುತ್ತಿದ್ದುದನ್ನು ಕೇಳಿ ಅವರೆಲ್ಲ ಆಶ್ಚರ್ಯದಿಂದ ಬಾಯಿಬಿಟ್ಟು ಕೇಳುತ್ತಿದ್ದರು. ಕಿಟಕಿ ಹತ್ರ ಬಂದು ಚೌಡಿ ನಿಮ್ಮನ್ನೇ ಕರೆಯುತ್ತಾ… ಗುರುಗಳೇ? ಎಂದು ಕುತೂಹಲದಿಂದ ಅವನನ್ನೇ ನೋಡುತ್ತಾ ಕೇಳುತ್ತಿದ್ದರು. ‘ಹೌದು, ಒಂದ್ಸಲ ಬಾಗಿಲು ತೆಗದೂ ನೋಡಿದ್ದೇನೆ ನಾನು. ಬಿಳೀ ಸೀರೆ ಉಟ್ಗಂಡು ಕೂದ್ಲೆಲ್ಲ ಬಿಚ್ಚಿ ಹಾಕ್ಯಂಡು ಸರಸರನೆ ಹೋತು. ಯಾರು ಹೇಳಿ ಕೇಳ ಹೊತ್ತಿಗೆ ಮಂಗಮಾಯಾಗ್ಹೋತು ಹೇಳಿ’ ಎಂದು ಬಿಳೀ ಗಡ್ಡವನ್ನು ತುರಿಸುತ್ತಾ ಹೇಳಿದ.

ಅವತ್ತಿನಿಂದ ಈ ಗಡ್ಡನೂ, ಇವನು ನೋಡಿದ ಆ ಚೌಡಿಯೂ ಭಯಂಕರ ಕುತೂಹಲಕ್ಕೆ ಕಾರಣವಾಗಿ ದಿನಾ ಅವನ ಕತೆಗಳನ್ನು ಕೇಳಬೇಕೆನಿಸುತ್ತಿತ್ತು ಅವರಿಗೆಲ್ಲ. ಮುಖ್ಯವಾಗಿ ಇವ ಚೌಡಿಯನ್ನು ಕಣ್ಣಾರೆ ಕಂಡವನು ಎಂಬುದೇ ಅವನೊಬ್ಬ ಹೀರೋ ಥರ ಅನಿಸುತ್ತಿದ್ದ. ಆದರೆ ಆ ಹೀರೋನನ್ನು ಅಮ್ಮನಿಗೆ ಮಾತ್ರ ಕಂಡರಾಗುತ್ತಿರಲಿಲ್ಲ.

ಅವ ತಮ್ಮಲ್ಲಿರುವುದೇ ತಮ್ಮ ಪೂರ್ವಜನ್ಮದ ಸುಕೃತ ಫಲ ಎಂಬಂತೆ ಶಿವರಾಮಣ್ಣ ನೋಡುತ್ತಿದ್ದರೆ, ಅವನ ಹೆಂಡತಿ ಶಾರಿ ಮಾತ್ರ ಸಿಡಿಸಿಡಿ ಎನ್ನುತ್ತಿದ್ದಳು. ಅವಳ ಸಿಟ್ಟಿಗೆ ಕಾರಣ ತಮ್ಮ ಮನೆಯಲ್ಲಿ ತಿಂಗಳಾನುಗಟ್ಟಲೆ ಅವ ಠಿಕಾಣಿ ಹೂಡಿದ್ದಾನೆಂಬುದಾಗಿರಲಿಲ್ಲ. ಶಿವರಾಮಣ್ಣನ ಹುಚ್ಚಾಟದಿಂದ ಈ ರೀತಿ ಅವರ ಮನೆಯಲ್ಲಿ ಯಾರ್ಯಾರೋ ಜನ ಉಳಿಯುವುದು ಹೊಸದೇನಾಗಿರಲಿಲ್ಲ.

ಅದರ ಜೊತೆಗೆ ಅವ ದಿನಾ ಕಿಟಕಿಯ ಪಕ್ಕ ನಿಂತು ತನ್ನ ಎದೆಯನ್ನೂ ದಾಟಿ ಹೊಟ್ಟೆಯವರೆಗೆ ಬೆಳೆದು ನಿಂತಿದ್ದ ಬಿಳಿಯ ಗಡ್ಡವನ್ನು ಎಣ್ಣೆ ಹಾಕಿ ಬಾಚಿಕೊಳುತ್ತಿರುವಾಗಲೆಲ್ಲ ಇನ್ನೂ ಶಾಲೆಗೆ ಹೋಗುತ್ತಿದ್ದ ಹರೀಶ, ಸುರೇಶನಿಗೆಲ್ಲ ಬೇಡಬೇಡವೆಂದರೂ ಶಾಲೆಯಲ್ಲಿ ಹೇಳಿಕೊಟ್ಟ ಅಕ್ಬರ್ ಬೀರ್ಬಲ್ ಕತೆ ನೆನಪಾಗುತ್ತಿತ್ತು. ಅಕ್ಬರ್ ಬಾದಶಹಾ ಸಾಕಿದ್ದ ಜಿರಾಫೆಯನ್ನು ಒಂದು ಗೂಡಿನಲ್ಲಿ ಕೂಡಿ ಹಾಕಿದ್ದರು. ಕಿಟಕಿಯ ಮೂಲಕ ದಿನಾ ಅದಕ್ಕೆ ಹುಲ್ಲನ್ನು ಕೊಡುತ್ತಿದ್ದರು. ಹೀಗೇ ಪ್ರತಿದಿವಸ ಹುಲ್ಲು ಕೊಡುತ್ತಿರುವಾಗ, ಉದ್ದ ಗಡ್ಡವಿರುವ ಜಿರಾಫೆ ಕಾಯುವವ ಅಂದು ಅದು ಏನುಮಾಡುತ್ತಿದೆಯೆಂದು ನೋಡಲು ಕಿಟಕಿಯೊಳಗೆ ಮುಖ ತೂರಿದ. ಹಾಗೆ ತೂರಿಕೊಂಡಾಗ ಅವನ ಗಡ್ಡ ಮೊದಲು ಒಳಹೋಯಿತು. ಜಿರಾಫೆ ಎಂದಿನಂತೆ ತನಗೆ ಹುಲ್ಲು ಹಾಕಿದ್ದಾರೆಂದು ತಿಳಿದು ಗಡ್ಡವನ್ನೇ ಕಚ್ಚಿ ಎಳೆಯಿತು. ನೋವಿನಿಂದ ಕಿರುಚಿತ್ತಿದ್ದ ಇವನನ್ನು ಇತರರೆಲ್ಲ ಸೇರಿ ಬಿಡಿಸಿದರು. ಅಷ್ಟೊತ್ತಿಗೆ ಗಡ್ಡ ಎಲ್ಲ ಕಿತ್ತು ಮುಖ ರಕ್ತಮಯವಾಗಿಬಿಟ್ಟಿತ್ತು. ಅದು ಪ್ರಾಣಿಯೇ ಆಗಿರಲಿ, ಮತ್ತೊಬ್ಬರಿಗೆ ತೊಂದರೆ ಕೊಟ್ಟರೆ ಮೊದಲು ತೊಂದರೆಯಾಗುವುದು ನಿಮಗೇ… ಇದು ನೀತಿ. ಅದಕ್ಕೆ ಯಾರಿಗೂ ತೊಂದರೆ ಕೊಡಬಾರದು ಎಂದು ಹೇಳಿಕೊಟ್ಟಿದ್ದು, ಈ ಗಡ್ಡನನ್ನು ನೋಡಿದ ತಕ್ಷಣ ಆ ಕತೆ ನೆನಪಾಗಿ ಇವ ಯಾರಿಗೆ ತೊಂದರೆಕೊಟ್ಟು ಹೀಗೆ ಇಷ್ಟುದ್ದ ಗಡ್ಡ ಬಿಟ್ಟಿದ್ದಾನೆ ಎಂದೆನಿಸುತ್ತಿತ್ತು.

ಹೀಗೆ ಅವನ ಗಡ್ಡ, ಅದಕ್ಕಿಂತಲೂ ಹೆಚ್ಚಿನ ಕುತೂಹಲವಿದ್ದದ್ದು ಅವನ ಗಂಟಿನ ಮೇಲೆ. ದೊಡ್ಡದಾದ ಬಟ್ಟೆಯ ಗಂಟೊಂದನ್ನು ಸದಾ ಹೊತ್ತೇ ತಿರುಗುತ್ತಿದ್ದ. ಊಟಕ್ಕೆ, ತಿಂಡಿಗೆ, ಕಡೆಗೆ ದೇವರ ಪೂಜೆಗೂ ಆ ಗಂಟನ್ನು ಬಿಡುತ್ತಿರಲಿಲ್ಲ. ಅವನ ಗಡ್ಡದಂತೆಯೇ ಆ ಗಂಟು ಅವನಿಗಂಟಿಕೊಂಡೇ ಇರುತ್ತಿತ್ತು. ‘ಅದರಲ್ಲೇನಿದೆ ಅಜ್ಜ’ ಎಂದರೆ ‘ಇದರೊಳಗೆ ನನ್ನ ಇಡೀ ಬದುಕಿನ ಆಸ್ತಿಯೇ ಇದೆ’ ಎನ್ನುತ್ತಿದ್ದ.

ಹೀಗೆಯೇ ಒಂದು ಸಂಜೆ ಅಷ್ಟೆಅಷ್ಟೇ ಆಗಿ ಮಳೆ ಹನಿ ಉದುರುತ್ತಿತ್ತು. ಮೊದಲ ಮಳೆಗೆ ಬಿದ್ದ ಮಣ್ಣಿನ ಘಮಲು, ಆಗಷ್ಟೇ ಬಿರಿದ ದುಂಡುಮಲ್ಲಿಗೆಯ ಸುವಾಸನೆ. ಮಲ್ಲಿಗೆ ಹೂವನ್ನು ಕೊಯ್ಯಲೆಂದು ಅಂಗಳಕ್ಕೆ ಬಂದ ಶಾರಿಗೆ ಕಿಟಕಿಯ ಪಕ್ಕ ಗಡ್ಡ ಕಾಣಿಸಲಿಲ್ಲ. ‘ಅರೆ ಎಲ್ಲಿ ಹೋದ್ವಪ ನಿಮ್ಮ ಸ್ವಾಮಿಗಳು’ ಎಂದು ವ್ಯಂಗ್ಯವಾಗಿ ಕೇಳಿದಳು ಶಾರಿ. ಅವರ ಪೂರ್ವಾಶ್ರಮಕ್ಕೆ ಹೋಗಿದ್ದಾರೆ ಎಂದು ತಣ್ಣಗೆ ಹೇಳಿದ ಶಿವರಾಮಣ್ಣನಿಗೆ, ‘ಓಹೋ…ಹಂಗಾರೆ ಇನ್ನು ಬರತ್ರಿಲ್ಲೆ…’ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾ ಕೇಳಿದಳು. ಆದರೆ ಮಾರನೇ ದಿನ ಸಂಜೆ ಎನ್ನುವಷ್ಟೊತ್ತಿಗೆ ಮತ್ತೆ ಹಾಜರ್ ಈ ಪುಣ್ಯಾತ್ಮ. ಈ ಬಾರಿ ಬರುವಾಗ ತನ್ನೊಡನೆ ಇಬ್ಬರು ಹುಡುಗರನ್ನು ಕರೆತಂದಿದ್ದ. ‘ಹೆಗಡೇರೆ, ನಮ್ಮ ಪೂರ್ವಾಶ್ರಮದ ಹುಡುಗರು ಇವರು, ಪಾಪ ಬಡವರು. ಅವರಿಗೆ ಒಂದಷ್ಟು ಕೆಲಸ ಕೊಡಿ. ಅವರಿಗೇನೂ ನೀವು ಸಂಬಳ ವಗೈರೆ ಏನೂ ಕೊಡಬೇಕಾದ್ದಿಲ್ಲ. ಮೂರು ಹೊತ್ತು ಊಟ ಹಾಕಿದರೆ ಸಾಕು. ಇಲ್ಲೇ ಜಗುಲಿಯ ಮೂಲೆಯಲ್ಲಿ ಬಿದ್ದುಕೊಂಡಿರುತ್ತಾರೆ. ನಿಮಗೂ ತೋಟ, ಗದ್ದೆ ಕೆಲಸಕ್ಕೆ ಸಹಾಯ ಆಗುತ್ತೆ’ ಎಂದ. ಹೀಗೆ ಆ ಮನೆಗೆ ಬಂದು ಸೇರಿಕೊಂಡವರು ಕರಿಯ ಮತ್ತು ಸುಬ್ಬ.

ಇದೇರೀತಿ ಕಲಕೈ ಗಡ್ಡ ನಮ್ಮ ಪೂರ್ವಾಶ್ರಮಕ್ಕೆ ಹೋಗಬೇಕಿದೆ ಎಂದು ಆಗಾಗ ಕಾಣೆಯಾಗುವುದು, ಬರುವಾಗ ಯಾರ್ಯಾರನ್ನೋ ಕರೆತರುವುದು ಮಾಡುತ್ತಲೇ ಇದ್ದ. ಹೀಗೆ ಅವನೊಂದಿಗೆ ಬಂದ ಗಂಡಾಳು ನಾಲ್ಕು ಇದ್ದರೆ ಇಬ್ಬರು ಹೆಣ್ಣಾಳುಗಳನ್ನೂ ಕರೆತಂದಿದ್ದ. ಸುಬ್ಬಿ ಮತ್ತು ಲಚ್ಚಿ ಎಂದು ಪರಿಚಯಿಸಿ, ಶಾರಿಗೆ ಹೇಳಿದ್ದ, ‘ಅಕ್ಕ, ನಿಂಗ್ಳ ಕೊಟ್ಟಿಗೆಗೆ, ಮನೆಗೆಲಸಕ್ಕೆ ಉಪಯೋಗಕ್ಕೆ ಬರ್ತಾರೆ ಇವರು. ಪಾಪ ನಮ್ಮ ಪೂರ್ವಾಶ್ರಮದಲ್ಲಿ ಗೇಯ್ಕಂಡಿದ್ದವರು ಇವರು. ನಾಕು ತುತ್ತು ಊಟ ಹಾಕಿ ಸಾಕು. ಸಂಬಳ ಏನೂ ಕೊಡೂದು ಬ್ಯಾಡ’ ಎಂದಿದ್ದರು. ಪುಕ್ಷಾಟೆ ಕೆಲ್ಸ ಮಾಡಿಕೊಂಡಿದ್ದರೆ ಇರಲಿ ಬಿಡಿ, ನಮಗೂ ಇಷ್ಟು ದೊಡ್ಡ ಮನೆಯನ್ನು ಗುಡಿಸಿ, ಸಾರಿಸಿ ಮಾಡೋದೇ ದೊಡ್ಡ ತಲೆನೋವು ಎಂದು ಮನೆಗೆಲಸಕ್ಕೆ ಒಬ್ಬಳನ್ನು, ಕೊಟ್ಟಿಗೆ ಕೆಲಸಕ್ಕೆ ಒಬ್ಬಳನ್ನು ನೇಮಿಸಿದಳು ಶಾರಿ. ಆದರೆ ಈ ಸ್ವಾಮೀಜಿಗಳ ಪೂರ್ವಾಶ್ರಮದಲ್ಲಿ ಇಷ್ಟೊಂದು ಜನ ಯಾಕಿರುತ್ತಿದ್ದರು, ಅವರನ್ನೆಲ್ಲ ಇಲ್ಲಿಗ್ಯಾಕೆ ಕರೆತಂದಿದ್ದಾರೆ, ಏನು ಇವರು ಕಾಯಂ ಆಗಿ ಇಲ್ಲೇ ಬಿಡಾರ ಹೂಡಲು ಬಂದಿದ್ದಾರೋ ಹೇಗೆ ಎಂಬ ಒಂದು ಸಣ್ಣ ಸಂಶಯ ಸುಳಿದಾಡಿತು ಶಾರಿಯ ಮನದಲ್ಲಿ. ಅದನ್ನು ಶಿವರಾಮಣ್ಣನ ಮುಂದೆ ಆಡಿಯೂ ಇದ್ದಳು. ‘ಈ ಹೆಂಗಸರ ಅನುಮಾನಕ್ಕೆ ಕೊನೆಯೇ ಇಲ್ಲೆ ಬಿಡು. ಅಷ್ಟೊಂದು ತಿಳ್ಕೊಂಡಿದ್ದ ಅವ್ರು, ಆ ನಮ್ನಿ ವೇದ, ಶಾಸ್ತ್ರ, ಪುರಾಣ ಎಲ್ಲವೂ ಅವರ ಬಾಯಲ್ಲೇ ಇದ್ದಂಗಿದ್ದು, ಅವರ ಮೇಲೆ ಸಂಶಯ ಪಡತ್ಯಾ? ಪಾಪ ಬತ್ತು ನೋಡು’ ಎಂದು ಶಾರಿಯ ಬಾಯಿ ಮುಚ್ಚಿಸಿದ.

ಆದರೂ ಇವ ಯಾರು, ಎಲ್ಲಿಂದ ಬಂದ, ಯಾಕಾಗಿ ಬಂದ, ಹೀಗೆ ತಿಂಗಳಾನುಗಟ್ಟಲೆ ಬೇರೆಯವರ ಮನೆಯಲ್ಲಿ ಉಳಿದು ಬಿಡಲು ಅವನಿಗ್ಯಾವ ಹಕ್ಕಿದೆ? ಎಂದೆಲ್ಲ ಪ್ರಶ್ನೆಗಳು ಶಾರಿಗೆ ಕಾಡುತ್ತಿದ್ದವು. ಒಮ್ಮೊಮ್ಮೆ ರಾತ್ರಿಹೊತ್ತು ಅವನು ಕರೆದುಕೊಂಡು ಬಂದ ಆಳುಗಳೊಂದಿಗೆ ಹೆಬ್ಬಾಗಿಲ ಜಗುಲಿಯ ಮೇಲೆ ಕುಳಿತು ಏನೋ ಗುಸುಗುಸು ಮಾಡುತ್ತಿದ್ದುದು, ರಾತ್ರಿ ಎದ್ದು ಬಾಗಿಲು ತೆರೆದು ಒಬ್ಬೊಬ್ಬನೇ ಮನೆಯ ಹೊರಗೆ ಹೋಗುತ್ತಿದ್ದುದು, ಎಲ್ಲವೂ ಇವನೊಬ್ಬ ನಿಗೂಢ ಮನುಷ್ಯನಂತೆ ಅನಿಸುತ್ತಿತ್ತು ಅವಳಿಗೆ. ಒಂದು ದಿನ ಧೈರ್ಯ ಮಾಡಿ ‘ಅಲ್ಲ ಸ್ವಾಮಿಗಳೇ, ಆಗಾಗ ರಾತ್ರಿ ಹೊತ್ತು ಹೊರಗೆ ಹೋಗ್ತೀರಲ್ಲ. ಎಲ್ಲಿಗೆ ಹೋಗ್ತೀರಿ..’ ಎಂದು ಕೇಳಿಯೇ ಬಿಟ್ಟಳು. ಪ್ರಶ್ನೆ ನಿರೀಕ್ಷಿತವೇ ಎಂಬಂತೆ, ಅದೇ ಹೇಳಿದ್ದೆನಲ್ಲ, ‘ನನ್ನ ಪೂರ್ವಾಶ್ರಮದಲ್ಲಿದ್ದ ಚೌಡಿ ಇಲ್ಲಿಯೂ ಒಮ್ಮೊಮ್ಮೆ ಬಂದು ಕರೆಯುತ್ತಾಳೆ. ಅವಳೊಡನೆ ಮಾತನಾಡಿ ಬರುತ್ತೇನೆ…’ ಎಂದರು.

ಇದೊಂದು ಭ್ರಾಮಕ ಜಗತ್ತು ಎಂಬಂತೆ ಮಾತನಾಡುವ ಇವನೊಬ್ಬ ಪರಿಪೂರ್ಣ ಸಂತನೋ, ಏಕಾಂಗಿಯೋ, ಸುಳ್ಳುಬುರುಕನೋ, ಮೋಸಗಾರನೋ ಒಂದೂ ತಿಳಿಯದೆ, ಯಾರೊಡನೆಯೂ ಹೇಳಿಕೊಳ್ಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಳು ಶಾರಿ. ಆದರೆ ಮನೆಯವರೆಲ್ಲ ಆರಾಮವಾಗಿದ್ದಾರೆಂಬಂತೆ ಅವಳಿಗೆ ಅನಿಸಿದರೂ, ಯಾಕೋ ಈ ಇಡೀ ಮನೆಯನ್ನು ಯಾವುದೋ ಶಕ್ತಿ ಒಟ್ಟುಗೂಡಿಸಿ ಬಂಧಿಸುತ್ತಿದೆ ಎನಿಸುತ್ತಿತ್ತು. ಇವರೆಲ್ಲ ಯಾರು, ಯಾಕೆ ಹೀಗೆ ಪುಕ್ಷಾಟೆ ಬಂದು ಕೆಲಸ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಈ ಗಡ್ಡ ಕರೆದುಕೊಂಡು ಬಂದ ಸುಬ್ಬ, ಕರಿಯ ಮತ್ತೆರೆಡು ಆಳುಗಳ್ಯಾರೂ ಕೆಟ್ಟವರಲ್ಲ. ಹೇಳಿದ ಕೆಲಸ ಮಾಡಿಕೊಂಡು, ಇವರು ಹಾಕಿದಷ್ಟು ಅನ್ನ ಊಟಮಾಡಿಕೊಂಡು ಎದ್ದೇಳುವವರು. ಸ್ವಾಮೀಜಿಯೆಂಬ ಈ ಗಡ್ಡನೇ ಜಾಸ್ತಿ ಊಟ ಮಾಡುತ್ತಿದ್ದ. ಎಷ್ಟು ಅನ್ನ ಹಾಕಿದರೂ ಸಾಲುತ್ತಿರಲಿಲ್ಲ. ತಿಂಡಿಗೆ ರೊಟ್ಟಿ, ದೋಸೆ ಮಾಡಿದರೆ 8-10 ತಿನ್ನುತ್ತಿದ್ದ. ಅವನಿಗೆ ಅಡುಗೆ ಮಾಡಿ ಹಾಕಿದ್ದಷ್ಟೇ ಅಲ್ಲ, ಅವನ ನಡವಳಿಕೆ, ರಾತ್ರಿ ಹೊತ್ತು ಅವನೆದ್ದು ಹೋಗುವುದು, ಅವನೊಂದಿಗಿರುವ ಆ ಬಟ್ಟೆಗಂಟು, ಇವೆಲ್ಲ ತುಂಬ ನಿಗೂಢ ಎನಿಸುತ್ತಿತ್ತು ಶಾರಿಗೆ.

ಒಂದು ದಿನ ಹೀಗೇ ಹೊರಗೆ ಹೊರಟವನನ್ನು ಶಿವರಾಮಣ್ಣ ತಡೆದು ಹೇಳಿದ, ‘ಹುಶಾರು ಸ್ವಾಮಿಗಳೇ. ಇಲ್ಲೆಲ್ಲ ಈಗ ದರೋಡೆಕೋರರದ್ದು, ನಕ್ಸಲೈಟ್ ಗಳ ಕಾಟ ಜಾಸ್ತಿ ಇದೆ. ಆದಷ್ಟೂ ನಾವೆಲ್ಲ ಸಂಜೆ ಒಳಗೇ ಮನೆ ಸೇರಿಕೊಳ್ಳುತ್ತಿದ್ದೇವೆ. ಕೆಲವು ತಿಂಗಳುಗಳ ಹಿಂದೆ ಪಕ್ಕದ ಊರಿನಲ್ಲಿ ನಕ್ಸಲ್ ದಾಳಿ ನಡೆದು, ಅಲ್ಲಿನ ಹೆಗಡೇರ ಮನೆಯ ಗದ್ದೆನೆಲ್ಲ ಸುಟ್ಟು ಹಾಕಿದ್ದರು. ಅದರ ನಂತ್ರ ಪೊಲೀಸರಿಗೂ ಅವರಿಗೂ ಜೋರು ಚಕಮಕಿ ನಡೆದು ಕೆಲವರನ್ನು ಜೈಲಿಗೆ ಹಾಕಿದ್ದಾರೆ, ಕೆಲವರು ತಪ್ಪಿಸಿಕೊಂಡಿದ್ದಾರೆಂದಲ್ಲ ಸುದ್ದಿ ಇದೆ. ಹಾಗಾಗಿ ಹುಶಾರು, ಸಂಜೆಮೇಲೆ ಓಡಾಟಗಳನ್ನು ಇಟ್ಟುಕೊಳ್ಳಬೇಡಿ’ ಎಂದ. ‘ಅಯ್ಯೋ, ಸರ್ವಸಂಗ ಪರಿತ್ಯಾಗಿಗಳಾದ ನಮ್ಮನ್ನು ಯಾರು ಏನು ಮಾಡುತ್ತಾರೆ ಬಿಡಿ ಹೆಗಡೇರೆ’ ಎಂದು ನಕ್ಕು ಹೊರಟಿದ್ದರು ಸ್ವಾಮಿಗಳು. ಹೀಗೆ ಸ್ವಾಮಿಗಳು ಎಲ್ಲಿಯೇ ಹೋಗುವುದಿದ್ದರೂ ಸಂಜೆಯೇ ಹೊರಡುತ್ತಿದ್ದರು. ಬರುತ್ತಿದ್ದುದೂ ಸಂಜೆಯೇ.

ಮಲೆನಾಡಿನ ಹಳ್ಳಿಯೊಂದರ ಕಡುಬಡತನವನ್ನು ಸಹಿಸಲಾರದೆ ಹೀಗೆ ದೇಶಾಂತರ ಹೊರಟವರೇ ಈ ಸ್ವಾಮಿ? ಹೀಗೆ ಹಸಿವೆ ತಾಳಲಾರದೆ ಮಠಕ್ಕೆ ಸೇರಿಕೊಂಡಿರಬಹುದೇ? ಎಂದೆಲ್ಲ ಶಾರಿಯ ಮನಸ್ಸಲ್ಲಿ ಸುಳಿಯತೊಡಗಿತು. ಅದಕ್ಕೆ ಸರಿಯಾಗಿ, ಕೆಲವು ವರ್ಷಗಳ ಹಿಂದೆ, ಬಿಳಗಿ ಸಮೀಪದ ಮಠವೊಂದರಲ್ಲಿ ಕಿರಿಯ ಸ್ವಾಮಿಗಳೊಬ್ಬರು ಸೇರಿ, ಬಹಳ ಬೇಗ ಅಲ್ಲಿನವರ ವಿಶ್ವಾಸ ಗಳಿಸಿ, ಹಿರಿಯ ಸ್ವಾಮಿಗಳ ತೀರಾ ಆಪ್ತರಾಗಿ ಕಿರಿಯಸ್ವಾಮಿಗಳು ಎಂದು ಹೆಸರು ಪಡೆದಿದ್ದರು. ಹೀಗೆ ಹಿರಿಯಶ್ರೀಗಳು ಹೋದಲ್ಲೆಲ್ಲ ಕಿರಿಯ ಶ್ರೀಗಳೂ ಹೋಗಿ, ಯಾರು ಹಿರಿಯರು, ಯಾರು ಕಿರಿಯರು ಎಂದೂ ತಿಳಿಯದೆ ಗೊಂದಲವಾಗುತ್ತಿತ್ತು ಈ ಇಬ್ಬರ ಅನ್ಯೋನ್ಯತೆ. ಆದರೆ ಕೆಲವೇ ದಿನಗಳಲ್ಲಿ ಅಲ್ಲಿ ಬರುವ ಭಕ್ತಾದಿಗಳ ಪೈಕಿ ಒಬ್ಬಳಾದ ಕಲಾವತಿ ಎಂಬುವಳನ್ನು ಕಟ್ಟಿಕೊಂಡು ಕಿರಿಯ ಶ್ರೀಗಳು ಓಡಿಹೋಗಿದ್ದಾರೆಂದು ದೊಡ್ಡ ಸುದ್ದಿಯಾಗಿ, ಇಡೀ ಊರು ಬಹಳಷ್ಟು ದಿನಗಳ ಕಾಲ ಅದನ್ನೇ ಮಾತನಾಡಿಕೊಂಡು ಕಡೆಗೆ ಮರೆತುಬಿಟ್ಟಿತು.

ಅವನ ಗಡ್ಡ, ಅದಕ್ಕಿಂತಲೂ ಹೆಚ್ಚಿನ ಕುತೂಹಲವಿದ್ದದ್ದು ಅವನ ಗಂಟಿನ ಮೇಲೆ. ದೊಡ್ಡದಾದ ಬಟ್ಟೆಯ ಗಂಟೊಂದನ್ನು ಸದಾ ಹೊತ್ತೇ ತಿರುಗುತ್ತಿದ್ದ. ಊಟಕ್ಕೆ, ತಿಂಡಿಗೆ, ಕಡೆಗೆ ದೇವರ ಪೂಜೆಗೂ ಆ ಗಂಟನ್ನು ಬಿಡುತ್ತಿರಲಿಲ್ಲ. ಅವನ ಗಡ್ಡದಂತೆಯೇ ಆ ಗಂಟು ಅವನಿಗಂಟಿಕೊಂಡೇ ಇರುತ್ತಿತ್ತು. ‘ಅದರಲ್ಲೇನಿದೆ ಅಜ್ಜ’ ಎಂದರೆ ‘ಇದರೊಳಗೆ ನನ್ನ ಇಡೀ ಬದುಕಿನ ಆಸ್ತಿಯೇ ಇದೆ’ ಎನ್ನುತ್ತಿದ್ದ.

ಆ ಓಡಿ ಹೋದವನೇ ಈ ಗಡ್ಡದ ರೂಪದಲ್ಲಿ ಇಲ್ಲಿ ಏನಾದರೂ ಬಂದಿರಬಹುದಾ…? ಎಂದು ತನ್ನೊಳಗೇ ಕೇಳಿಕೊಂಡ ಶಾರಿ, ಇತ್ತೀಚೆಗೆ ಒಂದು ವಿಷಯವನ್ನು ಸರಿಯಾಗಿ ಗಮನಿಸಿದ್ದಳು. ಅದೆಂದರೆ ಮೊದಲೆಲ್ಲ ಮಕ್ಕಳಾಗಲಿಲ್ಲವೆಂದು ಪ್ರಪಂಚವೇ ತಲೆಮೇಲೆ ಹೊತ್ತಂತೆ ಕೊರಗುತ್ತ ಕೂರುತ್ತಿದ್ದ ಜಯಲಕ್ಷ್ಮೀ ಈಗ ಉತ್ಸಾಹದಿಂದ ಓಡಾಡಿಕೊಂಡಿದ್ದಳು. ಸ್ವಾಮೀಜಿಯ ಸೇವೆಯನ್ನು ದೇವರ ಪೂಜೆಗಿಂತ ಹೆಚ್ಚಾಗಿ ಮುತುವರ್ಜಿಯಿಂದ ಮಾಡುತ್ತಿದ್ದಳು. ಇನ್ನೂ ವಿಶೇಷ ಅನಿಸಿದ್ದದ್ದೇನೆಂದರೆ, ಈಗೀಗ ಜಯಲಕ್ಷ್ಮಿಗೂ ಬಿಳಿ ಸೀರೆ ಉಟ್ಟ ಚೌಡಿ ಕಾಣಿಸುತ್ತಿದ್ದಳು. ಒಂದು ಬೆಳಗ್ಗೆ ಮುಟ್ಟಾದ ಅವಳು ಕೆಳಗಿನ ಭಾಗೀರಥಿ ಹೊಂಡಕ್ಕೆ ಸ್ನಾನ ಮಾಡಲು ಹೋದಾಗ, ದೂರದಿಂದಲೇ ಬಿಳಿ ಹೆಂಗಸೊಬ್ಬಳು ಆ ಹೊಂಡದಿಂದ ಎದ್ದು ಬಂದಿದ್ದನ್ನು ಕಣ್ಣಾರೆ ಕಂಡಳು. ಮೊದಲು ತನ್ನ ಅತ್ತೆಯೇ ಇರಬಹುದು ಎಂದುಕೊಂಡವಳಿಗೆ, ತನ್ನ ಅತ್ತೆ ಎಂದೂ ಬಿಳಿಸೀರೆ ಉಟ್ಟವಳಲ್ಲ, ಅಲ್ಲದೆ ಈ ಹೆಂಗಸು ಅಷ್ಟು ಮುದುಕಿಯಂತೆ ಕಂಡಿರಲಿಲ್ಲ. ಅಂದರೆ ಬೇರೆಯಾರೋ ಎಂದು ಹತ್ತಿರ ಹೋದರೆ ಅಲ್ಲಿ ಹೆಂಗಸಿರಲಿಲ್ಲ. ತಕ್ಷಣ ಮನೆಗೆ ಬಂದವಳೇ ದೂರದಲ್ಲಿ ಕುಳಿತು ಕಲಕೈ ಗಡ್ಡನಿಗೆ ನಡೆದ ವಿಷಯವೆಲ್ಲ ಹೇಳಿದಳು. ‘ಅದು ಚೌಡಿಯೇ, ಇಷ್ಟು ದಿನ ನನಗೆ ಕಾಣಿಸಿಕೊಳ್ಳುತ್ತಿದ್ದಳು, ಈಗ ನಿನಗೂ ಕಾಣಿಸಿಕೊಳ್ಳುತ್ತಿದ್ದಾಳೆ ಎಂದರೆ ನಿನ್ನ ಅದೃಷ್ಟ ಖುಲಾಯಿಸಿದೆ ಎಂದರ್ಥ, ಇನ್ನುಮುಂದೆ ನಿನ್ನ ಕಷ್ಟಗಳೆಲ್ಲ ತೀರಿತು ಎಂದುಕೋ..’ ಎಂದರು. ಆಗಾಗ ಶಾರಿಯನ್ನೂ, ‘ಅಕ್ಕಾ, ಇವತ್ತು ಸ್ನಾನ ಮಾಡಲೆ ಹೋಪಕ್ಕಾರೆ, ಕೆಳಗಿನ ಹೊಂಡದಿಂದ ಬಿಳಿ ಹೆಂಗಸು ಎದ್ದು ಹೋತು, ಆನು ನೋಡ್ದಿ, ನಿಂಗೆ ಕಂಡ್ಚಾ… ಇವತ್ತು ಬೆಳಗ್ಗೆ ದೇವರಿಗೆ ಹೂವು ಕೊಯ್ಯಲು ಹೋದಾಗ, ಕರವೀರ ಗಿಡದ ಹತ್ರ ನಿಂತ್ಕಂಡಿತ್ತು, ನಿಂಗೆ ಕಂಡಿದ್ದಿಲ್ಯಾ…?’ ಎಂದದ್ದನು ಕೇಳಿ, ಮೈಯ್ಯೆಲ್ಲ ಉರಿಹತ್ತಿ ‘ಈ ಚೌಡಿ, ಪಿವಡಿ ಎಲ್ಲ ಎನ್ನಹತ್ರೆಲ್ಲ ಸುಳೀತ್ವಿಲ್ಲೆ. ಎಂಗೆಲ್ಲ ಕಾಣಸಕ್ಯತ್ವಿಲ್ಲೆ..’ ಎಂದು ಕಠಿಣವಾಗಿ ನುಡಿದಿದ್ದಳು ಶಾರಿ. ಆದರೆ ಈ ಚೌಡಿ ಈ ಇಬ್ಬರಿಗೇ ಯಾಕೆ ಕಾಣಿಸುತ್ತಾಳೆ..? ತನಗ್ಯಾಕೆ ಕಾಣಿಸುವುದಿಲ್ಲ…ಇದು ಶಾರಿಯನ್ನು ಬಾಧಿಸುತ್ತಿದ್ದ ಪ್ರಶ್ನೆ.

ಹೀಗೆ ಶಾರಿಯ ಅನುಮಾನ, ಜಯಲಕ್ಷ್ಮಿಗೆ ಕಂಡ ಚೌಡಿ, ಮಕ್ಕಳ ಕುತೂಹಲಗಳ ನಡುವೆಯೇ ಅಕ್ಕಪಕ್ಕ ಊರುಗಳಲ್ಲಿ ಶಿವರಾಮಣ್ಣನ ಮನೆಯಲ್ಲಿ ಸ್ವಾಮಿಗಳೊಬ್ಬರು ಬಂದು ನೆಲೆಸಿದ್ದು ದೊಡ್ಡ ಸುದ್ದಿಯಾಗಿ, ಅವರನ್ನು ನೋಡಬೇಕೆಂದು ಕೆಲವರು ಬರತೊಡಗಿದರು. ಆದರೆ ಯಾರೊಬ್ಬರಿಗೂ ದರ್ಶನ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು ಸ್ವಾಮಿಗಳು. ಅವತ್ತೊಂದು ದಿನ ಮೂರುಸಂಜೆಯ ಹೊತ್ತು ಸ್ವಾಮಿಗಳು ಸಂಜೆಯ ಸ್ನಾನ ಮಾಡಿ, ಎಂದಿನ ಹಾಗೆ ಖಾವಿ ಧರಿಸಿ, ಬಿಳಿ ಗಡ್ಡವನ್ನು ಬಾಚಿಕೊಂಡು ದೇವರ ಧ್ಯಾನದಲ್ಲಿ ಕೂರುವುದಕ್ಕೂ ಪಕ್ಕದ ಹಳ್ಳಿ ಪಂಜಿಜಡ್ಡಿನ ಸಾವಿತ್ರಕ್ಕ-ದ್ಯಾವ್ರಣ್ಣ ದಂಪತಿ ತನ್ನಿಬ್ಬರು ಮಕ್ಕಳೊಂದಿಗೆ ಅವರ ಮನೆಗೆ ಬರುವುದಕ್ಕೂ ಸರಿಹೋಯಿತು.

ಅದು ಶಿವರಾಮಣ್ಣನ ಮನೆಯ ಹಾದಿಯಗುಂಟವೇ ಹಾದು ಅವರ ಮನೆಗೆ ಹೋಗಬೇಕಾದ್ದರಿಂದ ಅವರ ಮನೆಹೊಕ್ಕವರು, ಅಲ್ಲೇ ಜಗುಲಿಯ ಮೇಲೆ ಪದ್ಮಾಸನದಲ್ಲಿ ಧ್ಯಾನಕ್ಕೆ ಕೂತ ಕಲಕೈಗಡ್ಡನನ್ನು ನೋಡಿದ, ಸಾವಿತ್ರಕ್ಕನಿಗೂ ಅವಳ ಮಗ ಗಪ್ಪತಿಗೂ ಏಕಕಾಲಕ್ಕೆ ಅನಿಸಿದ್ದು ಇವನನ್ನು ಎಲ್ಲಿಯೋ ನೋಡಿದ್ದೇವೆಂಬುದಾಗಿ. ಅಷ್ಟೇ ಅಲ್ಲ, ತಕ್ಷಣ ಗಪ್ಪತಿ, ‘ಅಮ್ಮಾ, ಅವತ್ತು ಬಿಳಗಿಯ ಮಠದಲ್ಲಿ ಕಲಾವತಕ್ಕನೊಂದಿಗೆ ಓಡಿಹೋದ್ರಲ್ಲ ಮರಿಸ್ವಾಮಿಗಳು, ಅವರ ಹಂಗೇ ಕಾಣತ್ರು ಇವರೂವ ಅಲ್ದಾ..?’ ಎಂದು ಕೇಳಿಯೂ ಬಿಟ್ಟ. ಸಾವಿತ್ರಕ್ಕನಿಗೂ ಹಾಗೇ ಅನಿಸಿದರೂ ಅದನ್ನು ಹೇಳಲಿಲ್ಲ. ಆದರೆ ಈ ಮಾತನ್ನು ಕೇಳಿ ಗಾಬರಿಗೊಂಡು ಜಗುಲಿಯವರೆಗೂ ಬಂದವರು ಸ್ವಾಮೀಜಿ ಕರೆತಂದ ಸುಬ್ಬಿ, ಲಚ್ಚಿ, ಸುಬ್ಬ, ಕರಿಯ ಮುಂತಾದ ಆಳುಗಳು. ತಕ್ಷಣ ಕಣ್ಣುಬಿಟ್ಟ ಸ್ವಾಮೀಜಿ, ಸುಮ್ಮನೆ ಇವರನ್ನು ನೋಡಿ ಹಾಗೆಯೇ ಎದ್ದು ತಮ್ಮ ಕೋಣೆ ಸೇರಿಕೊಂಡರು. ಇತ್ತ ಶಾರಿ ಸಾವಿತ್ರಕ್ಕನನ್ನು ಅಡುಗೆ ಮನೆಗೆ ಕರೆದು, ‘ಸಾಕಾಗ್ಹೋಯ್ದು ಮಾರಾಯ್ತಿ, ಇವ ಇಲ್ಲಿದ್ದು 7-8 ತಿಂಗಳೇ ಆತು. ಯಾರ್ಯಾರಿನ್ನೋ ಕರ್ಕಬತ್ತ. ಅವೆಲ್ಲ ಯಾರು, ಎಂತಕ್ಕೆ ಬತ್ತಾ ಇದ್ದ ಒಂದೂ ಅರ್ಥಆಗ್ತಿಲ್ಲೆ ಮಾರಾಗಿತ್ತಿ. ಒಂಟಿ ಮನೆ ಬೇರೆಯ. ಇಷ್ಟೆಲ್ಲ ಜನ ಸೇರಕ್ಯಂಡು ಎಂತದಾದ್ರೂ ಮಾಡಿಬಿಟ್ರೆ ಹೇಳಿ ಎಂಗೆ ಹೆದ್ರಿಕೆ. ಮೊದ್ಲೇ ಎಂಗ ಸೋತಗೈಂದ್ಯ. ಅಷ್ಟಾದ್ರೂ ಎಮ್ಮನೇರಿಗೆ ಅರ್ಥಾಗ್ತಾ ಇಲ್ಲೆ. ಅವನನ್ನು ದೊಡ್ಡ ಪವಾಡ ಪುರುಷ ಹೇಳಿ ನಂಬಕ್ಯತ್ರು. ಅದುಹೋಗ್ಲಿ, ಎಮ್ಮನೆ ಜಯಲಕ್ಷ್ಮೀ. ಅದು ಕೂಡ ಅವನನ್ನು ದೇವರು ಹೇಳಿ ನಂಬಕ್ಯತ್ತು ಮಾರಾಗಿತ್ತಿ. ಆ ಗಡ್ಡ ಚೌಡಿ ಕತೆ ಹೇಳಿದ್ರೆ, ಇದು ತಂಗೂ ಚೌಡಿ ಕಾಣ್ತು ಹೇಳ್ತು. ಯಾರ್ಯಾರಿಗೆ ಎಂತೆಂತ ಹುಚ್ಚೋ.. ಹೇಳೇ ತಿಳಿತಿಲ್ಲೆ’ ಎಂದು ಗುಸುಗುಸು ಮಾಡಿದಳು.

‘ಅಯ್ಯೋ..ಹೌದನೇ.. ಅವರ್ನ ನೋಡಿರಂತೂ ಹಂಗೇ ಅನಿಸ್ತಪ. ಈಗ ಆ ಕಲಾವತಕ್ಕ ಎಲ್ಲಿಹೋತು ಹೇಳಿ ಯಾರಿಗೂ ಗೊತ್ತಾಯ್ದಿಲ್ಲೆ ನೋಡು. ಎಂತಾದ್ರೂ ಆಗ್ಲಿ, ನಿಂಗ್ಳ ಹುಶಾರಿನಲ್ಲಿ ನಿಂಗ ಇರಿ. ಎಂತಾದ್ರೂ ಮಾಡಿ ಅವನನ್ನು ಹೊರಗೆ ಹಾಕದು ನೋಡು ಶಾರಕ್ಕ’ ಎಂದು ಕಳಕಳಿಯಿಂದ ಹೇಳಿ, ಗಂಡ, ಮಕ್ಕಳನ್ನು ಕರೆದುಕೊಂಡು ಮನೆಯ ಹಾದಿ ಹಿಡಿದಳು.

ಆ ರಾತ್ರಿ ಶಾರಿಗೆ ನಿದ್ದೆ ಬರಲಿಲ್ಲ. ಇವ ಯಾರು, ಯಾಕೆ ಇಷ್ಟೊಂದು ಜನರನ್ನು ಇಲ್ಲಿ ಕರೆತರುತ್ತಿದ್ದಾನೆ. ಇವರೆಲ್ಲ ಸೇರಿ ಏನುಮಾಡುತ್ತಾರೆ ಎಂದು ಭಯವಾಗತೊಡಗಿತು. ಪಕ್ಕಕ್ಕೆ ಹೊರಳಿದರೆ, ಶಿವರಾಮಣ್ಣ ಇತ್ಲಾಗಿನ ಕಬರಿಲ್ಲದೆ ನಿದ್ದೆಮಾಡುತ್ತಿದ್ದ. ಶಾರಿ ಬಿಟ್ಟಕಣ್ಣುಗಳಿಂದ ಮನೆಯ ಜಂತಿಯನ್ನು ನೋಡುತ್ತ ಮಲಗಿದ್ದವಳಿಗೆ, ಇದ್ದಕ್ಕಿದ್ದ ಹಾಗೆ ಅಂಗಳದಾಚೆ ಇರುವ ರಸ್ತೆಯಲ್ಲಿ ವಾಹನವೊಂದು ಬಂದು ನಿಂತ ಶಬ್ದ ಕೇಳಿ, ಬೆಚ್ಚಿ ಎದ್ದು ಕುಳಿತಳು. ಅದರ ಹಿಂದೆಯೇ ಅಂಗಳದಲ್ಲಿ ಒಂದಷ್ಟು ಜನರ ಗುಸುಗುಸು ಶಬ್ದ. ಹೆಬ್ಬಾಗಿಲ ಬಾಗಿಲು ಕಿರ್ ಎಂದು ತೆರೆದ ಶಬ್ದ ಎಲ್ಲ ಒಂದಾಗಿ ಕೇಳಿ, ದುಗುಡದಿಂದ ಗಂಡನನ್ನು ಎಬ್ಬಿಸಿದಳು. ಇಬ್ಬರೂ ಎದ್ದು ಲೈಟ್ ಹಾಕಿ ಜಗುಲಿಗೆ ಬರುವ ಹೊತ್ತಿಗೆ ಕಲಕೈ ಗಡ್ಡ ಬಾಗಿಲು ತೆಗೆದು ಹೊರಟು ನಿಂತಿದ್ದ. ಇವರನ್ನು ನೋಡಿ ಒಂದು ಕ್ಷಣ ವಿಚಲಿತನಾದರೂ ತಕ್ಷಣ, ‘ನನ್ನ ಪೂರ್ವಾಶ್ರಮದಿಂದ ಕರೆಯು ಬಂದಿದೆ, ನಾ ಕೂಡಲೇ ಹೊರಡಬೇಕಿದೆ’ ಎಂದು ಹೊರಟು ನಿಂತ. ‘ಬೆಳಗ್ಗೆ ಎದ್ದು ಹೋಗರಾಗದೇ, ಈ ಸರಿರಾತ್ರಿಯಲ್ಲಿಯೇ ಯಾಕೆ ಹೋಗಬೇಕಿದೆ’ ಎಂದು ಕೇಳಿದ ಶಿವರಾಮಣ್ಣನಿಗೆ, ‘ಪೂರ್ವಾಶ್ರಮದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ, ನಾ ಈಗಲೇ ಹೋಗಬೇಕು’ ಎಂದು ಅವಸರ ಅವಸರದಲ್ಲಿ ಹೊರಟೇ ಬಿಟ್ಟ. ಅವನೊಡನೆ ಇನ್ನೂ ನಾಲ್ಕಾರು ಜನ ಇದ್ದರು. ಅಂಗಳದ ಆಚೆ ಇರುವ ರಸ್ತೆಯಲ್ಲಿರುವ ಜೀಪೊಳಗೆ ಎಲ್ಲರೂ ಹತ್ತಿದ್ದನ್ನು ಶಾರಿ ಕಿಟಕಿಯಿಂದಲೇ ನೋಡಿದಳು. ಈಗ ಕಲಕೈ ಗಡ್ಡ ಕಾವಿ ಬಟ್ಟೆಧರಿಸಿರಲಿಲ್ಲ. ಬಿಳಿ ಕಸೆ ಅಂಗಿ, ಬಿಳಿಜುಬ್ಬಾ ಧರಿಸಿದ್ದನ್ನು ಆ ರಾತ್ರಿಯ ಅಂಥ ಅವಸರದಲ್ಲೂ ಶಾರಿ ಗಮನಿಸಿದಳು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಇಡೀ ಮನೆ ತಣ್ಣಗಾಗಿ ಎಲ್ಲ ಅವರವರ ಕೋಣೆಗೆ ಹೋಗಿ ಮಲಗಿದರು.

ಮಾರನೇ ದಿನ ಜಯಲಕ್ಷ್ಮಿ ಕಾಣುತ್ತಿಲ್ಲವೆಂದು ಬೆಳಗ್ಗೆ ಎದ್ದವನೇ ಮಂಜಣ್ಣ ಮನೆ ಸುತ್ತ ಹುಡುಕಿದ. ಅಷ್ಟೊತ್ತಿಗೆ ಶಾರಿಯ ಗಮನಕ್ಕೆ ಬಂದದ್ದು ಗಡ್ಡನೊಂದಿಗೆ ಬಂದ ಸುಬ್ಬಿ, ಲಚ್ಚಿ, ಕರಿಯ, ಸುಬ್ಬ ಸೇರಿದಂತೆ ಯಾರೊಬ್ಬರೂ ಕಾಣುತ್ತಿಲ್ಲವೆಂದು.

ಅವರೆಲ್ಲ ಯಾರಾಗಿದ್ದರು? ಇಷ್ಟು ದಿವಸ ಇಲ್ಲಿ ಸಭ್ಯರಂತೆ ಯಾಕಿದ್ದರು? ಈಗ ಜಯಲಕ್ಷ್ಮಿಯೂ ಗಂಡ, ಮನೆ ಮಠ ಎಲ್ಲ ಬಿಟ್ಟು ಅವನ ಹಿಂದೆಯೇ ಹೋಗುವಂಥ ಆಕರ್ಷಣೆ ಏನಿದ್ದಿತ್ತು? ಅಂಥ ಮಾಟದಂಥ ಮಾತುಗಳನ್ನು ಅವನಾಡಿದ್ದಾದರೂ ಏನು? ಈ ಮನೆಯನ್ನೊಂದು ಗಡ್ಡ ತನ್ನ ಕಾರಸ್ಥಾನವನ್ನಾಗಿಸಿಕೊಂಡಿದ್ದರ ಹಕೀಕತ್ತಾದರೂ ಏನು ಹಾಗಿದ್ದರೆ, ಹೀಗೆಲ್ಲ ಒಂದಾದರೊಂದರಂತೆ ಒಂದು ಪ್ರಶ್ನೆಗಳು ಅವಳ ತಲೆಯಲ್ಲಿ ಗಿರಕಿ ಹೊಡೆಯುವಾಗಲೇ, ಪಕ್ಕದ ಹಳ್ಳಿಯ ನಕ್ಸಲ್ ಗಲಭೆ, ಪೊಲೀಸರ ಗುಂಡಿನ ಚಕಮಕಿಯ ಕತೆಗಳನ್ನು ಗಂಡ ಹೇಳಿದ್ದೆಲ್ಲ ನೆನಪಾಗಿ, ಯಾಕೋ ನಿನ್ನೆ ರಾತ್ರಿ ಮನೆಗೆ ಬಂದ ಆ ಜೀಪು ಪೊಲೀಸ್ ಜೀಪಿನಂತೆಯೇ ಅನಿಸಿ, ಗಡಗಡನೆ ನಡುಗಿದಳು ಶಾರಿ. ಹಾಗೆ ನಡುಗುತ್ತಲೇ ಒಳಬಂದವಳಿಗೆ, ಜಗುಲಿಯಲ್ಲಿದ್ದ ಆ ಕಿಟಕಿ, ಕಿಟಕಿಯ ಮೇಲಿದ್ದ ಕೊಬ್ಬರಿ ಎಣ್ಣೆಯ ತಟ್ಟೆ ಎಲ್ಲವೂ ವ್ಯಂಗ್ಯವಾಗಿ ನಗುತ್ತಿರುವಂತೆ ಭಾಸವಾಯಿತು.