ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು, ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ, ಬಿದ್ದ ಹೂವಲ್ಲೂ ಮಕರಂದ ಹುಡುಕುತ್ತಾ ನಿರಾಶೆಯಾಗಿ ಹೋಗುವ ಚಿಟ್ಟೆಗಳ ಹಿಂಡು, ರಸಗುಲ್ಲದಂತೆ ಕೆಂಪಾಗಿ ಸುಯ್ ಎಂದು ಹಾರಿ ಮರವೇರುವ ಹಾರುವ ಓತಿ…
ಪ್ರಸಾದ್ ಶೆಣೈ ಬರೆವ ಮಾಳ ಕಥಾನಕದ ಹದಿನೆಂಟನೆಯ ಕಂತು
ಆ ಬೆಳಗು ತಾನೇ ಉದುರಿದ್ದ ಮಳೆಗೆ ಕತ್ತಲೆ ಕಾಡಿನಲ್ಲಿ ಹಾಯಾಗಿ ಮಲಗಿದ್ದ ತರಗೆಲೆಗಳೆಲ್ಲಾ ಮಳೆ ಹನಿ ಹೊದ್ದುಕೊಂಡು, ಗಾಳಿಯ ಬೆಳಗಿನ ಜೋಗುಳ, ಹಕ್ಕಿಹಾಡುಗಳನ್ನೆಲ್ಲಾ ಕೇಳುತ್ತಾ ಎರಡನೇ ಸುತ್ತಿನ ನಿದ್ದೆ ಹೋಗಲು ಶುರು ಮಾಡುತ್ತಿತ್ತು. ಅಷ್ಟು ಚೆಂದಗಿನ ಹನಿಗಳೆಲ್ಲಾ ಎಲೆಗಳ ಮೇಲೆ ಬಿದ್ದಿದ್ದರೆ ಆ ಹನಿಯ ಮೇಲೆ ಹೆಜ್ಜೆ ಇಟ್ಟು ನಡೆಯಲು ಮನಸ್ಸಾದರೂ ಹೇಗೆ ಬರಬೇಕು ಹೇಳಿ? ಸಾಂಪ್ರಾದಾಯಿಕ ಮನೆಯೊಂದರ ಅಂಗಳಕ್ಕೆ ಹೋದಾಗ ಅಲ್ಲಿ ಹಾಕಿರುವ ಬಣ್ಣದ ರಂಗೋಲೆಯನ್ನು ತುಳಿದು ಮನೆಯೊಳಗೊಕ್ಕಬೇಕು ಅನ್ನಿಸುತ್ತದಾ? ಆ ರಂಗೋಲೆಯಲ್ಲೇ, ರಂಗೋಲೆ ಹಾಕಿದ ಹುಡುಗಿಯ ಬೆರಳ ಬೆಳಕಿರುತ್ತದೆ. ಅವಳ ಕಣ್ಣಿನ ಮಿಂಚೆಲ್ಲಾ ಆ ರಂಗೋಲಿಯಲ್ಲೇ ಆಟವಾಡುತ್ತಿರುತ್ತದೆ ಅಲ್ವಾ. ಹಾಗೇ ಇತ್ತು ತರಗೆಲೆಗಳ ಮೇಲೆ ಬಿದ್ದ ಮಳೆಹನಿಗಳ ರಂಗೋಲೆ. ಅದನ್ನೇ ನೋಡುತ್ತ ಒಂದು ಕ್ಷಣ ಅಲ್ಲೇ ನಿಂತುಬಿಟ್ಟೆ. ನಮ್ಮ ದಾರಿ ಯಾವತ್ತೂ ಸಾಗುತ್ತಲೇ ಇರಬಾರದು, ದಾರಿಯ ಎಲೆಯಲ್ಲಿ ಉದುರಿಬಿದ್ದ ಮಳೆ ಹನಿ, ಅಲ್ಲೆಲ್ಲೋ ಅರಳುತ್ತಿರುವ ಕಾಡ ಹೂವು, ಯಾವುದೋ ಹಳ್ಳ, ಮತ್ಯಾವುದೋ ಪರಿಮಳ ಒಮ್ಮೆ ನಮ್ಮ ಹೆಜ್ಜೆಗಳನ್ನು ನಿಲ್ಲಿಸಿಬಿಡಬೇಕು, ನಾವು ತಟಸ್ಥರಾಗಿ ಅದನ್ನೇ ಅವಕ್ಕೆಂದು ನೋಡುತ್ತ ಆ ಹಳ್ಳದಂತೆ, ಆ ಪರಿಮಳದಂತೆ, ಆ ಕಾಡ ಹೂವಿನಂತೆಯೇ ಆಗಿಬಿಡಬೇಕು. ಇದೆಲ್ಲಾ ಅತೀಯಾಯ್ತು ಅನ್ನಬೇಡಿ, ಬೇಕಿದ್ದರೆ ಇನ್ನೊಮ್ಮೆ ಕಾಡ ದಾರಿ ಹೊಕ್ಕಾಗ ಸುಮ್ಮನೇ ಇವೆನ್ನೆಲ್ಲಾ ಅನುಭವಿಸಿ ನೋಡಿ. ಆಗ ನೀವು ಆ ಹೂವಂತ ಮನಸ್ಸಿನ, ಹಳ್ಳದಂತಹ ಹರಿವಿನ ಜೀವವಾಗುತ್ತೀರಿ.
ನಮ್ಮೂರಲ್ಲಿ ಆವತ್ತು ಬೆಳ್ಳಂಬೆಳಗ್ಗೆಯೇ ದೊಡ್ಡ ಗುಡುಗು, ಮಿಂಚು ಮೂಡಿ, ಮೋಡಗಳಿಂದ ಮಿಂಚುತ್ತಿದ್ದ ಆಕಾಶ ಶೀತದಿಂದಲೇ ತುಂಬಿದ ಪುಟ್ಟ ಹುಡುಗನ ಮೂಗಿನಂತೆ ಕಾಣುತ್ತಿತ್ತು. ಮಳೆ ಜೋರಾದರೆ ಕತ್ತಲ ಕಾಡಿಗೆ ಹೋಗೋದೇಗೆ? ಅಂತ ನಾವು ಒಂದು ಕ್ಷಣ ಯೋಚನೆಗೀಡಾದರೂ, ಬಿಸಿಲುಗಾಲದಲ್ಲಿ ಹೀಗೆ ಹೇಳದೇ ಕೇಳದೇ ಸುರಿಯೋ ಮಳೆಯಲ್ಲಿ ನೆನೆದು ಕಾಡು ಸುತ್ತುವ ಸುಖವನ್ನು ಕಳೆದುಕೊಳ್ಳಲು ನನಗೇನು ಹುಚ್ಚಾ? ಅನ್ನಿಸಿ, ಕತ್ತಲ ಕಾಡಿನ ದಾರಿ ಹಿಡಿದೆವು.
ರಾತ್ರಿಯೆಲ್ಲಾ ಮಳೆ ಸುರಿದು ಕಾಡ ದಾರಿ ಆಗ ತಾನೇ ಸ್ನಾನ ಮುಗಿಸಿ ಬಂದು ಮೈಗೆ ಬಿಸಿಲಿನ ಸುಗಂಧ ದ್ರವ್ಯ ಪೂಸುವಂತೆ ಕಾಣುತ್ತಿತ್ತು. ಆಕಾಶದಲ್ಲಿ ಮೈನಾ ಹಕ್ಕಿಗಳ ಹಿಂಡು, ಅಚಲದಲ್ಲಿ ಸಾಗುತ್ತಿರುವ ಒಂಟಿ ಹದ್ದು, ಗೇರು ತೋಪುಗಳ ನಡುವಿಂದ ಗಮ್ಮ್ ಎಂದು ಹೊಮ್ಮುತ್ತಿದ್ದ ಗೇರು ಹಣ್ಣಿನ ಮಾದಕ ಪರಿಮಳ, ಡಬ್ಬ್ ಅಂತ ರಸ್ತೆಯಲ್ಲೇ ಬಿದ್ದುಬಿಟ್ಟ ಕಡುಗೆಂಪು ಬಣ್ಣದ ಗೇರುಹಣ್ಣು, ಇವನ್ನೆಲ್ಲಾ ನೋಡುತ್ತ ನೋಡುತ್ತ ಕೊನೆಗೆ ಕತ್ತಲ ಕಾಡಿನ ದಾರಿಯ ಆರಂಭಕ್ಕೆ ತಲುಪಿದಾಗ ಸ್ನೇಹಿತ ರಾಮ್ ಅಲ್ಲೇ ನಿಂತು ದೂರದ ಬೆಟ್ಟ ತೋರಿಸುತ್ತಿದ್ದ, ಅಲ್ಲಿ ವಾಲಿಕುಂಜ ಬೆಟ್ಟ, ಮಲೆನಾಡಿನ ವಿಶಾಲ ಪರ್ವತ ಶ್ರೇಣಿಗಳು, ಮುಗಿಲಿಗೆ ತುಟಿ ಕೊಟ್ಟಿದ್ದ ದೊಡ್ಡದೊಂದು ಮರ, ಬಿಸಿಲಿಗೆ ಮೈ ಕೊಡವಿಕೊಂಡು ಆಗತಾನೇ ಎಚ್ಚರಾಗಿ ಪಿಳಿಪಿಳಿ ಮಬ್ಬು ಕಣ್ಣುಗಳಿಂದ ನಮ್ಮನ್ನೇ ನೋಡುತ್ತಿದ್ದವು.
ನಾವೀಗ ಭೋಜೇಗೌಡರ ಮನೆಗೆ ಹೋಗಬೇಕೆಂದೂ, ಭೋಜೆಗೌಡರು ಬೇರೆ ಯಾವುದೋ ಕೆಲಸಕ್ಕೆ ಹೋಗಬೇಕಿರುವುದರಿಂದ ನಮ್ಮ ಜೊತೆ ಒಂದಷ್ಟು ಮಾತಾಡಿ, ಕಾಡಿನ ಎತ್ತರದಲ್ಲಿರುವ ಇನ್ನೊಂದು ಮನೆಯ ದಾರಿ ತೋರಿಸಲು ಜನ ಕಳುಹಿಸುತ್ತಾರೆಂದೂ ಹೇಳಿದ. ಅಲ್ಲೇ ಇರುವ ಭೋಜೆಗೌಡರ ಮನೆ ತಲುಪಿದಾಗ, ಬಿಳಿ ಶರ್ಟು, ಪಂಚೆ ತೊಟ್ಟು ಎಲ್ಲಿಗೋ ಹೋಗಲು ರೆಡಿಯಾಗಿದ್ದ ಗೌಡರು ನಮ್ಮನ್ನು ನಗುತ್ತಾ ಸ್ವಾಗತಿಸಿದರು. “ಇದು ನಾವು ಬೆಳೆದ ಅಡಿಕೆ ಮೂಟೆಗಳನ್ನು ಸಾಗಿಸಲು ಅನುಕೂಲವಾಗಲೆಂದು ನಾವೇ ಕಟ್ಟಿದ ಮನೆ. ಆದರೆ ಬೆಟ್ಟದ ಮೇಲಿರುವ ಮನೆಯಲ್ಲಿಯೇ ನಾವೆಲ್ಲಾ ಅರ್ಧ ಬದುಕು ಕಳೆದಿದ್ದೇವೆ. ಅದೇ ನಮಗೆ ದೊಡ್ಡ ಅರಮನೆ. ಅದನ್ನು ಮೀರಿದ್ದು ಯಾವುದೂ ಇಲ್ಲ ಬದುಕಲ್ಲಿ” ಎಂದರು. ಅಲ್ಲಿ ಬೇರ್ಯಾವುದೂ ಮನೆಗಳಿಲ್ಲ. ಅಷ್ಟು ದೊಡ್ಡ ಕಾಡಲ್ಲಿ ನಮ್ಮದೇ ಒಂಟಿ ಮನೆ. ಮನೆ ಹಳತಾಗಿದೆ. ಆದರೆ ಬದುಕು ಹಳತಲ್ಲ ಅಲ್ಲವಾ? ಅಲ್ಲಿಂದ ನಮ್ಮನ್ನು ಕೆಲವರು ಒಕ್ಕಲೆಬ್ಬಿಸಲು ನೋಡಿದರು, ನೀವ್ಯಾಕೆ ಇಲ್ಲಿ ಒಬ್ಬರೇ ಇದ್ದೀರಿ. ಹಾಯಾಗಿ ಪೇಟೆಯಲ್ಲಿ ಮನೆ ಮಾಡಿಕೊಂಡಿರಬಹುದಲ್ವಾ ಅಂದರು. ಈ ಜಾಗವನ್ನು ಬಿಟ್ಟು ಹೋಗಲೇಬಾರದು, ಇಲ್ಲೇ ನಮ್ಮ ಬದುಕು ಅಂತ ನಾನು ಮತ್ತಷ್ಟು ದೃಢ ನಿಶ್ಚಯ ಮಾಡಿದ್ದು ಆ ಕ್ಷಣದಲ್ಲೇ, ಹುಟ್ಟಿದ ಜಾಗವನ್ನು ಬಿಟ್ಟುಹೋಗೋದಕ್ಕಿಂತಲೂ ದೊಡ್ಡ ದುಃಖ ಯಾವುದಿದೆ ಹೇಳಿ, ನಾನು ಅಡಿಕೆ ಬೆಳೆದು ತೋಟವನ್ನೇ ಬದುಕು ಮಾಡಿಕೊಂಡಾಗಿದೆ” ಎಂದು ಒಂದೇ ಸಮನೆ ತನ್ನೆಲ್ಲಾ ಕತೆಯನ್ನು ಭೋಜೇಗೌಡರು ತೋಡಿಕೊಂಡರು. ಅವರ ಕಣ್ಣಲ್ಲಿ ದೃಢತೆಯಿಂದ ಉರಿಯುತ್ತಿದ್ದ ದೀಪ ಮತ್ತಷ್ಟು ಬೆಳಗುತ್ತಿತ್ತು.
ಮನೆ ಹುಡುಗ ಕರ್ಣನನ್ನು ನಮಗೆ ಕತ್ತಲ ಕಾಡಿನ ತುದಿಯಲ್ಲಿರುವ ಮನೆಗೆ ದಾರಿ ತೋರಿಸಲು ಕಳುಹಿಸಿದರು. ಕಾಡಿಗೆ ಹೊಕ್ಕುವ ಮೊದಲು ಅಲ್ಲೇ ಇದ್ದ ನೆಕ್ಕರೆ ಮಾವಿನ ಗೊಂಚಲೊಂದನ್ನು ಉರುಳಿಸಿ ಅದರ ತುಟಿಗೆ ಸಣ್ಣಗೇ ಕಚ್ಚಿದಾಗ ಒಸರಿದ ಸಿಹಿಯನ್ನು ಹೀರುತ್ತಾ ಹೀರುತ್ತಾ ಹುಡುಗ ಕರ್ಣನೊಂದಿಗೆ ಕತ್ತಲ ಕಾಡಿನ ದಾರಿ ಹಿಡಿದಾಗ ಮಳೆ ಎಲ್ಲಾ ಕರಗಿ ಬಾನು ಪೂರ್ತಿ ಶುಭ್ರವಾಗಿತ್ತು. ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು, ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ, ಬಿದ್ದ ಹೂವಲ್ಲೂ ಮಕರಂದ ಹುಡುಕುತ್ತಾ ನಿರಾಶೆಯಾಗಿ ಹೋಗುವ ಚಿಟ್ಟೆಗಳ ಹಿಂಡು, ರಸಗುಲ್ಲದಂತೆ ಕೆಂಪಾಗಿ ಸುಯ್ ಎಂದು ಹಾರಿ ಮರವೇರುವ ಹಾರುವ ಓತಿ, ಆಗಾಗ ಕತ್ತಲಾಗುತ್ತ ಬೆದರಿಸುವ ಕತ್ತಲಕಾಡು, ಆ ಕತ್ತಲಲ್ಲೂ ಉದ್ದಕ್ಕೆ ನಡೆದಷ್ಟೂ ಬೆಳೆಯೋ ಕಾಡು, ಇವೆಲ್ಲವನ್ನೂ ಪ್ರೀತಿಸುತ್ತಲೇ ಸಾಗಿದರೆ ಬದುಕೆಷ್ಟು ಚಂದವಾದದ್ದು ಎನ್ನುವ ಧನ್ಯತೆ ಆವರಿಸುತ್ತದೆ.
ಕರ್ಣ ಹರೆಯದ ಹುಡುಗ, ಕಾಡಲ್ಲಿ ಅಷ್ಟಿಷ್ಟು ಓಡಾಡಿ ಕಾಡಿನ ಕಾಗುಣಿತ ಕಲಿತಿದ್ದ, ಕತ್ತಿಯಿಂದ ದಾರಿಯಲ್ಲಿರುವ ಪೊದೆಗಳನ್ನು ಸವರಿ ನಮಗೆಲ್ಲಾ ದಾರಿಮಾಡಿಕೊಡುತ್ತ, ನಾವೇನಾದರೂ ಅದು ಇದು ಮಾತಾಡಿಸಿದರೆ ತನಗೆ ಗೊತ್ತಿದ್ದನ್ನು, ಭೋಜೇಗೌಡರು ಹೇಳಿದ್ದನ್ನು ಒಪ್ಪಿಸುತ್ತ ಇಡೀ ಕಾಡಿನ ಕುರಿತು ಮತ್ತಷ್ಟು ಆಸೆ ಮೂಡಿಸುತ್ತಿದ್ದ. ಎಲ್ಲಕ್ಕಿಂತಲೂ ನನಗೆ ತುಂಬಾ ಜೀವನಪ್ರೀತಿ ಮೂಡಿಸಿದ್ದೆಂದರೆ ಬಾಡು ಎನ್ನುವ ಬೇಟೆನಾಯಿ, ಅದು ಕರ್ಣನಿಗಿಂತಲೂ ಮುಂದಾಗಿ ನಮಗೆಲ್ಲಾ ದಾರಿಯಾಗಿತ್ತು. ತೇಜಸ್ವಿಯವರ ಕಿವಿ ನಾಯಿಯಂತೆ ಜಿಗಿಯುತ್ತಾ, ಕುಪ್ಪಳಿಸುತ್ತಾ, ಏನಾದರೂ ವಿಚಿತ್ರವಾದದ್ದು ಕಂಡರೆ ಬೊಗಳಿ ನಮಗೆಲ್ಲಾ ಅಲ್ಲೇನೋ ಇದೆ ನೋಡಿ ಅಂತ ಎಚ್ಚರ ಮೂಡಿಸುತ್ತಾ ಬಾಲ ಅಲ್ಲಾಡಿಸಿ ಹೋಗುತ್ತಿತ್ತು ಬಾಡು. ಕಂದು ಬಣ್ಣದ ಆ ನಾಯಿಯ ಮುಖಕ್ಕೆ ಗಾಯವಾಗಿತ್ತು. ಕಾಡುಪ್ರಾಣಿಗಳ ಜೊತೆ ಸದಾ ಕಾದಾಟಕ್ಕೆ ಸಿದ್ದವಾದ ಧೀರ ನಾಯಿ, ಅದ್ಯಾವುದೋ ಕಾಡುಪ್ರಾಣಿಯ ಜೊತೆ ಕಾದಾಡಿ ಗಾಯಮಾಡಿಕೊಂಡಿರಬೇಕು ಅನ್ನಿಸಿತು.
ನಾವು ದಣಿವಾಗಿ ನಿಂತರೆ ಅದೂ ಕಾಡು ನೋಡುತ್ತ ನಿಂತುಬಿಡುತ್ತಿತ್ತು. ನಾವು ಮತ್ತೆ ಸಾಗಿದರೆ ನಮಗಿಂತಲೂ ಮುಂದಕ್ಕೋಡಿ ದಾರಿ ತೋರಿಸುವ ಹುಮ್ಮಸ್ಸು ಬಾಡುಗೆ. ನಾಯಿಯಂತಹ ಮುಗ್ದ ಪ್ರಾಣಿಗಳು ಮನುಷ್ಯನನ್ನು ಕೆಲವೇ ಕ್ಷಣದಲ್ಲಿ ಹಚ್ಚಿಕೊಂಡು ಬಿಡುತ್ತದೆ. ನೀವು ಒಂಚೂರು ಪ್ರೀತಿ ತೋರಿಸಿದರೂ ಅದು ನಿಮ್ಮನ್ನು ಯಾವುದೇ ಸಂದರ್ಭದಲ್ಲಿಯೂ ಬಿಟ್ಟುಕೊಡುವುದಿಲ್ಲ. ಈ ಬಾಡು ಕೂಡ ಹಾಗೆ ಒಮ್ಮೆ ತಲೆ ಸವರಿದರೆ ಸಾಕು, ನಾಚುತ್ತಾ ಹತ್ತಿಪ್ಪತ್ತು ಸಲ ಪ್ರದಕ್ಷಿಣೆ ಹಾಕುತ್ತಿತ್ತು. ನಾವು ಈ ನಾಯಿಯ ಚೇಷ್ಟೆಯನ್ನು ನೋಡುತ್ತ ಎತ್ತರಕ್ಕೆ ಏರುತ್ತಿದ್ದುದೇ ಗೊತ್ತಾಗಲಿಲ್ಲ.
“ಇದೇ ಕಾಡಿನ ಆಚೆ ಭಯಂಕರವಾಗಿದ್ದೊಂದು ಹುಲಿ ಇದೆ. ಅಂತಹ ಹುಲಿಯನ್ನು ಗೌಡರು ಜೀವಮಾನದಲ್ಲೇ ನೋಡಿರಲಿಲ್ಲವಂತೆ, ಅವರು ಒಬ್ಬರೇ ಅಲ್ಲಿದ್ದರೆ ಹುಲಿ ಅವರನ್ನು ಏನು ಮಾಡ್ತಿತ್ತೋ, ಆದರೆ ಅವರು ಗೆಳೆಯರ ಗುಂಪಾಗಿ ಕಾಡಿಗೆ ಹೋಗಿದ್ದರಿಂದ ಹುಲಿ ಸುಮ್ಮನೇ ಹೊರಟುಹೋಯ್ತಂತೆ, ಅಂತಹ ಹುಲಿ ಈ ಕಾಡಲ್ಲಿದೆ. ಭೋಜೇಗೌಡರು ತುಂಬಾ ಹುಲಿಯನ್ನು ನೋಡಿದ್ದಾರೆ” ಎಂದ ಕರ್ಣ. ಅವನ ಮಾತಲ್ಲಿ ಹುಲಿಯನ್ನೇ ಕಂಡಷ್ಟು ಗಾಬರಿ ಇತ್ತು. ಹುಲಿಯ ಸಣ್ಣಗಿನ ಹೆದರಿಕೆಯಿಂದ ಆಚೀಚೆ ನೋಡಿದರೆ ನಿಭಿಡವಾದ ಕಾಡುಗಳ ತೆಕ್ಕೆಯಲ್ಲಿ ಬೆಚ್ಚಗೇ ನಾಚಿದ್ದ ವಾಲಿಕುಂಜದ ದೊಡ್ಡ ಮಂಡೆಯ ಬಂಡೆ. ಒದ್ದೆ ಒದ್ದೆಯಾದ ನೆಲದಲ್ಲಿ ಭರತನಾಟ್ಯ ಮಾಡುತ್ತ ನಮ್ಮ ರಕ್ತ ಹೀರಿ ಬಿದ್ದಿದ್ದ ಇಂಬಳಗಳ ಕೆಂಪು, ಸುಯ್ ಎಂದು ಕಣ್ಣೆದುರಲ್ಲೇ ಬೀಸಣಿಕೆಯಷ್ಟೇ ಗಾಳಿ ಹಾಕಿ ಹೋದ ಹಿಂಡು ಹಕ್ಕಿಗಳು, ಬೀಸುಗಾಳಿಗೆ ಹಾರಿದ ಸತ್ತ ಚಿಟ್ಟೆಯ ಬಣ್ಣ ಬಣ್ಣದ ರೆಕ್ಕೆ, ಇವೆಲ್ಲ ಚಟುವಟಿಕೆ, ಸದ್ದುಗಳ ನಡುವೆಯೂ ಕಾಡೊಮ್ಮೆ ನಿಶ್ಚಲವಾಯಿತು. ಗೌವ್ವೆನ್ನುವ ಮಹಾ ಮೌನ ಆವರಿಸಿಕೊಂಡಿತು.
ಈ ತರಹದ ನಿಶ್ಚಲತೆ ಆವರಿಸಿದಾಗೆಲ್ಲಾ ಥಟ್ ಅಂತ ಕಣ್ಣು ಮುಚ್ಚಿ ಸುಮ್ಮನೇ ದಾರಿಯಲ್ಲೇ ಕೂತುಬಿಡಬೇಕು. ಮುಚ್ಚಿದ ಕಣ್ಣಲ್ಲಿ ಕಾಡು ಇನ್ನಷ್ಟು ಬೆಳೆಯುತ್ತಲೇ ಹೋಗುತ್ತದೆ, ಪಕ್ಷಿಗಳ ಸ್ವರದಾಚೆಗಿನ ಸ್ವರ, ಹಳ್ಳದ ಹರಿವಿನ ಆಚೆಯ ಸದ್ದು, ಗಾಳಿಯ ಸದ್ದೆಲ್ಲಾ ಮುಗಿದ ಬಳಿಕವೂ ತೆನೆದೂಗುವ ಸಣ್ಣ ಗಾಳಿಯ ಕಲರವ, ಮೌನದಾಚೆಯೂ ಕೇಳಿಸುವ ಮಹಾಮೌನ. ಇವೆಲ್ಲ ಸ್ವರಗಳು ನಮ್ಮೊಳಗೆ ತರುವಷ್ಟು ಬದಲಾವಣೆಯನ್ನು, ಸ್ಪೂರ್ತಿಯನ್ನು ಬೇರೆ ಯಾವ ಆಧ್ಯಾತ್ಮಿಕ ಗುರುಗಳು ತರಲು ಸಾಧ್ಯವೇ ಇಲ್ಲ.
ಬೆಟ್ಟದ ಮೇಲಿರುವ ಮನೆಯಲ್ಲಿಯೇ ನಾವೆಲ್ಲಾ ಅರ್ಧ ಬದುಕು ಕಳೆದಿದ್ದೇವೆ. ಅದೇ ನಮಗೆ ದೊಡ್ಡ ಅರಮನೆ. ಅದನ್ನು ಮೀರಿದ್ದು ಯಾವುದೂ ಇಲ್ಲ ಬದುಕಲ್ಲಿ” ಎಂದರು. ಅಲ್ಲಿ ಬೇರ್ಯಾವುದೂ ಮನೆಗಳಿಲ್ಲ. ಅಷ್ಟು ದೊಡ್ಡ ಕಾಡಲ್ಲಿ ನಮ್ಮದೇ ಒಂಟಿ ಮನೆ. ಮನೆ ಹಳತಾಗಿದೆ. ಆದರೆ ಬದುಕು ಹಳತಲ್ಲ ಅಲ್ಲವಾ? ಅಲ್ಲಿಂದ ನಮ್ಮನ್ನು ಕೆಲವರು ಒಕ್ಕಲೆಬ್ಬಿಸಲು ನೋಡಿದರು, ನೀವ್ಯಾಕೆ ಇಲ್ಲಿ ಒಬ್ಬರೇ ಇದ್ದೀರಿ. ಹಾಯಾಗಿ ಪೇಟೆಯಲ್ಲಿ ಮನೆ ಮಾಡಿಕೊಂಡಿರಬಹುದಲ್ವಾ ಅಂದರು.
ನಾವೀಗ ತುಂಬಾ ಎತ್ತರದ ಪ್ರದೇಶದಲ್ಲಿದ್ದೆವು. ದೂರದಲ್ಲಿ ಕಾಣಿಸುತ್ತಿದ್ದ ಪಶ್ಚಿಮಘಟ್ಟಗಳ ಹಸಿರು ಕಣ್ಣಿಗೆ ರಾಚುತ್ತಿದ್ದರೂ ಅಲ್ಲಲ್ಲಿ ಕಾಡು ಕಡಿದ ಕುರುಹುಗಳು ಕಾಣಿಸುತ್ತಿತ್ತು. ಕೆರುವಾಸೆ, ಶಿರ್ಲಾಲು, ಅಜೆಕಾರು, ಕಾರ್ಕಳ ಮೊದಲಾದ ಪ್ರದೇಶಗಳನ್ನು ಸಾವಿರಾರು ವರ್ಷಗಳ ಕಾಲ ಆಳಿದ್ದ ಜೈನ ರಾಜರುಗಳ ಕಾಲದಲ್ಲಿ ಈ ಮಹಾ ಅರಣ್ಯ ಅದೆಷ್ಟು ಸಮೃದ್ಧವಾಗಿತ್ತೋ? ಆ ರಾಜರುಗಳು ದೂರದೃಷ್ಟಿಯೇ ಇಲ್ಲದೇ ಈ ಅರಣ್ಯವನ್ನೆಲ್ಲಾ ಕಡಿದಿದ್ದರೆ? ಇದ್ದ ಅರಣ್ಯವನ್ನೆಲ್ಲಾ ಬೋಳು ಮಾಡಿ ಪರಿಸರವನ್ನೇ ದ್ವೇಷಿಸಿದ್ದರೆ? ಇವತ್ತು ಇಷ್ಟೊಂದೆಲ್ಲಾ ಕಾಡುಗಳು ನಮಗೆ ನೋಡಲು ಸಿಗುತ್ತಿತ್ತಾ? ಅಂತ ಸುಮ್ಮನೇ ಯೋಚಿಸಿದೆ. ಜೊತೆಜೊತೆಗೆ ಈಗ ಪಶ್ಚಿಮಘಟ್ಟದ ಕಾಡುಗಳನ್ನು ಅಲ್ಲಲ್ಲಿ ಬೋಳು ಮಾಡಿ, ಪ್ರಕೃತಿಯ ಜೊತೆಗೆ ವಿರೋಧ ಕಟ್ಟಿಕೊಳ್ಳುವವರ ಬಗ್ಗೆ ಹೇವರಿಕೆಯೂ, ಕ್ರೋಧವೂ ಒಂದೇ ಸಲ ಬಂತು. ನಾವೀಗ ಕಣ್ತುಂಬಿಕೊಳ್ಳುತ್ತಿರುವ, ವರ್ಣಿಸುತ್ತಿರುವ ಈ ಕಾಡುಗಳು ಒಂದಷ್ಟು ವರ್ಷಗಳಾದ ಮೇಲೆ ಉಳಿಯುತ್ತವಾ? ಎನ್ನುವ ಭೀತಿಯೂ ಆಯ್ತು. ನಮ್ಮಂತಹ ಪರಿಸರ ಆಸಕ್ತ ಮನಸ್ಸುಗಳು ಎಲ್ಲಾ ಊರಲ್ಲೂ ಇದ್ದೇ ಇರುತ್ತಾರೆ, ಅವರು ಪಶ್ಚಿಮಘಟ್ಟ ಅಳಿಯಲು, ಕಾಡು ನಾಶವಾಗಲು ಖಂಡಿತ ಬಿಡುವುದಿಲ್ಲ ಎನ್ನುವ ತಾತ್ಕಾಲಿಕ ಧೈರ್ಯವೂ ಬಂತು.
ಮತ್ತೆ ನಾವು ಮೇಲೆ ಹೊಕ್ಕಾಗ ಕತ್ತಲ ಕಾಡು ಮತ್ತಷ್ಟು ಕತ್ತಲಾಯಿತು. ಇಲ್ಲಿನ ಮರಗಳು ಒತ್ತೊತ್ತಾಗಿರುವುದರಿಂದಲೇ ಇಷ್ಟೊಂದು ಕತ್ತಲಾಗಿದೆ. ಆ ಮರಗಳು, ಅದರಲ್ಲಿ ಬದುಕುವ ಸಾವಿರಾರು ಜೀವಿಗಳು, ಹಳ್ಳದ ಜಲಚರಗಳು, ಮಳೆ ಸುರಿದ್ದದ್ದೇ ಒಂದೇ ಸಮನೆ ಕಾಡ ತುಂಬಾ ಹುಟ್ಟಿಕೊಳ್ಳುವ ಮಳೆಯ ಹುಳು-ಹುಪ್ಪಟೆಗಳು, ಇವರೆಲ್ಲಾ ಎಷ್ಟೊಂದು ಅನ್ಯೋನ್ಯವಾಗಿದ್ದಾರೆ ಇಲ್ಲಿ, ಈ ಅನ್ಯೋನ್ಯತೆಯನ್ನು ಬೇರೆ ಮಾಡುವಷ್ಟು ಶಕ್ತಿ ಮನುಷ್ಯನಿಗೆ ಯಾವ ದೇವರೂ ಕೊಡದಿರಲಿ ಅನ್ನುವ ಪ್ರಾರ್ಥನೆ ನನ್ನೊಳಗಾಯಿತು.
ಹಾಗೇ ನಾವು ಎಷ್ಟೊತ್ತು ದಾರಿ ಸಾಗಿದ್ದೇವೋ ನಮಗೇ ಗೊತ್ತಿಲ್ಲ. ಅಲ್ಲಲ್ಲಿ ದಣಿವಾರಿಸಿಕೊಂಡು, ಮತ್ತೆ ನಡೆಯುತ್ತಾ ಕಣ್ಣೆದುರು ನೋಡುತ್ತೇವೆ “ಆಹಾ ಅಲ್ಲೊಂದು ಗೋಡೆಗೆ ಅಂಟಿದ ಮರದ ಗೇಟು, ಅದರ ಹಿನ್ನೆಲೆಯಲ್ಲಿ ದೊಡ್ಡದ್ದೊಂದು ಅಡಿಕೆ ತೋಟ, ಅಲ್ಲೇ ಕೊನೆಯಲ್ಲಿ ಸ್ವರ್ಗದಂತಹ ಮಣ್ಣಿನ ಮನೆ. ಆ ಮನೆಯ ತುಂಬೆಲ್ಲಾ ಸೂರ್ಯನ ಬೆಳಕು, ಕತ್ತಲೆಕಾಡಿನ ಪ್ರತಿಬಿಂಬವೆಲ್ಲಾ ಬಿದ್ದು ಅದ್ಯಾವುದೋ ಕತೆಯಲ್ಲಿ ಕಂಡ ಮಾಯಕದ ಮನೆಯಂತೆ ಕಾಣುತ್ತಿತ್ತದು. ಅಷ್ಟೊತ್ತು ನಡೆದು ಕೊಂಚ ಕೊಂಚವೇ ದಣಿದದ್ದ ದೇಹದಲ್ಲೀಗ ಆ ಮನೆಯ ಹಂಚಿನ ಬೆಳಕು, ಅಂಗಳದ ತುಂಬಾ ಸಾರಿದ್ದ ಸೆಗಣಿಯ ಪರಿಮಳವೆಲ್ಲಾ ಒಂದಾಗಿ ನನ್ನೊಳಗೆ ಏನೇನೋ ಆಗಿ ಹೋಯ್ತು. ಹಳತಾಗಿದ್ದ ಮನೆಯ ಬಾಗಿಲಿನಿಂದ ಅಜ್ಜಿಯೊಬ್ಬಳು ಬಂದು ಎಂದಿನಿಂದಲೋ ನಮ್ಮ ಪರಿಚಯವಿರುವವಳಂತೆ ತಿಳಿಯಾಗಿ ನಕ್ಕಳು. ಆ ನಗುವಿನಲ್ಲಿ ಯಾವ ಕಲ್ಮಶವೂ ತುಂಬಿಕೊಳ್ಳದ ಹಳ್ಳದ ಹರಿವಿತ್ತು. ಆ ಅಜ್ಜಿಯನ್ನು ಕಣ್ತುಂಬಿಕೊಳ್ಳುತ್ತಾ ಬೆಟ್ಟದಿಂದ ಅಂಗಳದಲ್ಲಿ ಧುಮುಕುತ್ತಿದ್ದ ದಬ್ಬೆ ನೀರಿಗೆ ಮುಖವೊಡ್ಡುತ್ತಾ ಇದ್ದರೆ ಆಹಾ ಲೋಕದ ಸೊಗಸೆಲ್ಲವೂ ಎದೆಗಿಳಿದಂತಾಯಿತು.
“ಅವರು ಭೊಜೇಗೌಡರ ಅಕ್ಕ, ಅವರೊಬ್ಬರೇ ಇರೋದು ಈ ಮನೇಲಿ. ಭೊಜೇಗೌಡರು ಬರ್ತಾ ಇರ್ತಾರೆ. ಕ್ವಿಂಟಾಲ್ ಗಟ್ಟಲೇ ಅಡಿಕೆ ಅಡಿಕೆ ಸಾಗಿಸಬೇಕಿತ್ತು ಹಿಂದೆ. ಈಗ ಸ್ವಲ್ಪ ಕಡಿಮೆ. ನಾನೂ ಕೆಲಸಕ್ಕೆಲ್ಲಾ ಬರ್ತಾ ಇರ್ತೇನೆ” ಎಂದ ಕರ್ಣ. ಇದೇ ಹರಿಯುವ ನೀರಿನಿಂದ ಕರೆಂಟ್ ಬರೋದು ನಮ್ಗೆ. ನೋಡಿ ಅಲ್ಲಿದೆ ನೋಡಿ ಮೋಟಾರ್ ಎನ್ನುತ್ತಾ ನೀರಿನ ವಿಪರೀತ ಹರಿವಿಗೆ ಮೋಟಾರ್ ತಿರುಗಿ ಹೇಗೆಲ್ಲಾ ಕರೆಂಟ್ ಬರುತ್ತದೆಂದೂ ವಿವರಿಸಿದ. ಆ ನೀರಿನ ಹರಿವಿನ ದೊಡ್ಡ ಸದ್ದು, ಮನೆಯ ಕೊಟ್ಟಿಗೆಯಲ್ಲಿ ಅಂಬಾ ಎಂದು ಕೂಗೋ ಕರುವಿನ ಸದ್ದು ಇದಕ್ಕಿಂತ ದೊಡ್ಡ ಸಂಗೀತ ಯಾವುದಿದೆ ಹೇಳಿ? ಅಲ್ಲೇ ಚೂರು ಏರು ಏರಿದರೆ… ಆಹಾ ಮೇಲೆಲ್ಲಾ ಬೃಹತ್ ವೃಕ್ಷಗಳು ಮುಗಿಲಿಗೆ ಏರಿದಂತಿತ್ತು. ಅಷ್ಟೊತ್ತಿಗೆ ದೂರದಿಂದ ನಮ್ಮನ್ನೇ ನಿರುಕಿಸುತ್ತಿದ್ದ ಗೋವುಗಳ ನೋಟ ಅದೆಷ್ಟು ಮಾದಕವಾಗಿತ್ತೆಂದರೆ “ಗಂಗೆ ಬಾರೇ ಗೌರಿ ಬಾರೇ ತುಂಗಭದ್ರೆ ಕಪಿಲೆ ಬಾರೆ.. ಕಾಮಧೇನು ನೀನು ಬಾರೆ..” ಅಂತ ಗೊಲ್ಲನ್ನೊಬ್ಬ ಆ ಗೋವುಗಳನ್ನೆಲ್ಲಾ ಕರೆಯುತ್ತಿರಬಹುದಾ ಅನ್ನಿಸಿತು.
ನಮ್ಮ ಬೇಟೆ ನಾಯಿ ಬಾಡು, ಆ ಗೋವುಗಳ ಜೊತೆ ಸ್ನೇಹ ಬೆಳೆಸೋಣವೆಂದೋ, ಅಥವಾ ಸುಕಾಸುಮ್ಮನೆ ತನ್ನ ಶಕ್ತಿ ಪ್ರದರ್ಶನವನ್ನು ಆ ಮುಗ್ದ ಗೋವುಗಳ ಎದುರು ಮಾಡೋಣವೆಂದೋ ಬೊಗಳುತ್ತಾ ಅದರತ್ತಿರ ಬಾಲಬೀಸಿ ಹೋದದ್ದೇ, ಎಲ್ಲೋ ಮರೆಯಲ್ಲಿದ್ದ ಗೋವುಗಳೆಲ್ಲಾ ಒಟ್ಟಾಗಿ ಏರಿ ಬಂದವು. ನಸು ಗಂದು, ಪೂರ್ತಿ ಕಂದು, ತಿಳಿಬಿಳಿ, ಕಪ್ಪು- ಬಿಳಿ ಚುಕ್ಕೆ ಚುಕ್ಕೆ ಬಣ್ಣದ ಗೋವುಗಳನ್ನೆಲ್ಲಾ ನೋಡಿ ನಮ್ಮ ಬಾಡುಗೆ ಸ್ವಲ್ಪ ಪುಕು ಪುಕು ಆಯ್ತೇನೋ? ಬೊಗಳುವುದನ್ನು ನಿಲ್ಲಿಸಿ, ಇವರೆದುರು ತಾನು ಶಕ್ತಿ ಪ್ರದರ್ಶನ ಮಾಡಿದಂತೆಯೇ ಎಂದು ನಿರಾಶೆಯಾಗಿ ಮತ್ತೆ ಬಾಲ ಅಲ್ಲಾಡಿಸಿ ನಮತ್ತ ಬಂದಿತು.
ನಮಗೆಲ್ಲಾ ಹಸಿವಾಗಿದ್ದರಿಂದ ತಂದಿದ್ದ ಪರೋಟ, ಗಸಿಯನ್ನು ಕೊಂಚ ಬಿಸಿ ಮಾಡಿಕೊಡಲು ಅಜ್ಜಿಗೆ ಹೇಳಿದೆವು. ಅಜ್ಜಿ ಕಟ್ಟಿಗೆ ಸೇರಿಸಿ, ಒಲೆಯಲ್ಲಿ ಅದನ್ನು ಬಿಸಿ ಮಾಡುತ್ತಿರಬೇಕಾದರೆ ಒಲೆಯ ಹಬೆ, ಹೊಗೆಯೆಲ್ಲಾ ಹರಡಿದ ಆ ಪುಟ್ಟ ಮನೆ ಇಂದ್ರಲೋಕದಂತೆ ಕಾಣುತ್ತಿತ್ತು. ಇಡೀ ಮನೆ ಅಡ್ಡಾಡಿದರೆ ಎಲ್ಲೆಲ್ಲೂ ಅದೆಂತಹ ಚೆಂದ. ಮಾಡಿನ ಸಂದಿನಿಂದ ಕಾಣುತ್ತಿರೋ ಆಕಾಶ, ಕೆಂಪು ನೆಲದ ಮೇಲೆ ಗೋಡೆಗೆ ಹಾಕಿದ್ದ ಮಡಲಿನ ತಟ್ಟಿಯ ನೆರಳು, ಸಣ್ಣ ಕೋಣೆ ಮೇಲಕ್ಕೆ ಗುಡಾಣದಂತಿರೋ ಅಟ್ಟ, ಪುಟ್ಟ ಮಗುವಿನ ಕಿವಿಯಂತೆ ಹೊರ ಪ್ರಪಂಚದ ಸಕಲ ಸದ್ದು, ನೋಟಗಳಲ್ಲೇ ತುಂಬಿಕೊಂಡಿರುವ ಮರದ ಕಿಟಕಿ, ಇವೆಲ್ಲವನ್ನೂ ನೋಡುತ್ತಾ ಸರಳತೆಗೆ ಎಷ್ಟೊಂದು ಅರ್ಥಗಳಿವೆ ಅನ್ನಿಸಿತು.
“ಇದ್ರಲ್ಲೆಲ್ಲಾ ಎಂತ ಚಂದ ಕಾಣುತ್ತೋ ನಿಮಗೆ” ಅಂದಳು ಅಜ್ಜಿ. ಆ ಅಜ್ಜಿಯ ಮೈ ಸುಕ್ಕಿನಲ್ಲಿ ಅಷ್ಟೊಂದು ವರ್ಷಗಳಿಂದ ಈ ಕಾಡಲ್ಲಿ ಬೀಸುತ್ತಿದ್ದ ಗಾಳಿಯ ಸುಯ್ಲಿತ್ತು. ಮಳೆಯ ದನಿಯಿತ್ತು. ಕಣ್ಣಲ್ಲಿ ಜೀವನಾನುಭವದ ಮಿಂಚುಗಳೇ ಇತ್ತು. ಅಷ್ಟೊತ್ತಿಗೆ ತಿಂಡಿ ಬಿಸಿಯಾಗಿತ್ತು. ಸೆಗಣಿ ಸಾರಿಸಿದ ನೆಲದಲ್ಲಿ ಕೂತು ಬಾಳೆ ಎಲೆಯಲ್ಲಿ ರಾಮ್ ತಂದ ರೊಟ್ಟಿ, ಅಮಿತ್ ಮಾಡಿದ ರುಚಿ ರುಚಿ ಗಸಿ, ಶಾಮ್ ತಂದ ಪರೋಟ ಎಲ್ಲಾ ಹಾಕಿ ತಿಂದೆವು. ಬಾಡುಗೂ ಒಂದಷ್ಟು ರೊಟ್ಟಿ ಹಾಕಿದರೆ ಗಬಗಬನೇ ತಿಂದಿತು.. ಕಾಡಿನ ಆ ಮನೆ ಅಂಗಳದಲ್ಲಿ ಕೂತು ಮಾಡಿದ ಊಟಕ್ಕೆ ಅದೆಷ್ಟು ರುಚಿಯಿತ್ತು ಅಂತ ವರ್ಣಿಸೋದು ಕಷ್ಟ.
ಊಟ ಮಾಡಿ ಅಲ್ಲೇ ತಂಗಾಳಿಯಲ್ಲಿ ಸುಮ್ಮನೆ ಒಂದಷ್ಟು ಮಲಗಿ ಎದ್ದಾಗ ಸಂಜೆಯಾಗಲು ತೊಡಗಿತ್ತು. ಕಾಡಿನ ಎಳನೀರು ಕುಡಿದು, ದಬ್ಬೆ ನೀರಲ್ಲಿ ಮೈಯೆಲ್ಲಾ ಮುಳುಗಿಸಿ, ಮನೆಯ ಕೊಟ್ಟೆಗೆಯಲ್ಲಿ ಅಂಬಾ ಅಂಬಾ ಎಂದು ಕೂಗುತ್ತಿರುವ ಕರುಗಳನ್ನೂ, ಅಡಿಕೆ ತೋಟದ ನಡುವೆ ಕೂತು ಹುಲ್ಲು ಕೀಳುತ್ತಿದ್ದ ಅಜ್ಜಿಯನ್ನೂ ಬೀಳ್ಕೊಟ್ಟು ಹೊರಟಾಗ ದಾರಿಯಲ್ಲಿ ಹುಲ್ಲಿನ ತೆನೆಗಳೆಲ್ಲಾ ಬಂಗಾರದ ಕಡಲಂತೆ ಕಾಣುತ್ತಿತ್ತು. ದೂರದಿಂದ ಹಿಂತಿರುಗಿ ಮತ್ತೆ ಆ ಹಂಚಿನ ಮನೆ ನೋಡಿದೆ. ಭೋರೆಂದು ಸುರಿಯುವ ಮಳೆ, ಚಿಟ್ ಚಿಟ್ ಚಿಟಾರೆಂದು ಚೀರುವ ಸಿಡಿಲು ಮಿಂಚಿನ ಆರ್ಭಟೆ, ಘಟ್ಟದ ಕಡೆಯಿಂದ ರೌದ್ರವಾಗಿ ಬೀಸುವ ಗಾಳಿ ಇವೆಲ್ಲವನ್ನು ಅದೆಷ್ಟೂ ವರ್ಷಗಳಿಂದ ತಿಂದುಕೊಂಡು ನಿಂತಿದ್ದ ಆ ಮನೆ, ಈಗ ಮತ್ತೆ ಮಳೆಗಾಲಕ್ಕೆ ಬಾಯ್ತೆರೆದು ನಿಂತಂತೆ ಕಂಡಿತು.
ಮತ್ತೆ ಹತ್ತಿ ಬಂದ ದಾರಿ ಇಳಿದು ಹೊರಟಾಗ, ಅಲ್ಲಲ್ಲಿ ಮಣ್ಣು ತಿಂದು ಇನ್ನೇನು ಬೀಳಲು ಹೊರಟಿರುವ ಮರದ ಕೊನೆಯ ಆಸೆಯನ್ನು ಕೇಳಿ ಅದನ್ನು ನೆರವೇರಿಸಲು ಕಾತರಗೊಂಡಂತೆ ಮರಕುಟಿಗಗಳು ಮರವನ್ನು ಅಪ್ಪಿ ಹಿಡಿದಿತ್ತು. ಅಷ್ಟೊತ್ತಿಗೆ ನಮ್ಮ ಬಾಡು ಒಂದೇ ಸಮನೆ ಪೊದೆಯನ್ನೇ ನೋಡಿ ಬೊಗಳಲು ಶುರುಮಾಡಿತು. ನಾವೆಲ್ಲ ಅಲ್ಲೇನಿದೆ ಅಂತ ಕೌತುಕದಿಂದ ನೋಡಿದಾಗ ತರಗೆಲೆಗಳ ರಾಶಿಯ ನಡುವೆ ತೌಡು ಕನ್ನಡಿ ಹಾವು ದೊಡ್ಡದ್ದೊಂದು ಚಕ್ಕುಲಿಯ ಹಾಗೆ ಕೂತಿತ್ತು.
“ಅಬ್ಬಾ ಇದಾ ಮಾರ್ರೆ. ಇದು ತುಂಬಾ ಭಯಂಕರ ಹಾವು. ಈ ಹಾವಿನ ಸ್ಪರ್ಶ ತಾಕಿದರೂ ಸಾಕು, ಕಾಲು ಕೊಳೆತಂತಾಗುತ್ತದೆ. ಪುಣ್ಯ ನಾವದನ್ನು ತುಳಿಯುತ್ತಿದ್ದೇವೋ ಏನೋ, ಬಾಡು ಎಚ್ಚರಿಸಿದ್ದರಿಂದ ಆಯ್ತು” ಎಂದ ರಾಮ್. ಹಾವು ತೋರಿಸಿಕೊಟ್ಟಿದ್ದಕ್ಕೆ ಬಾಡುಗೆ ಒಳಗೊಳಗೆ ಧನ್ಯವಾಧ ಸಲ್ಲಿಸುತ್ತ ಹೊರಟಾಗ ಮಲೆಗಳಿಂದ ಗಾಳಿ ವಿಚಿತ್ರವಾಗಿ ಬೀಸುತ್ತಿತ್ತು. ಅಲ್ಲೆಲ್ಲೋ ಸಣ್ಣಗೆ ಮಳೆಯಾಗುತ್ತಿತ್ತು. “ಗಾಳಿ ಆಡಿದರೆ ಬನವೂ ಆಡಿ ಹೂವಿನುಂಗುರ..ಮಳೆ ಮೂಡಿದರೆ ಕೆರೆಯೂ ಆಡಿ ನೀರಿನುಂಗುರ..” ಕೆ.ಎಸ್.ನ ಬರೆದ ಈ ಸಾಲು ನನ್ನೊಳಗೆ ಅಲೆಯಂತೆ ತೇಲಿದಾಗ, ಮೈ ಮೇಲಿಷ್ಟು ಮಳೆ ಹನಿ ಬಿದ್ದು ಹನಿಯುಂಗುರವಾಯ್ತು.
ಪ್ರಸಾದ್ ಶೆಣೈ
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) “ಒಂದು ಕಾಡಿನ ಪುಷ್ಟಕ ವಿಮಾನ”(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.