ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು. ಒಮ್ಮೆಯಂತೂ ಪರ್ವತ ಹತ್ತುವಾಗ ಮೇಲಿಂದ ದೊಡ್ಡ ಬಂಡೆಯೊಂದು ಅವರ ಬೆನ್ನ ಮೇಲೆ ಬಿದ್ದಿತ್ತಂತೆ. ಎದೆಪಕ್ಕೆ ಮುರಿದು, ಪುಪ್ಪುಸಗಳು ಚಪ್ಪಟೆಯಾಗಿ ಉಸಿರು ನಿಂತಿತ್ತು. 
ಡಾ.ವಿನತೆ ಶರ್ಮ ಬರೆವ ಆಸ್ಟ್ರೇಲಿಯ ಅಂಕಣ

 

ಶರತ್ಕಾಲದ ಈ ಸಮಯ ಸ್ವಲ್ಪ ಚಳಿ ಒಂದಷ್ಟು ಬಿಸಿಲು. ಬ್ರಿಸ್ಬನ್ ನಗರಕ್ಕೆ ಹೇಳಿ ಮಾಡಿಸಿದ್ದೇನೋ ಎಂಬಂಥಾ ಹವಾಮಾನ. ಆರು ತಿಂಗಳ ಕಾಲ ಸತತ ಬಿಸಿಲಿನ ಬೇಗೆಗೆ ಪ್ರಾಣಿಪಕ್ಷಿ, ಗಿಡಮರಗಳೆಲ್ಲಾ ಬಸವಳಿದು, ಬಾಡಿ ಹೋಗಿ, ಭೂಮಿಯ ನೆಲಪದರ ಬರಡಾಗಿ ಮಾರ್ಚ್ ತಿಂಗಳಲ್ಲಿ ಕಾದಿದ್ದೇ ಕಾದಿದ್ದು, ತಂಪು ದಿನಗಳು ಬರಲಿ ಅಂತ. ಏಪ್ರಿಲ್ ಕಣ್ಬಿಟ್ಟಾಗ ತಂಪು ಬಂತು; ಜೊತೆಗೆ ಬೇಕಾದಷ್ಟು ಮಳೆಯೂ ಬಂತು. ಆಹಾ, ಹಿತವಾದ ಸೂರ್ಯರಶ್ಮಿ ಶಾಖ, ತಲೆಯೆತ್ತಿ ಹಬ್ಬುತ್ತಿರುವ ಹಸಿರು, ಕಣ್ತುಂಬುವ ಈ ಸಿರಿ ಭೂಲೋಕದ ಸ್ವರ್ಗವೇ ಸರಿ!

ಆಸ್ಟ್ರೇಲಿಯಾ ದೇಶದಲ್ಲಿ ಲೆಕ್ಕಾಚಾರದ ಪ್ರಕಾರ ಮೇ ತಿಂಗಳಿಗೆ ಶರತ್ಕಾಲ ಮುಗಿದು ಜೂನ್ ನಿಂದ ಚಳಿಗಾಲ ಆರಂಭ. ಪ್ರತಿ ಮೇ ತಿಂಗಳು ಬಂತೆಂದರೆ ತಪ್ಪದೆ ಒಂದು ವಿಷಯಕ್ಕೆ ವಿಶೇಷ ಗಮನ ಕೊಡುವುದು ನಾನು ಆಸ್ಟ್ರೇಲಿಯಾಗೆ ಬಂದ ದಿನಗಳಿಂದ ಪರಿಪಾಠವಾಗಿದೆ. ಜಗತ್ತಿನ ಅನೇಕ ಪರ್ವತಾರೋಹಿಗಳು ನೇಪಾಳದ ಕಡೆಯ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬಂದು ಸೇರಿ ಎವರೆಸ್ಟ್ ಪರ್ವತವನ್ನು ಹತ್ತುವ ಕಾಲ ಇದು. ಪರ್ವತಗಳ ಬಗ್ಗೆ ಆಸಕ್ತಿಯಿರುವವರಿಗೆ, ಆರೋಹಿಗಳಿಗೆ ಎವರೆಸ್ಟ್ ಸೀಸನ್ ಅಂದರೆ ಅದೇನೋ ಪುಳಕ, ರೋಮಾಂಚನ. ಬರುಬರುತ್ತಾ ಇತ್ತೀಚಿನ ವರ್ಷಗಳಲ್ಲಿ ಅದರ ಜೊತೆಗೆ ಸಾಕಷ್ಟು ಭ್ರಮನಿರಸನವೂ, ಬೇಸರವೂ ಸೇರಿಕೊಂಡಿದೆ. ಎವರೆಸ್ಟ್ ಶಿಖರವನ್ನು ಹತ್ತಿ ತಲುಪುವ ವಿಷಯದ ಬಗ್ಗೆ, ಆಸೆ-ದುರಾಸೆಗಳ ಬಗ್ಗೆ, ಸಾವು-ನೋವುಗಳ ಬಗ್ಗೆ, ಆ ಪರ್ವತದ ಪ್ರಕೃತಿ ಸೌಂದರ್ಯವನ್ನು ಹಾಳುಗೆಡವಿದ ಬಗ್ಗೆ, ಹುಲು ಮಾನವರು ಮಾಡಿದ ದೊಡ್ಡ ಅಪಚಾರಗಳ ಬಗ್ಗೆ, ಶೆರ್ಪಾ ಸಮುದಾಯಕ್ಕೆ ಆಗಿರುವ ಅನ್ಯಾಯಗಳ ಚರ್ಚೆಯ ಬಗ್ಗೆ, ಇನ್ನೂ ಅದೇನೇನೋ ಇರುವ ವಾದವಿವಾದಗಳ ನಡುವೆ ಕೂಡ ಎವರೆಸ್ಟ್ ಸೀಸನ್ ಬಂದಾಗ ಸ್ವಲ್ಪ ಪುಳಕ, ಒಂದಷ್ಟು ಕಾತರ.

ಇದೇ ಗುಂಗಿನಲ್ಲಿದ್ದಾಗ ಆಸ್ಟ್ರೇಲಿಯನ್ ಸಾಹಸಿ, ಪರ್ವತಾರೋಹಿ, ಜಾನ್ ಮ್ಯೂರ್ (Jon Muir) ರನ್ನು ಕನ್ನಡದ ಓದುಗರಿಗೆ ಪರಿಚಯ ಮಾಡಿಸೋಣ ಅನ್ನೋ ಯೋಚನೆ ಬಂತು. ದೂರದ ಅಮೇರಿಕ, ಬ್ರಿಟನ್ ದೇಶಗಳಲ್ಲಿ ಮತ್ತು ಯುರೋಪಿನಲ್ಲಿ ಪರಿಚಿತವಾಗಿರುವ ಆಸ್ಟ್ರೇಲಿಯಾದ ಸಾಹಸಿಗರು ಇತರೇ ದೇಶಗಳಲ್ಲಿ ಅಪರಿಚಿತರೇ!

ಆಸ್ಟ್ರೇಲಿಯನ್ನರಾದ ಜಾನ್ ಮ್ಯೂರ್ ಅದೇ ಹೆಸರಿರುವ ಅಮೆರಿಕನ್ ಜಾನ್ ಮ್ಯೂರ್ ರರಿಗಿಂತ ಅನೇಕ ವಿಷಯಗಳಲ್ಲಿ ಭಿನ್ನರು. ಆದರೂ ಕೂಡ ಅಮೆರಿಕನ್ ಮ್ಯೂರ್ ಜೊತೆ ಇವರನ್ನು ಹೋಲಿಸುತ್ತಾ ಸಾರ್ವಜನಿಕ ಸಂದರ್ಭಗಳಲ್ಲಿ ಮುಜುಗರ ತರುವ ಪ್ರಶ್ನೆಗಳನ್ನು ಎದುರಿಸಿ ‘ನಾನು ಆ ಜಾನ್ ಮ್ಯೂರ್ ಅಲ್ಲ,’ ಎಂದು ಪದೇಪದೇ ನಗುನಗುತ್ತಲೇ ಹೇಳಬೇಕಾದ ಫಜೀತಿ ಇವರಿಗೆ! ಈ ಲೆಜೆಂಡ್ ಹುಟ್ಟಿ, ಬೆಳೆದ ವಲೊಂಗೊಂಗ್ (Wollongong) ಪಟ್ಟಣದಲ್ಲೇ ನಾನು ನನ್ನ ಮೊದಲ ಹಲವಾರು ವರ್ಷಗಳನ್ನ ಕಳೆದಿದ್ದು. ಜಾನ್ ಮೊಟ್ಟಮೊದಲು ಬಂಡೆ ಏರುವಿಕೆ (rock climbing) ತರಬೇತಿ ಕೈಗೊಂಡ Mount Keira ಬೆಟ್ಟದ ಬುಡದಲ್ಲೇ ಅಂಟಿಕೊಂಡಿರುವ ವಿಶ್ವವಿದ್ಯಾನಿಲಯದಲ್ಲಿ ನಾನು ಪಿಎಚ್ ಡಿ ಮಾಡಿದ್ದು. ಆ ದಿನಗಳಲ್ಲಿ ಜಾನ್ ಅವಳಿ ಸಹೋದರಿ ನನ್ನ ಸ್ನೇಹಿತರಲ್ಲಿ ಒಬ್ಬರು. ಈ ಸಾಹಸಿಯ ಹೆಸರು ನನ್ನ ಕಿವಿಗೆ ಬೀಳುವ ಬಹುಮುಂಚೆಯೇ ಜಾನ್ ನಮ್ಮ ಮೂಗಿನ ಮೇಲೆ ಬೆರಳಿಡುವಂತೆ ನಡೆಸಿದ್ದ ಸಾಹಸಗಳಿಂದ ಅಂತರರಾಷ್ಟ್ರೀಯ ಮಟ್ಟದ ಅತಿಸಾಹಸ ಕ್ರೀಡೆಗಳ (extreme sports) ವಲಯದಲ್ಲಿ ಹೆಸರುಗಳಿಸಿ ದಾಖಲೆಗಳನ್ನು ಮಾಡಿದ್ದರು.

ನನಗೆ ಅವರ ಹೆಸರಿನ ಪರಿಚಯವಾದಾಗ ಅವರು ಮೆಲ್ಬೋರ್ನ್ ನಗರದಲ್ಲಿ, ಯಾವುದೇ ತರಹದ ಬಿಂಕ, ಅಹಂ ಇಲ್ಲದೆ, ನಮ್ಮನಿಮ್ಮ ನಡುವಿನ ಸಾಧಾರಣ ವ್ಯಕ್ತಿಯಂತೆ ಬದುಕುತ್ತಿದ್ದದ್ದು ನನಗೆ ಅಚ್ಚರಿ ತಂದಿತ್ತು. ಈ ಅಸಾಧಾರಣ, ಅತಿಸಾಹಸಿ, ಅಪರೂಪದ ಸಾಮಾನ್ಯ ಆಸ್ಟ್ರೇಲಿಯನ್ ನವಪೀಳಿಗೆಯ ತರುಣ ಸಾಹಸಿಗರಿಗೆ ಲೆಜೆಂಡ್!

ಇವತ್ತು ಜಾನ್ ಮ್ಯೂರ್ ತಮ್ಮ ಅತ್ಯಂತ ಸರಳ, ಸ್ವಾವಲಂಬಿ, ಮಿತ ಅಗತ್ಯಕ್ಕೆ ತಕ್ಕಂತೆ ಬದುಕು ಎಂಬ ಸುಸ್ಥಿರ ಅಭಿವೃದ್ಧಿ ಜೀವನಕ್ರಮದಿಂದ ಮಾದರಿಯಾಗಿದ್ದಾರೆ. ಬಹಳ ಕಿರಿವಯಸ್ಸಿನಲ್ಲೇ, ಅಂದರೆ ಇಪ್ಪತ್ತರ ಆಸುಪಾಸಿನಲ್ಲೇ ಜಾನ್ ‘ಮಿತಬಳಕೆ’ ವಾದಿಯಾಗಿದ್ದರು. ಅವರ ಮಾದರಿ ಜೀವನಕ್ರಮ ಯಾವಾಗ ಆರಂಭವಾಯಿತು ಎಂದು ಪ್ರಶ್ನಿಸಿದರೆ ತಮ್ಮ ಹೈಸ್ಕೂಲಿನ ದಿನಗಳನ್ನು ಸ್ಮರಿಸುತ್ತಾರೆ!!! ಸಿಡ್ನಿ ನಗರದಲ್ಲಿ ವರ್ಷ ೨೦೦೩ ಡಿಸೆಂಬರ್ ತಿಂಗಳಲ್ಲಿ ಅವರನ್ನು ಭೇಟಿಯಾಗಿ, ಅವರ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೆ. ಅಂದು ಸಂಜೆ ಅವರ ‘Alone across Australia’ ಸಾಕ್ಷ್ಯಚಿತ್ರದ ಪ್ರಿವ್ಯೂ ಪ್ರದರ್ಶನವಿತ್ತು.

೨೦೦೧ನೇ ವರ್ಷದಲ್ಲಿ ಆಸ್ಟ್ರೇಲಿಯಾದ ದಕ್ಷಿಣದಿಂದ ಉತ್ತರಕ್ಕೆ ಮರುಭೂಮಿಯುದ್ದಕ್ಕೂ ಒಬ್ಬಂಟಿಯಾಗಿ, ಸಿಕ್ಕಲ್ಲಿ ತಮ್ಮ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಪಯಣಿಸಿದ್ದನ್ನು, ಮನುಷ್ಯನೊಬ್ಬ ತನ್ನ ಅಸ್ತಿತ್ವಕ್ಕೋಸ್ಕರ ಸಂಪೂರ್ಣವಾಗಿ ಪ್ರಕೃತಿಗೇ ತನ್ನನ್ನು ಒಪ್ಪಿಸಿಕೊಂಡು ಶರಣಾಗುವುದನ್ನು ಆ ಚಿತ್ರ ಬಿಡಿಸಿಡುತ್ತದೆ. ಅವರ ಬಳಿ ವಾಹನವಿರಲಿಲ್ಲ, ಆಹಾರಪೂರೈಕೆ ವ್ಯವಸ್ಥೆಯಿರಲಿಲ್ಲ, ಮಾರ್ಗದರ್ಶನವಿರಲಿಲ್ಲ, ಹಣವಿರಲಿಲ್ಲ. ಅವರ ನಾಯಿ ಇತ್ತು. ಆದರೆ ಪಯಣದ ಅಂತ್ಯದಲ್ಲಿ ನಡೆದ ಅವಗಢದಿಂದ ಸಾಯುತ್ತದೆ. ಜಾನ್ ಮ್ಯೂರ್ ಎಂಬ ವ್ಯಕ್ತಿ ಅಲ್ಲಿ ಮಸುಕಾಗಿ ನಮ್ಮನಮ್ಮ ಹಸಿಹಸಿ ಜೀವಜೀವಿ ಅಸ್ತಿತ್ವ ಅಲ್ಲಿ ನಮಗೆ ಗೋಚರಿಸುತ್ತದೆ.

ತನ್ನ ಮಾನವಮಿತಿಯನ್ನು, ಅಂತಃಶಕ್ತಿಯನ್ನು, ಅಳಿವು-ಉಳಿವಿನ ಮಧ್ಯೆ ಇರುವ ಅಗಾಧ ಲೋಕವನ್ನು ಅರಿತು ಅರ್ಥಮಾಡಿಕೊಳ್ಳಲು ಮಾಡಿದ ತೀರಾ ವೈಯಕ್ತಿಕ ಪ್ರಯತ್ನವದು. ಅದುವೇ ಅವರ ಜೀವನ ಕೂಡ. ಆಸ್ಟ್ರೇಲಿಯನ್ ಮರುಭೂಮಿಯಲ್ಲಿ ಒಬ್ಬಂಟಿಯಾಗಿದ್ದುಕೊಂಡು ಪ್ರತಿದಿನವೂ ನಡೆಯುತ್ತಾ, ನೀರು, ಆಹಾರಕ್ಕಾಗಿ ಹಂಬಲಿಸಿ ಬದುಕಿದ್ದು ಪ್ರತಿದಿನದ ಸವಾಲಾಗಿತ್ತು. ಆ ಅನುಭವದ ಮುಂದೆ ಎವೆರೆಸ್ಟ್ ಶಿಖರದ ನೆತ್ತಿಯನ್ನು ತಲುಪಿದ್ದು ಏನೇನೂ ಇಲ್ಲ ಎಂದಿದ್ದಾರೆ ಜಾನ್. ಅವರ ಪಯಣದ ನಂತರವೇ ಈ ಸಾಕ್ಷ್ಯಚಿತ್ರವನ್ನು ಮಾಡಿದ್ದು. ಅವರನ್ನೇ ನಟನನ್ನಾಗಿ ಹಾಕಿಕೊಂಡು ಅವರ ಅಸಾಧಾರಣ ಪಯಣದ ಕ್ಷಣಗಳನ್ನು ಮರುಸೃಷ್ಟಿ ಮಾಡಿದ್ದಾರೆ. ಆ ದಿನ ಮಾತನಾಡುತ್ತಾ ಜಾನ್ “ಬದುಕಬೇಕು ಎನ್ನುವ ಆ ಆಸೆ, ಛಲ ಮತ್ತು ನಾವು ಬದುಕಲು ಪದೇಪದೇ ಮಾಡುವ ಪ್ರಯತ್ನ ಅನ್ನೋದಿದೆಯಲ್ಲಾ, ಅದು ಬಹಳ ದೊಡ್ಡ ವಿಷಯ. ನಾನು ಬದುಕಿರುವ ಎಲ್ಲಾ ಕ್ಷಣಗಳಿಗಾಗಿ, ಬದುಕುತ್ತಿರುವುದಕ್ಕಾಗಿ, ನನ್ನನ್ನು ಸಲಹುತ್ತಿರುವ ಈ ಭೂಮಿಗಾಗಿ ನಾನು ಸದಾ ಚಿರಋಣಿ, ಕೃತಜ್ಞ” ಅಂದಿದ್ದರು.

ನನಗೆ ಅವರ ಹೆಸರಿನ ಪರಿಚಯವಾದಾಗ ಅವರು ಮೆಲ್ಬೋರ್ನ್ ನಗರದಲ್ಲಿ, ಯಾವುದೇ ತರಹದ ಬಿಂಕ, ಅಹಂ ಇಲ್ಲದೆ, ನಮ್ಮನಿಮ್ಮ ನಡುವಿನ ಸಾಧಾರಣ ವ್ಯಕ್ತಿಯಂತೆ ಬದುಕುತ್ತಿದ್ದದ್ದು ನನಗೆ ಅಚ್ಚರಿ ತಂದಿತ್ತು. ಈ ಅಸಾಧಾರಣ, ಅತಿಸಾಹಸಿ, ಅಪರೂಪದ ಸಾಮಾನ್ಯ ಆಸ್ಟ್ರೇಲಿಯನ್ ನವಪೀಳಿಗೆಯ ತರುಣ ಸಾಹಸಿಗರಿಗೆ ಲೆಜೆಂಡ್!

ಹದಿನಾಲ್ಕರ ಜಾನ್ ಒಮ್ಮೆ ಎವೆರೆಸ್ಟ್ ಪರ್ವತ ಕುರಿತ ಸಾಕ್ಷ್ಯಚಿತ್ರವನ್ನು ನೋಡಿ, ಕೂಡಲೇ ತಾನು ವೃತ್ತಿನಿರತ ಪರ್ವತಾರೋಹಿಯಾಗುವುದೆಂದು ನಿರ್ಧರಿಸಿದರು. ಅಲ್ಲಿಯವರೆಗೂ ತನ್ನ ಬಾಲ್ಯವನ್ನು ನಿಸರ್ಗದ ಮಡಿಲಲ್ಲಿ ಕಳೆದ ಪುಣ್ಯವಂತ ಈತ. ಒಂದು ಕಡೆ ಕೈಬೀಸಿ ಕರೆಯುವ ಪಚ್ಚೆಮಣಿ, ನವಿಲುಗರಿ ಬಣ್ಣದ ಶರಧಿ. ‘ಸೀ ಕಯಾಕಿಂಗ್’(Sea Kayaking) ಕಲಿಯಲು, ಸರ್ಫಿಂಗ್ ಮಾಡಲು ಹೇಳಿಮಾಡಿಸಿದ ಸ್ವರ್ಗಸದೃಶ ತಾಣ. ಇನ್ನೊಂದೆಡೆ Mount Keira ಬೆಟ್ಟ. ಅದರಾಚೆ ಹಾಗೇ ಸಿಡ್ನಿ ನಗರದ ಹಾದಿ ಹೊಕ್ಕರೆ ಸುದೀರ್ಘ ಬೆಟ್ಟಸಾಲಿನ ಅಜಾನುಬಾಹು ಭುಜ. ಅದುವೇ Illawara Escarpment. ತನ್ನ ಕನಸನ್ನು ನನಸು ಮಾಡಲೇನೋ ಎಂಬಂತೆ ಹೇಳಿಮಾಡಿಸಿದ ವಲೊಂಗೊಂಗ್ ಪರಿಸರದಲ್ಲಿ ಜಾನ್ ತನ್ನ ಸ್ವಂತ ಕಲಿಕೆಯನ್ನು ಆರಂಭಿಸಿದರು. ಆಗಿನ ದಿನಗಳಲ್ಲಿ, ಅಂದರೆ ಎಪ್ಪತ್ತರ ದಶಕದಲ್ಲಿ ಆಸ್ಟ್ರೇಲಿಯಾ ಅಂಥಾ ಹೇಳಿಕೊಳ್ಳುವ ಹಾಗೆ, ಹಿರಿಯಣ್ಣ ಅಮೆರಿಕ, ತವರುಮನೆ ಬ್ರಿಟನ್ ಅಥವಾ ಮಾಯಾಲೋಕ ಯೂರೋಪಿನ ದೇಶಗಳಂತೆ ಮುಂದುವರೆದ ದೇಶವಾಗಿರಲಿಲ್ಲ. ಪರ್ವತಾರೋಹಿ ಶಾಲೆಗಳಿರಲಿಲ್ಲ. ತರಬೇತಿ ನಡೆಸಲು ಬೇಕಿದ್ದ ವಿಧವಿಧ ಸಾಮಗ್ರಿಗಳೂ ಸಿಕ್ಕುತ್ತಿರಲಿಲ್ಲ. ಆಮದು ಮಾಡಿಕೊಂಡರೂ ಬಲು ದುಬಾರಿ. ತನ್ನ ಸಹೋದರಿ ಉಪಯೋಗಿಸುತ್ತಿದ್ದ ಕುದುರೆ ಹಗ್ಗವನ್ನು ಬಳಸಿ ಸ್ವಪ್ರಯೋಗದ ಮೂಲಕ ಕಲಿಯುತ್ತಾ ಹೋದರು. ತನ್ನ ವ್ಯಕ್ತಿತ್ವದಲ್ಲೇ ಹಾಸುಹೊಕ್ಕಾಗಿದ್ದ ಮಿತವಸ್ತು ಬಳಕೆ ಮೌಲ್ಯವನ್ನು ಅಂದಿನಿಂದ ಇಂದಿನವರೆಗೂ ಜಾನ್ ಪಾಲಿಸುತ್ತಾ ಬದುಕಿದ್ದಾರೆ.

ಪರ್ವತಾರೋಹಿಯಾಗುವ ತನ್ನ ಕನಸನ್ನು ಸಾಧ್ಯವಾಗಿಸಿಕೊಳ್ಳಲು ಜಾನ್ ಶಾಲೆಕಲಿಕೆಗೆ ಶರಣು ಹೊಡೆದರು. ಕ್ರಮೇಣ ಆಸ್ಟ್ರೇಲಿಯಾದಲ್ಲಿ ಬಂಡೆ ಏರು ಕ್ರೀಡೆ, bouldering, ಬೆಟ್ಟದ ಭುಜದ ಏರಿಕೆಗಳ ಜೊತೆಗೆ ನ್ಯೂಝಿಲೆಂಡ್ ಮತ್ತು ಯುರೋಪ್ ಹಿಮಪರ್ವತಗಳನ್ನು ಹತ್ತುವ ಅಲ್ಪೈನ್ (Alpine) ಶೈಲಿಯ ಏರುವಿಕೆಯನ್ನು, ತಾಂತ್ರಿಕತೆಯನ್ನು, ಕೌಶಲವನ್ನು, ಮತ್ತು ಅಡೆತೊಡೆಗಳ ನಿವಾರಣೆಯನ್ನು (risk management) ಕಲಿಯುತ್ತಾ ಹೋದರು. ಅದಕ್ಕಾಗಿಯೇ ಮೆಲ್ಬೋರ್ನ್ ಪ್ರದೇಶಕ್ಕೆ ಹೋಗಿ ನೆಲೆಸಿದರು.

ಬೆಟ್ಟ ಮತ್ತು ಪರ್ವತ ಏರುವಿಕೆಯೇ ಅವರ ಜೀವನ, ಉಸಿರು ಮತ್ತು ಜೀವನೋಪಾಯವಾಗಿತ್ತು. ಕರಗತವಾಗಿದ್ದ ತನ್ನ ಕೌಶಲಗಳಿಂದ ಮತ್ತು ಪ್ರತಿಭೆಯಿಂದ ಹೆಸರುವಾಸಿಯಾಗಿದ್ದ ವೃತ್ತಿಪರ ಪರ್ವತಾರೋಹಿ ಸಂಸ್ಥೆಗಳೊಡನೆ ಪರ್ವತ ಮಾರ್ಗದರ್ಶಿಯಾಗಿ ಕೆಲಸ ಮಾಡಿದರು. ಹಲವಾರು ಬಾರಿ ತಮ್ಮ ಸಂಸ್ಥೆ ಮೂಲಕ ಗೈಡ್ ಆಗಿ ಎವೆರೆಸ್ಟ್ ಶಿಖರಕ್ಕೂ ಹೋಗಿಬಂದರೂ ಪರ್ವತದ ನೆತ್ತಿಯನ್ನು ತಲುಪುವ ಅವಕಾಶ ಸಿಕ್ಕಿರಲಿಲ್ಲ.

ಅದು ವರ್ಷ ೧೯೮೮. ಶೆರ್ಪಾಗಳ ಸಹಾಯವೂ ಇಲ್ಲದೆ ಜಾನ್ ತಾವೇ ಒಬ್ಬಂಟಿಯಾಗಿ ಅತಿ ವೇಗದಿಂದ ಎವೆರೆಸ್ಟ್ ನೆತ್ತಿಯನ್ನು ತಲುಪಿದ್ದು ಒಂದು ದಾಖಲೆಯಾಗಿತ್ತು. ಹಾಗೆ ಎವೆರೆಸ್ಟ್ ಪರ್ವತವನ್ನು ಹತ್ತಿದ ಮೊತ್ತಮೊದಲ ಪಾಶ್ಚಾತ್ಯ ಪರ್ವತಾರೋಹಿ ಅವರು. ಇಂದಿಗೂ ಹಿಮಪರ್ವತಗಳನ್ನು ಹತ್ತುವ ಪರ್ವತಾರೋಹಿಗಳ ಬಾಯಲ್ಲಿ ಆ ಕತೆ ಮತ್ತೆ ಮತ್ತೆ ಮೈದೆಳೆಯುತ್ತದೆ. ಎಲ್ಲಾ ಎಂಟು ಸಾವಿರ ಮೀಟರ್ ಮೀರಿದ (Big Eight Peaks) ಪರ್ವತಗಳನ್ನೂ, ಹೆಚ್ಚುಕಡಿಮೆ ಪ್ರಪಂಚದ ಅತ್ಯಂತ ಸವಾಲಿನ ಬೆಟ್ಟಗಳನ್ನೂ, ಪರ್ವತಗಳನ್ನೂ ಪಯಣಿಸಿರುವ ಜಾನ್ ಎವೆರೆಸ್ಟ್ ಪರ್ವತವನ್ನು ಕ್ರಮೇಣ ಹೇಗೆ ಜನ ತೀರಾ ಒಂದು ವ್ಯಾಪಾರೀ ವಸ್ತುವನ್ನಾಗಿ ತಮ್ಮ ಮೋಜಿಗಾಗಿ, ಹೆಸರಿಗಾಗಿ ಪರಿವರ್ತಿಸಿದರು, ಹೇಗೆ ಆ ಪರ್ವತದ ಘನತೆಯನ್ನು, ಗೌರವವನ್ನು ಮಣ್ಣು ಪಾಲು ಮಾಡಿದರು ಎಂದು ಬೇಸರಿಸಿಕೊಂಡಿದ್ದಾರೆ.

೧೯೮೯ರಲ್ಲಿ ಆಸ್ಟ್ರೇಲಿಯನ್ ಸರಕಾರ ಜಾನ್ ಜಾಗತಿಕಮಟ್ಟದಲ್ಲಿ ಸಲ್ಲಿಸಿರುವ ಪರ್ವತಾರೋಹಣ ಸೇವೆಗೆ, ಸಾಧನೆಗೆ Medal of the Order of Australia ಗೌರವವನ್ನು ಪ್ರದಾನ ಮಾಡಿತು. ಮತ್ತೊಂದು ಗುರುತರವಾದ ಗೌರವವೆಂದರೆ ೨೦೧೭ರಲ್ಲಿ ಆಸ್ಟ್ರೇಲಿಯನ್ ಜಿಯಾಗ್ರಫಿಕ್ ಸೊಸೈಟಿ ಅವರಿಗೆ ‘ಲೈಫ್ ಟೈಮ್ ಆಫ್ ಅಡ್ವೆಂಚರ್ ‘ ಬಿರುದನ್ನು ಕೊಟ್ಟಿದೆ.

ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು. ಒಮ್ಮೆಯಂತೂ ಪರ್ವತ ಹತ್ತುವಾಗ ಮೇಲಿಂದ ದೊಡ್ಡ ಬಂಡೆಯೊಂದು ಅವರ ಬೆನ್ನ ಮೇಲೆ ಬಿದ್ದಿತ್ತಂತೆ. ಎದೆಪಕ್ಕೆ ಮುರಿದು, ಪುಪ್ಪುಸಗಳು ಚಪ್ಪಟೆಯಾಗಿ ಉಸಿರು ನಿಂತಿತ್ತು. ಭೂಮಿ ಮೇಲಿನ ನಮ್ಮ ಲೆಕ್ಕಾಚಾರದ ಪ್ರಕಾರ ಜಾನ್ ಮೂರು ನಿಮಿಷಗಳ ಕಾಲ ಸತ್ತೇಹೋಗಿದ್ದರು. ದೇಹದಿಂದ ಪ್ರಾಣ ಬೇರೆಯಾಗಿ ನಿಂತು ತನ್ನ ದೇಹವನ್ನು ನೋಡಿದ ಕ್ಷಣದ ಬಗ್ಗೆ, ಪ್ರಾಣ ಸ್ವತಂತ್ರವಾಗಿ ತೇಲಾಡಿದ ಬಗ್ಗೆ ಮತ್ತು ಮರಳಿ ದೇಹದೊಳಗೆ ಬಂದು ಸೇರಿಕೊಂಡ ಬಗ್ಗೆ ಜಾನ್ ಮಾತನಾಡಿದ್ದಾರೆ. ತನ್ನ ಅನುಭವವನ್ನು ಅಲ್ಲಗಳೆಯುವವರೇ ಜಾಸ್ತಿ ಜನ ಇದ್ದಾರೆ ಎಂದು ಕೂಡ ನಗಾಡಿದ್ದಾರೆ.


ಅವರ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ಪ್ರೇಕ್ಷಕರು ಕೇಳಿದ ಪ್ರಶ್ನೆಗಳಲ್ಲಿ ನನ್ನ ಗಮನ ಸೆಳೆದದ್ದು ‘ಸಾಹಸವನ್ನು ಜೀವಿಸಲು ಬೇಕಿರುವುದೇನು?’ ಎಂಬ ಪ್ರಶ್ನೆ. ಜಾನ್ ಹೇಳಿದಂತೆ ಅನೇಕರು ದೇಹ, ಆರೋಗ್ಯ, ಆಹಾರ, ವ್ಯಾಯಾಮ, ಕಸರತ್ತು, ನಿಯಮಿತ ತರಬೇತಿ ಮುಂತಾದವುಗಳ ಬಗ್ಗೆ ತುಂಬಾ ಆಲೋಚಿಸುತ್ತಾರೆ. ಅವು ಮುಖ್ಯ, ಹೌದು. ಅವಕ್ಕಿಂತಲೂ ಮುಖ್ಯವಾದದ್ದು ನಮ್ಮ ಮನೋಸ್ಥಿತಿ, ಮನಸ್ಸಿನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ. ಆಸ್ಟ್ರೇಲಿಯನ್ ಮರುಭೂಮಿಯಲ್ಲಿ ಜೀವಿಸಲು ಕಸರತ್ತು, ವ್ಯಾಯಾಮಕ್ಕಿಂತಲೂ ಹೆಚ್ಚು ಬೇಕಿರುವುದು ದೃಢವಾದ ಚಿತ್ತ. ನೀರನ್ನು ಹುಡುಕಿಕೊಂಡು ಸುತ್ತಾಡಿ ಪರದಾಡಿ ಕೈಚೆಲ್ಲಿ ಕೂರುವ ಕ್ಷಣದಲ್ಲಿ ತಾನು ಜೀವಿಸಲು ಬೇಕಿರುವ ಮನೋಸಂಕಲ್ಪ, ಆ ಒಂದು ಆತ್ಮನಂಬಿಕೆ, ಪ್ರಯತ್ನ ಮತ್ತು ಬದುಕುವ ಆಶಯ. ನಮ್ಮ ಒಳಮನಸ್ಸು ಏನನ್ನು ಹೇಳುತ್ತಿದೆ ಅನ್ನೋದನ್ನ ನಾವು ಧ್ಯಾನಿಸಿ ಕೇಳಿಸಿಕೊಳ್ಳಬೇಕು, ನಂಬಿಕೆಯಿಡಬೇಕು. ಆಗ ನಮ್ಮ ಪಯಣದ ಹಾದಿಗಳು ಗೋಚರವಾಗುತ್ತವೆ. ಅವು ಆ ಕ್ಷಣಕ್ಕೆ ಕಾಣಿಸದಿದ್ದರೂ ಪರವಾಗಿಲ್ಲ, ಏಕೆ ಚಿಂತೆ? ಈ ಒಂದು ಹಾದಿಯಲ್ಲಿ ನಡೆಯಲಾರಂಭಿಸಿದರೆ ಮತ್ತೊಂದು ತೆರೆದುಕೊಳ್ಳುತ್ತದೆ. ನಮ್ಮನ್ನು ನಾವು ಅರಿತುಕೊಳ್ಳಲು ಪಯಣಿಸುವುದು, ಅದರ ಅನುಭವ ಮುಖ್ಯ.

ಮೇ ತಿಂಗಳಲ್ಲಿ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರ – ಎವೆರೆಸ್ಟ್ ಪರ್ವತದ ಬೆನ್ನಹುರಿಯ ಮೇಲೆ ಬಣ್ಣಬಣ್ಣದ ಜಾಕೆಟ್ ತೊಟ್ಟು ಸಾಲಾಗಿ ನಿಂತಿರುವ ನೂರಾರು ಪರ್ವತಾರೋಹಿಗಳು, ಅವರ ಸಹಾಯಕರು. ಟ್ರಾಫಿಕ್ ಜಾಮ್!! ಪರ್ವತದ ಮೇಲೆ ಜನಜಂಗುಳಿಯ ಬಗ್ಗೆ ಹಾಹಾಕಾರವೆದ್ದಿತ್ತು. ಈಗಾಗಲೇ ಎವೆರೆಸ್ಟ್ ಸೀಸನ್ ನಲ್ಲಿ ಹತ್ತು ಜನರು ಸತ್ತಿದ್ದಾರೆ. ನೇಪಾಳ ಸರಕಾರ ಉತ್ತರ ಹೇಳಲು ತಡಕಾಡುತ್ತಿದೆ. ಅವರೆಲ್ಲಾ ಪರ್ವತವನ್ನು ಏರಿ ಜಯಿಸಿದೆವು ಎಂದು ಗರ್ವಿಸಲು ಹೋದರೋ ಇಲ್ಲಾ ಪಯಣಿಗರಾಗಿ ತಮ್ಮತಮ್ಮ ಜೀವನಾನುಭವವನ್ನು ಧ್ಯಾನಿಸಲು ಹೋದರೋ ಆ ಸಾಗರಮಾತೆಗಷ್ಟೇ ಗೊತ್ತು.